ಸಾಹಿತ್ಯಾನುಸಂಧಾನ

heading1

ತಾಯ ಗರ್ಭದ ಶಿಶು

ತಾಯ ಗರ್ಭದ ಶಿಶು ತಾಯ ಕುರುಹನರಿಯದು

ಆ ತಾಯಿ ಶಿಶುವಿನ ಕುರುಹನೆಂದೂ ಅರಿಯಳು

ಮಾಯಾಮೋಹದಲ್ಲಿಪ್ಪ ಭಕ್ತರು ದೇವರನರಿಯರು

ಆ ದೇವರು ಆ ಭಕ್ತರನೆಂದೂ ಅರಿಯನು ಕಾಣಾ ರಾಮನಾಥ

                                                                    ಜೇಡರ ದಾಸಿಮಯ್ಯ

 

ಭಕ್ತನೊಬ್ಬನು ಭಗವಂತನ ಸಾಕ್ಷಾತ್ಕಾರಕ್ಕೆ ಅಥವಾ ಅನುಗ್ರಹಕ್ಕೆ ತನ್ನ ನ್ಯೂನತೆಗಳನ್ನು ನಿವಾರಿಸಿಕೊಳ್ಳುವುದರ ಜೊತೆಗೆ ಭಗವಂತನ ಕುರುಹನ್ನು ಅರಿಯುವುದು ಎಷ್ಟು ಮುಖ್ಯ ಎಂಬುದನ್ನು ಒಂದು ಉದಾಹರಣೆಯ ಮೂಲಕ ಜೇಡರ ದಾಸಿಮಯ್ಯ ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾನೆ.

 

ತಾಯಿಯ ಗರ್ಭದೊಳಗಿರುವ ಶಿಶು ಹಲವು ಸಮಯದವರೆಗೂ ಗರ್ಭಕೋಶದಲ್ಲಿದ್ದರೂ ತನ್ನ ತಾಯಿಯ ಬಣ್ಣ, ಆಕಾರ, ರೂಪ, ಗುಣ, ಮಾತು ಮೊದಲಾದವುಗಳ ಯಾವ ಕುರುಹನ್ನೂ ಅರಿಯಲಾರದು. ಹಾಗೆಯೇ ಆ ತಾಯಿಯೂ, ತಾನು ತನ್ನ ಗರ್ಭದೊಳಗೆ ಒಂಬತ್ತು ತಿಂಗಳ ಕಾಲ ಶಿಶುವನ್ನು ಹೊತ್ತಿದ್ದರೂ ತನ್ನ ಶಿಶುವಿನ ಆಕಾರ, ಬಣ್ಣ, ಗುಣ, ರೂಪ, ಲಿಂಗ ಮೊದಲಾದವುಗಳ ಯಾವ ಕುರುಹನ್ನೂ ಅರಿಯಲಾರಳು. ಗರ್ಭಸ್ಥ ಶಿಶುವಿಗೆ ಹೊರಪ್ರಪಂಚದ ಅರಿವಿರುವುದಿಲ್ಲ. ತಾಯಿಗೆ ಗರ್ಭದ ಒಳಪ್ರಪಂಚದ ಅರಿವಿರುವುದಿಲ್ಲ. ಅದರಂತೆಯೇ ಮಾಯೆ ಹಾಗೂ ಮೋಹಗಳಲ್ಲಿ ತಲ್ಲೀನರಾಗಿರುವ ಭಕ್ತರು ದೇವರನ್ನು ಅರಿಯಲಾರರು. ಹಾಗೆಯೇ ಅಂತಹ ಮಾಯೆ ಹಾಗೂ ಮೋಹಗಳಿಗೆ ತುತ್ತಾಗಿರುವ ಭಕ್ತರನ್ನು ಭಗವಂತನೂ ಅರಿಯಲಾರನು ಎಂಬುದು ಜೇಡರ ದಾಸಿಮಯ್ಯನ  ನಿಲುವು.

 

ದಾಸಿಮಯ್ಯನ ಪ್ರಕಾರ ಭಕ್ತನಿಗೆ ತನ್ನ ಇಷ್ಟದೇವನ ತಿಳಿವಳಿಕೆ ಅತ್ಯಂತ ಅಗತ್ಯ. ಅದನ್ನು ಹೊಂದಬೇಕಾದರೆ ಆತ ಯಾವುದೇ ರೀತಿಯ ಮಾಯೆಗಾಗಲೀ ಅಥವಾ ಮೋಹಗಳಿಗಾಗಲೀ ಒಳಗಾಗಬಾರದು. ಒಂದು ವೇಳೆ ಒಳಗಾಗಿದ್ದರೆ ಅದರಿಂದ ಮುಕ್ತನಾಗಬೇಕು. ಹಾಗಿದ್ದರೆ ಮಾತ್ರ ಆತ ದೇವರ ಅನುಗ್ರಹಕ್ಕೆ ಪಾತ್ರನಾಗಬಲ್ಲ. ಆದರೆ ಕೆಲವು ಭಕ್ತರು ಸದಾ ಒಂದಲ್ಲ ಒಂದು ಮಾಯೆಗೆ ಅಥವಾ ಮೋಹಕ್ಕೆ ಒಳಗಾಗುತ್ತಲೇ  ಇರುತ್ತಾರೆ. ಇದರ ಜೊತೆಯಲ್ಲಿಯೇ ತಾವು ಅತ್ಯಂತ ಶ್ರೇಷ್ಠಭಕ್ತರು ಎಂದು ಲೋಕಕ್ಕೆಲ್ಲ ಸಾರುತ್ತಿರುತ್ತಾರೆ. ಆದರೆ, ಅಂತಹವರು ಮಾಡುವ ಯಾವುದೇ ಪೂಜೆ-ಪುರಸ್ಕಾರಗಳು, ಧ್ಯಾನ-ಭಕ್ತಿಗಳು, ದಾನ-ಧರ್ಮಗಳು ಡಾಂಬಿಕವೂ  ಅರ್ಥಹೀನವೂ ಎನಿಸಿಕೊಳ್ಳುತ್ತವೆ. ಇದೊಂದು ರೀತಿಯಲ್ಲಿ ಇದೆಲ್ಲವೂ ಜನರನ್ನು ಮೆಚ್ಚಿಸಲು ಕೈಗೊಳ್ಳುವ ಬೂಟಾಟಿಕೆಯ ವರ್ತನೆ ಎನಿಸಿಕೊಳ್ಳುತ್ತದೆ. ಈ ರೀತಿಯ ಬೂಟಾಟಿಕೆಯ ಭಕ್ತರನ್ನು ಭಗವಂತನೂ ಅರಿಯಲಾರ ಎಂಬುದು ದಾಸಿಮಯ್ಯನ ನಿಲುವು.  ಭಗವಂತನ ಅನುಗ್ರಹಕ್ಕೆ ಪಾತ್ರನಾಗಬೇಕಾದರೆ ಭಕ್ತ ಮೊದಲು ತನ್ನಲ್ಲಿನ ನ್ಯೂನತೆಗಳನ್ನು ಕಳೆದುಕೊಳ್ಳಬೇಕು. ಅದಿಲ್ಲದೆ ಮಾಡುವ ಯಾವುದೇ ಧ್ಯಾನ, ಪೂಜೆ, ದಾಸೋಹ, ಕಾಯಕಗಳು ವ್ಯರ್ಥವೆನಿಸಿಕೊಳ್ಳುವುದರಿಂದ ದಾಸಿಮಯ್ಯ ಈ ಪ್ರವೃತ್ತಿಯನ್ನು ಖಂಡಿಸುತ್ತಾನೆ.

 

ಹನ್ನೆರಡನೆಯ ಶತಮಾನದಲ್ಲಿಯೇ ಭಕ್ತಿಯ ಹಾಗೂ ಬದುಕಿನ ವಿಚಾರದಲ್ಲಿ ಸಾಕಷ್ಟು ಡಾಂಬಿಕತನ, ಬೂಟಾಟಿಕೆಗಳು ಪ್ರಚಲಿತವಾಗಿದ್ದವೆಂದು ತೋರುತ್ತದೆ. ಒಂದೆಡೆ  ಕೆಲವರಿಗೆ ತಾವು ಭಕ್ತರೆಂದೆನಿಸಿಕೊಳ್ಳಬೇಕು, ಸಮಾಜದಲ್ಲಿ ಒಳ್ಳೆಯ ಸ್ಥಾನಮಾನಗಳನ್ನು ಪಡೆಯಬೇಕು. ಇನ್ನೊಂದೆಡೆ ತಮ್ಮಲ್ಲಿರುವ ಲೋಪದೋಷಗಳನ್ನು ತ್ಯಜಿಸದೆ ಹಾಗೆಯೇ ಮುಂದುವರೆಸಿಕೊಂಡು ಹೋಗಬೇಕು. ಅದರಿಂದ ದೈಹಿಕ, ಮಾನಸಿಕ ತೃಪ್ತಿಯನ್ನು ಸುಖವನ್ನು ಹೊಂದುತ್ತಿರಬೇಕು. ಇದೊಂದು ರೀತಿಯ ಎಡೆಬಿಡಂಗಿತನ. ಅದಕ್ಕಾಗಿಯೇ ದಾಸಿಮಯ್ಯ ಅವುಗಳನ್ನು ಸ್ಪಷ್ಟ ಉದಾಹರಣೆಯ ಮೂಲಕ ಖಂಡಿಸುತ್ತಾನೆ. ಭಗವಂತನ ಅನುಗ್ರಹ ಅಥವಾ ಸಾಕ್ಷಾತ್ಕಾರಗಳು ಅನಂತರದ ವಿಚಾರ. ಭಗವಂತನನ್ನು ಮೆಚ್ಚಿಸುವುದಕ್ಕೆ ಅಲ್ಲದಿದ್ದರೂ ಸಾಂಘಿಕ ಬದುಕಿನಲ್ಲಿ ನಮ್ಮ ಸಹವರ್ತಿಗಳ ವಿಶ್ವಾಸಕ್ಕಾದರೂ ಪಾತ್ರರಾಗಬೇಕಲ್ಲ! ನಮ್ಮ ನೆರೆಹೊರೆಯವರೇ ನಮ್ಮನ್ನು ನಂಬಲಾರದ ಸ್ಥಿತಿ ಮನುಷ್ಯನಿಗೆ ಒದಗಿದರೆ ಬದುಕಿಗೇನು ಅರ್ಥ? ಏನು ಸಾರ್ಥಕತೆ? ಎಲ್ಲಿಯ ಪರಿಪೂರ್ಣತೆ? ನಮ್ಮ ದುರ್ಬುದ್ಧಿ, ದುರಾಚಾರ, ಅನೈತಿಕತೆಗಳಿಂದಾಗಿ ಸಹವರ್ತಿಗಳ ವಿಶ್ವಾಸಕ್ಕೆ ಪಾತ್ರರಾಗುವುದೇ ಕಷ್ಟವೆಂದಾದರೆ ಇನ್ನು ಭಗವಂತನ ವಿಶ್ವಾಸಕ್ಕೆ ಪಾತ್ರರಾಗುವುದಕ್ಕೆ  ಅವಕಾಶವಾದರೂ ಎಲ್ಲಿ ?

 

ದಾಸಿಮಯ್ಯನ ಮಾತುಗಳು ಕೇವಲ ಅಂದಿನ ಕಾಲಕ್ಕೆ ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಾಗಿ ಇಂದಿನ ಕಾಲಕ್ಕೆ ಹೆಚ್ಚು ಅರ್ಥಪೂರ್ಣವಾಗಿ ಅನ್ವಯವಾಗುತ್ತವೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಬದುಕಿನ ಸ್ಥಿತಿಗತಿಗಳು ಅಂದಿಗಿಂತಲೂ ಕೆಟ್ಟದ್ದಾಗಿವೆ. ಇಂದು ಭಗವಂತನ ಅನುಗ್ರಹದ ಅಗತ್ಯವಿಲ್ಲ. ಮಾಯೆ, ಮೋಹಗಳನ್ನು ತ್ಯಜಿಸಿದರೆ ಬದುಕೇ ಇಲ್ಲ ಎಂಬ ಮನೋಭಾವ ದೃಢವಾಗಿರುವುದರಿಂದ ಸದಾ ಅವುಗಳ ವರ್ತುಲದೊಳಗೇ ಎಗ್ಗಿಲ್ಲದೆ ಓಲಾಟ ನಡೆಯುತ್ತಿದೆ.  ಇಂದು ಇಪ್ಪತ್ತೊಂದನೆಯ ಶತಮಾನದ ಸಾಮಾಜಿಕ ಬದುಕಿನಲ್ಲಿ ಭಗವಂತನ ಸಾಕ್ಷಾತ್ಕಾರವಾಗಲೀ ಅನುಗ್ರಹವಾಗಲೀ ದೂರದ ಮಾತು. ಅದನ್ನು ಹೊರತುಪಡಿಸಿದರೂ ಮನುಷ್ಯ ಸಾಂಘಿಕಬದುಕಿನಲ್ಲಿ ಅನ್ಯರ ವಿಶ್ವಾಸಕ್ಕೆ ಪಾತ್ರನಾಗದಿದ್ದರೆ, ತನ್ನನ್ನು ತಿದ್ದಿಕೊಳ್ಳುತ್ತ ಅನ್ಯರನ್ನು ತಿದ್ದುವ ನೈತಿಕ ಸಾಮರ್ಥ್ಯವನ್ನು ಹೊಂದದಿದ್ದರೆ ಬದುಕಿಗೇನು ಸಾರ್ಥಕತೆ? ಬದುಕಿನ ಸಾರ್ಥಕತೆ ಹಾಗೂ ಪರಿಪೂರ್ಣತೆಗಳೇ ದಾಸಿಮಯ್ಯನ ಮಾತುಗಳ ಮಾತ್ರವಲ್ಲ, ಆತನ ಬದುಕಿನ ಒಳಗುಟ್ಟು.

***

Leave a Reply

Your email address will not be published. Required fields are marked *