ಹಿಂದಣ ಹಳ್ಳ, ಮುಂದಣ ತೊಱೆ,
ಸಲ್ಲುವ ಪರಿಯೆಂತು ಹೇಳಾ!
ಹಿಂದಣ ಕೆಱೆ, ಮುಂದಣ ಬಲೆ
ಹದುಳವಿನ್ನೆಲ್ಲಿಯದು ಹೇಳಾ!
ನೀನಿಕ್ಕಿದ ಮಾಯೆ ಕೊಲುತಿಪ್ಪುದು
ಕಾಯಯ್ಯಾ ಕಾಯಯ್ಯಾ
ಚೆನ್ನಮಲ್ಲಿಕಾರ್ಜುನ
-ಅಕ್ಕಮಹಾದೇವಿ
ಅಕ್ಕ ಈ ವಚನದಲ್ಲಿ ಚೆನ್ನಮಲ್ಲಿಕಾರ್ಜುನನು ಇಕ್ಕಿದ ಮಾಯೆಯ ತೀವ್ರತೆಯನ್ನು ಎದುರಿಸಲಾರದೆ ಆತನಿಗೆ ಮೊರೆಯಿಟ್ಟಿದ್ದಾಳೆ. ಚೆನ್ನಮಲ್ಲಿಕಾರ್ಜುನ ಜಗದ ಸೂತ್ರಧಾರ. ಆತ ಇರಿಸಿದಂತೆ, ಆತ ಆಡಿಸಿದಂತೆ, ಆತ ಕುಣಿಸಿದಂತೆ ಮನುಷ್ಯನ ಬದುಕು. ಲೌಕಿಕದ ಮಾಯೆಗಿಂತ ಆತ ಬೀಸುವ ಮಾಯೆ ತೀವ್ರತರವಾದುದು. ಈ ವಚನ ಅಕ್ಕನ ಆತ್ಮವಿಮರ್ಶೆಯಾಗಿದ್ದು, ಆಕೆಯ ಬದುಕಿನ ಘಟನೆಯನ್ನು ಪರೋಕ್ಷವಾಗಿ ದಾಖಲಿಸುತ್ತದೆ.
ಮನುಷ್ಯ ತೊಂದರೆಗಳಲ್ಲಿ ಸಿಕ್ಕಿಹಾಕಿಕೊಳ್ಳುವುದಕ್ಕೆ ಮುಖ್ಯವಾಗಿ ಎರಡು ಕಾರಣಗಳು. ಮೊದಲನೆಯದು, ಸ್ವಯಂಕೃತಾಪರಾಧ. ಎರಡನೆಯದು, ವಿಧಿಲೀಲೆ. ಒಂದರಿಂದ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದರೆ ಇನ್ನೊಂದು ತಡೆಯುತ್ತದೆ. ಹಿಂದೆ ಸರಿಯಲು ಪ್ರಯತ್ನಿಸಿದರೆ ಹಳ್ಳ(ನದಿ) ಅಡ್ಡವಾಗಿದೆ. ಮುಂದೆ ಸಾಗಲು ಪ್ರಯತ್ನಿಸಿದರೆ ತೊರೆ ಅಡ್ಡವಾಗಿದೆ. ರಕ್ಷಿಸಿಕೊಳ್ಳಲು ದಾರಿಯಿಲ್ಲ. ಎರಡೂ ಜೀವಕ್ಕೆ ಅಪಾಯವೇ. ಹಾಗೆಯೇ ಹಿಂದೆ ಸರಿಯಲು ಪ್ರಯತ್ನಿಸಿದರೆ ಕೆರೆ ಅಡ್ಡವಾಗಿದೆ. ದಾಟಲು ಸಾಧ್ಯವಿಲ್ಲ. ಮುಂದೆಸಾಗಲು ಪ್ರಯತ್ನಿಸಿದರೆ ಬಲೆಯನ್ನು ಅಡ್ಡವಾಗಿ ಬೀಸಲಾಗಿದೆ. ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾಪಾಡಿಕೊಳ್ಳಲು ಅವಕಾಶವೇ ಇಲ್ಲ. ಅಡಕ್ಕೊತ್ತಿನಲ್ಲಿ ಸಿಕ್ಕ ಅಡಕೆಯ ಹಾಗೆ.
ಈ ವಚನದಲ್ಲಿ ಹಳ್ಳ, ತೊರೆ, ಕೆರೆ ಹಾಗೂ ಬಲೆಗಳು ಚೆನ್ನಮಲ್ಲಿಕಾರ್ಜುನ ಇಕ್ಕಿದ ಮಾಯೆಗಳಾಗಿ ತನ್ನನ್ನು ಕೊಲ್ಲುತ್ತಿವೆ ಎಂದು ಅಕ್ಕ ಆತನಿಗೆ ಮೊರೆಹೋಗುತ್ತಾಳೆ. ಆಕೆ ತನ್ನ ಮನಸ್ಸಿನ ದ್ವಂದ್ವಗಳನ್ನು ಮಾಯೆಗೆ ಹೋಲಿಸಿದ್ದಾಳೆ. ಅಕ್ಕನಿಗೆ ಒದಗಿದ ಸ್ಥಿತಿ ಅಂದು ಅನ್ಯರಿಗೆ ಒದಗಿರಲಿಲ್ಲ. ಒಂದು ಕಡೆ ’ಚೆನ್ನಮಲ್ಲಿಕಾರ್ಜುನನೇ ತನಗೆ ಗಂಡ’ ಎಂದು ಭಾವಿಸಿದ ಆಕೆ, ತನ್ನ ತಂದೆತಾಯಿಗಳ ಒತ್ತಾಸೆಯಂತೆ ಮತ್ತು ಅವರ ಉಳಿವಿಗಾಗಿ ರಾಜ ಕೌಶಿಕನನ್ನು ಮದುವೆಯಾಗಬೇಕಾದ ಅನಿವಾರ್ಯತೆ ಒದಗಿತು. ಇನ್ನೊಂದೆಡೆ ತನಗೆ ನೀಡಿದ ಎಲ್ಲಾ ಭಾಷೆಗಳನ್ನು ಗಾಳಿಗೆ ತೂರಿ ಅತಿಕಾಮುಕನಾಗಿ ವರ್ತಿಸಿದ ಲೌಕಿಕಗಂಡ ಕೌಶಿಕ ಹಾಗೂ ಆತನ ಮತ್ತು ತನ್ನ ಪರಿವಾರವನ್ನು ತ್ಯಜಿಸಿ ಸಮಾಜದ ಅಂದಿನ ಧೋರಣೆಗಳಿಗೆ ವಿರುದ್ಧವಾಗಿ ಅಲೌಕಿಕಗಂಡ ಚೆನ್ನಮಲ್ಲಿಕಾರ್ಜುನನನ್ನು ಹುಡುಕಿಕೊಂಡು ಹೊರಡುವ ಅನಿವಾರ್ಯತೆ ಒದಗಿತು. ಮೊದಲನೆಯದು ಹಳ್ಳ ಹಾಗೂ ಕೆರೆಯಾದರೆ, ಎರೆಡನೆಯದು ತೊರೆ ಮತ್ತು ಬಲೆ. ಎರಡೂ ಮಾಯೆಗಳೇ. ಎರಡೂ ತನ್ನನ್ನು ಕೊಲ್ಲುತ್ತಿವೆ ಎಂಬುದು ಆಕೆಯ ಮನದಾಳದ ಅಳಲು.
ಹನ್ನೆರೆಡನೆಯ ಶತಮಾನದ ಸಾಮಾಜಿಕಸಂದರ್ಭದಲ್ಲಿ ಮದುವೆಯಾದ ಗಂಡ ಕೌಶಿಕನನ್ನು ಬಿಟ್ಟು ಅಲೌಕಿಕಗಂಡ ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತ ಹುಟ್ಟುಡುಗೆಯಲ್ಲಿ ಎಲ್ಲವನ್ನೂ ಎಲ್ಲರನ್ನೂ ತೊರೆದುಹೋದದ್ದು ಒಂದು ಕ್ರಾಂತಿಕಾರಕ ಹಾಗೂ ದಿಟ್ಟನಿಲುವು. ಒಂದು ಕಡೆ ಲೌಕಿಕಗಂಡ ಕೌಶಿಕನನ್ನು ತೊರೆದು ಬಂದಾಗಿದೆ. ಹಿಂದೆ ಹೋಗುವಂತಿಲ್ಲ. ಸಾಮಾಜಿಕ ಬಹಿಷ್ಕಾರದ ಸಮಸ್ಯೆಯ ಹಳ್ಳವೂ ಕೆರೆಯೂ ತನ್ನ ಮುಂದಿವೆ. ಅಲೌಕಿಕಗಂಡ ಚೆನ್ನಮಲ್ಲಿಕಾರ್ಜುನನನ್ನು ಬಯಸಿಬಂದಾಗಿದೆ. ಈ ಮದುವೆ ಸಾಧ್ಯವೇ ಎಂಬ ಗೊಂದಲದ ತೊರೆಯೂ ಇದೆ, ಬಲೆಯೂ ಇದೆ. ಮುಂದೆ ಹೋಗುವಂತಿಲ್ಲ, ಹಿಂದೆ ಬರುವಂತೆಯೂ ಇಲ್ಲ. ‘ಹಿಂದಣ ದರಿ ಮುಂದಣ ಪುಲಿ’ ಎಂಬಂತಹ ಬದುಕು. ಇವೆಲ್ಲವೂ ಚೆನ್ನಮಲ್ಲಿಕಾರ್ಜುನನು ಇಕ್ಕಿದ ಮಾಯೆ ಎಂದು ಅಕ್ಕ ಆತನಿಗೇ ಮೊರೆಹೋಗುತ್ತಾಳೆ.
ಅಕ್ಕಮಹಾದೇವಿಯ ಈ ವಚನ ಭಿನ್ನಭಿನ್ನ ನೆಲೆಗಟ್ಟಿನಲ್ಲಿ ಆಧುನಿಕಭಾರತದ ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಇಂದು ಭಗವಂತ ಒಡ್ಡಿದ ಮಾಯೆಗಿಂತ ಸಿರಿವಂತರು, ಅಧಿಕಾರಸ್ಥರು, ವಂಚಕರು, ವ್ಯಭಿಚಾರಿಗಳು, ಕುತಂತ್ರಿಗಳು, ಧನದಾಹಿಗಳು ಒಡ್ಡುವ ಮಾಯೆಗಳೇ ಅತ್ಯಂತ ನಿಗೂಢವೂ ಭೀಕರವೂ ಆಗಿವೆ. ಮಾತ್ರವಲ್ಲ, ಅತ್ಯಂತ ಹೇಯವೂ ಆಗಿವೆ. ಜನಸಾಮಾನ್ಯರು ಇವರೊಡ್ಡುವ ಮಾಯೆಗಳಿಂದಾಗಿ ಒಂದು ಕಡೆ ಹಳ್ಳ, ಕೆರೆಗಳನ್ನು ಇನ್ನೊಂದು ಕಡೆ ತೊರೆ, ಬಲೆಗಳನ್ನು ದಾಟಲಾರದೆ, ಮೀರಲಾರದೆ ತಮ್ಮ ಉದ್ಯೋಗಗಳನ್ನು, ಸ್ಥಾನಮಾನಗಳನ್ನು, ಆಸ್ತಿಪಾಸ್ತಿಗಳನ್ನು, ಮನೆಮಠಗಳನ್ನು, ಕೊನೆಗೆ ಜೀವವನ್ನೇ ಕಳೆದುಕೊಳ್ಳುತ್ತಿರುವ ಪ್ರಸಂಗಗಳು ನಿರಂತರ ನಡೆಯುತ್ತಲೇ ಇವೆ. ಸಿರಿತನದ ಮಾಯೆ, ಅಧಿಕಾರದ ಮಾಯೆ, ವಂಚನೆಯ ಮಾಯೆ, ವ್ಯಭಿಚಾರದ ಮಾಯೆ, ಆಸ್ತಿಪಾಸ್ತಿಗಳ ಮಾಯೆ, ಕುತಂತ್ರಗಳ ಮಾಯೆ, ಜಾತಿಯ ಮಾಯೆ-ಹೀಗೆ ಆಧುನಿಕಕಾಲದಲ್ಲಿ ಮಾಯೆಗಳೇ ಅಸಂಖ್ಯ. ’ಯಾವ ಕಾನೂನಿಗೂ ಜಗ್ಗದ, ಬಗ್ಗದ ಇಂತಹ ಮಾಯೆಗಳನ್ನು ಗೆಲ್ಲುವ, ಅಥವಾ ಮೀರುವ ಬಗೆಯೆಂತು ಹೇಳಾ ಚೆನ್ನಮಲ್ಲಿಕಾರ್ಜುನಾ?!’ ಎಂದು ನಾವೀಗ ಅರಣ್ಯರೋಧನ ಮಾಡಬೇಕಾಗಿದೆ. ಏಕೆಂದರೆ ಈ ಮಾಯೆಗಾರ, ಮಾಟಗಾರರು ಭಗವಂತನಿಗೇ ಮಾಯೆಯ ಬಲೆಬೀಸುವಷ್ಟು ಕುಟಿಲರಾಗಿದ್ದಾರಲ್ಲ!
***
ಹನ್ನೆರಡನೇ ಶತಮಾನದ ವಚನದ ಪ್ರಸ್ತುತತೆಯನ್ನು ಅರ್ಥ ಪೂರ್ಣ ವಾಗಿ ವಿವರಿಸಿದ್ದು ಚೆನ್ನಾಗಿದೆ.
ಧನ್ಯವಾದಗಳು ಮೇಡಂ.
ಉಳಿದ ಬರಹಗಳನ್ನು ಓದಿ ಪ್ರತಿಕ್ರಿಯಿಸಿ 🙏