ಅಂತರಂಗ-ಆತ್ಮ ಶುದ್ಧಿ ಇಲ್ಲದವರನ್ನು ವಿಡಂಬಿಸುವ ಸಂದರ್ಭದಲ್ಲಿ ಬಸವಣ್ಣನವರು ‘ಹುತ್ತವ ಬಡಿದರೆ ಉರಗ ಸಾವುದೇ?’ ಎಂಬ ಹೋಲಿಕೆಯನ್ನು ನೀಡಿದ್ದಾರೆ. ಅಂತರಂಗ-ಆತ್ಮಶುದ್ಧಿಯಿಲ್ಲದವನು ಮಾಡುವ ಪೂಜೆ, ಪುರಸ್ಕಾರ, ಜಪ, ತಪಗಳಿಗೆ ಯಾವುದೇ ಪ್ರತಿಫಲ ದೊರೆಯಲಾರದು. ಅಂತಹ ಜಪತಪಗಳೆಲ್ಲವೂ ಹುತ್ತವನ್ನು ಬಡಿದು ಉರಗವನ್ನು ಸಾಯಿಸುವ ಪ್ರಯತ್ನವಾದೀತು. ಹೀಗೆ ಬಡಿಯುವುದರಿಂದ ಉರಗವೇನೂ ಸಾಯಲಾರದು. ಶ್ರಮವೂ ವ್ಯರ್ಥ. ಅಂತಹ ಪ್ರಯತ್ನಕ್ಕೆ ಕೂಡಲಸಂಗಮದೇವನೂ ಒಲಿಯಲಾರ ಎಂಬುದನ್ನು ಬಸವಣ್ಣನವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರ ಈ ಮಾತು ಸಾರ್ವಕಾಲಿಕ ಸತ್ಯ.
ಒಂದರ್ಥದಲ್ಲಿ ಈ ವರ್ತನೆ ಬರೀ ಬೂಟಾಟಿಕೆ. ಅನ್ಯರನ್ನು ಮೆಚ್ಚಿಸುವ ವ್ಯರ್ಥಪ್ರಯತ್ನ. ಬಸವಣ್ಣನವರ ಈ ಹೋಲಿಕೆ ಅಂದಿಗಿಂತಲೂ ಇಂದಿಗೆ ಹೆಚ್ಚು ಅರ್ಥಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಆಧುನಿಕಕಾಲದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೂಟಾಟಿಕೆಯವರೇ ತುಂಬಿಕೊಂಡಿದ್ದಾರೆ. ಎಷ್ಟೋ ಮಂದಿ ತಾವು ಭಕ್ತರು, ಸಾತ್ವಿಕರು, ಉದಾರಿಗಳು, ಪರೋಪಕಾರಿಗಳು, ಸಚ್ಛಾರಿತ್ರ್ಯವಂತರು, ಸಂಭಾವಿತರು, ವಿದ್ವಾಂಸರು, ಪ್ರಾಜ್ಞರು ಎಂದೆಲ್ಲ ತಮ್ಮನ್ನು ತಾವೇ ಹೊಗಳಿಕೊಳ್ಳುತ್ತ ಇತರರಿಂದಲೂ ಹೊಗಳಿಸಿಕೊಳ್ಳುತ್ತಾ ಕಾಲಕಳೆಯುತ್ತಿರುತ್ತಾರೆ.
ಹಣೆ ಹಾಗೂ ಮೈಮೇಲೆಲ್ಲ ನಾಮ, ಮುದ್ರೆಗಳನ್ನು ಬಳಿದ ಮಾತ್ರಕ್ಕೆ ಭಕ್ತನೆನಿಸಿಕೊಳ್ಳುವುದು; ಯಾರಿಂದಲೋ ಅನಾಯಾಸವಾಗಿ ಬಂದ ದುಡ್ಡನ್ನುತೋರಿಕೆಗಾಗಿ ಕೆಲವರಿಗೆ ಹಂಚಿ ದಾನಿಯೆನಿಸಿಕೊಳ್ಳುವುದು; ಯಾರೆಷ್ಟು ಟೀಕೆಮಾಡಿದರೂ ಏನನ್ನೂ ಪ್ರತಿಕ್ರಿಯಿಸದೆ ಒಳಗೊಳಗೆ ಕರುಬುತ್ತ ಹೊರಗೆ ಸಾತ್ವಿಕರೆನಿಸಿಕೊಳ್ಳುವುದು; ಒಳಗಿಂದೊಳಗೆ ಮೋಸ, ವಂಚನೆಗಳನ್ನು ಮಾಡಿ ಹೊರಗೆ ಸಂಭಾವಿತರೆನಿಸಿಕೊಳ್ಳುವುದು; ಮನಸ್ಸಿನೊಳಗೆ ಪರಸ್ತ್ರೀಯರನ್ನು ಕಾಮಿಸುತ್ತ, ಪರಸ್ತ್ರೀಯರೊಂದಿಗೆ ರಮಿಸುತ್ತ ಹೊರಗೆ ಶುದ್ಧಚಾರಿತ್ರ್ಯವನ್ನು ತೋರ್ಪಡಿಸಿಕೊಳ್ಳುವುದು; ಮೌಲ್ಯಗಳ ಕುರಿತಾಗಿ ರಂಗುರಂಗಿನ ಕಥೆ-ಉಪಕಥೆಗಳನ್ನು ವರ್ಣಿಸುತ್ತ ಪ್ರವಚನನೀಡಿ ಮಹಾಮೇಧಾವಿ ಎನಿಸಿಕೊಂಡು ಒಳಗಿಂದೊಳಗೆ ಕುತಂತ್ರಗಳನ್ನು ಹೆಣೆಯುವುದು; ಪರೋಪಕಾರಿ ಎನ್ನುವಂತೆ ಬಿಂಬಿಸಿ ಅನ್ಯರ ಅನ್ನವನ್ನು ಕಸಿಯುವುದು ಎಲ್ಲವೂ ಇಂದಿನ ಕಾಲದ ಬೂಟಾಟಿಕೆ. ಈ ರೀತಿಯ ಬೂಟಾಟಿಕೆ ದೇಶವೆಲ್ಲವನ್ನೂ ವ್ಯಾಪಿಸಿಕೊಂಡಿದೆ.
ಯಾವುದೇ ಸ್ಥಾನವನ್ನು ಅಲಂಕರಿಸಬೇಕಿದ್ದರೂ ಅದಕ್ಕೆ ಪೂರಕವಾದ ಅರ್ಹತೆಗಳು ನಮ್ಮಲ್ಲಿರಬೇಕು. ಇಲ್ಲದಿದ್ದರೆ ಅವುಗಳನ್ನು ಆರ್ಜಿಸಿಕೊಳ್ಳಬೇಕು. ಸಾಧ್ಯವೇ ಇಲ್ಲದಿದ್ದರೆ ಅಂತಹ ಸ್ಥಾನಮಾನಗಳನ್ನು ತ್ಯಜಿಸಬೇಕು. ಅದೇ ಮನುಷ್ಯನಿಗೆ ಭೂಷಣ. ಹಾವನ್ನು ಸಾಯಿಸಬೇಕೆಂದಿದ್ದರೆ ಅದಕ್ಕೇ ಹೊಡೆಯಬೇಕಲ್ಲದೆ, ಹುತ್ತವನ್ನು ಬಡಿದರೆ ಏನು ಪ್ರಯೋಜನ? ಹಾಗೆಯೇ ಅಂತರಂಗ ಶುದ್ಧಿಯಾಗಬೇಕಾದರೆ ಕೆಟ್ಟವಿಚಾರಗಳನ್ನು, ದುರಭ್ಯಾಸಗಳನ್ನು, ದುರ್ವತನೆಗಳನ್ನು, ದುಶ್ಚಾರಿತ್ರ್ಯವನ್ನು ಹಾಗೂ ಮನುಷ್ಯತ್ವದ ನಾಶಕ್ಕೆ ಕಾರಣವಾಗುವ ಅವಗುಣಗಳನ್ನು ತ್ಯಜಿಸಬೇಕಲ್ಲದೆ ಭಕ್ತಿಮಾಡುವುದರಿಂದ, ನಾಮಗಳನ್ನು ಬಳಿದುಕೊಳ್ಳುವುದರಿಂದ, ಜಪ ತಪಗಳನ್ನು ಮಾಡುವುದರಿಂದ, ಮಾತು ಮಾತಿಗೂ ಶ್ಲೋಕಗಳನ್ನು ಸುಭಾಷಿತಗಳನ್ನು ಉದುರಿಸುತ್ತ ಪ್ರವಚನ ನೀಡುವುದರಿಂದ ಏನು ಪ್ರಯೋಜನ? ಬಸವಣ್ಣಾದಿ ಶಿವಶರಣರ ಹಾಗೆ ನಾವು ನಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಬಸವಣ್ಣನವರು ಉಲ್ಲೇಖಿಸುವ ಈ ಹೋಲಿಕೆ ಇಂದಿಗೂ ಎಂದೆಂದಿಗೂ ಪ್ರಸ್ತುತ.
***