ಸಾಹಿತ್ಯಾನುಸಂಧಾನ

heading1

ಪ್ರಶ್ನೆಗೆ ಉತ್ತರ

      ಇದು ಕೆ.ಎಸ್. ನರಸಿಂಹಸ್ವಾಮಿಯವರ ’ಮೈಸೂರ ಮಲ್ಲಿಗೆ’ ಕವನಸಂಕಲನದಲ್ಲಿನ ಪ್ರಸಿದ್ಧ  ಭಾವಗೀತೆಗಳಲ್ಲಿ  ಒಂದು. ಪ್ರಶ್ನೋತ್ತರ ರೂಪದಲ್ಲಿರುವ ಈ ಭಾವಗೀತೆ  ಗಂಡ-ಹೆಂಡತಿಯರ ನಡುವಿನ ಅವಿನಾಭಾವ ಸಂಬಂಧವನ್ನು  ಬಹಳ ಹೃದಯಸ್ಪರ್ಶಿಯಾಗಿ ನಿರೂಪಿಸುತ್ತದೆ. ಕನಸಿನ ಘಟನೆಯೊಂದನ್ನು ಬಹಳ ಆತ್ಮೀಯವಾಗಿ ರೋಮಾಂಚನಕಾರಿಯಾಗಿ ನಿರೂಪಿಸಬಹುದು ಎಂಬುದನ್ನೂ ತವರೂರು ಹಾಗೂ ಗಂಡನ ಊರಿನ ನಡುವಿನ ಸಮನ್ವಯತೆಯನ್ನೂ  ಕೆ.ಎಸ್. ನರಸಿಂಹಸ್ವಾಮಿಯವರು ಈ ಕವನದಲ್ಲಿ ಸಾಧಿಸಿತೋರಿಸಿದ್ದಾರೆ. ಈ ಸಂಕಲನದ ಇತರ ಗೀತೆಗಳಾದ  ’ಮಾವನ ಮನೆಯಲ್ಲಿ’,  ’ಬಾರೆ ನನ್ನ ಶಾರದೆ’, ’ಬಳೆಗಾರನ ಹಾಡು’ಗಳಂತೆಯೇ ಸಹೃದಯರ ಮನಸೆಳೆಯುವ, ಮುದನೀಡುವ ಗೀತೆ. ಇದರ ನಿತ್ಯನೂತನತೆಗೂ ಯಾವುದೇ ಚ್ಯುತಿಬಂದಿಲ್ಲ.

 

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು

     ಚೆಂದ ನಿನಗಾವುದೆಂದು-

ನಮ್ಮೂರು ಹೊನ್ನೂರೊ, ನಿಮ್ಮೂರು ನವಿಲೂರೊ

     ಚೆಂದ ನಿನಗಾವುದೆಂದು.

 

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ

     ಎಂದೆನ್ನ ಕೇಳಲೇಕೆ?

ನಮ್ಮೂರ ಮಂಚದಲಿ ನಿಮ್ಮೂರ ಕನಸಿದನು

     ವಿಸ್ತರಿಸಿ ಹೇಳಬೇಕೆ?-

 

ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ

     ಎಂದೆನ್ನ ಕೇಳಲೇಕೆ? ಎನ್ನರಸ,

     ಸುಮ್ಮನಿರಿ ಎಂದಳಾಕೆ.

 

ತೌರೂರ ದಾರಿಯಲಿ ತೆಂಗುಗಳು ತಲೆದೂಗಿ

     ಬಾಳೆಗಳು ತೋಳ ಬೇಸಿ:

ಮಲ್ಲಿಗೆಯ ಮೊಗ್ಗುಗಳು ಮುಳ್ಳುಬೇಲಿಯ ವರಿಸಿ

     ಬಳುಕುತಿರೆ ಕಂಪ ಸೂಸಿ;

 

ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು

     ನಿಮ್ಮೂರ ಸಂತೆಗಾಗಿ,

ನವಿಲೂರಿಗಿಂತಲೂ ಹೊನ್ನೂರೆ ಸುಖವೆಂದು

     ನಿಲ್ಲಿಸಿತು ಪ್ರೇಮ ಕೂಗಿ.

 

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ

     ಎಂದೆನ್ನ ಕೇಳಲೇಕೆ? ಎನ್ನರಸ,

     ಸುಮ್ಮನಿರಿ ಎಂದಳಾಕೆ.

 

ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ

     ಓಡಿದುದು ದಾರಿ ಬೇಗ;

ಪುಟ್ಟ ಕಂದನ ಕೇಕೆ ತೊಟ್ಟಿಲನು ತುಂಬಿತ್ತು

     ನಿಮ್ಮೂರ ಸೇರಿದಾಗ.

 

ಊರಬೇಲಿಗೆ ಬಂದು, ನೀವು ನಮ್ಮನು ಕಂಡು

     ಕುಶಲವನು ಕೇಳಿದಾಗ.

ತುಟಿಯಲೇನೋ ನಿಂದು, ಕಣ್ಣಲೇನೋ ಬಂದು

     ಕೆನ್ನೆ ಕೆಂಪಾದುದಾಗ.

 

ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ

     ಎಂದೆನ್ನ ಕೇಳಲೇಕೆ?- ಎನ್ನರಸ,

     ಸುಮ್ಮನಿರಿ, ಎಂದಳಾಕೆ.

 

                               -ಕೆ.ಎಸ್. ನರಸಿಂಹಸ್ವಾಮಿ

 

            ಹೆಂಡತಿಯನ್ನು ಬಾಣಂತನಕ್ಕೆಂದು ತವರಿಗೆ ಕಳುಹಿಸಿದ ಗಂಡನಿಗೆ ಹೆಂಡತಿಯ ಪಿಸುಮಾತು, ಕುಡಿನೋಟ, ಆಲಿಂಗನ, ಮುದ್ದಾಟಗಳ ಸವಿನೆನಪಲ್ಲಿ ಸದಾ ಒಬ್ಬಂಟಿಯಾಗಿ ಇರಬೇಕಾದ ಅಸಹಾಯಕ ಸ್ಥಿತಿ. ತನ್ನನ್ನು ಅಗಲಿ ನಾಲ್ಕೈದು ತಿಂಗಳ ಕಾಲ ತವರಲ್ಲಿ ಕಳೆದು ಮುದ್ದಾದ ಮಗುವಿನೊಂದಿಗೆ ಮತ್ತೆ ಮನೆಗೆ ಬಂದಾಗ ಗಂಡನಿಗೆ ಮನಸ್ಸಿನ ಬೇಸರ ಕಳೆದು ಸಂಭ್ರಮವೋ ಸಂಭ್ರಮ. ಮತ್ತೆ ಬಾಳಿಗೊಂದು ಹೊಸ ಅರ್ಥ. ಹಿಂದೆ ಹೆಂಡತಿಯೊಬ್ಬಳೇ. ಆದರೆ ಇಂದು ಅವಳ ಜೊತೆ ಪುಟ್ಟ ಮಗುವೊಂದಿದೆಯಲ್ಲ! ತಮ್ಮಿಬ್ಬರ ಪ್ರತಿರೂಪ. ಹೆಂಡತಿಯನ್ನು ಓಲೈಸಿ, ಮಗುವನ್ನು ಮುದ್ದಿಸಿ ಸಮಾಧಾನಪಡಿಸಿ ಮಲಗಿಸಿದ ಮೇಲೆ ಗಂಡನಿಗೇಕೋ ಮನಸ್ಸಿನಲ್ಲಿ ತುಂಟಪ್ರಶ್ನೆ, “ಹೆಂಡತಿ ತನ್ನನ್ನಗಲಿ ನಾಲ್ಕೈದು ತಿಂಗಳು ತವರಲ್ಲಿಯೇ ಇದ್ದಳಲ್ಲ! ಆಕೆಗೆ ತನ್ನೂರಿಗಿಂತ ತವರೂರೇ ಹೆಚ್ಚು ಚೆಂದವಾಗಿ ಕಂಡಿರಬಹುದೇ?!” ಎಂದು. ಹೆಂಡತಿಗೋ ಆಗಲೇ ನಿದ್ದೆಹತ್ತಿದೆ. ತನಗೋ ಯೋಚಿಸುತ್ತಲೇ  ನಿದ್ದೆಯ ಮಂಪು. ಯೋಚನೆ ಕನಸಾಗಿ ಟಿಸಿಲೊಡೆಯಿತು.  

            ಮಲಗಿದ್ದ ಗಂಡ ಕನಸಿನಲ್ಲಿ ಹೆಂಡತಿಯೊಂದಿಗೆ ಪ್ರೇಮಚರ್ಚೆಯಲ್ಲಿ ತೊಡಗುತ್ತಾನೆ. “ನಿನಗೆ ಯಾವ ಊರು ಚೆಂದ? ನಮ್ಮೂರು ಹೊನ್ನೂರೊ? ನಿಮ್ಮೂರು ನವಿಲೂರೊ?” ಇದು ಗಂಡನ ಪ್ರಶ್ನೆ. ಏನಿದು ಕೇಳುವಂತಹ ಪ್ರಶ್ನೆಯೇ ಎಂದೆನಿಸಿತೇನೋ ಹೆಂಡತಿಗೆ. ಮದುವೆಯಾಗಿ ಯಾವತ್ತೂ ಕೇಳದ ಪ್ರಶ್ನೆ, ತಮ್ಮ ಅದುವರೆಗಿನ ಮಧುರದಾಂಪತ್ಯದಲ್ಲಿ ಉದ್ಭವಿಸದ ಪ್ರಶ್ನೆ ಇಂದೇಕೋ ಹುಟ್ಟಿಕೊಂಡಿದೆಯಲ್ಲ! ಒಂದು ಹುಟ್ಟಿ ಬೆಳೆದ ಊರು, ಇನ್ನೊಂದು ಮದುವೆಯಾಗಿ ಬಂದು ಸೇರಿದ ಊರು. ಯಾವುದು ಚೆಂದ? ಯಾವುದೆಂದು ಹೇಳಲಿ? ಹೇಗೆ ಹೇಳಲಿ? ಸಾಧ್ಯವೇ? ಹುಟ್ಟಿ ಬೆಳೆದ ನವಿಲೂರನ್ನು ಚೆಂದ ಎಂದರೆ ಗಂಡನಿಗೆ ಬೇಸರ, ಗಂಡನ ಊರೇ ಚೆಂದ ಎಂದರೆ ಹೆತ್ತ ಊರನ್ನು ಕಡೆಗಣಿಸಿದಂತೆ. ಅವಳೋ ಮಹಾ ಜಾಣೆ. ಬಾಣಂತನಕ್ಕೆಂದು ತವರಿಗೆ ಹೋದವಳು ತವರುಮನೆಯ ಮಂಚದಲ್ಲಿ ಮಲಗಿದ್ದರೂ ತನ್ನ ಗಂಡನ, ತನ್ನರಸನ ಹಾಗೂ ಆತನ ಊರಿನದ್ದೇ ಕನಸು ಕಂಡವಳು. ಈಗ ಅದೆಲ್ಲವನ್ನು ವಿಸ್ತರಿಸಿ ಹೇಳುವ ಅಗತ್ಯವಿದೆಯೇ? “ಎನ್ನರಸ ಸುಮ್ಮನಿರಿ” ಎಂದು ಪ್ರೀತಿಯಿಂದಲೇ ಗಂಡನನ್ನು ತಡೆದು ತನ್ನ ನವಿಲೂರನ್ನು ಅವಗಣಿಸದೆ, ಹೊನ್ನೂರನ್ನು, ಅದರ ವಿಶೇಷತೆಗಳನ್ನು ಒಂದೊಂದಾಗಿ ವಿವರಿಸುತ್ತಾಳೆ.

            ಹೆಂಡತಿಗೆ ನವಿಲೂರೂ ಚೆಂದ, ಹೊನ್ನೂರು ಇನ್ನೂ ಚೆಂದ. ಅದಕ್ಕೆ ಅವಳದ್ದೇ ಕಾರಣಗಳಿವೆ. ನವಿಲೂರಿನ ದಾರಿಯಲ್ಲೆಲ್ಲ ಒಂದಷ್ಟು ತೆಂಗುಗಳು ಬೆಳೆದು ಫಲಭರಿತವಾಗಿ ಗಾಳಿಗೆ ತಲೆದೂಗಿ ಕಣ್ಣಿಗೆ ಹಬ್ಬವಾಗಿವೆ. ಬಾಳೆಗಳು ಹುಲುಸಾಗಿ ಬೆಳೆದು ತೋಳನ್ನು ಬೀಸಿ ದಾರಿಹೋಕರಿಗೆ ಗಾಳಿಬೀಸಿ ತಂಪೆರೆಯುತ್ತವೆ. ದಾರಿಹೋಕರ ಆಯಾಸವೆಲ್ಲವನ್ನೂ ಪರಿಹರಿಸುತ್ತವೆ. ಹಾಗೆಂದು ನವಿಲೂರು ಮಾತ್ರ ಚೆಂದ ಎನ್ನಲಾದೀತೆ? ಸಾಧ್ಯವಿಲ್ಲ. ಏಕೆಂದರೆ ನವಿಲೂರಿನ ಹೆಣ್ಣುಗಳು ಸಂತೆಗೆಂದು ಹೊನ್ನೂರಿಗೇ ನಗುನಗುತ್ತಾ ಬರುತ್ತಾರಲ್ಲ! (ಹಾಗೆ ನಗುನಗುತ್ತಾ ಬರುವುದರ ಹಿಂದೆ ಕಾರಣವೇನಿರಬಹುದು? ಹೊನ್ನೂರಿನ ಚೆಲುವೇ? ಹೊನ್ನೂರಿನ ಹುಡುಗರ ಚೆಲುವೇ? ಹೊನ್ನೂರಿನ ಚೆಲುವರು ತಮ್ಮನ್ನು ನೋಡಿ ಮೆಚ್ಚಲಿ ಎಂದೇ? ಮದುವೆಯಾದರೆ ಹೊನ್ನೂರಿನ ಹುಡುಗನನ್ನೇ ಎಂಬ ಹಂಬಲವೇ? ಮದುವೆಯಾಗಿ ಹೊನ್ನೂರಿಗೇ ಬರಬೇಕೆಂಬ ಮಹದಾಸೆಯೇ?!) ತಾನಾದರೂ ಅಷ್ಟೇ ತಾನೇ? ಹೊನ್ನೂರಿನ ಚೆಲುವನ ಮನದನ್ನೆಯಾಗಿ ಬಂದವಳು. ಮನದನ್ನ ಚೆಂದವೆನಿಸಿ ಇಷ್ಟವಾಗಿರುವಾಗ ಆತನ ಊರು ಹೊನ್ನೂರು ಚೆಂದವೆನಿಸಿ ಇಷ್ಟವಾಗದೇ? ಹಾಗಾಗಿ ನವಿಲೂರಿಗಿಂತ  ಹೊನ್ನೂರೇ ಸುಖವೆಂದು ಆಕೆಯ ಮನಸ್ಸು ಮತ್ತೆಮತ್ತೆ ಕೂಗಿ ಹೇಳುತ್ತದೆ. ತಾನಾದರೂ ಅಷ್ಟೇ ಹೊನ್ನೂರಿನ ’ಚೆಲುವ’ನನ್ನು ಮೆಚ್ಚಿ ಮದುವೆಯಾಗಿ ನವಿಲೂರಿನಿಂದ ಬಂದು ಹೊನ್ನೂರಿನಲ್ಲಿ ಸಂಸಾರಹೂಡಿಲ್ಲವೇ! ದಾಂಪತ್ಯವನ್ನು ಸಾರ್ಥಕಪಡಿಸಿಕೊಂಡಿಲ್ಲವೇ?! ಇಷ್ಟು ಸಾಲದೇ ಹೊನ್ನೂರಿನ ಚೆಂದಕ್ಕೆ ಪುರಾವೆ?!(ಹೊನ್ನೂರಿನವರ ಚೆಂದಕ್ಕೂ).  ಹೀಗಿರುವಾಗ, “ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ ಎಂದು ಕೇಳಿವುದಕ್ಕೇನಿದೆ? ಸುಮ್ಮನಿರಬಾರದೆ ಎನ್ನರಸ” ಎಂಬುದು ಮನದನ್ನೆಯ ಮನದುಂಬಿದ, ಮೆಚ್ಚುಗೆಯ  ಮಾರ್ಮಿಕ ಉತ್ತರ.

            ಬಾಣಂತಿಯನ್ನು ಕರೆತರುವ ಸಂದರ್ಭ, ಗಂಡ ಪ್ರೀತಿಯಿಂದ ನವಿಲೂರಿಗೆ ಕಳುಹಿಸಿದ ಎತ್ತಿನ ಬಂಡಿಯಲ್ಲಿ ಹೆಂಡತಿ ತನ್ನ  ಮಗು ಹಾಗೂ ತಂದೆತಾಯಿಗಳನ್ನು ಕೂಡಿಕೊಂಡು ಊರು ಬಿಟ್ಟಾಗ ಬಂಡಿ ಸಾಗಿದ್ದೇ ತಿಳಿಯಲಿಲ್ಲ, ದಾರಿ ಸವೆದದ್ದೂ ಕೂಡಾ. ಎಲ್ಲವೂ ಹೊನ್ನೂರಿನ ಮೇಲಿನ, ಹೊನ್ನೂರಿನ ಚೆಲುವನ ಮೇಲಿನ ಪ್ರೀತಿ ಮತ್ತು ಅದರ ಸೆಳೆತ ತಾನೆ?! ಬಂಡಿಯಲ್ಲಿ ಪಯಣಿಸಿ ಹೊನ್ನೂರನ್ನು ಸೇರಿದಾಗ ಪುಟ್ಟ ಕಂದನ ಕೇಕೆ ತೊಟ್ಟಿಲನ್ನು ತುಂಬಿತ್ತು. ಮಗುವಿಗೂ ತಿಳಿಯಿತೇನೋ ಅಪ್ಪ ತನ್ನ ಸ್ವಾಗತಕ್ಕೆ ಕಾದಿದ್ದಾನೆ ಎಂದು!  ಗಂಡನಿಗೋ ಹೆಂಡತಿ, ಮಗುವಿನ ಕಾತರ ಅಧಿಕವಾಗಿ ಊರ ಬೇಲಿವರೆಗೂ ಹೋಗಿ ಕುಶಲವನ್ನು ವಿಚಾರಿಸಿದ್ದು. (ಹೆಂಡತಿ, ಮಗುವನ್ನು ಹೊತ್ತು ನವಿಲೂರಿನಿಂದ ಹೊರಟ ಬಂಡಿ ಹೊನ್ನೂರಿನ ಮನೆಯವರೆಗೆ ಬರುವುದಿಲ್ಲವೇ?) ಆದಷ್ಟು ಬೇಗ ಹೆಂಡತಿಯ ಮುದ್ದುಮುಖವನ್ನು ನೋಡುವ, ಕಣ್ಣಲ್ಲೇ ಆಕೆಯನ್ನು ರಮಿಸುವ, ಪ್ರೀತಿಯಿಂದ ಮಾತಾಡಿಸುವ, ಆಕೆಯ ಮಾತುಗಳನ್ನು ಕೇಳುವ, ತಮ್ಮಿಬ್ಬರ ದಾಂಪತ್ಯದ ಕುರುಹಾದ ಹಸುಳೆಮಗುವಿನಲ್ಲಿ ತಮ್ಮಿಬ್ಬರ ಚಹರೆಗಳನ್ನು ಹುಡುಕುವ ಅಸೆ, ಅತಿಯಾಸೆ, ಮಹದಾಸೆ. ಹೇಗೆ ತಡೆಯಲಾದೀತು?!

             ಆಕೆಗೇನು ಹಂಬಲ ಕಡಿಮೆಯೇ? ಬಿಟ್ಟು ಅಗಲಿದ್ದಳಲ್ಲ ನಾಲ್ಕಾರು ತಿಂಗಳು. ತನ್ನ ಮನದನ್ನನ ಆತುರ, ಕಾತರ, ಹಂಬಲ, ಪ್ರೀತಿತುಂಬಿದ ನೋಟ ಮೊದಲಾದವುಗಳನ್ನು ಕಂಡು   ಹೆಂಡತಿಗೋ ತುಟಿ ಕಂಪಿಸಿತು. ಮಾತು ಹೊರಬೀಳಲಿಲ್ಲ, ಸಂತಸ ಉದ್ವೇಗಗಳು ಒಟ್ಟಾಗಿ ಕಣ್ಣುಗಳು ತುಂಬಿದವು. ಮಾತಾಡದೆ, ನೋಡದೆ, ಆಲಿಂಗಿಸದೆ, ಮುದ್ದಾಡದೆ, ರಮಿಸದೆ, ಬೆರೆಯದೆ  ದಿನಗಳೆ ಯುಗಗಳಾದ್ದುವಲ್ಲ?! ಹಳೆಯ ರಸನಿಮಿಷಗಳು ಮರುಕೊಳಿಸಿ  ತನ್ನ ಕೆನ್ನೆಗಳು ಕೆಂಪಗಾಗಿದ್ದವಲ್ಲ! ಮುಖದಲ್ಲಿ ಸಂತೃಪ್ತಿ ತುಂಬಿದ ನಾಚಿಕೆಗಳು ಚಿಮ್ಮಿದ್ದುವಲ್ಲ! ಉಳಿದವರಿಗೆ ಹೋಗಲಿ, ಗಂಡನಿಗೆ ತಿಳಿಯಲಾರದೆ? ಅರ್ಥವಾಗಲಾರದೆ? ಹೋಗಲಿ, ಹೊನ್ನೂರೆ ಚೆಂದವೆಂಬುದಕ್ಕೆ ಇನ್ನೂ ಬೇರೆ ಪುರಾವೆಗಳು ಬೇಕೆ? ತನ್ನ ಸ್ಥಿತಿಗತಿಗಳನ್ನು ನೋಡಿದರೆ ಸಾಲದೆ? “ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ ಎಂದು ತನ್ನನ್ನು ಕೇಳಬೇಕೇನು? ಎನ್ನರಸ ಸುಮ್ಮನಿರಿ” ಎಂಬುದು ಹೆಂಡತಿಯ ಒಲವು ಉದ್ವೇಗಗಳ ಭಾವನಾತ್ಮಕ ಉತ್ತರ. ಹೆಂಡತಿಯ ಮನದಾಳದ ಒಲವಿನ ಉತ್ತರ ಗಂಡನಿಗೆ ಲಾಲಿಯಾಯಿತೇನೋ! ಮುಂದೇನಾಯಿತು?!  ಕವಿ ಹೇಳಿಲ್ಲ. ನಾವೂ ಕೇಳಬೇಕಾಗಿಲ್ಲ. ಅರ್ಥವಾಗದೇ?!

            ಗಂಡನ ಒಂದು ಪ್ರಶ್ನೆಗೆ ಹೆಂಡತಿಯದೋ ಪ್ರೀತಿ, ವಿಶ್ವಾಸ ತುಂಬಿದ ಸಾಲು ಸಾಲು ಉತ್ತರ. ಗಂಡ-ಹೆಂಡತಿಯರು, ಅವರಿಬ್ಬರ ಆಶೋತ್ತರಗಳು ಸಮಾನವಾಗಿರುವಾಗ ಅವರ  ಊರುಗಳೆರಡೂ ಚೆಂದವಾಗಿ, ಸಮಾನವಾಗಿ, ಸೊಗಸಾಗಿ, ಹಿತವಾಗಿ ಇರಲಾರವೇ? ಗಂಡನ ಪ್ರಶ್ನೆಗೆ ಹೆಂಡತಿ ಮುನಿಯಲಿಲ್ಲ. ತನ್ನೂರು ನವಿಲೂರೇ ಚೆಂದ ಎನ್ನಲಿಲ್ಲ. ಆಕೆಗೆ ತನ್ನ ತವರೂರಾದ ನವಿಲೂರು ಎಷ್ಟು ಚೆಂದವೋ ಗಂಡನ ಊರಾದ ಹೊನ್ನೂರು ಅದಕ್ಕಿಂತಲೂ ಚೆಂದ. ಬಾಳಿಗೊಂದು ಅರ್ಥಕೊಟ್ಟಿದ್ದು, ದಾಂಪತ್ಯಕ್ಕೆ ಇಂಬು ನೀಡಿದ್ದು, ಸಾರ್ಥಕತೆಯನ್ನೊದಗಿಸಿದ್ದು ಹೊನ್ನೂರು ತಾನೇ? ಹೇಗೆ ಮರೆತಾಳು? ಆಕೆ ಗಂಡನಿಗೆ, “ನನ್ನವಳು”. ತನ್ನ ಉಸಿರಾಗಿರುವವಳು, ತನ್ನ ಬಾಳಿನಲ್ಲಿ ಹಸುರಾಗಿರುವವಳು. ಹಾಗೆಯೇ ಆತ ಹೆಂಡತಿಗೆ, “ಎನ್ನರಸ”. ತನ್ನನ್ನಾಳುವವನು. ಅಧಿಕಾರದಿಂದಲ್ಲ, ಪ್ರೀತಿ-ಪ್ರೇಮಗಳಿಂದ, ಒಲವಿನಿಂದ.  ಈ ಮಾತುಗಳಲ್ಲಿ ಅದೇನೋ ಮಮಕಾರ, ಪ್ರೀತಿ, ಪ್ರೇಮಗಳೇ ತುಂಬಿವೆಯಲ್ಲ! ಇಬ್ಬರೂ ಪರಸ್ಪರರಿಗೆ ಸ್ಫೂರ್ತಿಯಾಗಿದ್ದಾರಲ್ಲ! ಉತ್ಸಾಹದ ಚಿಲುಮೆಯಾಗಿದ್ದಾರಲ್ಲ! ನಿಸ್ವಾರ್ಥಮಯ ಪ್ರೇಮದಾಂಪತ್ಯವೆಂದರೆ ಇದೇ ತಾನೆ?! ಪರಸ್ಪರ ಅರ್ಥೈಸುವಿಕೆ ಹಾಗೂ ಹೊಂದಾಣಿಕೆಗಳೇ ಈ ಮಧುರದಾಂಪತ್ಯದ ಒಳಗುಟ್ಟು, ಅಲ್ಲದೆ ಇನ್ನೇನು?

            ಈ ಗೀತೆ ಕನಸಿನಿಂದ ಪ್ರಾರಂಭವಾಗುವುದಾದರೂ ಕೊನೆಯಲ್ಲಿ ಎಲ್ಲಿಯೂ ಕನಸೊಡೆದುದನ್ನು ಕವಿ ಉಲ್ಲೇಖಿಸದೆ, ಕಸನು ನನಸಾಯಿತು ಎಂಬರ್ಥದಲ್ಲಿ ಕೊನೆಗೊಳಿಸಿದ್ದಾರೆ. ಅವರ ಇತರ ಕವನಗಳಾದ ’ಬಾರೆ ನನ್ನ ಶಾರದೆ’, ’ಹೂವಿನ ಚೆಂದಮ್ಮ’ಗಳ ಹಾಗೆ ಗಂಡ ಹೆಂಡತಿಯರ ಪ್ರೇಮಚಟುವಟಿಕೆಗಳನ್ನು ಎಲ್ಲಿಯೂ ಉಲ್ಲೇಖಿಸದೆ ಅವುಗಳೆಲ್ಲವನ್ನೂ ಹೆಂಡತಿಯ ಉತ್ತರದಲ್ಲಿ ಪರೋಕ್ಷವಾಗಿ ನಿರೂಪಿಸಿರುವುದು ಅರ್ಥಪೂರ್ಣವಾಗಿದೆ. ಪ್ರತ್ಯಕ್ಷದಂತೆ ಪರೋಕ್ಷವೂ ಬಹಳ ಅರ್ಥಪೂರ್ಣ ಹಾಗೂ ಪರಿಣಾಮಕಾರಿಯಾಗಿ ಇರುತ್ತದೆ ಎಂಬುದನ್ನು ಈ ಗೀತೆಯ ಮೂಲಕ ಅರ್ಥೈಸುವುದಕ್ಕೆ ಪ್ರಯತ್ನಿಸಿದ್ದಾರೆ. ಇಲ್ಲಿನ ಪದಪ್ರಯೋಗ ಹಾಗೂ ಛಂದಸ್ಸುಗಳು ಕವಿಯ ಉದ್ದೇಶಿತ ಅರ್ಥವನ್ನು ಸಮರ್ಥವಾಗಿ ಪ್ರತಿಬಿಂಬಿಸಿವೆ. ಹಾಗೂ ಅವುಗಳಿಂದ  ಗೀತೆಗೊಂದು ಲಯ ಪ್ರಾಪ್ತವಾಗಿದ್ದು, ಹಾಡಿಗೆ ಪೂರಕವಾಗಿ ಮತ್ತೆ ಮತ್ತೆ ಸಹೃದಯರನ್ನು ಸೆಳೆದು ರೋಮಾಂಚನಗೊಳಿಸುತ್ತದೆ. ಈ ಗೀತೆ ರಚನೆಯಾಗಿ ಎಂಬತ್ತು ವರ್ಷಗಳು ಸಂದರೂ ಇಂದಿಗೂ ಚಿರಯೌವನದಿಂದ ಕಂಗೊಳಿಸುತ್ತಿದೆ, ಮನಸೂರೆಗೊಳಿಸುತ್ತಿದೆ, ನವದಂಪತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ.  ನಿಷ್ಕಲ್ಮಷವಾದ   ಪ್ರೀತಿ, ಪ್ರೇಮಗಳು ಯಾವತ್ತೂ ನಿತ್ಯನೂತನ ತಾನೆ?!

ಈ ದಾಂಪತ್ಯಗೀತೆಯನ್ನು ಸಂಗೀತದ ಹಿನ್ನೆಲೆಯಲ್ಲಿ ಕೇಳಿ ಆನಂದಿಸಿ 🙏

 

***

9 thoughts on “ಪ್ರಶ್ನೆಗೆ ಉತ್ತರ

  1. ಅಮರ -ಮಧುರ ಭಾವಗೀತೆಯನ್ನು ಮತ್ತೆ ಮೆಲುಕುಹಾಕುವಂತೆ ಮಾಡಿದ್ದಕ್ಕೆ ಧನ್ಯವಾದಗಳು ಸರ್

    1. ಅರ್ಥ ಹಾಗೂ ಭಾವ ಪ್ರಧಾನವಾದ ಇಂತಹ ಭಾವಗೀತೆಗಳು ಯಾವತ್ತೂ ಅಮರ ಹಾಗೂ ಮಧುರ. ಇಂತಹ ನಿತ್ಯನೂತನ ಭಾವಗೀತೆ (ದಾಂಪತ್ಯಗೀತೆಯೂ ಹೌದು)ಯನ್ನು ರಚಿಸಿ ನಿರಂತರ ರೋಮಾಂಚನಗೊಳಿಸುತ್ತಿರುವ ಕವಿ ಕೆ.ಎಸ್. ನರಸಿಂಹಸ್ವಾಮಿಯವರು ಪ್ರಾತಃ ಸ್ಮರಣೀಯರು ಅಲ್ವೇ!
      ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು 🙏

  2. ಗಂಡ ಹೆಂಡಿರ ಪ್ರೇಮವನ್ನು ಬಹಳ ಸುಂದರವಾಗಿ ತಮ್ಮ ದಾಂಪತ್ಯ ಗೀತೆಗಳ ಮೂಲಕ ಜನರಿಗೆ ತಿಳಿಯಪಡಿಸುವಂತೆ ಮಾಡುವ ಕಲೆ ಬಹುಶಃ ಕೆ. ಎಸ್ ನರಸಿಂಹಸ್ವಾಮಿಯವರಿಗೆ ಮಾತ್ರ ಸಿದ್ಧಿಸಿದೆ ಎಂದು ಹೇಳಿದರೆ ಅದು ಅತಿಶಯೋಕ್ತಿ ಆಗಲಾರದು. ಕವಿಯ ಎಷ್ಟೋ ಗೀತೆಗಳಲ್ಲಿ ಮುಖ್ಯವಾಗಿ ಈ ಗೀತೆ ಗಂಡ ಹೆಂಡತಿಯ ನಡುವಿನ ನಿಜವಾದ ಪ್ರೇಮ ಮತ್ತು ನಿಷ್ಕಲ್ಮಶ ಪ್ರೀತಿಯನ್ನು ತೆರೆದಿಡುವಂತಹ ಪ್ರಯತ್ನ ಮಾಡಿದೆ ಎಂದರೆ ತಪ್ಪಾಗಲಾರದೇನೋ! ಮದುವೆ ಎಂಬುದು ಜೀವನದ ಒಂದು ಅತ್ಯಮೂಲ್ಯ ಘಟ್ಟ. ಮದುವೆ ಆದ ಮೇಲೆ ಎರಡು ಅಪರಿಚಿತ ಜೀವಗಳು ಒಂದೇ ಬದುಕಿನ ಪಯಣಕ್ಕೆ ಸಿದ್ಧವಾಗುತ್ತದೆ. ಪ್ರೀತಿ ಎಂಬ ಅಡಿಪಾಯದ ಮೇಲೆ ನಿಂತಿರುವ ದಾಂಪತ್ಯವೆಂಬ ಮನೆ ಗಟ್ಟಿಯಾಗಬೇಕೆಂದರೆ ಅದಕ್ಕೆ ಮುದ್ದು ಕಂದಮ್ಮನ ಆಗಮನವಾಗಬೇಕು. ತಮ್ಮದೇ ಪ್ರತಿರೂಪ ಹೊತ್ತು ಬರುವ ಮಗುವನ್ನು ಸ್ವಾಗತಿಸಲು ಗಂಡ ಹೆಂಡತಿ ಇಬ್ಬರಿಗೂ ಉತ್ಸಾಹವೇ ಆದರೆ ಇವೆಲ್ಲವುದರ ಮಧ್ಯದಲ್ಲಿ ಒಂದು ಸವಿಯಾದ ವಿರಹ ಇಬ್ಬರನ್ನೂ ಕಾಡುವುದು ಸಹಜವೇ… ಈ ದೂರದ ಕಹಿ ಅನುಭವವನ್ನು ಗಂಡ ಎಷ್ಟು ಅನುಭವಿಸಿದ್ದಾನೋ , ತನ್ನ ಹೆಂಡತಿ ಕೂಡ ಅಷ್ಟೇ ಅನುಭವಿಸಿದ್ದಾಳೆಯೇ ಎಂಬುದು ಕವಿಯ ಕುತೂಹಲ. ತನ್ನ ಹೆಂಡತಿಯ ಪ್ರೀತಿಯ ಬಗ್ಗೆ ಗೊತ್ತಿದ್ದರೂ ಕೂಡ ಗಂಡನಿಗೆ ಆ ಹಂಬಲದ ಮಾತುಗಳನ್ನು ತನ್ನ ಮಡದಿಯ ಬಾಯಿಯಿಂದಲೇ ಕೇಳುವ ಆಸೆ. ಆದರೆ ಅದನ್ನು ಪ್ರತ್ಯಕ್ಷವಾಗಿ ಕೇಳದೆ ಪರೋಕ್ಷವಾಗಿ ಕೇಳುತ್ತಾ ತನ್ನ ಮಡದಿಯ ಮನದ ಭಾವನೆಗಳನ್ನು ಅರಿಯುವ ಪ್ರಯತ್ನ ಮಾಡುತ್ತಾರೆ. ಆ ಹೆಂಡತಿಯೋ ಬಲು ಚತುರೆ! ಗಂಡ ಹೇಗೆ ತನ್ನನ್ನು ಪರೋಕ್ಷವಾಗಿ ಮನದ ಮಾತುಗಳನ್ನು ಕೇಳುವ ಸಲುವಾಗಿ ಪ್ರಶ್ನೆ ಮಾಡಿದರೋ, ಅಷ್ಟೇ ಪರೋಕ್ಷವಾಗಿ ಮತ್ತು ಗಂಡನ ಮನ ಮುಟ್ಟುವಂತೆ ಉತ್ತರಿಸುತ್ತಾರೆ ಕವಿಯ ಪತ್ನಿ..
    ಒಂದು ಹೆಣ್ಣಿಗೆ ಗಂಡನ ಮನೆ ಎಷ್ಟು ಪ್ರಿಯವೋ , ತವರು ಮನೆ ಕೂಡ ಅಷ್ಟೇ ಪ್ರಿಯ. ತನ್ನ ಆಯಸ್ಸಿನ ಸ್ವಲ್ಪ ಭಾಗವನ್ನು ತವರು ಮನೆಯಲ್ಲಿ ಕಳೆಯುವ ಹೆಣ್ಣು, ತನ್ನುಳಿದ ಸಂಪೂರ್ಣ ಜೀವನವನ್ನು ಗಂಡನೊಂದಿಗೆ ಗಂಡನ ಮನೆಯಲ್ಲಿಯೇ ಕಳೆಯುವಳು.ತನ್ನ ಗಂಡನ ಮನೆ ಅಥವಾ ತನ್ನ ತವರು ಮನೆ ಇವೆರಡರಲ್ಲಿ ಆಕೆಗೆ ಯಾವುದು ಬಲು ಇಷ್ಟ ಎಂದು ಕೇಳಿದರೆ ಆಕೆ ತಾನೇ ಏನು ಹೇಳಿಯಾಳು?! ತಾನು ಏನಾದರೊಂದು ಹೇಳಿ ಆ ಮಾತುಕತೆಯನ್ನು ಅಲ್ಲಿಗೇ ನಿಲ್ಲಿಸಬಹುದಿತ್ತು. ಆದರೆ ಕವಿಯ ಮಡದಿಗೆ ತನ್ನ ಮನದರಸನನ್ನು ಬೇಸರಪಡಿಸಲು ಇಷ್ಟವಿಲ್ಲ. ಹಾಗೆಂದು ತಾನು ಆಡಿ ಬೆಳೆದ ತನ್ನ ತವರೂರಿನ ಬಗೆಗೆ ಪ್ರೀತಿ ಇಲ್ಲ ಎಂದು ಹೇಳುವುದು ಕೂಡ ಕಷ್ಟ..
    ಹಾಗಾಗಿ ಎರಡೂ ಕಡೆಗೂ ಕೂಡ ಸರಿಹೊಂದುವಂತೆ ತನ್ನ ಮಾತುಗಳಿಂದ ಕವಿಯ ಮನವನ್ನು ಮೆಚ್ಚಿಸಿದ್ದಾರೆ ಕವಿಯ ಪತ್ನಿ. ಕನಸಿನಲ್ಲಿ ನಡೆದ ಮಾತುಕತೆಯಾದರೂ ಕೂಡ ಒಬ್ಬ ಪತಿ ತನ್ನ ಪತ್ನಿಯನ್ನು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಂಡಿದ್ದಾನೆ , ಅವಳ ಪ್ರೀತಿಯ ಆಳ ಎಂತದ್ದು ಎಂಬುದನ್ನು ಬಹಳ ಸುಂದರವಾಗಿ ತಿಳಿಸಿದ್ದಾರೆ ಕವಿಗಳು. ಅಷ್ಟೇ ಸರಳವಾಗಿ, ಸುಂದರವಾಗಿ ತಾವು ಕೂಡ ಈ ಗೀತೆಯನ್ನು ವಿವರಿಸಿದ್ದೀರಿ ಸರ್. ಧನ್ಯವಾದಗಳು 😃🙏

    1. “ಪ್ರಶ್ನೆಗೆ ಉತ್ತರ” ಭಾವಗೀತೆಯ ಬಗೆಗಿನ ನನ್ನ ವ್ಯಾಖ್ಯಾನ ಸಹೃದಯರಲ್ಲಿ ಹೊಸ ಆಲೋಚನೆ, ಹೊಸ ತಿಳಿವಳಿಕೆ, ಹೊಸ ಅನುಸಂಧಾನಗಳಿಗೆ ಅನುವು ಮಾಡಿಕೊಡುತ್ತಿರುವುದು ನಿಮ್ಮ ವಿವರಣೆಯಿಂದ ಸ್ಪಷ್ಟವಾಗುತ್ತಿದೆ. ನಿಮ್ಮ ಹಾಗೆ ಎಲ್ಲಾ ಸಹೃದಯರು ಹೊಸ ಅನುಸಂಧಾನಗಳಿಗೆ ತೆರೆದುಕೊಳ್ಳವುದು ಸಾಧ್ಯವಾದರೆ ಅದು ನಾವು ಕವಿಗೆ ನೀಡುವ ಗೌರವ. ಜೊತೆಗೆ ಒಂದು ಆರೋಗ್ಯಪೂರ್ಣವಾದ ಹಾಗೂ ಸಮಾಜ ವಿಮರ್ಶೆಯ ಹೊಸ ಚಿಂತನೆಗಳು ಹುಟ್ಟಿಕೊಳ್ಳಲಿ. ನಿಮ್ಮ ದೀರ್ಘ ಹಾಗೂ ವಿವರವಾದ ಅನಿಸಿಕೆಗಳಿಗೆ ಕೃತಜ್ಞತೆಗಳು. 🙏

  3. ಬಹಳ ಚೆನ್ನಾಗಿ ವಿವರಿಸಿದ್ದೀರಿ, ಸರ್ ಕೆ.ಎಸ್. ನ ರವರ ಮನೆಯಿಂದ ಮನೆಯ ಕುರಿತು ನಿಮ್ಮ ವಿವರಣೆಗೆ ಕಾಯುತ್ತಿರುವೆ

    1. ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಕೃತಜ್ಞತೆಗಳು. ನಿಮ್ಮ ಅಪೇಕ್ಷೆಯಂತೆ (ನನ್ನದೂ ಕೂಡಾ) ‘ಮನೆಯಿಂದ ಮನೆಗೆ’ ಭಾವಗೀತೆಯ ವ್ಯಾಖ್ಯಾನ ಸದ್ಯದಲ್ಲಿಯೇ ಈ ಬ್ಲಾಗಿಗೆ ಸೇರಿಕೊಳ್ಳಲಿದೆ. ನಿರೀಕ್ಷೆಯಲ್ಲಿರಿ. ಈ ಬ್ಲಾಗಿನ
      ಉಳಿದ ಲೇಖನಗಳನ್ನೂ ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡರೆ ಉಳಿದವರಿಗೂ ಪ್ರೇರಣೆ ಸಿಗುತ್ತದೆ.🙏

Leave a Reply

Your email address will not be published. Required fields are marked *