ಸಾಹಿತ್ಯಾನುಸಂಧಾನ

heading1

ಶರಣರ ಬರವು-ನಿಲವು

ಏತ ತಲೆವಾಗಿದರೇನು; ಗುರುಭಕ್ತನಾಗಬಲ್ಲುದೆ?

ಇಕ್ಕುಳ ಕೈಮುಗಿದರೇನು;  ಭೃತ್ಯಾಚಾರಿಯಾಗಬಲ್ಲುದೆ?

ಗಿಳಿಯೋದಿದರೇನು; ಲಿಂಗವೇದಿಯಾಗಬಲ್ಲುದೆ?

ಕೂಡಲಸಂಗನ ಶರಣರು ಬಂದ ಬರವ ನಿಂದ ನಿಲವ

ಅನಂಗಸಂಗಿಗಳೆತ್ತ ಬಲ್ಲರು?

                                                            -ಬಸವಣ್ಣ

                ಮನುಷ್ಯನಾದವನಿಗೆ ಪ್ರತಿಯೊಂದು ಅನುಷ್ಠಾನಗಳಲ್ಲಿಯೂ ಮೂಲಭೂತ ಅರ್ಹತೆಗಳು ಅತ್ಯಗತ್ಯ. ಇತರ ಅರ್ಹತೆಗಳನ್ನು ಯಾರೂ ಹೇಗೂ ಆರ್ಜಿಸಿಕೊಳ್ಳಬಹುದು. ಆದರೆ ಮೂಲಭೂತ ಅರ್ಹತೆಗಳಿಲ್ಲದಿದ್ದರೆ ಇತರ ಅರ್ಹತೆಗಳಿಗೆ ಯಾವ ಬೆಲೆಯೂ ಇರುವುದಿಲ್ಲ. ಅಥವಾ ಇತರ ಎಷ್ಟೇ ಅರ್ಹತೆಗಳನ್ನು ಸಾಧಿಸಿಕೊಂಡರೂ ಅವು ಯಾವ ಪ್ರಯೋಜನಕ್ಕೂ ಬರಲಾರವು. ಹಾಗೆಯೇ ಶರಣನಾಗುವುದಕ್ಕೂ ಶರಣರನ್ನು ಗೌರವಿಸುವುದಕ್ಕೂ ಮೂಲಭೂತ ಅರ್ಹತೆಗಳು ಬೇಕಾಗುತ್ತವೆ. ಲೋಕದಲ್ಲಿ ಹಲವರನ್ನು ಮೆಚ್ಚಿಸುವುದಕ್ಕೆ ಯಾರೋ ಕೆಲವರು ಕೈಗೊಳ್ಳುವ ಡಾಂಭಿಕವರ್ತನೆಗಳನ್ನು ಮೇಲಿನ ವಚನದಲ್ಲಿ  ಮೂರು ದೃಷ್ಟಾಂತಗಳ ಮೂಲಕ ಬಸವಣ್ಣನವರು ವಿಡಂಬಿಸಿದ್ದಾರೆ.

                ‘ಏತ’ವೆಂಬುದು ನೀರನ್ನು ಹಾಯಿಸಲು ಪ್ರಾಚೀನಕಾಲದಿಂದಲೂ ಇತ್ತೀಚಿನ ಕಾಲದವರೆಗೂ ಬಳಕೆಯಲ್ಲಿದ್ದ ಒಂದು ಸಾಧನ. ಬಾವಿ, ನದಿ, ಹೊಳೆ ಅಥವಾ ಕೆರೆಗಳಿಂದ ನೀರನ್ನು ಎತ್ತಲು ಏತಕ್ಕೆ ದೊಡ್ಡಗಾತ್ರದ ವೃತ್ತಾಕಾರದ ಸಾಧನವೊಂದನ್ನು ಜೋಡಿಸುತ್ತಾರೆ. ನೀರನ್ನು ಎತ್ತುವ ವೇಳೆ ಈ ಭಾಗ ಬಾರಿಬಾರಿಗೂ ಕೆಳಗೆ ಬಾಗಿ ಮೇಲಕ್ಕೇರುತ್ತದೆ. ನೋಡುವವರ ದೃಷ್ಟಿಗೆ ಏತ ಬಾರಿಬಾರಿಗೂ ತಾನು ತಲೆಬಾಗಿ ಭೃತ್ಯಾಚಾರಿಯಂತೆ ತೋರಿದರೂ ಅದು ಗುರುಭಕ್ತನೆನಿಸಿಕೊಳ್ಳಲಾರದು. ಏಕೆಂದರೆ ಅದೊಂದು ನಿರ್ಜೀವವಸ್ತು. ನಿಜವಾದ ಗುರುಭಕ್ತ ತನಗಿಂತ ಹಿರಿಯರಿಗೆ, ಶರಣರಿಗೆ, ಗುರುಗಳಿಗೆ ಅವರವರ ಸ್ಥಾನಮಾನಗಳನ್ನು ಅರಿತುಕೊಂಡು ಬಾರಿಬಾರಿಗೂ ತಲೆಬಾಗಿ ತನ್ನ ವಿಧೇಯತೆ, ನಿಷ್ಠೆ, ಗೌರವಗಳನ್ನು ತೋರುತ್ತಾನೆ. ಹಾಗಾಗಿ ಬಾರಿಬಾರಿಗೂ ತಲೆಬಾಗುವ ಏತಕ್ಕೂ ಒಬ್ಬ ಗುರುಭಕ್ತನಿಗೂ ಅಜಗಜಾಂತರವಿದೆ ಎಂಬುದು ಬಸವಣ್ಣನವರ ನಿಲುವು.

                ‘ಇಕ್ಕುಳ’ ಎಂಬುದು ಒಂದು ಕಬ್ಬಿಣದ ಸಾಧನವಾಗಿದ್ದು, ಯಂತ್ರದ ಕೆಲಸದಲ್ಲಿ; ಕಮ್ಮಾರಸಾಲೆಯಲ್ಲಿ; ಅಕ್ಕಸಾಲಿಗರಲ್ಲಿ; ಬಡಗಿಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಅದು ಎಲ್ಲಾ ತರಹದ ಕಾರ್ಯಚಟುವಟಿಕೆಗಳಲ್ಲಿ ಬಾರಿಬಾರಿಗೂ ತನ್ನ ಕೈಗಳನ್ನು ತೆರೆದುಕೊಂಡು ಮುಚ್ಚಿಕೊಳ್ಳುತ್ತದೆ. ಅದನ್ನು ಬಳಸುವ ಪ್ರತಿಯೊಬ್ಬ ಕಾರ್ಯಕುಶಲಿಗಳೂ ಅದರ ಮೂಲಕ ವಿವಿಧ ಕಾರ್ಯಗಳನ್ನು ನೆರವೇರಿಸಿಕೊಳ್ಳುತ್ತಾರೆ. ಅದು ಬಾರಿಬಾರಿಗೂ ಕೈಮುಗಿದಂತೆ ತೋರಿದರೂ ಅದೊಂದು ಭೃತ್ಯಾಚಾರಿ(ಸೇವಕ) ಯಂತೆ ಕಂಡರೂ ಅದು ಭೃತ್ಯಾಚಾರಿಯಾಗಲು ಸಾಧ್ಯವಿಲ್ಲ. ಭೃತ್ಯಾಚಾರಿಗೆ ಕೆಲವೆಲ್ಲ ಮೂಲಭೂತ ಅರ್ಹತೆಗಳಿವೆ. ಆತ ಶರಣರನ್ನು, ಗುರುಗಳನ್ನು, ಹಿರಿಯರನ್ನು ಸದಾ ಅರಿತು ಕೈಮುಗಿದು ಗೌರವಿಸುವವನು. ಭೃತ್ಯಾಚಾರಿಗೂ ಇಕ್ಕುಳಕ್ಕೂ ಸಮಾನತೆ ಸಾಧ್ಯವಿಲ್ಲದ ಮಾತು.

                ‘ಗಿಳಿ’ ಮನುಷ್ಯಭಾಷೆಯನ್ನು ಅನುಕರಿಸಬಲ್ಲ ಪಕ್ಷಿಗಳಲ್ಲಿ ಪ್ರಮುಖವಾಗಿದೆ. ಅದು ಹೇಳಿಕೊಟ್ಟಿದ್ದನ್ನು ಯಥಾವತ್ತಾಗಿ ಅನುಕರಿಸುತ್ತದೆ. ಹೇಳಿಕೊಟ್ಟಿದ್ದಕ್ಕಿಂತ ಹೆಚ್ಚಿನ ಮಾತುಗಳು ಅದಕ್ಕೆ ಬಾರವು. ಅದು ತಾನು ಅನುಕರಿಸಿ ಕಲಿತಿದ್ದನ್ನು ಒಂದೇ ಸಮನೆ ಅಭಿವ್ಯಕ್ತಗೊಳಿಸುತ್ತ ಲಿಂಗವೇದಿಯಂತೆ ತೋರಿದರೂ ಲಿಂಗವೇದಿ(ಲಿಂಗಜ್ಞಾನಿ) ಎನಿಸಿಕೊಳ್ಳಲಾರದು. ಶರಣತತ್ತ್ವವವನ್ನು, ದಾಸೋಹವನ್ನು ಬಲ್ಲವನು; ಗುರುಭಕ್ತನಾದವನು, ಶರಣರನ್ನು ಗೌರವಿಸುವವನು; ಕಾಯಕದ ಮರ್ಮವನ್ನು ತಿಳಿದವನು ಮಾತ್ರ ಲಿಂಗವೇದಿ ಎನಿಸಿಕೊಳ್ಳುತ್ತಾನೆಯೇ ವಿನಾ ಕೇವಲ ಹೇಳಿಕೊಟ್ಟ ಪಾಠವನ್ನು ಒಪ್ಪಿಸುವ ಗಿಳಿಯಲ್ಲ. ಗಿಳಿಗೆ ಅದರದ್ದೇ ಅದ ಕೆಲವು ಇತಿಮಿತಿಗಳಿವೆ. ಹಾಗಾಗಿ ಗಿಳಿಗೂ ಲಿಂಗವೇದಿಗೂ ಹೋಲಿಗೆ ಸಲ್ಲದು.

                ಕೆಲವು ಮಂದಿ ಇತರರನ್ನು ಮೆಚ್ಚಿಸಲು, ತಾವು ಲಿಂಗವೇದಿಗಳೆಂದು ತೋರಿಸಿಕೊಳ್ಳಲು, ದಾಸೋಹವನ್ನು ಏರ್ಪಡಿಸಿ ಶಿವಭಕ್ತನೆನಿಸಿಕೊಳ್ಳಲು, ಭಕ್ತನೆಂದೆನಿಸಿಕೊಳ್ಳಲು ಹಲವು ವೇಷಗಳನ್ನು ತಾಳುತ್ತ, ಬಾಯಿತುಂಬ ಶಿವನಾಮವನ್ನು ಜಪಿಸುತ್ತ, ವಂಚನೆಯನ್ನೇ ಮೈಗೂಡಿಸಿಕೊಂಡು ಓಡಾಡುವ  ಡಾಂಭಿಕರನ್ನು ಬಸವಣ್ಣನವರು ಈ ವಚನದಲ್ಲಿ ವಿಡಂಬಿಸಿದ್ದಾರೆ. ಡಾಂಭಿಕರು ಏತದಂತೆ, ಇಕ್ಕುಳದಂತೆ, ಗಿಳಿಯಂತೆ. ಎಲ್ಲವೂ ಯಾಂತ್ರಿಕವಾದ ಕಾರ್ಯ. ಬಸವಣ್ಣನ ಪ್ರಕಾರ ಇವರು ಅನಂಗಸಂಗಿ(ಕಾಮಾಸಕ್ತ)ಗಳು. ಕೂಡಲಸಂಗನ ಶರಣರು ಬಂದ ಬರವನ್ನು(ಆಗಮನ) ಎದುರಲ್ಲಿ ನಿಂತ ನಿಲುವನ್ನು(ಸ್ಥಿತಿ) ಅರಿಯಲು ಹೇಗೆ ಸಾಧ್ಯ? ಎಂಬುದು ಬಸವಣ್ಣನವರ ಪ್ರಶ್ನೆ. ಗುರುಭಕ್ತನಾದವನಿಗೆ, ಭೃತ್ಯಾಚಾರಿಯಾದವನಿಗೆ, ಲಿಂಗವೇದಿಯಾದವನಿಗೆ ಕೂಡಲಸಂಗನ ಶರಣರು ಬಂದ ಬರವೂ ನಿಂದ ನಿಲವೂ ತಿಳಿಯುತ್ತದೆ. ಆತ ತಲೆಬಾಗುತ್ತಾನೆ, ಕೈಮುಗಿಯುತ್ತಾನೆ, ಶರಣು ಶರಣಾರ್ಥಿ ಎನ್ನುತ್ತಾನೆ. ಇದಕ್ಕೂ ಒಂದು ಮೂಲಭೂತ ಅರ್ಹತೆ ಬೇಕಾಗುತ್ತದೆ ಎಂಬುದು ಬಸವಣ್ಣನವರ ದೃಢನಿಲುವು.

                ಬಸವಣ್ಣನವರ ಈ ಮಾತುಗಳು ಇಂದಿನ ಸುಧಾರಿತಯುಗದಲ್ಲಿಯೂ ಬೆಳಕುಚೆಲ್ಲುತ್ತವೆ. ಇಂದು ದೇಶದ ಹಾಗೂ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಏತದಂತೆ ತಲೆಬಾಗುವ, ಇಕ್ಕುಳದಂತೆ ಕಾರ್ಯನಿರ್ವಹಿಸುವ, ಗಿಳಿಯಂತೆ ಓದುವ(ಅನುಸರಣೆಯಿಲ್ಲದ ಮಾತು) ಅನಂಗಸಂಗಿಗಳೇ ರಾರಾಜಿಸುತ್ತಿದ್ದಾರೆ. ಇಂದು ಇಂತಹವರ ಮಧ್ಯೆ ನಿಜವಾದ ಗುರುಭಕ್ತರನ್ನು, ಭೃತ್ಯಾಚಾರಿಗಳನ್ನು, ಲಿಂಗವೇದಿಗಳನ್ನು ಹುಡುಕಬೇಕಾಗಿದೆ. ಹನ್ನೆರಡನೆಯ ಶತಮಾನದ ಸಾಮಾಜಿಕನ್ಯಾಯದ ಸಂದರ್ಭದಲ್ಲಿನ ಬಸವಣ್ಣನವರ ಮಾತುಗಳು ಇಂದಿಗೂ ತಾಳೆಯಾಗುತ್ತಿರುವುದು ವಚನಗಳಿಗಿರುವ ಸಾರ್ವಕಾಲಿಕತೆಯಲ್ಲದೆ ಬೇರೇನಲ್ಲ.

***

 

Leave a Reply

Your email address will not be published. Required fields are marked *