ಸಾಹಿತ್ಯಾನುಸಂಧಾನ

heading1

ಭಾಷೆಯ ಹಿಂದು-ಮುಂದು

                ಜಗತ್ತಿನಲ್ಲಿ’ ಮಾತು’ ಅಥವಾ  ’ಭಾಷೆ’ಯ ಬಗ್ಗೆ ಚಿಂತನೆ ನಡೆಸಿದ  ದೇಶಗಳಲ್ಲಿ ಭಾರತ ಮೊದಲನೆಯದು. ಮಾತೊಂದು ಸರಿಯಿದ್ದರೆ ಉಳಿದೆಲ್ಲವೂ ಸಮರ್ಪಕ. ಮಾತು ಸಂವಹನಕ್ಕಾಗಿ ಇರುವ ಮಾಧ್ಯಮ ಮಾತ್ರವಲ್ಲ, ಅದು ಮನುಷ್ಯನಿಗೆ ಜ್ಞಾನ, ಬುದ್ಧಿಗಳನ್ನು ನೀಡಿ, ಸಂಸ್ಕೃತಿಯನ್ನು ಪರಿಚಯಿಸಿ ಪ್ರಾಜ್ಞನನ್ನಾಗಿ ಮಾಡಬಲ್ಲ; ಎಲ್ಲಕ್ಕಿಂತಲೂ ಮಿಗಿಲಾಗಿ ‘ಮನುಷ್ಯ’ನನ್ನಾಗಿ ಮಾಡಬಲ್ಲ ಸಂಜೀವಿನಿ. ನಮ್ಮ ಪ್ರಾಚೀನರೆಲ್ಲರೂ ಭಾಷೆಯ ಅಥವಾ ಮಾತಿನ ಮಹತ್ವವನ್ನು ಮನಗಂಡಿದ್ದರು. ಭಾಷೆಯನ್ನು ಆಸ್ತಿ ಎಂದು ಭಾವಿಸಿಕೊಂಡು  ಬೆಳೆಸಿ, ಉಳಿಸಿದರು. ಜ್ಯೋತಿ ಎಂದು ಭಾವಿಸಿಕೊಂಡು ಆರದಂತೆ ಕಾಪಾಡಿಕೊಂಡುಬಂದರು.  ಆದರೆ ಇಂದಿನ  ಬಹುಮಂದಿಗೆ   ಭಾಷೆ ಎಂಬುದು ಆಸ್ತಿಯೂ ಅಲ್ಲ,  ಜ್ಯೋತಿಯೂ ಅಲ್ಲ. ಅದೊಂದು ಕೇವಲ ಸಂವಹನ ಮಾಧ್ಯಮ ಮಾತ್ರ.

                ಆಧುನಿಕಕಾಲದಲ್ಲಿ ಮಾತಿಗೆ ಮಹತ್ವ ಕಡಿಮೆಯಾಗಿದೆ. ಆಧುನಿಕರನೇಕರ ಪ್ರಕಾರ ಮಾತು ಕೇವಲ ಸಂವಹನಕ್ಕೆ ಮಾತ್ರ. ನಮ್ಮ ವಿಚಾರಗಳು ಇನ್ನೊಬ್ಬರಿಗೆ ತಿಳಿದರೆ ಸಾಕು. ಭಾಷೆಯ ಅಥವಾ ಮಾತಿನ ಅಚ್ಚುಕಟ್ಟುತನಕ್ಕೆ, ಮಾಧುರ್ಯಕ್ಕೆ, ಅದರ ಸೌಷ್ಠವಕ್ಕೆ, ಅದರ ವ್ಯವಸ್ಥೆಗೆ ಮಹತ್ವ ಕೊಡಬೇಕಾಗಿಯೇ ಇಲ್ಲ. ಈ ಮನೋಭಾವ ಬಹುತೇಕವಾಗಿ ಭಾರತೀಯ ಭಾಷೆಗಳಿಗೆ ಸೀಮಿತವಾಗಿದೆಯೇ ಹೊರತು ಪರದೇಶದ ಭಾಷೆಗಳಿಗಲ್ಲ. ಇದು ಇನ್ನೊಂದು ರೀತಿಯ ದುರಂತ. ನಮ್ಮ ಭಾಷೆಗಳಲ್ಲಿ ನಮ್ಮ ಪರಂಪರೆ, ಸಂಸ್ಕೃತಿಗಳೆಲ್ಲವೂ ಅಡಗಿವೆ ಎಂಬುದನ್ನು ನಾವಿಂದು ಮರೆಯುತ್ತಿದ್ದೇವೆ. ಬದುಕಿನಲ್ಲಿ ಪರಂಪರೆ, ಸಂಸ್ಕೃತಿಗಳ ಅಗತ್ಯವಿಲ್ಲ ಎಂದು ಭಾವಿಸುತ್ತಿರುವವರಿಗೆ ಅವುಗಳನ್ನು ಮರೆಯುವುದರಲ್ಲಿ ಯಾವ ಹೆಚ್ಚುಗಾರಿಕೆಯೇ ಇಲ್ಲವೆಂಬುದೂ ಸತ್ಯ. ಕಾಲ ಸರಿಯುತ್ತ ಹೋದಂತೆ, ನಮ್ಮ ನಾಗರಿಕತೆ ಬೆಳೆದು ಗಟ್ಟಿಗೊಳ್ಳಬೇಕೇ ಹೊರತು ಟೊಳ್ಳಾಗುತ್ತಾ ಹೋಗಬಾರದು. ಭಾರತೀಯ ಪರಂಪರೆಯಲ್ಲಿ ನಮ್ಮ ನಡೆಯೆಲ್ಲವೂ ಪರಿಪೂರ್ಣತೆಯ ಕಡೆಗೆ, ಪ್ರಭುತ್ವ(ಆರ್ಜಿಸುವಿಕೆ)ದ ಕಡೆಗೆ, ಸಾಧನೆಯ ಕಡೆಗೆ ಸಾಗಬೇಕೇ ವಿನಾ ವಿನಾಶದ ಕಡೆಗಲ್ಲ. ಮನುಷ್ಯನ ನಾಗರಿಕತೆಯ ಬೆಳವಣಿಗೆಗೆ, ಅದರ ಪರಿಪೂರ್ಣತೆಗೆ, ಅದರ ಪ್ರಭುತ್ವಕ್ಕೆ ಸಂಸ್ಕೃತಿ ಬೇಕೇಬೇಕು. ಸಂಸ್ಕೃತಿ ಬೇಕೆಂದರೆ ಭಾಷೆ ಅಥವಾ ಮಾತು ಬೇಕೇಬೇಕು. ಆದರೆ ಇಂದು ಬಹುಮಂದಿಗೆ ಇವೆಲ್ಲವೂ ಸವಕಲು ಸರಕು. ಅದನ್ನು ಕಸದಂತೆ ತಿಪ್ಪೆಗೆ ಎಸೆಯುತ್ತಿದ್ದೇವೆ. ಇಂದು ಎಲ್ಲೆಲ್ಲೂ ‘ಉಪಯೋಗಿಸು ಮತ್ತು ಎಸೆ’ ಎಂಬ ಮನೋಭಾವ ಬೆಳೆಯುತ್ತಿರುವಾಗ ಭಾಷೆ ಅಥವಾ ಮಾತು ಇದಕ್ಕೆ ಹೊರತಾಗುತ್ತದೆಯೇ?

                ‘ಉಪಯೋಗಿಸು ಮತ್ತು ಎಸೆ’(ಯೂಸ್ ಆಂಡ್ ತ್ರೋ) ಎಂಬ ಚಿಂತನೆ ‘ಲಾಭ ಇರುವಲ್ಲಿಯವರೆಗೆ ಉಪಯೋಗಿಸು ಅನಂತರ ಎಸೆದುಬಿಡು’ ಎಂಬರ್ಥವನ್ನು ಧ್ವನಿಸುವುದರ ಜೊತೆಗೆ ‘ಲಾಭವಿದ್ದರೆ ಉಪಯೋಗಿಸು, ಇಲ್ಲದಿದ್ದರೆ ಆಗಲೇ ಎಸೆದುಬಿಡು’ ಎಂಬರ್ಥವನ್ನೂ ಧ್ವನಿಸುತ್ತದೆ. ಇಂದು ಇಂಗ್ಲಿಷ್ ಭಾಷೆ ದುಡ್ದು ಸಂಪಾದನೆಗೆ ದಾರಿಮಾಡಿಕೊಡುತ್ತಿದೆ ಎಂಬ ಮನೋಭಾವ ನಮ್ಮಲ್ಲಿರುವುದರಿಂದ ಅದನ್ನು ‘ಉಪಯೋಗಿಸು, ಎಸೆಯಬೇಡ’ ಎಂಬರ್ಥವೂ ಧ್ವನಿತವಾಗುತ್ತದೆ. ‘ಕನ್ನಡ ಮೊದಲಾದ ಭಾರತೀಯ ಭಾಷೆಗಳು ದುಡ್ಡು ಮಾಡಿಕೊಡಲಾರವು, ಹಾಗಾಗಿ ಅವುಗಳನ್ನು ಉಪಯೋಗಿಸುವ ಅವಶ್ಯಕತೆಯೇ ಇಲ್ಲ. ಹಾಗೆಯೇ ಎಸೆದುಬಿಡು’ ಎಂಬಂತಹ ಚಿಂತನೆ, ಮನೋಭಾವಗಳು ಇಂದು ಬೆಳೆಯುತ್ತಿವೆ. ಕಾಲದ ಪ್ರವಾಹದಲ್ಲಿ ಯಾವುದು ಉಳಿಯುತ್ತದೆ? ಯಾವುದು ಅಳಿಯುತ್ತದೆ? ಎಂಬುದನ್ನು ಕಾದು ನೋಡಬೇಕಷ್ಟೇ.

***

Leave a Reply

Your email address will not be published. Required fields are marked *