ಸಾಹಿತ್ಯಾನುಸಂಧಾನ

heading1

ಭಕ್ತನಾದರೆ ಬಸವಣ್ಣನಂತಾಗಬೇಕು

ಭಕ್ತನಾದರೆ ಬಸವಣ್ಣನಂತಾಗಬೇಕು

ಜಂಗಮನಾದರೆ ಪ್ರಭುದೇವನಂತಾಗಬೇಕು

ಯೋಗಿಯಾದರೆ ಸಿದ್ಧರಾಮನಂತಾಗಬೇಕು

ಭೋಗಿಯಾದರೆ ಚೆನ್ನಬಸವಣ್ಣನಂತಾಗಬೇಕು

ಐಕ್ಯನಾದರೆ ನಮ್ಮ ಅಜಗಣ್ಣನಂತಾಗಬೇಕು

ಇಂತೀ ಐವರ ಕಾರುಣ್ಯ ಪ್ರಸಾದವ ಕೊಂಡು

ಸತ್ತಹಾಗಿರಬೇಕಲ್ಲದೆ ತತ್ತ್ವದ ಮಾತು ನಮಗೇಕಯ್ಯ

ದಾಸಪ್ರಿಯ ರಾಮನಾಥ

                                       -ಜೇಡರ ದಾಸಿಮಯ್ಯ

           ಜೇಡರ ದಾಸಿಮಯ್ಯ ಈ ವಚನದಲ್ಲಿ ಬಸವಣ್ಣಾದಿ ಶಿವಶರಣರ ವ್ಯಕ್ತಿತ್ವದ ಮೇಲ್ಮೆಯನ್ನು ಕೊಂಡಾಡಿದ್ದಾನೆ. ಲೋಕದಲ್ಲಿ ಒಬ್ಬೊಬ್ಬ ವ್ಯಕ್ತಿಗೆ ಕನಿಷ್ಠ ಒಂದೊಂದು ವಿಧದ ವ್ಯಕ್ತಿತ್ವವಾದರೂ ಇರುತ್ತದೆ. ಕೆಲವರದು ಇತರರಿಗೆ ಮಾದರಿಯೆನಿಸುತ್ತದೆ. ಹಾಗೆ ಮಾದರಿ ಎನಿಸುವಂತಹ ಪ್ರಮುಖ ಐದು ಮಂದಿ ಶಿವಶರಣರ ವ್ಯಕ್ತಿತ್ವದ ಮೇಲ್ಮೆಯನ್ನು ಅವುಗಳ ವೈಶಿಷ್ಟ್ಯಗಳೊಂದಿಗೆ ಈ ವಚನದಲ್ಲಿ ದಾಸಿಮಯ್ಯ ವಿವರಿಸಿದ್ದಾನೆ.

           ಮೊದಲನೆಯದು, ಭಕ್ತಿ ಎಂಬ ಮೌಲ್ಯ ಹಾಗೂ ಅದರಿಂದ ಒದಗುವ ’ಭಕ್ತ’ಎಂಬ ವಿಶೇಷ ವ್ಯಕ್ತಿತ್ವ. ಹನ್ನೆರಡನೆಯ ಶತಮಾನದಲ್ಲಿ ಭಕ್ತಿಗೆ ಪ್ರತಿರೂಪನಾದವನೆಂದರೆ ಬಸವಣ್ಣ. ಶಿವಶರಣರೆಲ್ಲರೂ ಶಿವನ ಭಕ್ತರೇ ಆದರೂ ಆ ಕಾಲದಲ್ಲಿ ಅಂಥ ವಿಶೇಷವಾದ ಸ್ಥಾನಮಾನ ಎಲ್ಲರಿಗೂ ಸಿಕ್ಕಿಲ್ಲ. ಸಿಗುವುದಕ್ಕೆ ಸಾಧ್ಯತೆಗಳೂ ಇರಲಿಲ್ಲ. ಆದರೆ ಬಸವಣ್ಣನ ಆತ್ಮವಿಮರ್ಶೆ, ಶಿವನಿಷ್ಠೆಗಳು ಆತನನ್ನು ಒಬ್ಬ ಶ್ರೇಷ್ಠಭಕ್ತ ಎನಿಸಿಕೊಳ್ಳುವಂತೆ ಮಾಡಿದವು. ಆ ಕಾಲದಲ್ಲಿ ಬಸವಣ್ಣನ ಭಕ್ತಿಸಾಧನೆಗಳನ್ನು ಕೇಳಿತಿಳಿದ ಭಕ್ತರು ಭರತಖಂಡದ ಬೇರೆಬೇರೆ ದೇಶಗಳಿಂದ ಕಲ್ಯಾಣಕ್ಕೆ ಬಂದು ಅನುಭವ ಮಂಟಪದಲ್ಲಿ ಪಾಲ್ಗೊಂಡರು.  ಮಿಕ್ಕವರಿಂದ ಅದು ಸಾಧ್ಯವಾಗಲಿಲ್ಲ. ಹಾಗಾಗಿಯೇ ದಾಸಿಮಯ್ಯನ ಪ್ರಕಾರ, ಭಕ್ತ ಎನಿಸಿಕೊಳ್ಳುವುದಾದರೆ ಬಸವಣ್ಣನಂತೆ ಭಕ್ತನೆನಿಸಿಕೊಳ್ಳಬೇಕು.

          ಎರಡನೆಯದು, ಸದಾಚಲನಶೀಲತೆ ಹಾಗೂ ಅದರಿಂದ ಒದಗುವ ’ಜಂಗಮ’ ಎಂಬ ವಿಶೇಷ ವ್ಯಕ್ತಿತ್ವ. ಹನ್ನೆರಡನೆಯ ಶತಮಾನದಲ್ಲಿ ’ಜಂಗಮ’ ಎಂಬ ವಿಶೇಷ ಸ್ಥಾನಮಾನ ಸಂದಿರುವುದು ಕೇವಲ ಅಲ್ಲಮಪ್ರಭುವಿಗೆ ಮಾತ್ರ.  ಶಿವಶರಣರೆಲ್ಲರೂ ಜಂಗಮರೇ ಆದರೂ ಮಿಕ್ಕವರಿಗೆ ಅಂತಹ ಸ್ಥಾನಮಾನ ಸಿಗಲಿಲ್ಲ.   ಏಕೆಂದರೆ, ಅಲ್ಲಮನಲ್ಲಿನ ನಿಷ್ಠೆ, ವಿರಕ್ತಿ,  ಸಂಚಾರಪ್ರವೃತ್ತಿ ಅನ್ಯರಲ್ಲಿ ಇರಲಿಲ್ಲ. ಸದಾ ಚಲನಶೀಲನಾಗಿದ್ದು, ತನ್ನನ್ನು ತಾನು ತಿದ್ದಿಕೊಳ್ಳುತ್ತ ಅನ್ಯರನ್ನು ತಿದ್ದುವ ಅಲ್ಲಮನ ವ್ಯಕ್ತಿತ್ವ ಮಿಕ್ಕವರಲ್ಲಿ ಸಾಧಿತವಾಗಲಿಲ್ಲ. ಹಾಗಾಗಿ ದಾಸಿಮಯ್ಯನ ಪ್ರಕಾರ, ’ಜಂಗಮ’ ಎನಿಸಿಕೊಳ್ಳುವುದಾದರೆ ಅಲ್ಲಮಪ್ರಭುವಿನಂತೆ ಜಂಗಮನೆನಿಸಿಕೊಳ್ಳಬೇಕು.

            ಮೂರನೆಯದು, ಚಿತ್ತವೃತ್ತಿ ನಿರೋಧತೆ ಹಾಗೂ ಅದರಿಂದ ಒದಗುವ  ’ಯೋಗಿ’ ಎಂಬ ವಿಶೇಷ ವ್ಯಕ್ತಿತ್ವ. ಹನ್ನೆರಡನೆಯ ಶತಮಾನದಲ್ಲಿ ’ಯೋಗಿ’ ಎಂಬ ವಿಶೇಷ ಸ್ಥಾನಮಾನ ಸಂದಿರುವುದು ಸಿದ್ಧರಾಮನಿಗೆ ಮಾತ್ರ. ಮಿಕ್ಕವರಿಗೆ ಅದು ಸಲ್ಲಲಿಲ್ಲ. ಮಿಕ್ಕವರು ಶಿವಶರಣರು ಎನಿಸಿಕೊಂಡರೂ ಸಿದ್ಧರಾಮನಂತೆ ಚಿತ್ತವೃತ್ತಿಯನ್ನು ನಿಗ್ರಹಿಸಿಕೊಳ್ಳುವುದು ಅನ್ಯರಿಂದ ಸಾಧ್ಯವಾಗಲಿಲ್ಲ.  ಚಿತ್ತವೃತ್ತಿಗಳನ್ನು ನಿರೋಧಿಸುವ ವಿಶೇಷಗುಣ ಆತನಲ್ಲಿದ್ದುದರಿಂದ ಅಂತಹ ವಿಶೇಷವ್ಯಕ್ತಿತ್ವದಿಂದ ಸಿದ್ಧರಾಮ ಯೋಗಿಯಾಗಿ ಪ್ರಸಿದ್ಧನಾದ.  ಹಾಗಾಗಿ ದಾಸಿಮಯ್ಯನ ಪ್ರಕಾರ ಯೋಗಿ ಎನಿಸಿಕೊಳ್ಳುವುದಾದರೆ ಸಿದ್ಧರಾಮನಂತೆ ಯೋಗಿಯೆನಿಸಿಕೊಳ್ಳಬೇಕು.

           ನಾಲ್ಕನೆಯದು ಭೋಗತ್ವ ಹಾಗೂ ಅದರಿಂದ ಒದಗುವ ’ಭೋಗಿ’ ಎಂಬ ವಿಶೇಷ ವ್ಯಕ್ತಿತ್ವ. ಹನ್ನೆರಡನೆಯ ಶತಮಾನದಲ್ಲಿಯೇ ಚೆನ್ನಬಸವಣ್ಣ ಬಹಳ ಸಣ್ಣಪ್ರಾಯದಲ್ಲಿಯೇ ಸ್ವಂತ ಸಾಧನೆ ಹಾಗೂ ಪರಿಶ್ರಮಗಳಿಂದ ಬಹಳ ಎತ್ತರಕ್ಕೇರಿದವನು. ’ಭೋಗಿ’ ಎಂಬ ಸ್ಥಾನಮಾನ ಸಂದಿರುವುದು ಚೆನ್ನಬಸವಣ್ಣನಿಗೆ ಮಾತ್ರ. ಆತ ತನಗಿಂತ ಹಿಂದಣ ಶಿವಶರಣರ ವಚನಗಳನ್ನು ಪರಿಷ್ಕರಿಸಿ ಷಟ್ಸ್ಥಲ ಸಂಪ್ರದಾಯಕ್ಕೆ ನಾಂದಿಹಾಡಿದವನು. ಅಂತಹ ವ್ಯಕ್ತಿತ್ವವನ್ನು ಸಾಧಿಸುವುದಕ್ಕೆ ಮಿಕ್ಕವರಿಂದ ಸಾಧ್ಯವಾಗಲಿಲ್ಲ. ಹಾಗಾಗಿ ದಾಸಿಮಯ್ಯನ ಪ್ರಕಾರ, ’ಭೋಗಿ’ ಎನಿಸಿಕೊಳ್ಳುವುದಾದರೆ ಚೆನ್ನಬಸವಣ್ಣನಂತೆ ಭೋಗಿ ಎನಿಸಿಕೊಳ್ಳಬೇಕು.

          ಐದನೆಯದು, ಏಕತ್ವ ಹಾಗೂ ಅದರಿಂದ ಸಾಧಿತವಾಗುವ ಐಕ್ಯವೆಂಬ ವಿಶೇಷ ವ್ಯಕ್ತಿತ್ವ. ಹನ್ನೆರಡನೆಯ ಶತಮಾನದ ಶಿವಶರಣ ಅಜಗಣ್ಣ ಇತರರಂತೆ ಲಿಂಗಪೂಜೆಯನ್ನು ಮಾಡದೆ ಲೋಕದಲ್ಲಿ ಅನಾಚಾರಿ ಎಂದು ಗುರುತಿಸಿಕೊಂಡವನು. ಸಹವರ್ತಿಗಳ ಕೈಗೆ ತನ್ನ ಇಷ್ಟಲಿಂಗ ಸಿಗಬಾರದೆಂದು ಬಾಯೊಳಗೆ ಹಾಕಿಕೊಂಡು, “ಓಂ ನಮಃ ಶಿವಾಯ” ಎಂದು ನುಂಗಿ ಶಿವನನ್ನೇ ತನ್ನೊಳಗೆ ಐಕ್ಯಗೊಳಿಸಿಕೊಂಡವನು. ಇಂತಹ ವಿಶೇಷ ಸಾಧನೆ ಅನ್ಯರಿಂದ ಸಾಧ್ಯವಾಗಲಿಲ್ಲ. ಹಾಗಾಗಿ ದಾಸಿಮಯ್ಯನ ಪ್ರಕಾರ ’ಐಕ್ಯ’ನೆನಿಸಿಕೊಳ್ಳುವುದಾದರೆ ಅಜಗಣ್ಣನಂತೆ  ಐಕ್ಯನೆನಿಸಿಕೊಳ್ಳಬೇಕು.

          ಲೋಕದಲ್ಲಿ ಭಕ್ತ, ಜಂಗಮ, ಯೋಗಿ, ಭೋಗಿ ಹಾಗೂ ಐಕ್ಯಗಳ ಪ್ರತೀಕರೆನಿಸಿಕೊಂಡಿರುವ ಹಾಗೂ ವಿಶೇಷ ಸಾಧನೆಗಳಿಂದ ವಿಶೇಷ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಲೋಕಕ್ಕೆ ಮಾದರಿಯಾಗಿರುವ ಈ ಐದು ಮಂದಿಯ ಕಾರುಣ್ಯವೆಂಬ ಪ್ರಸಾದವನ್ನು ಸ್ವೀಕರಿಸಿಬಾಳುವ ತನ್ನಂತಹ ಸಾಮಾನ್ಯರು ಬದುಕಿನಲ್ಲಿ ಅವರನ್ನು ಅನುಸರಿಸಬೇಕಲ್ಲದೆ ಅವರು ಪ್ರತಿಪಾದಿಸಿರುವ ತತ್ತ್ವವಿಚಾರಗಳನ್ನು ಕುರಿತು ಚರ್ಚಿಸಬಾರದು. ಅಂತಹ ಯೋಗ್ಯತೆಯನ್ನು ಆರ್ಜಿಸಿಕೊಳ್ಳುವವರೆಗೆ ಚರ್ಚೆಗೆ ತಾವು ಸಮರ್ಥರಲ್ಲ ಎಂದು ಜೇಡರದಾಸಿಮಯ್ಯ ಈ ವಚನದಲ್ಲಿ ಸ್ಪಷ್ಟಪಡಿಸುತ್ತಾನೆ. ಆತನ ಪ್ರಕಾರ ಪ್ರತಿಯೊಂದು ಸಾಧನೆಗೂ ನಿರ್ದಿಷ್ಟವಾದ ಅರ್ಹತೆ ಬೇಕಾಗುತ್ತದೆ. ಅದನ್ನು ಹೊಂದದೆ ತತ್ತ್ವಚಿಂತನೆಗೆ ಹಾಗೂ ಬೋಧನೆಗೆ ಅವಕಾಶವಿಲ್ಲ.

         ಮೇಲೆ ಉಲ್ಲೇಖಿಸಲಾದ ಎಲ್ಲಾ ವಚನಕಾರರೂ ದಾಸಿಮಯ್ಯನಿಗಿಂತ ವಯಸ್ಸಿನಲ್ಲಿ ಕಿರಿಯರು. ತಾನು ಅವರೆಲ್ಲರಿಗಿಂತ ಹಿರಿಯನಾದರೂ ಅವರ ಸಾಧನೆ ಹಾಗೂ ಆ ಮೂಲಕ ಗಳಿಸಿರುವ ವಿಶೇಷ ವ್ಯಕ್ತಿತ್ವವನ್ನು ತನ್ನಿಂದ ಗಳಿಸುವುದಕ್ಕೆ ಸಾಧ್ಯವಾಗಿಲ್ಲ ಎಂಬುದನ್ನು ಮನಸಾ ಒಪ್ಪಿಕೊಳ್ಳುವ ದಾಸಿಮಯ್ಯ ತನಗಿಂತ ಕಿರಿಯ ಸಾಧಕರನ್ನು ವಿನಮ್ರನಾಗಿ ಮನಪೂರ್ವಕ ಗೌರವಿಸುತ್ತಾನೆ. ಇದು ಜೇಡರ ದಾಸಿಮಯ್ಯನ ಆತ್ಮವಿಮರ್ಶೆ.

          ಇಂದು ಇಪ್ಪತ್ತೊಂದನೆಯ ಶತಮಾನದಲ್ಲಿ ವಿಶೇಷ ಸಾಧನೆಗೆ ಯಾವುದೇ  ಅರ್ಹತೆಯೂ ವ್ಯಕ್ತಿತ್ವವೂ ಬೇಕಿಲ್ಲ. ಮಾಡಿದ್ದೆಲ್ಲವೂ ಸಾಧನೆಯಾಗುತ್ತದೆ. ಸಾಧಿಸಿದ್ದೆಲ್ಲವೂ ವ್ಯಕ್ತಿತ್ವವೆನಿಸಿಕೊಳ್ಳುತ್ತದೆ. ತಮಗಿಂತ ಹೆಚ್ಚು ಸಾಧಿಸಿದವರನ್ನು, ವಿಶೇಷ ವ್ಯಕ್ತಿತ್ವವುಳ್ಳವರನ್ನು ದಮನಿಸುವುದೇ ಇಂದಿನ ಬಹುಮಂದಿಯ ವ್ಯಕ್ತಿತ್ವ ಹಾಗೂ ಸಾಧನೆ ಎನಿಸಿಕೊಂಡಿದೆ.  ನಿಜವಾದ ಅರ್ಹತೆ ಹಾಗೂ ಆ ಮೂಲಕ ಸಾಧಿಸುವ ವಿಶೇಷ ವ್ಯಕ್ತಿತ್ವಕ್ಕೆ ಇಂದು ಲೋಕದಲ್ಲಿ ಯಾವುದೇ ಬೆಲೆ, ಮರ್ಯಾದೆ, ಸ್ಥಾನಮಾನ ಸಲ್ಲುತ್ತಿಲ್ಲ. ದಾಸಿಮಯ್ಯ ಅಂದು ವಿನೀತನಾಗಿ ಒಪ್ಪಿಕೊಂಡರೂ ಇಂದಿನ ಜನ ಹಾಗೆ ಒಪ್ಪಿಕೊಳ್ಳಲಾರರು. ಅನೈತಿಕತೆಯನ್ನು ಮೈಗೂಡಿಸಿಕೊಂಡು, ಅನ್ಯರ ನೆಮ್ಮದಿಯನ್ನು ಕೆಡಿಸಿ, ಇತರರನ್ನು ಸಾಧ್ಯವಾದಷ್ಟು ದೋಚುವ; ಅನ್ಯರನ್ನು ನಂಬಿಸುವುದಕ್ಕೆ ವಿವಿಧ ರೀತಿಯಲ್ಲಿ ನಾಟಕವಾಡುವ,  ಅನ್ಯರ ಅನ್ನವನ್ನು ಕಸಿಯುವ, ಕಾನೂನನ್ನು ತಮಗೆ ಬೇಕಾದಂತೆ ತಿರಿಚುವ,  ಸಾಂಘಿಕಬದುಕನ್ನು ಒಡೆಯಲು ಹಾತೊರೆಯುವ, ಸಮಾಜ ಹಾಗೂ ದೇಶವಿರೋಧಿ ಕೃತ್ಯಗಳಲ್ಲಿ ತಲ್ಲೀನರಾಗಿರುವ ಆಧುನಿಕ ಕಾಲದ ಡಾಂಬಿಕರನ್ನು ಹಾಗೂ ಅವರ ವಿಶೇಷ ವ್ಯಕ್ತಿತ್ವಗಳನ್ನು  ಮೇಲಿನ ದಾಸಿಮಯ್ಯನ ವಚನ ವಿಡಂಬಿಸುತ್ತಿದೆ ಎಂದೆನಿಸುತ್ತದೆ.

***

Leave a Reply

Your email address will not be published. Required fields are marked *