ಸಾಹಿತ್ಯಾನುಸಂಧಾನ

heading1

ಮನೆಯೊಳಗಣ ಕಿಚ್ಚು

ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ?

ತನಗಾದ ಆಗೇನು? ಅವರಿಗಾದ ಚೇಗೇನು?

ತನುವಿನ ಕೋಪ ತನ್ನ ಹಿರಿಯತನದ ಕೇಡು!

ಮನದ ಕೋಪ ತನ್ನರುಹಿನ ಕೇಡು!

ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ

ನೆರೆಮನೆಯ ಸುಡದು ಕೂಡಲಸಂಗಮದೇವಾ!

                                                                        -ಬಸವಣ್ಣ

 

                ಮನುಷ್ಯನ ಉನ್ನತಿಗೆ, ಸಾಧನೆಗೆ, ಹಿರಿತನಕ್ಕೆ ಆತನಲ್ಲಿರುವ ಹಲವು ಗುಣಗಳು ಕಾರಣವಾಗುತ್ತವೆ. ಅರಿವು, ತಿಳಿವಳಿಕೆ, ದಯೆ, ಪರೋಪಕಾರ, ಸಹಬಾಳ್ವೆ ಮೊದಲಾದವು ಮನುಷ್ಯನ ಮೇಲ್ಮೆಗೆ ಕಾರಣವಾದರೆ ಮತ್ಸರ, ದ್ವೇಷ, ಹಿಂಸೆ, ಅವಮಾನ, ನಿಂದೆ ಮೊದಲಾದವು ಮನುಷ್ಯನ ಅವನತಿಗೆ ಕಾರಣವಾಗುತ್ತವೆ. ಕೋಪವೆಂಬುದೂ ಮನುಷ್ಯನ ಅಳಿವಿಗೆ ಕಾರಣವಾಗುವ ಒಂದು ಅವಗುಣ. ಇದು ಮನುಷ್ಯತ್ವದ ಮತ್ತು ಆ ಮೂಲಕ ಮನೆಯ ಹಾಗೂ ಸಮಾಜದ ನಾಶಕ್ಕೆ ಕಾರಣವಾಗುವಂತಹುದು. ಇದನ್ನೇ ಬಸವಣ್ಣನವರು ’ಮನೆಯೊಳಗಣ ಕಿಚ್ಚು’ ಎಂಬ ಅರ್ಥಪೂರ್ಣ ದೃಷ್ಟಾಂತದ ಮೂಲಕ ಸ್ಪಷ್ಟಪಡಿಸಿದ್ದಾರೆ.

                ಯಾರೋ ತನಗೆ ಮುನಿದಾಗ ತಾನೂ ಅವರಿಗೆ ಏಕೆ ಮುನಿಯಬೇಕು? ಇದರಿಂದ ತನಗೆ ಆಗುವ ಪರಿಣಾಮವೇನು? ಅವರಿಗೆ ಆಗುವ ಲಾಭವೇನು? ಎಂಬುದು ಬಸವಣ್ಣನವರ ಪ್ರಶ್ನೆ. ದೇಹದಲ್ಲಿ ಕಾಣಿಸಿಕೊಳ್ಳುವ ಕೋಪ ವ್ಯಕ್ತಿಯ ಹಿರಿಯತನದ ಕೇಡು ಅನ್ನಿಸಿಕೊಳ್ಳುತ್ತದೆ. ಇದು ಹೊಡೆದಾಟ, ಬಡಿದಾಟ ಅಥವಾ ಕೊಲೆಯಂತಹ ಅಪರಾಧಗಳಿಗೆ ಎಡೆಮಾಡಿಕೊಡುತ್ತದೆ. ಇದರಿಂದಾಗಿ ಮನುಷ್ಯ ತನ್ನ ಹಿರಿತನ, ಸ್ಥಾನಮಾನಗಳನ್ನು ಕಳೆದುಕೊಳ್ಳುತ್ತಾನೆ. ಅಲ್ಲದೆ, ಒಬ್ಬನ ಕೋಪಕ್ಕೆ ಇನ್ನೊಬ್ಬ ಕೋಪಿಸಿಕೊಂಡರೆ ಈ ಪ್ರಕ್ತಿಯೆ ನಿರಂತರ ಮುಂದುವರಿದು ಅನರ್ಥಗಳನ್ನೇ ತಂದೊಡ್ಡುತ್ತದೆ.

                ಮನದಲ್ಲಿ ಕಾಣಿಸಿಕೊಳ್ಳುವ ಕೋಪ ವ್ಯಕ್ತಿಯ ಅರಿವಿನ (ತಿಳಿವಳಿಕೆ) ಕೇಡು ಎನಿಸಿಕೊಳ್ಳುತ್ತದೆ. ಮನಸ್ಸು ಭಾವನೆಗಳ  ಆಗರ. ಒಳ್ಳೆಯ ಭಾವಗಳಿಂದ ಒಳಿತು, ಕೆಟ್ಟ ಭಾವಗಳಿಂದ ಕೆಡುಕು. ಮನದ ಕೋಪ ಮಾತಿನ ಮೂಲಕ ಹಾಗೂ ಅನಂತರ ದೇಹದ ವಿವಿಧ ಅಂಗಾಂಗಳ  ಮೂಲಕ ಕಾಣಿಸಿಕೊಳ್ಳುತ್ತದೆ. ಇದೂ ಕೂಡಾ ನಿಂದನೆ, ಅವಹೇಳನ, ಅವಮಾನಗಳಿಗೆ ದಾರಿಮಾಡಿಕೊಟ್ಟು ಹೊಡೆದಾಟ, ಬಡಿದಾಟ, ಕೊಲೆ ಮೊದಲಾದ ಅಪರಾಧಗಳಿಗೆ ಅವಕಾಶ ಕಲ್ಪಿಸಿಕೊಡುತ್ತದೆ. 

                ಮನೆಯ ಒಲೆಯಲ್ಲಿ ಉರಿಯುತ್ತಿರುವ ಬೆಂಕಿ ಒಂದು ಮಿತಿಯಲ್ಲಿದ್ದರೆ ಅದು ಅಂತಹ ಯಾವ ಅಪಾಯವನ್ನು ಉಂಟುಮಾಡದು. ಆದರೆ ಅದು ಮಿತಿಮೀರಿ ಉರಿದರೆ, ಅಥವಾ ಅದರ ಬಗ್ಗೆ ನಿರ್ಲಕ್ಷ್ಯ ತೋರಿದರೆ ಅದು ಆ ಮನೆಯನ್ನು ಸುಡುವುದಲ್ಲದೆ  ನೆರೆಮನೆಯನ್ನು ಸುಡಲಾರದು. ಮನೆಯನ್ನು ಮನಸ್ಸು ಎಂದು ಪರಿಭಾವಿಸಿದರೆ ಬಸವಣ್ಣನವರ ವಚನದ ಅರ್ಥ ಇನ್ನಷ್ಟು ವ್ಯಾಪ್ತಿಯನ್ನು ಪಡೆದುಕೊಳ್ಳುತ್ತದೆ. ಮನದೊಳಗೆ ಹುಟ್ಟಿಕೊಳ್ಳುವ ಅವಗುಣಗಳು ಮನೆಯೊಳಗೆ ಉರಿಯುವ ಬೆಂಕಿಯಂತೆ. ಮಿತಿಯಲ್ಲಿದ್ದರೆ ಒಳಿತು, ಮಿತಿಮೀರಿದರೆ ಕೆಡುಕು. ಮಿತಿಯೊಳಗಿದ್ದರೆ ಸಹಬಾಳ್ವೆ, ಮಿತಿಮೀರಿದರೆ ಬಾಳ್ವೆಯ ನಾಶ. ಹಾಗಾಗಿ ಒಬ್ಬ ಮನುಷ್ಯನ ಮನಸ್ಸಿನೊಳಗೆ ಹುಟ್ಟಿಕೊಳ್ಳುವ ಅವಗುಣಗಳು ಮೊದಲು ಆತನನ್ನಲ್ಲದೆ ಅನ್ಯರನ್ನು ನಾಶಮಾಡಲಾರವು ಎಂಬುದನ್ನು ಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ. 

                ಗುಣಗಳು ಅಥವಾ ಅವಗುಣಗಳು ಅಂದಿಗೂ ಇಂದಿಗೂ ಸಮಾನವಾಗಿಯೇ ಇರುತ್ತವೆ. ಬಸವಣ್ಣನವರು ಆಡಿದ ಮಾತುಗಳು  ಅಂದಿನ ಕಾಲಘಟ್ಟದಲ್ಲಾದರೂ ಇಂದಿನದಕ್ಕೂ ಅವು ಯಥಾವತ್ತಾಗಿ ಅನ್ವಯವಾಗುತ್ತವೆ. ಇಂದಿನ ವೈಜ್ಞಾನಿಕಯುಗದಲ್ಲಿ ಸಾಕಷ್ಟು ಶಿಕ್ಷಣವನ್ನು ಪಡೆದರೂ ಅಗತ್ಯ ಸವಲತ್ತುಗಳನ್ನು ಹೊಂದಿದ್ದರೂ ಅನ್ಯರ ಏಳಿಗೆಯನ್ನು ಕಂಡು ಕರುಬುವ, ಅವರನ್ನು ನಾಶಮಾಡಲು ಹವಣಿಸುವ, ವಿನಾಕಾರಣ ಕೋಪಿಸಿಕೊಳ್ಳುವ ಅಮಾನವೀಯ ಪ್ರವ್ರತ್ತಿಗಳು ಮನುಷ್ಯನ ಮನಸ್ಸು ಹಾಗೂ ದೇಹದೊಳಗೆ ಸೇರಿ ನರನಾಡಿಗಳಲ್ಲಿ ವ್ಯಾಪಿಸಿಕೊಂಡಿವೆ. ಹಲವರ ನರನಾಡಿಗಳಲ್ಲಂತೂ ರಕ್ತದ ಬದಲಿಗೆ ಈ ಅವಗುಣಗಳೇ ಹರಿದಾಡುತ್ತಿವೆ.  ಇವುಗಳಿಂದ ಮನಸ್ಸಿಗೂ ಕೆಡುಕು, ಮನೆಗೂ ಕೆಡುಕು, ಸಮಾಜಕ್ಕೂ ಕೆಡುಕು. ಬಸವಣ್ಣನವರ ಮಾತಿನಂತೆ ಮನಸ್ಸಿನ ಸುಧಾರಣೆ, ಆ ಮೂಲಕ ವ್ಯಕ್ತಿಸುಧಾರಣೆ ಅತ್ಯಂತ ಅಗತ್ಯವಾದುದರಿಂದ ಅವರ ಆತ್ಮವಿಮರ್ಶೆಯ ಈ ಮಾತುಗಳು ಇಂದು ಪ್ರತಿಯೊಬ್ಬರ ಆತ್ಮವಿಮರ್ಶೆ ಹಾಗೂ ಜೀವನವಿಮರ್ಶೆಗಳಿಗೆ ಪ್ರೇರಕವಾಗಬಹುದೇ?!

***

Leave a Reply

Your email address will not be published. Required fields are marked *