ಸಾಹಿತ್ಯಾನುಸಂಧಾನ

heading1

ಹೊಗಳಿಕೆಯ ಹೊನ್ನಶೂಲ

             “ಎನ್ನವರೆನಗೊಲಿದು ಹೊನ್ನಶೂಲದಲಿಕ್ಕಿದರೆನ್ನ ಹೊಗಳಿ ಹೊಗಳಿ”,  “ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದವರು” ಎಂಬವು ಬಸವಣ್ಣನವರ ಕೆಲವು ವಚನಗಳಲ್ಲಿ ಉಕ್ತವಾಗುವ ಸಾಲುಗಳು. ‘ಹೊನ್ನಶೂಲ’ಎಂಬ ರೂಪಕವನ್ನು ಅವರು ತಮ್ಮ ವಚನಗಳಲ್ಲಿ ಪದೇಪದೇ ಬಳಸಿಕೊಳ್ಳುತ್ತಾರೆ. ಇದ್ದುದನ್ನು ಇದ್ದಂತೆಯೇ ಹೇಳಿದರೆ ಅದು ಹೊಗಳಿಕೆಯಲ್ಲ. ಇಲ್ಲದ ಗುಣಗಳನ್ನು ಆರೋಪಿಸಿದರೆ ಅದು ಹೊಗಳಿಕೆ. ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಒಳ್ಳೆಯ ಸ್ಥಾನಮಾನಗಳನ್ನು ಗಳಿಸಿಕೊಂಡಿದ್ದರೂ ಆ ಸಂಬಂಧ ಅವರು ಯಾವುದೇ ರೀತಿಯ ಹೊಗಳಿಕೆಯನ್ನು ಬಯಸಿರಲಿಲ್ಲ. “ಎನ್ನಿಂದ ಕಿರಿಯರಿಲ್ಲ, ಶಿವಭಕ್ತರಿಂದ ಹಿರಿಯರಿಲ್ಲ” ಎಂಬುದೇ ಅವರ ವಿನಮ್ರ ನುಡಿ. ಆ ಮಾತಿನಂತೆಯೇ ಅವರು ಬದುಕಿ ಸಾಧಿಸಿದವರು. ಆದರೆ ಇಲ್ಲಸಲ್ಲದ ಗುಣಗಳನ್ನು ತನ್ನಲ್ಲಿ ಆರೋಪಿಸಿದಾಗ, ಗೈಯದುದನ್ನು ಗೈದಂತೆ ವರ್ಣಿಸಿದಾಗ ಬಸವಣ್ಣನವರಿಗೆ ತನ್ನನ್ನು ಶೂಲಕ್ಕೇರಿಸಿದಷ್ಟು ಹಿಂಸೆಯಾಗುತ್ತಿದ್ದುದರಿಂದ ಹೊಗಳಿಕೆಯನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಅವರು ಹೊಗಳಿಕೆಯನ್ನು ಹೊನ್ನಶೂಲಕ್ಕೆ ಸಮೀಕರಿಸಿ ತನಗೆ ಅದರಿಂದ ಒದಗಿದ ಮಾನಸಿಕಹಿಂಸೆಯನ್ನು ಕೆಲವು ವಚನಗಳಲ್ಲಿ ವಿವರಿಸಿದರು.  ಅವರ ಮಾತುಗಳನ್ನು ಗಮನಿಸಿದಾಗ ವಿನಾಕಾರಣ, ಅಥವಾ ಲಾಭಕೋರತನದ ಸಂದರ್ಭಗಳಲ್ಲಿ ಬಹುತೇಕ ಮಂದಿ ಹೊಗಳಿಕೆಯನ್ನು ಒಂದು ಪರಿಣಾಮಕಾರಿ ಅಸ್ತ್ರವನ್ನಾಗಿ ಮಾಡಿಕೊಂಡಿರುವುದು ಕಂಡುಬರುತ್ತದೆ.

             ನಮ್ಮ ವಾಙ್ಮಯದಲ್ಲಿ ಹೊಗಳಿಕೆಯನ್ನು ಹೊನ್ನಶೂಲಕ್ಕೆ ಸಮೀಕರಿಸಲಾಗಿದೆ. ಒಬ್ಬ ವ್ಯಕ್ತಿಯನ್ನು ಹೊಗಳುವುದೆಂದರೆ ಆತನಿಗೆ ಮರಣದಂಡನೆಯನ್ನು ವಿಧಿಸಿದಂತೆ. ಪ್ರಾಚೀನಕಾಲದಲ್ಲಿ ಈ ರೀತಿಯಲ್ಲಿ ವಿಶೇಷಸಂದರ್ಭಗಳಲ್ಲಿ ಹೊಗಳಿಕೆಯ ಮೂಲಕ ಮರಣದಂಡನೆಯನ್ನು ವಿಧಿಸುತ್ತಿದ್ದರೆಂಬುದಕ್ಕೆ ಮಹಾಭಾರತದಲ್ಲಿಯೇ ಉಲ್ಲೇಖಗಳು ಸಿಗುತ್ತವೆ. ಧರ್ಮರಾಯ ತಿಳಿದೋ ತಿಳಿಯದೆಯೋ ಅದೇನೋ ತಪ್ಪು ಮಾಡಿದನಂತೆ. ಆ ತಪ್ಪಿಗೆ ಆ ಕಾಲದ ರಾಜಶಾಸನದ ಪ್ರಕಾರ ಮರಣದಂಡನೆಯೇ ಶಿಕ್ಷೆ. ಧರ್ಮರಾಯನಾದರೂ ರಾಜಶಾಸನದಿಂದ ತಪ್ಪಿಸಿಕೊಳ್ಳುವಂತಿಲ್ಲ. ಶಿಕ್ಷೆ ವಿಧಿಸದಿದ್ದರೆ ರಾಜಶಾಸನವನ್ನು ಮೀರಿದಂತೆ. ಪ್ರಜೆಗಳ ತಪ್ಪಿಗೆ ಶಿಕ್ಷೆ ವಿಧಿಸಿ, ರಾಜ ಪರಿವಾರ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಧರ್ಮವಲ್ಲ. ಪ್ರಜೆಗಳ ವಿಶ್ವಾಸವನ್ನೂ ಕಳೆದುಕೊಂಡಂತೆ. ಹಾಗಾಗಿ ಧರ್ಮರಾಯನ ತಮ್ಮಂದಿರಿಗೆ ’ಏನು ಮಾಡೋಣ?’ ಎಂದು ಸಂಕಟಕ್ಕಿಟ್ಟುಕೊಂಡಿತು. ಧರ್ಮರಾಯ ಅದುವರೆಗೆ ತಪ್ಪು ಮಾಡಿಲ್ಲ, ಹಾಗಿರುವಾಗ ಮರಣದಂಡನೆ ವಿಧಿಸುವುದು ಸಮಂಜಸವೇ? ಎಂಬುದು ತಮ್ಮಂದಿರ ಮುಂದಿರುವ ಪ್ರಶ್ನೆ. ಕೊನೆಗೆ ಕೃಷ್ಣನನ್ನು ಬರಮಾಡಿಕೊಂಡು ವಿಷಯ ಪ್ರಸ್ತಾಪಿಸಿದಾಗ ಕೃಷ್ಣ, “ಧರ್ಮರಾಯನ ತಪ್ಪಿಗೆ ಮರಣದಂಡನೆಯನ್ನು ವಿಧಿಸದೆ ನಿರ್ವಾಹವಿಲ್ಲ, ಧರ್ಮರಾಯನಂತಹವರಿಗೆ ಮರಣದಂಡನೆಯನ್ನು ವಿಧಿಸುವುದೂ ಹಿತವಲ್ಲ, ಹಾಗಾಗಿ ನೀವು ನಾಲ್ಕು ಮಂದಿ ತಮ್ಮಂದಿರು ಸರದಿಯಲ್ಲಿ ಧರ್ಮರಾಯನನ್ನು ಒಂದಷ್ಟು ಹೊತ್ತು ಹೊಗಳುತ್ತಿರಿ, ಆತನಿಗೆ ಮರಣದಂಡನೆ ವಿಧಿಸಿದಂತೆ” ಎಂದ. ಕೃಷ್ಣನ ಮಾತಿನಂತೆ ನಾಲ್ಕು ಮಂದಿ ತಮ್ಮಂದಿರು ಧರ್ಮರಾಯನನ್ನು ಒಬ್ಬರಾದ ಮೇಲೊಬ್ಬರಂತೆ ಒಂದಷ್ಟು ಹೊತ್ತು ಹೊಗಳಿದರು. ಧರ್ಮರಾಯನಿಗೋ ಒಂದಲ್ಲ ಹತ್ತಾರು ಬಾರಿ ಮರಣದಂಡನೆಗೆ ಗುರಿಪಡಿಸಿದ ಹಾಗಾಯಿತು. ಆ ಹಿಂಸೆಯನ್ನು ಆತನಿಂದ ತಡೆದುಕೊಳ್ಳಲಾಗಲಿಲ್ಲ. ಇನ್ನು ತಮ್ಮಂದಿರಿಗೂ ಧರ್ಮರಾಯನಿಗಾದ  ಸ್ಥಿತಿಯೇ ಒದಗಿತು. ಅನ್ಯರನ್ನು ಹೊಗಳುವುದೂ ಮರಣದಂಡನೆಯನ್ನು ವಿಧಿಸಿಕೊಂಡಂತೆ. ಆದರೆ ಇಂದಿನ ಆಧುನಿಕಯುಗದಲ್ಲಿ ಧರ್ಮರಾಯನಂತಹವರೂ ಇಲ್ಲ, ಪಾಂಡವರಂತಹವರೂ ಇಲ್ಲ.  

            ಆಧುನಿಕಕಾಲದಲ್ಲಿ ಹೊಗಳಿಕೆ ಎಂಬುದು ಒಂದು ಬುದ್ಧಿವಂತಿಕೆಯ ತಂತ್ರವೂ ಹೌದು, ಅನ್ಯರನ್ನು  ಮೂರ್ಖರನ್ನಾಗಿ ಮಾಡುವ ಕುತಂತ್ರವೂ ಹೌದು. ಅನ್ಯರನ್ನು ಹೊಗಳಿ ಲಾಭಹೊಡೆಯುವುದು ಬುದ್ಧಿವಂತಿಕೆಯ ತಂತ್ರವೆನಿಸಿಕೊಂಡರೆ, ತನ್ನ ಬುದ್ಧಿಹೀನತೆಯನ್ನು, ಅಯೋಗ್ಯತೆಯನ್ನು ಮುಚ್ಚಿಹಾಕಲು ಅನ್ಯರನ್ನು ಹೊಗಳುತ್ತ ಅವರನ್ನು ಮೂರ್ಖರನ್ನಾಗಿ ಮಾಡುವ ಕುತಂತ್ರವೆನಿಸಿಕೊಳ್ಳುತ್ತದೆ. ಆಧುನಿಕಕಾಲದಲ್ಲಿ ಹೆಚ್ಚಿನವರಿಗೆ ಹೊಗಳಿಕೆ ಬೇಕೇಬೇಕು. ಅನ್ಯರನ್ನು ಹೊಗಳುವುದರಿಂದ ತಾವಂತೂ ಲಾಭಹೊಡೆಯಬಹುದು, ತಮ್ಮ ಬೇಳೆಬೇಯಿಸಿಕೊಳ್ಳಬಹುದು, ತಮ್ಮ ವಿರೋಧಿಗಳನ್ನು ಬೇಕಾದಂತೆ ಬಗ್ಗಿಸಬಹುದು, ತಮಗಾಗದವರನ್ನು ನಯವಾಗಿ ನೊಣೆಯಬಹುದು ಎಂಬುದನ್ನು ಬಹುಮಂದಿ ತಿಳಿದಿದ್ದಾರೆ. ಅನ್ಯರನ್ನು ಹೊಗಳುವುದರಿಂದ ತಮ್ಮ ಅಯೋಗ್ಯತನವನ್ನು ಮುಚ್ಚಿಹಾಕಬಹುದು ಎಂದು ಇನ್ನೆಷ್ಟೋ ಮಂದಿ ತಿಳಿದಿದ್ದಾರೆ. ಇದೊಂದು ಸಾರ್ವತ್ರಿಕಸತ್ಯವೆಂಬುದನ್ನು ತಿಳಿದಿದ್ದರೂ ಹೊಗಳುಪ್ರಿಯರು ಮತ್ತೆಮತ್ತೆ ಅನ್ಯರಿಂದ ಹೊಗಳಿಸಿಕೊಳ್ಳುತ್ತಲೇ ಇರುತ್ತಾರೆ. ಹೊಗಳುವವರು ಹೊಗಳಿ ಕೊಳ್ಳೆಹೊಡೆಯುತ್ತಲೇ ಇರುತ್ತಾರೆ. ಹೊಗಳಿಸಿಕೊಳ್ಳುವವರು ಇರುವಲ್ಲಿಯವರೆಗೆ ಹೊಗಳುವವರು ಇದ್ದೇ ಇರುತ್ತಾರೆ.  ಕೊಳ್ಳೆಹೊಡೆಸಿಕೊಳ್ಳುವವರು ಇರುವವರೆಗೂ ಕೊಳ್ಳೆಹೊಡೆಯುವವರು ಇದ್ದೇ ಇರುತ್ತಾರೆ.  

            ಇಂದು ಹೊಗಳಿಕೆಯ ಹೊನ್ನಶೂಲ ವಿವಿಧ ರೂಪಗಳನ್ನು ಪಡೆದುಕೊಂಡು ಸರ್ವಾಂತರ್ಯಾಮಿಯಾಗಿದೆ. ಸಮಾಜದ, ರಾಜಕೀಯದ, ಆಡಳಿತದ ವಿವಿಧ ಸ್ಥರಗಳಲ್ಲಿ ಸಿಕ್ಕಸಿಕ್ಕಲ್ಲಿ ಬೇರುಬಿಟ್ಟು ಹಾಸುಹೊಕ್ಕಾಗಿದೆ. ಕೆಲಸಗಳ್ಳರು, ಸೋಮಾರಿಗಳು, ಲಫಂಗರು, ವಂಚಕರು, ಅನೈತಿಕರು, ನಯವಂಚಕರು ಮೊದಲಾದವರೆಲ್ಲರೂ ಹೊಗಳಿಕೆಯನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂದು ಹೊಗಳುವವರು ಸಭ್ಯರೆಸಿಕೊಳ್ಳುತ್ತಿದ್ದಾರೆ. ಹೊಗಳದವರು ಅಸಭ್ಯರೆನಿಸಿಕೊಳ್ಳುತ್ತಿದ್ದಾರೆ. ಅವರಿವರೆನ್ನದೆ ಸಮಸ್ತರನ್ನೂ ಹೊಗಳಿ ಅಟ್ಟಕ್ಕೇರಿಸಿ ತಮ್ಮ ಬೇಳೆಬೇಯಿಸಿಕೊಳ್ಳುವ ಖದೀಮರು ಇಂದು ದೇಶದಲ್ಲೆಲ್ಲ ತುಂಬಿಕೊಂಡಿದ್ದಾರೆ. ಹಾಗಾಗಿ ಒಂದು ಕಡೆ ದೇಶ ಕೊಳ್ಳೆಹೋಗುತ್ತಿದೆ. ಇನ್ನೊಂದೆಡೆ ನೈತಿಕತೆ ಕುಸಿಯುತ್ತಿದೆ. ಮತ್ತೊಂದೆಡೆ ಯೋಗ್ಯರಿಗೆ, ಸಭ್ಯರಿಗೆ ಅವಕಾಶಗಳೇ ತಪ್ಪಿಹೋಗಿ  ಅಯೋಗ್ಯರೇ ರಾರಾಜಿಸುತ್ತಿದ್ದಾರೆ. ಸಮಾಜವ್ಯವಸ್ಥೆ ಕುಸಿಯುವುದಕ್ಕೆ, ದೇಶ ಅಭಿವೃದ್ಧಿಯ ಪಥದಲ್ಲಿ ಕುಂಟುತ್ತಿರುವುದಕ್ಕೆ, ನೈತಿಕತೆ ಅಳಿಯುವುದಕ್ಕೆ, ದೇಶ ದುರ್ಬಲಗೊಳ್ಳುವುದಕ್ಕೆ ಹೊಗಳಿಕೆಯ ಹೊನ್ನಶೂಲವೇ ಕಾರಣವಾಗುತ್ತಿದೆ.

                ‘ಹೊಗಳಿಕೆ’ ಒಬ್ಬ ಮನುಷ್ಯನನ್ನು ಮೂರ್ಖನನ್ನಾಗಿಯೂ ಕರ್ತವ್ಯವಿಮುಖನನ್ನಾಗಿಯೂ ಮಾಡುವ ತಂತ್ರ. ಇದು ದುರಹಂಕಾರ, ಒಣಪ್ರತಿಷ್ಠೆಗಳಿಗೊಂದು ರಹದಾರಿ. ಇದರಿಂದಾಗಿಯೇ ‘ತಾನು ಉಳಿದವರಿಗಿಂತ ಮೇಲೆಂಬ, ಉಳಿದವರು ತನಗಿಂತ ಕೀಳೆಂಬ ಮನೋಭಾವ’ದ ಬೆಳವಣಿಗೆ. ಈ ಮಧ್ಯೆ ಹೊಸವರ್ಗವೊಂದು ಹುಟ್ಟಿಕೊಂಡಿದೆ. ಇವರಿಗೆ ಅನ್ಯರಿಂದ ಹೊಗಳಿಸಿಕೊಳ್ಳಬೇಕಾದ ಅವಶ್ಯಕತೆಯೇ ಬರುವುದಿಲ್ಲ. ಏಕೆಂದರೆ ಅವರು ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ. ಅನ್ಯರು ತಮ್ಮನ್ನು ಸಮರ್ಪಕವಾಗಿ, ವಿಶೇಷವಾಗಿ, ತಮಗಿಷ್ಟವಾಗುವಂತೆ ಹೊಗಳುತ್ತಾರೆ ಎಂಬ ಭರವಸೆ ಎಲ್ಲಿದೆ? ಅನ್ಯರನ್ನು ಹೇಗೆ ನಂಬುವುದು? ಹಾಗಾಗಿ ಅವರು ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ. ತಮ್ಮ ಬೆನ್ನನ್ನು ತಮ್ಮ ಎರಡೂ ಕೈಗಳಿಂದ ಚಪ್ಪರಿಸಿಕೊಳ್ಳುತ್ತಾರೆ. ಗಾದೆಯೇ ಇದೆಯಲ್ಲ! ‘ನಾಚಿಕೆಬಿಟ್ಟವ ಊರಿಗೆ ದೊಡ್ಡವ.’ ಅನ್ಯರಿಂದ ಹೊಗಳಿಸಿಕೊಳ್ಳುವವರು, ತಮ್ಮನ್ನು ತಾವೇ ಹೊಗಳಿಕೊಳ್ಳುವವರು ದೊಡ್ಡವರೆನಿಸಿಕೊಳ್ಳುತ್ತಾರೆ. ಆದರೆ ದಿನದಿನವೂ ತಮ್ಮನ್ನು ತಾವೇ  ಹೊನ್ನಶೂಲಕ್ಕೆ ಏರಿಸಿಕೊಳ್ಳುತ್ತಿದ್ದೇವೆ ಎಂಬುದಾಗಲೀ ಅನ್ಯರನ್ನು ಮೂರ್ಖರನ್ನಾಗಿ ಮಾಡಲು ಹೋಗಿ ವಾಸ್ತವದಲ್ಲಿ  ತಾವೇ ಮೂರ್ಖರಾಗುತ್ತಿದ್ದೇವೆ ಎಂಬುದಾಗಲೀ ಅವರ ಅರಿವಿಗೆ ಬರುವುದೇ ಇಲ್ಲ. ಹೇಗಿದೆ ಕಾಲನ ಲೀಲೆ?!

***

Leave a Reply

Your email address will not be published. Required fields are marked *