ಸಾಹಿತ್ಯಾನುಸಂಧಾನ

heading1

ಪತಿಗಳೆನ್ನನು ಮಾರಿ ಧರ್ಮಸ್ಥಿತಿಯ ಕೊಂಡರು – ಕುಮಾರವ್ಯಾಸ- ಭಾಗ-೩

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ. ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ) (ಭಾಗ-೩)

ಅಕಟ ಧರ್ಮಜ ಭೀಮ ಫಲುಗುಣ

ನಕುಲ ಸಹದೇವಾದ್ಯರಿರ ಬಾ

ಲಿಕೆಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ

ವಿಕಳರಾದಿರೆನಿಲ್ಲಿ ನೀವೀ

ಗಕುಟಿಲರಲಾ ಭೀಷ್ಮ ಗುರು ಬಾ

ಹ್ಲಿಕ ಕೃಪಾದಿಗಳುತ್ತರವ ಕೊಡಿಯಿಂದಳಿಂದುಮುಖಿ  ೨೦

ಪದ್ಯದ ಅನ್ವಯಕ್ರಮ:

ಅಕಟ ಧರ್ಮಜ ಭೀಮ ಫಲುಗುಣ ನಕುಲ ಸಹದೇವ ಆದ್ಯರಿರ ಬಾಲಿಕೆಯನ್ ಮೃತ್ಯುವಿನ ತಾಳಿಗೆಗೆ ಒಪ್ಪಿಸಿ ಕೊಟ್ಟಿರೇ? ಇಲ್ಲಿ ವಿಕಳರೇನ್? ಭೀಷ್ಮ ಗುರು ಬಾಹ್ಲಿಕ ಕೃಪ ಆದಿಗಳ್ ನೀವು ಅಕುಟಿಲರಲಾ, ಉತ್ತರವ ಕೊಡಿ ಎಂದಳ್ ಇಂದುಮುಖಿ.

ಪದ-ಅರ್ಥ:

ಅಕಟ-ಅಯ್ಯೋ(ನೋವು, ಬೇಸರ, ಹಿಂಸೆ ಮೊದಲಾದ ಸಂದರ್ಭಗಳಲ್ಲಿ ವ್ಯಕ್ತವಾಗುವ ಅವ್ಯಯ); ಧರ್ಮಜ-ಧರ್ಮರಾಯ;  ಮೃತ್ಯುವಿನ ತಾಳಿಗೆ-ಸಾವಿನ ಗಂಟಲು;  ವಿಕಳ-ಭ್ರಮೆಗೆ ಒಳಗಾದ;  ಅಕುಟಿಲರ್-ಮೋಸವಿಲ್ಲದವರು.

            ಅಯ್ಯೋ ಧರ್ಮರಾಯ, ಭೀಮಸೇನ, ಅರ್ಜುನ, ನಕುಲ ಸಹದೇವಾದಿಗಳೇ ನಿಮಗಿರುವ ಒಬ್ಬಳು ಹೆಂಡತಿಯನ್ನು ಕಾಪಾಡದೆ ಸಾವಿನ ಗಂಟಲಿಗೆ ಒಪ್ಪಿಸಿಕೊಟ್ಟಿರೆ? ಇಲ್ಲಿ ನೀವು ಭ್ರಮೆಗೆ ಒಳಗಾದಿರೆ? ಎಲ್ಲಿ ಹೋಯಿತು ನಿಮ್ಮ ಪೌರುಷ? ಈ ಆಸ್ಥಾನದಲ್ಲಿ ಪಿತಾಮಹನಾದ ಭೀಷ್ಮ, ಗುರುಗಳಾದ ದ್ರೋಣಾಚಾರ್ಯ, ರಾಜಗುರು ಕೃಪಾಚಾರ್ಯ, ಹಿರಿಯರಾದ ಬಾಹ್ಲೀಕರು ಧರ್ಮಿಷ್ಟರೆಂದು, ಲೋಕಜ್ಞಾನವನ್ನು ಪಡೆದವರೆಂದು ಲೋಕದಲ್ಲಿ ಪ್ರಸಿದ್ಧಿಪಡೆದವರಲ್ಲವೆ? ನನ್ನ ಪ್ರಶ್ನೆಗೆ ಉತ್ತರವನ್ನು ಕೊಡಿ ಎಂದು ದ್ರೌಪದಿ ಅಂಗಲಾಚಿದಳು.

            (ಲೋಕದಲ್ಲಿ ಒಬ್ಬ ರಾಜನಿಗೆ ಹಲವು ಹೆಂಡಂದಿರು ಇರಬಹುದು, ಆದರೆ ಒಬ್ಬ  ರಾಜಕುಮಾರಿಗೆ ಒಬ್ಬ ಗಂಡ. ಆದರೆ ತನಗೋ ಪರಾಕ್ರಮಶಾಲಿಯಾದ ಐದು ಮಂದಿ ಗಂಡಂದಿರು. ಆದರೆ ಇಂದು ರಾಜಸಭೆಯಲ್ಲಿ ತನ್ನ ಮೇಲೆ ಅತಿಕ್ರಮಣ ನಡೆದಾಗ, ಹೀನಾಯವಾಗಿ ಅವಮಾನಿಸಿದಾಗ ಒಬ್ಬರೂ ತನ್ನನ್ನು ಕಾಪಾಡುವುದಕ್ಕೆ ಮುಂದೆ ಬರುತ್ತಿಲ್ಲವೇಕೆ? ಧರ್ಮರಾಯ, ಭೀಮಸೇನ, ಅರ್ಜುನ, ನಕುಲ, ಸಹದೇವ ಎಂದು ಪ್ರತಿಯೊಬ್ಬರ ಹೆಸರನ್ನೂ ಉಲ್ಲೇಖಿಸಿ ದ್ರೌಪದಿ ಪ್ರಶ್ನಿಸುತ್ತಾಳೆ.  ನಿಮಗಿರುವ ಒಬ್ಬ ಹೆಂಡತಿಯನ್ನು ಮೃತ್ಯುವಿನ ಗಂಟಲಿಗೆ ಒಪ್ಪಿಸಿಕೊಟ್ಟಿರೆ? ಎಂದು ನೋವಿನಿಂದ ಕೇಳುತ್ತಾಳೆ. ನಿಮ್ಮ ಪ್ರರಾಕ್ರಮವೆಲ್ಲವನ್ನೂ ಕಳೆದುಕೊಂಡು ಭ್ರಮೆಗೆ ಒಳಗಾದಿರೆ? ಹೆಂಡತಿಯನ್ನು ದುರ್ಯೋಧನ, ದುಶ್ಶಾಸನರಂತಹ ನೀಚರಿಂದ ಕಾಪಾಡಬೇಕೆಂಬ ಕನಿಷ್ಠ ಜ್ಞಾನವೂ ತಿಳಿವಳಿಕೆಯೂ ನಿಮಗಿಲ್ಲದೆ ಹೋಯಿತೆ? ಎಂದು ಕೇಳುತ್ತಾಳೆ. ಆದರೆ ದ್ರೌಪದಿಯ ಯಾವ ಪ್ರಶ್ನೆಗೂ ಪಾಂಡವರಲ್ಲಿ ಉತ್ತರವಿಲ್ಲದಿದ್ದಾಗ, ಆಕೆ ನೇರವಾಗಿ ರಾಜಾಸ್ಥಾನದಲ್ಲಿ ಆಸೀನರಾಗಿರುವ, ಅಕುಟಿಲರು, ಧರ್ಮಷ್ಠರು, ಸಕಲವಿದ್ಯಾ ಪಾರಂಗತರು ಎಂದೆನಿಸಿರುವ ಪಿತಾಮಹನಾದ ಭೀಷ್ಮ, ಬಿಲ್ವಿದ್ಯಾಗುರು ದ್ರೋಣ, ರಾಜಗುರು ಕೃಪಾಚಾರ್ಯ, ಹಿರಿಯರಾದ ಬಾಹ್ಲಿಕ ಮೊದಲಾದವರನ್ನು ಪ್ರಶ್ನಿಸುತ್ತಾಳೆ. ತನ್ನ ಪ್ರಶ್ನೆಗೆ ಸಮರ್ಪಕ, ನ್ಯಾಯೋಚಿತವಾದ ಉತ್ತರವನ್ನು ಕೊಡಿ ಎಂದು ಅಂಗಲಾಚುತ್ತಾಳೆ.)

 

ಹಾರ ಪದಕ ಕಿರೀಟ ಮಣಿ ಕೇ

ಯೂರ ಕರ್ಣಾಭರಣವೆಂಬಿವು

ಭಾರವಲ್ಲಾ ತೆಗೆಯ ಹೇೞ್ ದಾಕ್ಷಿಣ್ಯವೇನಿದಕೆ

ನಾರಿಗೀ ವಸ್ತ್ರಾಭರಣ ಶೃಂ

ಗಾರವೇಕಿನ್ನಿವನು ತೆಗೆ ಕೈ

ವಾರವಿದಕೇಕೆಂದು ದುಶ್ಶಾಸನಗೆ ನೇಮಿಸಿದ.  ೨೧

ಪದ್ಯದ ಅನ್ವಯಕ್ರಮ:

ಹಾರ, ಪದಕ, ಕಿರೀಟ, ಮಣಿ, ಕೇಯೂರ, ಕರ್ಣಾಭರಣ ಎಂಬ ಇವು ಭಾರವಲ್ಲಾ! ತೆಗೆಯ ಹೇಳ್ ಇದಕೆ ದಾಕ್ಷಿಣ್ಯವೇನು? ನಾರಿಗೆ ಇನ್ನು ಈ ವಸ್ತ್ರ ಆಭರಣ ಶೃಂಗಾರವೇಕೆ? ಇವನು ತೆಗೆ, ಇನ್ನು ಇದಕೆ ಕೈವಾರವೇಕೆ? ಎಂದು ದುಶ್ಶಾಸನಗೆ ನೇಮಿಸಿದ.

ಪದ-ಅರ್ಥ:

ಹಾರ-ಚಿನ್ನದ ಸರ; ಪದಕ-ಬಿರುದಿನ ಅಥವಾ ಅಧಿಕಾರದ ಬಿಲ್ಲೆ, ಚಿನ್ನದ ಸರದಲ್ಲಿರುವ ಚಿನ್ನದ ಬಿಲ್ಲೆ; ಮಣಿ-ಹರಳು;  ಕೇಯೂರ-ತೋಳಬಂದಿ;  ಕರ್ಣಾಭರಣ-ಕಿವಿಯ ಆಭರಣ;  ನಾರಿಗೆ-ಸ್ತ್ರೀಗೆ, ದಾಸಿಗೆ(ದ್ರೌಪದಿಗೆ);  ಕೈವಾರ-ಅಭಿಮಾನ, ಮೋಹ; ನೇಮಿಸು-ಆಜ್ಞಾಪಿಸು.

            ಪಗಡೆಯಾಟದಲ್ಲಿ ಸೋತು ನಮ್ಮ ಸೇವಕರಾಗಿರುವ ಈ ಪಾಂಡವರಿಗೆ ಕೊರಳಲ್ಲಿರುವ ಚಿನ್ನದ ಸರಗಳು, ಪದಕಗಳು, ಕಿರೀಟ, ಮಣಿಗಳ ಆಭರಣಗಳು, ತೋಳಬಂದಿ, ಕಿವಿಯ ಆಭರಣಗಳು ಮೊದಲಾದವು ಅವರ ಅವಯವಗಳಿಗೆ ಭಾರವಲ್ಲವೇ? ದುಶ್ಶಾಸನ, ಅವೆಲ್ಲವನ್ನೂ ತೆಗೆಯಲು ಹೇಳು, ಈ ವಿಚಾರದಲ್ಲಿ ನಿನಗೆ ದಾಕ್ಷಿಣ್ಯವೇಕೆ? ಮಾತ್ರವಲ್ಲದೆ, ಈ ದ್ರೌಪದಿ ಈಗ ನಮ್ಮ ಸಖಿಯಾಗಿರುವುದರಿಂದ ಆಕೆಗೆ ಈ ರೀತಿಯ ರಾಣಿಯ ಉಡುಗೆ-ತೊಡುಗೆಗಳು ಶೋಭಿಸಲಾರವು. ಇವುಗಳ ಬಗ್ಗೆ ಇನ್ನೂ ಅಭಿಮಾನವೇಕೆ? ಎಂದು ದುರ್ಯೋಧನ ಆ ಕೆಲಸಕ್ಕಾಗಿ ದುಶ್ಶಾಸನನನ್ನು ಆ ಕೆಲಸಕ್ಕಾಗಿ ನೇಮಿಸಿದನು.

            (ಕೊರಳಲ್ಲಿ ಚಿನ್ನದ ಹಾರಗಳು ಹಾಗೂ ವಿವಿಧ ಪದಕಗಳು, ಕಿವಿಗಳಲ್ಲಿ ರಾಜೋಚಿತವಾದ ಆಭರಣಗಳು, ತೋಳುಗಳಲ್ಲಿ ಶೋಭಾಯಮಾನವಾದ ತೋಳಬಂದಿಗಳು, ನವರತ್ನಗಳಿಂದ ಕೂಡಿದ ವಿವಿಧ ಮಣಿಭೂಷಣಗಳು, ತಲೆಯ ಮೇಲೆ ಗಂಭೀರವಾಗಿ ಕಾಣುವ ಕಿರೀಟಗಳು ಮೊದಲಾದವುಗಳೆಲ್ಲ ಸೇವಕರೆನಿಸಿಕೊಂಡವರಿಗೆ ಶೋಭೆಯಲ್ಲ. ಮಾತ್ರವಲ್ಲ, ಅವೆಲ್ಲವೂ ನಿಮ್ಮ ನಿಮ್ಮ ಅಂಗಾಂಗಗಳಿಗೆ ಭಾರವಲ್ಲವೆ? ಎಂದು ದುರ್ಯೋಧನ ಪಾಂಡವರನ್ನು ಅವಮಾನಿಸುತ್ತಾನೆ. ಆತನ ಪ್ರಕಾರ ಪಾಂಡವರು ತನ್ನ ಅರಸುತನವನ್ನು ಪಗಡೆಯಾಟದಲ್ಲಿ ಕಳೆದುಕೊಂಡು ಈಗ ತನ್ನ ಸೇವಕರಾಗಿದ್ದಾರೆ. ಹೀಗಿರುವಾಗ ರಾಜೋಚಿತವಾದ ಉಡುಗೆ-ತೊಡುಗೆಗಳನ್ನು ಧರಿಸಿಕೊಳ್ಳುವುದು, ಮೆರೆಯುವುದು ಶೋಭೆಯಲ್ಲ. ಅದಕ್ಕಾಗಿ ಅವೆಲ್ಲವನ್ನೂ ತೆಗೆದುಹಾಕಿ, ಇಲ್ಲದಿದ್ದರೆ ತೆಗೆದುಹಾಕುವುದಕ್ಕೆ ಬೇಕಾದ ವ್ಯವಸ್ಥೆಯನ್ನೂ ಮಾಡೋಣ ಎಂದು ದುಶ್ಶಾಸನನಲ್ಲಿ ಪರೋಕ್ಷವಾಗಿಯೇ ಹೇಳುತ್ತಾನೆ. ಮಾತ್ರವಲ್ಲದೆ, ದ್ರೌಪದಿಯನ್ನೂ ಪಣಕ್ಕಿಟ್ಟು ಸೋತಿದ್ದರಿಂದ ಆಕೆ ಈಗ ತಮ್ಮ ಸೇವಕಿಯಾಗಿದ್ದಾಳೆ. ಸೇವಕಿಗೆ ಈ ರೀತಿಯ ರಾಣಿಯ ವಸ್ತ್ರಾಭರಣಗಳು, ಅವುಗಳ ಶೃಂಗಾರಗಳು ಶೋಭೆಯಲ್ಲ. ಅವುಗಳನ್ನು ತೆಗೆಯ ಹೇಳು ಎಂದು ದುರ್ಯೋಧನ ದುಶ್ಶಾಸನನಿಗೆ ಪರೋಕ್ಷವಾಗಿ ಆಜ್ಞಾಪಿಸುತ್ತಾನೆ. ದ್ರೌಪದಿಯ ಮುಂದೆ ಪಾಂಡವರನ್ನೂ ಪಾಂಡವರ ಮುಂದೆ ದ್ರೌಪದಿಯನ್ನೂ ಅವಮಾನ ಮಾಡಬೇಕೆನ್ನುವುದು ದುರ್ಯೋಧನನ ಅತಿಯಾದ ಆಸೆಯೇ ಇಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ.) 

 

ತೆಗೆದು ಬಿಸುಟರು ಹಾರ ಪದಕಾ

ದಿಗಳನಿವರೈವರು ದುಕೂಲವ

ನುಗಿದು ಹಾಯ್ಕಿದರಿದ್ದರಿವರೊಂದೊಂದು ವಸ್ತ್ರದಲಿ

ಹೊಗೆಮೊಗದ ಕಿಡಿಗಣ್ಣ ಕೆಮ್ಮೀ

ಸೆಗಳ ಗುಜುರಿನ ಜುಂಜುಕೇಶದ

ವಿಗಡನೆದ್ದನು ಬಂದು ಹಿಡಿದನು ದ್ರೌಪದಿಯ ಸೆಱಗ  ೨೨

ಪದ್ಯದ ಅನ್ವಯಕ್ರಮ:

ಐವರು ಹಾರ, ಪದಕಾದಿಗಳ ತೆಗೆದು ಬಿಸುಟರು, ದುಕೂಲವನ್ ಉಗಿದು ಹಾಯ್ಕಿದರ್, ಇವರ್ ಒಂದೊಂದು  ವಸ್ತ್ರದಲಿ ಇದ್ದರ್, ಹೊಗೆಮೊಗದ, ಕಿಡಿಗಣ್ಣ, ಕೆಮ್ಮೀಸೆಗಳ ಗುಜುರಿನ, ಜುಂಜುಕೇಶದ ವಿಗಡನ್ ಎದ್ದನು ಬಂದು ದ್ರೌಪದಿಯ ಸೆಱಗ ಹಿಡಿದನು.

ಪದ-ಅರ್ಥ:

ಹಾರ-ಚಿನ್ನದ ಸರ;  ಪದಕಾದಿ(ಪದಕ+ಆದಿ)-ಪದಕ ಮೊದಲಾದ;  ಐವರು-ಐದುಮಂದಿ(ಪಾಂಡವರು);  ದುಕೂಲವನ್-ರೇಷ್ಮೆವಸ್ತ್ರವನ್ನು; ಉಗಿದು-ತೆಗೆದು;  ಹಾಯ್ಕಿದರ್-ಧರಿಸಿದರು, ಉಟ್ಟರು;  ಹೊಗೆಮೊಗದ-ಸಿಟ್ಟಿನಿಂದ ಕಪ್ಪಾದ ಮುಖದ;  ಕಿಡಿಗಣ್ಣ-ಕಣ್ಣುಗಳಿಂದ ಕಿಡಿಗಳನ್ನು ಕಾರುತ್ತಿರುವ;  ಕೆಮ್ಮೀಸೆ-ಕೆಂಪಾದ ಮೀಸೆ;  ಗುಜುರಿನ-ಪೊದರು ಪೊದರಾಗಿರುವ;  ಜುಂಜುಕೇಶದ-ಒರಟಾದ ಕೂದಲಿನ;  ವಿಗಡನ್-ಉದ್ಧಟನಾದವನು, ದುರಹಂಕಾರಿಯಾದವನು (ದುಶ್ಶಾಸನ).  

            ದುರ್ಯೋಧನ ಮಾತುಗಳನ್ನು ಕೇಳಿದೊಡನೆಯೇ ಐದೂ ಮಂದಿ ಪಾಂಡವರು ತಾವು ತೊಟ್ಟುಕೊಂಡಿದ್ದ ಹಾರ, ಪದಕ ಮೊದಲಾದ ಆಭರಣಗಳನ್ನು ತೆಗೆದು ಎಸೆದರು. ತಾವು ಉಟ್ಟಿರುವ ರೇಷ್ಮೆ ವಸ್ತ್ರಗಳನ್ನು ತೆಗೆದುಹಾಕಿ, ಸಾಮಾನ್ಯವಾದ  ವಸ್ತ್ರಗಳನ್ನು ಉಟ್ಟುಕೊಂಡರು. ಅಷ್ಟರಲ್ಲಿ, ಸಿಟ್ಟಿನಿಂದ ಕಪ್ಪಾದ ಮುಖದ, ಕಣ್ಣುಗಳಿಂದ ಕೋಪದ ಕಿಡಿಗಳನ್ನು ಕಾರುತ್ತಿರುವ, ಪೊದರು ಪೊದರಾಗಿರುವ ಕೆಂಪಾದ ಮೀಸೆಗಳ, ಒರಟಾದ ತಲೆಗೂದಲಿನ ಉದ್ಧಟನಾದ ದುಶ್ಶಾಸನನು ಎದ್ದು ಬಂದು ದ್ರೌಪದಿಯ ಸೀರೆಯ ಸೆರಗಿಗೆ ಕೈಹಾಕಿದನು. 

            (ದುರ್ಯೋಧನ ಚುಚ್ಚುಮಾತುಗಳನ್ನು, ಅವಮಾನಕರವಾದ ನಡವಳಿಕೆಗಳನ್ನು ನೋಡಿ ಸಹಿಸಿಕೊಳ್ಳಲು ಪಾಂಡವರಿಂದ ಸಾಧ್ಯವಾಗಲಿಲ್ಲ. ಅವರೆಲ್ಲರೂ ಮರ್ಯಾದೆಯಿಂದ ತಾವು ತೊಟ್ಟುಕೊಂಡಿದ್ದ ರಾಜೋಚಿತವಾದ ಹಾರ, ಪದಕಾದಿಗಳನ್ನು, ತೋಳಬಂದಿಗಳನ್ನು, ಮಣಿಭೂಷಣಗಳನ್ನು, ರೇಷ್ಮೆವಸ್ತ್ರಗಳನ್ನು ಕೂಡಲೇ ತೆಗೆದು ಎಸೆದರು. ಸಾಮಾನ್ಯವಾದ ವಸ್ತ್ರಗಳನ್ನು ಉಟ್ಟುಕೊಂಡು ನಿರಾಭರಣರಾದರು. ಪಾಂಡವರನ್ನು ಎಷ್ಟು ಸಾಧ್ಯವೋ ಅಷ್ಟು ಅವಮಾನಿಸಲೆಂದೇ ದುರ್ಯೋಧನ ಅತ್ಯಂತ ಕೀಳಾಗಿ ನಡೆದುಕೊಂಡ. ಮಾತ್ರವಲ್ಲದೆ, ಎಷ್ಟು ಸಾಧ್ಯವೋ ಅಷ್ಟು ಹೀನವಾಗಿ ಆಡಿಕೊಂಡ. ಆದರೆ ಆತನಿಗೆ ಕೇವಲ ಪಾಂಡವರನ್ನು ಅವಮಾನಿಸುವುದೇ ಮುಖ್ಯವಾಗಿರಲಿಲ್ಲ. ಆತನ ದೃಷ್ಟಿ ಎಲ್ಲವೂ ದ್ರೌಪದಿಯ ಹಾಗೂ ಆಕೆಯನ್ನು ಎಷ್ಟು ಸಾಧ್ಯವೋ ಅಷ್ಟು ಅವಮಾನಿಸುವುದಕ್ಕೇ ಸೀಮಿತವಾಗಿತ್ತು. ದುರ್ಯೋಧನ ಮನಸ್ಸಿನ ಇಂಗಿತವನ್ನು ಅರ್ಥಮಾಡಿಕೊಂಡ ದುಶ್ಶಾಸನ ದುರ್ಯೋಧನ ಆಜ್ಞೆಗೆ ಕಾಯುವಷ್ಟು ತಾಳ್ಮೆಯವನಲ್ಲ. ಪಾಂಡವರೇನೋ ತಮ್ಮ ಆಭರಣ, ವಸ್ತ್ರಗಳನ್ನು ಸುಲಭವಾಗಿ ತೆಗೆದು ಎಸೆದರು. ಆದರ ದ್ರೌಪದಿಗೆ ಅದು ಸಾಧ್ಯವಾಗುವುದಿಲ್ಲ. ಉದ್ದೇಶಪೂರ್ವಕವಾಗಿಯೇ ದುರ್ಯೋಧನ ಈ ಕುತಂತ್ರವನ್ನು ಹೆಣೆಯುತ್ತಾನೆ. ದುಶ್ಶಾಸನನೋ ಮೊದಲೇ ಅವಿವೇಕಿ, ಅನಾಗರಿಕ. ಸಿಟ್ಟಿನಿಂದ ಕಪ್ಪಾದ ಮುಖವನ್ನು ಹೊಂದಿ, ಕಣ್ಣುಗಳಿಂದ ಕೋಪದ ಕಿಡಿಗಳನ್ನು ಕಾರುತ್ತ, ಪೊದರು ಪೊದರಾಗಿರುವ ತನ್ನ ಮೀಸೆಗಳನ್ನು ಕುಣಿಸುತ್ತ, ಒರಟಾದ ತನ್ನ ತಲೆಗೂದಲನ್ನು ಕೆದರಿಕೊಂಡು ಅತಿರೇಕದಿಂದ ತಾನು ಕುಳಿತಲ್ಲಿಂದ ಎದ್ದು ಅವಸರದಿಂದಲೇ ಬಂದು ದ್ರೌಪದಿಯ ಸೀರೆಯ ಸೆರಗಿಗೆ ಕೈಹಾಕಿದನು. ಸಂಬಂಧದಲ್ಲಿ ಅತ್ತಿಗೆಯಾಗಿದ್ದರೂ ಅತಿಕಾಮುಕನಾದ, ಅವಿವೇಕಿಯಾದ, ಉದ್ಧಟನಾದ ದುಶ್ಶಾಸನನಿಗೆ ಸಂಬಂಧದಲ್ಲಿ ಯಾವ ನೈತಿಕತೆಯೂ ಕಾಣಿಸಲಿಲ್ಲ. ಈ ಸಂದರ್ಭದಲ್ಲಿ ಆತ ದುರ್ಯೋಧನನಿಗಿಂತಲೂ ಒಂದು ಹೆಜ್ಜೆ ಮುಂದಿರುವುದು ಸ್ಪಷ್ಟವಾಗುತ್ತದೆ.)

 

ಮುಱಿದವನಿಬರ ಮೋಱೆ ಮಹಿಪನ

ಕೊರಲ ಕೊಂಕಿನಲಿದ್ದರಾ ಸೋ

ದರರು ಸಾರವನಲ್ಲಿ ಕಾಣದೆ ಭೀಷ್ಮ ಗುರು ಕೃಪರ

ತರಳೆ ನೋಡಿದಳಕಟ ಗಂಗಾ

ವರಕುಮಾರ ದ್ರೋಣ ಕೃಪರಿರ

ಸೆಱಗ ಬಿಡಿಸಿರೆ ತಂದೆಗಳೆಂದೊಱಲಿದಳು ತರಳೆ  ೨೩

ಪದ್ಯದ ಅನ್ವಯಕ್ರಮ:

ಮುಱಿದವು ಅನಿಬರ ಮೋಱೆ, ಮಹಿಪನ ಕೊರಲ ಕೊಂಕಿನಲಿ ಇದ್ದರ್ ಆ ಸೋದರರು, ಅಲ್ಲಿ ಸಾರವನ್ ಕಾಣದೆ ತರಳೆ, ಭೀಷ್ಮ ಗುರು ಕೃಪರ ನೋಡಿದಳ್ ಅಕಟ ಗಂಗಾ ಕುಮಾರ ದ್ರೋಣ ಕೃಪರಿರ ತಂದೆಗಳಿರ ಸೆಱಗ ಬಿಡಿಸಿರೆ ಎಂದು ತರಳೆ ಒಱಲಿದಳು.

ಪದ-ಅರ್ಥ:

ಮುಱಿ-ತಗ್ಗು, ಬಾಗು;  ಅನಿಬರ-ಅಷ್ಟು ಮಂದಿಯ(ಪಾಂಡವರ);  ಮೋಱೆ-ಮುಖ;  ಮಹಿಪನ-ರಾಜನ(ಧರ್ಮರಾಯನ);  ಕೊರಲಕೊಂಕು-ಮಾತಿನ ವ್ಯಂಗ್ಯೋಕ್ತಿ(ಗೂಢವಾದ ಅರ್ಥ);  ಸೋದರರು-ಪಾಂಡವರು;  ಸಾರವನ್-ಪರಿಹಾರವನ್ನು, ಶಕ್ತಿಯನ್ನು; ಗುರು-ದ್ರೋಣ;  ಕೃಪ-ರಾಜಗುರು;  ತರಳೆ-ದ್ರೌಪದಿ;  ಗಂಗಾಕುಮಾರ-ಗಂಗೆಯ ಮಗನಾದ ಭೀಷ್ಮ;  ಸೆಱಗಬಿಡಿಸಿರೆ-ಸೆರಗನ್ನು ಬಿಡಿಸಿರಿ;  ಒಱಲಿದಳು-ಬಾಯ್ಬಿಟ್ಟಳು, ಅರಚಿದಳು.

            ದುಶ್ಶಾಸನ ದ್ರೌಪದಿಯ ಸೀರೆಯ ಸೆರಗಿಗೆ ಕೈಹಾಕಿದೊಡನೆಯೇ ಪಾಂಡವರ ಮುಖಗಳು ಅವಮಾನದಿಂದ  ಬಾಗಿದವು. ಧರ್ಮರಾಯನ ಮಾತಿನ ವ್ಯಂಗ್ಯೋಕ್ತಿ(ಗೂಢವಾದ ಅರ್ಥ)ಯ ಹಿಡಿತದಲ್ಲಿದ್ದ ಭೀಮ, ಅರ್ಜುನ ಮೊದಲಾದ ಸಹೋದರರನ್ನು ಕಂಡ ದ್ರೌಪದಿಯು ಗಂಡಂದಿರು ತನ್ನನ್ನು ಈ ಅವಘಡದಿಂದ ಬಿಡಿಸುವ ಆಸೆಯನ್ನು ಬಿಟ್ಟುಬಿಟ್ಟು ಆಸ್ಥಾನದಲ್ಲಿನ ಹಿರಿಯರಾದ ಭೀಷ್ಮ, ದ್ರೋಣ, ಕೃಪಾಚಾರ್ಯರನ್ನು ದೈನ್ಯದಿಂದ ನೋಡಿ, ಅಕಟ ತಂದೆ ಸಮಾನರಾಗಿರುವ ಪಿತಾಮಹ ಭೀಷ್ಮರೆ, ಗುರುಗಳಾದ ದ್ರೋಣರೆ, ರಾಜಗುರುಗಳಾದ ಕೃಪಾಚಾರ್ಯರೆ ಈ ದುಷ್ಟನಿಂದ ನನ್ನ ಸೆರಗನ್ನು ಬಿಡಿಸಿ ಕಾಪಾಡಿರಿ ದೈನ್ಯದಿಂದ ಅಂಗಲಾಚಿದಳು, ಅರಚಿದಳು. 

            (ಧೃತರಾಷ್ಟ್ರನ ಆಸ್ಥಾನ ಸಾಮಾನ್ಯರಾದ ಸಭಾಸದರಿಂದ ಕೂಡಿದುದಲ್ಲ. ಅದು ಪಿತಾಮಹನೆನಿಸಿರುವ ಭೀಷ್ಮ, ಬಿಲ್ವಿದ್ಯಾ ಗುರುಗಳಾದ ದ್ರೋಣಾಚಾರ್ಯ, ರಾಜಗುರುಗಳಾದ ಕೃಪಾಚಾರ್ಯ ಇನ್ನೂ ಹಲವಾರು ಹಿರಿಯರಿಂದ, ಪ್ರಾಜ್ಞರಿಂದ ಕೂಡಿದುದು. ಆದರೆ, ಅದೇ ಆಸ್ಥಾನದಲ್ಲಿ ಅದೇ ರಾಜವಂಶದ ರಾಣಿಯಾದ ದ್ರೌಪದಿಗೆ ಆಗುತ್ತಿರುವ ಅವಮಾನ, ಹಿಂಸೆಗಳನ್ನು ತಡೆಯುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಇನ್ನೊಂದು ಕಡೆ, ತಮ್ಮ ಹೆಂಡತಿಯಾದ ದ್ರೌಪದಿಯ ಸೀರೆಯ ಸೆರಗಿಗೆ ಕೈಹಾಕಿರುವುದನ್ನು ನೋಡಿಯೂ ಪಾಂಡವರಿಂದ ಅದನ್ನು ತಡೆಯುವುದಕ್ಕಾಗಲೀ, ಹಾಗೆ ಅತಿಕ್ರಮಿಸಿದ ದುಶ್ಶಾಸನನನ್ನು ಯುಕ್ತವಾಗಿ ಶಿಕ್ಷಿಸುವುದಕ್ಕಾಗಲೀ ಸಾಧ್ಯವಾಗದೆ, ತಾವು ನಿಯಮಬಾಹಿರವಾಗಿ ಆಡಿದ ಪಗಡೆಯಾಟದಿಂದ ಮತ್ತು ಅದರಲ್ಲಿ ಉಂಟಾದ ಸೋಲಿನಿಂದ ಕಂಗಾಲಾಗಿ, ಅವಮಾನಿತರಾಗಿ ಏನೂ ಮಾಡಲಾಗದೆ ತಟಸ್ಥರಾಗಿದ್ದಾರೆ. ಮತ್ತೊಂದೆಡೆ, ತಾವು ಪಗಡೆಯಾಟದಲ್ಲಿ ಸೋತು ದುರ್ಯೋಧನನ ಆಳುಗಳಾಗಿರುವುದರಿಂದ ದ್ರೌಪದಿಗಾದ ಮತ್ತು ತಮಗಾಗುತ್ತಿರುವ ಅವಮಾನ, ಹಿಂಸೆಗಳಿಗೆ ಸೇಡುತೀರಿಸಿಕೊಳ್ಳುವುದಕ್ಕೂ ಸಾಧ್ಯವಾಗದೆ ತಲೆತಗ್ಗಿಸಿದ್ದಾರೆ. ತನ್ನ ಗಂಡಂದಿರ ಈ ಸ್ಥಿತಿ ತನ್ನನ್ನು ರಕ್ಷಿಸಲು ಅವರು ಸಮರ್ಥರಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಹಾಗಾಗಿ ಅನಿವಾರ್ಯವಾಗಿ ಆಕೆ ಆ ಸಭೆಯಲ್ಲಿನ ಹಿರಿಯರಾದ ಭೀಷ್ಮ, ದ್ರೋಣ, ಕೃಪಾದಿಗಳಲ್ಲಿ ತನ್ನ ರಕ್ಷಿಸಿ ಎಂದು ಮೊರೆಹೋಗುತ್ತಾಳೆ. ಅತ್ಯಂತ ಬಲಶಾಲಿಗಳಾದ ಗಂಡಂದಿರು, ಆಸ್ಥಾನದ ಹಿರಿಯರು ಮುಂದಿದ್ದರೂ ತನ್ನನ್ನು ಯಾರಿಂದಲೂ ರಕ್ಷಿಸಲು ಸಾಧ್ಯವಾಗುತ್ತಿಲ್ಲವಲ್ಲ ಎಂಬುದು ದ್ರೌಪದಿಯ ಅಸಹನೀಯವಾದ ನೋವು.)  

 

ಕ್ರೂರನೀ ದುಶ್ಶಾಸನನು ಗಾಂ

ಧಾರಿ ಬಿಡಿಸಾ ತಾಯೆ ಸೊಸೆಯ

ಲ್ಲಾರು ಹೇಳೌ ತಂಗಿಯಲ್ಲವೆ ಭಾನುಮತಿ ನಿನಗೆ

ಧೀರ ಸೈಂಧವನರಸಿ ರಾಜಕು

ಮಾರಿ ನೀನಾದಿನಿಯಲಾ ಖಳ

ರೌರವದೊಳದ್ದುವುದ ತೆಗಿಸೆಂದೊಱಲಿದಳು ತರಳೆ  ೨೪

 

ಪದ್ಯದ ಅನ್ವಯಕ್ರಮ:

ಈ ದುಶ್ಶಾಸನನ್ ಕ್ರೂರನ್,  ಗಾಂಧಾರಿ ತಾಯೆ ಸೊಸೆಯಲ್ಲಾ ಬಿಡಿಸಾ, ಆರು ಹೇಳೌ ಭಾನುಮತಿ ನಿನಗೆ ತಂಗಿಯಲ್ಲವೆ,  ರಾಜಕುಮಾರಿ ನಾದಿನಿ ಧೀರ ಸೈಂದವನ ಅರಸಿ  ನೀನು ನಾದಿನಿಯಲಾ, ಖಳ ರೌರವದೊಳ್ ಅದ್ದುವುದ ತೆಗೆಸಿ ಎಂದು ತರಳೆ ಒಱಲಿದಳು.

ಪದ-ಅರ್ಥ:

ಗಾಂಧಾರಿ-ಧೃತರಾಷ್ಟ್ರನ ರಾಣಿ, ದುರ್ಯೋಧನಾದಿಗಳ ತಾಯಿ;  ಬಿಡಿಸಾ-ಬಿಡಿಸು, ಮುಕ್ತಗೊಳಿಸು;  ಸೊಸೆಯಲ್ಲಾ-ಸೊಸೆಯಲ್ಲವೆ?;  ಹೇಳೌ-ಹೇಳು;  ಭಾನುಮತಿ-ದುರ್ಯೋಧನ ರಾಣಿ;  ಸೈಂಧವನರಸಿ-ದುಶ್ಶಲೆ (ಸಿಂಧೂ ದೇಶದ ಆಧಿಪತಿಯಾದ ಜಯದೃಥನ ಹೆಂಡತಿ);  ನಾದಿನಿ-ಗಂಡನ ತಂಗಿ(ದುಶ್ಶಲೆ ಧರ್ಮರಾಯಾದಿಗಳಿಗೂ ತಂಗಿ); ಖಳ-ದುಷ್ಟ, ನೀಚ;  ರೌರವ-ಭಯಂಕರವಾದ ನರಕ;  ಅದ್ದುವುದ-ಮುಳುಗಿಸುವುದನ್ನು; ಹಿಂಸಿಸುವುದನ್ನು;  ತೆಗಿಸು-ನಿಲ್ಲಿಸು, ತಡೆ;  ಒಱಲು-ಬಾಯ್ಬಿಡು, ಅರಚು.

            ಕ್ರೂರನಾದ ಈ ದುಶ್ಶಾಸನ ನನ್ನ ಸೆರಗನ್ನು ಹಿಡಿದು ಎಳೆಯುತ್ತಿದ್ದಾನೆ. ಈ ಸಭೆಯಲ್ಲಿ ಅವಮಾನವಾಗುತ್ತಿದೆ. ಗಾಂಧಾರಿ ತಾಯೆ, ನಾನೂ ನಿನಗೆ ಸೊಸೆಯಲ್ಲವೆ? ನಿನ್ನ ಮಗ ದುಶ್ಶಾಸನನಿಂದ ನನ್ನನ್ನು ಬಿಡಿಸು, ದುರ್ಯೋಧನನ ರಾಣಿಯಾದ ಭಾನುಮತಿಯೇ ನಾನೂ ನಿನಗೆ ಸಹೋದರಿಯಲ್ಲವೆ? ನೀನಾದರೂ ನನ್ನನ್ನು ಈ ಕ್ರೂರನಿಂದ ಬಿಡಿಸು. ನಾದಿನಿಯಾದ ಸೈಂಧವನ ಅರಸಿ  ದುಶ್ಶಲೆಯೇ ನಾನು ನಿನಗೆ ನಾದಿನಿಯಲ್ಲವೆ? ಈ ದುಷ್ಟ ದುಶ್ಶಾಸನನು ನನ್ನನ್ನು ಕ್ರೂರವಾದ ನರಕದ ಶಿಕ್ಷೆಯನ್ನು ಕೊಡುತ್ತಿರುವುದನ್ನು ನೀನಾದರೂ ತಡೆ ಎಂದು ಸಭೆಯಲ್ಲಿದ್ದ ರಾಜವಂಶದ ರಾಣಿ, ರಾಜಕುಮಾರಿಯರಲ್ಲಿ ಕಳಕಳಿಯಿಂದ ವಿನಂತಿಸಿಕೊಂಡಳು.

            (ದುಶ್ಶಾಸನ ದ್ರೌಪದಿಯ ಸೀರೆಯ ಸೆರಗಿಗೆ ಕೈಹಾಕಿದಾಗ ಆ ಸಭೆಯಲ್ಲಿ ಪಾಂಡವರು, ಕೌರವರು, ಧೃತರಾಷ್ಟ್ರಾದಿಗಳು, ಮಾತ್ರವಲ್ಲದೆ ರಾಜಮಾತೆ ಗಾಂಧಾರಿ, ಕೌರವನ ರಾಣಿಯಾದ ಭಾನುಮತಿ, ಆತನ ತಂಗಿಯಾದ ದುಶ್ಶಲೆ ಮೊದಲಾದವರು ಇದ್ದರು. ಆಸ್ಥಾನದಲ್ಲಿ ಒಬ್ಬ ಮಹಿಳೆಗೆ ಅದರಲ್ಲೂ ಇಂದ್ರಪ್ರಸ್ಥದ ರಾಣಿಯಾದ  ದ್ರೌಪದಿಗೆ ಅವಮಾನವಾಗುತ್ತಿದ್ದರೂ ಎಲ್ಲರೂ ಸುಮ್ಮನಿದ್ದಾರೆ. ಗಾಂಧಾರಿಗೆ ದ್ರೌಪದಿ ಸಂಬಂಧದಲ್ಲಿ ಸೊಸೆಯಾಗಬೇಕು. ತನ್ನ ನೇರ ಸೊಸೆಯಾದ ಭಾನುಮತಿಯ ಸ್ಥಾನಮಾನಗಳನ್ನು ಬಯಸುವ ಆಕೆ ದ್ರೌಪದಿಯ ವಿಚಾರದಲ್ಲಿ ನಿರ್ಲಿಪ್ತಳಾಗಿದ್ದಾಳೆ. ಅದರಲ್ಲೂ ದ್ರೌಪದಿಯ ಸೆರೆಗಿಗೆ ಕೈಹಾಕಿ ಅವಮಾನಿಸುತ್ತಿರುವವನು ಆಕೆಯ ಮಗನಾದ ದುಶ್ಶಾಸನ. ಈ ಅವಮಾನಕರವಾದ ಪ್ರಸಂಗವನ್ನು ತಡೆಯುವ ಅಧಿಕಾರ, ಸಾಮರ್ಥ್ಯಗಳು ಆಕೆಗಿದ್ದವು. ಆದರೆ ಆಕೆ ತಟಸ್ಥಳಾಗಿದ್ದಾಳೆ. ಇನ್ನೊಂದೆಡೆ, ದುರ್ಯೋಧನನ ರಾಣಿಯಾದ ಭಾನುಮತಿ ಅಲ್ಲಿಯೇ ಉಪಸ್ಥಿತಳಾಗಿದ್ದರೂ ತನ್ನ ಗಂಡನನ್ನಾಗಲೀ ಮೈದುನನನ್ನಾಗಲೀ ತಡೆಯುವುದಕ್ಕೆ, ಸಂಬಂಧದಲ್ಲಿ ತನಗೆ ಹಿರಿಯ ಸಹೋದರಿಯಾಗಿರುವ ದ್ರೌಪದಿಗೆ ಆಗುತ್ತಿರುವ ಅವಮಾನವನ್ನು ತಡೆಯುವುದಕ್ಕೆ ಆಕೆಯೂ ಮನಸ್ಸುಮಾಡುತ್ತಿಲ್ಲ. ಮತ್ತೊಂದೆಡೆ, ದುರ್ಯೋಧನಾದಿಗಳ ಒಬ್ಬಳೇ ತಂಗಿ ಸಿಂಧೂರಾಜ ಸೈಂಧವ(ಜಯದೃಥ)ನ ರಾಣಿಯಾದ ದುಶ್ಶಲೆಗೆ ಸಂಬಂಧದಲ್ಲಿ ದ್ರೌಪದಿ ಅತ್ತಿಗೆ(ದ್ರೌಪದಿಗೆ ದುಶ್ಶಲೆ ನಾದಿನಿ)ಯಾದರೂ ಸಭೆಯಲ್ಲಿ ಆಸೀನಳಾಗಿ ಇದೆಲ್ಲವನ್ನೂ ನೋಡುತ್ತಿದ್ದರೂ ತನ್ನ ಅಣ್ಣಂದಿರನ್ನು ತಡೆಯುವ ಮನಸ್ಸು ಮಾಡುತ್ತಿಲ್ಲ. ದುಷ್ಟನಾದ ದುಶ್ಶಾಸನ ತನ್ನನ್ನು ರೌರವನರಕದ ಹಿಂಸೆಯನ್ನು ಕೊಡುತ್ತಿರುವುದನ್ನು ನೋಡಿಯೂ ಏಕೆ ಸುಮ್ಮನಿದ್ದೀರಿ, ನೀವಾದರೂ ತಡೆಯಬಾರದೆ ಎಂದು ದ್ರೌಪದಿ ಅಂಗಲಾಚುತ್ತಾ ಅರಚುತ್ತಾಳೆ.)

 

ಪತಿಗಳೆನ್ನನು ಮಾರಿ ಧರ್ಮ

ಸ್ಥಿತಿಯ ಕೊಂಡರು ಭೀಷ್ಮ ಮೊದಲಾ

ದತಿರಥರು ಪರಹಿತವ ಬಿಸುಟಿಹರು ವ್ಯರ್ಥಭೀತಿಯಲಿ

ಸುತನ ಸಿರಿ ಕಡುಸೊಗಸಲಾ ಭೂ

ಪತಿಗೆ ಗಾಂಧಾರಿಗೆ ಅನಾಥೆಗೆ  

ಗತಿಯನು ಕಾಣೆನು ಶಿವ ಶಿವಾಯೆಂದೊಱಲಿದಳು ತರಳೆ  ೨೫

 

ಪದ್ಯದ ಅನ್ವಯಕ್ರಮ:

ಪತಿಗಳ್ ಎನ್ನನು ಮಾರಿ ಧರ್ಮಸ್ಥಿತಿಯ ಕೊಂಡರು; ಭೀಷ್ಮ ಮೊದಲಾದ ಅತಿರಥರು ವ್ಯರ್ಥಭೀತಿಯಲಿ ಪರಹಿತವ ಬಿಸುಟಿಹರ್; ಭೂಪತಿಗೆ,  ಗಾಂಧಾರಿಗೆ ಸುತನ ಸಿರಿ ಕಡು ಸೊಗಸಲಾ; ಅನಾಥೆಗೆ ಗತಿಯನು ಕಾಣೆನು ಶಿವಶಿವಾ ಎಂದು ತರಳೆ ಒಱಲಿದಳು.

ಪದ-ಅರ್ಥ:

ಪತಿಗಳ್-ಗಂಡಂದಿರು(ಪಾಂಡವರು);  ಎನ್ನನು-ನನ್ನನ್ನು; ಮಾರಿ-ದ್ಯೂತದಲ್ಲಿ ಮಾರಾಟಮಾಡಿ;  ಧರ್ಮಸ್ಥಿತಿ-ಧರ್ಮವೆಂಬ ಸ್ಥಿತಿ;  ಕೊಂಡರು-ಖರೀದಿಸಿದರು;  ಅತಿರಥರು-ಪರಾಕ್ರಮಶಾಲಿಗಳು(ಹಿಂದಿನ ಕಾಲದಲ್ಲಿ ಇದ್ದ ಸೈನ್ಯದ ಒಂದು ಪದನಾಮ) ಪರಹಿತ-ಅನ್ಯರ ಹಿತಚಿಂತನೆ;  ಬಿಸುಟಿಹರ್-ಬಿಟ್ಟುಬಿಟ್ಟಿದ್ದಾರೆ;  ವ್ಯರ್ಥಭೀತಿ-ಕಾರಣವಿಲ್ಲದ ಹೆದರಿಕೆ;  ಸುತನ ಸಿರಿ-ಮಗನ ಸಂಪತ್ತು(ದುರ್ಯೋಧನ ಸಂಪತ್ತು);  ಕಡು-ಅತಿ;  ಸೊಗಸಲಾ-ಹಿತವಲ್ಲವೆ?;  ಭೂಪತಿ-ಧೃತರಾಷ್ಟ್ರ;  ಗಾಂಧಾರಿ-ದುರ್ಯೋಧನಾದಿಗಳ ತಾಯಿ;  ಅನಾಥೆ-ನಿರ್ಗತಿಕಳು(ದ್ರೌಪದಿ);  ಗತಿ-ಉಳಿವು;  ಒಱಲು-ಅರಚು.

            ತನ್ನ ಗಂಡಂದಿರು ತನ್ನನ್ನು ದ್ಯೂತದಲ್ಲಿ ಮಾರಿ ಧರ್ಮಸ್ಥಿತಿಯನ್ನು ಕೊಂಡುಕೊಂಡರು. ಆಸ್ಥಾನದಲ್ಲಿ ಉಪಸ್ಥಿತರಿರುವ ಭೀಷ್ಮ ಮೊದಲಾದ ಪರಾಕ್ರಮಶಾಲಿಗಳು ಅನಗತ್ಯವಾದ ಹೆದರಿಕೆಯಿಂದ ಅನ್ಯರ ಬಗೆಗಿನ ಹಿತಚಿಂತನೆಯನ್ನು ಬಿಟ್ಟುಬಿಟ್ಟಿದ್ದಾರೆ. ಮಗನಾದ ದುರ್ಯೋಧನನ ಸಂಪತ್ತು ಆತನ ಹೆತ್ತವರಾದ ಧೃತರಾಷ್ಟ್ರ ಹಾಗೂ  ಗಾಂಧಾರಿಯರಿಗೆ ಹಿತವೆನಿಸುತ್ತಿದೆ. ಇವರೆಲ್ಲರ ಮಧ್ಯೆ ಅನಾಥೆಯಾಗಿರುವ ತನಗೆ ರಕ್ಷಣೆಯೇ ಸಿಗುತ್ತಿಲ್ಲ ಶಿವಶಿವಾ ಎಂದು ದ್ರೌಪದಿ ಶಿವನನ್ನು ಮೊರೆಯಿಟ್ಟಳು.

            (ಹೆಂಡತಿಯನ್ನು ಮಾನಾಪಮಾನಗಳಿಂದ ರಕ್ಷಿಸುವುದು ಗಂಡನಾದವನ ಕರ್ತವ್ಯ. ಅದರಲ್ಲೂ ದ್ರೌಪದಿಗೆ ಒಬ್ಬರಲ್ಲ, ಐದು ಮಂದಿ ಗಂಡಂದಿರು. ಅವರಾರೂ ಈಗ ದ್ರೌಪದಿಯನ್ನು ರಕ್ಷಿಸುವುದಕ್ಕೆ ಮುಂದಾಗುತ್ತಿಲ್ಲ. ಅದನ್ನು ಕಂಡು ಆಕೆ ತನ್ನ ಗಂಡಂದಿರು ತನ್ನ ಧರ್ಮಕ್ಕಾಗಿ ತನ್ನನ್ನು ಮಾರಿ ಧರ್ಮಸ್ಥಿತಿಯನ್ನು ಕೊಂಡುಕೊಂಡರು ಎಂದು ಆಕೆ ವ್ಯಂಗ್ಯವಾಡುತ್ತಾಳೆ. ಧರ್ಮಕ್ಕಾಗಿ, ಅನ್ಯಾಯದ, ಮೋಸ-ವಂಚನೆಗಳ ವಿರುದ್ಧ ಹೋರಾಡುವ ತನ್ನ ಗಂಡಂದಿರು ಇಂದು ತಮ್ಮ ಕಣ್ಣಮುಂದೆಯೇ ತಮ್ಮ ಹೆಂಡತಿಗೆ ಅವಮಾನವಾಗುತ್ತಿದ್ದರೂ, ಹಿಂಸೆಯಾಗುತ್ತಿದ್ದರೂ  ಸಂಬಂಧವೇ ಇಲ್ಲವೆಂಬಂತೆ ಸುಮ್ಮನಿದ್ದಾರೆ. ಅವರಿಗೆ ತಮ್ಮ ಧರ್ಮವೇ ಮುಖ್ಯವೆನಿಸುತ್ತಿದೆಯೇ ವಿನಾ ಹೆಂಡತಿಯ ಮಾನಾಪಮಾನಗಳಲ್ಲ. ಇನ್ನು ಧೃತರಾಷ್ಟ್ರನ ಆಸ್ಥಾನದಲ್ಲಿ ಭೀಷ್ಮ, ದ್ರೋಣ, ಕೃಪ ಮೊದಲಾದ ಹಲವು ಮಂದಿ ಮಹಾ ಪರಾಕ್ರಮಿಗಳು, ಪ್ರಾಜ್ಞರು, ಮೇಧಾವಿಗಳು, ಧರ್ಮಾಧರ್ಮಗಳನ್ನು ಬಲ್ಲವರು ಆಸೀನರಾಗಿದ್ದಾರೆ. ಆದರೆ ಅವರಾರೂ ತನಗಾಗುತ್ತಿರುವ ಅವಮಾನದ ಬಗ್ಗೆ ಚಕಾರವೆತ್ತುತ್ತಿಲ್ಲ. ಕಾರ್ಯ-ಕಾರಣವಿಲ್ಲದ ಭೀತಿಗೆ ಒಳಗಾಗಿ ತಲೆತಗ್ಗಿಸಿಕೊಂಡಿದ್ದಾರೆ. ಇನ್ನು ರಾಜನಾದ ಧೃತರಾಷ್ಟ್ರ ಹಾಗೂ ಆತನ ಪಟ್ಟದ ರಾಣಿಯಾದ ಗಾಂಧಾರಿಯೂ ಕೂಡಾ ಸೊಸೆಯಾಗಿರುವ ದ್ರೌಪದಿಗೆ ತನ್ನ ಮಕ್ಕಳಿಂದ ಆಗುತ್ತಿರುವ ಅವಮಾನಗಳು ಅರ್ಥವಾಗುತ್ತಿಲ್ಲ. ಅವರಿಬ್ಬರಿಗೂ ತಮ್ಮ ಮಕ್ಕಳ ಸಂಪತ್ತು, ರಾಜ್ಯ ವೈಭವಗಳು ಹಾಗೂ ಅವರು ರಾಜಸಭೆಯಲ್ಲಿ ನಡೆದುಕೊಳ್ಳುವ ಅನೈತಿಕವಾದ ರೀತಿನೀತಿಗಳೇ  ಮುಖ್ಯವಾಗಿ ಹಿತವೆನಿಸಿವೆ. ರಾಜಸಭೆಯಲ್ಲಿ ಮಹಿಳೆಯೊಬ್ಬಳಿಗೆ ರಕ್ಷಣೆ ಸಿಗುತ್ತಿಲ್ಲ ಎಂದಾದರೆ ತನ್ನನ್ನು ಕಾಪಾಡುವವರಾರು? ಶಿವ ಶಿವಾ ಎಂದು ದ್ರೌಪದಿ ಅನಿವಾರ್ಯವಾಗಿ ಭಗವಂತನನ್ನು ಮೊರಹೋಗುತ್ತಾಳೆ.)  

 

ಸುಲಿವರೂರೊಳಗುಟ್ಟ ಸೀರೆಯ

ನೆಲೆ ಮುರಾಂತಕ ರಕ್ಷಿಸೈ ಶಶಿ

ಕಳೆಗೆ ಸದರವೆ ರಾಹು ರಚಿಸಿದ ತುಟಿಯ ತೋಟಿಯದು

ಸೆಳೆವರಸುವನು ಖಳರು ಸೀರೆಯ

ಸೆಳೆಯಲುೞಿವೆನೆ ಕೃಷ್ಣ ಕರುಣಾ

ಜಲಧಿಯೇ ಕೈಗಾಯಬೇಕೆಂದೊಱಲಿದಳು ತರಳೆ  ೨೬

ಪದ್ಯದ ಅನ್ವಯಕ್ರಮ:

ಎಲೆ ಮುರಾಂತಕ, ಸುಲಿವರ್ ಊರೊಳಗೆ ಉಟ್ಟ ಸೀರೆಯನ್, ರಕ್ಷಿಸೈ; ಶಶಿಕಳೆಗೆ ಸದರವೆ? ರಾಹು ರಚಿಸಿದ ತುಟಿಯ ತೋಟಿಯದು, ಖಳರು ಅಸುವನು ಸೆಳೆವರ್, ಸೀರೆಯ ಸೆಳೆಯಲ್ ಉೞಿವೆನೆ ಕೃಷ್ಣ, ಕರುಣಾ ಜಲಧಿಯೇ ಕೈ ಕಾಯಬೇಕು ಎಂದು ತರಳೆ ಒಱಲಿದಳು.

ಪದ-ಅರ್ಥ:

ಸುಲಿವರ್-ಸೆಳೆಯುತ್ತಾರೆ;  ಊರೊಳಗೆ-ಸಾರ್ವಜನಿಕ ಸ್ಥಳದಲ್ಲಿ, ಆಸ್ಥಾನದಲ್ಲಿ;  ಮುರಾಂತಕ-ಕೃಷ್ಣ; ಶಶಿಕಳೆ-ಚಂದ್ರಬಿಂಬ;  ಸದರ-ತಿರಸ್ಕಾರ;  ರಾಹುರಚಿಸಿದ –ರಾಹುವಿನಿಂದ ಆವೃತ್ತವಾದ;  ತುಟಿ-ಬಾಯ್ದೆರೆ; ತೋಟಿ-ಕದನ, ಜಗಳ; ಸೆಳೆವರ್-ಈಂಟುತ್ತಾರೆ; ತೆಗೆಯುತ್ತಾರೆ;  ಖಳರು-ದುಷ್ಟರು, ನೀಚರು;  ಕರುಣಾಜಲಧಿ-ಕರುಣೆಯ ಸಾಗರ;  ಕೈಗಾಯಬೇಕು-ಕಾಪಾಡಬೇಕು, ಕೈಯನ್ನು ಹಿಡಿದು ಉದ್ಧರಿಸಬೇಕು;  ತರಳೆ-ಅನಾಥೆ(ದ್ರೌಪದಿ);  ಒಱಲಿದಳು-ಅರಚಿದಳು.

            ಎಲೆ ಮುರಾಂತಕನಾದ ಕೃಷ್ಣನೆ, ಈ ದುಷ್ಟರು ಸಾರ್ವಜನಿಕವಾಗಿ ನಾನು ಉಟ್ಟಿರುವ ಸೀರೆಯನ್ನು ಸೆಳೆದು ಅವಮಾನಿಸುತ್ತಿದ್ದಾರೆ. ನನ್ನನ್ನು ರಕ್ಷಿಸು. ಚಂದ್ರಬಿಂಬವನ್ನೇ ಅವಗಣಿಸಿ ಅದನ್ನು ಕಬಳಿಸುವ ರಾಹುವಿನಂತೆ ಈ ದುರ್ಯೋಧನಾದಿ ರಾಹುಗಳು  ಈಗ ಬಾಯ್ದೆರೆದು ತನ್ನೊಂದಿಗೆ ಕಾದಾಟಕ್ಕೆ ಇಳಿದು ಮಾನಹಾನಿಗೆ ಹಾತೊರೆಯುತ್ತಿದ್ದಾರೆ. ಈ ದುಷ್ಟರು ನನ್ನ ಪ್ರಾಣವನ್ನೇ ಸೆಳೆಯುತ್ತಿದ್ದಾರೆ. ಸೀರೆಯನ್ನು ಸೆಳೆದರೆ ಮಾನಕಳೆದುಕೊಂಡು ತಾನಿನ್ನು ಬದುಕಿ ಉಳಿಯಲು ಸಾಧ್ಯವೆ? ಕರುಣೆಯ ಸಾಗರವಾಗಿರುವ ಕೃಷ್ಣನೇ ನೀನೇ ಈಗ ನನ್ನನ್ನು ಕಾಪಾಡಬೇಕು ಎಂದು ಅನಾಥೆಯಾಗಿರುವ ದ್ರೌಪದಿ ಕೃಷ್ಣನಿಗೆ ಮೊರೆಯಿಟ್ಟಳು.

            (ರಾಜನ ಆಸ್ಥಾನದಲ್ಲಿ ಮಹಿಳೆಯೊಬ್ಬಳ ಅದರಲ್ಲೂ ಇಂದ್ರಪ್ರಸ್ಥದ ರಾಣಿಯ ಘನತೆ, ಗೌರವಗಳನ್ನಾಗಲೀ ಅಕೆಯ ಮಾನಾಪಮಾನಗಳನ್ನಾಗಲೀ ಕಾಪಾಡುವುದಕ್ಕೆ ಧೃತರಾಷ್ಟ್ರ-ಗಾಂಧಾರಿಯರಿಂದ ಸಾಧ್ಯವಾಗಲಿಲ್ಲ. ತನ್ನ ಗಂಡಂದಿರಿಂದಲೂ ಸಾಧ್ಯವಾಗಲಿಲ್ಲ. ಸ್ವತಃ ತನ್ನಿಂದಲೂ ತನ್ನನ್ನು ಕಾಪಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಕೊನೆಗೆ ಅನಿವಾರ್ಯವಾಗಿ ದ್ರೌಪದಿ ಕೃಷ್ಣನನ್ನು ಮೊರೆಹೋಗುತ್ತಾಳೆ. ಅಷ್ಟೊಂದು ಘನತೆಯುಳ್ಳ, ಲೋಕಮಾನ್ಯವಾನ ಚಂದ್ರನನ್ನೇ ರಾಹು ನುಂಗಿ ಪೀಡಿಸುತ್ತಾನೆ. ಆದರೆ ದುರ್ಯೋಧನ ಹಾಗೂ ದುಶ್ಶಾಸನರು ಆ ರಾಹುವಿಗಿಂತಲೂ ಮಿಗಿಲಾಗಿದ್ದಾರೆ. ಆಸ್ಥಾನದಲ್ಲಿಯೇ ಅತ್ಯಂತ ಹೀನಾಯವಾಗಿ, ಅನೈತಿಕವಾಗಿ ಕಾದಾಟಕ್ಕೆ, ದ್ವೇಷಸಾಧನೆಗೆ ಇಳಿದಿದ್ದಾರೆ. ತನ್ನ ಮಾನಹಾನಿಯೇ ಬಹಳ ದೊಡ್ಡ ಸಾಧನೆ ಎಂದು ತಿಳಿದಿದ್ದಾರೆ. ಸಭೆಯ ನೂರಾರು ಮಂದಿಯ ಮುಂದೆ ತನ್ನ ಸೀರೆಯನ್ನು ಸೆಳೆದರೆ ನಾನಾದರೂ ಹೇಗೆ ಬದುಕಿ ಉಳಿಯಲಿ? ಈ ದುರ್ಯೋಧನಾದಿಗಳು ನನ್ನ ಪ್ರಾಣವನ್ನೇ ತೆಗೆಯುವುದಕ್ಕೆ ಹಾತೊರೆಯುತ್ತಿರುವಾಗ ನಾನು ನನ್ನನ್ನು ಹೇಗೆ ರಕ್ಷಿಸಿಕೊಳ್ಳಲಿ? ಈಗ ತನ್ನನ್ನು ರಕ್ಷಿಸುವುದಕ್ಕೆ ಈ ಆಸ್ಥಾನದಲ್ಲಿ ಯಾರೂ ಉಳಿದಿಲ್ಲ. ಇನ್ನು ರಕ್ಷಿಸುವುದಿದ್ದರೆ ನೀನೊಬ್ಬ ಮಾತ್ರ. ಹಾಗಾಗಿ ನನ್ನನ್ನು ರಕ್ಷಿಸುವ ಹೊಣೆಗಾರಿಕೆ ನಿನ್ನದು ಎಂದು ದ್ರೌಪದಿ ಕೃಷ್ಣನನ್ನು ಮೊರೆಹೋಗುತ್ತಾಳೆ.)

 

ಕೇಳಿದನು ಮುರವೈರಿ ತನ್ನಯ

ಮೇಳದೈವರ ಸತಿಯ ಹುಯ್ಯಲ

ನಾಳಿನೊಂದಪಮಾನವಾಳ್ದಂಗೆಂಬ  ನುಡಿಯಿಂದ

ಕೋಳುವೋದುವೆ ಪಾಂಡುಪುತ್ರರ

ಬಾಳವೆಗಳಕಟಯೆನುತ ಲಕ್ಷ್ಮೀ

ಲೋಲ ಚಿಂತಿಸಿ ನುಡಿದ  ರುಕ್ಮಿಣೀದೇವಿಗೀ ಹದನ  ೨೭

ಪದ್ಯದ ಅನ್ವಯಕ್ರಮ:

ಮುರವೈರಿ ತನ್ನಯ ಮೇಳದ ಐವರ ಸತಿಯ ಹುಯ್ಯಲನ್ ಕೇಳಿದನು, ಆಳಿನ ಒಂದು ಅಪಮಾನವು ಆಳ್ದಂಗೆ ಎಂಬ ನುಡಿಯಿಂದ, ಪಾಂಡುಪುತ್ರರ ಬಾಳುವೆಗಳ್ ಕೋಳು ಹೋದುವೆ? ಅಕಟ ಎನುತ ಲಕ್ಷ್ಮೀಲೋಲ ಚಿಂತಿಸಿ ರುಕ್ಮಿಣೀದೇವಿಗೆ ಈ ಹದನ ನುಡಿದನು.

ಪದ-ಅರ್ಥ:

ಮುರವೈರಿ-ಕೃಷ್ಣ;  ತನ್ನಯ ಮೇಳದ-ತನ್ನ ಒಡನಾಡಿಗಳ;  ಸತಿಯ-ಹೆಂಡತಿಯ(ದ್ರೌಪದಿಯ);  ಹುಯ್ಯಲನ್-ಆರ್ತನಾದವನ್ನು;  ಆಳಿನ-ಸೇವಕನ, ಸ್ನೇಹಿತನ;  ಆಳ್ದಂಗೆ-ಅರಸನಿಗೆ;  ಕೋಳು ಹೋದುವೆ-ನಾಶವಾಯಿತೆ?;  ಚಿಂತಿಸಿ-ಆಲೋಚಿಸಿ;  ರುಕ್ಮಿಣೀದೇವಿ-ಕೃಷ್ಣನ ಹೆಂಡತಿ;  ಹದನ-ರೀತಿಯನ್ನು.

            ದುರ್ಯೋಧನನ ಆಸ್ಥಾನದಲ್ಲಿನ ದ್ರೌಪದಿಯ ಮೊರೆ ತನ್ನ ಹೆಂಡತಿಯರೊಂದಿಗೆ ಸಲ್ಲಾಪದಲ್ಲಿರುವ  ಕೃಷ್ಣನವರೆಗೆ ತಲುಪಿತು. ಕೃಷ್ಣನು ತನ್ನ ಒಡನಾಡಿಗಳಾದ ಪಾಂಡವರ ರಾಣಿ ದ್ರೌಪದಿಯ ಆರ್ತನಾದವನ್ನು ಕೇಳಿದನು. ’ಆಳಿಗಾದ ಅವಮಾನ ಅದು ರಾಜನಿಗೂ ಅನ್ವಯವಾಗುತ್ತದೆ’ ಎಂಬ ಮಾತನ್ನು ಗಮನದಲ್ಲಿಟ್ಟುಕೊಂಡು ಕೃಷ್ಣನು ಪಾಂಡವರ ಬದುಕು ನಾಶವಾಯಿತೆ? ಅಕಟ ಎಂದುಕೊಂಡು ಕೃಷ್ಣ ಒಂದು ಕ್ಷಣ ಮನಸ್ಸಿನಲ್ಲಿಯೇ ಚಿಂತಿಸಿ, ತನ್ನ ರಾಣಿಯಾದ ರುಕ್ಮಿಣೀದೇವಿಗೆ ಈ ಪ್ರಸಂಗವನ್ನು ವಿವರಿಸಿದನು.

            (ದುರ್ಯೋಧನನ ಆಸ್ಥಾನದಲ್ಲಿ ತನಗಾದ ಅವಮಾನವನ್ನು ಹೇಳಿಕೊಂಡು ದ್ರೌಪದಿ ಕೃಷ್ಣನಿಗೆ ಮೊರೆಯಿಟ್ಟಾಗ ಅದು ಕೃಷ್ಣನಿಗೆ ತಲುಪಿತು. ’ಒಬ್ಬ ಆಳಿಗೆ ಮಾಡಿದ ಅಪಮಾನದ ಪಾಪದ ಒಂದು ಭಾಗ ರಾಜನಿಗೂ ಸಲ್ಲುತ್ತದೆ’ ಎಂಬ ಲೋಕೋಕ್ತಿಯನ್ನು ಅವಧಾರಿಸಿದ ಕೃಷ್ಣ ದ್ರೌಪದಿಗಾಗುತ್ತಿರುವ ಅಪಮಾನದ ಪಾಪದ ಒಂದು ಭಾಗ ತನಗೂ ಸಲ್ಲುತ್ತದೆ ಎಂದು ಅರ್ಥೈಸಿಕೊಂಡನು. ದುರ್ಯೋಧನನಾಗಲೀ ಧೃತರಾಷ್ಟ್ರನಾಗಲೀ ದ್ರೌಪದಿಗೆ ಮಾಡುತ್ತಿರುವ ಅಪಮಾನದ ಒಂದು ಭಾಗ ಅವರಿಬ್ಬರಿಗೂ ಸಲ್ಲುತ್ತದೆ ಎಂಬ ಸತ್ಯವನ್ನು ಅವರಿಬ್ಬರೂ ಮರೆತ್ತಿದ್ದಾರೆ. ಪಾಂಡವರಿಂದ ತಮ್ಮ ಹೆಂಡತಿಗಾಗುತ್ತಿರುವ ಅಪಮಾನವನ್ನು ತಡೆಯಲು, ದುರ್ಯೋಧನಾದಿಗಳ ದೌರ್ಜನ್ಯವನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಅವರು ಎಲ್ಲವನ್ನೂ ಕಳೆದುಕೊಂಡು ನಿಸ್ತೇಜರಾಗಿದ್ದಾರೆ. ಅವರ ಬದುಕು ನಾಶವಾಯಿತಲ್ಲ! ಎಂದು ಕೃಷ್ಣನು ಚಿಂತಿಸಿದನು. ಈಗ ತಾನೇನಾದರೂ ದ್ರೌಪದಿಯ ಮೊರೆಗೆ ಸ್ಪಂದಿಸದಿದ್ದರೆ ಆಕೆ ಉಳಿಯುವುದಿಲ್ಲ, ನೂರಾರು ಮಂದಿಯ ಮುಂದೆ ಆಕೆ ಉಟ್ಟಿರುವ ಸೀರೆಯನ್ನು ಸೆಳೆದರೆ ಆಕೆ ಅಪಮಾನವನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಏನಾದರೂ ಮಾಡಿ ಆಕೆಯ ಮಾನವನ್ನು, ಆಕೆಯ ಘನತೆಯನ್ನು, ಗೌರವವನ್ನು ಕಾಪಾಡಬೇಕು ಎಂದುಕೊಂಡು ಕೃಷ್ಣನು ಒಂದು ಕ್ಷಣ ಆಲೋಚಿಸಿ, ಈ ಘಟನೆಯ ವಾಸ್ತವಾಂಶಗಳನ್ನು ತನ್ನ ರಾಣಿಯಾದ ರುಕ್ಮಿಣೀದೇವಿಗೆ ವಿವರಿಸಿದನು.)

 

ಕ್ರೂರದುರ್ಯೋಧನನು ದ್ರುಪದ ಕು

ಮಾರಿ ಪಾಂಚಾಲಿಯನು ಸಭೆಯೊಳು

ಸೀರೆಯನು ಸುಲಿಯಲ್ಕೆ ಕಾಯೈ ಕೃಷ್ಣಯೆಂದೆನುತ

ನಾರಿಯೊಱಲುತಿಹಳಾಕೆಯುಟ್ಟಿಹ

ಸೀರೆ ಸೆಳೆಯಲು ಬೞಿಕಲಕ್ಷಯ

ಸೀರೆಯಾಗಲಿಯೆಂದ ಗದುಗಿನ ವೀರನಾರಯಣ  ೨೮

ಪದ್ಯದ ಅನ್ವಯಕ್ರಮ:

ಕ್ರೂರ ದುಯೋಧನನು ದ್ರುಪದ ಕುಮಾರಿ ಪಾಂಚಾಲಿಯನು ಸಭೆಯೊಳು ಸೀರೆಯನು ಸುಲಿಯಲ್ಕೆ ಕೃಷ್ಣ ಕಾಯೈ ಎಂದೆನುತ ನಾರಿಯು ಒಱಲುತಿರಲು ಆಕೆ ಉಟ್ಟಿಹ ಸೀರೆ ಸೆಳೆಯಲು ಬಳಿಕ ಅಕ್ಷಯವಾಗಲಿ ಎಂದ ಗದುಗಿನ ವೀರ ನಾರಾಯಣ.

ಪದ-ಅರ್ಥ:

ದ್ರೌಪದ ಕುಮಾರಿ-ದ್ರುಪದನ ಮಗಳು(ದ್ರೌಪದಿ);  ಪಾಂಚಾಲಿ-ದ್ರೌಪದಿ(ಪಾಂಚಾಲದೇಶದ ರಾಜಕುಮಾರಿ);  ಸುಲಿಯಲ್ಕೆ-ಸೆಳೆಸಲು;  ಕಾಯೈ-ಕಾಪಾಡು;  ನಾರಿ-ದ್ರೌಪದಿ;  ಒಱಲು-ಬೊಬ್ಬಿಡು;  ಅಕ್ಷಯ-ಕ್ಷಯವಿಲ್ಲದ, ನಾಶವಿಲ್ಲದ.

            ಕ್ರೂರನಾದ ದುರ್ಯೋಧನನು ತನ್ನ ಆಸ್ಥಾನ ಸಭೆಯಲ್ಲಿ ದ್ರೌಪದರಾಜನ ಮಗಳಾದ ದ್ರೌಪದಿಯ ಸೀರೆಯನ್ನು ಸೆಳೆಸಲು ಪ್ರಾರಂಭಿಸಿದಾಗ, ಆಕೆ ನನ್ನನ್ನು ಕಾಪಾಡು ಕೃಷ್ಣ ಎಂದು ಒಂದೇ ಸಮನೆ ಬೊಬ್ಬಿಟ್ಟಾಗ ಅದನ್ನು ಕೇಳಿದ ಕೃಷ್ಣನು ದ್ರೌಪದಿ ಉಟ್ಟಿರುವ ಸೀರೆ ಸೆಳೆಯುತ್ತಿದ್ದಂತೆಯೆ  ಅಕ್ಷಯವಾಗಲಿ ಎಂದು ಹರಸಿದನು.

            (ದುರ್ಯೋಧನ ಹಾಗೂ ಅವನ ತಮ್ಮನಾದ ದುಶ್ಶಾಸನರಿಬ್ಬರೂ ಕ್ರೂರಿಗಳೂ ಅನಾಗರಿಕರೂ ಆಗಿದ್ದಾರೆ. ಭರತಖಂಡದ ಯಾವ ರಾಜನ ಆಸ್ಥಾನದಲ್ಲಿಯೂ ಯಾವ ಮಹಿಳೆ ತಪ್ಪನ್ನು ಎಸಗಿದರೂ ಸೀರೆ ಸೆಳೆಯುವಂತಹ ಅನಾಗರಿಕವಾದ ಶಿಕ್ಷೆಯನ್ನು ಯಾರೂ ಕೊಟ್ಟಿಲ್ಲ. ಅಲ್ಲದೆ, ಸಾರ್ವತ್ರಿಕವಾಗಿ ಒಬ್ಬ ಮಹಿಳೆಯನ್ನು  ಈ ರೀತಿಯಲ್ಲಿ ಅನಾಗರಿಕವಾಗಿ ನಡೆಸಿಕೊಂಡಿಲ್ಲ. ಆದರೆ, ದುರ್ಯೋಧನಾದಿಗಳು ದ್ರೌಪದಿಯನ್ನು ನಡೆಸಿಕೊಂಡರು. ಅವಳು ಒಂದೆಡೆ ಇಂದ್ರಪ್ರಸ್ಥದ ರಾಣಿ, ಇನ್ನೊಂದೆಡೆ ದುರ್ಯೋಧನಾದಿಗಳ ಅತ್ತಿಗೆ. ವಾಂಶಿಕ ಸಂಬಂಧಗಳ ಅರ್ಥವೇ ತಿಳಿಯದ, ಮಹಿಳೆಯೊಬ್ಬಳಿಗೆ ಗೌರವವನ್ನು ಕೊಡಲು ಅರಿಯದ ಅನಾಗರಿಕರು. ಪಾಂಡವರು ತಮ್ಮೆಲ್ಲ ಸೊತ್ತುಗಳನ್ನು ಪಗಡೆಯಾಟದಲ್ಲಿ ಕಳೆದುಕೊಂಡು ಅತಂತ್ರರಾಗಿದ್ದಾರೆ. ದುರ್ಯೋಧನನ ಆಳಾಗಿದ್ದಾರೆ. ಅವರೂ ತಮ್ಮ ಹೆಂಡತಿಯನ್ನು ರಕ್ಷಿಸುವ ಸ್ಥಿತಿಯಲ್ಲಿಲ್ಲ. ಆಸ್ಥಾನದ ಉಳಿದ ಇತರ ಪರಾಕ್ರಮಶಾಲಿಗಳೂ ದುರ್ಯೋಧನನಿಗೆ ಹೆದರಿ ತಲೆತಗ್ಗಿಸಿದ್ದಾರೆ. ಇವೆಲ್ಲವನ್ನೂ ಕಂಡುಕೊಂಡ ಕೃಷ್ಣ ತನ್ನ ತಂಗಿಯಾದ ದ್ರೌಪದಿಯ ಮಾನ ಕಾಪಾಡುವುದಕ್ಕೆ ಮುಂದಾಗುತ್ತಾನೆ. ಅವನು ತಾನಿರುವಲ್ಲಿಂದಲೇ ದುರ್ಯೋಧನಾದಿ ಖಳರು ಸೀರೆಯನ್ನು ಸೆಳೆಯುತ್ತಿದ್ದಂತೆಯೇ ಆಕೆ ಉಟ್ಟಿರುವ ಸೀರೆ ಅಕ್ಷಯವಾಗುತ್ತಲೆ ಹೋಗಲಿ ಎಂದು ಅಭಯವನ್ನು ನೀಡಿ ಆಕೆಯನ್ನು ರಕ್ಷಿಸುತ್ತಾನೆ.)  

 

ಉಗಿದು ಹಾಯ್ಕುವ ಖಳನ ನಿಡಿದೋ

ಳುಗಳು ಬೞಲಿದುವಳ್ಳೆ ಹೊಯ್ದವು

ಡಗೆಯ ಡಾವರವಾಯ್ತು ಬಹಳ ಸ್ವೇದಜಲ ಜಡಿಯೆ

ತೆಗೆದು ನಿಂದನು ಸೀರೆಯೊಟ್ಟಲು

ಗಗನವನು ಗಾಹಿಸಿತು ಗರುವೆಯ

ಬಗೆಗೆ ಬೇಸಱವಿಲ್ಲ ಬೆಱಗಾದುದು ಮಹಾಸ್ಥಾನ  ೨೯

ಪದ್ಯದ ಅನ್ವಯಕ್ರಮ:

ಉಗಿದು ಹಾಯ್ಕುವ ಖಳನ ನಿಡಿದೋಳುಗಳು ಬೞಲಿದುವು, ಅಳ್ಳೆ ಹೊಯ್ದವು, ಢಗೆಯ ಡಾವರವಾಯ್ತು, ಬಹಳ ಸ್ವೇದಜಲ ಜಡಿಯೆ, ತೆಗೆದು ನಿಂದನು, ನೀರೆಯ ಒಟ್ಟಲು ಗಗನವನು ಹಾಹಿಸಿತು, ಗರುವೆಯ ಬಗೆಗೆ ಬೇಸಱವಿಲ್ಲ, ಮಹಾಸ್ಥಾನ ಬೆಱಗಾದುದು.

ಪದ-ಅರ್ಥ:

ಉಗಿದು-ಸೆಳೆದು;  ಹಾಯ್ಕುವ-ಹಾಕುವ;  ಖಳ-ದುಷ್ಟ(ದುಶ್ಶಾಸನ); ನಿಡಿದೋಳು-ದೀರ್ಘವಾದ ತೋಳು; ಬೞಲು-ದಣಿ; ಅಳ್ಳೆಗಳು-ಪಕ್ಕೆಗಳು;  ಹೊಯ್ದವು-ಹೊಡೆದುಕೊಂಡವು; ಢಗೆಯ ಡಾವರ-ಆಯಾಸದ ಕೋಟಲೆ;  ಸ್ವೇದಜಲ-ಬವರು;  ಜಡಿ-ಸುರಿ, ಚಿಮ್ಮು;  ಒಟ್ಟಲು-ರಾಶಿಹಾಕಲು;  ಗಾಹಿಸಿತು-ವ್ಯಾಪಿಸಿತು;  ಗರುವೆ-ಚೆಲುವೆ, ಮರ್ಯಾದಸ್ಥೆ (ದ್ರೌಪದಿ). 

            ದ್ರೌಪದಿಯ ಸೀರೆಯನ್ನು ಅತ್ಯಂತ ಭರದಿಂದ ಸೆಳೆದು ಹಾಕುತ್ತಿರುವಂತೆಯೇ ದುಷ್ಟ ದುಶ್ಶಾಸನನ ದೀರ್ಘವಾದ ತೋಳುಗಳು ದಣಿಯುತ್ತ ಹೋದವು. ಆತನ ಪಕ್ಕೆಗಳು ಹೊಡೆದುಕೊಳ್ಳತೊಡಗಿದವು. ಆಯಾಸದ ಕೋಟಲೆಗೆ ಒಳಗಾದನು. ಮೈಯಿಂದ ಬೆವರು ಒಂದೇ ಸಮನೆ ಚಿಮ್ಮತೊಡಗಿತು.  ದುಶ್ಶಾಸನನು ಸೆಳೆದ ದ್ರೌಪದಿಯ ಸೀರೆಯ ರಾಶಿ ಆಕಾಶದ ಎತ್ತರಕ್ಕೆ ವ್ಯಾಪಿಸಿತು.  ಇದೆಲ್ಲವನ್ನೂ ನೋಡಿ ಆಘಾತಕ್ಕೆ ಒಳಗಾಯಿತು. ದುಷ್ಟನಿಂದ ತನ್ನ ಸೀರೆಯನ್ನು ಸೆಳೆದು ಆವಮಾನಿಸಲು ಸಾಧ್ಯವಾಗಲಿಲ್ಲವಲ್ಲ ಎಂದು ದ್ರೌಪದಿಗೂ ನೆಮ್ಮದಿಯುಂಟಾಯಿತು.  ಸಮಸ್ಥ ಆಸ್ಥಾನವೇ ಬೆರಗಾಯಿತು.

            (ಅತ್ಯುತ್ಸಾಹದಿಂದ ರಾಜಸಭೆಯಲ್ಲಿ ದ್ರೌಪದಿಯ ಸೀರೆಯ ಸೆರಗನ್ನು ಹಿಡಿದೆಳೆದು ಆಕೆಯನ್ನು ವಿವಸ್ತ್ರಗೊಳಿಸಬೇಕೆಂದು ಸೀರೆ ಸೆಳೆಯತೊಡಗಿದ ದುಶ್ಶಾಸನನಿಗೆ ಕ್ಷಣಕ್ಷಣಕ್ಕೂ ಆಘಾತವಾಗತೊಡಗಿತು. ಸೀರೆಯನ್ನು ಎಳೆಯುತ್ತಿದ್ದಂತೆಯೇ ದುಶ್ಶಾಸನನ ನಿಡಿದಾದ ತೋಳುಗಳು ಬಳಲತೊಡಗಿದವು. ಏದುಸಿರು ಪ್ರಾರಂಭವಾಯಿತು. ಆತನ ಪಕ್ಕೆಗಳು ಒಂದೇ ಸಮನೆ ಹೊಡೆಯತೊಡಗಿದವು. ಇದುವರೆಗೂ ಕಾಣದ ಆಯಾಸದ ಕೋಟಲೆ ಮೈಯನ್ನೆಲ್ಲ ವ್ಯಾಪಿಸತೊಡಗಿತು. ಮೈಯಿಂದ ಧಾರಾಕಾರವಾಗಿ ಬೆವರು ಹರಿಯತೊಡಗಿತು. ಇನ್ನೂ ಸೆಳೆಯುವುದಕ್ಕೆ ಸಾಧ್ಯವಾಗದೆ ಸೋತು ಒಂದು ಕ್ಷಣ ಸಾವರಿಸಿಕೊಳ್ಳಲು ಹಾಗೆಯೇ ನಿಂತುಕೊಂಡನು. ನೋಡುತ್ತಿದ್ದಂತೆಯೇ ಆತ ಅದುವರೆಗೂ ಸೆಳೆದ ದ್ರೌಪದಿಯ ಸೀರೆ ಬಹುದೊಡ್ಡ ರಾಶಿಯಾಗಿ ಆಕಾಶವನ್ನೇ ವ್ಯಾಪಿಸಿದಂತೆ ಕಾಣಿಸಿತು. ಏನೋ ಸಾಧಿಸುತ್ತೇನೆ ಎಂದು ಹೊರಟ ದುರ್ಯೋಧನ, ಮಹತ್ಕಾರ್ಯವನ್ನು ಸಾಧಿಸುತ್ತೇನೆ ಎಂದು ಹೊರಟ ದುಶ್ಶಾಸನರು ಗಾಬರಿಯಿಂದ ಕಂಗಾಲಾದರು. ತಮ್ಮ ದುಷ್ಕೃತ್ಯ ಈಡೇರಲಿಲ್ಲವಲ್ಲ ಎಂಬ ಬೇಸರವೂ ಆಯಿತು. ರಾಜಸಭೆಯಲ್ಲಿ ತನ್ನ ಮಾನ ಹರಾಜಾಗುತ್ತಿದೆಯಲ್ಲ! ತನ್ನನ್ನು ರಕ್ಷಿಸುವವರು ಯಾರೂ ಇಲ್ಲವಲ್ಲ!  ಎಂದು ನೊಂದು  ಕೊನೆಯಲ್ಲಿ ಕೃಷ್ಣನಿಗೆ ಶರಣಾಗಿದ್ದ ದ್ರೌಪದಿಗೆ ಕೃಷ್ಣನ ಈ ಅಗೋಚರವಾದ ಅಭಯದಿಂದ ಮನಸ್ಸಿಗೆ ಸಮಾಧಾನವಾಯಿತು. ಮಾತ್ರವಲ್ಲದೆ, ಸಭಾಸದರೂ ಈ ಘಟನೆಯನ್ನು ನೋಡುತ್ತಿದ್ದಂತೆಯೇ ಬೆರಗಾದರು.)

***

Leave a Reply

Your email address will not be published. Required fields are marked *