ಸಾಹಿತ್ಯಾನುಸಂಧಾನ

heading1

ವಚನಗಳು – ಸತ್ಯಕ್ಕ – ಭಾಗ-೨

 

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ವಚನ ಭಾಗ-ಭಾಗ-೨)

ಏಕೆನ್ನ ಬಾರದ ಭವಂಗಳಲ್ಲಿ ಬರಿಸಿದೆ?

ಏಕೆನ್ನ ಘೋರ ಸಂಸಾರದಲ್ಲಿರಿಸಿದೆ?

ಏಕೆನಗೆ ಕರುಣಿಸಲೊಲ್ಲದೆ ಕಾಡಿಹೆ?

ಏಕೆ ಹೇಳಾ ಎನ್ನ ಲಿಂಗವೆ? ಆನು ಮಾಡಿದ ತಪ್ಪೇನು?

ಸಾಕಲಾಗದೆಂದು ಅಕ್ಕೊತ್ತಿ ನೂಕಿದಡೆ

ಏಕೆ ನಾ ನಿಮ್ಮ ಬಿಡುವೆ ಶಂಭುಜಕ್ಕೇಶ್ವರಾ  ೭

            ಈ ವಚನದಲ್ಲಿ ಸತ್ಯಕ್ಕನ ಸಮರ್ಪಣಭಾವ ವ್ಯಕ್ತವಾಗಿದೆ. ಲೌಕಿಕ ಬಂಧನದಲ್ಲಿ ಸಿಲುಕಿಕೊಂಡು ಪರಿತಪಿಸುತ್ತಿರುವ ರೀತಿಯನ್ನು ಆಕೆ ಈ ವಚನದಲ್ಲಿ ವಿವರಿಸಿದ್ದಾಳೆ. ಭಗವಂತ ತನಗೆ ಎಷ್ಟೇ ಕಷ್ಟಗಳನ್ನು ನೀಡಿದರೂ ತಾನು ಅದಕ್ಕಾಗಿ ಪರಿತಪಿಸದೆ, ಸದಾ ಆತನನ್ನೇ ಸೇರಿಕೊಳ್ಳುವ ಹಂಬಲವನ್ನು ಸತ್ಯಕ್ಕ ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾಳೆ.

            ಶಿವ ತನ್ನಿಂದ ಅನುಭವಿಸಲು ಸಾಧ್ಯವಾಗದಂತಹ ಕಷ್ಟಕರವಾದ ಜನ್ಮಗಳಲ್ಲಿ ಹುಟ್ಟಿಬರುವಂತೆ ಮಾಡಿದ್ದಾನೆ. ಲೌಕಿಕಬದುಕಿನ ಘೋರವಾದ ಜಂಜಾಟಗಳಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಮಾಡಿದ್ದಾನೆ.  ತಾನು ಹೆಜ್ಜೆಹೆಜ್ಜೆಗೂ ಕಷ್ಟಗಳನ್ನು ಎದುರಿಸುವುದನ್ನು, ಹಿಂಸೆಗಳನ್ನು   ಅನುಭವಿಸುವುದನ್ನು ನೋಡಿಯೂ ಕರುಣಿಸದೆ ಸುಮ್ಮನಿದ್ದಾನೆ. ತಾನು ಮಾಡಿರುವ ತಪ್ಪಾದರೂ ಏನು? ಎಂಬುದು ಸತ್ಯಕ್ಕನ ಕಳಕಳಿಯ ಪ್ರಶ್ನೆ. ತಾನು ಶಿವನನ್ನೇ ನಂಬಿಕೊಂಡಿರುವುದರಿಂದ ಶಿವನೇನಾದರೂ ತನ್ನನ್ನು ನಿಷ್ಠುರವಾಗಿ ಅತ್ತ ತಳ್ಳಿದರೂ ತಾನು ಆತನನ್ನು ಬಿಟ್ಟಿರಲಾರೆ ಎಂದು ಆಕೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾಳೆ.  

            ಈ ವಚನದಲ್ಲಿ ಭಕ್ತೆ ಸತ್ಯಕ್ಕನ ಅನನ್ಯವಾದ ಸಮರ್ಪಣಭಾವ ವ್ಯಕ್ತವಾಗಿದೆ. ಹೆಜ್ಜೆಹೆಜ್ಜೆಗೂ ಅಲೌಕಿಕ ಜಂಜಾಟಗಳಿಂದ ಕೂಡಿದ ಈ ಜನ್ಮಾಂತರಗಳಲ್ಲಿ ಇರಬಯಸದೆ ಆದಷ್ಟು ಬೇಗ ಶಿವಸಾನ್ನಿಧ್ಯವನ್ನು ಸೇರಿಕೊಳ್ಳಬೇಕೆಂಬ ಆಕೆಯ ಹಂಬಲವನ್ನು ಕಂಡುಕೊಳ್ಳಬಹುದು. ಶಿವನ ಅಭಿಲಾಷೆಯಂತೆ ಪ್ರತಿಯೊಬ್ಬ ಭಕ್ತರೂ ಶಿವಸಾನ್ನಿಧ್ಯವನ್ನು ಪಡೆಯಬೇಕಾದರೆ ಹಲವು ಜನ್ಮಾಂತರಗಳಲ್ಲಿ ಹುಟ್ಟಿಬರಬೇಕು. ಒಂದೊಂದು ಜನ್ಮಾಂತರಗಳಲ್ಲೂ ಪುಣ್ಯಸಂಚಯವಾಗಬೇಕು. ಆಯಾ ಜನ್ಮಾಂತರಗಳಲ್ಲಿ ಎದುರಾಗುವ ಕಷ್ಟ ಕೋಟಲೆಗಳೆಲ್ಲವನ್ನೂ ಎದುರಿಸಬೇಕು. ಹಂತಹಂತವಾಗಿ ಜನ್ಮಾಂತರಗಳ ಪಾಪಗಳೆಲ್ಲವನ್ನೂ ಪುಣ್ಯಸಂಪಾದನೆಯಿಂದ  ಪರಿಹರಿಸಿಕೊಂಡು ಶಿವಾನುಗ್ರಹಕ್ಕೆ ಪಾತ್ರನಾಗಬೇಕು. ಇದು ಒಂದೆರಡು ಜನ್ಮಗಳಲ್ಲಿ ಮುಗಿಯುವಂತಹುದಲ್ಲ. ತನ್ನ ಭಕ್ತಿ ಹಾಗೂ ಕಾಯಕಗಳ ಬಗ್ಗೆ ಅಚಲವಾದ ನಂಬಿಕೆಯುಳ್ಳ ಸತ್ಯಕ್ಕ ಶಿವ ನನಗೆ ಒಲಿಯದಿರುವುದಕ್ಕೆ ತಾನು ಮಾಡಿರುವ ತಪ್ಪೇನು? ಎಂದು ಪ್ರಶ್ನಿಸುತ್ತಾಳೆ. ಶಿವ ತನಗೆ ಒಲಿಯದಿದ್ದರೂ ತಾನು ಮಾಡುತ್ತಿರುವ ಭಕ್ತಿ, ಕಾಯಕಗಳನ್ನು ಬಿಟ್ಟಿರಲಾರದ ಸತ್ಯಕ್ಕ ಒಂದು ವೇಳೆ ಶಿವ ತನ್ನನ್ನು ನಿಷ್ಠುರವಾಗಿ ಆಚೆಗೆ ತಳ್ಳಿದರೂ ತಾನು ಮಾತ್ರ ಶಿವನನ್ನು ಬಿಟ್ಟಿರಲಾರೆ ಎಂಬ ತನ್ನ ಮನಸ್ಸಿನ ಅಚಲ ನಿರ್ಧಾರವನ್ನು ಸ್ಪಷ್ಟಪಡಿಸುತ್ತಾಳೆ. ಸತ್ಯಕ್ಕನ ಈ ಮಾತುಗಳಲ್ಲಿ ಆಕೆಯ ಅಚಲವಾದ ಶಿವಭಕ್ತಿ, ಕಾಯಕನಿಷ್ಠೆ ಹಾಗೂ  ಅದರಲ್ಲಿನ ದೃಢತೆಯನ್ನು ಗುರುತಿಸಿಕೊಳ್ಳಬಹುದು.

 

ತಲೆಯ ಮೇಲೆ ತಲೆಯುಂಟೆ? ಹಣೆಯಲ್ಲಿ ಕಣ್ಣುಂಟೆ?

ಗಳದಲ್ಲಿ ವಿಷವುಂಟೆ? ದೇವರೆಂಬವರಿಗೆಂಟೊಡಲುಂಟೆ?

ತಂದೆಯಿಲ್ಲದವರುಂಟೆ? ತಾಯಿಯಿಲ್ಲದವರುಂಟೆ?

ಎಲವೊ, ನಿನ್ನ ಹಣೆಯಲ್ಲಿ ನೇಸರು ಮೂಡದೆ?

ಶಂಭುಜಕ್ಕೇಶ್ವರನಿಲ್ಲದೆ ಉಳಿದ ದೈವಂಗಳುಂಟೆ?  ೮

            ಲೋಕದಲ್ಲಿ ಭಕ್ತರು ತಮ್ಮ ತಮ್ಮ ಇಷ್ಟದೇವರನ್ನು ವಿವಿಧ ರೂಪಗಳಲ್ಲಿ ಚಿತ್ರಿಸಿದ್ದಾರೆ. ವಿವಿಧ ವಿಶೇಷತೆಗಳನ್ನು ಆರೋಪಿಸಿದ್ದಾರೆ. ತಮ್ಮ ಇಷ್ಟದೇವರೇ ಶ್ರೇಷ್ಠ ಎಂದೆಲ್ಲ ಪ್ರಶಂಸಿಸಿದ್ದಾರೆ. ಹಾಗೆಯೇ ಶಿವಶರಣೆ ಸತ್ಯಕ್ಕ ಈ ವಚನದಲ್ಲಿ ಶಂಭುಜಕ್ಕೇಶ್ವರನ ಆರು ವಿಶೇಷತೆಗಳನ್ನು ಉಲ್ಲೇಖಿಸಿ ಶಿವನಲ್ಲದೆ ಲೋಕದಲ್ಲಿ ಅನ್ಯದೇವರಿಲ್ಲ , ಆತನಿಗೆ ಯಾರೂ ಸಮಾನರಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ.

            ಮೊದಲನೆಯದಾಗಿ, ಶಿವನಿಗೆ ತಲೆಯ ಮೇಲೆ ಇನ್ನೊಂದು ತಲೆಯಿರುವುದು. ಶಿವ ತನ್ನ ಜಟೆಯಲ್ಲಿ ಗಂಗೆಯನ್ನು ಧರಿಸಿಕೊಂಡು ಎರಡನೆಯ ತಲೆಯನ್ನು ಹೊಂದಿದ್ದಾನೆ. ಮಿಕ್ಕ ಯಾವ ದೇವರಿಗೂ ಈ ವಿಶೇಷತೆಯಿಲ್ಲ. ಎರಡನೆಯದಾಗಿ, ಶಿವನಿಗೆ ಹಣೆಯಲ್ಲಿ ಕಣ್ಣಿರುವುದು. ಶಿವ ತನ್ನ ಹಣೆಯಲ್ಲಿ ಮೂರನೆಯ ಕಣ್ಣನ್ನು ಹೊಂದಿ ತ್ರಿನೇತ್ರನೆಂದೂ ಹಣೆಗಣ್ಣನೆಂದೂ ನೊಸಲಕಣ್ಣುಳ್ಳವನೆಂದು ಪ್ರಸಿದ್ಧನಾಗಿದ್ದಾನೆ.  ಮಿಕ್ಕ ಯಾವ ದೇವರಿಗೂ ಈ ವಿಶೇಷತೆಯಿಲ್ಲ. ಮೂರನೆಯದಾಗಿ, ಶಿವ ತನ್ನ ಕೊರಳಲ್ಲಿ ವಿಷವನ್ನು ಹೊಂದಿ ಗರಳಗಳ, ವಿಷಕಂಠ, ನೀಲಕಂಠ ಎನಿಸಿಕೊಂಡಿದ್ದಾನೆ. ಮಿಕ್ಕ ಯಾವ ದೇವರಿಗೆ ಈ ವಿಶೇಷತೆಯಿಲ್ಲ. ನಾಲ್ಕನೆಯದಾಗಿ, ಎಂಟು ದೇಹಗಳನ್ನು ಹೊಂದಿ ಅಷ್ಟದೇಹಿ ಎನಿಸಿಕೊಂಡಿದ್ದಾನೆ. ಮಿಕ್ಕ ಯಾವ ದೇವರಿಗೂ ಈ ರೀತಿಯ ಎಂಟು ದೇಹಗಳಿಲ್ಲ. ಐದನೆಯದಾಗಿ ಶಿವನಿಗೆ ತಂದೆ-ತಾಯಿಯರಿಲ್ಲದೆ ಆತ ಸ್ವಯಂಭು ಆಗಿದ್ದಾನೆ. ಮಿಕ್ಕ ದೇವರಿಗೆ ಈ ವಿಶೇಷತೆಯಿಲ್ಲ. ಆರನೆಯದಾಗಿ, ಶಿವನ ಹಣೆಯಿಂದಲೇ ಸೂರ್ಯ ಉದಯಿಸಿ ಲೋಕವನ್ನೆಲ್ಲ ಬೆಳಗುತ್ತಾನೆ. ಮಿಕ್ಕ ಯಾವ ದೇವರಿಗೂ ಈ ವಿಶೇಷತೆಯಿಲ್ಲ. ಹೀಗಿರುವುದರಿಂದ ಶಂಭುಜಕ್ಕೇಶ್ವರನಿಗೆ ಮಿಕ್ಕ ಯಾವ ದೇವರೂ ಸಮಾನರಲ್ಲ ಎಂಬುದು ಸತ್ಯಕ್ಕನ ನಿಲುವು.  

            ಭಗೀರಥನ ಪ್ರಯತ್ನದಿಂದಾಗಿ ಗಂಗಾವತರಣದ ಸಂದರ್ಭದಲ್ಲಿ ಶಿವ ಗಂಗೆಯನ್ನು ತನ್ನ ತಲೆಯ ಜಟೆಯಲ್ಲಿ ಹಿಡಿದಿಟ್ಟುಕೊಂಡಿದ್ದಾನೆ. ಸ್ವರ್ಗದಿಂದ ಭೂಮಿಗೆ ಧುಮುಕಿವಾಗ ಆಗಬಹುದಾದ ಅನರ್ಥವನ್ನು ಶಿವ ತಡೆದಿದು ಗಂಗೆಯ ವೇಗವನ್ನು, ಆಕೆಯ ಧಿಮಾಕನ್ನು ತಡೆದು ಆಕೆಯನ್ನು ಶಾಂತಗೊಳಿಸಿದ್ದಾನೆ.  ಗಂಗೆ ಅಲ್ಲಿಯೇ ಶಾಶ್ವತವಾಗಿ ನೆಲೆಸಿದ್ದಾಳೆ. ಶಿವನ ಜಟೆಯಲ್ಲಿ ಗಂಗೆಯ ತಲೆ ಮಾತ್ರ ಕಾಣಿಸುತ್ತದೆಯೇ ವಿನಾ ಪೂರ್ತಿ ಗಂಗೆಯಲ್ಲ. ಗಂಗೆಯ ತಲೆ ಶಿವನ ಎರಡನೆಯ ತಲೆಯಾಗಿದೆ. ಮಿಕ್ಕ ಯಾವ ದೇವರ ಹಣೆಯ ಮೇಲೆ ಕಣ್ಣಿಲ್ಲ. ಶಿವ ತನ್ನ ಹಣೆಯಲ್ಲಿ ಮೂರನೆಯ ಕಣ್ಣನ್ನು ಹೊಂದಿ ದೇವರಲ್ಲಿಯೇ ವಿಶೇಷಸ್ಥಾನವನ್ನು ಪಡೆದಿದ್ದಾನೆ. ಸಮುದ್ರಮಥನ ಕಾಲದಲ್ಲಿ ಹುಟ್ಟಿಕೊಂಡ ಘನಘೋರ ವಿಷ ಹಾಲಾಹಲ ಲೋಕವನ್ನೆಲ್ಲ ಸುಡತೊಡಗಿದಾಗ ದೇವತೆಗಳ ವಿನಂತಿಯಂತೆ ತಾನು ಕುಡಿದು ವಿಷಕಂಠ, ಗರಳಗಳ, ನೀಲಕಂಠ ಎಂಬೆಲ್ಲ ಹೆಸರುಗಳನ್ನು ಪಡೆದುಕೊಂಡಿದ್ದಾನೆ. ಆ ಮೂಲಕ ಲೋಕವನ್ನು ಕಾಪಾಡಿದ್ದಾನೆ. ಈ ವಿಶೇಷತೆ ಮಿಕ್ಕ ಯಾವ ದೇವರಿಗೂ ಇಲ್ಲ ಎಂಬುದು ಸತ್ಯಕ್ಕನ ನಿಲುವು. ಶಿವ ಬೇರೆ ಬೇರೆ ಸಂದರ್ಭಗಳಲ್ಲಿ ದುಷ್ಟ ಶಿಕ್ಷಣೆಗಾಗಿ, ಶಿಷ್ಟ ರಕ್ಷಣೆಗಾಗಿ ಎಂಟು ದೇಹಗಳನ್ನು ಹೊಂದಿ ಅಷ್ಟದೇಹಿ ಎನಿಸಿಕೊಂಡಿದ್ದಾನೆ. ಇನ್ನಿತರ ಯಾವ ದೇವರಿಗೂ ಈ ವಿಶೇಷತೆಗಳಿಲ್ಲ ಎಂಬುದು ಸತ್ಯಕ್ಕನ ನಿಲುವು.  ಇತರರು ಪೂಜಿಸುತ್ತಿರುವ ಕೆಲವು ದೇವರಿಗೆ ತಂದೆ-ತಾಯಿಯರಿರಬಹುದು. ಆದರೆ ಶಿವನಿಗೆ ತಂದೆಯೂ ಇಲ್ಲ, ತಾಯಿಯೂ ಇಲ್ಲ. ಆತ  ತನ್ನಿಂದ ತಾನೇ ಉದ್ಭವಿಸಿ ಸ್ವಯಂಭು ಎನಿಸಿಕೊಂಡವನು. ಇದು ಆತನ ಇನ್ನೊಂದು ವಿಶೇಷತೆ.  ಶಿವನ ಹಣೆಗಣ್ಣಿಂದಲೇ ಸೂರ್ಯ ಉದಯಿಸಿ ಲೋಕವನ್ನೆಲ್ಲ ಬೆಳಗುತ್ತಾನೆ. ಲೋಕದ ಸಕಲ ಜೀವಸಂಕುಲಕ್ಕೆ, ಸಸ್ಯಸಂಕುಲಕ್ಕೆ ಬದುಕನ್ನು ಕರುಣಿಸುತ್ತಾನೆ. ಇಷ್ಟೆಲ್ಲ ವಿಶೇಷತೆಗಳು ಮಿಕ್ಕ ಯಾವ ದೇವರಿಗಿವೆ? ಎಂಬುದು ಸತ್ಯಕ್ಕನ ವಾದ. ಹಾಗಾಗಿ ಇಂತಹ ವಿಶೇಷತೆಗಳನ್ನು ಹೊಂದಿರುವ ಶಿವನನ್ನೇ ಪೂಜಿಸಬೇಕಲ್ಲದೆ, ಅನ್ಯದೇವರನ್ನು ಪೂಜಿಸುವುದರಿಂದ ಸಿಗುವ ಲಾಭವಾದರೂ ಏನು ಎಂದು ಆಕೆ ಪ್ರಶ್ನಿಸಿದ್ದಾಳೆ.  ಈ ಮಾತುಗಳಲ್ಲಿ ಆಕೆಯ ಏಕದೇವೋಪಾಸನೆಯ ಪ್ರತಿಪಾದನೆಯನ್ನು ಗುರುತಿಸಿಕೊಳ್ಳಬಹುದು.

(ಟಿಪ್ಪಣಿ: ಶರ್ವ, ಭವ, ರುದ್ರ, ಉಗ್ರ, ಭೀಮ, ಪಶುಪತಿ, ಈಶಾನ, ಮಹಾದೇವ-ಇವು ಶಿವನ ಅಷ್ಟದೇಹಗಳೆಂದೂ ಪೃಥ್ವಿ, ಜಲ, ತೇಜ, ವಾಯು, ಆಕಾಶ, ಯಜಮಾನ, ಸೂರ್ಯ, ಚಂದ್ರ-ಇವು ಶಿವನ ಎಂಟು ಮೂರ್ತಿಗಳೆಂದೂ ಎಂಟು ಸ್ಥಾನಗಳೆಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.)

 

ದೇವನೆಂದು ಅರ್ಚಿಸಿ, ಪೂಜಿಸಿ, ಭಾವಿಸಿ,

ಮತ್ತೆ ತ್ರಿವಿಧವ ಮುಟ್ಟಿದರೆಂದು

ಕಷ್ಟಗುಣವ ನುಡಿವ ಭಕ್ತಿಹೀನರ ಕಂಡಡೆ

ಅವರನೊಚ್ಚತ ತೊಲಗಬೇಕು ಶಂಭುಜಕ್ಕೇಶ್ವರಾ  ೯

            ಸತ್ಯಕ್ಕ ಈ ವಚನದಲ್ಲಿ ಡಾಂಬಿಕ ಭಕ್ತರ ವರ್ತನೆಗಳನ್ನು ನಿಷ್ಠುರವಾಗಿ ಖಂಡಿಸಿದ್ದಾಳೆ. ಲೋಕದ ಜನರಲ್ಲಿ ಹಲವು ವಿಧದ ಭಕ್ತಿಯನ್ನು, ಅವುಗಳ ಅನುಷ್ಠಾನಗಳನ್ನು ಕಂಡುಕೊಳ್ಳಬಹುದು. ಆದರೆ ಅಂತಹ ಭಕ್ತಿ ಅಥವಾ ಅದರ ಅನುಷ್ಠಾನಗಳಲ್ಲಿ ಸಾಕಷ್ಟು ಡಾಂಬಿಕತೆ ಎದ್ದುಕಾಣುತ್ತಿರುತ್ತದೆ. ಅಂತಹ ಡಾಂಬಿಕತೆಯನ್ನೇ ಸತ್ಯಕ್ಕ ನಿಷ್ಠುರವಾದ ಮಾತುಗಳಲ್ಲಿ ಖಂಡಿಸಿದ್ದಾಳೆ.

            ಶಿವನನ್ನೇ ದೇವನೆಂದು ಅರ್ಚಿಸಿ, ಪೂಜಿಸಿ, ಭಾವಿಸಿ ಮತ್ತೆ ಹೆಣ್ಣು, ಹೊನ್ನು, ಮಣ್ಣುಗಳಿಗೆ ಆಸೆಪಟ್ಟು ಅರ್ಚನೆ, ಪೂಜನೆ, ಹಾಗೂ ಭಾವನೆಗಳಿಂದ ವಿಮುಖರಾದರೆಂದು ಅನ್ಯರನ್ನು ನಿಂದಿಸುವ, ಅವಮಾನ ಪಡಿಸುವ, ಅಪವಾದಗಳನ್ನು ಹೊರಿಸುವ ಭಕ್ತಿಹೀನರನ್ನು ಅರ್ಥಾತ್ ಡಾಂಬಿಕ ಭಕ್ತರನ್ನು ಕಂಡರೆ ಅವರನ್ನು ಬಿಟ್ಟುಬಿಟ್ಟು ದೂರತೊಲಗಬೇಕು ಎಂದು ಸತ್ಯಕ್ಕ ನಿಷ್ಠುರವಾಗಿ ನುಡಿದಿದ್ದಾಳೆ.

            ಲೋಕದಲ್ಲಿ ಸದ್ಭಕ್ತರೂ ಇದ್ದಾರೆ, ಡಾಂಬಿಕ ಭಕ್ತರೂ ಇದ್ದಾರೆ. ಮೊದಲನೆಯವರು ನಿಸ್ವಾರ್ಥಿಗಳಾಗಿದ್ದು, ಅರ್ಚನೆ, ಪೂಜನೆ, ಭಾವನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕಾಯಕವನ್ನು ಮಾಡುತ್ತ ಸಮಾಜಸುಧಾರಣೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಇವರು  ಶಿವಾನುಗ್ರಹವನ್ನೇ ನಂಬಿಕೊಂಡು ಬದುಕುವವರು. ಎರಡನೆಯವರು ಕೇವಲ ಅನ್ಯರನ್ನು ನಂಬಿಸಲು ಅರ್ಚನೆ, ಪೂಜನೆ, ಭಾವನೆಗಳಲ್ಲಿ ತೊಡಗಿಕೊಂಡು ಮನಸ್ಸಿನೊಳಗೆ  ಮೋಸ, ವಂಚನೆ, ದುರಾಸೆ, ದುರ್ಬುದ್ಧಿ, ಅನೈತಿಕತೆಗಳನ್ನು ತುಂಬಿಸಿಕೊಂಡವರು. ಇವರಿಗೆ ಶಿವಾನುಗ್ರಹ ಮುಖ್ಯವಲ್ಲ, ಅದಕ್ಕಿಂತಲೂ ಹೆಚ್ಚಾಗಿ ಶಿವಭಕ್ತರೆನಿಸಿಕೊಂಡು  ತಮ್ಮ ಸ್ವಾರ್ಥವನ್ನು, ದೈಹಿಕ ಅಭಿಲಾಷೆಗಳನ್ನು ತೀರಿಸಿಕೊಳ್ಳುವ, ಶಿವಭಕ್ತಿಯನ್ನು ತಮ್ಮ ಕಾರ್ಯಸಾಧನೆಗೆ ಒಂದು ರಹದಾರಿಯನ್ನಾಗಿ ಮಾಡಿಕೊಳ್ಳುವುದೇ ಮುಖ್ಯ.  ಇವರು ಸದ್ಭಕ್ತರನ್ನೇ ಅವಹೇಳನ ಮಾಡುವವರು. ತಾವೇ ನಿಜವಾದ ಭಕ್ತರೆಂದು ಪದರ್ಶಿಸುವವರು. ತಮ್ಮ ಅವ್ಯವಹಾರಗಳನ್ನು ಮುಚ್ಚಿಡುವುದಕ್ಕೆ ಹತ್ತು ಹಲವು  ರೀತಿಗಳಲ್ಲಿ ಅರ್ಚನೆ, ಪೂಜನೆ, ಭಾವನೆಗಳನ್ನು ಹೊಂದಿರುವವರು. ತಾವೇ ನಿಜವಾದ ಭಕ್ತರೆಂದು ಭಾವಿಸಿಕೊಂಡು ಸದ್ಭಕ್ತರನ್ನು ಹೆಣ್ನು, ಹೊನ್ನು, ಮಣ್ಣುಗಳಿಗೆ ಮರುಳಾದವರೆಂದು ಹಂಗಿಸಿ, ನಿಂದಿಸುವವರು.  ಇವರಿಗೆ ತಮ್ಮ ಬೂಟಾಟಿಕೆಯೇ ಮುಖ್ಯ ವಿನಾ ನಿಜವಾದ ಭಕ್ತಿಯಲ್ಲ. ತಮ್ಮ ಕಪಟಭಕ್ತಿಯ ಮೂಲಕ ಇತರರನ್ನು ಮೋಸಗೊಳಿಸಿ ತಮ್ಮ ಕಾರ್ಯಸಾಧನೆ ಮಾಡುವವರು. ಹಾಗಾಗಿ ಸತ್ಯಕ್ಕನ ಪ್ರಕಾರ ಅವರು ಸಮಾಜಘಾತುಕರು. ಈ ಕಾರಣಕ್ಕಾಗಿ ಇಂತಹ ಡಾಂಬಿಕರ ಭಕ್ತರನ್ನು ಕಂಡ ಕೂಡಲೇ ದೂರತೊಲಗಬೇಕು ಎಂದು ಸತ್ಯಕ್ಕ ಸ್ಪಷ್ಟಪಡಿಸಿದ್ದಾಳೆ.

            ಹನ್ನೆರಡನೆಯ ಶತಮಾನದಲ್ಲಿ ಕೆಲವು ಡಾಂಬಿಕರು ಶಿವಭಕ್ತರಂತೆ ವೇಷಭೂಷಣಗಳನ್ನು ಧರಿಸಿಕೊಂಡು ಲಾಭಹೊಡೆಯುತ್ತಿದ್ದರೆಂದೂ ಸಮಾಜದ ಜನರನ್ನು ವಂಚಿಸುತ್ತಿದ್ದರೆಂದೂ ಸಮಾಜದ ಅವನತಿಗೆ ಕಾರಣರಾಗುತ್ತಿದ್ದರೆಂದೂ ಇಂತಹ ಡಾಂಬಿಕರಿಂದ ಹಲವರು ಮೋಸಹೋಗುತ್ತಿದ್ದರೆಂದೂ ತೋರುತ್ತದೆ. ಅದಕ್ಕಾಗಿಯೇ ಸತ್ಯಕ್ಕ ಅಂತಹವರನ್ನು ಕಂಡೊಡನೆಯೇ ದೂರತೊಲಗಬೇಕು ಎಂದಿದ್ದಾಳೆ. ಅಂತಹವರಿಂದ ಸಮಾಜದ ಅಧಃಪತನ ಮಾತ್ರವಲ್ಲದೆ, ದೇಶದ ಅಧಃಪತನವೂ ಆಗುತ್ತದೆ ಎಂಬುದು ಆಕೆಯ ನಿಲುವು.

 

ಭಕ್ತರಿಗೆ ಅಕ್ಕೆ ಶೋಕ ದುಃಖವುಂಟೆ ಅಯ್ಯಾ?

ಅತ್ತು ಕಳೆವ ನೋವ ಹಾಡಿ ಕಳೆಯಲೇಕಯ್ಯಾ?

ಈ ಮುಕ್ತಾಯಕ್ಕಗಳ ಕಕ್ಕುಲತೆಯ ಶಂಭುಜಕ್ಕೇಶ್ವರನ ಶರಣರೊಪ್ಪರಯ್ಯಾ.  ೧೦

            ಈ ವಚನದಲ್ಲಿ ಸತ್ಯಕ್ಕ ಶಿವಭಕ್ತರು ಮನುಷ್ಯಸಹಜವಾದ ಭಾವಗಳನ್ನು ಮೀರಿದವರೆಂಬುದನ್ನು ಸ್ಪಷ್ಟಪಡಿಸಿದ್ದಾಳೆ. ಶಿವಭಕ್ತರಿಗೆ  ಜನಸಾಮಾನ್ಯರಿಗೆ ಇರುವಂತೆ ಅಳು, ಶೋಕ, ದುಃಖಗಳು ಇರಲು ಸಾಧ್ಯವೇ? ಎಂದು ಪ್ರಶ್ನಿಸುವ ಸತ್ಯಕ್ಕ ಸಾಮಾನ್ಯರಂತೆ ನೋವಾದಾಗ, ದುಃಖವಾದಾಗ ಅಳುತ್ತ ನೋವನ್ನು ಕಳೆದುಕೊಳ್ಳಲು ಪ್ರಯತ್ನವನ್ನು ಏಕೆ ಮಾಡಬೇಕು? ಎಂದು ಪ್ರಶ್ನಿಸಿದ್ದಾಳೆ.

            ಶಿವಭಕ್ತರು ಸದಾ ಶಿವಧ್ಯಾನ, ಶಿವಪೂಜೆ, ಶಿವಾರಾಧನೆಗಳಲ್ಲಿ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಕಾಯಕದಲ್ಲಿ ತಲ್ಲೀನರಾಗಿರುವುದರಿಂದ ಅವರನ್ನು ಯಾವ ಅಳುವಾಗಲೀ, ದುಃಖವಾಗಲೀ, ಶೋಕವಾಗಲೀ ಕಾಡುವುದಿಲ್ಲ. ಒಂದು ವೇಳೆ ಅಂತಹ ಅಳು, ದುಃಖ, ಶೋಕಗಳು ಎದುರಾದರೂ ಶಿವಭಕ್ತರು ಅವುಗಳೆಲ್ಲವನ್ನೂ ಮೀರಿ ನಿಲ್ಲುವಷ್ಟು ಮಾನಸಿಕ, ದೈಹಿಕ ಸಾಮರ್ಥ್ಯವನ್ನು ಪಡೆದಿದ್ದಾರೆ. ಹೀಗಿದ್ದರೂ ಕೆಲವು ಭಕ್ತರು ತಮಗೆ ಎದುರಾದ ನೋವಿಗಾಗಿ ಅಳುವುದು, ದುಃಖಿಸುವುದು, ಶೋಕಿಸುವುದು ಯುಕ್ತವಲ್ಲ, ಹಾಗೆ ಅವುಗಳನ್ನು ಅನ್ಯರ ಮುಂದೆ ಆಡಿಕೊಂಡು ಸಮಯವನ್ನು ವ್ಯರ್ಥಮಾಡಿಕೊಳ್ಳುವುದೂ ಸಮಂಜಸವಲ್ಲ. ಅಲ್ಲದೆ, ಹಾಗೆ ಅಳುವ, ದುಃಖಿಸುವ, ಶೋಕಿಸುವ ಭಕ್ತರನ್ನು ಸಾಂತ್ವಾನ ಮಾಡುವುದು, ಅವರ ಕಷ್ಟಗಳಲ್ಲಿ ಪಾಲ್ಗೊಳ್ಳುವುದು, ಅವರಿಗಾಗಿ ಕನಿಕರವನ್ನು ತೋರುವುದು ಶಿವಭಕ್ತರಿಗೆ ಭೂಷಣವಲ್ಲ ಎಂಬುದು ಸತ್ಯಕ್ಕ ನಿಲುವು.

            ಸತ್ಯಕ್ಕನ ಸಮಕಾಲೀನ ಶಿವಭಕ್ತೆ ಹಾಗೂ ವಚನಕಾರ್ತಿಯಾದ ಮುಕ್ತಾಯಕ್ಕ ಬಹುಶಃ ತನ್ನ ನೆರೆಹೊರೆಯ ಶಿವಭಕ್ತರ ಅಳುವಿನಲ್ಲಿ, ದುಃಖದಲ್ಲಿ, ಶೋಕದಲ್ಲಿ ಪಾಲ್ಗೊಳ್ಳುತ್ತಿದ್ದಳೆಂದೂ ಅವರಿಗಾಗಿ ಮರುಗುತ್ತಿದ್ದಳೆಂದೂ ಅಂತಹವರಿಗೆ ಸಹಾಯಹಸ್ತವನ್ನು ಚಾಚುತ್ತಿದ್ದಳೆಂದೂ ತೋರುತ್ತದೆ. ಸತ್ಯಕ್ಕನ ಪ್ರಕಾರ ಶಿವಭಕ್ತರು ಸ್ವಯಂ ಸಾಮರ್ಥ್ಯವುಳ್ಳವರು. ಅವರು ತಮಗೆ ಎದುರಾದ ಯಾವುದೇ ಕಷ್ಟ-ನಷ್ಟಗಳನ್ನು, ದುಃಖ-ದುಮ್ಮಾನಗಳನ್ನು ಎದುರಿಸಲು ಸಾಮರ್ಥ್ಯವುಳ್ಳವರು. ಹಾಗಿದ್ದರೂ ಅಂತಹವರ ಬಗ್ಗೆ ಕನಿಕರವನ್ನು ಹೊಂದುವುದು, ಅವರ ಅಳು, ದುಃಖ, ಶೋಕಗಳಲ್ಲಿ ತಾವೂ ಭಾಗಿಯಾಗುವುದು ಸತ್ಯಕ್ಕನಿಗೆ ಸರಿಕಾಣಲಿಲ್ಲ. ಹಾಗಾಗಿಯೇ ಮೇಲಿನ ವಚನದಲ್ಲಿ ಆಕೆ ಅದನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದ್ದಾಳೆ. ಶಿವಭಕ್ತರಾದವರು ತಮ್ಮ ಜೀವಮಾನದಲ್ಲಿ ತಮಗೆ ಎದುರಾದ ಎಂತಹ ಸಮಸ್ಯೆಗಳನ್ನಾದರೂ ಸ್ವತಃ ತಾವೇ ಎದುರಿಸಿದರೆ ಅದು ಅವರ ಸಾಧನೆಗೆ ಮಾತ್ರವಲ್ಲದೆ, ಆ ಮೂಲಕ ಅವರು ಶಿವಾನುಗ್ರಹಕ್ಕೂ ಪಾತ್ರರಾಗುವುದಕ್ಕೆ ಸಾಧ್ಯವಾಗುತ್ತದೆ ಎಂಬುದು ಸತ್ಯಕ್ಕನ ನಿಲುವು. ಜೀವಿತಾವಧಿಯಲ್ಲಿ ಎದುರಾಗುವ ಎಲ್ಲಾ ಕಷ್ಟ-ನಷ್ಟಗಳು, ದುಃಖ-ದುಮ್ಮಾನಗಳು ಶಿವ ತನ್ನ ಭಕ್ತರಿಗೆ ಒಡ್ಡುವ ಪರೀಕ್ಷೆಗಳಾಗಿದ್ದು, ಅವುಗಳನ್ನು ಒಬ್ಬಂಟಿಯಾಗಿಯೇ ಎದುರಿಸಿ ಗೆಲ್ಲುವುದು ಶಿವಾನುಗ್ರಹದ ದಾರಿಯಲ್ಲಿ ಒಂದೊಂದೇ ಹೆಜ್ಜೆಯನ್ನಿರಿಸಿದಂತೆ ಎಂಬುದು ಸತ್ಯಕ್ಕನ ಅಚಲವಾದ ನಂಬಿಕೆ.  

 

ಭವಿಯ ಬೆರಸಿದ ಭಕ್ತಿ, ಹವಿಯ ಬೆರಸಿದ ಬೀಜ,

ಉದಕ ಬೆರಸಿದ ಎಣ್ಣೆ, ಜ್ಯೋತಿ ಪ್ರಜ್ವಲಿಸುವುದೆ?

ಭವಿಯಲ್ಲ, ಭಕ್ತನಲ್ಲ, ಹವಿಯಲ್ಲ, ಬೀಜವಲ್ಲ, ಉದಕವಲ್ಲ, ಎಣ್ಣೆಯಲ್ಲ

ಒಡಲಿಚ್ಛೆಗೆ ಹೋಗಿ ಭವಿಯ ಮನೆಗೆ ತುತ್ತಿಡುವ

ನರಕಿಗಳಿಗೇಕೊಲಿವ ನಮ್ಮ ಶಂಭುಜಕ್ಕೇಶ್ವರನು?  ೧೧

            ಶಿವಭಕ್ತರಾದವರು ಭವಿಗಳ ಮನೆಗೆ ಹೋಗಿ ದಾಸೋಹವನ್ನು ಸ್ವೀಕರಿಸಿದರೆ ಅದು ಶಿವಭಕ್ತರಿಗೆ ಶೋಭೆಯಿನಿಸದು, ಹಾಗೆಯೇ ಶಿವನಿಗೂ ಪ್ರಿಯವಾಗಲಾರದು ಎಂಬುದನ್ನು ಸತ್ಯಕ್ಕ ಮೂರು ದೃಷ್ಟಾಂತಗಳ ಮೂಲಕ ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾಳೆ.

            ಮೊದಲನೆಯದಾಗಿ, ಭವಿಯನ್ನು ಬೆರಸಿದ ಭಕ್ತಿ. ಭವಿ ಎಂದರೆ ಸಾಂಸಾರಿಕ ಬಂಧನಕ್ಕೆ ಒಳಗಾದವನು ಮಾತ್ರವಲ್ಲ, ಇಷ್ಟಲಿಂಗದೀಕ್ಷೆಯನ್ನು ಪಡೆಯದವನು. ಇಂತಹವರು ಯಾವುದೇ ವಿಧದಿಂದ, ಎಷ್ಟೇ ವಿಧಗಳಿಂದ ಭಕ್ತಿ ಮಾಡಿದರೂ ಅದು ಶಿವನಿಗೆ ಮಾತ್ರವಲ್ಲ, ಸಮಕಾಲೀನ ಶಿವಭಕ್ತರಿಗೂ ಮೆಚ್ಚುಗೆಯಾಗಲಾರದು. ಭಕ್ತಿಯೆಂಬ ಜ್ಯೋತಿ ಬಳಗಲಾರದು. ಎರಡನೆಯದಾಗಿ, ಹವಿ ಎಂದರೆ  ಯಜ್ಞಕ್ಕೆ  ಅರ್ಪಿಸುವ ಹವಿಸ್ಸು. ಅದು ಸುಲಭವಾಗಿ ಯಜ್ಞದ ಬೆಂಕಿಯಲ್ಲಿ ಸುಡಬೇಕಲ್ಲದೆ, ಸುಡಲಾರದ ಬೀಜವನ್ನು ಹವಿಸ್ಸಾಗಿ ಬಳಸಿದರೆ ಯಜ್ಞಕುಂಡದಲ್ಲಿನ ಅಗ್ನಿಯೇ ನಂದಿಹೋಗಿ ಅದರಿಂದ ಯಜ್ಞದ ಉದ್ದೇಶ ಈಡೇರಲಾರದು. ಅದು ಡಾಂಬಿಕಭಕ್ತಿಯನ್ನು ತೋರಿಸಬಲ್ಲುದೇ ವಿನಾ ಅದರಿಂದ ಯಾವ ದೇವರೂ ಅನುಗ್ರಹಿಸಲಾರರು. ಮೂರನೆಯದಾಗಿ, ನೀರು ಮಿಶ್ರಗೊಂಡ ಎಣ್ಣೆಯಲ್ಲಿ ನೀರು ಇರುವಲ್ಲಿಯವರೆಗೆ ಅದು ಉಪಯೋಗಕ್ಕೆ ಬರುವುದಿಲ್ಲ. ಅಂತಹ ಎಣ್ಣೆಯನ್ನು ಬಳಸಿ ದೀಪವನ್ನು ಉರಿಸಿದರೂ ದೀಪ ಉರಿಯದೆ ನಂದಿಹೋಗುತ್ತದೆ. ದೀಪವನ್ನು ಅರ್ಚನೆ, ಪೂಜನೆಗಳ ಸಂದರ್ಭಗಳಲ್ಲಿ, ಕತ್ತಲನ್ನು ನಿವಾರಿಸಬೇಕಾದ ಸಂದರ್ಭಗಳಲ್ಲಿ ಉರಿಸಲಾಗುತ್ತದೆ. ಆದರೆ ಎಣ್ಣೆಯಲ್ಲಿ ನೀರು ಬೆರೆತಿದ್ದರೆ ಅತ್ತ ದೇವರ ಅರ್ಚನೆ, ಪೂಜನೆಗಳಲ್ಲೂ ಉಪಯೋಗಕ್ಕೆ ಬರಲಾರದು, ಇತ್ತ ಕತ್ತಲನ್ನೂ ನಿವಾರಿಸಲಾರದು.  ಹಾಗಾಗಿ ಭವಿಯು ಭಕ್ತನಾಗಲಾರ, ಬೀಜ ಹವಿಸ್ಸಾಗಲಾರದು, ನೀರು ಎಣ್ಣೆಯಾಗಲಾರದು. ಪ್ರತಿಯೊಂದಕ್ಕೂ ಅವುಗಳದ್ದೇ ಆದ ಇತಿಮಿತಿಗಳಿವೆ. ಅವುಗಳಿಗೆ ಅವುಗಳದ್ದೇ ಆದ ಕಾರ್ಯಕ್ಷೇತ್ರಗಳಿವೆ. ಒಂದರಿಂದ ಇನ್ನೊಂದರ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂಬುದು ಸತ್ಯಕ್ಕ ನಿಲುವು.

            ಶಿವಭಕ್ತರೆನಿಸಿಕೊಂಡವರು ತಮ್ಮ ಹೊಟ್ಟೆಯ ಹಸಿವನ್ನು ಇಂಗಿಸಿಕೊಳ್ಳುವುದಕ್ಕಾಗಿ ಇಷ್ಟಲಿಂಗಧಾರಿಗಳಲ್ಲದ, ಸಂಸಾರಬಂಧನಕ್ಕೆ ಒಳಗಾಗಿರುವವರ ಮನೆಯಲ್ಲಿ ದಾಸೋಹವನ್ನು ಸ್ವೀಕರಿಸಿದರೆ ಅಂತಹವರಿಗೆ ಶಿವ ಏಕೆ ಒಲಿಯುತ್ತಾನೆ? ಶಿವಭಕ್ತರಾದವರು ಇಷ್ಟಲಿಂಗಧಾರಿಗಳು ಅಥವಾ ಪರಮಶಿವಭಕ್ತರ ಮನೆಯಲ್ಲಿಯೇ ದಾಸೋಹವನ್ನು ಸ್ವೀಕರಿಸಬೇಕಲ್ಲದೆ, ಈ ಆಚಾರ ವಿಚಾರಗಳಿಗೆ ವಿರುದ್ಧವಾಗಿರುವ ಭವಿಗಳ ಮನೆಯಲ್ಲಿ ದಾಸೋಹವನ್ನು ಸ್ವೀಕರಿಸಿದರೆ ಅದನ್ನು ಇತರ ಶಿವಶರಣರೇ ಮೆಚ್ಚುವುದಿಲ್ಲ. ಹಾಗಿರುವಾಗ ಶಿವ ಮೆಚ್ಚುವುದಕ್ಕೆ ಹೇಗೆ ಸಾಧ್ಯ? ಎಂಬುದು ಸತ್ಯಕ್ಕನ ಪ್ರಶ್ನೆ. ಬದುಕಿನ ಅವಧಿ ಅತ್ಯಂತ ಕಿರಿದು. ಅದನ್ನು ಯುಕ್ತಮಾರ್ಗದಲ್ಲಿ ನಡೆಸಿಕೊಂಡುಹೋಗಬೇಕಲ್ಲದೆ, ಯುಕ್ತವಲ್ಲದ ಮಾರ್ಗದಲ್ಲಿ, ಯುಕ್ತವಲ್ಲದ ರೀತಿಯಲ್ಲಿ ನಡೆಸಿಕೊಂಡು ಹೋಗುವುದು, ಯಾವ ಸಾಧನೆಯನ್ನೂ ಮಾಡದೆ ಎಲ್ಲವನ್ನೂ ಕಳೆದುಕೊಳ್ಳುವುದು, ಸಮಾಜಕ್ಕೆ ಹತ್ತು ಹಲವು ರೀತಿಗಳಿಂದ ಉಪಕಾರಿ ಎನಿಸಿಕೊಳ್ಳದೆ ನಿರರ್ಥಕವೆನಿಸಿಕೊಳ್ಳುವುದು ಬದುಕಿನ ಸಾಧನೆಯಲ್ಲ, ಅಂತಹ ವ್ಯವಹಾರಗಳನ್ನು ಇಟ್ಟುಕೊಂಡಿರುವವರು ನರಕಿಗಳೆನಿಸಿಕೊಳ್ಳುವುದು ಮಾತ್ರವಲ್ಲದೆ, ಶಂಭುಜಕ್ಕೇಶ್ವರನ ಅನುಗ್ರಹದಿಂದ ವಂಚಿತರಾಗುತ್ತಾರೆ ಎಂಬುದು ಸತ್ಯಕ್ಕನ ದೃಢವಾದ ನಿಲುವು.

 

ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ

ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ.

ಅದು ಜಗದ ಹಾಹೆ ಬಲ್ಲವರ ನೀತಿಯಲ್ಲ.

ಏತರ ಹಣ್ಣಾದರೂ ಮಧುರವೇ ಕಾರಣ,

ಅಂದವಿಲ್ಲದ ಕುಸುಮಕ್ಕೆ ವಾಸನೆಯೇ ಕಾರಣ,

ಇದರಂದವ ನೀನೇ ಬಲ್ಲೆ ಶಂಭುಜಕ್ಕೇಶ್ವರಾ  ೧೨

            ವ್ಯಕ್ತಿ ಯಾರೇ ಇರಲಿ, ಹೇಗೇ ಇರಲಿ, ಆತನ ಅಥವಾ ಆಕೆಯ ಆಕಾರ, ಸ್ವಭಾವ, ಲಿಂಗ ಮೊದಲಾದವು ಮುಖ್ಯವಲ್ಲ, ಅದಕ್ಕಿಂತಲೂ ಹೆಚ್ಚಾಗಿ ಆತ ಅಥವಾ ಆಕೆ ಏನು ಸಾಧಿಸಿದ್ದಾನೆ ಅಥವಾ ಸಾಧಿಸಿದ್ದಾಳೆ ಎಂಬುದೇ ಮುಖ್ಯವೆಂಬುದನ್ನು ಸತ್ಯಕ್ಕ ಈ ವಚನದಲ್ಲಿ ಎರಡು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸಿದ್ದಾಳೆ.

            ಮೊದಲನೆಯದಾಗಿ, ಮೊಲೆ, ಮುಡಿ ಮೊದಲಾದವುಗಳನ್ನು ಹೊಂದಿರುವವರನ್ನು ಹೆಣ್ಣು ಎಂದು ಒಪ್ಪಿಕೊಳ್ಳಲೇಬೇಕೆಂಬ ನಿಯಮವೇನೂ ಇಲ್ಲ. ಎರಡನೆಯದಾಗಿ, ಕಾಸೆ, ಮೀಸೆ, ಕಠಾರವನ್ನು ಹೊಂದಿದವರನ್ನು  ಗಂಡು ಎಂದು ಒಪ್ಪಿಕೊಳ್ಳಬೇಕೆಂಬ ನಿಯಮವೇನೂ ಇಲ್ಲ. ಹೀಗೆ ಪ್ರತ್ಯೇಕವಾದ ಅಂಗಾಂಗಗಳನ್ನು, ಭೂಷಣಗಳನ್ನು ಹೊಂದಿರುವವರನ್ನು ನಿರ್ದಿಷ್ಟವಾಗಿ ಹೆಣ್ಣು ಅಥವಾ ಗಂಡು ಎಂದು ತೀರ್ಮಾನಿಸುವ ಪ್ರವೃತ್ತಿ ಜಗದ ಒಂದು ಸಾಮಾನ್ಯವಾದ ನಿಯಮ. ಆದರೆ ಅದನ್ನು ಬಲ್ಲವರು ಒಪ್ಪಿಕೊಳ್ಳಲೇ ಬೇಕಾದ ಅಗತ್ಯವಿಲ್ಲ. ಬಲ್ಲವರ ತೀರ್ಮಾನವೇ ಭಿನ್ನವಾದುದು.

            ಬಲ್ಲವರ ನೀತಿಯನ್ನು ಸತ್ಯಕ್ಕ ಎರಡು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸುತ್ತಾಳೆ. ಮೊದಲನೆಯದಾಗಿ, ಹಣ್ಣು ಯಾವುದಾದರೇನು ಅದಕ್ಕೆ ಮಾನ್ಯತೆ ದೊರಕುವುದು ಅದರ ಸ್ವಾದದಿಂದ ಅಥವಾ ಮಾಧುರ್ಯದಿಂದ. ಹಣ್ಣಿನ ಆಕಾರವನ್ನು, ಚೆಂದವನ್ನು, ಬಣ್ಣವನ್ನು ಯಾರೂ ಪರಿಭಾವಿಸುವುದಿಲ್ಲ. ಎರಡನೆಯದಾಗಿ, ಒಂದು ಹೂವು  ಕೇವಲ ಅದರ ರೂಪದಿಂದ ಅಥವಾ ಸೌಂದರ್ಯದಿಂದ ಮಾನ್ಯವಾಗಲಾರದು, ಅದಕ್ಕಿಂತಲೂ ಹೆಚ್ಚಾಗಿ ಅದರ ಸುವಾಸನೆಯಿಂದ ಮಾನ್ಯವಾಗುತ್ತದೆ. ಹೂವಿಗೆ ಅಂದವಿದ್ದೂ ಅದಕ್ಕೆ ಸುವಾಸನೆಯಿಲ್ಲ ಎಂದಾದರೆ ಅದು ಮಾನ್ಯವಾಗಲಾರದು. ಹೂವಿಗೆ ಅಂದವಿಲ್ಲದಿದ್ದರೂ ಅತ್ಯಂತ ಸುವಾಸನೆಯಿಂದ ಕೂಡಿದ್ದರೆ ಅದು ಗ್ರಾಹ್ಯವಾಗುತ್ತದೆ. ಸರ್ವರಿಗೂ ಪ್ರಿಯವಾಗುತ್ತದೆ, ದೇವತಾರ್ಚನೆಗೂ ಮಾನ್ಯವಾಗುತ್ತದೆ.  

            ಮೇಲಿನ ನಾಲ್ಕು ದೃಷ್ಟಾಂತಗಳ ಮೂಲಕ ಸತ್ಯಕ್ಕ ನಿಜವಾದ ಶಿವಭಕ್ತರಿಗೂ ಡಾಂಬಿಕ ಭಕ್ತರಿಗೂ ಇರುವ ವ್ಯತ್ಯಾಸವನ್ನು ಹೇಳಿಕೊಂಡಿದ್ದಾಳೆ. ನಿಜವಾದ ಭಕ್ತರು ಹೊರಗೆ ಅಂದವಿಲ್ಲದ, ಆದರೆ ಒಳಗೆ ಅತ್ಯಂತ ಮಧುರವಾದ ರುಚಿಯುಳ್ಳ ಹಣ್ಣಿನಂತಿರುವವರು. ಹಾಗೆಯೇ ನೋಡುವುದಕ್ಕೆ ಅಂದವಿಲ್ಲದ, ಆದರೆ ಅತ್ಯಂತ ಸುವಾಸನೆಯುಳ್ಳ ಹೂವಿನಂತಿರುವವರು. ಆದರೆ ಡಾಂಬಿಕ ಭಕ್ತರು ಹೊರಗೆ ಹಣ್ಣಿನಂತೆ, ಹೂವಿನಂತೆ ಅಂದವಾಗಿರುವಾಗಿರುತ್ತಾರೆ, ಆದರೆ ಮಾಧುರ್ಯವನ್ನಾಗಲೀ ಸುವಾಸನೆಯನ್ನಾಗಲೀ ಹೊಂದಿರುವುದಿಲ್ಲ. ಲೋಕದಲ್ಲಿ ಹೆಣ್ಣಿನ ಲಕ್ಷಣಗಳನ್ನು ಹೊಂದಿದೊಡನೆಯೇ ಹೆಣ್ಣೆಂದೂ ಗಂಡಿನ ಲಕ್ಷಣಗಳನ್ನು ಹೊಂದಿದೊಡನೆಯೇ ಗಂಡೆಂದು ತೀರ್ಮಾನಿಸಲಾಗದು. ಹಾಗೆ ತೀರ್ಮಾನಿಸುವವರು ಅಜ್ಞಾನಿಗಳು ಮಾತ್ರ.  ಸತ್ಯಕ್ಕನ ಪ್ರಕಾರ, ಶಂಭುಜಕ್ಕೇಶ್ವರನ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ಅಂತಃಸತ್ತ್ವವನ್ನು ಹೊಂದಿರಬೇಕು. ಅರಿವನ್ನು ಮೈಗೂಡಿಸಿಕೊಂಡಿರಬೇಕು. ಹಣ್ಣುಗಳ ಮಾಧುರ್ಯ, ಹೂವುಗಳ ಸುವಾಸನೆಯನ್ನು ನಡೆನುಡಿಗಳಲ್ಲಿ ಹೊಂದಿರಬೇಕು. ಅಂತಹವರು ಶಿವಾನುಗ್ರಹಕ್ಕೆ ಮಾತ್ರವಲ್ಲದೆ, ಲೋಕಮಾನ್ಯತೆಗೆ ಪಾತ್ರರಾಗುತ್ತಾರೆ.

***

 

 

 

 

 

 

 

 

 

Leave a Reply

Your email address will not be published. Required fields are marked *