“ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ”. ಲೋಕದಲ್ಲಿ ತನ್ನನ್ನು ತಾನು ತಿದ್ದಿಕೊಳ್ಳದೆ ಸದಾ ಇತರರನ್ನು ತಿದ್ದಲು ಪ್ರಯತ್ನಿಸುವವರನ್ನು ಹಾಗೂ ಅವರ ವರ್ತನೆಯನ್ನು ಬಸವಣ್ಣವನರು ಈ ವಚನದಲ್ಲಿ ವಿಡಂಬಿಸಿದ್ದಾರೆ. ಬಸವಣ್ಣನವರ ಈ ಮಾತು ಸಾರ್ವಕಾಲಿಕ ಸತ್ಯ. ಪ್ರತಿಯೊಬ್ಬ ಮನುಷ್ಯ ತನ್ನ ಹಾಗೂ ತನ್ನ ಗುಣನಡತೆಯ ವಿಚಾರದಲ್ಲಿ ಸುಧಾರಣೆಯನ್ನು ತರಬಯಸುವ ಸಂದರ್ಭದಲ್ಲಿ ಈ ಮಾತನ್ನು ಸದಾ ಸ್ಮರಿಸಿಕೊಳ್ಳುವುದು ಅತ್ಯಂತ ಅಗತ್ಯ. ಲೋಕದಲ್ಲಿ ಪರಿಪೂರ್ಣರೆನಿಸಿಕೊಂಡವರು ಯಾರೂ ಇಲ್ಲ. ಪರಿಪೂರ್ಣನೆನಿಸಿಕೊಂಡರೆ ಆತ ಮನುಷ್ಯನಾಗಿರದೆ ಭಗವಂತನೆನಿಸಿಕೊಳ್ಳುತ್ತಾನೆ. ಲೋಕದ ಮನುಷ್ಯರಲ್ಲಿ ಲೋಪದೋಷಗಳು ಇದ್ದದ್ದೇ. ಆದರೆ ಸುಧಾರಣೆ ಲೋಕದ ನಿಯಮವಾಗಿರುವಾಗ ಮನುಷ್ಯನೂ ಅದಕ್ಕೆ ಸ್ಪಂದಿಸಲೇಬೇಕು.
‘ನಡೆವರೆಡಹದೆ ಕುಳಿತರೆಡಹುವರೆ?’ ಎಂಬುದು ಕವಿವಾಣಿ. ಮನುಷ್ಯನಾಗಿ ಹುಟ್ಟಿದವನು ಸದಾ ಒಂದಲ್ಲ ಒಂದು ತಪ್ಪು ಮಾಡಿಯೇ ಮಾಡುತ್ತಾನೆ. ತಪ್ಪು ಮಾಡಹೊರಟಾಗಲೇ ಮನುಷ್ಯನ ಮನಸ್ಸು ಎಚ್ಚರಿಸಬಹುದು. ಅಥವಾ ಕಾರ್ಯ ಘಟಿಸಿದಾಗಲೇ ಎಚ್ಚರಿಸಬಹುದು. ತನ್ನನ್ನು ತಾನೇ ತಿದ್ದಿಕೊಳ್ಳುವುದಕ್ಕೆ ಇದು ಯುಕ್ತಸಮಯ. ಕುಂಬಾರ ಆವೆಮಣ್ಣನ್ನು ಹಿತವಾಗಿ ಕಲಸಿ ತಿಗರಿಯಲ್ಲಿಟ್ಟು ತಿರುಗಿಸುತ್ತಾ ವಿವಿಧ ನಮೂನೆಯ ಪಾತ್ರಗಳನ್ನು ಸಿದ್ಧಗೊಳಿಸುತ್ತಾನೆ. ಪಾತ್ರೆಗಳು ಅರೆಬರೆ ಒಣಗಿ ಇನ್ನೂ ಹಸಿಹಸಿ ಇರುವಾಗಲೇ ಅವುಗಳನ್ನು ತಟ್ಟಿ ಕುಟ್ಟಿ ಒಂದು ಪರಿಪೂರ್ಣ ಆಕಾರಕ್ಕೆ ತರುತ್ತಾನೆ. ಒಂದು ವೇಳೆ ತಿಗರಿಯಿಂದ ತೆಗೆದು ಬಿಸಿಲಿನಲ್ಲಿರಿಸಿ ಒಣಗಲಿ ಎಂದು ತನ್ನ ಕರ್ತವ್ಯವನ್ನು ಮರೆತುಬಿಟ್ಟರೆ ತಯಾರಿಸಿದ ಪಾತ್ರೆಗಳು ಅಲ್ಲಿಯೇ ಒಣಗಿಹೋಗುತ್ತವೆ. ಆಗ ಅವುಗಳಿಗೆ ಸರಿಯಾದ ರೂಪವನ್ನೋ ಆಕಾರವನ್ನೋ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಪಾತ್ರೆಗಳೂ ವ್ಯರ್ಥ, ಶ್ರಮವೂ ವ್ಯರ್ಥ. ಹಾಗೆಯೇ ಮನುಷ್ಯ ತಾನು ತಪ್ಪುಮಾಡಿದಾಗಲೇ ಅದನ್ನು ಅರಿತುಕೊಂಡು ತನ್ನನ್ನು ತಾನು ತಿದ್ದಿಕೊಂಡರೆ ಮಾತ್ರ ತಿದ್ದಿಕೊಳ್ಳುವ ಕ್ರಿಯೆ ನಿರಂತರ ಬೆಳೆದುಕೊಂಡುಬರುತ್ತದೆ. ಆಗ ಆತನೊಬ್ಬ ‘ಮನುಷ್ಯ’ನೆನಿಸಿಕೊಳ್ಳಬಹುದು. ಹೀಗೆ ತನ್ನನ್ನು ತಾನೇ ತಿದ್ದಿಕೊಳ್ಳುವುದಕ್ಕೆ ಯಾವಾಗ ಪ್ರಯತ್ನಿಸತೊಡಗುತ್ತಾನೋ ಅಂದಿನಿಂದಲೇ ಆತನಿಗೆ ಬೇರೆಬೇರೆ ಅರ್ಹತೆಗಳು ಪ್ರಾಪ್ತವಾಗುತ್ತವೆ.
‘ಅರ್ಹತೆ’ ಎಂಬುದು ಮನುಷ್ಯನ ಮೂಲಭೂತ ವಿಚಾರಗಳಲ್ಲಿ ಒಂದು. ಲೋಕದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಪ್ರತಿಯೊಂದು ವಿಚಾರಗಳಲ್ಲಿಯೂ ಅರ್ಹತೆಗಳು ಬೇಕಾಗುತ್ತವೆ. ಇವು ಮನುಷ್ಯನನ್ನು ಬೆಳೆಸುತ್ತವೆ. ಸಾಧನೆಯ ಹಾದಿಯಲ್ಲಿ ಮುನ್ನಡೆಸುತ್ತವೆ. ಅರ್ಹತೆಗಳು ಇಲ್ಲದಿದ್ದರೆ ಮನುಷ್ಯ ಏನನ್ನೂ ಸಾಧಿಸಲಾರ. ಒಂದು ವೇಳೆ ಸಾಧಿಸಿದ್ದೇನೆ ಎಂದು ಬಿಂಬಿಸಿಕೊಂಡರೂ ಒಂದಲ್ಲ ಒಂದು ಬಳಿದುಕೊಂಡ ಬಣ್ಣ ಮಾಸಿಹೋಗಿ, ಅಸಲಿಬಣ್ಣ ಲೋಕಕ್ಕೆ ಜಾಹೀರಾಗುವಾಗ ಅದಕ್ಕೆ ಯಾವುದೇ ಬೆಲೆಯೂ ಇರುವುದಿಲ್ಲ. ಅದಕ್ಕಾಗಿಯೇ ನಮ್ಮ ಪೂರ್ವಸೂರಿಗಳು ‘ಸತ್ಯಂ ವದ ಧರ್ಮಂ ಚರ’ ಎಂದರು. ಸತ್ಯವನ್ನಾಡುವುದರಿಂದ, ಧರ್ಮಮಾರ್ಗದಲ್ಲಿ ನಡೆಯುವುದರಿಂದ ಮನುಷ್ಯನಿಗೆ ಬೇರೆಬೇರೆ ಅರ್ಹತೆಗಳು ಪ್ರಾಪ್ತವಾಗುತ್ತವೆ. ಈ ಅರ್ಹತೆಗಳಿಲ್ಲದಿದ್ದರೆ ಏನನ್ನೂ ಮಾಡಲಾಗದು. ಮಾಡಬಾರದು. ಹಾಗೆ ಮಾಡಿದ್ದಾದರೆ ಯಾವ ಬೆಲೆಯೂ ದೊರಕದು.
ಪ್ರಾಚೀನಕಾಲದಲ್ಲಿ ದಾರ್ಶನಿಕರು, ಶರಣರು, ದಾಸರು, ತತ್ತ್ವಪದಕಾರರು ತಮ್ಮನ್ನು ತಾವು ತಿದ್ದಿಕೊಳ್ಳುತ್ತ ಇತರರನ್ನು ತಿದ್ದುವ ಪ್ರಯತ್ನವನ್ನು ಮಾಡಿದರು. ಇದರಿಂದಾಗಿಯೇ ಶರಣರಲ್ಲಿ, ದಾಸರಲ್ಲಿ ಆತ್ಮವಿಮರ್ಶೆಯ ಪ್ರಕ್ರಿಯೆ ನಿರಂತರ ಕಂಡುಬರುತ್ತದೆ. ಆದರೆ ಇಂದು ತಮ್ಮನ್ನು ತಾವು ತಿದ್ದಿಕೊಳ್ಳದೆ ಕೇವಲ ಇತರರನ್ನು ತಿದ್ದುವವರ, ತಿದ್ದಲು ಪ್ರಯತ್ನಿಸುವವರ ಸಂಖ್ಯೆ ಬೆಳೆಯುತ್ತಿದೆ. ಮನುಷ್ಯ ತನ್ನ ಮೈಮನಸ್ಸುಗಳಲ್ಲಿ ಒಂದಷ್ಟು ಕೊಳಕು (ಅಮಾನವೀಯತೆ, ದುರಹಂಕಾರ, ದುರ್ಬುದ್ಧಿ, ಕಾಮುಕತನ, ಸ್ವೇಚ್ಛಾಪ್ರವೃತ್ತಿ, ಅಪಕಾರ, ಮೋಸ, ವಂಚನೆ, ಕುಹಕತೆ ಇತ್ಯಾದಿ) ಭಾವನೆಗಳನ್ನು ತುಂಬಿಕೊಂಡು ಪರರನ್ನು ತಿದ್ದಲು ಹೊರಟರೆ ಆತ ಜ್ಞಾನಿಯೋ, ಸಭ್ಯನೋ, ಪ್ರಾಮಾಣಿಕನೋ ಎನಿಸಿಕೊಳ್ಳಲಾರ. ಆತನೇನೋ ತನ್ನ ಬಗ್ಗೆ, ತಾನು ಮಾಡುತ್ತಿರುವ ಕಾರ್ಯದ ಬಗ್ಗೆ ಹೆಮ್ಮೆಪಟ್ಟುಕೊಳ್ಳಬಹುದು. ಆದರೆ ಅದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಂತೆ. ಅದರಲ್ಲಿ ಶ್ರೇಯುಸ್ಸೂ ಇರುವುದಿಲ್ಲ, ಯಶಸ್ಸೂ ಕೂಡಾ.
ಇಂದಿನ ಆಧುನಿಕಯುಗದಲ್ಲಿ ಇತರರನ್ನು ತಿದ್ದುವ ಪ್ರವೃತ್ತಿ ಮನುಷ್ಯನಲ್ಲಿ ವಿಪರೀತವಾಗಿ ಬೆಳೆಯುತ್ತಿದೆ. ಇಂದಿನ ಧಾವಂತದ ಬದುಕು ಮನುಷ್ಯನಿಗೆ ನೆಮ್ಮದಿಯನ್ನು ನೀಡುತ್ತಿಲ್ಲ. ಇನ್ನೊಂದು ಕಡೆ ಆಧುನಿಕಶಿಕ್ಷಣ ನೈತಿಕತೆಯನ್ನು ಕಳೆದುಕೊಂಡು ಮನುಷ್ಯನ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದೆ. ಯಾವುದೂ ತಳಸ್ಪರ್ಶಿಜ್ಞಾನವಲ್ಲ. ಎಲ್ಲವೂ ‘ಹೋದ ಪುಟ್ಟ, ಬಂದ ಪುಟ್ಟ’ ಎಂಬ ರೀತಿಯ ವರ್ತನೆ ಹಾಗೂ ಬದುಕು. ಇದರಿಂದಾಗಿ ಮನುಷ್ಯ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಕುಗ್ಗುತ್ತಿದ್ದಾನೆ. ಮನುಷ್ಯನ ಈ ಲೋಪವನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಕೆಲವು ಅತಿಬುದ್ಧಿವಂತರು ತಮ್ಮ ಪ್ರತಿಷ್ಠೆಗಾಗಿ, ಹಣಗಳಿಸುವುದಕ್ಕಾಗಿ, ತಮ್ಮನ್ನು ಪರಮಜ್ಞಾನಿಗಳೆಂದು ತೋರಿಸಿಕೊಳ್ಳುವುದಕ್ಕಾಗಿ, ಮಹಾ ಸಂಭಾವಿತರಂತೆ ನಾಟಕವಾಡುತ್ತ ಪರರನ್ನು ತಿದ್ದುವ, ಸಾಂತ್ವನಹೇಳುವ, ಮಾರ್ಗದರ್ಶನಮಾಡುವ ಕೆಲಸವನ್ನು ನಿರ್ವಹಿಸುತ್ತಿರುವುದು ಕಂಡುಬರುತ್ತಿದ್ದಾರೆ. ಮೂಲಭೂತವಾಗಿ ತನಗೆ ಅರ್ಹತೆ ಇಲ್ಲದಿದ್ದರೂ ಇತರರ ತಪ್ಪನ್ನು ತಿದ್ದುವ, ಅನ್ಯರ ನೋವಿಗೆ ಸಾಂತ್ವನ ಹೇಳುವ, ಇತರರ ಕಣ್ಣೀರನ್ನು ಒರೆಸುವ ಡೊಂಕುಮನುಷ್ಯರು ಈ ಸಮಾಜದಲ್ಲೆಲ್ಲ ತುಂಬಿಕೊಂಡಿದ್ದಾರೆ. ಎಲ್ಲಿಯವರೆಗೆ ಸಾಂತ್ವನ ಹೇಳಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುವುದಿಲ್ಲವೋ ಅಲ್ಲಿಯವರೆಗೆ ಸಾಂತ್ವನಹೇಳುವವರ ಸಂಖ್ಯೆಯೂ ಕಡಿಮೆಯಾಗದು.
ಬಸವಣ್ಣನವರ ಪ್ರಕಾರ, ನಾವು ಇತರರ ಲೋಪದೋಷಗಳನ್ನು ತಿದ್ದಬೇಕಾದರೆ, ಮೊದಲು ನಮ್ಮ ನಮ್ಮ ದೇಹವನ್ನೂ ಮನಸ್ಸನ್ನೂ ತಿದ್ದಿಕೊಳ್ಳಬೇಕು. ಹಾಗೆ ಮಾಡದೆ ಅನ್ಯರನ್ನು ತಿದ್ದಹೊರಟರೆ ಅದು ಮೂರ್ಖತನ. ನಮ್ಮ ದೇಹವೇ ಅಶುದ್ಧವಾಗಿರುವಾಗ ಅನ್ಯರ ದೇಹದ ಬಗ್ಗೆ ಆಡುವುದರಲ್ಲಿ ಯಾವ ಅರ್ಥವಿದೆ? ನಮ್ಮ ಮನಸ್ಸೇ ಕೊಳಕಿನ ಆಗರವಾಗಿರುವಾಗ ಇತರರ ಮನಸ್ಸನ್ನು ತಿದ್ದುವುದರಲ್ಲಿ ಯಾವ ಪುರುಷಾರ್ಥವಿದೆ? ಬಸವಣ್ಣನವರ ಮಾತುಗಳನ್ನು ಪರಿಶೀಲಿಸಿದರೆ ಹನ್ನೆರಡನೆಯ ಶತಮಾನದಲ್ಲಿಯೇ ಅನ್ಯರನ್ನು ತಿದ್ದುವ, ಸಾಂತ್ವನಹೇಳುವ ಕಾರ್ಯದಲ್ಲಿ ತೊಡಗಿಕೊಂಡಿರುವವರ ಸಂಖ್ಯೆ ಬೆಳೆಯುತ್ತಿತ್ತೆಂದು ತೋರುತ್ತದೆ. ಇಂತಹ ಡಾಂಬಿಕರಿಂದ, ಅವರ ವರ್ತನೆಗಳಿಂದ ಸಮಾಜದಲ್ಲಿ ರಾಡಿ ಎದ್ದಿತ್ತೆಂದು ತೋರುತ್ತದೆ. ಅದಕ್ಕಾಗಿಯೇ ಬಸವಣ್ಣನವರು ಇಂತಹವರ ವರ್ತನೆಗಳನ್ನು ಖಂಡಿಸಿದ್ದಾರೆ. ಕಳ್ಳತನ, ಕೊಲೆ, ಸುಲಿಗೆ, ಮೋಸ, ವಂಚನೆ, ಅತ್ಯಾಚಾರ, ಅನಾಚಾರಗಳಂತೆಯೇ ಇದೂ ಒಂದು ಸಾಮಾಜಿಕ ಪಿಡುಗಾಗಿದ್ದು ಸಮಾಜದ ಅಧೋಗತಿಗೆ ಕಾರಣವಾಗುತ್ತಿತ್ತೆಂದು ತೋರುತ್ತದೆ. ಆದುದರಿಂದಲೇ ಬಸವಣ್ಣನವರು ಈ ಲೋಪವನ್ನು ಗಂಭೀರವಾಗಿಯೇ ಪರಿಗಣಿಸಿದ್ದಾರೆ.
ಇಂದಿನ ಆಧುನಿಕಯುಗವಂತೂ ಅನ್ಯರನ್ನು ತಿದ್ದುವ ಬೂಟಾಟಿಕೆಯವರಿಂದಲೇ ತುಂಬಿಕೊಂಡಿದೆ. ಅವರ ಪ್ರಕಾರ ತಾವು ಮಾತ್ರ ಪರಿಪೂರ್ಣರು, ಉಳಿದವರು ಅಪರಿಪೂರ್ಣರು. ಪರರಿಗೆ ಉಪದೇಶಮಾಡುವುದು, ಸಲಹೆ-ಸೂಚನೆಗಳನ್ನು ನೀಡುವುದು, ಇತರರ ಮನೆಯ ಕಷ್ಟ-ನಷ್ಟಗಳನ್ನು ಪರಿಹರಿಸಲು ಪ್ರಯತ್ನಿಸುವುದೇ ದೊಡ್ಡಸ್ತಿಕೆ ಎಂದು ಭಾವಿಸುವುದು ಡಂಬಾಚಾರವೇ ವಿನಾ ಬೇರೇನಲ್ಲ. ಮನುಷ್ಯನ ನಡೆ-ನುಡಿಗಳಿಗೆ ಸಾಮರಸ್ಯವಿರಬೇಕಾದುದು ಅತ್ಯಂತ ಅಗತ್ಯ. ಲೋಕದಲ್ಲಿ ಎಷ್ಟೋ ಮಂದಿ ಆಡುವವರೇ ವಿನಾ ಆಡಿದ್ದನ್ನು ಕೃತಿಯಲ್ಲಿ ಮಾಡಿತೋರಿಸುವವರಿಲ್ಲ. ಏಕೆಂದರೆ ಆಡುವುದು ಸುಲಭ, ಮಾಡಿತೋರಿಸುವುದು ಕಷ್ಟ. ಆದುದರಿಂದ ತತ್ತ್ವಗಳ ಉಪದೇಶವೇ ವಿನಾ ಅವುಗಳ ಅನುಸರಣೆಯಲ್ಲ. ಇವರ ತತ್ತ್ವಗಳು ಆಧಾರರಹಿತವಾದವುಗಳೇ ವಿನಾ ಪಾರಂಪರಿಕವಾಗಿ ಅನುಭವದ ಮೂಸೆಯಲ್ಲಿ ಪುಟಗೊಂಡು ಬಂದವುಗಳಲ್ಲ. ಇಂತಹ ಉಪದೇಶಕ್ಕಾಗಿ ಅವರು ಪಡುವ ಶ್ರಮ, ಮಾತಿನ ವೈಖರಿ ನಿಜಕ್ಕೂ ಆಶ್ಚರ್ಯಕರವಾದುದು. ಒಬ್ಬೊಬ್ಬರದು ಒಂದೊಂದು ರೀತಿ. ಇದು ಪರೋಪಕಾರವೂ ಅಲ್ಲ, ಪರಹಿತವೂ ಅಲ್ಲ.
ಇಂದು ಲೋಕದ ಡೊಂಕನ್ನು ತಿದ್ದುವುದೆಂದರೆ ದುಡ್ಡುಮಾಡುವ ಒಂದು ದಂಧೆ. ಇದು ನೂರಾರು ರೀತಿಗಳಿಂದ ನಡೆಯುತ್ತಿರುವುದನ್ನು ಗಮನಿಸಿದರೆ ಇದೊಂದು ಮಾಫಿಯಾವಾಗಿ ಬೆಳೆಯುತ್ತಿದೆ ಎಂದೆನಿಸುತ್ತಿದೆ. ಸದಾ ವ್ಯಕ್ತಿತ್ವವಿಕಸನ ಶಿಬಿರಗಳನ್ನು ನಡೆಸಿ ಇತರರಿಗೆ ಮಾರ್ಗದರ್ಶನ ಮಾಡುತ್ತಾ ಇತರರನ್ನು ತಿದ್ದುವ, ಅವರ ವ್ಯಕ್ತಿತ್ವವನ್ನು ವಿಕಾಸಗೊಳಿಸುವುದಕ್ಕೆ ಪ್ರಯತ್ನಿಸುವ ಸ್ವಯಂಘೋಷಿತ ಅಮೋಘ ವ್ಯಕ್ತಿತ್ವವುಳ್ಳ ಬುದ್ಧಿ(ಸುದ್ದಿ/ಲದ್ದಿ)ಜೀವಿಗಳು; ತಮ್ಮನ್ನು ಭಾಷಣಕ್ಕೆ ಕರೆಯಬೇಕೆಂದು ಇತರರನ್ನು ಪೀಡಿಸುತ್ತಾ, ಗಂಟೆಗಟ್ಟಲೆ ಭಾಷಣಬಿಗಿಯುವ ಭಾಷಣಾಸುರರು; ಆಗಾಗ ಶಿಬಿರಗಳನ್ನು ನಡೆಸುತ್ತಾ, ಇತರರ ಮನಸ್ಸು, ಬುದ್ಧಿ ಮೊದಲಾದ ವಿಷಯಗಳಲ್ಲಿ ಯುವಜನಾಂಗವನ್ನು ಶಕ್ತಿಶಾಲಿಯಾಗಿ ರೂಪಿಸುತ್ತೇವೆ ಎಂದು ಮೋಡಿಮಾಡಿ ಸದಾ ಟೋಪಿಹಾಕುತ್ತಾ ದುಡ್ಡುಮಾಡುವ ಧನದಾಹಿಗಳು; ಒಂದೆಡೆ ಧಾರ್ಮಿಕವೇಷವನ್ನು (ನಾಮಧಾರಣೆ, ಮುದ್ರಾಧಾರಣೆ, ಇತ್ಯಾದಿ) ತಾಳಿಕೊಂಡು ಹತ್ತು ಹಲವು ವ್ರತಗಳನ್ನು ಮಾಡುತ್ತ, ಸಾಮಾಜಿಕಮೌಲ್ಯಗಳ ಬಗ್ಗೆ ಒಂದಷ್ಟು ಸುಭಾಶಿತ, ಶ್ಲೋಕಗಳನ್ನು ಪುಂಖಾನುಪುಂಖವಾಗಿ ಉದ್ಧರಿಸುತ್ತ, ಗಂಟೆಗಟ್ಟಲೆ ಪ್ರವಚನನೀಡಿ ಜನಸಮುದಾಯವನ್ನು ರಂಜಿಸುತ್ತ, ಇನ್ನೊಂದೆಡೆ ತನಗಾಗದವರನ್ನು ತೆರೆಯಮರೆಯಲ್ಲಿದ್ದುಕೊಂಡು ಮಟ್ಟಹಾಕುತ್ತ ಮೆರೆಯುವ ಎಡೆಬಿಡಂಗಿಗಳೇ ಇಂದು ಸಮಾಜದಲ್ಲಿ ತುಂಬಿಕೊಂಡಿದ್ದಾರೆ. ಈ ಘಟಾನುಘಟಿಗಳೆಲ್ಲ ಎಷ್ಟೋ ರೀತಿಗಳಿಂದ, ಎಷ್ಟೋ ಸಮಯದಿಂದ ದುಡ್ಡಿಗಾಗಿ ಸೇವೆ(?!) ಮಾಡಿಕೊಂಡಿದ್ದರೂ ಇನ್ನೂ ಲೋಕದ ಜನರ ಡೊಂಕನ್ನು ತಿದ್ದುವಲ್ಲಿ ಸಮರ್ಥರಾಗಿಲ್ಲ, ಇಂತಹವರಿಂದ ಮಾರ್ಗದರ್ಶನ ಪಡೆದುಕೊಂಡವರೂ ತಮ್ಮ ಡೊಂಕನ್ನು ತಿದ್ದಿಕೊಳ್ಳುವಲ್ಲಿಯೂ ಸಮರ್ಥರಾಗಿಲ್ಲ. ನೂರಾರು ವ್ಯಕ್ತಿತ್ವವಿಕಸನ ಶಿಬಿರಗಳನ್ನೇರ್ಪಡಿಸಿ ಸಾವಿರಾರು ಜನರಿಗೆ ಮಾರ್ಗದರ್ಶನ ಮಾಡಿದರೂ ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುವುದಕ್ಕೆ ಸಾಧ್ಯವಾಗಿಲ್ಲ. ಮೊದಲು ತಮ್ಮ ಡೊಂಕನ್ನು ತಿದ್ದಿಕೊಳ್ಳದೆ, ತಮ್ಮ ನ್ಯೂನತೆಗಳಿಂದ ಮುಕ್ತರಾಗದೆ, ತಾವು ಮೊದಲು ಮನುಷ್ಯತ್ವವನ್ನು ರೂಢಿಸಿಕೊಳ್ಳದೆ, ಮಾತುಗಳಲ್ಲಿ ಅಂತಃಸತ್ವವನ್ನು ಬೆಳೆಸಿಕೊಳ್ಳದೆ ಇತರರ ಡೊಂಕನ್ನು ತಿದ್ದಹೊರಟರೆ ಅದು ಸಮಾಜಘಾತುಕತನವಲ್ಲದೆ ಬೇರೇನಲ್ಲ.
ಪರೋಪಕಾರ ಮಾಡುವುದೇ ದೊಡ್ಡಸ್ತಿಕೆ, ಸಮಾಜಸೇವೆ ಎಂಬ ಡಂಬುಭಾವನೆ ಇಂದು ಬಹುತೇಕರಲ್ಲಿ ರಕ್ತಗತವಾಗಿದೆ. ಈ ಭಾವನೆ ಯಾವುದೇ ಸಾಂಕ್ರಾಮಿಕ ಮಾರಣಾಂತಿಕ ರೋಗಕ್ಕಿಂತ ಕಡಿಮೆಯಿಲ್ಲ. ಸಾಂಕ್ರಾಮಿಕ, ಮಾರಣಾಂತಿಕ ರೋಗವೊಂದು ಹೇಗೆ ಜನರನ್ನು ತನ್ನ ಕಬಂಧಬಾಹುಗಳಿಂದ ಬಿಗಿದು ನಾಶಮಾಡಬಹುದೋ ಹಾಗೆಯೇ ಪರರ ಡೊಂಕನ್ನು ತಿದ್ದುವ, ಸದಾ ತಿದ್ದಲು ಹಂಬಲಿಸುವ ಸ್ವಯಂಘೋಷಿತ ಸಮಾಜಸುಧಾರಕರು, ಸಮಾಜವನ್ನೇ ತಿದ್ದಹೊರಟ ಭಂಡರು ಸಮಾಜವನ್ನೇ ನಾಶಮಾಡುತ್ತಿದ್ದಾರೆ. ಮನುಷ್ಯ ತನ್ನನ್ನು ತಾನು ತಿದ್ದಿಕೊಳ್ಳದೆ ಇತರರನ್ನು ತಿದ್ದುವ ಅರ್ಹತೆಯನ್ನು ಪಡೆದುಕೊಳ್ಳುವುದಿಲ್ಲ. ಈ ಅರ್ಹತೆಯನ್ನು, ಅಧಿಕಾರವನ್ನು ಪಡೆದುಕೊಳ್ಳುವುದು ಅತ್ಯಂತ ಪ್ರಯಾಸದ ಕೆಲಸ. ಆದುದರಿಂದ ‘ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವಾ’ ಎಂಬ ಬಸವಣ್ಣನವರ ಮಾತುಗಳನ್ನು ಪ್ರತಿಯೊಬ್ಬರೂ ಸದಾ ನೆನಪಿಟ್ಟುಕೊಂಡು ಅನುಸರಿಸುವುದು ಅತ್ಯಂತ ಅಗತ್ಯ.
***
ಉತ್ತಮವಾಗಿದೆ . ನಿಮ್ಮ ಬರಹಗಳಿಗೆ ಶುಭವಾಗಲಿ
ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆ ಉಳಿದವರಿಗೂ ಪ್ರೇರಣೆಯಾಗಲಿ.🙏
ಅರ್ಥ ಪೂರ್ಣ ಸಾಲುಗಳು