ಸಾಹಿತ್ಯಾನುಸಂಧಾನ

heading1

ಸತ್ಯದ ನಿಲುವು

ಆನೆಯನೇರಿಕೊಂಡು ಹೋದಿರಿ ನೀವು,

ಕುದುರೆಯನೇರಿಕೊಂಡು ಹೋದಿರಿ ನೀವು,

ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರಿ ಅಣ್ಣಾ;

ಸತ್ಯದ ನಿಲುವನರಿಯದೆ ಹೋದಿರಲ್ಲಾ!

ಸದ್ಗುಣವೆಂಬ ಫಲವ ಬಿತ್ತದೆ, ಬೆಳೆಯದೆ  ಹೋದಿರಲ್ಲಾ!

ಅಹಂಕಾರವೆಂಬ ಮದಗಜವನೇರಿ

ವಿಧಿಗೆ ಗುರಿಯಾಗಿ ನೀವು ಕೆಟ್ಟು ಹೋದಿರಲ್ಲಾ!

ನಮ್ಮ ಕೂಡಲಸಂಗಮದೇವರನರಿಯದೆ

ನರಕಕ್ಕೆ ಭಾಜನರಾದಿರಲ್ಲಾ!

                                                                      -ಬಸವಣ್ಣ

                ಮನುಷ್ಯ, ಭಗವಂತನಿಂದ ಪ್ರಾಪ್ತವಾದ ಈ ದೇಹವನ್ನು ಮಾನವೀಯತೆ, ಪರಸ್ಪರ ಸಹಕಾರ, ನಿಸ್ವಾರ್ಥತೆ, ಕಾಯಕಮುಖೇನ ಸಾರ್ಥಕಗೊಳಿಸದೆ ಬದುಕಿನುದ್ದಕ್ಕೂ ಶ್ರೀಮಂತಿಕೆ, ಐಷಾರಾಮತೆ, ಅಹಂಕಾರ, ದರ್ಪ ಮೊದಲಾದವುಗಳನ್ನು ಮೈಗೂಡಿಸಿಕೊಂಡು ಬದುಕುತ್ತಾನೆ. ತನ್ನ ಶ್ರೀಮಂತಿಕೆ, ಅದರ ಘನತೆ, ಅಲಂಕಾರ, ಶೋಕಿತನ ಮೊದಲಾದವುಗಳನ್ನು ಪ್ರದರ್ಶಿಸುತ್ತ ಭಗವಂತನನ್ನೇ ಮರೆತು ನರಕಕ್ಕೆ ಭಾಜನರಾಗುವ ಸನ್ನಿವೇಶವನ್ನು ಬಸವಣ್ಣನವರು ಈ ವಚನದಲ್ಲಿ ವಿಡಂಬಿಸಿದ್ದಾರೆ.

                ಕೆಲವು ಶ್ರೀಮಂತರು ತಮ್ಮ ಶ್ರೀಮಂತಿಕೆ ಹಾಗೂ ದರ್ಪಗಳನ್ನು ಪ್ರದರ್ಶಿಸುವುದಕ್ಕೆ ಆನೆಯನ್ನೇರಿಕೊಂಡು, ಕುದುರೆಯನ್ನೇರಿಕೊಂಡು, ಕುಂಕುಮ ಕಸ್ತೂರಿಗಳನ್ನು ಪೂಸಿಕೊಂಡು ಮೆರೆಯುತ್ತಾರೆ. ಆದರೆ ಸತ್ಯದ ನಿಲುವನ್ನು ಅರಿಯಲು ಪ್ರಯತ್ನಿಸುವುದಿಲ್ಲ. ಬದುಕಿನಲ್ಲಿ ತಾವು ಉಪಯೋಗಿಸುವ ಆನೆ, ಕುದುರೆ, ಕುಂಕುಮ, ಕಸ್ತೂರಿ ಮೊದಲಾದವು ಮಾತ್ರವಲ್ಲದೆ ದೇಹವನ್ನು ಅಲಂಕರಿಸುವ ಇನ್ನಿತರ ಅಲಂಕರಣ ಸಾಮಗ್ರಿಗಳೆಲ್ಲವೂ ಭಗವಂತನ ಕೊಡುಗೆಗಳೆಂಬ ಸತ್ಯದ ನಿಲುವನ್ನು ಮರೆತುಬಿಡುತ್ತಾರೆ. ಅಹಂಕಾರವೆಂಬ ಅವಗುಣ ಮನುಷ್ಯನ ವಿವೇಚನಾಶಕ್ತಿಯನ್ನು ಅಳಿಸಿಹಾಕುತ್ತದೆ. ಅಹಂಕಾರವೆಂಬುದು ಮದಗಜದಂತೆ. ತಾನೇ ತಾನೆಂಬ ಅಹಂಕಾರದಲ್ಲಿ ಅದು ಮೆರೆಯುತ್ತ ಸಿಕ್ಕಿದ್ದೆಲ್ಲವನ್ನು ತುಳಿದು ನಾಶಗೈಯುತ್ತ ಸಾಗುತ್ತದೆ. ಅಹಂಕಾರವೆಂಬ ಮದಗಜವನ್ನೇರಿದವರು ಮನುಷ್ಯಧರ್ಮಕ್ಕೆ ವಿರುದ್ಧವಾದುದೆಲ್ಲವನ್ನು ಮಾಡಿ ಬಹಳ ಬೇಗ ಅಳಿದುಹೋಗುತ್ತಾರೆ. ಹೀಗೆ ಅಹಂಕಾರಕ್ಕೆ ಗುರಿಯಾಗಿ ಕೂಡಲಸಂಗಮದೇವನನ್ನು ಅರಿಯದಿದ್ದರೆ ಅವರು ನರಕಕ್ಕೆ ಭಾಜನರಾಗುತ್ತಾರೆ ಎಂಬುದು ಬಸವಣ್ಣನವರ ಅಭಿಪ್ರಾಯ.

                ಬಸವಣ್ಣನವರ, ‘ಹಾವು ತಿಂದವರ ನುಡಿಸಬಹುದು, ಗರ ಹೊಡೆದವರ ನುಡಿಸಬಹುದು’ ಎಂಬ ಇನ್ನೊಂದು ವಚನದಲ್ಲಿನ ಶ್ರೀಮಂತಿಕೆಯ ದರ್ಪ, ದುರಹಂಕಾರದ ವರ್ತನೆಗಳ ಕುರಿತ ವಿಡಂಬನೆಯ ಮಾತುಗಳು ಇಲ್ಲಿ ಪ್ರತಿಪಾದಿಸುವ ವಿಷಯಗಳನ್ನು ಪರೋಕ್ಷವಾಗಿ ಸಮರ್ಥಿಸುತ್ತವೆ. ಶ್ರೀಮಂತಿಕೆ ಹಾಗೂ ಅದರಿಂದ ಹುಟ್ಟಿಕೊಳ್ಳುವ ಅಹಂಕಾರ, ದರ್ಪಗಳು ವ್ಯಕ್ತಿಯಲ್ಲಿನ ಮನುಷ್ಯತ್ವವನ್ನೇ ನಾಶಮಾಡುತ್ತವೆ. ಅವರು ತಮ್ಮ ಶ್ರೀಮಂತಿಕೆಯ ಪ್ರದರ್ಶನಕ್ಕಾಗಿ ಆನೆಗಳನ್ನು, ಕುದುರೆಗಳನ್ನು ಬಳಸಿಕೊಂಡು ತಾವು ಇತರರಿಗಿಂತ ಮೇಲೆಂಬ ಮದದಿಂದ ಮೆರೆಯುತ್ತಾರೆ.  ಇದು ಮದಗಜವನೇರಿ ಸವಾರಿಹೊರಟ ರೀತಿ. ಮದಗಜವಂತೂ ಅಂಕೆಗೆ ಬಾರದೆ ಎಲ್ಲವನ್ನೂ ನಾಶಮಾಡುತ್ತ ಸಾಗುವಂತಹ ಪ್ರಾಣಿ. ಅಂತಹ ಪ್ರಾಣಿಯ ಮೇಲೆ ಮದಭರಿತ ವ್ಯಕ್ತಿ ಸವಾರಿಹೊರಟರೆ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಅರ್ಥೈಸಿಕೊಳ್ಳಬೇಕು. ಬಸವಣ್ಣನವರು ಪ್ರತಿಪಾದಿಸುವ ‘ಅಹಂಕಾರವೆಂಬ ಮದಗಜ’ ಎಂಬ ರೂಪಕ ಈ ಸಂದರ್ಭದಲ್ಲಿ ಬಹಳ ಔಚಿತ್ಯಪೂರ್ಣ ಎನಿಸಿಕೊಳ್ಳುತ್ತದೆ.

                ಮನುಷ್ಯಜನ್ಮದ ಇತಿಮಿತಿಗಳನ್ನು ಅರಿತುಕೊಂಡು ಅದನ್ನು ಸಾರ್ಥಕಗೊಳಿಸಿಕೊಂಡು ಬದುಕಬೇಕೆಂಬುದು ಬಸವಣ್ಣನವರ ನಿಲುವು. ಆದರೆ ಅಂದಿನ ಕಾಲದಲ್ಲಿಯೇ ಮನುಷ್ಯಧರ್ಮಕ್ಕೆ ವಿರುದ್ಧವಾಗಿ ವರ್ತಿಸುತ್ತ ಸಮಾಜಕಂಟಕರಾಗಿ, ಇತರರನ್ನು ಶೋಷಿಸುತ್ತ ಮೆರೆಯುವ ಸಿರಿವಂತರು ತಮ್ಮ   ದರ್ಪದಿಂದ ಉಂಟುಮಾಡುತ್ತಿದ್ದ ದುಷ್ಪರಿಣಾಮಗಳನ್ನು ಈ ವಚನದಲ್ಲಿ ಉಲ್ಲೇಖಿಸಿದ್ದಾರೆ. ಕೆಲವರ ಅನೈತಿಕತೆ, ಸಮಾಜವಿರೋಧಿಕೃತ್ಯಗಳು ಹಲವರ ಬದುಕಿನ ನಾಶಕ್ಕೆ, ಸಮಾಜವ್ಯವಸ್ಥೆಯ ನಾಶಕ್ಕೆ, ದೇಶದ ಸುವ್ಯವಸ್ಥೆಯ ನಾಶಕ್ಕೆ ಕಾರಣವಾಗುತ್ತವೆ ಎಂಬುದನ್ನು ಯಾರೊಬ್ಬರೂ ಅರಿಯುತ್ತಿಲ್ಲ. ನಮ್ಮ ಬದುಕು ಕೇವಲ ನಮ್ಮದಲ್ಲ, ಅದು ನಮ್ಮನ್ನು ನಂಬಿರುವ ಇತರರದೂ ಹೌದು. ಅದು ಸಾಂಘಿಕಬದುಕು. ಯಾರೋ ಒಬ್ಬನ ಕೃತ್ಯ ಹಾಗೂ ಅದರ ಪರಿಣಾಮಗಳು ಸಾಂಘಿಕಬದುಕಿಗೆ ವ್ಯಾಪಿಸಿಕೊಳ್ಳುತ್ತದೆ, ಕಾಲ ಬೆರಳಿಗಾದ ಗಾಯದ ನೋವು ದೇಹವಿಡೀ ಹಬ್ಬುವ ಹಾಗೆ.  ಅದಕ್ಕಾಗಿಯೇ ಶರಣರು, ಬದುಕಿಗೆ ಹಾಗೂ ಅದರ ಪರಿಪೂರ್ಣತೆಗೆ, ಅದರ ಸಾಕಾರಕ್ಕೆ, ಮನ್ನಣೆನೀಡಿದರು. ಮನುಷ್ಯನ ಶ್ರೀಮಂತಿಕೆ ಹಾಗೂ ಅದರಿಂದ ಕಾಣಿಸಿಕೊಳ್ಳುವ ಶೋಕಿತನವನ್ನು ವಿರೋಧಿಸಿ ಬದುಕಿನ ಸಾರ್ಥಕ್ಯಕ್ಕೆ ಒತ್ತುನೀಡಿದರು.

                ಇಂದು ಇಪ್ಪತ್ತೊಂದನೆಯ ಶತಮಾನದಲ್ಲಿ ಆನೆ, ಕುದುರೆಗಳಿಲ್ಲದಿದ್ದರೂ ಅವುಗಳಿಗೆ ಸರಿಸಮಾನವಾದ ಅತ್ಯಂತ ದುಬಾರಿಯಾಗಿರುವ ವಾಹನಗಳನ್ನೇರಿಕೊಂಡು,  ಐಷಾರಾಮಿತನವನ್ನು ಮೈಗೂಡಿಸಿಕೊಂಡು, ಕ್ರಿಮಿಕೀಟಗಳನ್ನು ನುಚ್ಚಿನೊಣೆದಂತೆ ಜನಸಾಮಾನ್ಯರನ್ನು ನೊಣೆಯುತ್ತ, ಸಿರಿವಂತಿಕೆಯ ಮದದಿಂದ ಎಲ್ಲವನ್ನೂ ಬುಡಮೇಲು ಮಾಡುತ್ತ, ಸಮಾಜ ಹಾಗೂ ದೇಶದ ಸ್ಥಿತಿಗತಿಗಳನ್ನೇ ಅಲ್ಲೋಲಕಲ್ಲೋಲ ಮಾಡುತ್ತಿರುವ ಜ್ವಲಂತ ದೃಶ್ಯಗಳನ್ನು ಕಣ್ತುಂಬ ನೋಡಬಹುದು. ಇಂದು ಸತ್ಯದ ನಿಲುವನ್ನು ಅರಿಯುವುದೂ ಬೇಕಿಲ್ಲ, ಸದ್ಗುಣವೆಂಬ ಫಲವನ್ನು ಬಿತ್ತುವುದೂ ಬೇಕಿಲ್ಲ. ಅಹಂಕಾರವೆಂಬ ಮದಗಜವನ್ನೇರಿ ವಿಧಿಗೆ ಬಲಿಯಾಗುತ್ತಿದ್ದರೂ ಬುದ್ಧಿಬಂದಿಲ್ಲ. ಇದು ಇಂದಿನ ಯಥಾರ್ಥಸ್ಥಿತಿ. ಶ್ರೀಮಂತಿಕೆಯ ದುರಹಂಕಾರ ಹಾಗೂ ಅದರ ಶೋಕಿತನ  ಕಲ್ಪಿಸಲಾಗದಷ್ಟು ಬೆಳೆದಿದೆ. ಬಡವ-ಬಲ್ಲಿದರ ನಡುವಿನ ಅಂತರ ಅಗಾಧವಾಗಿ ಬೆಳೆಯುತ್ತಿದೆ. ಶ್ರೀಮಂತಿಕೆಯಲ್ಲಿ, ಶೋಕಿಯಲ್ಲಿ ಮೆರೆಯುವುದೇ ಬದುಕಿನ ಸಾರ್ಥಕ್ಯವೆಂದು ಬಹುಮಂದಿ ನಂಬಿ ಬದುಕುತ್ತಿದ್ದಾರೆ. ಹಾಗಾಗಿಯೇ ಇಂತಹವರ  ದೃಷ್ಟಿಯಲ್ಲಿ ನೈತಿಕವಾದುದೆಲ್ಲವೂ ಅನೈತಿಕವಾಗಿ, ಅನೈತಿಕವಾದುದೆಲ್ಲವೂ ಪರಮನೈತಿಕವಾಗಿ ಪರಿಣಮಿಸುತ್ತಿದೆ. ಎಲ್ಲವೂ ಅಹಂಕಾರವೆಂಬ ಮದಗಜವನ್ನೇರಿ ಸವಾರಿ ಹೊರಟ ಪರಿಣಾಮ. ಬಸವಣ್ಣನವರ ಮಾತುಗಳು ಅಂದಿಗಿಂತ ಇಂದಿನ ಸಾಮಾಜಿಕಬದುಕಿಗೇ  ಅತ್ಯಂತ ಪರಿಣಾಮಕಾರಿಯಾಗಿ ಚಾಟಿಬೀಸುತ್ತವೆ. ಆದರೆ, ಅದನ್ನು ಅರ್ಥೈಸಿಕೊಳ್ಳುವ ಕನಿಷ್ಠತಿಳಿವಳಿಕೆ ನಮ್ಮಲ್ಲಿಲ್ಲದಿರುವುದೇ ದೊಡ್ಡ ದುರಂತ.

***

3 thoughts on “ಸತ್ಯದ ನಿಲುವು

  1. What a beautiful explanation !. Today we can rarely find a writer with such a clear and classical kannada.
    Warm regards.
    P.Ajri.Moodbidri

    1. ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನಪೂರ್ವಕ ಪ್ರತಿಕ್ರಿಯೆಗೆ ಕೃತಜ್ಞತೆಗಳು. ನಿಮ್ಮ ಸಮಾನ ಮನಸ್ಕ ಸ್ನೇಹಿತರೊಂದಿಗೆ ಈ ಬ್ಲಾಗಿನ ಲಿಂಕನ್ನು ಶೇರ್ ಮಾಡಿ.
      ಧನ್ಯವಾದಗಳು 🙏

Leave a Reply

Your email address will not be published. Required fields are marked *