ಸಾಹಿತ್ಯಾನುಸಂಧಾನ

heading1

ಮಾತೆಂಬ ಮುತ್ತಿನ ಹಾರ

‘ಮಾತು ಮನಸ್ಸಿನ ಕನ್ನಡಿ’ ಎಂಬುದು ಪ್ರಾಜ್ಞರ ಮಾತು. ಇದನ್ನು ನೂರಕ್ಕೆ ನೂರರಷ್ಟು ಸಮಂಜಸವೆಂದು ಹೇಳಲಾಗದಿದ್ದರೂ ಬಹುತೇಕ ಸತ್ಯ. ಒಬ್ಬನ ಮಾತುಗಳು, ಮಾತಿನ ಮೈಖರಿ, ಮಾತಿನ ಸಂದರ್ಭದಲ್ಲಿನ ಆಂಗಿಕ ಹಾವಭಾವಗಳೆಲ್ಲ ಆತ ಎಂತಹ ವ್ಯಕ್ತಿ? ಅವನ ಸ್ವಭಾವಗಳೇನು? ಅಭಿರುಚಿಗಳೇನು? ಎಂಬುದನ್ನು ವಿಶದಪಡಿಸುತ್ತವೆ. ಮಾತು ಕೇವಲ ಸಂವಹನ ಮಾಧ್ಯಮವಲ್ಲ, ಅದು ಒಬ್ಬ ವ್ಯಕ್ತಿಯ ವಿಚಾರಗಳನ್ನು, ಆಲೋಚನೆಗಳನ್ನು, ಸಂಸ್ಕೃತಿಯನ್ನು, ಜ್ಞಾನವನ್ನು, ಪ್ರತಿಭೆಯನ್ನು  ಸಮರ್ಥವಾಗಿ ಬಿಂಬಿಸುವ ಸಾಧನ. ‘ಮಾತು’ ವ್ಯಕ್ತಿಯೊಬ್ಬ ಗಣ್ಯನೆನಿಸಿಕೊಳ್ಳುವುದಕ್ಕೆ, ಜ್ಞಾನಿಯೆನಿಸಿಕೊಳ್ಳುವುದಕ್ಕೆ, ಮೇಲಾಗಿ ಮನುಷ್ಯನೆನಿಸಿಕೊಳ್ಳುವುದಕ್ಕೆ ಸಹಕಾರಿ. ಹಾಗಾಗಿಯೇ ಭಾರತದಲ್ಲಿ ಮಾತಿಗೆ ಮೊದಲ ಮನ್ನಣೆ. ‘ಮಾತು ಮನೆಕೆಡಿಸಿತು’, ‘ಮಾತುಬಲ್ಲವನಿಗೆ ಜಗಳವಿಲ್ಲ’, ‘ಮಾತೇ ಮಾಣಿಕ್ಯ’ ಮೊದಲಾದ ಗಾದೆಮಾತುಗಳು ಮಾತಿನ ಮಹತ್ವಕ್ಕೆ ಪ್ರತೀಕ. ಮಾತು ಮನುಷ್ಯರನ್ನು ಉಳಿಸಬಲ್ಲುದು, ಹಾಗೆಯೇ ಅಳಿಸಲೂ ಬಲ್ಲುದು, ಬೆಸೆಯಬಲ್ಲುದು, ಹೊಸೆಯಲೂ ಬಲ್ಲುದು. ಒಳಿತನ್ನು ಬಯಸಿ ಆಡಿದರೆ ಮನುಷ್ಯತ್ವದ ಜೊತೆಗೆ ಜೀವವನ್ನೂ ಉಳಿಸಬಲ್ಲುದು, ಕೆಡುಕನ್ನು ಬಯಸಿ ಆಡಿದರೆ ಮನುಷ್ಯತ್ವದ ಜೊತೆಗೆ ಸಮಾಜವನ್ನೂ ನಾಶಮಾಡಬಲ್ಲುದು. ಅದಕ್ಕಾಗಿಯೇ ನಮ್ಮ ಹಿರಿಯರು ಭಾಷೆಗೆ ಮೊದಲ ಸ್ಥಾನ ಮಾನವನ್ನು ನೀಡಿದರು.

ಬಸವಣ್ಣನವರು, ತಮ್ಮ ಒಂದು ವಚನದಲ್ಲಿ, “ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ  ಶಲಾಕೆಯಂತಿರಬೇಕು, ನುಡಿದರೆ, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು” ಎಂದಿದ್ದಾರೆ. ಬಸವಣ್ಣನವರ ಈ ಮಾತುಗಳು ಬದುಕಿನಲ್ಲಿ ಮಾತಿನ ಮಹತ್ವವನ್ನು, ಅದರ ಶ್ರೇಷ್ಠತೆಯನ್ನು, ಅದರಿಂದ ಮನುಷ್ಯನಿಗೆ ಒದಗುವ ಉನ್ನತಿಯನ್ನು ಲೊಕಕ್ಕೆ ಸಾರುತ್ತವೆ.  ಬಿಡಿಬಿಡಿಯಾದ ಮುತ್ತುಗಳನ್ನು ಸೂತ್ರವೊಂದರಲ್ಲಿ ವ್ಯವಸ್ಥಿತವಾಗಿ ಪೋಣಿಸಿದಾಗ ಅವು ಒಂದು ಸುಂದರವಾದ, ಮೋಹಕವಾದ ಆಕಾರವನ್ನು ತಳೆಯುವ ಹಾಗೆ ಬಿಡಿಬಿಡಿ ಮಾತುಗಳು ವ್ಯವಸ್ಥಿತವಾಗಿ ವಾಕ್ಯರೂಪದಲ್ಲಿ ಜೋಡಣೆಗೊಂಡಾಗ ವ್ಯಕ್ತವಾಗುವ ಪರಿಣಾಮವೇ ಅಪೂರ್ವ, ಅನಿರ್ವಚನೀಯ. ಬಸವಣ್ಣನವರ ಪ್ರಕಾರ, ಇಂತಹ ಮಾತುಗಳು ಮಾಣಿಕ್ಯದ ದೀಪ್ತಿಯಂತೆ, ಸ್ಪಟಿಕದ ಶಲಾಕೆಯಂತೆ ಇದ್ದು  ಕೇಳುಗರನ್ನು ಆಕರ್ಷಿಸುವುದರ ಜೊತೆಗೆ ಶಿವನಿಗೂ ಪ್ರಿಯವಾಗುತ್ತವೆ.

ಬಸವಣ್ಣನವರ ಪ್ರಕಾರ, ಮಾತು ಮನುಷ್ಯ-ಮನುಷ್ಯರನ್ನು ಬೆಸೆಯುವಂತೆ, ಭಕ್ತ-ಭಗವಂತನನ್ನೂ ಬೆಸೆಯಬಲ್ಲುದು. ಲೋಕದಲ್ಲಿ ಮಾತಿನಿಂದ ಗೆದ್ದವರಿದ್ದಾರೆ. ಹಾಗೆಯೇ ಮಾತಿನಿಂದ ಸೋತವರೂ ಇದ್ದಾರೆ. ತಾವು ಮಾತಿನಲ್ಲಿ ಸೋಲುತ್ತೇವೆ ಎಂದು ತಿಳಿದವರು ಎಲ್ಲಾ ಸಂದರ್ಭಗಳಲ್ಲಿಯೂ ಮಾತಿನ ಬೆಣ್ಣೆಹಚ್ಚುತ್ತಾರೆ. ನಯವಂಚಕರಿಗಂತೂ ಮಾತೆಂಬುದು ಒಂದು ಅತ್ಯಮೂಲ್ಯವಾದ ವರ. ತಮಗಾಗದವರನ್ನು ಮಾತಿನ ವರಸೆಯಲ್ಲಿಯೇ ಅಳಿಸುತ್ತಾರೆ. ಕೆಲವರ ಮಾತುಗಳು ಬೆಣ್ಣೆಯಿಂದ ನೂಲುತೆಗೆದಂತಿದ್ದರೆ, ಇನ್ನು ಕೆಲವರ ಮಾತುಗಳಲ್ಲಿ ಮುತ್ತುಗಳೇ ಉದುರುತ್ತವೆ. ಇನ್ನು ಕೆಲವರ ಮಾತುಗಳು ಸಿಡಿಮದ್ದುಗಳಾಗಿ ಪರಿವರ್ತಿತವಾಗುತ್ತವೆ. ಕೆಲವರ ಮಾತೆಂದರೆ ಕತ್ತಿಯ ಕಡಿತ. ಇನ್ನು ಕೆಲವರದು ಗರಗಸದ ಎಳೆತ. ಮತ್ತೆ ಕೆಲವರದು ಬೈರಿಗೆಯ ಕೊರೆತ. ಹೀಗಾಗಿ ಮನುಷ್ಯ-ಮನುಷ್ಯರೊಳಗೆ ಪರಸ್ಪರ ತಿಕ್ಕಾಟ, ದ್ವೇಷ, ಹೊಡೆದಾಟ, ಬಡಿದಾಟಗಳು. ಮಾತಿನ ಮಹತ್ವವನ್ನು ಮರೆತಿರುವುದರಿಂದ ಈ ದುಃಸ್ಥಿತಿ. ಲೋಕದ ಪ್ರತಿಯೊಬ್ಬರೂ ಸಮಯ, ಸಂದರ್ಭ, ಸ್ಥಾನಮಾನಗಳನ್ನು ಅರಿತು ಮಾತನ್ನಾಡಿದರೆ ನಮ್ಮನ್ನು ನಾವೇ ಉನ್ನತೀಕರಿಸಿಕೊಂಡಂತೆ. ಮಾತೆಂಬುದು ಬದುಕಿನ ದಾರಿದೀಪ. ಅದೇ ಮುಂದೆ ನಮ್ಮನ್ನು ಸಾಧನೆಯ ಕಡೆಗೆ ದಾರಿನಡೆಸುತ್ತದೆ.

                                                                                                                                            *** 

2 thoughts on “ಮಾತೆಂಬ ಮುತ್ತಿನ ಹಾರ

  1. ಬಹುಶಃ ಮಾತು ಎಂಬುದು ಪ್ರಕೃತಿ ನಮಗೆ ಕೊಟ್ಟಿರುವ ವರ ಎಂದೇ ಹೇಳಬಹುದು. ಮನುಷ್ಯ ತನ್ನೆಲ್ಲಾ ಭಾವನೆಗಳನ್ನು ಎಲ್ಲರಿಗೂ ತಿಳಿಯುವಂತೆ ಮಾಡುವುದಕ್ಕೆ ಇರುವ ಸರಳ ಮಾಧ್ಯಮ ಅಂದರೆ ಅದು ಮಾತು. ಆದರೆ ತಾವು ಹೇಳಿರುವಂತೆ ಮನಸ್ಸಿನ ಕನ್ನಡಿಯಾಗಿರಬೇಕಾಗಿದ್ದ ಮಾತು ಸಮಯಕ್ಕೆ, ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತ ಸಾಗುತ್ತದೆ. ಮನಸ್ಸಿನಲ್ಲಿ ಒಂದು ಭಾವನೆಯಿದ್ದರೆ ಅದು ಮಾತಾಗುವಾಗ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಬೇರೆಯವರ ಭಾವನೆಗಳಿಗನುಸಾರವಾಗಿ ಬದಲಾಗಿಬಿಡುತ್ತದೆ!
    ಕೆಲವರು ಆಡುವ ಮಾತುಗಳು ಸರಳವಾಗಿದ್ದರೂ ಅದರಲ್ಲಿರುವ ಆತ್ಮೀಯತೆ ಮತ್ತು ಸ್ಪಷ್ಟತೆ ಕೆಲವೊಮ್ಮೆ ನಮ್ಮನ್ನು ಆ ವ್ಯಕ್ತಿಗಳೊಡನೆ ಉತ್ತಮ ಬಾಂಧವ್ಯ ಬೆಳೆಯುವಂತೆ ಮಾಡುತ್ತದೆ. ಆದರೆ ಇನ್ನು ಕೆಲವು ವ್ಯಕ್ತಿಗಳು ಮಾತನಾಡಲು ಮೊದಲು ಮಾಡಿದೊಡನೆಯೇ ಆ ವ್ಯಕ್ತಿಯ ಸ್ವಭಾವ ಅಥವಾ ಅವರ ವ್ಯಕ್ತಿತ್ವ ನಮಗೆ ಹಿಡಿಸದೇ ಇರಬಹುದು ಜೊತೆಗೆ ಆ ವ್ಯಕ್ತಿಯೊಡನೆ ನಾವು ಎಂದಿಗೂ ಸಂವಾದದಲ್ಲಿ ತೊಡಗಲೇಬಾರದು ಎಂಬ ನಿರ್ಧಾರಕ್ಕೆ ಬರಬಹುದು. ಹಾಗಾಗಿ ನಮ್ಮ ಮಾತುಗಳು ನಮ್ಮ ಎದುರಿಗಿರುವ ವ್ಯಕ್ತಿಯ ಮೇಲೆ ಯಾವ ಸಂದರ್ಭದಲ್ಲಿ ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು ಎಂಬ ಆಲೋಚನೆಯನ್ನು ಇಟ್ಟುಕೊಂಡು ಮಾತನಾಡುವುದು ಉತ್ತಮ ಎಂಬುದು ನನ್ನ ಅಭಿಪ್ರಾಯ… ತುಂಬಾ ಸುಂದರವಾದ ವಿವರಣೆ ಸರ್ ಧನ್ಯವಾದಗಳು🙏😃😯

    1. ಒಂದು ಮಾತು ಅಥವಾ ಒಂದು ವಿಚಾರ ಹಲವು ರೀತಿಯ ಚಿಂತನೆಗಳಿಗೆ ಎಡೆಮಾಡಿಕೊಡುತ್ತದೆ ಎಂಬುದು ನಿಮ್ಮ ಮಾತುಗಳಿಂದ ಸ್ಪಷ್ಟವಾಗುತ್ತದೆ. ವಾದೆ ವಾದೆ ಜಾಯತೇ ತತ್ತ್ವಬೋಧಃ ಎಂಬ ಸಂಸ್ಕೃತದ ಉಕ್ತಿಯೂ ಅದನ್ನೇ ಸಮರ್ಥಿಸುತ್ತದೆ. ಇಂದು ಬಹುತೇಕ ಮಂದಿ ಮನಸ್ಸಿನಲ್ಲಿ ಹೊಳೆದದ್ದನ್ನು ಅದೇ ರೀತಿಯಲ್ಲಿ ಆಡುವುದಿಲ್ಲ. ಇಲ್ಲೆಲ್ಲಾ ಲಾಭದ ವಿಚಾರವೇ ಮುಖ್ಯವಾಗಿರುತ್ತದೆ. ಹಾಗಾಗಿ ಹೆಚ್ಚಿನವರ ಮಾತಿನಲ್ಲಿನ ಅಸಲಿತನವನ್ನು ಗುರುತಿಸುವುದು ತುಂಬಾ ಕಷ್ಟ. ನೇರ ನಡೆನುಡಿಯವರಿಗೆ ಇಂತಹವರ ಸಹವಾಸ ಕಷ್ಟ. ಪ್ರತಿಯೊಬ್ಬರ ಮಾತುಗಳು ಅವರವರ ಗುಣ, ಸ್ವಭಾವ, ಅಭಿರುಚಿ, ಮನೋಧರ್ಮಗಳನ್ನು ಬಿಂಬಿಸುತ್ತವೆ. ಆದರೆ ಅಸಲಿತನವನ್ನಲ್ಲ. ಮಾನವ ಮನಃಶಾಸ್ತ್ರವನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ ತಾನೇ?!
      ಭಾಷೆಯ ಬಗ್ಗೆ ನಿಮ್ಮ ಚಿಂತನೆಗಳನ್ನು ಮುಂದುವರೆಸಿ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. 🙏

Leave a Reply

Your email address will not be published. Required fields are marked *