ಸಾಹಿತ್ಯಾನುಸಂಧಾನ

heading1

ಎಮ್ಮೆಗೊಂದು ಚಿಂತೆ!

ಎಮ್ಮೆಗೊಂದು ಚಿಂತೆ! ಸಮ್ಮಗಾಱನಿಗೊಂದು ಚಿಂತೆ!

ನನಗೆ ನನ್ನ ಚಿಂತೆ! ತನಗೆ ತನ್ನ ಕಾಮದ ಚಿಂತೆ!

ಒಲ್ಲೆ ಹೋಗು, ಸೆಱಗಬಿಡು ಮರುಳೆ!

ನನಗೆ ಚೆನ್ನಮಲ್ಲಿಕಾರ್ಜುನದೇವರು

ಒಲಿವನೋ ಒಲಿಯನೋ ಎಂಬ ಚಿಂತೆ!

                                                         -ಅಕ್ಕಮಹಾದೇವಿ

                ಈ ವಚನ ಅಕ್ಕಮಹಾದೇವಿಯ ಬದುಕಿಗೆ ಸಂಬಂಧಿಸಿದ್ದು, ಇದರಲ್ಲಿ ಆಕೆ ತನ್ನ ಲೌಕಿಕಗಂಡ ಕೌಶಿಕನಿಂದ ತನಗಾದ ಹಿಂಸೆಯನ್ನು ಎರಡು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸಿದ್ದಾಳೆ. ಈ ಮಾತುಗಳು ಕೇವಲ ಆಕೆಯ ಬದುಕಿಗೆ ಮಾತ್ರ ಸೀಮಿತವಾಗಿರದೆ ಹತ್ತು ಹಲವು ನೆಲೆಗಳಲ್ಲಿ ಮಿಕ್ಕವರ ಬದುಕಿಗೂ ಅನ್ವಯವಾಗುತ್ತವೆ.

                ಎಮ್ಮೆಗೆ ತನ್ನ ಗುಡಾಣದಂತಹ ಹೊಟ್ಟೆಯನ್ನು ತುಂಬಿಸಿಕೊಳ್ಳುವುದೇ ಚಿಂತೆ. ಮೇಯಲು ಹೋದಲ್ಲಿ ಯಾವ ಹೊಲದಲ್ಲಿ ಹುಲುಸಾದ ಬೆಳೆ ಬೆಳೆದಿದೆಯೋ ಅಲ್ಲಿ ನುಗ್ಗಿ ಮನಸೋ ಇಚ್ಛೆ ಮೇದು ಹೊಟ್ಟೆತುಂಬಿಸಿಕೊಂಡು ಹೊರಟುಬಿಡುತ್ತದೆ. ಬೆಳೆ ಬೆಳೆಸಿದವರಾರು? ಶ್ರಮಪಟ್ಟವರಾರು? ಫಲ ಸಿಗಬೇಕಾದುದು ಯಾರಿಗೆ? ಈ ಯಾವ ಪ್ರಶ್ನೆಗಳೂ ಅದರ ಮನಸ್ಸಿನಲ್ಲಿ ಹುಟ್ಟಲಾರವು. ಬೆಳೆಬೆಳೆಸಿದ ರೈತನ ಕಾಳಜಿ ಅದಕ್ಕಿಲ್ಲ. ಅದಕ್ಕೆ ತನ್ನ ಹೊಟ್ಟೆ ತುಂಬಬೇಕು. ಹಸಿವೆ ಇಂಗಬೇಕು.

                ಸಮ್ಮಗಾರ(ಸಮಗಾರ)ನಿಗೆ ತನ್ನ ಹಾಗೂ ತನ್ನ ಮನೆಮಂದಿಯ ಹೊಟ್ಟೆತುಂಬಿಸಿಕೊಳ್ಳುವುದೇ ಚಿಂತೆ. ದಾರಿಯೊಲ್ಲೊಂದು ಎಮ್ಮೆ ಹೋಗುತ್ತಿದ್ದರೆ ಆತ ‘ತಾನಿದನ್ನು ಕೊಂದು ಚರ್ಮಸುಲಿದರೆ ಎಷ್ಟು ಚಪ್ಪಲಿ ಹೊಲಿಯಬಹುದು? ಎಷ್ಟು ದುಡ್ಡು ಸಂಪಾದಿಸಿ ಗಂಟುಕಟ್ಟಬಹುದು? ತನ್ನ ಮನೆಮಂದಿಯನ್ನು ಹೇಗೆ ತೃಪ್ತಿಪಡಿಸಬಹುದು? ಎಂದಷ್ಟೇ ಯೋಚಿಸುತ್ತಾನೆ. ಆದರೆ ಆತನಿಗೆ ಎಮ್ಮೆಯನ್ನು ಸಾಕಿದವರು ಯಾರು? ಎಷ್ಟು ಬೆಲೆಕೊಟ್ಟು ಕೊಂಡಿದ್ದಾರೆ? ಸಾಕುವುದಕ್ಕೆ ಎಷ್ಟು ಕಷ್ಟಪಟ್ಟಿದ್ದಾರೆ? ಈ ಯಾವ ಪ್ರಶ್ನೆಗಳೂ ಆತನ ಮನಸ್ಸಿನಲ್ಲಿ ಸುಳಿಯಲಾರವು. ಅವುಗಳ ಚಿಂತೆಯೂ ಆತನಿಗಿರುವುದಿಲ್ಲ. ತಾನು ಒಂದಷ್ಟು ಜೊತೆ ಚಪ್ಪಲಿ ಹೊಲಿಯಬೇಕು, ದುಡ್ದು ಸಂಪಾದಿಸಬೇಕು, ಸುಖವಾಗಿ ಇರಬೇಕು.

                ಮೇಲಿನ ಎರಡೂ ದೃಷ್ಟಾಂತಗಳಲ್ಲಿ ಎಮ್ಮೆಯ ಚಿಂತೆ ಒಂದಾದರೆ, ಸಮಗಾರನ ಚಿಂತೆ ಇನ್ನೊಂದು. ಎಮ್ಮೆ ರೈತನ ಹೊಟ್ಟೆಪಾಡಿನ ಬಗ್ಗೆಯಾಗಲೀ, ಆತನ ಶ್ರಮವನ್ನಾಗಲೀ ಯೋಚಿಸುವುದಿಲ್ಲ, ಹಾಗೆಯೇ  ಸಮಗಾರ ಎಮ್ಮೆಯ ಬದುಕಿನ ಬಗ್ಗೆಯಾಗಲೀ ಅದನ್ನು ಸಾಕಿದವರ ಬಗ್ಗೆಯಾಗಲೀ  ಯೋಚಿಸುವುದಿಲ್ಲ. ಈ ಎರಡೂ ದೃಷ್ಟಾಂತಗಳು ಅಕ್ಕನ ಲೌಕಿಕಬದುಕಿಗೆ ಕರಾರುವಾಕ್ಕಾಗಿ ತಾಳೆಯಾಗುತ್ತವೆ. ಅಕ್ಕನಿಗೆ ತನ್ನ ಭವಿಷ್ಯದ ಚಿಂತೆ, ಭಕ್ತಿಯಿಂದ ಚೆನ್ನಮಲ್ಲಿಕಾರ್ಜುನನನ್ನು ಒಲಿಸಿಕೊಂಡು ಆತನನ್ನು ಮದುವೆಯಾಗುವ ಚಿಂತೆ. ಈ ಚಿಂತೆಯಲ್ಲಿರುವ ಅಕ್ಕ ಹೆತ್ತವರ ಒತ್ತಾಸೆಯಂತೆ ತಾನು ಮದುವೆಯಾದ ಗಂಡನ ಆಸೆ ಆಕಾಂಕ್ಷೆಗಳನ್ನು ಮನ್ನಿಸಲಾರಳು, ಲೌಕಿಕವಾಗಿ ಸಂಸಾರ ಮಾಡಲಾರಳು. ಇಂತಹ ಸ್ಥಿತಿಯಲ್ಲಿರುವ ಹೆಂಡತಿಯಲ್ಲಿ ಗಂಡ ಕೌಶಿಕನಿಗೆ ತನ್ನ ಕಾಮವನ್ನು ಇಷ್ಟಬಂದಂತೆ ಅನುಭವಿಸುವ, ತೀರಿಸಿಕೊಳ್ಳುವ ಚಿಂತೆ. ಆಕೆಯ ಮಾನಸಿಕ, ದೈಹಿಕ ಸ್ಥಿತಿಗತಿಗಳೇನು? ಆಸೆ ಆಕಾಂಕ್ಷೆಗಳೇನು? ಯಾವುದನ್ನೂ ಕೌಶಿಕ ಯೋಚಿಸಲಾರ, ಗೌರವಿಸಲಾರ. ಇಬ್ಬರದೂ ವಿರುದ್ಧ ಚಿಂತೆಗಳು, ಚಿಂತನೆಗಳು, ಅಭಿರುಚಿಗಳು. ಪರಸ್ಪರ ಒಂದುಗೂಡಲಾರದವು. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆದಂತೆ.

                ಚೆನ್ನಮಲ್ಲಿಕಾರ್ಜುನನನ್ನು ಬಯಸಿ, ಹಂಬಲಿಸಿ ಕೌಶಿಕನನ್ನು ಮದುವೆಯಾದ ಮೇಲೆ ಆತ ತನಗೆ ಒಲಿವನೋ ಒಲಿಯನೋ ಎಂಬ ಚಿಂತೆಯೇ ಆಕೆಯ ಮನಸ್ಸಿನಲ್ಲಿ ತುಂಬಿಕೊಂಡಿದೆ. ಹಾಗಾಗಿ ಕಾಮುಕನಾಗಿ ಸದಾ ತನ್ನ ಹಿಂದೆ ಸುತ್ತುತ್ತ ಶಿವಪೂಜೆಗೆ ಅಡ್ಡಿಮಾಡುವ ಕೌಶಿಕನಿಗೆ  “ಒಲ್ಲೆ ಹೋಗು, ಸೆರಗ ಬಿಡು ಮರುಳೆ” ಎಂದು ನಿರ್ದಾಕ್ಷಿಣ್ಯವಾಗಿ, ನಿಷ್ಠುರವಾಗಿ ದಿಟ್ಟತನದಿಂದ ಹೇಳಿಬಿಡುತ್ತಾಳೆ. ಗಂಡನಲ್ಲಿನ ನೈತಿಕ ಅಧಃಪತನ ಅಕ್ಕನಿಂದ ಇಂತಹ ಮಾತುಗಳನ್ನಾಡುವುದಕ್ಕೆ ಪ್ರೇರೇಪಿಸಿರಬೇಕು.

            ಅಕ್ಕನ ಬದುಕಿನ ಈ ಘಟನೆ ಭಿನ್ನಭಿನ್ನ ನೆಲೆಗಳಲ್ಲಿ ಬಹಳ ಕುತೂಹಲಕಾರಿಯಾಗಿ ಇಂದಿನ ಆಧುನಿಕಬದುಕಿಗೂ ಅನ್ವಯವಾಗುತ್ತದೆ. ಗಂಡ-ಹೆಂಡತಿ, ಹೆತ್ತವರು-ಮಕ್ಕಳು, ಮಾಲಿಕ-ಕಾರ್ಮಿಕ, ಮೇಲಧಿಕಾರಿ-ಕೆಳಾಧಿಕಾರಿ, ಮುಖ್ಯಶಿಕ್ಷಕ-ಸಹಶಿಕ್ಷಕ, ಸರಕಾರ-ಪ್ರಜೆಗಳು ಹೀಗೆ ಕೆಳಸ್ತರದಿಂದ ಮೇಲುಸ್ತರದವರೆಗೂ ವಿರುದ್ಧವಾದ ಚಿಂತೆಗಳೇ ತುಂಬಿಕೊಂಡು ದೈಹಿಕ, ಮಾನಸಿಕ ಆರೋಗ್ಯಗಳು ನಾಶವಾಗುವುದರೊಂದಿಗೆ ಅಭಿವೃದ್ಧಿಯೂ ಕುಂಠಿತವಾಗುತ್ತಿದೆ. ಇದೆಲ್ಲವನ್ನೂ ಪರಿಭಾವಿಸಿದರೆ ಅಕ್ಕನ ಬದುಕಿನ ಈ ಘಟನೆ ಇಂದಿನ ಲೋಕಜೀವನಕ್ಕೆ ಪರಿಣಾಮಕಾರಿಯಾದ ವಿಡಂಬನೆಯಾಗಲಾರದೇ?

***

2 thoughts on “ಎಮ್ಮೆಗೊಂದು ಚಿಂತೆ!

  1. ನಿಮ್ಮ ವಿವರಣೆ ಸತ್ವಯುತವಾಗಿರುತ್ತದೆ ಸರ್.

Leave a Reply

Your email address will not be published. Required fields are marked *