(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ) (ಭಾಗ-೩)
ವ||ಅಂತು ನೋಡುತ್ತಮದನೇಕತಾಳೋತ್ಸೇಧಮುಮಭ್ರಂಕಷಮುಂ ದುರಾರೋಹಮುಮಾದೊಡಂ ಬಗೆಯದೆ ಬಳಸಿದ ಬಳ್ಳಿವಿಡಿದಡರ್ದೇರಿ
ಗದ್ಯದ ಅನ್ವಯಕ್ರಮ:
ಅಂತು ನೋಡುತ್ತಂ, ಅದು ಅನೇಕ ತಾಳ ಉತ್ಸೇದಮುಂ, ಅಭ್ರಂಕಷಮುಂ, ದುರ್ ಆರೋಹಮುಂ ಆದೊಡಂ ಬಗೆಯದೆ ಬಳಸಿದ ಬಳ್ಳಿ ಪಿಡಿದು ಅಡರ್ದು ಏರಿ-
ಪದ-ಅರ್ಥ:
ಅಂತು-ಹಾಗೆ; ತಾಳೋತ್ಸೇದಮುಂ-ತಾಳೆಮರಗಳಷ್ಟು ಎತ್ತರವಾದ; ಅಭ್ರಂಕಷಮುಂ-ಆಕಾಶವನ್ನು ಮುಟ್ಟುತ್ತಿರುವ; ದುರಾರೋಹಮುಂ(ದುರ್+ಆರೋಹ)-ಏರುವುದಕ್ಕೆ ಅಸಾಧ್ಯವಾದ; ಬಗೆಯದೆ-ಲೆಕ್ಕಿಸದೆ; ಬಳಸಿದ-ಸುತ್ತುವರಿದ; ಅಡರ್ದು-ಮೇಲಕ್ಕೇರಿ.
ಹಾಗೆ ತಾಳೆಮರಗಳಷ್ಟು ಎತ್ತರವಾಗಿದ್ದರೂ ಆಕಾಶವನ್ನು ಮುಟ್ಟುವಂತಿದ್ದರೂ ಏರುವುದಕ್ಕೆ ಅಸಾಧ್ಯವಾಗಿದ್ದರೂ ಅದನ್ನು ಲೆಕ್ಕಿಸದೆ ಮರಕ್ಕೆ ಸುತ್ತುವರಿದ ಬಳ್ಳಿಗಳನ್ನು ಹಿಡಿದುಕೊಂಡು ಮೇಲಕ್ಕೇರಿ-
(ಗಿಳಿಗಳು ವಾಸವಾಗಿರುವ ಬೂರುಗದ ಮರವು ವಿಂಧ್ಯಪರ್ವತದ ತಪ್ಪಲಿನ ಮರಗಳಲ್ಲಿಯೇ ಅತ್ಯಂತ ಎತ್ತರವಾದುದು. ಅಲ್ಲಿನ ಎಲ್ಲ ಮರಗಳಿಗೆ ನಾಯಕನಂತೆ ಇರುವಂತಹುದು. ಅಲ್ಲದೆ ಅದು ತಾಳೆಮರಗಳಂತೆ ಎತ್ತರಕ್ಕೆ ಬೆಳೆದಿರುವಂತಹುದು. ಆಕಾಶವನ್ನು ಮುಟ್ಟುತ್ತಿದೆಯೋ ಎನ್ನುವಷ್ಟು ಎತ್ತರವಾಗಿ ಬೆಳೆದಿರುವಂತಹುದು. ಅಂತಹ ಮರವನ್ನು ಏರುವುದಕ್ಕೂ ಸಾಹಸ, ಸಾಮರ್ಥ್ಯ ಬೇಕು. ಆ ಮುದಿಬೇಡ ಅದನ್ನು ಏರುವುದಕ್ಕೆ ಪ್ರಯತ್ನಿಸಿದನು. ಹೊಟ್ಟೆಯ ಹಸಿವು ಅಸಾಧ್ಯವಾದ ಕೆಲಸಗಳನ್ನೂ ಮಾಡಿಸುತ್ತದೆ. ಕೈಕಾಲು ನಡುಗುತ್ತಿದ್ದರೂ, ಮೈಯ ಅಂಗಾಂಗಗಳು ಶಕ್ತಿಯನ್ನು ಕಳೆದುಕೊಂಡಿದ್ದರೂ ಲೆಕ್ಕಿಸದೆ ಏರುವುದಕ್ಕೆ ಅಸಾಧ್ಯವಾದ ಮರವನ್ನು ಆ ಮುದಿ ಬೇಡ ಏರುವುದಕ್ಕೆ ಪ್ರಯತ್ನಿಸಿದನು. ಮರದ ಸುತ್ತಲೂ ಬಳ್ಳಿಗಳು ಹಬ್ಬಿಕೊಂಡಿರುವುದು ಆತನಿಗೆ ಅನುಕೂಲಕರವಾಗಿ ಪರಿಣಮಿಸಿತು. ಅವುಗಳನ್ನು ಹಿಡಿದುಕೊಂಡು ಮರವನ್ನು ಮೆಲ್ಲನೆ ಏರತೊಡಗಿದನು.)
ಜಳಜದ ಮೊಗ್ಗೆಯಂತೆ ಮುಗುಳಂತೆಳೆಯೆಕ್ಕೆಯ ಕಾಯ್ಗಳಂತೆ ಶಾ
ಲ್ಮಲಿ ಕುಸುಮಂಗಳಂತೆ ತರುನೀಡನಿಕಾಯದಿನೆಲ್ಲವಾಗಳಾ
ಗಳೆ ಗಱಿವೊಯ್ವ ಕಂದೆರೆವ ತುಪ್ಪುೞೊಡರ್ಚುವ ಕೆಂಪನಾಳ್ವ ಕೋ
ಮಳ ಶುಕಶಾಬಕಪ್ರಕರಮಂ ತೆಗೆದಂ ದಯೆಗೆಟ್ಟು ಲುಬ್ಧಕಂ ೧೮
ಪದ್ಯದ ಅನ್ವಯಕ್ರಮ:
ಲುಬ್ದಕಂ ದಯೆಗೆಟ್ಟು, ಜಳಜದ ಮೊಗ್ಗೆಯಂತೆ, ಮುಗುಳಂತೆ, ಎಳೆ ಎಕ್ಕೆಯ ಕಾಯ್ಗಳಂತೆ, ಶಾಲ್ಮಲಿ ಕುಸುಮಗಳಂತೆ, ತರುನೀಡ ನಿಕಾಯದಿನ್, ಆಗಳ್ ಆಗಳೆ ಗಱಿಹೊಯ್ದು ಕಣ್ ತೆರೆವ, ತುಪ್ಪುೞ್ ಒಡರ್ಚುವ, ಕೆಂಪನ್ ಆಳ್ವ, ಕೋಮಳ ಶುಕ ಶಾಬಕ ಪ್ರಕರಮಂ ಎಲ್ಲವ ತೆಗೆದಂ.
ಪದ-ಅರ್ಥ:
ಜಳಜದ ಮೊಗ್ಗೆ-ತಾವರೆಯ ಮೊಗ್ಗು; ಮುಗುಳಂತೆ-ಅರೆಬಿರಿದ ಹೂವು; ಎಳೆಯೆಕ್ಕೆಯ-ಎಳತಾದ ಎಕ್ಕದ; ಶಾಲ್ಮಲಿ ಕುಸುಮ-ಬೂರುಗದ ಹೂವು; ತರು-ಮರ; ನೀಡನಿಕಾಯ– ಗೂಡುಗಳ ಸಮೂಹ; ಎಲ್ಲವ-ಎಲ್ಲವನ್ನು; ಆಗಳಾಗಳೆ-ಆಗ ತಾನೆ; ಗಱಿವೊಯ್ವ-ಗರಿತೆರೆಯುವ; ಕಂದೆರೆ-ಕಣ್ಣುತೆರೆ; ತುಪ್ಪುೞೊಡರ್ಚುವ-ತುಪ್ಪಟ ಮೂಡುವ; ಕೆಂಪನಾಳ್ವ-ಕೆಂಪಾದ ಬಣ್ಣವನ್ನು ಪಡೆಯುವ; ಕೋಮಳ-ಕೋಮಲ, ಮೃದು; ಶುಕಶಾಬಕ-ಗಿಳಿಮರಿ; ಪ್ರಕರ-ಗುಂಪು, ಸಮೂಹ; ದಯೆಗೆಟ್ಟು-ದಯೆಯೇ ಇಲ್ಲದೆ; ಲುಬ್ದಕಂ-ಬೇಡನು.
ಮರವನ್ನು ಹತ್ತಿದ ಬೇ॑ಡನು ಇನ್ನೂ ಬಿರಿಯದ ತಾವರೆಯ ಮೊಗ್ಗಿನಂತಿರುವ, ಆಗತಾನೆ ಎಸಳುಗಳನ್ನು ಬಿರಿದು ಅರಳುತ್ತಿರುವ ತಾವರೆಯ ಮೊಗ್ಗುಗಳಂತಿರುವ, ಆಗತಾನೆ ರೋಮಗಳು ಹುಟ್ಟಿಕೊಂಡು ಎಳೆಯ ಎಕ್ಕದ ಕಾಯಿಗಳಂತಿರುವ, ಆಗ ತಾನೇ ಬಿರಿಯುವ ಬೂರುಗದ ಹೂವುಗಳಂತಿರುವ, ಆಗ ತಾನೆ ರೆಕ್ಕೆಗಳು ಮೂಡುತ್ತಿರುವ, ಕಣ್ಣುಗಳನ್ನು ತೆರೆಯುತ್ತಿರುವ, ಮೈಮೇಲೆ ತುಪ್ಪಟ ಮೂಡುತ್ತಿರುವ, ತಮ್ಮ ಕೊಕ್ಕುಗಳಿಗೆ ಕೆಂಪುಬಣ್ಣವನ್ನು ಪಡೆದುಕೊಳ್ಳುತ್ತಿರುವ, ಕೋಮಲವಾಗಿ ಬೆಳೆಯುತ್ತಿರುವ ಗಿಳಿಮರಿಗಳನ್ನು ದಯೆಯೇ ಇಲ್ಲದೆ ಎಲ್ಲವನ್ನೂ ಅವುಗಳ ಗೂಡುಗಳಿಂದ ಒಂದೊಂದಾಗಿ ಕಿತ್ತುಕೊಳ್ಳತೊಡಗಿದನು.
(ಮುಂಜಾನೆ ಸೂರ್ಯೋದಯವಾಗುತ್ತಿದ್ದಂತೆಯೇ ಎಲ್ಲ ಗಿಳಿಗಳು ಆಹಾರ ಸಂಪಾದನೆಗಾಗಿ ಹೊರಗೆ ಹಾರಿಹೋಗಿದ್ದವು. ಗೂಡುಗಳಲ್ಲಿನ ಹಾರಲಾಗದ ಮುದಿ ಗಿಳಿಗಳು, ಇನ್ನೂ ಹಾರಾಡುವುದನ್ನು ಕಲಿಯದ ಮರಿಗಿಳಿಗಳು, ಇನ್ನೂ ಕಣ್ತೆರೆಯದ ಮರಿಗಳು, ಇನ್ನೇನು ರೆಕ್ಕೆಗಳನ್ನು ಪಡೆಯುತ್ತಿರುವ ಗಿಳಿಮರಿಗಳು, ತುಪ್ಪಟ ಮೂಡುತ್ತಿರುವ ಮರಿಗಳು, ಆಗ ತಾನೆ ಮೊಟ್ಟೆಯೊಡೆದು ಹೊರಬಂದ ಗಿಳಿಗಳು, ತಮ್ಮ ಕೊಕ್ಕುಗಳಿಗೆ ಕೆಂಪುಬಣ್ಣವನ್ನು ಪಡೆದುಕೊಳ್ಳುತ್ತಿರುವ ಗಿಳಿಗಳು, ಇನ್ನೂ ಹೊರಪ್ರಪಂಚದ ಅರಿವೇ ಇಲ್ಲದೆ ಬೆಳೆಯುತ್ತಿರುವ ಹಸುಳೆ ಮರಿಗಳು ಇವು ಯಾವುದನ್ನೂ ಮನಸ್ಸಿಗೆ ತಂದುಕೊಳ್ಳದೆ, ಅವುಗಳ ಮೇಲೆ ಯಾವ ಕನಿಕರವನ್ನೂ ತೊರದೆ ಮರದ ಮೇಲಿರುವ ಕೈಗೆ ಸಿಕ್ಕಿದ ಎಲ್ಲಾ ಗೂಡುಗಳಿಂದ ಅವುಗಳೆಲ್ಲವನ್ನೂ ನಿರ್ದಾಕ್ಷಿಣ್ಯವಾಗಿ ಕಿತ್ತುಕೊಳ್ಳತೊಡಗಿದನು. ತಾನು ಗೂಡುಗಳಿಂದ ತೆಗೆಯುತ್ತಿರುವ ಮರಿಗಳಿಂದ ತನಗೇನೂ ಲಾಭವಿಲ್ಲ ಎಂಬ ಕನಿಷ್ಠ ತಿಳಿವಳಿಕೆಯೂ ಆತನಿಗೆ ಇರಲಿಲ್ಲ. ತನ್ನ ಸಹಚರ ಬೇಡರು ತನಗೆ ಮಾಂಸವನ್ನು ಕೊಡದೇ ಹೋದುದರಿಂದ, ತನಗೆ ಅಂದು ಬೇಟೆಯಲ್ಲಿಯೂ ಮಾಂಸವೇ ಸಿಗದಿದ್ದುದರಿಂದ ಬೇಸತ್ತ ಆ ಮುದಿ ಬೇಡ ತನ್ನ ಎಲ್ಲಾ ಮಾನವೀಯತೆಯನ್ನೂ ಕಳೆದುಕೊಂಡಿದ್ದನು. ಹಾಗಾಗಿ ಆತನ ವರ್ತನೆಯಲ್ಲಿ ದಯೆಯೇ ಕಾಣುತ್ತಿರಲಿಲ್ಲ.)
ಪಱಿದುವು ಗಱಿ ಚಂಚುಗಳುಂ
ಮುಱಿದುವು ತಲೆ ನಡುಗುತಿರ್ದುವೆನ್ನದೆ ತರದಿಂ
ಬಱಿಗೆಯ್ವುತಿರ್ದ ಮಾಯ್ದಱ
ಗುಲಿ ಕರ್ವೇಡನಲ್ಲಿ ಮುದುಗಿಳಿಗಳುಮಂ ೧೯
ಪದ್ಯದ ಅನ್ವಯಕ್ರಮ:
ಗಱಿ ಪಱಿದುವು, ಚಂಚುಗಳುಂ ಮುಱಿದವು, ತಲೆ ನಡುಗುತಿರ್ದುವು ಎನ್ನದೆ ಮುದುಗಿಳಿಗಳುಮಂ ಅಲ್ಲಿ ತರದಿಂ ಮಾಯ್ದ ಅಱಗುಲಿ ಕರ್ವೇಡನ್ ಬಱಿಗೆಯ್ವುತ ಇರ್ದ.
ಪದ-ಅರ್ಥ:
ಗಱಿ-ರೆಕ್ಕೆ; ಪಱಿದವು-ಹರಿದವು; ಚಂಚುಗಳುಂ-ಕೊಕ್ಕುಗಳು; ತರದಿಂ-ಹಲವು ರೀತಿಗಳಿಂದ; ಮಾಯ್ದ-ಪ್ರಾಯಸಂದ; ಮುದುಗಿಳಿ-ಮುದಿಗಿಳಿ.
ನೀಚ ಹಾಗೂ ಧರ್ಮಘಾತುಕನಾದ ಬೇಡರವನು ಗಿಳಿಗಳ ಮೇಲೆ ಯಾವುದೇ ಕನಿಕರವನ್ನು ಇಟ್ಟುಕೊಳ್ಳದೆ ಗೂಡುಗಳಿಂದ ಕಿತ್ತುಕೊಳ್ಳತೊಡಗಿದಾಗ, ಕೆಲವು ಗಿಳಿಗಳ ಗರಿಗಳು ಹರಿದುಹೋದವು. ಕೆಲವು ಗಿಳಿಗಳ ಕೊಕ್ಕುಗಳು ಮುರಿದುಹೋದವು. ಕೆಲವು ಗಿಳಿಗಳ ತಲೆಗಳು ನಡುಗತೊಡಗಿದವು. ಇದಾವುದನ್ನೂ ಲೆಕ್ಕಿಸದೆ ಹಲವು ರೀತಿಗಳಿಂದ ಗೂಡುಗಳೆಲ್ಲವನ್ನು ಬರಿದುಮಾಡುತ್ತ, ಮುದಿಗಿಳಿಗಳನ್ನೂ ಕಿತ್ತುಕೊಳ್ಳತೊಡಗಿದನು.
(ತನ್ನ ಸಂಗಡಿಗರಿಂದ ಏನೂ ದೊರೆಯದಿದ್ದುದರಿಂದ, ಬೇಟೆಯಾಡಲು ಅಸಮರ್ಥನಾದುದರಿಂದ, ಅಂದಿನ ಬೇಟೆಯಲ್ಲಿ ಏನನ್ನೂ ಸಂಪಾದಿಸಲು ಸಾಧ್ಯವಾಗದಿದ್ದುದರಿಂದ ಬೇಡ ಅತ್ಯಂತ ಕ್ರೂರಿಯೂ ಧರ್ಮದ್ರೋಹಿಯೂ ಆಗಿ ಮನುಷ್ಯತ್ವವನ್ನು ಕಳೆದುಕೊಂಡಿದ್ದನು. ಅವನು ಮರಿಗಿಳಿಗಳನ್ನು, ಮುದಿಗಿಳಿಗಳನ್ನು ಗೂಡುಗಳಿಂದ ಎಳೆದಾಡುವ ಸಂದರ್ಭದಲ್ಲಿ ಕೆಲವು ಗಿಳಿಗಳ ರೆಕ್ಕೆಗಳು ಮುರಿದುಹೋದವು. ಇನ್ನು ಕೆಲವು ಗಿಳಿಗಳ ಕೊಂಕುಗಳು ಮುರಿದವು. ಇನ್ನು ಕೆಲವು ಗಿಳಿಗಳ ತಲೆಗಳೇ ನಡುಗತೊಡಗಿದವು. ಗೂಡುಗಳಲ್ಲಿರುವ ಹಾರಲಾಗದ ಮುದಿಗಿಳಿಗಳನ್ನೂ ಬಿಡದೆ ಕಿತ್ತುಕೊಳ್ಳತೊಡಗಿದನು. ಮರಿಗಿಳಿಗಳನ್ನೂ ಹೀಗೆ ಎಳೆದಾಡುವುದರಿಂದ ತನಗೇನೂ ಲಾಭವಿಲ್ಲ ಎಂಬ ಸತ್ಯ ಆತನ ಅರಿವಿಗೆ ಬಂದಿರಲಿಲ್ಲ. ಆತ ಕೋಪದಿಂದ ವ್ಯಗ್ರನಾದುದರಿಂದ ಅತ್ಯಂತ ಕ್ರೂರಿಯಾಗಿ ವರ್ತಿಸುತ್ತಿದ್ದನು.)
ವ|| ಅಂತವೆಲ್ಲನೊಡನೊಡನೆ ಗಂಟಲಂ ಮುಱಿದು ನೆಲಕ್ಕೀಡಾಡುತಿರ್ದ ಬೇಡನಂ ತೊಟ್ಟನೆ ನೋಡಿ ಪ್ರಾಣಾಪಹಾರಮುಮಪ್ರತೀಕಾರಮುಮಪ್ಪ ಕಷ್ಟಮಂ ಕಂಡು ಭಯಂಗೊಂಡು-
ಗದ್ಯದ ಅನ್ವಯಕ್ರಮ:
ಅಂತು ಅವೆಲ್ಲನ್ ಒಡನೆ ಒಡನೆ ಗಂಟಲಂ ಮುಱಿದು ನೆಲಕ್ಕೆ ಈಡಾಡುತ ಇರ್ದ ಬೇಡನಂ ತೊಟ್ಟನೆ ನೋಡಿ ಪ್ರಾಣ ಅಪಹಾರಮುಂ ಅಪ್ರತೀಕಾರಮುಮಂ ಅಪ್ಪ ಕಷ್ಟಮಂ ಕಂಡು ಭಯಂಗೊಂಡು-
ಪದ-ಅರ್ಥ:
ಅಂತು-ಹೀಗೆ; ಒಡನೊಡನೆ-ಸರಸರನೆ; ಗಂಟಲಂ-ಕುತ್ತಿಗೆಯನ್ನು; ಈಡಾಡುವ-ಎಸೆಯುವ; ತೊಟ್ಟನೆ-ತಟ್ಟನೆ, ಕೂಡಲೆ; ಪ್ರಾಣಾಪಹಾರ-ಪ್ರಾಣವನು ತೆಗೆಯುವ; ಅಪ್ರತೀಕಾರ-ಪ್ರತಿಕಾರವಿಲ್ಲದ.
ಹೀಗೆ ಅವೆಲ್ಲವನ್ನೂ ಸರಸರನೆ(ಒಂದೇ ಸಮನೆ) ಗಂಟಲನ್ನು ಮುರಿದು ನೆಲಕ್ಕೆ ಎಸೆಯುತ್ತಿದ್ದ ಬೇಡನನ್ನು ನಾನು ತಟ್ಟನೆ ನೋಡಿ ಪ್ರಾಣವನ್ನು ತೆಗೆಯುತ್ತಿದ್ದರೂ ಅದರ ವಿರುದ್ಧ ಪ್ರತಿಭಟಿಸಲಾರದೆ ಎದುರಾದ ಕಷ್ಟವನ್ನು ನೋಡುತ್ತ ಭಯಭೀತನಾಗಿ –
ಬಸವೞಿದು ಕಣ್ಣನೀರಿಂ
ದೆಸೆಗೆಟ್ಟೆಲೆ ಮಗನೆ ನಿನ್ನನಿನ್ನಾರ್ ಕಾಯ
ಲ್ಕೆ ಸಮರ್ಥರೆನುತ್ತಾಗಳ್
ಬಿಸುಸುಯ್ದಂ ನೋಡಿ ಜನಕನೆನ್ನಯ ಮೊಗಮಂ ೨೦
ಪದ್ಯದ ಅನ್ವಯಕ್ರಮ:
ಜನಕನ್ ಎನ್ನಯ ಮೊಗಮಂ ನೋಡಿ, ಬಸವೞಿದು ಕಣ್ಣ ನೀರಿಂ ದೆಸೆಗೆಟ್ಟು ಎಲೆ ಮಗನೆ, ಇನ್ ನಿನ್ನನ್ ಕಾಯಲ್ಕೆ ಆರ್ ಸಮರ್ಥರ್? ಎನುತ್ತ ಆಗಳ್ ಬಿಸುಸುಯ್ದಂ.
ಪದ-ಅರ್ಥ:
ಬಸವೞಿದು-ಆಯಾಸಗೊಂಡು; ದೆಸೆಗೆಟ್ಟು-ದಿಕ್ಕುಗೆಟ್ಟು, ಕಾಯಲ್ಕೆ-ಕಾಪಾಡುವುದಕ್ಕೆ; ಬಿಸುಸುಯ್ದಂ-ನಿಟ್ಟುಸಿರುಬಿಟ್ಟನು; ಜನಕ-ತಂದೆ.
ನನ್ನ ತಂದೆಯು ಬೇಡನ ದುರ್ವತನೆಯನ್ನು ನೋಡಿ ಕಣ್ಣುಗಳಲ್ಲಿ ನೀರನ್ನು ತಂದುಕೊಂಡು ನನ್ನ ಮುಖವನ್ನು ನೋಡು ದಿಕ್ಕುಗೆಟ್ಟು, ಮಗನೆ, ಇನ್ನು ನಿನ್ನನ್ನು ಕಾಪಾಡುವುದಕ್ಕೆ ಯಾರಿಂದ ಸಾಧ್ಯ? ಎನ್ನುತ್ತ ನಿಟ್ಟುಸಿರು ಬಿಟ್ಟನು.
(ತಾಯಿ ಸತ್ತುಹೋದ ಮೇಲೆ ಮರಿಗಿಳಿಯನ್ನು ಮುದಿಗಿಳಿ ಸಾಕಿ ಸಲಹುತ್ತಿತ್ತು. ಆದರೆ ಈಗ ಈ ಕ್ರೂರಿಯಾದ ಬೇಡನು ಒಂದೂ ಗಿಳಿಯನ್ನು ಬಿಟ್ಟುಬಿಡದೆ ಕಿತ್ತು, ಕತ್ತು ಹಿಸುಕಿ ಎಸೆಯುತ್ತಿರುವುದರಿಂದ ಕೆಲವೇ ಕ್ಷಣಗಳಲ್ಲಿ ತಮಗೂ ಅದೇ ಸ್ಥಿತಿ ಬರುತ್ತದೆ. ಇದುವರೆಗೂ ತಾನು ಸಾಕುತ್ತಿದ್ದೆ. ಇನ್ನು ಈ ಬೇಡ ತನ್ನ ಕತ್ತನ್ನು ಹಿಸುಕಿ ಎಸೆದರೆ ನಾನು ಸತ್ತೇ ಹೋಗುತ್ತೇನೆ. ಅನಂತರ ಹಸುಳೆಯಾದ ನಿನ್ನನ್ನು ಯಾರು ಕಾಪಾಡುತ್ತಾರೆ? ಯಾರು ಸಾಕುತ್ತಾರೆ? ಯಾರು ಸಲಹುತ್ತಾರೆ? ಎಂದು ಹೇಳುತ್ತ ಮುದಿಗಿಳಿಗೆ ನೋವು ಒತ್ತರಿಸಿ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿತು. ಮುದಿಗಿಳಿ ತನ್ನ ಅನಾಥ ಮರಿಯನ್ನು ಅದರ ಸ್ಥಿತಿಯನ್ನು ಯೋಚಿಸುತ್ತ ನಿಟ್ಟುಸಿರು ಬಿಡತೊಡಗಿತು.)
ವ|| ಅದಲ್ಲದೆಯುಂ
ಅದು ಮಾತ್ರವಲ್ಲದೆ,
ನಿನ್ನಯ ತಾಯನೊಯ್ವ ಪದದೊಳ್ ಜವನಕ್ಕಟ ನೋಡು ಕಂದ ಬಂ
ದೆನ್ನುಮನಂತೆ ಕೂಡಿದೊಡನೊಕ್ಕಲುವೋಗಿಸನೇಕೆ ಬಯ್ತೆ ನಾಂ
ನಿನ್ನನೆ ನೋಡಿ ಶೋಕಮನಡಂಗಿಸಿ ಬಾಳ್ಕೆಯೆ ಲೇಸೆನುತ್ತಮಿ
ರ್ಪನ್ನೆಗಮಮ್ಮ ನಿನ್ನನೊಡಗೊಂಡು ಮುೞುಂಗುವ ಕಾಲಮಾದುದೋ ೨೧
ಪದ್ಯದ ಅನ್ವಯಕ್ರಮ:
ನೋಡು ಕಂದ, ಜವನ್ ಬಂದು ನಿನ್ನಯ ತಾಯನ್ ಒಯ್ವ ಪದದೊಳ್ ಅಕ್ಕಟ ಎನ್ನುಮನ್ ಅಂತೆ ಕೂಡಿದ ಒಡನೆ ಏಕೆ ಒಕ್ಕಲು ಹೊಗಿಸನ್? ಬಯ್ತೆ ನಾಂ ನಿನ್ನನೆ ನೋಡಿ ಶೋಕಮನ್ ಅಡಂಗಿಸಿ ಬಾಳ್ಕೆಯೆ ಲೇಸು ಎನುತ್ತಂ ಇರ್ಪ ಅನ್ನೆಗಂ, ಅಮ್ಮ ನಿನ್ನನ್ ಒಡಗೊಂಡು ಮುೞುಂಗುವ ಕಾಲಂ ಆದುದೋ.
ಪದ-ಅರ್ಥ:
ತಾಯನುಯ್ವ-ತಾಯಿಯನ್ನು ಕೊಂಡೊಯ್ಯುವ; ಪದದೊಳ್-ಸಂದರ್ಭದಲ್ಲಿ; ಜವನ್-ಯಮನು; ಎನ್ನುಮನ್-ನಮ್ಮನ್ನೂ; ಒಕ್ಕಲುವೊಗಿಸು-ಸಂಸಾರ ಸಮೇತ ಕೊಂಡೊಯ್ಯು; ಬಯ್ತೆ-ಬೇರೆ ದಾರಿಯಿಲ್ಲದೆ; ನಾಂ-ನಾನು; ಶೋಕ-ದುಃಖ; ಅಡಂಗಿಸಿ-ಮರೆಮಾಡಿ; ಬಾಳ್ಕೆ-ಬದುಕು; ಲೇಸು-ಒಳಿತು; ಇರ್ಪನ್ನೆಗಂ-ಇರುತ್ತಿರುವಾಗ; ಮುೞುಂಗುವ-ಮುಳುಗುವ, ಸಾಯುವ; ಕಾಲಮಾದುದೊ-ಸಮಯ ಸನ್ನಿಹಿತವಾಯಿತೊ?
ನೋಡು ಮಗನೇ, ಅಂದು ಯಮನು ಬಂದು ನಿನ್ನ ತಾಯಿಯನ್ನು ಕೊಂಡೊಯ್ಯುವ ಸಂದರ್ಭದಲ್ಲಿ ನಮ್ಮನ್ನೂ ಸಂಸಾರ ಸಮೇತನಾಗಿ ಏಕೆ ಕೊಂಡೊಯ್ಯಲಿಲ್ಲವೊ? ನೀನು ಏಕೆ ಬದುಕಿಕೊಂಡೆ? ಮಗನೇ, ನಾನು ನಿನ್ನನ್ನು ಸಾಕುತ್ತ ನನ್ನ ದುಃಖವನ್ನು ಮರೆತು ಬದುಕುವುದೇ ಒಳಿತು ಎಂದುಕೊಳ್ಳುವಷ್ಟರಲ್ಲಿಯೇ ನಿನ್ನನ್ನೂ ಕೂಡಿಕೊಂಡು ಸಾಯುವ ಸಮಯ ಸನ್ನಿಹಿತವಾಯಿತಲ್ಲ!
(ನಿನ್ನನ್ನು ಹಡೆದಾಗಲೇ ಯಮನು ಬಂದು ನಿನ್ನ ತಾಯಿಯ ಪ್ರಾಣವನ್ನು ಕೊಂಡೊಯ್ದನು. ಹೆಂಡತಿಯನ್ನು ಕಳೆದುಕೊಂಡು ತಾನು ಅನಾಥನಂತಾದೆನು. ನಮ್ಮೆಲ್ಲರನ್ನೂ ಒಡನೆ ಕೊಂಡೊಯ್ದಿದ್ದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ. ಯಮನಿಗೆ ತನ್ನ ಪ್ರಾಣ ಬೇಡವಾಗಿತ್ತು. ಅವನು ಪ್ರಾಣವನ್ನು ಕೊಂಡೊಯ್ಯದೆ ಸಾಯುವುದಾದರೂ ಹೇಗೆ? ನಿನ್ನ ಮುಖ ನೋಡಿ ತಾನೆಲ್ಲವನ್ನೂ ಮರೆತೆನು. ನಿನಗಾಗಿ ಬದುಕಬೇಕೆನಿಸಿತು. ನೀನಿನ್ನೂ ಬಲಿತಿಲ್ಲ. ಹಾರಾಡಲು ಸಾಧ್ಯವಿಲ್ಲ, ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲ. ಹೀಗಿರುವಾಗ ನಮಗೆ ಈಗ ಈ ಬೇಡನ ರೂಪದಲ್ಲಿ ಸಾವು ಬಂದಿದೆ. ತಾನಾದರೋ ಮುದುಕನಾಗಿದ್ದೇನೆ. ಇಂದೋ ನಾಳೆಯೋ ನನ್ನ ಸಾವು ಬರಬಹುದಾದರೂ ನೀನಿನ್ನು ಬದುಕಿ ಲೋಕ ನೋಡಬೇಕಾದವನು. ಆದರೆ ನಾವಿಬ್ಬರೂ ಇಂದು ಒಟ್ಟಿಗೆ ಸಾಯಬೇಕಾದ ಸಂದರ್ಭ ಬಂದಿದೆಯಲ್ಲ! ನಿನ್ನ ಭವಿಷ್ಯವೇ ನಾಶವಾದಂತಿದೆಯಲ್ಲ! ಎಂದು ಮುದಿಗಿಳಿ ನೊಂದು ನುಡಿಯಿತು.)
ವ|| ಎಂದು ಸೈರಿಸಲಾಱದೆ,
ಎಂದು ಸಹಿಸಿಕೊಳ್ಳಲು ಸಾಧ್ಯವಾಗದೆ,
ಇಱುಕಿ ತೊಡೆಯೆಡೆಯೊಳೆನ್ನಂ
ಪಱಿದೆಱಕೆಗಳಿಂದೆ ಮುಚ್ಚಿ ಮೋಹದೆ ತಾತಂ
ಮಱುಗುತಿರ್ಪಿನಮೆಯ್ದಿದ
ನಱಗುಲಿ ಕರ್ವೇಡನೆನ್ನ ಪೊೞಲಿಂಗಾಗಳ್ ೨೨
ಪದ್ಯದ ಅನ್ವಯಕ್ರಮ:
ತಾತಂ ಎನ್ನಂ ತೊಡೆಯ ಎಡೆಯೊಳ್ ಇಱುಕಿ, ಪಱಿದ ಎಱಕೆಗಳಿಂದೆ ಮುಚ್ಚಿ, ಮೋಹದೆ ಮಱುಗುತ ಇರ್ಪಿನಂ ಆಗಳ್ ಅಱಗುಲಿ ಕರ್ವೇಡನ್ ಎನ್ನ ಪೊೞಲನ್ ಎಯ್ದನ್.
ಪದ-ಅರ್ಥ:
ಇಱುಕಿ-ಭದ್ರವಾಗಿ ಅಮುಕಿ ಹಿಡಿದುಕೊಳ್ಳು; ತೊಡೆಯೆಡೆ-ತೊಡೆಗಳ ಎಡೆಗಳಲ್ಲಿ; ಪಱಿದೆಱಕೆ-ಹರಿದ ರೆಕ್ಕೆ; ಮೋಹದೆ-ವಾತ್ಸಲ್ಯದಿಂದ; ತಾತಂ-ತಂದೆಯು; ಮಱುಗುತಿರ್ಪಿನಂ-ಮರುಗುತ್ತಿರುವಷ್ಟರಲ್ಲಿ; ಎಯ್ದಿದನ್-ಆಗಮಿಸಿದನು; ಅಱಗುಲಿ-ಧರ್ಮಘಾತುಕ; ಧರ್ಮದ್ರೋಹಿ; ಕರ್ವೇಡ(ಕರಿ+ಬೇಡ)-ಕಪ್ಪಾಗಿರುವ ಬೇಡ; ಪೊೞಲಿಂಗೆ-ಪೊಟರೆಗೆ; ಆಗಳ್-ಆ ಕ್ಷಣದಲ್ಲಿ.
ನನ್ನ ತಂದೆಯು ನನ್ನನ್ನು ತನ್ನ ತೊಡೆಗಳ ಎಡೆಯಲ್ಲಿ ಭದ್ರವಾಗಿ ಅಮುಕಿ ಹಿಡಿದುಕೊಂಡು ಹರಿದುಹೋದ ತನ್ನ ರೆಕ್ಕೆಗಳಿಂದ ಬೇಡನಿಗೆ ಕಾಣದಂತೆ ಮುಚ್ಚಿ, ವಾತ್ಸಲ್ಯದಿಂದ ನನ್ನ ಭವಿಷ್ಯವನ್ನು ನೆನೆದು ದುಃಖಿಸುತ್ತ ಇರುವಷ್ಟರಲ್ಲಿಯೇ ಧರ್ಮದ್ರೋಹಿಯಾದ ಆ ಕರಿ ಬೇಡನು ನಾನು ವಾಸವಾಗಿದ್ದ ಪೊಟರೆಯ ಸಮೀಪಕ್ಕೆ ಬಂದೇ ಬಿಟ್ಟನು.
(ಬೇಡನಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ತನ್ನ ತಂದೆಗೆ ಹಾರಾಡಲು ರೆಕ್ಕೆಗಳಿಗೆ ಬಲವಿಲ್ಲ, ತನಗೋ ಸರಿಯಾಗಿ ಇನ್ನೂ ರೆಕ್ಕೆಗಳು ಮೂಡಿಲ್ಲ. ಹೀಗಿರುವಾಗ ತನ್ನ ತಂದೆಗೆ ತನ್ನ ಜೀವನ ಚಿಂತೆ ಇಲ್ಲದಿದ್ದರೂ ತನ್ನ ಮರಿಯ ಚಿಂತೆ ಬಹಳವಿತ್ತು. ಹೇಗಾದರೂ ಮಾಡಿ ತನ್ನ ಮರಿಯನ್ನು ಉಳಿಸಿಕೊಳ್ಳಬೇಕೆಂಬ ಹಂಬಲದಿಂದ ಅದು ತನ್ನ ಮರಿಯನ್ನು ಶಕ್ತಿ ಕಳೆದುಕೊಂಡಿದ್ದ ತನ್ನ ತೊಡೆಗಳ ಮಧ್ಯೆ ಇರಿಸಿ ಭದ್ರವಾಗಿ ಅಮುಕಿಹಿಡಿದುಕೊಂಡು, ಹರಿದುಹೋದ ತನ್ನ ರೆಕ್ಕೆಗಳಿಂದ ಮುಚ್ಚಿಕೊಂಡು ಕಾಪಾಡಿಕೊಳ್ಳುವುದಕ್ಕೆ ಪ್ರಯತ್ನಿಸಿತು. ಆದರೆ ಅಷ್ಟರಲ್ಲಿಯೇ ಆ ಕ್ರೂರಿಯಾದ ಮತ್ತು ಕಪ್ಪಾದ ಮೈಬಣ್ಣದ ಬೇಡನು ತಾವು ವಾಸವಿರುವ ಪೊಟರೆಯ ಸಮೀಪಕ್ಕೆ ಬಂದೇ ಬಿಟ್ಟನು. ಆತನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಅರಿವಾಯಿತು.)
ಅಡಸುವ ಕಾಲದಂಡಮೆರೆಗೊಳ್ವಸಿತೋರಗನೆಂಬ ಶಂಕೆ ನೂ
ರ್ಮಡಿಸಿರೆ ಕಾಡಪಂದಿಗಳ ಬಲ್ನೆಣದಿಂ ಪೊಲಸಟ್ಟಿ ನಾರ್ವ ಜೇ
ವಡೆಗಳ ಪುಣ್ಗಳಿಂ ತೊರೆವ ನೆತ್ತರ ಕೆಯ್ ನಡುಗಲ್ಕೆ ನೀಡಿ ಕೀ
ಳಿಡೆಯಿಡೆ ಗಂಟಲಂ ಮುಱಿದನೊರ್ಮೆಯೆ ನಿರ್ಘೃಣನೆನ್ನ ತಂದೆಯಂ ೨೩
ಪದ್ಯದ ಅನ್ವಯಕ್ರಮ:
ಅಡಸುವ ಕಾಲದಂಡಂ, ಎರೆಗೊಳ್ವ ಅಸಿತೋರಗನ್, ಎಂಬ ಶಂಕೆ ನೂರ್ಮಡಿಸಿರೆ, ಕಾಡ ಪಂದಿಗಳ ಬಲ್ನೆಣದಿಂ ಪೊಲಸು ಅಟ್ಟಿ, ನಾರ್ವ ಜೇವಡೆಗಳ ಪುಣ್ಗಳಿಂ, ತೊರೆವ ನೆತ್ತರ ಕೆಯ್ ನಡುಗಲ್ಕೆ ನೀಡಿ, ಕೀಳಿಡೆ ಇಡೆ ನಿರ್ಘೃಣನ್ ಎನ್ನ ತಂದೆಯಂ ಗಂಟಲಂ ಒರ್ಮೆಯೆ ಮುಱಿದನ್.
ಪದ-ಅರ್ಥ:
ಅಡಸುವ-ಮೇಲೆ ಬೀಳುವ, ಮೇಲೆರಗುವ; ಕಾಲದಂಡಂ-ಯಮದಂಡ; ಎರೆಗೊಳ್ವ-ನುಂಗುವ; ಅಸಿತೋರಗ(ಅಸಿತ+ಉರಗ)-ಕರಿನಾಗರ ಹಾವು; ಶಂಕೆ-ಸಂಶಯ; ನೂರ್ಮಡಿಸಿರೆ-ನೂರುಪಟ್ಟು ಹೆಚ್ಚಾಗಲು; ಕಾಡಪಂದಿ-ಕಾಡುಹಂದಿ; ಬಲ್ನೆಣಂ-ಹೆಚ್ಚಾದ ಕೊಬ್ಬು; ಪೊಲಸು-ಹೊಲಸು; ನಾರ್ವ-ನಾರುತ್ತಿರುವ; ಜೇವಡೆ – ಬಿಲ್ಲಿನ ಹೆದೆ; ಪುಣ್ಗಳಿಂ-ಹುಣ್ಣುಗಳಿಂದ; ತೊರೆವ-ಹರಿಯುವ; ನೆತ್ತರ್-ರಕ್ತ; ಕೀಳಿಡೆಯಿಡೆ-ಅರಚಿಕೊಳ್ಳುತ್ತಿರಲು; ನಿರ್ಘೃಣನ್-ದಯೆ ಇಲ್ಲದವನು.
ಮೇಲೆರಗುವ ಯಮದಂಡವೋ, ನುಂಗಲು ಬಾಯ್ತೆರೆದು ಬರುತ್ತಿರುವ ಕರಿನಾಗರವೋ ಎಂಬ ಸಂಶಯ ನೂರುಪಟ್ಟು ಹೆಚ್ಚಾಗತೊಡಗಿತು. ಕಾಡುಹಂದಿಗಳ ಅಧಿಕವಾದ ಕೊಬ್ಬಿನಿಂದಾಗಿ ಹೊಲಸಿನಿಂದ ನಾರುತ್ತಿರುವ ಮೈ, ಹಾಗೂ ಬಿಲ್ಲಿನ ಹೆದೆಯನ್ನು ಎಳೆದು ಎಳೆದು ಕೈಗಳಿಗೆ ಉಂಟಾದ ಹುಣ್ಣುಗಳಿಂದ ಕೂಡಿ ರಕ್ತ ಒಸರುತ್ತಿರುವ ಕೈಗಳು, ಮುಪ್ಪಿನಿಂದಾಗಿ ಮತ್ತು ಏರಲಾಗದ ಮರವನ್ನು ಏರಿದ್ದರಿಂದಾಗಿ ನಡುಗುತ್ತಿರುವ ಕೈಕಾಲುಗಳಿಂದ ಕೂಡಿದ ಆ ದಯೆಯೇ ಇಲ್ಲದ ಆ ಕರಿಬೇಡನು ನನ್ನ ತಂದೆಯ ಕುತ್ತಿಗೆಯನ್ನು ಒಮ್ಮೆಗೆ ಮುರಿದುಬಿಟ್ಟನು.
(ಬೇಡನಿಗೆ ಹಲವಾರು ರೀತಿಗಳಿಂದ ಬೇಸರ, ನೋವು, ಅಸಮಾಧಾನ ಹಾಗೂ ಸಿಟ್ಟೂ ಇತ್ತು. ಜೊತೆಗೆ ತನ್ನ ವಯೋಸಹಜವಾದ ಅಸಾಮರ್ಥ್ಯವೂ ಸವಾಲಾಗಿ ಕಾಡುತ್ತಿತ್ತು. ಅದರಿಂದಾಗಿಯೇ ಆತನಿಗೆ ಯಾವ ಬೇಟೆಯೂ ಸಿಕ್ಕಿರಲಿಲ್ಲ. ಈಗ ಹೇಗಾದರೂ ಮಾಡಿ ಒಂದಷ್ಟು ಪಕ್ಷಿಗಳನ್ನಾದರೂ ಹಿಡಿದು ಕೊಂಡೊಯ್ಯಬೇಕೆಂಬ ಹಂಬಲದಿಂದ ಮರವನ್ನೇರಿದ್ದನು. ಹಾಗಾಗಿ ಆತನಲ್ಲಿ ಮನುಷ್ಯತ್ವದ ಯಾವ ಲಕ್ಷಣಗಳೂ ಕಾಣಿಸುತ್ತಿರಲಿಲ್ಲ. ಆದಷ್ಟು ಬೇಗ ಮತ್ತು ಆದಷ್ಟು ಹೆಚ್ಚು ಪಕ್ಷಿಗಳನ್ನು ಕೊಂದು ಕೊಂಡೊಯ್ಯಬೇಕೆಂಬ ಹಂಬಲ ಆತನಲ್ಲಿ ವ್ಯಕ್ತವಾಗುತ್ತಿತ್ತು. ಹಾಗಾಗಿ ಆತನ ಒಂದೊಂದು ವರ್ತನೆಗಳು ಮರಿಗಿಳಿಗೆ ಭೀಕರವಾಗಿ ಕಾಣಿಸುತ್ತಿದ್ದವು. ಆತನ ಕೈಗಳು ಯಮದಂಡದಂತೆ, ಆತ ಪಕ್ಷಿಗಳನ್ನು ಹಿಡಿದುಕೊಳ್ಳಲು ಚಾಚುವ ಕೈ ಕರಿನಾಗರ ಹಸಿವೆಯಿಂದ ಬೇಟೆಯನ್ನು ಕಬಳಿಸಲು ಬಾಯ್ದೆರೆದು ಬಂದಂತೆ ಕಾಣಿಸುತ್ತಿತ್ತು. ಅಲ್ಲದೆ, ಹಂದಿಮಾಂಸ ಹಾಗೂ ಅದರ ಕೊಬ್ಬನ್ನು ಅತಿಯಾಗಿ ಸೇವಿಸಿದ್ದರಿಂದ ಆತನ ಮೈ ನಾರುತ್ತಿತ್ತು. ಇನ್ನೊಂದೆಡೆ ಬೇಟೆಯ ಸಂದರ್ಭಗಳಲ್ಲೆಲ್ಲ ಬಿಲ್ಲಿನ ಹೆದೆಯನ್ನು ಎಳೆದು ಎಳೆದು ಕೈಬೆರಳುಗಳ ಚರ್ಮ ಕಿತ್ತುಹೋಗಿ ಹುಣ್ಣುಗಳಾಗಿ ಕೀವು, ರಕ್ತ ಒಸರುತ್ತ ಭೀಕರತೆಯನ್ನು ಉಂಟುಮಾಡುತ್ತಿತ್ತು. ಮತ್ತೊಂದೆಡೆ ಹಸಿವು, ಸಿಟ್ಟು, ಅಸಮಾಧಾನ ಮಾತ್ರವಲ್ಲದೆ ವಯೋಸಹಜವಾದ ಕಾರಣಗಳಿಂದ ಆತನ ಅಂಗಾಂಗಗಳೆಲ್ಲವೂ ನಡುಗುತ್ತಿದ್ದವು. ಇಷ್ಟಾದರೂ ಒಂದಿಷ್ಟೂ ದಯೆಯನ್ನು ಹೊಂದಿರದ ಆ ಬೇಡನು ನಿರ್ದಾಕ್ಷಿಣ್ಯವಾಗಿ ಮರಿಗಿಳಿಯ ತಂದೆಯನ್ನು ಹಿಡಿದೆಳೆದು ಅದರ ಕುತ್ತಿಗೆಯನ್ನು ಮುರಿದು ಎಸೆದುಬಿಟ್ಟನು.)
ಬೆಱೆತುೞಿದೆನಾಗಿಯುಂ ತನು
ಕಿಱಿದಾಗಿಯುಮತ್ತಮಾಯುಮುಂಟಾಗಿಯು ಮೇ
ಣಱಿಯಂ ಕಾಣಂ ತಂದೆಯ
ಗಱಿಯೊಳಗಿರ್ದವನನೆನ್ನನಂದು ನೃಶಂಸಂ ೨೪
ಪದ್ಯದ ಅನ್ವಯಕ್ರಮ:
ಬೆಱೆತು ಉೞಿದೆನಾಗಿಯುಂ, ತನು ಕಿಱಿದಾಗಿಯುಂ, ಮತ್ತಂ ಆಯುಂ ಉಂಟಾಗಿಯುಂ, ಮೇಣ್ ಅಂದು ನೃಶಂಸಂ ಅಱಿಯಂ ತಂದೆಯ ಗಱಿಯೊಳಗೆ ಇರ್ದವನನ್, ಎನ್ನನ್ ಕಾಣಂ.
ಪದ-ಅರ್ಥ:
ಬೆಱೆತು-ಸೇರಿಕೊಂಡು; ಉೞೆದೆನಾಗಿ-ಉಳಿದುಕೊಂಡೆ; ತನು-ದೇಹ; ಕಿಱಿದಾಯುಂ -ಕಿರಿದಾಗಿದ್ದುದರಿಂದ; ಆಯುಂ-ಆಯುಸ್ಸು; ಮೇಣ್-ಮತ್ತು; ಅಱಿಯಂ-ತಿಳಿಯಲಿಲ್ಲ; ಕಾಣಂ-ಕಾಣಲಿಲ್ಲ; ನೃಶಂಸಂ-ಬೇಡ.
ಬೇಡನು ನನ್ನ ತಂದೆಯನ್ನು ಹಿಡಿದೆಳೆದು ಎಸೆಯುವ ಸಂದರ್ಭದಲ್ಲಿ ನಾನು ಆತನ ತೊಡೆಗಳ ಸಂಧಿಯಲ್ಲಿ ಸೇರಿಕೊಂಡಿದ್ದರಿಂದ ಉಳಿದುಕೊಂಡೆನು. ಅಲ್ಲದೆ, ನನ್ನ ದೇಹ ಅತ್ಯಂತ ಕಿರಿದಾಗಿದ್ದುದರಿಂದಲೂ ನನಗೆ ಆಯುಸ್ಸು ಇದ್ದುದರಿಂದಲೂ ಮತ್ತು ನಾನು ತಂದೆಯ ಗರಿಯೊಳಗೆ ಸೇರಿಕೊಂಡಿದ್ದರಿಂದಲೂ ಬೇಡನು ಅರಿಯಲಿಲ್ಲ ಮಾತ್ರವಲ್ಲದೆ ನಾನು ಆತನಿಗೆ ಕಾಣಲೂ ಇಲ್ಲ.
(ಮುದಿಗಿಳಿ ತನ್ನ ಮರಿಯನ್ನು ರಕ್ಷಿಸುವುದಕ್ಕೆ ತನ್ನಿಂದ ಸಾಧ್ಯವಾದಷ್ಟು ಪ್ರಯತ್ನಗಳನ್ನು ಮಾಡಿತ್ತು. ತನ್ನ ರೆಕ್ಕೆಗಳು ಮುರಿದುಹೋಗಿದ್ದರೂ ಅವುಗಳಿಗೆ ತೆರೆದುಕೊಳ್ಳುವ ಶಕ್ತಿ ಇಲ್ಲದಿದ್ದರೂ ತನ್ನ ಮರಿಯನ್ನು ತೊಡೆಗಳ ಎಡೆಯಲ್ಲಿ ಹುದುಗಿಸಿ ಗರಿ ಹರಿದ ರೆಕ್ಕೆಗಳಿಂದ ಮುಚ್ಚಿ, ವೈರಿಯಾದ ಬೇಡನಿಗೆ ಕಾಣಬಾರದೆಂದು ಬಚ್ಚಿಟ್ಟಿತ್ತು. ಎರಡನೆಯದಾಗಿ ಮರಿಗಿಳಿಯ ಆಯುಸ್ಸು ಗಟ್ಟಿಯಾಗಿದ್ದುದರಿಂದಲೂ ಅದು ಬೇಡನ ಕೈಗೆ ಸಿಗದೆ ಪಾರಾಯಿತು. ಜೊತೆಗೆ ಅದರ ಗಾತ್ರ ಅತ್ಯಂತ ಕಿರಿದಾಗಿದ್ದುದರಿಂದಲೂ ತಂದೆಯ ಗರಿಯೊಳಗೆ ಅಡಗಿಕೊಂಡಿದ್ದರಿಂದಲೂ ವೈರಿಯಾದ ಬೇಡನ ಕಣ್ಣುಗಳಿಗೆ ಕಾಣಿಸಲಿಲ್ಲ. ಇವೆಲ್ಲ ಕಾರಣಗಳಿಂದ ಮರಿಗಿಳಿ ಬದುಕಿಕೊಂಡಿತು.)
ವ|| ಅಂತು ಜೀವಮಂ ಬಿಟ್ಟು ಗೋಣೆೞಲ್ವೆನ್ನ ತಂದೆಯಂ ಮರದ ಮೇಗಣಿಂ ನೆಲಕ್ಕೀಡಾಡಲಾನುಂ ತೊಡೆಯೆಡೆಯೊಳಿರ್ದೊಡಸಂದು ಸುಟ್ಟುರೆಯ ತರಗೆಲೆಯಂತೆ ತಿಱ್ಱನೆ ತಿರುಗಿ ಬೀೞ್ವಲ್ಲಿಱುಂಕಿದೆಱಂಕೆಯೊಳಗಣಿಂ ಸಿಡಿಲ್ದು ದೈವವಶದಿಂ ಗಾಳಿಯೊಳ್ ತೆರಳ್ದು ತಱಗೆಲೆಯ ರಾಶಿಯೊಳ್ ಪೋಗಿ ಬಿರ್ದು
ಗದ್ಯದ ಅನ್ವಯಕ್ರಮ:
ಅಂತು ಜೀವಮಂ ಬಿಟ್ಟು, ಮರದ ಮೇಗಣಿಂ ಗೋಣ್ ಎೞಲ್ವ ಎನ್ನ ತಂದೆಯುಂ ನೆಲಕ್ಕೆ ಈಡಾಡಲ್, ಆನುಂ ತೊಡೆಯ ಎಡೆಯೊಳ್ ಇರ್ದು ಒಡಸಂದು, ಸುಟ್ಟುರೆಯ ತರಗೆಲೆಯಂತೆ ತಿಱ್ಱನೆ ತಿರುಗಿ ಬೀೞ್ವಲ್ಲಿ, ಇಱುಂಕಿದ ಎಱಂಕೆಯ ಒಳಗಣಿಂ ಸಿಡಿಲ್ದು, ದೈವವಶದಿಂ ಗಾಳಿಯೊಳ್ ತೆರಳ್ದು ಪೋಗಿ ತಱಗೆಲೆಯ ರಾಶಿಯೊಳ್ ಬಿರ್ದು-
ಪದ-ಅರ್ಥ:
ಅಂತು-ಹಾಗೆ; ಗೋಣ್ – ಕುತ್ತಿಗೆ; ಎೞಲ್ವ-ಜೋತಾಡುವ; ಮೇಗಣಿಂ-ಮೇಲಿನಿಂದ; ಈಡಾಡಲ್-ಎಸೆಯಲು; ಎಡೆಯೊಳ್-ಸಂಧಿಯಲ್ಲಿ; ಒಡಸಂದು-ಜೊತೆಯಲ್ಲಿ; ಸುಟ್ಟುರೆ-ಬಿರುಗಾಳಿ; ತರಗೆಲೆ-ಒಣಗಿದ ಎಲೆ; ಎಱಂಕಿದ-ಇರುಕಿದ; ಎಱಂಕೆ-ರೆಕ್ಕೆ; ಒಳಗಣಿಂ-ಒಳಗಿನಿಂದ; ಸಿಡಿಲ್ದು-ಸಿಡಿದು, ಹಾರಿ, ಪ್ರತ್ಯೇಕಗೊಂಡು; ದೈವವಶದಿಂ-ದೇವತಾನುಗ್ರಹದಿಂದ; ಗಾಳಿಯೊಳ್ ತೆಱಳ್ದು-ಗಾಳಿಯಲ್ಲಿ ಓಲಾಡಿ; ಬಿರ್ದು-ಬಿದ್ದು.
ಹಾಗೆ ಬೇಡನು ಕುತ್ತಿಗೆಯನ್ನು ಮುರಿದುದರಿಂದ ಪ್ರಾಣಬಿಟ್ಟು ಜೋತಾಡುತ್ತಿರುವ ನನ್ನ ಸಮೇತ ತಂದೆಯನ್ನು ಕೆಳಗೆ ಎಸೆದಾಗ ಆತನ ತೊಡೆಯ ಸಂಧಿಯೊಳಗಿದ್ದ ನಾನು ಮರದಿಂದ ಬೀಳುತ್ತಿರುವ ಹೊತ್ತಿಗೆ ಆತನ ಜೊತೆಯಲ್ಲಿಯೇ ಬಿರುಗಾಳಿಗೆ ಸಿಲುಕಿದ ತರಗೆಲೆಯಂತೆ ತಿರ್ರನೆ ತಿರುಗುತ್ತ ನೆಲಕ್ಕೆ ಬೀಳುತ್ತಿರುವ ಹೊತ್ತಿಗೆ ಆತನಿಂದ ಪ್ರತ್ಯೆಕಗೊಂಡು ದೇವತಾನುಗ್ರಹದಿಂದ ಗಾಳಿಯಲ್ಲಿ ತೇಲಾಡುತ್ತ ತರಗೆಲೆಯ ರಾಶಿಗೆ ಹೋಗಿ ಬಿದ್ದೆನು.
(ಬೇಡನು ಆಕ್ರೋಶದಿಂದ ಮುದಿ ಗಿಳಿಯನ್ನು ಪೊಟರೆಯಿಂದ ಹೊರಗೆಳೆದು ಅದರ ಕುತ್ತಿಗೆಯನ್ನು ಮುರಿದುಬಿಟ್ಟನು. ಹಾಗೆ ಕುತ್ತಿಗೆ ಮುರಿದುದರಿಂದ ಅದರ ಪ್ರಾಣ ಹಾರಿಹೋಯಿತು. ಆದರೆ ತಾನು ಆತನ ತೊಡೆಗಳ ಸಂಧಿಯಲ್ಲಿ ಇರುಕಿಕೊಂಡಿದ್ದರಿಂದ ಬೇಡನಿಗೆ ಅರಿವಾಗಲಿಲ್ಲ. ಮರಿಗಿಳಿಯೂ ದೈವವಶದಿಂದ ಪಾರಾಯಿತು. ಹಾಗೇ ಬೇಡನು ಮುದಿಗಿಳಿಯನ್ನು ಹೊರಕ್ಕೆ ಎಸೆಯುತ್ತಿರುವಾಗ ಮರಿಗಿಳಿಯೂ ಅದರ ಜೊತೆಯಲ್ಲಿಯೇ ಕೆಳಗೆ ಬೀಳುತ್ತ ಬಿರುಗಾಳಿಗೆ ತುತ್ತಾದ ತರಗೆಲೆಯಂತೆ ತಿರ್ರನೆ ತಿರುಗುತ್ತ ತಂದೆಯ ತೊಡೆಯ ಎಡೆಯಿಂದ ಪ್ರತ್ಯೇಕಗೊಂಡು ಎಲ್ಲೋ ತರಗೆಲೆಯ ರಾಶಿಯಲ್ಲಿ ಬಿದ್ದಿತು. ಒಂದೆಡೆ ತಂದೆಯನ್ನು ಕಳೆದುಕೊಂಡಿತ್ತು. ಇನ್ನೊಂದೆಡೆ ಬದುಕಿನ ದಾರಿಯೂ ತಿಳಿಯದ ಸ್ಥಿತಿಯುಂಟಾಯಿತು.)
ಕೞಿದಿರ್ದ ತಂದೆಯಂ ಬಿಸು
ಟೞಲುಮನಿನಿಸಱಿಯದೆಳವೆಯೊಳ್ ಪಾತಕನೆಂ
ಪೞೆಯ ತರಗೆಲೆಗಳೊಳಗಿ
ರ್ದುೞಿದೆಂ ಖಳನಿೞಿದು ಕಾಣ್ಗುಮೆಂಬೀ ಭಯದಿಂ ೨೫
ಪದ್ಯದ ಅನ್ವಯಕ್ರಮ:
ಕೞಿದಿರ್ದ ತಂದೆಯಂ, ಬಿಸುಟ ಅೞಲುಮನ್, ಇನಿಸು ಅಱಿಯದ ಎಳವೆಯೊಳ್ ಪಾತಕನೆಂ, ಖಳನ್ ಇೞಿದು ಕಾಣ್ಗುಂ ಎಂಬ ಈ ಭಯದಿಂ ಪೞೆಯ ತಱಗೆಲೆಗಳ ಒಳಗೆ ಇರ್ದು ಉೞಿದೆಂ.
ಪದ-ಅರ್ಥ:
ಕೞಿದಿರ್ದ-ಕಳೆದುಹೋದ, ಸತ್ತುಹೋದ; ಬಿಸುಟ-ತ್ಯಜಿಸಿದ, ಅೞಲುಮನ್-ನೋವನ್ನು; ಇನಿಸು-ಒಂದಿಷ್ಟೂ; ಅಱಿಯದ-ತಿಳಿಯದ; ಎಳವೆಯೊಳ್-ಬಾಲ್ಯದಲ್ಲಿ; ಪಾತಕನೆಂ-ಪಾಪಿಯೆನಿಸಿದೆ; ಪೞೆಯ-ಹಳೆಯ; ಉೞಿದೆಂ-ಬದುಕಿದೆ; ಕಾಣ್ಗುಂ-ನೋಡಬಹುದು.
ಸತ್ತುಹೋದ ತಂದೆಯನ್ನು ಕಳೆದುಕೊಂಡು, ನನ್ನ ಬಾಲ್ಯಾವಸ್ಥೆಯಿಂದಾಗಿ ಆತನನ್ನು ತ್ಯಜಿಸಿದ ದುಃಖವನ್ನು ಅರಿತುಕೊಳ್ಳಲಾರದೆ, ಆ ದುಷ್ಟ ಬೇಡನು ನನ್ನನ್ನು ಎಲ್ಲಾದರೂ ನೋಡಿ ಕೊಂದುಬಿಡುತ್ತಾನೋ ಎಂಬ ಭಯದಿಂದ ಹಳೆಯ ತರಗೆಲೆಗಳ ನಡುವೆ ತೂರಿಕೊಂಡು ಬದುಕಿ ಉಳಿದೆನು.
(ಬೇಡನು ತನ್ನ ತಂದೆಯ ಕುತ್ತಿಗೆಯನ್ನು ಮುರಿಯುವುದನ್ನು ಮರಿಗಿಳಿ ನೋಡಿ ಹೆದರಿಕೊಂಡಿತ್ತು. ಇನ್ನೊಂದೆಡೆ ಲೋಕದಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುವಷ್ಟು ಬುದ್ಧಿ ಅದಕ್ಕೆ ಬೆಳೆದಿರಲಿಲ್ಲ. ತಂದೆಯು ಸತ್ತುಹೋಗಿದ್ದಾನೆ ಎಂಬ ದುಃಖವನ್ನು ಅರಿತುಕೊಳ್ಳುವಷ್ಟು ಬುದ್ಧಿಯೂ ಬೆಳೆದಿರಲಿಲ್ಲ. ಅಷ್ಟು ಎತ್ತರದ ಮರದಿಂದ ಕೆಳಗೆ ಬೀಳುತ್ತಿರುವಾಗ ಗಾಳಿಯ ರಭಸಕ್ಕೆ ತಂದೆಯಿಂದ ಪ್ರತ್ಯೇಕಗೊಂಡಿತ್ತು. ಹಾರಾಡುವುದಕ್ಕೆ ಗೊತ್ತಿಲ್ಲ, ಆಹಾರ ಹುಡುಕುವುದಕ್ಕೂ ಗೊತ್ತಿಲ್ಲದ ಪರಿಸ್ಥಿತಿ. ತನ್ನ ತಂದೆಯನ್ನು ಕೊಂದಹಾಗೆ ತನ್ನನ್ನೂ ಕುತ್ತಿಗೆ ಮುರಿದು ಕೊಲ್ಲಬಹುದೆಂಬ ಹೆದರಿಕೆ ಮರಿಗಿಳಿಗೆ ಇತ್ತು. ಹಾಗಾಗಿ ಅದು ಹಲವು ರೀತಿಯ ಗೊಂದಲ, ಭಯಗಳಿಗೆ ತುತ್ತಾಗಿ ತಾನು ಬಿದ್ದಲ್ಲಿಯೇ ಇದ್ದ ಹಳೆಯ ತರಗೆಲೆಯ ರಾಶಿಯೊಳಗೆ ಹುದುಗಿಕೊಂಡು ಬದುಕಿ ಉಳಿಯಿತು.)
ವ|| ಅನ್ನೆಗಮಿತ್ತಲ್
ಅಷ್ಟರಲ್ಲಿ ಈ ಕಡೆ-
ಇೞಿದು ಮರದಿಂದಮಾಗಳ್
ಕೆೞಗೆಲ್ಲಂ ಪರೆದು ಬಿರ್ದ ಶುಕಸಂತತಿಯಂ
ಗೞಗೞಿಸಿ ಕಟ್ಟಿ ನಡುಬೆ
ನ್ನಿೞಿವಿನೆಗಂ ಪೊತ್ತುಪೋದನಾ ಮುದುವೇಡಂ ೨೬
ಪದ್ಯದ ಅನ್ವಯಕ್ರಮ:
ಆಗಳ್ ಆ ಮುದು ಬೇಡಂ, ಮರದಿಂದಮ್ ಇೞಿದು, ಕೆೞಗೆ ಪರೆದು ಬಿರ್ದ ಶುಕಸಂತತಿಯಂ ಎಲ್ಲಂ, ಗೞಗೞಿಸಿ ಕಟ್ಟಿ ನಡು ಬೆನ್ನ್ ಇೞಿನಿನೆಗಂ ಪೊತ್ತು ಪೋದನ್.
ಪದ-ಅರ್ಥ:
ಇೞಿದು-ಕೆಳಗಿಳಿದು; ಕೆೞಗೆಲ್ಲಂ-ಕೆಳಗೆ ಎಲ್ಲ ಕಡೆ; ಪರೆದುಬಿರ್ದ-ಚಲ್ಲಾಪಿಲ್ಲಿಯಾಗಿ ಬಿದ್ದಿರುವ; ಶುಕಸಂತತಿ-ಗಿಳಿಸಂಕುಲ; ಗೞಗೞಿಸಿ-ಸರಸರನೆ; ನಡುಬೆನ್ನಿಳಿವಿನೆಗಂ-ಬೆನ್ನು ಬಾಗುವವರೆಗೆ; ಪೊತ್ತುಪೋದನ್-ಹೊತ್ತುಕೊಂಡು ಹೋದನು; ಮುದುವೇಡಂ-ಮುದುಕ ಬೇಡನು.
ಆಗಲೇ ಆ ಮುದಿಬೇಡನು ಮರದಿಂದ ಕೆಳಗಿಳಿದು ತಾನು ಮರದ ಮೇಲಿಂದ ಕೆಳಗೆ ಎಸೆದಾಗ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಗಿಳಿಗಳೆಲ್ಲವನ್ನೂ ಸರಸರನೆ ರಾಶಿಹಾಕಿ ಗಂಟುಕಟ್ಟಿಕೊಂಡು ನಡುಬೆನ್ನು ಬಾಹುವಂತಹ ಹೊರೆಯನ್ನು ಹೊತ್ತುಕೊಂಡು ಹೊರಟುಹೋದನು.
(ಮರದ ಮೇಲೆ ಸಾಧ್ಯವಾದಷ್ಟು ಗೂಡುಗಳಿಂದ, ಪೊಟರೆಗಳಿಂದ ಗಿಳಿಗಳನ್ನು ಕಿತ್ತು, ಕತ್ತುಹಿಸುಕಿ ಹೊರಗೆ ಎಸೆದ ಬೇಡನು ಮೆಲ್ಲನೆ ಮರದಿಂದ ಕೆಳಗಿಳಿದನು. ತಾನು ಮರದ ಮೇಲಿಂದ ಕೆಳಗೆಸೆದ ಗಿಳಿಗಳೆಲ್ಲ ಮರದಡಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೆಲವು ಸತ್ತಿದ್ದವು, ಇನ್ನು ಕೆಲವು ಅರೆಜೀವದಿಂದಿದ್ದವು. ಅವುಗಳೆಲ್ಲವನ್ನೂ ಬೇಗಬೇಗನೆ ಹೆಕ್ಕಿ ರಾಶಿಹಾಕಿ ಒಂದು ದೊಡ್ಡ ಹೊರೆಯಾಗಿ ಕಟ್ಟಿಕೊಂಡು, ಅದನ್ನು ಬೆನ್ನಮೇಲೆ ಹೊತ್ತುಕೊಂಡನು. ಆತ ಮೊದಲೇ ಮುದುಕನಾಗಿದ್ದುದರಿಂದ, ಆತನ ಬೆನ್ನು ಮೊದಲೇ ಬಾಗಿತ್ತು. ಈಗ ಗಿಳಿಗಳ ಹೊರೆಯನ್ನು ಹೊತ್ತುಕೊಂಡಿದ್ದರಿಂದ ಅದು ಇನ್ನಷ್ಟು ಬಾಗಿಕೊಂಡಿತು. ಮೊದಲೇ ದಣಿದಿರುವುದರಿಂದ, ಮತ್ತು ಹೊರಲಾರದ ಹೊರೆಯನ್ನು ಹೊತ್ತಿರುವುದರಿಂದ ಆತನ ಬೆನ್ನು ಇನ್ನಷ್ಟು ಬಾಗಿತ್ತು. ಆದರೂ ಪಕ್ಷಿಗಳ ಮಾಂಸವನ್ನು ತಿನ್ನುವ ಆಸೆಯಿಂದ ಎಲ್ಲವನ್ನೂ ಸಹಿಸಿಕೊಂಡು ನಡೆದನು.)
***