ಸಾಹಿತ್ಯಾನುಸಂಧಾನ

heading1

ಅರಿಯದವರೊಡನೆ ಸಂಗವ ಮಾಡಿದರೆ

ಅಱಿಯದವರೊಡನೆ ಸಂಗವ ಮಾಡಿದರೆ

ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ!

ಬಲ್ಲವರೊಡನೆ ಸಂಗವ ಮಾಡಿದರೆ

ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ

ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗ

ಕರ್ಪುರಗಿರಿಯ ಉರಿಯು ಕೊಂಡಂತೆ!

                                                                -ಅಕ್ಕಮಹಾದೇವಿ

ಶರಣಸಾಂಗತ್ಯದ ಮಹತ್ವ ಹಾಗೂ ಅದರ ಪರಿಣಾಮವನ್ನು ಅಕ್ಕಮಹಾದೇವಿ ಈ ವಚನದ ಮೂಲಕ ಪ್ರತಿಪಾದಿಸಿದ್ದಾಳೆ. ಲೋಕದಲ್ಲಿ ಅರಿತವರು ಹಾಗೂ ಅರಿಯದವರು ಎಂಬ ಎರಡು ವರ್ಗಗಳು. ಮೊದಲನೆಯವರು ಸಾಧಕರು, ಎರಡನೆಯವರು ಬಾಧಕರು. ಇದರ ಪ್ರತಿಪಾದನೆಗೆ ಆಕೆ ಎರಡು ದೃಷ್ಟಾಂತಗಳನ್ನು ಬಳಸಿಕೊಂಡಿದ್ದಾಳೆ.

ಮೊದಲನೆಯ ದೃಷ್ಟಾಂತದ ಪ್ರಕಾರ, ಅರಿಯದವರೊಡನೆ (ಬುದ್ಧಿಗೇಡಿಗಳು, ಸಮಾಜಘಾತುಕರು, ಕಳ್ಳರು, ಸುಳ್ಳರು, ವಂಚಕರು, ಕೊಲೆಗಡುಕರು- ಮೊದಲಾದವರು) ಸ್ನೇಹಮಾಡಿದರೆ ಆ ಸ್ನೇಹವು ಕಲ್ಲನ್ನು ಹೊಡೆದು ಕಿಡಿಯನ್ನು ಹೊತ್ತಿಸಿಕೊಂಡಂತೆ. ಹೊತ್ತಿಕೊಂಡ ಕಿಡಿ ಎಲ್ಲವನ್ನು ಸುಡುವುದಲ್ಲದೆ ಕಾಪಾಡದು. ಕೋಲು ಕೊಟ್ಟು ಹೊಡೆಸಿಕೊಂಡಂತೆ.

ಎರಡನೆಯ ದೃಷ್ಟಾಂತದ ಪ್ರಕಾರ, ಅರಿತವರೊಡನೆ (ಶರಣರು, ಭಕ್ತರು, ಮೌಲ್ಯಗಳನ್ನು ಅನುಸಾರಕರು, ಅನುಭಾವಿಗಳು, ಸಮಾಜಸೇವಕರು, ಚಾರಿತ್ರ್ಯವಂತರು, ಜ್ಞಾನಿಗಳು – ಮೊದಲಾದವರು) ಸ್ನೇಹವನ್ನು ಮಾಡಿದರೆ ಆ ಸ್ನೇಹವು ಮೊಸರನ್ನು ಹೊಸೆದು ಬೆಣ್ಣೆಯನ್ನು ತೆಗೆದುಕೊಂಡಂತೆ. ಉತ್ಪತ್ತಿಯಾದ ಬೆಣ್ಣೆಯೂ ಪ್ರಶಸ್ತ, ಅದರಿಂದ ಸಿದ್ಧಪಡಿಸುವ ತುಪ್ಪವೂ ಅಷ್ಟೇ ಪ್ರಶಸ್ತ.

ಅಕ್ಕ ಇಲ್ಲಿ ಋಣಾತ್ಮಕ ಹಾಗೂ ಧನಾತ್ಮಕವೆನಿಸಿರುವ ಎರಡು ತದ್ವಿರುದ್ಧ ದೃಷ್ಟಾಂತಗಳ ಮೂಲಕ ಶರಣಸಂಗದ ಮಹತ್ವವನ್ನು ಪ್ರತಿಪಾದಿಸಿದ್ದಾಳೆ. ಶರಣರ ಸ್ನೇಹವನ್ನು, ಅವರ ಸಾಂಗತ್ಯವನ್ನು ಮಾಡಿದರೆ ಅದು ಕರ್ಪುರಗಿರಿಗೆ ಬೆಂಕಿ ತಗುಲಿದಂತೆ. ಇನ್ನಾವುದೋ ವಸ್ತುವಿಗೆ ಬೆಂಕಿ ತಗುಲಿದರೆ ಅದು ಸುಟ್ಟುಹೋಗಿ ’ಬೂದಿ’ ಎಂಬ ಶೇಷ  ಉಳಿಯುತ್ತದೆ. ಆದರೆ ಕರ್ಪುರಗಿರಿಗೆ ಬೆಂಕಿ ತಗುಲಿದರೆ ಯಾವ ಶೇಷವೂ ಉಳಿಯಲಾರದು. ಇದು ಭಕ್ತನೊಬ್ಬ ಭಗವಂತನಲ್ಲಿ ಲೀನವಾಗುವ ಒಂದು ಪ್ರಕ್ರಿಯೆ. ಈ ಪ್ರಕ್ರಿಯೆಗೊಂದು ದಾರಿ ’ಅರಿತವರೊಡನೆ ಸಂಗ’. ಅದೇ ಶರಣಸಾಂಗತ್ಯ. ಮೊಸರು ಹಲವು ಪ್ರಕ್ರಿಯೆಗಳನ್ನು ದಾಟಿ ತುಪ್ಪವಾಗಿ ಪರಿವರ್ತಿತವಾಗುವಂತೆ  ಶರಣಸಂಗವೆಂಬ ಪ್ರಕ್ರಿಯೆಯಿಂದ ಮನುಷ್ಯ ತನ್ನೆಲ್ಲ ನ್ಯೂನತೆಗಳನ್ನು, ಬದುಕಿನ ಅಸಾಂಗತ್ಯಗಳನ್ನು, ಭವಬಂಧನಗಳನ್ನು ಕಳೆದುಕೊಂಡು ಸಜ್ಜನನಾಗಿ, ಸದ್ಭಕ್ತನಾಗಿ ಪರಿವರ್ತಿತಗೊಂಡು ಮುಕ್ತನಾಗುತ್ತಾನೆ.

ಕಲ್ಲು ಸ್ಥಾವರಕ್ಕೆ ಸಂಕೇತವಾದರೆ, ಮೊಸರು ಜಂಗಮತ್ವಕ್ಕೆ ಸಂಕೇತ. ಮೊದಲನೆಯದು ಬದಲಾಗದು, ಎರಡನೆಯದು ಒಂದೊಂದು ಹಂತದಲ್ಲಿ ರೂಪವನ್ನು ಬದಲಾಯಿಸಿಕೊಳ್ಳುತ್ತ, ಪರಿಷ್ಕರಿಸಿಕೊಳ್ಳುತ್ತ ಕೊನೆಗೆ ಅತ್ಯಂತ ಪ್ರಶಸ್ತವಾದ ರೂಪವನ್ನು ಪಡೆದುಕೊಂಡು ಆರೋಗ್ಯದಾಯಕವೆನಿಸಿಕೊಳ್ಳುತ್ತದೆ. ಸರ್ವಮಾನ್ಯವೆನಿಸಿಕೊಳ್ಳುತ್ತದೆ.  ಶರಣಸಾಂಗತ್ಯವೂ ಹೀಗೆಯೇ. ಮನುಷ್ಯನ ದೈಹಿಕ ಹಾಗೂ ಮಾನಸಿಕ ಪರಿವರ್ತನೆ, ಪರಿಷ್ಕರಣೆಗಳಿಗೆ ಕಾರಣವಾಗಿ ಸಾಮಾಜಿಕ ಆರೋಗ್ಯಕ್ಕೆ ಪೂರಕವೆನಿಸಿಕೊಳ್ಳುತ್ತದೆ. ಇವೆರಡೂ ಆರೋಗ್ಯಪೂರ್ಣವಾಗಿದ್ದರೆ ಮನುಷ್ಯ ಸಾಧಕ. ಇಲ್ಲದಿದ್ದರೆ ಬಾಧಕ. ಸಾಂಘಿಕ ಬದುಕಿನಲ್ಲಿ ಸಾಧಕತನಕ್ಕೆ ಪ್ರಾಶಸ್ತ್ಯ. ಬಾಧಕತನ ಅಪಾಯ. ಒಂದಷ್ಟುಕಾಲ ಬದುಕಿ ಶರಣಸಾಂಗತ್ಯದ ಮೂಲಕ ಕೆಡುಕೆಲ್ಲವನ್ನೂ ಕಳೆದುಕೊಂಡು ಒಳಿತೆಲ್ಲವನ್ನು ಸಾಧಿಸಿ, ಮುಕ್ತಿಯನ್ನು ಪಡೆಯಲು ಸಾಧ್ಯವಿರುವುದಾದರೆ ತಾನು ಅರಿಯದವರ ಸಂಗ ಏಕೆ ಮಾಡಬೇಕು? ಎಂಬುದು ಅಕ್ಕನ ಪ್ರಶ್ನೆ.

ಅಕ್ಕನ ಈ ಮಾತುಗಳು ಅಂದಿಗಿಂತಲೂ ಇಂದಿನ ಬದುಕಿಗೆ ಹೆಚ್ಚು ಅರ್ಥಪೂರ್ಣವಾಗಿ ಕನ್ನಡಿಹಿಡಿಯುತ್ತವೆ. ಅಂದು ಮನುಷ್ಯನಿಗೆ ಅರಿಯುವ ಹಂಬಲವಿತ್ತು. ಅರಿತವರನ್ನು ಗೌರವಿಸುವ ಮನೋಭಾವವಿತ್ತು. ಜ್ಞಾನಪಿಪಾಸೆಯಿತ್ತು. ಹಿರಿಯರಲ್ಲಿ, ಬಲ್ಲವರಲ್ಲಿ, ಅರಿತವರಲ್ಲಿ ಗೌರವವಿತ್ತು. ಸಾಧಿಸಬೇಕೆಂಬ ಛಲವಿತ್ತು. ಬದುಕು ಸುಂದರವಾಗಿರಬೇಕೆಂಬ ಕಾಳಜಿಯಿತ್ತು. ಆದರೆ ಇಂದು ಅವೆಲ್ಲವೂ ತದ್ವಿರುದ್ಧವಾಗಿ ಕೇವಲ ಸ್ವಾರ್ಥಸಾಧನೆ, ವಿಶ್ವಾಸಘಾತುಕತನ, ನಯವಂಚಕತನ, ವ್ಯಭಿಚಾರ, ಮೋಸ, ವಂಚನೆಗಳ ಬಗೆಗಿನ ಕಾಳಜಿಗಳೇ ತುಂಬಿತುಳುಕುತ್ತಿವೆ. ಹಾಗಾಗಿ ಸಾಮಾಜಿಕಬದುಕು ಕುಲಗೆಡುತ್ತಿದೆ. ಸಮಾಜವ್ಯವಸ್ಥೆ ಕುಸಿಯುತ್ತಿದೆ. ದೇಶ ಸಾಧನೆಯ ಹಾದಿಯಲ್ಲಿ ಮುಗ್ಗರಿಸುತ್ತಿದೆ. ಇವೆಲ್ಲವೂ ಅರಿಯದವರ ಹಾಗೂ ಅವರೊಡನೆ ಮಾಡಿದ ಸಂಗದ ಫಲ. ಇಂದು ಅರಿತವರನ್ನು ಕಣ್ಣಲ್ಲಿ ಎಣ್ಣೆಹಾಕಿಹುಡುಕಬೇಕಾಗಿದೆ. ‘ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ’ ಎಂಬ ಹಿರಿಯರ ಅನುಭಾವದ ನುಡಿ ಅಕ್ಕನ ಮಾತುಗಳನ್ನೇ ಸಮರ್ಥಿಸುತ್ತದೆ. ಆಕೆಯ ಮಾತುಗಳ ಸಾರ್ವಕಾಲಿಕ ಮಹತ್ವಕ್ಕೆ ಸಾಟಿಯೇ ಇಲ್ಲ.

***

Leave a Reply

Your email address will not be published. Required fields are marked *