ಸಾಹಿತ್ಯಾನುಸಂಧಾನ

heading1

ವೈಶಂಪಾಯನನೆಂಬ ಶುಕಂ-ಒಂದನೆಯ ನಾಗವರ್ಮ-ಭಾಗ-೧

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ) (ಭಾಗ-೧)

ಕವಿ-ಕಾವ್ಯ ಪರಿಚಯ:

            ಹಳೆಗನ್ನಡದ ಪ್ರಸಿದ್ಧ ಕವಿಗಳಲ್ಲಿ ಒಂದನೆಯ ನಾಗವರ್ಮನೂ ಒಬ್ಬ. ಈತನ ಕಾಲ ಕ್ರಿ.ಶ.ಸುಮಾರು ೯೯೦. ಸಯ್ಯಡಿಯವನಾದ ಈತನ ಹಿರಿಯರು ವೆಂಗಿಪಳು ಎಂಬಲ್ಲಿದ್ದರೆಂದೂ ಅಲ್ಲಿನ ವೆಣ್ಣಮಯ್ಯ ಹಾಗೂ ಪೋಳಕಬ್ಬೆಯ ಮಗನೆಂದೂ ಈತ ಚಂದ್ರನೆಂಬ ರಾಜನ ಆಸ್ಥಾನದಲ್ಲಿ ಕವಿಯಾಗಿದ್ದನೆಂದೂ ಭೋಜರಾಜನೆಂಬವನು ಈತನಿಗೆ ಕೆಲವು ಜಾತ್ಯಶ್ವಗಳನ್ನು ನೀಡಿದನೆಂದೂ ಆತನ ಕಾವ್ಯಗಳಿಂದ ತಿಳಿದುಬರುತ್ತದೆ. ಹತ್ತನೆಯ ಶತಮಾನದ ಉತ್ತರಾರ್ಧ ಹಾಗೂ ಹನ್ನೊಂದನೆಯ ಶತಮಾನದ ಪೂರ್ವಾರ್ಧದಲ್ಲಿದ್ದ ಈತ ಪಂಪ, ರನ್ನರ ಅನಂತರದ ಶ್ರೇಷ್ಠಕವಿಗಳಲ್ಲಿ ಒಬ್ಬನಾಗಿದ್ದು, ಸಂಸ್ಕೃತ ಹಾಗೂ ಕನ್ನಡಗಳೆರಡರಲ್ಲಿಯೂ ಪಾಂಡಿತ್ಯವನ್ನು ಸಂಪಾದಿಸಿದವನು. ಈತ ’’ಕರ್ಣಾಟಕ ಕಾದಂಬರಿ” ಹಾಗೂ “ಛಂದೋಂಬುಧಿ” ಎಂಬ ಎರಡು ಕೃತಿಗಳನ್ನು ರಚಿಸಿದ್ದಾನೆ. ಮೊದಲನೆಯದು, ಸಂಸ್ಕೃತ ಗದ್ಯಕಾವ್ಯದ ಸೀಮಾಪುರುಷನಾದ ಬಾಣಭಟ್ಟನ “ಕಾದಂಬರಿ” ಎಂಬ ಗದ್ಯಕಾವ್ಯದ ಕನ್ನಡ ಕಾವ್ಯರೂಪಾಂತರ. ಎರಡನೆಯದು, ಕನ್ನಡ ಛಂದಸ್ಸಿನ ಕುರಿತಾದ ಕೃತಿ. ಇದು ಕನ್ನಡದ ಮೊದಲನೆಯ ಛಂದೋಗ್ರಂಥ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ಣಾಟಕ ಕಾದಂಬರಿಯು ಚಂಪೂ ಕಾವ್ಯಶೈಲಿಯಲ್ಲಿರುವ ಕನ್ನಡದ ಮೊದಲ ಶೃಂಗಾರಕಾವ್ಯ. ಇದು ಹಲವಾರು ಜನ್ಮಾಂತರಗಳ ಕಥೆ ಮಾತ್ರವಲ್ಲದೆ, ಹಲವಾರು ಕಥೆಗಳ ಸಂಗಮವೆನಿಸಿಕೊಂಡಿದೆ. ಈ ಕಾವ್ಯವು ಮಾನುಷ-ಅತಿಮಾನುಷ ವಿಚಾರಗಳು, ಇಂದ್ರಜಾಲದಂತಹ ಸನ್ನಿವೇಶಗಳು, ಜನ್ಮ-ಪುನರ್ಜನ್ಮಗಳ ಕಥೆಗಳು, ಸಂಭಾವ್ಯ-ಅಸಂಭಾವ್ಯ ಸಂಗತಿಗಳು-ಮೊದಲಾದವುಗಳನ್ನು ಒಳಗೊಂಡು ಇತರ ಕನ್ನಡ ಕಾವ್ಯಗಳಿಗಿಂತ ಭಿನ್ನವಾಗಿ ರೂಪುಗೊಂಡಿದೆ. ಈತನಿಗೆ “ಕವಿರಾಜಹಂಸ”, “ಬುಧಾಬ್ಜವನಕಳಹಂಸ”, “ಕಂದಕಂದರ್ಪ” ಮೊದಲಾದ ಬಿರುದುಗಳಿದ್ದಂತೆ ತಿಳಿದುಬರುತ್ತದೆ.   

ಕಾವ್ಯಭಾಗದ ಹಿನ್ನೆಲೆ:

            ಮಾಳವದೇಶದ ಅರಸ ಶೂದ್ರಕ. ವಿದಿಶೆ ಆತನ ರಾಜಧಾನಿ. ಒಂದು ದಿನ ಒಬ್ಬ ಚಂಡಾಲಕನ್ಯೆ ಪಂಜರಸಮೇತವಾಗಿ ಗಿಳಿಯೊಂದನ್ನು ರಾಜನ ಆಸ್ಥಾನಕ್ಕೆ ತಂದು, ಪಂಜರದಲ್ಲಿರುವ ಗಿಳಿಯು ಸಕಲಶಾಸ್ತ್ರಗಳನ್ನು ತಿಳಿದಿರುವುದರಿಂದ ರಾಜನಿಗೆ ಕಾಣಿಕೆಯಾಗಿ ಅರ್ಪಿಸುತ್ತಿದ್ದೇನೆ ಎಂದು ತಿಳಿಸಿ ರಾಜನಿಗೆ ಒಪ್ಪಿಸುತ್ತಾಳೆ. ಗಿಳಿಯು ರಾಜನಿಗೆ ಜಯಾಕಾರವನ್ನು ಮಾಡಿ ಒಂದು ಶ್ಲೋಕವನ್ನು ಪಠಿಸಿತು. ಇದರಿಂದ ಚಕಿತನಾದ ರಾಜ ಶೂದ್ರಕನು ಆ ಗಿಳಿಯ ಪೂರ್ವಾಪರಗಳನ್ನು ತಿಳಿದುಕೊಳ್ಳಲು ಇಚ್ಛಿಸಿದನು. ಆತನ ಅಪೇಕ್ಷೆಯಂತೆ ಗಿಳಿಯು ತನ್ನ ವೃತ್ತಾಂತವನ್ನು ರಾಜನಿಗೆ ತಿಳಿಸತೊಡಗುತ್ತದೆ.  ಗಿಳಿ ರಾಜನಿಗೆ ತಿಳಿಸುವ ತನ್ನ ಬಾಲ್ಯದ  ವಿಚಾರ ಈ ಪದ್ಯಭಾಗದಲ್ಲಿ ವರ್ಣಿತವಾಗಿದೆ.

ವ|| ಮತ್ತಮದು ವಿಂಧ್ಯಾಚಳಸೋದರಮುಂ ದಂಡಕಾರಣ್ಯದಧಿಪತಿಯುಂ ವನಸ್ಪತಿಗಳ ನಾಯಕನುಮೆನಿಸಿತದಱಾ

ಗದ್ಯದ ಅನ್ವಯಕ್ರಮ:

ಮತ್ತಂ ಅದು ವಿಂಧ್ಯಾಚಳ ಸೋದರಮುಂ, ದಂಡಕ ಅರಣ್ಯದ ಅಧಿಪತಿಯುಂ, ವನಸ್ಪತಿಗಳ ನಾಯಕನುಂ ಎನಿಸಿತು. ಅದಱ ಆ—

ಪದ-ಅರ್ಥ:

ಮತ್ತಂ-ಮತ್ತೆ;  ವಿಂಧ್ಯಾಚಳ-ವಿಂಧ್ಯ ಪರ್ವತ;  ಅಧಿಪತಿ-ರಾಜ, ಒಡೆಯ;    ವನಸ್ಪತಿ-ಮರ. 

ಮತ್ತೆ ಅದು (ಮರವು) ವಿಂಧ್ಯಾಚಲ ಎಂಬ ಪರ್ವತಕ್ಕೆ ಸೋದರನಂತೆಯೂ ದಂಡಕ ಎಂಬ ಅರಣ್ಯಕ್ಕೆ ರಾಜನೂ ಆ ಕಾಡಿನಲ್ಲಿನ ಸಕಲ ಮರಗಳಿಗೆ ನಾಯಕನೂ ಎನಿಸಿ ಶೋಭಿಸುತ್ತಿತ್ತು. 

(ತನ್ನ ಹಿರಿಯರು ವಾಸಿಸಿಕೊಂಡಿದ್ದ ವಿಂಧ್ಯ ಪರ್ವತದ ತಪ್ಪಲಲ್ಲಿರುವ ಈ ಬೃಹದಾಕಾರದ ಬೂರುಗದ ಮರುವು ವಿಂಧ್ಯ ಪರ್ವತಕ್ಕೆ ಸಹೋದರನಂತೆ ಕಾಣಿಸುತ್ತಿತ್ತು. ಅದು ತಾನು ಬೆಳೆದುಕೊಂಡಿದ್ದ ದಂಡಕಾರಣ್ಯ ಪ್ರದೇಶಕ್ಕೆ ರಾಜನಂತೆ ಶೋಭಿಸುತ್ತಿತ್ತು. ಅಲ್ಲದೆ ಆ ಅರಣ್ಯದಲ್ಲಿದ್ದ ಸಕಲ ಸಸ್ಯಸಂಕುಲಗಳಿಗೆ ನಾಯಕನಂತೆ ಕಂಗೊಳಿಸುತ್ತಿತ್ತು. ಅರ್ಥಾತ್ ಅಲ್ಲಿರುವ ಎಲ್ಲಾ ಹಿರಿಯ, ಕಿರಿಯ ಮರಗಳಿಗೆ ರಾಜನಾಗಿ ಮೆರೆಯುತ್ತಿತ್ತು.)

ತಳಿರ್ಗಳಿಱುಂಬಿನಲ್ಲಿ ತುದಿಗೋಡ ಮೊದಲ್ಗಳ ತಾಣದಲ್ಲಿ ನಾ

ರ್ಗಳ ಪೊರೆಯಲ್ಲಿ ಪೋಳ್ಗಳೆಡೆಯಲ್ಲಿ ಕವಲ್ಗಣೆಯಲ್ಲಿ ಸುತ್ತಲುಂ

ಗಿಳಿಗಳ ಹಿಂಡುಗಳ್ ನೆರೆದು ಕೂಡಿಯುಮಲ್ಲಿ ಸಹಸ್ರಮುಂ ನಿರಾ

ಕುಳಮನುರಾಗದಿಂ ಪಲವುದೇಶದೊಳಿರ್ಪುವು ಬಂದು ಭೂಪತೀ   ೧

ಪದ್ಯದ ಅನ್ವಯಕ್ರಮ:

ಭೂಪತೀ, ತಳಿರ್ಗಳ ಇಱುಂಬಿನೊಳ್, ತುದಿಗೋಡ ಮೊದಲ್ಗಳ ತಾಣದಲ್ಲಿ, ನಾರ್ಗಳ ಪೊರೆಯಲ್ಲಿ, ಪೋಳ್ಗಳ ಎಡೆಯಲ್ಲಿ, ಕವಲ್ಗಳ ಎಣೆಯಲ್ಲಿ, ಸುತ್ತಲುಂ ಗಿಳಿಗಳ ಹಿಂಡುಗಳ್ ಪಲವು ದೇಶದೊಳ್ ಸಹಸ್ರಮುಂ ಬಂದು ಅಲ್ಲಿ ನೆರೆದು ಕೂಡಿಯುಂ ನಿರಾಕುಳಂ ಅನುರಾಗದಿಂ ಇರ್ಪುವು. 

ಪದ-ಅರ್ಥ:

ತಳಿರ್ಗಳ-ಚಿಗುರೆಲೆಗಳ;  ಇಱುಂಬಿನೊಳ್-ಎಡೆಯಲ್ಲಿ;  ತುದಿಗೋಡ-ತುದಿಯ ರೆಂಬೆಯ;  ಮೊದಲ್ಗಳ-ಬುಡದಲ್ಲಿನ;  ತಾಣ-ಸ್ಥಳ;  ನಾರ್ಗಳ-ತೊಗಟೆಗಳ;  ಪೊರೆಯೊಳ್-ಪದರದಲ್ಲಿ;  ಪೋಳ್ಗಳೆಡೆಯಲ್ಲಿ-ಸೀಳುಗಳ ನಡುವೆ;  ಕವಲ್ಗಣೆಯಲ್ಲಿ-ಕವಲುಗಳ ಮಧ್ಯದಲ್ಲಿ; ನೆರೆದು-ಕೂಡಿಕೊಂಡು;  ನಿರಾಕುಳಂ-ನಿರಾತಂಕವಾಗಿ;  ಅನುರಾಗದಿಂ-ಪ್ರೀತಿಯಿಂದ;  ಪಲವುದೇಶ-ಹಲವುದೇಶ;  ಇರ್ಪುವು-ಇದ್ದವು, ವಾಸಿಸುತ್ತಿದ್ದವು.;  ಭೂಪತೀ-ರಾಜ(ಶೂದ್ರಕ)ನೇ.

            ಶೂದ್ರಕ ರಾಜನೇ, ಹಲವು ದೇಶಗಳಿಂದ ಹಾರಿಕೊಂಡು ಬಂದ ಗಿಳಿಗಳು, ಆ ಮರದ ಅಸಂಖ್ಯ ಚಿಗುರೆಲೆಗಳ ಎಡೆಗಳಲ್ಲಿ, ಮರದ ತುದಿರೆಂಬೆಗಳ ಬುಡಗಳಲ್ಲಿ, ತೊಗಟೆಗಳ ಪದರಗಳಲ್ಲಿ, ಸೀಳುಗಳ ಎಡೆಗಳಲ್ಲಿ, ಮರದ ಪೊಟರೆಗಳಲ್ಲಿ, ಮರದ ಕವಲುಗಳ ಮಧ್ಯದಲ್ಲಿ ಗಿಳಿಗಳ ಹಿಂಡುಗಳು ತಮ್ಮ ವಾಸಕ್ಕೆ ಅನುವುಮಾಡಿಕೊಂಡು ನಿರಾತಂಕವಾಗಿ, ಬಹಳ ಪ್ರೀತಿಯಿಂದ ಅನ್ಯೋನ್ಯವಾಗಿ ವಾಸಿಸುತ್ತಿದ್ದವು. 

            (ವಿಂಧ್ಯಪರ್ವತದ ತಪ್ಪಲಲ್ಲಿರುವ ಈ ಬೃಹದಾಕಾರದ ಬೂರುಗದ ಮರ ಸಾವಿರಾರು ಪಕ್ಷಿಸಂಕುಲಗಳಿಗೆ ವಾಸಸ್ಥಾನವಾಗಿತ್ತು. ಹಲವು ದೇಶಗಳಿಂದ ಹಾರಿಬಂದ ಗಿಳಿಗಳು ಈ ಮರವನ್ನು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದವು. ಕೆಲವು ಮರದ ದಟ್ಟವಾದ ಚಿಗುರೆಲೆಗಳ ಮಧ್ಯೆ ಗೂಡನ್ನು ಕಟ್ಟಿಕೊಂಡರೆ,  ಇನ್ನು ಕೆಲವು ತುದಿರೆಂಬೆಗಳ ಬುಡದಲ್ಲಿ ಕಟ್ಟಿಕೊಂಡಿದ್ದವು. ಮತ್ತೆ ಕೆಲವು ಮರದ ತೊಗಟೆಗಳ ಪದರಗಳಲ್ಲಿ, ಮರದ ಪೊಟರೆಗಳ ಎಡೆಗಳಲ್ಲಿ, ಕವಲಾಗಿ ಟಿಸಿಲೊಡೆದ ಮರದ ಕೊಂಬೆ ರೆಂಬೆಗಳ ಮಧ್ಯದಲ್ಲಿ ತಮಗೆ ಅನುಕೂಲಕರವಾಗಿ ಗೂಡನ್ನು ಕಟ್ಟಿಕೊಂಡಿದ್ದವು. ಸಹಸ್ರಾರು ಗಿಳಿಗಳು ಆ ಮರವನ್ನು ವಾಸಸ್ಥಾನವನ್ನಾಗಿ ಮಾಡಿಕೊಂಡು ನಿರಾತಂಕವಾಗಿ ವಾಸಮಾಡಿಕೊಂಡಿದ್ದವು. ಒಂದರ್ಥದಲ್ಲಿ ಆ ಮರ ಸಾವಿರಾರು ಗಿಳಿಗಳಿಗೆ ನಿರಂತರವಾಗಿ ಆಶ್ರಯತಾಣವಾಗಿತ್ತು. ಮತ್ತು  ಆ ಎಲ್ಲಾ ಗಿಳಿಸಮೂಹಕ್ಕೆ ಆ ಮರವು ಸುರಕ್ಷಿತ ತಾಣವಾಗಿತ್ತು.)

 

ಪರಿವೃತ ಪಲ್ಲವಾಂತರದೊಳುದ್ಗತ ವಲ್ಕಲಮಧ್ಯದೊಳ್ ನಿರಂ

ತರ ವಿಟಪಾಗ್ರದೊಳ್ ಪಿಪುಳಕೋಟರ ಸಂಕುಳದೊಳ್ ವಿಶಾಲ ಕಂ

ಧರಗತ ಸಂಧಿಯೊಳ್ ನಿಚಿತ ನೀಡನಿಕಾಯಮನೆಯ್ದೆ ಸುತ್ತಲುಂ

ವಿರಚಿಸಿ ನಿರ್ಭಯಂ ಪಲವುಮಿರ್ಪವು ಕೀರಕುಳಂ ನಿರಾಕುಳಂ  ೨

ಪದ್ಯದ ಅನ್ವಯಕ್ರಮ:

ಪಲವುಂ ಕೀರಕುಳಂ, ಪರಿವೃತ ಪಲ್ಲವ ಅಂತರದೊಳ್, ಉದ್ಗತ ವಲ್ಕಲ ಮಧ್ಯದೊಳ್, ನಿರಂತರ ವಿಟಪ ಅಗ್ರದೊಳ್, ಪಿಪುಳ ಕೋಟರ ಸಂಕುಳದೊಳ್, ವಿಶಾಲ ಕಂಧರಗತ ಸಂಧಿಯೊಳ್, ನಿಚಿತ ನೀಡ ಕಾಯಮನ್ ಸುತ್ತಲುಂ ಎಯ್ದೆ ವಿರಚಿಸಿ ನಿರ್ಭಯಂ, ನಿರಾಕುಳಂ ಇರ್ಪವು.

ಪದ-ಅರ್ಥ:

ಪರಿವೃತ-ಪಸರಿಸಿರುವ, ಹರಡಿರುವ;  ಪಲ್ಲವಾಂತರದೊಳ್-ಚಿಗುರೆಲೆಗಳ ಮಧ್ಯದಲ್ಲಿ;  ಉದ್ಗತ-ಉಂಟಾದ;  ವಲ್ಕಲ-ತೊಗಟೆ;  ವಿಟಪಾಗ್ರದೊಳ್-ಕೊಂಬೆಗಳ ತುದಿಯಲ್ಲಿ;  ವಿಪುಳ-ಅಸಂಖ್ಯ;  ಕೋಟರ ಸಂಕುಳ-ಪೊಟರೆಗಳ ಸಮೂಹ;  ಕಂಧರಗತ ಸಂಧಿ-ಕೊಂಬೆಗಳ ನಡುವಿನ ಸ್ಥಳ; ನಿಚಿತ– ಸುರಕ್ಷಿತ ;  ನೀಡನಿಕಾಯಮನ್-ಗೂಡುಗಳ ಸಮೂಹವನ್ನು;  ಎಯ್ದೆ-ಚೆನ್ನಾಗಿ;  ವಿರಚಿಸಿ-ಕಟ್ಟಿಕೊಂಡು;  ನಿರ್ಭಯ-ಭಯವಿಲ್ಲದೆ; ನಿರಾಕುಳಂ-ನಿರಾತಂಕವಾಗಿ, ಹೆದರಿಕೆಯಿಲ್ಲದೆ. 

            ಹಲವು ಗಿಳಿಗಳ ಕುಟುಂಬಗಳು ವಿಶಾಲವಾಗಿ ಪಸರಿಸಿಕೊಂಡಿರುವ ಮರದ ಚಿಗುರೆಲೆಗಳ ಮಧ್ಯದಲ್ಲಿ, ಮರದಲ್ಲಿ ಅಲ್ಲಲ್ಲಿ ಹೊರಚಾಚಿ ಉಂಟಾಗಿರುವ ತೊಗಟೆಗಳ ಎಡೆಗಳಲ್ಲಿ, ಮರದ ಕೊಂಬೆಗಳ ತುದಿಗಳಲ್ಲಿ, ಮರದಲ್ಲಿನ ಅಸಂಖ್ಯವಾದ ಪೊಟರೆಗಳ ಸಮೂಹಗಳಲ್ಲಿ, ಕೊಂಬೆಗಳ ನಡುವಿನ ಎಡೆಗಳಲ್ಲಿ, ಚೆನ್ನಾಗಿ ಸುರಕ್ಷಿತವಾದ ಗೂಡುಗಳನ್ನು ಕಟ್ಟಿಕೊಂಡು ಗಿಳಿಗಳ ಸಮೂಹವು ನಿರ್ಭಯವಾಗಿ ನಿರಾತಂಕವಾಗಿ ಬದುಕಿಕೊಂಡಿದ್ದವು.

            (ಬೂರುಗದ ಮರವು ಹತ್ತಾರು ವಿಧಗಳಲ್ಲಿ ಸಾವಿರಾರು ಗಿಳಿಗಳಿಗೆ, ಅವುಗಳ ಸಮೂಹಕ್ಕೆ ಆಶ್ರಯತಾಣವಾಗಿತ್ತು. ಮರವು ವಿಶಾಲವಾಗಿ ಹಬ್ಬಿದ್ದರಿಂದ ಮತ್ತು ಮರದಲ್ಲಿ ದಟ್ಟವಾಗಿ ಚಿಗುರೆಲೆಗಳು ಬೆಳೆದಿದ್ದುದರಿಂದ ಕೆಲವು ಗಿಳಿಗಳು ಆ ಚಿಗುರೆಲೆಗಳನ್ನೇ ಮನೆಯನ್ನಾಗಿ ಮಾಡಿಕೊಂಡು ವಾಸಿಸುತ್ತಿದ್ದವು. ಇನ್ನು ಕೆಲವು ಗಿಳಿಗಳು ಮರದಲ್ಲಿ ಅಲ್ಲಲ್ಲಿ ಹೊರಚಾಚಿರುವ ಮರದ ತೊಗಟೆಗಳ ಎಡೆಗಳನ್ನು, ಸಂಧಿಗಳನ್ನು ಮನೆಯನ್ನಾಗಿ ಮಾಡಿಕೊಂಡಿದ್ದವು. ಮತ್ತೆ ಕೆಲವು ಗಿಳಿಗಳು ಕವಲೊಡೆದ ಮರದ ಕೊಂಬೆರೆಂಬೆಗಳ ನಡುವೆ ಗೂಡು ಕಟ್ಟಿಕೊಂಡಿದ್ದವು. ಇನ್ನು ಕೆಲವು ಗಿಳಿಗಳು ಮರದಲ್ಲಿನ ಅಸಂಖ್ಯ ಪೊಟರೆಗಳನ್ನು ಆಶ್ರಯಿಸಿಕೊಂಡಿದ್ದವು. ಅಂತೂ ತಮಗೆ ಸುರಕ್ಷಿತವೆನಿಸಿರುವ ತಾಣಗಳನ್ನು ಆಯ್ಕೆಮಾಡಿ ತಮಗೆ ಬೇಕಾದಂತೆ ಗೂಡುಗಳನ್ನು ಕಟ್ಟಿಕೊಂಡು ಯಾವ ಹೆದರಿಕೆಯೂ ಇಲ್ಲದೆ, ನಿರಾತಂಕವಾಗಿ ಬದುಕಿಕೊಂಡಿದ್ದವು. ಹಾಗೆ ಆ ಬೂರುಗದ ಮರವು ಸಾವಿರಾರು ಗಿಳಿಗಳನ್ನು ತನ್ನ ಒಡಲಲ್ಲಿ ಕಾಪಾಡಿಕೊಂಡಿತ್ತು.)

 

ಅಂತಾ ಶುಕಸಂತತಿ ನಿ

ಶ್ಚಿಂತದಿನಿರ್ದಲ್ಲಿ ಜೀರ್ಣಕೋಟರವಿರಳಾ

ಭ್ಯಂತರದೊಳಿರ್ದುದೊಂದು ಶು

ಕಂ ತನ್ನಯ ಜಾಯೆವೆರಸು ಪರಿಣತವಯಸಂ  ೩

ಪದ್ಯದ ಅನ್ವಯಕ್ರಮ:

ಅಂತು ಆ ಶುಕ ಸಂತತಿ ನಿಶ್ಚಿಂತದಿನ್ ಇರ್ದು ಅಲ್ಲಿ ಜೀರ್ಣ ಕೋಟರ ವಿರಳ ಅಭ್ಯಂತರದೊಳ್ ಒಂದು ಪರಿಣತ ವಯಸಂ ಶುಕಂ ತನ್ನಯ ಜಾಯೆವೆರಸು ಇರ್ದುದು.

ಪದ-ಅರ್ಥ:

ಅಂತು-ಹಾಗೆ;  ಶುಕ-ಗಿಳಿ;  ಸಂತತಿ-ಬಳಗ;  ನಿಶ್ಚಿಂತದಿನ್-ನಿಶ್ಚಿಂತೆಯಿಂದ;  ಇರ್ದ-ಇದ್ದ;  ಜೀರ್ಣಕೋಟರ-ಶಿಥಿಲವಾದ ಪೊಟರೆ;  ವಿರಳಾಭ್ಯಂತರದೊಳ್-ಅಗಲವಾದ ಒಳಭಾಗದಲ್ಲಿ;  ಶುಕಂ-ಗಿಳಿ;  ಜಾಯೆವೆರಸು-ಹೆಂಡತಿಯನ್ನು ಕೂಡಿಕೊಂಡು;  ಪರಿಣತವಯಸಂ-ಪ್ರಾಯ ಸಂದ; ಇರ್ದುದು-ಬದುಕಿಕೊಂಡಿತ್ತು.

            ಹಾಗೆ ಆ ಗಿಳಿಗಳ ಸಂಕುಲವು ನಿಶ್ಚಿಂತೆಯಿಂದ ಆ ಮರದ ಮೇಲೆ ವಾಸಿಸಿಕೊಂಡಿತ್ತು. ಆ ಮರದ ಶಿಥಿಲವಾದ ಹಾಗೂ ಅಗಲವಾದ  ಪೊಟರೆಯೊಂದರ ಒಳಭಾಗದಲ್ಲಿ ಒಂದು ಪ್ರಾಯಸಂದ(ಮುದಿ) ಗಿಳಿಯೊಂದು ತನ್ನ ಹೆಂಡತಿಯನ್ನು ಕೂಡಿಕೊಂಡು ವಾಸಿಸುತ್ತಿತ್ತು.

            (ಆ ಮರವು ಬೇರೆ ಬೇರೆ ದೇಶಗಳಿಂದ ಹಾರಿಬಂದ ಗಿಳಿಗಳಿಗೆ ಆಶ್ರಯವನ್ನು ನೀಡಿತ್ತು. ಆ ಗಿಳಿಗಳ ಸಂಕುಲವು ಆ ಮರದ ವಿವಿಧ ಭಾಗಗಳಲ್ಲಿ ಗೂಡುಕಟ್ಟಿಕೊಂಡು ನಿಶ್ಚಿಂತೆಯಿಂದ ವಾಸಿಸಿಕೊಂಡಿತ್ತು. ಹಾಗೆ ವಾಸಿಸಿಕೊಂಡಿದ್ದ ಗಿಳಿಗಳಲ್ಲಿ ಒಂದು ಮುದಿಗಿಳಿಯೂ ಇತ್ತು. ಅದು ತನ್ನ ಹೆಂಡತಿಯೊಡನೆ ಮರದಲ್ಲಿನ ಒಂದು ಶಿಥಿಲವಾದ, ಅಗಲವಾದ ಪೊಟರೆಯ ಒಳಭಾಗದಲ್ಲಿ ವೈರಿಗಳಿಗೆ ಸುಲಭದಲ್ಲಿ ಸಿಗದ ರೀತಿಯಲ್ಲಿ ಗೂಡುಕಟ್ಟಿಕೊಂಡು ನಿಶ್ಚಿಂತೆಯಿಂದ ವಾಸಿಸುತ್ತಿತ್ತು.)

 

ಆ ವೃದ್ಧ ಶುಕಂಗೊರ್ವನೆ

ದೈವಾಧೀನದೊಳೆ ಪುಟ್ಟಿದೆಂ ಪಾಪಿಯೆನಿ

ನ್ನೇವೇೞ್ದಪೆಂ ಪ್ರಸೂತ್ಯು

ದ್ಭಾವದಿನೆಮ್ಮವ್ವೆ ಕೞಿದಳಂತಾ ಕ್ಷಣದೊಳ್   ೪

ಪದ್ಯದ ಅನ್ವಯಕ್ರಮ:

ಆ ವೃದ್ಧ ಶುಕಂಗೆ ದೈವಾಧೀನದೊಳೆ ಪಾಪಿಯೆನೆ ಒರ್ವನೆ ಪುಟ್ಟಿದೆಂ, ಇನ್ ಏವೇಳ್ದಪೆಂ? ಅಂತು ಎಮ್ಮವ್ವೆ ಪ್ರಸೂತ್ಯ ಉದ್ಭಾವದಿ ಆ ಕ್ಷಣದೊಳ್ ಕೞಿದಳ್.  

ಪದ-ಅರ್ಥ:

ವೃದ್ಧ ಶುಕ-ಮುದಿಗಿಳಿ;  ದೈವಾಧೀನದೊಳೆ-ದೈವಾನುಗ್ರಹದಿಂದ;  ಪಾಪಿಯೆನೆ-ಪಾಪಿ ಎನ್ನುವಂತೆ;  ಒರ್ವನೆ-ಒಬ್ಬನೆ;  ಪುಟ್ಟಿದೆಂ-ಹುಟ್ಟಿದೆನು;  ಏವೇಳ್ದಪೆಂ-ಏನೆಂದು ಹೇಳಲಿ;  ಪ್ರಸೂತ್ಯ-ಹೆರಿಗೆಯ; ಉದ್ಭಾವದಿ-ಸಂಕಟದಿಂದಾಗಿ;  ಎಮ್ಮವ್ವೆ-ನನ್ನ ತಾಯಿ;  ಕೞಿದಳ್-ತೀರಿಕೊಂಡಳು;  ಅಂತಾಕ್ಷಣದಿ– ಹಾಗೆ ಆ ಕ್ಷಣದಲ್ಲಿ.

            ಆ ಮುದಿಗಿಳಿಗೆ ದೈವಾನುಗ್ರಹದಿಂದ ನಾನೊಬ್ಬನೇ ಪಾಪಿಯಂತೆ ಹುಟ್ಟಿದೆನು. ಇನ್ನೇನು ಹೇಳಲಿ? ನಾನು ಹುಟ್ಟುವ ಸಂದರ್ಭದಲ್ಲಿ ನನ್ನ ತಾಯಿ ಹೆರಿಗೆಯ ಸಂಕಟದಿಂದ ತೀರಿಕೊಂಡಳು.

            (ಮರಿಗಿಳಿಯನ್ನು ಹೆತ್ತವರಿಗೆ ಮೊದಲೇ ಪ್ರಾಯಸಂದಿತ್ತು. ಅದುವರೆಗೂ ಮಕ್ಕಳಿಲ್ಲದ ಅವರಿಗೆ ಮರಿಗಿಳಿ ದೈವಾನುಗ್ರಹದಿಂದ ಹುಟ್ಟಿದಂತೆ ಹುಟ್ಟಿತ್ತು. ಆದರೆ ಅದು ತನ್ನ ಹೆತ್ತವರಿಗೆ ಪಾಪಿಮಗನಂತೆ ಹುಟ್ಟಿದೆ.  ಹಾಗಾಗಿ ಅದನ್ನು ಹೆರುವ ಸಂದರ್ಭದಲ್ಲಿ ಹೆರಿಗೆಯ ನೋವನ್ನು ತಡೆಯಲಾರದೆ ಆ ಕ್ಷಣದಲ್ಲಿಯೇ ತಾಯಿಗಿಳಿ ತನ್ನ ಗಂಡನನ್ನು ಹಾಗೂ ಮರಿಯನ್ನು ಅಗಲಿತು. ಮರಿಯನ್ನು ಹೆತ್ತುದರಿಂದಲೇ ತಾಯಿ ಸತ್ತುಹೋಗಬೇಕಾಯಿತು. ಹಾಗಾಗಿ ತನ್ನ ಹೆತ್ತವರ  ಪಾಲಿಗೆ ತಾನು  ಪಾಪಿಯಂತಾದೆ ಎಂದು ಮರಿಗಿಳಿ ಭಾವಿಸುತ್ತದೆ.)

 

ವ|| ಅಂತು ಕೞಿಯೆ ಜಾಯಾವಿಯೋಗದಿಂ ದುಃಖಿತನಾಗಿಯುಮೆನ್ನ ತಂದೆ ಪುತ್ರಸ್ನೇಹದಿಂದಳವಿಗೞಿದ ಹೃದಯಶೋಕಮನಂಡಗಿಸಿರ್ದು ಮತ್ ಪ್ರಾಣನ ಪ್ರಯತ್ನ ತತ್ಪರನಾಗಿ-

ಗದ್ಯದ ಅನ್ವಯಕ್ರಮ:

ಅಂತು ಕೞಿಯೆ ಜಾಯಾ ವಿಯೋಗದಿಂ ದುಃಖಿತನಾಗಿಯುಂ ಎನ್ನ ತಂದೆ ಪುತ್ರ ಸ್ನೇಹದಿಂದ ಅಳವಿ ಕೞಿದ ಹೃದಯಶೋಕಮನ್ ಅಡಂಗಿಸಿರ್ದು ಮತ್ ಪ್ರಾಣನ ಪ್ರಯತ್ನ ತತ್ಪರನ್ ಆಗಿ-

ಪದ-ಅರ್ಥ:

ಅಂತು-ಹಾಗೆ;  ಕೞಿಯೆ-ಸಾಯಲು;  ಜಾಯಾ ವಿಯೋಗದಿಂ-ಹೆಂಡತಿಯ ಅಗಲಿಕೆಯಿಂದ;  ಪುತ್ರಸ್ನೇಹ-ಪುತ್ರ ವಾತ್ಸಲ್ಯ;  ಅಳವಿ-ಶಕ್ತಿ;  ಕೞಿದ-ಕಳೆದುಕೊಂಡ;  ಹೃದಯಶೋಕಮನ್-ಎದೆ ಕರಗಿಸುವ ದುಃಖ;  ಅಡಂಗಿಸಿ-ಅಡಗಿಸಿ, ಮರಮಾಚಿ;  ಮತ್ಪ್ರಾಣನ-ನನ್ನ ಪ್ರಾಣದ, ನನ್ನ ಬದುಕಿನ;  ತತ್ಪರನಾಗಿ-ಆಸಕ್ತಿಯುಳ್ಳವನಾಗಿ.

            ಹಾಗೆ ನನ್ನ ತಾಯಿ ಹೆರಿಗೆ ನೋವಿನಿಂದ ಸಾಯಲು, ನನ್ನ ತಂದೆ, ಹೆಂಡತಿಯ ಅಗಲಿಕೆಯಿಂದ ದುಃಖಿತನಾದರೂ ನನ್ನ ಮೇಲಿನ ಪುತ್ರವಾತ್ಸಲ್ಯದಿಂದ ಶಕ್ತಿಯನ್ನು ಕಳೆದುಕೊಳ್ಳುವಂತೆ ಮಾಡಿದ ಎದೆಕರಗಿಸುವ ತನ್ನ ದುಃಖವನ್ನು ಮರೆಮಾಚಿಕೊಂಡು ನನ್ನ ಬದುಕಿನ ಬಗ್ಗೆ ಆಸಕ್ತಿಯುಳ್ಳವನಾಗಿ-

(ಮುದಿಗಿಳಿ ತನ್ನ ಹೆಂಡತಿಯನ್ನು ಕಳೆದುಕೊಂಡು ತನ್ನೆಲ್ಲ ಶಕ್ತಿಯನ್ನು ಕಳೆದುಕೊಂಡು ಸಹಿಸಲಸಾಧ್ಯವಾದ ದುಃಖದಲ್ಲಿದ್ದರೂ ತನ್ನ ದುಃಖವನ್ನು ತಡೆದುಕೊಂಡು ಆಗತಾನೆ ಹುಟ್ಟಿದ ಹಸುಳೆಯಾದ  ತನ್ನ ಮರಿಯನ್ನು ಹೇಗಾದರೂ ಸಾಕಬೇಕೆಂಬುದನ್ನು, ಮರಿಯ ಬದುಕಿಗೊಂದು ದಾರಿಯನ್ನು ತೋರಿಸಬೇಕೆಂಬುದನ್ನು ಮನಗಂಡು ತನ್ನೆಲ್ಲ ದುಃಖವನ್ನು, ಅಸಹಾಯಕತೆಯನ್ನು, ನೋವನ್ನು ಮರೆತುಬಿಟ್ಟಿತು.)

 

ಕೞಳಲ್ ನಿಜತನುವೊಂದೆರ

ಡುೞಿಯಲ್ ಗಱಿವೀೞ್ದು ಕುೞಿಯಲಾಕರ್ಣಂ ಜೋ

ಲ್ದಿೞಿಯಲ್ ಮುಯ್ಪುಗಳಾವಗೆ

ವೞಿಯಲ್ ಬಲವಾಱದಂತು ಮುಪ್ಪಿಂ ಪಾಱಲ್  ೫

ಪದ್ಯದ ಅನ್ವಯಕ್ರಮ:

ಅಂತು ಮುಪ್ಪಿಂ ನಿಜ ತನು ಕೞಳಲ್, ಗಱಿ ಬೀೞ್ದು ಒಂದೆರಡು ಉಳಿಯಲ್, ಆ ಕರ್ಣಂ, ಕುೞಿಯಲ್, ಅವಗೆ ಮುಯ್ಪುಗಳ್ ಜೋಲ್ದು ಇಱಿಯಲ್,  ಪಾಱಲ್ ಬಲವು ಅೞಿಯಲ್.

ಪದ-ಅರ್ಥ:

ನಿಜತನು-ತನ್ನ ದೇಹ;  ಕೞಳಲ್-ಸೊರಗಲು, ಶಕ್ತಿಹೀನವಾಗಲು;  ಗಱಿ ಬೀೞ್ದು-ಗರಿಗಳು ಉದುರಿ;  ಕುೞಿಯಲ್-ಕೇಳಿಸದಿರಲು; ಕರ್ಣಂ-ಕಿವಿಗಳು;  ಜೋಲ್ದು-ಜೋತುಬಿದ್ದು; ಇೞಿಯಲ್– ಬೀಳು, ಕೆಳಕ್ಕಿಳಿ;  ಮುಯ್ಪುಗಳ್-ಭುಜಗಳು;  ಅವಗೆ– ಆತನಿಗೆ;  ಅೞಿಯಲ್-ಹಾರಲು;  ಬಲವಾಱದಂತು-ಶಕ್ತಿ ಸಾಧ್ಯವಾಗದಂತೆ;  ಮುಪ್ಪಿಂ-ಮುದಿತನದಿಂದ;  ಪಾಱಲ್-ಹಾರಾಡುವುದಕ್ಕೆ.

            ಹಾಗೆ ಮುಪ್ಪಿನಿಂದಾಗಿ ನನ್ನ ತಂದೆಯ ದೇಹವು ಸೊರಗತೊಡಗಿ ಶಕ್ತಿಗುಂದಿತು. ಮೈಮೇಲಿನ ಗರಿಗಳು ಒಂದೊಂದಾಗಿ ಉದುರಿಹೋಗಿ ಒಂದೆರೆಡು ಗರಿಗಳು ಮಾತ್ರ ಉಳಿದವು. ಕಿವಿಗಳು ತಮ್ಮ ಗ್ರಹಣಶಕ್ತಿಯನ್ನು ಕಳೆದುಕೊಂಡವು. ಆತನ ರೆಕ್ಕೆಗಳ ಮೂಲವಾಗಿರುವ ಭುಜಗಳು ಜೋತುಬಿದ್ದವು. ಮುದಿತನದಿಂದಾಗಿ ಶಕ್ತಿಯೂ ಕುಂದಿಹೋಗಿ ಹಾರಾಡುವುದಕ್ಕೆ ಸಾಧ್ಯವಾಗಲಿಲ್ಲ.

            (ಮುಪ್ಪಿನಿಂದಾಗಿ ಮುದಿ ಗಿಳಿಯ ದೇಹದಲ್ಲಿನ ಶಕ್ತಿ ಕುಂದಿ ದೇಹ ಸೊರಗತೊಡಗಿತ್ತು. ಪ್ರಾಯಸಹಜವಾಗಿ ಆಯಾಸ ಬೆಳೆಯತೊಡಗಿತ್ತು. ಪಕ್ಷಿಗಳಿಗೆ ಹಾರಾಡಲು ಅಗತ್ಯವಾದ ಭುಜ ಹಾಗೂ ರೆಕ್ಕೆಗಳಲ್ಲಿನ ಗರಿಗಳು ಒಂದೊಂದಾಗಿ ಉದುರತೊಡಗಿದವು. ಭುಜಗಳೂ ತಮ್ಮ ಶಕ್ತಿಯನ್ನು ಕಳೆದುಕೊಂಡು ಮುದಿಗಿಳಿಗೆ ಹಾರಾಡಲು ಅಸಾಧ್ಯವಾಯಿತು. ಕಿವಿಗಳೂ ಕಿವುಡಾದವು. ಹೊರಗೆ ಹಾರಾಡಿ ಆಹಾರವನ್ನು ಹುಡುಕಲಾರದಷ್ಟು ನಿಶ್ಯಕ್ತಿ ಉಂಟಾಯಿತು.)

 

ವ|| ಅಂತು ಮುಪ್ಪಿಂ ಪಾಱಲಾಱದೆ-

ಹಾಗೆ ಮುದಿತನದಿಂದಾಗಿ ಹಾರಾಡಲು ಸಾಧ್ಯವಾಗದೆ-

 

ಪಕ್ಕಿಗಳಲ್ಲಿ ತಿಂದುೞಿದ ನೆಲ್ಗಳನುಚ್ಚುಗಳಂ ಫಲಂಗಳಂ

ಪಕ್ಕದೊಳಿರ್ದ ಗೂಡುಗಳಿನಾಯ್ದೆನಗಿಕ್ಕುವನೞ್ಕಱಿಂದೆ ತಾಂ

ಮಿಕ್ಕುದನುಂಡಪಂ ಕಡಿದು ನೆಲ್ಗಳನಂಟದ ತಾೞೆವಣ್ಣ ಬ

ಣ್ಣಕ್ಕೆಣೆಯಾದ ಚಂಚುಪುಟದಿಂದಮೆ ಮಜ್ಜನಕಂ ಮಹೀಪತೀ  ೬

ಪದ್ಯದ ಅನ್ವಯಕ್ರಮ:

ಮಹೀಪತೀ, ಮತ್ ಜನಕಂ ತಾೞೆ ಬಣ್ಣಕ್ಕೆ ಎಣೆಯಾದ ತನ್ನ ಚಂಚುಪುಟದಿಂದಮೆ  ಅಂಟದ ನೆಲ್ಗಳಂ, ಪಕ್ಕಿಗಳ್ ಅಲ್ಲಿ ತಿಂದು ಉೞಿದ ನೆಲ್ಗಳ ನುಚ್ಚುಗಳಂ, ಫಲಂಗಳಂ, ಪಕ್ಕದೊಳ್ ಇರ್ದ ಗೂಡುಗಳಿನ್ ಆಯ್ದು ಎಯ್ದು ಅೞ್ಕರಿಂದೆ ಎನಗೆ ಇಕ್ಕುವನ್, ಮಿಕ್ಕುದುನ್ ತಾಂ ಉಂಡಪಂ.

ಪದ-ಅರ್ಥ:

ಪಕ್ಕಿಗಳ್-ಹಕ್ಕಿಗಳು;  ತಿಂದುೞಿದ-ತಿಂದು ಮಿಕ್ಕಿದ;  ನೆಲ್ಗಳ-ಬತ್ತಗಳ;  ನುಚ್ಚುಗಳಂ-ಧಾನ್ಯಗಳ ಚೂರುಗಳನ್ನು;  ಫಲಂಗಳಂ-ಹಣ್ಣುಗಳನ್ನು;  ಆಯ್ದು-ಆರಿಸಿ;  ಅೞ್ಕರಿಂದೆ-ಪ್ರೀತಿಯಿಂದ;  ಮಿಕ್ಕುದಂ-ಉಳಿದುದನ್ನು;  ತಾನುಂಡಪಂ-ತಾನು ಉಣ್ಣುತ್ತಾನೆ;  ಕಡಿದು-ಕಚ್ಚಿ;   ಅಂಟದ-ಹಿಡಿದುಕೊಳ್ಳಲಾಗದ;  ತಾೞೆವಣ್ಣ-ತಾಳೆಯ ಹಣ್ಣಿನ;  ಎಣೆಯಾದ-ಸಮಾನವಾದ;  ಚಂಚುಪುಟ-ಕೊಕ್ಕು;  ಮಜ್ಜನಕಂ(ಮತ್+ಜನಕಂ)-ನನ್ನ ತಂದೆ;  ಮಹೀಪತೀ-ರಾಜ(ಶೂದ್ರಕ).

            ಮಹಾರಾಜನೆ, ನನ್ನ ತಂದೆ ತಾಳೆಹಣ್ಣಿನ ಬಣ್ಣದಂತಿರುವ ಮತ್ತು ತನ್ನ ಮುದಿತನದಿಂದಾಗಿ ಬತ್ತವನ್ನು ಹಿಡಿದುಕೊಳ್ಳಲಾಗದ ತುದಿಮುರಿದು ಹೋಗಿರುವ ತನ್ನ ಕೊಕ್ಕಿನಲ್ಲಿ ಅಕ್ಕಪಕ್ಕದ ಗೂಡುಗಳಲ್ಲಿ ಇತರ ಗಿಳಿಗಳು ತಿಂದು ಉಳಿದ ಬತ್ತವನ್ನು, ಧಾನ್ಯಗಳ ಚೂರುಗಳನ್ನು, ವಿವಿಧ ಹಣ್ಣುಗಳನ್ನು ಆರಿಸಿ ತಂದು ನನಗೆ ಪ್ರೀತಿಯಿಂದ ತಿನ್ನಿಸುತ್ತಿದ್ದನು. ಮಿಕ್ಕುಳಿದುದನ್ನು ತಾನು ತಿನ್ನುತ್ತಿದ್ದನು.

            (ಗಿಳಿಮರಿಯ ತಂದೆ ತನ್ನ ಮರಿಯನ್ನು ಸಾಕಲು ತುಂಬಾ ಪಾಡುಪಟ್ಟಿದೆ. ಮುದಿತನದಿಂದಾಗಿ ಅದರ ಕೊಕ್ಕಿನ ತುದಿ ಮುರಿದುಹೋಗಿತ್ತು. ಹಾಗಾಗಿ ಬತ್ತ ಮೊದಲಾದ ಧಾನ್ಯಗಳನ್ನು ಕೊಕ್ಕಿನಿಂದ ಹಿಡಿದುಕೊಳ್ಳಲು ಸಾಧ್ಯವಿರಲಿಲ್ಲ. ಆದರೂ ತನ್ನ ಮರಿಯನ್ನು ಹೇಗಾದರೂ ಸಾಕಬೇಕೆಂಬ ಛಲದಿಂದ ಹಾಗೂ ಅದರ ಅನಿವಾರ್ಯತೆಯಿಂದ, ಅಸಾಧ್ಯವಾದರೂ ಆ ಮರದಲ್ಲಿರುವ  ಅಕ್ಕಪಕ್ಕದ ಗೂಡುಗಳಿಂದ ಉಳಿದ ಗಿಳಿಗಳು ತಿಂದು ಚೆಲ್ಲಿದ ಬತ್ತದ ಕಾಳುಗಳನ್ನು, ವಿವಿಧ ಧಾನ್ಯಗಳ ಚೂರುಗಳನ್ನು, ತಿಂದುಳಿದ ಹಣ್ಣುಗಳ ಚೂರುಗಳನ್ನು ತನ್ನ ತುದಿಮುರಿದ ಕೊಕ್ಕಿನಿಂದಲೇ ಹೆಕ್ಕಿ ತಂದು ತನ್ನ ಮರಿಗೆ ಪ್ರೀತಿಯಿಂದ ಉಣಿಸುತ್ತಿತ್ತು. ಹಾಗೆ ಉಣಿಸಿ ಉಳಿದುದನ್ನು ತಾನು ತಿನ್ನುತ್ತಿತ್ತು.)

 

ವ||  ಅಂತು ನೇಸರ್ ಮೂಡಲೊಡನೆ ಗೂಡುಗಳಿಂ ಗಿಳಿಗಳೆಲ್ಲಂ ಕುಟುಕುಗೊಳಲೆಂದು ಪೋಗೆ ಶಾಬಕನಿಕರಸನಾಥಮಾಗಿಯುಂ ನಿಶ್ಯಬ್ಧತೆಯಿಂ ಶೂನ್ಯದಂತಿರ್ದ ಶಾಲ್ಮಲಿ ವನಸ್ಪತಿಯೊಳ್-

ಗದ್ಯದ ಅನ್ವಯಕ್ರಮ:

ಅಂತು ನೇಸರ್ ಮೂಡಲ್ ಒಡನೆ ಕುಟುಕುಗೊಳಲ್ ಎಂದು  ಎಲ್ಲಂ ಗಿಳಿಗಳ್ ಗೂಡುಗಳಿಂ  ಪೋಗೆ ಶಾಬಕ ನಿಕರ ಸನಾಥಂ ಆಗಿಯುಂ ನಿಶ್ಯಬ್ದತೆಯಿಂ ಶೂನ್ಯದಂತೆ ಇರ್ದ ಶಾಲ್ಮಲಿ ವನಸ್ಪತಿಯೊಳ್-

ಪದ-ಅರ್ಥ:

ಅಂತು-ಹಾಗೆ;  ನೇಸರ್-ಸೂರ್ಯ;  ಕುಟುಕುಗೊಳಲ್-ಆಹಾರವನ್ನು ಸಂಪಾದಿಸಲು;  ಪೋಗೆ-ಹೋಗಲು;  ಶಾಬಕನಿಕರ-ಮರಿಗಳ ಸಮೂಹ;  ಸನಾಥನಾಗಿಯುಂ-ಕೂಡಿಕೊಂಡಿದ್ದರೂ; ಶೂನ್ಯದಂತಿರ್ದ-ಮೌನದಂತಿದ್ದ;  ಶಾಲ್ಮಲಿ-ಬೂರುಗದ ಮರ;  ವನಸ್ಪತಿ-ಮರ. 

            ಹಾಗೆ, ಸೂರ್ಯೋದಯವಾಗುತ್ತಿದ್ದಂತೆಯೇ ಮರದ ಮೇಲೆ ವಾಸಿಸಿಕೊಂಡಿದ್ದ ಗಿಳಿಗಳೆಲ್ಲ ಆಹಾರವನ್ನು ಸಂಪಾದಿಸಲು ತಮ್ಮ ತಮ್ಮ ಗೂಡುಗಳಿಂದ ಹೊರಟುಹೋದವು. ಪ್ರತಿಯೊಂದು ಗೂಡುಗಳಲ್ಲಿ ಮರಿಗಳು ಇದ್ದರೂ ಯಾವುದೇ ಸದ್ದಿಲ್ಲದೆ ಮೌನವಾಗಿದ್ದ ಬೂರುಗದ ಮರದಲ್ಲಿ-

 

ಕುಟುಕುಗೊಳವೋಪ ಶಕುನಿಗ

ಳೊಡವೋಗಲ್ ಜನಕನಾಱದಿರ್ದೊಡಮಾನುಂ

ಮಿಡುಕಲಣಮಱಿಯದಿರ್ದೆಂ

ಪೊಡರದ ಗಱಿಯವನೆ ತನ್ನ ತಂದೆಯ ಕೆಲದೊಳ್  ೭  

ಪದ್ಯದ ಅನ್ವಯಕ್ರಮ:

ಕುಟುಕುಗೊಳಲ್ ಪೋಪ ಶಕುನಿಗಳ ಒಡ ಪೋಗಲ್ ಜನಕನ್ ಆಱದೆ ಇರ್ದೊಡೆ, ಆನುಂ ಪೊಡರದ ಗಱಿಯವನೆ ಮಿಡುಕಲ್ ಅಣಂ ಅಱಿಯದೆ ತನ್ನ ತಂದೆಯ ಕೆಲದೊಳ್ ಇರ್ದೆಂ.

ಪದ-ಅರ್ಥ:

ಕುಟುಕುಗೊಳಲ್-ಆಹಾರ ಸಂಪಾದಿಸಲು;  ವೋಪ(ಪೋಪ)-ಹೋಗುವ;  ಶಕುನಿಗಳ-ಹಕ್ಕಿಗಳ(ಗಿಳಿಗಳ);  ಒಡವೋಗಲ್(ಒಡ+ಪೋಗಲ್)-ಜೊತೆಗೆ ಹೋಗಲು;  ಜನಕ-ತಂದೆ;  ಆಱದಿರ್ದೊಡಂ-ಸಾಧ್ಯವಾಗದೇ ಇರಲು;  ಆನುಂ-ನಾನು;  ಮಿಡುಕಲ್-ಚಲಿಸಲು;  ಅಣಂ-ಸ್ವಲ್ಪವೂ;  ಅಱಿಯದೆ-ತಿಳಿಯದೆ;  ಇರ್ದೆಂ-ಇದ್ದೆನು;  ಪೊಡರದ ಗಱಿಯವನೆ-ಗರಿಗಳೇ ಹುಟ್ಟದವನು; ಗರಿಗಳಿಲ್ಲದವನು;  ಕೆಲದೊಳ್-ಪಕ್ಕದಲ್ಲಿ.

            ದಿನನಿತ್ಯ ಆಹಾರ ಸಂಪಾದನೆಗೆಂದು ಇತರ ಗಿಳಿಗಳ ಜೊತೆಯಲ್ಲಿ ಹೋಗಲು ತನ್ನ ತಂದೆಗೆ ಸಾಧ್ಯವಾಗದೇ ಇದ್ದುದರಿಂದ ಮತ್ತು ನನಗೆ ಗರಿಗಳು ಹುಟ್ಟದೆ  ಅತ್ತಿತ್ತ ಚಲಿಸಲು ಸಾಧ್ಯವಾಗದೇ ಇದ್ದುದರಿಂದ ನಾನು ನನ್ನ ತಂದೆಯ ಇದ್ದೆನು.

            (ಮರದ ಮೇಲೆ ವಾಸಿಸಿಕೊಂಡಿದ್ದ ಗಿಳಿಗಳು ಪ್ರತಿನಿತ್ಯ ತಮಗೆ ಹಾಗೂ ತಮ್ಮ ಮರಿಗಳಿಗೆ ಆಹಾರವನ್ನು ಹುಡುಕಲು ಹೊರಡುವುದು ಸಂಪ್ರದಾಯ. ಸೂರ್ಯೋದಯವಾದ ಮೇಲೆ ಎಲ್ಲಾ ಗಿಳಿಗಳು ಇನ್ನೂ ಹಾರಲಾಗದ ತಮ್ಮ ತಮ್ಮ ಮರಿಗಳನ್ನು ಗೂಡುಗಳಲ್ಲಿಯೇ ಬಿಟ್ಟು, ಹಾರಾಡುವುದಕ್ಕೆ ಕಲಿತಿರುವ ಇತರ ಮರಿಗಳೊಂದಿಗೆ ಆಹಾರವನ್ನು ಹುಡುಕುವುದಕ್ಕೆ ಹೊರಟುಹೋಗುತ್ತವೆ. ಆದರೆ ಈ ಮರಿಗಿಳಿಯ ತಂದೆಗೆ ಆಗಲೇ ವಯಸ್ಸಾದುದರಿಂದ ಮತ್ತು ಅದರ ಮೈಮೇಲಿನ ಗರಿಗಳು ಉದುರಿ ಹೋಗಿ ಭುಜಗಳು ತಮ್ಮ ಶಕ್ತಿಯನ್ನು ಕಳೆದುಕೊಂಡಿದ್ದರಿಂದ ಹಾರಾಡಿಕೊಂಡು ಹೋಗುವುದಕ್ಕೆ, ಆಹಾರ ಸಂಪಾದಿಸಿಕೊಂಡು ಬರುವುದಕ್ಕೆ ಸಾಧ್ಯವಾಗದೇ ತನ್ನ ಗೂಡಿನಲ್ಲಿಯೇ ಇರಬೇಕಾಯಿತು. ಅಲ್ಲದೆ, ಮರಿಗಿಳಿಗೆ ಇನ್ನೂ ಗರಿಗಳು ಮೂಡದಿದ್ದುದರಿಂದ ಮತ್ತು ಅದಕ್ಕೆ ಅತ್ತಿತ್ತ ಚಲಿಸಲು ಸಾಧ್ಯವಾಗದೇ ಇದ್ದುದರಿಂದ ತಂದೆಯ ಜೊತೆಯಲ್ಲಿಯೇ ಅದೂ ತನ್ನ ಗೂಡಿನಲ್ಲಿಯೇ ಇರಬೇಕಾದ ಅನಿವಾರ್ಯತೆ ಒದಗಿತು.)

 

ಚಕಿತೋದ್ಯತ್ಪಕ್ಷಿ ಪಕ್ಷಸ್ವನದೊಳಮರ್ದ ಕೋಳಾಹಳಧ್ವಾನದಿಂ ಕೊ

ರ್ವಿ ಕರೀಂದ್ರೋದ್ಭೂತ ಫೂತ್ಕಾರದೆ ಪುದಿದು ಗುಹಾನೀಕಸುಪ್ತೋತ್ಥಸಿಂಹ

ಪ್ರಕರಪ್ರೋನ್ನಾದದಿಂ ತಳ್ತುಪಗತವನದೇವೀಚಯಸ್ವಾಂತ ಸಂತ್ರಾ

ಸಕರಂ ಪೊಣ್ಮಿತ್ತು ವಿಂಧ್ಯಂ ನಡುಗೆ ಘನರವಸ್ಪರ್ಧಿ ಕೈರಾತಘೋಷಂ  ೮

ಪದ್ಯದ ಅನ್ವಯಕ್ರಮ:

 ಚಕಿತ ಉದ್ಯತ್ ಪಕ್ಷಿ ಪಕ್ಷ ಸ್ವನದೊಳ್, ಅಮರ್ದ ಕೋಳಾಹಳ ಧ್ವಾನದಿಂ, ಕೊರ್ವಿ ಕರೀಂದ್ರ ಉದ್ಭೂತ ಪೂತ್ಕಾರದೆ ಪುದಿದು, ಗುಹಾನೀಕ ಸುಪ್ತೋತ್ಥ ಸಿಂಹ ಪ್ರಕರ ಪ್ರೋತ್ ನಾದದಿಂ, ತಳ್ತ ಉಪಗತ ವನದೇವಿ ಚಯಸ್ವಾಂತ ಸಂತ್ರಾಸಕರಂ ಪೊಣ್ಮಿತ್ತು, ವಿಂಧ್ಯಂ ನಡುಗೆ ಘನರವ ಸ್ಪರ್ಧಿ ಕೈರಾತ ಘೋಷಂ.

ಪದ-ಅರ್ಥ:

 ಚಕಿತ-ಗಾಬರಿಗೊಂಡ;  ಉದ್ಯತ್-ಉಂಟಾದ;  ಪಕ್ಷಿಪಕ್ಷಸ್ವನ-ಹಕ್ಕಿಗಳ ರೆಕ್ಕೆಗಳ ಸದ್ದು;  ಅಮರ್ದ-ಆವರಿಸಿದ, ಉಂಟಾದ;  ಕೋಳಾಹಳ ಧ್ವಾನ-ಕೋಲಾಹಲ ಶಬ್ದ;  ಕೊರ್ವಿ-ಹೆಚ್ಚಾಗಿ, ಅಧಿಕವಾಗಿ;   ಕರೀಂದ್ರ-ಆನೆ;  ಉದ್ಭೂತ-ಉಂಟಾದ;  ಪೂತ್ಕಾರದೆ-ಘೀಳಿಡುವಿಕೆಯಿಂದ;  ಪುದಿದು-ವ್ಯಾಪಿಸಿ;  ಗುಹಾನೀಕ-ಗುಹೆಗಳಲ್ಲಿ ಮಲಗಿರುವ;  ಸುಪ್ತೋತ್ಥ-ಮಲಗಿದ್ದಲ್ಲಿಯೇ ಎಚ್ಚರಗೊಂಡ;  ಸಿಂಹಪ್ರಕರಪ್ರೋನ್ನಾದದಿಂ-ಸಿಂಹಗಳ ಪ್ರಬಲವಾದ ಗರ್ಜನೆಯ ಸದ್ದಿನಿಂದ;  ತಳ್ತ-ಕೂಡಿದ;  ಅಪಗತ-ದೂರಸರಿದ;  ವನದೇವೀಚಯಸ್ವಾಂತ-ವನದೇವಿಯರ ಮನಸ್ಸಿಗೆ; ಸಂತ್ರಾಸಕರಂ– ಭಯವನ್ನು ಉಂಟುಮಾಡುವ;  ಪೊಣ್ಮಿತ್ತು-ಹೊಮ್ಮಿತ್ತು;  ಘನರವಸ್ಪರ್ಧಿ –ಸಿಡಿಲಿನೊಂದಿಗೆ ಸ್ಪರ್ಧಿಸುವ; ಸಿಡಿಲಿನೊಂದಿಗೆ ಪೈಪೋಟಿನೀಡುವ;  ಕೈರಾತಘೋಷಂ-ಕಿರಾತರ ಬೊಬ್ಬೆ, ಬೇಡರ ಆರ್ಭಟ.

            ಗಾಬರಿಗೊಂಡು ಹಾರಾಡತೊಡಗಿದ್ದರಿಂದ ಉಂಟಾದ ಪಕ್ಷಿಗಳ ರೆಕ್ಕೆಗಳ ಸದ್ದಿನಿಂದಲೂ ಸುತ್ತಲೂ ಆವರಿಸಿದ ಕೋಲಾಹಲ ಶಬ್ದಗಳಿಂದಲೂ ಆನೆಗಳ  ಅತಿಯಾದ ಘೀಳಾಟದಿಂದಲೂ ಗುಹೆಗಳಲ್ಲಿ ಮಲಗಿದ್ದ ನಿಂಹಗಳು ತಕ್ಷಣ ಎಚ್ಚರಗೊಂಡು ಉಂಟುಮಾಡಿದ ಅತಿಯಾದ ಗರ್ಜನೆಗಳಿಂದಲೂ ವನದೇವತೆಗಳ ಮನಸ್ಸಿಗೆ ಭಯವನ್ನು ಉಂಟುಮಾಡುವಂತೆ, ವಿಂಧ್ಯಪರ್ವತವೇ ಅಲುಗಾಡುವಂತೆ  ಗುಡುಗಿನ ಧ್ವನಿಯನ್ನೂ ಮೀರಿಸುವ ಬೇಡರ ಪಡೆಯ ಕೋಲಾಹಲ ಧ್ವನಿಯು ಸುತ್ತಲೂ ಹಬ್ವಿತು.

            (ಮರಗಳಲ್ಲಿ ವಾಸಿಸಿಕೊಂಡಿದ್ದ ಎಲ್ಲಾ ಪಕ್ಶಿಸಂಕುಲ ತಮ್ಮಮರಿಗಳಿಗಾಗಿ ಹಾಗೂ ತಮಗಾಗಿ ಆಹಾರ ಸಂಪಾದಿಸಲೆಂದು ಹೊರಗೆ ಹೊರಟುಹೋದ ಮೇಲೆ ಬೇಡರ ಪಡೆಯೊಂದು ಕಾಡುಪ್ರಾಣಿಗಳನ್ನು ಬೇಟೆಯಾಡುತ್ತ ವಿಂಧ್ಯಪರ್ವತದ ತಪ್ಪಲಿಗೆ ಬರತೊಡಗಿತು. ಆ ಪಡೆಯ ಬೊಬ್ಬೆ, ಆರ್ಭಟ ಮರದ ಮೇಲಿರುವ ಮರಿಗಳನ್ನು, ಮುದಿ ಪಕ್ಷಿಗಳನ್ನು ಹೆದರುವಂತೆ ಮಾಡಿತಲ್ಲದೆ, ಗೂಡುಗಳಿಂದ ಹೊರಬಂದು ಮರದಲ್ಲೆಲ್ಲ ಭಯದಿಂದ ರೆಕ್ಕೆಬಡಿದು ಕಿರಿಚಾಡತೊಡಗಿದವು. ಬೇಡಪಡೆಯ ಬೊಬ್ಬೆಗೆ ಕೆರಳಿದ ಮದಗಜಗಳು ಅತಿಯಾಗಿ ಘೀಳಿಡತೊಡಗಿದವು. ಹಕ್ಕಿಗಳ ಕಿರುಚಾಟದ ಹಾಗೂ ರೆಕ್ಕೆಗಳ ಸದ್ದಿನೊಂದಿಗೆ ಆನೆಗಳ ಘೀಳಾಟದ ಸದ್ದೂ ಸೇರಿಕೊಂಡಿತು. ಇನ್ನೊಂದು ಕಡೆ ಗುಹೆಗಳಲ್ಲಿ ಆರಾಮವಾಗಿ ಮಲಗಿ ನಿದ್ರಿಸುತ್ತಿದ್ದ ಸಿಂಹಗಳು ಬೇಡಪಡೆಯ ಬೊಬ್ಬೆಗೆ ಕೆರಳಿ ಅಪಾಯವನ್ನು ಎದುರಿಸುವುದಕ್ಕೆ ಜೋರಾಗಿ ಗರ್ಜಿಸತೊಡಗಿದವು. ಇದರಿಂದಾಗಿ ಕಾಡಿನಲ್ಲಿನ ಕೋಲಾಹಲ ಸದ್ದು ಇನ್ನಷ್ಟು ಹೆಚ್ಚಾಯಿತು. ಇವೆಲ್ಲವು ವನದೇವತೆಗಳ ಮನಸ್ಸಿಗೆ ಭಯವನ್ನುಂಟುಮಾಡುವಂತಿತ್ತು. ವಿಂಧ್ಯಪರ್ವತದ ತಪ್ಪಲಿನಲ್ಲಿ ಪ್ರಾರಂಭವಾದ ಈ  ಬೇಡಪಡೆಯ ಸಿಡಿಲನ್ನೂ ಮೀರಿಸುವ ಬೊಬ್ಬೆ, ಕೋಲಾಹಲಗಳು ಸಮಸ್ತ ವಿಂಧ್ಯಪರ್ವತವನ್ನೇ ನಡುಗುವಂತೆ ಮಾಡಿತು. ಸಮಸ್ತ ಪರ್ವತಪ್ರದೇಶವೆಲ್ಲವೂ ಗಾಬರಿ, ಭಯಗಳಿಂದ ನಡುಗಲು ತೊಡಗುವಂತಾಯಿತು.)

(೨ನೇ ಭಾಗದಲ್ಲಿ ಮುಂದುವರಿದಿದೆ)

 

Leave a Reply

Your email address will not be published. Required fields are marked *