ಸಾಹಿತ್ಯಾನುಸಂಧಾನ

heading1

ವೈಶಂಪಾಯನನೆಂಬ ಶುಕಂ-ಒಂದನೆಯ ನಾಗವರ್ಮ-ಭಾಗ-೨

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ) (ಭಾಗ-೨)

ಅಂತಶ್ರುತಪೂರ್ವಧ್ವನಿ

ಯಂ ತೊಟ್ಟನೆ ಕೇಳ್ದು ಕೇಳ್ದು ಕಿವಿಯೊಡೆದಪುದೆಂ

ಬಂತಾಗೆ ಘೀಳಿಡಲ್ವೊ

ಕ್ಕೆಂ ತಂದೆಯ ಶಿಥಿಲ ಪಕ್ಷಸಂಪುಟದೆಡೆಯೊಳ್  ೯ 

ಪದ್ಯದ ಅನ್ವಯಕ್ರಮ:

ಅಂತು ಅಶ್ರುತ ಅಪೂರ್ವ ಧ್ವನಿಯಂ ತೊಟ್ಟನೆ ಕೇಳ್ದು, ಕೇಳ್ದು ಕಿವಿ ಒಡೆದಪುದು ಎಂಬಂತೆ ಆಗೆ ಘೀಳಿಡಲ್ ತಂದೆಯ ಶಿಥಿಲ ಪಕ್ಷ ಸಂಪುಟದೊಳ್ ಪೊಕ್ಕೆಂ.

ಪದ-ಅರ್ಥ:

ಅಂತು-ಹಾಗೆ;  ಅಶ್ರುತ-ಕೇಳದ, ಅಪೂರ್ವ-ವಿಶೇಷವಾದ;  ತೊಟ್ಟನೆ-ತಟ್ಟನೆ;  ಕಿವಿಯೊಡೆದಪುದು-ಕಿವಿ ಒಡೆದು ಹೋಗುತ್ತದೆ;  ಎಂಬಂತಾಗೆ-ಎನ್ನುವಂತಾಗಲು;  ಪೊಕ್ಕೆಂ-ಸೇರಿಕೊಂಡೆನು; ಶಿಥಿಲ-ಜೀರ್ಣಗೊಂಡ, ಶಕ್ತಿಕಳೆದುಕೊಂಡ;  ಪಕ್ಷಸಂಪುಟ-ರೆಕ್ಕೆಗಳ ಹೊದಿಕೆ.

            ಹಾಗೆ ಅದುವರೆಗೂ ಕೇಳದ, ವಿಶೇಷವಾದ, ಕರ್ಕಶವಾದ ಬೊಬ್ಬೆಯ ಧ್ವನಿಯನ್ನು ಕೇಳಿ, ಜೊತೆಗೆ ಆನೆಗಳ ಘೀಳಾಟವನ್ನು ಕೇಳಿ ಕಿವಿಯೇ ಒಡೆದುಹೋಗುತ್ತಿದೆ ಎಂಬಂತಾಗಿ ಹೆದರಿಕೊಂಡು ತಂದೆಯ ಜೀರ್ಣಗೊಂಡ ರೆಕ್ಕೆಗಳ ಹೊದಿಕೆಯೊಳಗೆ ಪ್ರವೇಶಿಸಿದೆನು.

            (ಕಾಡಿನಲ್ಲಿ ಬೇಡ ಪಡೆಯ ಕೋಲಾಹಲ, ಕರ್ಕಶವಾದ ಬೊಬ್ಬೆಗಳನ್ನು ಕೇಳಿ ಮರಿಗಿಳಿ ಮೊದಲೇ ಹೆದರಿಹೋಗಿತ್ತು. ಮರದ ಮೇಲಿನ ಪಕ್ಷಿಗಳೆಲ್ಲ ಕಿರಿಚಾಡತೊಡಗಿದ್ದವು. ಅದಲ್ಲದೆ, ಬೇಡರ ಬೊಬ್ಬೆಗೆ ಕೆರಳಿದ ಮದಗಜಗಳು ಇನ್ನಷ್ಟು ಭೀಕರವಾಗಿ ಘೀಳಾಡತೊಡಗಿದವು. ಈ ಬೊಬ್ಬೆ, ಘೀಳಾಟಗಳು ಮರಿಗಿಳಿಗೆ ಹೊಸದು. ಅದು ಆ  ಧ್ವನಿಗಳನ್ನು ಕೇಳಿ ಇನ್ನಷ್ಟು ಗಾಬರಿ ಹೆದರಿಕೆಗಳಿಗೆ ಒಳಗಾಯಿತು. ಹೆದರಿಕೆಯಾದೊಡನೆ ಮರಿಗಳು ತಮ್ಮ ಹೆತ್ತವರ ರೆಕ್ಕೆಗಳ ಹೊದಿಕೆಯೊಳಗೆ ಸೇರಿ ರಕ್ಷಣೆ ಪಡೆಯುವುದು ಸಹಜವಾದರೂ ಇಲ್ಲಿ ತಂದೆಯ ರೆಕ್ಕೆಗಳು ಈಗಾಗಲೇ ತಮ್ಮ ಶಕ್ತಿಯನ್ನು ಕಳೆದುಕೊಂಡಿದ್ದವು, ಮಾತ್ರವಲ್ಲ ಗರಿಗಳೂ ಉದುರಿಹೋಗಿದ್ದವು. ಆ ರೆಕ್ಕೆಗಳ ಹೊದಿಕೆಯಲ್ಲಿ ತನಗೆ ರಕ್ಷಣೆ ಸಿಗಲಾರದು ಎಂಬ ಅರಿವು  ಆ ಮರಿಗಿಳಿಗಿಲ್ಲ. ಅದು ಹೆದರಿ ತನ್ನ ತಂದೆಯ ರೆಕ್ಕೆಗಳ ಹೊದಿಕೆಯೊಳಗೆ ನುಸುಳಿಕೊಂಡಿತು.)

 

ವ|| ಅಂತಾ ಕಳಕಳರವಮಡಂಗಲೊಡನೆಯುದ್ಭೂತವಿಸ್ಮಯನಾಗಿ ತಂದೆಯಿರಿಸಿದ ಪಕ್ಷಸಂಪುಟದೊಳಗಣಿಂ ಪೊಱಮಟ್ಟಿದೇನೆನುತ್ತಮಾಂ ಪೊೞಲೊಳಗಿರ್ದು ಮೆಲ್ಲನೆ ನಿಳ್ಕಿನಿಳ್ಕಿ ದೆಪ್ಪಳಿಸಿ ನೋೞ್ಪನ್ನೆಗಮಲ್ಲಿ-

ಗದ್ಯದ ಅನ್ವಯಕ್ರಮ:

ಅಂತು ಆ ಕಳಕಳ ರವಂ ಅಡಂಗಲ್, ಒಡನೆ ಉದ್ಭೂತ ವಿಸ್ಮಯನ್ ಆಗಿ, ತಂದೆ ಇರಿಸಿದ ಪಕ್ಷಸಂಪುಟದ ಒಳಗಣಿಂದ ಪೊಱಮಟ್ಟು, ಇದೇನ್ ಎನುತ್ತಂ ಆಂ ಪೊೞಲ ಒಳಗಿರ್ದು ಮೆಲ್ಲನೆ ನಿಳ್ಕಿ ನಿಳ್ಕಿ ದೆಪ್ಪಳಿಸಿ ನೋೞ್ಪ ಅನ್ನೆಗಂ ಅಲ್ಲಿ-

ಪದ-ಅರ್ಥ:

ಅಂತು-ಹಾಗೆ;  ಕಳಕಳರವ-ಕೋಲಾಹಲ ಶಬ್ದ;  ಅಡಂಗಲ್-ಅಡಗಲು, ಕಡಿಮೆಯಾಗಲು;  ಒಡನೆ-ಕೂಡಲೆ;  ಉದ್ಭೂತ-ಉಂಟಾದ;  ಪಕ್ಷಸಂಪುಟ-ರಕ್ಕೆಗಳ ಹೊದಿಕೆ;  ಒಳಗಣಿಂದ-ಒಳಗಿನಿಂದ;  ಪೊಱಮಟ್ಟು-ಹೊರಹೊರಟು, ಹೊರಬಂದು;  ಪೊೞಲೊಳಗಿರ್ದು-ಪೊಟರೆಯೊಳಗಿದ್ದು;  ನಿಳ್ಕಿನಿಳ್ಕಿ-ಇಣಿಕಿ ಇಣಿಕಿ;  ದೆಪ್ಪಳಿಸಿ-ಬೆರಗಾಗಿ; ನೋೞ್ಪ-ನೋಡುವ; ಅನ್ನೆಗಂ-ಅಷ್ಟರಲ್ಲಿ.

            ಹಾಗೆ ಉಂಟಾದ ಕೋಲಾಹಲ ಶಬ್ದವು ಕಡಿಮೆಯಾಗಲು, ಕೂಡಲೆ ಮರಿಗಿಳಿಯಲ್ಲಿ ಉಂಟಾದ ಬೆರಗಿನಿಂದ ತನ್ನ ತಂದೆಯ ರೆಕ್ಕೆಗಳ ಹೊದಿಕೆಯಿಂದ ಹೊರಬಂದು ಇದೇನು ಸದ್ದು ಎಂದು ಪೊಟರೆಯೊಳಗಿಂದಲೇ ಮೆಲ್ಲನೆ ಇಣಿಕಿ ಇಣಿಕಿ ಬೆರಗಾಗಿ ನೋಡುತ್ತಿರುವಷ್ಟರಲ್ಲಿ-

            (ಸ್ವಲ್ಪ ಹೊತ್ತಿನಲ್ಲಿ ಕಾಡಿನಲ್ಲಿ ಉಂಟಾದ ಕೋಲಾಹಲವು ಕಡಿಮೆಯಾಗತೊಡಗಿತು. ಗಿಳಿಮರಿಗೆ ಅದೇನು ಸದ್ದು ಎಂಬುದರ ಬಗ್ಗೆ ಬಹಳ ಕುತೂಹಲ. ಅದು ತಾನು ಹೆದರಿ ಅಡಗಿಕೊಂಡಿದ್ದ ತನ್ನ ತಂದೆಯ ಶಿಥಿಲವಾದ ರೆಕ್ಕೆಗಳ ಹೊದಿಕೆಯಿಂದ ಮೆಲ್ಲನೆ ಹೊರಬಂದು ತಾನು ವಾಸವಾಗಿದ್ದ ಪೊಟರೆಯಲ್ಲಿಯೇ ಅಡಗಿಕುಳಿತು ಮೆಲ್ಲಮೆಲ್ಲನೆ ಹೊರಗೆ ಕತ್ತು ಚಾಚಿ ಬೆರಗುಕಣ್ಣುಗಳಿಂದ ಇಣಿಕಿಹಾಕತೊಡಗಿತು. ಇದೆಲ್ಲವೂ ಗಿಳಿಮರಿಗೆ ಇನ್ನೂ ಹೊಸತು.  ಆದರೆ ಹೀಗೆ ನೋಡುತ್ತಿರುವಷ್ಟರಲ್ಲಿ ದೂರದಲ್ಲಿ ಬೇಡರ ಪಡೆ ಬೊಬ್ಬಿಡುತ್ತ ಬರುತ್ತಿರುವುದು ಕಾಣಿಸಿತು.

 

ಇದು ನವಕಾಳಮೇಘಚಯಮಲ್ಲಿದು ಘೋರಮಹಾಂಧಕಾರಮ

ಲ್ಲಿದು ವಿಚರತ್ತಮಾಳವನಮಲ್ಲಿದು ಘೋರಕೃತಾಂತಸೈನ್ಯಮ

ಲ್ಲಿದು ಕಲಿಕಾಲಬಂಧುಕುಲಮಲ್ಲಿದು ದುರ್ದರ ದಾನವೌಘಮೆಂ

ಬುದನೆನಿಸುತ್ತಮಲ್ಲಿ ಬರುತಿರ್ದುದನಂತಕಿರಾತಸಂಕುಳಂ   ೧೦

ಪದ್ಯದ ಅನ್ವಯಕ್ರಮ:

ಇದು ನವಕಾಳಮೇಘಚಯಂ, ಅಲ್ಲ; ಇದು ಘೋರ ಮಹಾ ಅಂಧಕಾರಂ, ಅಲ್ಲ; ಇದು ವಿಚರತ್ತ ಮಾಳವನಂ, ಅಲ್ಲ; ಇದು ಘೋರ ಕೃತಾಂತ ಸೈನ್ಯಂ, ಅಲ್ಲ; ಇದು ಕಲಿಕಾಲ ಬಂಧುಕುಲಂ, ಅಲ್ಲ; ಇದು ದುರ್ದರ ದಾನವ ಔಘಂ ಎಂಬುದನ್ ಎನಿಸುತ್ತಂ ಅಲ್ಲಿ ಅನಂತ ಕಿರಾತ ಸಂಕುಳಂ. ಬರುತ ಇರ್ದುದು

ಪದ-ಅರ್ಥ:

ನವಕಾಳಮೇಘಚಯಂ (ನವ+ಕಾಳ+ಮೇಘ+ಚಯಂ)- ಕಪ್ಪಾದ ಹೊಸ ಮೋಡಗಳ ಸಮೂಹ;  ಘೋರಮಹಾಂಧಕಾರಂ (ಘೋರ+ಮಹಾ+ಅಂಧಕಾರಂ)-ಭೀಕರವಾದ ದಟ್ಟ ಕಗ್ಗತ್ತಲು;  ವಿಚರತ್ತಮಾಳವನಂ (ವಿಚರತ್ತ+ಮಾಳ+ವನಂ)-ಚಲಿಸುತ್ತಿರುವ ಹೊಂಗೆಮರಗಳ ಕಾಡು;  ಘೋರಕೃತಾಂತಸೈನ್ಯ-ಭೀಕರವಾದ ಯಮನ ಸೈನ್ಯ;  ಕಲಿಕಾಲಬಂಧುಕುಲಂ-ಕಲಿಪುರುಷನ ಬಂಧುಗಳ ಸಮೂಹ;  ದುರ್ದರ-ಎದುರಿಸಲು ಅಸಾಧ್ಯವಾದ, ಗೆಲ್ಲಲು ಸಾಧ್ಯವಾಗದ;  ದಾನವವೌಘ-ರಾಕ್ಷಸರ ಗುಂಪು;  ಎನಿಸುತ್ತಂ-ಎನಿಸುವಂತೆ;  ಕಿರಾತಸಂಕುಳಂ-ಬೇಡರ ಪಡೆ.

            ಇದು ಕಪ್ಪಾದ ಮೋಡಗಳ ಸಮೂಹವಾಗಿರಬಹುದೇ! ಇದು ಭೀಕರವಾದ ಕಗ್ಗತ್ತಲೆಯಾಗಿರಬಹುದೇ! ಇದು ಚಲಿಸುತ್ತಿರುವ ಹೊಂಗೆಮರಗಳ ಕಾಡಾಗಿರಬಹುದೇ! ಇದು ಅತ್ಯಂತ ಭೀಕರವಾದ ಯಮನ ಸೈನ್ಯವಾಗಿರಬಹುದೇ! ಇದು ಕಲಿಪುರುಷನ ಬಂಧುಗಳ ಸಮೂಹವಾಗಿರಬಹುದೇ! ಇದು ಜಯಿಸಲು ಅಸಾಧ್ಯವಾದ ರಾಕ್ಷಸರ ಸಮೂಹವಾಗಿರಬಹುದೇ! ಎಂದೆನಿಸುವಂತೆ ಬೇಡರ ದೊಡ್ಡ ಪಡೆಯೊಂದು ಕಾಡಿನೊಳಗೆ ಕೋಲಾಹಲವನ್ನುಂಟು ಮಾಡುತ್ತ ಬರುತ್ತಿತ್ತು.

            (ಮರದ ಮೇಲಿನ ಪಕ್ಷಿಗಳ ಕೋಲಾಹಲ ಕಡಿಮೆಯಾದೊಡನೆ ಮರಿಗಿಳಿ ತನ್ನ ತಂದೆಯ ರೆಕ್ಕೆಗಳ ಎಡೆಯಿಂದ ಹೊರಬಂದು ಹೊರಗೆ ಇಣಿಕಿ ನೋಡುತ್ತಿದ್ದಂತೆಯೇ ಭಯ ಹುಟ್ಟಿಸುವ ದೃಶ್ಯವೊಂದು ಅದಕ್ಕೆ ಗೋಚರಿಸಿತು. ದೂರದಲ್ಲಿ ಕಪ್ಪಾದ ಮೋಡಗಳ ಸಮೂಹವೇ ತಾನು ವಾಸಿಸಿಕೊಂಡಿದ್ದ ಮರದ ಕಡೆಗೆ ಬರುತ್ತಿರುವಂತೆ ಅನ್ನಿಸಿತು. ಆದರೆ ಒಂದು ಕ್ಷಣದೊಳಗೆ ಅದು ಭೀಕರವಾದ ಕಗ್ಗತ್ತಲೆಯಂತೆ ಕಾಣಿಸಿತು. ಮತ್ತೆ ಅದು ಚಲಿಸುತ್ತಿರುವ ಹೊಂಗೆ ಮರಗಳ ಗುಂಪಾಗಿರಬಹುದೇ ಎಂಬ ಸಂಶಯವೂ ಬಂದಿತು. ಮತ್ತೊಂದು ಕ್ಷಣದಲ್ಲಿ ಅದು ಯಮನ ಭೀಕರವಾದ ಸೈನ್ಯವೇ ತಮ್ಮ ಕಡೆ ಒತ್ತರಿಸಿ ಬರುತ್ತಿರುವಂತೆ ಕಂಡಿತು. ಮತ್ತೊಂದು ಕ್ಷಣದಲ್ಲಿ ಕಲಿಪುರುಷನು ತನ್ನೆಲ್ಲ ಸೈನ್ಯವನ್ನೂ ಕೂಡಿಕೊಂಡು ಬರುತ್ತಿರಬಹುದೇ! ಎಂದೆನಿಸಿತು. ಇನ್ನೊಂದು ಕ್ಷಣದಲ್ಲಿ ಜಯಿಸಲು ಅಸಾಧ್ಯವಾದ ಭೀಕರವಾದ ರಾಕ್ಷಸರ ಸೈನ್ಯವೇ ತಾವಿದ್ದ ಮರದ ಕಡೆಗೆ ಒತ್ತರಿಸಿ ಬರುತ್ತಿದೆಯೇನೋ ಎಂದೆನಿಸಿತು. ಅಲ್ಲಿಗೆ ಬರುತ್ತಿರುವ ಬೇಡರ ಪಡೆಯು ಮರಿಗಿಳಿಗೆ ಹೀಗೆ ಕ್ಷಣಕ್ಷಣಕ್ಕೂ ಭಿನ್ನಭಿನ್ನ ರೀತಿಯಿಂದ  ಕಾಣಿಸತೊಡಗಿತು. ಅದು ಭಿನ್ನಭಿನ್ನ ರೀತಿಗಳಿಂದ ಭಯವನ್ನು ಹುಟ್ಟಿಸುತ್ತಿತ್ತು.)

 

ವ|| ಅಂತುತ್ಪಾತವೇತಾಳವಡೆಯಂತೆ ಭಯಂಕರಮಾದ ಬೇಡವಡೆಯ ನಡುವೆ

ಗದ್ಯದ ಅನ್ವಯಕ್ರಮ:

ಅಂತು ಉತ್ಪಾತ ಬೇತಾಳ ಪಡೆಯಂತೆ ಭಯಂಕರಂ ಆದ ಬೇಡ ಪಡೆಯ ನಡುವೆ-

 

ಪದ-ಅರ್ಥ:

ಅಂತು-ಹಾಗೆ;  ಉತ್ಪಾತ-ಪ್ರಳಯ;  ವೇತಾಳವಡೆಯಂತೆ-ಬೇತಾಳ ಸೈನ್ಯದಂತೆ;  ಭಯಂಕರಮಾದ-ಭೀಕರವಾದ;  ಬೇಡವಡೆ-ಬೇಡರ ಗುಂಪು, ಬೇಡರ ಸೈನ್ಯ. 

ಹಾಗೆ ಪ್ರಳಯಕಾಲದ ಬೇತಾಳ ಸೈನ್ಯದಂತೆ ಭೀಕರವಾದ ಬೇಡರ ಸೈನ್ಯದ ನಡುವೆ-

 

ಕರ್ಬೊನ್ನಿಂದಂ ವಿಧಾತ್ರಂ ಸಮೆದನಿವನನೆಂಬೊಂದು ಕಾರ್ಕಶ್ಯದಿಂದಂ

ಸರ್ಬಾಂಗಂ ಕಣ್ಗಗುರ್ವಂ ಪಡೆಯಲಡವಿಯಂ ಕೂಡೆ ಕಾಳಿಂದಿಯೆತ್ತಂ

ಪರ್ಬಿತ್ತೆಂಬಂತೆ ನೀಳೋತ್ಪಳದಳರುಚಿರಶ್ಯಾಮದೇಹಾಂಶು ಪರ್ಬ

ಲ್ಕೊರ್ಬಂ ಬಂದಂ ಪುಳಿಂದಪ್ರಕರಬಹುಳಸೇನಾಪರೀತಂ ಕಿರಾತಂ  ೧೧

ಪದ್ಯದ ಅನ್ವಯಕ್ರಮ:

ವಿಧಾತ್ರಂ ಇವನನ್ ಕರ್ ಪೊನ್ನಿನಿಂದಂ ಸಮೆದನ್ ಎಂಬ ಒಂದು ಕಾರ್ಕಶ್ಯದಿಂದಂ ಸರ್ಬಾಂಗಂ ಕಣ್ಗೆ ಅಗುರ್ವಂ ಪಡೆಯಲ್, ಕಾಳಿಂದಿಯೆತ್ತಂ ಅಡವಿಯಂ ಕೂಡೆ ಪರ್ಬಿತ್ತು ಎಂಬಂತೆ ನೀಳೋತ್ಪಳ ದಳ ರುಚಿರ ಶ್ಯಾಮ ದೇಹಾಂಶು ಪರ್ಬಲ್ಕೆ ಪುಳಿಂದ ಪ್ರಕರ ಬಹುಳ ಸೇನಾಪರೀತಂ ಒರ್ಬಂ ಕಿರಾತಂ ಬಂದಂ. 

ಪದ-ಅರ್ಥ:

ಕರ್ಪೊನ್-ಕಬ್ಬಿಣ;  ವಿಧಾತ್ರಂ-ವಿಧಿ, ಬ್ರಹ್ಮ;  ಸಮೆದನ್-ಸೃಷ್ಟಿಸಿದ್ದಾನೆ;  ಕಾರ್ಕಶ್ಯದಿಂದಂ-ಕರ್ಕಶವಾಗಿ, ಒರಟಾಗಿ;  ಸರ್ಬಾಂಗ-ಸರ್ವಾಂಗ, ಸಮಸ್ತ ಅಂಗಗಳು;  ಕಣ್ಗಗುರ್ವಂ-ಕಣ್ಣುಗಳಿಗೆ ಭಯಹುಟ್ಟಿಸುವಂತೆ;  ಅಡವಿಯಂ ಕೂಡೆ-ಕಾಡೆಲ್ಲವನ್ನೂ ಸೇರಿಕೊಂಡು;  ಕಾಳಿಂದಿಯೆತ್ತಂ-ಕಾಳಿಂದಿ(ಯಮುನಾ ನದಿ)ಯ ಕಡೆಯಿಂದ; ಪರ್ಬಿತ್ತೆಂಬಂತೆ-ಹಬ್ಬಿತು ಎನ್ನುವಂತೆ;  ನೀಳೋತ್ಪಳ-ಕನ್ನೈದಿಲೆ;  ದಳ-ಎಸಳು;  ರುಚಿರ-ಕಾಂತಿ;  ಶ್ಯಾಮದೇಹಾಂಶು-ಕಪ್ಪಾದ ಮೈಕಾಂತಿ;  ಪರ್ಬಲ್ಕೆ-ಹಬ್ಬಲು, ಹರಡಿಕೊಳ್ಳಲು;  ಒರ್ಬಂ-ಒಬ್ಬನು;  ಪುಳಿಂದ ಪ್ರಕರ– ಬೇಡರ ಗುಂಪು;  ಬಹುಳಸೇನಾಪರೀತ-ದೊಡ್ಡ ಸೇನೆಯನ್ನು ಕೂಡಿಕೊಂಡ;  ಕಿರಾತ-ಬೇಡ.  

            ಸೃಷ್ಟಿಕರ್ತನಾದ ಬ್ರಹ್ಮನು ಈತನನ್ನು ಕಬ್ಬಿಣದಿಂದ ಸೃಷ್ಟಿಸಿದನೋ ಎನ್ನುವಂತೆ ಒರಟು ಒರಟಾದ ದೇಹವನ್ನು ಹೊಂದಿ ಸಮಸ್ತ ದೇಹವೇ ಕಣ್ಣುಗಳಿಗೆ ಭಯವನ್ನು ಹುಟ್ಟಿಸುವಂತೆ, ಕಾಳಿಂದಿ ನದಿಯ ಕಡೆಯಿಂದ ಸಮಸ್ತ ಅರಣ್ಯಪ್ರದೇಶವೆಲ್ಲವನ್ನೂ ಹಬ್ಬುತ್ತಿದೆಯೇನೋ ಎನ್ನುವಂತೆ, ಕನ್ನೈದಿಲೆಯ ಎಸಳುಗಳಂತಹ ಕಪ್ಪಾದ ಮೈ ಮೈಕಾಂತಿಯನ್ನು ಹೊಂದಿ, ಆ ಕಪ್ಪಾದ ಕಾಂತಿಯನ್ನು ಕಾಡಿನಲ್ಲೆಲ್ಲ ಪಸರಿಸಿಕೊಳ್ಳುತ್ತ ಒಬ್ಬ ಬೇಡನು ತನ್ನ ಬಹಳ ದೊಡ್ಡದಾದ ಸೇನೆಯನ್ನು ಕೂಡಿಕೊಂಡು ಮರಿಗಿಳಿ ವಾಸವಾಗಿರುವ ಮರದ ಕಡೆಗೆ  ಬರತೊಡಗಿದನು.

            (ಕಾಡಿನಲ್ಲಿ ಉಂಟಾದ ಕೋಲಾಹಲ ಧ್ವನಿಗೆ ಮರಿಗಿಳಿ ಮೊದಲೇ ಹೆದರಿಕೊಂಡಿತ್ತು. ಮೆಲ್ಲನೆ ಪೊಟರೆಯೊಳಗಿಂದ ಹೊರಗೆ ಇಣಿಕಿ ನೋಡುತ್ತಿದ್ದಂತೆಯೇ ದೂರದಲ್ಲಿ ಬೊಬ್ಬಿಡುತ್ತ ಬರುತ್ತಿದ್ದ ಬೇಡಪಡೆಯ ಆರ್ಭಟ ಅದನ್ನು ಇನ್ನಷ್ಟು ಹೆದರಿಕೊಳ್ಳುವಂತೆ ಮಾಡಿತು. ದಟ್ಟವಾದ ನೆರಳಿನಿಂದ ಕೂಡಿದ ಅರಣ್ಯದೊಳಗೆ ಇನ್ನಷ್ಟು ಕರಿಕಬ್ಬಿಣದಿಂದ ಉಂಟಾಗಿದೆಯೋ ಎನ್ನುವಂತಹ  ಕಪ್ಪಾದ ಒರಟು ಒರಟಾದ ದೇಹವನ್ನು ಹೊಂದಿರುವ, ನೋಡುವವರ ಕಣ್ಣುಗಳಿಗೆ ಭಯವನ್ನು ಹುಟ್ಟಿಸುವಂತಿರುವ ಬೇಡರ ಪಡೆಯನ್ನು ನೋಡಿದಾಗ ಅವರೆಲ್ಲರೂ ಕಪ್ಪಾದ ಕಾಳಿಂದಿ ನದಿಯ ಕಡೆಯಿಂದ ದಟ್ಟಕತ್ತಲೆಯೇ ಅರಣ್ಯಕ್ಕೆ ನುಗ್ಗಿಬರುತ್ತಿದೆಯೇನೋ ಎನ್ನುವಂತೆ ಭಾಸವಾಗುತ್ತಿತ್ತು. ಬೇಡರ ಗುಂಪಿನ ಮಧ್ಯದಲ್ಲಿದ್ದ ಬೇಡನಾಯಕ ಕನ್ನೈದಿಲೆಯ ಎಸಳಿನಂತೆ ಕಪ್ಪಾದ ಮೈಕಾಂತಿಯನ್ನು ಹೊಂದಿ, ಅದನ್ನು ಸಮಸ್ತ ಕಾಡೊಳಗೆ ಪಸರಿಸಿಕೊಂಡು ಬರುತ್ತಿದ್ದಾನೋ ಎನ್ನುವಂತೆ ತನ್ನ ವಿಶಾಲವಾದ ಬೇಡಪಡೆಯನ್ನು ಕೂಡಿಕೊಂಡು ಮರಿಗಿಳಿ ವಾಸವಾಗಿರುವ ಮರದ ಕಡೆಗೆ ಬರುತ್ತಿದ್ದನು.)

 

ಕರಿದಂತಂಗಳನಾಂತು ಪೀಲಿವೊಱೆಯಂ ತಳ್ಕೈಸಿ ಗಂಧೇಭ ಬಂ

ಧುರಮುಕ್ತಾಫಳಭಾರಮಂ ತಳೆದು ಮಾಂಸವ್ರಾತಮಂ ಪೊತ್ತು ಕೇ

ಸರಿಚರ್ಮವ್ರಜಮಂ ತೆರಳ್ಚಿ ಚಮರೀವಾಲಂಗಳಂ ತಾಳ್ದು ಬಂ

ದರನೇಕರ್ ಬೞಿಸಂದು ಕಾಡೊಡೆಯನಂ ಕಾಂತಾರದೊಳ್ ಲುಬ್ಧಕರ್  ೧೨

ಪದ್ಯದ ಅನ್ವಯಕ್ರಮ:

ಅನೇಕರ್ ಲುಬ್ದಕರ್ ಕರಿ ದಂತಂಗಳನ್ ಆಂತು, ಪೀಲಿವೊಱೆಯಂ ತಳ್ಕೈಸಿ, ಗಂಧೇಭ ಬಂಧುರ ಮುಕ್ತಾಫಳ ಭಾರಮಂ ತಳೆದು, ಮಾಂಸವ್ರಾತಮಂ ಪೊತ್ತು, ಕೇಸರಿ ಚರ್ಮವ್ರಜಮಂ ತೆರಳ್ಚಿ, ಚಮರೀ ವಾಲಂಗಳಂ ತಾಳ್ದು, ಕಾಂತಾರದೊಳ್ ಕಾಡ ಒಡೆಯನಂ ಬೞಿಸಂದು ಬಂದರ್.

ಪದ-ಅರ್ಥ:

ಕರಿದಂತ-ಆನೆಗಳ ದಂತ;  ಆಂತು-ಹೊತ್ತುಕೊಂಡು; ಪೀಲಿವೊಱೆ-ನವಿಲುಗಳ ಕಟ್ಟು;  ತಳ್ಕೈಸಿ-ಇರುಕಿಕೊಂಡು;  ಗಂಧೇಭ-ಮದತುಂಬಿದ ಆನೆ;  ಬಂಧುರಮುಕ್ತಾಫಳ-ಸುಂದರವಾದ ಕಟ್ಟಾಣಿ ಮುತ್ತು;  ಭಾರಮಂ ತಳೆದು-ಹೊರೆಯನ್ನು ಹೊತ್ತುಕೊಂಡು;  ಮಾಂಸವ್ರಾತ-ಮಾಂಸದ ಹೊರೆ;  ಪೊತ್ತು-ಹೊತ್ತು;  ಕೇಸರಿ-ಸಿಂಹ;  ಚರ್ಮವ್ರಜ-ಚರ್ಮಗಳ ಹೊರೆ;  ತೆರಳ್ಚಿ– ಹೊತ್ತುಕೊಂಡು;  ಚಮರೀವಾಲಂಗಳಂ-ಚಮರೀಮೃಗಗಳ ಬಾಲಗಳನ್ನು;  ತಾಳ್ದು-ಹೊತ್ತುಕೊಂಡು; ಬೞಿಸಂದು-ಹಿಂಬಾಲಿಸಿಕೊಂಡು; ಕಾಡೊಡೆಯ-ಬೇಡರ ಮುಖ್ಯಸ್ಥ;  ಕಾಂತಾರದೊಳ್-ಕಾಡಿನಲ್ಲಿ;  ಲುಬ್ದಕರ್-ಬೇಟೆಗಾರರು. 

            ಕೆಲವು ಬೇಟೆಗಾರರು ಆನೆದಂತಗಳ ಹೊರೆಯನ್ನು ಹೊತ್ತುಕೊಂಡು, ನವಿಲುಗರಿಗಳ  ಹೊರೆಗಳನ್ನು ಇರುಕಿಕೊಂಡು, ಮದದಾನೆಗಳ ಮನೋಹರವಾದ ಕಟ್ಟಾಣಿಮುತ್ತುಗಳ ಹೊರೆಗಳನ್ನು ಹೊತ್ತುಕೊಂಡು, ಮಾಂಸದ ಹೊರೆಗಳನ್ನು ಹೊತ್ತುಕೊಂಡು, ಸಿಂಹಗಳ ಚರ್ಮಗಳ ಹೊರೆಗಳನ್ನು ಹೊತ್ತುಕೊಂಡು, ಚಮರೀಮೃಗಗಳ ಬಾಲಗಳ ಹೊರೆಯನ್ನು ಹೊತ್ತುಕೊಂಡು ನೂರಾರು ಸಂಖ್ಯೆಯಲ್ಲಿ ತಮ್ಮ ಒಡೆಯನ್ನು ಅನುಸರಿಸಿಕೊಂಡು ಕಾಡಿನೊಳಗೆ ಬರುತ್ತಿದ್ದರು.

            ನೂರಾರು ಸಂಖ್ಯೆಯಲ್ಲಿ ಬೇಟೆಗಾರರು ಬೇಟೆಯಾಡುತ್ತ, ತಾವು ಬೇಟೆಯಾಡಿದ ಆನೆಗಳ ದಂತಗಳನ್ನು ಹೊರೆಕಟ್ಟಿಕೊಂಡು, ಕೆಲವರು ಅವುಗಳನ್ನು ತಲೆಯ ಮೇಲೆ ಹೊತ್ತುಕೊಂಡು, ಕೆಲವರು ನವಿಲುಗರಿಗಳ ಹೊರೆಗಳನ್ನು ಕಂಕುಳಲ್ಲಿ ಇರುಕಿಕೊಂಡು, ಮತ್ತೆ ಕೆಲವರು ಮದದಾನೆಗಳನ್ನು ಕೊಂದು ಅವುಗಳ ಕುಂಭಸ್ಥಳವನ್ನು ಭೇದಿಸಿ ಅದರೊಳಗಿರುವ ಕಟ್ಟಾಣಿಮುತ್ತುಗಳನ್ನು ಸಂಗ್ರಹಿಸಿ ಹೊರೆಯಾಗಿ ಕಟ್ಟಿ ತಲೆಯಮೇಲೆ ಹೊತ್ತುಕೊಂಡು, ಇನ್ನು ಕೆಲವರು ಬೇಟೆಯಾಡಿದ ವಿವಿಧ ಮೃಗಗಳ ಮಾಂಸವನ್ನು ಗಂಟುಕಟ್ಟಿ ತಲೆಯ ಮೇಲೆ ಹೊತ್ತುಕೊಂಡು, ಮತ್ತೆ ಕೆಲವರು ಸಿಂಹಗಳನ್ನು ಬೇಟೆಯಾಡಿ ಅವುಗಳ ಚರ್ಮಗಳನ್ನು ಸುಲಿದು ಹೊರೆಯಾಗಿ ಕಟ್ಟಿ ಹೊತ್ತುಕೊಂಡು, ಚಮರೀಮೃಗಗಳನ್ನು ಬೇಟೆಯಾಡಿ ಅವುಗಳ ಬಾಲಗಳನ್ನು ತುಂಡರಿಸಿ ಹೊರೆಯಾಗಿ ಹೊತ್ತುಕೊಂಡು ತಮ್ಮ ನಾಯಕನನ್ನು ಅನುಸರಿಸಿಕೊಂಡು ಕಾಡಿನೊಳಗೆ ಬರುತ್ತಿದ್ದರು. ಅವರ ವರ್ತನೆ, ನಡೆದಾಡುವ ರೀತಿ, ಹೊತ್ತುಕೊಂಡಿರುವ ಮಾಂಸಾದಿಗಳ ಹೊರೆಗಳು, ಅವರ ಆರ್ಭಟಗಳು ಕಾಡಿನಲ್ಲಿದ್ದ ಪಕ್ಷಿಗಳಿಗೆ ಹೆದರಿಕೆಯನ್ನು ಹುಟ್ಟಿಸುವಂತಿತ್ತು.) 

 

ವ|| ಅಂತನೇಕ ಶಬರಪರಿವೃತನಾಗಿ ಬರುತಿರ್ದನಂತುಮಲ್ಲದೆಯುಂ-

ಗದ್ಯದ ಅನ್ವಯಕ್ರಮ:

ಅಂತು ಅನೇಕ ಶಬರ ಪರಿವೃತನಾಗಿ ಬರುತ ಇರ್ದನ್ ಅಂತುಂ ಅಲ್ಲದೆಯುಂ

ಪದ-ಅರ್ಥ:

ಅಂತು-ಹಾಗೆ;  ಶಬರ-ಬೇಡ;  ಪರಿವೃತನಾಗಿ-ಕೂಡಿಕೊಂಡು.

ಹಾಗೆ ಅನೇಕ ಬೇಡರನ್ನು ಕೂಡಿಕೊಂಡು ಬರುತ್ತ ಇದ್ದನು. ಹಾಗೆ ಮಾತ್ರವಲ್ಲದೆ-

 

ಪಡೆವಂ ವಿಂಧ್ಯನಗೇಂದ್ರ

ಕ್ಕೊಡವುಟ್ಟಿದನಂತಕಂಗೆ ನಂಟಂ ಪಾಪ

ಕ್ಕೊಡನಾಡಿ ಕಲಿಗೆನಿಪ್ಪಂ

ಪೊಡವಿಯೊಳಿನ್ನಾತನಿಂ ಭಯಂಕರನಾವಂ  ೧೩

ಪದ್ಯದ ಅನ್ವಯಕ್ರಮ:

ವಿಂಧ್ಯ ನಗೇಂದ್ರಕ್ಕೆ ಪಡೆವಂ, ಅಂತಕಂಗೆ ಒಡಹುಟ್ಟಿದನ್, ಪಾಪಕ್ಕೆ ನಂಟಂ, ಕಲಿಗೆ ಒಡನಾಡಿ  ಎನಿಪ್ಪಂ, ಇನ್ನು ಪೊಡವಿಯೊಳ್ ಆತನಿಂ ಭಯಂಕನ್ ಆವಂ?

ಪದ-ಅರ್ಥ:

ಪಡೆವಂ-ಮಗನಾಗಿ ಹೊಂದಿದನು;  ವಿಂಧ್ಯನಗೇಂದ್ರ-ವಿಂಧ್ಯ ಪರ್ವತ;  ಒಡವುಟ್ಟಿದನ್-ಜೊತೆಗೆ ಹುಟ್ಟಿದವನು;  ಅಂತಕಂಗೆ-ಯಮನಿಗೆ;  ನಂಟಂ-ಬಂಧು;  ಒಡೆಯ-ಯಜಮಾನ;  ಕಲಿಗೆ-ಕಲಿಪುರುಷನಿಗೆ;  ಪೊಡವಿ-ಭೂಮಿ;  ಆತನಿಂ-ಆತನಿಗಿಂತ;  ಭಯಂಕರನಾವಂ-ಭಯಂಕರನಾದವನು ಯಾರಿದ್ದಾನೆ?

            ಈತ ವಿಂಧ್ಯ ಪರ್ವತಕ್ಕೆ ಮಗನಾಗಿ ಹುಟ್ಟಿದನೋ! ಯಮನಿಗೆ ಒಡಹುಟ್ಟಿದನೋ! ಪಾಪಕ್ಕೆ ನೆಂಟನಾಗಿ ಹುಟ್ಟಿದನೋ!, ಅಥವಾ ಕಲಿಪುರುಷನಿಗೆ ಜೊತೆಗಾರನಾಗಿ ಹುಟ್ಟಿದನೋ! ಎನ್ನುವಂತಿದ್ದ ಆ ಬೇಡನಾಯಕನಿಗಿಂತ ಭಯಂಕರನಾದವನು  ಈ ಭೂಮಿಯಲ್ಲಿ ಯಾರಿದ್ದಾನೆ? ಎನ್ನುವಂತೆ ಭೀಕರನಾಗಿ ಕಾಣಿಸುತ್ತಿದ್ದನು.

            (ಬೇಡನಾಯಕನ ರೂಪ, ಬಣ್ಣ, ವರ್ತನೆಗಳು, ಆತನ ಅಂಗಾಂಗಗಳೆಲ್ಲವೂ ಭಯಹುಟ್ಟಿಸುವಂತಿದ್ದವು. ಆತ ವಿಂಧ್ಯ ಪರ್ವತಕ್ಕೆ ಮಗನಾಗಿ ಹುಟ್ಟಿದ್ದಾನೋ ಎಂದೆನಿಸುತ್ತಿತ್ತು. ಪ್ರಾಣವನ್ನೇ ಹೊತ್ತೊಯ್ಯುವ ಯಮನಿಗೆ ತಮ್ಮನಾಗಿ ಹುಟ್ಟಿದ್ದಾನೋ ಎನಿಸುತ್ತಿತ್ತು. ಲೋಕದ ಸಕಲ ಪಾಪಗಳಿಗೆ ನೆಂಟನಾಗಿ ಹುಟ್ಟಿದ್ದಾನೋ ಎಂಬಂತೆ ಭಾಸವಾಗುತ್ತಿತ್ತು.  ಕಲಿಪುರುಷನಿಗೆ ಜೊತೆಗಾರನಾಗಿ ಹುಟ್ಟಿರುವನೋ ಎಂಬ ಸಂಶಯವೂ ಬರುತ್ತಿತ್ತು. ಭೂಮಿಯಲ್ಲಿ ಅವನಂತೆ ಭಯಂಕರರಾದ ವ್ಯಕ್ತಿಗಳು ಬಹುಶಃ ಯಾರೂ ಇರಲಿಕ್ಕಿಲ್ಲ ಎಂಬಂತೆ ಅನ್ನಿಸುತ್ತಿತ್ತು.)

 

ಆತನ ಪೆಸರಂ ಕೇಳ್ದೆಂ

ಮಾತಂಗಕನೆಂದು ಬೞಿಯಮಾ ಶಬರಂ ಸಂ

ಜಾತಶ್ರಮಂ ಕಿರಾತಸ

ಮೇತಂ ಶಾಲ್ಮಲಿ ಮಹೀಜಮಂ ಸಾರ್ತಂದಂ  ೧೪

ಪದ್ಯದ ಅನ್ವಯಕ್ರಮ:

ಆತನ ಪೆಸರಂ ಮಾತಂಗಕನ್ ಎಂದು ಕೇಳ್ದೆಂ, ಬೞಿಯಂ ಆ ಶಬರಂ ಸಂಜಾತ ಶ್ರಮಂ ಕಿರಾತ ಸಮೇತಂ ಶಾಲ್ಮಲಿ ಮಹೀಜಮಂ ಸಾರ್ ತಂದಂ.

ಪದ-ಅರ್ಥ:

ಪೆಸರ್-ಹೆಸರು;  ಬೞಿಯಂ-ಬಳಿಕ;  ಶಬರ-ಬೇಡ;  ಸಂಜಾತಶ್ರಮ-ಉಂಟಾದ ಆಯಾಸ;  ಕಿರಾತಸಮೇತ-ಬೇಡರ ಜತೆಗೂಡಿ;  ಶಾಲ್ಮಲಿ ಮಹೀಜ -ಬೂರುಗದ ಮರ;  ಸಾರ್ತಂದಂ-ಆಗಮಿಸಿದನು.

            ಆತನ ಹೆಸರು ಮಾತಂಗಕ ಎಂದು ತಿಳಿಯಿತು. ಅವನು ಬೇಟೆಯಾಡಿ ಆಯಾಸಗೊಂಡುದರಿಂದ ತನ್ನ ಸಹಚರ ಬೇಡರ ಜೊತೆಗೂಡಿ ಆಯಾಸ ಪರಿಹರಿಸಿಕೊಳ್ಳಲು ನಾವು ವಾಸವಾಗಿರುವ ಬೂರುಗದ ಮರದ ಸಮೀಪಕ್ಕೆ ಆಗಮಿಸಿದನು.

            (ಅವನು ಬೇಡರ ಪಡೆಯ ನಾಯಕ. ಆತನ ಹೆಸರು ಮಾತಂಗಕ ಎಂದು ಅನಂತರ ಗಿಳಿಮರಿಗೆ ತಿಳಿಯಿತು. ಬಹಳ ಹೊತ್ತಿನಿಂದ ಬೇಟೆಯಾಡಿಕೊಂಡು ಬಂದುದರಿಂದ ನಾಯಕ ಮಾತ್ರವಲ್ಲದೆ, ಬೇಡಪಡೆಯೆಲ್ಲವೂ ಆಯಾಸಗೊಂಡಿತ್ತು. ಆಯಾಸ ಪರಿಹಾರಕ್ಕಾಗಿ ಯೋಗ್ಯ ಸ್ಥಳವೊಂದನ್ನು ಹುಡುಕಿಕೊಂಡು ಬೇಡಪಡೆಯು ಗಿಳಿಮರಿಯು ವಾಸವಾಗಿದ್ದ ಬೃಹದಾಕಾರದ ಬೂರುಗದ ಮರದ ಸಮೀಪಕ್ಕೆ ಆಗಮಿಸಿತು. ಸನಿಹದಲ್ಲಿಯೇ ಸರೋವರವಿದ್ದುದರಿಂದಲೂ ಮರದ ಬುಡದಲ್ಲಿ ವಿಶಾಲವಾದ ಸ್ಥಳವಿದ್ದುದರಿಂದಲೂ  ಆಯಾಸವನ್ನು ಪರಿಹರಿಸಿಕೊಳ್ಳಲು ಅದೇ ಯೋಗ್ಯವಾದ ಸ್ಥಳವೆಂದು ಬೇಡರು ತಿಳಿದುಕೊಂಡು ಅಲ್ಲಿಗೆ ಆಗಮಿಸಿದರು.)

 

ವ|| ಅಂತು ನೆೞಲ್ಗೆವಂದುದ್ದಂಡಮಪ್ಪ ಕೋದಂಡಮಂ ಮರದ ಮೊದಲೊಳ್ ಸಾರ್ಚಿ ಪರಿಜನೋಪನೀತ ಪಲ್ಲವಾಸನದೊಳ್ ಕುಳ್ಳಿರ್ಪುದುಂ

ಗದ್ಯದ ಅನ್ವಯಕ್ರಮ:

ಅಂತು ನೆೞಲ್ಗೆ ವಂದು, ಉದ್ದಂಡಮಪ್ಪ ಕೋದಂಡಮಂ ಮರದ ಮೊದಲೊಳ್ ಸಾರ್ಚಿ, ಪರಿಜನೋಪನೀತ ಪಲ್ಲವ ಆಸನದೊಳ್ ಕುಳ್ಳಿರ್ಪುದುಂ-

ಪದ-ಅರ್ಥ:

ಅಂತು-ಹಾಗೆ;  ವಂದು-ಬಂದು;  ಉದ್ಡಂಡಮಪ್ಪ-ಹೆದೆಬಿಚ್ಚಿದ;  ಕೋದಂಡ-ಬಿಲ್ಲು;  ಮರದ ಮೊದಲೊಳ್-ಮರದ ಬುಡದಲ್ಲಿ;  ಸಾರ್ಚಿ-ಚಾಚಿ, ಒರಗಿಸಿ; ಪರಿಜನೋಪನೀತ-ಪರಿಚಾರಕರಿಂದ ತರಿಸಿಕೊಂಡ;  ಪಲ್ಲವಾಸನ-ಚಿಗುರೆಲೆಗಳ ಆಸನ;  ಕುಳ್ಳಿರ್ಪುದುಂ-ಕುಳಿತುಕೊಂಡಿರಲು.

            ಹಾಗೆ ಬೇಡರ ನಾಯಕನು ತನ್ನ ಸಂಗಡಿಗರೊಂದಿಗೆ ಬೂರುಗದ ಮರದ ಸಮೀಪಕ್ಕೆ ಬಂದು ಹೆದೆಬಿಚ್ಚಿದ ತನ್ನ ಬಿಲ್ಲನ್ನು ಮರದ ಬುಡದಲ್ಲಿ ಒರಗಿಸಿ, ತನ್ನ ಪರಿಚಾರಕರಿಂದ ತರಿಸಿಕೊಂಡ ಚಿಗುರೆಲೆಗಳ ಮೆತ್ತನೆಯ ಆಸನದಲ್ಲಿ ಕುಳಿತುಕೊಂಡನು.

 

ಕೊಳದೊಳೆ ಪೊಕ್ಕು ನೂಂಕಿ ಸರಸೀಜರಜಂಗಳನಲ್ಲಿ ಚಂದ್ರಮಂ

ಡಳಮೊಱೆದತ್ತು ಮುತ್ತುಗಳೊಸರ್ದುವೆನಿಪ್ಪ ಹಿಮೋದಕಂಗಳಂ

ಕುಳಿರ್ವ ಸರೋಜಪತ್ರಪುಟದಿಂದಮೆ ತೆಕ್ಕನೆ ತೀವಿ ತಂದು ಕೋ

ಮಳ ಬಿಸಕಾಂಡಮಂ ಬೆರಸು ನೀಡಿದನಾಗಳದೊರ್ವಲುಬ್ಧಕಂ  ೧೫

ಪದ್ಯದ ಅನ್ವಯಕ್ರಮ:

ಆಗಳ್ ಒರ್ವ ಲುಬ್ದಕಂ ಕೊಳದೊಳೆ ಪೊಕ್ಕು, ಸರಸೀಜ ರಜಂಗಳನ್ ನೂಂಕಿ, ಅಲ್ಲಿ ಚಂದ್ರಮಂಡಳಂ ಒಱೆದತ್ತು, ಮುತ್ತುಗಳ್ ಒಸರ್ದುವು ಎನಿಪ್ಪ ಹಿಮ ಉದಕಂಗಳಂ, ಕೋಮಳ ಬಿಸಕಾಂಡಮಂ ಬೆರಸು ಕುಳಿರ್ವ ಸರೋಪ ಪತ್ರ ಪುಟದಿಂದಮೆ ತೆಕ್ಕನೆ ತೀವಿ ತಂದು ನೀಡಿದನ್.

ಪದ-ಅರ್ಥ:

ಕೊಳದೊಳೆ-ಸರೋವರದಲ್ಲಿ;  ಪೊಕ್ಕು-ಇಳಿದು;  ಸರಸೀಜರಜಂಗಳನ್-ತಾವರೆಯ ಧೂಳನ್ನು(ನೀರ ಮೇಲೆ ತೇಲುತ್ತಿರುವ ತಾವರೆಯ ಪರಾಗ); ನೂಂಕಿ-ತಳ್ಳಿ;  ಚಂದ್ರಮಂಡಲ-ಚಂದ್ರಬಿಂಬ;  ಒಱೆದತ್ತು-ಸೋರಿದಂತೆ;  ಮುತ್ತುಗಳ್ ಒಸರ್ದುವು-ಮುತ್ತುಗಳು ಚೆಲ್ಲುತ್ತಿವೆಯೋ;  ಎನಿಪ್ಪ-ಎನ್ನುವಂತೆ, ಭಾಸವಾಗುವಂತೆ;  ಹಿಮೋದಕ-ತಣ್ಣನೆಯ ನೀರು;  ಕುಳಿರ್ವ-ತಣ್ಣಗಿರುವ;  ಸರೋಜಪತ್ರಪುಟ-ತಾವರೆಯ ಎಲೆಯ ದೊನ್ನೆ; ತೆಕ್ಕನೆ-ತಟ್ಟನೆ; ತೀವಿ-ತುಂಬಿಕೊಂಡು; ಕೋಮಳ-ಕೋಮಲವಾದ, ಎಳೆಯ;  ಬಿಸಕಾಂಡ-ತಾವರೆ ಎಲೆಯ ದಂಟು;  ಬೆರಸು-ಜೊತೆಗೂಡಿದ, ಕೂಡಿಕೊಂಡ;  ಲುಬ್ದಕ-ಬೇಡ.

            ತನ್ನ ನಾಯಕನ ಅಯಾಸವನ್ನು ಪರಿಹರಿಸುವುದಕ್ಕಾಗಿ ಒಬ್ಬ ಬೇಡನು ಅಲ್ಲಿಯೇ ಪಕ್ಕದಲ್ಲಿದ್ದ ಸರೋವರಕ್ಕಿಳಿದು ನೀರ ಮೇಲೆ ಹರಡಿಕೊಂಡಿದ್ದ ತಾವರೆಯ ಪರಾಗದ ಪದರವನ್ನು ಬದಿಗೆ ಸರಿಸಿಕೊಂಡನು. ಆತನಿಗೆ ಆ ಸರೋವರದ ನೀರು ಚಂದ್ರಬಿಂಬವೇ ಸೋರಿ ನೀರಾಗಿದೆಯೋ ಅಥವಾ ಮುತ್ತುಗಳೇ ಇಲ್ಲಿ ಉದುರಿಕೊಂಡು ನೀರಾಗಿದೆಯೋ ಎನ್ನುವಂತೆ ಭಾಸವಾಯಿತು. ಅವನು ಒಂದು ದಂಟುಸಮೇತವಾದ ತಣ್ಣನೆಯ ತಾವರೆ ಎಲೆಯನ್ನು ದೊನ್ನೆಯನ್ನಾಗಿ ಮಾಡಿಕೊಂಡು ತಣ್ಣಗಿರುವ ನೀರನ್ನು ಅದರಲ್ಲಿ ತುಂಬಿಸಿಕೊಂಡು ತಂದು ತನ್ನ ಒಡೆಯನಿಗೆ ನೀಡಿದನು.

            (ಕಾಡಿನ ಮಧ್ಯದಲ್ಲಿರುವ ಆ ಸರೋವರವು ಅಸಂಖ್ಯ ತಾವರೆಗಳಿಂದ ಕೂಡಿತ್ತು. ಅಸಂಖ್ಯ ತಾವರೆಗಳು ಅಲ್ಲಿ ಅರಳಿಕೊಂಡಿದ್ದರಿಂದ ಅವುಗಳ ಪರಾಗವು ನೀರಮೇಲೆ ಬಿದ್ದು ನೀರು ಕಾಣಿಸದಂತೆ ಪದರವನ್ನು ಹರಡಿಕೊಂಡಿತ್ತು. ತನ್ನ ಒಡೆಯನ ಬಾಯಾರಿಕೆಯನ್ನು ಪರಿಹರಿಸಲು ನೀರಿಗಾಗಿ ಬಂದ ಒಬ್ಬ ಬೇಡನು ಸರೋವರಕ್ಕಿಳಿದು ನೀರ ಮೇಲೆ ಹರಡಿಕೊಂಡಿದ್ದ ತಾವರೆಯ ಪರಾಗವೆಲ್ಲವನ್ನೂ ಕೈಯಿಂದ ಸರಿಸಿಕೊಂಡನು. ಆಗ ಆತನಿಗೆ ಅದು ಸಾಮಾನ್ಯ ನೀರಿನಂತೆ ಕಾಣದೆ, ಚಂದ್ರಬಿಂಬವೇ ಕರಗಿ ಸೋರಿ ಇಲ್ಲಿ ನೀರಾಗಿ ಪರಿವರ್ತಿತವಾಗಿದೆಯೋ ಎನ್ನುವಂತೆ ಕಾಣಿಸಿತು. ಮಾತ್ರವಲ್ಲ, ಮುತ್ತುಗಳೆಲ್ಲ ಚದುರಿಕೊಂಡು ನೀರಾಗಿ ಪರಿವರ್ತಿತವಾಗಿದೆಯೋ ಅನ್ನಿಸಿತು. ತಾವರೆಯ ಪರಾಗವನ್ನು ಸರಿಸಿದಾಗ ಶುದ್ಧವಾದ ನೀರು ಗೋಚರಿಸಿತು. ಬೇಡನಿಗೂ ತುಂಬಾ ಸಂತೋಷವೆನಿಸಿ, ಅಲ್ಲಿಯೇ ಬೆಳೆದಿದ್ದ ಎಳೆಯ ತಾವರೆಯ ಎಲೆಯನ್ನು ದಂಟುಸಮೇತವಾಗಿ ಕಿತ್ತು, ಆ ತಣ್ಣನೆಯ ಎಲೆಯನ್ನು ಅದನ್ನು ದೊನ್ನೆಯನ್ನಾಗಿ ಮಾಡಿಕೊಂಡು ಮೆಲ್ಲನೆ ಅದರಲ್ಲಿ ನೀರನ್ನು ತುಂಬಿಸಿಕೊಂಡು ತಂದು ತನ್ನ ಒಡೆಯನಿಗೆ ನೀಡಿದನು.)

 

ವ|| ಅಂತು ನೀಡೆ ನೀರನೀಂಟಿ ಶಶಿಕಳೆಗಳಂ ಮೆಲ್ವ ಸೈಂಹಿಕೇಯನಂತೆ ಮೃಣಾಳನಾಳಂಗಳಂ ಮೆಲ್ದು ವಿಗತಪರಿಶ್ರಮನಾಗಿ ಬೞಲ್ಕೆಗಳೆದು ಮಾತಂಗಂ ಬೇಡವಡೆವೆರಸು ನಿಜನಿವಾಸಕ್ಕೆ ಪೋದನನ್ನೆಗಮಿತ್ತಲ್

ಗದ್ಯದ ಅನ್ವಯಕ್ರಮ:

ಅಂತು ನೀಡೆ, ನೀರನ್ ಈಂಟಿ, ಶಶಿಕಳೆಗಳಂ ಮೆಲ್ವ ಸೃಂಹೀಕೆಯನಂತೆ ಮೃಣಾಳ ನಾಳಂಗಳಂ ಮೆಲ್ದು, ವಿಗತ ಪರಿಶರ್ಮನ್ ಆಗಿ ಬೞಲ್ಕೆ ಕಳೆದು, ಮಾತಂಗಂ ಬೇಡ ಪಡೆವೆರಸು ನಿಜ ನಿವಾಸಕ್ಕೆ ಪೋದನ್. ಅನ್ನಗಂ ಇತ್ತಲ್-

ಪದ-ಅರ್ಥ:

ಅಂತು-ಹಾಗೆ;  ನೀಡೆ-ನೀಡಲು;  ಈಂಟಿ-ಕುಡಿದು;  ಶಶಿಕಳೆ-ಚಂದ್ರಬಿಂಬ;  ಮೆಲ್ವ-ನುಂಗುವ;  ಸೃಂಹೀಕೆಯನಂತೆ-ಶನಿಯಂತೆ;  ಮೃಣಾಲನಾಳ-ತಾವರೆ ದಂಟು;  ಮೆಲ್ದು-ತಿಂದು;  ವಿಗತಪರಿಶ್ರಮ-ಆಯಾಸ ಪರಿಹಾರ;  ಬೞಲ್ಕೆಗಳೆದು-ಆಯಾಸವನ್ನು ಪರಿಹರಿಸಿಕೊಂಡು;  ಮಾತಂಗಂ-ಮಾತಂಗನು(ಬೇಡ ನಾಯಕ);  ಬೇಡವಡೆವೆರಸು(ಬೇಡ+ಪಡೆ+ಬೆರಸು)-ಬೇಡರ ಸೈನ್ಯವನ್ನು ಕೂಡಿಕೊಂಡು;  ನಿಜನಿವಾಸ-ತನ್ನ ಮನೆ;  ಅನ್ನೆಗಂ-ಅಷ್ಟರಲ್ಲಿ; ಇತ್ತಲ್-ಈಕಡೆ.

            ಹಾಗೆ ಒಬ್ಬ ಬೇಡನು ನೀರನ್ನು ನೀಡಿದಾಗ ಬೇಡನಾಯಕನಾದ ಮಾತಂಗಕನು ಅದನ್ನು ಕುಡಿದು, ಚಂದ್ರಬಿಂಬವನ್ನು ನುಂಗುವ ಶನಿಯಂತೆ ತಾವರೆಯ ದಂಟನ್ನು ಜಗಿದು ನುಂಗಿ, ತನ್ನ ಆಯಾಸವನ್ನು ಪರಿಹರಿಸಿಕೊಂಡು, ತನ್ನ ಪಡೆಯೂ ಆಯಾಸವನ್ನು ಪರಿಹರಿಸಿಕೊಂಡ ಮೇಲೆ ಅವರೆಲ್ಲರನ್ನು ಕೂಡಿಕೊಂಡು ತನ್ನ ಮನೆಯ ಕಡೆಗೆ ನಡೆದನು. ಅಷ್ಟರಲ್ಲಿ ಈ ಕಡೆ-

            (ಬೇಡನಾಯಕ ಮಾತಂಗಕ ಆಯಾಸಗೊಂಡಿದ್ದ. ತನ್ನ ಸಹಚರ ಬೇಡನೊಬ್ಬನು ತಾವರೆಯ ಎಲೆಯನ್ನು ದೊನ್ನೆಯನ್ನಾಗಿ ಮಾಡಿಕೊಂಡು ನೀರನ್ನು ತುಂಬಿಸಿಕೊಂಡು ತಂದು ಕೊಟ್ಟಾಗ ಬೇಡನಾಯಕನು ಅದನ್ನು ಕುಡಿದನು. ಆತನಿಗೆ ಹೊಟ್ಟೆಯೂ ಹಸಿದಿತ್ತು. ತಾವರೆ ಎಲೆಯು ನಾಳ(ದಂಟು) ಸಮೇತವಾಗಿರುವುದನ್ನು ಕಂಡು ಆ ದಂಟನ್ನು ಮೆಲ್ಲನೆ ತಿನ್ನತೊಡಗಿದನು. ಆತ ಈ ರೀತಿಯಲ್ಲಿ ತಾವರೆಯ ದಂಟನ್ನು ತಿನ್ನುವ ರೀತಿಯು ಶನಿಯು ಚಂದ್ರಬಿಂಬವನ್ನು ನುಂಗಿದಂತೆ ತೋರುತ್ತಿತ್ತು. ಅಷ್ಟರಲ್ಲಿ ಉಳಿದ ಬೇಡರೂ ತಮ್ಮ ಆಯಾಸವನ್ನು ಪರಿಹರಿಸಿಕೊಂಡರು. ಅನಂತರ ಎಲ್ಲರೂ ತಮ್ಮ ಮನೆಗಳ ಕಡೆಗೆ ಹೊರಡತೊಡಗಿದರು. ಆದರೆ ಅಷ್ಟರಲ್ಲಿ ಈ ಕಡೆ-)

 

ಜರೆಯಿಂದಂ ಪುರ್ಬು ಜೋಲಲ್ ತೆರೆ ತರತರದಿಂದುಣ್ಮಿ ಪೊಣ್ಮಲ್ಕೆ ಗಂಟಲ್

ಮುರಿದತ್ತೊಂದೊಂದಱೊಳ್ ತಳ್ತೊಗೆಯೆ ಸೆರೆಗಳೊತ್ತಂಬದಿಂ ಬರ್ಪ ಕೆಮ್ಮಿಂ

ಬಿರಿಯಲ್ ಬೆಟ್ಟಂಗಳಾ ಬಟ್ಟೆಯೊಳಿನಿತಡಗುಂ ತನ್ನ ಕಯ್ಸಾರದೆಂದಾ

ತುರಿಸುತ್ತಂ ಭ್ರಾಂತಿಯಿಂದೆನ್ನಯ ಮರದಡಿಯೊಳ್ ನಿಂದನೊರ್ವಂ ಪುಳಿಂದಂ  ೧೬

ಪದ್ಯದ ಅನ್ವಯಕ್ರಮ:

ಜರೆಯಿಂದಂ ಪುರ್ಬು ಜೋಲಲ್, ತೆರೆ  ತರತರದಿಂದ ಉಣ್ಮಿ ಪೊಣ್ಮಲ್ಕೆ, ಗಂಟಲ್ ಮುರಿದತ್ತು, ಒಂದೊಂದಱೊಳ್ ತಳ್ತು ಒಗೆಯೆ ಸೆರೆಗಳ್, ಒತ್ತಂಬದಿಂ ಬರ್ಪ ಕೆಮ್ಮಿಂ ಬೆಟ್ಟಂಗಳ್ ಬಿರಿಯಲ್, ಆ ಬಟ್ಟೆಯೊಳ್ ಇನಿತು ಅಡಗುಂ ತನ್ನ ಕಯ್ ಸಾರದು ಎಂದು ಆತರಿಸುತ್ತಂ ಭ್ರಾಂತಿಯಿಂದಮ್ ಒರ್ವಂ ಪುಳಿಂದಂ ಎನ್ನಯ ಮರದ ಅಡಿಯೊಳ್ ನಿಂದನ್.

ಪದ-ಅರ್ಥ:

ಜರೆ-ಮುಪ್ಪು;  ಪುರ್ಬು-ಹುಬ್ಬು;  ಜೋಲಲ್-ಜೋತುಬಿದ್ದಿರಲು;  ತೆರೆ-ಸುಕ್ಕು;  ತರತರದಿಂದ-ಬಗೆಬಗೆಯಿಂದ;  ಉಣ್ಮಿಪೊಣ್ಮಲ್ಕೆ-ಉಕ್ಕಿಹೊರಸೂಸಲು, ಉಕ್ಕಿ ಹೊರಚೆಲ್ಲಲು;  ಗಂಟಲ್ ಮುರಿದತ್ತು-ಕಂಠ ಒಡೆದಿತ್ತು; ಸೆರೆಗಳ್-ನರಗಳು;  ಒತ್ತಂಬದಿಂ-ಒಂದೇ ಸಮನೆ;  ಬರ್ಪ-ಬರುತ್ತಿರುವ;  ಕೆಮ್ಮಿಂ-ಕೆಮ್ಮಿನಿಂದ;  ಬಿರಿಯಲ್-ಒಡೆಯಲು;  ಬೆಟ್ಟಂಗಳ್-ಬೆಟ್ಟಗಳು, ಪರ್ವತಗಳು;  ಬಟ್ಟೆಯೊಳ್-ದಾರಿಯಲ್ಲಿ;   ಇನಿತು-ಇಷ್ಟು;  ಅಡಗುಂ-ಮಾಂಸವೂ; ಕಯ್ ಸಾರದು-ಕೈಗೆ ಸಿಗಲಿಲ್ಲ;  ಆತರಿಸುತ್ತಂ-ಕಾತರಪಡುತ್ತ;  ಭ್ರಾಂತಿಯಿಂದಂ-ಕಂಗೆಟ್ಟುದರಿಂದ;  ಪುಳಿಂದಂ-ಬೇಡನು.

            ಮುಪ್ಪಿನಿಂದ ಹುಬ್ಬುಗಳು ಜೋತುಬಿದ್ದಿರಲು, ಮೈಮೇಲೆಲ್ಲ ಚರ್ಮಸುಕ್ಕುಗಟ್ಟಿ ಮೇಲೆದ್ದು ಕಾಣುತಿದ್ದವು. ಆತನ ಗಂಟಲು ಒಡೆದುಹೋಗಿ ಧ್ವನಿ ಕರ್ಕಶವಾಗಿತ್ತು. ತಡೆಯಿಲ್ಲದೆ ಒಂದೇಸಮನೆ ಬರುತ್ತಿದ್ದ ಆತನ ಕೆಮ್ಮಿಗೆ ಅಕ್ಕಪಕ್ಕದ ಬೆಟ್ಟಗಳು ನಡುಗುವಂತಿದ್ದವು. ಆ ಬೇಡನಿಗೆ  ಬೇಟೆಯ ಸಂದರ್ಭದಲ್ಲಿ ಒಂದಿಷ್ಟು ಮಾಂಸ ಸಿಗದಿದ್ದುದರಿಂದ  ಅದಕ್ಕಾಗಿ ಕಾತರಪಡುತ್ತ ಕಂಗೆಟ್ಟು ತಾನು ವಾಸವಾಗಿದ್ದ ಮರದ ಅಡಿಯಲ್ಲಿ ನಿಂತುಕೊಂಡಿದ್ದನು.

            (ಬೇಡರ ಪಡೆ ಬಹಳ ದೊಡ್ಡದಿತ್ತು. ತರುಣ ಬೇಟೆಗಾರರು ಸಾಧ್ಯವಾದಷ್ಟು ಚಾಕಚಕ್ಯತೆಯಿಂದ ತಮಗೆ ಇಷ್ಟವಾದ ಪ್ರಾಣಿಗಳನ್ನು, ಪಕ್ಷಿಗಳನ್ನು ಬೇಟೆಯಾಡಿ ತಮಗೆ ಬೇಕಾದಷ್ಟು ಮಾಂಸವನ್ನು, ನವಿಲುಗರಿ, ಚಮರೀಮೃಗದ ಬಾಲ, ಸಿಂಹಗಳ ಚರ್ಮ ಮೊದಲಾದವುಗಳನ್ನು ಸಂಗ್ರಹಿಸಿಕೊಂಡಿದ್ದರು. ಆದರೆ ಒಬ್ಬ ಮುದಿ ಬೇಡನಿಗೆ ಅಂದಿನ ಬೇಟೆಯಲ್ಲಿ ಏನೂ ಸಿಕ್ಕಿರಲಿಲ್ಲ. ಆತನ ಮುಪ್ಪಿನಿಂದಾಗಿ ಹುಬ್ಬುಗಳು ಜೋತುಬಿದ್ದಿದ್ದವು. ಮೈಯ ಚರ್ಮವೆಲ್ಲವೂ ಸುಕ್ಕುಗಟ್ಟಿ ಚರ್ಮ ಒರಟುಒರಟಾಗಿತ್ತು. ಆತನ ಗಂಟಲು ಒಡೆದುಹೋಗು ಧ್ವನಿ ಬಿರಿದಿತ್ತು. ಆಗಾಗ ಕೆಮ್ಮು ಒತ್ತೊತ್ತಿ ಬರುತ್ತಿತ್ತು. ಕೆಮ್ಮಿನ ಧ್ವನಿ  ಸುತ್ತಮುತ್ತಲಿನ ಬೆಟ್ಟಗಳ, ಪರ್ವತಗಳ ನಡುವೆ ಪ್ರತಿಧ್ವನಿಸಿ ಆ ಬೆಟ್ಟಗುಡ್ಡಗಳೇ ಹೆದರಿ ನಡುಗುತ್ತಿರುವಂತೆ ಭಾಸವಾಗುತ್ತಿತ್ತು. ತನಗೆ ಒಂದಿಷ್ಟೂ ಮಾಂಸ ಸಿಗದಿದ್ದುದರಿಂದ ಆತ ತುಂಬಾ ಬೇಸರಗೊಂಡಿದ್ದನು. ಮಾಂಸಕ್ಕಾಗಿ ಬಹಳ ಕಾತರಪಡುತ್ತಿದ್ದನು. ತನ್ನ ಸಂಗಡಿಗರು ಹೋದಮೇಲೆ ತಾನು ಹೇಗಾದರೂ ಒಂದಿಷ್ಟು ಮಾಂಸವನ್ನು ಸಂಪಾದಿಸಲೇಬೇಕೆಂಬ ಹಂಬಲದಿಂದ ಮರಿಗಿಳಿ ವಾಸವಾಗಿದ್ದ ಮರದ ಬುಡದಲ್ಲಿ ನಿಂತು ನೋಡುತ್ತಿದ್ದನು.)

 

ಬೇಡಿದೊಡೀಯದೈದೆ ಬಿಯದರ್ ಮೃಗಮಾಂಸವ ರಕ್ತವರ್ಣದಿಂ

ಕೂಡಿದ ಕಣ್ಗಳಿಂ ಶುಕನಿಕಾಯದ ಜೀವಮನೆಯ್ದೆ ಪೀರ್ವವೋಲ್

ಗೂಡುಗಳಂ ತಗುಳ್ದೆಣಿಪವೋಲ್ ವಿಹಗಾಮಿಷಲಾಭಲೋಲುಪಂ

ನೋಡಿದನಾ ಜರಚ್ಛಬರನಾಯಕನಾ ಮರನಂ ಮಹೀಪತೀ  ೧೭

ಪದ್ಯದ ಅನ್ವಯಕ್ರಮ:

ಮಹೀಪತೀ, ಬೇಡಿದೊಡೆ ಮೃಗಮಾಂಸವ ಈಯದೆ ಬಿಯದರ್ ಐದೆ, ಶುಕ ನಿಕಾಯದ ಜೀವಮನ್ ಎಯ್ದೆ ಪೀರ್ವವೋಲ್, ರಕ್ತವರ್ಣದಿಂ ಕೂಡಿದ ಕಣ್ಗಳಿಂ ಗೂಡುಗಳಂ ತಗುಳ್ದು ಎಣಿಪವೋಲ್ ವಿಹಗ ಆಮಿಷ ಲಾಭಲೋಲುಪಂ ಆ ಜರತ್ ಶಬರ ನಾಯಕನ್ ಆ ಮರನಂ ನೋಡಿದನ್.

ಪದ-ಅರ್ಥ:

ಬೇಡಿದೊಡೆ-ಬೇಡಿದರೆ;  ಬಿಯದರ್-ಬೇಡರು;  ಮೃಗಮಾಂಸ-ಜಿಂಕೆಯ ಮಾಂಸ, ಮೃಗಗಳ ಮಾಂಸ;  ರಕ್ತವರ್ಣದಿಂ-ಕೆಂಪುಬಣ್ಣದಿಂದ;  ಶುಕನಿಕಾಯ-ಗಿಳಿಗಳ ಸಮೂಹ; ಎಯ್ದೆ-ಚೆನ್ನಾಗಿ ಪೀರ್ವವೋಲ್-ಹೀರುವ ಹಾಗೆ;  ತಗುಳ್ದು-ತೊಡಗಿ;  ಎಣಿಪವೋಲ್-ಲೆಕ್ಕಮಾಡುವಂತೆ;  ವಿಹಗಾಮಿಷ – ಪಕ್ಷಿಗಳ ಮೇಲಿನ ಆಸೆ;  ಲಾಭಲೋಲುಪಂ-ಲಾಭವನ್ನು ಬಯಸುವವನು;  ಜರಚ್ಛಬರನ್(ಜರತ್+ಶಬರಂ)-ಮುಪ್ಪಿನ ಬೇಡನು;  ಮಹೀಪತೀ-ರಾಜನೇ.

            ಶೂದ್ರಕ ಮಹಾರಾಜನೇ, ಈ ಮುದುಕ ಬೇಡನು ತನಗೆ ಇಷ್ಟವುಳ್ಳ ಮಾಂಸವನ್ನು ಕೊಡಿ ಎಂದು ತನ್ನ ಜತೆಗಾರರಾದ ಉಳಿದ ಬೇಡರಲ್ಲಿ  ಎಷ್ಟು ಬೇಡಿದರೂ ಅವರು ಈತನಿಗೆ ಏನನ್ನೂ ಕೊಡದೇ ಹೋದುದರ ಸಿಟ್ಟಿನಿಂದ ಕೆಂಪಾದ ಕಣ್ಣುಗಳನ್ನು ಕೆಂಪಗಾಗಿಸಿಕೊಂಡು ಪಕ್ಷಿಗಳ ಮಾಂಸದಲ್ಲಿ ಆಸೆಯುಳ್ಳ ಆ ಬೇಡನು ಮರದ ಮೇಲಿನ ಗಿಳಿಗಳ ಪ್ರಾಣವನ್ನೇ ನುಂಗಿಬಿಡುವಂತೆಯೂ ಮರದ ಮೇಲಿನ ಎಲ್ಲಾ ಗಿಳಿಗಳ ಗೂಡುಗಳನ್ನು ಒಂದೊಂದಾಗಿ ಎಣಿಸುವಂತೆಯೂ ಗಿಳಿಗಳ ಗೂಡುಗಳನ್ನು ದುರುಗುಟ್ಟಿ ನೋಡತೊಡಗಿದನು.

           (ಬೇಟೆಯ ಸಂದರ್ಭದಲ್ಲಿ ಎಲ್ಲಾ ಬೇಡರಿಗೂ ಅವರವರ ಇಷ್ಟದ ಮಾಂಸ ಸಿಗಲಾರದು. ತರುಣ ಬೇಡರು ತಮ್ಮ ಶಕ್ತಿ ಸಾಮರ್ಥ್ಯಗಳಿಂದ  ಬೇಟೆಯಾಡಿ ತಮಗೆ ಬೇಕಾದಷ್ಟು ಮಾಂಸವನ್ನೋ , ಚರ್ಮವನ್ನೋ, ಪ್ರಾಣಿಗಳ ವಿವಿಧ ಅಂಗಾಂಗಗಳನ್ನೋ ಸಂಗ್ರಹಿಸಿಕೊಳ್ಳುತ್ತಾರೆ. ಆದರೆ ಈಗಾಗಲೇ ಪ್ರಾಯಸಂದ ಬೇಟೆಗಾರರಿಗೆ ಅದು ಸಾಧ್ಯವಾಗುವುದಿಲ್ಲ. ಹಾಗೆಯೇ ಈ ಬೇಡರ ಗುಂಪಿನಲ್ಲಿದ್ದ ಒಬ್ಬ ಪ್ರಾಯಸಂದ ಬೇಟೆಗಾರನಿಗೆ ಅಂದಿನ ಬೇಟೆಯಲ್ಲಿ ಏನೂ ಸಿಗಲಿಲ್ಲ. ಆದರೆ ಆತನ ಜೊತೆಗಾರರಿಗೆ ಬೇಕಾದಷ್ಟು ಮಾಂಸ, ನವಿಲುಗರಿ, ಚಮರೀಮೃಗಗಳ ಬಾಲಗಳು, ಸಿಂಹ, ಹುಲಿಗಳ ಚರ್ಮಗಳು –ಹೀಗೆ ಬೇಕಾದಷ್ಟು ಸಿಕ್ಕಿದ್ದವು. ಆದರೆ ಅವರಾರೂ ಅವುಗಳನ್ನು ಈ ಮುದಿ ಬೇಡನಿಗೆ ಹಂಚಿರಲಿಲ್ಲ. ಈತ ಬಹಳ ಆಸೆಯಿಂದ ಬೇಡಿಕೊಂಡರೂ ಯಾರೊಬ್ಬರೂ ಈತನ ಮೇಲೆ ಕನಿಕರ ತೋರಿರಲಿಲ್ಲ. ಈತನೊಂದಿಗೆ ಹಂಚಿ ತಿನ್ನುವ ಮನೋಭಾವವನ್ನು ಅವರಾರೂ ಹೊಂದಿರಲಿಲ್ಲ. ಒಂದೆಡೆ, ತನಗೆ ಬೇಟೆ ಸಿಗದಿದ್ದಕ್ಕಾಗಿ, ಮತ್ತೊಂದೆಡೆ ತನಗೆ ಬೇಟೆಯಾಡಲು ಸಾಧ್ಯವಾಗದಿದ್ದಕ್ಕಾಗಿ, ಇನ್ನೊಂದೆಡೆ ತನ್ನ ಜೊತೆಗಾರರು ತಾನು ಬೇಡಿದರೂ ಕೊಡದಿದ್ದಕ್ಕಾಗಿ ಅತಿಯಾಗಿ ಸಿಟ್ಟುಗೊಂಡಿದ್ದನು. ಹಾಗಾಗಿ ಆತನ ಕಣ್ಣುಗಳು ಕೆಂಪಾಗಿದ್ದವು. ಬರಿಗೈಯಲ್ಲಿ ಮನೆಗೆ ಹೋಗಲು ಇಷ್ಟವಿಲ್ಲದಿದ್ದುದರಿಂದ ಮತ್ತು ಆತನಿಗೆ ಪಕ್ಷಿಗಳ ಮಾಂಸದಲ್ಲಿ ತುಂಬಾ ಆಸೆ ಇದ್ದುದರಿಂದ ಹೇಗಾದರೂ ಒಂದಿಷ್ಟಾದರೂ ಮಾಂಸವನ್ನು ಸಂಪಾದಿಸಬೇಕೆಂಬ ಆಸೆಯಿಂದ ಆ ಮರದ ಬುಡದಲ್ಲಿ ನಿಂತು ಮರದಲ್ಲಿನ ಪಕ್ಷಿಗಳ ಗೂಡುಗಳನ್ನು ನೋಡುತ್ತ ಅವುಗಳನ್ನು ಎಣಿಸುತ್ತಿರುವಂತೆ ಕಾಣಿಸುತ್ತಿತ್ತು.)

(೩ನೆಯ ಭಾಗದಲ್ಲಿ ಮುಂದುವರಿದಿದೆ)

Leave a Reply

Your email address will not be published. Required fields are marked *