ಸಾಹಿತ್ಯಾನುಸಂಧಾನ

heading1

ಎಣ್ಣೆ ಇದ್ದೂ ಎಳ್ಳು ನೆನೆಯದ ಭೇದವ

ಎಣ್ಣೆ ಇದ್ದೂ ಎಳ್ಳು ನೆನೆಯದ ಭೇದವ,

ಕಿಚ್ಚಿದ್ದೂ ಕಲ್ಲು ಸಿಡಿಯದ ಭೇದವ,

ಕಾಮವಿದ್ದೂ ಕನ್ನೆಯನುಭವಿಸದ ಭೇದವ,

ಪರವಿದ್ದು ಪ್ರಾಣನ ಪ್ರಕೃತಿಯ ಹಱಿಯದ ಭೇದವ

ನರರೆತ್ತ ಬಲ್ಲರೈ ರಾಮನಾಥ?

-ಜೇಡರ ದಾಸಿಮಯ್ಯ

          ಸರ್ವಾಂತರ್ಯಾಮಿಯಾದ ಶಿವನ ಅಸ್ತಿತ್ವವನ್ನು ಕಂಡುಕೊಳ್ಳುವುದು ಸಾಮಾನ್ಯ ಮನುಷ್ಯರಿಂದ ಸಾಧ್ಯವಿಲ್ಲ, ಅದೇನಿದ್ದರೂ ಶಿವಮಹಿಮೆ ಎಂಬುದನ್ನು  ಜೇಡರ ದಾಸಿಮಯ್ಯ ಈ ವಚನದಲ್ಲಿ ನಾಲ್ಕು ದೃಷ್ಟಾಂತಗಳ ಮೂಲಕ  ವಿವರಿಸಿದ್ದಾನೆ.

          ಮೊದಲನೆಯದಾಗಿ, ಎಳ್ಳಿನಲ್ಲಿ ಎಣ್ಣೆ ಹುದುಗಿಕೊಂಡಿದ್ದರೂ ಅದರಿಂದ ಎಳ್ಳು ನೆನೆಯದಿರುವುದೇ ರಹಸ್ಯ. ಎಣ್ಣೆಯನ್ನು ಒಂದು ಹಂತದಲ್ಲಿ ಮಾತ್ರ ಕಂಡುಕೊಳ್ಳುವುದಕ್ಕೆ ಸಾಧ್ಯವೇ ವಿನಾ ಅದು ಎಳ್ಳಿನೊಳಗೆ ಇರುವ ಸಂದರ್ಭದಲ್ಲಿ ಕಾಣುವುದಕ್ಕೆ ಸಾಧ್ಯವಿಲ್ಲ.

          ಎರಡನೆಯದಾಗಿ, ಕಲ್ಲಿನೊಳಗೆ ಬೆಂಕಿ ಇದ್ದರೂ ಅದರಿಂದ ಕಲ್ಲು ಸಿಡಿಯದಿರುವುದೇ ರಹಸ್ಯ. ಆದರೆ ಒಂದು ಕಲ್ಲಿನಿಂದ ಇನ್ನೊಂದನ್ನು ತಿಕ್ಕಿದರೆ, ಹೊಡೆದರೆ ಬೆಂಕಿಕಿಡಿಗಳು ಕಾಣಿಸಿಕೊಳ್ಳುವುದಕ್ಕೆ ಸಾಧ್ಯವಾದರೂ ಸಹಜ ಸ್ಥಿತಿಯಲ್ಲಿ ಬೆಂಕಿ ಕಾಣಿಸಲಾರದು.

          ಮೂರನೆಯದಾಗಿ, ತನ್ನಲ್ಲಿ ರತಿಭಾವದ್ದರೂ ಹೆಣ್ಣನ್ನು ಅನುಭವಿಸದಿರುವುದೇ ರಹಸ್ಯ. ಪ್ರತಿಯೊಬ್ಬನಲ್ಲಿಯೂ ರತಿಭಾವವಿದ್ದರೂ ಅದು ನಿರ್ದಿಷ್ಟ ಸಂದರ್ಭದಲ್ಲಿ ಮಾತ್ರ ಕ್ರಿಯೆಯಲ್ಲಿ ಕಾಣಿಸಿಕೊಳ್ಳುವುದಲ್ಲದೆ, ನಿರಂತರ ಕಾಣಿಸಿಕೊಳ್ಳಲಾರದು.

          ನಾಲ್ಕನೆಯದಾಗಿ, ಪಾರಮಾರ್ಥಿಕತೆಯನ್ನು ಅನುಭವಿಸುತ್ತಿದ್ದರೂ ಪ್ರಾಣವನ್ನು ಪ್ರಕೃತಿಯು ಕಡಿದುಕೊಳ್ಳಲಾರದುದೇ ರಹಸ್ಯ. ಪ್ರಾಣ ಮತ್ತು ಪ್ರಕೃತಿ ಒಂದರೊಡನೊಂದು ಬೆಸೆದುಕೊಂಡಿದ್ದರೂ ಆ ನೆಲೆಯಲ್ಲಿ ಅದನ್ನು ಕಂಡುಕೊಳ್ಳುವುದು ಅಸಾಧ್ಯ.

          ಪ್ರಕೃತಿಯಲ್ಲಿನ ಈ ರಹಸ್ಯವನ್ನು ಶಿವನಲ್ಲದೆ ಸಾಮಾನ್ಯ ಮನುಷ್ಯರು ಹೇಗೆ ಕಂಡುಕೊಳ್ಳುವುದಕ್ಕೆ ಸಾಧ್ಯ? ಎಂಬುದು ದಾಸಿಮಯ್ಯನ ಪ್ರಶ್ನೆ.

          ಈ ಪ್ರಕೃತಿಯಲ್ಲಿ ಹಲವು ರಹಸ್ಯಗಳಿವೆ. ಆ ರಹಸ್ಯಗಳ ಮೂಲವನ್ನು, ಅವುಗಳ ಗೂಢತೆಯನ್ನು ವಾಸ್ತವನೆಲೆಯಲ್ಲಿ ಕಂಡುಕೊಳ್ಳುವುದು ಅಸಾಧ್ಯ.  ಎಳ್ಳಿನೊಳಗೆ ಎಣ್ಣೆ ಅಡಗಿಕೊಂಡಿದ್ದರೂ ಅದು ಆ ನೆಲೆಯಲ್ಲಿ ನಮಗೆ ದೃಷ್ಟಿಗೋಚರವಾಗುವುದಿಲ್ಲ. ಆ ಎಣ್ಣೆಯಿಂದ ಎಳ್ಳೂ ನೆನೆಯುವುದೂ ಇಲ್ಲ. ಆದರೆ ಎಳ್ಳು ಗಾಣದಲ್ಲಿ ನುಗ್ಗುನುರಿಯಾದಾಗ ಎಣ್ಣೆ ಒಸರುತ್ತದೆ. ಹೀಗೆಯೇ ವಿವಿಧ ಜಾತಿಯ ಧಾನ್ಯಗಳೊಳಗೆ ಯಾವ ರೀತಿಯ ರಹಸ್ಯಗಳು ಅಡಗಿವೆ ಎಂಬುದನ್ನು ಸಾಮಾನ್ಯ ಮನುಷ್ಯರಿಂದ ಕಂಡುಕೊಳ್ಳುವುದಕ್ಕೆ ಸಾಧ್ಯವಿಲ್ಲ.  ಕಲ್ಲಿನೊಳಗೆ ಇರುವ ಬೆಂಕಿಯೂ ಆ ಕಲ್ಲನ್ನು ಸಿಡಿಸದ ರೀತಿಯಲ್ಲಿ ಹುದುಗಿಕೊಂಡಿದೆ. ಯಾವ ವರ್ಗದ ಕಲ್ಲಿನೊಳಗೆ ಯಾವ ಪ್ರಮಾಣದಲ್ಲಿ ಬೆಂಕಿ ಹುದುಗಿಕೊಂಡಿದೆ ಎಂಬುದೂ ಸಾಮಾನ್ಯ ಮನುಷ್ಯರಿಗೆ ಅರಿವಾಗಲಾರದು. ದೇಹದೊಳಗಿರುವ ಕಾಮವೂ ಅಷ್ಟೆ. ಪ್ರತಿಯೊಬ್ಬರಲ್ಲಿಯೂ  ಕಾಮಭಾವನೆ ಸ್ಥಾಯಿಯಾಗಿಯೇ ಇರುತ್ತದೆ. ಅದಕ್ಕೆ ಪೂರಕ ಕಾರಣಗಳು ದೊರಕಿದಾಗ ಅದು ಉದ್ಭೋದಗೊಳ್ಳುತ್ತದೆ. ಆದರೆ ಮನುಷ್ಯನಲ್ಲಿ ನಿರಂತರ ಕಾಮಭಾವನೆ ವ್ಯಕ್ತವಾಗುವುದಿಲ್ಲ.  ಇನ್ನೊಂದೆಡೆ ಶಿವ ಕಾಮನನ್ನೇ ದಹಿಸಿ ಕಾಮಾರಿ ಎನಿಸಿಕೊಂಡಿದ್ದಾನೆ. ಇಷ್ಟಾದರೂ ಶಿವ ತನ್ನ ದೇಹದ ಅರ್ಧಭಾಗವನ್ನು ಪಾರ್ವತಿಗೆ ನೀಡಿ ಅರ್ಧನಾರೀಶ್ವರ ಎನಿಸಿಕೊಂಡಿದ್ದಾನೆ. ಹಾಗಾಗಿ ಒಂದೆಡೆ ತನ್ನಲ್ಲಿನ  ಕಾಮವನ್ನು ನಿಗ್ರಹಿಸುವ, ಮತ್ತೊಂದೆಡೆ ಕಾಮಕ್ಕೆ ಪೂರಕವಾದ ಕನ್ಯೆಯನ್ನು ತನ್ನೊಂದಿಗಿರಿಸಿ ಅನುಭವಿಸದೇ ಇರುವ ರಹಸ್ಯವನ್ನು  ಶಿವನಲ್ಲದೆ ಅನ್ಯರು ತಿಳಿಯಲಾರರು.  ಪ್ರಾಣ ಮತ್ತು ದೇಹಗಳು ಒಂದರೊಡನೊಂದು ಬೆಸೆದುಕೊಂಡು ಇರುವಂತಹವುಗಳು.  ಈ ಬೆಸುಗೆಯೇ ಪ್ರತಿಯೊಬ್ಬರ ಅಸ್ತಿತ್ವಕ್ಕೆ ಕಾರಣ. ಆದರೆ, ವಾಸ್ತವದಲ್ಲಿ ಪ್ರಾಣನ ಅಸ್ತಿತ್ವವನ್ನು ಕಂಡುಕೊಳ್ಳುವುದು ಮನುಷ್ಯನಿಂದ ಅಸಾಧ್ಯ. ಭಕ್ತನೊಬ್ಬ ಪಾರಮಾರ್ಥಿಕತೆಯ ಪರವಾಗಿದ್ದರೂ ಮೋಕ್ಷದ ಸನಿಹದಲ್ಲಿದ್ದರೂ ಆತ ಪ್ರಾಣ ಹಾಗೂ ಪ್ರಕೃತಿಯ ರಹಸ್ಯವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ.

            ಲೋಕವೆಲ್ಲವೂ ಇಂತಹ ರಹಸ್ಯಗಳಿಂದಲೇ ಕೂಡಿದೆ. ಈ ರಹಸ್ಯಗಳ ಹಿಂದೆ ಶಿವನಿದ್ದಾನೆ. ಆತನ ಅಸ್ತಿತ್ವವೂ ಇದೆ, ಅನುಗ್ರಹವೂ ಇದೆ. ಮನುಷ್ಯ ಎಷ್ಟು ಸಾಧಿಸಿದರೂ ವಾಸ್ತವನೆಲೆಯಲ್ಲಿ ಈ ರಹಸ್ಯಗಳನ್ನು ಅವುಗಳ ನಿಜಸ್ಥಿತಿಯನ್ನು ಕಂಡುಕೊಳ್ಳುವುದು ಕಷ್ಟ. ಅದೇನಿದ್ದರೂ ಭಗವಂತನಿಂದ ಮಾತ್ರ ಸಾಧ್ಯ. ಹಾಗಾಗಿ ಆತನ ಮುಂದೆ ನಮ್ಮ ಸಾಧನೆ ಅತ್ಯಲ್ಪ. ಅವುಗಳನ್ನು ಅರಿತುಕೊಂಡು ಅವುಗಳಿಗೆ ಅಧೀನವಾಗಿ ಬದುಕಬೇಕಲ್ಲದೆ; ಲೋಕರಹಸ್ಯವನ್ನು, ಅವುಗಳ ಅಸ್ತಿತ್ವವನ್ನು ಕಂಡುಕೊಳ್ಳುವ ವ್ಯರ್ಥಪ್ರಯತ್ನ ಬೇಡ, ಅದು ಸುಲಭವೂ ಅಲ್ಲ ಎಂಬುದನ್ನು ಜೇಡರ ದಾಸಿಮಯ್ಯ ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾನೆ.  

***

 

Leave a Reply

Your email address will not be published. Required fields are marked *