ಅನ್ನವ ನೀಡುವವರಿಂಗೆ ಧಾನ್ಯವೇ ಶಿವಲೋಕ
ಅರ್ಥವ ಕೊಡುವವರಿಂಗೆ ಪಾಷಾಣವೇ ಶಿವಲೋಕ
ಹೆಣ್ಣು-ಹೊನ್ನು-ಮಣ್ಣು ಮೂರನೂ
ಕಣ್ಣಿನಲಿ ನೋಡಿ, ಕಿವಿಯಲಿ ಕೇಳಿ,
ಕೈಯಲಿ ಮುಟ್ಟಿ ಮಾಡುವ ಭಕ್ತಿ
ಸಣ್ಣವರ ಸಮಾರಾಧನೆಯಾಯಿತ್ತು!
ತನ್ನನಿತ್ತು ತುಷ್ಟಿವಡೆವರನೆನಗೆ ತೋರಾ
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ!
-ಅಕ್ಕಮಹಾದೇವಿ
ಇದು ಡಾಂಭಿಕಭಕ್ತಿಯನ್ನು ಕುರಿತ ಅಕ್ಕಮಹಾದೇವಿಯ ವಿಡಂಬನಾತ್ಮಕ ವಚನ. ಭಕ್ತನೊಬ್ಬನ ಭಕ್ತಿಯ ಹಿಂದೆ ಇರುವ ಸ್ವಾರ್ಥತೆ, ಲೋಲುಪತೆ, ವಂಚನೆಗಳನ್ನು ಅಕ್ಕಮಹಾದೇವಿ ಈ ವಚನದಲ್ಲಿ ಕೆಲವು ದೃಷ್ಟಾಂತಗಳ ಮೂಲಕ ವಿಡಂಬಿಸಿರುವುದು ಕಂಡುಬರುತ್ತದೆ. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶಿವಶರಣರು ಸಾರಿದ ದಾಸೋಹ, ದಾನ-ಧರ್ಮ, ಭಕ್ತಿ-ಪೂಜೆ ಮೊದಲಾದ ಅನುಷ್ಠಾನಗಳನ್ನು ಕೆಲವು ಡಾಂಭಿಕರು ತಮಗೆ ಬೇಕಾದಂತೆ, ತಮ್ಮ ತಮ್ಮ ದೃಷ್ಟಿಗನುಗುಣವಾಗಿ ಅನುಸರಿಸಿರುವುದನ್ನು, ಆಚರಿಸುತ್ತಿರುವುದನ್ನು ಮತ್ತು ಈ ಬಗ್ಗೆ ಶಿಷ್ಟರ ತಿರಸ್ಕಾರ ಹಾಗೂ ವಿಡಂಬನೆಗಳನ್ನು ಅಕ್ಕಮಹಾದೇವಿಯಂತೆಯೇ ಹಲವು ಶಿವಶರಣರ ಸಾಕಷ್ಟು ವಚನಗಳಲ್ಲಿ ಕಂಡುಕೊಳ್ಳಬಹುದು. ಒಂದರ್ಥದಲ್ಲಿ ಬಹಳ ಕ್ರಾಂತಿಕಾರಕವಾದ ಹಾಗೂ ತೀಕ್ಷ್ಣವಾದ ಮಾತುಗಳನ್ನು ಅಕ್ಕಮಹಾದೇವಿ ಈ ವಚನದಲ್ಲಿ ಆಡಿದ್ದಾಳೆ.
ಶಿವಾನುಗ್ರಹ ಹಾಗೂ ಮೋಕ್ಷವನ್ನು ಸಾಧಿಸುವುದಕ್ಕಾಗಿ ಎಷ್ಟೋ ಭಕ್ತರು ತಮ್ಮ ತಮ್ಮ ಮನೋಧರ್ಮಕ್ಕೆ ಅನುಗುಣವಾಗಿ ವಿವಿಧ ರೀತಿಯಲ್ಲಿ ಆಚರಣೆಗಳನ್ನು, ಅನುಷ್ಠಾನಗಳನ್ನು ಕೈಗೊಂಡಿರುವುದು ಕಂಡುಬರುತ್ತದೆ. ಮೋಕ್ಷಸಾಧನೆಗಾಗಿ ಅನ್ನದಾನ, ಅರ್ಥದಾನ, ಭೂದಾನ, ಹಿರಣ್ಯದಾನ – ಹೀಗೆ ಹಲವು ದಾನಗಳನ್ನು ನಮ್ಮ ಪೂರ್ವಜರು ಉಲ್ಲೇಖಿಸಿರುವುದು ಮಾತ್ರವಲ್ಲದೆ ಅವುಗಳನ್ನು ಅಥವಾ ಅವುಗಳಲ್ಲಿ ಕೆಲವನ್ನು ಅನುಸರಿಸಿಕೊಂಡು ಬಂದಿರುವುದು ತಿಳಿಯುತ್ತದೆ. ಪ್ರತಿಯೊಂದು ದಾನದ ಹಿಂದೆ ಸ್ವಾರ್ಥರಹಿತತೆ ಇರಬೇಕಾಗುತ್ತದೆ. ಅದಿಲ್ಲದೆ ಮಾಡುವ ಯಾವುದೇ ದಾನವು ‘ದಾನ’ವೆನಿಸಿಕೊಳ್ಳಲಾರದು, ಅದು ಸ್ವಾರ್ಥಸಾಧನೆಗೆ ರಹದಾರಿ ಎನಿಸಿಕೊಳ್ಳುತ್ತದೆ. ಅಂತಹ ದಾನಪ್ರವೃತ್ತಿಯನ್ನು ಅಕ್ಕಮಹಾದೇವಿ ಈ ವಚನದಲ್ಲಿ ಖಂಡಿಸಿದ್ದಾಳೆ.
ಅನ್ನವನ್ನು ದಾನಮಾಡುವುದಕ್ಕೆ ಧಾನ್ಯವೇ ಮೂಲದ್ರವ್ಯ. ಅದಿಲ್ಲದಿದ್ದರೆ ಅನ್ನದಾನಕ್ಕೆ ಅರ್ಥವಿಲ್ಲ. ಹಾಗಾಗಿ ಕೆಲವು ಅನ್ನದಾಸೋಹಿಗಳು ಧಾನ್ಯವನ್ನೆ ‘ಶಿವಲೋಕ’ ಅಥವಾ ಅದಕ್ಕೆ ಸಮಾನ ಎಂದು ಭಾವಿಸುತ್ತಾರೆ. ಹಾಗೆಯೇ ಹಣವನ್ನು ದಾನಮಾಡುವವರು ಪಾಷಾಣ(ಹರಳು)ವನ್ನೇ ‘ಶಿವಲೋಕ’ ಅಥವಾ ಅದಕ್ಕೆ ಸಮಾನವೆಂದು ಭಾವಿಸುತ್ತಾರೆ. ಅನ್ನದಾನ ಅಥವಾ ಅರ್ಥದಾನದ ಸಂದರ್ಭದಲ್ಲಿ ಆಯಾ ದಾನಗಳ ಹಿಂದೆ ನಿಸ್ವಾರ್ಥ ಮನೋಭಾವವೇ ಬಹಳ ಮುಖ್ಯವೆಂಬುದು ಎಷ್ಟೋ ಮಂದಿಗೆ ತಿಳಿದಿಲ್ಲ. ತಿಳಿಯುವ ಪ್ರಯತ್ನವನ್ನೇ ಮಾಡಿದಂತಿಲ್ಲ.
ಮನುಷ್ಯನ ಸ್ವಾರ್ಥಸಾಧನೆ ಹಾಗೂ ಆ ಮೂಲಕ ಉಂಟಾಗುವ ಅವನತಿಗೆ ಹೆಣ್ಣು, ಹೊನ್ನು, ಮಣ್ಣು ಇವು ಮುಖ್ಯವಾದ ಸಾಧನಗಳು. ಈ ಮೂರನ್ನು ಕಣ್ತುಂಬ ನೋಡಿ, ಕಿವಿತುಂಬ ಕೇಳಿ, ಕೈಯಲ್ಲಿ ಮುಟ್ಟುತ್ತ ಆನಂದಿಸುತ್ತ ಮಾಡುವ ಭಕ್ತಿ ಸಣ್ಣವರ ಸಮಾರಾಧನೆ ಎಂಬುದು ಅಕ್ಕನ ನಿಲುವು. ಇಲ್ಲೆಲ್ಲ ನೋಡುವಿಕೆಯಿಂದ ಸಿಗುವ ದೃಶ್ಯಸುಖ, ಕೇಳುವಿಕೆಯಿಂದ ಸಿಗುವ ಶ್ರವ್ಯಸುಖ, ಹಾಗೂ ಮುಟ್ಟುವಿಕೆಯಿಂದ ಸಿಗುವ ಸ್ಪರ್ಶಸುಖ ಮುಖ್ಯವೇ ವಿನಾ ಅವುಗಳ ಬಗೆಗಿನ ವಿರಕ್ತಭಾವವಲ್ಲ. ಇಲ್ಲಿ ಭಾವ ಹಾಗೂ ಸಂಬಂಧಿತಕ್ರಿಯೆಗಳೊಳಗೆ ಯಾವುದೇ ಅವಿನಾಭಾವ ಸಂಬಂಧವಿಲ್ಲ. ಅಗ್ಗದ ಪ್ರಸಿದ್ಧಿ, ಕಾರ್ಯ-ಕಾರಣ ಸಂಬಂಧವಿಲ್ಲದ ಈ ಭಕ್ತಿ ಅತ್ಯಂತ ‘ಕ್ಷುಲ್ಲಕಭಕ್ತಿ’ ಅಥವಾ ‘ಡಾಂಭಿಕಭಕ್ತಿ’ ಎನಿಸಿಕೊಳ್ಳುವುದರಿಂದ ಅಕ್ಕ ಅದನ್ನು ವಿರೋಧಿಸುತ್ತಾಳೆ.
ಆಕೆಯ ಆಲೋಚನಾಕ್ರಮವೇ ಬೇರೆ. ’ ಸ್ವಾರ್ಥಸಾಧನೆಯ ಭಕ್ತಿಯನ್ನು ಮೀರಿ ತಮ್ಮನ್ನೇ ಸಮರ್ಪಣಭಾವದಿಂದ ಶಿವನಿಗೆ ಅರ್ಪಿಸಿ ತೃಪ್ತಿಯನ್ನು ಹೊಂದಿದ ಅಥವಾ ಶಿವಾನುಗ್ರಹಕ್ಕೆ ಪಾತ್ರರಾಗಲು ಹಂಬಲಿಸುವ ಭಕ್ತರನ್ನು ತನಗೆ ತೋರಿಸು’ ಎಂದು ಅಕ್ಕ ಚೆನ್ನಮಲ್ಲಿಕಾರ್ಜುನನಲ್ಲಿ ಮೊರೆಯಿಡುತ್ತಾಳೆ. ಅಂತಹವರಿಂದ ದಾನವನ್ನು ಸ್ವೀಕರಿಸಿ ಅಥವಾ ಅಂತಹವರ ಸಂಸರ್ಗದಲ್ಲಿದ್ದುಕೊಂಡು ತನ್ನ ನ್ಯೂನತೆಗಳನ್ನು ಕಳೆದುಕೊಂಡು ಪರಿಪೂರ್ಣಳಾಗಿ, ಆ ಮೂಲಕ ಶಿವಾನುಗ್ರಹಕ್ಕೆ ಪಾತ್ರಳಾಗುತ್ತೇನೆ ಎಂಬುದು ಆಕೆಯ ನಿಲುವು.
ಅಕ್ಕನ ಈ ನಿಲುವನ್ನು ಪರಿಭಾವಿಸಿದರೆ ಆ ಕಾಲದಲ್ಲಿ ಡಾಂಭಿಕಭಕ್ತರ ದೊಡ್ಡಗಡಣವೇ ಇತ್ತೆಂದು ತೋರುತ್ತದೆ. ಶಿವಶರಣರ ಎಲ್ಲಾ ವಚನಗಳೂ ಒಂದಲ್ಲ ಒಂದು ಸಂದರ್ಭದಲ್ಲಿ ಹುಟ್ಟಿಕೊಂಡ ಆತ್ಮವಿಮರ್ಶೆಯ, ಸಮಾಜವಿಮರ್ಶೆಯ ಫಲಶ್ರುತಿ ಎಂಬುದು ಅತ್ಯಂತ ಸ್ಪಷ್ಟ. ಶರಣರು ತಮ್ಮಲ್ಲಿದ್ದ ಕ್ಷುಲ್ಲಕತನವನ್ನು, ಡಾಂಭಿಕತೆಯನ್ನು, ನ್ಯೂನತೆಗಳನ್ನು ಆತ್ಮವಿಮರ್ಶೆಯ ಮೂಲಕ ಕಳೆದುಕೊಳ್ಳುತ್ತ ಪರಿಪೂರ್ಣತೆಯತ್ತ ಸಾಗುತ್ತ ಇತರರನ್ನು ದಾರಿನಡೆಸಲು ಪ್ರಯತ್ನಿಸಿದರು. ಆದರೆ ಈ ರೀತಿಯ ಸಾಗುವಿಕೆಯಲ್ಲಿ ಡಾಂಭಿಕರು ಶರಣವಾಹಿನಿಯೊಳಗೆ ಸೇರಿಕೊಂಡು ಶರಣರ ಉದ್ದೇಶವನ್ನು ಕೆಡಿಸಲು ತೊಡಗಿದಂತೆ, ಶರಣರ ಭಕ್ತಿಸಾಧನೆಯ ಪರೋಕ್ಷ ಲಾಭಗಳಿಸಲು ಹವಣಿಸಿದಂತೆ ಕಂಡುಬರುತ್ತದೆ. ಹಾಗಾಗಿಯೇ ಶರಣರ ಮುಖ್ಯ ಉದ್ದೇಶ ಪೂರ್ಣವಾಗಿ ಈಡೇರಲಿಲ್ಲ.
ಅಕ್ಕನ ಈ ಮಾತುಗಳು ಅಂದಿನ ಕಾಲಕ್ಕಿಂತಲೂ ವರ್ತಮಾನದ ಕಾಲದಲ್ಲಿ ಅತ್ಯಂತ ಪ್ರಸ್ತುತವೆನಿಸುತ್ತವೆ. ಅಂದಿನ ಹಾಗೆ ಇಂದು ತಮ್ಮನ್ನು ಭಗವಂತನಿಗೆ ಅರ್ಪಿಸಿಕೊಳ್ಳುವ ಸಮರ್ಪಣ ಮನೋಭಾವವನ್ನು ನಿರೀಕ್ಷಿಸುವುದು ಅಪ್ರಸ್ತುತವೇ ಸರಿ. ಅದರ ಬದಲು ‘ಧಾರ್ಮಿಕವೇಷ’ವನ್ನು ಹಾಕಿಕೊಂಡು, ಹಲವು ರೀತಿಯಲ್ಲಿ ನಾಮಗಳನ್ನು ಬಳಿದುಕೊಂಡು, ಹತ್ತು ಹಲವು ಬಗೆಯ ವ್ರತಗಳನ್ನು ಮಾಡುತ್ತ; ಮಾತುಮಾತಿಗೂ ವೇದ, ಉಪನಿಷತ್ತು, ಪುರಾಣಗಳ ಶ್ಲೋಕಗಳನ್ನು ಉಲ್ಲೇಖಿಸುತ್ತ; ಸತ್ಯ, ನ್ಯಾಯ, ನೀತಿ, ಧರ್ಮ ಮೊದಲಾದ ಮೌಲ್ಯಗಳನ್ನು ಅನ್ಯರಿಗೆ ಬಗೆಬಗೆಯಾಗಿ ಪ್ರವಚನಗಳ ಮೂಲಕ ಉಪದೇಶಿಸುತ್ತ; ಮಾತುಮಾತಿಗೂ ವಂಚಿಸುತ್ತ; ಸಮಾಜದ್ರೋಹಿಗಳಾಗಿ, ದೇಶದ್ರೋಹಿಗಳಾಗಿ ಬದುಕುವವರ ಸಂಖ್ಯೆಯೇ ಇಂದು ಬೆಳೆಯುತ್ತಿದೆ. ಸ್ವಾರ್ಥಸಾಧನೆಯಿಂದಾಗಿ ನಮ್ಮ ಸಮಾಜ, ನಮ್ಮ ನಾಡು, ನಮ್ಮ ದೇಶಗಳೆಲ್ಲವೂ ಅಭಿವೃದ್ಧಿಪಥದಲ್ಲಿ ಪದೇಪದೇ ಮುಗ್ಗರಿಸುತ್ತಿವೆ. ಅನ್ಯರದ್ದನ್ನು ಕೊಳ್ಳೆಹೊಡೆಯುತ್ತ, ಇತರರಿಗೆ ಪಂಗನಾಮ ಹಾಕುತ್ತ, ವ್ಯವಸ್ಥೆಯನ್ನೇ ಅಧ್ವಾನಮಾಡುವ ಗೋಮುಖವ್ಯಾಘ್ರರೆ ಇಂದು ದೇಶದಲ್ಲೆಲ್ಲ ತುಂಬಿ ಮೊರೆದು ಮೆರೆಯುತ್ತಿದ್ದಾರೆ. ಅನ್ಯರದ್ದನ್ನು ದೋಚಿ, ಅನ್ಯರನ್ನು ವಂಚಿಸಿ, ತಮ್ಮ ಸ್ವಾರ್ಥಸಾಧನೆಗಾಗಿ ಅನ್ಯರನ್ನು ಮೆಟ್ಟಿ ತುಷ್ಟಿವಡೆದವರೇ ಇಂದು ದೇಶದಲ್ಲೆಲ್ಲ ರಾರಾಜಿಸುತ್ತಿದ್ದಾರೆ. ಹಾಗಾಗಿ ಅಕ್ಕನ ಮಾತುಗಳು ಇಂದಿನ ಸಮಾಜವ್ಯವಸ್ಥೆಯ ಪ್ರತಿಯೊಂದು ಹಂತದಲ್ಲಿಯೂ ವಿಡಂಬನಾತ್ಮಕವಾಗಿ ಅನ್ವಯವಾಗುತ್ತವೆ.
***