ಸಾಹಿತ್ಯಾನುಸಂಧಾನ

heading1

ವಚನಗಳು – ಸತ್ಯಕ್ಕ – ಭಾಗ-೧

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ವಚನ ಭಾಗ -ಭಾಗ-೧)

ಲಂಚವಂಚನಕ್ಕೆ ಕೈಯಾನದ ಭಾಷೆ,

ಬಟ್ಟೆಯಲ್ಲಿ ಹೊನ್ನು ವಸ್ತ್ರ  ಬಿದ್ದಿದ್ದರೆ

ನಾನು ಕೈ ಮುಟ್ಟಿ ಎತ್ತಿದೆನಾದರೆ

ನಿಮ್ಮಾಣೆ ನಿಮ್ಮ ಪ್ರಮಥರಾಣೆ.

ಅದೇನು ಕಾರಣವೆಂದರೆ, ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ.

ಇಂತಲ್ಲದೆ ನಾನು ಅಳಿಮನವ ಮಾಡಿ

ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ,

ನೀನಾಗಲೆ ಎನ್ನ ನರಕದಲ್ಲಿ ಅದ್ದಿ

ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ!   ೧

                ತನ್ನದಲ್ಲದ ವಸ್ತುವಿಗೆ ಆಸೆಪಡುವುದು ಮನುಷ್ಯನ ಒಂದು ಮುಖ್ಯವಾದ ಸ್ವಭಾವ. ತಾನು ದುಡಿಯದೆ, ಅನಾಯಾಸವಾಗಿ ದೊರಕುವ ಹಣ, ಹೊನ್ನು, ಒಡವೆಗಳಿಗೆ ಹಾತೊರೆಯುವುದು, ಅನ್ಯರ ಗಮನಕ್ಕೆ ಬಾರದಂತೆ ಎಗರಿಸುವುದು, ಯಾರಿಗೋ ಸಲ್ಲಬೇಕಾದುದನ್ನು ತನ್ನದಾಗಿಸಿಕೊಳ್ಳುವುದು ಮನುಷ್ಯನಲ್ಲಿರುವ ಕೆಲವು ಹೀನಪ್ರವೃತ್ತಿಗಳು. ಯಾರದ್ದೋ ದುಡಿಮೆ, ಯಾರಿಗೋ ಪ್ರತಿಫಲ. ಇದು ಲೋಕದಲ್ಲಿ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ. ಹನ್ನೆರಡನೆಯ ಶತಮಾನದ ಶಿವಶರಣೆ ಸತ್ಯಕ್ಕ ಮೇಲಿನ ವಚನದಲ್ಲಿ ಇಂತಹ ಪ್ರವೃತ್ತಿಯನ್ನು ಪರದ್ರವ್ಯದಾಸೆ ಎಂದು ತಿರಸ್ಕರಿಸುತ್ತಾಳೆ.

                ‘ಲಂಚ’ ಎಂಬುದು ವಂಚನೆಯ ಒಂದು ವಿಧಾನ. ತಾನದಕ್ಕೆ ಕೈಯೊಡ್ಡುವುದಿಲ್ಲ ಎಂದು ಆಕೆ ಭಾಷೆನೀಡುತ್ತಾಳೆ. ದಾರಿಯಲ್ಲಿ (ಅನ್ಯರಿಗೆ ಅರಿವಿಲ್ಲದೆ) ಬಿದ್ದಿರುವ ವಸ್ತ್ರ, ಹೊನ್ನು ಮೊದಲಾದವುಗಳನ್ನು ತಾನು ಕೈಯಿಂದ ಮುಟ್ಟಲಾರೆ, ಹಾಗೆ ಮುಟ್ಟಿದರೆ ’ಶಿವನಾಣೆ’ ಮಾತ್ರವಲ್ಲ, ’ ಪ್ರಮಥರಾಣೆ’ ಎಂದು ತನಗೆ ತಾನೇ ಆಣೆಹಾಕಿಕೊಳ್ಳುತ್ತಾಳೆ. ತನ್ನದಲ್ಲದ, ಅನ್ಯರಿಗೆ ಸೇರಿದ ವಸ್ತುಗಳನ್ನು ಆಕೆ ಬಯಸುವುದಿಲ್ಲ. ಏಕೆಂದರೆ ಆಕೆ ಶಿವ ನೀಡಿದ ಭಿಕ್ಷದಲ್ಲಿದ್ದು ಬದುಕುವವಳು. ತನ್ನ ಕಾಯಕದಲ್ಲಿ ಮತ್ತು ಅದರಿಂದ ಬರುವ ಸಂಪಾದನೆಯಲ್ಲಿಯೇ ಸುಖ, ಸಂತೋಷಗಳನ್ನು ಕಂಡವಳು. ಹಾಗಿರುವಾಗ ಅದನ್ನೂ ಮೀರಿ ‘ಕ್ಷುದ್ರಮನಸ್ಸಿನಿಂದ ಅನ್ಯರ ದ್ರವ್ಯಗಳನ್ನು ಬಯಸಿದರೆ ತನ್ನನ್ನು ನರಕದಲ್ಲಿ ಅದ್ದಿಹೋಗು’ ಎಂದು ನಿಷ್ಟುರವಾಗಿ ಶಂಭುಜಕ್ಕೇಶ್ವರನಲ್ಲಿ ಬೇಡಿಕೊಳ್ಳುತ್ತಾಳೆ.

                ಶಿವಭಕ್ತರ ಮನೆಯ ಕಸಗುಡಿಸುವ ಕಾಯಕವನ್ನು ನಡೆಸುತ್ತಿದ್ದ ಸತ್ಯಕ್ಕ ಆ ಮನೆಗಳಲ್ಲಿ ಅಥವಾ ಹೊರಗೆ ಅಲ್ಲಲ್ಲಿ ಬಿದ್ದಿರಬಹುದಾದ ಹಣ, ಹೊನ್ನು, ಬಟ್ಟೆಗಳನ್ನು ಬಯಸುತ್ತಿರಲಿಲ್ಲ. ತನ್ನ ಕಾಯಕಕ್ಕೆ ಶಿವಭಕ್ತರು ಕೊಡುತ್ತಿದ್ದ ಪ್ರತಿಫಲವನ್ನು ಮಾತ್ರ ಆಕೆ ಸ್ವೀಕರಿಸಿ, ತನ್ನ ಮನೆಯಲ್ಲಿ ಶಿವಭಕ್ತರಿಗಾಗಿ ದಾಸೋಹವನ್ನು ಏರ್ಪಡಿಸುತ್ತಿದ್ದಳು. ತನ್ನ ದುಡಿಮೆ ಕಡಿಮೆ ಇದ್ದರೂ ಆಕೆ, ತನಗೆ ಅನಾಯಾಸವಾಗಿ ದೊರಕಿದ ವಸ್ತುಗಳನ್ನು ಸ್ವೀಕರಿಸಲಿಲ್ಲ. ‘ಅದು ತನ್ನದಲ್ಲ’ ಎಂಬ ದೃಢಮನಸ್ಸು ಆಕೆಯದು. ‘ಒಂದು ವೇಳೆ ತಾನು ಲಂಚವಂಚನಕ್ಕೆ, ಪರರ ಹೊನ್ನು-ವಸ್ತ್ರಗಳಿಗೆ ಕೈ ಇಕ್ಕಿದರೆ ತನ್ನನ್ನು ನರಕದಲ್ಲಿ ಅದ್ದಿ ಶಿಕ್ಷಿಸು’  ಎಂದು ಬೇಡಿಕೊಳ್ಳುವುದಕ್ಕೂ ಹಿಂಜರಿಯುವುದಿಲ್ಲ. ಅಷ್ಟರಮಟ್ಟಿಗೆ ಆಕೆಗೆ ತನ್ನ ಮನಸ್ಸು, ಕಾಯಕಗಳ ಮೇಲೆ ದೃಢವಾದ ವಿಶ್ವಾಸವಿರುವುದನ್ನು ಕಂಡುಕೊಳ್ಳಬಹುದು. ಸತ್ಯಕ್ಕನ ಈ ಮಾತು ಆಕೆಯ ಆತ್ಮವಿಮರ್ಶೆಯನ್ನು ಸೂಚಿಸುತ್ತವೆ. ಮಾತ್ರವಲ್ಲದೆ, ವ್ಯಕ್ತಿಸುಧಾರಣೆಯ ಮತ್ತು ಆ ಮೂಲಕ ಸಮಾಜ ಸುಧಾರಣೆಯ ನಿಟ್ಟಿನಲ್ಲಿ ಆಕೆಯ ಈ ಮಾತುಗಳು ಬಹಳ ಮೌಲಿಕವಾಗಿವೆ.

 

ಅರ್ಚನೆ ಪೂಜನೆ ನೇಮವಲ್ಲ;

ಮಂತ್ರ ತಂತ್ರ ನೇಮವಲ್ಲ;

ಧೂಪ ದೀಪಾರತಿ ನೇಮವಲ್ಲ;

ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ.

ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ.   ೨

                ಲೋಕದಲ್ಲಿ ಭಗವದ್ಭಕ್ತಿ ಹಾಗೂ ಆ ಬಗೆಗಿನ ಪೂಜೆ, ಪುರಸ್ಕಾರ, ವ್ರತಾಚರಣೆಗಳು ಅವರವರ ಅಭಿರುಚಿ, ನಂಬಿಕೆ ಹಾಗೂ  ಭಾವಗಳಿಗೆ ಅನುಗುಣವಾಗಿ ನೂರಾರು, ಸಾವಿರಾರು. ಪ್ರತಿಯೊಬ್ಬರಿಗೂ ತಮ್ಮದೇ ಸರಿ. ಅನ್ಯರನ್ನು ಮೆಚ್ಚಿಸುವುದಕ್ಕೆ ಹತ್ತು ಹಲವು ವಿಧಾನಗಳು. ತಾನು ಭಕ್ತನೆಂದು ಬಿಂಬಿಸುವುದಕ್ಕೂ ನೂರಾರು ವೇಷಗಳು, ತಂತ್ರ, ಕುತಂತ್ರಗಳು. ಹಾಗಾಗಿಯೇ ಧಾರ್ಮಿಕ ವಿಷಯಗಳಲ್ಲಿ ಇಂದು ಸಾಕಷ್ಟು ಗೊಂದಲಗಳು.  ಸತ್ಯಕ್ಕ ತನ್ನ ಈ ವಚನದಲ್ಲಿ  ‘ನಿತ್ಯನೇಮ’ ಎಂದರೇನೆಂಬುದಕ್ಕೆ ಒಂದು ವ್ಯಾಖ್ಯೆಯನ್ನೇ ನೀಡಿದ್ದಾಳೆ.

                ‘ನೇಮ’ ಎಂದರೆ ವ್ರತ  ಎಂದರ್ಥ. ನಮ್ಮಲ್ಲಿ ಹಲವಾರು ವ್ರತಗಳು, ಏಕಾದಶಿ, ಶಿವರಾತ್ರಿ, ಸಂಕಷ್ಟಹರ ಚತುರ್ಥಿ ಇನ್ನೂ ನೂರಾರು. ಇವುಗಳಲ್ಲದೆ ತಮ್ಮತಮ್ಮ ಇಷ್ಟದೇವರನ್ನು ಅಲಂಕರಿಸುವುದು, ಅರ್ಚಿಸುವುದು, ಪೂಜಿಸುವುದು; ಮಂತ್ರಗಳ ಪಠಣ, ತಾಂತ್ರಿಕ ವಿಧಿವಿಧಾನಗಳು; ಧೂಪಾರತಿ, ದೀಪಾರತಿಗಳು; ಷೋಡಷೋಪಚಾರ ಪೂಜೆಗಳು; ಭಕ್ಷ್ಯ-ನೈವೇದ್ಯಗಳು ಮೊದಲಾದ ಆಚರಣೆಗಳೂ ಹಲವಾರು. ದಿನದ ಬಹುತೇಕ ಸಮಯವನ್ನು ಅದರಲ್ಲಿಯೇ ಕಳೆಯುತ್ತ, ತಾವು ಶ್ರೇಷ್ಠಭಕ್ತರೆಂದೂ ಶ್ರೇಷ್ಠಸಮಾಜಸೇವಕರೆಂದೂ ತಾವೇ ಮೇಲೆಂದೂ ಉಳಿದವರು ಕೀಳೆಂದೂ ಭಾವಿಸಿ ಅನೈತಿಕತೆಯನ್ನು ಮೈಗೂಡಿಸಿಕೊಂಡವರನ್ನು ಹಾಗೂ ಹಾಗೆ ವರ್ತಿಸುತ್ತಿರುವುದನ್ನು ಸತ್ಯಕ್ಕ ಈ ವಚನದಲ್ಲಿ ವಿರೋಧಿಸುತ್ತಾಳೆ.

                ಸತ್ಯಕ್ಕನ ಪ್ರಕಾರ, ಅರ್ಚನೆ ಹಾಗೂ ಪೂಜನೆಗಳು ವ್ರತಗಳಲ್ಲ. ಮಂತ್ರ ತಂತ್ರಗಳೂ ವ್ರತಗಳಲ್ಲ. ಧೂಪಾರತಿ, ದೀಪಾರತಿಗಳು ವ್ರತಗಳಲ್ಲ. ಇವೆಲ್ಲವೂ ಭಗವದ್ಭಕ್ತಿಯ ಆಚರಣೆಗಳಾದರೂ ಅವುಗಳ ಹಿಂದೆ ನಿಷ್ಕಲ್ಮಷವಾದ ಭಕ್ತಿಯಾಗಲೀ  ಮನೋಭಾವವಾಗಲೀ ಸ್ವಭಾವವಾಗಲೀ ಲೋಕಸುಖವನ್ನು ಬಯಸುವ ಸಮಷ್ಟಿಪ್ರಜ್ಞೆಯಾಗಲೀ  ಇರುವುದಿಲ್ಲ. ಇವೆಲ್ಲವೂ ಸ್ವಾರ್ಥಸಾಧಿತವಾದವು. ಕೇವಲ ಅನ್ಯರನ್ನು ಮೆಚ್ಚಿಸಿ ತಾನು ಸಭ್ಯ, ಹಿರಿಯ, ಶ್ರೇಷ್ಠನೆನಿಸಿಕೊಂಡು  ಇತರರಿಂದ ಲಾಭಹೊಡೆಯುವುದಕ್ಕೆ ಇರುವ ಒಂದು ಮಾರ್ಗ ಅಷ್ಟೇ. ಈ ಮನೋಭಾವ ಇಲ್ಲದ ನಿಷ್ಕಲ್ಮಶರೂ ಸಾತ್ವಿಕರೂ ನೈತಿಕರೂ ಇದ್ದಾರೆ, ಅಂತಹವರ ಸಂಖ್ಯೆ ತೀರಾ ಕಡಿಮೆ.

                ಸತ್ಯಕ್ಕನ ಪ್ರಕಾರ, ಪರಸ್ತ್ರೀ ಹಾಗೂ ಪರಧನಗಳಿಗೆ ಆಸೆಮಾಡದಿರುವುದು ಹಾಗೂ ಅವುಗಳನ್ನು ಹೊಂದದಿರುವುದೇ ನಿಜವಾದ ಹಾಗೂ ನಿತ್ಯ ಅನುಷ್ಠಾನಗೊಳಿಸಬೇಕಾದ ವ್ರತ. ವ್ಯಕ್ತಿ ಹಾಗೂ ಸಮಾಜದ ಹಿತದೃಷ್ಟಿಯಿಂದ ಪರಸ್ತ್ರೀ  ಹಾಗೂ ಪರಧನಾಪೇಕ್ಷೆಗಳು ಬಹಳ ಅಪಾಯಕಾರಿ. ಭಾರತದಲ್ಲಿ ಪ್ರಾಚೀನಕಾಲದಿಂದಲೂ ಪರಸ್ತ್ರೀಯರನ್ನು ಅಪೇಕ್ಷಿಸುವುದು, ಅವರ ಸಂಗಕ್ಕೆ ಹಾತೊರೆಯುವುದು, ಪರರ ಹಣಕ್ಕೆ ಆಸೆಪಡುವುದು, ಅದನ್ನು ದೋಚುವುದು ಇವೆಲ್ಲವೂ ಅವಗುಣಗಳು ಮಾತ್ರವಲ್ಲ, ಸಮಾಜವಿರೋಧಿ ಪ್ರವೃತ್ತಿಗಳು ಎನಿಸಿಕೊಂಡಿವೆ. ಇವುಗಳಿಂದ ಹಲವಾರು ಕುಟುಂಬಗಳ ನೆಮ್ಮದಿ ನಾಶವಾಗಿ ಕುಟುಂಬಗಳೇ ಅಳಿದುಹೋಗಿವೆ. ಪರಧನಾಪೇಕ್ಷೆಯು ಕಳವು, ದರೋಡೆ ಮೊದಲಾದ ಸಮಾಜವಿರೋಧಿ ಕೃತ್ಯಗಳಿಗೆ ದಾರಿಮಾಡಿಕೊಟ್ಟಿದೆ. ಹಾಗಾಗಿಯೇ ಇಂತಹ ಬೂಟಾಟಿಕೆಯ ಪ್ರವೃತ್ತಿಗಳನ್ನು, ಆಚರಣೆಗಳನ್ನು ಸತ್ಯಕ್ಕ ಪ್ರಬಲವಾಗಿ ವಿರೋಧಿಸುತ್ತಾಳೆ. ವ್ಯಕ್ತಿಸುಧಾರಣೆಯಿಲ್ಲದೆ ಯಾವುದೂ ಅಸಾಧ್ಯವೆಂಬುದು ಆಕೆಯ ದೃಢವಾದ ನಿಲುವು.

                               

ಅಡಿಗಡಿಗೆ ನಿಮ್ಮ ಶರಣರಡಿಗೆರಗಿ ಶರಣೆಂಬೆ

ನುಡಿಯ ಬೋಧೆಯ ಮಾತು,

ಅನ್ಯ ನುಡಿ ಸಮನಿಸದು.

ಓಡು ದೇಹದ ಶಿರ ಬಿಗಿದು, ಮಡುಗಟ್ಟಿ ಕಂಬನಿಯ ಕಡಲೊಳಗೆ

ತೇಲಾಡುತೆಂದಿಪ್ಪೆನೊ?

ಮೃಡಶರಣು ಶರಣೆಂಬ  ಶಬ್ದ ಒಡಲುಗೊಂಡು

ಶಂಭುಜಕ್ಕೇಶ್ವರ ದೇವರಿಗೆ

ಶರಣೆನುತ ಮೈಮರೆದೆಂದಿಪ್ಪೆನೊ?     ೩

            ಈ ವಚನದಲ್ಲಿ ಸತ್ಯಕ್ಕನ ಶಿವಭಕ್ತಿಯ ಪಾರಮ್ಯ ವ್ಯಕ್ತವಾಗಿದೆ. ಅನ್ಯರ ಮಾತುಗಳನ್ನು ನಿರಾಕರಿಸಿ ಕೇವಲ ಶಿವಭಕ್ತರ ಮಾತುಗಳನ್ನು ಕೇಳಲು ಹಾತೊರೆಯುವ ಸತ್ಯಕ್ಕ ಶಿವಭಕ್ತಿಯಲ್ಲಿ ತಾದಾತ್ಮ್ಯವನ್ನು ಹೊಂದುವುದರ ಬಗ್ಗೆ ತನ್ನ ಇಂಗಿತವನ್ನು ವ್ಯಕ್ತಪಡಿಸಿದ್ದಾಳೆ.  ಆಕೆ ಹೆಜ್ಜೆಹೆಜ್ಜೆಗೂ ಶಿವಶರಣರ ಪಾದಗಳಿಗೆ ಎರಗಿ ಶರಣು ಎನ್ನುವುದಕ್ಕೆ ಹಂಬಲಿಸುತ್ತಾಳೆ. ಅದರಿಂದ ಶಿವಶರಣರ ತಿಳಿವಳಿಕೆಯ ಮಾತುಗಳು, ಅವರ ನೀತಿಬೋಧೆಗಳು ತನ್ನ ಬದುಕಿಗೆ ದಾರಿದೀಪವಾಗುತ್ತವೆ ಎಂಬುದು ಆಕೆಯ ನಿಲುವು. ನಿರಂತರವಾದ ಅವರ ಒಡನಾಟದಿಂದ ಹಾಗೂ ಅವರ ಮಾತುಗಳನ್ನು ಕೇಳುವುದರಿಂದ ಅನ್ಯನುಡಿ (ಶಿವಭಕ್ತಿಗೆ ಹೊರತಾದ ಮಾತು)ಗಳನ್ನು ಕೇಳುವ ಅವಕಾಶ ದೊರೆಯಲಾರದು. ಶಿವಭಕ್ತೆಯಾದ ಆಕೆಗದು ಇಷ್ಟವೂ ಇಲ್ಲ. ಮನುಷ್ಯದೇಹ ಸದಾ ಚಲನಶೀಲವಾದುದು.  ಅದು ಒಳಿತಿಗಿಂತ ಕೆಡುಕಿನ ಸೆಳೆತಕ್ಕೆ ಹೆಚ್ಚು ಒಳಗಾಗುತ್ತದೆ. ಅಂತಹ ಸದಾ ಚಲನಶೀಲವಾದ ದೇಹವನ್ನು ತಹಬಂದಿಗೆ ತಂದು, ಒಂದೆಡೆ ಸ್ಥಿರಗೊಳಿಸಿ, ಶಿವಭಕ್ತರ ಹಾಗೂ ಶಿವಭಕ್ತಿಯ ಸಾನ್ನಿಧ್ಯದಲ್ಲಿ ತಲ್ಲೀನಳಾಗಿ, ಅದರಿಂದ ಒದಗುವ ಅಲೌಕಿಕ ಸುಖದ ಕಡಲೊಳಗೆ ಯಾವಾಗ ತೇಲಾಡುತ್ತ ಇರುವೆನೋ! ಎಂದು ಸತ್ಯಕ್ಕ ಹಂಬಲಿಸುತ್ತಾಳೆ. ಶಿವನೇ ಶರಣು ಎಂಬ ಶಬ್ದವನ್ನು  ತನ್ನ ಕಿವಿಗಳಿಂದ ಸದಾ ಕೇಳುತ್ತ ಜಂಜುಕೇಶ್ವರದೇವನಿಗೆ ನಿರಂತರ ಶರಣಾಗಿರುತ್ತ ಮೈಮರೆಯುವ ಅಲೌಕಿಕ ಸ್ಥಿತಿ ತನಗೆ ಯಾವಾಗ ದೊರೆಯುತ್ತದೋ! ಎಂದು ಸತ್ಯಕ್ಕ ಹಂಬಲಿಸುತ್ತಾಳೆ.

            ಒಬ್ಬ ಶಿವಶರಣೆಯಾಗಿ ಸತ್ಯಕ್ಕ ಸದಾ ಶಿವನಿಗೆ ಹಾಗೂ ಶಿವಶರಣರಿಗೆ ಸಂಬಂಧಿಸಿದ ಮಾತುಗಳನ್ನು ಮಾತ್ರ ಕೇಳುವುದಕ್ಕೆ ಹಂಬಲಿಸುವುದನ್ನು ಆಕೆಯ ಈ ವಚನದಲ್ಲಿ ಕಂಡುಕೊಳ್ಳಬಹುದು. ಬದುಕಿನಾದ್ಯಂತ ಸಿಕ್ಕಸಿಕ್ಕವರಿಗೆ ಶರಣಾಗುವುದಕ್ಕಿಂತ, ಅಂತಹವರ ಕಾಲಿಗೆ ಎರಗುವುದಕ್ಕಿಂತ ಶಿವಶರಣರಿಗೆ ಶರಣಾಗಿ ಅವರ ಕಾಲಿಗೆರಗುವುದರಿಂದ ತನ್ನಂತಹ ಸಾಮಾನ್ಯ ಭಕ್ತೆಗೆ ಒಳ್ಳೆಯ ನೀತಿಬೋಧೆ ದೊರೆಯುತ್ತದೆ. ಲೋಕದಲ್ಲಿ ಅನ್ಯರಿಗೆ ಉಪದೇಶಮಾಡುವ, ತಮ್ಮ ಬೇಳೆ ಬೇಯಿಸಿಕೊಳ್ಳುವ, ತಾವೇ ಶ್ರೇಷ್ಠರೆಂದು ಮೆರೆಯುವ ಮಂದಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಂತಹವರ ಮಾತುಗಳಿಂದ ಬದುಕು ಅಳಿಯಬಹುದೇ ವಿನಾ ಉಳಿಯಲಾರದು. ಅಂತಹವರ ಮಾತುಗಳಿಗೆ ಮರುಳಾಗಿ ಬದುಕನ್ನು ಹಾಳುಗೆಡಹುವುದಕ್ಕಿಂತ ಶಿವಾನುಗ್ರಹಕ್ಕೆ ಪಾತ್ರರಾಗಿರುವ ಶಿವಶರಣರ ಪಾದಗಳಿಗೆ ಎರಗಿದರೆ, ಅವರ ಅನುಭಾವದ ಮಾತುಗಳನ್ನು ಕೇಳಿದರೆ, ಅವರ ನೀತಿಬೋಧೆಯನ್ನು ಅನುಸರಿಸಿದರೆ ತಮ್ಮನ್ನು, ತಮ್ಮ ಬದುಕನ್ನು, ತಮ್ಮ ಭಕ್ತಿಯನ್ನು ತಿದ್ದಿಕೊಂಡು  ಪರಿಷ್ಕರಿಸಿಕೊಳ್ಳಲು ಮತ್ತು ಆ ಮೂಲಕ ಶಿವಾನುಗ್ರಹಕ್ಕೆ ಪಾತ್ರನಾಗಲು ಸಾಧ್ಯವಾಗುತ್ತದೆ.  ಲೌಕಿಕವಾದ ಬದುಕಿನಲ್ಲಿ ಓಲಾಡುವುದಕ್ಕಿಂದ ಶಿವಭಕ್ತಿಯ ಮೂಲಕ ಅಲೌಕಿಕವಾದ ಶಿವಧ್ಯಾನದಲ್ಲಿ ತಲ್ಲೀನಳಾಗುವುದು ಒಳಿತು ಎಂಬುದು ಆಕೆಯ ನಿಲುವು. ಅಂತಹ ಶಿವಭಕ್ತಿಯ, ಶಿವಧ್ಯಾನದ ಸ್ಥಿತಿ ತನ್ನನ್ನು ತಾನೇ ಪರಿಷ್ಕರಿಸಿಕೊಳ್ಳುವುದಕ್ಕೆ ಸಹಕಾರಿ, ಹಾಗೂ ಅದುವೇ ಮೋಕ್ಷಕ್ಕೂ ದಾರಿ ಎಂಬುದು ಸತ್ಯಕ್ಕನ ನಿಲುವು. ಸತ್ಯಕ್ಕನ ಈ ಮಾತುಗಳು ಶಿವಸಾನ್ನಿಧ್ಯದ ಅಗತ್ಯವನ್ನು, ಶಿವಭಕ್ತರ ಸಂಸರ್ಗದ ಅನಿವಾರ್ಯತೆಯನ್ನು ಸ್ಪಷ್ಟಪಡಿಸುತ್ತವೆ.

 

ಅಯ್ಯಾ ಮಹಾಲಿಂಗೈಕ್ಯಾನುಭಾವಿಯೆಂದು

ಪೂರ್ವಾರ್ಜಿತವನುಂಡಡೆ ಭಂಗ

ಹರಶರಣೆಂದು ಭವಮಾಲೆಗೆ ಒಳಗಾದಡೆ ಭಂಗ

ಹರವಶವೆನಿಸಿ ವಿಧಿವಶವೆನಿಸಿದಡೆ ಅದು ನಿಮಗೆ ಭಂಗ

ಕಾಣಾ ಶಂಭುಜಕ್ಕೇಶ್ವರಾ  ೪

            ಸತ್ಯಕ್ಕ ಈ ವಚನದಲ್ಲಿ ಶಿವಭಕ್ತೆಯಾದ ತನಗೆ ಹಾಗೂ ಭಕ್ತಾನುಗ್ರಹಿಯಾದ ಶಿವನಿಗೆ ಯಾವುದು ಅವಮಾನಕರ ಎಂಬುದನ್ನು ಕೆಲವು ದೃಷ್ಟಾಂತಗಳ ಮೂಲಕ ವಿವರಿಸಿದ್ದಾಳೆ. ಮೊದಲನೆಯದಾಗಿ, ಒಬ್ಬ ಭಕ್ತ ತಾನು ಮಹಾಲಿಂಗದಲ್ಲಿ ಐಕ್ಯವನ್ನು ಹೊಂದಿದ ಅನುಭಾವಿ ಎಂದು ಭಾವಿಸಿಕೊಂಡು ತಾನು ಶಿವಾನುಗ್ರಹಕ್ಕೆ ಪಾತ್ರನಾಗುವ ಮೊದಲಿನ  ಲೋಕಸಹಜವಾದ ವರ್ತನೆಗಳನ್ನು ಮೈಗೂಡಿಸಿಕೊಂಡರೆ  ಅದು ಆತ ತನಗೆ ತಾನು ಮಾಡಿಕೊಳ್ಳುವ ಅವಮಾನ ಎನಿಸಿಕೊಳ್ಳುತ್ತದೆ . ಎರಡನೆಯದಾಗಿ, ಶಿವನಿಗೆ ಶರಣಾದ ಮೇಲೆ ಮನುಷ್ಯಸಹಜವಾದ ಲೌಕಿಕ  ಬದುಕಿನ  ಆಸೆ-ಆಕಾಂಕ್ಶೆಗಳಿಗೆ ಮರುಳಾದರೆ ಅದು ಆತ ತನಗೆ ತಾನು ಮಾಡಿಕೊಳ್ಳುವ ಅವಮಾನ ಎನಿಸಿಕೊಳ್ಳುತ್ತದೆ. ಮೂರನೆಯದಾಗಿ, ಒಬ್ಬ ಭಕ್ತ ಶಿವಾನುಗ್ರಹಕ್ಕೆ ಪಾತ್ರನಾಗಿಯೂ ಲೋಕಸಹಜವಾಗಿ ವಿಧಿಯಾಟಕ್ಕೆ ಬಲಿಯಾದ ಎಂದಾದರೆ ಅದು ಶಿವ ತನಗೆ ತಾನು ಮಾಡಿಕೊಳ್ಳುವ ಅವಮಾನ ಎನಿಸಿಕೊಳ್ಳುತ್ತದೆ.

            ಸತ್ಯಕ್ಕ ಈ ವಚನದಲ್ಲಿ ಕೇವಲ ಶಿವಭಕ್ತರಿಗೆ ಮಾತ್ರವಲ್ಲದೆ, ಶಿವನಿಗೂ ಯವುದು ಅವಮಾನಕರ ಎಂಬುದನ್ನು ವಿವರಿಸಿದ್ದಾಳೆ. ಶಿವಭಕ್ತನಾಗಬಯಸುವವನು ಮೊದಲು ತನ್ನನ್ನು ತಾನು ಪರಿಷ್ಕರಿಸಿಕೊಳ್ಳಬೇಕು. ಮನುಷ್ಯನ ಮನಸ್ಸು, ದೇಹಗಳೆಂಬವು ಹತ್ತಾರು ಭಾವನೆಗಳ, ಆಸೆ-ಆಕಾಂಕ್ಷೆಗಳ ಆಗರ. ಅವುಗಳನ್ನು ಹಿಡಿದಿಟ್ಟುಕೊಳ್ಳದೆ, ಕಾಲಾನುಕ್ರಮದಲ್ಲಿ ಪರಿಷ್ಕರಿಸಿಕೊಳ್ಳದೆ ಮನುಷ್ಯ ತನ್ನನ್ನು ತಾನು ಸುಧಾರಿಸಿಕೊಳ್ಳಲಾರ. ಈ ಸುಧಾರಣೆಯೇ ಆತನನ್ನು ಶಿವಾನುಗ್ರಹಕ್ಕೆ ಕೊಂಡೊಯ್ಯುತ್ತದೆ.ಆಗಲೇ ಆತ ಮಹಾಲಿಂಗೈಕ್ಯಾನುಭಾವಿ ಎನಿಸಿಕೊಳ್ಳಬಲ್ಲ.  ಆದರೆ ಒಬ್ಬ ಭಕ್ತ  ತನ್ನನ್ನು ತಾನು ಮಹಾಲಿಂಗೈಕ್ಯಾನುಭಾವಿ ಎಂದು ಭಾವಿಸಿಕೊಳ್ಳುವುದು ದುರಹಂಕಾರದ ವರ್ತನೆ ಎನಿಸಿಕೊಳ್ಳುತ್ತದೆ. ಮಹಾಲಿಂಗೈಕ್ಯಾನುಭಾವಿ ಎನಿಸಿಕೊಂಡ ಮೇಲೆ ಮತ್ತೆ ತನ್ನ ಹಿಂದಿನ ಜೀವನದ ವರ್ತನೆಗಳನ್ನು, ಆಸೆ-ಆಕಾಂಕ್ಷೆಗಳನ್ನು ಮೈಗೂಡಿಸಿಕೊಳ್ಳುವುದಾದರೆ ’ಲಿಂಗೈಕ್ಯಾನುಭಾವಿ” ಎನ್ನುವುದಕ್ಕೇನು ಬೆಲೆ? ಹಾಗೆಯೇ, ಹರನೇ ಶರಣು ಎಂದು ಹೇಳಬೇಕಾದರೆ, ಭಕ್ತ ತನ್ನ ಯೋಚನೆ, ಯೋಜನೆಗಳಲ್ಲಿನ  ನ್ಯೂನತೆಗಳನ್ನು ತ್ಯಜಿಸಿ ಬದಲಾವಣೆಯನ್ನು, ಪರಿಷ್ಕರಣೆಗಳನ್ನು ಹೊಂದಬೇಕು.  ಹಾಗಿಲ್ಲದೆ ತೋರಿಕೆಗೆ ಶರಣು ಎನ್ನುತ್ತ, ತಾನೊಬ್ಬ ಶಿವಭಕ್ತ ಎಂದು ತೋರಿಸಿಕೊಳ್ಳುತ್ತ, ಮನುಷ್ಯಸಹಜವಾದ ಲೌಕಿಕ ಬದುಕಿನ ಜಂಜಾಟಗಳಿಗೆ ಒಳಗಾಗುತ್ತ, ಬದುಕುವುದಾದರೆ ಆತನ ಬದುಕಿಗೇನು ಅರ್ಥ? ಎಂಬುದು ಸತ್ಯಕ್ಕನ ಪ್ರಶ್ನೆ.

            ಸತ್ಯಕ್ಕನ ಪ್ರಕಾರ, ಇಂತಹ ವಿಧಿನಿಷೇಧಗಳು ಕೇವಲ ಭಕ್ತರಿಗೆ ಮಾತ್ರವಲ್ಲ, ಶಿವನಿಗೂ ಅನ್ವಯವಾಗುತ್ತವೆ. ಭಕ್ತನೊಬ್ಬ ಶಿವನ ಅನುಗ್ರಹಕ್ಕೆ ಪಾತ್ರನಾದ ಮೇಲೆ ಆತನಿಗೆ   ಲೌಕಿಕಬದುಕಿನ ಜಂಟಾಟವಿಲ್ಲ.  ಶಿವ ಆತನಿಗೆ ಮೋಕ್ಷವನ್ನು ಕರುಣಿಸಬೇಕು. ಆದರೆ ಶಿವ ಅಂತಹ ಭಕ್ತರಿಗೆ ಮೋಕ್ಷವನ್ನು ಕರುಣಿಸುವುದಿಲ್ಲ ಎಂದಾದರೆ, ಅಂತಹ ಭಕ್ತನೊಬ್ಬ ವಿಧಿಯ ಕೈಬೊಂಬೆಯಾಗಿ ಇತರ ಸಾಮಾನ್ಯ ಮನುಷ್ಯರಂತೆಯೇ ಉಳಿಯುತ್ತಾನೆ ಎಂದಾದರೆ ಶಿವಾನುಗ್ರಹಕ್ಕೇನು ಬೆಲೆ? ಶಿವನಿಗೆ ಏನು ಬೆಲೆ? ಎಂಬುದು ಸತ್ಯಕ್ಕನ ಪ್ರಶ್ನೆ.  ಭಕ್ತನೊಬ್ಬನಿಗೆ ಇರಬೇಕಾದ ಬಾಧ್ಯತೆ ಏನಿದೆಯೋ ಅದಕ್ಕಿಂತಲೂ ಹೆಚ್ಚಿನ ಬಾಧ್ಯತೆ ಶಿವನಿಗೂ ಇರಲೇಬೇಕು, ಮಾತ್ರವಲ್ಲ, ತನ್ನನ್ನು ತಾನು ಪರಿಷ್ಕರಿಸಿಕೊಳ್ಳದ, ಶಿವಾನುಗ್ರಹಕ್ಕೆ ಪಾತ್ರನಾಗಿಯೂ ಅದಕ್ಕೆ ಪೂರಕವಾಗಿ ನಡೆದುಕೊಳ್ಳದ ಭಕ್ತರನ್ನು ಮರಳಿ ಸರಿದಾರಿಗೆ ತರುವಂತಹ ಗುರುತರವಾದ ಜವಾಬ್ದಾರಿ ಶಿವನಿಗೆ ಇದ್ದೇ ಇದೆ ಎಂಬುದನ್ನು ಸತ್ಯಕ್ಕ ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾಳೆ.

 

ಆದಿಯಲ್ಲಿ ದೇವಾ, ನಿಮ್ಮನಾರು ಬಲ್ಲರು?

ವೇದಂಗಳು ಮುನ್ನಲತ್ತತ್ತಲರಿಯವು.

ವೇದಿಗಳು ಪರಬ್ರಹ್ಮವೆಂದೆಂಬರು.

ನಾದಬಿಂದು ಪರಬ್ರಹ್ಮವೆಂದೆಂಬರು

ಸಾಧುಸಜ್ಜನ ಸದ್ಭಕ್ತರಿಚ್ಛೆಗೆ ಬಂದೆಯಾಗಿ

ಈಗೀಗ ದೇವನಾದೆ ಶಂಭುಜಕ್ಕೇಶ್ವರಾ    ೫

            ಸತ್ಯಕ್ಕ ಈ ವಚನದಲ್ಲಿ ದೇವ ಎಂಬುದಕ್ಕೆ ಒಂದು ವಿಶಿಷ್ಟವಾದ ಮಾತ್ರವಲ್ಲದೆ ಯಥಾರ್ಥವಾದ ಒಂದು ವ್ಯಾಖ್ಯಾನವನ್ನೇ ನೀಡಿದ್ದಾಳೆ. ಸಾಧು, ಸದ್ಭಕ್ತರ ಇಚ್ಛೆಗೆ ನಿಲುಕುವವನೇ ನಿಜವಾದ ದೇವನೆಂಬುದನ್ನು ಸತ್ಯಕ್ಕ ಈ ವಚನದಲ್ಲಿ ಸಕಾರಣವಾಗಿ ನಿರೂಪಿಸಿದ್ದಾಳೆ. ದೇವನೊಬ್ಬ ಆತ್ಮೀಯನಾಗುವುದು ಆತ ಯಾವುದೇ ಅಡೆತಡೆಗಳಿಲ್ಲದೆ ಭಕ್ತರ ಆಸೆ, ಆಕಾಂಕ್ಷೆಗಳಿಗೆ  ಸ್ಪಂದಿಸಿದಾಗ ಮಾತ್ರ ಎಂಬುದು ಸತ್ಯಕ್ಕನ ದೃಢವಾದ ನಂಬಿಕೆ.

            ಸೃಷ್ಟಿಯ ಆದಿಯಲ್ಲಿ ಶಿವನನ್ನು ಯಾರೊಬ್ಬರೂ ಅರಿತಿರಲಿಲ್ಲ. ವೇದಗಳೂ  ಮೊದಲು ಶಿವನನ್ನು ಅರಿಯಲು ಪ್ರಯತ್ನಿಸಲಿಲ್ಲ.  ಅನಂತರವೇನೋ  ಶಿವನಿಗೊಂದು ಹಿರಿದಾದ ಸ್ಥಾನವನ್ನು ಕೊಟ್ಟು ಆತ  ಪರಬ್ರಹ್ಮ(ಪರಮಾತ್ಮ) ಎಂದು ಸಾರಿದವು. ಆತನನ್ನೇ  ನಾದಬಿಂದುವೆಂದು ಸಾರಿ ಪರಬ್ರಹ್ಮ(ಪರಮಾತ್ಮ) ಎಂದವು.  ಹಾಗಾಗಿ ಆದಿಯಿಂದಲೂ  ಶಿವನನ್ನು ಯಾರೊಬ್ಬರೂ ಭಕ್ತರ ದೇವನೆಂದು ಗುರುತಿಸಲಿಲ್ಲ. ಆದರೆ ಕಾಲಾನುಕ್ರಮದಲ್ಲಿ ಶಿವ ಸಾಧು-ಸಜ್ಜನರ, ಭಕ್ತರ ಆಸೆ ಆಕಾಂಕ್ಷೆಗಳನ್ನು ಅರಿಯಲು, ಅವರ ಇಚ್ಛೆಯನ್ನು ಈಡೇರಿಸಲು ತೊಡಗಿದಂದಿನಿಂದ ಶಿವ ’ದೇವ’ನೆನಿಸಿ ಕೊಂಡಿದ್ದಾನೆ ಎಂದು ಸತ್ಯಕ್ಕ ಶಿವನು ಭಕ್ತರಿಗೆ ಹೇಗೆ ಪ್ರಿಯನಾಗಿದ್ದಾನೆ ಎಂಬುದನ್ನು ಸ್ಪಷ್ಟಪಡಿಸುತ್ತಾಳೆ.

            ಪ್ರಾಚೀನಕಾಲದಿಂದಲೂ ನಮ್ಮ ಪೂರ್ವಜರು ಭಕ್ತ ಹಾಗೂ ಭಗವಂತರ ನಡುವೆ ಅಗಾಧವಾದ ಅಂತರವನ್ನು ನಿರೂಪಿಸುತ್ತಲೇ ಬಂದಿದ್ದಾರೆ.  ಆತ ಜನಸಾಮಾನ್ಯರಿಗೆ ನಿಲುಕುವವನಲ್ಲ, ಸುಲಭವಾಗಿ ಮೈದೋರುವವನಲ್ಲ ಎಂದೆಲ್ಲ ಜನಸಾಮಾನ್ಯರನ್ನು ಭಗವಂತನಿಂದ ದೂರವಿರಿಸಿಕೊಂಡೇ ಬಂದಿದ್ದಾರೆ. ಆದರೆ ಶಿವಶರಣರ ಪ್ರಕಾರ, ಭಗವಂತನೆಂದರೆ ಭಕ್ತರ ಕಷ್ಟದಲ್ಲಿ ಭಾಗಿಯಾಗುವವನು, ಕರುಣಿಸುವವನು, ಅನುಗ್ರಹಿಸುವವನು. ಆತ ಇತರ ದೇವನಂತಲ್ಲ, ಆತ ಭಕ್ತರ  ಇಷ್ಟಗಳಿಗೆ ಸ್ಪಂದಿಸುವ, ಭಕ್ತರನ್ನು ತಿದ್ದಿ ಪರಿಷ್ಕರಿಸುವ, ಅಭಯವನ್ನು ನೀಡಿ ಮೋಕ್ಷವನ್ನು ಕರುಣಿಸುವ  ದೇವನಾಗಿದ್ದಾನೆ. ಹಾಗಾಗಿ ಶಿವ ಇತರ ದೇವರಂತಲ್ಲ, ಅವನು ಜನಸಾಮಾನ್ಯರ, ಭಕ್ತಜನರ ದೇವನೆಂಬುದು ಸತ್ಯಕ್ಕನ ವಾದ.

            ಇತರರು ತಮ್ಮ ಹಾಗೂ ಭಗವಂತನ ನಡುವೆ ಅಗಾಧವಾದ ವ್ಯತ್ಯಾಸವನ್ನು ಕಂಡುಕೊಂಡಂತೆ, ಅನುಭವಿಸಿದಂತೆ ಶಿವಶರಣರು ಅನುಭವಿಸಲಿಲ್ಲ. ಅವರು ಶಿವನನ್ನೂ ತಮ್ಮಂತೆಯೇ ತಮ್ಮಲ್ಲೊಬ್ಬನಂತೆಯೇ ಕಂಡರು. ಶರಣಸತಿ-ಲಿಂಗಪತಿ ಭಾವವನ್ನು ಹೊಂದಿ ಕಾಯಕವನ್ನು ನೆಚ್ಚಿ ಬದುಕಿದರು. ಕಾಯಕದೊಂದಿಗೆ ಭಕ್ತಿಯನ್ನು ಬೆರೆಸಿ ಕಾಯಕಭಕ್ತಿಯನ್ನು ಪ್ರತಿಪಾದಿಸಿದರು. ಅದಕ್ಕೆ ಪೂರಕವಾದ ಪ್ರತಿಫಲವೂ ಶರಣರಿಗೆ ಸಿಕ್ಕಿತು. ಹಾಗಾಗಿಯೇ ಶಿವನು ಭಕ್ತರ ದೇವನಾದ, ಶರಣರ ದೇವನಾದ. ಮೇಲಾಗಿ ಸತ್ಯಕ್ಕ ಏಕದೇವೋಪಾಸನೆಯನ್ನು ನಂಬಿ, ಅದನ್ನೇ ಪ್ರತಿಪಾದಿಸಿಕೊಂಡು, ಶಂಭುಜಕ್ಕೇಶ್ವರನಿಗೆ ಶರಣಾಗಿ ಕಾಯಕಜೀವಿ ಎನಿಸಿಕೊಂಡವಳು. ಹಾಗಾಗಿ ಆಕೆ ಶಿವ  ಹಾಗೂ ಭಕ್ತರ ನಡುವೆ ಅವಿನಾಭಾವ ಸಂಬಂಧವನ್ನು ಕಂಡುಕೊಂಡು   ಬದುಕಿದವಳು. ಅದನ್ನೇ ಆಕೆ ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾಳೆ.

 

ಇನಿಯಂಗೆ ತವಕವಿಲ್ಲ; ಎನಗೆ ಸೈರಣೆಯಿಲ್ಲ.

ಮನದಿಚ್ಛೆಯನರಿವ ಸಖಿಯಿಲ್ಲ, ಇನ್ನೇವೆನವ್ವಾ?

ಮನುಮಥ ವೈರಿಯ ಅನುಭಾವದಲ್ಲಿರಿನ್ನ ಮನ ಸಿಲುಕಿಬಿಡದು.

ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯೆ?

ದಿನ ವೃಥ ಹೋಯಿತ್ತಾಗಿ ಯೌವ್ವನ ಬೀಸರವಾಗದ ಮುನ್ನ

ಪಿನಾಕಿಯ ನೆರಹವ್ವಾ ಶಂಭುಜಕ್ಕೇಶ್ವರನ?   ೬

            ಈ ವಚನದಲ್ಲಿ ಸತ್ಯಕ್ಕನ ಮಧುರಭಕ್ತಿಯ ಸ್ವರೂಪ ವ್ಯಕ್ತವಾಗಿದೆ. ಇಲ್ಲಿ ಆಕೆ ತನ್ನನ್ನು ಪ್ರಿಯತಮೆಯನ್ನಾಗಿ ಶಿವನನ್ನು ಪ್ರಿಯತಮನನ್ನಾಗಿ ಪರಿಭಾವಿಸಿಕೊಂಡು ತನ್ನ ಮನದ ಬೇಗುದಿಯನ್ನು ವಿಧವಿಧವಾಗಿ ನಿರೂಪಿಸಿದ್ದಾಳೆ. ಈ ವಚನದಲ್ಲಿ ಶಿವಶರಣರು ಪ್ರತಿಪಾದಿಸುವ ಶರಣ ಸತಿ, ಲಿಂಗ ಪತಿ ಭಾವವು ಬಹಳ ಅರ್ಥಪೂರ್ಣವಾಗಿ ವ್ಯಕ್ತವಾಗಿದೆ.

            ತನ್ನ ಪ್ರಿಯತಮನಾದ ಶಿವನಿಗೆ ತನ್ನ ಬಗ್ಗೆ ತವಕವಿಲ್ಲ, ಆದರೆ ತನಗೋ ಆತನನ್ನು ಸೇರದೆ ಸೈರಣೆಯಿಲ್ಲ. ತನ್ನ ಮನಸ್ಸಿನ ಬೇಗುದಿಯನ್ನು ಸಖಿಯರಲ್ಲಿ ಹೇಳಿ ಮನಸ್ಸನ್ನು ಹಗುರ ಮಾಡಿಕೊಳ್ಳೋಣವೆಂದರೆ ತನಗೆ ಅಂತಹ ಸಖಿಯರೂ ಇಲ್ಲ. ಇನ್ನೇನು ಮಾಡಲಿ? ಎಂಬುದು ಆಕೆಯ ಕಳವಳ. ಮನುಮಥನ ವೈರಿಯಾದ ಶಿವನ ಅನುಭಾವದಲ್ಲಿ ತನ್ನ ಮನಸ್ಸು ಸಿಲುಕುತ್ತಿಲ್ಲ. ಇನ್ನೇನು ಮಾಡಲಿ? ದಿನಗಳು ಸುಮ್ಮನೆ ಕಳೆದು ಹೋಗುತ್ತಿವೆ. ಯೌವನವು  ವ್ಯರ್ಥವಾಗುತ್ತಿದೆ. ಹಾಗಾಗಿ ತನ್ನ ಯೌವನವು ನಾಶವಾಗುವುದಕ್ಕಿಂತ ಮೊದಲು ತಾನು ಪಿನಾಕಿ ಎನಿಸಿರುವ ಶಂಭುಜಕ್ಕೇಶ್ವರನನ್ನು  ಕೂಡಿಕೊಳ್ಳುವಂತೆ ಮಾಡು ಎಂದು ಮನಸ್ಸೆಂಬ ಸಖಿಯಲ್ಲಿ ಹೇಳಿಕೊಳ್ಳುತ್ತಾಳೆ.

            ಸತ್ಯಕ್ಕನ ಈ ವಚನದಲ್ಲಿ ಶರಣಸತಿ-ಲಿಂಗಪತಿ ಭಾವವನ್ನು ಗುರುತಿಸಿಕೊಳ್ಳಬಹುದು. ಇಲ್ಲಿ ಆಕೆಯ ಮಧುರಭಕ್ತಿ ಅತ್ಯಂತ ಮಾರ್ಮಿಕವಾಗಿ  ವ್ಯಕ್ತವಾಗಿದೆ.  ಶಂಭುಜಕ್ಕೇಶ್ವರನನ್ನು ತನ್ನ ಪ್ರಿಯತಮನನ್ನಾಗಿ, ತನ್ನನ್ನು ಆತನ ಪ್ರಿಯತಮೆಯಾಗಿ ಪರಿಭಾವಿಸುವ ಸತ್ಯಕ್ಕ ತನ್ನ ಮನದ ಬೇಗುದಿಗಳನ್ನು ತಾನೊಬ್ಬಳೇ ಅನುಭವಿಸುತ್ತಾಳೆ. ಅಕ್ಕಮಹಾದೇವಿಯ ಮಧುರಭಕ್ತಿಯನ್ನು ನೆನಪಿಸುವ ಸತ್ಯಕ್ಕನ ಮಾತುಗಳು ಅಲೌಕಿಕವಾದ ಭಾವವನ್ನು ವ್ಯಕ್ತಪಡಿಸುತ್ತವೆ. ಆಕೆಯದು ಲೌಕಿಕವಾದ ಪ್ರೇಮವಲ್ಲ, ಅದು ಲೌಕಿಕವಾದುದು. ಹಾಗಾಗಿಯೇ ಆಕೆಗೆ ತನ್ನ ಮನದ ವಿಚಾರಗಳನ್ನು ಹಂಚಿಕೊಳ್ಳುವುದಕ್ಕೆ ಸರಿಯಾದ ಸಖಿಯರು ಸಿಗುತ್ತಿಲ್ಲ. ಅಲೌಕಿಕವಾದ ಪ್ರೇಮಸಾಂಗತ್ಯವನ್ನು, ಅದರ ತುಡಿತಗಳನ್ನು ಅಲೌಕಿಕತೆಯನ್ನು ಮೈಗೂಡಿಸಿಕೊಂಡವರಿಗಲ್ಲದೆ ಲೌಕಿಕ ಪ್ರಪಂಚದಲ್ಲಿ ಓಲಾಡುವವರಿಗೆ ತನ್ನ ಮನಸ್ಸಿನ ಬೇಗುದಿ  ಹೇಗೆ ಅರ್ಥವಾದೀತು? ಎಂಬುದು ಸತ್ಯಕ್ಕನ ಅಳಲು.

            ಈ ವಚನದಲ್ಲಿ ಸತ್ಯಕ್ಕನ ಮನದ ಇಚ್ಛೆಯನ್ನು ಕಂಡುಕೊಳ್ಳಬಹುದು. ಮೇಲು ನೋಟಕ್ಕೆ ಈ ವಚನ ಶಿವನನ್ನು ಪತಿಯಾಗಿ ತನ್ನನ್ನು ಸತಿಯಾಗಿ ಧ್ವನಿಸಿದಂತೆ ಕಂಡು ಬರುತ್ತದೆ. ಆದರೆ ಅದರ ಜೊತೆಗೆ ಈ ವಚನ ಶಿವಾನುಗ್ರಹಕ್ಕಾಗಿ ಹಾತೊರೆಯುವ ಭಕ್ತೆಯೊಬ್ಬಳ ಮನದ ತುಡಿತವನ್ನೂ ವ್ಯಕ್ತಪಡಿಸುತ್ತದೆ. ಎಷ್ಟೋ ಮಂದಿ ತಾವು ಭಕ್ತರು ಎಂದು  ತೋರ್ಪಡಿಸುತ್ತಾರೆಯೇ ವಿನಾ ಅವರಲ್ಲಿ ಅದಕ್ಕನುಗುಣವಾದ ಅನುಷ್ಠಾನಗಳಿರುವುದಿಲ್ಲ. ಶಿವಾನುಗ್ರಹದ ಬಗೆಗಿನ ತನ್ನ ಮನದ ಸಂಕಲ್ಪವನ್ನು, ನಿರ್ಧಾರಗಳನ್ನು, ತನ್ನ ಚಿಂತನೆಗಳನ್ನು ಹೇಳಿಕೊಂಡರೂ ಅವುಗಳನ್ನು ಅರ್ಥೈಸುವವರು ಇರುವುದಿಲ್ಲ. ಅದನ್ನೇ ಆಕೆ ಮನದಿಚ್ಛೆಯನರಿವ ಸಖಿಯರಿಲ್ಲ ಎಂದು ತನ್ನ ಮನದ ನೋವನ್ನು ಹೇಳಿಕೊಳ್ಳುತ್ತಾಳೆ. ತನ್ನ ಪ್ರಾಯ ಸಂದುಹೋಗುತ್ತಿದೆ, ಶಕ್ತಿ ಅಳಿಯುತ್ತಿದೆ, ತನ್ನ ದೇಹ ಬಿದ್ದುಹೋಗುವುದಕ್ಕಿಂತ ಮೊದಲೇ ತನಗೆ ಶಿವಾನುಗ್ರಹವಾದರೆ ತನ್ನ ಬದುಕು ಸಾರ್ಥಕ ಎಂಬುದನ್ನು  ಸತ್ಯಕ್ಕ ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾಳೆ.

(೨ನೆಯ ಭಾಗದಲ್ಲಿ ಮುಂದುವರಿದಿದೆ)

 

Leave a Reply

Your email address will not be published. Required fields are marked *