ಸಾಹಿತ್ಯಾನುಸಂಧಾನ

heading1

ನೆಲದ ಮರೆಯ ನಿಧಾನದಂತೆ

ನೆಲದ ಮರೆಯ ನಿಧಾನದಂತೆ

ಫಲದ ಮರೆಯ ರುಚಿಯಂತೆ

ಶಿಲೆಯ ಮರೆಯ ಹೇಮದಂತೆ

ತಿಲದ ಮರೆಯ ತೈಲದಂತೆ

ಮರದ ಮರೆಯ ತೇಜದಂತೆ

ಭಾವದ ಮರೆಯ ಬ್ರಹ್ಮವಾಗಿಪ್ಪ

ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯಬಾರದು.

                                                                           -ಅಕ್ಕಮಹಾದೇವಿ

            ಅಕ್ಕಮಹಾದೇವಿ ಇಲ್ಲಿ ಮನುಷ್ಯನ ಅರಿವಿಗೆ ನಿಲುಕದ, ಸರ್ವಾಂತರ್ಯಾಮಿಯಾಗಿರುವ ಚೆನ್ನಮಲ್ಲಿಕಾರ್ಜುನನ ಅಸ್ತಿತ್ವವನ್ನು ನೋಡಲಾರದ್ದನ್ನು ನೋಡುವ, ಅರಿಯಲಾರದ್ದನ್ನು ಅರಿಯುವ ಹಾಗೂ ನಿಗೂಢತೆಯಲ್ಲಿನ ಗೂಢತೆಯನ್ನು ಕಂಡುಕೊಳ್ಳುವ ಐದು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸಿದ್ದಾಳೆ.

            ಮೊದಲನೆಯ ದೃಷ್ಟಾಂತವೆಂದರೆ, ಭಗವಂತ ನೆಲದ ಮರೆಯಲ್ಲಿ ಅಡಗಿಕೊಂಡಿರುವ ನಿಧಾನ(ನಿಧಿ)ದಂತಿರುವುದು. ವಿಶಾಲವಾಗಿರುವ ಈ ಭೂಮಿಯಲ್ಲಿ ನಿಧಿ ಎಲ್ಲೆಲ್ಲಿ ಅಡಗಿಕೊಂಡಿದೆ ಅಥವಾ ನಮ್ಮ ಪೂರ್ವಜರು ತಾವು ಗಳಿಸಿದ ಚರಸಂಪತ್ತನ್ನು ಎಲ್ಲೆಲ್ಲಿ ಅಡಗಿಸಿಟ್ಟುಕೊಂಡಿದ್ದರು ಎಂಬುದಾಗಲೀ ಭೂಮಿಯೊಳಗೆ ಯಾವುದೆಲ್ಲ ನಿಕ್ಷೇಪಗಳು ಎಲ್ಲೆಲ್ಲಿ ಅಡಗಿಕೊಂಡಿವೆ ಎಂಬುದಾಗಲೀ ಯಾರಿಗೂ ತಿಳಿದಿಲ್ಲ. ಚೆನ್ನಮಲ್ಲಿಕಾರ್ಜುನನೂ ಹೀಗೆಯೇ ಎಲ್ಲಿ, ಯಾವ ರೂಪದಲ್ಲಿದ್ದಾನೆ ಎಂಬುದು ಯಾರಿಗೂ ತಿಳಿಯಲಾರದು.

            ಎರಡನೆಯ ದೃಷ್ಟಾಂತವೆಂದರೆ, ಭಗವಂತ ಫಲಗಳೊಳಗೆ ಅಡಗಿಕೊಂಡಿರುವ ರುಚಿಯಂತಿರುವುದು. ಭೂಮಿಯ ಮೇಲೆ ಅಸಂಖ್ಯ ಫಲವೈವಿಧ್ಯಗಳಿವೆ. ಬಣ್ಣ, ಆಕಾರ, ರುಚಿಗಳಲ್ಲೂ ವೈವಿಧ್ಯವಿದೆ. ಫಲವನ್ನು ನೋಡಿದೊಡನೆಯೇ ಅದರ ರುಚಿ ತಿಳಿಯದು. ಚೆನ್ನಮಲ್ಲಿಕಾರ್ಜುನ ವಿಶ್ವದಲ್ಲಿನ ಅಸಂಖ್ಯ ಫಲಗಳಲ್ಲಿ ಯಾವ  ಯಾವ ಬಗೆಯ ರುಚಿಯಲ್ಲಿ ಅಡಗಿಕೊಂಡಿದ್ದಾನೆ ಎಂಬುದು ತಿಳಿಯಲು ಅಸಾಧ್ಯ.

            ಮೂರನೆಯ ದೃಷ್ಟಾಂತವೆಂದರೆ, ಭಗವಂತ ಶಿಲೆಯ ಮರೆಯಲ್ಲಿ ಅಡಗಿಕೊಂಡ ಚಿನ್ನದಂತಿರುವುದು. ಭೂಗರ್ಭದೊಳಗೆ ಯಾವ ಯಾವ ಪ್ರದೇಶಗಳಲ್ಲಿ ಎಷ್ಟೆಷ್ಟು ಆಳದಲ್ಲಿ ಚಿನ್ನದ ನಿಕ್ಷೇಪಗಳಿವೆ ಎಂಬುದನ್ನು ಮೇಲುನೋಟಕ್ಕೆ ಅರಿತುಕೊಳ್ಳಲು ಅಸಾಧ್ಯ. ಚೆನ್ನಮಲ್ಲಿಕಾರ್ಜುನನೂ ನೆಲದ ಮರೆಯಲ್ಲಿ ಹುದುಗಿರುವ ಚಿನ್ನದ ನಿಕ್ಷೇಪದಂತೆ. ಎಲ್ಲೆಲ್ಲಿ ಅಡಗಿಕೊಂಡಿದ್ದಾನೆ ಎಂಬುದನ್ನು ಅರಿಯುವುದು ಸುಲಭಸಾಧ್ಯವಲ್ಲ.

            ನಾಲ್ಕನೆಯ ದೃಷ್ಟಾಂತವೆಂದರೆ, ಭಗವಂತ ಎಳ್ಳಿನಲ್ಲಿ ಹುದುಗಿರುವ ಎಣ್ಣೆಯಂತಿರುವುದು. ಎಳ್ಳನ್ನು ಒಂದು ಅಂಗೈಯಲ್ಲಿ ಹಿಡಿದು ಇನ್ನೊಂದು ಅಂಗೈಯಿಂದ ತಿಕ್ಕಿದಾಗ ಅಥವಾ ಎಳ್ಳನ್ನು ನೋಡಿದಾಗ ಎಲ್ಲಿಯೂ ಎಣ್ಣೆಯ ಅಸ್ತಿತ್ವ ತಿಳಿಯುವುದೇ ಇಲ್ಲ. ಚೆನ್ನಮಲ್ಲಿಕಾರ್ಜುನನೂ ಎಳ್ಳಿನಲ್ಲಿರುವ ಎಣ್ಣೆಯಂತೆ. ವಿವಿಧ ಧಾನ್ಯಗಳಲ್ಲಿ ಎಷ್ಟು ವೈವಿಧ್ಯ ರೂಪಗಳಲ್ಲಿ ಅಡಗಿಕೊಂಡಿದ್ದಾನೆ ಎಂಬುದನ್ನು ಅರಿತುಕೊಳ್ಳುವುದು ಸುಲಭಕಾರ್ಯವಲ್ಲ.

            ಐದನೆಯ ದೃಷ್ಟಾಂತವೆಂದರೆ, ಭಗವಂತ ಮರದೊಳಗೆ ತೇಜ(ಅಗ್ನಿ)ದಂತೆ ಅಡಗಿಕೊಂಡಿರುವುದು. ಮರವನ್ನು ನೋಡಿದೊಡನೆ ಅಥವಾ ಅದನ್ನು ಮುಟ್ಟಿದೊಡನೆ ಅದರೊಳಗಿನ ಬೆಂಕಿ ಗಮನಕ್ಕೆ ಬರುವುದೇ ಇಲ್ಲ. ಆದರೆ ಒಂದು ನಿರ್ದಿಷ್ಟಪ್ರಕ್ರಿಯೆಯಲ್ಲಿ ಅದು ಕಾಣಿಸಿಕೊಳ್ಳುತ್ತದೆ. ಈ ಅಗ್ನಿಯ ತೀವ್ರತೆ ಮರದಿಂದ ಮರಕ್ಕೆ ಭಿನ್ನಭಿನ್ನವಾಗಿರಬಹುದು. ಚೆನ್ನಮಲ್ಲಿಕಾರ್ಜುನನೂ ಇದೇ ರೀತಿ ಮರದ ಮರೆಯಲ್ಲಿ ಬೆಂಕಿಯಂತೆ ಅಡಗಿಕೊಂಡಿರುವುದನ್ನು ಅರಿತುಕೊಳ್ಳುವುದು ಸುಲಭಸಾಧ್ಯವಲ್ಲ.

            ಅಕ್ಕ ನಿರೂಪಿಸಿರುವ ಮೇಲಿನ ಐದು ದೃಷ್ಟಾಂತಗಳನ್ನು ಪರಿಭಾವಿಸಿದರೆ ಚೆನ್ನಮಲ್ಲಿಕಾರ್ಜುನ ಸರ್ವಾಂತರ್ಯಾಮಿಯಾಗಿರುವುದು ಸ್ಪಷ್ಟವಾಗುತ್ತದೆ. ಆತ ಎಲ್ಲೆಲ್ಲೂ ಇದ್ದಾನೆ ಎಂಬ ಸುಳಿವು ಸಿಕ್ಕರೂ ಆತ ಅಷ್ಟು ಸುಲಭವಾಗಿ ಕಣ್ಣಿಗೆ ಕಾಣಲಾರ, ಮನಸ್ಸಿಗೂ ಗೋಚರಿಸಲಾರ. ಮನುಷ್ಯನ ಮನಸ್ಸು  ಭಾವನೆಗಳ ಆಗರ. ಇಲ್ಲಿ ಉದ್ಭವಿಸುವ ಸಕಲಭಾವಗಳಿಗೂ ಚೆನ್ನಮಲ್ಲಿಕಾರ್ಜುನನೇ ಪ್ರೇರಕಶಕ್ತಿ. ಇಲ್ಲಿ ಉದ್ಭವಿಸುವ ಭಾವಗಳು ನೆಲ, ಫಲ, ಶಿಲೆ, ತಿಲ ಹಾಗೂ ಮರಗಳಿಗೆ ಸಮಾನ. ನೆಲದ ಮರೆಯ ನಿಧಾನವನ್ನು, ಫಲದ ಮರೆಯ ರುಚಿಯನ್ನು, ಶಿಲೆಯ ಮರೆಯ ಹೇಮವನ್ನು, ತಿಲದ ಮರೆಯ ತೈಲವನ್ನು ಹಾಗೂ ಮರದ ಮರೆಯ ತೇಜವನ್ನು ವಿವಿಧ ಪ್ರಕ್ರಿಯೆಗಳ ಸ್ತರಗಳಲ್ಲಿ ಮನುಷ್ಯ ಕಂಡುಕೊಂಡರೂ ಅವುಗಳ ಗೂಢತೆಯನ್ನು ಕಂಡುಕೊಳ್ಳುವುದಕ್ಕೆ ಮನುಷ್ಯ ಅಸಮರ್ಥನಾಗಿದ್ದಾನೆ. ಅವೆಲ್ಲವುಗಳ ಆಳದಲ್ಲಿ ಅಥವಾ ಮರೆಯಲ್ಲಿ ಚೆನ್ನಮಲ್ಲಿಕಾರ್ಜುನ ಅಡಗಿರುವಂತೆಯೇ ಮನುಷ್ಯನ ಭಾವದ ಮರೆಯಲ್ಲಿಯೂ ಆತನೇ ಅಡಗಿಕೊಂಡಿದ್ದಾನೆ. ಆದರೆ ಅದನ್ನು ಕಂಡುಕೊಳ್ಳುವಲ್ಲಿ ಮನುಷ್ಯ ಸೋಲುತ್ತಿದ್ದಾನೆ. ಇದನ್ನೇ ಪರಿಭಾವಿಸಿ ಅಕ್ಕ ಚೆನ್ನಮಲ್ಲಿಕಾರ್ಜುನನ ನಿಲ(ಅಸ್ತಿತ್ವ)ವನ್ನು ಯಾರೂ ಅರಿಬಾರದು(ಅರಿಯಲಾಗದು) ಎನ್ನುತ್ತಾಳೆ.

            ಲೋಕದ ಪ್ರತಿಯೊಂದು ಸ್ಥಿರ-ಚರ ವಸ್ತುಗಳ ಹಿಂದೆ ಫಲ-ಪುಷ್ಪಗಳ ಹಿಂದೆ ಶಕ್ತಿಯೊಂದು ಅಡಗಿರುವುದನ್ನು, ಆ ಮೂಲಕ ಈ ಲೋಕ ಸುಂದರವಾಗಿ ರೂಪುಗೊಂಡಿರುವುದನ್ನು, ಮನುಷ್ಯಾದಿ ಜೀವಜಂತುಗಳ ವಾಸಕ್ಕೆ ಯೋಗ್ಯವೆನಿಸಿರುವುದನ್ನು ಅಕ್ಕ ಈ ವಚನದಲ್ಲಿ ಉಲ್ಲೇಖಿಸುವುದರ ಜೊತೆಗೆ ಆ ರಹಸ್ಯವನ್ನು, ಅದರ ಮೂಲವನ್ನು ಕಂಡುಕೊಳ್ಳುವುದಕ್ಕೆ ಪ್ರಯತ್ನಿಸಿದರೆ ಚೆನ್ನಮಲ್ಲಿಕಾರ್ಜುನನನ್ನು ಕಂಡುಕೊಳ್ಳಲು ಪ್ರಯತ್ನಿಸಿದಂತೆ ಎನ್ನುತ್ತಾಳೆ.

            ವಚನಕಾರರ ಸಮಸ್ತ ವಚನಗಳು ಭಿನ್ನಭಿನ್ನ ನೆಲೆಗಳಲ್ಲಿ ಆಧುನಿಕಕಾಲದಲ್ಲಿ ನಮ್ಮ ಬದುಕಿಗೆ ಅನ್ವಯಗೊಳ್ಳುವುದು ಕುತೂಹಲಕಾರಿಯಾದ ಸತ್ಯ. ಯಾವುದೇ ವಿಷಯವನ್ನು ಅರಿಯುವ ಕುತೂಹಲದಿಂದ ಹೊರಟಾಗ ನಮಗೆ ವಿಶಿಷ್ಟ  ಅನುಭವಗಳಾಗುತ್ತವೆ. ಅವುಗಳ ಮೂಲಕ ಅರಿವೂ ತಿಳಿವಳಿಕೆಯೂ ಸೇರಿಕೊಳ್ಳುತ್ತದೆ. ಇದರಿಂದ ಮನುಷ್ಯ ತನ್ನನ್ನು ತಾನೇ ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಇಂದಿನ ಈ ವ್ಯಾಪಾರೀಕರಣದ ಯುಗದಲ್ಲಿ ತನ್ನನ್ನು ತಿದ್ದಿಕೊಳ್ಳುವುದು  ಹಾಗಿರಲಿ, ಅನ್ಯರನ್ನು ಪೀಡಿಸುವುದೇ ಮುಖ್ಯಗುರಿಯಾಗಿರುವುದು ಕಂಡುಬರುತ್ತದೆ. ಭಾವದ ಮರೆಯಲ್ಲಿರುವ ಭಗವಂತನನ್ನಾದರೂ ಅರಿಯಲು ಪ್ರಯತ್ನಿಸಬಹುದು, ಆದರೆ ಇಂತಹ ಸಮಾಜಘಾತುಕರ, ದೇಶದ್ರೋಹಿಗಳ, ವ್ಯಭಿಚಾರಿಗಳ, ಭ್ರಷ್ಟಾಚಾರಿಗಳ ಭಾವದ ಮರೆಯ ಮರ್ಮವನ್ನು ಯಾರೂ ಅರಿಯಲಾಗದು. 

***

2 thoughts on “ನೆಲದ ಮರೆಯ ನಿಧಾನದಂತೆ

Leave a Reply

Your email address will not be published. Required fields are marked *