ಸಾಹಿತ್ಯಾನುಸಂಧಾನ

heading1

ವಚನಗಳು- ಅಕ್ಕಮಹಾದೇವಿ-ಭಾಗ-೨

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ,  ಭಾಗ-೨)

ಎಮ್ಮೆಗೊಂದು ಚಿಂತೆ! ಸಮ್ಮಗಾಱನಿಗೊಂದು ಚಿಂತೆ!

ನನಗೆ ನನ್ನ ಚಿಂತೆ! ತನಗೆ ತನ್ನ ಕಾಮದ ಚಿಂತೆ!

ಒಲ್ಲೆ ಹೋಗು, ಸೆಱಗಬಿಡು ಮರುಳೆ!

ನನಗೆ ಚೆನ್ನಮಲ್ಲಿಕಾರ್ಜುನದೇವರು

ಒಲಿವನೋ ಒಲಿಯನೋ ಎಂಬ ಚಿಂತೆ!   ೮

                ಈ ವಚನ ಅಕ್ಕಮಹಾದೇವಿಯ ಬದುಕಿಗೆ ಸಂಬಂಧಿಸಿದ್ದು, ಇದರಲ್ಲಿ ಆಕೆ ತನ್ನ ಲೌಕಿಕಗಂಡ ಕೌಶಿಕನಿಂದ ತನಗಾದ ಹಿಂಸೆಯನ್ನು ಎರಡು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸಿದ್ದಾಳೆ. ಈ ಮಾತುಗಳು ಕೇವಲ ಆಕೆಯ ಬದುಕಿಗೆ ಮಾತ್ರ ಸೀಮಿತವಾಗಿರದೆ ಹತ್ತು ಹಲವು ನೆಲೆಗಳಲ್ಲಿ ಮಿಕ್ಕವರ ಬದುಕಿಗೂ ಅನ್ವಯವಾಗುತ್ತವೆ.

                ಎಮ್ಮೆಗೆ ತನ್ನ ಗುಡಾಣದಂತಹ ಹೊಟ್ಟೆಯನ್ನು ತುಂಬಿಸಿಕೊಳ್ಳುವುದೇ ಚಿಂತೆ. ಮೇಯಲು ಹೋದಲ್ಲಿ ಯಾವ ಹೊಲದಲ್ಲಿ ಹುಲುಸಾದ ಬೆಳೆ ಬೆಳೆದಿದೆಯೋ ಅಲ್ಲಿ ನುಗ್ಗಿ ಮನಸೋ ಇಚ್ಛೆ ಮೇದು ಹೊಟ್ಟೆತುಂಬಿಸಿಕೊಂಡು ಹೊರಟುಬಿಡುತ್ತದೆ. ಬೆಳೆ ಬೆಳೆಸಿದವರಾರು? ಶ್ರಮಪಟ್ಟವರಾರು? ಫಲ ಸಿಗಬೇಕಾದುದು ಯಾರಿಗೆ? ಈ ಯಾವ ಪ್ರಶ್ನೆಗಳೂ ಅದರ ಮನಸ್ಸಿನಲ್ಲಿ ಹುಟ್ಟಲಾರವು. ರೈತನ ಕಾಳಜಿ ಅದಕ್ಕಿಲ್ಲ. ಅದಕ್ಕೆ ತನ್ನ ಹೊಟ್ಟೆ ತುಂಬಬೇಕು. ಹಸಿವೆ ಇಂಗಬೇಕು.

                ಸಮ್ಮಗಾರ(ಸಮಗಾರ)ನಿಗೆ ತನ್ನ ಹಾಗೂ ತನ್ನ ಮನೆಮಂದಿಯ ಹೊಟ್ಟೆತುಂಬಿಸಿಕೊಳ್ಳುವುದೇ ಚಿಂತೆ. ದಾರಿಯಲ್ಲೊಂದು ಎಮ್ಮೆ ಹೋಗುತ್ತಿದ್ದರೆ ಆತ ‘ತಾನಿದನ್ನು ಕೊಂದು ಚರ್ಮಸುಲಿದರೆ ಎಷ್ಟು ಚಪ್ಪಲಿ ಹೊಲಿಯಬಹುದು? ಎಷ್ಟು ದುಡ್ಡು ಸಂಪಾದಿಸಿ ಗಂಟುಕಟ್ಟಬಹುದು? ತನ್ನ ಮನೆಮಂದಿಯನ್ನು ಹೇಗೆ ತೃಪ್ತಿಪಡಿಸಬಹುದು? ಎಂದಷ್ಟೇ ಯೋಚಿಸುತ್ತಾನೆ. ಆದರೆ ಆತನಿಗೆ ಎಮ್ಮೆಯನ್ನು ಸಾಕಿದವರು ಯಾರು? ಎಷ್ಟು ಬೆಲೆಕೊಟ್ಟು ಕೊಂಡಿದ್ದಾರೆ? ಸಾಕುವುದಕ್ಕೆ ಎಷ್ಟು ಕಷ್ಟಪಟ್ಟಿದ್ದಾರೆ? ಈ ಯಾವ ಪ್ರಶ್ನೆಗಳೂ ಆತನ ಮನಸ್ಸಿನಲ್ಲಿ ಸುಳಿಯಲಾರವು. ಅವುಗಳ ಚಿಂತೆಯೂ ಆತನಿಗಿರುವುದಿಲ್ಲ. ತಾನು ಒಂದಷ್ಟು ಜೊತೆ ಚಪ್ಪಲಿ ಹೊಲಿಯಬೇಕು, ದುಡ್ದು ಸಂಪಾದಿಸಬೇಕು, ಸುಖದಿಂದ ಇರಬೇಕು.

                ಮೇಲಿನ ಎರಡೂ ದೃಷ್ಟಾಂತಗಳಲ್ಲಿ ಎಮ್ಮೆಯ ಚಿಂತೆ ಒಂದಾದರೆ, ಸಮಗಾರನ ಚಿಂತೆ ಇನ್ನೊಂದು. ಎಮ್ಮೆ ರೈತನ ಬದುಕಿನ ಬಗ್ಗೆ ಯೋಚಿಸುವುದಿಲ್ಲ, ಸಮಗಾರ ಎಮ್ಮೆಯ ಬದುಕಿನ ಬಗ್ಗೆ ಯೋಚಿಸುವುದಿಲ್ಲ. ಈ ಎರಡೂ ದೃಷ್ಟಾಂತಗಳು ಅಕ್ಕನ ಲೌಕಿಕಬದುಕಿಗೆ ಕರಾರುವಾಕ್ಕಾಗಿ ತಾಳೆಯಾಗುತ್ತವೆ. ಅಕ್ಕನಿಗೆ ತನ್ನ ಭವಿಷ್ಯದ ಚಿಂತೆ, ಭಕ್ತಿಯಿಂದ ಚೆನ್ನಮಲ್ಲಿಕಾರ್ಜುನನನ್ನು ಒಲಿಸಿಕೊಂಡು ಆತನನ್ನು ಮದುವೆಯಾಗುವ ಚಿಂತೆ. ಈ ಚಿಂತೆಯಲ್ಲಿರುವ ಅಕ್ಕ ಹೆತ್ತವರ ಒತ್ತಾಸೆಯಂತೆ ತಾನು ಮದುವೆಯಾದ ಗಂಡನ ಆಸೆ ಆಕಾಂಕ್ಷೆಗಳನ್ನು ಮನ್ನಿಸಲಾರಳು, ಲೌಕಿಕವಾಗಿ ಸಂಸಾರ ಮಾಡಲಾರಳು. ಇಂತಹ ಸ್ಥಿತಿಯಲ್ಲಿರುವ ಹೆಂಡತಿಯಲ್ಲಿ ಗಂಡ ಕೌಶಿಕನಿಗೆ ತನ್ನ ಕಾಮವನ್ನು ಇಷ್ಟಬಂದಂತೆ ಅನುಭವಿಸುವ, ತೀರಿಸಿಕೊಳ್ಳುವ ಚಿಂತೆ. ಆಕೆಯ ಮಾನಸಿಕ, ದೈಹಿಕ ಸ್ಥಿತಿಗತಿಗಳೇನು? ಆಸೆ ಆಕಾಂಕ್ಷೆಗಳೇನು? ಯಾವುದನ್ನೂ ಕೌಶಿಕ ಯೋಚಿಸಲಾರ, ಗೌರವಿಸಲಾರ. ಇಬ್ಬರದೂ ವಿರುದ್ಧ ಚಿಂತೆಗಳು, ಚಿಂತನೆಗಳು, ಅಭಿರುಚಿಗಳು. ಪರಸ್ಪರ ಒಂದುಗೂಡಲಾರದವು. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆದಂತೆ.

                ಚೆನ್ನಮಲ್ಲಿಕಾರ್ಜುನನನ್ನು ಬಯಸಿ, ಹಂಬಲಿಸಿ ಕೌಶಿಕನನ್ನು ಮದುವೆಯಾದ ಮೇಲೆ ಆತ ತನಗೆ ಒಲಿವನೋ ಒಲಿಯನೋ ಎಂಬ ಚಿಂತೆಯೇ ಆಕೆಯ ಮನಸ್ಸಿನಲ್ಲಿ ತುಂಬಿಕೊಂಡಿದೆ. ಅದಕ್ಕಾಗಿ ಕಾಮುಕನಾಗಿ ಸದಾ ತನ್ನ ಹಿಂದೆ ಸುತ್ತುತ್ತ ಶಿವಪೂಜೆಗೆ ಅಡ್ಡಿಮಾಡುವ ಕೌಶಿಕನಿಗೆ  “ಒಲ್ಲೆ ಹೋಗು, ಸೆರಗ ಬಿಡು ಮರುಳೆ” ಎಂದು ನಿರ್ದಾಕ್ಷಿಣ್ಯವಾಗಿ, ನಿಷ್ಠುರವಾಗಿ ದಿಟ್ಟತನದಿಂದ ಹೇಳಿಬಿಡುತ್ತಾಳೆ. ಗಂಡನಲ್ಲಿನ ನೈತಿಕ ಅಧಃಪತನ ಅಕ್ಕನಿಂದ ಇಂತಹ ಮಾತುಗಳನ್ನಾಡಿಸುವುದಕ್ಕೆ ಪ್ರೇರೇಪಿಸಿರಬೇಕು.

 

ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ

ತನ್ನ ನೂಲು ತನ್ನನೇ ಸುತ್ತಿ ಸುತ್ತಿ ಸಾವ ತೆರನಂತೆ!

ಮನ ಬಂದುದ ಬಯಸಿ ಬಯಸಿ ಬೇವುತ್ತಿರುವೆನಯ್ಯ!

ಅಯ್ಯ, ಎನ್ನ ಮನದ ದುರಾಶೆಯ ಮಾಣಿಸಿ

ನಿಮ್ಮತ್ತ ತೋಱಾ ಚೆನ್ನಮಲ್ಲಿಕಾರ್ಜುನ  ೯

                ಅಕ್ಕಮಹಾದೇವಿ ಈ ವಚನದಲ್ಲಿ ಅಲೌಕಿಕಪುರುಷ ಚೆನ್ನಮಲ್ಲಿಕಾರ್ಜುನನನ್ನು ಗಂಡನೆಂದು ಭಾವಿಸಿ ತಾನು ಅನುಭವಿಸಿದ ನೋವನ್ನು ಉದಾರಹಣೆಯೊಂದರ ಮೂಲಕ ಪ್ರಸ್ತುತಪಡಿಸಿದ್ದಾಳೆ. ತೆರಣಿ(ರೇಷ್ಮೆ)ಯ ಹುಳು ತಾನೇ ಕಾಳಜಿವಹಿಸಿ ತನ್ನ ದೇಹದಿಂದ ಉತ್ಪತ್ತಿಯಾಗುವ ನೂಲನ್ನು ತನ್ನ ಸುತ್ತ ಸುತ್ತಿ ಇರುವುದಕ್ಕೊಂದು ಮನೆ(ಗೂಡನ್ನು)ಯನ್ನು ಕಟ್ಟಿಕೊಳ್ಳುತ್ತದೆ. ಒಳಿತಿಗೆಂದು ತನ್ನ ದೇಹದ ಒಂದಂಗದಿಂದ ಉತ್ಪತ್ತಿಯಾದ ನೂಲನ್ನೇ ಬಳಸಿಕೊಂಡು ಮನೆಯನ್ನು(ಗೂಡನ್ನು) ಮಾಡಿಕೊಂಡರೂ ಅದು ಅದರೊಳಗೆ ಬೆಂದು ಸತ್ತುಹೋಗುತ್ತದೆ. ಅಕ್ಕನಿಗೆ ತನ್ನ ಬದುಕೂ ಇದಕ್ಕಿಂತ ಭಿನ್ನವೆಂದು ಅನ್ನಿಸುವುದಿಲ್ಲ.

                 ‘ಚೆನ್ನಮಲ್ಲಿಕಾರ್ಜುನನೇ ತನಗೆ ಗಂಡ’ ಎಂಬ ಭಾವ ರೇಷ್ಮೆಯ ನೂಲಿನಂತೆ ಅಕ್ಕನ ಮನಸ್ಸಿನಲ್ಲಿಯೇ ಉತ್ಪತ್ತಿಯಾದುದು. ಆತನನ್ನು ಗಂಡನನ್ನಾಗಿ, ತನ್ನನ್ನು ಹೆಂಡತಿಯನ್ನಾಗಿ ಪರಿಭಾವಿಸಿಕೊಂಡು ಅಲೌಕಿಕ ಸುಖವನ್ನು ಅನುಭವಿಸಿದವಳು. ಆದರೆ ರೇಷ್ಮೆನೂಲಿನಂತಿರುವ ವಿರಹಭಾವವೇ ಆಕೆಯನ್ನು ಸುತ್ತಿಸುತ್ತಿ ತತ್ತರಿಸುವಂತೆ, ಹೈರಾಣಾಗುವಂತೆ ಮಾಡಿದೆ. ಆ ಸ್ಥಿತಿಯಲ್ಲಿಯೇ ಇರುವಂತಿಲ್ಲ, ಹೊರಬರುವಂತೆಯೂ ಇಲ್ಲ. ಅದಕ್ಕಾಗಿಯೇ ಆಕೆ ತನ್ನ ಮನದ ದುರಾಶೆಯನ್ನು ನಿವಾರಿಸಿ ಮುಕ್ತಿಯನ್ನು ನೀಡೆಂದು ಚೆನ್ನಮಲ್ಲಿಕಾರ್ಜುನನಲ್ಲಿ ವಿನಮ್ರಳಾಗಿ ಬೇಡಿಕೊಳ್ಳುತ್ತಾಳೆ.

                ಕೌಶಿಕನ ಅಧಿಕಾರಶಾಹಿತ್ವ, ಹೆತ್ತವರ ಒತ್ತಾಸೆಗಳಿಗೆ ತುತ್ತಾಗಿ ಆತನನ್ನು ಮದುವೆಯಾಗಿ, ವಿಷಮದಾಂಪತ್ಯಕ್ಕೆ ಹೇಸಿ ಅಂದಿನ ಸಾಮಾಜಿಕಧೋರಣೆಗಳಿಗೆ ವಿರುದ್ಧವಾಗಿ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಚೆನ್ನಮಲ್ಲಿಕಾರ್ಜುನನ ನಿರೀಕ್ಷೆಯಲ್ಲಿ ಹೊರಟ ಅಕ್ಕ, ಅವನನ್ನು ಕಾಣದೆ ಪರಿತಪಿಸುತ್ತಾಳೆ. ಚೆನ್ನಮಲ್ಲಿಕಾರ್ಜುನ ತಾನು ಬೇಕೆಂದು ಬಯಸಿದ ಗಂಡ. ಆತನೊಂದಿಗಿನ ದಾಂಪತ್ಯ ತಾನು ಬೇಕೆಂದು ಬಯಸಿದ ಭಾವ. ಯಾವುದೂ ದಕ್ಕದೆ ವಿರಹದಿಂದ ಪರಿತಪಿಸುತ್ತಾಳೆ. ಮನಸ್ಸಿನಲ್ಲಿ ಏನೇನೋ ಭಾವಗಳನ್ನಿರಿಸಿಕೊಂಡು ಬೇಯುತ್ತಾಳೆ. ರೇಷ್ಮೆಹುಳು ತನ್ನ ನೂಲಿನ ಗೂಡಿನಲ್ಲಿ ತಾನೇ ಬೆಂದಂತೆ.

                ಹನ್ನೆರಡನೆಯ ಶತಮಾನದ ಸಾಮಾಜಿಕಸಂದರ್ಭದಲ್ಲಿ ಅಕ್ಕನದು ಒಂದು ದಿಟ್ಟ ಕ್ರಾಂತಿಕಾರಕ ಹೆಜ್ಜೆ. ಮನಸ್ಸಿಗೆ ಒಲ್ಲದುದನ್ನು, ಆತ್ಮಸಾಕ್ಷಿಗೆ ವಿರುದ್ಧವಾದುದನ್ನು ದಿಟ್ಟತನದಿಂದ ವಿರೋಧಿಸಿ, ಲೌಕಿಕದಾಂಪತ್ಯ ಅಸಾಧ್ಯವೆಂದು ನಿರ್ಧರಿಸಿ, ನಿರ್ದಾಕ್ಷಿಣ್ಯವಾಗಿ ವ್ಯವಸ್ಥೆಯನ್ನು ನಿರಾಕರಿಸಿ ಹೊರನಡೆದವಳು. ಒಂದೆಡೆ ಸಾಮಾಜಿಕ ಕಟ್ಟುಪಾಡುಗಳನ್ನು ಧಿಕ್ಕರಿಸಿದ್ದು; ಇನ್ನೊಂದೆಡೆ ಇನ್ನೂ ಹದಿಹರೆಯದ ಆಕೆಯನ್ನು ಕಾಮುಕಪುರುಷರು ಕಾಡಿ ಪೀಡಿಸಿದ್ದು; ಇಂತಹ ಅಸಹಜ, ಅಮಾನುಷ, ಅನೈತಿಕವ್ಯವಹಾರಗಳನ್ನು ಎದುರಿಸಿದ್ದು; ಲೋಕಸಹಜವಾದ ವರ್ತನೆಯನ್ನು ಮೀರಿ ಅಸಹಜವಾಗಿ ನಡೆದುಕೊಂಡಿದ್ದು  ಇವೆಲ್ಲವೂ ಅಂದಿನ ಆಕೆಯ ಮಾನಸಿಕ ಗೊಂದಲಗಳನ್ನು ಮಾತ್ರವಲ್ಲದೆ ಲೋಕದ ಡಾಂಭಿಕರ ವಿರುದ್ಧ ಆಕೆಯ ಪ್ರತಿಭಟನೆಯನ್ನು ಸೂಚಿಸುತ್ತವೆ. ಆಕೆ ಲೌಕಿಕ ಪ್ರೇಮಕಾಮಗಳನ್ನು ಮೀರಿ ಅಲೌಕಿಕವಾದುದನ್ನು ಬಯಸಿದವಳು, ಅದಕ್ಕಾಗಿ ಹಾತೊರೆದವಳು. ಅವಳ ಇಡೀ ಬದುಕು ಅದಕ್ಕೆ ದೃಷ್ಟಾಂತವೆನಿಸಿಕೊಳ್ಳುತ್ತದೆ.

 

ಪೃಥ್ವಿ ಪೃಥ್ವಿಯ ಕೂಡದ ಮುನ್ನ,

ಅಪ್ಪು ಅಪ್ಪುವ ಕೂಡದ ಮುನ್ನ,

ತೇಜ ತೇಜವ ಕೂಡದ ಮುನ್ನ,

ವಾಯು ವಾಯುವ ಕೂಡದ ಮುನ್ನ,

ಆಕಾಶ ಆಕಾಶವ ಕೂಡದ ಮುನ್ನ

ಪಂಚೇಂದ್ರಿಯಗಳೆಲ್ಲ ಹಂಚುಹಱಿಯಾಗದ ಮುನ್ನ

ಚೆನ್ನಮಲ್ಲಿಕಾರ್ಜುನಂಗೆ ಶರಣೆನ್ನಿರೆ!      ೧೦

            ಅಕ್ಕಮಹಾದೇವಿ ಈ ವಚನದಲ್ಲಿ, ಹುಟ್ಟಿದ ಮನುಷ್ಯ ಸಾಯುವುದಕ್ಕಿಂತ ಮೊದಲು ಚೆನ್ನಮಲ್ಲಿಕಾರ್ಜುನನಿಗೆ ಶರಣಾಗಬೇಕೆಂಬುದನ್ನು ಪಂಚಭೂತಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿವರಿಸಿದ್ದಾಳೆ.

            ಮನುಷ್ಯದೇ  ಪಂಚಭೂತಗಳಿಂದ ಸಿದ್ಧವಾಗಿರುವಂತಹುದು. ಮನುಷ್ಯ ಸತ್ತಮೇಲೆ ಆತನ ದೇಹ ಮತ್ತೆ ಪಂಚಭೂತಗಳಲ್ಲಿ ಸೇರಿಕೊಳ್ಳುತ್ತದೆ. ಭೂಮಿ, ನೀರು, ಅಗ್ನಿ, ವಾಯು, ಆಕಾಶ-ಇವೇ ಆ ಪಂಚಭೂತಗಳು.  ಮನುಷ್ಯದೇಹದಲ್ಲಿರುವ ಭೂಮಿ, ನೀರು, ಅಗ್ನಿ, ವಾಯು, ಹಾಗೂ ಆಕಾಶದ ಅಂಶಗಳು ಮನುಷ್ಯ ಸತ್ತ ಮೇಲೆ ದಹನದರೂಪದಲ್ಲಿಯೋ, ದಫನದ ರೂಪದಲ್ಲಿಯೋ ಮತ್ತೆ ಭೂಮಿಗೆ, ನೀರಿಗೆ, ಅಗ್ನಿಗೆ, ವಾಯುವಿಗೆ ಹಾಗೂ ಆಕಾಶಕ್ಕೆ  ಸೇರಿಕೊಳ್ಳುತ್ತವೆ. ಪಂಚಭೂತಗಳ ಅಂಶಗಳೆಲ್ಲವೂ ಹಂಚುಹರಿಯಾಗಿ ದೇಹವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಈ ಪಂಚಭೂತಗಳು ಒಂದಾಗಿದ್ದು ಮನುಷ್ಯದೇಹವನ್ನು ಹೊಂದಿದ್ದಾಗಲೇ ಆ ದೇಹಕ್ಕೊಂದು ಅಸ್ತಿತ್ವ.  ಇದು ಸಮಾಜದಲ್ಲಿ ಮನುಷ್ಯನ ಸ್ಥಾನ-ಮಾನಾದಿಗಳಿಗೆ ಕಾರಣವಾಗುತ್ತದೆ. ಪಂಚಭೂತಗಳಿಂದಾದ ಈ ದೇಹಕ್ಕೆ ಹುಟ್ಟಿನಿಂದ ಸಾಯುವಲ್ಲಿಯವರೆಗೆ ಮಾತ್ರ ಅಸ್ತಿತ್ವವಿರುವುದರಿಂದ ಅಷ್ಟರೊಳಗೆ ಮನುಷ್ಯ ತನ್ನ ಎಲ್ಲಾ ಕರ್ತವ್ಯಗಳನ್ನು ಮುಗಿಸಿಕೊಳ್ಳಬೇಕು. ಎಲ್ಲಕ್ಕಿಂತ ಮೊದಲು ಚೆನ್ನಮಲ್ಲಿಕಾಜುನನಿಗೆ ಶರಣಾಗಬೇಕು ಎಂಬುದನ್ನು ಅಕ್ಕ ಸ್ಪಷ್ಟಪಡಿಸುತ್ತಾಳೆ.

            ಮನುಷ್ಯನಾಗಿ ಹುಟ್ಟಿ ಒಂದಷ್ಟು ಕಾಲ ಬದುಕಿ ಆಯುಷ್ಯ ಮುಗಿದೊಡನೆ ಸತ್ತುಹೋದರೆ ಸಾಧನೆ ಏನೂ ಇರಲಾರದು. ಆತನಿಗೆ ದೈನಂದಿನ ಹಾಗೂ ಜೀವಮಾನದ ಕರ್ತವ್ಯಗಳು ಹಲವಾರು ಇರುತ್ತವೆ. ಅವುಗಳನ್ನು ಅಂದಂದೇ ಮುಗಿಸಬೇಕು. ನಾಳೆ ನೋಡೋಣ ಎಂದು ಮುಂದೂಡುತ್ತಿದ್ದರೆ ಅವುಗಳನ್ನು ಪೂರೈಸಲಾರದೆ ಅವು ಹಾಗೆಯೇ ಉಳಿದುಕೊಳ್ಳಬಹುದು. ಭಗವಂತನ ಆರಾಧನೆಯೂ ಹಾಗೆಯೇ. ನಾಳೆ ಪೂಜಿಸೋಣ, ನಾಡಿದ್ದು ಪೂಜಿಸೋಣ ಎಂದೆಲ್ಲ ತೀರ್ಮಾನಿಸಿ ಮುಂದೂಡುತ್ತಿದ್ದರೆ ಅದು ಎಂದಿಗೂ ಈಡೇರಲಾರದು. ಈ ದೇಹ ಭಗವಂತನ ಅನುಗ್ರಹದಿಂದ ರೂಪಿತವಾಗಿರುವಂತಹುದು. ಹಾಗಾಗಿ ಸಾವಿಗಿಂತ ಮೊದಲೇ ಭಗವಂತನಿಗೆ ಶರಣಾದರೆ ಆತನ ಅಳಿದುಳಿದ ಕರ್ತವ್ಯಗಳೆಲ್ಲವನ್ನೂ ಪೂರೈಸಿದಂತೆ. ಬದುಕಿನ ಅವಧಿಯಲ್ಲಿ ಅನಗತ್ಯ ಕಾಲಹರಣಕ್ಕಿಂತ ಚೆನ್ನಮಲ್ಲಿಕಾರ್ಜುನನಿಗೆ ಶರಣಾಗಿ ಬದುಕನ್ನು ಸಾರ್ಥಕಪಡಿಸಿಕೊಳ್ಳುವುದೇ ಮೇಲು ಎಂಬುದು ಅಕ್ಕಮಹಾದೇವಿಯ ನಿಲುವು.

 

ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ

ಆಯುಷ್ಯವೆಂಬ ರಾಶಿಯ ಅಳೆದು ತೀರದ ಮುನ್ನ

ಶಿವನ ನೆನೆಯಿರೇ, ಶಿವನ ನೆನೆಯಿರೇ!

ಈ ಜನ್ಮ ಬಳಿಕಿಲ್ಲ!

ಚೆನ್ನಮಲ್ಲಿಕಾರ್ಜುನದೇವರ ದೇವ

ಪಂಚಮಹಾಪಾತಕರೆಲ್ಲ ಮುಕ್ತಿವಡೆದರು!   ೧೧

            ಭಗವಂತನಿಗೆ ಶರಣಾಗುವುದು ಮನುಶ್ಯನ ಪ್ರಮುಖ ಕರ್ತವ್ಯಗಳಲ್ಲಿ ಒಂದು. ಹಾಗಾಗಿ ಮನುಷ್ಯನ ಆಯುಷ್ಯರಾಶಿ ತೀರಿಹೋಗುವುದಕ್ಕಿಂತ ಮೊದಲೇ ಚೆನ್ನಮಲ್ಲಿಕಾರ್ಜುನನಿಗೆ ಶರಣಾಗಬೇಕೆಂಬುದನ್ನು ಅಕ್ಕಮಹಾದೇವಿ ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾಳೆ.

            ಉದಯ ಹಾಗೂ ಅಸ್ತಮಾನ ಎಂಬುದು ಮನುಷ್ಯನ ಆಯುಷ್ಯವನ್ನು ಅಳೆಯುವ ಒಂದು ಕೊಳಗ ಎಂದು ಅಕ್ಕಮಹಾದೇವಿ ಪರಿಭಾವಿಸಿದ್ದಾಳೆ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ನಿರ್ದಿಷ್ಟವಾದ ಆಯುಷ್ಯ ಎಂಬುದಿರುತ್ತದೆ. ಅಕ್ಕಮಹಾದೇವಿ ಅದನ್ನು ’ಆಯುಷ್ಯರಾಶಿ’ ಎಂದು ಕರೆದಿದ್ದಾಳೆ.  ಉದಯದಿಂದ ಹಿಡಿದು ಅಸ್ತಮಾನದವರೆಗಿನ ಅವಧಿಯನ್ನು ಒಂದು ದಿನವೆಂದು (ರಾತ್ರಿಯನ್ನೂ ಸೇರಿಸಿಕೊಂಡು) ಪರಿಗಣಿಸಿದರೆ ಮನುಷ್ಯನ ಒಟ್ಟು ಆಯುಷ್ಯರಾಶಿಯ ಒಂದು ಭಾಗ ಮುಗಿದುಹೋಗುತ್ತದೆ. ಹೀಗೆಯೇ ಪ್ರತಿನಿತ್ಯವೂ ಒಂದೊಂದು ದಿನ ಕಳೆದುಹೋಗಿ ಆತನ ಆಯುಷ್ಯರಾಶಿ ಕ್ಷೀಣಿಸುತ್ತ  ಕೊನೆಗೊಂದು ದಿನ ಮನುಷ್ಯನ ಆಯುಷ್ಯರಾಶಿ ಮುಗಿದುಹೋಗುತ್ತದೆ. ಮನುಷ್ಯ ಅಳಿಯುತ್ತಾನೆ. ಹೀಗೆ ಒಮ್ಮೆ ಮುಗಿದುಹೋಯಿತೆಂದರೆ ಮತ್ತೆ ಆಯುಷ್ಯವಾಗಲೀ ಮರುಜನ್ಮವಾಗಲೀ ದೊರೆಯದು. ಹಾಗಾಗಿ ಅಷ್ಟರೊಳಗೆ ಪ್ರತಿಯೊಬ್ಬ ಮನುಷ್ಯನೂ ಶಿವನನ್ನು ನೆನೆಯಬೇಕು ಎಂಬುದು ಆಕೆಯ ನಿಲುವು. ಮನುಷ್ಯನಾಗಿ ಹುಟ್ಟಿದ ಮೇಲೆ ಕೇವಲ ಪುಣ್ಯವನ್ನೇ ಸಂಪಾದಿಸಲಾಗದು. ಒಂದಷ್ಟು ಪಾಪವೂ ಸಂಪಾದನೆಯಾಗಬಹುದು. ಪಾಪವನ್ನು ಸಂಪಾದಿಸಿ ಮುಕ್ತಿಪಡೆಯಲು ಅಸಾಧ್ಯ. ಆದರೆ ಆಯುಷ್ಯರಾಶಿ ಮುಗಿದುಹೋಗುವ ಮೊದಲೇ ಶಿವನನ್ನು ನೆನೆದರೆ ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳೆಲ್ಲ ನಿವಾರಣೆಯಾಗುತ್ತವೆ. ಪಂಚಮಹಾಪಾತಕರೆಲ್ಲ ಶಿವನನ್ನು ನೆನೆದು ಮುಕ್ತಿಯನ್ನು ಪಡೆದಿರುವಾಗ ಸಾಮಾನ್ಯ ಪಾಪಗಳನ್ನು ಮಾಡಿದವರೂ ಮುಕ್ತಿಯನ್ನು ಹೊಂದಲಾರರೇ?! ಎಂಬುದು ಅಕ್ಕನ ನಿಲುವು.

            ದಿನದಿಂದ ದಿನಕ್ಕೆ ಮನುಷ್ಯನ ಆಯುಷ್ಯ ಕಡಿಮೆಯಾಗುತ್ತ ಸಾಗುತ್ತದೆ. ತನ್ನ ಆಯುಷ್ಯರಾಶಿ ಯಾವಾಗ ಮುಗಿಯುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಹಾಗಾಗಿ ಪ್ರತಿಯೊಬ್ಬ ಮನುಷ್ಯನೂ ತನ್ನ ಕರ್ತವ್ಯಗಳನ್ನು ಆಯಾ ದಿನದಂದೇ ಮಾಡಿಮುಗಿಸಬೇಕು. ಇಲ್ಲದಿದ್ದರೆ ಅವು ಹಾಗೆಯೇ ಉಳಿದುಬಿಡುತ್ತವೆ. ಮನುಷ್ಯ ತನ್ನ ಜೀವಿತಾವಧಿಯಲ್ಲಿ ತಿಳಿದೋ ತಿಳಿಯದೆಯೋ ತಪ್ಪುಗಳನ್ನು, ಪಾಪಗಳನ್ನು ಮಾಡುತ್ತಾನೆ. ಪ್ರತಿಯೊಂದಕ್ಕೂ ಪರಿಹಾರ, ಪರಿಮಾರ್ಜನೆಗಳು ಇದ್ದೇ ಇವೆ. ತನ್ನ ಇಷ್ಟದೇವನಿಗೆ ಶರಣಾಗುವುದು ಅವುಗಳಲ್ಲೊಂದು. ನಿಷ್ಕಲ್ಮಶ ಮನಸ್ಸಿನಿಂದ  ಶಿವನಿಗೆ ಶರಣಾದರೆ ಆತ ಅನುಗ್ರಹಿಸುತ್ತಾನೆ. ಶಿವಾನುಗ್ರಹಕ್ಕೆ ಪಾತ್ರನಾದನೆಂದಾದರೆ ಅದು ಆತನಿಗೆ ಮುಕ್ತಿಯನ್ನು ಕರುಣಿಸುತ್ತದೆ. ಪಂಚಮಹಾಪಾತಕಗಳನ್ನು ಮಾಡಿರುವ ಪಾಪಿಗಳೇ ಶಿವನಿಗೆ ಶರಣಾಗಿ ಮುಕ್ತಿಯನ್ನು ಪಡೆದಿರುವಾಗ ಸಾಮಾನ್ಯ ಪಾಪಗಳನ್ನು ಮಾಡಿದವರು ಶಿವನಿಗೆ ಶರಣಾಗಿ ಮುಕ್ತಿಯನ್ನು ಹೊಂದಲು ಅವಕಾಶವಿರುವುದರಿಂದ ಪಾಪಿಗಳೆನಿಸಿಕೊಂಡು ಸಾಯದೆ, ಶಿವಾನುಗ್ರಹಕ್ಕೆ ಒಳಗಾಗಿ ಮುಕ್ತಿಯನ್ನು ಹೊಂದುವುದು ಒಳಿತು ಎಂದು ಅಕ್ಕ ಸ್ಪಷ್ಟಪಡಿಸುತ್ತಾಳೆ.

(ಪಂಚಮಹಾಪಾತಕಗಳು: ಬ್ರಹ್ಮಹತ್ಯೆ, ಸುರಾಪಾನ, ಕಳ್ಳತನ; ಗುರುಪತ್ನಿಯನ್ನು ಕಾಮಿಸುವುದು ಮತ್ತು ಇವುಗಳನ್ನು ಮಾಡಿದವರ ಸಹವಾಸ.)         

 

ಬಂಜೆ ಬೇನೆಯನಱಿವಳೆ?

ಮಲತಾಯಿ ಮುದ್ದ ಬಲ್ಲಳೆ?

ನೊಂದ ನೋವ ನೋಯದವರೆತ್ತ ಬಲ್ಲರು?

ಚೆನ್ನಮಲ್ಲಿಕಾರ್ಜುನನಿಱಿದಲಗು ಒಡಲಲ್ಲಿ ಮುರಿದು

ಹೊರಳುವೆನ್ನಳಲನು ನೀವೆತ್ತ ಬಲ್ಲಿರೇ, ಎಲೆ ತಾಯಿಗಳಿರಾ!  ೧೨

                ಇದು ಅಕ್ಕನ ಬದುಕಿನ ವಿಮರ್ಶೆ. ಆಕೆ ತನ್ನ ಬದುಕಿನ ಘಟನೆಗಳನ್ನು ‘ಬಂಜೆಯ ಬೇನೆ’ ಹಾಗೂ ‘ಮಲತಾಯಿಯ ಮುದ್ದು’ ಎಂಬ ಎರಡು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸಿದ್ದಾಳೆ. ಲೋಕದಲ್ಲಿ ಬಂಜೆಯಾದವಳಿಗೆ ಹೆರಿಗೆಯ ನೋವಿನ ತೀವ್ರತೆ, ಹಿಂಸೆಗಳು ತಿಳಿಯವು. ನಾಲ್ಕು ಮಕ್ಕಳನ್ನು ಹೆತ್ತವಳಿಗೂ ಹೆರುವುದು ಹೇಗೆಂದು ಹೇಳಿಕೊಟ್ಟಾಳು! ಹಾಗೆಯೇ ಮಲತಾಯಿ ತನ್ನ ಸವತಿಯ ಮಕ್ಕಳನ್ನು ಮುದ್ದುಮಾಡಲು ತಿಳಿಯಳು. ತಾನೊಬ್ಬ ತಾಯಿಯಾದರೂ ತನ್ನಂತೆಯೇ ಇರುವ ಇನ್ನೊಬ್ಬ ತಾಯಿಯ ಕಷ್ಟಗಳನ್ನು ಅಥವಾ ಆಕೆಯ ಮಕ್ಕಳ ಸುಖಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಅಸಮರ್ಥಳು. ಹಾಗಾಗಿ ಅನುಭವಿಸಿದ ನೋವು ನೊಂದವರಿಗಲ್ಲದೆ ನೋಯದವರಿಗೆ ಅರ್ಥವಾಗದು. ನೋಯಿಸುವವರಿಗೂ ಕೂಡಾ.

                ಅಕ್ಕಮಹಾದೇವಿ ಅಂದಿನ ಸಾಮಾಜಿಕ ಕಟ್ಟಳೆಗಳನ್ನು ಮೀರಿ ಒಲ್ಲದ ಗಂಡ ಕೌಶಿಕನನ್ನು ತ್ಯಜಿಸಿ, ಹುಟ್ಟುಡುಗೆಯಲ್ಲಿ ಚೆನ್ನಮಲ್ಲಿಕಾರ್ಜುನನನ್ನು ಹುಡುಕಿಕೊಂಡು ಹೊರಟು ಪರಿತಪಿಸಿದವಳು. ಆಕೆಯದು ಲೋಕಕ್ಕೆ ವ್ಯತಿರಿಕ್ತವಾದ, ಅಸಹಜವಾದ ಪ್ರೇಮ ಹಾಗೂ ದಾಂಪತ್ಯ ಪರಿಕಲ್ಪನೆ. ಗಂಡ ಕೌಶಿಕನ ಕಾಮಲೋಲುಪತೆಯನ್ನು ವಿರೋಧಿಸುವುದಕ್ಕೆ ಬಟ್ಟೆಯೆಲ್ಲವನ್ನೂ ಕಳಚಿ ನಗ್ನಳಾಗಿ ನಿಲ್ಲುವ ಆಕೆಯ ಮನಃಸ್ಥಿತಿಯ ಒಳಹೊರಗಾಗಲೀ ಅದೇ ಸ್ಥಿತಿಯಲ್ಲಿ ಚೆನ್ನಮಲ್ಲಿಕಾರ್ಜುನನನ್ನು ಅರಸಿಕೊಂಡು ಹೊರಡುವ ಆಕೆಯ ತೀವ್ರವಾದ ಮಾನಸಿಕ ತುಡಿತವನ್ನಾಗಲೀ ದಾರಿಯುದ್ದಕ್ಕೂ ಕಾಮುಕಪುರುಷರಿಂದ ಒದಗಿದ ಅವಮಾನ, ಹಿಂಸೆಗಳನ್ನಾಗಲೀ ಜೀವಮಾನದುದ್ದಕ್ಕೂ ಆಕೆ ಅನುಭವಿಸಿದ ವ್ಯತಿರಿಕ್ತವಾದ, ವಿಲಕ್ಷಣವಾದ ಅನುಭವಗಳನ್ನಾಗಲೀ ಚೆನ್ನಮಲ್ಲಿಕಾರ್ಜುನನನ್ನು ಕಾಣದೆ ಕ್ಷಣಕ್ಷಣಕ್ಕೂ ಅನುಭವಿಸುವ ತಳಮಳ, ಅಸಹಾಯಕತೆಗಳನ್ನಾಗಲೀ  ಪುರುಷರು ಹಾಗಿರಲಿ, ಸ್ತ್ರೀಯರೂ ಅರ್ಥಮಾಡಿಕೊಳ್ಳಲಿಲ್ಲ.  

                ಅಕ್ಕನದು ಚೆನ್ನಮಲ್ಲಿಕಾರ್ಜುನನೊಂದಿಗಿನ ಅಲೌಕಿಕಪ್ರೇಮ ಹಾಗೂ ಅಲೌಕಿಕದಾಂಪತ್ಯ. ಅದರ ಮಹತ್ವ, ಅದರ ಆಳ-ಹರಹುಗಳು ಅವಳಿಗಲ್ಲದೆ ಲೋಕದ ಇತರ ಮಹಿಳೆಯರಿಗೆ ಅರಿಯವು. ಬಂಜೆ ಬೇನೆ ಅರಿಯದಂತೆ, ಮಲತಾಯಿ ಮುದ್ದ ಅರಿಯದಂತೆ. ಪ್ರತಿಯೊಬ್ಬರಿಗೂ ಮಿತಿಗಳು ಇರುವುದು ಸಹಜವಾದರೂ ಅವುಗಳನ್ನು ಮೀರಿನಿಲ್ಲುವ ಪ್ರಯತ್ನವನ್ನೇ ಮಾಡದಿರುವುದು ವಿಪರ್ಯಾಸ. ಚೆನ್ನಮಲ್ಲಿಕಾರ್ಜುನ ಆಕೆಯಲ್ಲಿ ಹುಟ್ಟಿಸಿದ ಪ್ರೇಮಕಾಮಗಳು ಆಕೆಯ ದೇಹಕ್ಕೆ ಅಲಗಿನಂತೆ ಇರಿಯುತ್ತಿವೆ. ಅಥವಾ ಆಯುಧದ ತುಣುಕೊಂದು ತುಂಡಾಗಿ ದೇಹದೊಳಗೆ ಉಳಿದುಕೊಂಡು ಸಿಡಿಯುತ್ತ ಹಿಂಸಿಸುವ ಹಾಗೆ ಚೆನ್ನಮಲ್ಲಿಕಾರ್ಜುನ ತನ್ನಲ್ಲಿ ಉದಿಸುವಂತೆ ಮಾಡಿದ ‘ಪ್ರೇಮ’ ಅಲಗಿನ ತುಣುಕಿನಂತೆ ದೇಹದೊಳಗೆ ಉಳಿದುಕೊಂಡು ತನ್ನನ್ನು ಹಿಂಸಿಸುತ್ತಿರುವ ನೋವನ್ನು ಲೋಕದ ಇತರ ಮಹಿಳೆಯರು ಹೇಗೆ ಅರಿಯಬಲ್ಲರು? ಎಂಬುದು ಅಕ್ಕನ ಪ್ರಶ್ನೆ. ಏಕೆಂದರೆ ಇದು ಅಕ್ಕನಿಗೆ ಮಾತ್ರ ಎದುರಾದ ಸಮಸ್ಯೆ.

 

ಮರವಿದ್ದು ಫಲವೇನು? ನೆಳಲಿಲ್ಲದನ್ನಕ!

ಧನವಿದ್ದು ಫಲವೇನು? ದಯವಿಲ್ಲದನ್ನಕ!

ಹಸುವಿದ್ದು ಫಲವೇನು? ಹಯನಿಲ್ಲದನ್ನಕ!

ರೂಪಿದ್ದು ಫಲವೇನು? ಗುಣವಿಲ್ಲದನ್ನಕ!

ಅಗಲಿದ್ದು ಫಲವೇನು? ಬಾನವಿಲ್ಲದನ್ನಕ!

ನಾನಿದ್ದು ಫಲವೇನು? ನಿಮ್ಮ ಜ್ಞಾನವಿಲ್ಲದನ್ನಕ!

ಚೆನ್ನಮಲ್ಲಕಾರ್ಜುನ!    ೧೩

            ಅಕ್ಕನ ಈ ವಚನ ಭಕ್ತನ ಪರಿಪೂರ್ಣತೆಯ ಅವಶ್ಯಕತೆಯನ್ನು ಸಾರುತ್ತದೆ. ಇನ್ನೊಂದರ್ಥದಲ್ಲಿ ಇದು ಭಕ್ತನ ಬಗೆಗಿನ ಅಕ್ಕಮಹಾದೇವಿಯ ಒಂದು ಅರ್ಥಪೂರ್ಣವ್ಯಾಖ್ಯೆ. ಭಗವಂತನ ಜ್ಞಾನವಿಲ್ಲದೆ ಬದುಕಿಯೂ ಏನು ಪ್ರಯೋಜನ? ಎಂಬುದನ್ನು ಅಕ್ಕ ಇಲ್ಲಿ ಐದು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸಿದ್ದಾಳೆ.

            ಮೊದಲನೆಯದು ನೆರಳನ್ನು, ಹಣ್ಣುಹಂಪಲುಗಳನ್ನು, ಪ್ರಾಣವಾಯುವನ್ನು ನೀಡುವುದು   ಪ್ರತಿಯೊಂದು ಮರದ ಮೂಲಭೂತಗುಣ. ಆ ನೆರಳು ಪಕ್ಷಿಗಳಿಗೆ, ಪ್ರಾಣಿಗಳಿಗೆ, ಮನುಷ್ಯರಿಗೆ ಆಶ್ರಯತಾಣ. ನೆರಳನ್ನೇ ನೀಡದ ಮರದಿಂದ ಪ್ರಯೋಜನವಾದರೂ ಏನು?   ಎರಡನೆಯದು, ದಯೆ ಮನುಷ್ಯನಲ್ಲಿ ಇರಲೇಬೇಕಾದ ಒಂದು ಮೌಲ್ಯ. ಅದು ಸಹಬಾಳ್ವೆಗೆ, ಸಾಮರಸ್ಯಕ್ಕೆ ಮೂಲ. ದಯೆಯೇ ಇಲ್ಲದ ಮನುಷ್ಯನಲ್ಲಿ ಎಷ್ಟು ಹಣವಿದ್ದರೂ ಅದು ಆತನ ನಿರ್ದಯತೆಯಿಂದಾಗಿ ಮಹತ್ವವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ದಯೆಯೇ ಇಲ್ಲದ ಮನುಷ್ಯನಲ್ಲಿ ಹಣವಿದ್ದು ಪ್ರಯೋಜನವೇನು?

            ಮೂರನೆಯದು, ಈಯುವುದು ಮತ್ತು ಹಾಲು ಕೊಡುವುದು ಹಸುವಿನ ಮೂಲಭೂತಗುಣ. ಅದು ತನ್ನ ಜೀವಿತಾವಧಿಯನ್ನು ಹಾಲುಕೊಡುವುದರ ಮೂಲಕ ಸಾರ್ಥಕಗೊಳಿಸುತ್ತದೆ. ಅದರಿಂದ ಹಾಲು, ಮೊಸರು, ಬೆಣ್ಣೆ, ತುಪ್ಪ ಮಾತ್ರವಲ್ಲದೆ ಬೆರಣಿ, ಕೃಷಿಗೆ ಗೊಬ್ಬರ-ಹೀಗೆ ಹಲವು ಕಾರ್ಯಗಳು ಸಾಧಿತವಾಗುತ್ತವೆ. ಆದರೆ ಈಯದ, ಹಾಲು ಕೊಡದ ಹಸುವಿನಿಂದ ಪ್ರಯೋಜನವಾದರೂ ಏನು? ನಾಲ್ಕನೆಯದು ರೂಪ. ಮನುಷ್ಯನಾಗಿ ಹುಟ್ಟಿದವನಿಗೆ ಸುಂದರರೂಪವಿದ್ದು ನೋಡುವವರೆಲ್ಲರಿಗೂ ಖುಷಿಯೆನಿಸಬೇಕು ಎನ್ನುವುದು ಎಲ್ಲರ ನಿರೀಕ್ಷೆ ಕೂಡಾ. ರೂಪಕ್ಕೆ ಅನುರೂಪವಾದ ಗುಣಗಳನ್ನು ಮನುಷ್ಯನಲ್ಲಿ ನಿರೀಕ್ಷಿಸುವುದು ತಪ್ಪಲ್ಲ. ರೂಪಕ್ಕೆ ಅನುರೂಪವಾದ ಗುಣಗಳಿದ್ದರೆ ಆತನ ರೂಪಕ್ಕೆ ಇನ್ನಷ್ಟು ಮಹತ್ವ, ಗೌರವ. ಆದರೆ ಆ ರೂಪಕ್ಕೆ ಪೂರಕವಾದ ಗುಣವೇ ಇಲ್ಲದಿದ್ದರೆ ರೂಪಕ್ಕೇನು ಬೆಲೆ? ರೂಪ, ಗುಣಗಳಿಂದ ಶೋಭಿಸದಿದ್ದರೆ ಅಂತಹ ರೂಪದಿಂದ ಪ್ರಯೋಜನವಾದರೂ ಏನು?

            ಐದನೆಯದು ಊಟದ ಬಟ್ಟಲು. ತೃಪ್ತಿಯ ಭೋಜನದಲ್ಲಿ ಬಟ್ಟಲಿನ ದೇಣಿಗೆಯೂ ಇರುತ್ತದೆ. ಚಿನ್ನ, ಬೆಳ್ಳಿ, ಕಂಚು, ಹಿತ್ತಾಳೆ ಬಟ್ಟಲುಗಳು ಅವರವರ ಯೋಗ್ಯತೆಗೆ ಅನುಗುಣವಾಗಿ ಇರುತ್ತವೆ. ಊಟದ ವ್ಯಂಜನಗಳನ್ನು ತನ್ನೊಳಗೆ ಇರಿಸಿಕೊಂಡು ಮನುಷ್ಯನನ್ನು ತೃಪ್ತಿಪಡಿಸಲು  ಬಟ್ಟಲು ಪ್ರಶಸ್ತವಾಗಿದ್ದರೂ ಉಣ್ಣುವುದಕ್ಕೆ ಅನ್ನವಾಗಲೀ ಪಲ್ಯಗಳಾಗಲೀ ಇಲ್ಲದಿದ್ದರೆ ಏನು ಪ್ರಯೋಜನ? ಬಟ್ಟಲನ್ನು ನೋಡಿದ ತಕ್ಷಣ ಹಸಿವೆ ತೀರಲು ಸಾಧ್ಯವೇ?

            ಈ ಐದು ದೃಷ್ಟಾಂತಗಳ ಮೂಲಕ ಅಕ್ಕ ಚೆನ್ನಮಲ್ಲಿಕಾರ್ಜುನನ ಜ್ಞಾನವಿಲ್ಲದಿದ್ದರೆ ತಾನು ಬದುಕಿದ್ದೂ ಪ್ರಯೋಜನವೇನು? ಎಂದು ತನ್ನನ್ನೇ ಪ್ರಶ್ನಿಸುತ್ತಾಳೆ. ’ವ್ಯಕ್ತಿಯೊಬ್ಬ ನೆರಳನ್ನೀಯುವ ಮರವಾಗಿ, ದಯಾಮಯನಾದ ಸಿರಿವಂತನಾಗಿ, ಹಾಲನ್ನೀಯುವ ಹಸುವಾಗಿ, ಗುಣವುಳ್ಳ ರೂಪವಂತನಾಗಿ, ಅನ್ನವನ್ನು ತುಂಬಿರುವ ಬಟ್ಟಲಾಗಿ, ಭಗವಂತನ ಜ್ಞಾನವುಳ್ಳ ಭಕ್ತನೆನಿಸಿಕೊಳ್ಳಬೇಕು’ ಎಂಬುದು ಆಕೆಯ ನಿಲುವು. ಮೇಲು ನೋಟಕ್ಕೆ ಇದು ಅಕ್ಕನ ಆತ್ಮವಿಮರ್ಶೆಯ ವಚನದಂತೆ ಕಂಡರೂ ಸಮಸ್ತರ ಆತ್ಮವಿಮರ್ಶೆಗೂ ಒದಗಬಹುದಾದ ವಚನ.

            ಅಕ್ಕನ ಪ್ರಕಾರ, ಭಕ್ತನಾದವನು ಮೊದಲು ತನ್ನನ್ನು ತಾನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಈ ಪ್ರಯತ್ನದಲ್ಲಿ ತನ್ನಲ್ಲಿನ ಲೋಪದೋಷಗಳು ನಿವಾರಣೆಯಾಗುತ್ತ ಭಗವಂತನ ಜ್ಞಾನ ಪ್ರಾಪ್ತವಾಗತೊಡಗುತ್ತದೆ. ದೇವರ ಅಸ್ತಿತ್ವ ಹಾಗೂ ಆತನ ಸ್ವರೂಪಗಳನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸದೆ, ಭಯಭಕ್ತಿಗಳನ್ನು ಹೊಂದದೆ ಜ್ಞಾನಸಂಪಾದನೆಯಾದರೂ ಹೇಗೆ ಸಾಧ್ಯ? ಭಗವಂತನ ಜ್ಞಾನವಿಲ್ಲದ ಭಕ್ತ ನೆರಳಿಲ್ಲದ ಮರಕ್ಕೆ, ದಯವಿಲ್ಲದ ಧನಕ್ಕೆ, ಹಯನಿಲ್ಲದ ಹಸುವಿಗೆ, ಗುಣವಿಲ್ಲದ ರೂಪಕ್ಕೆ, ಅನ್ನವಿಲ್ಲದ ಬರೀ ತಟ್ಟೆಗೆ ಸಮಾನವೆನಿಸಿಕೊಳ್ಳುತ್ತಾನೆ. ಆಕೆ ಹೇಳುವಂತೆ, ಮನುಷ್ಯ ಮೂಲಭೂತ ಅರ್ಹತೆಗಳನ್ನು ಮೊದಲು ಆರ್ಜಿಸಿಕೊಳ್ಳಬೇಕು. ಅದಿಲ್ಲದೆ ಕೈಗೊಳ್ಳುವ ಯಾವ ಕೆಲಸವೂ ವ್ಯರ್ಥ. ಅಕ್ಕ ತನ್ನನ್ನೇ ಕೇಂದ್ರೀಕರಿಸಿಕೊಂಡು ಸಮಾಜದ ಇತರ ಡಾಂಭಿಕರನ್ನು ಈ ವಚನದಲ್ಲಿ ವಿಡಂಬನೆಮಾಡಿದ್ದಾಳೆ. ತನ್ನ ಕಾಲದಲ್ಲಿ ಅನ್ಯರನ್ನು ಅನುಕರಿಸುತ್ತ ಭಕ್ತನಂತೆ ವೇಷಧರಿಸಿಕೊಂಡು ತನ್ನನ್ನೂ ವಂಚಿಸಿಕೊಳ್ಳುತ್ತ, ಸಮಾಜವನ್ನೇ ವಂಚಿಸುತ್ತಿದ್ದ ಡಾಂಭಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಅಕ್ಕ ಈ ಮಾತುಗಳನ್ನು ಆಡಿದ್ದಾಳೆ.

 

ಚಂದನವ ಕಡಿದು ಕೊಱೆದು ತೇದೊಡೆ

ನೊಂದೆನೆಂದು ಕಂಪ ಬಿಟ್ಟಿತ್ತೆ?

ತಂದು ಸುವರ್ಣವ ಕಡಿದೊಱೆದೊಡೆ ಬೆಂದು ಕಳಂಕ ಹಿಡಿದಿತ್ತೆ?

ಸಂದು ಸಂದನು ಕಡಿದು ಕಬ್ಬನು ತಂದು ಗಾಣದಲಿಕ್ಕಿ ಅರೆದಡೆ

ಬೆಂದು ಪಾಕಗುಡದೆ ಸಕ್ಕರೆಯಾಗಿ ನೊಂದೆನೆಂದು ಸವಿಯ ಬಿಟ್ಟಿತ್ತೆ?

ನಾ ಹಿಂದೆ ಮಾಡಿದ ಹೀನಂಗೆಳೆಲ್ಲವ ತಂದು ಮುಂದಿಳುಹಲು

ನಿಮಗೆ ಹಾನಿ!

ಎನ್ನ ತಂದೆ ಚೆನ್ನಮಲ್ಲಿಕಾರ್ಜುನದೇವಯ್ಯ,

ಕೊಂದೊಡೆ ಶರಣೆಂಬುದ ಮಾಣೆ.   ೧೪

            ಲೋಕದಲ್ಲಿ ಪ್ರತಿಯೊಂದು ವಸ್ತುಗಳಿಗೂ ಸಹಜಸ್ವಭಾವ ಎಂಬುದಿರುತ್ತದೆ. ಅದು ಯಾವ ಪರಿವರ್ತನೆಗೂ ಒಳಗಾಗದೆ ಸಹಜವಾಗಿಯೇ ಉಳಿಯುತ್ತದೆ ಎಂಬುದನ್ನು ಅಕ್ಕ ಇಲ್ಲಿ ಮೂರು ದೃಷ್ಟಾಂತಗಳ ಮೂಲಕ ವಿವರಿಸಿದ್ದಾಳೆ.

            ಮೊದಲನೆಯ ದೃಷ್ಟಾಂತವೆಂದರೆ, ಚಂದನ ಕಂಪನ್ನು ನೀಡುವ ಮರವಾಗಿದ್ದು, ಅದನ್ನು ಕಡಿದು ತುಂಡರಿಸಿದರೂ ಕೊರೆದರೂ ತೇದರೂ ಅದು ತನ್ನಕಂಪನ್ನು ಬಿಡಲಾರದು. ಕಂಪು ಅದರ ಮೂಲಭೂತವಾದ ಒಂದು ಗುಣ. ಅದು ಅದರ ಸಹಜ ಸ್ವಾಭಾವ. ಮರವನ್ನು ಕಡಿಯುವುದರಿಂದ, ಕೊರೆಯುವುದರಿಂದ, ತೇಯುವುದರಿಂದ ಅದರ ಸಹಜವಾದ ಕಂಪನ್ನು ಬೀರುವ ಗುಣಕ್ಕೆ ಒಂದಿಷ್ಟೂ ಚ್ಯುತಿ ಉಂಟಾಗುವುದಿಲ್ಲ.

            ಎರಡನೆಯ ದೃಷ್ಟಾಂತವೆಂದರೆ, ಸುವರ್ಣ(ಚಿನ್ನ)ವನ್ನು ತಂದು ಕುಲುಮೆಯಲ್ಲಿ ಬಿಸಿಮಾಡಿದರೂ, ತುಂಡರಿಸಿದರೂ, ಒರೆಗಲ್ಲಿಗೆ ತೇದರೂ ಅದರ ಹೊಳಪಿಗೆ ಕಳಂಕ ಒದಗಲಾರದು. ಅದು ಪ್ರಶಸ್ತವಾದ ಚಿನ್ನವಾಗಿಯೇ ಉಳಿದು ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತದೆ. ಅದರ ಶ್ರೇಷ್ಠತೆಗೆ ಯಾವ ಚ್ಯುತಿಯೂ ಒದಗುವುದಿಲ್ಲ.

            ಮೂರನೆಯ ದೃಷ್ಟಾಂತವೆಂದರೆ, ಕಬ್ಬನ್ನು ತಂದು, ಅದರ ಸಂದು ಸಂದನ್ನು ಕಡಿದು, ಗಾಣದಲ್ಲಿ ಇಕ್ಕಿ ಅರೆದರೂ, ಅದನ್ನು ಬೇರೆಬೇರೆ ಪ್ರಕ್ರಿಯೆಗಳ ಮೂಲಕ ಸಕ್ಕರೆಯಾಗಿ ಪರಿವರ್ತಿಸಿದರೂ ಕಬ್ಬು ನೊಂದು ತನ್ನ ಸಿಹಿಗುಣವನ್ನು ಬಿಟ್ಟುಬಿಡಲಾರದು. ಕಬ್ಬನ್ನು ತುಂಡರಿಸಿ, ಅರೆದು, ರಸತೆಗೆದು, ಕುದಿಸಿದರೂ ಅದರ ಸಿಹಿಗುಣಕ್ಕೆ ಎಳ್ಳಷ್ಟೂ ಧಕ್ಕೆಯೊದಗಲಾರದು.

            ಅಕ್ಕ ಈ ಮೂರು ದೃಷ್ಟಾಂತಗಳನ್ನು ತನ್ನ ವೈಯಕ್ತಿಕ ಬದುಕಿಗೆ ಅನ್ವಯಿಸಿಕೊಂಡು, ಚಂದನ ಹಲವು ರೀತಿಯ ಪ್ರಕ್ರಿಯೆಗಳಿಗೆ ಒಳಗಾದರೂ ಪ್ರಶಸ್ತವಾದ ಗಂಧವನ್ನೂ ಚಿನ್ನ ಹಲವು ವಿಧಧ ಪ್ರಕ್ರಿಯೆಗಳನ್ನು ದಾಟಿದರೂ ಸುಂದರವಾದ ಆಭರಣವನ್ನೂ ಕಬ್ಬು ಹಲವು ಪ್ರಕ್ರಿಯೆಗಳನ್ನು ದಾಟಿ ಸವಿಯಾದ ಸಕ್ಕರೆಯನ್ನು ನೀಡುವಂತೆ ತಾನೂ ತನ್ನ ವೈಯಕ್ತಿಕ ಬದುಕಿನಲ್ಲಿ ಹತ್ತಾರು, ನೂರಾರು ಕಷ್ಟ-ನಷ್ಟಗಳನ್ನು, ಹಿಂಸೆ-ಅವಮಾನಗಳನ್ನು ಎದುರಿಸಿ ತನ್ನೆಲ್ಲ ನ್ಯೂನತೆಗಳನ್ನು ಕಳೆದುಕೊಂಡಿದ್ದೇನೆ. ಈ ಸ್ಥಿತಿಯಲ್ಲಿ ನಾನು ಹಿಂದೆ ಮಾಡಿದ ಹೀನಕಾರ್ಯಗಳೆಲ್ಲವನ್ನೂ ಈಗ ಪರಿಗಣಿಸಿದರೆ ಅದು ಭಗವಂತನಿಗೆ ಹಾನಿ ಎನಿಸಿಕೊಳ್ಳುತ್ತದೆ. ತುಂಡರಿಸಿ ತೇದ ಚಂದನ,  ಕಡಿದು ಒರೆದ ಸುವರ್ಣ, ತುಂಡರಿಸಿ ಅರೆದ ಕಬ್ಬು ಹೇಗೆ ತ್ಯಾಜ್ಯವಲ್ಲವೋ ಹಾಗೆಯೇ ತನ್ನೆಲ್ಲ ನ್ಯೂನತೆಗಳನ್ನು ಕಳೆದುಕೊಂಡು ಪುಟಗೊಂಡಿರುವ ತಾನು ಹೇಗೆ ಚೆನ್ನಮಲ್ಲಿಕಾರ್ಜುನನಿಂದ ಹೇಗೆ ನಿರಾಕೃತಗೊಂಡೇನು?! ಅದು ಚೆನ್ನಮಲ್ಲಿಕಾರ್ಜುನನಿಗೆ ಶೋಭೆ ಎನಿಸದೆ, ಹಾನಿ ಎನಿಸಿಕೊಳ್ಳುತ್ತದೆ. ಒಂದು ವೇಳೆ ಚೆನ್ನಮಲ್ಲಿಕಾರ್ಜುನ ತನ್ನನ್ನು ನಿರಾಕರಿಸಿ ತನ್ನನ್ನು ಕೊಂದರೂ ತಾನು ಮಾತ್ರ ನಿರಂತರ ಆತನಿಗೆ ಶರಣಾಗಿಯೇ ಇರುತ್ತೇನೆ ಎಂದು ಅಕ್ಕ ಸ್ಪಷ್ಟಪಡಿಸುತ್ತಾಳೆ.

            ತಾವು ಶಿಕ್ಷೆಗೆ ಒಳಗಾಗಿ ಚಂದನವು ಕಂಪನ್ನು  ಬೀರುವಂತೆ, ಸುವರ್ಣವು ಹೊಳಪನ್ನು ಬೀರುವಂತೆ, ಹಾಗೂ ಕಬ್ಬು ಸಿಹಿಯನ್ನು ನೀಡುವಂತೆ ಮನುಷ್ಯನೂ ತನ್ನ ಬದುಕಿನಲ್ಲಿ ಹತ್ತಾರು ಪರೀಕ್ಷೆಗಳಿಗೆ, ಶಿಕ್ಷೆಗಳಿಗೆ ಒಳಗಾಗಿ ತನ್ನೆಲ್ಲ ತಪ್ಪುಗಳನ್ನು ತಿದ್ದಿಕೊಂಡು ಪುಟಗೊಳ್ಳುತ್ತಾನೆ. ಭಗವಂತ ಅಂತಹವರನ್ನು ಮತ್ತೆ ಮತ್ತೆ ಪರೀಕ್ಷಿಸುವುದು, ನಿರಾಕರಿಸುವುದು ಅಕ್ಕನಲ್ಲಿ ಕಸಿವಿಸಿಯನ್ನು  ಉಂಟುಮಾಡುತ್ತದೆ.  ಅಕ್ಕ ತನ್ನ ವೈಯಕ್ತಿಕ ಬದುಕಿನಲ್ಲಿ ಹಲವು ಏರಿಳಿತಗಳನ್ನು, ಹಿಂಸೆ-ಅವಮಾನಗಳನ್ನು ಅನುಭವಿಸಿದವಳು. ತನ್ನ ತಂದೆ ತಾಯಿಯರ ಮಾತನ್ನು ಮೀರಲಾರದೆ ಊರಿನ ರಾಜ ಕೌಶಿಕನನ್ನು ಮದುವೆಯಾದವಳು. ಮನಸ್ಸಿನಲ್ಲಿ ಚೆನ್ನಮಲ್ಲಿಕಾರ್ಜುನನನ್ನೇ ಗಂಡ ಎಂದು ಭಾವಿಸಿಕೊಂಡರೂ ಕೌಶಿಕನನ್ನು ಗಂಡನೆಂದು ಒಪ್ಪಿಕೊಳ್ಳಬೇಕಾಯಿತು. ಮುಂದೆ ಆತನನ್ನು ಬಿಟ್ಟು ಹುಟ್ಟುಡುಗೆಯಲ್ಲಿ ಹೊರಟಾಗ ಲೋಕದ ಜನರ ಕೆಟ್ಟದೃಷ್ಟಿಗೆ ಗುರಿಯಾಗಬೇಕಾಯಿತು.  ಚೆನ್ನಮಲ್ಲಿಕಾರ್ಜುನ ತನ್ನನ್ನು ಒಪ್ಪಿಕೊಳ್ಳಲು ನಿಧಾನಿಸುವುದಕ್ಕೆ ಇದೇ ಕಾರಣವಿರಬಹುದು ಎಂದು ಆಕೆ ತರ್ಕಿಸುತ್ತಾಳೆ.

 

ಹಣ್ಣ ಮೆದ್ದ ಬಳಿಕ, ಆ ಮರನ ಆರು ತಱಿದರೇನು?

ಹೆಣ್ಣ ಬಿಟ್ಟ ಬಳಿಕ, ಅಕೆಯನಾರು ಕೂಡಿಕೊಂಡರೇನು?

ಮಣ್ಣ ಬಿಟ್ಟ ಬಳಿಕ, ಆ ಕೆಯ್ಯನಾರುತ್ತರೇನು?

ಚೆನ್ನಮಲ್ಲಿಕಾರ್ಜುನನ ಅಱಿದ ಬಳಿಕ

ಆ ಕಾಯವ ನಾಯಿ ತಿಂದರೇನು? ನೀರು ಕುಡಿದರೇನು?!  ೧೫

            ಭಗವಂತನ ಅನುಗ್ರಹವಾದ ಮೇಲೆ ದೇಹದ ಹಂಗಿರುವುದಿಲ್ಲ ಎಂಬುದನ್ನು ಅಕ್ಕಮಹಾದೇವಿ ಮೂರು ದೃಷ್ಟಾಂತಗಳ ಮೂಲಕ ಒಂದು ಕಾರ್ಯ ಪೂರ್ಣಗೊಂಡ ಮೇಲೆ ಅದಕ್ಕೆ ಕಾರಣವಾಗುವ ವಸ್ತುವಿನ ಹಂಗಿಗೆ ಒಳಗಾಗಬೇಕಾಗಿಲ್ಲ ಎಂಬುದನ್ನು ಅಕ್ಕ ಈ ವಚನದಲ್ಲಿ ವಿವರಿಸಿದ್ದಾಳೆ.

            ಮೊದಲನೆಯ ದೃಷ್ಟಾಂತವೆಂದರೆ, ಹಣ್ಣುಗಳನ್ನು ನೀಡುವುದು ಮರಗಳ ಮರಗಳ ಸಹಜಗುಣವಾದರೆ, ಅವುಗಳನ್ನು ಮೆಲ್ಲುವುದು ಮನುಷ್ಯರ, ಪ್ರಾಣಿ-ಪಕ್ಷಿಗಳ ಸಹಜಗುಣ. ಹಣ್ಣುಗಳನ್ನು ತಿಂದ ಬಳಿಕ ಮನುಷ್ಯನಿಗಾಗಲೀ, ಪ್ರಾಣಿ-ಪಕ್ಷಿಗಳಿಗಾಗಲೀ ಆ ಮರದ ಹಂಗಿರುವುದಿಲ್ಲ. ಆ ಮರವನ್ನು ಯಾರೂ ಕಡಿದು ಉಳಿಸಿದರೂ ಮನುಷ್ಯನಾಗಲೀ, ಪ್ರಾಣಿ-ಪಕ್ಷಿಗಳಾಲೀ ಚಿಂತಿಸುವ ಅಗತ್ಯವಿರುವುದಿಲ್ಲ.

            ಎರಡನೆಯ ದೃಷ್ಟಾಂತವೆಂದರೆ, ಹೆಣ್ಣು ಸಮಾಜವ್ಯವಸ್ಥೆಯಲ್ಲಿ ಹೆತ್ತವರ ಆರೈಕೆಯಲ್ಲಿ, ಗಂಡನ ಆರೈಕೆಯಲ್ಲಿ ಬದುಕುವವಳು. ಆಕೆಯನ್ನು  ಯುಕ್ತವಾಗಿ ಬಾಳಿಸದೆ ನಿರಾಕರಿಸಿ, ಮನೆಯಿಂದ ಹೊರಗಟ್ಟಿದ ಮೇಲೆ ಆಕೆಯನ್ನು ಯಾರೇ ಕೂಡಿಕೊಂಡರೂ ಮದುವೆಯಾದರೂ ಇನ್ನಾರದೋ ಆಸರೆಯಲ್ಲಿದ್ದರೂ ಹಿಂದೆ ಆಕೆಗೆ ಸಂಬಂಧಪಟ್ಟವರು ಚಿಂತಿಸಬೇಕಾದುದಿಲ್ಲ. ಒಂದು ವಸ್ತುವನ್ನು ಅನ್ಯರಿಗೆ ಕೊಟ್ಟುಬಿಟ್ಟ ಮೇಲೆ ಆ ವಸ್ತುವಿನ ಬಗ್ಗೆ ಚಿಂತಿಸುವುದು ಹೇಗೆ ಅಪ್ರಸ್ತುತವೋ ಹಾಗೆ.

            ಮೂರನೆಯ ದೃಷ್ಟಾಂತವೆಂದರೆ, ನಮ್ಮ ಹೊಟ್ಟೆಪಾಡಿಗಾಗಿ ಭೂಮಿಯನ್ನು ಉತ್ತು ಬೆಳೆಬೆಳೆಸುವುದು  ಮನುಷ್ಯನ ಒಂದು ಸಹಜಗುಣ. ಆದರೆ ಅದೇ ಭೂಮಿಯನ್ನು ನಿರಾಕರಿಸಿ  ಪಾಳುಬಿಟ್ಟ ಮೇಲೆ ಇನ್ನಾರೋ ಬಂದು ಉತ್ತು, ಬಿತ್ತಿ, ಬೆಳೆಬೆಳೆಸಿ, ಫಸಲನ್ನು ಉಂಡರೆ ನಾವು ಪರಿತಪಿಸಬೇಕಾಗಿಲ್ಲ. ನಾವು ಬೇಡವೆಂದು ತಿರಸ್ಕರಿಸಿದ ಭೂಮಿಯ ಬಗ್ಗೆ ನಾವು ಚಿಂತಿಸುವ ಅಗತ್ಯವಿರುವುದಿಲ್ಲ.

            ಮೇಲಿನ ಮೂರು ದೃಷ್ಟಾಂತಗಳನ್ನು ಉಲ್ಲೇಖಿಸಿ, ಚೆನ್ನಮಲ್ಲಿಕಾರ್ಜುನನನ್ನು ಅರಿತುಕೊಂಡ ಬಳಿಕ ದೇಹದ ಮೇಲೆ ವ್ಯಾಮೋಹವನ್ನು ಹೊಂದುವ ಅಗತ್ಯವಿರುವುದಿಲ್ಲ. ಭಗವಂತನ ಅನುಗ್ರಹವೆಂದರೆ ಆತನಲ್ಲಿ ಲೀನವಾಗುವುದು. ಹೀಗೆ ಲೀನವಾದ ಮೇಲೆ ಮನುಷ್ಯದೇಹಕ್ಕೆ ಬೆಲೆ ಇರುವುದಿಲ್ಲ. ಅದು ’ಹೆಣ’ ಎನಿಸಿಕೊಳ್ಳುತ್ತದೆ. ಅಂತಹ ಹೆಣವನ್ನು ನಾಯಿ ತಿಂದು ನೀರು ಕುಡಿದರೂ ಚಿಂತಿಸುವ ಅಗತ್ಯವಿಲ್ಲ ಎಂದು ಅಕ್ಕ ಸ್ಪಷ್ಟಪಡಿಸುತ್ತಾಳೆ. ಭಗವಂತನ ಅನುಗ್ರಹವಾಗುವವರೆಗೆ ಮಾತ್ರ ದೇಹದ ಅಗತ್ಯ. ದೇಹ ಮನುಷ್ಯನ ಸಾಧನೆಗೊಂದು ಮಾಧ್ಯಮ. ಯಾವಾಗ ಸಾಧನೆ ಕೊನೆಗೊಂಡಿತೋ ಆಮೇಲೆ ,ಮಾಧ್ಯಮದ ಅವಶ್ಯಕತೆ ಇರುವಿದಿಲ್ಲ. ಭಗವಂತನ ಸಾಕ್ಷಾತ್ಕಾರವಾದ  ಮೇಲೆ ಮತ್ತೆ ದೇಹದ ಮೇಲಿನ ವ್ಯಾಮೋಹ ಇರಲಾರದು. ಅದು ಮೋಕ್ಷದ ಸ್ಥಿತಿ ಎನಿಸಿಕೊಳ್ಳುತ್ತದೆ  ಎಂಬುದು ಅಕ್ಕನ ಅಭಿಪ್ರಾಯ. ಆಕೆ ಬುದ್ಧಿ ತಿಳಿದಂದಿನಿಂದಲೂ ಚೆನ್ನಮಲ್ಲಿಕಾರ್ಜುನನನ್ನೇ ಗಂಡನೆಂದು ಭಾವಿಸಿ ಪರಿತಪಿಸಿದವಳು. ಆದರೆ ಆ ಸಾಧನೆಯ ಹಾದಿಯಲ್ಲಿ ಇನ್ನಿಲ್ಲದ ಸಮಸ್ಯೆಗಳು ಎದುರಾದವು. ಅವುಗಳೆಲ್ಲವನ್ನೂ ನಿವಾರಿಸಿಕೊಂಡು ಕೊನೆಗೂ ಆಕೆ ಚೆನ್ನಮಲ್ಲಿಕಾರ್ಜುನನ ಅನುಗ್ರಹಕ್ಕೆ ಪಾತ್ರಳಾಗುತ್ತಾಳೆ. ಹಾಗೆ ಪಾತ್ರವಾಗುವ ಆ ಅಲೌಕಿಕ ಸ್ಥಿತಿಯನ್ನು ಈ ವಚನದಲ್ಲಿ ಆಕೆ ವಿವರಿಸಿದ್ದಾಳೆ.

***

               

Leave a Reply

Your email address will not be published. Required fields are marked *