ಸಾಹಿತ್ಯಾನುಸಂಧಾನ

heading1

ವಚನಗಳು- ಅಕ್ಕಮಹಾದೇವಿ-ಭಾಗ – ೧

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ,  ಭಾಗ-೧)

ನೆಲದ ಮರೆಯ ನಿಧಾನದಂತೆ

ಫಲದ ಮರೆಯ ರುಚಿಯಂತೆ

ಶಿಲೆಯ ಮರೆಯ ಹೇಮದಂತೆ

ತಿಲದ ಮರೆಯ ತೈಲದಂತೆ

ಮರದ ಮರೆಯ ತೇಜದಂತೆ

ಭಾವದ ಮರೆಯ ಬ್ರಹ್ಮವಾಗಿಪ್ಪ

ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯಬಾರದು.   ೧

            ಅಕ್ಕಮಹಾದೇವಿ ಇಲ್ಲಿ ಮನುಷ್ಯನ ಅರಿವಿಗೆ ನಿಲುಕದ ಸರ್ವಾಂತರ್ಯಾಮಿಯಾಗಿರುವ ಚೆನ್ನಮಲ್ಲಿಕಾರ್ಜುನನ ಅಸ್ತಿತ್ವವನ್ನು ನೋಡಲಾರದ್ದನ್ನು ನೋಡುವ, ಅರಿಯಲಾರದ್ದನ್ನು ಅರಿಯುವ ಹಾಗೂ ನಿಗೂಢತೆಯಲ್ಲಿನ ಗೂಢತೆಯನ್ನು ಕಂಡುಕೊಳ್ಳುವ ಐದು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸಿದ್ದಾಳೆ.

            ಮೊದಲನೆಯದಾಗಿ, ಭಗವಂತ ನೆಲದ ಮರೆಯಲ್ಲಿ ಅಡಗಿಕೊಂಡಿರುವ ನಿಧಾನ(ನಿಧಿ)ದಂತಿರುವುದು. ವಿಶಾಲವಾಗಿರುವ ಈ ಭೂಮಿಯಲ್ಲಿ ನಿಧಿ ಎಲ್ಲೆಲ್ಲಿ ಅಡಗಿಕೊಂಡಿದೆ? ಅಥವಾ ಎಲ್ಲೆಲ್ಲಿ ಅಡಗಿಸಿಟ್ಟುಕೊಳ್ಳಲಾಗಿದೆ? ಎಂಬುದು ಯಾರಿಗೂ ತಿಳಿದಿಲ್ಲ. ಚೆನ್ನಮಲ್ಲಿಕಾರ್ಜುನನೂ ಹೀಗೆಯೇ ಎಲ್ಲಿ, ಯಾವ ರೂಪದಲ್ಲಿದ್ದಾನೆ? ಎಂಬುದು ಯಾರಿಗೂ ತಿಳಿಯಲಾರದು. ಎರಡನೆಯದಾಗಿ, ಭಗವಂತ ಫಲಗಳೊಳಗೆ ಅಡಗಿಕೊಂಡ ರುಚಿಯಂತಿರುವುದು. ಭೂಮಿಯ ಮೇಲೆ ಅಸಂಖ್ಯ ಫಲವೈವಿಧ್ಯಗಳಿದ್ದು ಅವು ಬಣ್ಣ, ಆಕಾರ, ರುಚಿಗಳಲ್ಲೂ ವೈವಿಧ್ಯವನ್ನು ಹೊಂದಿವೆ. ಚೆನ್ನಮಲ್ಲಿಕಾರ್ಜುನ ವಿಶ್ವದಲ್ಲಿನ ಅಸಂಖ್ಯ ಫಲಗಳಲ್ಲಿ ಯಾವ  ಯಾವ ಬಗೆಯ ರುಚಿಯಲ್ಲಿ ಅಡಗಿಕೊಂಡಿದ್ದಾನೆ ಎಂಬುದು ಯಾರಿಗೂ ತಿಳಿಯದು. ಮೂರನೆಯದಾಗಿ, ಭಗವಂತ ಶಿಲೆಯ ಮರೆಯಲ್ಲಿ ಅಡಗಿಕೊಂಡ ಚಿನ್ನದಂತಿರುವುದು. ಭೂಗರ್ಭದೊಳಗೆ ಅಲ್ಲಲ್ಲಿ ಚಿನ್ನದ ನಿಕ್ಷೇಪಗಳು ಹುದುಗಿಕೊಂಡಿವೆ. ಚೆನ್ನಮಲ್ಲಿಕಾರ್ಜುನನೂ ನೆಲದ ಮರೆಯಲ್ಲಿ ಹುದುಗಿರುವ ಚಿನ್ನದ ನಿಕ್ಷೇಪದಂತೆ. ಎಲ್ಲೆಲ್ಲಿ ಅಡಗಿಕೊಂಡಿದ್ದಾನೆ ಎಂಬುದನ್ನು ಅರಿಯುವುದು ಸುಲಭಸಾಧ್ಯವಲ್ಲ. ನಾಲ್ಕನೆಯದಾಗಿ, ಭಗವಂತ ಎಳ್ಳಿನಲ್ಲಿ ಹುದುಗಿರುವ ಎಣ್ಣೆಯಂತಿರುವುದು. ಎಳ್ಳನ್ನು ನೋಡಿದಾಗ ಅಥವಾ ಸ್ಪರ್ಶಿಸಿದಾಗ ಎಲ್ಲಿಯೂ ಎಣ್ಣೆಯ ಅಸ್ತಿತ್ವ ತಿಳಿಯುವುದೇ ಇಲ್ಲ. ಚೆನ್ನಮಲ್ಲಿಕಾರ್ಜುನನೂ ಎಳ್ಳಿನಲ್ಲಿರುವ ಎಣ್ಣೆಯಂತೆ. ವಿವಿಧ ಧಾನ್ಯಗಳಲ್ಲಿ ಎಷ್ಟು ವೈವಿಧ್ಯರೂಪಗಳಲ್ಲಿ ಅಡಗಿಕೊಂಡಿದ್ದಾನೆ ಎಂಬುದನ್ನು ಅರಿತುಕೊಳ್ಳುವುದು ಸುಲಭಕಾರ್ಯವಲ್ಲ. ಐದನೆಯದಾಗಿ, ಭಗವಂತ ಮರದೊಳಗೆ ತೇಜ(ಅಗ್ನಿ)ದಂತೆ ಅಡಗಿಕೊಂಡಿರುವುದು. ಮರವನ್ನು ನೋಡಿದೊಡನೆ ಅಥವಾ ಅದನ್ನು ಮುಟ್ಟಿದೊಡನೆ ಅದರೊಳಗಿನ ಬೆಂಕಿ ಅನುಭವಕ್ಕೆ ಬರುವುದೇ ಇಲ್ಲ. ಇದೇ ರೀತಿ ಚೆನ್ನಮಲ್ಲಿಕಾರ್ಜುನನೂ ಮರದ ಮರೆಯಲ್ಲಿ ಬೆಂಕಿಯಂತೆ ಅಡಗಿಕೊಂಡಿರುವುದನ್ನು ಅರಿತುಕೊಳ್ಳುವುದು ಸುಲಭಸಾಧ್ಯವಲ್ಲ.

            ಅಕ್ಕ ನಿರೂಪಿಸಿರುವ ಮೇಲಿನ ಐದು ದೃಷ್ಟಾಂತಗಳನ್ನು ಪರಿಭಾವಿಸಿದರೆ ಚೆನ್ನಮಲ್ಲಿಕಾರ್ಜುನ ಸರ್ವಾಂತರ್ಯಾಮಿಯಾಗಿರುವುದು ಸ್ಪಷ್ಟವಾಗುತ್ತದೆ. ಆತ ಎಲ್ಲೆಲ್ಲೂ ಇದ್ದಾನೆ ಎಂಬ ಸುಳಿವು ಸಿಕ್ಕರೂ ಆತ ಅಷ್ಟು ಸುಲಭವಾಗಿ ಕಣ್ಣಿಗೆ ಕಾಣಲಾರ, ಮನಸ್ಸಿಗೂ ಗೋಚರಿಸಲಾರ. ಮನಸ್ಸು ಮನುಷ್ಯನ ಭಾವನೆಗಳ ಆಗರ. ಇಲ್ಲಿ ಉದ್ಭವಿಸುವ ಸಕಲಭಾವಗಳಿಗೂ ಚೆನ್ನಮಲ್ಲಿಕಾರ್ಜುನನೇ ಪ್ರೇರಕಶಕ್ತಿ. ಇಲ್ಲಿ ಉದ್ಭವಿಸುವ ಭಾವಗಳು ನೆಲ, ಫಲ, ಶಿಲೆ, ತಿಲ ಹಾಗೂ ಮರಗಳಿಗೆ ಸಮಾನ. ನೆಲದ ಮರೆಯ ನಿಧಾನವನ್ನು, ಫಲದ ಮರೆಯ ರುಚಿಯನ್ನು, ಶಿಲೆಯ ಮರೆಯ ಹೇಮವನ್ನು, ತಿಲದ ಮರೆಯ ತೈಲವನ್ನು ಹಾಗೂ ಮರದ ಮರೆಯ ತೇಜವನ್ನು ವಿವಿಧ ಪ್ರಕ್ರಿಯೆಗಳ ಸ್ತರಗಳಲ್ಲಿ ಕಂಡುಕೊಳ್ಳುವುದಕ್ಕೆ ಸಾಧ್ಯ. ಅವೆಲ್ಲವುಗಳ ಆಳದಲ್ಲಿ ಅಥವಾ ಮರೆಯಲ್ಲಿ ಚೆನ್ನಮಲ್ಲಿಕಾರ್ಜುನ ಅಡಗಿರುವಂತೆಯೇ ಮನುಷ್ಯನ ಭಾವದ ಮರೆಯಲ್ಲಿಯೂ ಆತನೇ ಅಡಗಿಕೊಂಡಿದ್ದಾನೆ. ಆದರೆ ಅದನ್ನು ಕಂಡುಕೊಳ್ಳುವಲ್ಲಿ ಮನುಷ್ಯ ಸೋಲುತ್ತಿದ್ದಾನೆ. ಇದನ್ನೇ ಪರಿಭಾವಿಸಿ ಅಕ್ಕ ಚೆನ್ನಮಲ್ಲಿಕಾರ್ಜುನನ ನಿಲ(ಅಸ್ತಿತ್ವ)ವನ್ನು ಯಾರೂ ಅರಿಯಬಾರದು(ಅರಿಯಲಾಗದು) ಎನ್ನುತ್ತಾಳೆ.

            ಲೋಕದ ಪ್ರತಿಯೊಂದು ಸ್ಥಿರ-ಚರ ವಸ್ತುಗಳ ಹಿಂದೆ ಫಲ-ಪುಷ್ಪಗಳ ಹಿಂದೆ ಶಕ್ತಿಯೊಂದು ಅಡಗಿರುವುದನ್ನು, ಆ ಮೂಲಕ ಈ ಲೋಕ ಸುಂದರವಾಗಿ ರೂಪುಗೊಂಡಿರುವುದನ್ನು, ಮನುಷ್ಯಾದಿ ಜೀವಜಂತುಗಳ ವಾಸಕ್ಕೆ ಯೋಗ್ಯವೆನಿಸಿರುವುದನ್ನು ಅಕ್ಕ ಈ ವಚನದಲ್ಲಿ ಉಲ್ಲೇಖಿಸುವುದರ ಜೊತೆಗೆ ಆ ರಹಸ್ಯವನ್ನು, ಅದರ ಮೂಲವನ್ನು ಕಂಡುಕೊಳ್ಳುವುದಕ್ಕೆ ಪ್ರಯತ್ನಿಸಿದರೆ ಚೆನ್ನಮಲ್ಲಿಕಾರ್ಜುನನನ್ನು ಕಂಡುಕೊಳ್ಳಲು ಪ್ರಯತ್ನಿಸಿದಂತೆ ಎನ್ನುತ್ತಾಳೆ.

 

ಅನ್ನವ ನೀಡುವವರಿಂಗೆ ಧಾನ್ಯವೇ ಶಿವಲೋಕ

ಅರ್ಥವ ಕೊಡುವವರಿಂಗೆ ಪಾಷಾಣವೇ ಶಿವಲೋಕ

ಹೆಣ್ಣು-ಹೊನ್ನು-ಮಣ್ಣು ಮೂರನೂ

ಕಣ್ಣಿನಲಿ ನೋಡಿ, ಕಿವಿಯಲಿ ಕೇಳಿ,

ಕೈಯಲಿ ಮುಟ್ಟಿ ಮಾಡುವ ಭಕ್ತಿ

ಸಣ್ಣವರ ಸಮಾರಾಧನೆಯಾಯಿತ್ತು!

ತನ್ನನಿತ್ತು ತುಷ್ಟಿವಡೆವರನೆನಗೆ ತೋರಾ

ಶ್ರೀಗಿರಿ ಚೆನ್ನಮಲ್ಲಿಕಾರ್ಜುನ!   ೨

            ಇದು ಡಾಂಭಿಕಭಕ್ತಿಯನ್ನು ಕುರಿತ ಅಕ್ಕಮಹಾದೇವಿಯ ವಿಡಂಬನಾತ್ಮಕ ವಚನ. ಭಕ್ತನೊಬ್ಬನ ಭಕ್ತಿಯ ಹಿಂದೆ ಇರುವ ಸ್ವಾರ್ಥತೆ, ಲೋಲುಪತೆ, ವಂಚನೆಗಳನ್ನು ಅಕ್ಕಮಹಾದೇವಿ ಈ ವಚನದಲ್ಲಿ ಕೆಲವು  ದೃಷ್ಟಾಂತಗಳ  ಮೂಲಕ  ವಿಡಂಬಿಸಿರುವುದು  ಕಂಡುಬರುತ್ತದೆ. ಸ್ವಾರ್ಥ ಮನೋಭಾವದಿಂದ ಮಾಡುವ ದಾನಪ್ರವೃತ್ತಿಯನ್ನು ಅಕ್ಕಮಹಾದೇವಿ ಈ ವಚನದಲ್ಲಿ ಖಂಡಿಸಿದ್ದಾಳೆ.

            ಅನ್ನವನ್ನು ದಾನಮಾಡುವುದಕ್ಕೆ ಧಾನ್ಯವೇ ಮೂಲದ್ರವ್ಯ. ಅದಿಲ್ಲದಿದ್ದರೆ ಅನ್ನದಾನಕ್ಕೆ ಅರ್ಥವಿಲ್ಲ. ಹಾಗಾಗಿ ಕೆಲವು ಅನ್ನದಾಸೋಹಿಗಳು ಧಾನ್ಯವನ್ನೆ ‘ಶಿವಲೋಕ’ ಅಥವಾ ಅದಕ್ಕೆ ಸಮಾನ ಎಂದು ಭಾವಿಸುತ್ತಾರೆ. ಹಾಗೆಯೇ ಅರ್ಥ(ಹಣ)ವನ್ನು ದಾನಮಾಡುವವರು ಪಾಷಾಣ(ಹರಳು)ವನ್ನೇ ‘ಶಿವಲೋಕ’ ಅಥವಾ ಅದಕ್ಕೆ ಸಮಾನವೆಂದು ಭಾವಿಸುತ್ತಾರೆ. ಅನ್ನದಾನ ಅಥವಾ ಅರ್ಥದಾನಗಳ ಸಂದರ್ಭಗಳಲ್ಲಿ ಆಯಾ ದಾನಗಳ ಹಿಂದೆ ನಿಸ್ವಾರ್ಥ ಮನೋಭಾವವೇ ಬಹಳ ಮುಖ್ಯವೆಂಬುದು ಎಷ್ಟೋ ಮಂದಿಗೆ ತಿಳಿದಿಲ್ಲ. ತಿಳಿಯುವ ಪ್ರಯತ್ನವನ್ನೇ ಮಾಡಿದಂತಿಲ್ಲ.

            ಮನುಷ್ಯನ ಸ್ವಾರ್ಥಸಾಧನೆ ಹಾಗೂ ಆ ಮೂಲಕ ಉಂಟಾಗುವ ಅವನತಿಗೆ ಹೆಣ್ಣು, ಹೊನ್ನು, ಮಣ್ಣು ಇವು ಮುಖ್ಯವಾದ ಕಾರಣಗಳು. ಈ ಮೂರನ್ನು ಕಣ್ತುಂಬ ನೋಡಿ, ಕಿವಿತುಂಬ ಕೇಳಿ, ಕೈಯಲ್ಲಿ ಮುಟ್ಟುತ್ತ ಆನಂದಿಸುತ್ತ ಮಾಡುವ ಭಕ್ತಿ ಸಣ್ಣವರ(ಹೀನಮನಸ್ಥಿತಿಯವರ) ಸಮಾರಾಧನೆ ಎಂಬುದು ಅಕ್ಕನ ನಿಲುವು. ಇಲ್ಲೆಲ್ಲ ನೋಡುವಿಕೆಯಿಂದ, ಕೇಳುವಿಕೆಯಿಂದ ಹಾಗೂ ಮುಟ್ಟುವಿಕೆಯಿಂದ ಸಿಗುವ ದರ್ಶನಸುಖ, ಶ್ರಾವ್ಯಸುಖ, ಹಾಗೂ ಸ್ಪರ್ಶಸುಖಗಳು ಮುಖ್ಯವೇ ವಿನಾ ಅವುಗಳ ಬಗೆಗಿನ ವಿರಕ್ತಭಾವವಲ್ಲ. ಇಲ್ಲಿ ಭಾವ ಹಾಗೂ ಸಂಬಂಧಿತಕ್ರಿಯೆಗಳೊಳಗೆ ಯಾವುದೇ ಅವಿನಾಭಾವ ಸಂಬಂಧವಿಲ್ಲ. ಅಗ್ಗದ ಪ್ರಸಿದ್ಧಿ,  ಕಾರ್ಯ-ಕಾರಣ ಸಂಬಂಧವಿಲ್ಲದ ಈ ಭಕ್ತಿ ಅತ್ಯಂತ ‘ಕ್ಷುಲ್ಲಕಭಕ್ತಿ’ ಅಥವಾ ‘ಡಾಂಭಿಕಭಕ್ತಿ’ ಎನಿಸಿಕೊಳ್ಳುವುದರಿಂದ  ಅಕ್ಕ ಅದನ್ನು ವಿರೋಧಿಸುತ್ತಾಳೆ.

            ಆಕೆಯ ಆಲೋಚನಾಕ್ರಮವೇ ಬೇರೆ. ’ ಸ್ವಾರ್ಥಸಾಧನೆಯ ಭಕ್ತಿಯನ್ನು ಮೀರಿ ತಮ್ಮನ್ನೇ ಸಮರ್ಪಣಭಾವದಿಂದ ಶಿವನಿಗೆ ಅರ್ಪಿಸಿ ತೃಪ್ತಿಯನ್ನು ಹೊಂದಿದ ಅಥವಾ ಶಿವಾನುಗ್ರಹಕ್ಕೆ ಪಾತ್ರರಾದ ಭಕ್ತರನ್ನು ತನಗೆ ತೋರಿಸು’  ಎಂದು ಅಕ್ಕ ಚೆನ್ನಮಲ್ಲಿಕಾರ್ಜುನನಲ್ಲಿ ಮೊರೆಯಿಡುತ್ತಾಳೆ. ಅಂತಹವರಿಂದ ದಾನವನ್ನು ಸ್ವೀಕರಿಸಿ  ಅಥವಾ  ಅಂತಹವರ ಸಂಸರ್ಗದಲ್ಲಿದ್ದುಕೊಂಡು ತನ್ನ ನ್ಯೂನತೆಗಳನ್ನು ಕಳೆದುಕೊಂಡು ಪರಿಪೂರ್ಣಳಾಗಿ, ಆ ಮೂಲಕ ಶಿವಾನುಗ್ರಹಕ್ಕೆ ಪಾತ್ರಳಾಗುತ್ತೇನೆ ಎಂಬುದು ಆಕೆಯ ನಿಲುವು.

            ಅಕ್ಕನ ಈ ನಿಲುವನ್ನು ಪರಿಭಾವಿಸಿದರೆ ಆ ಕಾಲದಲ್ಲಿ ಡಾಂಭಿಕಭಕ್ತರ ದೊಡ್ಡಗಡಣವೇ ಇತ್ತೆಂದು ತೋರುತ್ತದೆ. ಶಿವಶರಣರ ಎಲ್ಲಾ ವಚನಗಳೂ ಒಂದಲ್ಲ ಒಂದು ಸಂದರ್ಭದಲ್ಲಿ ಹುಟ್ಟಿಕೊಂಡ ಆತ್ಮವಿಮರ್ಶೆಯ, ಸಮಾಜವಿಮರ್ಶೆಯ ಫಲಶ್ರುತಿ ಎಂಬುದು ಅತ್ಯಂತ ಸ್ಪಷ್ಟ. ಶರಣರು ತಮ್ಮಲ್ಲಿದ್ದ ಕ್ಷುಲ್ಲಕತನವನ್ನು, ಡಾಂಭಿಕತೆಯನ್ನು, ನ್ಯೂನತೆಗಳನ್ನು ಆತ್ಮವಿಮರ್ಶೆಯ ಮೂಲಕ ಕಳೆದುಕೊಳ್ಳುತ್ತ ಪರಿಪೂರ್ಣತೆಯತ್ತ ಸಾಗುತ್ತ ಇತರರನ್ನು ದಾರಿನಡೆಸಲು ಪ್ರಯತ್ನಿಸಿದರು. ಆದರೆ ಈ ರೀತಿಯ ಸಾಗುವಿಕೆಯಲ್ಲಿ ಡಾಂಭಿಕರು ಶರಣವಾಹಿನಿಯೊಳಗೆ ಸೇರಿಕೊಂಡು ಶರಣರ ಉದ್ದೇಶವನ್ನು ಕೆಡಿಸಲು ತೊಡಗಿದಂತೆ, ಶರಣರ ಭಕ್ತಿಸಾಧನೆಯ ಪರೋಕ್ಷ ಲಾಭಗಳಿಸಲು ಹವಣಿಸಿದಂತೆ ಕಂಡುಬರುತ್ತದೆ. ಅದನ್ನೇ ಅಕ್ಕಮಹಾದೇವಿ ಈ ವಚನದಲ್ಲಿ ಖಂಡಿಸಿದ್ದಾಳೆ.

 

ಅಱಿಯದವರೊಡನೆ ಸಂಗವ ಮಾಡಿದರೆ

ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ!

ಬಲ್ಲವರೊಗಡನೆ ಸಂಗವ ಮಾಡಿದರೆ

ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ!

ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗ

ಕರ್ಪುರಗಿರಿಯ ಉರಿಯು ಕೊಂಬಂತೆ!   ೩

            ಅಕ್ಕಮಹಾದೇವಿ ಈ ವಚನದಲ್ಲಿ ಅರಿಯದವರ ಹಾಗೂ ಬಲ್ಲವರೊಡನೆ ಮಾಡುವ ಸಂಗ ಹಾಗೂ ಅದರ ಪರಿಣಾಮಗಳನ್ನು ಒಂದೊಂದು ಉದಾಹರಣೆಯ ಮೂಲಕ ಸ್ಪಷ್ಟಪಡಿಸಿದ್ದಾಳೆ. ಸಂಗ, ಒಡನಾಟ ಅಥವಾ ಸ್ನೇಹ ಎಂಬುದು ಮನುಷ್ಯನ ಒಂದು ಸಹಜವಾದ ಪ್ರವೃತ್ತಿ. ಸಂಗಕ್ಕಿಂತ ಮೊದಲು ಅದರ ಪರಿಣಾಮದ ಕುರಿತು ಅರಿತುಕೊಳ್ಳಬೇಕೆಂಬುದು ಅಕ್ಕನ ನಿಲುವು.

            ಅರಿಯದವರೊಡನೆ ಮಾಡುವ ಸಂಗವು ಕಲ್ಲನ್ನು ಹೊಡೆದು ಬೆಂಕಿಕಿಡಿಯನ್ನು ಪಡೆದಂತೆ. ಈ ಪ್ರಕ್ರಿಯೆಯಲ್ಲಿ ಹುಟ್ಟಿಕೊಂಡ ಬೆಂಕಿಕಿಡಿಯು ಎಲ್ಲವನ್ನೂ ಸುಟ್ಟುಬಿಡಬಹುದು, ಅಥವಾ ನಾಶಕ್ಕೆ ಕಾರಣವಾಗಬಹುದು. ಆದರೆ, ಬಲ್ಲವರೊಡನೆ ಮಾಡುವ ಸಂಗವು  ಮೊಸರನ್ನು ಕಡೆದು ಬೆಣ್ಣೆಯನ್ನು ತೆಗೆದುಕೊಂಡಂತೆ. ಈ ಪ್ರಕ್ರಿಯೆಯಲ್ಲಿ ಹುಟ್ಟಿಕೊಂಡ ಬೆಣ್ಣೆಯಾಗಲೀ ಮಜ್ಜಿಗೆಯಾಗಲೀ ದೇಹದ ಆರೋಗ್ಯಕ್ಕೆ ಕೆಡುಕಾಗದೆ ಪೂರಕವಾಗುತ್ತದೆ. ಅವು ಮನುಷ್ಯನ ಆರೋಗ್ಯವನ್ನು ವೃದ್ಧಿಸುವಂತಹವು. ಹಾಗಾಗಿ ಅರಿಯದವರ ಸಂಗಕ್ಕಿಂತ ಬಲ್ಲವರ ಸಂಗವೇ ಹೆಚ್ಚು ಶ್ರೇಯಸ್ಕರ. ಅಕ್ಕಮಹಾದೇವಿ ಈ ಎರಡು ದೃಷ್ಟಾಂತಗಳನ್ನು ಆಧಾರವಾಗಿಟ್ಟುಕೊಂಡು ಚೆನ್ನಮಲ್ಲಿಕಾರ್ಜುನನೊಂದಿಗೆ ಮಾಡುವ ಸಂಗವು ಕರ್ಪುರಗಿರಿಗೆ ಬೆಂಕಿ ಹತ್ತಿಕೊಂಡಂತೆ ಎಂದು ಪ್ರತಿಪಾದಿಸುತ್ತಾಳೆ. ಕರ್ಪುರಗಿರಿಗೆ ಬೆಂಕಿ ಹತ್ತಿಕೊಂಡರೆ ಅಲ್ಲಿ ಯಾವ ಶೇಷವೂ ಉಳಿಯುವುದಿಲ್ಲ. ಎಲ್ಲವೂ ಬೆಂಕಿಯಲ್ಲಿ ಲೀನವಾಗುತ್ತದೆ. ಹಾಗಾಗಿ ಶರಣರು ಚೆನ್ನಮಲ್ಲಿಕಾರ್ಜುನನ ಸಂಗವನ್ನು ಮಾಡಿದರೆ ಅಂತಹವರು ಚೆನ್ನಮಲ್ಲಿಕಾರ್ಜುನನಲ್ಲಿ ಲೀನವಾಗುತ್ತಾರೆ. ಅವರಿಗೆ ಮೋಕ್ಷದೊರೆಯುತ್ತದೆಯೇ ವಿನಾ ಮತ್ತೆ ಮತ್ತೆ ಮನುಷ್ಯಜನ್ಮದಲ್ಲಿ ಹುಟ್ಟಿಬರುವ ಜಂಜಾಟವಿರುವುದಿಲ್ಲ ಎಂದು ಸ್ಪಷ್ಟಪಡಿಸುತ್ತಾಳೆ.

            ಮನುಷ್ಯ ತನ್ನ ಬದುಕಿನ ಅವಧಿಯಲ್ಲಿ ಒಡನಾಟಕ್ಕ ಹಾತೊರೆಯುವುದು ಒಂದು ಸಹಜವಾದ ಪ್ರವೃತ್ತಿಯಾಗದರೂ ಅಂತಹ ಒಡನಾಟಕ್ಕಿಂತ ಮೊದಲು ಒಡನಾಟಕ್ಕೆ ಯೋಗ್ಯರು ಹಾಗೂ ಅಯೋಗ್ಯರು ಯಾರೆಂಬುದನ್ನೂ ಅದರ ಒಳಿತು ಕೆಡುಕುಗಳನ್ನೂ ಅರಿತುಕೊಂಡಿರಬೇಕಾಗುತ್ತದೆ. ಆದರೆ ಮನುಷ್ಯ ಅದನ್ನು ಪರಿಭಾವಿಸದೆ ಒಳಿತಿಗಿಂತ ಹೆಚ್ಚಾಗಿ ಕೆಡುಕಿನ ಒಡನಾಟಕ್ಕೆ ಮಾರುಹೋಗಿ,  ಅನಂತರ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಹಾಗಾಗಿ ಒಡನಾಟಕ್ಕಿಂತ ಮೊದಲೇ ಒಳಿತು, ಕೆಡುಕುಗಳ ಬಗೆಗೆ ಅರಿತುಕೊಳ್ಳಬೇಕೆಂಬುದು ಅಕ್ಕನ ನಿಲುವು. ಅಲ್ಲದೆ, ಜನ್ಮ ಸಾರ್ಥಕವಾಗಬೇಕಾದರೆ ಬಲ್ಲವರ(ಶರಣರ) ಸಂಗದ ಒಡನಾಟವನ್ನು ಬೆಳೆಸಿಕೊಂಡರೆ ಮನುಷ್ಯ ತನ್ನ ಮೋಕ್ಷಕ್ಕೆ ಸುಲಭವಾಗಿ ದಾರಿಯನ್ನು ಕಂಡುಕೊಳ್ಳಬಲ್ಲ ಎಂಬುದು ಅಕ್ಕಮಹಾದೇವಿಯ ಅಭಿಪ್ರಾಯ.  

 

ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ!

ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ!

ಮನಕ್ಕೆ  ನೆನಹಾಗಿ ಕಾಡಿತ್ತು ಮಾಯೆ!

ನೆನಹಿಂಗೆ ಅಱಿವಾಗಿ ಕಾಡಿತ್ತು ಮಾಯೆ!

ಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ!

ಚೆನ್ನಮಲ್ಲಿಕಾರ್ಜುನ, ನೀನೊಡ್ಡಿದ ಮಾಯೆಯನಾರೂ ಗೆಲಬಾರದು!  ೪

                 ಅಕ್ಕ ಈ ವಚನದಲ್ಲಿ ಚೆನ್ನಮಲ್ಲಿಕಾರ್ಜುನ ಒಡ್ಡಿರುವ ಮಾಯೆಯನ್ನು ಮತ್ತು ಅದು ಹೊಂದಿರುವ ವಿರಾಟ್ ಸ್ವರೂಪವನ್ನು ಹಾಗೂ ಅದನ್ನು ಗೆಲ್ಲುವುದು ಅಸಾಧ್ಯವೆಂಬುದನ್ನೂ ವರ್ಣಿಸಿದ್ದಾಳೆ.  ’ಮಾಯೆ’ ಎಂದರೆ ಸೆಳೆತ, ವ್ಯಾಮೋಹ ಎಂದರ್ಥ.  ಅದನ್ನು ವಿವರಿಸುವುದಕ್ಕೆ ಆಕೆ ಅದರ ವಿರಾಟ್ ಸ್ವರೂಪವನ್ನು ಮನುಷ್ಯದೇಹದ ಉದಾಹರಣೆಯೊಂದಿಗೆ ಪ್ರಸ್ತುತಪಡಿಸಿದ್ದಾಳೆ.

                  ದೇಹ’ ಹೋದಲ್ಲೆಲ್ಲ ಅದರ ‘ನೆರಳು’ ಹಿಂಬಾಲಿಸಿಕೊಂಡು ಬರುತ್ತದೆ. ಬೆಳಕಿದ್ದಾಗ ಸ್ಪಷ್ಟವಾಗಿ ಕಾಣಿಸಿಕೊಳ್ಳುವ ನೆರಳು ಬೆಳಕಿಲ್ಲದಿದ್ದಾಗ ಕಣ್ಣಿಗೆ ಕಾಣಿಸದಿದ್ದರೂ ಹಿಂಬಾಲಿಸಿಕೊಂಡೇ ಇರುತ್ತದೆ,  ಇದ್ದೂ ಇಲ್ಲದಂತೆ. ಗಮನಕ್ಕೆ ಬಾರದಂತೆ. ಅದು ಕಾಯಕ್ಕೆ ಅಂಟಿಕೊಂಡು ಮಾಯೆಯಾಗಿ ಕಾಡುತ್ತದೆ. ಕಾಯದೊಳಗೆ  ‘ಪ್ರಾಣ’ ಹೇಗಿದೆಯೋ ಹಾಗೆಯೇ ಅದರೊಳಗೆ  ‘ಮನಸ್ಸು’ ತುಂಬಿಕೊಂಡೇ ಇರುತ್ತದೆ. ಮನಸ್ಸನ್ನು ಪ್ರಾಣದಿಂದ ಪ್ರತ್ಯೇಕಿಸಲಾಗದ್ದು, ಹಿಡಿದಿಡಲಾಗದ್ದು, ಸ್ಥಿರಗೊಳಿಸಲಾಗದ್ದು. ಮರವನ್ನೇರಿದ ಮರ್ಕಟನ ಹಾಗೆ. ಎಲ್ಲೆಲ್ಲೋ ಆಡುತ್ತಿರುತ್ತದೆ. ಏನೆಲ್ಲವನ್ನು ಬಯಸುತ್ತದೆ, ಈಡೇರಿಸಿಕೊಳ್ಳುವುದಕ್ಕೆ ಹಾತೊರೆಯುತ್ತ ಪ್ರಾಣಕ್ಕೆ ಮಾಯೆಯಾಗಿ ಕಾಡುತ್ತದೆ.

                ‘ಮನಸ್ಸು’ ಎಲ್ಲಿದೆಯೋ ಅಲ್ಲಿ ‘ನೆನಪು’ ಇದ್ದೇ ಇರುತ್ತದೆ. ಅದು ನೆರಳಿನಂತೆ ಮನಸ್ಸನ್ನು ಹಿಂಬಾಲಿಸುತ್ತದೆ. ಜೀವಮಾನ ಪರ್ಯಂತ ಉಂಟಾದ ಅನುಭವ ನೆನಪಿನ ರೂಪದಲ್ಲಿ ಮನಸ್ಸಿನೊಳಗೆ ಸ್ಥಿರವಾಗುತ್ತದೆ. ‘ಮನಸ್ಸು’ ಇರಲಿ, ‘ನೆನಪು’ ಬೇಡವೆನ್ನಲಾಗದು. ನೆನಪಿಲ್ಲದಿದ್ದರೆ ಮನುಷ್ಯ ಹೆಣಕ್ಕೆ ಸಮಾನ. ಹಾಗಾಗಿ ಮನಸ್ಸಿಗೂ ನೆನಪಿಗೂ ಅವಿನಾಭಾವ ಸಂಬಂಧ. ಈ ನೆನಪು ಮಾಯೆಯ ರೂಪದಲ್ಲಿ ಸದಾ ಮನಸ್ಸನ್ನು ಕಾಡುತ್ತಿರುತ್ತದೆ. ಎಲ್ಲಿ ‘ನೆನಪು’ ಇದೆಯೋ ಅದರೊಳಗೆ ‘ಅರಿವು’ ಸೇರಿಕೊಂಡೇ ಇರುತ್ತದೆ. ಮನುಷ್ಯನ ಬೌದ್ಧಿಕ ಬೆಳವಣಿಗೆಗೆ ಅರಿವು ಬಹಳ ಮುಖ್ಯ. ಆದರೆ ಮನುಷ್ಯನಿಗೆ ಬುದ್ಧಿ ತಿಳಿದಂದಿನಿಂದಲೂ ಉಂಟಾದ ಅರಿವು ಅದು ಒಳಿತಿರಲಿ, ಕೆಡುಕಿರಲಿ, ಹಿತವಿರಲಿ, ಅಹಿತವಿರಲಿ ಮತ್ತೆ ಮತ್ತೆ ಮರುಕೊಳಿಸಿ ಭಗವಂತನ ಸಾಕ್ಷಾತ್ಕಾರದ ಹಾದಿಯಲ್ಲಿ ಮತ್ತೆ ಮತ್ತೆ ಕಾಡಿ ತಡೆಯೊಡ್ಡುತ್ತಿರುತ್ತದೆ. ಹಾಗಾಗಿ ಅರಿವು ಮಾಯೆಯ ರೂಪದಲ್ಲಿ ನಿರಂತರ ಕಾಡುತ್ತಿರುತ್ತದೆ. 

                ಹೀಗೆ ಕಾಯಕ್ಕೆ ನೆರಳಾಗಿ, ಪ್ರಾಣಕ್ಕೆ ಮನವಾಗಿ, ಮನಕ್ಕೆ ನೆನಪಾಗಿ, ನೆನಪಿಗೆ ಅರಿವಾಗಿ ಕಾಡುವ ಮಾಯೆ ಜನಸಮೂಹಕ್ಕೆ ಬೆಂಗೋಲಿನಂತೆ ಕಾಡುತ್ತಿರುತ್ತದೆ. ಜಗತ್ತಿನ ಯಾರೊಬ್ಬರೂ ಇದರಿಂದ ಮುಕ್ತವಾಗುವಂತಿಲ್ಲ. ಮನುಷ್ಯರು ಒಡ್ಡಿದ ಮಾಯೆಯನ್ನು ಅಥವಾ ಲೌಕಿಕಬದುಕಿನಲ್ಲಿ ಎದುರಾಗುವ ಮಾಯೆ(ಹೆಣ್ಣು, ಹೊನ್ನು, ಮಣ್ಣು)ಗಳನ್ನು ಪ್ರಯತ್ನಪಟ್ಟು ಗೆಲ್ಲಬಹುದಾದರೂ ಭಗವಂತ ಒಡ್ಡಿದ ಅಲೌಕಿಕಮಾಯೆಯನ್ನು ಗೆಲ್ಲಲಾಗದು ಎಂಬುದು ಅಕ್ಕನ ಅನುಭವ ಮಾತು. ಅದೊಂದು ಸೀಮಿತ ಸ್ವರೂಪ ಹಾಗೂ ವ್ಯಾಪ್ತಿಯನ್ನು ಹೊಂದದೆ ವಿರಾಟ್ ಸ್ವರೂಪ ಹಾಗೂ ವ್ಯಾಪ್ತಿಯನ್ನು ಹೊಂದಿದೆ ಎಂಬುದು ಅಕ್ಕನ ನಿಲುವು.

                ಮೇಲುನೋಟಕ್ಕೆ ಈ ವಚನದಲ್ಲಿ ಅಕ್ಕ ಮಾಯೆಯ ವಿರಾಟ್ ಸ್ವರೂಪವನ್ನು ವಿವರಿಸಿದರೂ ಇದು ಆಕೆಯ ಆತ್ಮವಿಮರ್ಶೆ. ಬುದ್ಧಿತಿಳಿದಂದಿನಿಂದ ಚೆನ್ನಮಲ್ಲಿಕಾರ್ಜುನನ ಭಕ್ತೆಯಾಗಿ, ತನ್ನನ್ನು ಆತನ ಪತ್ನಿಯಾಗಿ ಪರಿಭಾವಿಸಿ, ಆತನಿಗಾಗಿ ಹಂಬಲಿಸಿದ ಅಕ್ಕ ತನ್ನ ಹೆತ್ತವರ ಹಾಗೂ ಊರ ರಾಜ ಕೌಶಿಕನ ಒತ್ತಾಸೆಗೆ ಮಣಿದು ಆತನನ್ನು ಮದುವೆಯಾಗಬೇಕಾಯಿತು. ಅಲ್ಲಿ ಅರಮನೆಯಲ್ಲಿ ಒಂದೆಡೆ ಹೆಣ್ಣಿನ ಮಾಯೆಗೆ ಒಳಗಾಗಿ  ಕೌಶಿಕನೊಡ್ಡುವ ಲೌಕಿಕ ಮಾಯೆ, ಇನ್ನೊಂದೆಡೆ ಚೆನ್ನಮಲ್ಲಿಕಾರ್ಜುನನು ಒಡ್ಡುವ ಅಲೌಕಿಕಮಾಯೆಗಳ ಮಧ್ಯೆ ಆಕೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಾಳೆ. ಕೌಶಿಕನನ್ನು ಬಿಟ್ಟುಹೊರಟ ಅಕ್ಕ ಕಲ್ಯಾಣದವರೆಗೂ ಹಲವು ತೊಂದರೆಗಳನ್ನು ಎದುರಿಸುತ್ತಾಳೆ, ನೋವನ್ನು ಅನುಭವಿಸುತ್ತಾಳೆ. ಅರಮನೆಯಲ್ಲಿನ ಆಕೆಯ ನೆನಪುಗಳು ಆಕೆಗೆ ಅರಿವಿನ ರೂಪದಲ್ಲಿ ಮತ್ತೆಮತ್ತೆ ಕಾಡುತ್ತವೆ. ಒಂದೆಡೆ ನೆರಳಿನಂತೆ ಕಾಡುವ ಲೋಕದ ಕಾಮುಕಪುರುಷರು, ಇನ್ನೊಂದೆಡೆ ತನ್ನ ಮನಸ್ಸನ್ನು ಕಾಡುವ ಅಲೌಕಿಕಪುರುಷ ಚೆನ್ನಮಲ್ಲಿಕಾರ್ಜುನ.  ತನ್ನ ಕಾಯಕ್ಕೆ ನೆರಳಾಗಿ, ಪ್ರಾಣಕ್ಕೆ ಮನವಾಗಿ, ಮನಕ್ಕೆ ನೆನಪಾಗಿ, ನೆನಪಿಗೆ ಅರಿವಾಗಿ ಚೆನ್ನಮಲ್ಲಿಕಾರ್ಜುನನು ಒಡ್ಡಿದ ಮಾಯೆಯಲ್ಲಿ ಸಿಲುಕಿಕೊಂಡು ಒಡ್ಡಾಡುತ್ತಾಳೆ. ಈ ಸಂದರ್ಭದಲ್ಲಿ’ ಮಾಯೆ’  ಎಂಬುದು ಆಕೆಗೆ ಸಾರ್ವತ್ರಿಕವಾಗಿ, ಸರ್ವಾಂತರ್ಯಾಮಿಯಾಗಿ ಕಂಡಿರಬೇಕೆನಿಸುತ್ತದೆ. ಇದು ಅನ್ಯರು ಕಾಣದ, ಆಕೆ ಮಾತ್ರ ಕಂಡ ಅನುಭಾವ.

               

ಹಿಂದಣ ಹಳ್ಳ, ಮುಂದಣ ತೊಱೆ,

ಸಲ್ಲುವ ಪರಿಯೆಂತು ಹೇಳಾ!

ಹಿಂದಣ ಕೆಱೆ, ಮುಂದಣ ಬಲೆ

ಹದುಳವಿನ್ನೆಲ್ಲಿಯದು ಹೇಳಾ!

ನೀನಿಕ್ಕಿದ ಮಾಯೆ ಕೊಲುತಿಪ್ಪುದು

ಕಾಯಯ್ಯಾ ಕಾಯಯ್ಯಾ

ಚೆನ್ನಮಲ್ಲಿಕಾರ್ಜುನ    ೫

                ಅಕ್ಕ ಈ ವಚನದಲ್ಲಿ ಚೆನ್ನಮಲ್ಲಿಕಾರ್ಜುನನು ಇಕ್ಕಿದ ಮಾಯೆಯ ತೀವ್ರತೆಯನ್ನು ಎದುರಿಸಲಾರದೆ ಆತನಿಗೆ ಮೊರೆಯಿಟ್ಟಿದ್ದಾಳೆ. ಈ ವಚನ  ಅಕ್ಕನ ಬದುಕಿನ ವಿಮರ್ಶೆಯಾಗಿದ್ದು, ಆಕೆಯ ಬದುಕಿನ ಘಟನೆಯನ್ನು ಪರೋಕ್ಷವಾಗಿ ದಾಖಲಿಸುತ್ತದೆ.

                ಮನುಷ್ಯ ತೊಂದರೆಗಳಲ್ಲಿ ಸಿಕ್ಕಿಹಾಕಿಕೊಳ್ಳುವುದಕ್ಕೆ ಮುಖ್ಯವಾಗಿ ಎರಡು ಕಾರಣಗಳು. ಮೊದಲನೆಯದು ಸ್ವಯಂಕೃತಾಪರಾಧ, ಎರಡನೆಯದು ವಿಧಿಲೀಲೆ. ಒಂದರಿಂದ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದರೆ ಇನ್ನೊಂದು ತಡೆಯುತ್ತದೆ. ಹಿಂದೆ ಸರಿಯಲು ಪ್ರಯತ್ನಿಸಿದರೆ ಹಳ್ಳ(ನದಿ) ಅಡ್ಡವಾಗಿದೆ. ಮುಂದೆ ಸಾಗಲು ಪ್ರಯತ್ನಿಸಿದರೆ ತೊರೆ ಅಡ್ಡವಾಗಿದೆ. ರಕ್ಷಿಸಿಕೊಳ್ಳಲು ದಾರಿಯಿಲ್ಲ. ಎರಡೂ ಜೀವಕ್ಕೆ ಅಪಾಯವೇ. ಹಾಗೆಯೇ ಹಿಂದೆ ಸರಿಯಲು ಪ್ರಯತ್ನಿಸಿದರೆ ಕೆರೆ ಅಡ್ಡವಾಗಿದೆ. ದಾಟಲು ಸಾಧ್ಯವಿಲ್ಲ. ಮುಂದೆಸಾಗಲು ಪ್ರಯತ್ನಿಸಿದರೆ ಬಲೆಯನ್ನು ಅಡ್ಡವಾಗಿ ಬೀಸಲಾಗಿದೆ. ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾಪಾಡಿಕೊಳ್ಳಲು ಅವಕಾಶವೇ ಇಲ್ಲ. ಅಡಕ್ಕೊತ್ತಿನಲ್ಲಿ ಸಿಕ್ಕ ಅಡಿಕೆಯ ಹಾಗೆ.

                ಈ ವಚನದಲ್ಲಿ ಹಳ್ಳ, ತೊರೆ, ಕೆರೆ ಹಾಗೂ ಬಲೆಗಳು ಚೆನ್ನಮಲ್ಲಿಕಾರ್ಜುನ ಇಕ್ಕಿದ ಮಾಯೆಗಳಾಗಿ ತನ್ನನ್ನು ಕೊಲ್ಲುತ್ತಿವೆ ಎಂದು ಅಕ್ಕ  ಆತನಿಗೆ ಮೊರೆಹೋಗುತ್ತಾಳೆ. ಆಕೆ ತನ್ನ ಮನಸ್ಸಿನ ದ್ವಂದ್ವಗಳನ್ನು ಮಾಯೆಗೆ ಹೋಲಿಸಿದ್ದಾಳೆ. ಅಕ್ಕನಿಗೆ ಒದಗಿದ ಸ್ಥಿತಿ ಅಂದು ಅನ್ಯರಿಗೆ ಒದಗಿರಲಿಲ್ಲ. ಒಂದು ಕಡೆ ’ಚೆನ್ನಮಲ್ಲಿಕಾರ್ಜುನನೇ ತನಗೆ ಗಂಡ’ ಎಂದು ಭಾವಿಸಿದ ಆಕೆ, ತನ್ನ ತಂದೆತಾಯಿಗಳ ಒತ್ತಾಸೆಯಂತೆ ಮತ್ತು ಅವರ ಉಳಿವಿಗಾಗಿ ರಾಜ ಕೌಶಿಕನನ್ನು ಮದುವೆಯಾಗಬೇಕಾದ ಅನಿವಾರ್ಯತೆ ಒದಗಿತು. ಇನ್ನೊಂದೆಡೆ ತನಗೆ ನೀಡಿದ ಎಲ್ಲಾ ಭಾಷೆಗಳನ್ನು ಗಾಳಿಗೆ ತೂರಿ ಅತಿಕಾಮುಕನಾಗಿ ವರ್ತಿಸಿದ ಲೌಕಿಕಗಂಡ ಕೌಶಿಕ ಹಾಗೂ ಆತನ ಮತ್ತು ತನ್ನ ಪರಿವಾರವನ್ನು ತ್ಯಜಿಸಿ ಸಮಾಜದ ಅಂದಿನ ಧೋರಣೆಗಳಿಗೆ ವಿರುದ್ಧವಾಗಿ ಅಲೌಕಿಕಗಂಡ ಚೆನ್ನಮಲ್ಲಿಕಾರ್ಜುನನನ್ನು ಹುಡುಕಿಕೊಂಡು ಹೊರಡುವ ಅನಿವಾರ್ಯತೆ ಒದಗಿತು. ಮೊದಲನೆಯದು ಹಳ್ಳ ಹಾಗೂ ಕೆರೆಯಾದರೆ, ಎರೆಡನೆಯದು ತೊರೆ ಮತ್ತು ಬಲೆ. ಎರಡೂ ಮಾಯೆಗಳೇ. ಎರಡೂ ತನ್ನನ್ನು ಕೊಲ್ಲುತ್ತಿವೆ ಎಂಬುದು ಆಕೆಯ ಮನದಾಳದ ಅಳಲು.

                ಹನ್ನೆರೆಡನೆಯ ಶತಮಾನದ ಸಾಮಾಜಿಕಸಂದರ್ಭದಲ್ಲಿ ಮದುವೆಯಾದ ಗಂಡ ಕೌಶಿಕನನ್ನು ಬಿಟ್ಟು ಅಲೌಕಿಕಗಂಡ ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತ ಹುಟ್ಟುಡುಗೆಯಲ್ಲಿ ಎಲ್ಲವನ್ನೂ ಎಲ್ಲರನ್ನೂ ತೊರೆದುಹೋದದ್ದು ಒಂದು ಕ್ರಾಂತಿಕಾರಕ ಹಾಗೂ ದಿಟ್ಟನಿಲುವು. ಒಂದು ಕಡೆ ಲೌಕಿಕಗಂಡ ಕೌಶಿಕನನ್ನು ತೊರೆದು ಬಂದಾಗಿದೆ. ಹಿಂದೆ ಬರುವಂತಿಲ್ಲ. ಸಾಮಾಜಿಕ ಬಹಿಷ್ಕಾರದ ಸಮಸ್ಯೆಯ ಹಳ್ಳವೂ ಕೆರೆಯೂ ತನ್ನ ಮುಂದಿವೆ. ಅಲೌಕಿಕಗಂಡ ಚೆನ್ನಮಲ್ಲಿಕಾರ್ಜುನನನ್ನು ಬಯಸಿಬಂದಾಗಿದೆ. ಈ ಮದುವೆ ಸಾಧ್ಯವೇ ಎಂಬ ಗೊಂದಲದ ತೊರೆಯೂ ಇದೆ, ಬಲೆಯೂ ಇದೆ.  ಮುಂದೆ ಹೋಗುವಂತಿಲ್ಲ, ಹಿಂದೆ ಬರುವಂತೆಯೂ ಇಲ್ಲ. ‘ಹಿಂದಣ ದರಿ ಮುಂದಣ ಪುಲಿ’ ಎಂಬಂತಹ ಬದುಕು. ಇವೆಲ್ಲವೂ ಚೆನ್ನಮಲ್ಲಿಕಾರ್ಜುನ ಇಕ್ಕಿದ ಮಾಯೆ ಎಂದು ಅಕ್ಕ ಆತನಿಗೇ ಮೊರೆಹೋಗುತ್ತಾಳೆ. 

 

ಕೋಲತುದಿಯ ಕೋಡಗದಂತೆ,

ನೇಣತುದಿಯ ಬೊಂಬೆಯಂತೆ,

ಆಡಿದೆನಯ್ಯ ನೀನಾಡಿಸಿದಂತೆ!

ನಾ ನುಡಿದೆನಯ್ಯ ನೀ ನುಡಿಸಿದಂತೆ!

ನಾನಿದ್ದೆನಯ್ಯ ನೀನಿರಿಸಿದಂತೆ

ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ್ಕ!  ೬

            ಅಕ್ಕ, ಈ ವಚನದಲ್ಲಿ ತಾನು ಚೆನ್ನಮಲ್ಲಿಕಾರ್ಜುನನ ಕೈಬೊಂಬೆ ಎನ್ನುವುದನ್ನು ಎರಡು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸಿದ್ದಾಳೆ. ಡೊಂಬರಾಟದವನು ಕೈಯಲ್ಲಿ ಕೋಲೊಂದನ್ನು ಹಿಡಿದುಕೊಂಡು ಕೋಡಗವನ್ನು ಆಡಿಸುತ್ತಾನೆ. ಅದು ತನ್ನೊಡೆಯನ ಸಂಜ್ಞೆಯಂತೆ ಆಡುತ್ತದೆ. ಎಲ್ಲಿಯವರೆಗೆ ಆಡಿಸುತ್ತಾನೋ ಅಲ್ಲಿಯವರೆಗೆ ಆಡುತ್ತದೆ. ಏನಾಡಿಸುತ್ತಾನೋ ಅದನ್ನೇ ಆಡುತ್ತದೆ. ಏನನ್ನು ನುಡಿಸುತ್ತಾನೋ ಅದನ್ನೇ ನುಡಿಯುತ್ತದೆ. ಸ್ವತಃ ಅದೇನನ್ನೂ ಆಡದು, ಏನನ್ನೂ ನುಡಿಯದು. ಹಗ್ಗದ ತುದಿಯಲ್ಲಿ ನಿಲ್ಲಿಸಿರುವ ಬೊಂಬೆಯನ್ನು ಡೊಂಬರಾಟದವನು ಹಗ್ಗದ ಸಹಾಯದಿಂದ ಹತ್ತು ಹಲವು ರೀತಿಗಳಲ್ಲಿ ಆಡಿಸುತ್ತಾನೆ. ಆತ ಹೇಗೆ ಆಡಿಸುತ್ತಾನೋ ಹಾಗೆಯೇ ಬೊಂಬೆಯೂ ಆಡುತ್ತದೆ. ಕೋಡಗವಾಗಲೀ ಬೊಂಬೆಯಾಗಲೀ ಒಡೆಯನಾದ ಡೊಂಬರಾಟದವನ ಆಣತಿಯನ್ನು ಮೀರುವುದು ಅಸಾಧ್ಯ.

            ಈ ಲೋಕಕ್ಕೆ ಚೆನ್ನಮಲ್ಲಿಕಾರ್ಜುನನೇ ಡೊಂಬರಾಟದವನು. ಅವನು ಆಡಿಸಿದಂತೆ ಆಡಬೇಕು, ನುಡಿಸಿದಂತೆ ನುಡಿಯಬೇಕು, ನಡೆಸಿದಂತೆ ನಡೆಯಬೇಕು, ಇರಿಸಿದಂತೆ ಇರಬೇಕು. ಅವನು ಸಾಕೆನ್ನುವಲ್ಲಿಯವರೆಗೆ ನಮ್ಮ ದಿನಚರಿ, ‘ತೃಣಮಪಿ ನಚಲತಿ ತೇನವಿನ’ ಎಂಬಂತೆ. ಭಗವಂತನ ಇಚ್ಛೆಯಿಲ್ಲದೆ ಯಾವುದೂ ನಡೆಯದು. ಚೆನ್ನಮಲ್ಲಿಕಾರ್ಜುನ ಈ ಜಗದ ಯಂತ್ರವಾಹಕ. ಜಗತ್ತೆಂಬ ಯಂತ್ರ ಆತನ ಆಜ್ಞೆಯ ಪ್ರಕಾರವೇ ನಡೆಯುತ್ತಿರುತ್ತದೆ. ಮಾನವ ಒಂದು ಬಗೆದರೆ ವಿಧಿ ಇನ್ನೊಂದನ್ನು ಬಗೆಯುತ್ತದೆ. ಯಾವುದು ಘಟಿಸಬೇಕೋ ಅದು ಘಟಿಸಿಯೇ ತೀರುತ್ತದೆ.

            ಇದು ಲೋಕರೂಢಿಯ ಮಾತೂ ಹೌದು, ಅಕ್ಕನ ಜೀವನವಿಮರ್ಶೆಯೂ ಹೌದು. ಆಕೆ ಬುದ್ಧಿತಿಳಿದಂದಿನಿಂದ ಚೆನ್ನಮಲ್ಲಿಕಾರ್ಜುನನನ್ನೇ ’ಗಂಡ’ ಎಂದು ಭಾವಿಸಿ, ಆತನಲ್ಲಿ ಮಧುರಭಕ್ತಿಯನ್ನು ಇರಿಸಿಕೊಂಡವಳು. ಆದರೆ ವಿಧಿಲೀಲೆಯಂತೆ ತನ್ನೂರಿನ ರಾಜ ಕೌಶಿಕನನ್ನು ಮದುವೆಯಾಗಬೇಕಾಯಿತು. ಅರಮನೆಯಲ್ಲಿ ರಾಣಿಯ ಪಾತ್ರವನ್ನು ನಿರ್ವಹಿಸಿ ನಡೆದುಕೊಳ್ಳಬೇಕಾಯಿತು. ಸಂಸಾರ ಕಹಿಯಾಯಿತು. ಆತನನ್ನು, ಅಂದಿನ ಸಾಮಾಜಿಕ ಕಟ್ಟುಕಟ್ಟಳೆಗಳನ್ನು ಮೀರಿ ಹೊರಹೋಗಬೇಕಾಯಿತು. ಚೆನ್ನಮಲ್ಲಿಕಾರ್ಜುನನ ಹುಡುಕಾಟದುದ್ದಕ್ಕೂ ಹಿಂಸೆ, ಅವಮಾನಗಳನ್ನು, ಬದುಕಿನುದ್ದಕ್ಕೂ ನಾನಾ ಪರೀಕ್ಷೆಗಳನ್ನು ಎದುರಿಸಬೇಕಾಯಿತು. ಎಲ್ಲವೂ ಆಕೆಯ ಇಚ್ಛೆಗೆ ವಿರುದ್ಧವಾಗಿ ನಡೆದವುಗಳು. ಚೆನ್ನಮಲ್ಲಿಕಾರ್ಜುನನ ಇಚ್ಛೆ ಈ ರೀತಿಯಲ್ಲಿಯೇ ಇರುವಾಗ ಅದನ್ನು ಮೀರುವುದಾದರೂ ಹೇಗೆ? ಅದಕ್ಕಾಗಿಯೇ ಆಕೆ ಹೇಳುವುದು, “ನಾನಿದ್ದೆನಯ್ಯ ನೀನಿರಿಸಿದಂತೆ” ಎಂದು. ಆಕೆಯ ಬದುಕಿನಲ್ಲಿ ಘಟಿಸಿದ ಈ ರೀತಿಯ ಪ್ರಸಂಗಗಳು ಮಿಕ್ಕ ಶಿವಶರಣ ಹಾಗೂ ಶಿವಶರಣೆಯರ ಬದುಕಿನಲ್ಲಿ ಘಟಿಸಲಿಲ್ಲ. ಹಾಗಾಗಿ ಈ ವಚನದ ವಿಚಾರಗಳು ಅಕ್ಕನಿಗೆ ಮಾತ್ರ ಅನ್ವಯಿಸುತ್ತವೆ. ಅಕ್ಕನದು ಒಂದು ರೀತಿಯಲ್ಲಿ ಏಕಾಂಗಿ ಹೋರಾಟದ ಬದುಕು.

            ಇಂದಿನ ಆಧುನಿಕಬದುಕಿನಲ್ಲಿಯೂ ಭಗವಂತನ ಈ ಸೂತ್ರಧಾರತ್ವವನ್ನು ಒಪ್ಪಿಕೊಂಡರೂ ಅದಕ್ಕಿಂತಲೂ ಭಿನ್ನ ನೆಲೆಯಲ್ಲಿ ಅಕ್ಕನ ಮಾತುಗಳು ಮಹತ್ವಪಡೆಯುತ್ತವೆ. ಇಂದು ಭಗವಂತನ ಬದಲು ಅಭಿನವ ಭಗವಂತರು, ಅಧಿಕಾರಸ್ಥರು, ಸಿರಿವಂತರು, ವ್ಯಭಿಚಾರಿಗಳು ಡೊಂಬರಾಟದವರಂತೆ  ತೆರೆಯ ಮರೆಯಲ್ಲಿದ್ದು ಇತರರನ್ನು, ತಮಗಾಗದವರನ್ನು ಅಧಿಕಾರವೆಂಬ ಕೋಲತುದಿಯಲ್ಲಿ, ಹಣವೆಂಬ ನೇಣತುದಿಯಲ್ಲಿ, ವ್ಯಭಿಚಾರವೆಂಬ ಬಲೆಯಲ್ಲಿ ಕೆಡವಿ ಆಡಿಸುತ್ತಿದ್ದಾರೆ, ನುಡಿಸುತ್ತಿದ್ದಾರೆ, ತಮ್ಮಿಚ್ಛೆಯಂತೆ ಇರಿಸಿ ತಾವು ಮೆರೆಯುತ್ತಿದ್ದಾರೆ. ಇಂತಹ ಲೋಕಕಂಟಕ ಡೊಂಬರಾಟದವರ ಕಾಣದಕೈಗಳೊಳಗೆ ಸಿಕ್ಕಿಹಾಕಿಕೊಂಡು ಪರಿತಪಿಸುವವರ ಸಂಖ್ಯೆಯೇ ಇಂದು ಅಧಿಕವಾಗಿದೆ. ಅಕ್ಕನ ಈ ವಚನ ಭಿನ್ನಭಿನ್ನ ನೆಲೆಗಳಲ್ಲಿ ಆಧುನಿಕಬದುಕಿಗೂ  ಒಂದು ಪರಿಣಾಮಕಾರಿ ವಿಡಂಬನೆ ಎನಿಸುವುದಿಲ್ಲವೇ?!

 

ಹಾವಿನ ಬಾಯ ಹಲ್ಲ ಕಳೆದು

ಹಾವನಾಡಿಸಬಲ್ಲಡೆ

ಹಾವಿನ ಸಂಗವೇ ಲೇಸು ಕಂಡಯ್ಯ!

ಕಾಯದ ಸಂಗವ ವಿವರಿಸಬಲ್ಲಡೆ

ಕಾಯದ ಸಂಗವೇ ಲೇಸು ಕಂಡಯ್ಯ!

ತಾಯಿ ರಕ್ಕಸಿಯಾದಂತೆ ಕಾಯವಿಕಾರವು

ಚೆನ್ನಮಲ್ಲಿಜಾರ್ಜುನಯ್ಯ,

ನೀನೊಲಿದವರು ಕಾಯಗೊಂಡಿದ್ದರೆನಬೇಡ!  ೭

            ಭಕ್ತರು ಮನುಷ್ಯ ಶರೀರವನ್ನು, ಶರೀರಸಂಬಂಧಿ ನ್ಯೂನತೆ ಹಾಗೂ ವಿಕಾರತೆಗಳನ್ನು ಹೊಂದಿದ್ದಾರೆ ಎಂಬ ಕಾರಣಕ್ಕೆ ಚೆನ್ನಮಲ್ಲಿಕಾರ್ಜುನ ಅವರನ್ನು ದೂರೀಕರಿಸಬಾರದು ಎಂಬುದನ್ನು ಅಕ್ಕ ಈ ವಚನದಲ್ಲಿ ಎರಡು ದೃಷ್ಟಾಂತಗಳ ಮೂಲಕ ವಿವರಿಸಿದ್ದಾಳೆ.

            ಮೊದಲನೆಯ ದೃಷ್ಟಾಂತವೆಂದರೆ, ಹಾವಿನ ಹಲ್ಲನ್ನು ಕಿತ್ತು ಹಾವನ್ನು ಆಡಿಸುವುದು.  ವಿಷಕಾರಿಯಾದ ಹಾವುಗಳ (ವಿಷವಿಲ್ಲದ ಹಾವುಗಳೂ ಇವೆ) ಹಲ್ಲಿನ ಮೂಲಕ ವಿಷ ಹರಿಯುತ್ತದೆ. ಹಾವಿನ ಅಂತಹ ಹಲ್ಲುಗಳನ್ನು ಕಿತ್ತು ಅವುಗಳನ್ನು ನಮ್ಮ ಸ್ವಭಾವಕ್ಕೆ ತಕ್ಕಂತೆ ಪಳಗಿಸುವುದಕ್ಕೆ, ಆಡಿಸುವುದಕ್ಕೆ ನಾವು ಸಮರ್ಥರಾದರೆ ಹಾವಿನ ಸಂಗವೇ ಒಳಿತು.

            ಎರಡನೆಯ ದೃಷ್ಟಾಂತವೆಂದರೆ, ಮನುಷ್ಯದೇಹದ ಇತಿಮಿತಿಗಳನ್ನು, ಸ್ವಭಾವಗಳನ್ನು ಅರಿತುಕೊಂಡು ವ್ಯವಹರಿಸುವುದು.  ಮನುಷ್ಯದೇಹ ಹಲವು ಭಾವನೆಗಳ ಆಗರ. ಅವು ಕೆಲವೊಮ್ಮೆ ಸೌಮ್ಯವಾಗಿರಬಹುದು, ಇನ್ನು ಕೆಲವೊಮ್ಮೆ ಕೆರಳಬಹುದು. ಹೀಗೆ ಭಿನ್ನಭಿನ್ನ ಸ್ಥಿತಿಯಲ್ಲಿ ವ್ಯವಹರಿಸುವ ದೇಹದ ಸ್ವಭಾವವನ್ನು, ಇತಿಮಿತಿಗಳನ್ನು ಅರಿತುಕೊಂಡು ಅದಕ್ಕನುಗುಣವಾಗಿ ಬಾಳುವುದಕ್ಕೆ ಸಮರ್ಥರಾದರೆ ದೇಹದ ಸಂಗವೇ ಒಳಿತು.

            ಮೇಲಿನ ಎರಡು ದೃಷ್ಟಾಂತಗಳ ಮೂಲಕ ಅಕ್ಕಮಹಾದೇವಿ ಮನುಷ್ಯದೇಹದಲ್ಲಿ ನೆಲೆಗೊಳ್ಳುವ ಬಹುತೇಕ ಸ್ವಭಾವಗಳು ಜನ್ಮದತ್ತವಾದವುಗಳು ಎಂಬ ವಿಚಾರವನ್ನು ತಾಯಿ ರಕ್ಕಸಿಯಾದಂತೆ ಮನುಷ್ಯನಲ್ಲಿ ಕಾಯವಿಕಾರ ಕಾಣಿಸಿಕೊಳ್ಳುತ್ತದೆ ಎಂಬ ಮಾತುಗಲ ಮೂಲಕ ಸ್ಪಷ್ಟಪಡಿಸುತ್ತಾಳೆ. ಹೆತ್ತವಳಲ್ಲಿನ ಮನೋವಿಕಾರ ಅಥವಾ ಸ್ವಭಾವವಿಕಾರಗಳು ಮಕ್ಕಳಲ್ಲಿಯೂ ಕಾಣಿಸಿಕೊಳ್ಳಬಹುದು. ಶಿವಭಕ್ತರೂ ಒಬ್ಬೊಬ್ಬ ತಾಯಿಯ ಹೊಟ್ಟೆಯಿಂದ ಜನಿಸಿರುವಾಗ ತಾಯಿಯ ಕೆಲವಾದರೂ ಸ್ವಭಾವವಿಕಾರಗಳು ಮಕ್ಕಳಲ್ಲಿ ರೂಢಿಯಾಗಬಹುದು. ಹಾಗೆಂದು ಅವುಗಳನ್ನೇ ಹಿರಿದುಗೊಳಿಸಿ ಭಕ್ತರನ್ನು ಕಡೆಗಣಿಸುವುದು ಯುಕ್ತವಲ್ಲ, ಹಾವಿನ ಬಾಯಲ್ಲಿನ ವಿಷದ ಹಲ್ಲನ್ನು ಕಿತ್ತು ಹಾವನಾಡಿಸುವಂತೆ, ದೇಹದ ಸ್ವಭಾವವನ್ನು ಅರಿತುಕೊಂಡು ವ್ಯವಹರಿಸುವಂತೆ ಚೆನ್ನಮಲ್ಲಿಕಾರ್ಜುನನೂ ಭಕ್ತರಲ್ಲಿನ ವಿಕಾರತೆಯನ್ನು ನಿವಾರಿಸಿ ಅನುಗ್ರಹಿಸಬೇಕಲ್ಲದೆ ’ಮನುಷ್ಯದೇಹಿ’ಗಳೆಂದು ನಿರಾಕರಿಸುವುದು ಸಮಂಜಸವಲ್ಲ. ಚೆನ್ನಮಲ್ಲಿಕಾರ್ಜುನನ ಅನುಗ್ರಹಕ್ಕೆ ಹಾತೊರೆಯುವ ಭಕ್ತರು ಮನುಷ್ಯದೇಹವನ್ನು ಹೊಂದಿ, ಮನುಷ್ಯಸಹಜವಾದ ವಿಕಾರಗಳನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ಚೆನ್ನಮಲ್ಲಿಕಾರ್ಜುನನು ನಿರಾಕರಿಸದೆ, ಭಕ್ತರೂ ತಮ್ಮ ಜನ್ಮದತ್ತವಾದ ನ್ಯೂನತೆಗಳನ್ನು, ಕ್ಷುಲ್ಲಕತನವನ್ನು ನಿವಾರಿಸಿಕೊಂಡು ಭಗವಂತನ ಅನುಗ್ರಹಕ್ಕೆ ಪಾತ್ರರಾಗುವಂತೆ ಕರುಣಿಸಬೇಕೆಂದು ಅಕ್ಕ ಚೆನ್ನಮಲ್ಲಿಕಾರ್ಜುನನಲ್ಲಿ ಬೇಡಿಕೊಳ್ಳುತ್ತಾಳೆ.  

            ಅಕ್ಕಮಹಾದೇವಿಯ ವಿಚಾರಗಳು ಇಂದಿನ ಆಧುನಿಕಕಾಲದ ಮನುಷ್ಯರ ಮನೋಧರ್ಮಕ್ಕೆ ವಿರುದ್ಧವಾಗಿವೆ. ಇಂದು ದೈಹಿಕ ಹಾಗೂ ಮನೋವಿಕಾರಗಳನ್ನು ತ್ಯಜಿಸಿ ತನ್ನನ್ನು ತಾನು ಶುದ್ಧೀಕರಿಸಿಕೊಳ್ಳಲು ಪ್ರಯತ್ನಿಸದೆ ಸಮಾಜದಲ್ಲಿ ಶ್ರೇಷ್ಠರೆನಿಸಿಕೊಳ್ಳುವುದಕ್ಕೆ ಪ್ರಯತ್ನಿಸುವವರೇ ಎಲ್ಲೆಲ್ಲೂ ರಾರಾಜಿಸುತ್ತಿದ್ದಾರೆ. ಆತ್ಮವಿಮರ್ಶೆಯ ಲವಲೇಶವೂ ಕಾಣಿಸುತ್ತಿಲ್ಲ. ವ್ಯಕ್ತಿಸುಧಾರಣೆಯ ವಿಚಾರದಲ್ಲಿ ಅಕ್ಕನ ಮಾತುಗಳು ಅನುಕರಣೀಯವಾಗಿವೆ. 

(ಭಾಗ-೨ರಲ್ಲಿ ಮುಂದುವರಿದಿದೆ)

 

Leave a Reply

Your email address will not be published. Required fields are marked *