ಸಾಹಿತ್ಯಾನುಸಂಧಾನ

heading1

ಬಾರೆ, ನನ್ನ ಶಾರದೆ!

           ಇದು ಕೆ.ಎಸ್. ನರಸಿಂಹಸ್ವಾಮಿಯವರ ’ಮೈಸೂರ ಮಲ್ಲಿಗೆ’ ಕವನಸಂಕಲನದಲ್ಲಿನ ಒಂದು ದಾಂಪತ್ಯಗೀತೆ. ನವದಂಪತಿಗಳ ನಡುವಿನ ಪ್ರೀತಿ, ಪ್ರೇಮ, ಮೋಹ, ಕಾಮಗಳನ್ನು ಒಂದು ಆರೋಗ್ಯಕರ ನೆಲೆಯಲ್ಲಿ ಪ್ರಸ್ತುತಪಡಿಸುತ್ತದೆ. ಮದುವೆಯಾದ ಹೊಸತರಲ್ಲಿನ ಗಂಡ-ಹೆಂಡಿರೊಳಗಿನ ಪ್ರೇಮಮಯ ಚೇಷ್ಟೆಗಳಿಂದ ಮೈಮರೆಯುವ ಪ್ರೇಮಲೋಕದ ವಿಹಂಗಮ ವಿಹಾರವನ್ನು ಅತ್ಯಂತ ಸಮರ್ಥವಾಗಿ ಈ ದಾಂಪತ್ಯಗೀತೆಯ ಮೂಲಕ ಕವಿ ನಿರೂಪಿಸಿದ್ದಾರೆ.

 

ಮದುವೆಯಾಗಿ ತಿಂಗಳಿಲ್ಲ,

ನೋಡಿರಣ್ಣ ಹೇಗಿದೆ!

ನಾನು ಕೂಗಿದಾಗಲೆಲ್ಲ

ಬರುವಳೆನ್ನ ಶಾರದೆ!

     ಹಿಂದೆ ಮುಂದೆ ನೋಡದೆ,

     ಎದುರುಮಾತನಾಡದೆ.

 

ಕೋಣೆಯೊಳಗೆ ಬಳೆಯ ಸದ್ದು!

ನಗುವರತ್ತೆ ಬಿದ್ದುಬಿದ್ದು!

ಸುಮ್ಮನಿರಲು ಮಾವನವರು,

 “ಒಳಗೆ ಅಕ್ಕ, ಭಾವನವರು”

      ಎಂದು ತುಂಟ ಹುಡುಗನು

      ಗುಟ್ಟು ಬಯಲಿಗೆಳೆವನು!

 

ಒಂದು ಹೆಣ್ಣಿಗೊಂದು ಗಂಡು

ಹೇಗೋ ಸೇರಿ ಹೊಂದಿಕೊಂಡು

ಕಾಣದೊಂದು ಕನಸ ಕಂಡು,

ಮಾತಿಗೊಲಿಯದಮೃತವುಂಡು,

     ದುಃಖ ಹಗುರವೆನುತಿರೆ,

     ಪ್ರೇಮವೆನಲು ಹಾಸ್ಯವೆ?

 

ಯಾರು ಕದ್ದು ನುಡಿದರೇನು?

ಊರೆ ಎದ್ದು ಕುಣಿದರೇನು?

ಜನರ ಬಾಯಿಗಿಲ್ಲ ಬೀಗ,

ಹೃದಯದೊಳಗೆ ಪ್ರೇಮರಾಗ

     ಇಂಥ ಕೂಗನಳಿಸಿದೆ,

     ಬೆಳಗಿ, ಬದುಕ ಹರಸಿದೆ.

 

ನನ್ನ ಮಾತು ರಾಮಬಾಣ;

ಬಿಡುವೆನಿದೋ, ಮಹಾತ್ರಾಣ!

ಗಂಡನೊಡನೆ ಗಂಡನೊಡವೆ

ಬಾಳ ಮೊದಲ ಮೋಹದೊಳಗೆ

     ಪಗಡೆಯಾಡಬಾರದೆ,

     ನಾನು ನನ್ನ ಶಾರದೆ?

 

ಬದುಕು ನೆಳಲ ಬಿಸಿಲ ದಾರಿ

ಮಿತ್ತು ಕಳ್ಳ ಬೆಕ್ಕಿನಂತೆ

ಹೊಂಚುತಿಹುದು, ಯಾರ ದಾರಿ-

ಗೆಲ್ಲಿ ಕೊನೆಯೊ! ಇಂದಿನಂತೆ

ನಾಳೆ ಎನ್ನಲಾಗದು.

     ಇತ್ತ ಸಿರಿಯು ನಿಲ್ಲದೆ;

     ಮತ್ತೆ ಎಲ್ಲ ದೊರಕದು;

 

ಇಂದೆ ಅದಕೆ ಕರೆವುದು

ನನ್ನ ಹುಡುಗಿ ಎನುವುದು

ಹೂವ ಮುಡಿಸಿ ನಗುವುದು

ಅಪ್ಪಿ ಮುತ್ತನಿಡುವುದು,-

     ಬಾರ ನನ್ನ ಶಾರದೆ

     ಬಾರೆ ಅತ್ತ ನೋಡದೆ!

 

                                           -ಕೆ.ಎಸ್. ನರಸಿಂಹಸ್ವಾಮಿ

 

 

            ಇದು ಮದುವೆಯ ಆರಂಭದಲ್ಲಿ ಗಂಡ-ಹೆಂಡತಿಯರೊಳಗಿನ ಮಧುರಪ್ರೇಮ, ದೈಹಿಕ ಆಕರ್ಷಣೆ, ಮಾನಸಿಕ ಆವೇಗ, ರೋಮಾಂಚನಗಳನ್ನು ಎಲ್ಲೆ ಮೀರದ ಚೇಷ್ಟೆಗಳನ್ನು ಹೃದ್ಯವಾಗಿ, ಆಹ್ಲಾದಕರವಾಗಿ, ರೋಮಾಂಚನಕಾರಿಯಾಗಿ ನಿರೂಪಿಸುವ ಒಂದು ದಾಂಪತ್ಯಗೀತೆ. ಗಂಡು-ಹೆಣ್ಣಿನ, ಗಂಡ-ಹೆಂಡತಿಯ ನಡುವಿನ ಪ್ರೇಮ ಭಾರತೀಯ ವಾಙ್ಮಯದಲ್ಲಿ ವಿಶೇಷವಾಗಿ ಕಂಡುಬರುವ  ಪ್ರೇಮಪರಿಕಲ್ಪನೆ. ಈ ಪರಿಕಲ್ಪನೆ ಕೆ.ಎಸ್. ನರಸಿಂಹಸ್ವಾಮಿಯವರ ಕವನಗಳಲ್ಲಿ ಮರುಹುಟ್ಟು ಪಡೆದಿದೆ. ಹಾಗಾಗಿಯೇ ಅವರು “ಪ್ರೇಮಕವಿ”, ಅವರ ರಚನೆಗಳು “ಪ್ರೇಮಕಾವ್ಯ”. ಎಂಬತ್ತು ವರ್ಷಗಳು ಸಂದರೂ ಅವರ ಪ್ರೇಮಗೀತೆಗಳಿಗೆ ಇನ್ನೂ ಮುಪ್ಪು ಒದಗದೆ ಚಿರಂಜೀವಿಯಾಗಿದ್ದು, ಹೊಸಪ್ರೇಮಿಗಳ, ಹೊಸದಂಪತಿಗಳ ಬದುಕಿನಲ್ಲಿ ಸ್ಫೂರ್ತಿಯ ಚಿರಂತನ ಚಿಲುಮೆಯಾಗಿಯೇ ಮುಂದುವರಿದಿವೆ. ಮದುವೆಯಾದ ಹೊಸತರಲ್ಲಿ ಗಂಡ-ಹೆಂಡತಿಯರೊಳಗೆ ಚಿಮ್ಮುವ ಪ್ರೀತಿ, ಪ್ರೇಮ, ಮೋಹ, ಕಾಮಗಳ ಹೊನಲನ್ನು ಅಷ್ಟೇ ನವಿರಾಗಿ, ರೋಮಾಂಚನಕಾರಿಯಾಗಿ ಕವಿ ಈ ಗೀತೆಯಲ್ಲಿ ಚಿಮ್ಮಿಸಿದ್ದಾರೆ.

 

            ಮದುವೆಯಾಗಿ ಇನ್ನೂ ತಿಂಗಳು ಕಳೆದಿಲ್ಲ. ಗಂಡನಿಗೆ ತನ್ನ ಹೆಂಡತಿಯ ಹೆಸರು ಅತ್ಯಂತ ಸುಂದರವಾಗಿ, ಮಧುರವೆನಿಸಿ ಕರೆಯುವುದಕ್ಕೆ ಇಂಪಾಗಿದೆ. ಕ್ಷಣಕ್ಷಣಕ್ಕೂ ಬಾಯಲ್ಲಿ ಅವಳದೇ ಹೆಸರು ತನ್ನಷ್ಟಕ್ಕೇ ಧ್ವನಿತವಾಗುತ್ತದೆ. ಯಾವುದೋ ಸಣ್ಣಪುಟ್ಟ ಕಾರಣಗಳಿಗಾಗಿ ಶಾರದೆಯನ್ನು ಕರೆಯುವಾಸೆ. ಶಾರದೆಗೋ ಗಂಡ ತನ್ನನ್ನು ಪ್ರೀತಿಯಿಂದ ಹೆಸರಿಡಿದು ಕರೆದಾಗಲೆಲ್ಲ ಎಲ್ಲಿದ್ದರೂ ಹಿಂದೆ ಮುಂದೆ ನೋಡದೆ ಓಡಿಬಂದು ಆತನ ಮುಂದೆ ನಿಲ್ಲುವಾಸೆ, ಪ್ರೀತಿಯ ಮಾತು ಕೇಳುವಾಸೆ, ಪಕ್ಕ ಕೂರುವಾಸೆ, ಗಂಡನ ತೆಕ್ಕೆಯಲ್ಲಿ ರೋಮಾಂಚನಗೊಳ್ಳುವಾಸೆ.  ಏಕೆ ಕರೆದಿರಿ? ಎಂದೇನೂ ಆಕೆ  ಕೇಳುವುದಿಲ್ಲ. ಕೇಳುವ ಅಗತ್ಯವಾದರೂ ಏನಿದೆ?  ಮನಸ್ಸಿನ ತುಡಿತ  ಇಬ್ಬರಿಗೂ ಗೊತ್ತಲ್ಲ!  ತಾನು ಕರೆದಾಗಲೆಲ್ಲ ಸಿಡಿಮಿಡಿಗೊಳ್ಳದೆ ಓಡಿಬರುವ ಶಾರದೆಗೆ ಗಂಡನನ್ನು ನೋಡಿದಷ್ಟೂ ಆತನ ಮಾತುಗಳನ್ನು ಕೇಳಿದಷ್ಟೂ ತೃಪ್ತಿಯಾಗದು. ಗಂಡನಿಗೋ ತನ್ನ ಹೆಂಡತಿಯ ಹೆಸರನ್ನು ಕರೆದಷ್ಟೂ ಆಕೆಯನ್ನು ನೋಡಿದಷ್ಟೂ ಆಕೆಯ ಪಿಸುಮಾತುಗಳನ್ನು ಕೇಳಿದಷ್ಟೂ ತೃಪ್ತಿಯಾಗದು. ಮದುವೆಯ ಆರಂಭದ ದಿನಗಳಲ್ಲಿ ತೃಪ್ತಿಯೆಂಬುದು ಸಾಧ್ಯವೇ?

 

            ಕೋಣೆಯೊಳಗೋ ಗಂಡ-ಹೆಂಡಿರ ಸರಸ ಸಲ್ಲಾಪ. ಕ್ಷಣಕ್ಷಣಕ್ಕೂ ರೋಮಾಂಚನ. ಮನೆಮಂದಿಗೆ ತಾವಾಡುವ ಮಾತು ಕೇಳದಂತೆ ಧನಿ ಕುಗ್ಗಿಸಬಹುದು. ಮಾತಿಗೆ ಅವಕಾಶವಾದರೂ ಎಲ್ಲಿ? ಹೋಗಲಿ,  ಬಳೆಗಳ ಸದ್ದನ್ನು ಕುಗ್ಗಿಸಲು ಸಾಧ್ಯವೇ?  ಹೊರಗೆ ಮಾವನವರಿಗೆ ಕೇಳಿದರೂ ಕೇಳದಂತೆ ಸುಮ್ಮನಿದ್ದರೂ ಅತ್ತೆಯೋ ಬಿದ್ದು ಬಿದ್ದು ನಗದಿರಲು ಹೇಗೆ ಸಾಧ್ಯ? ಅವರೋ ಆ ಸ್ಥಿತಿಗತಿಗಳನ್ನು ದಾಟಿ ಬಂದು ಬಹಳ ವರ್ಷಗಳೇನೂ ಕಳೆದಿಲ್ಲವಲ್ಲ. ಹಳೆಯ ನೆನಪು ಮರುಕೊಳಿಸಿರಬೇಕು. ತನ್ನ ಗಂಡ ಅಂದು ತೋರಿದ ಪ್ರೀತಿ ಪ್ರೇಮಗಳನ್ನು ನೆನೆಸಿಕೊಂಡು ಆಕೆ ರೋಮಾಂಚನಗೊಳ್ಳಲಾರರೇ? ಅತ್ತೆ, ಮಾವರಾದರೋ ಸಹಜವೆಂದು ನಕ್ಕು ಸುಮ್ಮನಾದಾರು! ಆದರೆ ಶಾರದೆಯ ತಮ್ಮ ಸುಮ್ಮನಿರಲು ಸಾಧ್ಯವೇ? ಅವನೋ ತುಂಟ, ಇನ್ನೂ ಲೋಕಜ್ಞಾನ ಅರಿಯದವನು. “ಕೋಣೆಯೊಳಗೆ ಅಕ್ಕ, ಭಾವನವರು” ಎಂದೆಲ್ಲ ಕೂಗಿ  ಗಂಡಹೆಂಡಿರ ಗುಟ್ಟನ್ನು ರಟ್ಟುಮಾಡಲು ಅವನಿಗೇನೋ ಖುಷಿ. ಗಂಡಹೆಂಡತಿಯರಿಗೆ ತಮ್ಮ ಮನದ ತುಡಿತಗಳನ್ನು ಹಂಚಿಕೊಳ್ಳದೆ ನಿರ್ವಾಹವಿಲ್ಲ, ಅತ್ತೆ-ಮಾವಂದಿರಿಗೋ ಮಗಳು, ಅಳಿಯಂದಿರ ಏಕಾಂತವನ್ನು ಒಪ್ಪದೆ ವಿಧಿಯಿಲ್ಲ, ಶಾರದೆಯ ತಮ್ಮನಿಗೋ  ಅಕ್ಕ-ಭಾವರನ್ನು ಛೇಡಿಸದೆ ಸುಮ್ಮನಿರುವುದು ಸಾಧ್ಯವಿಲ್ಲ.

 

            ಲೋಕದಲ್ಲಿ ಒಂದು ಹೆಣ್ಣಿಗೆ ಒಂದು ಗಂಡು. ಎಲ್ಲೋ ಹುಟ್ಟಿ,  ಹೇಗೋ ಸೇರಿಕೊಂಡು, ಮದುವೆಯಾಗಿ; ದಂಪತಿಗಳೆನಿಸಿ, ದಾಂಪತ್ಯದ ಹೊಸ ಹೊಸ ಕನಸುಗಳನ್ನು ಕಟ್ಟಿ, ಪ್ರೀತಿ-ಪ್ರೇಮಗಳ ಹೊಳೆಯಲ್ಲಿ ಓಲಾಡಿ; ಕೃತಾರ್ಥರಾಗುವ, ಜನ್ಮಸಾರ್ಥಕವಾಗಿಸುವ ಬಯಕೆ. ಪ್ರೇಮವೆಂಬುದೇನು? ಮಾತಿಗೂ ಮೀರಿದ ಅಮೃತ! ಪ್ರೀತಿತುಂಬಿದ ಪಿಸುಮಾತು, ಮೃದುಸ್ಪರ್ಶ, ಆಲಿಂಗನ, ಚುಂಬನ ಪ್ರೇಮದಾಟಗಳು ಒಂದೇ ಎರಡೇ? ಸಮಯ ಎಷ್ಟು ಬೇಗ ಕಳೆದುಹೋಗುತ್ತಿದೆಯಲ್ಲ! ಸಮಯ ಸಾಲದೆಂಬ ಅಳಲು.  ಪಿಸುಮಾತುಗಳ, ಮೃದುಸ್ಪರ್ಶ ಚುಂಬನದಮೃತಪಾನದಿಂದ ದುಃಖವೆಂಬುದು ಎಷ್ಟು ಹಗುರ!, ಇನ್ನು ನೋವೆಲ್ಲಿಯದು? ಪ್ರೇಮಲೋಕದ ವಿಹಾರದಲ್ಲಿ ಯಾವ ಅಡೆತಡೆಗಳು, ದುಃಖ-ದುಮ್ಮಾನಗಳು, ಚಿಂತೆ-ನೋವುಗಳು, ಕಷ್ಟ-ಕಾರ್ಪಣ್ಯಗಳು ಇರಲು ಸಾಧ್ಯ?! ಎಲ್ಲವನ್ನೂ ಮರೆಸುವ ಪ್ರೇಮವೆಂಬುದು ಅದೇನು ಹಾಸ್ಯವೇ? ಅದು ಸಂತಸದ ಬುಗ್ಗೆ, ರೋಮಾಂಚನದ ಹೊನಲು.

 

            ನವದಂಪತಿಗಳು ಮನೆಯಲ್ಲಿರಲಿ, ಹೊರಗೆಲ್ಲೋ ವಿಹರಿಸಿಕೊಂಡಿರಲಿ ಅವರ ಚಲನವಲನಗಳ ಮೇಲೆ ಉಳಿದವರಿಗೇಕೋ ಕಳ್ಳಕುತೂಹಲ. ಕೆಟ್ಟ ಬಾಯಿಚಪಲ. ಒಂದಷ್ಟು ಕೀಟಲೆ, ಚುಚ್ಚುಮಾತು. ಸಿಕ್ಕಸಿಕ್ಕವರಲ್ಲಿ ಇವರ ಬಗ್ಗೆ ಒಂದಷ್ಟು ಬಣ್ಣಬಣ್ಣದ ಕಥೆಗಳು. ತಾವೂ ಮದುವೆಯಾದ ಹೊಸತರಲ್ಲಿ ಎಲ್ಲವನ್ನೂ ಎಲ್ಲರನ್ನೂ ಮರೆತು ಸರಸಸಲ್ಲಾಪದಲ್ಲಿ ತೊಡಗಿದ್ದೆವೆಂಬುದು ಏಕೆ ಮರೆತುಹೋಯಿತೋ?!  ಆದರೆ ದಂಪತಿಗಳಿಗೇಕೋ ಹುಚ್ಚುಧೈರ್ಯ, ಯಾರೇನು ನುಡಿದರೇನು? ಊರೇ ಎದ್ದು ಕುಣಿದರೇನು? ಜನರ ಬಾಯಿಯನ್ನು ಮುಚ್ಚಿಸಲಾದೀತೇ?! ಯಾರೋ ಏನೋ ಅನ್ನುತ್ತಾರೆಂದು, ಅನ್ಯರಿಗೆ ಇಷ್ಟವಿಲ್ಲವೆಂದು  ತಮ್ಮ ಹೃದಯದೊಳಗೆ ಪುಟಿಯುವ  ಪ್ರೇಮರಾಗವನ್ನು ಅದುಮಿಡಲಾದೀತೇ? ಅಂತಹ ಪ್ರೇಮರಾಗವೇ ಕಟಕಿಯಾಡುವವರ ವ್ಯರ್ಥಾಲಾಪವನ್ನು ತಡೆದು, ದಾಂಪತ್ಯಕ್ಕೊಂದು ಭದ್ರಬುನಾದಿಯನ್ನು ಹಾಕಿ ತಮ್ಮ ಬದುಕನ್ನು  ಹಸನುಗೊಳಿಸಿದೆಯಲ್ಲ!

 

            ಮದುವೆಯಾದ ಮೊದಲ ದಿನಗಳಲ್ಲಿ ಹೆಂಡತಿಗೋ ಗಂಡನೆಂದರೆ ರಾಮನಂತೆ, ತನ್ನನ್ನು ಬಿಟ್ಟು ಅನ್ಯರನ್ನು ಬಯಸನು.  ಆತನ ಮಾತೆಂದರೆ ರಾಮಬಾಣದಂತೆ. ಹುಸಿಯಾಗದು. ಹೆಂಡತಿಯ ದೃಷ್ಟಿಯಲ್ಲಿ ತಾನು ಆಕೆಗೆ  ರಾಮನಾದರೆ, ತ್ರಾಣ, ಪ್ರಾಣನೆಂದಾದರೆ ಆಕೆಯ ಪ್ರೀತಿ, ಅಭಿಮಾನ, ವಿಶ್ವಾಸ, ಗೌರವಗಳನ್ನು ತಾನು ಉಳಿಸಿಕೊಳ್ಳಬೇಕಲ್ಲ! ತನ್ನ ತೋಳುಗಳಿಂದ ತನ್ನ ರಾಮ(ಗಂಡ)ನ ಕೊರಳನ್ನು ಬಳಸಿಕೊಂಡಾಗ ಹೆಂಡತಿಯೇ ಗಂಡನ ಒಡವೆಯಲ್ಲವೇ?! (ಹಾಗಿಲ್ಲದಿದ್ದರೂ ಹೆಂಡತಿ ಯಾವತ್ತೂ ಗಂಡನೊಡವೆ ತಾನೆ! ಚಿನ್ನ, ರನ್ನ, ಮುತ್ತು ಇನ್ನೂ ಏನೇನೋ!) ಅಲ್ಲಗಳೆಯಲಾದೀತೇ! ದಾಂಪತ್ಯದ ಮೊದಲ ದಿನಗಳೆಂದರೇನು? ಅವೆಲ್ಲವೂ ರೋಮಾಂಚನದ, ವಿವಿಧ ಪ್ರೇಮಚಟುವಟಿಕೆಗಳ, ವಿವಿಧ ಭಾವನೆಗಳ, ವಿವಿಧ ಆಟಗಳ  ಸಂಗಮ-ಸಂಭ್ರಮ. ಈ ಮೊದಲ ಮೋಹದೊಳಗೆ ತನ್ನ ಮನದನ್ನೆ ತನ್ನೊಂದಿಗೆ ಪಗಡೆಯಾಡಬಾರದೇ ?!ಎಂಬ ಹಂಬಲ ಗಂಡನಿಗೆ. ಸೋಲೆಲ್ಲಿದೆ ಈ ಆಟದೊಳಗೆ, ಗೆಲುವಾದರೂ ಎಲ್ಲಿ? ಗೆದ್ದರೂ ಸಂಭ್ರಮ, ಸೋತರೂ ಅಷ್ಟೇ. ಸೋಲಿನಲ್ಲೂ ಗೆದ್ದಷ್ಟೇ ಸಂಭ್ರಮವಿದೆಯಲ್ಲ!(ಹೆಂಡತಿಯೊಂದಿಗೆ ಆಡಿ ಸೋತರೆ ಮಾತ್ರ!) ಆದರೆ ಪಗಡೆಯಾಟದ ಹಂಬಲವೇನೋ ಸಹಜ, ಆದರೆ ಪುರುಸೊತ್ತಾದರೂ ಎಲ್ಲಿದೆ?

 

            ಬದುಕು ಎಂಬುದು ನೆರಳು ಬಿಸಿಲಿನ ಹಾದಿ. ನೆರಳೇ ಬೇಕೆನ್ನಲಾಗದು. ಬಿಸಿಲು ಬೇಡವೆನ್ನಲಾಗದು. ಎರಡೂ ಬೇಕು, ಆಗಲೇ ಸಮರಸ. ಯಾರು ಏನೋ ಅಂದರು ಎಂದುಕೊಂಡು ನಮ್ಮ ಪ್ರೀತಿ- ಪ್ರೇಮ, ಮೋಹ-ಕಾಮಗಳನ್ನು,  ಇಂದಿನ ರೋಮಾಂಚನದ ರಸಕ್ಷಣಗಳನ್ನು, ಅದರ ಖುಷಿಯನ್ನು ನಾಳೆಗೆ ಮುಂದೂಡಲು ಸಾಧ್ಯವೇ? ಬದುಕು ಎಲ್ಲಿಯವರೆಗೆ? ಯಾರ ಬದುಕು ಎಷ್ಟು? ಯಾರಿಗೆ ಗೊತ್ತು? ಮೃತ್ಯುವೆಂಬುದು ಕಳ್ಳಬೆಕ್ಕಿನಂತೆ ಹೊಂಚುತ್ತಿರಬಹುದು. ಯಾರ  ಬದುಕಿನ ಹಾದಿ ಎಲ್ಲಿಗೆ ಕೊನೆಯಾಗುತ್ತದೊ ಯಾರು ಬಲ್ಲರು?! ಇಂದು ಇದ್ದೇವೆ, ನಾಳೆ ಹೀಗೆಯೇ ಇರುತ್ತೇವೆ ಎಂಬ ಭರವಸೆ ಏನು?  ಈ ಯೌವನದ ಸಿರಿ, ಈ ಭರವಸೆ, ಈ ಸ್ಪಂದನಗಳು ಯಾವತ್ತೂ ಇರಲಾರವು. ನಾಳೆಗೆ ಮತ್ತೆ ದೊರಕವು. ಪಾಲಿಗೆ ಬಂದುದನ್ನು ಕ್ಲಪ್ತಸಮಯದಲ್ಲಿ ಮನಸಾ ಸ್ವೀಕರಿಸಿ  ಬದುಕಿನ ರಸಕ್ಷಣಗಳನ್ನು ಸವಿಯಬೇಕಲ್ಲದೆ, ತಿಳಿಗೇಡಿತನದಿಂದ ತಿರಸ್ಕರಿಸಿ  ಕಳೆದುಕೊಳ್ಳುವುದರಲ್ಲಿ ಯಾವ ಪುರುಷಾರ್ಥವಿದೆ?

 

 

            ನಿನ್ನೆ ಕಳೆದಿದೆ. ಇಂದು ನಮ್ಮದೇ, ನಾಳೆ ಇದೆಯೋ ಗೊತ್ತಿಲ್ಲ. ಭವಿಷ್ಯದಲ್ಲಿ ನಮ್ಮ ಹಿಡಿತವಿಲ್ಲ. ಹಾಗಾಗಿ ಪ್ರೀತಿ-ಪ್ರೇಮಗಳನ್ನು, ಮೋಹ-ಕಾಮಗಳನ್ನು ಮನಸ್ಸಿನಲ್ಲಿಯೇ ಅದುಮಿಟ್ಟುಕೊಂಡರೇನು ಫಲ? ಅವುಗಳನ್ನು ಪರಸ್ಪರ ವಿನಿಮಯಮಾಡಿಕೊಳ್ಳದಿದ್ದರೆ? ತನ್ನ ಶಾರದೆಯನ್ನು, ”ನನ್ನ ಹುಡುಗಿ, ನನ್ನ ನಲ್ಲೆ, ನನ್ನ ಹೆಂಡತಿ, ನನ್ನ ಮನದನ್ನೆ” ಎಂದು ಮುಂತಾಗಿ ಪ್ರೀತಿಯಿಂದ ಕರೆದು ಆಕೆಯನ್ನು ಮುದಗೊಳಿಸಿ ತಾನು ಮುದಗೊಳ್ಳದಿದ್ದರೆ; ಆಕೆಯ ಮುಡಿತುಂಬ ಮಲ್ಲಿಗೆಯನ್ನು ಮುಡಿಸಿ ಆಕೆಯನ್ನು ಖುಶಿಪಡಿಸಿ, ತಾನು ಖುಷಿಪಡದಿದ್ದರೆ; ಬರಸೆಳೆದು ಆಲಿಂಗಿಸಿ ಕೆನ್ನೆತುಂಬ ಮುತ್ತಿನೊಡವೆಯ ತೊಡಿಸಿ, ತಾನೂ ತೊಡಿಸಿಕೊಳ್ಳದಿದ್ದರೆ; ತನ್ನ ಪ್ರೇಮಚೇಷ್ಟೆಗಳಿಂದ ಆಕೆಯನ್ನು ರೋಮಾಂಚನಗೊಳಿಸಿ, ತಾನೂ ರೋಮಾಂಚನಗೊಳ್ಳದಿದ್ದರೆ  ದಾಂಪತ್ಯಕ್ಕೆ ಅರ್ಥವಾದರೂ ಏನಿದೆ?! ಸಾರ್ಥಕ್ಯವಾದರೂ ಎಲ್ಲಿದೆ?! ಯಾರಿಗಾಗಿಯೋ ತಮ್ಮ ಸಂಸಾರ ಅಲ್ಲವಲ್ಲ! ಎಲ್ಲವೂ ತಮ್ಮಿಬ್ಬರಿಗಾಗಿ, ತಮ್ಮ ಹಿತಕ್ಕಾಗಿ, ತಮ್ಮ ಸುಖಕ್ಕಾಗಿ. ತಮ್ಮ ಬಗೆಗಿನ ಅನ್ಯರ ಮಾತು, ಟೀಕೆ, ನಗು, ಕೀಟಲೆ, ಅವಹೇಳನಗಳು ದಂಪತಿಗಳ ಪ್ರೇಮಪ್ರವಾಹದ ಭೋರ್ಗರೆತವನ್ನು, ಅದರ ವೇಗೋತ್ಕರ್ಷವನ್ನು ತಡೆದೀತಾದರೂ ಹೇಗೆ?!  ಹಾಗಾಗಿ ಗಂಡ ಪ್ರೀತಿಯಿಂದ  ಹೆಂಡತಿಯನ್ನು “ಬಾರೆ ನನ್ನ ಶಾರದೆ, ಬಾರೆ ಅತ್ತ ನೋಡದೆ” ಎಂದು ಧೈರ್ಯತುಂಬಿದ ಪ್ರೀತಿಯಿಂದ, ಮೋಹದಿಂದ ಕರೆಯುವುದರಲ್ಲಿ ಅದೇನು ಸೊಗಸು! ಅದೇನು ಲವಲವಿಕೆ! ಅದೇನು ಹುಮ್ಮಸ್ಸು! ಅದೇನು ರೋಮಾಂಚನ!

 

            ಪರಸ್ಪರ ಅರ್ಥೈಸುವ, ಸ್ವಾರ್ಥವಿಲ್ಲದೆ ಮುಕ್ತಮನಸ್ಸಿನಿಂದ ಕೊಟ್ಟು ಪಡೆಯುವ, ಪಾಲಿಗೆ ಬಂದುದನ್ನು ಮನಃಪೂರ್ವಕ ಸ್ವೀಕರಿಸುವ, ಬದುಕಿಗೊಂದು ಹೊಸ ಅರ್ಥನೀಡುವ, ಆರಕ್ಕೇರದ ಮೂರಕ್ಕಿಳಿಯದ ಸಮಪಾಲು-ಸಮಬಾಳೇ  ನಿತ್ಯನೂತನ ಹಾಗೂ ನವನವೀನ  ದಾಂಪತ್ಯವಲ್ಲದೆ ಇನ್ನೇನು?! ಇದೇ ತಾನೆ ಹೊಂದಾಣಿಕೆಯ, ಅನ್ಯೋನ್ಯತೆಯ, ಸಮರಸದ ಬಾಳು!

 

            ಈ ದಾಂಪತ್ಯಗೀತೆ ನವದಂಪತಿಗಳ ಪ್ರೀತಿ, ಪ್ರೇಮ, ಮೋಹ, ಕಾಮಗಳನ್ನು ಒಂದು ಆರೋಗ್ಯಪೂರ್ಣ ನೆಲೆಗಟ್ಟಿನಲ್ಲಿ ನಿರೂಪಿಸುತ್ತದೆ. ಕವನದಲ್ಲಿ  ಕವಿ ಬಳಸಿರುವ ಪದಬಂಧವೂ ಉದ್ದೇಶಿತ ಭಾವವನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದೆ. ಛಂದೋಬಂಧವೂ ಭಾವಕ್ಕೆ ಅತ್ಯಂತ ಪ್ರಶಸ್ತವಾಗಿರುವುದರಿಂದ ಮತ್ತು ಅದು ಕುಣಿದು ಕುಣಿದು ಓಡುವ ನಡೆಯನ್ನು ಹೊಂದಿರುವುದರಿಂದ ಸಹೃದಯರನ್ನು ಅದು ಮತ್ತೆ ಮತ್ತೆ ಸೆಳೆದು  ರೋಮಾಂಚನಗೊಳಿಸುತ್ತದೆ. ಇಲ್ಲಿನ ಪ್ರೇಮ ನಿತ್ಯನೂತನವಾಗಿ ಕಂಗೊಳಿಸುತ್ತದೆ. ಲವಲವಿಕೆ ಮೂಡಿಸುತ್ತದೆ. ಮುದನೀಡುತ್ತದೆ. ಕನ್ನಡದಲ್ಲಿ ರಚನೆಯಾದ ಕೆಲವೇ ಕಲವು ಆದರ್ಶ ಹಾಗೂ ಲವಲವಿಕೆಯ ದಾಂಪತ್ಯಗೀತೆಗಳಲ್ಲಿ ಇದೂ ಒಂದು. ಈ ದಾಂಪತ್ಯಗೀತೆ ಆಧುನಿಕಕಾಲದ ದಾಂಪತ್ಯದ ಪರಾಮರ್ಶೆಗೊಂದು ಆರೋಗ್ಯಪೂರ್ಣ ವೇದಿಕೆಯಾಗಲಾರದೆ?!

ಈ ದಾಂಪತ್ಯ ಗೀತೆಯನ್ನು ಸಂಗೀತದ ಹಿನ್ನೆಲೆಯಲ್ಲಿ ಕೇಳಿ, ಆನಂದಿಸಿ. 🙏

***

6 thoughts on “ಬಾರೆ, ನನ್ನ ಶಾರದೆ!

  1. ಒಂದು ಪದ್ಯವನ್ನು ನೋಡಬೇಕಾದ ಆಯಾಮಗಳನ್ನು ಅದ್ಭುತವಾಗಿ ತಿಳಿಸಿದ್ದೀರಿ. ನಿಜಕ್ಕೂ ಅಧ್ಯಾಪಕರಿಗೆ ಉಪಯುಕ್ತವಾದ ಮಾಹಿತಿ.. ನಿಮಗೆ ಅಭಿನಂದನೆಗಳು…

    1. ತಮ್ಮ ಮೆಚ್ಚುಗೆಯ ಅಭಿಪ್ರಾಯಗಳಿಗೆ ಕೃತಜ್ಞತೆಗಳು.ಇಲ್ಲಿನ ಬರಹಗಳು ವಿವಿಧ ವರ್ಗಗಳ ಸಹೃದಯರಿಗೆ ಪೂರಕವಾಗುತ್ತವೆ ಎಂದಾದರೆ ತುಂಬಾ ಸಂತೋಷ. ಉಳಿದ ಬರಹಗಳನ್ನೂ ಓದಿ ತಮ್ಮ ಅನಿಸಿಕೆಗಳನ್ನು ಬರೆಯಿರಿ. ಉಳಿದವರಿಗೂ ಅವು ಪ್ರೇರಣೆಯಾಗಲಿ.🙏

    1. ಧನ್ಯವಾದಗಳು. ನಿಮ್ಮ ಸ್ನೇಹಿತರಿಗೂ ಈ ಬ್ಲಾಗಿನ ಲಿಂಕನ್ನು ಶೇರ್ ಮಾಡಬೇಕಾಗಿ ವಿನಂತಿ.🙏

Leave a Reply

Your email address will not be published. Required fields are marked *