(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. (ಎನ್ ಇ ಪಿ) ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ) (ಭಾಗ-೧)
ಕುಮಾರವ್ಯಾಸ-ಕವಿ-ಕಾವ್ಯ ಪರಿಚಯ:
ಕುಮಾರವ್ಯಾಸ ಕನ್ನಡದ ಪ್ರತಿಭಾನ್ವಿತ ಹಾಗೂ ಅಗ್ರಗಣ್ಯ ಕವಿಗಳಲ್ಲಿ ಒಬ್ಬ. ಗದುಗಿನ ಸಮೀಪದ ಕೋಳಿವಾಡ ಈತನ ಜನ್ಮಸ್ಥಳ. ಈತನ ಕಾಲ ೧೪ನೆಯ ಶತಮಾನ. ಗದುಗಿನ ವೀರನಾರಾಯಣನ ಪರಮಭಕ್ತನಾಗಿದ್ದ ಕುಮಾರವ್ಯಾಸನ ನಿಜನಾಮಧೇಯ ಗದುಗಿನ ನಾರಣಪ್ಪ. ಸಂಸ್ಕೃತದಲ್ಲಿನ ವ್ಯಾಸಭಾರತವನ್ನು ಕನ್ನಡದಲ್ಲಿ ಮರುನಿರ್ಮಾಣ ಮಾಡಿದ್ದರಿಂದ ಆತ ಕುಮಾರವ್ಯಾಸ ಎನಿಸಿಕೊಂಡ. ಆ ಮೂಲಕ ವ್ಯಾಸಭಾರತವನ್ನು ಜನಸಾಮಾನ್ಯರಿಗೂ ತಲುಪುವಂತೆ ಮಾಡಿ ಅಪೂರ್ವ ಯಶಸ್ಸನ್ನು ಗಳಿಸಿದ ಕವಿ ಕುಮಾರವ್ಯಾಸ ಕನ್ನಡಿಗರ ಜನಮಾನಸಕವಿ ಎನಿಸಿಕೊಂಡಿದ್ದಾನೆ. “ಕರ್ಣಾಟ ಭಾರತ ಕಥಾಮಂಜರಿ” ಈತನ ಕಾವ್ಯ. ಇದಕ್ಕೆ ’ಕುಮಾರವ್ಯಾಸ ಭಾರತ’, ’ಗದುಗಿನ ಭಾರತ’, ’ಕನ್ನಡ ಭಾರತ’, ’ದಶಪರ್ವ ಭಾರತ’, ’ಕರ್ಣಾಟ ಭಾರತ’ ಮೊದಲಾದ ನಾಮಾಂತರಗಳಿವೆ. ವ್ಯಾಸಭಾರತದ ಮೊದಲ ಹತ್ತು ಪರ್ವಗಳನ್ನು ಈತ ಕನ್ನಡದಲ್ಲಿ ಕಾವ್ಯವಾಗಿ ನಿರೂಪಿಸಿದ್ದಾನೆ. ಹಾಗಾಗಿಯೇ ಇದಕ್ಕೆ ದಶಪರ್ವ ಭಾರತ ಎಂದು ಹೆಸರು. ಮಹಾಭಾರತದ ಉಳಿದ ಎಂಟೂ ಪರ್ವಗಳನ್ನು ಕಾವ್ಯವಾಗಿ ನಿರೂಪಿಸುತ್ತಿದ್ದರೆ ಕನ್ನಡದಲ್ಲಿ ಇದೊಂದು ಬೃಹತ್ ಕಾವ್ಯವಾಗಿ ಮೆರೆಯುತ್ತಿತ್ತು.
ಕನ್ನಡದಲ್ಲಿ ಭಾಮಿನಿ ಷಟ್ಪದಿಯನ್ನು ಸಮಗ್ರವಾಗಿ ಬಳಸಿ, ಕಾವ್ಯರಚಿಸಿದ ಕವಿಗಳಲ್ಲಿ ಈತನೇ ಮೊದಲಿಗ. ಭಾಮಿನಿಯನ್ನು ಹೇಗೋ ಕಾವ್ಯಭಾಮಿನಿಯನ್ನೂ ಹಾಗೆಯೇ ಥಳುಕಿ ಬಳುಕಿಸಬಲ್ಲ ಕವಿ ಕುಮಾರವ್ಯಾಸ. ಕಾವ್ಯದಲ್ಲಿ ಉಪಮಾದಿ ಅಲಂಕಾರಗಳನ್ನು ಬಳಸಿದರೂ ರೂಪಕಾಲಂಕಾರವನ್ನು ಯಥೇಷ್ಟವಾಗಿ ಬಳಸುವ ಕುಮಾರವ್ಯಾಸ “ರೂಪಕಸಾಮ್ರಾಜ್ಯ ಚಕ್ರವರ್ತಿ” ಎಂದು ಕರೆಸಿಕೊಂಡಿದ್ದಾನೆ. ಈ ಕಾವ್ಯವನ್ನು ಬಹಳ ಭಕ್ತಿ-ಗೌರವಗಳಿಂದ ವಾಚನಮಾಡುವ ಪರಂಪರೆಯೊಂದು ಕರ್ನಾಟಕದಾದ್ಯಂತ ಬೆಳೆದಿರುವುದನ್ನು ಕಂಡಾಗ ಈ ಕಾವ್ಯದ ಮಹತ್ವ ಹಾಗೂ ಅದು ಜನಮಾನಸದಲ್ಲಿ ಪಡೆದುಕೊಂಡಿರುವ ಸ್ಥಾನಮಾನಗಳು ಏನು? ಎಂಬುದು ಸ್ಪಷ್ಟವಾಗುತ್ತದೆ. ಎಳೆಯರಿಂದ ಹಿಡಿದು ವಿದ್ವಾಂಸರವರೆಗೂ ಅವರವರ ನೆಲೆಯಲ್ಲಿ ತಲುಪುವ, ಕಾವ್ಯಾಸ್ವಾದವನ್ನು ಉಂಟುಮಾಡುವ ಈ ಕಾವ್ಯ ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಕನ್ನಡ ಭಾಷೆಯ ಪದಭಂಡಾರವನ್ನು ಸೂರೆಮಾಡಿದ ಪ್ರಮುಖ ಕವಿಗಳಲ್ಲಿ ಕುಮಾರವ್ಯಾಸನೂ ಒಬ್ಬ. ಈತ ಭಕ್ತಕವಿ ಮಾತ್ರವಲ್ಲ, ದಾರ್ಶನಿಕಕವಿಯೂ ಹೌದು. ಭಾರತ ಕಥೆಯನ್ನು ನಿರೂಪಿಸುತ್ತಿದ್ದರೂ ಆತ ಅದನ್ನು ಕೃಷ್ಣಕಥೆಯನ್ನಾಗಿ ಪರಿವರ್ತಿಸಿದ್ದಾನೆ.
ಕಾವ್ಯಭಾಗದ ಹಿನ್ನೆಲೆ:
ಈ ಕಾವ್ಯಭಾಗವನ್ನು ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿಯ ವಿರಾಟಪರ್ವದ ಐದನೆಯ ಮತ್ತು ಆರನೆಯ ಸಂಧಿಯಿಂದ ಆಯ್ದುಕೊಳ್ಳಲಾಗಿದೆ. ದುರ್ಯೋಧನನೊಂದಿಗಿನ ಪಗಡೆಯಾಟದಲ್ಲಿ ಸೋತ ಪಾಂಡವರು ದೇಶಭ್ರಷ್ಟರಾಗಿ ಹನ್ನೆರಡು ವರ್ಷಗಳ ವನವಾಸವನ್ನು ಮುಗಿಸಿ ವಿರಾಟನಗರದಲ್ಲಿ ಒಂದು ವರ್ಷದ ಅಜ್ಞಾತವಾಸವನ್ನು ಮುಗಿಸುವ ಹೊತ್ತಿಗೆ ಭೀಮನಿಂದ ಕೀಚಕನ ವಧೆಯಾಯಿತು. ಈ ಸುದ್ಧಿ ಹಸ್ತಿನಾವತಿಗೆ ತಲುಪಿದಾಗ ದುರ್ಯೋಧನನು, ಪಾಂಡವರು ವಿರಾಟನಗರದಲ್ಲಿಯೇ ಅಡಗಿಕೊಂಡಿರಬಹುದೆಂದು ಸಂಶಯಪಟ್ಟು ಸೇನಾಸಮೇತನಾಗಿ ಬಂದು ಮುತ್ತಿಗೆ ಹಾಕಿದನು. ವಿರಾಟನ ಸಹಾಯಕ್ಕಾಗಿ ಪಾಂಡವರು ಯುದ್ಧಕ್ಕೆ ಬರಬಹುದೆಂದೂ ಅಲ್ಲಿ ಪಾಂಡವರನ್ನು ಪತ್ತೆಹಚ್ಚಿ ಮತ್ತೆ ಅವರನ್ನು ವನವಾಸಕ್ಕೆ ಕಳುಹಿಸಬಹುದೆಂದೂ ಯೋಚಿಸಿ ವಿರಾಟನ ಗೋವುಗಳನ್ನು ಅಪಹರಿಸಿದನು. ಮಾತ್ರವಲ್ಲದೆ, ವಿರಾಟರಾಜನನ್ನು ಮತ್ತು ಅವನ ಆಶ್ರಯದಲಿರಬಹುದಾದ ಪಾಂಡವರನ್ನು ಕೆಣಕುವುದಕ್ಕಾಗಿ ಗೋಪಾಲಕನೊಬ್ಬನನ್ನು ಅವಮಾನಿಸಿ ವಿರಾಟನಲ್ಲಿಗೆ ಕಳುಹಿಸಿಕೊಟ್ಟನು. ಮುಂದಿನ ಕಥೆಯನ್ನು ಕುಮಾರವ್ಯಾಸ ಈ ಕಾವ್ಯಭಾಗದಲ್ಲಿ ವರ್ಣಿಸಿದ್ದಾನೆ. ವಿರಾಟರಾಜನ ಮಗನಾದ ಉತ್ತರಕುಮಾರನ ಪೌರುಷ ಪ್ರದರ್ಶನವನ್ನು ಈ ಕಾವ್ಯಭಾಗ ಒಳಗೊಂಡಿದೆ.
ಏಳು ಮನ್ನೆಯ ಗಂಡನಾಗು ನೃ
ಪಾಲ ಕೌರವರಾಯ ತುರುಗಳ
ಕೋಳ ಹಿಡಿದನು ಸೇನೆ ಬಂದುದು ಧರಣಿಯಗಲದಲಿ
ದಾಳಿ ಬರುತಿದೆ ಕರೆಸಿಕೋ ನಿ
ನ್ನಾಳು ಕುದುರೆಯ ರಾಣಿವಾಸದ
ಗೂಳೆಯವ ತೆಗೆಸೆಂದು ನುಡಿದನು ಬಿನ್ನಹದ ಬಿರುಬ ೧
ಪದ್ಯದ ಅನ್ವಯಕ್ರಮ:
ಏಳು ಮನ್ನೆಯ ಗಂಡನಾಗು, ನೃಪಾಲ ಕೌರವರಾಯ ತುರುಗಳ ಕೋಳ ಹಿಡಿದನು, ಧರಣಿಯ ಅಗಲದಲಿ ಸೇನೆ ಬಂದುದು, ದಾಳಿ ಬರುತಿದೆ, ನಿನ್ನ ಆಳು ಕುದುರೆಯ ಕರೆಸಿಕೋ, ರಾಣಿವಾಸದ ಗೂಳೆಯವ ತೆಗೆಸು ಎಂದು ಬಿನ್ನಹದ ಬಿರುಬ ನುಡಿದನು.
ಪದ-ಅರ್ಥ:
ಮನ್ನೆಯ-ಗೌರವಾನ್ವಿತನಾದವನು, ಮಾನ್ಯನಾದವನು; ಗಂಡನಾಗು-ಪರಾಕ್ರಮಿಯಾಗು; ನೃಪಾಲ-ರಾಜ; ಕೌರವರಾಯ-ದುರ್ಯೋಧನ; ತುರುಗಳ-ಗೋವುಗಳ; ಕೋಳ-ಕೈಸೆರೆ; ಧರಣಿಯಗಲದಲಿ-ಭೂಮಿಯಷ್ಟು ವಿಶಾಲವಾಗಿ; ದಾಳಿ-ಮುತ್ತಿಗೆ; ನಿನ್ನಾಳು-ನಿನ್ನ ಸೈನಿಕರು; ಗೂಳೆಯವ-ಠಿಕಾಣಿ, ವಾಸ್ತವ್ಯ; ತೆಗೆಸು-ನಿಲ್ಲಿಸು, ತಡೆಹಿಡಿ; ಬಿನ್ನಹದ-ವಿಜ್ಞಾಪನೆಯ; ಬಿರುಬ-ಭಟ, ದೂತ;
ಉತ್ತರಕುಮಾರನೇ, ಏಳು, ಗೌರವಾನ್ವಿತನಾದ ಪರಾಕ್ರಮಶಾಲಿಯಾಗು, ಕೌರವರಾಯನು ಅಗಣಿತವಾದ ಸೇನೆಯನ್ನು ಕೂಡಿಕೊಂಡು ಬಂದು ನಮ್ಮ ಗೋವುಗಳನ್ನು ಸೆರೆಹಿಡಿದಿದ್ದಾನೆ. ನಮ್ಮ ನಗರಕ್ಕೂ ಮುತ್ತಿಗೆ ಹಾಕಿ ದಾಳಿಮಾಡಲು ಸಿದ್ಧನಾಗಿದ್ದಾನೆ. ನಿನ್ನ ಸೈನಿಕರನ್ನು, ಕುದುರೆಗಳನ್ನು ಕರೆಸಿಕೊಳ್ಳು, ಯುದ್ಧಕ್ಕೆ ಸಿದ್ಧನಾಗು, ಈ ರಾಣಿವಾಸದಲ್ಲಿ ಹೆಂಗಳೆಯರೊಂದಿಗಿನ ನಿನ್ನ ವಾಸ್ತವ್ಯವನ್ನು ಬಿಟ್ಟುಬಿಡು ಎಂದು ದೂತನು ಉತ್ತರಕುಮಾರನಲ್ಲಿ ವಿನಂತಿಮಾಡಿಕೊಂಡನು.
(ಉತ್ತರಕುಮಾರ ತನ್ನ ಅರಮನೆಯ ಅಂತಃಪುರದಲ್ಲಿನ ಚೆಲುವೆ ಸಖಿಯರೊಂದಿಗೆ ತನ್ನ ಪರಾಕ್ರಮಗಳನ್ನು ಪ್ರದರ್ಶನಮಾಡುತ್ತ, ಪ್ರೇಮಸಲ್ಲಾಪಗಳಲ್ಲಿ ಕಾಲಕಳೆಯುವವನು ಎಂಬುದು ಅರಮನೆಯ ಪರಿವಾರದ ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ವಿರಾಟರಾಜ ಬೇರೆಲ್ಲೋ ದಂಡೆತ್ತಿಹೋಗಿದ್ದಾಗ ಅರಮನೆಯ, ರಾಜಧಾನಿಯ ಆಡಳಿತ ಉಸ್ತುವಾರಿ ತನ್ನ ಪಾಲಿನದೆಂಬ ವಿಚಾರವನ್ನು ಆತ ಮರೆತುಬಿಟ್ಟಿದ್ದಾನೆ. ಅಂತಃಪುರದ ಚೆಲುವೆಯರೊಂದಿಗೆ ಪ್ರೇಮಸಲ್ಲಾಪಗಳಲ್ಲಿ ತೊಡಗಿರುವ ಆತನಿಗೆ ಈ ಕಡೆ ವಿರಾಟನಗರದ ಮೇಲೆ ದುರ್ಯೋಧನ ಸೇನಾಸಮೇತನಾಗಿ ಮುತ್ತಿಗೆ ಹಾಕುತ್ತಿರುವ ವಿಚಾರ ತಿಳಿದಿಲ್ಲ. ಯುವರಾಜನಾಗಿದ್ದರೂ ರಾಜಕಾರ್ಯ, ಪ್ರಜೆಗಳ ಯೋಗಕ್ಷೇಮ, ಆಡಳಿತ ಮೊದಲಾದವುಗಳ ಬಗ್ಗೆ ಆತನಿಗೆ ಎಳ್ಳಷ್ಟೂ ಕಾಳಜಿಯಿಲ್ಲ. ಹಾಗಾಗಿಯೇ ದುರ್ಯೋಧನನಿಂದ ಅವಮಾನಿತನಾಗಿ ಬಂದ ಗೋಪಾಲಕ ಉತ್ತರಕುಮಾರನನ್ನು ಸ್ವಲ್ಪ ತೀಕ್ಷ್ಣಮಾತುಗಳಿಂದಲೇ ಎಚ್ಚರಿಸುತ್ತಾನೆ. ”ಏಳು ಪರಾಕ್ರಮಶಾಲಿಯಾಗು, ನಿನ್ನ ಈ ಚೆಲುವೆಯರೊಂದಿಗಿನ ಸಹವಾಸ ಹಾಗೂ ಪ್ರೇಮಸಲ್ಲಾಪಗಳನ್ನು ಇನ್ನಾದರೂ ಬಿಟ್ಟುಬಿಡು, ರಾಜಧಾನಿ ಅಪಾಯಸ್ಥಿತಿಯಲ್ಲಿದೆ. ದುರ್ಯೋಧನ ಅಪಾರವಾದ ಸೇನೆಯನ್ನು ಕೂಡಿಕೊಂಡು ಬಂದು ನಮ್ಮ ಗೋವುಗಳನ್ನು ಅಪಹರಿಸಿ, ನಮ್ಮನ್ನು ಅವಮಾನ ಮಾಡಿರುವುದಲ್ಲದೆ, ನಮ್ಮ ನಗರಿಗೂ ಮುತ್ತಿಗೆಹಾಕುವ ಸನ್ನಾಹದಲ್ಲಿದ್ದಾನೆ. ಕೂಡಲೇ ಚತುರಂಗಬಲವನ್ನು ವ್ಯವಸ್ಥೆಗೊಳಿಸಿ ಸೇನಾಸಮೇತನಾಗಿ ಯುದ್ಧಕ್ಕೆ ಸಿದ್ಧನಾಗು, ನಮ್ಮ ಗೋವುಗಳನ್ನು, ನಾಡನ್ನು, ಅರಮನೆಯನ್ನು, ಪ್ರಜೆಗಳನ್ನು ಉಳಿಸಿಕೊ” ಎಂದು ವಿನಂತಿಯ ಮೂಲಕ ಎಚ್ಚರಿಸುತ್ತಾನೆ. ರಾಜನ ಅನುಪಸ್ಥಿತಿಯಲ್ಲಿ ಯುವರಾಜನಾದ ತಾನು ರಾಜಕಾರ್ಯಗಳಲ್ಲಿ ತಲ್ಲೀನನಾಗಿರಬೇಕು, ಸದಾ ಎಚ್ಚರಿಕೆಯಿಂದ ಇರಬೇಕೆಂಬ ಕನಿಷ್ಠ ತಿಳಿವಳಿಕೆ ಉತ್ತರಕುಮಾರನಲ್ಲಿ ಇಲ್ಲದಿರುವುದು ಇಲ್ಲಿ ಸ್ಪಷ್ಟವಾಗುತ್ತದೆ.)
ಹಿಡಿದು ರಾಜ್ಯವ ಕೊಂಡು ಹೆಂಗುಸ
ಬಡಿದು ಪಾಂಡವ ರಾಯರನು ಹೊರ
ವಡಿಸಿ ಕೊಬ್ಬಿದ ಭುಜಬಲವನೆನ್ನೊಡನೆ ತೋರಿದನೆ
ಬಡ ಯುಧಿಷ್ಠಿರನೆಂದು ಬಗೆದನೆ
ಕಡುಗಿದೊಡೆ ಕೌರವನ ಕೀರ್ತಿಯ
ತೊಡೆವೆನರಿಯನಲಾಯೆನುತ ಸುಕುಮಾರ ಖತಿಗೊಂಡ ೨
ಪದ್ಯದ ಅನ್ವಯಕ್ರಮ:
ರಾಜ್ಯವ ಹಿಡಿದುಕೊಂಡು, ಹೆಂಗುಸ ಬಡಿದು, ಪಾಂಡವ ರಾಯರನು ಹೊರವಡಿಸಿ ಕೊಬ್ಬಿದ ಭುಜಬಲವನ್ ಎನ್ನೊಡನೆ ತೋರಿದನೆ? ಬಡ ಯುಧಿಷ್ಠಿರನ್ ಎಂದು ಬಗೆದನೆ? ಕಡುಗಿದೊಡೆ ಕೌರವನ ಕೀರ್ತಿಯನು ತೊಡೆವೆನ್ ಆತನ್ ಅರಿಯನಲಾ ಎನುತ ಸುಕುಮಾರ ಖತಿಗೊಂಡ.
ಪದ-ಅರ್ಥ:
ಹಿಡಿದು-ಆಕ್ರಮಿಸಿ; ಕೊಂಡು-ವಶಪಡಿಸಿ; ಹುಂಗುಸ-ಸ್ತ್ರೀ (ದ್ರೌಪದಿ); ಬಡಿದು-ಅವಮಾನಿಸಿ; ಪಾಂಡವರಾಯರನು-ಪಾಂಡವರನ್ನು; ಹೊರವಡಿಸಿ-ರಾಜ್ಯಭ್ರಷ್ಟರನ್ನಾಗಿಸಿ; ಕೊಬ್ಬಿದ-ಸೊಕ್ಕಿದ; ಭುಜಬಲ-ಪರಾಕ್ರಮ; ಬಗೆದನೆ-ಯೋಚಿಸಿದನೆ; ಕಡುಗಿದೊಡೆ-ಪರಾಕ್ರಮವನ್ನು ತೋರಿದರೆ; ತೊಡೆ-ನಾಶಮಾಡು, ಅಳಿಸು; ಅರಿಯನಲಾ-ತಿಳಿಯಲಾರನು; ಸುಕುಮಾರ-ಉತ್ತರಕುಮಾರ; ಖತಿಗೊಂಡ-ಸಿಟ್ಟುಗೊಂಡ.
ಪಾಂಡವರ ರಾಜ್ಯವನ್ನು ಮೋಸದಿಂದ ವಶಪಡಿಸಿಕೊಂಡು, ದ್ರೌಪದಿಯನ್ನು ಅವಮಾನಿಸಿ, ಪಾಂಡವರನ್ನು ರಾಜ್ಯದಿಂದ ಹೊರಗೆ ಕಳುಹಿಸಿದ ದುರ್ಯೋಧನ ಈಗ ತನ್ನ ಕೊಬ್ಬಿದ ಬಾಹುಬಲವನ್ನು ನನ್ನಲ್ಲಿ ತೋರಿಸಲು ಬಂದನೆ? ನಾನೇನು ಆ ಬಡಪಾಯಿ ಯುಧಿಷ್ಠಿರ ಎಂದು ತಿಳಿದಿದ್ದಾನೆಯೆ? ಈಗ ನಾನು ನನ್ನ ಪರಾಕ್ರಮವನ್ನು ತೋರಿಸತೊಡಗಿದರೆ ಕೌರವನ ಕೀತಿಯನ್ನೇ ನಾಶಮಾಡಿಯೇನು, ಅದನ್ನು ಆತ ಇನ್ನೂ ತಿಳಿದಿಲ್ಲ ಎಂದು ಉತ್ತರಕುಮಾರನು ದುರ್ಯೋಧನನ ಮೇಲೆ ಅತ್ಯಂತ ಸಿಟ್ಟುಗೊಂಡನು.
(ಉತ್ತರಕುಮಾರನ ಪ್ರಕಾರ ದುರ್ಯೋಧನ ಕಪಟದ್ಯೂತದ ಮೂಲಕ ಮೋಸದಿಂದ ಪಾಂಡವರನ್ನು ಸೋಲಿಸಿ ಅವರ ರಾಜ್ಯವನ್ನು ವಶಪಡಿಸಿಕೊಂಡವನು. ರಾಜಸಭೆಯಲ್ಲಿ ಪಾಂಡವರ ರಾಣಿಯಾದ ದ್ರೌಪದಿಯ ಸೀರೆಯನ್ನು ಸೆಳೆಸಿ ಅವಮಾನ ಮಾಡಿದವನು. ಪಾಂಡವನ್ನು ದೇಶಭ್ರಷ್ಟರನ್ನಾಗಿ ಮಾಡಿ ರಾಜ್ಯದಿಂದಲೇ ಅವರನ್ನು ಕಾಡಿಗೆ ಕಳುಹಿಸಿದವನು. ಪಾಂಡವರೊಂದಿಗೆ ತೋರಿದ ಪರಾಕ್ರಮದಿಂದ ಕೊಬ್ಬಿ ದುರಹಂಕಾರಿಯಾದವನು. ಇಂತಹ ದುರ್ಯೋಧನನು ತನ್ನ ಪೌರುಷವನ್ನು ನನ್ನಲ್ಲಿ ತೋರಿಸಲು ಬಂದನೆ? ಪಾಂಡವ ರಾಜ್ಯವನ್ನು ವಶಪಡಿಸಿಕೊಂಡ ಹಾಗೆ ತನ್ನ ರಾಜ್ಯವನ್ನೂ ವಶಪಡಿಸಿಕೊಳ್ಳುವುದಕ್ಕೆ ತಾನೇನು ಬಡಯುಧಿಷ್ಠಿರ ಎಂದು ತಿಳಿದಿದ್ದಾನೆಯೆ? ಎಂಬುದು ಉತ್ತರಕುಮಾರನ ಪ್ರಶ್ನೆ. ಉತ್ತರಕುಮಾರನ ಪ್ರಕಾರ ಯುಧಿಷ್ಠಿರ ಒಬ್ಬ ಅಸಹಾಯಕ ರಾಜ. ಅಂತಹವನಿಗೆ ಮೋಸಮಾಡಿ ಸುಲಭವಾಗಿ ರಾಜ್ಯವನ್ನು ವಶಪಡಿಸಿಕೊಂಡ ಹಾಗೆ ತನ್ನ ರಾಜ್ಯವನ್ನು ವಶಪಡಿಸಿಕೊಳ್ಳುವುದು ಸುಲಭವಲ್ಲ ಎಂಬುದು ದುರ್ಯೋಧನನಿಗೆ ತಿಳಿದಿಲ್ಲ ಎಂದು ಉತ್ತರಕುಮಾರ ಭಾವಿಸುತ್ತಾನೆ. ಒಂದು ವೇಳೆ ತಾನೇನಾದರೂ ಸಿಟ್ಟುಗೊಂಡರೆ ಕೌರವನ ಸೇನೆಯೆಲ್ಲವನ್ನೂ ಧೂಳೀಪಟ ಮಾಡಬಲ್ಲೆ, ಕೌರವ ಇದುವರೆಗೂ ಏನೆಲ್ಲವನ್ನು ಸಂಪಾದಿಸಿದ್ದಾನೋ ಅದೆಲ್ಲವನ್ನೂ ನಾಶಮಾಡಬಲ್ಲೆ ಎಂದು ಉತ್ತರಕುಮಾರ ತನ್ನ ಪ್ರಿಯತಮೆಯರ ಮುಂದೆ ತನ್ನ ಪೌರುಷವನ್ನು ಪ್ರದರ್ಶಿಸತೊಡಗುತ್ತಾನೆ.)
ತನಗೆ ಬಡ ಪಾಂಡವರ ತೆವರಿದ
ಮನದ ಗರ್ವದ ಕೊಬ್ಬು ಕಾಲನ
ಮನೆಯನಾಳ್ವಿಪುದಲ್ಲದಿದ್ದೊಡೆ ತನ್ನ ವೈರವನು
ನೆನೆದು ದುರ್ಯೋಧನನು ತಾ ಮೇ
ದಿನಿಯನಾಳ್ವನೆ ಹಾ ಮಹಾದೇ
ವೆನುತಲುತ್ತರ ಬಿರುದ ನುಡಿದನು ಹೆಂಗಳಿದಿರಿನಲಿ ೩
ಪದ್ಯದ ಅನ್ವಯಕ್ರಮ:
ತನಗೆ ಬಡಪಾಂಡವರ ತೆವರಿದ ಮನದ ಗರ್ವದ ಕೊಬ್ಬು ಕಾಲನ ಮನೆಯನ್ ಆಳ್ವಿಪುದು, ಅಲ್ಲದೆ ಇದ್ದೊಡೆ ತನ್ನ ವೈರವನು ನೆನೆದು ದುರ್ಯೋಧನನು ತಾ ಮೇದಿನಿಯನ್ ಆಳ್ದನೆ, ಹಾ ಮಹಾದೇವ ಎನುತಲಿ ಉತ್ತರ ಹೆಂಗಳ ಇದಿರಿನಲಿ ಬಿರುದ ನುಡಿದನು.
ಪದ-ಅರ್ಥ:
ತನಗೆ-ದುರ್ಯೋಧನನಿಗೆ; ಬಡಪಾಂಡವರು-ಅಶಕ್ತರಾದ ಪಾಂಡವರು; ತೆವರಿದ– ವಂಚಿಸಿದ; ಕೊಬ್ಬು-ಸೊಕ್ಕು; ಕಾಲ-ಯಮ; ಆಳ್ವಿಪುದು-ಆಳನ್ನಾಗಿ ಮಾಡುವುದು; ತನ್ನ ವೈರ-ಪಾಂಡವರೊಂದಿಗಿನ ದ್ವೇಷ; ಮೇದಿನಿ-ಭೂಮಿ; ಬಿರುದ-ಪರಾಕ್ರಮದ ಮಾತು; ಹೆಂಗಳಿದಿರಿನಲಿ-ಹೆಂಗಸರ ಮುಂದೆ.
ದುರ್ಯೋಧನನಿಗೆ ಬಡಪಾಯಿ ಪಾಂಡವರನ್ನು ವಂಚಿಸಿದೆನೆಂಬ ಗರ್ವ ಮನಸ್ಸಿನಲ್ಲಿ ಮಡುಗಟ್ಟಿದೆ. ಅದು ಯಮನ ಮನೆಯನ್ನೇ ಆಳುವಂತೆ ಮಾಡೀತು. ಇಲ್ಲದಿದ್ದರೆ, ದುರ್ಯೋಧನನು ಪಾಂಡವರೊಂದಿಗೆ ವೈರವನ್ನು ಸಾಧಿಸುವುದಕ್ಕೆ ಪಾಂಡವರ ಭೂಮಿಯನ್ನು ವಶಪಡಿಸಿಕೊಂಡು ಆಳಲು ಹವಣಿಸುತ್ತಾನೆಯೆ? ದುರ್ಯೋಧನನ ಈ ಸೊಕ್ಕು ಆತನನ್ನು ನಾಶಮಾಡದಿರುವುದೇ? ಎಂದು ಹೆಂಗಳೆಯರ ಮುಂದೆ ತನ್ನ ಪರಾಕ್ರಮವನ್ನು ಹೇಳಿಕೊಳ್ಳತೊಡಗಿದನು.
(ಉತ್ತರಕುಮಾರನಿಗೆ ದುರ್ಯೋಧನ ಮಾಡಿರುವ ಅಕೃತ್ಯಗಳು, ಆತನ ದುರಹಂಕಾರ, ದುರ್ವರ್ತನೆಗಳ ಬಗ್ಗೆ ಆಕ್ರೋಶವಿದೆ. ಅವನ ಪ್ರಕಾರ ಪಾಂಡವರು ಬಡಪಾಯಿಗಳು, ಅಸಹಾಯಕರು. ಅಂತಹವರನ್ನು ಮೋಸದಿಂದ ಸೋಲಿಸಿ, ಕಾಡಿಗಟ್ಟಿ ತಾನು ಸುಲಭವಾಗಿ ವಂಚಿಸಿದೆ ಎಂಬ ದುರಹಂಕಾರವನ್ನು ಮೈಗೂಡಿಸಿಕೊಂಡಿದ್ದಾನೆ. ಮನಸ್ಸಿನಲ್ಲಿ ಅತಿಯಾದ ಸೊಕ್ಕು ಸೇರಿಕೊಂಡಿದೆ. ಪಾಂಡವರ ರಾಜ್ಯವನ್ನು ಕಸಿದುಕೊಂಡು ಆಳುವುದೆಂದರೆ ಯಮನ ರಾಜ್ಯವನ್ನು ಕಸಿದುಕೊಂಡು ಆಳಲು ಹವಣಿಸಿದಂತೆಯೇ ಸರಿ. ಇಂದು ಗೆಲುವಾದರೂ ನಾಳೆ ಸಾವು ಮಾತ್ರವಲ್ಲ ಸರ್ವನಾಶವೂ ನಿಶ್ಚಿತ. ಪಾಂಡವರನ್ನು ಸುಲಭವಾಗಿ ಸೋಲಿಸಿದೆಂಬ ಸೊಕ್ಕಿನಿಂದ ಇಂದು ಯಮನ ರಾಜ್ಯವನ್ನು ಕಸಿಯಲು ಬಂದಂತೆ ತನ್ನ ರಾಜ್ಯಕ್ಕೆ ಮುತ್ತಿಗೆ ಹಾಕಲು ಹವಣಿಸಿದ್ದಾನೆ. ಇದರಿಂದ ದುರ್ಯೋಧನ ನಾಶವಾಗದೆ ಉಳಿಯಲು ಸಾಧ್ಯವೆ? ದುರ್ಯೋಧನನ ದುರಹಂಕಾರ, ಸೊಕ್ಕುಗಳೇ ಆತನನ್ನು ನಾಶಮಾಡದೇ ಇರಲು ಸಾಧ್ಯವೆ? ಎಂದು ಉತ್ತರಕುಮಾರ ತನ್ನ ಪ್ರಿಯತಮೆಯರ ಮುಂದೆ ಮಹಾಜ್ಞಾನಿಯಂತೆ ಮಾತನಾಡುತ್ತಾನೆ. ಪಾಂಡವರು ಧರ್ಮಿಷ್ಠರು, ದುರ್ಯೋಧನ ಅಧರ್ಮಿ, ದುರಹಂಕಾರಿ, ಮೋಸ ವಂಚನೆಗಳನ್ನೇ ಮೈಗೂಡಿಸಿಕೊಂಡವನು ಎಂಬುದನ್ನು ಉತ್ತರಕುಮಾರ ತಿಳಿದಿದ್ದಾನೆ. ಆದರೆ ಆತನ ಮಾತುಗಳಲ್ಲಿ ತಾನು ಪಾಂಡವರಿಗಿಂತ ಶಕ್ತಿಶಾಲಿ, ಪರಾಕ್ರಮಿ, ದುರ್ಯೋಧನ ಪಾಂಡವರನ್ನು ವಂಚಿಸಿದಂತೆ ತನ್ನನ್ನು ವಂಚಿಸಲು ಸಾಧ್ಯವಿಲ್ಲ ಎಂಬ ಜಂಭ ಎದ್ದುಕಾಣುತ್ತದೆ.)
ಜವನ ಮೀಸೆಯ ಮುರಿದನೊ ಭೈ
ರವನ ದಾಡೆಯನಲುಗಿದನೊ ಮೃ
ತ್ಯುವಿನ ಮೇಲುದ ಸೆಳೆದನೋ ಕೇಸರಿಯ ಕೆಣಕಿದನೊ
ಬವರವನು ತೊಡಗಿದನಲಾ ಕೌ
ರವನಕಟ ಮರುಳಾದನೆಂದಾ
ಯುವತಿಯರ ಮೊಗ ನೋಡುತುತ್ತರ ಬಿರುದ ಕೆದರಿದನು ೪
ಪದ್ಯದ ಅನ್ವಯಕ್ರಮ:
ಜವನ ಮೀಸೆಯ ಮುರಿದನೊ? ಭೈರವನ ದಾಡೆಯನ್ ಅಲುಗಿದನೊ? ಮೃತ್ಯುವಿನ ಮೇಲುದ ಸೆಳೆದನೋ? ಕೇಸರಿಯ ಕೆಣಕಿದನೊ? ಕೌರವನ್ ಬವರವನು ತೊಡಗಿದನಲಾ, ಅಕಟ ಮರುಳಾದನ್ ಎಂದು ಆ ಯುವತಿಯರ ಮೊಗ ನೋಡುತ ಉತ್ತರ ಬಿರುದ ಕೆದರಿದನು.
ಪದ-ಅರ್ಥ:
ಜವ-ಯಮ; ಮುರಿ-ಬಾಗಿಸು; ಭೈರವ-ಶಿವ; ದಾಡೆ-ಹಲ್ಲು; ಅಲುಗು-ಅಲುಗಾಡಿಸು; ಮೃತ್ಯು-ಯಮ; ಮೇಲುದ-ಉತ್ತರೀಯ, ಮೇಲು ವಸ್ತ್ರ; ಸೆಳೆ-ಕಿತ್ತುಕೊಳ್ಳು; ಕೇಸರಿ-ಸಿಂಹ; ಬವರ-ಯುದ್ಧ; ತೊಡಗು-ಹೂಡು; ಮರುಳಾದ-ಕೆಟ್ಟುಹೋದ; ಮೊಗ-ಮುಖ; ಬಿರುದ-ಪರಾಕ್ರಮದ ಮಾತು. ಕೆದರು-ಒದರು, ಹೇಳಿಕೊಳ್ಳು.
ಈ ದುರ್ಯೋಧನನು ಯಮನ ಮೀಸೆಯನ್ನೇ ಮುರಿಯುವುದಕ್ಕೆ ಪ್ರಯತ್ನಿಸಿದ್ದಾನೆ. ಭೈರವನ ದಾಡೆಯನ್ನು ಅಲುಗಿಸುವುದಕ್ಕೆ ಪ್ರಯತ್ನಿಸಿದ್ದಾನೆ. ಮಾತ್ರವಲ್ಲದೆ, ಮೃತ್ಯುವಿನ ಉತ್ತರೀಯವನ್ನು ಸೆಳೆಯುವುದಕ್ಕೆ ಪ್ರಯತ್ನಿಸಿದ್ದಾನೆ. ತಟಸ್ಥವಾಗಿದ್ದ ಸಿಂಹವನ್ನೇ ಕೆಣಕಿದ್ದಾನೆ. ಅಕಟಕಟಾ ಮರುಳು ಕೌರವನು ತನ್ನೊಂದಿಗೆ ಯುದ್ಧಕ್ಕೆ ತೊಡಗಿದನಲ್ಲಾ! ಇನ್ನು ಆತನಿಗೆ ಉಳಿಗಾಲವೆಲ್ಲಿ? ಎಂದು ಉತ್ತರಕುಮಾರನು ತನ್ನ ಪ್ರಿಯತಮೆಯರ ಮುಂದೆ ತನ್ನ ಪೌರುಷವನ್ನು ಕೊಚ್ಚಿಕೊಂಡನು.
(ಉತ್ತರಕುಮಾರನಿಗೆ ತಾನೊಬ್ಬ ಅತ್ಯಂತ ಪರಾಕ್ರಮಶಾಲಿ ಎಂಬ ಒಣಬಂಭವಿದೆ. ಹಾಗಾಗಿ ತನ್ನ ಪರಾಕ್ರಮವನ್ನು ನಾಲ್ಕು ದೃಷ್ಟಾಂತಗಳ ಮೂಲಕ ಹೊಗಳಿಕೊಳ್ಳುತ್ತಾನೆ. ಮೊದಲನೆಯದಾಗಿ, ಯಾರೇ ಆಗಲಿ ಯಮನ ಪರಾಕ್ರಮ, ಸಾಮರ್ಥ್ಯಗಳನ್ನು ಅರಿತುಕೊಳ್ಳದೆ ಯಮನ ಮೀಸೆಯನ್ನು ಮುರಿಯುವುದಕ್ಕೆ ಪ್ರಯತ್ನಿಸಿದರೆ ಅದು ಸ್ವತಃ ಯಮಲೋಕಕ್ಕೆ ದಾರಿಯನ್ನು ಕಂಡುಕೊಂಡಂತೆ. ಅಂತಹವನು ತಿಳಿಗೇಡಿತನದ ಕೆಲಸಕ್ಕೆ ಕೈಹಾಕಿದ್ದಾನೆ ಎಂದರ್ಥ. ಯಮನ ಮೀಸೆಗೆ ಕೈಹಾಕಿದರೆ ಯಮ ಸುಮ್ಮನಿರಬಲ್ಲನೆ?! ಯಮನಿಂದ ಅಂತಹವನಿಗೆ ಸಾವು ನಿಶ್ಚಿತ. ಎರಡನೆಯದಾಗಿ, ಯಾರೇ ಆಗಲಿ ಭೈರವನ ಶಕ್ತಿ, ಸಾಮರ್ಥ್ಯವನ್ನು ಅರಿತುಕೊಳ್ಳದೆ ಭೈರವನ ದಾಡೆಯನ್ನು ಅಲುಗಿಸುವ ಹುಚ್ಚುಸಾಹಸಕ್ಕೆ ಪ್ರಯತ್ನಿಸಿದರೆ ಅದು ತನ್ನ ನಾಶವನ್ನು ತಾನೇ ತಂದು ಕೊಂಡಂತೆ. ಅಂತಹವನು ಮೂರ್ಖತನದ ಕೆಲಸಕ್ಕೆ ಕೈಹಾಕಿದ್ದಾನೆ ಎಂದರ್ಥ. ತನ್ನ ದಾಡೆಗೆ ಕೈಹಾಕಿದರೆ ಭೈರವ ಸುಮ್ಮನೆ ಬಿಟ್ಟಾನೆಯೆ?! ಭೈರವನಿಂದ ಅಂತಹವನ ನಾಶ ನಿಶ್ಚಿತ ಎಂದರ್ಥ. ಮೂರನೆಯದಾಗಿ, ಯಾರೇ ಆಗಲಿ ಪರಾಕ್ರಮ, ಶಕ್ತಿ, ಸಾಮರ್ಥ್ಯಗಳ ಸಮಾನತೆಯನ್ನು ಅರಿತುಕೊಳ್ಳದೆ ಮೃತ್ಯುವಿನ ಮೇಲುದ(ಉತ್ತರೀಯ)ವನ್ನು ಸೆಳೆಯಲು ಪ್ರಯತ್ನಿಸಿದರೆ ಅದು ಸ್ವತಃ ತನ್ನ ಸಾವನ್ನು ತಾನೇ ಮೈಮೇಲೆ ಎಳೆದುಕೊಂಡಂತೆ. ಅಂತಹವನು ತನ್ನ ಬದುಕನ್ನು ತಾನೇ ನಾಶಮಾಡಿಕೊಳ್ಳಲು ಹೊರಟಿದ್ದಾನೆ ಎಂದರ್ಥ. ನಾಲ್ಕನೆಯದಾಗಿ, ಯಾರೇ ಆಗಲಿ, ಸಿಂಹದ ಶಕ್ತಿ, ಕ್ರೌರ್ಯವನ್ನು ಪರಿಭಾವಿಸದೆ ಮಲಗಿ ನಿದ್ದೆಯಲ್ಲಿರುವ ಸಿಂಹವನ್ನು ಒದ್ದು ಕೆಣಕಲು ಪ್ರಯತ್ನಿಸಿದರೆ ಅದು ಸ್ವತಃ ತನ್ನ ಸಾವನ್ನು ತಾನೇ ಮೇಲೆಳೆದುಕೊಂಡಂತೆ. ಅಂತಹವನು ಅವಿವೇಕದ ಕೆಲಸಕ್ಕೆ ಕೈಹಾಕಿದ್ದಾನೆ ಎಂದರ್ಥ. ತನ್ನನ್ನು ಒದ್ದು ಕೆಣಕಿದರೆ ಸಿಂಹವಾದರೂ ಸುಮ್ಮನೆ ಬಿಟ್ಟೀತೆ?! ಸಿಂಹ ಅಂತಹವನನ್ನು ಹರಿದು ಕಿತ್ತು ತಿನ್ನದೆಬಿಟ್ಟೀತೆ?ಈ ನಾಲ್ಕು ದೃಷ್ಟಾಂತಗಳ ಮೂಲಕ ಉತ್ತರಕುಮಾರ ತನ್ನನ್ನು ಯಮನಿಗೆ, ಭೈರವನಿಗೆ, ಮೃತ್ಯುವಿಗೆ ಹಾಗೂ ಕೇಸರಿ(ಸಿಂಹ)ಗೆ ಹೋಲಿಸಿಕೊಳ್ಳುತ್ತಾನೆ. ತನ್ನಲ್ಲಿ ಅವರೆಲ್ಲರ ಶಕ್ತಿ, ಸಾಮರ್ಥ್ಯ, ಪರಾಕ್ರಮ, ಕ್ರೌರ್ಯಗಳು ಮೈಗೂಡಿಕೊಂಡು ತಾನು ಅಪರಿಮಿತ ಶಕ್ತಿಶಾಲಿಯೂ ಪರಾಕ್ರಮಿಯೂ ಆಗಿದ್ದೇನೆ. ಹೀಗಿರುವಾಗ ಇದೆಲ್ಲವನ್ನು ಅರಿತುಕೊಳ್ಳದೆ ದುರ್ಯೋಧನ ಮೂರ್ಖನಂತೆ, ತನ್ನ ಸಾವನ್ನು ತಾನೇ ಮೈಮೇಲೆ ಎಳೆದುಕೊಳ್ಳುವ ರೀತಿಯಲ್ಲಿ ತನ್ನೊಂದಿಗೆ ಯುದ್ಧಕ್ಕೆ ಬಂದಿದ್ದಾನೆ. ತನ್ನನ್ನು ಕೆಣಕಿ ದುರ್ಯೋಧನ ಉಳಿಯಲು ಸಾಧ್ಯವೆ? ಇಂದೇ ಆತನ ಸಾವು ನಿಶ್ಚಿತ ಎಂದು ಉತ್ತರಕುಮಾರ ತನ್ನ ಪ್ರಿಯತಮೆಯರ ಮುಂದೆ ಬಡಾಯಿಕೊಚ್ಚಿಕೊಳ್ಳುತ್ತಾನೆ.)
ಆರೊಡನೆ ಕಾದುವೆನು ಕೆಲಬರು
ಹಾರುವರು ಕೆಲರಂತಕನ ನೆರೆ
ಯೂರವರು ಕೆಲರಧಮ ಕುಲದಲಿ ಸಂದು ಬಂದವರು
ವೀರರೆಂಬವರಿವರು ಮೇಲಿ
ನ್ನಾರ ಹೆಸರುಂಟವರೊಳೆಂದು ಕು
ಮಾರ ನೆಣಗೊಬ್ಬಿನಲಿ ನುಡಿದನು ಹೆಂಗಳಿದಿರಿನಲಿ ೫
ಪದ್ಯದ ಅನ್ವಯಕ್ರಮ:
ಆರೊಡನೆ ಕಾದುವೆನು, ಕೆಲಬರು ಹಾರುವರು, ಕೆಲರು ಅಂತಕನ ನೆರೆಯ ಊರವರು, ಕೆಲರು ಅಧಮಕುಲದಲಿ ಸಂದು ಬಂದವರು, ವೀರರು ಎಂಬವರು ಇವರು! ಮೇಲೆ ಇವರೊಳು ಇನ್ನಾರ ಹೆಸರುಂಟು? ಎಂದು ಕುಮಾರ ಹೆಂಗಳಿದಿರಿನಲಿ ನೆಣಗೊಬ್ಬಿನಲಿ ನುಡಿದನು.
ಪದ-ಅರ್ಥ:
ಆರೊಡನೆ-ಯಾರೊಡನೆ; ಕಾದು-ಹೋರಾಡು; ಕೆಲಬರು-ಕೆಲವರು; ಹಾರುವರು-ಬ್ರಾಹ್ಮಣರು; ಕೆಲರು-ಕೆಲವರು; ಅಂತಕನ-ಯಮನ; ನೆರೆಯೂರವರು-ಸಾಯುವುದಕ್ಕೆ ಹತ್ತಿರವಾದವರು; ಅಧಮಕುಲ-ಹೀನಕುಲ; ಸಂದು ಬಂದವರು-ಹುಟ್ಟಿಬಂದವರು; ನೆಣಗೊಬ್ಬು-ಒಣಸೊಕ್ಕು.
ಯಾರೊಡನೆ ಯುದ್ಧವನ್ನು ಮಾಡಲಿ? ದುರ್ಯೋಧನನ ಪಕ್ಷದಲ್ಲಿ ಕೆಲವರು ಬ್ರಾಹ್ಮಣರು, ಇನ್ನು ಕೆಲವರು ಪ್ರಾಯಸಂದು ಸಾಯುವುದಕ್ಕೆ ಹತ್ತಿರದಲ್ಲಿರುವವರು, ಮತ್ತೆ ಕೆಲವರು ಅಧಮಕುಲದಲ್ಲಿ ಹುಟ್ಟಿದವರು, ಇವರಲ್ಲಿ ವೀರರು ಎಂಬವರು ಯಾರಿದ್ದಾರೆ? ಎಂದು ಉತ್ತರಕುಮಾರ ತನ್ನ ಪ್ರಿಯತಮೆಯರ ಮುಂದೆ ಒಣಕೊಬ್ಬಿನಲ್ಲಿ ಬಡಾಯಿಕೊಚ್ಚಿದನು.
(ಉತ್ತರಕುಮಾರನ ಪ್ರಕಾರ ದುರ್ಯೋಧನನ ಪಕ್ಷದಲ್ಲಿ ಪರಾಕ್ರಮಿಗಳು, ನವತಾರುಣ್ಯದ ವೀರರು ಯಾರೂ ಇಲ್ಲ. ಆತನ ಪಕ್ಷದಲ್ಲಿ ದ್ರೋಣಾಚಾರ್ಯ, ಕೃಪಾಚಾರ್ಯ, ಕೃತವರ್ಮ, ಅಶ್ವತ್ಥಾಮ ಮೊದಲಾದವರು ಬ್ರಾಹ್ಮಣರು, ಕ್ಷತ್ರಿಯತನವೇ ಇಲ್ಲದ ಈ ಬ್ರಾಹ್ಮಣರು ಯುದ್ಧರಂಗದಲ್ಲಿ ಏನು ಯುದ್ಧ ಮಾಡಿಯಾರು? ದುರ್ಯೋಧನನಿಗೆ ಹೇಗೆ ಜಯವನ್ನು ತಂದುಕೊಟ್ಟಾರು? ಇನ್ನು ಆತನ ಪಕ್ಷದಲ್ಲಿ ಭೀಷ್ಮ, ದ್ರೋಣ ಮೊದಲಾದವರು ಸಾಕಷ್ಟು ವಯಸ್ಸಾಗಿ ಯಮಪುರಕ್ಕೆ ಹತ್ತಿರದಲ್ಲಿರುವವರು. ಇವರಿಂದ ಏನು ಮಾಡುವುದಕ್ಕೆ ಸಾಧ್ಯ? ಇನ್ನು ಕರ್ಣ ಮೊದಲಾದ ಕೆಲವರು ಹೀನಕುಲದಲ್ಲಿ ಹುಟ್ಟಿದವರು. ಇವರಲ್ಲಿ ಕ್ಷತ್ರಿಯತನವೆಲ್ಲಿದೆ? ಯುದ್ಧರಂಗದಲ್ಲಿ ಇವರೇನು ಹೋರಾಡಿಯಾರು? ದುರ್ಯೋಧನನಿಗೆ ಹೇಗೆ ಜಯವನ್ನು ತಂದುಕೊಟ್ಟಾರು? ಇನ್ನು ಆತನ ಪಕ್ಷದಲ್ಲಿ ಪರಾಕ್ರಮಶಾಲಿಗಳು, ನವತಾರುಣ್ಯದ ಭಟರು, ಯುದ್ಧವೀರರು ಯಾರಿದ್ದಾರೆ? ತನ್ನಂತಹ ಪರಾಕ್ರಮಶಾಲಿಯೊಂದಿಗೆ ದುರ್ಯೋಧನನ ಪಕ್ಷದ ಈ ಲೆಕ್ಕಕ್ಕಿಲ್ಲದ ವೀರರು ಹೋರಾಡಿ ಉಳಿಯಲು ಸಾಧ್ಯವೇ? ದುರ್ಯೋಧನ ಬ್ರಾಹ್ಮಣರನ್ನು, ಅಸಹಾಯಕರನ್ನು, ಹೀನಕುಲದವರನ್ನು ಕಟ್ಟಿಕೊಂಡು ಯುದ್ಧಕ್ಕೆ ಬಂದಿದ್ದಾನೆ. ಆತ ಯುದ್ಧದಲ್ಲಿ ತನ್ನನ್ನು ಮಾತ್ರ ಬಲಿಕೊಡದೆ, ತನ್ನವರನ್ನೂ ಬಲಿಕೊಡಲು ಹೊರಟಿದ್ದಾನೆ ಎಂದು ಉತ್ತರಕುಮಾರ ತನ್ನ ಪ್ರಿಯತಮೆಯರ ಮುಂದೆ ತನ್ನ ಅಪರಿಮಿತ ಪರಾಕ್ರಮವನ್ನು ತಾನೇ ಹೊಗಳಿಕೊಂಡನು.)
ಪೊಡವಿಪತಿಗಳು ಬಂದು ತುರುಗಳ
ಹಿಡಿವರೇ ಲೋಕದಲಿ ಅಧಮರ
ಬಡಮನದ ಮನ್ನೆಯರ ಮೈಸಿರಿ ಕೌರವನೊಳಾಯ್ತು
ಕಡೆಗೆ ದುರಿಯಶವುಳಿವುದಲ್ಲದೆ
ಬಿಡುವೆನೇ ಗೋಧನವನೆನ್ನೊಳು
ತೊಡಕಿ ಬದುಕುವನಾವನೆಂದನು ಖಂಡೆಯವ ಜಡಿದು ೬
ಪದ್ಯದ ಅನ್ವಯಕ್ರಮ:
ಪೊಡವಿಪತಿಗಳು ಬಂದು ತುರುಗಳ ಹಿಡಿವರೇ? ಲೋಕದಲಿ ಕೌರವನೊಳ್ ಅಧಮರ, ಬಡಮನದ ಮನ್ನೆಯರ ಮೈಸಿರಿ ಆಯ್ತು, ಕಡೆಗೆ ದುರಿಯಶ ಉಳಿವುದಲ್ಲದೆ ಗೋಧನವನ್ ಬಿಡುವೆನೇ? ಖಂಡೆಯವ ಜಡಿದು ಎನ್ನೊಳು ತೊಡಕಿ ಬದುಕುವನ್ ಆವನ್ ಎಂದನು.
ಪದ-ಅರ್ಥ:
ಪೊಡವಿಪತಿಗಳು-ರಾಜರು; ತುರುಗಳು-ಗೋವುಗಳು; ಹಿಡಿವರೇ-ವಶಪಡಿಸಿಕೊಳ್ಳುವರೇ; ಅಧಮರ-ಅಯೋಗ್ಯರ; ಬಡಮನ-ಹೇಡಿತನ; ಮನ್ನೆಯರ-ಗೌರವಾನ್ವಿತರ; ಮೈಸಿರಿ-ಪರಾಕ್ರಮ; ದುರಿಯಶ-ಅಪಕೀರ್ತಿ; ಉಳಿವುದು-ಉಳಿದುಕೊಳ್ಳುವುದು, ಶಾಶ್ವತವಾಗುವುದು; ತೊಡಕಿ-ಸೆಣಸಿ, ಕೆಣಕಿ; ಬದುಕುವನಾವನ್-ಬದುಕುವವನು ಯಾರಿದ್ದಾನೆ; ಖಂಡೆಯ-ಖಡ್ಗ; ಜಡಿದು-ಝಳಪಿಸಿಕೊಂಡು.
ರಾಜರಾದವರು ಅನ್ಯರ ರಾಜ್ಯವನ್ನು ಅತಿಕ್ರಮಿಸಿ ಅವರ ಗೋವುಗಳನ್ನು ಸೆರೆಹಿಡಿಯುವರೆ? ಕೌರವನ ಪರಾಕ್ರಮವೆಂಬುದು ಅಧಮರ, ಅಶಕ್ತ ಗೌರವಾನ್ವಿತರ ಪರಾಕ್ರಮ ಎನಿಸಿಕೊಂಡಿತು. ದುರ್ಯೋಧನಾದಿಗಳ ಈ ಅಕಾರ್ಯವೆಂಬುದು ಅಪಕೀರ್ತಿಗೆ ಕಾರಣವಾಯಿತು. ಅವನು ಸೆರೆಹಿಡಿದಿರುವ ಗೋವುಗಳನ್ನು ನಾನು ಸುಮ್ಮನೆ ಬಿಟ್ಟುಬಿಡಲು ಸಾಧ್ಯವೆ? ಆತನನ್ನು ಸೋಲಿಸಿ ಆತನಿಂದ ಗೋವುಗಳನ್ನು ಮರಳಿ ತರುತ್ತೇನೆ ಎಂದು ತನ್ನ ಖಡ್ಗವನ್ನು ಒರೆಯಿಂದ ಕಿತ್ತು ಝಳಪಿಸಿ ಪ್ರಿಯತಮೆಯರ ಮುಂದೆ ತನ್ನ ಕೈಚಳಕವನ್ನು ತೋರಿಸಿದನು.
(ಲೋಕದಲ್ಲಿ ಪರಾಕ್ರಮಿ ರಾಜರೆನಿಸಿಕೊಂಡವರು ಘನವಾದ, ಗೌರವದ ಕೆಲಸಗಳನ್ನು ಮಾಡುತ್ತಾರೆಯೇ ವಿನಾ ಅಧರ್ಮದ, ಹೇಡಿತನದ, ಮೂರ್ಖತನದ ಕೆಲಸಗಳನ್ನು ಮಾಡುವುದಿಲ್ಲ. ಒಬ್ಬ ರಾಜ ತನ್ನ ರಾಜ್ಯದ ಪರಿಧಿಯನ್ನು ಮೀರಿ ಇನ್ನೊಂದು ರಾಜ್ಯದೊಳಗೆ ನುಗ್ಗುವುದು ಮಾತ್ರವಲ್ಲದೆ, ಗೋವುಗಳನ್ನು ಅಪಹರಿಸುವುದು, ಗೋಪಾಲಕರನ್ನು ಅವಮಾನಿಸುವುದು ಅತ್ಯಂತ ಹೇಡಿತನದ, ಮೂರ್ಖತನದ ಕೆಲಸ. ಇಂತಹ ಕೃತ್ಯಗಳು ರಾಜರ ಘನತೆ, ಗೌರವಗಳನ್ನೇ ನಾಶಮಾಡಿಬಿಡುತ್ತವೆ. ರಾಜನಾದವನು ಯಾವತ್ತೂ ವಿವೇಚನೆಯಿಂದ ಕಾರ್ಯವನ್ನು ಕೈಗೊಳ್ಳಬೇಕು. ದುರ್ಯೋಧನ ಕೈಗೊಂಡಿರುವ ಕಾರ್ಯ ಅವಿವೇಕತನದಿಂದ ಕೂಡಿರುವಂತಹುದು. ಗೋವುಗಳನ್ನು ಅಪಹರಿಸುವವರು, ಗೋಪಾಲಕರನ್ನು ಅವಮಾನಿಸುವವರು ಹೇಡಿಗಳಲ್ಲದೆ, ಪರಾಕ್ರಮಿಗಳಲ್ಲ. ದುರ್ಯೋಧನನು ಎಸಗಿರುವ ಇಂತಹ ಹೀನಕೃತ್ಯಗಳು ಆತನಿಗೆ ಮತ್ತು ಆತನ ಪರಿವಾರಕ್ಕೆ ಅಪಕೀರ್ತಿಯನ್ನಲ್ಲದೆ ಯಾವುದೇ ರೀತಿಯಿಂದಲೂ ಶೋಭೆಯನ್ನು ತರುವುದಿಲ್ಲ. ರಾಜನೀತಿಯನ್ನು, ರಾಜನ ಘನತೆ-ಗಾಂಭೀರ್ಯಗಳನ್ನು, ಸ್ಥಾನಮಾನಗಳನ್ನು ಮೀರಿ ನಮ್ಮ ರಾಜ್ಯದೊಳಗೆ ಪ್ರವೇಶಿಸಿ, ನಮ್ಮ ಗೋವುಗಳನ್ನು ಸೆರೆಹಿಡಿದಿರುವುದು ಮಾತ್ರವಲ್ಲದೆ, ನಮ್ಮ ಗೋಪಾಲಕರನ್ನು ಅವಮಾನಿಸಿದ ತಿಳಿಗೇಡಿತನದ ಕೃತ್ಯವನ್ನು ನೋಡಿಯೂ ಸುಮ್ಮನಿರಲು ಸಾಧ್ಯವೆ? ಆತನಿಗೆ ಮಾತ್ರವಲ್ಲದೆ ಸಮಸ್ತ ಕೌರವ ಪರಿವಾರಕ್ಕೆ ತಕ್ಕ ಶಾಸ್ತಿಯನ್ನು ಮಾಡದೆ ಬಿಡಲಾರೆ ಎಂದು ಉತ್ತರಕುಮಾರನು ಒರೆಯಿಂದ ಖಡ್ಗವನ್ನು ಕಿತ್ತು ಆವೇಶದಿಂದ ಝಳಪಿಸಿ ತನ್ನ ಪ್ರಿಯತಮೆಯರ ಮುಂದೆ ಪರಾಕ್ರಮವನ್ನು ಪ್ರದರ್ಶಿಸಿದನು.)
ಖಳನ ಮುರಿವೆನು ಹಸ್ತಿನಾಪುರ
ದೊಳಗೆ ಠಾಣಾಂತರವನಿಕ್ಕುವೆ
ತೊಲಗಿಸುವೆ ಕೌರವನ ಸೇನೆಯ ಧೂಳಿಪಟ ಮಾಡಿ
ಗೆಲವ ತಹೆನೆಂದುತ್ತರನು ಕೋ
ಮಲೆಯರಿದಿರಲಿ ಬಾಯ್ಗೆ ಬಂದುದ
ಗಳಹುತಿದ್ದನು ಬೇಕು ಬೇಡೆಂಬವರ ನಾ ಕಾಣೆ ೭
ಪದ್ಯದ ಅನ್ವಯಕ್ರಮ:
ಖಳನ ಮುರಿವೆನು, ಹಸ್ತಿನಾಪುರದ ಒಳಗೆ ಠಾಣಾಂತರವನ್ ಇಕ್ಕುವೆ, ಕೌರವನ ಸೇನೆಯ ಧೂಳಿಪಟ ಮಾಡಿ ತೊಲಗಿಸುವೆ, ಗೆಲವ ತಹೆನು ಎಂದು ಉತ್ತರನು ಕೋಮಲೆಯರ ಇದಿರಲಿ ಬಾಯ್ಗೆ ಬಂದುದ ಗಳಹುತಿದ್ದನು ಬೇಕು ಬೇಡ ಎಂಬವರ ನಾ ಕಾಣೆ.
ಪದ-ಅರ್ಥ:
ಖಳ-ದುಷ್ಟ; ಮುರಿ-ನಾಶಮಾಡು, ಸೋಲಿಸು; ಠಾಣಾಂತರವನಿಕ್ಕು-ಠಿಕಾಣಿ ಹೂಡು, ಬೀಡು ಬಿಡು; ಧೂಳಿಪಟ-ಸರ್ವನಾಶ; ಗೆಲವ-ಗೆಲುವನ್ನು; ತಹೆನು-ತಂದುಕೊಡುತ್ತೇನೆ; ಗಳಹು-ಒದರು, ಬಡಾಯಿಕೊಚ್ಚಿಕೊಳ್ಳು.
ದುಷ್ಟನಾದ ದುರ್ಯೋಧನನನ್ನು ನಾಶಮಾಡುತ್ತೇನೆ. ಆತನ ರಾಜಧಾನಿಯಾದ ಹಸ್ತಿನಾಪುರವನ್ನು ವಶಪಡಿಸಿಕೊಂಡು ನನ್ನ ಚಕ್ರಾಧಿಪತ್ಯವನ್ನು ಸ್ಥಾಪಿಸುತ್ತೇನೆ. ಕೌರವನ ಸೇನೆಯನ್ನು ಸರ್ವನಾಶಮಾಡಿ ಆತನ ವಂಶವನ್ನೇ ನಾಶಮಾಡಿ ಅಪೂರ್ವವಾದ ಗೆಲುವನ್ನು ತರುತ್ತೇನೆ ಎಂದು ಉತ್ತರಕುಮಾರನು ತನ್ನ ಬಳಗದ ಕೋಮಲೆಯರ ಮುಂದು ಬಡಾಯಿಕೊಚ್ಚಿಕೊಳ್ಳತೊಡಗಿದನು. ಆತನ ಈ ಮಾತುಗಳನ್ನು ತಡೆಯುವುದಕ್ಕೆ ಅಲ್ಲಿ ಯಾರೂ ಮುಂದೆ ಬರಲಿಲ್ಲ.
(ಉತ್ತರಕುಮಾರನ ಪ್ರಕಾರ ದುರ್ಯೋಧನ ಮಾಡಿರುವ ಕೃತ್ಯಗಳು ಅಕ್ಷಮ್ಯ, ಹಾಗೂ ಅಧಾರ್ಮಿಕವಾದವುಗಳು. ಗೋವುಗಳನ್ನು ಅಪಹರಿಸುವುದು, ಅಸಹಾಯಕರಾದ ಗೋಪಾಲಕರನ್ನು ಅವಮಾನಿಸುವುದು ಅತ್ಯಂತ ಹೇಯ ಹಾಗೂ ನೀಚ ಕೆಲಸಗಳು. ಕ್ಷತ್ರಿಯರೆನಿಸಿಕೊಂಡವರಿಗೆ ಇದು ಯಾವುದೇ ರೀತಿಯಿಂದಲೂ ಶೋಭೆತರುವ ವಿಷಯವಲ್ಲ. ಹಾಗಾಗಿ ದುರ್ಯೋಧನನ ಈ ನೀಚಕೃತ್ಯಗಳಿಗೆ ಸರಿಯಾದ ಶಿಕ್ಷೆಯನ್ನು ನೀಡಲೇಬೇಕಾಗಿದೆ. ಮೊದಲು ಯುದ್ಧದಲ್ಲಿ ಆತನನ್ನು ಸೋಲಿಸಿ, ಆತನ ಸೇನೆಯೆಲ್ಲವನ್ನೂ ಸದೆಬಡಿದು, ಆತನ ರಾಜಧಾನಿಯಾದ ಹಸ್ತಿನಾಪುರವನ್ನು ಹೊಕ್ಕು ಅದನ್ನೂ ವಶಪಡಿಸಿಕೊಂಡು ತನ್ನ ಚಕ್ರಾಧಿಪತ್ಯವನ್ನು ಸ್ಥಾಪಿಸುತ್ತೇನೆ. ಆತನ ವಂಶವನ್ನೇ ನಿರ್ನಾಮಮಾಡುತ್ತೇನೆ. ಅಪೂರ್ವವಾದ ಗೆಲುವನ್ನು ಸಾಧಿಸುತ್ತೇನೆ ಎಂದು ಉತ್ತರಕುಮಾರನು ಕೋಮಲೆಯರಾದ ತನ್ನ ಪ್ರಿಯತಮೆಯರ ಮುಂದೆ ಬಡಾಯಿಕೊಚ್ಚಿಕೊಳ್ಳತೊಡಗಿದನು. ಇಷ್ಟಾದರೂ ಆತನನ್ನು ಅಲ್ಲಿ ತಡೆಯುವವರು, ಆಕ್ಷೇಪಿಸುವವರು, ಆತನ ಮಾತುಗಳನ್ನು ಒಪ್ಪುವವರು, ವಿರೋಧಿಸುವವರು ಯಾರೊಬ್ಬರೂ ಇರುವಂತೆ ಕಾಣಲಿಲ್ಲ. ತನ್ನ ಪ್ರಿಯತಮೆಯರ ಮುಂದೆ ಅಪ್ರತಿಮ ವೀರ, ಆಸಹಾಯಶೂರನೆಂಬಂತೆ ಪ್ರದರ್ಶಿಸಿ ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಲೇ ಇದ್ದನು.)
ಅರಿಯೆನೇ ಗಾಂಗೇಯನನು ತಾ
ನರಿಯದವನೇ ದ್ರೋಣ ಕುಲದಲಿ
ಕೊರತೆಯೆನಿಸುವ ಕರ್ಣನೆಂಬವನೆನಗೆ ಸಮಬಲನೆ
ಬರಿಯ ಬಯಲಾಡಂಬರದಿ ಬರಿ
ತುರುವ ಹಿಡಿದೊಡೆ ತನ್ನ ಹೆಂಡಿರ
ಸೆರೆಯ ತಾರದೆ ಮಾಣೆನೆಂದನು ನಾರಿಯರ ಮುಂದೆ ೮
ಪದ್ಯದ ಅನ್ವಯಕ್ರಮ:
ಗಾಂಗೇಯನನು ಅರಿಯೆನೇ? ದ್ರೋಣ ತಾನ್ ಅರಿಯದವನೇ? ಕುಲದಲಿ ಕೊರತೆ ಎನಿಸುವ ಕರ್ಣ ಎಂಬವನು ಎನಗೆ ಸಮಬಲನೆ? ನಾರಿಯಯ ಮುಂದೆ, ’ಬರಿಯ ಬಯಲ ಆಡಂಬರದಿ ತುರುವ ಹಿಡಿದೊಡೆ ತನ್ನ ಹೆಂಡಿರ ಸೆರೆಯ ತಾರದೆ ಮಾಣೆನ್’ ಎಂದನು.
ಪದ-ಅರ್ಥ:
ಅರಿಯೆನೇ-ತಿಳಿದಿಲ್ಲವೇ, ಅರಿತಿಲ್ಲವೇ; ಗಾಂಗೇಯ-ಭೀಷ್ಮ; ಕುಲ-ಜನ್ಮ; ಕೊರತೆ-ನ್ಯೂನತೆ; ಸಮಬಲನೆ-ಸರಿಸಮಾನನೇ; ಬರಿಯ-ವ್ಯರ್ಥ; ಬಯಲಾಡಂಬರ-ಬಡಾಯಿ ಮಾತು, ಬೂಟಾಟಿಕೆಯ ಮಾತು; ಬರಿ-ಕೇವಲ; ತುರುವ-ಗೋವುಗಳನ್ನು; ಹಿಡಿದೊಡೆ-ಸೆರೆಹಿಡಿದರೆ; ತನ್ನ-ಅವರ(ಗೋವುಗಳನ್ನು ಸೆರೆಹಿಡಿದವರ); ಹೆಂಡಿರ-ಹೆಂಡತಿಯರ; ಸೆರೆಯ ತಾರದೆ-ಬಂಧಿಸದೆ; ಮಾಣೆನ್-ಬಿಡಲಾರೆ.
ಭೀಷ್ಮ ಯಾರೆಂದು, ಏನೆಂದು ತಾನು ತಿಳಿದಿಲ್ಲವೆ? ದ್ರೋಣನೆಂಬವನನ್ನು ನಾನು ತಿಳಿದಿಲ್ಲವೆ? ಇನ್ನು ಹೀನಕುಲದಲ್ಲಿ ಹುಟ್ಟಿರುವ ಕರ್ಣನೆಂಬವನು ನನಗೆ ಸರಿಸಮಾನನಾದ ವೀರನೆ? ದುರ್ಯೋಧನನು ಕೇವಲ ತಮ್ಮ ಗೋವುಗಳನ್ನು ಸೆರೆಹಿಡಿದರೆ ನಾನು ಆತನ ಹೆಂಡಿರನ್ನೇ ಸೆರೆಹಿಡಿದು ತಾರದೆ ಬಿಡಲಾರೆನು ಎಂದು ಬೂಟಾಟಿಕೆಯ ಮಾತುಗಳಿಂದ ತನ್ನ ಕೋಮಲೆಯರ ಮುಂದೆ ಬಡಾಯಿ ಕೊಚ್ಚಿಕೊಳ್ಳತೊಡಗಿದನು.
(ದುರ್ಯೋಧನನ ಪಕ್ಷದಲ್ಲಿ ಆತನಿಗೆ ಬೆಂಗಾವಲಾಗಿ ಬಂದಿರುವ ಭೀಷ್ಮ ನಾನು ತಿಳಿದುಕೊಳ್ಳದ ವ್ಯಕ್ತಿಯೆ? ಇನ್ನು ಆತನ ಗುರು ದ್ರೋಣಾಚಾರ್ಯ ಹಾಗೂ ಆತನ ಸಾಮರ್ಥ್ಯವನ್ನು ಏನು? ಎಷ್ಟು? ಎಂದು ನಾನು ತಿಳಿದಿಲ್ಲವೆ? ಇಬ್ಬರೂ ಪ್ರಾಯಸಂದು ಮುದುಕರಾಗಿದ್ದಾರೆ. ಯುದ್ಧರಂಗದಲ್ಲಿ ಇವರೇನು ಹೋರಾಡಬಲ್ಲರು? ದುರ್ಯೋಧನನನ್ನು ಇವರು ಹೇಗೆ ರಕ್ಷಿಸಬಲ್ಲರು? ಇನ್ನು ಕರ್ಣ ಮೊದಲೇ ಹೀನಕುಲದಲ್ಲಿ ಹುಟ್ಟಿದವನು. ಆತನಲ್ಲಿ ಕ್ಷತ್ರಿಯತನವಾಗಲೀ ಪೌರುಷವಾಗಲೀ ಪರಾಕ್ರಮವಾಗಲೀ ಎಳ್ಳಷ್ಟೂ ಇಲ್ಲ. ಹೀಗಿರುವಾಗ ಅವನು ನನಗೆ ಸರಿಸಮಾನನಾದ ವೀರನೆನಿಸಿಕೊಳ್ಳುವುದಕ್ಕೆ ಸಾಧ್ಯವೆ? ನನ್ನಲ್ಲಿ ಹೋರಾಡುವಷ್ಟು ಸಾಮರ್ಥ್ಯ ಆತನಿಗೆಲ್ಲಿ ಬರಬೇಕು? ಅವನು ಲೆಕ್ಕಕ್ಕಿಲ್ಲದವನು. ದುರ್ಯೋಧನನ ಪಕ್ಷದಲ್ಲಿರುವವರು ಯಾರೂ ನನಗೆ ಪರಾಕ್ರಮದಲ್ಲಿ, ಶಕ್ತಿ ಸಾಮರ್ಥ್ಯದಲ್ಲಿ, ಯುದ್ಧವಿದ್ಯೆಯಲ್ಲಿ ಸರಿಸಮಾನರಲ್ಲ. ಅವರೆಲ್ಲರನ್ನು ಗೆಲ್ಲುವುದಕ್ಕೆ ನನಗೆ ಹೆಚ್ಚು ಹೊತ್ತು ಬೇಕಾಗಿಲ್ಲ. ಯುದ್ಧದಲ್ಲಿ ಅವರೆಲ್ಲರನ್ನೂ ಸೋಲಿಸಿ, ನಮ್ಮ ಗೋವುಗಳನ್ನು ಬಿಡಿಸಿಕೊಳ್ಳುವುದು ಮಾತ್ರವಲ್ಲದೆ, ನಮ್ಮ ಗೋವುಗಳನ್ನು ಅಪಹರಿಸಿದ್ದಕ್ಕೆ ಮತ್ತು ನಮ್ಮ ಗೋಪಾಲಕರನ್ನು ಅವಮಾನಿಸಿದ್ದಕ್ಕೆ ಪ್ರತೀಕಾರವಾಗಿ ಅವರ ಹೆಂಡಿರನ್ನು ಸೆರೆಹಿಡಿದು ಅವರನ್ನೂ ಅದೇ ರೀತಿಯಲ್ಲಿ ಅವಮಾನಿಸುತ್ತೇನೆ ಎಂದು ಉತ್ತರಕುಮಾರನು ತನ್ನ ಕೋಮಲೆಯರ ಮುಂದೆ ಒಣಜಂಭವನ್ನು ಪ್ರದರ್ಶಿಸತೊಡಗಿದನು.)
ನುಡಿದು ಫಲವೇನಿನ್ನು ಸಾರಥಿ
ಮಡಿದ ನಿನ್ನಿನ ಬವರದಲಿ ತಾ
ನುಡುಹನಾದೆನು ಶಿವ ಶಿವಾಯಿಂದೆನ್ನ ಕೈ ಮನಕೆ
ಗಡಣಿಸುವ ಸಾರಥಿಯನೊಬ್ಬನ
ಪಡೆದೆನಾದೊಡೆ ಕೌರವೇಂದ್ರನ
ಪಡೆಗೆ ಹಬ್ಬವ ಮಾಡುವೆನು ತೋರುವೆನು ಕೈಗುಣವ ೯
ಪದ್ಯದ ಅನ್ವಯಕ್ರಮ:
ಇನ್ನು ನುಡಿದು ಫಲವೇನು? ನಿನ್ನಿನ ಬವರದಲಿ ಸಾರಥಿ ಮಡಿದ, ತಾನ್ ಉಡುಹನ್ ಆದೆನು, ಶಿವ ಶಿವಾ ಇಂದು ಎನ್ನ ಕೈ ಮನಕೆ ಗಡಣಿಸುವ ಸಾರಥಿ ಒಬ್ಬನ ಪಡೆದೆನ್ ಆದೊಡೆ ಕೌರವೇಂದ್ರನ ಪಡೆಗೆ ಹಬ್ಬವ ಮಾಡುವೆನು, ಕೈಗುಣವ ತೋರುವೆನು.
ಪದ-ಅರ್ಥ:
ನುಡಿದು-ಹೇಳಿಕೊಂಡು; ಫಲವೇನು-ಪ್ರಯೋಜನವೇನು; ಬವರ-ಯುದ್ಧ; ಉಡುಹನಾದೆನು-ಅಸಹಾಯಕನಾದೆನು; ಕೈಮನಕೆ-ಅಭಿರುಚಿಗೆ, ಇಷ್ಟಕ್ಕೆ; ಗಡಣಿಸುವ-ಒಪ್ಪಿಗೆಯಾಗುವ, ಹೊಂದಿಕೊಳ್ಳುವ; ಸಾರಥಿ-ರಥವನ್ನು ಓಡಿಸುವವನು; ಪಡೆ-ಸೈನ್ಯ; ಕೈಗುಣ-ಪರಾಕ್ರಮ.
ಇನ್ನು ಹೆಚ್ಚು ಮಾತಾಡಿ ಫಲವೇನು? ನಿನ್ನೆಯ ಯುದ್ಧದಲ್ಲಿ ನನ್ನ ಸಾರಥಿ ಸತ್ತುಹೋದನು. ಹಾಗಾಗಿ ನಾನೀಗ ಅಸಹಾಯಕನಾಗಿದ್ದೇನೆ. ಶಿವ ಶಿವಾ ಏನು ಮಾಡಲಿ? ಇಂದು ನನ್ನ ಅಭಿರುಚಿಗೆ, ನನ್ನ ಇಷ್ಟಕ್ಕೆ ಒಪ್ಪಿಗೆಯಾಗುವ, ನನಗೆ ಹೊಂದಿಕೆಯಾಗುವ ಸಾರಥಿಯೊಬ್ಬನು ಸಿಕ್ಕಿದರೆ ಯುದ್ಧರಂಗದಲ್ಲಿ ನನ್ನ ಕೈಚಳಕವನ್ನು ತೋರಿಸಿ ಕೌರವನ ಸೈನ್ಯಕ್ಕೆ ಹಬ್ಬವನ್ನು ಏರ್ಪಡಿಸುತ್ತೇನೆ ಎಂದನು.
(ದುರ್ಯೋಧನಾದಿಗಳ ವಿಚಾರದಲ್ಲಿ ಹೆಚ್ಚು ಮಾತನಾಡಿ ಪ್ರಯೋಜವಿಲ್ಲ. ಅವರೋ ಶಕ್ತಿ, ಸಾಮರ್ಥ್ಯವಿಲ್ಲದ ಹೇಡಿಗಳು. ಯುದ್ಧರಂಗದಲ್ಲಿ ದುರ್ಯೋಧನಾದಿಗಳನ್ನು ಬಹಳ ಸುಲಭವಾಗಿ ಸೋಲಿಸಿ ಯುದ್ಧವನ್ನು ಗೆಲ್ಲಬಹುದಿತ್ತು. ಮಾತ್ರವಲ್ಲದೆ ದುರ್ಯೋಧನನನ್ನು, ಆತನ ಹೆಂಡಿರನ್ನು ಸೆರೆಹಿಡಿಯಬಹುದಿತ್ತು. ಆದರೆ ಏನು ಮಾಡಲಿ? ನಿನ್ನೆ ನಡೆದ ಯುದ್ಧದಲ್ಲಿ ತನ್ನ ಸಾರಥಿ ಸತ್ತುಹೋದನು. ಈಗ ತಾನು ಯೋಗ್ಯನಾದ ಸಾರಥಿ ಇಲ್ಲದೆ ಅಸಹಾಯಕನಾಗಿದ್ದೇನೆ. ಶಿವ ಶಿವಾ ಏನು ಮಾಡಲಿ? ಎಂದು ಉತ್ತರಕುಮಾರ ಚಿಂತಿತನಾದನು. ಒಂದು ವೇಳೆ ಈಗ ತನ್ನ ಪರಾಕ್ರಮ, ಕೈಚಳಕ, ಯುದ್ಧನೈಪುಣ್ಯಕ್ಕೆ ಸರಿದೂಗುವ, ಯುದ್ಧರಂಗದಲ್ಲಿ ರಥವನ್ನು ಬಹು ಚಾಣಾಕ್ಷತೆಯಿಂದ ಓಡಿಸಬಲ್ಲ ಸಮರ್ಥ ಸಾರಥಿಯೊಬ್ಬ ದೊರಕಿದನೆಂದಾದರೆ ಯುದ್ಧರಂಗದಲ್ಲಿ ಕೌರವನ ಸೇನೆಗೆ ತನ್ನ ವಿವಿಧ ಆಯುಧಗಳಿಂದ ಹಬ್ಬವನ್ನೇ ಏರ್ಪಡಿಸುತ್ತಿದ್ದೆ, ಆತನ ಸೇನೆಯನ್ನು ಸರ್ವನಾಶಮಾಡಿ ಆತನ ಅಕೃತ್ಯಗಳಿಗೆ ಸರಿಯಾದ ಶಾಸ್ತಿಯನ್ನೇ ಮಾಡುತ್ತಿದ್ದೆ ಎಂದು ಉತ್ತರಕುಮಾರನು ತನ್ನ ಪ್ರಿಯತಮೆಯರ ಮುಂದೆ ತನ್ನ ಪೌರುಷವನ್ನು ಪ್ರದರ್ಶಿಸಿದನು.)
ಸಾರಥಿಯ ಶಿವ ಕೊಟ್ಟನಾದಡೆ
ಮಾರಿಗುಬ್ಬಸವಾಗದಂತಕ
ನೂರು ತುಂಬದೆ ದೊಳ್ಳು ನೂಕದೆ ರಣಪಿಶಾಚರಿಗೆ
ದೋರೆಗರುಳಲಿ ದಾನವಿಯರೊಡ
ಲೇರು ಹತ್ತದೆ ಹಬ್ಬವಾಗದೆ
ಭೂರಿ ಬೇತಾಳರಿಗೆ ಹೋಹುದೆ ಬರಿದೆ ರಣವೆಂದ ೧೦
ಪದ್ಯದ ಅನ್ವಯಕ್ರಮ:
ಶಿವ ಸಾರಥಿಯ ಕೊಟ್ಟನಾದಡೆ ಮಾರಿಗೆ ಉಬ್ಬಸ ಆಗದೆ? ಅಂತಕನ ಊರು ತುಂಬದೆ? ರಣ ಪಿಶಾಚರಿಗೆ ದೊಳ್ಳು ನೂಕದೆ? ದೋರೆಗರುಳಲಿ ದಾನವಿಯರ ಒಡಲು ಏರು ಹತ್ತದೆ? ಭೂರಿ ಬೇತಾಳರಿಗೆ ಹಬ್ಬವಾಗದೆ? ರಣವು ಬರಿದೆ ಹೋಹುದೆ? ಎಂದ.
ಪದ-ಅರ್ಥ:
ಕೊಟ್ಟನಾದಡೆ-ಒದಗಿಸಿದರೆ; ಉಬ್ಬಸ-ಸಂಕಟ, ಮೇಲುಸಿರು; ಅಂತಕನೂರು-ಯಮಪುರ; ರಣಪಿಶಾಚರು-ಯುದ್ಧಭೂಮಿಯಲ್ಲಿ ಅಲೆದಾಡುವ ಪಿಶಾಚಿಗಳು; ದೊಳ್ಳು-ಗುಡಾಣದಂತಹ ಹೊಟ್ಟೆ; ದೋರೆಗರುಳು-ಬೆಳೆದ ಕರುಳು, ಬಲಿತ ಕರುಳು; ದಾನವಿಯರು-ರಕ್ಕಸಿಯರು; ಒಡಲೇರು(ಒಡಲ+ಏರು)-ಹೊಟ್ಟೆಯ ಹಸಿವು; ಹತ್ತದೆ-ನಿವಾರಣೆಯಾಗದೆ; ಭೂರಿ ಬೇತಾಳರು-ಯುದ್ಧಭೂಮಿಯಲ್ಲಿ ಅಲೆದಾಡುವ ಭಾರಿ ಗಾತ್ರದ ಬೇತಾಳರು; ಹಬ್ಬವಾಗದೆ-ಸಂತೋಷದ ಔತಣವಾಗದೆ; ಬರಿದೆ ಹೋಹುದೆ-ವ್ಯರ್ಥವಾಗಿ ಹೋಗುವುದೆ.
ಸಾರಥಿಯಿಲ್ಲದ ನನ್ನ ಈ ಅಸಹಾಯ ಪರಿಸ್ಥಿತಿಯಲ್ಲಿ ಶಿವ ತನಗೊಬ್ಬ ಯೋಗ್ಯ ಸಾರಥಿಯನ್ನು ಒದಗಿಸಿದನೆಂದಾದರೆ ಯುದ್ಧರಂಗದಲ್ಲಿ ವೈರಿಸೈನ್ಯವನ್ನು ನಾಶಮಾಡುವುದರ ಮೂಲಕ ಮಾರಿಗೆ ಹಬ್ಬವನ್ನೇ ಏರ್ಪಡಿಸಿ, ಮಾರಿಗೆ ಉಬ್ಬಸ ಉಂಟಾಗುವಂತೆ ಮಾಡುತ್ತಿದ್ದೆ. ಯಮನ ಊರನ್ನೇ ತುಂಬಿಸಿಬಿಡುತ್ತಿದ್ದೆ. ರಣ ಪಿಶಾಚಿಗಳ ಹೊಟ್ಟೆ ಗುಡಾಣವಾಗುವಂತೆ ಮಾಡುತ್ತಿದ್ದೆ. ರಕ್ಕಸಿಯರ ಹೊಟ್ಟೆಯ ಹಸಿವನ್ನು ನಿವಾರಿಸುತ್ತಿದ್ದೆ. ಯುದ್ಧಭೂಮಿಯಲ್ಲಿ ಓಡಾಡುವ ಭಾರಿ ಗಾತ್ರದ ಬೇತಾಳರಿಗೆ ಭೂರಿಭೋಜವನ್ನು ಏರ್ಪಡಿಸುತ್ತಿದ್ದೆ. ಯುದ್ಧವನ್ನು ಸುಮ್ಮನೆ ವ್ಯರ್ಥವಾಗಲು ಬಿಡುತ್ತಿದ್ದೆನೆ? ಎಂದು ಉತ್ತರಕುಮಾರ ತನ್ನ ಒಣಪೌರುಷವನ್ನು ಪ್ರದರ್ಶಿಸಿದನು.
(ಉತ್ತರಕುಮಾರ ಸರಿಯಾದ, ಸಮರ್ಥನಾದ ಸಾರಥಿಯಿಲ್ಲದೆ ಪರಿತಪಿಸತೊಡಗಿದ. ಹಿಂದಿನ ಯುದ್ಧದಲ್ಲಿ ಸಾರಥಿ ಸತ್ತುಹೋದುದರಿಂದ ತಾನು ಅಸಹಾಯನಾಗಿದ್ದೇನೆ ಎಂದು ತನ್ನ ಅಸಹಾಯತನವನ್ನು ತೋಡಿಕೊಳ್ಳತೊಡಗಿದ. ಇಂತಹ ಪರಿಸ್ಥಿತಿಯಲ್ಲಿ ಶಿವನೇನಾದರೂ ತನಗೊಬ್ಬ ಯೋಗ್ಯ, ಸಮರ್ಥ, ಚಾಣಾಕ್ಷ, ಯುದ್ಧರಂಗದ ಸಮಸ್ತವನ್ನು ಬಲ್ಲ ಸಾರಥಿಯೊಬ್ಬನನ್ನು ಒದಗಿಸಿದನೆಂದಾದರೆ ಇಂದಿನ ಯುದ್ಧವನ್ನು ಸುಲಭದಲ್ಲಿ ಗೆದ್ದು ಹತ್ತಾರು ರೀತಿಗಳಲ್ಲಿ ಹತ್ತಾರು ಮಂದಿಗೆ ಹಬ್ಬವನ್ನು ಉಂಟುಮಾಡುತ್ತಿದ್ದೆ ಎಂದುಕೊಂಡನು. ಯುದ್ಧರಂಗದಲ್ಲಿ ಮಾರಿಯು ರಕ್ತವನ್ನು ಕುಡಿದಷ್ಟೂ ಹರಿಸಿ ಆಕೆಗೆ ಉಬ್ಬಸವನ್ನು ಉಂಟಾಗುವಂತೆ ಮಾಡುತ್ತಿದ್ದೆ. ದುರ್ಯೋಧನನ ಸೈನಿಕರೆಲ್ಲರನ್ನೂ ಕೊಂದು ಯಮಪುರವೇ ತುಂಬಿತುಳುಕುವಂತೆ ಮಾಡುತ್ತಿದ್ದೆ. ಯುದ್ಧರಂಗದಲ್ಲಿ ಸದಾ ಓಡಾಡಿಕೊಂಡು ಹೊಟ್ಟೆತುಂಬಿಸಿಕೊಳ್ಳುವ ರಣಪಿಶಾಚಿಗಳಿಗೆ ತಿಂದಷ್ಟೂ ಹೆಣಗಳನ್ನು ಉರುಳಿಸಿ ಅವರ ಹೊಟ್ಟೆಯನ್ನು ಗುಡಾಣವಾಗುವಂತೆ ಮಾಡುತ್ತಿದ್ದೆ. ವೈರಿಗಳನ್ನು ಕೊಂದು ಅವರ ಬೆಳೆದ ಕರುಳುಗಳನ್ನು ಚೆಲ್ಲಿ ಯುದ್ಧಭೂಮಿಯಲ್ಲಿ ಓಡಾಡುವ ರಕ್ಕಸಿಯರ ಹೊಟ್ಟೆಯ ಹಸಿವನ್ನು ನಿವಾರಿಸಿಬಿಡುತ್ತಿದ್ದೆ. ಯುದ್ಧಭೂಮಿಯಲ್ಲಿ ಓಡಾಡುತ್ತ ಹೆಣಗಳನ್ನು ಮುಕ್ಕುವ ಭಾರಿ ಗಾತ್ರದ ಬೇತಾಳರಿಗೆ ಹೊಟ್ಟೆತುಂಬುವಷ್ಟು ಉಣಬಡಿಸುತ್ತಿದ್ದೆ. ಇವೆಲ್ಲವುಗಳ ಮೂಲಕ ಯುದ್ಧವನ್ನು ವ್ಯರ್ಥವಾಗಲು ಬಿಡುತ್ತಿರಲಿಲ್ಲ ಎಂದು ಉತ್ತರಕುಮಾರ ಕೋಮಲೆಯರ ಮುಂದೆ ಯುದ್ಧದ ತನ್ನ ಕಾತರತೆಯನ್ನು ಪ್ರದರ್ಶಿಸಿದನು.)
ಎಲೆ ಬೃಹನ್ನಳೆ ತೆತ್ತುದೆನಗ
ಗ್ಗಳೆಯರೊಳು ವಿಗ್ರಹವು ಸಾರಥಿ
ಯಳಿದನೆನ್ನವ ನೀನು ಸಾರಥಿಯಾಗಿ ಸಮರದಲಿ
ಉಳುಹ ಬೇಹುದು ನೀ ಸಮರ್ಥನು
ಫಲುಗುಣನ ಸಾರಥಿಯಲೈ ನೀ
ನೊಲಿದು ಮೆಚ್ಚಲು ಕಾದಿ ತೋರುವೆನಹಿತ ಸೇನೆಯಲಿ ೧೧
ಪದ್ಯದ ಅನ್ವಯಕ್ರಮ:
ಎಲೆ ಬೃಹನ್ನಳೆ, ಎನಗೆ ಅಗ್ಗಳೆಯರೊಳು ವಿಗ್ರಹವು ತೆತ್ತುದು, ಸಾರಥಿ ಅಳಿದನ್, ನೀನು ಎನ್ನವ, ಸಾರಥಿಯಾಗಿ ಉಳುಹಬೇಹುದು, ನೀ ಸಮರ್ಥನು, ಫಲುಗುಣನ ಸಾರಥಿಯಲೈ, ನೀನ್ ಒಲಿದು ಮೆಚ್ಚಲು ಅಹಿತ ಸೇನೆಯಲಿ ಕಾದಿ ತೋರುವೆನ್.
ಪದ-ಅರ್ಥ:
ಬೃಹನ್ನಳೆ-ಅರ್ಜುನ(ಅಜ್ಞಾತವಾಸದ ಸಮಯದಲ್ಲಿ ಅರ್ಜುನನ ಹೆಸರು); ತೆತ್ತುದು-ಸಂಭವಿಸಿದೆ; ಅಗ್ಗಳೆಯರು-ಪರಾಕ್ರಮಶಾಲಿಗಳು; ಎನಗೆ-ನನಗೆ; ವಿಗ್ರಹ-ಯುದ್ಧ; ಅಳಿದನ್-ಸತ್ತುಹೋದನು; ಸಮರ-ಯುದ್ಧ; ಉಳುಹಬೇಹುದು-ಉಳಿಸಿಕೊಳ್ಳಬೇಕು; ಫಲುಗುಣ-ಅರ್ಜುನ; ಕಾದಿ-ಹೋರಾಡಿ; ಅಹಿತ-ಹಿತನಲ್ಲದವನು, ವೈರಿ.
ಎಲೆ ಬೃಹನ್ನಳೆಯೇ ನನಗೆ ಇಂದು ಪರಾಕ್ರಮಶಾಲಿಗಳೊಂದಿಗೆ ಯುದ್ಧವು ನಿರ್ಧಾರವಾಗಿದೆ. ನನ್ನ ಸಾರಥಿ ನಿನ್ನೆಯ ಯುದ್ಧದಲ್ಲಿ ಸತ್ತುಹೋದನು. ಸಾರಥಿಯಿಲ್ಲದೆ ಅಸಹಾಯಕನಾಗಿದ್ದೇನೆ. ನೀನು ನಮ್ಮವನೆ. ಇಂದಿನ ಯುದ್ಧದಲ್ಲಿ ಸಾರಥಿಯಾಗಿ ನನ್ನನ್ನು ಉಳಿಸಬೇಕು. ಹಿಂದೆ ನೀನು ಹೇಗೂ ಅರ್ಜುನನ ಸಾರಥಿಯಾಗಿದ್ದವನು. ನೀನು ನನ್ನಲ್ಲಿ ವಿಶ್ವಾಸವಿರಿಸಿಕೊಂಡು ನನ್ನ ರಥಕ್ಕೆ ಸಾರಥಿಯಾದರೆ ಯುದ್ಧದಲ್ಲಿ ವೈರಿಗಳನ್ನು ಸದೆಬಡಿದು ಯುದ್ಧವನ್ನು ಗೆದ್ದುಬಿಡುತ್ತೇನೆ ಎಂದನು.
(ಬೃಹನ್ನಳೆಯೇ , ದುರ್ಯೋಧನ ಈಗ ನಮ್ಮ ನಗರವನ್ನು ಮುತ್ತಿಗೆ ಹಾಕಿದ್ದಾನೆ. ನಮ್ಮ ಗೋವುಗಳನ್ನು ಅಪಹರಿಸಿದ್ದಾನೆ, ನಮ್ಮ ಗೋಪಾಲಕರನ್ನು ಅವಮಾನಪಡಿಸಿದ್ದಾನೆ. ತಾನು ಇದಕ್ಕೆ ತಕ್ಕ ಪ್ರತೀಕಾರವನ್ನು ಕೈಗೊಳ್ಳಬೇಕಾಗಿದೆ. ಆದರೇನು ಮಾಡೋಣ? ನಿನ್ನೆ ನಡೆದ ಯುದ್ಧದಲ್ಲಿ ನನ್ನ ಸಾರಥಿ ಸತ್ತುಹೋಗಿರುವುದರಿಂದ ಸಮರ್ಥ ಸಾರಥಿಯಿಲ್ಲದ ತಾನು ಅಸಹಾಯಕನಾಗಿದ್ದೇನೆ. ಈಗ ನೀನು ನನಗೆ ಸಾರಥಿಯಾಗಿ ನನ್ನ ಘನತೆಯನ್ನು, ಸ್ಥಾನಮಾನಗಳನ್ನು ಉಳಿಸಿಕೊಡಬೇಕು. ನೀನು ಹೇಗೂ ಈ ಹಿಂದೆ ಅರ್ಜುನನಿಗೆ ಸಾರಥಿಯಾಗಿದ್ದವನು. ಆತನೊಂದಿಗೆ ಹಲವಾರು ಯುದ್ಧಗಳಲ್ಲಿ ಪಾಲ್ಗೊಂಡವನು. ನೀನು ಇಂದಿನ ಯುದ್ಧದಲ್ಲಿ ನನಗೆ ಸಾರಥಿಯಾದರೆ ಯುದ್ಧರಂಗದಲ್ಲಿ ವೈರಿಗಳಾದ ದುರ್ಯೋಧನಾದಿಗಳನ್ನು, ಅವರ ಸೇನೆಯನ್ನು ಸದೆಬಡಿದು ಅಪೂರ್ವವಾದ ಜಯವನ್ನು ತಂದುಕೊಳ್ಳುತ್ತೇನೆ ಎಂದು ತ್ತರಕುಮಾರನು ಬೃಹನ್ನಳೆಯಲ್ಲಿ ವಿನಂತಿಸಿಕೊಂಡನು.)
(೨ನೆಯ ಭಾಗದಲ್ಲಿ ಮುಂದುವರಿದಿದೆ)