ಸಾಹಿತ್ಯಾನುಸಂಧಾನ

heading1

ಉಳ್ಳವರು ಶಿವಾಲಯವ ಮಾಡಿಹರು

ಉಳ್ಳವರು ಶಿವಾಲಯವ ಮಾಡಿಹರು!

ನಾನೇನ ಮಾಡವೆ? ಬಡವನಯ್ಯ!

ಎನ್ನ ಕಾಲೇ ಕಂಬ, ದೇಹವೇ ದೇಗುಲ,

ಶಿರವೇ ಹೊನ್ನ ಕಳಶವಯ್ಯಾ

ಕೂಡಲಸಂಗಮದೇವ, ಕೇಳಯ್ಯ,

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!

                                                                          -ಬಸವಣ್ಣ

 

                ತನ್ನ ಹಾಗೂ ತನ್ನ ಕುಟುಂಬದ ಒಳಿತಿಗಾಗಿ, ಅಥವಾ ಊರ ಒಳಿತಿಗಾಗಿ ದೇವಾಲಯಗಳನ್ನು, ಮಂದಿರಗಳನ್ನು, ಅನ್ನಛತ್ರಗಳನ್ನು, ಅರವಟ್ಟಿಗೆಗಳನ್ನು, ಧರ್ಮಶಾಲೆಗಳನ್ನು, ಕೆರೆಗಳನ್ನು ನಿರ್ಮಾಣಮಾಡುವುದು ಭಾರತೀಯ ಸಂಸ್ಕೃತಿಯ ಒಂದು ಹೆಗ್ಗಳಿಕೆ. ಇದರ ಹಿಂದಿನ ಉದ್ದೇಶ ನಿಸ್ವಾರ್ಥವಾದ ಸಮಾಜಸೇವೆ ಮತ್ತು  ದೇಶಸೇವೆ. ಇವೆರಡರಿಂದಲೂ ಈಶಸೇವೆ ಸಾಧ್ಯವೆಂಬ ನಂಬಿಕೆ. ನಮ್ಮ ಇತಿಹಾಸವನ್ನು ಅವಲೋಕಿಸಿದರೆ ರಾಜರು, ಅಧಿಕಾರಿಗಳು, ಶ್ರೀಮಂತರು, ಸಮಾಜಸೇವಕರು ಅಸಂಖ್ಯವಾಗಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದು ಕಂಡುಬರುತ್ತದೆ. ಆದರೆ ಬರಬರುತ್ತ ಎಲ್ಲವೂ ಯಾಂತ್ರಿಕವಾಗಿ ಕೇವಲ ಪ್ರಸಿದ್ಧಿಗಾಗಿ, ತಮ್ಮತಮ್ಮ ಇಷ್ಟದೈವದ ಪ್ರೀತ್ಯರ್ಥವಾಗಿ ದೇವಾಲಯಗಳ, ಮಂದಿರಗಳ ಸ್ಥಾಪನೆಯಾಗತೊಡಗಿತು. ಇದನ್ನೇ ಗಮನದಲ್ಲಿಟ್ಟುಕೊಂಡು ಬಸವಣ್ಣನವರು ದೇಹವೆಂಬ ದೇಗುಲದ ಪರಿಕಲ್ಪನೆಯನ್ನು ನೀಡಿದ್ದಾರೆ.

 

                ಶ್ರೀಮಂತರಾದವರು ಶಿವಾಲಯವನ್ನು ಕಟ್ಟಿದ್ದಾರೆ. ಆದರೆ ತಾನು ಬಡವನಾದುದರಿಂದ ಶಿವಾಲಯವನ್ನು ಹೇಗೆ ಕಟ್ಟಲಿ? ಎಂಬುದು ಬಸವಣ್ಣನವರ ಪ್ರಶ್ನೆ. ಹಾಗಾಗಿ ಅವರು ತಮ್ಮ ದೇಹವನ್ನೇ ಶಿವಾಲಯವನ್ನಾಗಿ ಪರಿಭಾವಿಸುತ್ತಾರೆ. ಬಸವಣ್ಣನವರು ತನ್ನ ಕಾಲುಗಳನ್ನೇ ಕಂಬಗಳನ್ನಾಗಿ, ದೇಹವನ್ನೇ ದೇಗುಲವನ್ನಾಗಿ, ಶಿರವನ್ನು ಹೊನ್ನಿನ ಕಳಶವನ್ನಾಗಿ ಪರಿಭಾವಿಸುತ್ತಾರೆ. ಸ್ಥಾವರ(ಸ್ಥಿರವಾದುದು)ಕ್ಕೆ ಅಳಿವು ಎಂಬುದಿದೆ. ಆದರೆ ಜಂಗಮ(ಚಲನಶೀಲವಾದುದು) ಕ್ಕೆ ಅಳಿವು ಎಂಬುದೇ ಇಲ್ಲ. ಹಾಗಾಗಿಯೇ ಒಂದಲ್ಲ ಒಂದು ಕಾಲದಲ್ಲಿ ಬಿದ್ದುಹೋಗುವ ಸ್ಥಾವರರೂಪದಲ್ಲಿರುವ ಶಿವಾಲಯವನ್ನು ಕಟ್ಟುವುದರ ಬದಲು ಶಾಶ್ವತವಾಗಿ ಶಿವಾನುಗ್ರಹಕ್ಕೆ ಪಾತ್ರವಾಗುವಂತೆ ಜಂಗಮರೂಪದಲ್ಲಿರುವ ದೇಹವನ್ನೇ ದೇಗುಲವನ್ನಾಗಿ ಪರಿಭಾವಿಸುವುದು ಹೆಚ್ಚು ಸಮಂಜಸವೆಂಬುದು ಬಸವಣ್ಣನವರ ಅಭಿಪ್ರಾಯ.

                ಶಿವಾಲಯ ಅಥವಾ ದೇಗುಲ ಭಗವಂತನ ಸಾನ್ನಿಧ್ಯವಿರುವ ಸ್ಥಳ. ಅದು ಶುದ್ಧತೆ, ಅಚ್ಚುಕಟ್ಟುತನದಿಂದ ಕೂಡಿರುವಂತಹುದು. ಇದರಿಂದಾಗಿಯೇ ದೇಗುಲಕ್ಕೊಂದು ವಿಶೇಷ ಸ್ಥಾನಮಾನ ಪ್ರಾಪ್ತಿ. ಅಲ್ಲಿ ಭಯಭಕ್ತಿಗಳು ಸಾಧ್ಯ. ಇವಾವುದೂ ಇಲ್ಲದಿದ್ದರೆ ಅದೊಂದು ಜೀವಕಳೆಯಿಲ್ಲದ ಸ್ಥಳ ಅಷ್ಟೇ. ಎಲ್ಲಾ ಅವಗುಣಗಳನ್ನು ಕಳೆದುಕೊಂಡು ಪರಿಶುದ್ಧವಾದ ದೇಹವನ್ನೇ ದೇಗುಲವೆಂದು ಪರಿಭಾವಿಸಿದರೆ ಅದೂ ದೇಗುಲದಂತೆಯೇ ಶುದ್ಧತೆ, ಅಚ್ಚುಕಟ್ಟುತನಗಳನ್ನು ಒಳಗೊಳ್ಳುತ್ತದೆ. ಆಗ ದೇಹಕ್ಕೊಂದು ವಿಶೇಷ ಸ್ಥಾನಮಾನ ಪ್ರಾಪ್ತಿಯಾಗುತ್ತದೆ.  ಆತ್ಮವು  ಪರಮಾತ್ಮನಿಗೆ ಸಮಾನವೆಂದು ಪರಿಭಾವಿಸುವುದಾದರೆ ಆತ್ಮವನ್ನು ಹೊಂದಿರುವ ದೇಹವೂ ದೇಗುಲದ ಸ್ಥಾನಮಾನಗಳನ್ನು ಪಡೆಯುತ್ತದೆ. ದೇಹಶುದ್ಧಿಯಿಂದ ದೇಹದೊಳಗೆ ಶಿವಸಾನ್ನಿಧ್ಯವೂ ಆ ಮೂಲಕ ಶಿವಾನುಗ್ರಹವೂ  ಸಾಧ್ಯವಾಗುತ್ತದೆ.

                ಇತರ ಸಾಮಾನ್ಯರಂತೆ ಶಿವಾನುಗ್ರಹಕ್ಕಾಗಿ ಎಲ್ಲೆಂದರಲ್ಲಿ ದೇಗುಲಗಳನ್ನು ಕಟ್ಟಿದರೆ ದೇಗುಲಗಳೇನೋ ಶೋಭಿಸಬಹುದು, ಹಾಗೆಯೇ ಊರುಗಳು ಕೂಡಾ. ಒಂದಷ್ಟು ಹಣವನ್ನು ವ್ಯಯಿಸಿ ಮೆರೆಯಬಹುದು. ಒಂದಷ್ಟು ಕೀರ್ತಿಯನ್ನೂ ಸಂಪಾದಿಸಬಹುದು. ಒಂದಷ್ಟು ವರ್ಷಗಳ ಕಾಲ ಜನ ಅದನ್ನು ಆಡಿ ಹೊಗಳಬಹುದು. ಕ್ರಮೇಣ ಎಲ್ಲವೂ ಮರೆತುಹೋಗಿ ದೇಗುಲವೂ ಅಳಿದುಹೋಗಿ ಹೆಸರೂ ಸ್ಥಾನಮಾನಗಳೂ ಕೀರ್ತಿಯೂ ಹೊಗಳಿಕೆಗಳೂ ಉಳಿಯಲಾರವು. ಏಕೆಂದರೆ ಸ್ಥಾವರಕ್ಕೆ ಜೀವಿತಾವಧಿಯೆಂಬುದಿದೆ.  ಅನಂತರ ಅದು ನಾಶಹೊಂದುತ್ತದೆ. ಆದರೆ ಜಂಗಮರೂಪಿಯಾದ ಶಿವಭಕ್ತ ತನ್ನ ದೇಹವನ್ನೇ ದೇಗುಲವೆಂದು ಪರಿಭಾವಿಸಿಕೊಂಡರೆ ದೇಹಶುದ್ಧಿ, ಮನಶುದ್ಧಿಗಳಾಗಿ ಶಿವಾನುಗ್ರಹಕ್ಕೆ ಪಾತ್ರನಾಗುವುದಕ್ಕೆ ಸಾಧ್ಯ. ಜಂಗಮಕ್ಕೆ ಅಳಿವು ಎಂಬುದಿಲ್ಲ. ಕೈಲಾಸಪ್ರಾಪ್ತಿ ಮಾತ್ರ.  ವ್ಯಕ್ತಿಸುಧಾರಣೆಯ ವಿಷಯದಲ್ಲಿ ಬಸವಣ್ಣನವರ ಈ ಪರಿಕಲ್ಪನೆ ಅತ್ಯಂತ ಮಾರ್ಮಿಕವೂ ಔಚಿತ್ಯಪೂರ್ಣವೂ ಆಗಿದೆ.

                ಇಂದಿನ ಆಧುನಿಕ ವೈಜ್ಞಾನಿಕಯುಗದಲ್ಲಿ ದೇಗುಲಗಳ ನಿರ್ಮಾಣಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಪ್ರತಿಯೊಂದು ಹಂತದಲ್ಲಿಯೂ ಪೈಪೋಟಿ ಎದ್ದುಕಾಣುತ್ತಿದೆ. ಕೋಟಿಗಟ್ಟಲೆ ಹಣವೇನೋ ವ್ಯಯವಾಗುತ್ತಿದೆ. ಆದರೆ ಅದರ ಸದ್ವಿನಿಯೋಗ ಎಷ್ಟು? ಎಂಬುದರ ಬಗ್ಗೆ ಆಲೋಚಿಸಬೇಕಿದೆ. ಮನಸ್ಸು, ದೇಹ, ಮಾತು ಹಾಗೂ ವರ್ತನೆಗಳೇ ಶುದ್ಧವಾಗಿಲ್ಲದಿದ್ದರೆ ಎಷ್ಟು ದೇಗುಲಗಳನ್ನು ಕಟ್ಟಿ, ಹೆಸರುಗಳಿಸಿ ಪ್ರಯೋಜನವಾದರೂ ಏನು? ಮನಸ್ಸು, ದೇಹ, ವ್ಯವಹಾರ, ಆಚರಣೆ, ನಂಬಿಕೆ ಮೊದಲಾದವುಗಳಲ್ಲಿ ಕೇವಲ ಬೂಟಾಟಿಕೆ, ಡಾಂಬಿಕತನಗಳನ್ನೇ ಮೈಗೂಡಿಸಿಕೊಂಡು ಧಾರ್ಮಿಕಕಾರ್ಯಗಳಲ್ಲಿ ತೊಡಗಿಸಿಕೊಂಡರೂ ಶಿವಾನುಗ್ರಹ ಹಾಗಿರಲಿ, ಸಾಮಾನ್ಯ ಜನರ ವಿಶ್ವಾಸವೂ ದೊರೆಯದು ಎಂಬುದನ್ನು ನಾವು ಮೊದಲು ಅರ್ಥೈಸಿಕೊಳ್ಳಬೇಕು. ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಆಡಿದ ಮಾತುಗಳು ಇಪ್ಪತ್ತೊಂದನೆಯ ಶತಮಾನದ ಡಾಂಭಿಕರಿಗೆ ಚಾಟಿಬೀಸುತ್ತಿರುವುದು ಆ ಮಾತುಗಳ ವರ್ತಮಾನದ ಮಹತ್ವವನ್ನು ಸಾರುತ್ತವೆ.

*** 

4 thoughts on “ಉಳ್ಳವರು ಶಿವಾಲಯವ ಮಾಡಿಹರು

  1. ಸರಳ ನಿರೂಪಣಾ ಶೈಲಿಯಲ್ಲಿ ದೇಹವೇ ದೇಗುಲ ಎನ್ನುವ ವಚನವನ್ನು ವ್ಯಾಖ್ಯಾನಿಸಿದ್ದೀರಿ. ದೇವಾಲಯದ ಸಂಸ್ಕೃತಿಯನ್ನು ಬದಿಗಿರಿಸಿ ಜೀವಾಲಯದ ಸಂಸ್ಕೃತಿಯನ್ನು ಕಟ್ಟಿಕೊಟ್ಟ ಶ್ರೇಯಸ್ಸು ಬಸವಣ್ಣನವರದ್ದು.ವರ್ತಮಾನಕ್ಕೆ ಅತಿ ಹತ್ತಿರವಾದ, ಅಗತ್ಯವಾದ ವಚನವಿದು. ಇದನ್ನು ಅರಿತು ನಡೆತರೆ ಎಲ್ಲರಿಗೂ ಒಳಿತು.
    ಡಾ.ರವಿರಾಜ ಶೆಟ್ಟಿ

    1. ನಿಮ್ಮ ಪ್ರತಿಕ್ರಿಯೆಗಳಿಗೆ ಕೃತಜ್ಞತೆಗಳು.
      ಎಂಟುನೂರು ವರ್ಷಗಳಿಗೂ ಹಿಂದೆ ರಚನೆಯಾಗಿರುವ ವಚನಗಳು ಇಂದಿನ ನಮ್ಮ ಆಧುನಿಕ ಬದುಕಿಗೂ ಅನ್ವಯವಾಗುತ್ತಿರುವುದು ಆಶ್ಚರ್ಯಕರವಾದ ಸತ್ಯ. ಹಳೆಯ ಸಾಹಿತ್ಯ ಬಹುತೇಕ ಜೀವನಾನುಭವದ ಫಲಶ್ರುತಿ. ಅದು ಎಂದಿಗೂ ಅಪ್ರಸ್ತುತವಾಗಲಾರದು.
      ಈ ಬ್ಲಾಗಿನ ಇತರ ಲೇಖನಗಳನ್ನೂ ಓದಿ ಪ್ರತಿಕ್ರಿಯಿಸುತ್ತಿರಿ.ನಿಮ್ಮ ಪ್ರತಿಕ್ರಿಯೆ ಇತರರಿಗೂ ಸ್ಫೂರ್ತಿಯಾಗಲಿ. ಧನ್ಯವಾದಗಳು 🙏

Leave a Reply

Your email address will not be published. Required fields are marked *