ಸಾಹಿತ್ಯಾನುಸಂಧಾನ

heading1

ಶ್ರೀಮುಡಿಗೆ ಕೈಯಿಕ್ಕಿದನು-ಕುಮಾರವ್ಯಾಸ-ಭಾಗ-೨

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ)- (ಭಾಗ-೨)

ಇತ್ತಲಬಲೆಯ ವಿಧಿಯ ಕೇಳತಿ

ಮತ್ತನೈ ಧೃತರಾಷ್ಟ್ರಸುತನಾ

ಮತ್ತಗಜಗಾಮಿನಿಯ ಬಿಡಿಸಿದನವನ ಕೈಯಿಂದ

ನೆತ್ತ ಸೋತುದು ನಿನ್ನನ್ನೊಡ್ಡಿ ನೃ

ಪೋತ್ತಮನು ಸಲೆ ಮಾರ ಮಾರಿದ

ನತ್ತೊಡೇನಹುದೆಲೆಗೆ ನಡೆ ತೊತ್ತಿರ ಹಿಂಡ ಹೊಗು ಎಂದ  ೧೧

ಪದ್ಯದ ಅನ್ವಯಕ್ರಮ:

ಇತ್ತಲ್ ಅಬಲೆಯ ವಿಧಿಯ ಕೇಳ್, ಅತಿ ಮತ್ತನೈ ಧೃತರಾಷ್ಟ್ರ ಸುತನ್, ಅವನ ಕೈಯಿಂದ ಆ ಮತ್ತಗಜ ಗಾಮಿನಿಯಯ ಬಿಡಿಸಿದನ್, ನಿನ್ನನ್ ಒಡ್ಡಿ ನೆತ್ತ ಸೋತುದು,  ನೃಪೋತ್ತಮನ್ ಸಲೆ ಮಾರ ಮಾರಿದನ್, ಅತ್ತೊಡೆ ಏನ್ ಅಹುದು? ಎಲೆಗೆ ನಡೆ ತೊತ್ತಿರ ಹಿಂಡ ಹೊಗು ಎಂದ.

ಪದ-ಅರ್ಥ:

ಇತ್ತಲ್-ಈ ಕಡೆ;  ಅಬಲೆ-ದ್ರೌಪದಿ;  ವಿಧಿ-ದುರಾದೃಷ್ಟ;  ಅತಿಮತ್ತನೈ-ಅತ್ಯಂತ ದುರಹಂಕಾರಿಯಾಗಿದ್ದಾನೆ;  ಧೃತರಾಷ್ಟ್ರಸುತ-ದುರ್ಯೋಧನ;  ಮತ್ತಗಜಗಾಮಿನಿ-ಮದಗಜದ ನಡೆಯುಳ್ಳವಳು(ದ್ರೌಪದಿ);  ಬಿಡಿಸಿದನ್-ಮುಕ್ತಗೊಳಿಸಿದನು;  ಅವನ-ದುಶ್ಶಾಸನನ;  ನಿನ್ನನ್ನೊಡ್ಡಿ-ನಿನ್ನನ್ನು ಪಣವಾಗಿ ಒಡ್ಡಿ;  ನೃಪೋತ್ತಮ-ಧರ್ಮರಾಯ;  ಮಾರ-ಪ್ರತಿಯಾಗಿ;  ಮಾರಿದನ್-ಮಾರಿಬಿಟ್ಟನು;  ಅತ್ತೊಡೆ-ಅತ್ತರೆ;  ಏನಹುದು-ಏನು ಪ್ರಯೋಜನ?;  ತೊತ್ತಿರ ಹಿಂಡ-ಸೇವಕಿಯರ ಗುಂಪನ್ನು;  ಹೊಗು-ಸೇರಿಕೊಳ್ಳು. 

            ಈ ಕಡೆ ರಾಜನ ಆಸ್ಥಾನದಲ್ಲಿ ಅಬಲೆಯಾದ ದ್ರೌಪದಿಯ ದುರಾದೃಷ್ಟವನ್ನು ಕೇಳು (ಇದು ಜನಮೇಜಯನನ್ನು ಉದ್ದೇಸಿಸಿ ವೈಶಂಪಾಯನ ಮುನಿಗಳು ಹೇಳುವ ಮಾತು), ಧೃತರಾಷ್ಟ್ರನ ಮಗನಾದ  ದುರ್ಯೋಧನ ಅತ್ಯಂತ ದುರಹಂಕಾರಿಯಾಗಿ ವರ್ತಿಸುತ್ತಿದ್ದಾನೆ. ಅವನು ತನ್ನ ತಮ್ಮನಾದ ದುಶ್ಶಾಸನನ ಕೈಯಿಂದ ದ್ರೌಪದಿಯನ್ನು ಬಿಡಿಸಿದನು. ನೆತ್ತದಲ್ಲಿ ನಿನ್ನನ್ನು ಪಣವಾಗಿ ಒಡ್ಡಿ ಧರ್ಮರಾಯಾದಿಗಳು ಸೋತಿದ್ದಾರೆ. ನೆತ್ತಕ್ಕೆ ಪ್ರತಿಯಾಗಿ ಪಣವಾಗಿಟ್ಟು ನಿನ್ನನ್ನು ಧರ್ಮರಾಯನು ಮಾರಿದ್ದಾನೆ. ಈಗ ನೀನು ಅತ್ತರೆ ಏನು ಪ್ರಯೋಜನವಿದೆ? ನೆಡೆ ಈಗ ನೀನು ಸೇವಕಿಯರ ಗುಂಪನ್ನು ಸೇರಿಕೊಳ್ಳು ಎಂದನು.

            (ದುರ್ಯೋಧನ ಧೃತರಾಷ್ಟ್ರನ ಮಗ. ಅಪ್ಪ ಕಣ್ಣಿಲ್ಲದ ಕುರುಡ, ದುರ್ಯೋಧನ ಕಣ್ಣಿದ್ದೂ ಕುರುಡ. ಅವಿವೇಕಿ, ಬುದ್ಧಿಗೇಡಿ. ಒಂದೆಡೆ, ಅತ್ಯಂತ ಪರಾಕ್ರಮಿಗಳಾದ ಪಾಂಡವರನ್ನು ಮೋಸದಿಂದ ದ್ಯೂತವನ್ನಾಡಿ ಗೆದ್ದಿದ್ದಾನೆ. ಇನ್ನೊಂದೆಡೆ, ಇಂದ್ರಪ್ರಸ್ಥದ ಪಟ್ಟದ ರಾಣಿ ಸಂಬಂಧದಲ್ಲಿ ಅತ್ತಿಗೆಯಾದ ದ್ರೌಪದಿಯನ್ನು ಹೀನಾಯವಾಗಿ ನಡೆಸಿಕೊಂಡಿದ್ದಾನೆ. ದ್ರೌಪದಿಯನ್ನು ಇನ್ನಷ್ಟು ಅವಮಾನಪಡಿಸಲು ತಮ್ಮನಾದ ದುಶ್ಶಾಸನನ ಕೈಯಿಂದ ದ್ರೌಪದಿಯನ್ನು ಬಿಡಿಸುತ್ತಾನೆ. ಧರ್ಮರಾಯ ದ್ರೌಪದಿಯನ್ನು ಪಣವಾಗಿ ಒಡ್ಡಿ ದ್ಯೂತವನ್ನು ಸೋತಿದ್ದಾನೆ. ದ್ಯೂತ ಸೋತ ಮೇಲೆ ಒಡ್ಡಿದ ಪಣ ತನಗೆ ಸೇರತಕ್ಕದ್ದು, ಅದನ್ನು ತನ್ನಿಷ್ಟದಂತೆ ನಡೆಸಿಕೊಳ್ಳಬಹುದು ಎಂಬುದು ದುರ್ಯೋಧನ ವಾದ. ದ್ರೌಪದಿಯ ಗಂಡಂದಿರು ಆಕೆಯನ್ನು ದ್ಯೂತಕ್ಕಾಗಿ ತನಗೆ ಮಾರಿರುವುದರಿಂದ ಆಕೆ  ಈಗ ಸೇವಕಿಯಾಗಿದ್ದಾಳೆ. ಸೇವಕಿಯಾದವಳಿಗೆ ರಾಜಮರ್ಯಾದೆಗಳಾಗಲೀ, ರಾಜೋಚಿತ ಸ್ಥಾನಮಾನಗಳಾಗಲೀ ಸಲ್ಲುವುದಿಲ್ಲ. ಹಾಗಾಗಿ ದುರ್ಯೋಧನ ದ್ರೌಪದಿಯು ತನ್ನ ಸೇವಕಿಯರ ಗುಂಪನ್ನು ಸೇರಿಕೊಳ್ಳಬೇಕು, ಅದೇ ಸರಿಯಾದ ಸ್ಥಾನ ಎಂದು ದುರ್ಯೋಧನ ಅತ್ಯಂತ ಹೀನಾಯವಾಗಿ ನಡೆದುಕೊಳ್ಳುತ್ತಾನೆ. ದ್ಯೂತದಲ್ಲಿ ಪಣವಾಗಿ ಆಕೆಯನ್ನು ಒಡ್ಡಿದ್ದರಿಂದ  ದ್ರೌಪದಿಯ ರಾಣಿಪಟ್ಟ ಮತ್ತು ಆ ಸಂಬಂಧವಾದ ಸ್ಥಾನಮಾನಗಳು ತಪ್ಪಿಹೋಗಿರಬಹುದು. ಆದರೆ, ವಾಂಶಿಕ ಸಂಬಂಧ ತಪ್ಪಿಹೋಗುವುದು ಅಥವಾ ಅದನ್ನು ಕಡಿದುಕೊಳ್ಳುವುದು ಹೇಗೆ ಸಾಧ್ಯ? ಎಂಬುದು ದುರ್ಯೋಧನನ ಬುದ್ಧಿಗೇಡಿತನಕ್ಕೆ ಅರ್ಥವಾಗುವುದಿಲ್ಲ. ಅದಕ್ಕಾಗಿಯೇ ಕವಿ ಇಲ್ಲಿ ದುರ್ಯೋಧನನನ್ನು ’ಧೃತರಾಷ್ಟ್ರ ಸುತ’ ಎಂದೇ ಕರೆದಿದ್ದಾನೆ. ಇದು ಅವನಿಗೆ ನಿಷ್ಕೃಷ್ಟವಾಗಿ ಅನ್ವಯವಾಗುವ ಹೆಸರು.)

 

ಲಲಿತಬುದ್ಧಿಗಳೀಗ ನೋಡಿರಿ

ಲಲನೆಯನು ಸತಿ ದಿಟ್ಟೆಯನ್ನದಿ

ರೆಲೆ ಸುಯೋಧನ  ರಾಜಸಭೆಯಿದು ದೋಷರಹಿತವಲೆ

ಗೆಲುವಿದೆಂತುಟೊ ತನ್ನ ಸೋಲಿನ

ಬೞಿಕ ಸೋತರೆ ಧರ್ಮಗತಿಯನು

ತಿಳಿದು ಹೇಳಲಿ ಸತ್ಸಭಾಸದರೆಂದುಳಿಂದುಮುಖಿ  ೧೨

ಪದ್ಯದ ಅನ್ವಯಕ್ರಮ:

ಲಲಿತಬುದ್ಧಿಗಳ್ ಈಗ ಲಲನೆಯನ್ ನೋಡಿರಿ, ಎಲೆ ಸುಯೋಧನ ಸತಿ ದಿಟ್ಟೆ ಎನ್ನದಿರ್, ರಾಜಸಭೆ ಇದು ದೋಷರಹಿತವಲೆ? ತನ್ನ ಸೋಲಿನ ಬಳಿಕ ಸೋತರೆ ಇದು ಗೆಲುವು ಎಂತುಟೋ? ಸತ್ ಸಭಾಸದರು ಧರ್ಮಗತಿಯನು ತಿಳಿದು ಹೇಳಲಿ ಎಂದಳು ಇಂದುಮುಖಿ.

ಪದ-ಅರ್ಥ:

ಲಲಿತಬುದ್ಧಿಗಳ್-ತಿಳಿದವರು, ಪ್ರಾಜ್ಞರು, ಮೇಧಾವಿಗಳು; ಲಲನೆ-ದ್ರೌಪದಿ;  ದಿಟ್ಟೆ– ದುರಹಂಕಾರಿ, ಧೈರ್ಯವುಳ್ಳವಳು;  ದೋಷರಹಿತವಲೆ-ಅಪವಾದದಿಂದ ಮುಕ್ತವಾದುದಲ್ಲವೇ?;  ಅದೆಂತುಟೊ-ಅದು ಹೇಗೋ?;  ತನ್ನ ಸೋಲಿನ ಬಳಿಕ-ತಾನು ಸೋತ ಅನಂತರ;  ಧರ್ಮಗತಿ-ಧರ್ಮಮಾರ್ಗ;  ತಿಳಿದು ಹೇಳಲಿ-ಅರ್ಥಮಾಡಿಕೊಂಡು ವಿವರಿಸಲಿ;  ಸತ್ಸಭಾಸದರು-ಪ್ರಜ್ಞಾವಂತ ಸಭಿಕರು. 

            ದುರ್ಯೋಧನನ ರಾಜಸಭೆಯ ಪ್ರಾಜ್ಞರಾದ ಸಭಿಕರು ನನ್ನನ್ನು, ನನ್ನ ಸ್ಥಿತಿಗತಿಗಳನ್ನು ಒಮ್ಮೆ ನೋಡಿರಿ. ಎಲೆ ಸುಯೋಧನ, ನೀನು ನನ್ನನ್ನು ದುರಹಂಕಾರಿ ಎಂದು ತಿಳಿದುಕೊಳ್ಳಬೇಡ.  ಇದು ಸಾಮಾನ್ಯ ಸಭೆಯಲ್ಲ. ಇದು ದೋಷದಿಂದ ಮುಕ್ತವಾದ  ರಾಜಸಭೆಯಲ್ಲವೆ? ಮೊದಲು ಧರ್ಮರಾಯ ತನ್ನನ್ನು ಪಣವಾಗಿ ಒಡ್ಡಿ ಸೋತುಹೋದ ಮೇಲೆ ನನ್ನನ್ನು ಪಣವಾಗಿ ಒಡ್ದಿದಾಗ ಅಥವಾ ಹಾಗೆ ಪಣವಾಗಿ ಒಡ್ಡಿ ಸೋತಾಗ ಅದು ಧರ್ಮಸಮ್ಮತ ಎನಿಸಿಕೊಳ್ಳುತ್ತದೆಯೇ? ಈ ಸಭೆಯಲ್ಲಿ ಧರ್ಮಮಾರ್ಗವನ್ನು ಬಲ್ಲ ಪ್ರಾಜ್ಞರಿದ್ದಾರೆ, ಮೇಧಾವಿಗಳಿದ್ದಾರೆ. ಅವರೆಲ್ಲ ಧರ್ಮಮಾರ್ಗವನ್ನು ಪರಾಮರ್ಶಿಸಿಕೊಂಡು ನನಗೆ ಉತ್ತರವನ್ನು ಕೊಡಲಿ ಎಂದು ದ್ರೌಪದಿ ಸಭಾಸದರಲ್ಲಿ ವಿನಂತಿಸಿಕೊಳ್ಳುತ್ತಾಳೆ.

            (ಭರತಖಂಡದಲ್ಲಿ ಇದುವರೆಗೂ ಯಾವುದೇ ರಾಜರ ಆಸ್ಥಾನದಲ್ಲಿ ರಾಣಿಯಾದವಳನ್ನು ಈ ರೀತಿಯಲ್ಲಿ ಮಾತ್ರವಲ್ಲದೆ, ಹೆಣ್ಣೊಬ್ಬಳನ್ನು ಅವಮಾನಿಸಿದ ಘಟನೆ ನಡೆದಿಲ್ಲ. ಅಂತಹ ಅವಮಾನಕರ ಘಟನೆಯೊಂದು ದುರ್ಯೋಧನನ ಆಸ್ಥಾನದಲ್ಲಿ ನಡೆದಿದೆ. ದ್ರೌಪದಿ ತನ್ನ ಈ ಸ್ಥಿತಿಗೆ ಕಾರಣವಾಗಿರುವ ಪಗಡೆಯಾಟದ ಪಣವನ್ನು ಮತ್ತು ಅದರ ರೀತಿನೀತಿಗಳನ್ನೇ ಪ್ರಶ್ನಿಸುತ್ತಾಳೆ.  ಪಗಡೆಯಾಟದಲ್ಲಿ ಯಾವುದಾದರೂ ವಸ್ತುವನ್ನು ಪಣವಾಗಿ ಒಡ್ಡುವುದು ಸಹಜವಾದರೂ ಮನುಷ್ಯರನ್ನು ಒಡ್ಡುವುದು ಸರಿಯೇ? ಹಾಗೆ ಒಡ್ಡಿದರೂ ತನ್ನನ್ನು ಮೊದಲು ಪಣವಾಗಿ ಒಡ್ಡಿ ಪಗಡೆಯಾಟದಲ್ಲಿ ಸೋತುಹೋದ ಮೇಲೆ ಅನ್ಯರನ್ನು ಒಡ್ಡುವುದಕ್ಕೆ ಅಧಿಕಾರವಿದೆಯೇ? ಹಾಗಿ ಒಡ್ಡಿದರೆ ಅದು ಧರ್ಮಸಮ್ಮತವೇ? – ಇದು ದ್ರೌಪದಿಯ ಪ್ರಶ್ನೆಗಳು. ದುರ್ಯೋಧನನಾಗಲೀ, ಕರ್ಣನಾಗಲೀ, ಶಕುನಿಯಾಗಲೀ ಈ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲಾರರು. ಆದರೆ ದುರ್ಯೋಧನನ ಸಭೆಯಲ್ಲಿ ಹಿರಿಯರಾದ ಧೃತರಾಷ್ಟ್ರ-ಗಾಂಧಾರಿಯರಿದ್ದಾರೆ, ರಾಜಗುರು ಕೃಪಾಚಾರ್ಯನಿದ್ದಾರೆ, ಬಿಲ್ವಿದ್ಯಾಗುರು ದ್ರೋಣನಿದ್ದಾನೆ, ಪಿತಾಮಹನಾದ ಭೀಷ್ಮನಿದ್ದಾನೆ, ಮಹಾಮೇಧಾವಿ ಎನಿಸಿರುವ ಮಂತ್ರಿ ವಿದುರನಿದ್ದಾನೆ. ಇವರಲ್ಲದೆ ಇತರ ಪ್ರಾಜ್ಞರು ಆಸೀನರಾಗಿದ್ದಾರೆ. ಇವರಲ್ಲಿ  ಒಬ್ಬರಾದರೂ ಧರ್ಮಮಾರ್ಗವನ್ನು ಅರಿತುಕೊಂಡು ತನ್ನ ಪ್ರಶ್ನೆಗೆ ಧರ್ಮಸಮ್ಮತವಾದ ಉತ್ತರವನ್ನು ಕೊಡಬೇಕೆಂಬುದು ದ್ರೌಪದಿಯ ದಯನೀಯ ಹಂಬಲ. ಆದರ ಯಾರೊಬ್ಬರೂ ಉತ್ತರ ಕೊಡಲಾರದ ಸ್ಥಿತಿಯಲ್ಲಿರುವುದು ದುರದೃಷ್ಟಕರ.)  

 

ಹಿರಿಯರಿಲ್ಲದ ಸಭೆ ಮನುಷ್ಯರ

ನೆರವಿಯದು ಸಭೆಯಲ್ಲ ಮೂರ್ಖರು

ಹಿರಿಯರಲ್ಲ ಯಥಾರ್ಥಭಾಷಣಭೀತಚೇತನರು

ಹಿರಿಯರಿದೆ ಸಾಮಾಜಿಕರು ಸ

ಚ್ಚರಿತರಿದೆಲಾಸ್ತ್ರೀಮತವನು

ತ್ತರಿಸಲಾಗದೆ ಧರ್ಮಶಾಸ್ತ್ರದೊಳೆಂದಳಿಂದುಮುಖಿ  ೧೩

ಪದ್ಯದ ಅನ್ವಯಕ್ರಮ:

ಹಿರಿಯರು ಇಲ್ಲದ ಸಭೆ, ಇದು ಮನುಷ್ಯರ ನೆರವಿ, ಸಭೆಯಲ್ಲ. ಹಿರಿಯರಲ್ಲ, ಮೂರ್ಖರು. ಯಥಾರ್ಥ ಭಾಷಣ ಭೀತಚೇತನರು. ಇದೆ ಹಿರಿಯರ್ ಸಾಮಾಜಿಕರು ಸತ್ ಚರಿತದಲಿ, ಎಲಾ ಧರ್ಮಶಾಸ್ತ್ರದೊಳ್ ಸ್ತ್ರೀಮತವನು ಉತ್ತರಿಸಲ್ ಆಗದೆ ಎಂದಳ್ ಇಂದುಮುಖಿ.  

ಪದ-ಅರ್ಥ:

ಹಿರಿಯರ್-ತಿಳಿದವರು, ಪ್ರಾಜ್ಞರು;  ನೆರವಿ-ಗುಂಪು;  ಹಿರಿಯರಲ್ಲ-ಪ್ರಾಜ್ಞರಲ್ಲ, ತಿಳಿದವರಲ್ಲ;  ಯಥಾರ್ಥ ಭಾಷಣ-ಸತ್ಯವನ್ನು ಹೇಳುವುದು;  ಭೀತಚೇತನರು-ಪುಕ್ಕಲರು, ಹೆದರುಪುಕ್ಕರು, ಹೇಡಿಗಳು;  ಹಿರಿಯರಿದೆ-ಹಿರಿತನವಿಲ್ಲದವರು; ಸಾಮಾಜಿಕರು-ಸಭಾಸದರು;  ಸಚ್ಚರಿತ(ಸತ್+ಚರಿತ)-ಒಳ್ಳೆಯ ನಡವಳಿಕೆ, ಸತ್ಯಸಮ್ಮತ;  ಎಲಾ-ಎಲೈ;  ಸ್ತ್ರೀಮತ-ಮಹಿಳೆಯ ಪ್ರಶ್ನೆ; ದ್ರೌಪದಿಯ ಸವಾಲು;  ಉತ್ತರಿಸಲಾಗದೆ-ಉತ್ತರವನ್ನು ಹೇಳಲಾಗದೆ;  ಧರ್ಮಶಾಸ್ತ್ರದೊಳ್-ಧರ್ಮಶಾಸ್ತ್ರದ ಪ್ರಕಾರ.

            ಹಿರಿಯರು(ಬುದ್ಧಿ, ತಿಳಿವಳಿಕೆ, ಜ್ಞಾನವುಳ್ಳವರು) ಇಲ್ಲದಿರುವ ಸಭೆಯನ್ನು ’ಸಭೆ’ ಎನ್ನಲಾಗುವುದಿಲ್ಲ, ಅದೊಂದು ಮನುಷ್ಯರ ಗುಂಪು ಅಷ್ಟೇ.  ಇಲ್ಲಿ ನೆರೆದಿರುವವರಲ್ಲಿ ಹಿರಿತನವಿಲ್ಲ. ಅವರು ಹಿರಿಯರಲ್ಲ, ಮೂರ್ಖರು. ಸಂದರ್ಭಕ್ಕೆ ತಕ್ಕಂತೆ ಮಾತನಾಡುವವರು, ಸತ್ಯವನ್ನು ಹೇಳಲು ಧೈರ್ಯವಿಲ್ಲದ ಪುಕ್ಕಲರು. ಇಲ್ಲಿರುವ ಹಿರಿಯರೆನಿಸಿಕೊಂಡವರಿಗೆ, ಸಾಮಾಜಿಕ (ಸಭಾಸದರು)ರಿಗೆ ಧರ್ಮಶಾಸ್ತ್ರದ ಪ್ರಕಾರ (ಧರ್ಮಸಮ್ಮತವಾಗಿ) ಸತ್ಯಸಮ್ಮತವಾಗಿ   ಸ್ತ್ರೀಯೊಬ್ಬಳ ಸವಾಲಿಗೆ ಸಮರ್ಪಕವಾದ ಉತ್ತರವನ್ನು ಕೊಡಲು ಸಾಧ್ಯವಿಲ್ಲವೇ? ಎಂದು ದ್ರೌಪದಿ ಪ್ರಶ್ನಿಸಿದಳು.

            (ರಾಜಸಭೆ ಎನ್ನುವುದು ವಿದ್ವಾಂಸರಿಂದ, ಪ್ರಾಜ್ಞರಿಂದ, ಸಕಲಶಾಸ್ತ್ರ ಪರಿಣತರಿಂದ, ಧರ್ಮಶಾಸ್ತ್ರಜ್ಞರಿಂದ, ರಾಜನೀತಿ ಕೋವಿದರಿಂದ ಹಾಗೂ ಹಲವು ಸ್ತರದ ಮಂತ್ರಿ, ದಂಡನಾಯಕ, ಸಾಮಾಜಿಕನ್ಯಾಯ ಪರಿಣತರಿಂದ ಕೂಡಿರುವಂತಹುದು. ಇವರಿಗೆಲ್ಲ ಸತ್ಯಾಸತ್ಯತೆಗಳ, ಧರ್ಮಾಧರ್ಮಗಳ, ಉಚಿತಾನುಚಿತತೆಗಳ ಅರಿವು ಇದ್ದೇ ಇರುತ್ತದೆ. ಇರಲೇಬೇಕು. ಹಸ್ತಿನಾವತಿಯ ರಾಜಸಭೆಯ ಬಗ್ಗೆ ಭರತಖಂಡದಲ್ಲಿಯೇ ಉನ್ನತವಾದ ಗೌರವ ಸಂದಿದೆ. ಆದರೆ ಅದೇ ಸಭೆಯಲ್ಲಿ ಇಂದು ದ್ರೌಪದಿಯ ವಿಚಾರದಲ್ಲಿ ನಡೆದಿರುವ ಅನೈತಿಕವಾದ, ಧರ್ಮಶಾಸ್ತ್ರಕ್ಕೆ, ರಾಜನೀತಿಗೆ  ವಿರುದ್ಧವಾದ ಅಮಾನುಷವಾದ ಘಟನೆಯೂ ನಡೆದಿದೆ. ಆದರೆ ಅದನ್ನು ತಡೆಯುವ, ಅನೈತಿಕವಾಗಿ ನಡೆದುಕೊಂಡವರನ್ನು ರಾಜನೀತಿಯ ಪ್ರಕಾರ ದಂಡಿಸುವ, ಅವಮಾನಕ್ಕೊಳಗಾದ ದ್ರೌಪದಿಗೆ ರಕ್ಷಣೆಯನ್ನೊದಗಿಸುವ, ಆಕೆಯ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ಕೊಡುವ ಸಾಮರ್ಥ್ಯ ಅಲ್ಲಿನ ಸಭಾಸದರಲ್ಲಿ ಕಂಡುಬರುತ್ತಿಲ್ಲ. ದುರ್ಯೋಧನನ ಸಭೆಯಲ್ಲಿ ಧರ್ಮಸತ್ಯವನ್ನು ತಿಳಿದರೂ ಹೇಳುವುದಕ್ಕೆ ಸಾಧ್ಯವಿಲ್ಲದ, ಹೇಳಬೇಕೆನಿಸಿದರೂ ಧೈರ್ಯವಿಲ್ಲದ ಪುಕ್ಕಲರು ತುಂಬಿಕೊಂಡಿದ್ದಾರೆ. ಪ್ರತಿಯೊಬ್ಬರಲ್ಲಿಯೂ ದುರ್ಯೋಧನನ ಭೀತಿ ಆವರಿಸಿಕೊಂಡಿದೆ. ಹೀಗಿರುವಾಗ ರಾಜಸಭೆಯಲ್ಲಿ ಆಸೀನರಾದವರನ್ನು ಹಿರಿಯರು, ಪ್ರಾಜ್ಞರು, ಧರ್ಮಜ್ಞರು, ರಾಜನೀತಿಜ್ಞರು ಎಂದು ಹೇಗೆ ಹೇಳಲು ಸಾಧ್ಯ? ಅದನ್ನೇ ದ್ರೌಪದಿ ಅತ್ಯಂತ ನಿಷ್ಠುರವಾಗಿ ಹೇಳುತ್ತಾಳೆ. ಕನಿಷ್ಠ ಒಬ್ಬರಾದರೂ ಧರ್ಮಶಾಸ್ತ್ರಬದ್ಧವಾಗಿ ತನ್ನ ಪ್ರಶ್ನೆಗಳಿಗೆ ಉತ್ತರವನ್ನು ನೀಡಬಾರದೆ? ಎಂದು ಬಹಳ ನೋವಿನಿಂದ ಅಂಗಲಾಚುತ್ತಾಳೆ. ದುರ್ಯೋಧನನ ಆಸ್ಥಾನದ ಈ ಹೀನಾಯಸ್ಥಿತಿಗತಿಗಳ ಬಗ್ಗೆ ದ್ರೌಪದಿಗೆ ಅತ್ಯಂತ ಖೇದವಿದೆ.)     

ಅಹುದಲೇ ಬೞಿಕೇನು ದಾಸ್ಯಕೆ

ವಿಹಿತವಾದುದು ನಿನ್ನ ತನುವಿನ

ಲಹ ಮನೋವ್ಯಥೆಯೇಕೆ ರಾಣೀವಾಸವೀಥಿಯಲಿ

ಮಹಿಳೆಯರ ಸಖ್ಯದಲಿ ಸೌಖ್ಯದ

ರಹಣಿಗೊಡಬಡು ವಾರಕದಲತಿ

ಬಹಳ ಭೂಷಣಭಾರದಲಿ ಮೆಱೆಯೆಂದನಾ ಶಕುನಿ  ೧೪

ಪದ್ಯದ ಅನ್ವಯಕ್ರಮ:

ಅಹುದಲೇ ಬೞಿಕ ಏನು? ದಾಸ್ಯಕೆ ವಿಹಿತವಾದುದು, ನಿನ್ನ ತನುವಿನಲಿ ಅಹ ಮನೋವ್ಯಥೆ ಏಕೆ? ರಾಣೀವಾಸ ವೀಥಿಯಲಿ, ಮಹಿಳೆಯರ ಸಖ್ಯದಲಿ ಸೌಖ್ಯದ  ರಹಣಿಗೆ ಒಡಂಬಡು, ವಾರಕದಲಿ ಅತಿ ಬಹಳ ಭೂಷಣಭಾರದಲಿ ಮೆಱೆ ಎಂದನ್ ಆ ಶಕುನಿ.

ಪದ-ಅರ್ಥ:

ಅಹುದಲೇ-ಹೌದಲ್ಲವೇ?;  ದಾಸ್ಯಕೆ-ಚಾಕರಿಗೆ, ಸೇವೆಗೆ;  ವಿಹಿತವಾದುದು-ಯೋಗ್ಯವಾದುದು;  ತನುವಿನಲಹ-ದೇಹದಲ್ಲಿ ಕಾಣಿಸುವ;  ದೇಹದಲ್ಲಿರುವ;  ಮನೋವ್ಯಥೆ-ನೋವು;  ರಾಣೀವಾಸವೀಥಿ-ಅಂತಃಪುರದ ದಾರಿ;  ಸಖ್ಯದ-ಸ್ನೇಹದ, ಸಾಹಚರ್ಯದ; ರಹಣಿ-ಒಪ್ಪಂದ, ಒಡಂಬಡಿಕೆ;  ಒಡಂಬಡು-ಒಪ್ಪಿಕೊಳ್ಳು;  ವಾರಕ-ಬಳುವಳಿ;  ದಾನವಾಗಿ ಕೊಡುವ ಉಡುಗೊರೆ; ಭೂಷಣಭಾರ-ಆಭರಣ ಅಥವಾ ಅಲಂಕಾರಗಳ ಆಧಿಕ್ಯ;  ಮೆಱೆ-ಮೆರೆದಾಡು, ವಿಜೃಂಭಿಸು. 

            ಹೌದಲ್ಲವೇ? ಬಳಿಕ ಇನ್ನೇನು? ನೀನು ದಾಸ್ಯಕ್ಕೆ ಯೋಗ್ಯಳಾದವಳು. ಹಾಗಿರುವಾಗ ನಿನ್ನ ದೇಹದಲ್ಲಿ ಸುಮ್ಮನೆ ಮನೋವ್ಯಥೆ ಕಾಣಿಸಿಕೊಳ್ಳಬೇಕು? ದುರ್ಯೋಧನನ ಅಂತಃಪುರದ ಬೀದಿಯಲ್ಲಿ ಸದಾ ಓಡಾಡಿಕೊಂಡು ಅಲ್ಲಿನ ಇತರ ದಾಸಿಯರೊಂದಿಗೆ ಗೆಳೆತನವನ್ನು ಮುಂದುವರಿಸುತ್ತ, ರಾಣಿಯರು ಬಳುವಳಿಯಾಗಿ ಕೊಡುವ ವಿವಿಧ ಆಭರಣ, ಅಲಂಕರಣಗಳನ್ನು ನಿನ್ನಿಷ್ಟದಂತೆ ತೊಟ್ಟುಕೊಂಡು, ಧರಿಸಿಕೊಂಡು ಮೆರೆದಾಡು ಎಂದು ಶಕುನಿ ವ್ಯಂಗ್ಯವಾಡಿದನು.

            (ನೀನು ಹಿಂದೆ ರಾಣಿಯಾಗಿದ್ದಿರಬಹುದು. ಆದರೆ ಈಗ ಆ ಸ್ಥಾನವನ್ನು ಕಳೆದುಕೊಂಡಿರುವೆ. ಹಾಗಾಗಿ ನಿನ್ನ ಯಾವ ಪ್ರಶ್ನೆಗಳಿಗೂ ಇಲ್ಲಿನ ಸಭಾಸದರು ಉತ್ತರಿಸಬೇಕಾದ ಅಗತ್ಯವಿಲ್ಲ. ನೀನೀಗ ರಾಣಿಯಾಗಿ ಮೆರೆಯಲು ಯೋಗ್ಯಳಲ್ಲ. ನೀನೇನಿದ್ದರೂ ದಾಸಿಯಾಗಿ, ಸಖಿಯಾಗಿ, ಚಾಕರಿಯವಳಾಗಿ ಬದುಕಲು ಯೋಗ್ಯಳಾಗಿರುವೆ. ಹಾಗಾಗಿ ನೀನೀಗ ಸುಮ್ಮನೆ ನೊಂದು ಪ್ರಯೋಜನವಾದರೂ ಎನು? ನಿನ್ನ ದೇಹದಲ್ಲಿ ಇನ್ನಿಲ್ಲದ ಕಳವಳವೇಕೆ? ದುರ್ಯೋಧನನ ಅಂತಃಪುರ ಅತ್ಯಂತ ಶ್ರೀಮಂತಿಕೆಯಿಂದ ಕೂಡಿರುವಂತಹುದು. ಸಾಕಷ್ಟು ದಾಸಿಯರಿಂದ, ಪರಿಚಾರಿಕೆಯರಿಂದ, ಸಖಿಯರಿಂದ ತುಂಬಿಕೊಂಡಿರುವಂತಹುದು. ಅಂತಃಪುರದಲ್ಲಿ ರಾಣಿಯರ ಸೇವೆಗೆ, ಅಲ್ಲಿನ ದಾಸಿಯರೊಂದಿಗಿನ ಸ್ನೇಹಕ್ಕೆ ಒಪ್ಪಿಕೊಳ್ಳು. ದಾಸಿಯಾದವಳು ದಾಸಿಯಂತೆಯೆ ಇರಬೇಕಲ್ಲದೆ, ರಾಣಿಯ ಉಡುಗೆ-ತೊಡುಗೆಗಳನ್ನು, ಸ್ಥಾನಮಾನಗಳನ್ನು ಹೊಂದುವಂತಿಲ್ಲ, ಹಾಗೆ ಮೆರೆಯುವಂತೆಯೂ ಇಲ್ಲ. ದಾಸಿಯಾಗಿದ್ದುಕೊಂಡು ದುರ್ಯೋಧನನ ರಾಣಿಯರು ಹೇಳುವ ಕಾರ್ಯಗಳನ್ನು ಮಾಡುತ್ತ, ಅವರನ್ನು ತೃಪ್ತಿಪಡಿಸುತ್ತ, ಅವರು ದಾನವಾಗಿ ಉಡುಗೊರೆಯಾಗಿ ಕೊಡುವ ಆಭರಣ, ವಸ್ತ್ರ, ಒಡವೆಗಳನ್ನು ಸ್ವೀಕರಿಸಿಕೊಂಡು, ಅವುಗಳನ್ನು ಮೈಮೇಲೆಲ್ಲ ಹಾಕಿಕೊಳ್ಳುತ್ತ ಮೆರೆದಾಡುವೆಯಂತೆ. ಅದೇ ನಿನಗೆ ಉಚಿತವಾದುದು ಎಂದು ಶಕುನಿ ದ್ರೌಪದಿಯನ್ನು ಅವಮಾನಿಸುತ್ತಾನೆ.) 

 

ವಾರಕದ ವಿವಿಧಾಭರಣ ಶೃಂ

ಗಾರವಂತಿರಲೀಕೆಯಾಡಿದ

ಸಾರಭಾಷೆಗೆ ನೆನೆಯಿರೈ ನಿರ್ವಾಹಸಂಗತಿಯ

ಓರೆಪೋರೆಯೊಳಾಡಿ ಧರ್ಮದ

ಧಾರಣೆಯ ದಟ್ಟಿಸುವದಿದು ಗಂ

ಭೀರರಿಗೆ ಗರುವಾಯಿಯೇ ಸುಡಲೆಂದನಾ ಭೀಷ್ಮ.  ೧೫

ಪದ್ಯದ ಅನ್ವಯಕ್ರಮ:

ವಾರಕದ ವಿವಿಧ ಆಭರಣ ಶೃಂಗಾರವು ಅಂತಿರಲಿ, ಈಕೆ ಆಡಿದ ಸಾರ ಭಾಷೆಗೆ ವಿರ್ವಾಹ ಸಂಗತಿಯ ನೆನೆಯಿರೈ, ಓರೆಪೋರೆಯೊಳ್ ಆಡಿ ಧರ್ಮದ ಧಾರಣೆಯ ದಟ್ಟಿಸುವುದು ಇದು ಗಂಭೀರರಿಗೆ ಗರುವಾಯಿಯೇ? ಸುಡಲಿ ಎಂದನ್ ಆ ಭೀಷ್ಮ.

ಪದ-ಅರ್ಥ:

ವಾರಕ-ಬಳುವಳಿಯಾಗಿ ಅಥವಾ ಉಡುಗೊರೆಯಾಗಿ ಬಂದ ಆಭರಣ  ಅಥವಾ ಅಲಂಕರಣ;  ವಿವಿಧಾಭರಣ-ಬಗೆಬಗೆಯ ಆಭರಣಗಳು;  ಅಂತಿರಲಿ-ಹಾಗಿರಲಿ;  ಈಕೆಯಾಡಿದ-ದ್ರೌಪದಿ ಕೇಳಿದ;  ಸಾರಭಾಷೆಗೆ-ಸಮಸ್ತ ಸವಾಲುಗಳಿಗೆ;  ನೆನೆಯಿರೈ-ನೆನೆದುಕೊಳ್ಳಿ, ಕಂಡುಕೊಳ್ಳಿ;  ನಿರ್ವಾಹಸಂಗತಿ-ಯುಕ್ತವಾದ ಉತ್ತರ, ಧರ್ಮಸಮ್ಮತವಾದ ಉತ್ತರ;  ಓರೆಪೋರೆಯೊಳಾಡಿ-ಬೇಕಾಬಿಟ್ಟಿಯಾಗಿ ಮಾತಾಡಿ, ಇಷ್ಟಬಂದಂತೆ ಮಾತಾಡಿ;  ಧರ್ಮದ ಧಾರಣೆಯ-ಧರ್ಮದ ಸ್ಥಿತಿಯನ್ನು;  ದಟ್ಟಿಸುವದು-ಹೆದರಿಸುವುದು, ಅವಗಣಿಸುವುದು;  ಗಂಭೀರರು-ತಿಳಿದವರು, ಪ್ರಾಜ್ಞರು, ಅಧಿಕಾರದಲ್ಲಿರುವವರು;   ಗರುವಾಯಿ-ದೊಡ್ಡಸ್ಥಿಕೆ, ಠೀವಿ;  ಸುಡಲಿ-ಸುಟ್ಟುಹೋಗಲಿ.  

             ಬಳುವಳಿಯಾಗಿ ಅಥವಾ ಉಡುಗೊರೆಯಾಗಿ ಬರಲಿರುವ ವಿವಿಧ ಬಗೆಯ ಆಭರಣಗಳು, ಭೂಷಣಗಳು ಹಾಗಿರಲಿ, ಅದಕ್ಕೂ ಮೊದಲು ಈ ದ್ರೌಪದಿ ಕೇಳಿರುವ ಸಮಸ್ತ ಸವಾಲುಗಳಿಗೆ ಯುಕ್ತವಾದ ಮಾತ್ರವಲ್ಲದೆ, ಧರ್ಮಸಮ್ಮತವಾದ ಉತ್ತರವನ್ನು ಕಂಡುಕೊಳ್ಳಿ. ಅವಳಿಂದ ತಪ್ಪಿಸಿಕೊಳ್ಳುವುದಕ್ಕೆ ಬೇಕಾಬಿಟ್ಟಿ ಮಾತನಾಡಿ ವಿಷಯಾಂತರ ಮಾಡಬೇಡಿ. ಧರ್ಮದ ಸ್ಥಿತಿಯನ್ನು ಅವಗಣಿಸುವುದು ಅಥವಾ ಅದನ್ನು ನಿರಾಕರಿಸುವುದು ನಿಮ್ಮಂತಹ ತಿಳಿದವರಿಗೆ, ಅಧಿಕಾರದಲ್ಲಿರುವವರಿಗೆ ಭೂಷಣವಲ್ಲ. ನಿಮ್ಮ ದೊಡ್ಡಸ್ತಿಕೆ ಸುಟ್ಟುಹೋಗಲಿ ಎಂದು ಭೀಷ್ಮ ಸಿಟ್ಟಿನಿಂದ ಗದರಿದನು.

            (ದ್ರೌಪದಿ ಇಂದ್ರಪ್ರಸ್ಥದ ರಾಣಿ. ಪಾಂಡವರ ಪಟ್ಟದ ರಾಣಿ. ಅಂತಹವಳನ್ನು ನಡೆಸಿಕೊಳ್ಳಬೇಕಾದ ರೀತಿನೀತಿಗಳನ್ನು ಬಿಟ್ಟುಬಿಟ್ಟು, ಅತ್ಯಂತ ಅವಮಾನಕರವಾಗಿ ಈ ರಾಜಸಭೆಯಲ್ಲಿ ನಡೆಸಿಕೊಳ್ಳಲಾಗುತ್ತಿದೆ. ನಿಮ್ಮ ಪ್ರಕಾರ ಅವಳೀಗ ದಾಸಿಯೇ ಆದರೂ ಅವಳಿಗೆ ದೊರಯಬಹುದಾದ ಉಡುಗೊರೆಗಳು, ಬಳುವಳಿಗಳು ಹಾಗಿರಲಿ. ಅವು ಈಗ ಮುಖ್ಯವಲ್ಲ. ಅದಕ್ಕೂ ಮೊದಲು ಆಕೆ ಈ ಸಭೆಯ ಮುಂದೆ ಹಲವು ಪ್ರಶ್ನೆಗಳನ್ನು ಕೇಳಿದ್ದಾಳೆ. ಆ ಪ್ರಶ್ನೆಗಳಿಗೆ ಧರ್ಮಸಮ್ಮತವಾಗಿ, ನ್ಯಾಯೋಚಿತವಾಗಿ ಸಮರ್ಪಕ ಉತ್ತರವನ್ನು, ಸಮಾಧಾನವನ್ನು ಕೊಡುವುದಕ್ಕೆ ಪ್ರಯತ್ನಿಸಿ. ಅದನ್ನು ಬಿಟ್ಟು ಆಕೆಯ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ಕೊಡಲಾರದೆ, ಇಲ್ಲಸಲ್ಲದ ಮಾತುಗಳನ್ನಾಡುವುದು, ಇನ್ನಾವುದೋ ಸಂಗತಿಯನ್ನು ಮಾತನಾಡಿ ವಿಷಯವನ್ನು ಮರೆಮಾಚುವುದು, ಬೇಕಾಬಿಟ್ಟಿ ಮಾತನಾಡಿ ಆಕೆಯನ್ನು ಅವಹೇಳನಮಾಡುವುದು ಈ ಸಭೆಯಲ್ಲಿರುವ ಹಿರಿಯರಿಗೆ, ರಾಜವಂಶದವರಿಗೆ, ಅಧಿಕಾರಿಗಳಿಗೆ ಭೂಷಣವಲ್ಲ. ನೀವೆಲ್ಲ ಈ  ರೀತಿಯಲ್ಲಿ ಧರ್ಮಬಾಹಿರವಾಗಿ ಮಾತನಾಡುತ್ತ ನಡೆದುಕೊಳ್ಳುವುದು ದೊಡ್ಡಸ್ತಿಕೆ ಎನಿಸಿಕೊಳ್ಳಲಾರದು. ಅದು ನಿಮಗೆ ಭೂಷಣವೂ ಅಲ್ಲ. ಧರ್ಮಸ್ಥಿತಿಯನ್ನು ನಿರಾಕರಿಸಬೇಡಿ, ಅದನ್ನು ವಿರೋಧಿಸಬೇಡಿ. ನಿಮ್ಮೆಲ್ಲ ಈ ರೀತಿಯ ಅನೈತಿಕ ವ್ಯವಹಾರಗಳ ಮುಂದೆ ಧರ್ಮವೆಂಬುದು ಏನೂ ಅಲ್ಲ ಎಂದು ನೀವೆಲ್ಲ ಭಾವಿಸಿದ್ದರೆ ನಿಮ್ಮ ಅಂತಹ ದೊಡ್ಡಸ್ತಿಕೆ ಸುಟ್ಟುಹೋಗಲಿ ಎಂದು ಭೀಷ್ಮ ನಿಷ್ಠುರವಾಗಿ ಮಾತನಾಡುತ್ತಾನೆ.)  

 

ಅಳಿಯದಂತಿರೆ ಸತ್ಯ ಧರ್ಮದ

ನೆಳಲು ನೆಗ್ಗದೆ ಕೀರ್ತಿವಧುವಿನ

ಸುಳಿವು ನೋಯದೆ ತಳಿರು ಬಾಡದೆ ಧೈರ್ಯ ಸುರಕುಜದ

ಹಳಿವಿಗಳುಕದೆ ವೈರಿವರ್ಗದ

ಕಳಕಳಕೆ ಮೈಗೊಡದೆ ನೃಪ ನಿ

ರ್ಮಳದೊಳಿರ್ದೊಡೆ ನಿಮಗೆ ಸದರವೆಯೆಂದನಾ ಭೀಷ್ಮ.  ೧೬

ಪದ್ಯದ ಅನ್ವಯಕ್ರಮ:

ಸತ್ಯ ಅಳಿಯದಂತೆ ಇರೆ, ಧರ್ಮದ ನೆಳಲು ನೆಗ್ಗದೆ, ಕೀರ್ತಿವಧುವಿನ ಸುಳಿವು ನೋಯದೆ, ಸುರಕುಜದ ತಳಿರು ಬಾಡದೆ, ಹಳಿವಿಗೆ ಅಳುಕದೆ, ವೈರಿವರ್ಗದ ಕಳಕಳಕೆ ಮೈಗೊಡದೆ, ನೃಪ ನಿರ್ಮಳದೊಳ್ ಇರ್ದೊಡೆ ನಿಮಗೆ ಸದರವೆ ಎಂದನ್ ಆ ಭೀಷ್ಮ.

ಪದ-ಅರ್ಥ:

ಅೞಿಯದಂತಿರೆ-ನಾಶವಾಗದಂತೆ ಇರಲು;  ಸತ್ಯ-ಸತ್ಯವೆಂಬ ಮೌಲ್ಯ ಧರ್ಮದ ನೆಳಲು-ನ್ಯಾಯ, ನೀತಿ, ಧರ್ಮಗಳ ನೆರಳು;  ನೆಗ್ಗದೆ-ನಾಶಮಾಡದೆ;  ಕೀರ್ತಿವಧು-ಕೀರ್ತಿಯೆಂಬ ವನಿತೆ; ಸುಳಿವು-ಏಳಿಗೆ;  ನೋಯದೆ-ನೋಯದಂತೆ, ನೊಂದುಕೊಳ್ಳದಂತೆ; ತಳಿರು-ಚಿಗುರೆಲೆ;  ಧೈರ್ಯಸುರಕುಜ-ಧೈರ್ಯವೆಂಬ ಕಲ್ಪವೃಕ್ಷ; ಹಳಿವಿಗೆ-ನಿಂದೆಗೆ, ತೊಂದರೆಗೆ;  ಅಳುಕದೆ-ಹೆದರದೆ, ಅಂಜದೆ;  ವೈರಿವರ್ಗದ-ವೈರಿಸಮೂಹದ;  ಕಳಕಳ-ಯುದ್ಧ;  ಮೈಗೊಡದೆ-ಹೆದರದೆ, ಹಿಂಜರಿಯದೆ;  ನೃಪ-ರಾಜ(ಧರ್ಮರಾಯ); ನಿರ್ಮಳದೊಳ್-ಪರಿಶುದ್ಧನಾಗಿ; ಇರ್ದೊಡೆ-ಇದ್ದರೆ;  ಸದರವೆ-ತಿರಸ್ಕಾರವೆ?.

            ಈ ಭೂಮಿಯಲ್ಲಿ ಸತ್ಯ ಅಳಿಯದಂತೆ;  ನ್ಯಾಯ, ನೀತಿ, ಧರ್ಮಗಳ ನೆರಳು ನಾಶವಾಗದಂತೆ; ಸಂಪಾದಿಸಿದ ಕೀರ್ತಿಯೆಂಬ ವನಿತೆ ತನ್ನ ಏಳಿಗೆಯಲ್ಲಿ  ನೊಂದುಕೊಳ್ಳದಂತೆ, ಧೈರ್ಯವೆಂಬ ಕಲ್ಪವೃಕ್ಷದ ತಳಿರು ಬಾಡದಂತೆ, ಜೀವನಪರ್ಯಂತ ಸಾಮಾನ್ಯರು ಆಡಿಕೊಳ್ಳುವ ನಿಂದೆಯ ಮಾತುಗಳಿಗೆ ಹೆದರದೆ, ರಾಜಭಾರದ ಸಂದರ್ಭಗಳಲ್ಲಿ ವೈರಿಗಳ ದಾಳಿಗೆ ಹೆದರದೆ, ಯುದ್ಧಕ್ಕೆ ಹಿಂಜರಿಯದೆ;  ಧರ್ಮರಾಯನು ಪರಿಶುದ್ಧನಾಗಿ ರಾಜ್ಯಭಾರವನ್ನು ನಿರ್ವಹಿಸುತ್ತಿದ್ದರೂ ನಿಮಗೆ ಆತನಲ್ಲಿ ತಿರಸ್ಕಾರವೆ? ಎಂದು ಭೀಷ್ಮ ನೊಂದು ನುಡಿದನು.

            (ಧರ್ಮರಾಯನಾಗಲೀ ಆತನ ತಮ್ಮಂದಿರಾಗಲೀ ಸಾಮನ್ಯರಲ್ಲ. ಇದುವರೆಗಿನ ತಮ್ಮ ಬದುಕಿನಾದ್ಯಂತ ಅವರು ಸತ್ಯ, ನ್ಯಾಯ, ನೀತಿ, ಧರ್ಮಗಳು ಅಳಿಯದಂತೆ ರಕ್ಷಿಸಿಕೊಂಡು ಬಂದವರು. ರಾಜ್ಯಭಾರದ ದಿನಗಳಿಂದಲೂ ತಮ್ಮ ದೇಶದಲ್ಲಿ ಧರ್ಮದ ನೆರಳು ನಾಶವಾಗದಂತೆ ಕಾಪಾಡಿಕೊಂಡು ಬಂದವರು. ತಾವು ಸಂಪಾದಿಸಿದ ಕೀರ್ತಿಯನ್ನು ಭರತಖಂಡದಾದ್ಯಂತ ಪಸರಿಸಿಕೊಂಡು ಅಳಿಯದಂತೆ ನೋಡಿಕೊಂಡವರು. ಅಪ್ರತಿಮ ಧೈರ್ಯಸ್ಥರಾಗಿ ಎದುರಾದ ಕಷ್ಟಕಾರ್ಪಣ್ಯಗಳನ್ನು ನಿವಾರಿಸಿಕೊಂಡು ತಾವಾಳಿದ ಇಂದ್ರಪ್ರಸ್ಥವನ್ನು ನಿಷ್ಕಂಟಕವನ್ನಾಗಿ ಮಾಡಿದವರು. ಸಾಮಾನ್ಯರು, ನಿಕೃಷ್ಟರು, ವೈರಿಗಳು ಆಡಿಕೊಳ್ಳುತ್ತಿದ್ದ ನಿಂದೆಯ ಮಾತುಗಳಿಗೆ ಹೆದರದೆ, ಕುಗ್ಗದೆ ಧೈರ್ಯವಾಗಿ ಹೆಜ್ಜೆ ಇರಿಸಿದವರು. ರಾಜ್ಯಭಾರದ ಸಂದರ್ಭಗಳಲ್ಲೆಲ್ಲ ಎಂತಹ ವೈರಿಗಳಿಗೆ ಬಗ್ಗದೆ, ಜಗ್ಗದೆ ಧೈರ್ಯದಿಂದ ಸೆಣಸಾಡಿ ತಮ್ಮ ಪ್ರಜೆಗಳನ್ನು ಕಾಪಾಡಿ ದೇಶವನ್ನು ಸುಭದ್ರಗೊಳಿಸಿದವರು. ಇವೆಲ್ಲವುಗಳಿಂದ ಧರ್ಮರಾಯ ಹಾಗೂ ಆತನ ತಮ್ಮಂದಿರು ಪರಿಶುದ್ಧರಾಗಿ ನ್ಯಾಯೋಚಿತರಾಗಿ, ಧರ್ಮಮಾರ್ಗದಲ್ಲಿ ಬದುಕುತ್ತಿದ್ದರೂ ನಿಮಗೆ ಆತನಲ್ಲಿ ಮತ್ತು ಆತನ ತಮ್ಮಂದಿರಲ್ಲಿ ತಿರಸ್ಕಾರವೆ? ಅಂತಹ ಧರ್ಮಿಷ್ಠರಾದ ಪಾಂಡವರೊಂದಿಗೆ ಈ ರೀತಿಯಲ್ಲಿ ಮೋಸ, ವಂಚನೆಗಳಿಂದ, ಅನೈತಿಕವಾಗಿ, ಹೀನಾಯವಾಗಿ ನಡೆದುಕೊಳ್ಳುವುದು, ಅವರನ್ನು ಹಾಗೂ ಅವರ ಪಟ್ಟದ ರಾಣಿಯಾದ ದ್ರೌಪದಿಯನ್ನು  ಅವಮಾನಕರವಾಗಿ  ನಡೆಸಿಕೊಳ್ಳುವುದು ನಿಮಗೆ ಶ್ರೇಯಸ್ಕರವೆ? ರಾಜವಂಶದಲ್ಲಿ ಹುಟ್ಟಿದವರಿಗೆ, ಒಂದು ದೇಶದ ಅಧಿಪತ್ಯವನ್ನು ವಹಿಸಿಕೊಂಡವರಿಗೆ ಇದು ಭೂಷಣವಲ್ಲ, ಮಾತ್ರವಲ್ಲ, ಈ ರೀತಿಯ ವರ್ತನೆಗಳಿಗೆ ಬಹಳ ಬೆಲೆಯನ್ನು ತೆರಬೇಕಾದೀತು ಎಂದು ಭೀಷ್ಮ ಕೌರವರನ್ನು ಎಚ್ಚರಿಸುತ್ತಾನೆ.)

       

ಸೋತ ಬೞಿಕಿವರೆಮ್ಮ ವಶವ

ಖ್ಯಾತಿಯಲಿ ನಾವು ನಡೆವರಲ್ಲ ವೃ

ಥಾತಿರೇಕದಿ ನೀವು ಘೂರ್ಮಿಸಲಂಜುವೆನೆ ನಿಮಗೆ

ಈ ತಳೋದರಿ ತೊತ್ತಿರಲಿ ಸಂ

ಘಾತವಾಗಲಿ ಸಾಕು ನಿಮ್ಮಯ

ಮಾತೆನುತ ಕುರುರಾಯ ಜಱೆದನು ಭೀಷ್ಮ ಗುರು ಕೃಪರ  ೧೭

ಪದ್ಯದ ಅನ್ವಯಕ್ರಮ:

ಸೋತ ಬೞಿಕ ಇವರೆಮ್ಮ ವಶವು, ಅಖ್ಯಾತಿಯಲಿ ನಾವು ನಡೆವವರಲ್ಲ, ಅತಿರೇಕದಲಿ ನೀವು ಘೂರ್ಮಿಸಲ್ ನಾವ್ ನಿಮಗೆ ಅಂಜುವೆವೆ? ಈ ತಳೋದರಿ ತೊತ್ತು ಇರಲಿ, ಸಂಘಾತವಾಗಲಿ,  ನಿಮ್ಮಯ ಮಾತು ಸಾಕು, ಎನುತ ಕುರುರಾಯ ಭೀಷ್ಮ ಗುರು ಕೃಪರ ಜಱೆದನು.

ಪದ-ಅರ್ಥ:

ಸೋತ ಬೞಿಕ-ಪಗಡೆಯಾಟದಲ್ಲಿ ಸೋತುಹೋದ ಬಳಿಕ;  ಇವರ್-ಪಾಂಡವರು; ಎಮ್ಮ-ನಮ್ಮ;  ವಶವು-ಅಧೀನರಾಗಿದ್ದಾರೆ;  ಅಖ್ಯಾತಿ-ಅಪ್ರಸಿದ್ಧಿ, ಪ್ರಸಿದ್ಧಿಗೆ ವಿರುದ್ಧವಾಗಿ;  ವೃಥಾ-ಸುಮ್ಮನೆ;  ಘೂರ್ಮಿಸಲ್-ಗದರಿಸಲು;  ಅಂಜುವೆವೆ-ಹೆದರುವೆವೆ;  ತಳೋದರಿ-ಚೆಲುವೆ(ದ್ರೌಪದಿ); ತೊತ್ತು-ಸೇವಕಿ;  ಸಂಘಾತ-ಸಾಮರಸ್ಯ;  ಜಱೆ-ನಿಂದಿಸು. 

            ಪಾಂಡವರು ಪಗಡೆಯಾಟದಲ್ಲಿ ಸೋತು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಈಗ ಇವರು ನಮ್ಮ ಅಧೀನದಲ್ಲಿದ್ದಾರೆ. ನಾವು ಮನಬಂದಂತೆ ಅವರನ್ನು ನಡೆಸಿಕೊಳ್ಳುತ್ತೇವೆ. ನಮ್ಮ ಪ್ರಸಿದ್ಧಿಗೆ ವಿರುದ್ಧವಾಗಿ ನಾವು ನಡೆದುಕೊಳ್ಳುವುದಿಲ್ಲ. ನೀವು ಸುಮ್ಮನೆ ನಮ್ಮನ್ನು ಗದರಿಸಿದರೆ ನಾವು ನಿಮಗೆ ಅಂಜಲಾರೆವು. ಈ ಚೆಲುವೆ ದ್ರೌಪದಿಯು ಇಂದಿನಿಂದ ನಮ್ಮ ಸೇವಕಿಯಾಗಿರುವುದರಿಂದ ನಮ್ಮ ಅಂತಃಪುರದ ರಾಣಿಯರೊಂದಿಗೆ ಮಾತ್ರವಲ್ಲದೆ, ಇತರ ಸೇವಕಿಯೊಂದಿಗೆ ಸಾಮರಸ್ಯವನ್ನು ಹೊಂದಿ ಸೇವೆಗೆ ತೊಡಗಿಕೊಳ್ಳಲಿ. ನೀವು ಇನ್ನೂ ಅವರನ್ನು ಸಮರ್ಥಿಸುವುದು ಬೇಕಾಗಿಲ್ಲ ಎಂದು ದುರ್ಯೋಧನ ಭೀಷ್ಮ, ಗುರುಗಳಾದ ದ್ರೋಣ, ರಾಜಗುರು ಕೃಪಾಚಾರ್ಯರನ್ನು ನಿಂದಿಸಿದನು.

            (ಪಾಂಡವರು ನಮ್ಮೊಂದಿಗೆ ಪಗಡೆಯನ್ನಾಡಿ ಸೋತು ತಮ್ಮ ಸೊತ್ತುಗಳನ್ನು ಮಾತ್ರವಲ್ಲದೆ, ತಮ್ಮನ್ನೂ ದ್ರೌಪದಿಯನ್ನೂ ಕಳೆದುಕೊಂಡಿದ್ದಾರೆ. ಅವರೆಲ್ಲರೂ ಈಗ ನಮ್ಮ ಸೇವಕರು. ಸೇವಕರನ್ನು ಹೇಗೆ ನಡೆಸಿಕೊಳ್ಳಬೇಕೆಂಬುದು ನಮಗೆ ತಿಳಿದಿದೆ. ಯಾರಿಂದ ಯಾವ ಚಾಕರಿಯನ್ನು ಮಾಡಿಸಿಕೊಳ್ಳಬೇಕೆಂಬುದೂ ಗೊತ್ತಿದೆ. ಅವರನ್ನು ನಡೆಸಿಕೊಳ್ಳುವ ಕ್ರಮವೂ ತಿಳಿದಿದೆ. ನಮ್ಮ ಸ್ಥಾನಮಾನಗಳ ಅರಿವು ನಮಗಿರುವುದರಿಂದ ಮತ್ತು ನಮ್ಮ ಪ್ರಸಿದ್ಧಿಗೆ ವಿರುದ್ಧವಾಗಿ ನಾವು ನಡೆದುಕೊಳ್ಳುವುದಿಲ್ಲ. ಈ ವಿಚಾರದಲ್ಲಿ ನೀವೆಲ್ಲ ನಮ್ಮ ಹೆದರಿಸಲು ಪ್ರಯತ್ನಿಸಿದರೆ ನಾವು ನಿಮಗೆ ಅಂಜಲಾರೆವು. ಇವರು ತಮ್ಮ ಹೆಂಡತಿ ದ್ರೌಪದಿಯನ್ನು ಪಗಡೆಯಾಟದಲ್ಲಿ ಪಣವಾಗಿ ಒಡ್ಡಿ ಸೋತಿರುವುದರಿಂದ ನಿಯಮದ ಪ್ರಕಾರ ಆಕೆ ಈಗ ನಮ್ಮ ಸೇವಕಿ. ಈಗ ಆಕೆ ರಾಣಿಯಲ್ಲ. ಒಬ್ಬ ಸೇವಕಿಗೆ ಕೊಡಬೇಕಾದ ಮರ್ಯಾದೆಯನ್ನು ನಾವು ಕೊಟ್ಟಿದ್ದೇವೆ. ಆಕೆಯನ್ನು ನಡೆಸಿಕೊಳ್ಳುವ ಕ್ರಮದಲ್ಲಿಯೇ ನಡೆಸಿಕೊಂಡಿದ್ದೇವೆ. ಈಗ ಆಕೆ ನಮ್ಮ ಅಂತಃಪುರದ ರಾಣಿಯರೊಂದಿಗೆ ಮತ್ತು ಇತರ ಸೇವಕಿಯೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುವುದನ್ನು ಕಲಿತುಕೊಳ್ಳಲಿ. ಪಗಡೆಯಾಡಿ ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾದ ಪಾಂಡವರನ್ನು ನೀವು ಸಮರ್ಥಿಸಿಕೊಳ್ಳುವುದು, ಅವರ ಪಕ್ಷವನ್ನು ವಹಿಸಿ ಮಾತಾಡುವುದು ಬೇಕಾಗಿಲ್ಲ ಎಂದು ದುರ್ಯೋಧನನು ಪಿತಾಮಹನಾದ ಭೀಷ್ಮ, ಗುರುಗಳಾದ ದ್ರೋಣ, ರಾಜಗುರುಗಳಾದ ಕೃಪಾಚಾರ್ಯಗನ್ನು ನಿಂದಿಸುತ್ತಾನೆ. ಗುರುಹಿರಿಯರನ್ನು ನಿಂದಿಸುವುದರಲ್ಲಿ, ತಾನು ಮಾಡಿದ ಅಕೃತ್ಯಗಳನ್ನು ಸಮರ್ಥಿಸುವುದರಲ್ಲಿ, ಪಾಂಡವರ ವಿಚಾರದಲ್ಲಿ ನೀತಿಬಾಹಿರವಾಗಿ ನಡೆದುಕೊಳ್ಳುವುದರಲ್ಲಿ ದುರ್ಯೋಧನನಿಗೆ ಮತ್ತು ಆತನ ಸಹಚರರಿಗೆ ಇರುವ ಒಲವನ್ನು ಇಲ್ಲಿ ಕಂಡುಕೊಳ್ಳಬಹುದು.­) 

 

ನೊಂದನಾ ಮಾತಿನಲಿ ಮಾರುತ

ನಂದನನು ಸಹದೇವನನು ಕರೆ

ದೆಂದನಗ್ನಿಯ ತಾ ಯುದಿಷ್ಠಿರನೃಪನ ತೋಳುಗಳ

ಮಂದಿ ನೋಡಲು ಸುಡುವೆನೇೞೇ

ೞೆಂದು ಜಱೆದೊಡೆ ಹಿಡಿದು ಮಾದ್ರೀ

ನಂದನನ ನಿಲಿಸಿದನು ಫಲುಗುಣ ನುಡಿದನನಿಲಜನ  ೧೮

ಪದ್ಯದ ಅನ್ವಯಕ್ರಮ:

ಮಾರುತ ನಂದನನು ನೊಂದನ್ ಆ ಮಾತಿನಲಿ, ಸಹದೇವನನ್ ಕರೆದು ಎಂದನ್ ಏೞು ಏೞು ಅಗ್ನಿಯ ತಾ, ಯುದಿಷ್ಠಿರ ನೃಪನ ತೋಳುಗಳ ಮಂದಿ ನೋಡಲು ಸುಡುವೆನ್ ಎಂದು ಜಱೆದೊಡೆ ಫಲುಗುಣ ಮಾದ್ರೀ ನಂದನನ ಹಿಡಿದು ನಿಲಿಸಿದನು, ಅನಿಲಜನ ನುಡಿದನು.

ಪದ-ಅರ್ಥ:

ನೊಂದನ್-ವೇದನೆಗೊಳಗಾಗು;  ಮಾರುತನಂದನ-ವಾಯುವಿನ ಮಗ(ಭೀಮ); ಯುದಿಷ್ಠಿರ-ಧರ್ಮರಾಯ; ಜಱೆ-ನಿಂದಿಸು;  ಮಾದ್ರೀನಂದನ-ಮಾದ್ರಿಯ ಮಗ(ಸಹದೇವ);  ನಿಲಿಸಿದನ್-ತಡೆದನು;  ಫಲುಗುಣ-ಅರ್ಜುನ;  ಅನಿಲಜ-ವಾಯುವಿನ ಮಗ(ಭೀಮ) 

            ದುರ್ಯೋಧನನು ಆಡಿದ ದುರಹಂಕಾರದ ಮಾತುಗಳಿಂದ ಭೀಮ ವೇದನೆಗೊಳಗಾದನು. ಇಷ್ಟೆಲ್ಲ ಅನಾಹುತಗಳಿಗೆ ಕಾರಣನಾದ ತನ್ನ ಅಣ್ಣ ಧರ್ಮರಾಯನ ಮೇಲೆ ಆತನಿಗೆ ತಡೆಯಲಾಗದಷ್ಟು ಸಿಟ್ಟು ಉಂಟಾಯಿತು. ಅವನು ತನ್ನ ತಮ್ಮನಾದ ಸಹದೇವನನ್ನು ಕರೆದು ಏಳು ಏಳು, ಕೂಡಲೇ ಬೆಂಕಿಯನ್ನು ತಾ, ನಮ್ಮನ್ನು ಈ ಅವಸ್ಥೆಗೆ ತಂದ ಅಣ್ಣ ಧರ್ಮರಾಯನ ತೋಳುಗಳನ್ನು ಈ ಸಭಾಸದರೆಲ್ಲ ನೋಡುನೋಡುತ್ತಿದ್ದಂತೆಯೇ ಸುಟ್ಟುಹಾಕುತ್ತೇನೆ ಎಂದಾಗ ಅರ್ಜುನ ಸಹದೇವನನ್ನು ತಡೆದು ನಿಲಿಸಿ, ಭೀಮನನ್ನು ಕುರಿತು ಹೀಗೆಂದನು.

            (ದುರ್ಯೋಧನ ಇಂದು ಈ ರೀತಿಯಲ್ಲಿ ದುರಹಂಕಾರಿಯಾಗಿ, ಅನೈತಿಕವಾಗಿ ವರ್ತಿಸುವುದಕ್ಕೆ ಕಾರಣ ಆತ ಮೋಸದಿಂದ ಪಗಡೆಯಾಟವನ್ನು ಗೆದ್ದಿದ್ದು. ಪಗಡೆಯಾಡುವುದಕ್ಕೆ ಧರ್ಮರಾಯನಿಗೆ ತಿಳಿಯದಿದ್ದರೂ ಪಗಡೆಯಾಡುವುದಕ್ಕೆ ಒಪ್ಪಿ, ಆಡಿದ್ದು ಧರ್ಮರಾಯ ಮಾಡಿರುವ ದೊಡ್ಡ ಅಪರಾಧ. ಅದರಿಂದಾಗಿ ತಾವೆಲ್ಲರೂ ಬಹಳ ಕಷ್ಟಪಟ್ಟು ಸಂಪಾದಿಸಿದ ರಾಜ್ಯವನ್ನೂ ಸಂಪತ್ತನ್ನೂ ಮಾತ್ರವಲ್ಲ ದ್ರೌಪದಿಯ ಮಾನವನ್ನೂ ಕಳೆದುಕೊಳ್ಳಬೇಕಾಯಿತು. ರಾಜ್ಯವನ್ನು ಸಂಪತ್ತನ್ನು ಕಳೆದುಕೊಂಡ ನೋವನ್ನು ಸಹಿಸಿಕೊಳ್ಳಬಹುದಾದರೂ ದ್ರೌಪದಿಗಾಗುತ್ತಿರುವ ಅವಮಾನವನ್ನು, ಅವಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಸಹಿಸಿಕೊಳ್ಳುವುದಕ್ಕೆ ಭೀಮನಿಂದ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಆತ ಧರ್ಮರಾಯನ ಮೇಲೆ ಅತ್ಯಂತ ಸಿಟ್ಟುಗೊಳ್ಳುತ್ತಾನೆ. ಇವೆಲ್ಲ ಅನರ್ಥಗಳಿಗೆ ಮೂಲ ಕಾರಣ ಪಗಡೆಯಾಡಿದ ಧರ್ಮರಾಯನ ತೋಳುಗಳು. ಅವುಗಳನ್ನೇ ಸುಟ್ಟುಹಾಕಿದರೆ ಆತ ಮುಂದೆಂದೂ ಪಗಡೆಯಾಡಲಾರ. ಅದಕ್ಕಾಗಿಯೇ ಭೀಮ ಸಹದೇವನನ್ನು ಕರೆದು ಆದಷ್ಟು ಬೇಗ ಬೆಂಕಿಯನ್ನು ತಾ ಧರ್ಮರಾಯನ ತೋಳುಗಳನ್ನು ಸುಟ್ಟುಹಾಕುತ್ತೇನೆ ಎಂದು ಗರ್ಜಿಸುತ್ತಾನೆ. ಸಹದೇವನಿಗೂ ಭೀಮನ ಮಾತುಗಳು ಸಮ್ಮತವೆನಿಸಿದಾಗ ಪ್ರಸಂಗ ಇನ್ನೂ ವಿಕೋಪಕ್ಕೆ ಹೋಗುತ್ತಿರುವುದನ್ನು, ಮತ್ತು ತಮ್ಮೊಳಗೇ ತಾವು ಹೊಡೆದಾಡಿಕೊಂಡರೆ ಇನ್ನೂ ಅನರ್ಥ ಉಂಟಾಗಬಹುದೆಂಬುದನ್ನು  ಮನಗಂಡು ಅರ್ಜುನ ಸಹದೇವನನ್ನು ತಡೆಯುತ್ತಾನೆ. ಅನಂತರ ಭೀಮನನ್ನು ಸಮಾಧಾನಿಸುವುದಕ್ಕೆ ಪ್ರಯತ್ನಿಸುತ್ತಾನೆ.)

 

ಈಯವಸ್ಥೆಗೆ ತಂದ ಕೌರವ

ನಾಯಿಗಳ ನಿಟ್ಟೆಲುವ ಮುಱಿದು ನ

ವಾಯಿಯಲಿ ಘಟ್ಟಿಸದೆ ಕೊಬ್ಬಿದ ತನ್ನ ತೋಳುಗಳ

ವಾಯುಸಖನಲಿ ಸುಡುವೆನೀಗಳೆ

ಬೀಯವಾಗಲಿ ದೇಹವಾಚಂ

ದ್ರಾಯತವೆ ಎಂದೊಡನೊಡನೆ ಮಿಡುಕಿದನು ಕಲಿಭೀಮ   ೧೯

ಪದ್ಯದ ಅನ್ವಯಕ್ರಮ:

ಈ ಅವಸ್ಥೆಗೆ ತಂದ ಕೌರವ ನಾಯಿಗಳ ನಿಟ್ಟೆಲುವ ಮುಱಿದು ನವಾಯಿಯಲಿ ಘಟ್ಟಿಸದೆ ಕೊಬ್ಬಿದ ತನ್ನ ತೋಳುಗಳ ವಾಯುಸಖನಲಿ ಸುಡುವೆನ್ ಈಗಳೇ ಬೀಯವಾಗಲಿ ದೇಹವು ಆಚಂದ್ರಾಯತವೆ? ಎಂದು ಒಡನೆ ಒಡನೆ ಕಲಿಭೀಮ ಮಿಡುಕಿದನು.

ಪದ-ಅರ್ಥ:

ಅವಸ್ಥೆ-ಸ್ಥಿತಿ;  ತಂದ-ಒದಗುವಂತೆ ಮಾಡಿದ;  ಕೌರವನಾಯಿಗಳ್-ದುರ್ಯೋಧನ ಮತ್ತು ದುಶ್ಶಾಸನರು; ನಿಟ್ಟೆಲುವ(ನಿಡಿದಾದ+ಎಲುವ)- ಬೆನ್ನುಮೂಳೆಯನ್ನು;  ಮುಱಿದು-ಪುಡಿಗಟ್ಟಿ;  ನವಾಯಿಯಲಿ-ಠೀವಿಯಿಂದ;  ಘಟ್ಟಿಸದೆ-ಅಪ್ಪಳಿಸದಿದ್ದರೆ;  ವಾಯುಸಖ-ಅಗ್ನಿ;  ಬೀಯವಾಗು-ನಷ್ಟವಾಗಲಿ;  ಆಚಂದ್ರಾಯತವೆ-ಚಂದ್ರನು ಇರುವಲ್ಲಿಯವರೆಗೆ ಇರುವುದೆ?;  ಕಲಿಭೀಮ-ಪರಾಕ್ರಮಶಾಲಿ ಭೀಮ;  ಮಿಡುಕಿದನು-ಆತುರಪಟ್ಟನು.  

            ತಮ್ಮನ್ನು ಈ ಹೀನಾಯ ಸ್ಥಿತಿಗೆ ತಂದ ಕೌರವನಾಯಿಗಳಾದ ದುರ್ಯೋಧನ ಹಾಗೂ ದುಶ್ಶಾಸನರ ಬೆನ್ನುಮೂಳೆಗಳನ್ನು ಪರಾಕ್ರಮದ ಠೀವಿಯಿಂದ ಅಪ್ಪಳಿಸಿ  ಪುಡಿಗಟ್ಟದಿದ್ದರೆ, ನನ್ನ ಕೊಬ್ಬಿದ ತೋಳುಗಳನ್ನು ವಾಯುವಿನ ಸಖನಾದ ಅಗ್ನಿಯಲ್ಲಿ ಸುಟ್ಟುಹಾಕುತ್ತೇನೆ. ಈ ದೇಹವೇನು ಚಂದ್ರನಿರುವಲ್ಲಿಯವರೆಗೆ ಬದುಕಿ ಇರುವುದೆ? ಎಂದು ಪರಾಕ್ರಮಶಾಲಿಯಾದ ಭೀಮಸೇನನು ತನ್ನ ಸೇಡನ್ನು ತೀರಿಸಿಕೊಳ್ಳುವುದಕ್ಕೆ ಕ್ಷಣಕ್ಷಣಕ್ಕೂ ಆತುರಪಟ್ಟನು.

            (ಒಂದೆಡೆ ದುರ್ಯೋಧನ ಹಾಗೂ ದುಶ್ಶಾಸನರ ದುರಹಂಕಾರದ ಹಾಗೂ ನೀತಿಬಾಹಿರವಾದ ವರ್ತನೆಗಳು, ಇನ್ನೊಂದೆಡೆ ದ್ರೌಪದಿಯ ಹೀನಾಯ ಹಾಗೂ ಅವಮಾನಕರ ಸ್ಥಿತಿ ಇವೆರಡೂ ಭೀಮನನ್ನು ಕೆರಳಿಸುತ್ತವೆ. ಭೀಮ ಚಿಕ್ಕಂದಿನಿಂದಲೂ ದುರ್ಯೋಧನಾದಿಗಳ ದುರಹಂಕಾರ, ಅನೈತಿಕತೆಗಳ ಪಿತೂರಿಗಳಿಗೆ ಒಳಗಾದವನು ಹಾಗೂ ಅವುಗಳ ವಿರುದ್ಧ ಪ್ರತಿಭಟಿಸಿದವನು. ಅವರು ಇಷ್ಟು ವರ್ಷಗಳ ಕಾಲ ನೀಡಿದ ಹಿಂಸೆ, ಅವಮಾನ, ಮೋಸ, ವಂಚನೆಗಳನ್ನು ವಿರೋಧಿಸುತ್ತ ಬಂದವನು. ಈಗ ರಾಜಸಭೆಯಲ್ಲಿ ಒಂದೆಡೆ ಕಪಟದ್ಯೂತವನ್ನಾಡಿ ತಮ್ಮನ್ನು ಸೋಲಿಸಿದ್ದು, ಇನ್ನೊಂದೆಡೆ ದ್ಯೂತವನ್ನಾಡುವುದಕ್ಕೆ ತಿಳಿಯದಿದ್ದರೂ ಆಡಿ ಎಲ್ಲವನ್ನೂ ಕಳೆದುಕೊಂಡು ದ್ರೌಪದಿಯ ಅವಮಾನಕ್ಕೆ ಕಾರಣನಾದ ಧರ್ಮರಾಯನಿಂದಾಗಿ ಇನ್ನಿಲ್ಲದ ಅವಮಾನವನ್ನು ಅನುಭವಿಸಬೇಕಾಗಿ ಬಂದದ್ದು, ಮತ್ತೊಂದೆಡೆ ತಮ್ಮ ರಾಣಿಯಾದ ದ್ರೌಪದಿಯನ್ನು ಅತ್ಯಂತ ಹೀನಾಯವಾಗಿ ರಾಜಮಂದಿರದಿಂದ ಎಳೆದುತರಿಸಿ ಆಕೆಯನ್ನು ಸಭೆಯಲ್ಲಿ ಇನ್ನಿಲ್ಲದಂತೆ ಅವಮಾನಿಸಿದ್ದು-ಇವೆಲ್ಲವೂ ಭೀಮನಲ್ಲಿ ಸಹಿಸಲಸಾಧ್ಯವಾದ ನೋವನ್ನು, ಪ್ರತೀಕಾರವನ್ನು ಉಂಟುಮಾಡಿವೆ. ಹಾಗಾಗಿ ಆತ ದುರ್ಯೋಧನಾದಿಗಳನ್ನು ಕೌರವನಾಯಿಗಳೆಂದೇ ಕರೆಯುತ್ತಾನೆ. ಅವರ ಬೆನ್ನುಮೂಳೆಯನ್ನು ಪುಡಿಗಟ್ಟುವ, ಅವರನ್ನು ಸರ್ವನಾಶಮಾಡುವ ನಿರ್ಧಾರಮಾಡುತ್ತಾನೆ. ಒಂದು ವೇಳೆ ಆ ಕೆಲಸ ತನ್ನಿಂದ ಸಾಧ್ಯವಾಗದಿದ್ದರೆ ತನ್ನ ತೋಳುಗಳನ್ನೇ ಬೆಂಕಿಯಲ್ಲಿ ಸುಟ್ಟುಹಾಕುತ್ತೇನೆ ಎಂದು ಗರ್ಜಿಸುತ್ತಾನೆ. ನಡೆದಿರುವ ವಿದ್ಯಮಾನಗಳ ಬಗ್ಗೆ ಭೀಮನಲ್ಲಿ ಉಂಟಾಗಿರುವ ಆಕ್ರೋಶ, ಸಿಟ್ಟು ಮೊದಲಾದವುಗಳನ್ನು ಮಾತ್ರವಲ್ಲದೆ, ಆತ ದುರ್ಯೋಧನಾದಿಗಳ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಹಾತೊರೆಯುವುದನ್ನೂ ಇಲ್ಲಿ ಗಮನಿಸಬಹುದು.)   

 

ಅಕಟ ಧರ್ಮಜ ಭೀಮ ಫಲುಗುಣ

ನಕುಲ ಸಹದೇವಾದ್ಯರಿರ ಬಾ

ಲಿಕೆಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ

ವಿಕಳರಾದಿರೆನಿಲ್ಲಿ ನೀವೀ

ಗಕುಟಿಲರಲಾ ಭೀಷ್ಮ ಗುರು ಬಾ

ಹ್ಲಿಕ ಕೃಪಾದಿಗಳುತ್ತರವ ಕೊಡಿಯಿಂದಳಿಂದುಮುಖಿ  ೨೦

ಪದ್ಯದ ಅನ್ವಯಕ್ರಮ:

ಅಕಟ ಧರ್ಮಜ ಭೀಮ ಫಲುಗುಣ ನಕುಲ ಸಹದೇವ ಆದ್ಯರಿರ ಬಾಲಿಕೆಯನ್ ಮೃತ್ಯುವಿನ ತಾಳಿಗೆಗೆ ಒಪ್ಪಿಸಿ ಕೊಟ್ಟಿರೇ? ಇಲ್ಲಿ ವಿಕಳರೇನ್? ಭೀಷ್ಮ ಗುರು ಬಾಹ್ಲಿಕ ಕೃಪ ಆದಿಗಳ್ ನೀವು ಅಕುಟಿಲರಲಾ, ಉತ್ತರವ ಕೊಡಿ ಎಂದಳ್ ಇಂದುಮುಖಿ.

ಪದ-ಅರ್ಥ:

ಅಕಟ-ಅಯ್ಯೋ(ನೋವು, ಬೇಸರ, ಹಿಂಸೆ ಮೊದಲಾದ ಸಂದರ್ಭಗಳಲ್ಲಿ ವ್ಯಕ್ತವಾಗುವ ಅವ್ಯಯ); ಧರ್ಮಜ-ಧರ್ಮರಾಯ;  ಮೃತ್ಯುವಿನ ತಾಳಿಗೆ-ಸಾವಿನ ಗಂಟಲು;  ವಿಕಳ-ಭ್ರಮೆಗೆ ಒಳಗಾದ;  ಅಕುಟಿಲರ್-ಮೋಸವಿಲ್ಲದವರು.

            ಅಯ್ಯೋ ಧರ್ಮರಾಯ, ಭೀಮಸೇನ, ಅರ್ಜುನ, ನಕುಲ ಸಹದೇವಾದಿಗಳೇ ನಿಮಗಿರುವ ಒಬ್ಬಳು ಹೆಂಡತಿಯನ್ನು ಕಾಪಾಡದೆ ಸಾವಿನ ಗಂಟಲಿಗೆ ಒಪ್ಪಿಸಿಕೊಟ್ಟಿರೆ? ಇಲ್ಲಿ ನೀವು ಭ್ರಮೆಗೆ ಒಳಗಾದಿರೆ? ಎಲ್ಲಿ ಹೋಯಿತು ನಿಮ್ಮ ಪೌರುಷ? ಈ ಆಸ್ಥಾನದಲ್ಲಿ ಪಿತಾಮಹನಾದ ಭೀಷ್ಮ, ಗುರುಗಳಾದ ದ್ರೋಣಾಚಾರ್ಯ, ರಾಜಗುರು ಕೃಪಾಚಾರ್ಯ, ಹಿರಿಯರಾದ ಬಾಹ್ಲೀಕರು ಧರ್ಮಿಷ್ಟರೆಂದು, ಲೋಕಜ್ಞಾನವನ್ನು ಪಡೆದವರೆಂದು ಲೋಕದಲ್ಲಿ ಪ್ರಸಿದ್ಧಿಪಡೆದವರಲ್ಲವೆ? ನನ್ನ ಪ್ರಶ್ನೆಗೆ ಉತ್ತರವನ್ನು ಕೊಡಿ ಎಂದು ದ್ರೌಪದಿ ಅಂಗಲಾಚಿದಳು.

            (ಲೋಕದಲ್ಲಿ ಒಬ್ಬ ರಾಜನಿಗೆ ಹಲವು ಹೆಂಡಂದಿರು ಇರಬಹುದು, ಆದರೆ ಒಬ್ಬ  ರಾಜಕುಮಾರಿಗೆ ಒಬ್ಬ ಗಂಡ. ಆದರೆ ತನಗೋ ಪರಾಕ್ರಮಶಾಲಿಯಾದ ಐದು ಮಂದಿ ಗಂಡಂದಿರು. ಆದರೆ ಇಂದು ರಾಜಸಭೆಯಲ್ಲಿ ತನ್ನ ಮೇಲೆ ಅತಿಕ್ರಮಣ ನಡೆದಾಗ, ಹೀನಾಯವಾಗಿ ಅವಮಾನಿಸಿದಾಗ ಒಬ್ಬರೂ ತನ್ನನ್ನು ಕಾಪಾಡುವುದಕ್ಕೆ ಮುಂದೆ ಬರುತ್ತಿಲ್ಲವೇಕೆ? ಧರ್ಮರಾಯ, ಭೀಮಸೇನ, ಅರ್ಜುನ, ನಕುಲ, ಸಹದೇವ ಎಂದು ಪ್ರತಿಯೊಬ್ಬರ ಹೆಸರನ್ನೂ ಉಲ್ಲೇಖಿಸಿ ದ್ರೌಪದಿ ಪ್ರಶ್ನಿಸುತ್ತಾಳೆ.  ನಿಮಗಿರುವ ಒಬ್ಬ ಹೆಂಡತಿಯನ್ನು ಮೃತ್ಯುವಿನ ಗಂಟಲಿಗೆ ಒಪ್ಪಿಸಿಕೊಟ್ಟಿರೆ? ಎಂದು ನೋವಿನಿಂದ ಕೇಳುತ್ತಾಳೆ. ನಿಮ್ಮ ಪ್ರರಾಕ್ರಮವೆಲ್ಲವನ್ನೂ ಕಳೆದುಕೊಂಡು ಭ್ರಮೆಗೆ ಒಳಗಾದಿರೆ? ಹೆಂಡತಿಯನ್ನು ದುರ್ಯೋಧನ, ದುಶ್ಶಾಸನರಂತಹ ನೀಚರಿಂದ ಕಾಪಾಡಬೇಕೆಂಬ ಕನಿಷ್ಠ ಜ್ಞಾನವೂ ತಿಳಿವಳಿಕೆಯೂ ನಿಮಗಿಲ್ಲದೆ ಹೋಯಿತೆ? ಎಂದು ಕೇಳುತ್ತಾಳೆ. ಆದರೆ ದ್ರೌಪದಿಯ ಯಾವ ಪ್ರಶ್ನೆಗೂ ಪಾಂಡವರಲ್ಲಿ ಉತ್ತರವಿಲ್ಲದಿದ್ದಾಗ, ಆಕೆ ನೇರವಾಗಿ ರಾಜಾಸ್ಥಾನದಲ್ಲಿ ಆಸೀನರಾಗಿರುವ, ಅಕುಟಿಲರು, ಧರ್ಮಷ್ಠರು, ಸಕಲವಿದ್ಯಾ ಪಾರಂಗತರು ಎಂದೆನಿಸಿರುವ ಪಿತಾಮಹನಾದ ಭೀಷ್ಮ, ಬಿಲ್ವಿದ್ಯಾಗುರು ದ್ರೋಣ, ರಾಜಗುರು ಕೃಪಾಚಾರ್ಯ, ಹಿರಿಯರಾದ ಬಾಹ್ಲಿಕ ಮೊದಲಾದವರನ್ನು ಪ್ರಶ್ನಿಸುತ್ತಾಳೆ. ತನ್ನ ಪ್ರಶ್ನೆಗೆ ಸಮರ್ಪಕ, ನ್ಯಾಯೋಚಿತವಾದ ಉತ್ತರವನ್ನು ಕೊಡಿ ಎಂದು ಅಂಗಲಾಚುತ್ತಾಳೆ.)

(ಮೂರನೆಯ ಭಾಗದಲ್ಲಿ ಮುಂದುವರಿದಿದೆ)

 

Leave a Reply

Your email address will not be published. Required fields are marked *