ಸಾಹಿತ್ಯಾನುಸಂಧಾನ

heading1

ಉತ್ತರ ಕುಮಾರನ ಪೌರುಷ- ಕುಮಾರವ್ಯಾಸ-ಭಾಗ-೨

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. (ಎನ್ ಇ ಪಿ) ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ) (ಭಾಗ-೨)

ಭರತ ವಿದ್ಯಾ ವಿಷಯದಲಿ ಪರಿ

ಚರಿಯತನ ನಮಗಲ್ಲದೀ ಸಂ

ಗರದ ಸಾರಥಿತನವ ಮರೆದೆವು ಹಲವು ಕಾಲದಲಿ

ಅರಿಭಟರು ಭೀಷ್ಮಾದಿಗಳು ನಿಲ

ಲರಿದು ಸಾರಥಿತನದ ಕೈ ಮನ

ಬರಡರಿಗೆ ದೊರೆಕೊಂಬುದೇ ರಣ ಸೂರೆಯಲ್ಲೆಂದ  ೧೨

ಪದ್ಯದ ಅನ್ವಯಕ್ರಮ:

ನಮಗೆ ಭರತ ವಿದ್ಯಾ ವಿಷಯದಲಿ ಪರಿಚಯತನ ಅಲ್ಲದೆ, ಹಲವು ಕಾಲದಲಿ ಈ ಸಂಗರದ ಸಾರಥಿತನವ ಮರೆದೆವು, ಭೀಷ್ಮಾದಿಗಳು ಅರಿಭಟರು, ನಿಲಲ್ ಅರಿದು, ಸಾರಥಿತನದ ಕೈ ಮನಬರಡರಿಗೆ ದೊರೆಕೊಂಬುದೇ? ರಣ ಸೂರೆಯಲ್ಲ ಎಂದ.

ಪದ-ಅರ್ಥ:

ಭರತವಿದ್ಯಾ ವಿಷಯ-ಭರತನಾಟ್ಯ ವಿಷಯ;  ಪರಿಚರಿಯತನ-ಪರಿಜ್ಞಾನ, ತಿಳಿವಳಿಕೆ;  ಹಲವು ಕಾಲದಲಿ-ತುಂಬಾ ಸಮಯದಿಂದ;  ಸಂಗರ-ಯುದ್ಧ;  ಸಾರಥಿತನ-ರಥವನ್ನು ಓಡಿಸುವ ನಿಪುಣತೆ;  ಮರೆದೆವು-ಮರೆತುಬಿಟ್ಟೆವು;  ಅರಿಭಟರು-ವೈರಿಸೇನಾನಿಗಳು;  ನಿಲಲ್-ಎದುರಿಸಲು;  ಅರಿದು-ಅಸಾಧ್ಯ;  ಮನಬರಡರು-ಮಾನಸಿಕವಾಗಿ ಕುಂದಿರುವವರು, ಧೈರ್ಯವಿಲ್ಲದವರು;  ದೊರೆಕೊಂಬುದೇ-ಸಾಧ್ಯವಾಗುವುದೇ, ದೊರೆಯುವುದೇ;  ರಣಸೂರೆ-ಯುದ್ಧರಂಗದಲ್ಲಿನ ಗೆಲುವು.

            ಈಗ ನನಗೆ ಭರತವಿದ್ಯಾ(ಭರತನಾಟ್ಯ) ವಿಷಯದಲ್ಲಿ ಮಾತ್ರ ಪರಿಚಯ, ಪ್ರಾವೀಣ್ಯವಿದೆ. ಹಲವು ವರ್ಷಗಳ  ಹಿಂದೆ ಅರ್ಜುನನ ಸಾರಥಿಯಾಗಿದ್ದೆ ನಿಜ. ಆದರೆ ಈಗ ಅದನ್ನು ಬಿಟ್ಟುಬಿಟ್ಟು ಹಲವು ವರ್ಷಗಳಾಗಿರುವುದರಿಂದ ಸಾರಥಿತನ ಮರೆತುಹೋಗಿದೆ. ಮೇಲಾಗಿ ಈಗ ನಮಗೆ ವೈರಿಗಳಾಗಿರುವವರು ಪರಾಕ್ರಮಿಗಳಾದ ಭೀಷ್ಮಾದಿಗಳು. ಅವರ ಮುಂದೆ ಯುದ್ಧ ಸಾಧ್ಯವೆ? ನನ್ನಿಂದ ಸಾರಥ್ಯ ಸಾಧ್ಯವೆ? ನನ್ನಂತಹ ದೈಹಿಕವಾಗಿ, ಮಾನಸಿಕವಾಗಿ ಕುಂದಿರುವವರಿಗೆ ಸಾರಥಿತನ ಸಾಧ್ಯವೆ? ನಮ್ಮಿಂದ ಯುದ್ಧದಲ್ಲಿ ಗೆಲುವು ಸಾಧಿಸುವುದು ಸಾಧ್ಯವೆ? ಎಂದು ಬೃಹನ್ನಳೆ ಉತ್ತರಕುಮಾರನಲ್ಲಿ ಪ್ರಶ್ನಿಸಿದನು.

(ಉತ್ತರಕುಮಾರನ ವಿನಂತಿಗೆ ಬೃಹನ್ನಳೆ ಬೇಕೆಂದೇ ತನ್ನ ಅಸಹಾಯಕತೆಯನು ಪ್ರದರ್ಶಿಸುತ್ತಾನೆ. ತಾನಾದರೋ ಕೇವಲ ಭರತನಾಟ್ಯ ವಿಚಾರದಲ್ಲಿ ನಿಸ್ಸೀಮನಾಗಿದ್ದೇನೆ. ಹಲವು ವರ್ಷಗಳಿಂದ ಅದನ್ನೇ ನಡೆಸಿಕೊಂಡು ಬಂದಿರುವುದರಿಂದ ಅದರಲ್ಲಿಯೇ ತನಗೆ ಪ್ರಾವೀಣ್ಯ ಹಾಗೂ ಪರಿಚಯ. ಅದನ್ನು ಬಿಟ್ಟು ಬೇರೆ ವಿಷಯದಲ್ಲಿ ಏನು ಸಾಧಿಸಬಲ್ಲೆ? ಹಿಂದೆ ಅರ್ಜುನನಿಗೆ ತಾನು ಸಾರಥಿಯಾಗಿದ್ದೆ, ಆತನೊಂದಿಗೆ ಹಲವಾರು ಯುದ್ಧಗಳಲ್ಲಿ ಪಾಲ್ಗೊಂಡಿದ್ದೆ ನಿಜ. ಆದರೆ ಅವರು ವನವಾಸಿಗಳಾಗಿ ಎಷ್ಟು ವರ್ಷಗಳಾದವು! ಈಗ ಹಲವು ವರ್ಷಗಳಾಗಿರುವುದರಿಂದ ನನಗೆ ಸಾರಥಿತನ ಮರೆತುಹೋಗಿದೆ. ಹೀಗಿರುವಾಗ ನಾನೀಗ ಹೇಗೆ ಸಾರಥ್ಯವನ್ನು ವಹಿಸಿಕೊಳ್ಳಲಿ? ದೈಹಿಕವಾಗಿಯೂ ಮಾನಸಿಕವಾಗಿಯೂ ನಾನು ಕುಗ್ಗಿಹೋಗಿದ್ದೇನೆ. ಯುದ್ಧರಂಗದಲ್ಲಿ ವೈರಿಗಳಿಂದ ತಪ್ಪಿಸಿಕೊಳ್ಳುವ, ರಥಿಕನನ್ನು ರಕ್ಷಿಸುವ  ಚಾಲಾಕಿತನ, ಹುರುಪು, ಹುಮ್ಮಸ್ಸು ಈಗಿಲ್ಲ. ಜೊತೆಗೆ ಪ್ರಾಯವೂ ಆಗಿದೆ. ಹೀಗಿರುವಾಗ ನನ್ನನ್ನು ಸಾರಥಿಯನ್ನಾಗಿ ನೀನು ನಿಯೋಜಿಸಿಕೊಂಡರೆ ನಿನ್ನಿಂದ ಯುದ್ಧವನ್ನು ಗೆಲ್ಲುವುದಕ್ಕೆ ಸಾಧ್ಯವೆ? ಮೇಲಾಗಿ ಯುದ್ಧರಂಗದಲ್ಲಿ ನಮ್ಮ ಎದುರಾಳಿಗಳು ಸಾಮಾನ್ಯರಲ್ಲ. ಅತ್ಯಂತ ಪ್ರರಾಕ್ರಮಶಾಲಿಗಳು. ಅವರನ್ನು ಗೆದ್ದು ಯುದ್ಧವನ್ನು ಸೂರೆಮಾಡುವುದು ಸಾಧ್ಯವೆ? ಎಂದು ಬೃಹನ್ನಳೆ ಉತ್ತರಕುಮಾರನನ್ನು ಪ್ರಶ್ನಿಸಿದನು.)

 

ಆನಿರಲು ಭೀಷ್ಮಾದಿಗಳು ನಿನ

ಗೇನ ಮಾಡಲು ಬಲ್ಲರಳುಕದೆ

ನೀನು ನಿಲು ಸಾಕೊಂದು ನಿಮಿಷಕೆ ಗೆಲುವೆನವರುಗಳ

ತಾನದಾರೆಂದರಿಯಲಾ ಗುರು

ಸೂನು ಕರ್ಣ ದ್ರೋಣರೆಂಬವ

ರಾನರಿಯದವರಲ್ಲ ಸಾರಥಿಯಾಗು ಸಾಕೆಂದ   ೧೩

ಪದ್ಯದ ಅನ್ವಯಕ್ರಮ:

ಆನಿರಲು ಭೀಷ್ಮಾದಿಗಳು ನಿನಗೆ ಏನ ಮಾಡಲು ಬಲ್ಲರು? ನೀನು ಅಳುಕದೆ ನಿಲು ಸಾಕು. ಒಂದು ನಿಮಿಷಕೆ ಅವರುಗಳ ಗೆಲುವೆನ್, ತಾನ್ ಅದಾರೆಂದು ಅರಿಯಲಾ, ಗುರುಸೂನು, ಕರ್ಣ, ದ್ರೋಣರ್ ಎಂಬರ್ ಆನ್ ಅರಿಯದವರಲ್ಲ, ಸಾರಥಿಯಾಗು ಸಾಕೆಂದ.

ಪದ-ಅರ್ಥ:

ಆನಿರಲು-ನಾನಿರುವಾಗ, ಭೀಷ್ಮಾದಿಗಳು-ಭೀಷ್ಮ ಮೊದಲಾದವರು;  ಬಲ್ಲರ್-ಸಾಧ್ಯ;  ಅಳುಕದೆ-ಹೆದರದೆ;  ನಿಲು-ನಿಂತಿರು;  ತಾನದಾರೆಂದರಿ(ತಾನ್+ಅದು+ಆರ್+ಎಂದು+ಅರಿ)-ತಾನು ಯಾರು ಎಂದು ತಿಳಿದುಕೊಳ್ಳು;  ಗುರುಸೂನು-ಗುರು ದ್ರೋಣರ ಮಗ (ಅಶ್ವತ್ಥಾಮ); ಆನರಿಯದವರಲ್ಲ-ನಾನು ತಿಳಿಯದವರಲ್ಲ. 

            ನನ್ನಂತಹ ಪ್ರರಾಕ್ರಮಿ ಇರುವಾಗ ನೀನು ಭೀಷ್ಮಾದಿಗಳು ನಿನಗೆ ಏನು ತಾನೆ ಮಾಡಲು ಸಾಧ್ಯ? ಸಾರಥಿಯ ಪ್ರಾಣದ ಹೊಣೆ ನನ್ನದು. ನೀನು ಸಾರಥಿಯಾಗು ಸಾಕು. ಕೆಲವೇ ನಿಮಿಷಗಳಲ್ಲಿ ಅವರೆಲ್ಲರನ್ನೂ ಸೋಲಿಸಿ ಗೆಲುವನ್ನು ತಂದುಕೊಳ್ಳುತ್ತೇನೆ. ನಿನಗೆ ನಾನು ಏನು? ಎಂಬುದು ತಿಳಿದಿಲ್ಲ. ಅಶ್ವತ್ಥಾಮ, ಕರ್ಣ, ದ್ರೋಣ ಮೊದಲಾದವರು ನಾನೇನೂ ಅರಿದೇ ಇರುವವರಲ್ಲ. ಅವರ ಎಲ್ಲಾ ವಿಚಾರಗಳನ್ನೂ ನಾನು ಬಲ್ಲೆ. ನೀನು ಸಾರಥಿಯಾಗು ಸಾಕು ಎಂದನು.

(ಯುದ್ಧದ ಬಗ್ಗೆಯಾಗಲೀ ಯುದ್ಧರಂಗದಲ್ಲಿ ಎದುರಾಳಿಗಳಾದ ವೈರಿಗಳ ಬಗ್ಗೆಯಾಗಲೀ ನೀನು ಹೆದರಬೇಕಾದ ಅಗತ್ಯವಿಲ್ಲ. ನನ್ನಂತಹ ಪರಾಕ್ರಮಶಾಲಿಯಾದ ರಥಿಕ, ಯುದ್ಧವಿದ್ಯೆಗಳನ್ನು ಬಲ್ಲ ನಿಷ್ಣಾತನಿರುವಾಗ ಎದುರಾಳಿಗಳಾದ ಭೀಷ್ಮಾದಿಗಳು ನಿನಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ಹಾಗೇ ಮಾಡುವುದಕ್ಕೂ ನಾನು ಬಿಡುವವನಲ್ಲ. ನಿನ್ನ ಪ್ರಾಣ, ಮಾನಾಪಮಾನಗಳ ಹೊಣೆ ನನ್ನದು. ನೀನು ದೃಢಮನಸ್ಸಿನಿಂದ ಸಾರಥಿಯಾಗು ಸಾಕು. ಯುದ್ಧರಂಗದಲ್ಲಿ ಕೆಲವೇ ನಿಮಿಷಗಳಲ್ಲಿ ದುರ್ಯೋಧನಾದಿಗಳನ್ನು ಸದೆಬಡಿದು ಯುದ್ಧವನ್ನು ಗೆದ್ದು ತೋರಿಸುತ್ತೆನೆ. ನಿನಗೂ ನಾನು ಯಾರು? ಎಂತಹ ಪರಾಕ್ರಮಶಾಲಿ? ಎಷ್ಟರಮಟ್ಟಿಗೆ ಯುದ್ಧವಿದ್ಯೆಗಳನ್ನು ಕರಗತಮಾಡಿಕೊಂಡವನು? ಎಂಬುದು ಇನ್ನೂ ತಿಳಿದಿಲ್ಲ. ಅದನ್ನು ತಿಳಿದುಕೊಳ್ಳುವ ಪ್ರಸಂಗವೂ ಇದುವರೆಗೂ ಬಂದಿಲ್ಲ, ಬಿಡು. ಇನ್ನು ಯುದ್ಧದಲ್ಲಿ ಎದುರಾಳಿಗಳಾದ ಭೀಷ್ಮ, ದ್ರೋಣ, ಅಶ್ವತ್ಥಾಮ, ಕರ್ಣ ಮೊದಲಾದವರು ನಾನು ತಿಳಿಯದ ವೀರರೇನೂ ಅಲ್ಲ. ಮಾತ್ರವಲ್ಲ, ನನ್ನ ಪರಾಕ್ರಮದ ಮುಂದೆ ಅವರ ಯಾವ ಆಟವೂ ನಡೆಯಲಾರದು. ನೀನೀಗ ಸಾರಥಿಯಾಗು ಸಾಕೆಂದು ಉತ್ತರಕುಮಾರನು ಬೃಹನ್ನಳೆಯಲ್ಲಿ ವಿನಂತಿಸಿಕೊಂಡನು.)

 

ಮಂಗಳಾರತಿಯೆತ್ತಿದರು ನಿಖಿ

ಳಾಂಗನೆಯರುತ್ತರಗೆ ನಿಜ ಸ

ರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ

ಹೊಂಗೆಲಸಮಯ ಕವಚವನು ಪಾ

ರ್ಥಂಗೆ ಕೊಟ್ಟನು ಜೋಡು ಸೀಸಕ

ದಂಗಿಗಳನಳವಡಿಸಿ ರಾಜ ಕುಮಾರನನುವಾದ   ೧೪

ಪದ್ಯದ ಅನ್ವಯಕ್ರಮ:

ನಿಖಿಳಾಂಗನೆಯರ್ ಉತ್ತರಗೆ ಮಂಗಳಾರತಿ ಎತ್ತಿದರ್, ನಿಜ ಸರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ, ಹೊನ್ ಕೆಲಸಮಯ ಕವಚವನು ಪಾರ್ಥಂಗೆ ಕೊಟ್ಟನು, ರಾಜಕುಮಾರನ್ ಜೋಡು ಸೀಸಕದ ಅಂಗಿಗಳನ್ ಅಳವಡಿಸಿ ಅನುವಾದ.

ಪದ-ಅರ್ಥ:

ಮಂಗಳಾರತಿ-ಶುಭವಾಗಲಿ ಎಂದು ಎತ್ತುವ ಆರತಿ; ನಿಖಿಳ-ಸಮಸ್ತ;  ಅಂಗನೆಯರ್-ಸ್ತ್ರೀಯರು;  ನಿಜ-ತನ್ನ;  ಹೊಂಗೆಲಸಮಯ-ಚಿನ್ನದ ಕುಸುರಿಕೆಲಸಗಳಿಂದ ಕೂಡಿದ;  ಕವಚ-ದೇಹರಕ್ಷಣೆಗೆ ತೊಡುವ ಉಕ್ಕಿನ ಅಂಗಿ;  ಜೋಡು-ಉಕ್ಕಿನ ಅಂಗಿ;  ಸೀಸಕ-ಶಿರಸ್ತ್ರಾಣ;  ಅಳವಡಿಸಿ-ತೊಟ್ಟುಕೊಂಡು;  ಅನುವಾದ-ಸಿದ್ಧನಾದ. 

            ಉತ್ತರಕುಮಾರ ಯುದ್ಧಕ್ಕೆ ಹೊರಟಿರುವುದನ್ನು ನೋಡಿ ಅಂತಃಪುರದ ಸಮಸ್ತ ಅಂಗನೆಯರು ಉತ್ತರಕುಮಾರನಿಗೆ ಮಂಗಳಾರತಿಯನ್ನು ಎತ್ತಿದರು. ಉತ್ತರಕುಮಾರನು ಸರ್ವಾಂಗ ಅಲಂಕೃತನಾಗಿ ಶೋಭಿಸಿದನು. ರಥವನ್ನೇರಿಕೊಂಡು ಹೊನ್ನಿನ ಕುಸುರಿಕೆಲಸಗಳಿಂದ ಶೋಭಿಸುವ ಕವಚವನ್ನು ಅರ್ಜುನನಿಗೆ ಕೊಟ್ಟನು. ತಾನು ಉಕ್ಕಿನ ಅಂಗಿಯನ್ನು ಧರಿಸಿಕೊಂಡು ಹಾಗೂ ಶಿರಸ್ತ್ರಾಣವನ್ನು ತೊಟ್ಟುಕೊಂಡು ಯುದ್ಧಕ್ಕೆ ಸಿದ್ಧನಾದನು.

(ಉತ್ತರಕುಮಾರನಿಗೆ ಸಾರಥಿಯಾಗಲು ಬೃಹನ್ನಳೆ ಒಪ್ಪಿಕೊಂಡನು. ಇದರಿಂದ ಉತ್ತರಕುಮಾರನಿಗೆ ಅಪರಿಮಿತವಾದ ಸಂತೋಷ ಉಂಟಾಯಿತು. ಯುದ್ಧದಲ್ಲಿ ದುರ್ಯೋಧನಾದಿಗಳನ್ನು ಸುಲಭದಲ್ಲಿ ಗೆಲ್ಲಬಹುದೆಂಬ ಕಾತರತೆ ಮೂಡತೊಡಗಿತು. ಯುದ್ಧಕ್ಕೆ ಹೊರಟುನಿಂತ ಉತ್ತರನನ್ನು ಅರಮನೆಯ ಹೆಂಗಳೆಯರು, ಉತ್ತರನ ಪ್ರಿಯತಮೆಯರು ಮಂಗಳಾರತಿಯನ್ನೆತ್ತಿ ಶುಭವನ್ನು ಹಾರೈಸಿದರು. ವಿವಿಧ ಪೋಷಾಕುಗಳಲ್ಲಿ ಉತ್ತರಕುಮಾರ ಶೋಭಿಸತೊಡಗಿದನು. ಬಹಳ ಸಂಭ್ರಮದಿಂದ, ಉತ್ಸಾಹದಿಂದ ಬಂದು ರಥವನ್ನೇರಿ ತಾನು ಉಕ್ಕಿನ ಅಂಗಿಯನ್ನು ಅಳವಡಿಸಿಕೊಂಡನು. ತಲೆಗೆ ಶಿರಸ್ತ್ರಾಣವನ್ನು ಧರಿಸಿಕೊಂಡು ತನ್ನ ದೇಹರಕ್ಷಣೆಗೆ ಸಕಲ ವ್ಯವಸ್ಥೆಯನ್ನು ಮಾಡಿಕೊಂಡನು. ತನ್ನ ಸಾರಥಿಯಾಗಿರುವ ಬೃಹನ್ನಳೆಗೂ ಧರಿಸಿಕೊಳ್ಳುವುದಕ್ಕೆ ಚಿನ್ನದ ಕುಸುರಿಕೆಲಸದಿಂದ ಶೋಭಿಸುವ ಕವಚವನ್ನು ಕೊಟ್ಟು ಧರಿಸಿಕೊಳ್ಳಲು ಹೇಳಿದನು. ಎಲ್ಲಾ ಮುಂಜಾಗ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡು ಹೊರಡಲು ಅನುವಾದ ಉತ್ತರಕುಮಾರನಲ್ಲಿ ಯುದ್ಧೋತ್ಸಾಹ ಎದ್ದು ಕಾಣುತ್ತಿತ್ತು.)

 

ನರನು ತಲೆ ಕೆಳಗಾಗಿ ಕವಚವ

ಸರಿವುತಿರೆ ಘೊಳ್ಳೆಂದು ಕೈ ಹೊ

ಯ್ದರಸಿಯರು ನಗೆ ನಾಚಿದಂತಿರೆ ಪಾರ್ಥ ತಲೆವಾಗಿ

ತಿರುಗಿ ಮೇಲ್ಮುಖವಾಗಿ ತೊಡಲು

ತ್ತರೆ ಬಳಿಕ ನಸುನಗಲು ಸಾರಥಿ

ಯರಿಯ ತಪ್ಪೇನೆನುತಲುತ್ತರ ತಾನೆ ತೊಡಿಸಿದನು  ೧೫

ಪದ್ಯದ ಅನ್ವಯಕ್ರಮ:

ನರನು ಕವಚವ ತಲೆ ಕೆಳಗಾಗಿ ಸರಿವುತಿರೆ ಘೊಳ್ಳೆಂದು ಕೈ ಹೊಯ್ದು ಅರಸಿಯರು ನಗೆ ಚಾಚಿದಂತೆ ಇರೆ ಪಾರ್ಥ ತಲೆ ಬಾಗಿ ತಿರುಗಿ ಮೇಲ್ ಮುಖವಾಗಿ ತೊಡಲು ಬಳಿಕ ಉತ್ತರೆ ನಸುನಗಲು, ಸಾರಥಿ ಅರಿಯ ತಪ್ಪೇನು ಎನುತಲಿ ಉತ್ತರ ತಾನೆ ತೊಡಿಸಿದನು.

ಪದ-ಅರ್ಥ:

ನರನು-ಅರ್ಜುನನು;  ಕವಚ-ಉಕ್ಕಿನ ಅಂಗಿ;  ಸರಿವುತಿರೆ-ತೊಡುತ್ತಿರಲು;  ಕೈಹೊಯ್ದು-ಚಪ್ಪಾಳೆ ತಟ್ಟಿ;  ಅರಸಿಯರು-ರಾಜಪರಿವಾರದ ಮಹಿಳೆಯರು;  ತಿರುಗಿ-ಮರಳಿ, ಪುನಃ;  ಅರಿಯ-ತಿಳಿದಿಲ್ಲ.

            ಅರ್ಜುನನು ಕವಚವನ್ನು ತಲೆಕೆಳಗಾಗಿ ತೊಡಲು ಪ್ರಯತ್ನಿಸಿದಾಗ ಉತ್ತರಕುಮಾರನ ಪ್ರಿಯತಮೆಯರು, ಅಂತಃಪುರದ ಹೆಂಗಳೆಯರು ಚಪ್ಪಾಳೆ ತಟ್ಟಿಕೊಂಡು ಘೊಳ್ಳೆಂದು ನಗತೊಡಗಿದರು. ಅರಸಿಯರ, ಹೆಂಗಳೆಯರ ಈ ನಗು, ಚಪ್ಪಾಳೆ ಅರ್ಜುನನಿಗೆ ಕಸಿವಿಸಿಯನ್ನು ಉಂಟುಮಾಡಿದಾಗ ಆತ ಮುಜುಗರಪಟ್ಟುಕೊಂಡವನಂತೆ ತಲೆಬಾಗಿಸಿದನು. ಮತ್ತೆ ಕವಚವನ್ನು ಮೇಲ್ಮುಖವಾಗಿ ತೊಡಲು ಪ್ರಯತ್ನಿಸಿದಾಗ ಉತ್ತರಕುಮಾರನ ತಂಗಿಯಾದ ಉತ್ತರೆಯು ಅರ್ಜುನನ ಅಜ್ಞಾನವನ್ನು  ನೋಡಿ ಮೆಲ್ಲನೆ ನಗತೊಡಗಿದಳು. ಅಷ್ಟರಲ್ಲಿಉತ್ತರಕುಮಾರನು ಸಾರಥಿ ಕವಚವನ್ನು ತೊಡುವುದನ್ನು ಮರೆತಿದ್ದಾನೆ, ಅದರಲ್ಲಿ ತಪ್ಪೇನು? ಎಂದು ತಾನೇ ಮುಂದೆ ಬಂದು ಸಾರಥಿಯಾದ ಅರ್ಜುನನಿಗೆ ಕವಚವನ್ನು ತೊಡಿಸಿದನು.

(ತಾನೇ ಅರ್ಜುನ ಎಂದಾಗಲೀ, ಯುದ್ಧವಿದ್ಯೆಯಲ್ಲಿ ನಿಪುಣನೆಂದಾಗಲೀ ಉತ್ತರನಿಗೆ ಅಥವಾ ಆತನ ಪರಿವಾರದವರಿಗೆ ತಿಳಿಯಬಾರದು ಎಂಬುದು ಅರ್ಜುನನ ನಿಲುವು. ಹಾಗಾಗಿ ಕವಚವನ್ನು ತೊಡುವಾಗ ಬೇಕೆಂದೇ ತಲೆಕೆಳಗಾಗಿ ತೊಡಲು ಪ್ರಯತ್ನಿಸುತ್ತಾನೆ. ಬೃಹನ್ನಳೆಯ ಈ ಅಜ್ಞಾನವನ್ನು ನೋಡಿ ಉತ್ತರಕುಮಾರನ ಪ್ರಿಯತಮೆಯರು, ಅಂತಃಪುರದ ಹೆಂಗಳೆಯರು ಕೈತಟ್ಟಿ  ಘೊಳ್ಳೆಂದು ನಕ್ಕಾಗ ಮುಜುಗರಪಟ್ಟು ನಾಚಿಕೊಂಡಂತೆ ತಲೆತಗ್ಗಿಸುವುದು, ಮತ್ತೆ ಮೇಲ್ಮುಖವಾಗಿ ತೊಡಲು ಪ್ರಯತ್ನಿಸುವುದು ಎಲ್ಲವೂ ಉತ್ತರಕುಮಾರನಿಗೆ ತಾನು ಸರಿಸಮಾನನಾದ ಸಾರಥಿಯಲ್ಲ ಎಂಬುದನ್ನು ತೋರ್ಪಡಿಸಿಕೊಳ್ಳುವುದಕ್ಕೆ ಮಾತ್ರ. ಉತ್ತರಕುಮಾರನ ಉತ್ಸಾಹಕ್ಕೆ ತಣ್ಣೀರೆರಚಿ ಆತನನ್ನು ಯುದ್ಧವಿಮುಖನನ್ನಾಗಿ ಮಾಡುವುದು ಅರ್ಜುನನಿಗೆ ಬೇಕಿಲ್ಲ. ಉತ್ತರಕುಮಾರನ ಅಂತಃಪುರದಲ್ಲಿನ ಪ್ರತಾಪವನ್ನು ಯುದ್ಧರಂಗದಲ್ಲೂ ನೋಡಬೇಕೆನ್ನುವ ಹಂಬಲ ಅರ್ಜುನನದು. ಹಾಗಾಗಿಯೇ ಆತ ಏನೂ ಅರಿಯದವನಂತೆ, ತನಗೆ ಸಾರಥಿತನದ ವಿದ್ಯೆ ಮರೆತುಹೋದಂತೆ ತೋರ್ಪಡಿಸುತ್ತಾನೆ. ಕೊನೆಗೂ ಸಾರಥಿ ಪಾಪ, ಏನೂ ಅರಿತಿಲ್ಲ ಎಂದುಕೊಂಡು ಉತ್ತರಕುಮಾರ ತಾನೇ ಕವಚವನ್ನು ತೊಡಿಸುವುದಕ್ಕೆ ಪ್ರಯತ್ನಿಸುತ್ತಾನೆ. ಉತ್ತರಕುಮಾರನಲ್ಲಿನ ಹೇಡಿತನದ ಪೌರುಷವನ್ನು ಅರ್ಜುನನೂ ಮೆಚ್ಚಿಕೊಂಡಂತಿದೆ.)

 

ನಸುನಗುತ ಕೈಕೊಂಡನರ್ಜುನ

ನೆಸಗಿದನು ರಥವನು ಸಮೀರನ

ಮಿಸುಕಲೀಯದೆ ಮುಂದೆ ಮಿಕ್ಕವು ವಿಗಡ ವಾಜಿಗಳು

ಹೊಸ ಪರಿಯ ಸಾರಥಿಯಲಾ ನಮ

ಗಸದಳವು ಸಂಗಾತ ಬರಲೆಂ

ದುಸುರದುಳಿದುದು ಹಿಂದೆ ಪುರದಲಿ ಚಾತುರಂಗ ಬಲ  ೧೬

ಪದ್ಯದ ಅನ್ವಯಕ್ರಮ:

ನಸುನಗುತ ಕೈಕೊಂಡು ಅರ್ಜುನನ್ ರಥವನು ಎಸಗಿದನು, ಸಮೀರನ ಮಿಸುಕಲ್ ಈಯದೆ ಮುಂದೆ ವಿಗಡ ವಾಜಿಗಳು ಮಿಕ್ಕವು, ಹೊಸ ಪರಿಯ ಸಾರಥಿಯಲಾ, ಸಂಗಾತ ಬರಲು ನಮಗೆ ಅಸದಳವು ಎಂದು ಉಸುರದೆ ಚಾತುರಂಗ ಬಲ ಹಿಂದೆ ಪುರದಲಿ ಉಳಿದುದು.

ಪದ-ಅರ್ಥ:

ಕೈಕೊಂಡನು-ಒಪ್ಪಿಕೊಂಡನು;  ಎಸಗಿದನು-ಓಡಿಸಿದನು;  ಸಮೀರ-ವಾಯು;  ಮಿಸುಕಲೀಯದೆ-ಚಲಿಸಲು ಸಾಧ್ಯವಾಗದೆ;  ಮಿಕ್ಕವು-ದಾಟಿದವು; ವಿಗಡ-ಉದ್ಧಟ;  ವಾಜಿಗಳು-ಕುದುರೆಗಳು;  ಅಸದಳ-ಅಸಾಧ್ಯ;  ಸಂಗಾತ-ಜೊತೆಯಲ್ಲಿ;  ಉಸುರದೆ-ಮಾತಾಡಲಾರದೆ;  ಚಾತುರಂಗಬಲ-ರಥ,
ಆನೆ, ಕುದುರೆ ಹಾಗೂ ಕಾಲಾಳುಗಳಿಂದ ಕೂಡಿದ ಸೈನ್ಯ.

            ಅರ್ಜುನನು ನಸುನಗುತ್ತ ಉತ್ತರಕುಮಾರನು ತನಗೆ ತೊಡಿಸಿದ ಕವಚ, ಶಿರಸ್ತ್ರಾಣಗಳನ್ನು ಸಂತೋಷದಿಂದ ಸ್ವೀಕರಿಸಿ, ರಥದಲ್ಲಿ ಸಾರಥಿಯಾಗಿ ರಥವನ್ನು ಓಡಿಸತೊಡಗಿದನು. ಗಾಳಿಯನ್ನೂ ಅಲುಗಾಡಲು ಅವಕಾಶಕೊಡದ ರೀತಿಯಲ್ಲಿ ಉದ್ಧಟವಾದ ಕುದುರೆಗಳು ಗಾಳಿಯಲ್ಲಿ ಓಡಿದಂತೆ ಓಡತೊಡಗಿದವು. ಇವನು ಹೊಸ ರೀತಿಯ, ಹೊಸ ಪರಿಣತಿಯನ್ನು ಪಡೆದ ಸಾರಥಿಯಾಗಿದ್ದಾನೆ ಎಂದುಕೊಂಡು ಈತನ ರಥವನ್ನು ಹಿಂಬಾಲಿಸಿಕೊಂಡು ಬರಲು ಸಾಧ್ಯವಿಲ್ಲ ಎಂದುಕೊಂಡು ಉತ್ತರಕುಮಾರನ ಚತುರಂಗ ಸೇನೆ ಪಟ್ಟಣದಲ್ಲಿಯೇ ಉಳಿದುಬಿಟ್ಟಿತು.

(ಅರ್ಜುನ ತನಗೆ ಕವಚ, ಶಿರಸ್ತ್ರಾಣಗಳನ್ನು ತೊಡಲು ತಿಳಿದಿಲ್ಲ ಎಂದು ಬೇಕೆಂದೇ ನಾಟಕವಾಡಿ, ಉತ್ತರಕುಮಾರನಿಂದ ಸಂತೋಷದಿಂದ ಅವೆಲ್ಲವನ್ನೂ ತೊಡಿಸಿಕೊಂಡು ಸಂಭ್ರಮಿಸಿದನು. ರಥವನ್ನೇರಿ ಸಾರಥಿಯ ಸ್ಥಾನದಲ್ಲಿ ಕುಳಿತುಕೊಂಡು ರಥವನ್ನು ಓಡಿಸತೊಡಗಿದನು. ಮುಂದೋಡುತ್ತಿದ್ದಂತೆಯೇ ರಥ ವೇಗವನ್ನು ಪಡೆದುಕೊಳ್ಳತೊಡಗಿತು. ಕುದುರೆಗಳು ಉದ್ಧಟತನವನ್ನು ಮೈಗೂಡಿಸಿಕೊಂಡಂತೆ ಆವೇಶಭರಿತವಾಗಿ ನಾಗಾಲೋಟದಿಂದ ಓಡತೊಡಗಿದವು. ಅವುಗಳ ವೇಗವು ಗಾಳಿಯನ್ನೂ ಅಲುಗಾಡಲು ಅವಕಾಶ ಕೊಡದಂತಿತ್ತು. ಉತ್ತರಕುಮಾರನೂ ಆಶ್ಚರ್ಯಚಕಿತನಾಗಿದ್ದಿರಬೇಕು. ಅವನು ಉಸಿರಾಡುವುದನ್ನೂ ಮರೆಯುವಂತಾಯಿತು. ಸಾರಥಿಯ ಚಾಕಚಕ್ಯತೆ, ರಥವನ್ನೋಡಿಸುವ ಪ್ರಾವೀಣ್ಯಗಳು ಅವನಿಗೆ ಹೊಸತು. ಅರ್ಜುನ ರಥವನ್ನು ಹೇಗೆ ಓಡಿಸಿದನೆಂದರೆ, ಆತನ ರಥವನ್ನು ಹಿಂಬಾಲಿಸಿಕೊಂಡು ಬರುವುದೂ ಉತ್ತರಕುಮಾರನ ಚತುರಂಗಬಲಕ್ಕೆ ಅಸಾಧ್ಯವಾಯಿತು. ಇವನು ಹೊಸರೀತಿಯ ಸಾರಥಿ, ಇಂತಹ ಸಾರಥಿಯನ್ನು ಇದುವರೆಗೂ ತಾವೂ ನೋಡಿಯೇ ಇಲ್ಲ ಎಂದುಕೊಳ್ಳುತ್ತಿರುವಂತೆಯೇ ರಥ ಕಣ್ಣಿಂದ ಮರೆಯಾಗಿ ಸೇನೆ ಎಲ್ಲವೂ ಪಟ್ಟಣದೊಳಗೆ ಉಳಿದುಬಿಡುವಂತಾಯಿತು.)

 

ಎಲೆ ಪರೀಕ್ಷಿತ ತನಯ ಕೇಳ್ ನೃಪ

ತಿಲಕನತಿ ವೇಗದಲಿ ರಥವನು

ಕೊಳುಗುಳಕೆ ತರೆ ಕಂಡನುತ್ತರ ಮುಂದೆ ದೂರದಲಿ

ತಳಿತ ಕುಂತದ ಬಾಯಿ ಧಾರೆಯ

ಹೊಳವುಗಳ ಹೊದರೆದ್ದ ಸಿಂಧದ

ಸೆಳೆಯ ಸೀಗುರಿಗಳ ಸುರಂಭದ ಸಕಲ ಮೋಹರವ  ೧೭

ಪದ್ಯದ ಅನ್ವಯಕ್ರಮ:

ಎಲೆ ಪರೀಕ್ಷಿತ ತನಯ ಕೇಳ್, ನೃಪತಿಲಕನ್ ಅತಿ ವೇಗದಲಿ ರಥವನು ಕೊಳುಗುಳಕೆ ತರೆ, ಉತ್ತರ ಮುಂದೆ ದೂರದಲಿ ತಳಿತ ಕುಂತದ ಬಾಯಿ ಧಾರೆಯ ಹೊಳವುಗಳ ಹೊದರೆದ್ದ ಸಿಂಧದ ಸೆಳೆಯ ಸೀಗುರಿಗಳ ಸುರಂಭದ ಸಕಲ ಮೋಹರವ ಕಂಡನ್

ಪದ-ಅರ್ಥ:

ಪರೀಕ್ಷಿತ ತನಯ-ಪರೀಕ್ಷಿತನ ಮಗ(ಜನಮೇಜಯ);  ನೃಪಕುಲತಿಲನ್-ರಾಜವಂಶಕ್ಕೆ ಶ್ರೇಷ್ಠನಾದವನು(ಅರ್ಜುನ);  ಕೊಳುಗುಳ-ಯುದ್ಧರಂಗ;  ತರೆ-ತರಲು;  ತಳಿತ-ಹೊಂದಿದ;  ಕುಂತ-ಈಟಿ, ಭರ್ಚಿ;  ಬಾಯಿ ಧಾರೆ-ಕತ್ತಿಯ ಅಲಗು; ಹೊಳವು-ಪ್ರಕಾಶ;  ಹೊದರೆದ್ದ-ದಟ್ಟವಾಗಿರುವ;  ಸಿಂಧದ-ಬಾವುಟದ, ಪತಾಕೆಯ; ಸೆಳೆಯ ಸೀಗುರಿ-ಬೆತ್ತದ ಚಾಮರ; ಸುರಂಭ-ಸಂಭ್ರಮ;  ಮೋಹರ-ಸೈನ್ಯ. 

            ಜನಮೇಜಯ ರಾಜನೇ, ರಾಜರಲ್ಲಿ ಅತ್ಯಂತ ಶ್ರೇಷ್ಠನಾದ ಅರ್ಜುನನು ಈ ರೀತಿಯಲ್ಲಿ ರಥವನ್ನು ಅತಿವೇಗದಿಂದ ಓಡಿಸಿಕೊಂಡು ಯುದ್ಧರಂಗಕ್ಕೆ ತರಲು, ಮುಂದೆ ದೂರದಲ್ಲಿ ಭರ್ಚಿ, ಖಡ್ಗ, ಈಟಿ, ಕೊಂತ, ಬಿಲ್ಲುಬಾಣ ಮೊದಲಾದ ಆಯುಧಗಳಿಂದ ಕೂಡಿದ ಸೈನಿಕರು,  ಅವರ ಆಯುಧಗಳಿಂದ ಹೊರಸೂಸುವ ಕಾಂತಿ, ಆಯುಧಗಳ ಝಳಪಿಸುವಿಕೆ, ವೈರಿಗಳ ರಥಗಳಲ್ಲಿ ರಾರಾಜಿಸುವ ಬಾವುಟಗಳು, ವೈರಿಸೈನಿಕರ ಬೊಬ್ಬೆಗಳಿಂದ ಕೂಡಿದ ಸೈನ್ಯಸಾಗರವನ್ನು ಕಂಡು ಉತ್ತರಕುಮಾರನು ಬೆರಗಾದನು.

(ಅರ್ಜುನ ಅಸಾಮಾನ್ಯ ವೀರ. ಕೇವಲ ಯುದ್ಧವಿದ್ಯೆಯಲ್ಲಿ ಮಾತ್ರವಲ್ಲ, ಸಾರಥ್ಯದಲ್ಲಿಯೂ ನಿಸ್ಸೀಮನಾಗಿದ್ದಾನೆ. ಅವನು ರಥವನ್ನು ಓಡಿಸುವ ರೀತಿ, ಕ್ರಮೇಣ ರಥದ ವೇಗವನ್ನು ಹೆಚ್ಚಿಸುವ ರೀತಿ ಎಲ್ಲವು ಒಂದಕ್ಕಿಂತ ಒಂದು ಅದ್ಭುತವಾಗಿತ್ತು. ಅರಮನೆಯಿಂದ ಹೊರಟು ರಥವನ್ನು ಕ್ಷಣಮಾತ್ರದಲ್ಲಿ ಯುದ್ಧರಂಗಕ್ಕೆ ತಂದು ನಿಲ್ಲಿಸಿದ ಪರಿ, ರಥದ ವೇಗ, ರಥವನ್ನು ಓಡಿಸುವ ಚಾಕಚಕ್ಯತೆ, ನೈಪುಣ್ಯಗಳು ಒಂದಕ್ಕಿಂತ ಒಂದು ಮಿಗಿಲಾಗಿದ್ದವು. ಬಹುಶಃ ಉತ್ತರಕುಮಾರನು ಅದುವರೆಗೂ ಈ ರೀತಿಯ ಸಾರಥಿಯನ್ನು, ಸಾರಥ್ಯವನ್ನು, ಸೈನ್ಯಸಾಗರವನ್ನು ನೋಡಿದವನಲ್ಲ. ಈಗ ಆತನ ಎದುರಲ್ಲಿ ಸೈನ್ಯಸಾಗವೇ ನೆರೆದಿದೆ. ಸೈನಿಕರ ಆರ್ಭಟ, ಕಿರಿಚಾಟ, ಆಯುಧಗಳ ಝಳಪಿಸುವಿಕೆ, ವಿವಿಧ ವಾದ್ಯಗಳ ಧ್ವನಿ, ರಥಗಳಲ್ಲಿ ರಾರಾಜಿಸುವ ವಿವಿಧ ಗಾತ್ರಗಳ, ವಿವಿಧ ಚಿಹ್ನೆಗಳ, ವಿವಿಧ ಬಣ್ಣಗಳ ಬಾವುಟಗಳು, ಸೈನಿಕರ ಕೈಗಳಲ್ಲಿರುವ ಆಯುಧಗಳು, ಅವುಗಳ ಹೊಳಪು, ಅವುಗಳನ್ನು ಝಳಪಿಸುವಾಗ ಉಂಟಾಗುವ ಸದ್ದು, ಸೂರ್ಯನ ಕಾಂತಿಗೆ ಕಣ್ಣುಗಳಿಗೆ ರಾಚುವ ಹೊಳಪು ಎಲ್ಲವನ್ನು ಕಂಡು ಉತ್ತರಕುಮಾರ ಬೆರಗಾದನು. ಅರಮನೆಯಿಂದ ರಥ ಹೊರಡುವಾಗಲೇ ಆಶ್ಚರ್ಯಚಕಿತನಾದ ಉತ್ತರಕುಮಾರ ಈಗ ದುರ್ಯೋಧನನ ಸೇನಾಸಾಗರ ಹಾಗೂ ಅದರ ಆವೇಶವನ್ನು ಕಂಡಾಗ ಆತನಲ್ಲಿನ ಪರಾಕ್ರಮ, ಯುದ್ಧೋತ್ಸಾಹಗಳು ಮೆಲ್ಲನೆ ಸೋರಿಹೋಗತೊಡಗಿದವು.)

 

ಹಸಿದ ಮಾರಿಯ ಮಂದೆಯಲಿ ಕುರಿ

ನುಸುಳಿದಂತಾದೆನು ಬೃಹನ್ನಳೆ

ಯೆಸಗದಿರು ತೇಜಿಗಳ ತಡೆ ಚಮ್ಮಟಿಗೆಯನು ಬಿಸುಡು

ಮಿಸುಕಬಾರದು ಪ್ರಳಯ ಕಾಲನ

ಮುಸುಕನುಗಿವವನಾರು ಕೌರವ

ನಸಮ ಬಲನೈ ರಥವ ಮರಳಿಚು ಜಾಳಿಸುವೆನೆಂದ  ೧೮

ಪದ್ಯದ ಅನ್ವಯಕ್ರಮ:

ಹಸಿದ ಮಾರಿಯ ಮಂದೆಯಲಿ ಕುರಿ ನುಸುಳಿದಂತೆ ಆದೆನು, ಬೃಹನ್ನಳೆ ತೇಜಿಗಳ ಎಸಗದಿರು ತಡೆ, ಚಮ್ಮಟಿಗೆಯನು ಬಿಸುಡು, ಮಿಸುಕಬಾರದು, ಪ್ರಳಯ ಕಾಲನ ಮುಸುಕನ್ ಉಗಿವವರಾರು?, ಕೌರವನ್ ಅಸಮಬಲನೈ, ರಥವ ಮರಳಿಚು ಜಾಳಿಸುವೆನ್ ಎಂದ.

ಪದ-ಅರ್ಥ:

ಮಂದೆ-ಗುಂಪು;  ಬೃಹನ್ನಳೆ-ಅರ್ಜುನ;  ತೇಜಿ-ಕುದುರೆ;  ಎಸಗು-ಓಡಿಸು;  ತಡೆ-ನಿಲ್ಲಿಸು;  ಚಮ್ಮಟಿಗೆ-ಬಾರುಕೋಲು;  ಮಿಸುಕಬಾರದು-ಚಲಿಸಬಾರದು;  ಪ್ರಳಯಕಾಲನ-ನಾಶವನ್ನುಂಟುಮಾಡುವವನು; ಮುಸುಕು-ಹೊದಿಕೆ;  ಉಗಿವವರು-ಸೆಳೆಯುವವರು;  ಅಸಮಬಲ-ಮಹಾಪ್ರರಾಕ್ರಮಶಾಲಿ;  ಮರಳಿಚು-ಹಿಂದಿರುಗಿಸು; ಜಾಳಿಸು-ತಪ್ಪಿಸಿಕೊಳ್ಳು.

            ಬೃಹನ್ನಳೆ, ನಾನೀಗ ಹಸಿದ ಮಾರಿಯ ಗುಂಪಿನಲ್ಲಿ ನುಸುಳಿದ ಕುರಿಯಂತಾದೆನು, ಕುದುರೆಗಳನ್ನು ಓಡಿಸಬೇಡ, ಸ್ವಲ್ಪ ತಡೆ. ಕುದುರೆಗಳನ್ನು ಇನ್ನು ಮುಂದಕ್ಕೆ ಓಡಿಸಬೇಡ. ಚಮ್ಮಟಿಕೆಯನ್ನು ಎಸೆದುಬಿಡು. ಒಂದಡಿಯಷ್ಟೂ ಚಲಸಬೇಡ. ಪ್ರಳಯಕಾಲನ ಮುಸುಕನ್ನು ಸೆಳೆಯುವುದಕ್ಕೆ ಸಾಧ್ಯವೆ? ಕೌರವ ಮಹಾಪರಾಕ್ರಮಿಯಾಗಿದ್ದಾನೆ. ಅವನೊಂದಿಗೆ ಯುದ್ಧ ಅಸಾಧ್ಯ. ಮುಂದೆ ಹೋದರೆ ಸಾವು ನಿಶ್ಚಿತ. ರಥವನ್ನು ಅರಮನೆಯ ಕಡೆಗೆ ತಿರುಗಿಸು, ಹೇಗಾದರೂ ತಪ್ಪಿಸಿಕೊಳ್ಳುತ್ತೇನೆ ಎಂದನು.

(ದುರ್ಯೋಧನನ ಸೈನ್ಯವೆಂದರೆ ಮಾರಿಯ ಮಂದೆಯ ಹಾಗೆ. ಮಾರಿಯ ಮಂದೆಯಲ್ಲಿ ಕುರಿಯೊಂದು ನುಸುಳಿದರೆ ಅದು ಸುರಕ್ಷಿತವಾಗಿ ಹಿಂದಿರುಗಲಾರದು. ಈಗ ತನ್ನ ಸ್ಥಿತಿಯೂ ಮಾರಿಯ ಮಂದೆಯನ್ನು ಹೊಕ್ಕ ಕುರಿಗಿಂತ  ಭಿನ್ನವಾಗಿಲ್ಲ. ಯುದ್ಧವನ್ನು ಹೂಡಿದೆನೆಂದಾದರೆ ನಾನೂ ಜೀವಸಹಿತ ಹಿಂದಿರುಗಲಾರೆ. ಹಾಗಾಗಿ ಕುದುರೆಗಳನ್ನು ಮುಂದಕ್ಕೆ  ಓಡಿಸಬೇಡ, ತಡೆದು ನಿಲ್ಲಿಸು. ನಿನ್ನ ಕೈಯಲ್ಲಿನ ಚಮ್ಮಟಿಕೆಯನ್ನು ಎಸೆದುಬಿಡು. ಇಲ್ಲದಿದ್ದರೆ ನಿನ್ನ ಕೈಯಲ್ಲಿನ ಚಮ್ಮಟಿಗೆಯನು ಕಂಡು ಹೆದರಿ ಕುದುರೆಗಳು ಇನ್ನೂ ಬೆಚ್ಚಿಕೊಂಡು ಮುಂದಕ್ಕೆ ಓಡಬಹುದು. ದುರ್ಯೋಧನನ ಸೇನೆ ಎಂಬುದು ಪ್ರಳಯಕಾಲನ ರೂಪದಲ್ಲಿ ಇಲ್ಲಿಗೆ ಬಂದುಬಿಟ್ಟಿದೆ. ಪ್ರಳಯಕಾಲನು ಹಾಕಿಕೊಂಡಿರುವ ಮುಸುಕನ್ನು ಸೆಳೆಯುವ ಹುಚ್ಚುಸಾಹಸವನ್ನು ಮಾಡಿದರೆ ಬದುಕಿ ಉಳಿಯುವುದಕ್ಕೆ ಸಾಧ್ಯವೆ? ಕೌರವ ಒಬ್ಬ ಸಾಮಾನ್ಯನೆಂದು ಭಾವಿಸಿದ್ದೆ. ಆದರೆ ಈಗ ಆತನ ಸೈನ್ಯವನ್ನು ನೋಡಿದಾಗ ಆತ ಆಸಾಮಾನ್ಯನಾದ ಪರಾಕ್ರಮಶಾಲಿ ಎಂಬುದು ಸ್ಪಷ್ಟವಾಗುತ್ತಿದೆ. ಅವನೊಂದಿಗೆ ಹೋರಾಡುವುದೆಂದರೆ ಮಾರಿಯೊಂದಿಗೆ ಮತ್ತು ಪ್ರಳಯಕಾಲನೊಂದಿಗೆ ಹೋರಾಡುವುದೆಂದೇ ಅರ್ಥ. ಯುದ್ಧ  ಹೂಡಿದರೆ ಬದುಕಿ ಉಳಿಯಲಾರೆ. ಸತ್ತು ಸಾಧಿಸುವುದಾದರೂ ಏನು? ಹಾಗಾಗಿ ರಥವನ್ನು ಮುಂದಕ್ಕೆ ಓಡಿಸದೆ ಹಿಂದಿರುಗಿಸು. ಹೇಗಾದರೂ ಮಾಡಿ ತಪ್ಪಿಸಿಕೊಳ್ಳುತ್ತೇನೆ ಎಂದು ಉತ್ತರಕುಮಾರನು ಬೃಹನ್ನಳೆಯಲ್ಲಿ ಪರಿಪರಿಯಾಗಿ ವಿನಂತಿಸಿಕೊಂಡನು.)

 

ಸಾರಿ ಬರ ಬರಲವನ ತನು ಮಿಗೆ

ಭಾರಿಸಿತು ಮೈ ಮುರಿದು ರೋಮ ವಿ

ಕಾರ ಘನ ಕಾಹೇರಿತವಯವ ನಡುಗಿ ಡೆಂಡಣಿಸಿ

ಭೂರಿ ಭಯ ತಾಪದಲಿ ತಾಳಿಗೆ

ನೀರುದೆಗೆದುದು ತುಟಿಯೊಣಗಿ ಸುಕು

ಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ  ೧೯

ಪದ್ಯದ ಅನ್ವಯಕ್ರಮ:

ಸಾರಿ ಬರ ಬರಲ್ ಅವನ ತನು ಮಿಗೆ ಭಾರಿಸಿತು, ಮೈ ಮುರಿದು ರೋಮ ವಿಕಾರ ಘನ ಕಾಹೇರಿತು, ಅವಯವ ನಡುಗಿ ಡೆಂಡಣಿಸಿ ಭೂರಿ ಭಯ ತಾಪದಲಿ ತಾಳಿಗೆ ನೀರು ತೆಗೆದುದು, ತುಟಿಯು ಒಣಗಿ ಸುಕುಮಾರ ಕಣ್ಣೆವೆ ಸೀಯೆ ಕರದಲಿ ಮುಖವ ಮುಚ್ಚಿದನು.

ಪದ-ಅರ್ಥ:

ಸಾರಿ-ಓಡೋಡಿ;  ಬರ ಬರಲ್-ಬರುತ್ತಿರಲು;  ತನು-ದೇಹ;  ಮಿಗೆ-ಅಧಿಕವಾಗಿ;  ಭಾರಿಸಿತು-ನಡುಗಿತು; ಮೈಮುರಿದು-ಮೈನಡುಗಿ;  ರೋಮವಿಕಾರ-ರೋಮಾಂಚನ;  ಕಾಹೇರು-ಬಿಸಿಯಾಗು;  ಅವಯವ-ಇಂದಿಯಗಳು, ಅಂಗಾಂಗಳು;  ಡೆಂಡಣಿಸಿ-ನಡುಗಿ;  ಭೂರಿ ಭಯ ತಾಪ-ಅತಿಯಾದ ಭಯದಿಂದ ಉಂಟಾದ ಸಂಕಟ;  ತಾಳಿಗೆ-ಗಂಟಲು;  ನೀರುದೆಗೆದುದು-ಒಣಗಿತು;  ಕಣ್ಣೆವೆ ಸೀಯೆ-ಕಣ್ಣರೆಪ್ಪೆಗಳು ಕರಕಲಾಗು; ಕರದಲಿ-ಕೈಯಿಂದ, ಬೊಗಸೆಯಿಂದ.  

            ರಥವು ಓಡೋಡುತ್ತ ಮುಂದುವರಿಯುತ್ತಿದ್ದ ಹಾಗೆ ಉತ್ತರನ ದೇಹ ಅಧಿಕವಾಗಿ ಕಂಪಿಸತೊಡಗಿತು. ಆತನ ಮೈ ಕ್ಷಣಕ್ಷಣಕ್ಕೂ ರೋಮಾಂಚನಗೊಂಡಿತು. ದೇಹ ಬಿಸಿಯಾಗತೊಡಗಿತು.  ದೇಹವೆಲ್ಲವೂ ನಡುಗತೊಡಗಿ ಅಧಿಕವಾದ ಭಯದಿಂದ ಗಂಟಲು ಆರತೊಡಗಿತು. ತುಟಿಗಳು ಒಣಗಿ, ಕಣ್ಣರೆಪ್ಪೆಗಳು ಕರಕಲಾದವು. ಭಯವನ್ನು ತಾಳಲಾರದೆ ಬೊಗಸೆಯಿಂದ ಮುಖವನ್ನು ಮುಚ್ಚಿಕೊಂಡನು.

(ಬೃಹನ್ನಳೆ ರಥವನ್ನು ಓಡಿಸುತ್ತಿದ್ದ ರೀತಿ, ಕುದುರೆಗಳ ಆವೇಶ, ಯುದ್ಧರಂಗದಲ್ಲಿ ದುರ್ಯೋಧನನ ಸೇನೆಯ ಆರ್ಭಟ, ಆತನ ಸೈನ್ಯಸಾಗರವನ್ನು ಕಂಡು ಉತ್ತರಕುಮಾರ ನಿರುತ್ತರನಾದ. ಅಂತಃಪುರದಲ್ಲಿ ಅವನು ತೋರಿದ ಸಾಹಸ, ಗರ್ವ, ಉತ್ಸಾಹಗಳು ಇಂಗಿಹೋದವು. ರಥ ಮುಂದೋಡುತ್ತಲೇ ಇದ್ದಾಗ ಕ್ರಮೇಣ ಉತ್ತರಕುಮಾನರ ದೇಹ ಕ್ಷಣಕ್ಷಣಕ್ಕೂ ನಡುಗತೊಡಗಿ, ರೋಮಾಂಚನಗೊಂಡು, ಭಯದಿಂದ ದೇಹದ ತಾಪವು ಅಧಿಕವಾಗಿ, ಕೈಕಾಲು ನಡುಗತೊಡಗಿದವು. ಇನ್ನೂ ಮುಂದೆ ಹೋದರೆ ದುರ್ಯೋಧನನ ಸೈನ್ಯಸಾಗರ ಎದುರಿಸಿ ಬದುಕುವಂತಿಲ್ಲ. ಇನ್ನೊಂದೆಡೆ ರಥವನ್ನು ಮರಳಿಸು ಎಂದರೂ ಕೇಳದ ಸಾರಥಿ, ತಾನು ಉಳಿಯುವಂತಿಲ್ಲ. ಇವೆಲ್ಲವುಗಳಿಂದ ಭಯಭೀತನಾಗಿ ಕೈಕಾಲು ನಡುಗಿ, ಗಂಟಲು ಒಣಗಿ, ಕಣ್ಣುಗಳ ರೆಪ್ಪೆಗಳು ಕರಕಲಾಗಿ ದೃಷ್ಟಿಯೇ ಮಂದವಾದಂತಾಗಿ ಏನನ್ನೂ ನೋಡಲಾರದೆ ಉತ್ತರಕುಮಾರ ಬೊಗಸೆಯಿಂದ ತನ್ನ ಮುಖವನ್ನೇ ಮುಚ್ಚಿಕೊಂಡನು. ಯುದ್ಧರಂಗದಲ್ಲಿ ಕೌರವನ ಕಡೆಯ ವೀರರಿಗೆ ತನ್ನಿಂದ ಆಗಬೇಕಿದ್ದ ದುರವಸ್ಥೆ ಈಗ ದುರ್ಯೋಧನನೊಂದಿಗೆ  ಯುದ್ಧಮಾಡದೆಯೇ ಉತ್ತರಕುಮಾರನಿಗೆ ಒದಗಿದುದು ವಿಪರ್ಯಾಸವೇ ಸರಿ.)  

 

ಏಕೆ ಸಾರಥಿ ರಥವ ಮುಂದಕೆ

ನೂಕಿ ಗಂಟಲ ಕೊಯ್ವೆ ಸುಡು ಸುಡು

ಕಾಕಲಾ ಕಣ್ಣೊಡೆದವೇ ಕಾಣಾ ಮಹಾಬಲವ

ನಾಕನಿಳಯರಿಗರಿದು ನಿನಗೆ ವಿ

ವೇಕವೆಳ್ಳನಿತಿಲ್ಲ ತೆಗೆ ತೆಗೆ

ಸಾಕು ವಾಘೆಯ ಮರಳಿ ಹಿಡಿ ತೇಜಿಗಳ ತಿರುಹೆಂದ  ೨೦

ಪದ್ಯದ ಅನ್ವಯಕ್ರಮ:

ಸಾರಥಿ ಏಕೆ ರಥವ ಮುಂದಕೆ ನೂಕಿ ಗಂಟಲ ಕೊಯ್ವೆ? ಸುಡು ಸುಡು ಕಾಕಲ್, ಆ ಕಣ್ಣೊಡೆದವೇ? ಕಾಣಾ ಮಹಾ ಬಲವನ್, ನಾಕ ನಿಳಯರಿಗೆ ಅರಿದು, ನಿನಗೆ ವಿವೇಕವು ಎಳ್ಳನಿತಿಲ್ಲ, ತೆಗೆ ತೆಗೆ ಸಾಕು ವಾಘೆಯ ಹಿಡಿ ತೇಜಿಗಳ ಮರಳಿ ತಿರುಹು ಎಂದ.

ಪದ-ಅರ್ಥ:

ನೂಕಿ-ಓಡಿಸಿ; ಕಾಕಲ್-ಉದ್ರೇಕ, ಉದ್ಧಟತನ; ಮಹಾಬಲವನ್-ದೊಡ್ಡದಾದ ಸೈನ್ಯವನ್ನು, ಭೀಕರವಾದ ಸೈನ್ಯವನ್ನು; ನಾಕನಿಳಯರಿಗೆ-ದೇವತೆಗಳಿಗೆ; ಅರಿದು-ಅಸಾಧ್ಯ;  ವಿವೇಕವೆಳ್ಳನಿತಿಲ್ಲ-ಬುದ್ಧಿ ಎಳ್ಳಷ್ಟೂ ಇಲ್ಲ;  ತೆಗೆ ತೆಗೆ-ಬಿಡು ಬಿಡು;  ವಾಘೆ-ಕಡಿವಾಣ, ಲಗಾಮು;  ತೇಜಿ-ಕುದುರೆ; ತಿರುಹು-ತಿರುಗಿಸು.

            ಸಾರಥಿ ಏಕೆ ಸುಮ್ಮನೆ ರಥವನ್ನು ಮುಂದಕ್ಕೆ ಓಡಿಸಿ ನನ್ನ ಗಂಟಲನ್ನು ಕೊಯ್ಯುವೆ? ಯುದ್ಧದ ಬಗೆಗಿನ ನಿನ್ನ ಉದ್ಧಟತನವನ್ನು ಸುಟ್ಟುಬಿಡು. ಕಣ್ತೆರೆದು  ದುರ್ಯೋಧನನ ಸೈನ್ಯಸಾಗರವನ್ನು ನೋಡು. ನಿನ್ನ ಕಣ್ಣುಗಳು ಒಡೆದುಹೋಗಿವೆಯೇನು? ಇಂತಹ ಸೈನ್ಯಸಾಗರವನ್ನು ಗೆಲ್ಲುವುದಕ್ಕೆ ನನ್ನಂತಹ ಸಾಮಾನ್ಯರಿಂದ ಹೋಗಲಿ, ದೇವತೆಗಳಿಂದಲೂ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ನಿನಗೆ ಒಂದಿಷ್ಟೂ ಬುದ್ಧಿಯಿಲ್ಲ. ರಥವನ್ನು ಇನ್ನೂ ಓಡಿಸಬೇಡ, ಸಾಕು, ಕಡಿವಾಣವನ್ನು ಬಿಗಿಯಾಗಿ ಹಿಡಿದುಕೊ. ಕುದುರೆಗಳನು ಹಿಂದಿರುಗಿಸು, ಅರಮನೆಗೆ ಹೋಗೋಣ ಎಂದು ಉತ್ತರಕುಮಾರನು ಬೃಹನ್ನಳೆಯಲ್ಲಿ ಪರಿಪರಿಯಾಗಿ ವಿನಂತಿಸಿಕೊಂಡನು.

(ಉತ್ತರಕುಮಾರನು ದುರ್ಯೋಧನನ ಸೈನ್ಯಸಾಗರವನ್ನು, ಅದರ ಅಗಾಧತೆಯನ್ನು ನೋಡಿ ಹೆದರಿಕೊಂಡ. ಬೃಹನ್ನಳೆ ರಥವನ್ನು ಮುಂದೆಕ್ಕೆ ಓಡಿಸುತ್ತಲೇ ಇದ್ದಾನೆ. ಉತ್ತರನ ಪೌರುಷ ಅಡಗುತ್ತಲೇ ಇದೆ. ದುರ್ಯೋಧನನ ಸೈನ್ಯ ಹತ್ತಿರವಾದಂತೆಲ್ಲ ಉತ್ತರನ ಹೆದರಿಕೆಯೂ ಹೆಚ್ಚಾಗುತ್ತಲೇ ಇದೆ. ಬೃಹನ್ನಳೆಯನ್ನು ಹೇಗಾದರೂ ತಡೆಯಬೇಕೆಂದು, ’ಸಾರಥಿ, ನನ್ನ ಮಾತನ್ನು ಮೀರಿಯೂ ಸುಮ್ಮನೆ ರಥವನ್ನೇಕೆ ಇನ್ನೂ ಮುಂದಕ್ಕಿ ಓಡಿಸಿ ನನ್ನ ಗಂಟಲನ್ನು ಕೊಯ್ಯುವೆ?’ ಎಂದು ಪ್ರಶ್ನಿಸಿದ. ಅಂತಹ ಸೈನ್ಯಸಾಗರವನ್ನು ಉತ್ತರಕುಮಾರ ಅದುವರೆಗೂ ನೋಡಿದವನಲ್ಲ. ಅಂತಹವರೊಂದಿಗೆ ಯುದ್ಧವನ್ನು ಮಾಡಿದವನೂ ಅಲ್ಲ. ಈ ಸಾರಥಿ ದುರುದ್ದೇಶಪೂರ್ವಕವಾಗಿಯೇ ರಥವನ್ನು ಮುಂದಕ್ಕೋಡಿಸಿ ನನ್ನನ್ನು ಬಲಿಕೊಡಲು ಯೋಚಿಸುತ್ತಿದ್ದಾನೆ ಎಂದು ತಿಳಿದುಕೊಂಡು, ’ನಿನ್ನ ಕಣ್ಣುಗಳೂ ಒಡೆದುಹೋಗಿವೆಯೇನು? ಈ ಉದ್ಧಟತನ ಏಕೆ? ಈ ಸೈನ್ಯವನ್ನು ಗೆಲ್ಲುವುದಕ್ಕೆ ಸಾಧ್ಯವೇ? ಸ್ವತಃ ದೇವತೆಗಳು ಬಂದರೂ ಗೆಲ್ಲುವುದಕ್ಕೆ ಅಸಾಧ್ಯವಾಗಿರುವಾಗ ನಾನಾದರೂ ಏನು ಮಾಡಲಾದೀತು! ಹಾಗಾಗಿ ಕುದುರೆಗಳನ್ನು ಇನ್ನೂ ಮುಂದಕ್ಕೋಡಿಸದೆ ರಥವನ್ನು ಅರಮನೆಗೆ ಹಿಂದಿರುಗಿಸು’ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ.)

 

ಎಂದೊಡರ್ಜುನ ನಗುತ ರಥವನು

ಮುಂದೆ ನಾಲ್ಕೆಂಟಡಿಯ ನೂಕಲು

ಕೊಂದನೀ ಸಾರಥಿಯೆನುತ ಸಂವರಿಸಿ ಮುಂಜೆರಗ

ಬಂದು ಮೆಲ್ಲನೆ ರಥದ ಹಿಂದಕೆ

ನಿಂದು ಧುಮ್ಮಿಕ್ಕಿದನು ಬದುಕಿದೆ

ನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ  ೨೧

ಪದ್ಯದ ಅನ್ವಯಕ್ರಮ:

ಎಂದೊಡೆ ಅರ್ಜುನ ನಗುತ ರಥವನು ಮುಂದೆ ನಾಲ್ಕು ಎಂಟಡಿಯ ನೂಕಲು, ಕೊಂದನ್ ಈ ಸಾರಥಿ ಎನುತ ಸಂವರಿಸಿ ಮುಂಜೆರಗ ಬಂದು ಮೆಲ್ಲನೆ ರಥದ ಹಿಂದಕೆ ನಿಂದು ಧುಮ್ಮಿಕ್ಕಿದನು ಬದುಕಿದೆನ್ ಎಂದು ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ.

ಪದ-ಅರ್ಥ:

ಎಂದೊಡೆ-ಎಂದು ಹೇಳಿದಾಗ;  ನೂಕು-ಓಡಿಸು; ಸಂವರಿಸಿ-ಸಾವರಿಸಿಕೊಂಡು; ಮುಂಜೆರಗ-ಉತ್ತರೀಯದ ತುದಿ; ಧುಮ್ಮಿಕ್ಕಿದನು-ಹಾರಿದನು;  ನಿಟ್ಟೋಟ-ದೀರ್ಘವಾದ ಓಟ, ತಡೆಯಿಲ್ಲದ ಓಟ;  ಹಾಯ್ದನು-ನೆಗೆದನು;  ಬಿಟ್ಟಮಂಡೆ-ಶಿರಸ್ತ್ರಾಣವಿಲ್ಲದ ತಲೆ, ರಕ್ಷಣೆಯಿಲ್ಲದ ತಲೆ.

            ಹೀಗೆಂದು ಉತ್ತರಕುಮಾರನು ಬೇಡಿಕೊಂಡಾಗ, ಬೃಹನ್ನಳೆಯು ಆತನ ಮಾತುಗಳನ್ನು ಕೇಳಿಯೂ ಕೇಳದಂತೆ ರಥವನ್ನು ಇನ್ನೂ ನಾಲ್ಕೆಂಟಡಿಗಳಷ್ಟು ಮುಂದಕ್ಕೋಡಿಸಿದಾಗ, ಈ ಸಾರಥಿ ನನ್ನನ್ನು ಕೊಂದೇ ಬಿಡುತ್ತಾನೆ ಎನ್ನುತ್ತ ತನ್ನನ್ನು ತಾನು ಸಾವರಿಸಿಕೊಂಡು ಮಲ್ಲನೆ ರಥದ ಹಿಂದಕ್ಕೆ ಬಂದು ರಥದಿಂದ ಹಾರಿದನು. ಹಾರಿದ ರಭಸಕ್ಕೆ ತಲೆಯ ಮೇಲಿದ್ದ ಶಿರಸ್ತ್ರಾಣವೂ ಉರುಳಿಹೋಗಿ ಬದುಕಿದೆನೆಂದು ಒಂದೇ ಸಮನೆ ಓಡತೊಡಗಿನು.

(ಉತ್ತರಕುಮಾರನ ಯಾವ ಮಾತುಗಳಿಗೂ ಬೃಹನ್ನಳೆ ಜಗ್ಗಲಿಲ್ಲ. ಉತ್ತರಕುಮಾರನ ಪ್ರತಿಯೊಂದು ಮಾತಿಗೂ ವಿರುದ್ಧವಾಗಿ ರಥವನ್ನು ಮುಂದು ಮುಂದಕ್ಕೆ ಓಡಿಸತೊಡಗಿದಾಗ  ಈ ಸಾರಥಿ ತನ್ನ ಆಜ್ಞೆಯನ್ನೂ ಮೀರಿ ವರ್ತಿಸುತ್ತಿದ್ದಾನೆ. ಈತ ತನ್ನನ್ನು ಇನ್ನು ಬದುಕಗೊಡುವುದಿಲ್ಲ ಎಂಬುದು ಉತ್ತರಕುಮಾರನಿಗೆ ಖಾತ್ರಿಯಾಯಿತು. ಈ ದುರ್ಯೋಧನನ ಸೈನ್ಯಕ್ಕೆ ಬಲಿಯಾಗುವುದಕ್ಕಿಂತ ಯುದ್ಧರಂಗದಿಂದ ತಪ್ಪಿಸಿಕೊಂಡು ಓಡಿಹೋಗುವುದೇ ವಾಸಿಯೆನಿಸಿತು. ಬದುಕಿದರೆ ಬೇಡಿಯಾದರೂ ತಿನ್ನಬಹುದು ಎಂದುಕೊಂಡು ಸಾರಥಿಗೆ ತಿಳಿಯದಂತೆ ಮೆಲ್ಲನೆ ರಥದ ಹಿಂಭಾಗಕ್ಕೆ ಬಂದು ನಿಂತು ಸಮಯಸಾಧಿಸಿ ರಥದಿಂದ ಕೆಳಕ್ಕೆ ಹಾರಿದನು. ಹಾರಿದ ರಭಸಕ್ಕೆ ತಲೆಯ ಮೇಲಿದ್ದ ಶಿರಸ್ತ್ರಾಣವೂ ಉದುರಿಹೋಯಿತು. ತನ್ನ ಜೀವಮಾನದಲ್ಲಿ ಎಂದೂ ಓಡದ ರೀತಿಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಒಂದೇ ಸಮನೆ ಓಡತೊಡಗಿದನು. ಅರಮನೆಯಲ್ಲಿ ತನ್ನ ಪ್ರಿಯತಮೆಯರ ಮುಂದೆ ತೋರಿಸಿಕೊಂಡ ಒಣಜಂಭ, ಬಡಾಯಿ, ಪೌರುಷಗಳೆಲ್ಲವೂ ಮರೆತುಹೋದವು. ಉತ್ತರಕುಮಾರನ ಅಸಲಿ ಮುಖ ಈಗ ಅನಾವರಣಗೊಂಡಿತು.)

 

ನೋಡಿದನು ಕಲಿಪಾರ್ಥ ನೀ ಕೇ

ಡಾಡಿ ಕೆದರಿದ ಕೇಶದಲಿ ಕೆ

ಟ್ಟೋಡುತಿರಲೆಲೆ ಪಾಪಿ ಹಾಯ್ದನು ಹಿಡಿಯಬೇಕೆನುತ

ಕೂಡೆ ಸೂಟಿಯೊಳಟ್ಟಲಿಳೆಯ

ಲ್ಲಾಡಲಹಿಪತಿ ಹೆದರಲಿತ್ತಲು

ನೋಡಿ ಕೌರವ ಸೇನೆ ಕೆಡೆದುದು ನಗೆಯ ಕಡಲೊಳಗೆ  ೨೨

ಪದ್ಯದ ಅನ್ವಯಕ್ರಮ:

ಕಲಿಪಾರ್ಥ ನೋಡಿದನ್, ಈ ಕೇಡಾಡಿ ಕೆದರಿದ ಕೇಶದಲಿ ಕೆಟ್ಟು ಓಡುತಿರಲ್ ಎಲೆ ಪಾಪಿ ಹಾಯ್ದನು ಹಿಡಿಯಬೇಕು ಎನುತ ಕೂಡೆ ಸೂಟಿಯೊಳ್ ಅಟ್ಟಲ್ ಇಳೆ ಅಲ್ಲಡಲ್ ಅಹಿಪತಿ ಹೆದರಲ್ ಇತ್ತಲು ಕೌರವ ಸೇನೆ ನೋಡಿ ನಗೆಯ ಕಡಲೊಳಗೆ ಕೆಡೆದುದು.

ಪದ-ಅರ್ಥ:

ಕಲಿಪಾರ್ಥ-ಪರಾಕ್ರಮಶಾಲಿಯಾದ ಅರ್ಜುನ;  ಕೇಡಾಡಿ-ಕೇಡನ್ನು ಬಯಸುವವನು; ಪುಕ್ಕಲ;  ಕೆದರಿದ ಕೇಶ-ಅಸ್ತವ್ಯಸ್ತವಾದ ಕೂದಲು;  ಕೆಟ್ಟೋಡುತಿರಲ್-ಹೆದರಿ ಓಡಿಹೋಗುತ್ತಿರಲು;  ಹಾಯ್ದನು-ನೆಗೆದನು;  ಸೂಟಿಯೊಳ್-ವೇಗವಾಗಿ, ಚುರುಕಾಗಿ;  ಅಟ್ಟಲ್-ಹಿಂಬಾಲಿಸಲು, ಅಟ್ಟಿಸಿಕೊಂಡು ಹೋಗಲು;  ಇಳೆಯಲ್ಲಾಡು-ಭೂಮಿ ಕಂಪಿಸು;  ಅಹಿಪತಿ-ಸರ್ಪರಾಜ, ಆದಿಶೇಷ;  ಕೆಡೆದುದು-ಮುಳುಗಿತು, ತಲ್ಲೀನವಾಯಿತು.

            ಉತ್ತರಕುಮಾರ ರಥದಿಂದ ಹಾರಿ ಜೀವಹಿಡಿದುಕೊಂಡು ಹೆದರಿ ಓಡಿಹೋಗುತ್ತಿರುವುದನ್ನು ಅರ್ಜುನನು ನೋಡಿ ಈತ ಕೇಡನ್ನು ಬಯಸುವವನು, ಶಿರಸ್ತ್ರಾಣವೇ ಇಲ್ಲದೆ ಕೆದರಿದ ತಲೆಯಲ್ಲಿ ಪ್ರಾಣ ಉಳಿಸಿಕೊಳ್ಳಲು ಜೀವಹಿಡಿದುಕೊಂಡು ಓಡುತ್ತಿದ್ದಾನೆ. ಎಲೆ ಪಾಪಿ ಎಂದುಕೊಂಡು ಆತನನ್ನು ಹಿಡಿಯಬೇಕೆಂದು ರಥದಿಂದಲೇ ಕೆಳಕ್ಕೆ ನೆಗೆದನು. ವೇಗವಾಗಿ ಹಿಂಬಾಲಿಸಿಕೊಂಡು ಉತ್ತರಕುಮಾರನನ್ನು ಅಟ್ಟಿಸಿಕೊಂಡು ಹೋದನು. ಅರ್ಜುನನು ನೆಗೆದ ರೀತಿಗೆ, ಆತನ ಪಾದಗಳ ಘಾತಕ್ಕೆ ಭೂಮಿ ಕಂಪಿಸತೊಡಗಿತು, ಭೂಮಿಯನ್ನು ಹೊತ್ತ ಆದಿಶೇಷನೇ ಹೆದರಿದನು. ಇದೆಲ್ಲವನ್ನೂ ನೋಡುತ್ತಿದ್ದ ಕೌರವನ ಸೇನೆ ನಗೆಯ ಕಡಲಲ್ಲಿ ಮುಳುಗಿತು.

(ಉತ್ತರಕುಮಾರ ಪದೇಪದೇ ರಥವನ್ನು ಹಿಂದಿರುಗಿಸು ಎಂದು ಹೇಳುತ್ತಿದ್ದರೂ ಅರ್ಜುನ ಉದ್ದೇಶಪೂರ್ವಕವಾಗಿಯೇ ರಥವನ್ನು ಇನ್ನಷ್ಟು ಮುಂದಕ್ಕೆ ಓಡಿಸುತ್ತಿದ್ದ. ಆತನಿಗೆ ಉತ್ತರಕುಮಾರನ ಪೌರುಷವನ್ನು ಪರೀಕ್ಷೆ ಮಾಡಬೇಕಿತ್ತು. ತನ್ನ ಪ್ರಿಯತಮೆಯರ ಮುಂದೆ ಆತ ಆಡಿದ ಮಾತುಗಳ ಯಥಾರ್ಥಸ್ಥಿತಿಯನ್ನು ಅರಿಯಬೇಕಿತ್ತು. ಹಾಗಾಗಿ ಆತನ ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳದೆ ರಥವನ್ನು ಮುಂದಕ್ಕೆ ಓಡಿಸುತ್ತಲೇ ಇದ್ದ.  ಸಾರಥಿಯ ಮನಸ್ಥಿತಿಯನ್ನು ಅರಿತುಕೊಂಡ ಉತ್ತರಕುಮಾರ  ಈ ಸಾರಥಿ ಯುದ್ಧರಂಗದಲ್ಲಿ ತನ್ನನ್ನು ಕೌರವಸೇನೆಗೆ ಬಲಿಕೊಡುತ್ತಾನೆ ಎಂದು ಗ್ರಹಿಸಿ, ಬದುಕಿದರೆ ಬೇಡಿಯಾದರೂ ತಿನ್ನಬಹುದೆಂಬ ಆಲೋಚನೆಯಿಂದ ಜೀವ ಉಳಿಸಿಕೊಳ್ಳುವುದಕ್ಕೆ ರಥದಿಂದ ಹಾರಿ ಓಡಿಹೋಗತೊಡಗಿದುದನ್ನು ಅರಿತ ಅರ್ಜುನ ತಾನೂ ರಥದಿಂದ ನೆಗೆದು ಹಿಂಬಾಲಿಸತೊಡಗಿದನು. ಅರ್ಜುನ ರಥದಿಂದ ಕೆಳಕ್ಕೆ ಧುಮುಕಿದಾಗ ಆತನ ಪಾದಾಘಾತಕ್ಕೆ ಭೂಮಿ ಕಂಪಿಸಿತು, ಆದಿಶೇಷ ಹೆದರಿದನು. ಸುಮಾರು ಹದಿಮೂರು ವರ್ಷಗಳ ಅನಂತರದ ಅರ್ಜುನನ ಯುದ್ಧಾವೇಶವಿದು. ಒಂದೆಡೆ ಶಿರಸ್ತ್ರಾಣವಿಲ್ಲದ ಉತ್ತರನ ತಲೆ, ಇನ್ನೊಂದೆಡೆ ಕೌರವನ ಸೈನ್ಯಕ್ಕೆ ಹೆದರಿಕೊಂಡು ಜೀವಭಯದಿಂದ ಓಡಿಹೋಗುತ್ತಿರುವ ರೀತಿ ಎಲ್ಲವೂ ಅರ್ಜುನನನ್ನು ಇನ್ನಷ್ಟು ಕೆರಳಿಸಿತು. ಯುದ್ಧರಂಗದಲ್ಲಿನ ಉತ್ತರಕುಮಾರನ ಈ ದಯನೀಯ ಪರಿಸ್ಥಿತಿ ಕೌರವನ ಸೇನೆಗೆ ಪುಕ್ಕಟೆ ಮನರಂಜನೆಯಾಯಿತು. ಅದು ಉತ್ತರನ ಈ ಪಲಾಯನ ಪೌರುಷವನ್ನು ನೋಡಿ ನಕ್ಕು ಖುಷಿಪಡುವುದರಲ್ಲಿ ತಲ್ಲೀನವಾಯಿತು.)

  ***

 

 

Leave a Reply

Your email address will not be published. Required fields are marked *