- (ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ)- (ಭಾಗ-೧)
ಕುಮಾರವ್ಯಾಸ-ಕವಿ-ಕಾವ್ಯ ಪರಿಚಯ:
ಕುಮಾರವ್ಯಾಸ ಕನ್ನಡದ ಪ್ರತಿಭಾನ್ವಿತ ಹಾಗೂ ಅಗ್ರಗಣ್ಯ ಕವಿಗಳಲ್ಲಿ ಒಬ್ಬ. ಗದುಗಿನ ಸಮೀಪದ ಕೋಳಿವಾಡ ಈತನ ಜನ್ಮಸ್ಥಳ. ಈತನ ಕಾಲ ೧೪ನೆಯ ಶತಮಾನ. ಗದುಗಿನ ವೀರನಾರಾಯಣನ ಪರಮಭಕ್ತನಾಗಿದ್ದ ಕುಮಾರವ್ಯಾಸನ ನಿಜನಾಮಧೇಯ ಗದುಗಿನ ನಾರಣಪ್ಪ. ಸಂಸ್ಕೃತದಲ್ಲಿನ ವ್ಯಾಸಭಾರತವನ್ನು ಕನ್ನಡದಲ್ಲಿ ಮರುನಿರ್ಮಾಣ ಮಾಡಿದ ಯಶಸ್ಸು ಕುಮಾರವ್ಯಾಸನದು. ಆ ಮೂಲಕ ವ್ಯಾಸಭಾರತವನ್ನು ಜನಸಾಮಾನ್ಯರಿಗೂ ತಲುಪುವಂತೆ ಮಾಡಿದ ಕುಮಾರವ್ಯಾಸ ಕನ್ನಡಿಗರ ಜನಮಾನಸಕವಿ ಎನಿಸಿಕೊಂಡಿದ್ದಾನೆ. “ಕರ್ಣಾಟ ಭಾರತ ಕಥಾಮಂಜರಿ” ಈತನ ಕಾವ್ಯ. ಇದಕ್ಕೆ ’ಕುಮಾರವ್ಯಾಸ ಭಾರತ’, ’ಗದುಗಿನ ಭಾರತ’, ’ಕನ್ನಡ ಭಾರತ’, ’ದಶಪರ್ವ ಭಾರತ’, ’ಕರ್ಣಾಟ ಭಾರತ’ ಮೊದಲಾದ ನಾಮಾಂತರಗಳಿವೆ. ವ್ಯಾಸಭಾರತದ ಮೊದಲ ಹತ್ತು ಪರ್ವಗಳನ್ನು ಈತ ಕನ್ನಡದಲ್ಲಿ ಕಾವ್ಯವಾಗಿ ನಿರೂಪಿಸಿದ್ದಾನೆ. ಹಾಗಾಗಿಯೇ ಇದಕ್ಕೆ ದಶಪರ್ವ ಭಾರತ ಎಂದು ಹೆಸರು. ಮಹಾಭಾರತದ ಉಳಿದ ಎಂಟೂ ಪರ್ವಗಳನ್ನು ಕಾವ್ಯವಾಗಿ ನಿರೂಪಿಸುತ್ತಿದ್ದರೆ ಕನ್ನಡದಲ್ಲಿ ಇದೊಂದು ಬೃಹತ್ ಕಾವ್ಯವಾಗಿ ಮೆರೆಯುತ್ತಿತ್ತು.
ಕನ್ನಡದಲ್ಲಿ ಭಾಮಿನಿ ಷಟ್ಪದಿಯನ್ನು ಸಮಗ್ರವಾಗಿ ಬಳಸಿ, ಕಾವ್ಯರಚಿಸಿದ ಕವಿಗಳಲ್ಲಿ ಈತನೇ ಮೊದಲಿಗ. ಭಾಮಿನಿಯನ್ನು ಹೇಗೋ ಕಾವ್ಯಭಾಮಿನಿಯನ್ನೂ ಹಾಗೆಯೇ ಥಳುಕಿ ಬಳುಕಿಸಬಲ್ಲ ಕವಿ ಕುಮಾರವ್ಯಾಸ. ಕಾವ್ಯದಲ್ಲಿ ಉಪಮಾದಿ ಅಲಂಕಾರಗಳನ್ನು ಬಳಸಿದರೂ ರೂಪಕಾಲಂಕಾರವನ್ನು ಯಥೇಷ್ಟವಾಗಿ ಬಳಸುವ ಕುಮಾರವ್ಯಾಸ “ರೂಪಕಸಾಮ್ರಾಜ್ಯ ಚಕ್ರವರ್ತಿ” ಎಂದು ಕರೆಸಿಕೊಂಡಿದ್ದಾನೆ. ಈ ಕಾವ್ಯವನ್ನು ಬಹಳ ಭಕ್ತಿ-ಗೌರವಗಳಿಂದ ವಾಚನಮಾಡುವ ಪರಂಪರೆಯೊಂದು ಕರ್ನಾಟಕದಾದ್ಯಂತ ಬೆಳೆದಿರುವುದನ್ನು ಕಂಡಾಗ ಈ ಕಾವ್ಯದ ಮಹತ್ವ ಹಾಗೂ ಅದು ಜನಮಾನಸದಲ್ಲಿ ಪಡೆದುಕೊಂಡಿರುವ ಸ್ಥಾನಮಾನಗಳು ಏನು? ಎಂಬುದು ಸ್ಪಷ್ಟವಾಗುತ್ತದೆ. ಎಳೆಯರಿಂದ ಹಿಡಿದು ವಿದ್ವಾಂಸರವರೆಗೂ ಅವರವರ ನೆಲೆಯಲ್ಲಿ ತಲುಪುವ, ಕಾವ್ಯಾಸ್ವಾದವನ್ನು ಉಂಟುಮಾಡುವ ಈ ಕಾವ್ಯ ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಕನ್ನಡ ಭಾಷೆಯ ಪದಭಂಡಾರವನ್ನು ಸೂರೆಮಾಡಿದ ಪ್ರಮುಖ ಕವಿಗಳಲ್ಲಿ ಕುಮಾರವ್ಯಾಸನೂ ಒಬ್ಬ. ಈತ ಭಕ್ತಕವಿ ಮಾತ್ರವಲ್ಲ, ದಾರ್ಶನಿಕಕವಿಯೂ ಹೌದು. ಭಾರತ ಕಥೆಯನ್ನು ನಿರೂಪಿಸುತ್ತಿದ್ದರೂ ಆತ ಅದನ್ನು ಕೃಷ್ಣಕಥೆಯನ್ನಾಗಿ ಪರಿವರ್ತಿಸಿದ್ದಾನೆ.
ಕಾವ್ಯಭಾಗದ ಹಿನ್ನೆಲೆ:
ಇದು ಕುಮಾರವ್ಯಾಸನ ’ಕರ್ಣಾಟ ಭಾರತ ಕಥಾಮಂಜರಿ’ಯ ಸಭಾಪರ್ವದ ಹದಿನಾಲ್ಕನೆಯ ಮತ್ತು ಹದಿನೈದನೆಯ ಸಂಧಿಗಳಿಂದ ಆರಿಸಿಕೊಂಡಿರುವ ಪದ್ಯಭಾಗ. ದುರ್ಯೋಧನನು ಶಕುನಿಯನ್ನು ಮುಂದಿಟ್ಟುಕೊಂಡು ಆಡಿದ ಕಪಟದ್ಯೂತದಲ್ಲಿ ಪಾಂಡವರು ತಮ್ಮ ಸಂಪತ್ತು, ಚತುರಂಗಬಲ, ಸಿಂಹಾಸನ, ರಾಜ್ಯವೆಲ್ಲವನ್ನೂ ತಮ್ಮನ್ನೂ ಕಳೆದುಕೊಂಡು ಕೊನೆಗೆ ದ್ರೌಪದಿಯನ್ನೂ ಪಣವಾಗಿಟ್ಟು ಸೋಲುತ್ತಾರೆ. ಆಕೆಯನ್ನು ಎಳೆದು ತಾ ಎಂಬ ದುರ್ಯೋಧನನ ಆಜ್ಞೆಯನ್ನು ನೆರವೇರಿಸಲು ಕರ್ಣನ ಸೇವಕ ಪ್ರಾತಿಕಾಮಿ ವಿಫಲನಾದಾಗ, ದುರ್ಯೋಧನ ತನ್ನ ತಮ್ಮನಾದ ದುಶ್ಶಾಸನನಿಗೆ ಆಜ್ಞಾಪಿಸುತ್ತಾನೆ. ಮುಂದಿನ ಬೆಳವಣಿಗೆಯನ್ನು ಕುಮಾರವ್ಯಾಸ ಈ ಪದ್ಯಭಾಗದಲ್ಲಿ ವರ್ಣಿಸಿದ್ದಾನೆ.
ತಮ್ಮ ಬಾರೈ ಹೋಗು ದಿಟ ನೀ
ನಮ್ಮುವರೆ ಹಿಡಿದೆಳೆದು ತಾ ನೃಪ
ರೆಮ್ಮ ಕಿಂಕರರೈವರಿವರಿದ್ದೇನ ಮಾಡುವರು
ತಮ್ಮ ಕರ್ಮವಿಪಾಕಗತಿ ನೆರೆ
ತಮ್ಮನೇ ಕಾಡುವುದು ಧರ್ಮವಿ
ದೆಮ್ಮ ಕಾರಣವಲ್ಲ ನೀ ಹೋಗೆಂದು ನೇಮಿಸಿದ. ೧
ಪದ್ಯದ ಅನ್ವಯಕ್ರಮ:
ಬಾರೈ ತಮ್ಮ, ನೀ ಹೋಗು, ನಮ್ಮುವರೆ ದಿಟ, ಹಿಡಿದು ಎಳೆದು ತಾ, ನೃಪರ್ ಎಮ್ಮ ಕಿಂಕರರು, ಇವರ್ ಐವರ್, ಇವರ್ ಇದ್ದು ಏನ ಮಾಡುವರು? ತಮ್ಮ ಕರ್ಮ ವಿಪಾಕಗತಿ ತಮ್ಮನೆ ನೆರೆ ಕಾಡುವುದು ಧರ್ಮವು, ಎಮ್ಮ ಕಾರಣವಲ್ಲ, ನೀ ಹೋಗು ಎಂದು ನೇಮಿಸಿದ.
ಪದ-ಅರ್ಥ:
ತಮ್ಮ-ದುಶ್ಶಾಸನ; ಬಾರೈ-ಬಾ; ದಿಟ-ನಿಜ; ನಮ್ಮುವರೆ-ಒರಗಿಕೊಂಡಿದ್ದಾರೆ, ಅವಲಂಬಿಸಿದ್ದಾರೆ; ನೃಪರ್-ಧರ್ಮರಾಯಾದಿ ಪಾಂಡವರು; ಕಿಂಕರರ್-ಸೇವಕರು; ಐವರ್-ಐದು ಮಂದಿ; ಕರ್ಮವಿಪಾಕಗತಿ-ಕರ್ಮದಿಂದ ಉಂಟಾದ ಕೇಡಿನ ಅವಸ್ಥೆ; ನೆರೆ-ಚೆನ್ನಾಗಿ; ತಮ್ಮನೇ-ತಮ್ಮನ್ನೇ; ಕಾಡುವುದು-ಪೀಡಿಸುತ್ತದೆ; ಎಮ್ಮ ಕಾರಣವಲ್ಲ-ನಮ್ಮ ಕಾರಣದಿಂದಲ್ಲ; ನೇಮಿಸಿದ-ವಹಿಸಿದ.
ತಮ್ಮಾ ದುಶ್ಶಾಸನ, ನೀನೀಗ ಹೋಗಿ ದ್ರೌಪದಿಯನ್ನು ಹಿಡಿದು ಎಳೆದು ತಾ. ಹಿಂದೆ ರಾಜರಾಗಿದ್ದ ಈ ಪಾಂಡವರು ಇಂದು ನಮ್ಮ ಸೇವಕರಾಗಿದ್ದಾರೆ. ಮಾತ್ರವಲ್ಲ, ಸೋತು ಒರಗಿದ್ದಾರೆ. ಇದು ಸತ್ಯ. ಇವರು ಐದು ಮಂದಿ ಇದ್ದರೂ ನಮ್ಮನ್ನು ಏನು ಮಾಡಲು ಸಾಧ್ಯ? ಅವರವರ ಕರ್ಮಫಲದಿಂದ ಉಂಟಾದ ಕೇಡು ಅವರವರನ್ನು ಕಾಡುತ್ತದೆ. ಅಂತಹ ಕರ್ಮದಿಂದ ಉಂಟಾದ ಕೇಡು ಇಂದು ಈ ಪಾಂಡವರನ್ನು ಕಾಡುತ್ತಿದೆ. ಅದಕ್ಕೆ ನಾವು ಕಾರಣರಲ್ಲ. ನೀನು ಹೆದರಬೇಕಾದ ಅಗತ್ಯವ್ಯವೇ ಇಲ್ಲ. ನೀನು ಹೋಗು ಎಂದು ದುರ್ಯೋಧನ ದುಶ್ಶಾಸನನಿಗೆ ಆಜ್ಞಾಪಿಸಿದನು.
(ಬದುಕಿನಲ್ಲಿ ಪ್ರತಿಯೊಬ್ಬರ ಕರ್ಮಫಲ ಅವರವರನ್ನು ಕಾಡುವುದು ಲೋಕಸಹಜ ವಿಚಾರ. ಹಾಗೆಯೇ ಇಂದು ಅಂತಹ ಕರ್ಮಫಲ ಪಾಂಡವರನ್ನು ಕಾಡಿಪೀಡಿಸುತ್ತಿದೆ. ಹಾಗಾಗಿಯೇ ಅವರು ಇಂದು ದ್ಯೂತದಲ್ಲಿ ಎಲ್ಲವನ್ನೂ ಕಳೆದು ನಿರ್ಗತಿಕರಾಗಿದ್ದಾರೆ. ಅವರು ಹಿಂದೆ ರಾಜರಾಗಿದ್ದಿರಬಹುದು, ಆದರೆ, ಇಂದು ನಮ್ಮ ಸೇವಕರಾಗಿದ್ದಾರೆ. ಹಿಂದೆ ಅವರು ಬಲಶಾಲಿಗಳಾಗಿ ಇದ್ದಿರಬಹುದು, ಆದರೆ ಇಂದು ಬಲಹೀನರಾಗಿ ಮುದುಡಿ ಕುಳಿತ್ತಿದ್ದಾರೆ. ಅವರು ನಮ್ಮನ್ನು ಯಾವುದೇ ರೀತಿಯಿಂದ ಎದುರಿಸುವುದಕ್ಕಾಗಲೀ ನಮ್ಮನ್ನು ಭಂಗಿಸುವುದಕ್ಕಾಗಲೀ ಸಾಧ್ಯವಿಲ್ಲ. ಅವರಿಂದು ಹೇಡಿಗಳಾಗಿದ್ದಾರೆ. ಹಾಗಾಗಿ ನೀನು ಅವರಿಗೆ ಹೆದರುವ ಅವಶ್ಯಕತೆಯಿಲ್ಲ. ರಾಜಮಂದಿರದಲ್ಲಿರುವ ದ್ರೌಪದಿಯನ್ನು ಹಿಡಿದು ಎಳೆದು ತರುವುದಕ್ಕೆ ಯಾವ ಭಯವೂ ಬೇಕಾಗಿಲ್ಲ ಎಂದು ದುರ್ಯೋಧನ ದುಶ್ಶಾಸನನನ್ನು ಹುರಿದುಂಬಿಸುತ್ತಾನೆ. ಅವರವರ ಕರ್ಮಫಲ ಅವರವರನ್ನು ಕಾಡುತ್ತದೆ ಎನ್ನುವ ದುರ್ಯೋಧನ ತಮ್ಮ ಕರ್ಮಫಲ ತಮ್ಮನ್ನೂ ಕಾಡಿಯೇ ಕಾಡುತ್ತದೆ ಎಂಬುದನ್ನು ಮರೆತ್ತಿದ್ದಾನೆ. ದುರ್ಯೋಧನನ ಈ ಮಾತುಗಳಲ್ಲಿ ಪಾಂಡವರ ಬಗ್ಗೆ ಆತನಿಗಿರುವ ತಾತ್ಸಾರ, ದ್ವೇಷಗಳನ್ನು; ಪಾಂಡವರನ್ನು ತಾನು ಸುಲಭದಲ್ಲಿ ಗೆದ್ದೆನೆಂಬ ಅಹಂಕಾರವನ್ನು; ಪಾಂಡವರ ಸಮ್ಮುಖದಲ್ಲಿಯೇ ಅವರ ರಾಣಿಯಾದ ದ್ರೌಪದಿಯನ್ನು ಅವಮಾನಿಸಿ ಸೇಡುತೀರಿಸಿಕೊಳ್ಳಲು ಇದೇ ಸರಿಯಾದ ಅವಕಾಶ ಎಂಬ ಮನೋಭಾವವನ್ನು ಕಂಡುಕೊಳ್ಳಬಹುದು.)
ಹರಿದನವ ಬೀದಿಯಲಿ ಬಿಡುದಲೆ
ವೆರಸಿ ಸತಿಯರಮನೆಗೆ ಬಾಗಿಲ
ಚರರು ತಡೆದರೆ ಮೆಟ್ಟಿದನು ತಿವಿದನು ಕಠಾರಿಯಲಿ
ತರುಣಿಯರು ಕಂಡಂಜಿ ಹೊಕ್ಕರು
ಸರಸಿಜಾಕ್ಷಿಯ ಮಱೆಯನಾಖಳ
ನುರವಣಿಸಿದನು ರಾಹು ತಾರಾಧಿಪನ ತಗುೞ್ವಂತೆ ೨
ಪದ್ಯದ ಅನ್ವಯಕ್ರಮ:
ಅವ ಬಿಡುದಲೆವೆರಸಿ ಬೀದಿಯಲಿ ಸತಿಯರ ಮನೆಗೆ ಹರಿದನ್, ಬಾಗಿಲ ಚರರು ತಡೆದರೆ ಮೆಟ್ಟಿದನು, ಕಠಾರಿಯಲಿ ತಿವಿದನು, ತರುಣಿಯರು ಕಂಡು ಅಂಜಿ ಸರಸಿಜಾಕ್ಷಿಯ ಮಱೆಯನ್ ಹೊಕ್ಕರು, ಆ ಖಳನ್ ರಾಹು ತಾರಾಧಿಪನ ತಗುೞ್ವಂತೆ ಉರವಣಿಸಿದನು.
ಪದ-ಅರ್ಥ:
ಅವ-ಅವನು (ದುಶ್ಶಾಸನ); ಬಿಡುದಲೆವೆರಸಿ(ಬಿಡುತಲೆ+ಬೆರಸಿ)-ಪೇಟ ಅಥವಾ ಕಿರೀಟವಿಲ್ಲದ ತಲೆಯಿಂದ ಕೂಡಿ; ಹರಿದನ್-ಓಡಿದನು; ಸತಿಯರಮನೆ-ದ್ರೌಪದಿ ಉಳಕೊಂಡಿರುವ ರಾಜಮಂದಿರ, ಅಂತಃಪುರ; ಬಾಗಿಲ ಚರರು-ದ್ವಾರಪಾಲಕರು; ತಡೆದರೆ-ತಡೆದಾಗ; ಕಠಾರಿ-ಕಿರುಗತ್ತಿ; ತರುಣಿಯರು-ಸಖಿಯರು; ಸರಸಿಜಾಕ್ಷಿ-ದ್ರೌಪದಿ; ಖಳ-ದುಷ್ಟ (ದುಶ್ಶಾಸನ); ತಾರಾಧಿಪ-ಚಂದ್ರ; ಉರವಣಿಸಿದನು-ಆತುರಪಟ್ಟನು.
ದುರ್ಯೋಧನನ ಆಜ್ಞೆಯನ್ನು ಪಡೆದ ದುಶ್ಶಾಸನ ತಲೆಯ ಮೇಲೆ ಕಿರೀಟವನ್ನೂ ಇರಿಸಿಕೊಳ್ಳುವ ವ್ಯವಧಾನವನ್ನು ತೋರದೆ, ತಲೆಗೂದಲನ್ನು ಕೆದರಿಸಿಕೊಂಡು ಬೀದಿಯಲ್ಲಿ ಅಂತಃಪುರದ ಕಡೆಗೆ ಓಡಿದನು. ದ್ರೌಪದಿಯು ಉಳಿದುಕೊಂಡಿರುವ ರಾಜಮಂದಿರದ ಬಾಗಿಲಿಗೆ ಬಂದಾಗ ದುಶ್ಶಾಸನನ ರೌದ್ರತೆಯನ್ನು, ಅನಾಗರಿಕತೆಯನ್ನು ಕಂಡು ದ್ವಾರಪಾಲಕರು ತಡೆದರು. ತನ್ನನ್ನು ತಡೆದ ದ್ವಾರಪಾಲಕರನ್ನು ಮೆಟ್ಟಿ, ಕಿರುಗತ್ತಿಯಿಂದ ತಿವಿದನು. ದುಶ್ಶಾಸನನ ಈ ರೌದ್ರತೆಯನ್ನು ಕಂಡು ದ್ರೌಪದಿಯ ಸಖಿಯರು ಹೆದರಿ ಆಕೆಯ ಹಿಂದೆ ಅಡಗಿಕೊಂಡರು. ರಾಹು ಚಂದ್ರನನ್ನು ಹಿಡಿದುಕೊಳ್ಳಲು ಹವಣಿಸುವಂತೆ ದುಶ್ಶಾಸನನು ದ್ರೌಪದಿಯನ್ನು ಹಿಡಿಯಲು ಆತುರಪಟ್ಟನು.
(ಕೆಲವು ಕೆಲಸಗಳನ್ನು ಮಾಡುವಲ್ಲಿ ಕೆಲವರಿಗೆ ಅತಿಯಾದ ಆತುರ, ಹಪಹಪಿಕೆ ಇರುವಾಗ ಅವರಿಗೆ ತಮ್ಮ ವರ್ತನೆಗಳ ಬಗ್ಗೆಯಾಗಲೀ, ತಮ್ಮ ಉಡುಗೆ-ತೊಡುಗೆಗಳ ಬಗ್ಗೆಯಾಗಲೀ ಕಾಳಜಿ ಇರುವುದಿಲ್ಲ. ಮೊದಲೇ ಪಾಂಡವರನ್ನು ದ್ವೇಷಿಸುತ್ತಿದ್ದ ದುರ್ಯೋಧನ ಹಾಗೂ ದುಶ್ಶಾಸನರಿಗೆ ಪಾಂಡವರನ್ನು, ದ್ರೌಪದಿಯನ್ನು ಕಾಡಿದಷ್ಟು ಸಾಲದು. ಹಾಗಾಗಿಯೇ ದುರ್ಯೋಧನನಿಂದ ಆಜ್ಞೆಯಾದ ಒಡನೆಯೇ ತಲೆಯ ಮೇಲೆ ಕಿರೀಟವನ್ನೋ ಪೇಟವನ್ನೋ ಇಟ್ಟುಕೊಳ್ಳಬೇಕೆಂಬ ಕನಿಷ್ಠ ತಿಳಿವಳಿಕೆಯೇ ಇಲ್ಲದೆ, ಅನಾಗರಿಕನಂತೆ ಬೀದಿಯಲ್ಲಿ ಓಡಾಡಿಕೊಂಡು ದ್ರೌಪದಿ ಉಳಿದುಕೊಂಡಿರುವ ರಾಜಮಂದಿರಕ್ಕೆ ಹೋಗುತ್ತಾನೆ. ಆತನ ಅನಾಗರಿಕತೆಯನ್ನು, ದುರ್ವರ್ತನೆಯನ್ನು ಕಂಡು ದ್ವಾರಪಾಲಕರು ತಡೆದರು. ರಾಣಿವಾಸದವರಿಗೆ ತೊಂದರೆಯಾಗದಂತೆ ಕಾಪಾಡುವುದು ಅವರ ಕರ್ತವ್ಯ. ದ್ವಾರಪಾಲಕರು ತಮ್ಮ ಕರ್ತವ್ಯಮಾಡುತ್ತಿದ್ದರೂ ಅವರನ್ನು ಮೆಟ್ಟುತ್ತಾನೆ, ಕಠಾರಿಯಲ್ಲಿ ತಿವಿಯುತ್ತಾನೆ. ಇಲ್ಲೆಲ್ಲ ಆತನ ಅನಾಗರಿಕತನವನ್ನು, ನೀಚತನವನ್ನು ಗುರುತಿಸಿಕೊಳ್ಳಬಹುದು. ಕೊನೆಗೂ ರಾಹು ಚಂದ್ರನನ್ನು ಹಿಡಿದುಕೊಳ್ಳಲು ಹವಣಿಸುವಂತೆ ದ್ರೌಪದಿಯನ್ನು ಹಿಡಿಯಲು ಹವಣಿಸುತ್ತಾನೆ. ಸಂಬಂಧದಲ್ಲಿ ಅತ್ತಿಗೆಯಾಗಿರುವ ದ್ರೌಪದಿಯೊಂದಿಗೆ ಹೇಗೆ ವ್ಯವಹರಿಸಬೇಕೆಂಬ ಕನಿಷ್ಠ ಕಲ್ಪನೆಯಾಗಲೀ ನೈತಿಕತೆಯಾಗಲೀ ದುಶ್ಶಾಸನನಲ್ಲಿ ಇಲ್ಲದಿರುವುದು ಆತನ ನೈತಿಕ ಅಧಃಪತನವನ್ನು ಸೂಚಿಸುತ್ತದೆ.)
ಬಂದನವನಂಬುಜಾಕ್ಷಿಯಿದಿರಲಿ
ನಿಂದನೆಲೆಗೇ ಗರುವತನವಿದು
ಹಿಂದೆ ಸಲುವುದು ಸಲ್ಲದಿದು ಕುರುರಾಜಭವನದಲಿ
ಇಂದು ಮೆಱೆವರೆ ನಮ್ಮ ತೊತ್ತಿರ
ಮುಂದೆ ಮೆಱೆ ನಡೆ ಮಂಚದಿಂದಿೞಿ
ಯೆಂದು ಜಱೆದನು ಕೌರವಾನುಜನಾ ಮಹಾಸತಿಯ ೩
ಪದ್ಯದ ಅನ್ವಯಕ್ರಮ:
ಅವನ್ ಅಂಬುಜಾಕ್ಷಿ ಇದಿರಲಿ ಬಂದನ್, ನಿಂದನ್ ಎಲೆಗೇ ಗರುವತನ ಇದು ಹಿಂದೆ ಸಲುವುದು, ಇದು ಕುರುರಾಜ ಭವನದಲಿ ಸಲ್ಲದು, ಇಂದು ಮೆಱೆವರೆ ನಮ್ಮ ತೊತ್ತಿರ ಮುಂದೆ ಮೆಱೆ, ಮಂಚದಿಂದ ಇೞಿ, ನಡೆ ಎಂದು ಕೌರವ ಅನುಜನು ಆ ಮಹಾಸತಿಯ ಜಱೆದನು.
ಪದ-ಅರ್ಥ:
ಅವನ್-ದುಶ್ಶಾಸನನು; ಅಂಬುಜಾಕ್ಷಿ-ತಾವರೆಯ ಎಸಳಿನ ಕಣ್ಣುಳ್ಳವಳು, ಚೆಲುವೆ (ದ್ರೌಪದಿ); ಇದಿರಲಿ-ಮುಂಭಾಗದಲ್ಲಿ; ಎಲೆಗೇ-ಎಲೈ, ಎಲವೋ(ತಾತ್ಸಾರದ ಸಂಬೋಧನವಾಚಕ) ಗರುವತನ-ಹಿರಿತನದ ಸೊಕ್ಕು; ಹಿಂದೆ-ರಾಜ್ಯಾಧಿಕಾರವಿದ್ದಾಗ; ಸಲುವುದು-ಮಾನ್ಯತೆಯನ್ನು ಹೊಂದುವುದು; ಸಲ್ಲದು-ಮಾನ್ಯತೆಯನ್ನು ಹೊಂದಲಾರದು; ಕುರುರಾಜಭವನ-ಕೌರವನ ಅರಮನೆ; ಮೆಱೆವರೆ-ಮೆರೆಯುವುದಾದರೆ; ನಮ್ಮ ತೊತ್ತಿರ ಮುಂದೆ-ನಮ್ಮ ಸೇವಕರ (ಪಾಂಡವರು) ಮುಂದೆ; ಜಱೆ-ನಿಂದಿಸು; ಕೌರವಾನುಜ-ಕೌರವನ ತಮ್ಮ(ದುಶ್ಶಾಸನ); ಮಹಾಸತಿ-ದ್ರೌಪದಿ.
ದುಶ್ಶಾಸನನು ಚೆಲುವೆ ದ್ರೌಪದಿಯ ಎದುರಿಗೆ ಬಂದು ನಿಂತು, ಎಲೈ ದ್ರೌಪದಿಯೇ, ನಿನ್ನ ಹಿರಿತನದ ಸೊಕ್ಕು ಹಿಂದೆ ಇಂದ್ರಪ್ರಸ್ಥದಲ್ಲಿದ್ದಾಗ ನಡೆಯುತ್ತಿತ್ತು. ಆದರೆ ಇಂದು ಕುರುರಾಜನಾದ ದುರ್ಯೋಧನನ ಅರಮನೆಯಲ್ಲಿ ನಡೆಯಲಾರದು. ಇಂದು ನೀನು ಮೆರೆದಾಡುವುದಾದರೆ ನಮ್ಮ ಸೇವಕರಾಗಿರುವ ಪಾಂಡವರ ಮುಂದೆ ಮೆರೆದಾಡು, ನಡೆ ಮಂಚದಿಂದ ಇಳಿ ಎಂದು ದುರ್ಯೋಧನನ ತಮ್ಮನಾದ ದುಶ್ಶಾಸನನು ಮಹಾಸತಿ ಎನಿಸಿರುವ ದ್ರೌಪದಿಯನ್ನು ನಿಂದಿಸಿದನು.
(ದುಶ್ಶಾಸನನ ದೃಷ್ಟಿಯಲ್ಲಿ ದ್ರೌಪದಿ ಈಗ ರಾಣಿಯಲ್ಲ, ಅವಳು ಪಾಂಡವರ ಹೆಂಡತಿಯಾಗಿದ್ದರೂ ತಾನು ಅವಳಿಗೆ ಮರ್ಯಾದೆ ಕೊಡಬೇಕಾಗಿಲ್ಲ. ಪಾಂಡವರು ಅವಳನ್ನು ಪಣಕ್ಕಿಟ್ಟು ಸೋತಿದ್ದರಿಂದ, ಮತ್ತು ಅವಳು ತಮ್ಮ ದಾಸಿಯಾಗಿರುವುದರಿಂದ ದುಶ್ಶಾಸನ ಅತ್ಯಂತ ಹೀನವಾಗಿ, ಅನೈತಿಕವಾಗಿ, ಒರಟಾಗಿ ಆಕೆಯೊಂದಿಗೆ ವ್ಯವಹರಿಸುತ್ತಾನೆ. ಆಕೆ ಇಂದ್ರಪ್ರಸ್ಥದಲ್ಲಿ ರಾಣಿಯಾಗಿದ್ದಾಗ ಹೊಂದಿದ್ದ ಅಧಿಕಾರ, ಹಿರಿತನ, ಮೇಲ್ಮೆಗಳನ್ನು ಅವಹೇಳನಮಾಡುತ್ತಾನೆ. ಇಂದು ಪಾಂಡವರು ತಮ್ಮ ಅರಸುತನ ಹಾಗೂ ಅದಕ್ಕೆ ಸಂಬಂಧಿಸಿದ ಸಕಲ ಸವಲತ್ತುಗಳನ್ನು ಕಳೆದುಕೊಂಡಿರುವುದರಿಂದ ನೀನು ಈಗ ರಾಣಿಯಾಗಿ ಮೆರೆಯಲು ಯೋಗ್ಯಳಲ್ಲ. ಪಾಂಡವರು ದ್ಯೂತದಲ್ಲಿ ಸೋತು ನಮ್ಮ ಆಳುಗಳಾಗಿರುವುದರಿಂದ ನೀನೂ ನಮ್ಮ ದಾಸಿಯಾಗಿರುವೆ. ನೀನೀಗ ನಿನ್ನ ದರ್ಪ ತೋರಿಸುವುದಾದರೆ ನಮ್ಮ ಆಳುಗಳಾಗಿರುವ ಪಾಂಡವರ ಮುಂದೆ ತೋರಿಸು, ನಡೆ ಮಂಚದಿಂದ ಇಳಿ ಎಂದು ನೈತಿಕತೆ ಮಿತಿಯನ್ನು ಮೀರಿ ಅವಮಾನಿಸುತ್ತಾನೆ. ಪಾಂಡವರು ಅರಸುತನವನ್ನು ಕಳೆದುಕೊಂಡರೂ ಸಂಬಂಧವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂಬ ಕನಿಷ್ಟ ತಿಳಿವಳಿಕೆಯನ್ನು ದುಶ್ಶಾಸನ ಕಳೆದುಕೊಂಡಿರುವುದು ಸ್ಪಷ್ಟವಾಗುತ್ತದೆ. ಅಲ್ಲದೆ, ರಾಜವಂಶದಲ್ಲಿ ಹುಟ್ಟಿದವನಿಗೆ ಸೌಜನ್ಯವನ್ನು ಕಳೆದುಕೊಂಡಿರುವುದನ್ನು ಇಲ್ಲಿ ಕಾಣಬಹುದು.)
ಜನಪನನುಜನು ನೀನೆನಗೆ ಮೈ
ದುನನಲಾ ತಪ್ಪೇನು ಯಮನಂ
ದನನು ಸೋಲಲಿ ನನ್ನ ಪ್ರಶ್ನೆಗೆ ಕೊಡಲಿ ಮಱುಮಾತ
ಅನುಜ ಕೇಳೈ ಪುಷ್ಪವತಿ ತಾ
ನೆನಗೆ ರಾಜಸಭಾಪ್ರವೇಶವ
ದನುಚಿತವಲೇ ಹೇೞೆನಲು ಖಳರಾಯ ಖತಿಗೊಂಡ ೪
ಪದ್ಯದ ಅನ್ವಯಕ್ರಮ:
ನೀನು ಜನಪನ ಅನುಜನು, ಎನಗೆ ಮೈದುನನಲಾ, ತಪ್ಪೇನು?, ಯಮನಂದನನು ಸೋಲಲಿ, ತನ್ನ ಪ್ರಶ್ನೆಗೆ ಮಱುಮಾತ ಕೊಡಲಿ, ಅನುಜ ಕೇಳೈ, ಆನ್ ಪುಷ್ಪವತಿ, ಎನಗೆ ರಾಜಸಭಾ ಪ್ರವೇಶವದು ಅನುಚಿತವಲೇ ಹೇಳ್ ಎನಲು ಖಳರಾಯ ಖತಿಗೊಂಡ.
ಪದ-ಅರ್ಥ:
ಜನಪ-ರಾಜ(ದುರ್ಯೋಧನ); ಅನುಜ-ತಮ್ಮ, ಸಹೋದರ; ಮೈದುನ-ಗಂಡನ ತಮ್ಮ; ಯಮನಂದನ-ಧರ್ಮರಾಯ; ಮಱುಮಾತ-ಪ್ರತ್ಯುತ್ತರ; ಪುಷ್ಪವತಿ-ಋತುಮತಿ; ಅನುಚಿತ-ಸಭ್ಯವಲ್ಲ, ಯೋಗ್ಯವಲ್ಲ; ಖಳರಾಯ-ದುಷ್ಟ(ದುಶ್ಶಾಸನ); ಖತಿಗೊಂಡ-ಸಿಟ್ಟುಗೊಂಡ.
ದುಶ್ಶಾಸನ, ನೀನು ರಾಜನಾದ ದುರ್ಯೋಧನನ ಸಹೋದರ, ಸಂಬಂಧದಲ್ಲಿ ನನಗೆ ಮೈದುನನಾಗಿರುವೆ. ಇದರಲ್ಲಿ ತಪ್ಪೇನಿದೆ? ಧರ್ಮರಾಯನು ದ್ಯೂತದಲ್ಲಿ ಸೋಲಲಿ. ಮೊದಲು ನನ್ನ ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ಕೊಡಲಿ. ತಮ್ಮ ದುಶ್ಶಾಸನನೇ ಕೇಳು, ನಾನು ಪುಷ್ಪವತಿ(ಋತುಮತಿ)ಯಾಗಿದ್ದೇನೆ. ಸಂಪ್ರದಾಯದ ಪ್ರಕಾರ ನನಗೆ ರಾಜಸಭೆಯ ಪ್ರವೇಶವು ಅನುಚಿತವಲ್ಲವೇ ಹೇಳು?! ಎಂದು ದ್ರೌಪದಿ ಹೇಳಿದೊಡನೆಯೇ ದುಶ್ಶಾಸನ ದ್ರೌಪದಿಯ ಮೇಲೆ ಸಿಟ್ಟುಗೊಂಡನು.
(ದುಶ್ಶಾಸನ ಧರ್ಮರಾಯನಿಗೆ ತಮ್ಮನಾಗಿರುವುದರಿಂದ ಸಂಬಂಧದಲ್ಲಿ ದ್ರೌಪದಿಗೆ ಮೈದುನನಾಗಿದ್ದಾನೆ. ಇನ್ನೊಂದು ಕಡೆ ಅವನು ರಾಜನಾದ ದುರ್ಯೋಧನನಿಗೆ ಮಾತ್ರವಲ್ಲ, ಧರ್ಮರಾಯನಿಗೂ ಸಹೋದರನಾಗಿದ್ದಾನೆ. ಹಾಗಾಗಿ ಘನತೆಯಿಂದ, ಗೌರವದಿಂದ ನಡೆದುಕೊಳ್ಳಬೇಕಾದುದು ಆತನ ಧರ್ಮ ಎಂಬುದು ದ್ರೌಪದಿ ಸೂಕ್ಷ್ಮವಾಗಿ ತಿಳಿಸುತ್ತಾಳೆ. ದ್ಯೂತವನ್ನಾಡುವಾಗ ಸೋಲು, ಗೆಲುವು ಸಾಮಾನ್ಯ. ಒಮ್ಮೆ ಸೋತರೆ ಇನ್ನೊಮ್ಮೆ ಗೆಲ್ಲಬಹುದು. ಗೆದ್ದವರೂ ಮತ್ತೆ ಸೋಲಬಹುದು. ಅದರಲ್ಲಿ ವಿಶೇಷವೇನೂ ಇಲ್ಲ. ಧರ್ಮರಾಯನು ದ್ಯೂತದಲ್ಲಿ ಸೋತಿದ್ದಾನೆ ಎಂಬುದು ನಿಜವಾದರೂ ಈ ಸೋಲು-ಗೆಲುವುಗಳ ಬಗ್ಗೆ, ಅವುಗಳ ಯಥಾರ್ಥತೆಯ ಬಗ್ಗೆ ತನ್ನಲ್ಲಿ ಪ್ರಶ್ನೆಗಳಿವೆ. ಅವುಗಳಿಗೆ ಸಮರ್ಪಕವಾದ ಉತ್ತರ ತನಗೆ ಬೇಕಾಗಿದೆ. ಮೊದಲನೆಯದಾಗಿ, ಧರ್ಮರಾಯ ನನ್ನ ಪ್ರಶ್ನೆಗಳಿಗೆ ಸರಿಯಾದ, ನೀತಬದ್ಧವಾದ ಉತ್ತರವನ್ನು ಕೊಡಬೇಕು. ಆತನಿಂದ ಉತ್ತರ ಸಿಗದೆ ತಾನು ಅರಮನೆಗೆ ಬರುವಂತಿಲ್ಲ. ಎರಡನೆಯದಾಗಿ, ತಾನು ಋತುಮತಿಯಾಗಿರುವುದರಿಂದ ರಾಜಸಭೆಯ ಪ್ರವೇಶವು ತನಗೆ ಅನುಚಿತ. ಇದನ್ನೆಲ್ಲ ತಿಳಿದಿರುವ ನೀನೂ ನನ್ನನ್ನು ರಾಜಸಭೆಗೆ ಕರೆದೊಯ್ಯುವ ಸಾಹಸವನ್ನು ಮಾಡಕೂಡದು ಎಂದು ದ್ರೌಪದಿ ಹೇಳಿದಾಗ, ರಾಜನ ಸಹೋದರನಾದ ತನ್ನನ್ನು ದ್ರೌಪದಿ ನಿರ್ಲಕ್ಷಿಸುತ್ತಿದ್ದಾಳೆ ಎಂದು ತಿಳಿದು ದುಶ್ಶಾಸನ ಅತಿಯಾಗಿ ಸಿಟ್ಟುಗೊಂಡನು.)
ಎಲ್ಲಿಯದು ದುಷ್ಪ್ರಶ್ನೆ ಮಱುಮಾ
ತೆಲ್ಲಿಯದು ನೀ ಪುಷ್ಪವತಿಯಾ
ಗಲ್ಲಿ ಫಲವತಿಯಾಗು ನಡೆ ಕುರುರಾಯಭವನದಲಿ
ಖುಲ್ಲರೈವರು ತಮ್ಮ ಸೋತರು
ಬಲ್ಲವಿಕೆಯುಚಿತವನು ಮೌಳಿಯ
ನಲ್ಲಿ ತೋಱಾಯೆನುತ ತಪ್ಪಿದನಹಹ ಸಿರಿಮುಡಿಗೆ ೫
ಪದ್ಯದ ಅನ್ವಯಕ್ರಮ:
ದುಷ್ಪ್ರಶ್ನೆ ಎಲ್ಲಿಯದು? ಎಲ್ಲಿಯದು ಮಱುಮಾತು? ನೀ ಪುಷ್ಪವತಿಯಾಗು ನಡೆ, ಅಲ್ಲಿ ಕುರುರಾಜ ಭವನದಲಿ ಫಲವತಿಯಾಗು, ಐವರು ಖುಲ್ಲರು ಸೋತರು, ಮೌಳಿಯನಲ್ಲಿ ಬಲ್ಲವಿಕೆಯ ಉಚಿತವನು ತೋಱಾ ಎನುತ ಅಹಹ ಸಿರಿಮುಡಿಗೆ ತಪ್ಪಿದನು.
ಪದ-ಅರ್ಥ:
ಎಲ್ಲಿಯದು-ಕೂಡದು; ದುಷ್ಪ್ರಶ್ನೆ-ಕೆಟ್ಟ ಪ್ರಶ್ನೆ; ಮಱುಮಾತು-ಪ್ರತ್ಯುತ್ತರ; ಪುಷ್ಪವತಿ-ಋತುಮತಿ; ಫಲವತಿ-ಗರ್ಭಿಣಿ, ಬಸುರಿ; ಕುರುರಾಜಭವನ-ದುರ್ಯೋಧನನ ಅರಮನೆ; ಖುಲ್ಲರೈವರು– ಅಲ್ಪರಾದ ಐದುಮಂದಿ; ಸೋತರು-(ಪಗಡೆಯಲ್ಲಿ)ಸೋತುಹೋಗಿದ್ದಾರೆ; ಬಲ್ಲವಿಕೆ-ತಿಳಿಯಬೇಕಾದುದನು; ಉಚಿತವನು-ತಕ್ಕುದಾದುದನ್ನು; ಮೌಳಿಯನಲ್ಲಿ-ಕಿರೀಟಧಾರಿಯಲ್ಲಿ (ದುರ್ಯೋಧನನಲ್ಲಿ); ತೋಱಾ-ತೋರಿಸು, ಕೇಳು; ಸಿರಿಮುಡಿ-ಸಂಪದ್ಭರಿತವಾದ ಮುಡಿ; ತಪ್ಪಿದನು-ಮೀರಿದನು, ಅತಿಕ್ರಮಿಸಿದನು.
ನೀನು ಕೆಟ್ಟಪ್ರಶ್ನೆಯನ್ನು ಕೇಳಕೂಡದು, ನನ್ನ ಆಜ್ಞೆಗೆ ಪ್ರತ್ಯುತ್ತರವನ್ನು ಕೊಡಬಾರದು, ನೀನೀಗ ಪುಷ್ಪವತಿ(ಋತುಮತಿ)ಯಾಗಿರಬಹುದು, ದುರ್ಯೋಧನನ ಅರಮನೆಗೆ ನಡೆದು ಅಲ್ಲಿ ನೀನು ಫಲವತಿ(ಗರ್ಭಿಣಿ)ಯಾಗು. ಅಲ್ಪರಾದ ಐದುಮಂದಿ ಪಾಂಡವರು ದ್ಯೂತವನ್ನಾಡಿ ಸೋತಿದ್ದಾರೆ. ಅದರ ಬಗ್ಗೆ ತಿಳಿಯಬೇಕಾದುದನ್ನು, ಮತ್ತು ಉಚಿತಾನುಚಿತತೆಗಳನ್ನು ರಾಜನಾದ ದುರ್ಯೋಧನನಲ್ಲಿ ಕೇಳಿ ತಿಳಿದುಕೊ ಎನ್ನುತ್ತ ದ್ರೌಪದಿಯ ಸಂಪದ್ಭರಿತ(ಪವಿತ್ರ)ವಾದ ಸಿರಿಮುಡಿಗೆ ಕೈಯಿಕ್ಕಲು ಮುಂದಾಗಿ ಶಿಷ್ಟಚಾರವನ್ನು ಮೀರಿದನು.
(ನಾನು ಯುವರಾಜನಾಗಿರುವುದರಿಂದ ಈಗ ದಾಸಿಯಾಗಿರುವ ನೀನು ನನ್ನಲ್ಲಿ ಉಚಿತವಲ್ಲದ (ಕೆಟ್ಟ) ಪ್ರಶ್ನೆಗಳನ್ನು ಕೇಳಕೂಡದು. ನನ್ನ ಆಜ್ಞೆಯನ್ನು ಪಾಲಿಸುವುದಷ್ಟೇ ನಿನ್ನ ಕೆಲಸ. ನಿನ್ನ ಅಧಿಕಾರ, ದರ್ಪಗಳು ಹಿಂದೆ ರಾಜಭವನದಲ್ಲಿ ನಡೆದಿರಬಹುದು. ಆದರೆ, ಈಗ ನೀನು ರಾಣಿಯ ಪಟ್ಟವನ್ನು ಕಳೆದುಕೊಂಡು ದಾಸಿಯಾಗಿರುವೆ. ದಾಸಿಯಾದವಳು ತನ್ನ ಸ್ಥಾನಮಾನಗಳಿಗೆ ಮೀರಿ ವರ್ತಿಸಬಾರದು. ನೀನೀಗ ಪುಷ್ಪವತಿಯಾಗಿರಬಹುದು. ಕುರುರಾಜನ ಆಸ್ಥಾನಕ್ಕೆ ಬಂದು ಅಲ್ಲಿ ಫಲವತಿಯಾಗು. ನಿನ್ನ ಐದೂ ಮಂದಿ ಗಂಡಂದಿರು ದ್ಯೂತವನ್ನಾಡಿ ಸೋತಿದ್ದಾರೆ. ಮಾತ್ರವಲ್ಲ, ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಈಗ ನಿನ್ನ ಪ್ರಶ್ನೆಗಳೇನಿದ್ದರೂ ರಾಜನಾಗಿರುವ ದುರ್ಯೋಧನನ ಮುಂದೆ ಮಾತ್ರ. ದ್ಯೂತದ ಬಗ್ಗೆಯಾಗಲೀ, ಪಾಂಡವರು ಸೋತ ಬಗ್ಗೆಯಾಗಲೀ ಆತನಿಂದ ಸರಿಯಾದ ಉತ್ತರವನ್ನು ಪಡೆದುಕೊಳ್ಳು ಎನ್ನುತ್ತಲೇ ಶಿಷ್ಟಾಚಾರವನ್ನು ಅತಿಕ್ರಮಿಸಿ ದ್ರೌಪದಿಯ ಸಂಪದ್ಭರಿತವಾದ ಮುಡಿಗೆ ಕೈಹಾಕುವುದಕ್ಕೆ ಮುಂದಾದನು. ದುಶ್ಶಾಸನನ ಅನಾಗರಿಕವಾದ ಮಾತುಗಳು ಹಾಗೂ ಆತನ ಅಸಭ್ಯ ವರ್ತನೆಗಳು ಆತನ ಸ್ವಭಾವ ಹಾಗೂ ಮನಃಸ್ಥಿತಿಗೆ ಅನುಗುಣವಾಗಿಯೇ ಇರುವುದನ್ನು ಇಲ್ಲಿ ಕಂಡುಕೊಳ್ಳಬಹುದು. ತನ್ನ ಅಣ್ಣಂದಿರ ಹೆಂಡತಿ, ಸಂಬಂಧದಲ್ಲಿ ಅತ್ತಿಗೆಯಾದವಳು, ಇಂದ್ರಪ್ರಸ್ಥದ ಪಟ್ಟದ ರಾಣಿಯಾದ ದ್ರೌಪದಿಯನ್ನು ಹೇಗೆ ಮಾತನಾಡಿಸಬೇಕು? ಆಕೆಯೊಂದಿಗೆ ಹೇಗೆ ವರ್ತಿಸಬೇಕು ಎಂಬ ಕನಿಷ್ಠ ತಿಳಿವಳಿಕೆಯಾಗಲೀ, ತಾನಾಡುತ್ತಿರುವ ಮಾತುಗಳ ಅರ್ಥಗ್ರಹಿಕೆಯಾಗಲೀ ಕನಿಷ್ಠ ನಾಗರಿಕತನವಾಗಲೀ ದುಶ್ಶಾಸನನಲ್ಲಿ ಇಲ್ಲದಿರುವುದು ಇಲ್ಲಿ ಸ್ಪಷ್ಟವಾಗುತ್ತದೆ.)
ಆ ಮಹೀಶಕ್ರತುವರದೊಳು
ದ್ಧಾಮಮುನಿಜನರಚಿತಮಂತ್ರ
ಸ್ತೋಮಪುಷ್ಕರಪೂತ ಪುಣ್ಯಜಲಾಭಿಷೇಚನದ
ಶ್ರೀಮುಡಿಗೆ ಕೈಯಿಕ್ಕಿದನು ವರ
ಕಾಮಿನೀನಿಕುರುಂಬವಕಟಕ
ಟಾ ಮಹಾಸತಿ ಶಿವ ಶಿವಾ ಎಂದೊದಱಿತಲ್ಲಲ್ಲಿ. ೬
ಪದ್ಯದ ಅನ್ವಯಕ್ರಮ:
ಆ ಮಹೀಶ ಕ್ರತುವರದೊಳ್ ಉದ್ದಾಮ ಮುನಿಜನ ರಚಿತ ಮಂತ್ರ ಸ್ತೋಮ, ಪುಷ್ಕರ ಪೂತ ಪುಣ್ಯಜಲ ಅಭಿಷೇಚನದ ಶ್ರೀಮುಡಿಗೆ ಕೈಯಿಕ್ಕಿದನು, ವರಕಾಮಿನೀ ನಿರುರುಂಬವು ಅಲ್ಲಲ್ಲಿ ಅಕಟ ಅಕಟಾ ಮಹಾಸತಿ ಶಿವಶಿವಾ ಎಂದು ಒದಱಿತು.
ಪದ-ಅರ್ಥ:
ಮಹೀಶ-ರಾಜ; ಕ್ರತುವರದೊಳ್-ಯಜ್ಞದಲ್ಲಿ; ಉದ್ದಾಮಮುನಿಜನ-ಶ್ರೇಷ್ಠರಾದ ಮುನಿಗಳು, ಸಾಧಕ ಮುನಿಗಳು; ರಚಿತ-ಕೂಡಿದ; ಮಂತ್ರಸ್ತೋಮ-ಮಂತ್ರಘೋಷ; ಪುಷ್ಕರಪೂತ-ಶುದ್ಧವಾದ ತಾವರೆಯಿಂದ ಕೂಡಿದ; ಜಲಾಭಿಷೇಚನ-ಮಂತ್ರೋದಕದ ಪ್ರೋಕ್ಷಣೆ, ತೀರ್ಥಪ್ರೋಕ್ಷಣೆ; ಶ್ರೀಮುಡಿ-ಸಂಪದ್ಭರಿತವಾದ ಮುಡಿ(ಭರತಖಂಡದ ವಿವಿಧ ಪುಣ್ಯನದಿಗಳ ಪುಣ್ಯಜಲದಿಂದ ಅಭಿಷೇಕಗೊಂಡು ಪವಿತ್ರವಾದ ದ್ರೌಪದಿಯ ಮುಡಿ); ಕೈಯಿಕ್ಕು-ಕೈಹಾಕು, ಸೆಳೆ; ವರಕಾಮಿನೀ ನಿಕುರುಂಬ-ಚೆಲುವೆಯರ ಸಮೂಹ, ಸಖಿಯರ ಸಮೂಹ; ಮಹಾಸತಿ-ಪಾರ್ವತಿ; ಒದಱಿತು-ಬೊಬ್ಬಿಟ್ಟಿತು.
ಭರತಖಂಡದ ರಾಜ-ಮಹಾರಾಜರೆಲ್ಲರನ್ನು ಕೂಡಿಕೊಂಡು ಪಾಂಡವರು ಕೈಗೊಂಡ ರಾಜಸೂಯಯಾಗದಲ್ಲಿ ಶ್ರೇಷ್ಠರಾದ ಮುನಿಗಳು, ಸಾಧಕರು ಸೇರಿಕೊಂಡು ಮಂತ್ರಘೋಷಗಳ ಮೂಲಕ ಭರತಖಂಡದ ಪುಣ್ಯನದಿಗಳಿಂದ ತರಿಸಿಕೊಂಡ ತೀರ್ಥಜಲವನ್ನು ತಾವರೆ ಹೂವುಗಳ ಮೂಲಕ ಧರ್ಮರಾಯ-ದ್ರೌಪದಿಯರಿಗೆ ಅಭಿಷೇಕ ಮಾಡಿದ್ದರಿಂದ ’ಶ್ರೀಮುಡಿ’ ಎನಿಸಿಕೊಂಡಿರುವ ದ್ರೌಪದಿಯ ಮುಡಿಗೆ ದುಶ್ಶಾಸನನು ಕೈಹಾಕಿದನು. ಅದನ್ನು ನೋಡಿದೊಡನೆಯೇ ಆಕೆಯ ಸಖಿಯರೆಲ್ಲರೂ ಭಯಭೀತರಾಗಿ ಅಕಟ ಅಕಟಾ ಮಹಾಸತಿ, ಶಿವಶಿವಾ ಎಂದು ಬೊಬ್ಬೆ ಹಾಕಿದರು.
(ದ್ರೌಪದಿಯ ಮುಡಿ ಅದು ಇತರ ಹೆಂಗಸರ ಮುಡಿಯಂತೆ ಸಾಮಾನ್ಯಮುಡಿಯಲ್ಲ. ಅದು ಪಾಂಡವರು ಕೈಗೊಂಡ ರಾಜಾಸೂಯ ಯಾಗದ ಸಂದರ್ಭದಲ್ಲಿ ಭರತಖಂಡದ ಸಮಸ್ತ ಪುಣ್ಯನದಿಗಳ ತೀರ್ಥದಿಂದ ಪ್ರೋಕ್ಷಣೆಮಾಡಿಸಿಕೊಂಡು ಪವಿತ್ರವೂ ಸಂಪದ್ಭರಿತವೂ ಆಗಿ ಶ್ರೀಮುಡಿ ಎನಿಸಿಕೊಂಡಿದೆ. ಅದು ಸಕಲ ಗೌರವಾದರಗಳಿಗೆ ಪಾತ್ರವಾದ ಮುಡಿ. ಮೇಲಾಗಿ ಹೆಣ್ಣೊಬ್ಬಳ ಘನತೆಯ, ಸ್ಥಾನಮಾನಗಳ, ಆಕೆಯ ಮುತ್ತೈದೆತನದ, ಆಕೆಯ ಪರಿಪೂರ್ಣತೆಯ ಸಂಕೇತ. ಅಂತಹ ಮುಡಿಯನ್ನು ಗೌರವಿಸುವುದನ್ನು ಬಿಟ್ಟು, ಅವಮಾನಮಾಡುವ ಉದ್ದೇಶದಿಂದ ನೀಚನಾದ ದುಶ್ಶಾಸನನು ಅದಕ್ಕೆ ಕೈಹಾಕಿ ಸೆಳೆಯಲು ಮುಂದಾಗುತ್ತಾನೆ. ಇದು ಆತನ ಅನಾಗರಿಕತೆಯನ್ನು ಮಾತ್ರವಲ್ಲ, ದುರ್ಯೋಧನನ ರಾಜ್ಯದಲ್ಲಿ ಮಹಿಳೆಯೊಬ್ಬಳನ್ನು, ಅದಕ್ಕಿಂತಲೂ ಹೆಚ್ಚಾಗಿ ಒಂದು ದೇಶದ ರಾಣಿಯನ್ನು ನಡೆಸಿಕೊಳ್ಳುವ ರೀತಿಯನ್ನು ಸೂಚಿಸುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ತನ್ನ ಅತ್ತಿಗೆಯನ್ನು ಮರ್ಮಾಘಾತವಾಗುವಂತೆ ಅವಮಾನಿಸಲು ಪ್ರಯತ್ನಿಸುತ್ತಿರುವುದು ದುಶ್ಶಾಸನನ ನೀಚತ್ವವನ್ನು ಮಾತ್ರವಲ್ಲದೆ, ದುರ್ಯೋಧನನ ರಾಜ್ಯದಲ್ಲಿ ರಾಜನೀತಿಯ ಅಧಃಪತನವನ್ನು ಸೂಚಿಸುತ್ತದೆ. ಇದೊಂದು ಅನೀರೀಕ್ಷಿತವಾದ ಘೋರ ಕೃತ್ಯವಾದುದರಿಂದ ದ್ರೌಪದಿಯ ಸಖಿಯರು ಅಧೀರರಾಗಿ ಪಾರ್ವತಿಯನ್ನು, ಶಿವನನ್ನೂ ಮೊರೆಹೋಗುತ್ತಾರೆ.)
ಬೆದಱುಗಂಗಳ ಬಿಟ್ಟಮಂಡೆಯ
ಹುದಿದ ಹಾಹಾರವದ ತೊಡಕಿದ
ಪದಯುಗದ ಮೇಲುದಿನ ಬೀದಿಯ ಧೂಳಿ ಧೂಸರದ
ವದನಕಮಲದ ಖಳನ ವಾಮಾಂ
ಗದಲಿ ಬಾಗಿದ ತನುಲತೆಯ ವರ
ಸುದತಿ ಬಂದಳು ರಾಜಸಭೆಗೆ ನೃಪಾಲ ಕೇಳೆಂದ. ೭
ಪದ್ಯದ ಅನ್ವಯಕ್ರಮ:
ಬೆದಱು ಕಂಗಳ, ಬಿಟ್ಟ ಮಂಡೆಯ, ಹುದಿದ ಹಾಹಾರವದ, ತೊಡಕಿದ ಪದಯುಗದ, ಮೇಲುದಿನ ಬೀದಿಯ, ಧೂಳಿಧೂಸರದ ವದನಕಮಲದ ಖಳನ ವಾಮಾಂಗದಲಿ ಬಾಗಿದ ತನುಲತೆಯ ವರಸುದತಿ ರಾಜಸಭೆಗೆ ಬಂದಳು ನೃಪಾಲ ಕೇಳ್ ಎಂದ.
ಪದ-ಅರ್ಥ:
ಬೆದಱು+ಕಂಗಳ-ಹೆದರಿಸುವ ಕಣ್ಣುಗಳ; ಬಿಟ್ಟಮಂಡೆಯ-ಕೂದಲು ಕೆದರಿದ ತಲೆಯ; ಹುದಿದ-ಅತಿಯಾದ, ಹೆಚ್ಚಾದ; ಹಾಹಾರವ-ಬೊಬ್ಬೆ; ತೊಡಕಿದ ಪದಯುಗದ-ಪರಸ್ಪರ ಸಿಕ್ಕಿಹಾಕಿಕೊಳ್ಳುವ ಎರಡು ಪಾದಗಳು; ಮೇಲುದಿನ-ಉತ್ತರೀಯದ; ಬೀದಿಯ-ಬೀದಿಯಲ್ಲಿನ; ಧೂಳಿಧೂಸರದ– ಧೂಳಿನ ಕಂಡುಬಣ್ಣವನ್ನು ಹೊಂದಿದ; ಖಳ-ದುಷ್ಟ, ನೀಚ(ದುಶ್ಶಾಸನ); ವಾಮಾಂಗದಲಿ-ಎಡಭಾಗದಲ್ಲಿ; ಬಾಗಿದ ತನುಲತೆಯ-ಅವಮಾನ ಹಾಗೂ ಹಿಂಸೆಗಳಿಂದ ಕುಂದಿಹೋದ ದೇಹದ; ವರಸುದತಿ-ಶ್ರೇಷ್ಠಳಾದ ಪರಿವೃತೆ(ದ್ರೌಪದಿ); ರಾಜಸಭೆ-ದುರ್ಯೋಧನನ ಆಸ್ಥಾನ; ನೃಪಾಲ-ಜನಮೇಜಯ.
ವಿಶೇಷ ಟಿಪ್ಪಣಿ: ಜನಮೇಜಯ ಪಾಂಡವರ ಮರಿಮಗ. ಪಾಂಡವರ ಮೊಮ್ಮಗ ಅಭಿಮನ್ಯು (ಅರ್ಜುನ ಹಾಗೂ ಸುಭದ್ರೆಯರ ಮಗ). ಅಭಿಮನ್ಯುವಿನ ಮಗ ಪರೀಕ್ಷಿತ. ಈತನ ಮಗ ಜನಮೇಜಯ. ಈತ ತನ್ನ ಪೂರ್ವಜರ ಕಥೆಯನ್ನು ತಿಳಿದುಕೊಳ್ಳಬೇಕೆಂಬ ಹಂಬಲದಲ್ಲಿದ್ದಾಗ ವೈಶಂಪಾಯನ ಮುನಿಗಳು ಆತನಿಗೆ ಪಾಂಡವರ ಕಥೆಯನ್ನು ವಿವರಿಸುತ್ತಾರೆ. ಹಾಗಾಗಿ ಈ ಕಾವ್ಯದ ಹಲವು ಪದ್ಯಗಳ ಮೊದಲಲ್ಲಿ ಅಥವಾ ಕೊನೆಯಲ್ಲಿ ಬರುವ ನೃಪಾಲ, ಭೂಪಾಲ ಈ ಮೊದಲಾದ ಪದಗಳು ಜನಮೇಜಯನನ್ನು ಕುರಿತಾಗಿವೆ.
ಹೆದರಿಸುವ ಕಣ್ಣುಗಳ, ಕೀರೀಟ ಅಥವಾ ಪೇಟವಿಲ್ಲದೆ ಕೂದಲು ಕೆದರಿಕೊಂಡ ತಲೆಯ, ಜೋರಾಗಿ ಬೊಬ್ಬಿಡುತ್ತ, ಆವೇಶದಿಂದ ದೇಹದ ಸ್ಥಿಮಿತವನ್ನು ಕಳೆದುಕೊಂಡು ಅಡ್ಡಾದಿಡ್ಡಿಯಾಗಿ ಹೆಜ್ಜೆಯಿಡುತ್ತ, ಬೀದಿಯುದ್ದಕ್ಕೂ ಉತ್ತರೀಯ ಹರಡಿಕೊಂಡುದರಿಂದ ಎದ್ದ ಧೂಳು ಮುಸುಕಿಕೊಂಡು ಕಂದುಗಟ್ಟಿದ ಮುಖದ, ದುಷ್ಟನಾದ ದುಶ್ಶಾಸನನ ಎಡಭಾಗದಲ್ಲಿ ಅವಮಾನದಿಂದ, ಹಿಂಸೆಗಳಿಂದ ಕುಂದಿಹೋಗಿ ಮಹಾಪತಿವ್ರತೆಯಾದ ದ್ರೌಪದಿಯು ದುರ್ಯೋಧನನ ರಾಜಸಭೆಗೆ ಬಂದಳು.
(ದ್ರೌಪದಿ ಇಂದ್ರಪ್ರಸ್ಥದ ರಾಣಿ, ಧರ್ಮರಾಯಾದಿಗಳು ದ್ಯೂತದಲ್ಲಿ ಆಕೆಯನ್ನು ಪಣವಾಗಿಟ್ಟು ಕಳೆದುಕೊಂಡರೂ ದುರ್ಯೋಧನಾದಿಗಳ ಪ್ರಕಾರ ಆಕೆಯ ರಾಣಿಪಟ್ಟ ಹೋಗಿರಬಹುದೇ ವಿನಾ ಸಂಬಂಧದಲ್ಲಿ ಅತ್ತಿಗೆಯ ಸ್ಥಾನ ಕಳೆದುಹೋಗಿಲ್ಲ. ಆದರೆ ದುರ್ಯೋಧನ, ದುಶ್ಶಾಸನರು ಅದನ್ನು ಗೌರವಿಸುವುದನ್ನು ಕಲಿತಿಲ್ಲ. ಹಾಗಾಗಿ ಒಬ್ಬ ರಾಣಿಯನ್ನು ಅದರಲ್ಲೂ ಅತ್ತಿಗೆಯನ್ನು ರಾಜಸಭೆಗೆ ಕರೆದುಕೊಂಡು ಬರಬೇಕಾದ ಮರ್ಯಾದೆಯನ್ನೂ ಅದರ ಘನತೆಯನ್ನೂ ಅವರಿಬ್ಬರೂ ಮರೆತ್ತಿದ್ದಾರೆ. ದ್ರೌಪದಿಯ ಮುಡಿಯನ್ನು ಹಿಡಿದು ಅಬ್ಬರಿಸುತ್ತ ದುಶ್ಶಾಸನ ಬೀದಿಯಲ್ಲಿ ಹಿಡಿದೆಳೆಯುತ್ತ, ದ್ರೌಪದಿಗೆ ಸರಿಯಾಗಿ ನಡೆಯುವುದಕ್ಕೂ ಅವಕಾಶಕೊಡದೆ, ಅವಮಾನಿಸುತ್ತ ಬಂದುದರಿಂದ ಆಕೆ ಇನ್ನಷ್ಟು ಕುಗ್ಗಿಹೋಗುತ್ತಾಳೆ. ಬೀದಿಯಲ್ಲಿ ದುಶ್ಶಾಸನ ಅಡ್ಡಾದಿಡ್ಡಿ ಬರುತ್ತಿರುವಾಗ ಆತನ ಉತ್ತರೀಯ ಬೀದಿಯ ಧೂಳಿನಲ್ಲಿ ಹೊರಳಾಡುವಾಗ ಎದ್ದ ಧೂಳು ಆತನ ಮುಖವನ್ನು ಇನ್ನಷ್ಟು ರೌದ್ರಗೊಳಿಸಿರುವಂತೆ ಕಾಣುತ್ತಿದೆ. ತನ್ನ ಉತ್ತರೀಯ ಬೀದಿಯ ಮಣ್ಣಿನಲ್ಲಿ ಹೊರಳಾಡುತ್ತಿದ್ದರೂ ಆತ ಅದನ್ನು ಲೆಕ್ಕಿಸದೆ, ಇನ್ನಷ್ಟು ಆವೇಶಗೊಂಡು, ಸಾಧ್ಯವಾದಷ್ಟು ದ್ರೌಪದಿಯನ್ನು ಅವಮಾನಿಸುತ್ತ ರಾಜಸಭೆಗೆ ಎಳೆದುಕೊಂಡು ಬಂದನು. ಒಂದೆಡೆ, ಇಂದ್ರಪ್ರಸ್ಥದ ರಾಣಿ; ಇನ್ನೊಂದೆಡೆ, ತನ್ನ ಗಂಡಂದಿರಾದ ಪಾಂಡವರು ತನ್ನನ್ನು ಪಣವಾಗಿ ಒಡ್ಡಿ ಸೋತುದರಿಂದ ಕೌರವರು ತನ್ನನ್ನು ನಡೆಸಿಕೊಳ್ಳುತ್ತಿರುವ ರೀತಿ, ಮತ್ತೊಂದೆಡೆ ದುಶ್ಶಾಸನ ತನ್ನನ್ನು ಅವಮಾನಕರವಾಗಿ ಎಳೆದೊಯ್ಯುವ ರೀತಿಯಿಂದ ದ್ರೌಪದಿ ಸಹಿಸಲಸಾಧ್ಯವಾದ ಅವಮಾನಕ್ಕೆ ಈಡಾಗುತ್ತಾಳೆ.)
ಅಹಹ ಪಾಂಡವರಾಯಪಟ್ಟದ
ಮಹಿಳೆಗಿದು ವಿಧಿಯೇ ಮಹಾಕ್ರತು
ವಿಹಿತ ಮಂತ್ರಜಲಾಭಿಷಿಕ್ತ ಕಚಾಗ್ರೆಗಿದು ವಿಧಿಯೆ
ಮಿಹಿರಬಿಂಬವ ಕಾಣದೀನೃಪ
ಮಹಿಳೆಗಿದು ವಿಧಿಯೇ ವಿಧಾತ್ರನ
ಕುಹಕವೈಸಲೆ ಶಿವ ಶಿವಾ ಎಂದರು ಸಭಾಸದರು. ೮
ಪದ್ಯದ ಅನ್ವಯಕ್ರಮ:
ಸಭಾಸದರು, ಅಹಹ ಪಾಂಡವರಾಯ ಪಟ್ಟದ ಮಹಿಳೆಗೆ ಇದು ವಿಧಿಯೇ? ಮಹಾಕ್ರತು ವಿಹಿತ ಮಂತ್ರಜಲ ಅಭಿಷಿಕ್ತ ಕಚಾಗ್ರೆಗೆ ಇದು ವಿಧಿಯೇ? ಮಿಹಿರಬಿಂಬವ ಕಾಣದ ಆ ನೃಪಮಹಿಳೆಗೆ ಇದು ವಿಧಿಯೇ? ವಿಧಾತ್ರನ ಕುಹಕವೈಸಲೆ ಶಿವಶಿವಾ ಎಂದರು.
ಪದ-ಅರ್ಥ:
ಪಾಂಡವರಾಯ-ಧರ್ಮರಾಯ; ಪಟ್ಟದ ಮಹಿಳೆ-ಪಟ್ಟದ ರಾಣಿ; ಮಹಾಕ್ರತು-ಮಹಾಯಜ್ಞ (ರಾಜಾಸೂಯ ಯಾಗ); ವಿಹಿತ-ಒಡಗೂಡಿದ; ಮಂತ್ರಜಲಾಭಿಷಿಕ್ತ-ಮಂತ್ರ ಮುಖೇನ ತೀರ್ಥದಿಂದ ಅಭಿಷೇಕಗೊಂಡ; ಕಚಾಗ್ರೆ-ಸಮೃದ್ಧವಾದ ಮುಡಿಯುಳ್ಳವಳು(ದ್ರೌಪದಿ); ವಿಧಿಯೆ-ದುರವಸ್ಥೆಯೇ; ವಿಧಾತ್ರ-ವಿಧಿ, ಬ್ರಹ್ಮ; ಕುಹಕವೈಸಲೆ-ಮೋಸವಲ್ಲವೇ?; ಸಭಾಸದರು-ಸಭಿಕರು.
ಅಯ್ಯೋ ಧರ್ಮರಾಯನ ಪಟ್ಟದ ರಾಣಿಯಾದ ದ್ರೌಪದಿಗೆ ಒದಗಿದ ವಿಧಿಯೇ?! ರಾಜಸೂಯ ಮಹಾಯಾಗದ ಸಂದರ್ಭದಲ್ಲಿ ಭರತಖಂಡದ ಪುಣ್ಯನದಿಗಳ ತೀರ್ಥದಿಂದ ಮಂತ್ರಮುಖೇನ ಅಭಿಷೇಕ ಮಾಡಿಸಿಕೊಂಡ ದೀರ್ಘವಾದ ಕೇಶವನ್ನು ಹೊಂದಿದ ದ್ರೌಪದಿಗೆ ಇದು ವಿಧಿಯೇ?! ಜೀವನದುದ್ದಕ್ಕೂ ಸೂರ್ಯಬಿಂಬವನ್ನೇ ಕಾಣದೆ ಸದಾ ಅರಮನೆಯಲ್ಲಿಯೇ ಇದ್ದ ಕೋಮಲೆಯಾದ ರಾಜಕುಮಾರಿ ದ್ರೌಪದಿಗೆ ಇದು ವಿಧಿಯೇ?! ಇದು ನಿಸ್ಸಂದೇಹವಾಗಿಯೂ ವಿಧಿಯ ಮೋಸದಾಟವಲ್ಲವೇ? ಎಂದು ಸಭಿಕರು ತಮ್ಮಷ್ಟಕ್ಕೇ ನೊಂದುಕೊಂಡರು.
(ದ್ರುಪದಿ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಹೆಣ್ಣಲ್ಲ. ಅವಳು ರಾಜವಂಶದಲ್ಲಿ ಹುಟ್ಟಿದವಳು. ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವಳು. ಸೂರ್ಯನ ಬಿಸಿಲಿಗೆ ನಲುಗದೆ ಅರಮನೆಯ ತಂಪು ವಾತಾವರಣದಲ್ಲಿ ಪರಿಚಾರಕ-ಪರಿಚಾರಿಕೆಯರಿಂದ ಸೇವೆಮಾಡಿಸಿಕೊಂಡು ನಲುಗದೆ ಬೆಳೆದವಳು. ಸ್ವಯಂವರದಲ್ಲಿ ಐದು ಮಂದಿ ಪಾಂಡವರನ್ನು ಗಂಡಂದಿರಾಗಿ ಪಡೆದು ಇಂದ್ರಪ್ರಸ್ಥದ ರಾಣಿಯಾದವಳು. ಪಾಂಡವರಿಗೆ ಪ್ರೇರಕಶಕ್ತಿಯಾದವಳು. ಪಾಂಡವರು ತಾವು ಇಂದ್ರಪ್ರಸ್ಥದಲ್ಲಿ ಅಧಿಕಾರವನ್ನು ಸ್ವೀಕರಿಸಿದ ಮೇಲೆ ನಡೆದ ರಾಜಸೂಯ ಯಾಗದ ಸಂದರ್ಭದಲ್ಲಿ ಧರ್ಮರಾಯನೊಂದಿಗೆ ಯಜ್ಞದ ಯಜಮಾನಿಕೆಯನ್ನು ವಹಿಸಿದಾಗ ಯಾಗದ ಎಲ್ಲಾ ಋತ್ವಿಜ(ಯಜ್ಞಪುರೋಹಿತ)ರಿಂದ ಭರತಖಂಡದ ಪುಣ್ಯನದಿಗಳಿಂದ ತರಿಸಿಕೊಂಡ ತೀರ್ಥಜಲದಿಂದ ಅಭಿಷೇಕ ಮಾಡಿಸಿಕೊಂಡ ಅದೃಷ್ಟವಂತೆ ಎನಿಸಿಕೊಂಡವಳು. ಭರತಖಂಡದ ಯಾವ ರಾಜವಂಶದಲ್ಲಿ ಹುಟ್ಟಿದ ರಾಜಕುಮಾರಿಯರಿಗಾಗಲೀ ಯಾವ ದೇಶದ ಪಟ್ಟದ ರಾಣಿಯರಿಗಾಗಲೀ ಇಂತಹ ಭಾಗ್ಯ ಲಭಿಸಿರಲಿಲ್ಲ. ಅಂತಹ ಅಪೂರ್ವ ಅವಕಾಶ ದ್ರೌಪದಿಗೆ ಲಭಿಸಿತ್ತು. ಪುಣ್ಯನದಿಗಳ ತೀರ್ಥಜಲದಿಂದ ಅಭಿಷೇಕಮಾಡಿಸಿಕೊಂಡ ಆಕೆಯ ತಲೆಗೂದಲು ಇನ್ನಷ್ಟು ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ಅಂತಹ ಕೂದಲಿಗೆ ದುಶ್ಶಾಸನ ಕೈಹಾಕುವ ಮೂಲಕ ಅವಮಾನಿಸಿದ್ದಾನೆ. ಎಲ್ಲಾ ರೀತಿಗಳಿಂದಲೂ ವಿಶೇಷ ಮನ್ನಣೆ, ಘನತೆ, ಗೌರವ, ಸ್ಥಾನಮಾನಗಳನ್ನು ಪಡೆದುಕೊಂಡ ದ್ರೌಪದಿಗೆ ಇಂದು ಇಂತಹ ಮಾನಹಾನಿಕರವಾದ ಸ್ಥಿತಿ ಪ್ರಾಪ್ತವಾಯಿತೆ? ಇದು ವಿಧಿಯ ಮೋಸದಾಟವಲ್ಲದೆ ಇನ್ನೇನು?! ಎಂದು ದುರ್ಯೋಧನನ ಆಸ್ಥಾನದ ಸಭಿಕರು ನೊಂದುಕೊಂಡರು.)
ವನಜಮುಖಿಯಕ್ಕೆಯನು ದುಶ್ಶಾ
ಸನನ ದುರ್ನೀತಿಯನು ದುರ್ಯೋ
ಧನನ ದುಶ್ಚೇಷ್ಟೆಯನು ಕಂಡೀಭೀಮಫಲುಗುಣರು
ಮನದೊಳಗೆ ಕೌರವನ ಕರುಳನು
ತನಿರಕುತದಲಿ ಕುದಿಸಿದರು ನಿಜ
ಜನಿತಕರ್ಮಕ್ರಮವ ನೆನೆವುದನಱಿದನಾ ಭೂಪ ೯
ಪದ್ಯದ ಅನ್ವಯಕ್ರಮ:
ವನಜಮುಖಿಯ ಅಕ್ಕೆಯನು, ದುಶ್ಶಾಸನ ದುರ್ನೀತಿಯನು, ದುರ್ಯೋಧನ ದುಶ್ಚೇಷ್ಟೆಯನು, ಕಂಡು ಈ ಭೀಮ ಫಲುಗುಣರು ಮನದೊಳಗೆ ಕೌರವನ ಕರುಳನು ತನಿರಕುತದಲಿ ಕುದಿಸಿದರು. ಆ ಭೂಪ, ನಿಜ ಜನಿತ ಕರ್ಮಕ್ರಮವ ನೆನೆವುದನ್ ಅಱಿದನ್.
ಪದ-ಅರ್ಥ:
ವನಜಮುಖಿ-ತಾವತೆಯಂತಹ ಮುಖವುಳ್ಳವಳು(ದ್ರೌಪದಿ); ಅಕ್ಕೆ-ಅಳಲು, ದುಃಖ; ದುರ್ನೀತಿ-ಕೆಟ್ಟನೀತಿ, ದುರ್ವರ್ತನೆ; ಫಲುಗುಣ-ಅರ್ಜುನ; ತನಿರಕುತ-ರಕ್ತತರ್ಪಣ; ಕುದಿಸು-ರೋಷವನ್ನು ಕಾರು; ನಿಜಜನಿತ-ತನ್ನಿಂದಾಗಿ ಉಂಟಾದ, ತನ್ನ ಕರ್ಮಫಲದಿಂದಾಗಿ ಉಂಟಾದ; ನೆನೆವುದನ್-ನೆನಪಿಸಿಕೊಳ್ಳುವುದನ್ನು; ಭೂಪ-ಧರ್ಮರಾಯ; ಅಱಿದನ್-ತಿಳಿದನು.
ಕೋಮಲೆಯಾದ ದ್ರೌಪದಿಯ ಅಳಲನ್ನು, ದುಶ್ಶಾಸನನ ನೀತಿಗೆಟ್ಟ ವರ್ತನೆಗಳನ್ನು, ಸಭೆಯಲ್ಲಿ ದುರ್ಯೋಧನನ ಕೆಟ್ಟ ಚೇಷ್ಟೆಗಳನ್ನು, ನೋಡುತ್ತಿದ್ದಂತೆಯೇ ಭೀಮ ಹಾಗೂ ಅರ್ಜುನರ ಕೋಪ ಅವರ ಮೈಯೆಲ್ಲೆಲ್ಲಾ ವ್ಯಾಪಿಸಿಕೊಂಡು ಮನಸ್ಸಿನಲ್ಲಿಯೇ ದುಯೋಧನನ ಹಾಗೂ ದ್ರೌಪದಿಯನ್ನು ಅವಮಾನಿಸುತ್ತಿರುವ ದುಶ್ಶಾಸನ ಕರುಳನ್ನು ಕಿತ್ತು ತಕ್ತತರ್ಪಣ ಕೊಡುವಷ್ಟು ರೋಷವನ್ನು ಕಾರಿದರು. ಧರ್ಮರಾಯ ತನ್ನ ಕರ್ಮಫಲದಿಂದ ಉಂಟಾಗುತ್ತಿರುವ ಈ ವೈಪರಿತ್ಯಗಳಿಗೆ ತನ್ನ ತಮ್ಮಂದಿರ ಪ್ರತಿಕ್ರಿಯೆಗಳನ್ನು ಸೂಕ್ಷ್ಮವಾಗಿ ಅರಿತುಕೊಳ್ಳತೊಡಗಿದನು.
(ದುರ್ಯೋಧನನ ಸಭೆಯಲ್ಲಿ ಘನತೆ ಮೀರಿದ, ಗೌರವ ಮೀರಿದ ಘಟನೆಗಳು ನಿರಂತರವಾಗಿ ಜರಗುತ್ತಿವೆ. ದ್ರೌಪದಿ ಪಾಂಚಾಲ ದೇಶದ ರಾಜಕುಮಾರಿ. ಇಂದ್ರಪ್ರಸ್ಥದ ಪಟ್ಟದ ರಾಣಿ. ಮೇಲಾಗಿ ಪಾಂಡವರ ಅದರಲ್ಲೂ ದುರ್ಯೋಧನಾದಿಗಳಿಗೆ ಅತ್ತಿಗೆ. ಅತ್ತಿಗೆ ತಾಯಿಗೆ ಸಮಾನ. ಆಕೆಯನ್ನು ಆ ರೀತಿಯಲ್ಲಿ ನಡೆಸಿಕೊಳ್ಳದೆ ಅತ್ಯಂತ ಅವಮಾನಕರವಾಗಿ, ಹೀನಾಯವಾಗಿ, ಅಮಾನುಷವಾಗಿ ನಡೆಸಿಕೊಳ್ಳುತ್ತಿರುವ ದುಯೋಧನ ಹಾಗೂ ದುಶ್ಶಾಸನರ ಕುಹಕದ ವರ್ತನೆಗಳನ್ನು, ಅವರ ದುರಹಂಕಾರವನ್ನು, ನೀಚತನವನ್ನು, ದ್ರೌಪದಿಯನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ನೋಡುತ್ತಲೇ ಭೀಮ ಹಾಗೂ ಅರ್ಜುನರ ಕೋಪ ಭೋರ್ಗರೆಯತೊಡಗಿತು. ಅವರಿಗೆ ತಮ್ಮಷ್ಟಕ್ಕೇ ದುರ್ಯೋಧನ, ದುಶ್ಶಾಸನರ ಕರುಳನ್ನು ಕಿತ್ತು ರಕ್ತತರ್ಪಣ ನೀಡಬೇಕೆಂಬ ಆಕ್ರೋಶ ಉಂಟಾಯಿತು. ಜೊತೆಗೆ ದ್ರೌಪದಿಯನ್ನು ಮಾತ್ರವಲ್ಲದೆ, ತಮ್ಮನ್ನೂ ಈ ಸ್ಥಿತಿಗೆ ತಂದಿಟ್ಟ ಧರ್ಮರಾಯನ ಮೇಲೂ ಆಕ್ರೋಶ ಉಂಟಾಯಿತು. ಧರ್ಮರಾಯನು ಭೀಮ, ಅರ್ಜುನರನ್ನು ಸೂಕ್ಷ್ಮವಾಗಿ ಗಮನಿಸಿತ್ತಾ ಇದೆಲ್ಲವನ್ನೂ ಅರಿತುಕೊಳ್ಳತೊಡಗಿದನು. ತನ್ನಿಂದಾಗಿ ತಮ್ಮಂದಿರು, ಹೆಂಡತಿ ಪಡಬಾರದ ಕಷ್ಟ ಪಡಬೇಕಾಯಿತಲ್ಲ! ಸಹಿಸಲಾರದ ಅವಮಾನಗಳನ್ನು ಸಹಿಸಬೇಕಾಯಿತಲ್ಲ! ಅನುಭವಿಸಲಾಗದ ನೋವು, ಹಿಂಸೆಗಳನ್ನು ಅನುಭವಿಸಬೇಕಾಯಿತಲ್ಲ! ಎಂದು ತನ್ನಷ್ಟಕ್ಕೇ ಅಂದುಕೊಂಡನು.)
ಹುಬ್ಬಿನಲಿ ನಿಲಿಸಿದನು ಪವನಜ
ನುಬ್ಬಟೆಯನರ್ಜುನನ ವಿಕೃತಿಯ
ನಿಬ್ಬರಾಳಾಪವನು ಧರ್ಮರಹಸ್ಯನಿಷ್ಠೆಯಲಿ
ಹಬ್ಬಿದುದು ಭೀಷ್ಮಂಗೆ ಶೋಕದ
ಮಬ್ಬು ಗುರುಗೌತಮರು ವಿದುರನು
ಸರ್ಬ ಖೇದಾಂಬುಧಿಯೊಳದ್ದರು ಭೂಪ ಕೇಳೆಂದ. ೧೦
ಪದ್ಯದ ಅನ್ವಯಕ್ರಮ:
ಪವನಜನ ಉಬ್ಬಟೆಯನು, ಅರ್ಜುನನ ವಿಕೃತಿಯನು ಹುಬ್ಬಿನಲಿ; ಇಬ್ಬರ ಆಳಾಪವನು ಧರ್ಮರಹಸ್ಯ ನಿಷ್ಠೆಯಲಿ ನಿಲಿಸಿದನು. ಭೀಷ್ಮಂಗೆ ಶೋಕದ ಮಬ್ಬು ಹಬ್ಬಿದುದು; ಗುರು, ಗೌತಮರು, ವಿದುರನು ಸರ್ಬ ಖೇದ ಅಂಬುಧಿಯೊಳ್ ಅದ್ದರು ಭೂಪ ಕೇಳೆಂದ.
ಪದ-ಅರ್ಥ:
ನಿಲಿಸು-ತಡೆ; ಪವನಜ-ಭೀಮ; ಉಬ್ಬಟೆ-ಉದ್ವೇಗ; ವಿಕೃತಿ-ವಿಕಾರ ವರ್ತನೆ, ಕೋಪದ ಭರದಲ್ಲಿ ಉಂಟಾಗುವ ಅಂಗಚೇಷ್ಟೆ; ಆಳಾಪ-ಮಾತು; ಧರ್ಮರಹಸ್ಯನಿಷ್ಠೆ-ಧರ್ಮಬದ್ಧವಾದ ನಿಷ್ಠೆ; ಧರ್ಮ ಪರಿಜ್ಞಾನದ ನಿಯತ್ತು; ನಿಲಿಸು-ತಡೆ; ಶೋಕದ ಮಬ್ಬುದುಃಖದಿಂದ ಉಂಟಾಗುವ ಅತಂತ್ರ ಸ್ಥಿತಿ; ವಿದುರ-ದುರ್ಯೋಧನನ ಮಂತ್ರಿ; ಸರ್ಬ-ಸರ್ವರು; ಖೇದಾಂಬುಧಿ– ದುಃಖಸಾಗರ; ಅದ್ದರು-ಮುಳುಗಿದರು; ಭೂಪ-ಜನಮೇಜಯ.
ದ್ರೌಪದಿಯನ್ನು ರಾಜಸಭೆಯಲ್ಲಿ ದುರ್ಯೋಧನಾದಿಗಳು ನಡೆಸಿಕೊಳ್ಳುತ್ತಿರುವ ರೀತಿಯನ್ನು ಕಂಡು ಭೀಮನಲ್ಲಿ ಉಂಟಾದ ಉದ್ವೇಗವನ್ನೂ ಅರ್ಜುನನಲ್ಲಿ ಉಂಟಾದ ವಿಕಾರವರ್ತನೆಗಳನ್ನೂ ಅವರಿಬ್ಬರ ಮಾತುಕತೆಗಳನ್ನೂ ಧರ್ಮರಾಯನು ಧರ್ಮಪರಿಜ್ಞಾನದ ನಿಯತ್ತಿನಿಂದ ಹುಬ್ಬಿನ ಮೂಲಕ ತಡೆದನು. ಸಭೆಯಲ್ಲಿ ಆಸೀನರಾಗಿದ್ದ ಭೀಷ್ಮ, ಗುರು ಗೌತಮ, ಮಂತ್ರಿ ವಿದುರ ಮೊದಲಾದವರೆಲ್ಲರೂ ಈ ಘಟನೆಯನ್ನು ನೋಡಿ ದುಃಖಸಾಗರದಲ್ಲಿ ಮುಳುಗಿದರು.
(ದ್ರೌಪದಿ ಧರ್ಮರಾಯನ ಪಟ್ಟದ ರಾಣಿ. ಅವಳೇನೂ ಸಾಮಾನ್ಯಳಲ್ಲ. ಧರ್ಮರಾಯಾದಿಗಳು ಅವಳನ್ನು ಪಣಕ್ಕಿಟ್ಟು ಸೋತರೂ ಅವಳ ಘನತೆಗಾಗಲೀ, ಸ್ಥಾನಮಾನಕ್ಕಾಗಲೀ ಕುಂದುಂಟಾಗಿಲ್ಲ. ಅಥವಾ ದುರ್ಯೋಧನಾದಿಗಳೊಂದಿಗಿನ ಅವಳ ಅತ್ತಿಗೆ ಎಂಬ ಸಂಬಂಧ ಕಡಿದುಹೋಗಿಲ್ಲ. ಆಕೆ ಒಂದೆಡೆ ರಾಣಿ, ಇನ್ನೊಂದೆಡೆ ಅತ್ತಿಗೆ. ಇವುಗಳನ್ನು ಅರ್ಥೈಸಿಕೊಂಡು ಅವಳನ್ನು ಗೌರವದಿಂದ ನಡೆಸಿಕೊಳ್ಳಬೇಕಲ್ಲದೆ, ರಾಜಸಭೆಗೆ ಆಕೆಯನ್ನು ಮರ್ಯಾದೆಯಿಂದ ಕರೆತರಬೇಕಲ್ಲದೆ ಅತ್ಯಂತ ಹೀನಾಯವಾಗಿ, ಅಗೌರವದಿಂದ, ಮಾನಹಾನಿಕರವಾಗಿ ಅವಮಾನಿಸುತ್ತ ಕರೆತರುವುದು, ರಾಜಸಭೆಯಲ್ಲಿ ಅಗೌರವದಿಂದ ಹೀನಾಯವಾಗಿ ನಡೆಸಿಕೊಳ್ಳುವುದು, ಒಬ್ಬ ಮಹಿಳೆಯ ಅದರಲ್ಲೂ ಪ್ರಥಮ ಮಹಿಳೆಯ ಸ್ಥಾನಮಾನಗಳನ್ನು ಗೌರವಿಸದೆ ಅನೈತಿಕವಾಗಿ ನಡೆಸಿಕೊಳ್ಳುವುದು ಧರ್ಮರಾಯನಿಗಾಗಲೀ ಆತನ ತಮ್ಮಂದಿರಿಗಾಗಲೀ ಸಹಿಸಿಕೊಳ್ಳಲಾಗಲಿಲ್ಲ. ದುರ್ಯೋಧನ, ದುಶ್ಶಾಸನರ ದುರ್ವರ್ತನೆಗಳನ್ನು ಸಹಿಸಿಕೊಳ್ಳಲಾರದೆ ಭೀಮ ಹಾಗೂ ಅರ್ಜುಜನರು ಕೆರಳುತ್ತಾರೆ, ಅವರಿಬ್ಬರನ್ನೂ ಸದೆಬಡಿಯುವುದಕ್ಕೆ ಹಂಬಲಿಸುತ್ತಾರೆ. ಅದನ್ನು ಧರ್ಮರಾಯ ಮೊದಲೇ ಅರಿತುಕೊಂಡು ತನ್ನ ಕಣ್ಸನ್ನೆಯ ಮೂಲಕ ಪ್ರತೀಕಾರಕ್ಕೆ ಇದು ಸಮಯವಲ್ಲ ಎಂದು ತಡೆಯುತ್ತಾನೆ. ಇನ್ನೊಂದೆಡೆ ರಾಜಸಭೆಯಲ್ಲಿ ಆಸೀನರಾದ ಪಿತಾಮಹ ಭೀಷ್ಮ, ರಾಜಗುರು ಗೌತಮ, ಮಂತ್ರಿ ವಿದುರ ಮೊದಲಾದವರು ಈ ದುರ್ಘಟನೆಯನ್ನು, ದುರ್ಯೋಧನಾದಿಗಳ ಅನೈತಿಕವಾದ ವರ್ತನೆಗಳನ್ನು, ಪಾಂಡವರಿಗೆ ಹಾಗೂ ದ್ರೌಪದಿಗಾಗುತ್ತಿರುವ ಅವಮಾನಗಳನ್ನು ಸಹಿಸಿಕೊಳ್ಳಲಾರದೆ ಅವರೆಲ್ಲರೂ ದುಃಖಸಾಗರದಲ್ಲಿ ಮುಳುಗಿದರು.)
(ಭಾಗ-೨ರಲ್ಲಿ ಮುಂದುವರಿದಿದೆ)