ಸಾಹಿತ್ಯಾನುಸಂಧಾನ

heading1

ಪರಹಿಂಸೆಯಂ ಮಾಡಿ ಮಾನವಂ ಬಾಳ್ದಪನೆ-ಲಕ್ಷ್ಮೀಶ ಭಾಗ-೧

(ಮಂಗಳೂರು ವಿಶ್ವವಿದ್ಯಾನಿಲಯ-ಬಿ.ಕಾಂ. ಮೂರನೆಯ ಚತುರ್ಮಾಸಕ್ಕೆ  ನಿಗದಿಪಡಿಸಲಾದ ಪಠ್ಯಭಾಗ)

ಕುಂತೀಕುಮಾರ ಕೇಳ್ ಚಂದ್ರಹಾಸಂ ಬನದೊ

ಳಿಂತು ಸುಖನಿದ್ರೆಯಿಂದಿರುತಿರ್ದ ಸಮಯದೊಳ್

ಕುಂತಳೇಂದ್ರಂಗೆ ಚಂಪಕಮಾಲಿನಿ ನಾಮದೊರ್ವ ಮಗಳುಂಟವಳ್ಗೆ

ಸಂತತಂ ಮಂತ್ರಿಸುತೆ ವಿಷಯೆ ಸಖಿಯಾಗಿರ್ಪ

ಳಂತರಿಸದವರಿರ್ವರುಂ ಬಂದರಲ್ಲಿಗೆ ವ

ಸಂತಕಾಲಂ ಪ್ರಾಪ್ತಮಾಗಿರೆ ಜಲಕ್ರೀಡೆಗಾಳಿಯರ ಗಡಣದಿಂದೆ          ೧

ಪದ್ಯದ ಅನ್ವಯಕ್ರಮ:

ಕುಂತೀಕುಮಾರ ಕೇಳ್, ಚಂದ್ರಹಾಸಂ ಬನದೊಳಗೆ ಇಂತು ಸುಖ ನಿದ್ರೆಯಿಂದ ಇರುತ್ತಿರ್ದ ಸಮಯದೊಳ್, ಕುಂತಳೇಂದ್ರಂಗೆ ಚಂಪಕಮಾಲಿನಿ ನಾಮದ ಓರ್ವ ಮಗಳ್ ಉಂಟು, ಅವಳ್ಗೆ ಸಂತತಂ ಮಂತ್ರಿಸುತೆ ವಿಷಯೆ ಸಖಿಯಾಗಿ ಇರ್ಪಳ್, ವಸಂತಕಾಲಂ ಪ್ರಾಪ್ತಮಾಗಿ ಇರೆ ಜಲಕ್ರೀಡೆಗೆ ಆಳಿಯರ ಗಡಣದಿಂದೆ ಅಂತು ಅರಿಸದೆ ಅವರ್ ಇರ್ವರುಂ ಅಲ್ಲಿಗೆ ಬಂದರ್

ಪದ-ಅರ್ಥ:

ಕುಂತೀಕುಮಾರ-ಅರ್ಜುನ; ಬನದೊಳ್-ಉದ್ಯಾನವನದಲ್ಲಿ; ಕುಂತಳೇಂದ್ರ-ಕುಂತಳದೇಶದ ರಾಜ; ಸಂತತಂ-ನಿರಂತರ, ಯಾವತ್ತೂ; ಸಖಿ-ಗೆಳತಿ; ಅರಿಸದೆ- ಅಲಗದೆ; ಆಳಿಯರ ಗಡಣ-ಸಖಿಯರ ಸಮೂಹ.

ಕುಂತೀಕುಮಾರನಾದ ಅರ್ಜುನನೇ ಕೇಳು, ಚಂದ್ರಹಾಸನು ಮಾರ್ಗಾಯಾಸವನ್ನು ಪರಿಹರಿಸಿಕೊಳ್ಳಲು ಉದ್ಯಾನವನದೊಳಗೆ ಬಂದು ಸುಖನಿದ್ರೆಯಲ್ಲಿ ಇರುತ್ತಿದ್ದ ಸಮಯದಲ್ಲಿ ಕುಂತಳದೇಶದ ರಾಜನಿಗೆ ಚಂಪಕಮಾಲಿನಿ ಎಂಬ ಹೆಸರಿನ ಒಬ್ಬ ಮಗಳಿದ್ದು, ಅವಳು ಬಾಲ್ಯದಿಂದಲೂ ನಿರಂತರವಾಗಿ ತನ್ನ ಗೆಳತಿಯಾದ್ದಳು. ವಸಂತಕಾಲ ಪ್ರಾಪ್ತವಾದುದರಿಂದ ಚಂಪಕಮಾಲಿನಿಯು, ಮಂತ್ರಿಯ ಮಗಳು ವಿಷಯೆಯೊಂದಿಗೆ ಜನಕ್ರೀಡೆಯಾಡಲು ಹಂಬಲಿಸಿ ಇತರ ಸಖಿಯರನ್ನು ಕೂಡಿಕೊಂಡು  ಅರಮನೆಯ ಉದ್ಯಾನವನದೊಳಗೆ ಬಂದಳು.

ಆಳಿಯರೊಳಿಂತು ಚಂಪಕಮಾಲಿನಿಗೆ ಸರಸ

ಕೇಳಿ ವೆಗ್ಗಳಿಸಿರ್ದ ಸಮಯದೊಳಲರ್ಗೊಯ್ವ

ಬೇಳಂಬದಿಂದೆ ಕೆಲಸಿಡಿದು ಬಂದಾ ವಿಷಯೆ ಚೂತದ್ರುಮದ ನೆಳಲೊಳು

ತೋಳ ತಲೆಗಿಂಬಿನ ತಳಿರ್ವಸೆಯ ಮೇಲೆ ತಂ

ಗಾಳಿಗೊಡ್ದಿದ ಮಯ್ಯ ಸೊಗಸಿಂದೆ ಮಱೆದು ನಿ

ದ್ರಾಲೋಲನಾಗಿ ಮಲಗಿಹ ಚಂದ್ರಹಾಸನಂ ಕಂಡು ಸೈವೆಱಗಾದಳು        ೨

ಪದ್ಯದ ಅನ್ವಯಕ್ರಮ:

ಆಳಿಯರೊಳ್ ಇಂತು ಚಂಪಕಮಾಲಿನಿಗೆ ಸರಸಕೇಳಿ ವೆಗ್ಗಳಿಸಿರ್ದ ಸಮಯದೊಳ್ ಅಲರ್ ಕೊಯ್ವ ಬೇಳಂಬದಿಂದೆ ಕೆಲ ಸಿಡಿದು ಬಂದ ಆ ವಿಷಯೆ ಚೂತದ್ರುಮದ ನೆಳಲೊಳು ತೋಳ ತಲೆಗಿಂಬಿನ ತಳಿರ್ ಪಸೆಯ ಮೇಲೆ ತಂಗಾಳಿಗೆ ಒಡ್ಡಿದ ಮಯ್ಯ ಸೊಗಸಿಂದೆ ಮಱೆದು ನಿದ್ರಾಲೋಲನಾಗಿ ಮಲಗಿಹ ಚಂದ್ರಹಾಸನಂ ಕಂಡು ಸೈವೆಱಗಾದಳು.

ಪದ-ಅರ್ಥ:

ಆಳಿಯರೊಳ್-ಸಖಿಯರೊಂದಿಗೆ, ಸ್ನೇಹಿತೆಯರೊಂದಿಗೆ; ಸರಸಕೇಳಿ-ಸರಸಸಲ್ಲಾಪ, ವಿನೋದದ ಆಟ; ವೆಗ್ಗಳಿಸಿರ್ದ-ಅತಿಶಯವಾಗಿದ್ದ; ಅಲರ್ಗೊಯ್ವ-ಹೂಗಳನ್ನು ಕೊಯ್ಯುವ; ಬೇಳಂಬ-ಬಯಕೆ, ಆಸೆ; ಕೆಲಸಿಡಿದು-ಪಕ್ಕಕ್ಕೆ ಸರಿದು; ಚೂತದ್ರುಮ-ಮಾವಿನಮರ; ನೆಳಲ್-ನೆರಳು; ತೋಳತಲೆಗಿಂಬಿನ-ತೋಳನ್ನೇ ತಲೆಗೆ ಆಧರಿಸಿದ, ತೋಳನ್ನೇ ತಲೆದಿಂಬಾಗಿ ಮಾಡಿದ; ತಳಿರ್ವಸೆ-ಚಿಗುರಿನ ಹಾಸಿಗೆ; ಸೈವೆಱಗಾಗು- ಆಶ್ಚರ್ಯಚಕಿತನಾಗು.

ಉದ್ಯಾನವನದಲ್ಲಿ ಚಂಪಕಮಾಲಿನಿ ತನ್ನ ಸಖಿಯರೊಂದಿಗೆ ಸರಸಸಲ್ಲಾಪದ ವಿನೋದದಾಟದಲ್ಲಿ ತಲ್ಲೀನಳಾಗಿದ್ದ ಸಮಯದಲ್ಲಿ ಹೂಗಳನ್ನು ಕೊಯ್ಯುವ ಬಯಕೆಯಿಂದ ವಿಷಯೆ ಅವರ ಗುಂಪಿನಿಂದ ಪಕ್ಕಕ್ಕೆ ಸರಿದು ಬರುತ್ತಿರಲು, ಒಂದು ಮಾವಿನ ಮರದ ನೆರಳಿನಲ್ಲಿ ತೋಳನ್ನೇ ತಲೆಗೆ ಆಧರಿಸಿಕೊಂಡು ಚಿಗುರೆಲೆಗಳ ಹಾಸಿಗೆಯ ಮೇಲೆ ತನ್ನ ಮೈಯನ್ನು ಗಾಳಿಗೆ ಒಡ್ಡಿಕೊಂಡು ಮಲಗಿ ನಿದ್ರಾವಶನಾದ ಚಂದ್ರಹಾಸನನ್ನು ಕಂಡು ಆಶ್ಚರ್ಯಚಕಿತಳಾದಳು.

ಸುತ್ತ ನೋಡುವಳೊಮ್ಮೆ ನೂಪುರವಲುಗದಂತೆ

ಹತ್ತೆ ಸಾರುವಳೊಮ್ಮೆ ಸೋಂಕಲೆಂತಹುದೆಂದು

ಮತ್ತೆ ಮುರಿದಪಳೊಮ್ಮೆ ಹಜ್ಜೆ ಹಜ್ಜೆಯ ಮೇಲೆ ಸಲ್ವಳಮ್ಮದೆ ನಿಲ್ವಳು

ಚಿತ್ತದೊಳ್ ನಿಶ್ಚೈಸಿ ನೆಱೆಯಲೆಳಸುವಳೊಮ್ಮೆ

ಹೊತ್ತಲ್ಲದನುಚಿತಕೆ ಬೆದಱಿ ಹಿಂಗುವಳೊಮ್ಮೆ

ತತ್ತಳದ ಬೇಟದೊಳ್ ಬೆಂಡಾಗಿ ವಿಷಯೆ ನಿಂದಿರ್ದಳಾತನ ಪೊಱೆಯೊಳು    ೩

ಪದ್ಯದ ಅನ್ವಯಕ್ರಮ:

ಒಮ್ಮೆ ಸುತ್ತ ನೋಡುವಳ್, ಒಮ್ಮೆ ನೂಪುರ ಅಲುಗದಂತೆ ಹತ್ತೆ ಸಾರುವಳ್, ಒಮ್ಮೆ ಸೋಂಕಲ್ ಎಂತಹುದೋ ಎಂದು, ಮತ್ತೆ ಮುರಿದಪಳ್, ಒಮ್ಮೆ ಹಜ್ಜೆ ಹಜ್ಜೆಯ ಮೇಲೆ ಸಲ್ವಳ್, ಅಮ್ಮದೆ ನಿಲ್ವಳು, ಒಮ್ಮೆ ಚಿತ್ತದೊಳ್ ನಿಶ್ಚೈಸಿ ನೆಱೆಯಲ್ ಎಳಸುವಳ್, ಒಮ್ಮೆ ಹೊತ್ತಲ್ಲದ ಅನುಚಿತಕೆ ಬೆದಱಿ ಹಿಂಗುವಳ್, ತತ್ತಳದ ಬೇಟದೊಳ್ ಬೆಂಡಾಗಿ ವಿಷಯೆ ಆತನ ಪೊಱೆಯೊಳು ನಿಂದಿರ್ದಳ್

ಪದ-ಅರ್ಥ:

ನೂಪುರ-ಕಾಲಂದುಗೆ, ಕಾಲ್ಗೆಜ್ಜೆ; ಅಲುಗು-ಸದ್ದಾಗು;  ಹತ್ತೆ ಸಾರು-ಹತ್ತಿರ ಹೋಗು; ಸೋಂಕು-ಸ್ಪರ್ಶಿಸು; ಮುರಿದಪಳ್-ಹಿಂತಿರುಗುತ್ತಾಳೆ; ಸಲ್ವಳ್-ಮುಂದುವರಿಯುತ್ತಾಳೆ; ಅಮ್ಮದೆ-ಸಾಧ್ಯವಾಗದೆ; ಚಿತ್ತ-ಮನಸ್ಸು; ನೆಱೆಯಲ್-ಕೂಡಲು, ಸೇರಿಕೊಳ್ಳಲು; ಎಳಸು-ಬಯಸು; ಹೊತ್ತಲ್ಲದ –ಯುಕ್ತವಲ್ಲದ ಸಮಯ; ಹಿಂಗು-ಹಿಂಜರಿ, ಹಿಂದೇಟುಹಾಕು; ತತ್ತಳದ ಬೇಟ-ತಲ್ಲಣಗೊಳಿಸುವ ಪ್ರೇಮ; ಬೆಂಡಾಗಿ-ಕಳವಳಗೊಂಡು; ಪೊಱೆಯೊಳು-ಪಕ್ಕದಲ್ಲಿ.

ವಿಷಯೆ ಒಮ್ಮೆ ಸುತ್ತಮುತ್ತ ನೋಡುತ್ತಾಳೆ, ಒಮ್ಮೆ ತನ್ನ ಕಾಲಂದುಗೆಯ ಸದ್ದಾಗದಂತೆ ಆತನ ಹತ್ತಿರಕ್ಕೆ ಹೋಗುತ್ತಾಳೆ. ಒಮ್ಮೆ ಆತನನ್ನು ಸ್ಪರ್ಶಿಸಿದರೆ ಹೇಗಿರಬಹುದು? ಎಂದು ಆಶಿಸುತ್ತಾಳೆ. ಹಾಗೆ ಸ್ಪರ್ಶಿಸುವುದಕ್ಕೆ ಸಾಧ್ಯವಾಗದೆ ಹಿಂತಿರುಗುತ್ತಾಳೆ. ಒಮ್ಮೆ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಮುಂದುವರಿಯುತ್ತಾಳೆ. ಆದರೆ ಸಾಧ್ಯವಾಗದೆ ನಿಂತುಕೊಳ್ಳುತ್ತಾಳೆ. ಒಮ್ಮೆ ಆತನನ್ನು ಕೂಡಿಕೊಳ್ಳಲು ಮನಸ್ಸಿನಲ್ಲಿಯೇ ಬಯಸುತ್ತಾಳೆ. ಆದರೆ ಕೂಡುವುದಕ್ಕೆ ಇದು ಸರಿಯಾದ ಹೊತ್ತಲ್ಲ, ಇದು ಅನುಚಿತವೆಂದು  ಹಿಂಜರಿಯುತ್ತಾಳೆ. ಅಂತೂ ಆಕೆಯ ಮನಸ್ಸು, ದೇಹದಲ್ಲಾಗುತ್ತಿರುವ ತಲ್ಲಣಗೊಳಿಸುವ ಪ್ರೇಮದಲ್ಲಿ ಕಳವಳಗೊಂಡು ಆತನ ಪಕ್ಕದಲ್ಲಿಯೇ ನಿಂತುಕೊಳ್ಳುತ್ತಾಳೆ.

ದಿವಿಜೇಂದ್ರತನಯ ಕೇಳೀ ತೆಱದೊಳಾಗ ನವ

ಯುವತಿ ನಿಂದೀಕ್ಷಿಸುತ ಕಂಡಳವನಂಗದೊಳೆ

ಸವರುಚಿರ ಕಂಚುಕದ ತುದಿಸೆಱಗಿನೊಳ್ ಕಟ್ಟಿಕೊಂಡಿರ್ದ ಪತ್ರಿಕೆಯನು

ತವಕದಿಂ ಬಿಟ್ಟು ಮುದ್ರೆಯನೋಸರಿಸಿ ತೆಗೆದು

ವಿವರದೊಳ್ ತನ್ನ ತಂದೆಯ ಹೆಸರ ಬರಹಮಿರೆ

ಲವಲವಿಕೆ ಮಿಗೆ ನೋಡಿ ಹರ್ಷಪುಲಕದೊಳಂದು ನಿಂದೋದಿಕೊಳುತಿರ್ದಳು    ೪

ಪದ್ಯದ ಅನ್ವಯಕ್ರಮ:

ದಿವಿಜೇಂದ್ರತನಯ ಕೇಳ್, ಈ ತೆಱದೊಳ್ ಆಗ ನವಯುವತಿ ನಿಂದು ಈಕ್ಷಿಸುತ ಕಂಡಳ್, ಅವನ ಅಂಗದೊಳ್ ಎಸೆವ ರುಚಿರ ಕಂಚುಕದ ತುದಿ ಸೆಱಗಿನೊಳ್ ಕಟ್ಟಿಕೊಂಡಿರ್ದ ಪತ್ರಿಕೆಯನು, ತವಕದಿಂ ಬಿಟ್ಟು ಮುದ್ರೆಯನ್ ಓಸರಿಸಿ ತೆಗೆದು, ವಿವರದೊಳ್ ತನ್ನ ತಂದೆಯ ಹೆಸರ ಬರಹಂ ಇರೆ, ಲವಲವಿಕೆ ಮಿಗೆ, ನೋಡಿ ಹರ್ಷಪುಲಕದೊಳ್ ಅಂದು ನಿಂದು ಓದಿಕೊಳುತ ಇರ್ದಳು.

ಪದ-ಅರ್ಥ:

ದಿವಿಜೇಂದ್ರ-ದೇವೇಂದ್ರ; ತನಯ-ಮಗ(ಅರ್ಜುನ); ತೆಱ-ರೀತಿ; ನವಯುವತಿ-ಯೌವನಕ್ಕೆ ಕಾಲಿರಿಸಿದ ಹೆಣ್ಣು; ಈಕ್ಷಿಸು-ನೋಡು; ಅಂಗ-ದೇಹ; ಎಸೆವ-ಶೋಭಿಸುವ; ರುಚಿರ-ಸುಂದರವಾದ, ಮನೋಹರವಾದ; ಕಂಚುಕ-ನಿಲುವಂಗಿ; ತುದಿಸೆಱಗು-ತುದಿಭಾಗ; ಪತ್ರಿಕೆ-ಪತ್ರ; ತವಕ-ಕುತೂಹಲ; ಓಸರಿಸಿ-ಸರಿಸಿಕೊಂಡು; ಮಿಗೆ-ಅತಿಯಾಗು; ಪುಲಕ-ರೋಮಾಂಚನ.

ದೇವೇಂದ್ರ ತನಯನಾದ ಅರ್ಜುನನೇ ಕೇಳು, ಈ ರೀತಿಯಲ್ಲಿ ಯೌವನಕ್ಕೆ ಕಾಲಿರಿಸಿದ ಚೆಲುವೆ ವಿಷಯೆ ಆತನ ಹತ್ತಿರ ನಿಂತುಕೊಂಡು ನೋಡುತ್ತಿದ್ದಾಗ, ಆತನ ನಿಲುವಂಗಿಯ ತುದಿಭಾಗದಲ್ಲಿ ಕಟ್ಟಿಕೊಂಡಿದ್ದ ಪತ್ರವನ್ನು ಕಂಡು ಕುತೂಹಲದಿಂದ ಮೆಲ್ಲನೆ ತೆಗೆದು ಅದರ ಮುದ್ರೆಯನ್ನು ಸರಿಸಿಕೊಂಡು ಪತ್ರದ ವಿವರದಲ್ಲಿ ತನ್ನ ತಂದೆಯ ಹೆಸರು ಹಾಗೂ ಬರಹವಿರುವುದನ್ನು ಗಮನಿಸಿದಳು. ಆಕೆಯ ಲವಲವಿಕೆ ಅತಿಯಾಗಿ ಹರುಷ ಹಾಗೂ ರೋಮಾಂಚನಗಳಿಂದ ಅಲ್ಲಿಯೇ ನಿಂತುಕೊಂಡು ಆಕೆ ಪತ್ರವನ್ನು ಓದಿಕೊಳ್ಳತೊಡಗಿದಳು.

ಶ್ರೀಮತ್ಸಚಿವಶಿರೋಮಣಿ ದುಷ್ಟಬುದ್ಧಿ ಸು

ಪ್ರೇಮದಿಂ ತನ್ನ ಮಗ ಮದನಂಗೆ ಮಿಗೆ ಪರಸಿ

ನೇಮಿಸಿದ ಕಾರ್ಯಮೀ ಚಂದ್ರಹಾಸಂ ಮಹಾಹಿತನೆಮಗೆ ಮೇಲೆ ನಮ್ಮ

ಸೀಮೆಗರಸಾದಪಂ ಸಂದೇಹಮಿಲ್ಲಿದಕೆ

ಸಾಮಾನ್ಯದವನಲ್ಲ ನಮಗೆ ಮುಂದಕೆ ಸರ್ವ

ಥಾಮಿತ್ರನಪ್ಪನೆಂದೀತನಂ ಕಳುಹಿದೆವು ನಿನ್ನ ಬಳಿಗಿದನಱಿವುದು          ೫

ಪದ್ಯದ ಅನ್ವಯಕ್ರಮ:

ಶ್ರೀಮತ್ ಸಚಿವ ಶೀರೋಮಣಿ ದುಷ್ಟಬುದ್ಧಿ ಸುಪ್ರೇಮದಿಂ ತನ್ನ ಮಗ ಮದನಂಗೆ ಮಿಗೆ ಪರಸಿ ನೇಮಿಸಿದ ಕಾರ್ಯಂ, ಈ ಚಂದ್ರಹಾಸಂ ಎಮಗೆ ಮಹಾಹಿತನ್, ಮೇಲೆ ನಮ್ಮ ಸೀಮೆಗೆ ಅರಸಾದಪಂ, ಇದಕೆ ಸಂದೇಹಂ ಇಲ್ಲ, ನಮಗೆ ಸಾಮಾನ್ಯದವನಲ್ಲ, ಮುಂದಕೆ ಸರ್ವಥಾ ಮಿತ್ರನಪ್ಪನ್ ಎಂದು ಈತನಂ ನಿನ್ನ ಬಳಿಗೆ ಕಳುಹಿದೆವು, ಇದನ್ ಅರಿವುದು.

ಪದ-ಅರ್ಥ:

ಸಚಿವಶಿರೋಮಣಿ-ಮಂತ್ರಿಶ್ರೇಷ್ಠ; ಸುಪ್ರೇಮದಿಂ-ಪ್ರೀತಿಪೂರ್ವಕ; ಮಿಗೆ-ಹೆಚ್ಚಾಗಿ, ಅಧಿಕವಾಗಿ; ಪರಸಿ-ಹರಸಿ; ನೇಮಿಸಿದ-ವಹಿಸಿದ; ಕಾರ್ಯ-ಕೆಲಸ; ಮಹಾಹಿತ(ಮಹಾ+ಅಹಿತ) ಕಡು ವಿರೋಧಿ; ಮೇಲೆ-ಇನ್ನು  ಮುಂದೆ; ಸೀಮೆ-ರಾಜ್ಯ; ಅರಸಾದಪಂ-ಅರಸನಾಗುವನು; ಸರ್ವಥಾಮಿತ್ರನಪ್ಪನ್(ಸರ್ವಥಾ ಅಮಿತ್ರನ್ ಅಪ್ಪನ್) –ಯಾವತ್ತೂ ವಿರೋಧಿಯಾಗಿಯೇ ಇರುತ್ತಾನೆ; ಅಱಿವುದು-ತಿಳಿಯುವುದು.

ಶ್ರೀಮತ್ ಸಚಿವ ಶೀರೋಮಣಿಯಾದ ದುಷ್ಟಬುದ್ಧಿಯು ಪ್ರೀತಿಪೂರ್ವಕವಾಗಿ ತನ್ನ ಮಗನಾದ ಮದನನಿಗೆ ವಿಶೇಷವಾಗಿ ಹರಸಿ ನೇಮಿಸಿದ ಕಾರ್ಯ, ಈ ಚಂದ್ರಹಾಸನು ನಮಗೆ ಮಹಾಹಿತನು, ಮುಂದೆ ಭವಿಷ್ಯದಲ್ಲಿ ನಮ್ಮ ರಾಜ್ಯಕ್ಕೆ ಅರಸನಾಗುತ್ತಾನೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಈತ ಸಾಮಾನ್ಯದವನಲ್ಲ. ಮುಂದೆ ನಮಗೆ ಈತ ಯಾವತ್ತೂ ಅಮಿತ್ರ(ವಿರೋಧಿ)ನಾಗಿಯೇ ಇರುತ್ತಾನೆ ಎಂದು ಈತನನ್ನು ನಿನ್ನ ಬಳಿಗೆ ಕಳುಹಿಸಿದ್ದೇವೆ, ನೀನು ಇದನ್ನು ಅರಿತುಕೊಳ್ಳಬೇಕು.

ಹೊತ್ತುಗಳೆಯದೆ ಬಂದ ಬಳಿಕಿವನ ಕುಲ ಶೀಲ

ವಿತ್ತ ವಿದ್ಯಾ ವಯೋ ವಿಕ್ರಮಂಗಳನೀಕ್ಷಿ

ಸುತ್ತಿರದೆ ವಿಷವ ಮೋಹಿಸುವಂತೆ ಕುಡುವುದೀತಂಗೆ ನೀನದಱೊಳೆಮಗೆ

ಉತ್ತರೋತ್ತರಮಪ್ಪುದೆಂದು ಬರೆದಿಹ ಲಿಪಿಯ

ನೆತ್ತಿ ವಾಚಿಸಿಕೊಂಡು ತರಳಾಕ್ಷಿ ತಾನದಕೆ

ಮತ್ತೊಂದಭಿಪ್ರಾಯಮಂ ತಳಿದಳುಲ್ಲಂಘಿಸುವರುಂಟೆ ವಿಧಿಕೃತವನು

ಪದ್ಯದ ಅನ್ವಯಕ್ರಮ:

ಹೊತ್ತು ಕಳೆಯದೆ, ಬಂದ ಬಳಿಕ ಇವನ ಕುಲ, ಶೀಲ, ವಿತ್ತ, ವಿದ್ಯಾ, ವಯೋ, ವಿಕ್ರಮಂಗಳನ್ ಈಕ್ಷಿಸುತ್ತಿರದೆ ನೀನು ಈತಂಗೆ ವಿಷವ ಮೋಹಿಸುವಂತೆ ಕುಡುವುದು, ಇದಱೊಳ್ ಎಮಗೆ ಉತ್ತರೋತ್ತರಂ ಅಪ್ಪುದು, ಎಂದು ಬರೆದಿಹ ಲಿಪಿಯನ್ ಎತ್ತಿ ವಾಚಿಸಿಕೊಂಡು ತರಳಾಕ್ಷಿ ತಾನು ಅದಕೆ ಮತ್ತೊಂದು ಅಭಿಪ್ರಾಯವನು ತಳಿದಳ್, ವಿಧಿಕೃತವನು ಉಲ್ಲಂಘಿಸುವವರು ಉಂಟೇ?

ಪದ-ಅರ್ಥ:

ಹೊತ್ತುಗಳೆ-ಕಾಲಹರಣ ಮಾಡು; ಕುಲ-ವಂಶ; ಶೀಲ-ನಡತೆ; ವಿತ್ತ-ಸಂಪತ್ತು; ವಯೋ-ವಯಸ್ಸು; ವಿಕ್ರಮ-ಪರಾಕ್ರಮ; ಈಕ್ಷಿಸುತ್ತಿರದೆ-ನೋಡದೆ; ವಿಷವ ಮೋಹಿಸುವಂತೆ-ವಿಷವನ್ನು ಕುಡಿಯುವಂತೆ; ಕುಡುವುದು-ಕೊಡುವುದು; ಉತ್ತರೋತ್ತರಮಪ್ಪುದು-ಅತ್ಯಂತ ಏಳಿಗೆಯಾಗುವುದು; ತಳಿದಳು-ತಳೆದಳು, ಹೊಂದಿದಳು; ವಿಧಿಕೃತ-ವಿಧಿಲೀಲೆ.

’ಈತ ಬಂದ ಕೂಡಲೇ ತಡಮಾಡದೆ ಇವನ ವಂಶ, ಗುಣನಡತೆ, ಸಿರಿವಂತಿಕೆ, ವಿದ್ಯೆ, ವಯಸ್ಸು, ಪರಾಕ್ರಮಗಳನ್ನು ಅವಲೋಕಿಸುತ್ತಿರದೆ ನೀನು ಈತನಿಗೆ ವಿಷವನ್ನು ಉಣಿಸಬೇಕು. ಹೀಗೆ ಮಾಡುವುದರಿಂದ ನಮಗೆ ಮುಂದೆ ಅತ್ಯಂತ ಏಳಿಗೆಯಾಗುತ್ತದೆ’ ಎಂದು ಬರೆದಿರುವ ಪತ್ರದ ಬರಹವನ್ನು ಓದಿಕೊಂಡು ಚೆಲುವೆ ವಿಷಯೆ ಆ ಮಾತುಗಳಿಗೆ ಬೇರೊಂದು ಅರ್ಥವನ್ನು ಗ್ರಹಿಸಿಕೊಂಡಳು. ವಿಧಿಲೀಲೆಯನ್ನು ಮೀರುವುದಕ್ಕೆ ಸಾಧ್ಯವೇ?

ಈತಂ ತಮಗೆ ಮಹಾಹಿತನೆಂದು ತಮ್ಮ ಧರೆ

ಗೀತನರಸಹನೆಂದು ಕುಲ ಶೀಲ ವಿದ್ಯೆಗಳ

ನೀತನೊಳರಸಬೇಡವೆಂದು ಮುಂದಕೆ ಸರ್ವಥಾಮಿತ್ರನಪ್ಪನೆಂದು

ಈತಂಗೆ ವಿಷಯೆ ಮೋಹಿಸುವಂತೆ ಕುಡುವುದೆಂ

ದಾ ತಾತನಣ್ಣಂಗೆ ಬರೆಸಿ ಕಳುಹಿದ ಪ್ರತ್ರ

ವೇ ತಪ್ಪದಿದು ವರ್ಣಪಲ್ಲಟದ ದೋಷವೆಂದಬಲೆ ಭಾವಿಸುತ್ತಿರ್ದಳು    ೭

ಪದ್ಯದ ಅನ್ವಯಕ್ರಮ:

ಈತಂ ತಮಗೆ ಮಹಾ ಹಿತನ್ ಎಂದು, ತಮ್ಮ ಧರೆಗೆ ಈತನ್ ಅರಸನಹನ್ ಎಂದು; ಕುಲ, ಶೀಲ, ವಿದ್ಯೆಗಳನ್ ಈತನೊಳ್ ಅರಸಬೇಡವೆಂದು; ಮುಂದಕೆ ಸರ್ವಥಾ ಮಿತ್ರನಪ್ಪನ್ ಎಂದು; ಈತಂಗೆ ವಿಷಯೆ ಮೋಹಿಸುವಂತೆ ಕುಡುವುದು ಎಂದು ಆ ತಾತನ್ ಅಣ್ಣಂಗೆ ಬರೆಸಿ ಕಳುಹಿದ ಪತ್ರವೇ ತಪ್ಪದಿದು ವರ್ಣಪಲ್ಲಟದ ದೋಷ ಎಂದು ಅಬಲೆ ಭಾವಿಸುತ್ತಿರ್ದಳು.

ಪದ-ಅರ್ಥ:

ಮಹಾಹಿತನ್-ಮಹಾ ಹಿತನಾದವನು; ಧರೆ-ಭೂಮಿ, ರಾಜ್ಯ; ಅರಸನಹನ್-ಅರಸನಾಗುತ್ತಾನೆ; ಅರಸಬೇಡ-ಹುಡುಕಬೇಡ; ಸರ್ವಥಾ ಮಿತ್ರನಪ್ಪನ್-ಯಾವತ್ತೂ ಮಿತ್ರನಾಗಿಯೇ ಇರುತ್ತಾನೆ; ವಿಷಯೆ ಮೋಹಿಸುವಂತೆ-ವಿಷಯೆಯನ್ನು ಇಷ್ಟಪಡುವಂತೆ; ಕುಡುವುದು-ಕೊಡುವುದು; ತಾತ-ಅಪ್ಪ; ಅಣ್ಣಂಗೆ-ಅಣ್ಣನಾದ ಮದನನಿಗೆ; ವರ್ಣಪಲ್ಲಟ-ಅಕ್ಷರ ಪಲ್ಲಟ; ದೋಷ-ತಪ್ಪು; ಅಬಲೆ-ಹೆಣ್ಣು(ವಿಷಯೆ)

’ಈತನು (ಚಂದ್ರಹಾಸನು) ಮಹಾ ಹಿತನಾದವನು, ಮುಂದೆ ನಮ್ಮ ರಾಜ್ಯಕ್ಕೆ ಅರಸನಾಗುವವನು, ಮುಂದೆ ಯಾವತ್ತೂ ಮಿತ್ರನಾಗಿಯೇ ಇರುವುದರಿಂದ, ಈತನಲ್ಲಿ ಕುಲ, ಶೀಲ, ವಿದ್ಯೆಗಳನ್ನು ಹುಡುಕದೆ(ವಿಚಾರಿಸದೆ) ಈತನಿಗೆ ವಿಷಯೆಯನ್ನು ಮೋಹಿಸುವಂತೆ(ಇಷ್ಟಪಡುವಂತೆ) ಕೊಡುವುದು’ ಎಂದು ತನ್ನ ತಂದೆ ಅಣ್ಣನಾದ ಮದನನಿಗೆ ಬರೆಸಿ ಕಳುಹಿಸಿದ ಪತ್ರವೇ ಇದು. ಆದರೆ ಅಕ್ಷರಪಲ್ಲಟದ ದೋಷವಿದೆಯಲ್ಲ ಎಂದು ವಿಷಯೆ ಭಾವಿಸಿದಳು.

ಕಡು ಚೆಲ್ವನಾದ ವರನಂ ಕಂಡು ನಿಶ್ಚೈಸಿ

ತಡೆಯದಿಂದೀತಂಗೆ ವಿಷಯೆ ಮೋಹಿಸುವಂತೆ

ಕುಡುವುದೆಂದಲ್ಲಿಂದೆ ತನ್ನ ಪಿತನೀತನಂ ಕಳುಹಿದಂ ಸುತನ ಬಳಿಗೆ

ಒಡಗೂಡದಿರದೆನ್ನ ಮನದೆಣಿಕೆ ಪತ್ರಿಕೆಯೊ

ಳೆಡಹಿ ಬರೆದಕ್ಕರದ ಬೀಳಿರ್ದೊಡದಱಿಂದೆ

ಕೆಡುವುದಗ್ಗದ ಕಜ್ಜಮೆಂದಾ ತರುಣಿ ತಾನದಂ ತಿದ್ದಲನುಗೈದಳು     ೮

ಪದ್ಯದ ಅನ್ವಯಕ್ರಮ:

ಕಡು ಚೆಲ್ವನಾದ ವರನಂ ಕಂಡು ನಿಶ್ಚೈಸಿ, ತಡೆಯದೆ ’ಇಂದು ಈತಂಗೆ ವಿಷಯೆ ಮೋಹಿಸುವಂತೆ ಕುಡುವುದು’ ಎಂದು ಅಲ್ಲಿಂದೆ ತನ್ನ ಪಿತನ್ ಈತನಂ ಸುತನ ಬಳಿಗೆ ಕಳುಹಿದಂ. ಎನ್ನ ಮನದ ಎಣಿಕೆ ಒಡಗೂಡದೆ ಇರದು, ಪತ್ರಿಕೆಯೊಳ್ ಎಡಹಿ ಬರೆದ ಅಕ್ಕರದ ಬೀಳ್ ಇರ್ದೊಡೆ ಅದಱಿಂದೆ ಕೆಡುವುದು ಅಗ್ಗದ ಕಜ್ಜಂ ಎಂದು ಆ ತರುಣಿ ತಾನು ಅದಂ ತಿದ್ದಲ್ ಅನುಗೈದಳು.

ಪದ-ಅರ್ಥ:

ಕಡು-ಅತಿಯಾದ, ವಿಶೇಷವಾದ; ಚೆಲ್ವ-ಚೆಲುವ; ಕುಡುವುದು-ಕೊಡುವುದು; ಪಿತ-ತಂದೆ; ಒಡಗೂಡು-ಈಡೇರು; ಮನದ ಎಣಿಕೆ-ಮನಸ್ಸಿನ ಬಯಕೆ; ಎಡಹಿ-ತಪ್ಪಿ; ಅಕ್ಕರ-ಅಕ್ಷರ; ಬೀಳ್-ದೋಷ; ಅಗ್ಗದ-ಶ್ರೇಷ್ಠವಾದ; ಕಜ್ಜ-ಕಾರ್ಯ; ಅನುಗೈದಳು-ಸಿದ್ಧಳಾದಳು.

ತನ್ನ ತಂದೆ ದುಷ್ಟಬುದ್ಧಿ  ತನಗಾಗಿ ಬಹಳ ಚೆಲುವನಾದ ವರನನ್ನು ಕಂಡು ನಿಶ್ಚೈಸಿ ತಡಮಾಡದೆ, ಈ ಕೂಡಲೇ ಈತನಿಗೆ(ಚಂದ್ರಹಾಸನಿಗೆ) ವಿಷಯೆಯನ್ನು ಮೋಹಿಸುವಂತೆ(ಮದುವೆಮಾಡಿ) ಕೊಡಬೇಕು ಎಂದು ಈತನನ್ನು(ಚಂದ್ರಹಾಸನನ್ನು) ಚಂದನಾವತಿಯಿಂದ ತನ್ನ ಅಣ್ಣನಲ್ಲಿಗೆ ಕಳುಹಿಸಿಕೊಟ್ಟಿದ್ದಾನೆ. ಕೆಲವು ಸಮಯದಿಂದ ತಾನು ಮನಸ್ಸಿನಲ್ಲಿ ಹೊಂದಿದ್ದ ಬಯಕೆ ಈಗ ಈಡೇರದೆ ಇರಲಾರದು. ಆದರೆ, ಪತ್ರದಲ್ಲಿ ತಪ್ಪಿ ಬರೆದಿರುವ ಅಕ್ಷರದೋಷದಿಂದಾಗಿ ಒಳ್ಳೆಯ ಕಾರ್ಯವೇ ಕೆಟ್ಟುಹೋಗಬಹುದು ಎಂದು ವಿಷಯೆ ಅದನ್ನು ತಿದ್ದಲು ಸಿದ್ಧಳಾದಳು.

ತಪ್ಪಿರ್ದ ಲಿಪಿಯೊಳ್ ವಕಾರಮಂ ತೊಡೆದಲ್ಲಿ

ಗೊಪ್ಪುವ ಯೆಕಾರಮಂ ಕೆಲಬಲದ ಮಾಮರದೊ

ಳಿಪ್ಪ ನಿ‍ರ್ಯಾಸಮಂ  ತೆಗೆದು  ಕಿಱುಬೆರಳುಗುರ್ಗೊನೆಯಿಂದೆ ತಿದ್ದಿಬರೆದು

ಅಪ್ಪಂತೆ ಮೊದಲಿರ್ದ ಮುದ್ರೆಯಂ ಸಂಘಟಿಸಿ

ಕುಪ್ಪಸದ ಸೆಱಗಿನೊಳ್ ಕಟ್ಟಿ ಪಳೆಯವೊಲಿರಿಸಿ

ಸಪ್ಪಳಾಗದ ತೆಱದೊಳೆದ್ದು ಮೆಲ್ಲನೆ ಮಂತ್ರಿಸುತೆ ತೊಲಗಿ ಬರುತಿರ್ದಳು        ೯

ಪದ್ಯದ ಅನ್ವಯಕ್ರಮ:

ಕೆಲಬಲದ  ಮಾಮರದೊಳ್ ಇಪ್ಪ ನಿರ್ಯಾಸಮಂ ತೆಗೆದು, ಕಿಱುಬೆರಳ ಉಗುರ್ ಕೊನೆಯಿಂದ, ತಪ್ಪಿರ್ದ ಲಿಪಿಯೊಳ್ ವಕಾರಮಂ ತೊಡೆದು, ಅಲ್ಲಿಗೆ ಒಪ್ಪುವ ಯೆಕಾರಮಂ ತಿದ್ದಿ ಬರೆದು, ಅಪ್ಪಂತೆ ಮೊದಲಿರ್ದ ಮುದ್ರೆಯಂ ಸಂಘಟಿಸಿ, ಕುಪ್ಪಸದ ಸೆಱಗಿನೊಳ್ ಕಟ್ಟಿ ಪಳೆಯವೊಲ್ ಇರಿಸಿ, ಸಪ್ಪಳಾಗದ ತೆಱದೊಳ್ ಮಂತ್ರಿಸುತೆ ಎದ್ದು ಮೆಲ್ಲನೆ ತೊಲಗಿ ಬರುತಿರ್ದಳು.

ಪದ-ಅರ್ಥ:

ತಪ್ಪಿರ್ದ ಲಿಪಿ-ತಪ್ಪಾಗಿರುವ ಬರಹ; ತೊಡೆದು-ಅಳಿಸಿ ತೆಗೆದು; ಒಪ್ಪುವ-ಶೋಭಿಸುವ, ಸರಿಯಾದ; ಕೆಲಬಲ-ಅಕ್ಕಪಕ್ಕ; ಮಾಮರ- ಮಾವಿನ ಮರ; ಇಪ್ಪ-ಇರುವ; ನಿರ್ಯಾಸ-ಮೇಣ, ಸೊನೆ;; ಉಗುರ್ಗೊನೆ-ಉಗುರಿನ ತುದಿ; ಅಪ್ಪಂತೆ-ಇದ್ದಂತೆ; ಸಂಘಟಿಸಿ-ವ್ಯವಸ್ಥೆಗೊಳಿಸಿ; ಕುಪ್ಪಸ-ಅಂಗಿ; ಸೆಱಗು-ತುದಿ; ಪಳೆಯವೊಲ್-ಹಿಂದಿದ್ದ ಹಾಗೆ; ಸಪ್ಪಳ-ಸದ್ದು.

ಅಕ್ಕಪಕ್ಕದ ಮಾವಿನ ಮರಗಳ ಮೇಣವನ್ನು ತೆಗೆದುಕೊಂಡು, ಪತ್ರದ ಬರಹದಲ್ಲಿ ತಪ್ಪಾಗಿರುವ ’ವ’ಕಾರವನ್ನು ಅಳಿಸಿತೆಗೆದು, ತನ್ನ ಕಿರುಬೆರಳಿನ ಉಗುರಿನ ತುದಿಯಿಂದ ತಪ್ಪಾದ ಅಕ್ಷರದ ಸ್ಥಾನಕ್ಕೆ ಸರಿಯಾದ ’ಯೆ’ಕಾರವನ್ನು ಬರೆದು, ಹಿಂದೆ ಇದ್ದಂತೆಯೇ ಮುದ್ರೆಯನ್ನು ವ್ಯವಸ್ಥೆಗೊಳಿಸಿ ಅಂಗಿಯ ತುದಿಯಲ್ಲಿ ಕಟ್ಟಿ ಹಿಂದಿನಂತೆಯೇ ಇರಿಸಿ, ಮಂತ್ರಿಯ ಮಗಳಾದ ವಿಷಯೆ ಸದ್ದಾಗದ ರೀತಿಯಲ್ಲಿ ಮೆಲ್ಲನೆ ಹೊರಟು ಬರುತ್ತಿದ್ದಳು.

ದಿಟ್ಟಿ ಮುರಿಯದು ಕಾಲ್ಗಳಿತ್ತ ಬಾರವು ಮನಂ

ನಟ್ಟು ಬೇರೂಱಿದುದು ಕಾಮನಂಬಿನ ಗಾಯ

ವಿಟ್ಟಣಿಸಿತಂಗಲತೆ ಕಾಹೇಱಿತೊಡಲೊಳಗೆ ವಿರಹದುರಿ ತಲೆದೋಱಿತು

ಬಟ್ಟೆವಿಡಿದೊಡನೊಡನೆ ತಿರುತಿರುಗಿ ನೋಡುತಡಿ

ಯಿಟ್ಟಳೀಚೆಗೆ ಬಳಿಕ ಬೆರಸಿದಳ್ ಕೆಳದಿಯರ

ಥಟ್ಟಿನೊಳ್ ಸಂಭ್ರಮದ ಸಂತಾಪದೆಡೆಯಾಟದಂತರಂಗದ ಬಾಲಿಕೆ    ೧೦

ಪದ್ಯದ  ಅನ್ವಯಕ್ರಮ:

ದಿಟ್ಟಿ ಮುರಿಯದು, ಕಾಲ್ಗಳ್ ಇತ್ತ ಬಾರವು, ಮನಂ ನಟ್ಟು ಬೇರೂಱಿದುದು, ಕಾಮನ ಅಂಬಿನ ಗಾಯ ವಿಟ್ಟಣಿಸಿತು, ಅಂಗಲತೆ ಕಾಹೇಱಿತು, ಒಡಲ ಒಳಗೆ ವಿರಹದ ಉರಿ ತಲೆದೋಱಿತು, ಬಟ್ಟೆ ಪಿಡಿದು ಒಡನೆ ಒಡನೆ ತಿರುತಿರುಗಿ ನೋಡುತ ಸಂಭ್ರಮದ ಸಂತಾಪದ ಎಡೆಯಾಟದ ಅಂತರಂಗದ ಬಾಲಿಕೆ ಈಚೆಗೆ ಅಡಿಯಿಟ್ಟಳ್, ಬಳಿಕ ಕೆಳದಿಯರ ಥಟ್ಟಿನೊಳ್  ಬೆರಸಿದಳ್.

ಪದ-ಅರ್ಥ:

ದಿಟ್ಟಿ-ದೃಷ್ಟಿ; ಮುರಿ-ಬಾಗು,ಬದಲಿಸು; ಮನಂ ನಟ್ಟು ಬೇರೂಱಿದುದು-ಮನಸ್ಸು ಆತನಲ್ಲಿ ನೆಟ್ಟು ಬೇರೂರಿತು; ಕಾಮನ ಅಂಬು-ಮನ್ಮಥನ ಬಾಣ; ವಿಟ್ಟಣಿಸು-ಸಾಂದ್ರವಾಗು; ಕಾಹೇಱು-ಬಿಸಿಯಾಗು; ವಿರಹದುರಿ-ಅಗಲಿಕೆಯ ನೋವು; ಬಟ್ಟೆವಿಡಿದು-ದಾರಿ ಹಿಡಿದು; ಅಡಿಯಿಡು-ಹೆಜ್ಜೆಹಾಕು; ಬೆರಸು-ಸೇರಿಕೊಳ್ಳು; ಕೆಳದಿಯರು-ಗೆಳತಿಯರು; ಥಟ್ಟು-ಗುಂಪು, ಸಮೂಹ; ಸಂಭ್ರಮ-ಖುಷಿ; ಸಂತಾಪ-ದುಃಖ; ಎಡೆಯಾಟ- ಗೊಂದಲ; ಅಂತರಂಗ-ಮನಸ್ಸು.

ಚಂದ್ರಹಾಸನಿಂದ ದೂರ ಸರಿಯುತ್ತಿದ್ದರೂ ಆಕೆಯ ಕಣ್ಣುಗಳು ಅಲ್ಲಿಂದ ಈಚೆಗೆ ಬಾರವು. ಮನಸ್ಸು ಆತನಲ್ಲಿಯೇ ನೆಟ್ಟು ಬೇರೂರಿತು. ವಿಷಯೆಯ ಮೈ ಮನಸ್ಸುಗಳ  ಮೇಲೆ ಮನ್ಮಥನ ಹೂಬಾಣಗಳ ಗಾಯ ಸಾಂದ್ರವಾಯಿತು. ದೇಹವೆಲ್ಲವೂ ಬಿಸಿಯಾಯಿತು. ಆತನ ಅಗಲಿಕೆಯ ನೋವು ಕಾಣಿಸಿಕೊಂಡಿತು. ಸಂಭ್ರಮ ಹಾಗೂ ದುಃಖಗಳ ಗೊಂದಲದಲ್ಲಿ ಮೆಲ್ಲನೆ ತನ್ನ ದಾರಿಯನ್ನು ಹಿಡಿದು ಈಚೆಗೆ ಹೆಜ್ಜೆಹಾಕಿದಳು. ಬಳಿಕ ಮೆಲ್ಲನೆ ಬಂದು ತನ್ನ ಗೆಳತಿಯರ ಗುಂಪಿನಲ್ಲಿ ಸೇರಿಕೊಂಡಳು.

ಆಳಿಯರ್ ಕಂಡರೀಕೆಯ ಮೊಗದ ಭಾವಮಂ

ಕೇಳಿದರಿದೇನೆಲೆ ಮೃಗಾಕ್ಷಿ ತಳುವಿದೆ ಮನದ

ಬೇಳಂಬಮಾವುದುಕ್ಕುವ ಹರ್ಷರಸದೊಡನೆ ಬೆರಸಿಹುದು ಬೆದಱುವೊನಲು

ಗಾಳಿ ಪರಿಮಳವನಡಗಿಪುದುಂಟೆ ತನು ಚಿತ್ತ

ದಾಳಾಪಮಂ ಮಾಜಲಱಿಪುದೆ ಸಾಕಿನ್ನು

ಹೇಳದೊಡೆ ಮಾಣಲಂತಸ್ಥಮದು ತಾನೆ ತುಬ್ಬುವುದೆಂದು ನಗುತಿರ್ದರು  ೧೧

ಪದ್ಯದ ಅನ್ವಯಕ್ರಮ:

ಆಳಿಯರ್ ಈಕೆಯ ಮೊಗದ ಭಾವಮಂ ಕಂಡರ್, ಕೇಳಿದರ್ ಇದೇನೆಲೆ ಮೃಗಾಕ್ಷಿ ತಳುವಿದೆ?, ಮನದ ಬೇಳಂಬಂ ಆವುದು? ಉಕ್ಕುವ ಹರ್ಷರಸದೊಡನೆ ಬೆರಸಿಹುದು ಬೆದರುವೊನಲು, ಗಾಳಿ ಪರಿಮಳವನ್ ಅಡಗಿಪುದುಂಟೇ? ತನು ಚಿತ್ತದ ಆಳಾಪಮಂ ಮಾಜಲ್ ಅಱಿಪುದೇ? ಸಾಕಿನ್ನು ಹೇಳದಿರ್ದೊಡೆ ಮಾಣಲಿ ಅಂತಸ್ಥಂ ಅದು ತಾನೇ ತುಬ್ಬುವುದು ಎಂದು ನಗುತ್ತ ಇರ್ದರು.

ಪದ-ಅರ್ಥ:

ಆಳಿಯರ್-ಸಖಿಯರು; ಮೃಗಾಕ್ಷಿ-ಜಿಂಕೆಯಂತೆ ಕಣ್ಣುಳ್ಳವಳು(ಚೆಲುವೆ); ತಳುವಿದೆ-ತಡಮಾಡಿದೆ; ಬೇಳಂಬ-ಬಯಕೆ; ಆವುದು-ಯಾವುದು; ಬೆದರುವೊನಲು-ಭಯದ ಛಾಯೆ; ತನು-ದೇಹ; ಚಿತ್ತ-ಮನಸ್ಸು; ಆಳಾಪ-ಭಾವ, ಮಾತು; ಮಾಜಲ್-ಮರೆಮಾಡಲು; ಅಱಿಪುದೇ-ಸಾಧ್ಯವೇ?; ಮಾಣಲಿ-ಹೋಗಲಿ; ಅಂತಸ್ಥ-ಮನಸ್ಸು; ತುಬ್ಬು-ಹೊರಹೊಮ್ಮು.

ಸಖಿಯರು ವಿಷಯೆಯ ಮುಖದ ಭಾವವನ್ನು ನೋಡಿ, ’ಇದೇಕೆ ಚೆಲುವೆ, ತಡಮಾಡಿದೆ? ಮನಸ್ಸಿನಲ್ಲಿನ ಬಯಕೆ ಯಾವುದು? ಮುಖದಲ್ಲಿ ಹರ್ಷರಸ ಉಕ್ಕುತ್ತಿರುವುದರ ಜೊತೆಗೆ ಭಯದ ಛಾಯೆಯೂ ಇದೆಯಲ್ಲ! ಗಾಳಿ ಪರಿಮಳವನ್ನು ಆಡಗಿಸಿಕೊಳ್ಳಲು ಸಾಧ್ಯವೇ? ದೇಹ ಮನಸ್ಸಿನ ಭಾವಗಳನ್ನು ಮರೆಮಾಡಲು ಸಾಧ್ಯವೇ? ನೀನು ಹೇಳದಿದ್ದರೆ ಹಾಗಿರಲಿ, ನಿನ್ನ ಮನಸ್ಸಿನಲ್ಲಿನ ಭಾವಗಳು ತನ್ನಿಂದ ತಾನೇ ಹೊರಹೊಮ್ಮುತ್ತವೆ’ ಎಂದು ನಗತೊಡಗಿದರು.

ಕೆಳದಿಯರ ನುಡಿಗೆ ನಸುನಗುತ ನಿಜಭಾವಮಂ

ಮೊಳೆಗಾಣಿಸದೆ ಪುಸಿಗೆ ಸರಸವಾಡುತೆ ಪೊತ್ತು

ಗಳೆವ ಮಂತ್ರಿಜೆ ಸಹಿತ ತಿರುಗಿದಳ್ ಬನದಿಂದೆ ಮನೆಗೆ ಚಂಪಕಮಾಲಿನಿ

ಪೊಳಲೊಳ್ ವಿವಾಹೋತ್ಸವಂಗಳಾ ಸಮಯದೊಳ್

ಸುಳಿದುವಗ್ಗದ ಗೀತ ನೃತ್ಯ ವಾದ್ಯಂಗಳಿಂ

ಕಳಸ ಕನ್ನಡಿಗಳ ವಿಲಾಸದ ಪುರಂಧ್ರಿಯರ ಶೋಭನದ ಸುಸ್ವರದೊಳು  ೧೨

ಪದ್ಯದ ಅನ್ವಯಕ್ರಮ:

ಕೆಳದಿಯರ ನುಡಿಗೆ ನಸುನಗುತ, ನಿಜಭಾವಮಂ ಮೊಳೆಗಾಣಿಸದೆ, ಪುಸಿಗೆ ಸರಸವಾಡುತೆ ಪೊತ್ತು ಕಳೆವ ಚಂಪಕಮಾಲಿನಿ ಮಂತ್ರಿಜೆ ಸಹಿತ ಬನದಿಂದೆ ಮನೆಗೆ ತಿರುಗಿದಳ್.  ಆ ಸಮಯದೊಳ್ ಪೊಳಲೊಳ್ ವಿವಾಹ ಉತ್ಸವಂಗಳ್, ಕಳಸ, ಕನ್ನಡಿಗಳ ವಿಲಾಸದ ಪುರಂಧ್ರಿಯರ ಶೋಭನದ ಸುಸ್ವರದೊಳು   ಅಗ್ಗದ ಗೀತ, ನೃತ್ಯ, ವಾದ್ಯಗಳಿಂ ಸುಳಿದುವು

ಪದ-ಅರ್ಥ:

ಕೆಳದಿಯರ-ಗೆಳತಿಯರ; ನಿಜಭಾವ-ನಿಜವಿಷಯ; ಮೊಳೆಗಾಣಿಸದೆ-ತೋರಗೊಡದೆ; ಪುಸಿಗೆ-ಸುಮ್ಮನೆ; ಮಂತ್ರಿಜೆ-ಮಂತ್ರಿಯ ಮಗಳಾದ ವಿಷಯೆ; ಪೊಳಲೊಳ್-ಪಟ್ಟಣದಲ್ಲಿ; ವಿಲಾಸದ-ಚೆಲುವಿನ; ಪುರಂಧ್ರಿಯರ-ಹಿರಿಯ ಮುತ್ತೈದೆಯರ; ಶೋಭನ-ಮದುವೆ ಸಂಬಂಧಿ ಹಾಡುಗಳು; ಸುಸ್ವರ-ಇಂಪಾದ ಸ್ವರ.

ಗೆಳತಿಯರ ಮಾತಿಗೆ ನಸುನಗುತ್ತ, ತನ್ನ ಮನಸ್ಸಿನ ಭಾವಗಳನ್ನು ಅವರಿಗೆ ತೋರಗೊಡದೆ, ಸುಮ್ಮನೆ ಸರಸವಾಡುತ್ತ ಹೊತ್ತು ಕಳೆಯುವ ಮಂತ್ರಿಯ ಮಗಳಾದ ವಿಷಯೆ ತನ್ನ ಗೆಳತಿ ಚಂಪಕಮಾಲಿನಿಯೊಂದಿಗೆ ಉದ್ಯಾನವನದಿಂದ ಅರಮನೆಗೆ ಹಿಂತಿರುಗಿದಳು. ಆ ಸಮಯದಲ್ಲಿ ಪಟ್ಟಣದಲ್ಲಿ ಅಲ್ಲಲ್ಲಿ ವಿವಾಹೋತ್ಸವಗಳು ನಡೆಯುತ್ತಿದ್ದವು. ಕಲಶ, ಕನ್ನಡಿಗಳನ್ನು ಹಿಡಿದುಕೊಂಡು ವಿವಾಹ ಸಂಬಂಧಿ ಶೋಭನದ ಹಾಡುಗಳನ್ನು ಹಾಡುತ್ತಿರುವ ಹಿರಿಯ ಮುತ್ತೈದೆಯರು, ವಿಶೇಶವಾದ ಗೀತ, ನೃತ್ಯ, ವಾದ್ಯಗಳಿಂದ  ಅಲ್ಲಿನ ಪರಿಸರವೆಲ್ಲ  ಶೋಭಾಯಮಾನವೆನಿಸಿತು.

(೨ನೆಯ ಭಾಗದಲ್ಲಿ ಮುಂದುವರಿದಿದೆ)

Leave a Reply

Your email address will not be published. Required fields are marked *