ಸಾಹಿತ್ಯಾನುಸಂಧಾನ

heading1

ಗಮ್ಮತ್ತಿನ ಸೀತಕ್ಕ

ಪೇಟೆಗೆ ಹೋದವನು ವಾಪಸ್ಸು ಬರುತ್ತಿದ್ದಂತೆಯೇ ದಾರಿಯಲ್ಲಿ ಸೀತಕ್ಕನ ಗೂಡಂಗಡಿಯ ಹತ್ತಿರ ಒಂದಷ್ಟು ಜನ ಗುಂಪುಕೂಡಿದ್ದನ್ನು ನೋಡಿದೆ.  ಅಲ್ಲೆಲ್ಲಾ ಗಂಭೀರವಾದ ಮೌನ ಆವರಿಸಿರುವುದನ್ನು ನೋಡಿದಾಗ ನನಗೊಮ್ಮೆ ಎದೆ ಡವಗುಟ್ಟಿತು. ಅಲ್ಲಿಯೇ ಮಾರ್ಗದ ಬದಿಯಲ್ಲಿ ನಿಂತಿದ್ದ ಪಸ್ಕಲ ಪರ್ಬುಗಳನ್ನು ವಿಚಾರಿಸಿದಾಗ, “ಸೀತಕ್ಕ ಹೋಗಿ ಬಿಟ್ಟಳು” ಎಂದರು. ಕೇಳಿದೊಡನೆಯೇ ಅಲ್ಲಿಯೇ ಸ್ತಬ್ಧನಾದೆ. ಕೆಲದಿನಗಳ ಹಿಂದೆ ಮಟಮಟ ಮಧ್ಯಾಹ್ನ ನಮ್ಮ ಮನೆಗೆ ಬಂದಿದ್ದಳು. “ಈ ಉರಿಬಿಸಿಲಲ್ಲಿ ಯಾಕೆ ಬಂದೆ? ಸಾಯಂಕಾಲ ಬರಬಾರದಿತ್ತಾ?” ಎಂದಿದ್ದಕ್ಕೆ “ಯಾಕೋ ನಿಮ್ಮನ್ನೆಲ್ಲ ನೋಡ್ಬೇಕು, ನಿಮ್ಮಲ್ಲಿ ಬಂಜರ ಉಣ್ಬೇಕು ಅಂತ ಆಸೆಯಾಯ್ತು, ಬಂದೆ. ಇನ್ನು ಬರ್ಲಿಕ್ಕೆ ಆಗ್ತದೋ ಇಲ್ವೋ ಗೊತ್ತಿಲ್ಲ” ಎಂದಳು. ತುಂಬಾ ಸುಸ್ತಾದಂತೆ ಕಂಡಳು. ಮಧ್ಯಾಹ್ನ ಉಂಡು, ಸಾಯಂಕಾಲದವರೆಗೂ ಇದ್ದು, ಒಂದಷ್ಟು ಪಟ್ಟಾಂಗ ಹೊಡೆದು ಸುಖಕಷ್ಟ ಮಾತಾಡಿ, ನಮ್ಮನ್ನೆಲ್ಲ ಅಪ್ಪಿಕೊಂಡು “ಚೆನ್ನಾಗಿರಿ ಮಕ್ಕಳೆ” ಎಂದು ಬೆನ್ನುತಟ್ಟಿ ಹೊರಟಳು. ಆ ಅಪ್ಪುಗೆಯಲ್ಲಿ ಏನೋ ಖುಷಿಯಿತ್ತು, ಅಕ್ಕರೆಯಿತ್ತು, ಹಿತವಿತ್ತು. ಅದು ಅವಳ ಕೊನೆಯ ಭೇಟಿಯಾಗಬಹುದೆಂದು ಯಾವತ್ತೂ ಭಾವಿಸಿರಲಿಲ್ಲ.

ಇತ್ತೀಚೆಗೆ  ಅವಳು ತನ್ನ ಗೂಡಂಗಡಿಗೆ ಬಂದಿರಲಿಲ್ಲ. ಯಾವತ್ತೂ ಜ್ವರದಿಂದ ನರಳದವಳು ಈ ಬಾರಿ ನಾಲ್ಕು ದಿನ ಮಲಗಿದ್ದಳಂತೆ. ಸ್ವಲ್ಪ ಗುಣವಾಗುತ್ತಿದ್ದಂತೆಯೇ ಮತ್ತೆ ಗೂಡಂಗಡಿಗೆ ಬಂದು ಕುಳಿತು ತನ್ನ ಮಾಮೂಲಿ ಬೀಡಮಾರಾಟದಲ್ಲಿ ತೊಡಗಿದ್ದಳು. ಅವಳ ಮಾಮೂಲಿ ಗಿರಾಕಿಗಳು ಸುಖಕಷ್ಟ ವಿಚಾರಿಸಿದಾಗ, “ಅದು ಎಂತದ್ದೂ ಇಲ್ಲ ಮಾರಾಯ್ರೆ, ಸ್ವಲ್ಪ ಕೈಕಾಲು ಬಚ್ಚುತ್ತಿದೆ ಅಷ್ಟೇ. ನಂಗೆ ನಿಮ್ಮತ್ರ ಮಾತಾಡದಿದ್ರೆ ಮನಸ್ಸಿಗೆ ಸಮಾಧಾನ ಇಲ್ಲ. ಅದಕ್ಕೆ ಬಂದು ಇಲ್ಲಿ ಕೂತಿದ್ದೇನೆ” ಎಂದಿದ್ದಳಂತೆ. ನಮ್ಮ ಪಸ್ಕಲ ಪರ್ಬುಗಳು ಮಧ್ಯಾಹ್ನ  ವಿಚಾರಿಸಿದಾಗ,  “ಮೈಯೆಲ್ಲ ಬಚ್ಚುತ್ತಿದೆ, ಪ್ರಾಯ ಆಯ್ತಲ್ಲ, ಇನ್ನು ಏನಾಗ್ಬೇಕು?” ಎಂದಿದ್ದಳಂತೆ. ಸಾಯಂಕಾಲವಾಗುತ್ತಲೇ ಪಕ್ಕದ ಮನೆಯ ಮಗ್ಗಿಬಾಯಿ ಬಂದು ವಿಚಾರಿಸಿದಾಗ,  “ಯಾಕೋ ಎದೆ ಔಂಕಿದ ಹಾಗೆ ಆಗ್ತಿದೆ” ಎಂದಿದ್ದಳಂತೆ. ಹಾಗೆ ಹೇಳಿ ಅರ್ಧ ಗಂಟೆಯೂ ಕಳೆದಿರಲಿಲ್ಲ. ಸೀತಕ್ಕ ಕುಳಿತಲ್ಲಿಯೇ ಕುಸಿದಳು. ಕಣ್ಣುಗಳು ಮೇಲೆ ಕಳಗಾದವು. ಮಾತಿಲ್ಲ, ಕೈಕಾಲುಗಳು ಅಲ್ಲಿಯೇ ಸ್ತಬ್ಧವಾದವು. ಯಾರೋ ಹೋಗಿ ವೈದ್ಯರನ್ನು ಕರೆತಂದರು. ವೈದ್ಯರು ಪರೀಕ್ಷಿಸಿದವರೇ, “ಸೀತಕ್ಕ ಹೋಗಿಬಿಟ್ಲು” ಎಂದರು. ನೆರೆದವರೆಲ್ಲರ ಕಣ್ಣುಗಳೂ ಮಂಜಾದವು. ಕಣ್ಣುಗಳಲ್ಲಿ ನೀರು ಹನಿಯತೊಡಗಿತು.

ಕೊನೆಯ ಬಾರಿಯಾದರೂ ಸೀತಕ್ಕನ ಮುಖವನ್ನು ನೋಡೋಣವೆಂದು ಜನರ ಎಡೆಯಲ್ಲಿ ತೂರಿ ಗೂಡಂಗಡಿಯ ಬಾಗಿಲಿಗೆ ಹೋಗಿ ನಿಂತೆ. ಆಕೆ ದಿನಾ ಕುಳಿತುಕೊಳ್ಳುತ್ತಿದ್ದ ಗೋಣಿಚೀಲದ ಮೇಲೆಯೇ ಅವಳನ್ನು ನೇರವಾಗಿ ಮಲಗಿಸಿದ್ದರು. ಪ್ರಶಾಂತವಾದ ಮುಖ. ಜ್ವರದಿಂದ ಸ್ವಲ್ಪ ಇಳಿದುಹೋದಂತಿದ್ದಳು. ಕಪಾಟಿನ ಕೆಳಭಾಗದಲ್ಲಿ ಅವಳು ಕಟ್ಟಿದ ಹತ್ತಾರು ಬೀಡಗಳು, ಡಬ್ಬದಲ್ಲಿದ್ದ ಪೆಪ್ಪರ್ಮೆಂಟ್, ಇನ್ನೊಂದರಲ್ಲಿ ಹತ್ತಾರು ಚಕ್ಕುಲಿಗಳು ಹಾಗೆಯೇ ಇದ್ದವು. ಅವಳ ಕೋಲು ಪಕ್ಕದಲ್ಲಿಯೇ ಅನಾಥವಾಗಿ ಬಿದ್ದಿತ್ತು. ದುಡಿದು ದುಡಿದು ಸುಸ್ತಾಯಿತೇನೋ! ಸೀತಕ್ಕ ಚಿರನಿದ್ರೆಗೆ ಜಾರಿದ್ದಳು.  ನೋಡುತ್ತಿದ್ದಂತೆಯೇ ಕಣ್ಣುಗಳಲ್ಲಿ ನೀರುತುಂಬಿ ಗಂಟಲುಕಟ್ಟಿತು. ಅಲ್ಲಿ ನಿಲ್ಲಲಾಗಲಿಲ್ಲ. ಮೆಲ್ಲನೆ ಈಚೆಗೆ ಬಂದೆ. ನೆರೆದ ಎಲ್ಲರ ಬಾಯಲ್ಲಿಯೂ ಸೀತಕ್ಕನದೇ ವಿಚಾರ. ಸೀತಕ್ಕ ಹೋದ ಮೇಲೆ ನಮ್ಮೂರಿನ ಪೇಟೆ ತನ್ನ ಚಟುವಟಿಕೆಯನ್ನು ಕಳೆದುಕೊಂಡು ನಿಸ್ತೇಜವಾಯಿತು ಎನಿಸಿತು. ಆಕೆಯಿಲ್ಲದ ಪೇಟೆಯನ್ನು ಕಲ್ಪಿಸಿಕೊಳ್ಳುವುದೇ ಕಷ್ಟ ಅನ್ನಿಸಿತು. ಮನಸ್ಸಿನಲ್ಲಿ ಆಕೆಯ ಒಂದೊಂದೇ ಮುಖಗಳು ಮತ್ತೆ ಮತ್ತೆ ಹಾದುಹೋಗುತ್ತಿದ್ದಂತೆಯೇ ನನ್ನ ಮನಸ್ಸು ಹಿಂದಕ್ಕೆ ಓಡಿತು.

** ** ** **

 “ಹ್ಹಿ…ಹ್ಹಿ…ಹ್ಹಿ…ಹ್ಹಿ… ಎಂತ ಮಕ್ಕಳೇ! ಈ ಮುದ್ಕಿ ಉಣ್ಣುವುದನ್ನು ಎಂತ ನೋಡುವುದು? ಹೋಗಿ, ಹೋಗಿ ಬಂಜರ ಊಟಮಾಡಿ” ಎಂದು ಪ್ರೀತಿಯಿಂದ ಗದರಿಸುತ್ತಿದ್ದಂತೆಯೇ ಊಟಕ್ಕೆ ಕುಳಿತ ಸೀತಕ್ಕ ಅದಕ್ಕೆ ಸಾಂಬಾರನ್ನು ಬೆರೆಸಿಕೊಂಡು, ಚೆನ್ನಾಗಿ ಹಿಚುಕಿ ಮೆಲ್ಲನೆ ಉಂಡೆ ಕಟ್ಟುವುದಕ್ಕೆ ಸುರುಮಾಡಿದಳು. ಅಂಗೈಯಲ್ಲಿಯೇ ಅದನ್ನು ತಿರುಚಿ ತಿರುಚಿಕೊಂಡು ಉಂಡೆಮಾಡಿದಳು. ಅಲ್ಲಿಂದಲೇ  ಕೈಯನ್ನು ತಿರುಗಿಸಿ ಛಂಗನೆ ಹಾರಿಸಿದಳು. ಉಂಡೆ ನೇರವಾಗಿ ಹಾರಿಕೊಂಡು ಅವಳು ತೆರೆದಬಾಯೊಳಗೆ ಬಿತ್ತು. ದವಡೆಗೂ ತಾಗಲಿಲ್ಲ, ಮೂಗಿಗೂ ಬಡಿಯಲಿಲ್ಲ. ಅಬ್ಬಾ ಏನು ಬ್ಯಾಲೆನ್ಸು! ಬಾಯೊಳಗೆ ಉಂಡೆಯನ್ನು ಫುಟ್ಬಾಲಿನ ತರಹ ನಾಲ್ಕಾರು ಬಾರಿ ಉರುಳಿಸಿದಳು. ಆಮೇಲೆ ಬುಳುಂಕನೆ ನುಂಗಿದಳು. ಸೀತಕ್ಕನ ಊಟದ ಚೆಂದವೋ ಚಂದ. ಪಲ್ಯ, ಸಾಂಬಾರು ಏನೇ ಇರಲಿ, ಒಂದು ಆಗುತ್ತದೆ, ಒಂದು ಆಗುವುದಿಲ್ಲ ಎಂದಿಲ್ಲ. ಅವಳಿಗೆ ಎಲ್ಲವೂ ಇಷ್ಟ. ಅವಳದು ಪ್ರೀತಿಯ ಹಾಗೂ ಮನಃಪೂರ್ವಕವಾದ ಊಟ. ಅದಕ್ಕೆ ನೋಡಿದವರೆಲ್ಲರೂ ಹೇಳುವುದು ಒಂದೇ, ’ಉಣ್ಣುವುದನ್ನು ಸೀತಕ್ಕನಿಂದ ಕಲಿಯಬೇಕು’ ಎಂದು.

ಸೀತಕ್ಕ ಉಂಡೆಕಟ್ಟದೆ ಊಟಮಾಡಿದ್ದನ್ನು ಇದುವರೆಗೂ ಯಾರೂ ನೋಡಿದಂತಿಲ್ಲ. ಅದಕ್ಕೆ ಅವಳಿಗೆ ’ಉಂಡೆಸೀತಕ್ಕ’ ಎಂದೇ ಹೆಸರು. ಅವಳು ಊರಿನ ಯಾರ ಮನೆಗೆ ಹೋದರೂ ಅಲ್ಲಿನ ಮಕ್ಕಳು ಅವಳ ಊಟದ ಚೆಂದವನ್ನು ಮರೆಯಲಿಕ್ಕಿಲ್ಲ. ಸೀತಕ್ಕ ಉಣ್ಣುವುದೇ ಒಂದು ಚೆಂದ. ಅವಳು ಊಟವನ್ನು ಬಲ್ಲವಳು. ಹಾಗಾಗಿಯೇ ಹೆಚ್ಚಿನ ಯಾವ ರೋಗಗಳೂ ಅವಳನ್ನು ಕಾಡಲಿಲ್ಲ. ಅವಳ ಮುಂದೆಯೇ ಕುಳಿತು ಅವಳು ಉಣ್ಣುವುದನ್ನೇ ನೆಟ್ಟಕಣ್ಣುಗಳಿಂದ ಮಿಕಿಮಿಕಿ ನೋಡುತ್ತಿದ್ದ ಹಾಗೆಯೇ ಸೀತಕ್ಕನ ಪ್ರೀತಿಯ ಗದರಿಕೆಯ ಜೊತೆಗೆ, “ನೀವು ಅಲ್ಲಿಂದ ಎದ್ದುಹೋಗ್ತಿರಾ ಇಲ್ವಾ?  ಸೀತಕ್ಕ ಉಣ್ಣುವುದು ಹೊಸತಾ? ಅಥವಾ ನೀವು ಅದನ್ನು ನೋಡುವುದು ಹೊಸತಾ?” ಎಂಬ ಮನೆಯವರ ಗದರಿಕೆಯ ಮಾತನ್ನು ಕೇಳಿದೊಡನೆಯೇ ನಾವು ಅಲ್ಲಿಂದ ಪಿಡ್ಚ. ಆದರೆ ಸೀತಕ್ಕ ಉಣ್ಣುವ ಚೆಂದವನ್ನು ನೋಡದೆ ಇರುವುದಕ್ಕೆ ಸಾಧ್ಯವೇ? ಮೆಲ್ಲನೆ ಒಳಮನೆಗೆ ಹೋಗಿ ಬಾಗಿಲಿನ ಎಡೆಯಲ್ಲಿಯೇ ಅಡಗಿ ಇಣುಕಲು ಸುರು.

ಉಳಿದವರ ಹಾಗೆ ಸೀತಕ್ಕ ಊಟ ಒಂದೆರಡು ನಿಮಿಷವಲ್ಲ. ಬರೋಬ್ಬರಿ ಅರ್ಧ ಗಂಟೆ. ಎಷ್ಟೋ ಬಾರಿ ಅವಳು ಉಣ್ಣುವುದನ್ನು ನೋಡುತ್ತಿದ್ದಂತೆಯೇ ನಮ್ಮ ಹಸಿವೂ ನಮಗೆ ಮರೆತುಹೋಗುತ್ತಿತ್ತು. ಅವಳು ಎಲೆಯಲ್ಲಿ ಉಣ್ಣಲಿ, ಅಥವಾ ಬಟ್ಟಲಲ್ಲಿ ಉಣ್ಣಲಿ, ಒಂದು ಅಗುಳೂ ಕೆಳಗೆ ಬೀಳದ ಹಾಗೆ ಅನ್ನಕ್ಕೆ ಸಾಂಬಾರನ್ನು ಸೇರಿಸಿ  ಕಲಸಿಕೊಂಡು ಉಂಡೆ ಕಟ್ಟಿಕೊಂಡೇ ಊಟಮಾಡುತ್ತಾಳೆ. ನಮ್ಮ ಊರಿನ ಯಾವ ಅಡುಗೆಭಟ್ರಿಗೂ ಆ ರೀತಿಯಲ್ಲಿ, ಅಷ್ಟು ಸೊಗಸಾಗಿ, ಚೆಂದವಾಗಿ ಉಂಡೆಕಟ್ಟುವುದಕ್ಕೆ ತಿಳಿಯದು. ಹಾಗಾಗಿಯೇ ನಮ್ಮ ಊರಿನಲ್ಲಿ, ’ಅನ್ನದ ಉಂಡೆ ಎಂದರೆ ಸೀತಕ್ಕ, ಸೀತಕ್ಕ ಎಂದರೆ ಅನ್ನದ ಉಂಡೆ’ ಎಂಬ ಮಾತೇ ಜನಪ್ರಿಯವಾಗಿದೆ.

ನಾವು ಸೀತಕ್ಕನಲ್ಲಿ ಆಗಾಗ ಕೇಳುವುದಿತ್ತು. “ಅನ್ನವನ್ನು ಉಂಡೆಕಟ್ಟುವುದು ಹೇಗೆ? ಅದನ್ನು ಬಾಯಿಗೆ ಎಸೆಯುವುದು ಹೇಗೆ?” ಎಂದು. ಆಗ ಅವಳು ತನ್ನ ಬೊಚ್ಚುಬಾಯನ್ನು ಅಗಲಿಸಿ ನಕ್ಕು, “ಅದೆಲ್ಲ ನಿಮ್ಗೆ ಬೇಡ ಮಕ್ಕಳೇ. ನಿಮ್ಗೆಲ್ಲ ಉಂಡೆ ಕಟ್ಟುವುದಕ್ಕೆ ಆಗದು, ಹಾಗೆ ಕಟ್ಟಿದ್ರೂ ಬಾಯಿಗೆ ಎಸೆದಾಗ ನಿಮ್ಮ ದೊಂಡೆಗೆ ಸಿಕ್ಕಿಕೊಂಡರೆ ಏನು ಗತಿ!. ಹಾಗೆಲ್ಲ ಮಾಡ್ಲಿಕ್ಕೆ ಹೋಗ್ಬೇಡಿ. ಉಂಡೆ ಕಟ್ಟುವುದೂ ಒಂದು ಹಿಕ್ಮತ್, ಬಾಯಿಗೆ ಎಸೆಯುವುದೂ ಒಂದು ಹಿಕ್ಮತ್” ಎಂದು ತನ್ನ ಹಿಕ್ಮತ್ತಿನ ಬಗ್ಗೆ ಆಕೆ ಹೆಮ್ಮೆಪಟ್ಟುಕೊಳ್ಳುವುದಿತ್ತು. ಅವಳು ಹೋದಮೇಲೆ ನಾವೂ ಊಟಮಾಡುವಾಗ ಮನೆಯವರ ಕಣ್ಣುತಪ್ಪಿಸಿ ಅನ್ನದೊಂದಿಗೆ ಸಾಂಬಾರು ಕಲಸಿ ಉಂಡೆಕಟ್ಟುವುದಕ್ಕೆ ಪ್ರಯತ್ನಿಸಿದ್ದೂ ಇದೆ. ಹಾಗೆ ಕಟ್ಟಿದ ಉಂಡೆ ಬಾಯಿಗೆ ಎಸೆಯುವುದಕ್ಕಿಂತ ಮೊದಲೇ ಹುಡಿಯಾದದ್ದು ಇದೆ. ಏನೋ ಕಷ್ಟಪಟ್ಟು ಎಸೆದದ್ದು ಬಾಯಿಗೆ ತಲುಪದೆ ಮೂಗಿಗೆ ಬಡಿದದ್ದೂ ಇದೆ. ಆಗೆಲ್ಲ ನಮ್ಮಷ್ಟಕ್ಕೆ ಯೋಚನೆ ಮಾಡಿದ್ದಿದೆ, ಸೀತಕ್ಕನ ಹಿಕ್ಮತ್ ಅಂದ್ರೆ ಹಿಕ್ಮತ್ತೇ, ಅದು ನಮಗೆ ಹೇಗೆ ತಿಳಿಯಬೇಕು? ’ಉಂಡೆ ಸೀತಕ್ಕ’ ಎಂಬುದರೊಂದಿಗೆ ನಾವಿಟ್ಟ ಇನ್ನೊಂದು ಪ್ರೀತಿಯ ಹೆಸರು ’ಹಿಕ್ಮತ್ ಸೀತಕ್ಕ’.

ಸಣ್ಣ ಮಕ್ಕಳೆಂದರೆ ಸೀತಕ್ಕನಿಗೆ ಪಂಪಪ್ರಾಣ. ಊರಲ್ಲಿ ಐದಾರು ಮನೆಗಳೊಂದಿಗೆ ಅವಳದು ಅವಿನಾಭಾವ ಸಂಬಂಧ. ಸೀತಕ್ಕನಿಗೆ ವರ್ಷಕ್ಕೆರಡು ಬಾರಿಯಾದರೂ ಆ ಮನೆಗಳಿಗೆ ಸರ್ಕಿಟ್ ಹೊರಡದಿದ್ದರೆ, ಆ ಮನೆಗಳಲ್ಲಿ ಒಂದು ಹೊತ್ತಾದರೂ ಊಟಮಾಡದಿದ್ದರೆ, ತಿಂಡಿ ತಿನ್ನದಿದ್ದರೆ, ಅವಳ ದೊಂಡೆಯಲ್ಲಿ ನೀರು ಇಳಿಯದು, ನಿದ್ದೆ ಬಾರದು. ಅವಳ ಸರ್ಕಿಟ್ ಭಾನುವಾರ ಮಾತ್ರ. ಆ ದಿನ ಅವಳ ಗೂಡಂಗಡಿಯಲ್ಲಿ ವ್ಯಾಪಾರವೂ ಕಡಿಮೆ. ಅಲ್ಲದೆ, ಅವರು ಸರ್ಕಿಟ್ ಹೊರಟ ಮನೆಗಳಲ್ಲಿ ಮಕ್ಕಳೂ, ಮನೆಯವರೆಲ್ಲರೂ ಸಿಗುತ್ತಾರೆ. ಒಂದಷ್ಟು ಸುಖಕಷ್ಟ ಮಾತಾಡಿಕೊಂಡು ಮಧ್ಯಾಹ್ನ ಎರಡು ತುತ್ತು ಉಂಡು, ಸ್ವಲ್ಪ ಅಡ್ಡಾಗಿ ಸಾಯಂಕಾಲ ಬರಬಹುದಲ್ಲ! ಎಂಬುದು ಅವಳ ಲೆಕ್ಕಾಚಾರ.  ಆ ಮನೆಗಳ ಮಕ್ಕಳ ಮೇಲೂ ಅವಳಿಗೆ ಬಹಳ ಪ್ರೀತಿ, ವಾತ್ಸಲ್ಯ. ಆ ಮಕ್ಕಳಿಗೂ ಅಷ್ಟೇ. ಅವಳು ಮನೆಗೆ ಬರುವುದು, ಊಟ ಮಾಡುವುದು, ಉಂಡೆಕಟ್ಟುವುದು, ಬಾಯಿಗೆ ಎಸೆಯುವುದು ಎಲ್ಲವೂ ಮಕ್ಕಳಿಗೆ ಚೆಂದ. ಅವಳು ಮಕ್ಕಳನ್ನು ಕೂರಿಸಿ ಕತೆ ಹೇಳುತ್ತಿದ್ದರೆ ಹದಿನೆಂಟರ ಹುಡುಗಿ ತರ ಆಡುತ್ತಾಳೆ. ಹಾಗಾಗಿ ಅವಳು ಮನೆಗೆ ಬಂದರೆ ಸಾಕು, ಮನೆಯ ಚೆಳ್ಳೆಪಿಳ್ಳೆಗಳೆಲ್ಲ ಅವಳ ಹಿಂದೆಯೆ.

ನಮ್ಮ ಮನೆಯಲ್ಲಿ ಶ್ರಾದ್ಧ, ಮಹಾಲಯ ಅಥವಾ ಯಾವುದಾದರೂ ಹಬ್ಬ ಇದ್ದರೆ ಸೀತಕ್ಕ ಆಗಾಗ ಬರುವುದಿತ್ತು. ಅವಳಿಗೆ ಪಾಯಸ ಎಂದರೆ ಜೀವ. ಅವಳು ಅನ್ನವನ್ನು ಉಂಡೆ ಕಟ್ಟಿಕೊಂಡು ಉಣ್ಣುವುದು ಎಷ್ಟು ಚೆಂದವೋ ಪಾಯಸವನ್ನೂ ಉಣ್ಣುವುದೂ ಅಷ್ಟೇ ಚೆಂದ.  ನಮಗ್ಯಾಕೋ ಸ್ವಲ್ಪ ಕುತೂಹಲ. ಅನ್ನವನ್ನು ಉಂಡೆ ಕಟ್ಟಬಹುದು, ಪಾಯಸವನ್ನು ಹೇಗೆ ಉಂಡೆ ಕಟ್ಟುವುದು? ಅದೊಂದು ದಿನ ಆಕೆ ನಮ್ಮ ಮನೆಗೆ ಬಂದಾಗ ಶ್ರಾದ್ಧವಿತ್ತು. ಅವಳಿಗೂ ಅದು ಗೊತ್ತಿತ್ತು ಅಂತ ಕಾಣುತ್ತದೆ. ಅವಳಿಗೂ ಬಹಳ ಖುಷಿ. ನಮಗೂ ಅಷ್ಟೇ. ಊಟಕ್ಕೆ ಕೂತವಳೇ ಅನ್ನವನ್ನು ಹೇಗೂ ಉಂಡೆಕಟ್ಟಿ ಬಾಯಿಗೆಸೆದು ಆಯಿತಲ್ಲ! ಇನ್ನು ಪಾಯಸದ ಸರದಿ. ಕೈಯಲ್ಲಿ ಒಂದಿಷ್ಟು ಪಾಯಸವನ್ನು ತೆಗೆದುಕೊಂಡು ಕೈ ಇನ್ನೇನು ಬಾಯಿಗೆ ತಲುಪಲು ಒಂದಿಂಚು ಇದೆ ಅನ್ನುವಾಗಲೇ ಪಾಯಸ ಸುರ್ಕ್, ಸುರ್ಕ್ ಎಂದು ಬಾಯಿಗೆ ಹಾರಿಬಿಟ್ಟಿದ್ದನ್ನು ನೋಡಿದಾಗ ಅವಳ ಬಾಯಿಯ ಫೋರ್ಸಿಗೆ ನಾವು ಕಕ್ಕಾಬಿಕ್ಕಿ. ಆಮೇಲೆ ನಾವು ಅವಳಿಗೊಂದು ಪ್ರೀತಿಯಿಂದ ಹೊಸ ಹೆಸರಿಟ್ಟೆವು, ’ಸುರ್ಕ್ ಸೀತಕ್ಕ’ ಅಂತ.

ಸೀತಕ್ಕನಿಗೇನೂ ಬಹಳ ಪ್ರಾಯವಾಗಿಲ್ಲ. ಸುಮಾರು ಎಪ್ಪತ್ತು ಅಷ್ಟೇ. ಅವಳೇ ಹೇಳುವಂತೆ, “ನನಗೆಲ್ಲಿ ಪ್ರಾಯ ಆಗಿದೆ? ನನ್ನಷ್ಟು ಓಡಾಡುವುದಕ್ಕೆ ಪ್ರಾಯದ ಹುಡುಗಿಯರಿಗೆ ಸಾಧ್ಯನಾ? ಎಂದು ಸೇಲೆ ಮಾಡುತ್ತ ಒಮ್ಮೆ ಸೊಂಟ ತಿರುಗಿಸಿ ಬೊಚ್ಚುಬಾಯನ್ನು ಅಗಲಿಸಿ ಪಕಪಕ ಅಂತ ನಕ್ಕು ಎಂಥ ಚೆಲುವೆಯರನ್ನೂ ನಾಚಿಸಿಯಾಳು! ಅವಳ ಹಲ್ಲುಗಳೆಲ್ಲ ಉದುರಿವೆ. ಕೋಲೊಂದು ಸದಾ ಕೈಯಲ್ಲಿರುತ್ತದೆ, ಊರುವುದಕ್ಕಲ್ಲ, ಅದೊಂದು ಕೈಯಲ್ಲಿದ್ದರೆ ಅವಳಿಗೆ ಆನೆಬಲ. ಅದು ಅವಳಿಗೊಂದು ಹತಾರಿ, ಹನುಮಂತನ ಕೈಯಲ್ಲಿ ಗದೆ ಇದ್ದ ಹಾಗೆ.  ಸೀತಕ್ಕನ ಪೂರ್ಣರೂಪವನ್ನು ಕಣ್ತುಂಬಿಕೊಳ್ಳಬೇಕಾದರೆ ಅವಳ ಕೈಯಲ್ಲಿ ಕೋಲು ಇರಲೇಬೇಕು.

ಸೀತಕ್ಕ, ಕಾಲಿಗೆ ಚಕ್ರಕಟ್ಟಿದ ಹಾಗೆ ಸದಾ ಓಡಾಡಿಕೊಂಡಿರುವ ಹೆಂಗಸು. ಸ್ವಲ್ಪ ದಡೂತಿಯಾದರೂ ಅವಳು ಸರಸರ ಎಂದು ಓಡಾಡಿದರೆ ಹರೆಯದ ಹುಡುಗಿಯರೂ ನಾಚಿಕೊಂಡಾರು. ಹಾಗಾಗಿ ಅವಳನ್ನು ’ಅಜ್ಜಿ’ ಎಂದು ಯಾರೂ ಕರೆಯುವುದಿಲ್ಲ. ಸೀತಕ್ಕ ಎಂಬುದು ಅವಳಿಗೂ ಇಷ್ಟವಾದ ಹೆಸರು. ಸಣ್ಣಮಕ್ಕಳೂ ಅವಳನ್ನು ’ಸೀತಕ್ಕ’ ಎಂದೇ ಕರೆಯುವುದು. ಅವಳಿಗೂ ಅದೇ ಇಷ್ಟ. ಯಾರಾದರೂ ಹದ್ದುಮೀರಿ ಮಾತಾಡಿದರೆ  ಸಾಕು, ಕೋಲುಬೀಸುತ್ತಾ ಬಾಯಿತೆರೆದರೆ ಅವಳ ದೊಂಡೆಯ ಮುಂದೆ ನಮ್ಮೂರಿನ ಇಗರ್ಜಿಯ ಗಂಟೆ ಏನೂ ಅಲ್ಲ. ಹಾಗಾಗಿ ನಮ್ಮ ಊರಿನ ಕೆಲವರಿಗೆ ಸೀತಕ್ಕ ಎಂದರೆ ಒಂಥರಾ ಪುಕುಪುಕು. ಪೋಕ್ರಿ ಮಾಡಿದ ಮಕ್ಕಳು ಹೋಗಲಿ, ಅಧಿಕಪ್ರಸಂಗ ಮಾಡಿದ ದೊಡ್ಡವರೂ ಕುಂಡೆಗೆ ಕಾಲ್ಕೊಟ್ಟು ಪರಾರಿ. ಆದರೆ ಸೀತಕ್ಕ ಲಡಾಯಿ ಮಾಡುವ, ಕಾಲುಕೆರೆದು ಜಗಳಕ್ಕೆ ಹೋಗುವ, ಅಧಿಕಾರ ತೋರಿಸುವ ಹೆಂಗಸಲ್ಲ. ಪಾಪದವರಿಗೆ ಪಾಪ, ಪೆಪ್ಪರ್ಮೆಂಟ್ ತರ. ಜೋರಿನವರಿಗೆ ಜೋರು, ಚೂರು ಮೆಣಸಿನ ತರ. ಅನ್ಯಾಯ, ಮೋಸ, ಮಕ್ಕರ್ ಏನಾದ್ರೂ ಮಾಡಿದರೆ  ಮತ್ತೆ ಕೇಳುವುದೇ ಬೇಡ,  ಹಿಡಿದ ಭೂತ ಬಿಡಿಸ್ತಾಳೆ.

ನಮ್ಮದು ಹಳ್ಳಿಯಲ್ಲಿರುವ ಪೇಟೆ. ಪೇಟೆ ಅಂದರೆ ಎರಡು ಚಿಕ್ಕ ಜಿನಸಿ ಅಂಗಡಿಗಳು, ಎರಡು ಚಿಕ್ಕ ಹೋಟೆಲುಗಳು. ಇನ್ನು  ಗಡಂಗು, ಸೇಂದಿ ಅಂಗಡಿಗಳು ಮಾಮೂಲು. ಹಳ್ಳಿಯ ಪೇಟೆಯಲ್ಲಿ ಬೇರೇನೂ ಇಲ್ಲದಿದ್ದರೂ ಅವೆರಡೂ ಇದ್ದದ್ದೇ. ಇಲ್ಲದಿದ್ದರೆ ಹಳ್ಳಿಪೇಟೆ ಎಂದು ಹೇಗೆ ಕರೆಯಲು ಸಾಧ್ಯ? ಈ ಪೇಟೆಯ ಒಂದು ತುದಿಯಲ್ಲಿ ನಮ್ಮ ಸೀತಕ್ಕನ ಗೂಡಂಗಡಿ. ಅದಕ್ಕೊಂದು ಇಳಿಜಾರು ಮಾಡು. ಅದರೊಳಗೆ ಎರಡು ಹಳೆಕಾಲದ ಬೆಂಚುಗಳು. ಒಂದು ಸೊಂಟಮುರಿದ  ಬಾಗಿಲಿಲ್ಲದ ಮರದ ಕಪಾಟು. ಅದರ ಆಧಾರಕ್ಕೆ ಕಪಾಟಿನ ಹಿಂದುಗಡೆ ಊರಿದ ಮರದ ಒಂದು ಕಂಬ. ಕಪಾಟಿನಲ್ಲಿ ಒಂದು ಡಬ್ಬದೊಳಗೆ ಒಂದಷ್ಟು ಪೆಪ್ಪರ್ಮೆಂಟ್, ಇನ್ನೊಂದರಲ್ಲಿ ಒಂದಿಷ್ಟು ಮುಂಚಿಕಡ್ದಿ, ಮತ್ತೊಂದು ಬೋಗುಣಿಯಲ್ಲಿ ಸಿಹಿ ಅಪ್ಪ, ಮತ್ತೊಂದರಲ್ಲಿ ಅವಳ ಗೂಡಂಗಡಿಯ ಪ್ರಧಾನ ಆಕರ್ಷಣೆಯಾದ ಬೀಡ. ಅವಳಿಗೂ ಕೆಲವು ಖಾಯಂ ಗಿರಾಕಿಗಳಿದ್ದಾರೆ. ನಮ್ಮಂತಹ ಕೆಲವು ಮಕ್ಕಳಿಗಂತೂ ಆಗಾಗ ಪುಕ್ಕಟೆ ಪೆಪ್ಪರ್ಮೆಂಟ್ ಅಥವಾ ಮುಂಚಿಕಡ್ದಿ ಸಿಗುತ್ತದೆ.

ಹಳೆಯ ಮಾಸಿದ ಸೀರೆ ಉಟ್ಟು, ಅದಕ್ಕೊಂದು ಸಡಿಲವಾದ ಕುಪ್ಪಸ ತೊಟ್ಟು, ತಲೆಗೂದಲನ್ನು ಸೂಡಿಕಟ್ಟಿ ಸೀತಕ್ಕ ಗೂಡಂಗಡಿಯಲ್ಲಿ ಕಪಾಟಿನ ಮುಂದೆ ಹಾಸಿದ ಗೋಣಿಚೀಲದ ಮೇಲೆ ಕಾಲುನೀಡಿ ಕುಳಿತುಕೊಳ್ಳುವುದನ್ನು ನೋಡುವುದೇ ಚಂದ.  ಅದು ಅವಳ ಖಾಯಂ ಭಂಗಿ. ತೀರಾ ಹಳ್ಳಿಯಿಂದ  ಪೇಟೆಗೆ ಬಂದವರು ಸೀತಕ್ಕನ ಗೂಡಂಗಡಿಯಲ್ಲಿ ಬೀಡ ಕೊಂಡುಕೊಳ್ಳದೆ ಹೋಗಲಾರರು. ಬೀಡ ಹಾಕದವರೂ ಅಲ್ಲಿಗೆ ಬಂದು ಅವಳ ಬೆಂಚಿನ ಮೇಲೆ ಕುಂಡೆಯೂರಿ ಸುಖಕಷ್ಟ ಮಾತಾಡಿ ನೀರು ಕುಡಿದಾದರೂ ಹೋದಾರು. ಇಲ್ಲದಿದ್ದರೆ ಅವರಿಗೆ ತಿಂದದ್ದು ಕರಗದು, ನಿದ್ದೆ ಹತ್ತಿರ ಸುಳಿಯದು.

ಸೀತಕ್ಕ, ಚಿಕ್ಕವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ತುಂಬಾ ಕಷ್ಟಗಳನ್ನು ಉಂಡವಳು. ತಾನು ಒಂದೂ  ಹೆರದಿದ್ದರೂ ತನ್ನ ತಂಗಿಯ ಮಕ್ಕಳನ್ನು ತಾನು ಹೆತ್ತ ಮಕ್ಕಳೆಂದೇ ಸಾಕಿಸಲಹಿದವಳು. ಅವರ ಸಂತೋಷದಲ್ಲಿಯೇ ಸುಖಕಂಡವಳು. ಆಕೆಗೆ ಸ್ವಂತ ಜಾಗವೂ ಇರಲಿಲ್ಲ, ಬೇರೆಯವರ ಜಾಗದಲ್ಲಿ ಒಕ್ಕಲಾಗಿದ್ದವಳು. ತಿಂದುಣ್ಣುವುದಕ್ಕೆ ಬೇಕಾದಷ್ಟು ಇಲ್ಲದಿದ್ದರೂ ಅವಳು ಸುಖವಾಗಿಯೇ ಇದ್ದಳು. ಯಾರಲ್ಲಿಯೂ ತನ್ನ ಅಸಮಾಧಾನವನ್ನು ಹೇಳಿಕೊಂಡವಳಲ್ಲ. ಗೂಡಂಗಡಿ ಅವಳ ಬದುಕಿಗೊಂದು ಆಧಾರ. ಅದರಲ್ಲಿ ಹೇಳಿಕೊಳ್ಳುವಂತಹ ವ್ಯಾಪಾರವೇನೂ ಇಲ್ಲದಿದ್ದರೂ ತನ್ನಲ್ಲಿಗೆ ಬರುವ  ನಾಲ್ಕಾರು ಮಂದಿಯೊಂದಿಗೆ ಸುಖಕಷ್ಟವನಾದರೂ ಮಾತಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳಬಹುದಲ್ಲ! ಎಂಬುದು ಅವಳ ಆಲೋಚನೆ.

ದುಡ್ದಿನ ಅವಶ್ಯಕತೆ ಇದ್ದರೂ ಅವಳ ದುಡ್ಡಿನ ಅತಿಯಾಸೆ ಇರಲಿಲ್ಲ. ತನ್ನ ಗೂಡಂಗಡಿಯಲ್ಲಿ ಬೀಡಿ, ಸಿಗರೇಟು, ನಶ್ಯ ಮೊದಲಾದ ವಸ್ತುಗಳನ್ನು ಮಾರಾಟಕ್ಕೆ ಇಡುತ್ತಿದ್ದರೆ ಇನ್ನಷ್ಟು ದುಡ್ದು ಸಂಪಾದಿಸಿ ಸುಖವಾಗಿ ಇರಬಹುದಿತ್ತಾದರೂ ಅವಳು ಅಂತಹ ಕೆಲಸ ಮಾಡಲಿಲ್ಲ. ಯಾರಾದರೂ ಬೀಡಿ, ಸಿಗರೇಟ್ ಎಳೆಯುತ್ತ ತನ್ನ ಗೂಡಂಗಡಿಗೆ ಬಂದರೆ ಅಥವಾ ಗೂಡಂಗಡಿಯಲ್ಲಿ ಕುಳಿತು ಬೀಡಿ ಎಳೆದರೆ ಸಾಕು, ಅವಳ ಕೋಲು ಕೈಗೆ ಬರುತ್ತಿತ್ತು. ಆಮೇಲೆ ನಾಯಿಯನ್ನು ಓಡಿಸಿದ ಹಾಗೆಯೇ. ಯಾರಾದರೂ ಶರಾಬು ಕುಡಿದು ಅವಳ ಗೂಡಂಗಡಿಗೆ ಬಂದರೆ, ಅಥವಾ ಗೂಡಂಗಡಿಯ ಆಸುಪಾಸಿನಲ್ಲಿ ಸುಳಿದಾಡುತ್ತಿದ್ದರೆ ಸೀತಕ್ಕನ ಕೋಲಿನ ತಾಲೀಮು ಸುರು. “ನಿಮ್ಗೆಲ್ಲ ಮರ್ಯಾದಿಯಲ್ಲಿ ಬದ್ಕುದಕ್ಕೆ ಮಂಡೆಮಾರಿ. ಪೋಕಾಲ ನಿಮ್ಗೆ. ಗಂಗರ ಕುಡ್ದು ಸಾಯ್ತಿರಿ. ಮನೆಲಿ ಹೆಂಡತಿ, ಮಕ್ಳಿಗೆ ಬಂಜರ ಊಟಕ್ಕಿಲ್ದೆ ಸತ್ರೂ ನಿಮ್ಗೆ ಕನಿಕರ ಇಲ್ಲ. ದುಡ್ದದ್ದನ್ನು ಗಂಡಂಗಿಗೇ ಸುರೀತೀರಿ. ನೀವು ಬರ್ಕತ್ ಆಗುದು ಯಾವಾಗ?” ಎಂದು ಬಾಯಗಲಿಸಿ ಕೋಲು ಬೀಸುತ್ತಾ ಗೂಡಂಗಡಿಯಿಂದ ಹೊರಬಂದರೆ ಸಾಕು, ಕುಡಿದವರ ಏರಿದ್ದ ಅಮಲೆಲ್ಲ ಜರ್ರನೆ ಇಳಿದುಹೋಗುತ್ತಿತ್ತು.

ಊರಿನ ಎಲ್ಲರಿಗೂ ಸೀತಕ್ಕ ಹಾಗೂ ಅವಳ ಸ್ವಭಾವ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಎಣ್ಣೆ ಹಾಕುವವರು, ಹೊಗೆ ಬಿಡುವವರು, ಗೋಡೆಹಾರುವವರು  ಅವಳ ಮುಂದೆ ಬರುವಾಗ ಸ್ವಲ್ಪ ಯೋಚಿಸುತ್ತಿದ್ದರು. ಅವಳೊಂದಿಗೆ ಮಾತಾಡುವಾಗಲೂ ಅಷ್ಟೇ. ಯಾರೊಬ್ಬರಿಗೂ ಅವಳ ಮುಂದೆ ನಿಂತು ಆಕ್ಷೇಪಿಸುವುದಕ್ಕೆ ಬ್ಯಾಟ್ರಿ ಇಲ್ಲ. ಏನಾಡಿದ್ರೂ ಹಿಂದುಗಡೆ ಮಾತ್ರ. ನಮ್ಮ ಪಸ್ಕಲ ಪರ್ಬುಗಳು ಮತ್ತು ದಾದು ಶೆಟ್ರಿಗೆ ಇಸ್ಪೀಟ್ ಆಡುವ ಚಟ. ಸಾಯಂಕಾಲ ಕೂತ್ರೆ ಮಧ್ಯರಾತ್ರಿಯಾದರೂ ಸರಿ, ಮನೆಯ ನೆನಪೇ ಇರುವುದಿಲ್ಲ.  ಒಂದು ದಿನ ಕತ್ತಲೆಯಾಗುತ್ತಿದ್ದಂತೆಯೇ ಪಸ್ಕಲ ಪರ್ಬುಗಳ ಸರ್ಕಿಟ್ ಮೆಲ್ಲನೆ ಹೊರಟಿತ್ತು. ದೂರದಲ್ಲಿ ಸೀತಕ್ಕನನ್ನು ಕಂಡವರೇ ಇನ್ನು ಅವಳ ಕೈಗೆ ಸಿಕ್ಕಿಹಾಕಿಕೊಂಡರೆ ಗ್ರಹಚಾರ ಬಿಡಿಸ್ತಾಳೆ ಎಂದುಕೊಂಡು ಮಗ್ಗಿಬಾಯಿಯ ಕಂಪೌಂಡ್ ಹಾರಿದ್ದನ್ನು ಸೀತಕ್ಕ ನೋಡಿಯೇ ಬಿಟ್ಟಳು. “ಏನು ಪಸ್ಕಲ ಪರ್ಬುಗಳೇ, ನಿಮ್ಗೆ ಲಾಗಹಾಕುವ ಬುದ್ಧಿ ಯಾವಾಗ ಸುರು ಆದದ್ದು? ಹೆಂಡತಿ ಮುಂದೆ ಪೇಟೆಯಲ್ಲಿ ಜಂಬರ ಇದೆ ಅಂತ ಬಂಡಲ್ ಬಿಟ್ಟು ಇಲ್ಲಿ ಉಲಯ್ ಪಿದಾಯ್ ಆಟನಾ? ಅದನ್ನುಆಡಿ ಬರ್ಕತ್ ಆದವರು ಇದ್ದಾರಾ? ಇನ್ನು ನಿಮ್ಮ ಹೆಂಡ್ತಿ ಮಕ್ಳು ಬರ್ಕತ್ ಆದ ಹಾಗೆ. ಊರು ಲಗಾಡಿತೆಗೆಯುವುದಕ್ಕೆ ನಿಮ್ಮಂತವರು ಸಾಕು.” ಎಂದು ಅಷ್ಟು ದೂರದಿಂದಲೇ ಜಾಗಂಟೆ ಬಾರಿಸಿದಂತೆ ಆಡಿದಾಗ ಪಸ್ಕಲ ಪರ್ಬುಗಳಿಗೆ ಇನ್ನು ಜನ್ಮಕ್ಕೂ ಈ ಆಟ ಬೇಡ ಅನ್ನಿಸಿತು. ಒಂದೆರಡು ತಿಂಗಳ ಮೇಲೆ ಪಸ್ಕಲ ಪರ್ಬುಗಳ ಹೆಂಡತಿ ಸಿಕ್ಕಿದವರು, “ನೀನೇ ಸಮ ಸೀತಕ್ಕ, ನನ್ನಿಂದ ಅವರ ಚಟ ಬಿಡಿಸ್ಲಿಕ್ಕೆ ಸಾಧ್ಯ ಆಗ್ಲಿಲ್ಲ. ನೀನು ಬಿಡಿಸಿದೆಯಲ್ಲ. ನಿನ್ನ ಉಪಕಾರ ಮರಿಲಿಕ್ಕಿಲ್ಲ” ಎಂದಳಂತೆ. ಹೀಗೆ ಸೀತಕ್ಕ ಊರಲ್ಲಿ ಕೆಲವರ ಚಟಬಿಡಿಸಿದ್ದಾಳೆ. ಅದಕ್ಕೆ ನಮ್ಮೂರಲ್ಲಿ ಸೀತಕ್ಕನನ್ನು ಯಾರೂ ಎದುರು ಹಾಕಿಕೊಳ್ಳುವುದಿಲ್ಲ.

ನಮ್ಮ ಊರಿನ ವಾಟೀಸ್ ಪರ್ಬುಗಳಿಗೂ ಸೀತಕ್ಕನಿಗೂ ಅಷ್ಟಕ್ಕಷ್ಟೇ. ಹಾಗೆಂದು ವಾಟೀಸ್ ಪರ್ಬುಗಳು ಸೀತಕ್ಕನಿಗೇನೂ ತೊಂದರೆ ಕೊಟ್ಟಿಲ್ಲ. ಸೀತಕ್ಕನೂ ಅಷ್ಟೇ. ಆದರೆ ವಾಟೀಸ್ ಪರ್ಬುಗಳಿಂದ ಊರವರಿಗೆ ಆಗಾಗ ತೊಂದರೆಗಳಾಗುತ್ತಿದ್ದವು. ಹಾಗಾಗಿಯೇ ಸೀತಕ್ಕನಿಗೆ ಪರ್ಬುಗಳೆಂದರೆ ಸ್ವಲ್ಪ ಕಿರಿಕಿರಿ. ವಾಟೀಸ್ ಪರ್ಬುಗಳೆಂಬುದು ಅವರ ನಿಜ ಹೆಸರಲ್ಲ.  ಅವರ ಅಸಲಿ ಹೆಸರು ಹೆಚ್ಚಿನವರಿಗೆ ಗೊತ್ತೇ ಇಲ್ಲ. ದಿನಾ ಸಾಯಂಕಾಲ ಸೊಂಟಕ್ಕೊಂದು ಚಲ್ಲಣ ಸಿಕ್ಕಿಸಿ, ಮೈಗೊಂದು ಹರಕು ಗಂಜಿಪರಕ್ ಹಾಕಿ, ತಲೆಗೊಂದು ನಾರುವ ಬೈರಾಸನ್ನು ಕಟ್ಟಿಕೊಂಡು ಪೇಟೆಯಲ್ಲೊಂದು ಸವಾರಿ ಹೊರಡುವ ಅಭ್ಯಾಸ. ಸಾಯಂಕಾಲ ಅರುವತ್ತು ಹಾಕಲೇಬೇಕು. ಇಲ್ಲದಿದ್ದರೆ ಸೊಂಟ ನೆಟ್ಟಗೆ ನಿಲ್ಲುವುದೇ ಇಲ್ಲ. ಕುಡಿದ ಮೇಲೆ ಬೀದಿ ಸುತ್ತೋದು ಅವರ ಅಭ್ಯಾಸ. ಹಾಗಾಗಿ ಯಾರೋ ಅವರಿಗೆ ’ವಾಟೀಸ್ ಪರ್ಬು’ಗಳೆಂದು ಹೆಸರಿಟ್ಟರು. ಈಗ ಅದೇ ಹೆಸರು ಖಾಯಂ ಆಗಿದೆ.

ನಮ್ಮ ವಾಟೀಸ್ ಪರ್ಬುಗಳಿಗೆ ಪ್ರಾಯ ಅರುವತ್ತು ದಾಟಿದ್ದರೂ ಪೋಕ್ರಿ ಬಿಟ್ಟಿರಲಿಲ್ಲ. ಟೈಟ್ ಆದ  ಮೇಲೆ ಅವರ ಮಾಮೂಲಿ ಡೈಲಾಗ್ ಸುರುವಾಗ್ತಾ ಇತ್ತು. “ಕಂಯಿ ಗೆಲೆರಿ ಬರ್ಕತ್ ನಾ, ಘರ ಗೆಲೆರಿ ಬಾಯ್ಲ್ ಸೋಡ್ನಾ”(ಎಲ್ಲಿ ಹೋದ್ರೂ ಬರ್ಕತ್ ಇಲ್ಲ, ಮನೆಗೆ ಹೋದ್ರೂ ಹೆಂಡತಿ ಬಿಡೋದಿಲ್ಲ) ಎಂದು ಒದರುತ್ತಾ  ಕತ್ತಲೆಯಲ್ಲಿ ತೂರಾಡಿಕೊಂಡು ಹೋಗುವಾಗ ಸಿಕ್ಕಿದ ಮನೆಗಳಿಗೆಲ್ಲ ಕಲ್ಲೆಸೆಯುವುದು, ಬಾಳೆ ಗೊನೆಹಾಕಿದ್ದರೆ ಅದನ್ನು ಮುರಿದುಹಾಕುವುದು, ಮನೆಯಲ್ಲಿ ಬಾಯಮ್ಮ ನೆಟ್ಟ ಬಸಳೆಯನ್ನು ಕೊಯ್ದುಹಾಕಿ ಏನೂ ತಿಳಿಯದಂತೆ ಸುಮ್ಮನಿರುವುದು, ಮನೆಯಲ್ಲಿನ ಮಣ್ಣಿನ ಮಡಕೆಗೆ ತೂತು ಮಾಡಿ ತೆಪ್ಪಗಿರುವುದು ಇನ್ನೂ ಏನೇನೋ. ಈ ವಾಟೀಸ್ ಪರ್ಬುಗಳ ಪೋಕ್ರಿ ಒಂದಾ ಎರಡಾ? ಗಂಡನ ಈ ರಂಪಾಟ ಬಿಡಿಸುವುದಕ್ಕೆ ಅವರ ಹೆಂಡತಿ ಬಾಯಮ್ಮ ಪ್ರಯತ್ನಮಾಡಿದ್ದು ಅಷ್ಟಿಷ್ಟಲ್ಲ. ಎಷ್ಟೋ ಬಾರಿ ಬಾಯಮ್ಮ ಅನ್ನಬಡಿಸುವ ಸೌಟಿನಿಂದ ಪರ್ಬುಗಳಿಗೆ ಹೊಡೆದಾಗ ತುಂಡಾದ ಸೌಟುಗಳಿಗೆ ಲೆಕ್ಕವಿಲ್ಲ. “ಮನೆಗೆ ಹೋದ್ರೆ ಹೆಂಡತಿ ಯಾಕೆ ಬಿಡುವುದಿಲ್ಲ?” ಎಂಬುದನ್ನು ಮನೆಯಲ್ಲಿ ತುಂಡಾಗಿ ಬಿದ್ದಿರುವ ಸೌಟುಗಳೇ ಹೇಳುತ್ತಿದ್ದವು.  ಪರ್ಬುಗಳಿಗೆ ವಾಟೀಸ್ ಹಾಕಿದ ಮೇಲೆಯೇ ಈ ಪೋಕ್ರಿಬುದ್ಧಿ ಜಾಗೃತವಾಗುತ್ತಿತ್ತು. ಅದನ್ನು ಬಿಡಿಸುವುದಕ್ಕೆ ಬಾಯಮ್ಮ ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ. ಯಾರೆಷ್ಟು ಬುದ್ಧಿ ಹೇಳಿದರೂ ಅವರನ್ನು ಸರಿಪಡಿಸಲು ಆಗಲಿಲ್ಲ. ಕೊನೆಕೊನೆಗೆ ಪರ್ಬುಗಳ ಕಿವಿಗಳಿಗೆ ಪಟಾಕಿ ಹೊಡೆದರೂ ಕೇಳುತ್ತಿರಲಿಲ್ಲ. ಪರ್ಬುಗಳೇ ಹೇಳುವ ಹಾಗೆ, ಬಾಯಮ್ಮನ ದೊಂಡೆಗೆ ಅವರ ಕಿವಿಗಳು ಅರ್ಧಪೊಟ್ಟಾಗಿದ್ದವು.

ಸೀತಕ್ಕನೂ ವಾಟೀಸ್ ಪರ್ಬುಗಳಿಗೆ ಸಾಕಷ್ಟು ಬುದ್ಧಿಹೇಳಿದ್ದಳು. ಆದರೂ ಪರ್ಬುಗಳು ಸುಧಾರಣೆಯಾಗಲಿಲ್ಲ. ಅದಕ್ಕೆ ಸೀತಕ್ಕ ಅವರನ್ನು ’ಬೀಲಮೋಂಟ’ ಎಂದು ಕರೆಯಲಿಕ್ಕೆ ಸುರುಮಾಡಿದ ಮೇಲೆ ವಾಟೀಸ್ ಪರ್ಬುಗಳು ಬೀಲಮೋಂಟ ಪರ್ಬುಗಳಾದರು. ಈಗ ಊರವರಿಗೆ ಬಿಡಿ, ಹೆಂಡತಿ ಬಾಯಮ್ಮನಿಗೂ ಅವರ ಅಸಲಿ ಹೆಸರು ಮರೆತುಹೋದುದರಲ್ಲಿ ಆಶ್ಚರ್ಯವೇನಿಲ್ಲ. ಸಾಯಂಕಾಲ ಆಗುತ್ತಿದ್ದಂತೆಯೇ ಅವರ ಗಂಟಲು ಆರಿದಂತೆ, ಕೈಕಾಲು ನಡುಗಿದಂತೆ, ಹೊಟ್ಟೆಯಲ್ಲೇನೋ ಅವುಕಿದಂತೆ, ಬೆನ್ನು ಬಗ್ಗಿದಂತೆ ಆಗುತ್ತದೆ. ಆ ಸಮಯದಲ್ಲಿ ಅವರಿಗೆ ಒಂದು ಅರುವತ್ತು ವಾಟೀಸ್ ಹಾಕಲೇಬೇಕು. ಹಾಗೆ ಹಾಕಿದೊಡನೆಯೇ ಗಂಟಲು ಸರಿಯಾಗಿ, ಕೈಕಾಲೆಲ್ಲ ಗಟ್ಟಿಯಾಗಿ, ಬೆನ್ನು ನೆಟ್ಟಗಾಗಿ, “ಈ ಸರ್ಕಾರದೋರು ಮಾರ್ಗವನ್ನಾದರೂ ಬೇಕಾದಷ್ಟು ಉದ್ದ ಮಾಡಿದ್ದಾರೆ, ಆದರೆ ಅಗಲನೇ ಮಾಡಿಲ್ಲ” ಎಂದು ಬಿಂಗ್ರಿ ಮಾತಾಡುತ್ತಾ ಮಾರ್ಗ ಅಳೆಯಲು ಸುರುಮಾಡುತ್ತಾರೆ.

ಒಮ್ಮೆ ಸಾಯಂಕಾಲ ವಾಟೀಸ್ ಹಾಕಿದ ಪರ್ಬುಗಳು ಡಿಂಗಾಗಿ ಸರ್ಕಿಟ್ ಹೊರಟರು. ಸೀತಕ್ಕನ ಗೂಡಂಗಡಿಯ ಹತ್ತಿರದಲ್ಲಿಯೇ ಇದ್ದ ವಾಸ್ಮಾಮನ ಬಾಳೆತೋಟದಲ್ಲಿ ಗೊನೆಹಾಕಿದ ಬಾಳೆಯೊಂದು ಬೇಲಿಗೆ ತಾಗಿ ಪರ್ಬುಗಳ ಕಣ್ಣುಕುಕ್ಕಿತು. ತೂರಾಡುತ್ತಾ ಹೋದವರೇ ಅದನ್ನು ಮುರಿಯಲು ಎಡತಾಕಿದರು. ಗೊನೆ ಕೈಗೆ ಸುಲಭವಾಗಿ ಎಟಕುತ್ತಿರಲಿಲ್ಲ. ಒಂದೆರಡು ಬಾರಿ ಲಾಗ ಹಾಕಿ ದೊಪ್ಪೆಂದು ಬಿದ್ದುಬಿಟ್ಟರು. ಆದರೂ ಹಠಬಿಡದ ತ್ರಿವಿಕ್ರಮನ ಹಾಗೆ ಮತ್ತೆ ಎದ್ದು ಲಾಗಹಾಕಿದಾಗ ಗೊನೆ ಕೈಗೆ ಸಿಕ್ಕಿತು. ಇನ್ನೇನು ಮುರಿಯಬೇಕು ಅನ್ನುವಾಗ ಅವರ ಕುಂಡೆಯ ಮೇಲೆ ಕಾಯಿಸಿ ಎರಡು ಪೆಟ್ಟು ಬಿದ್ದಾಗ ಪರ್ಬುಗಳು ಆಯತಪ್ಪಿ ಬಿದ್ದುಬಿಟ್ಟರು. ತಲೆಯಿತ್ತಿ ನೋಡಿದಾಗ ಕೋಲುಹಿಡಿದ ಸೀತಮ್ಮ ಒನಕೆ ಓಬವ್ವನಂತೆ ನಿಂತಿದ್ದಾಳೆ. ಕೋಲುಬೀಸಿ ಮತ್ತೂ ನಾಲ್ಕು ಬಿಗಿದಳು.  ಪರ್ಬುಗಳ ಸೊಕ್ಕು ನೋಡಿ ಸೀತಕ್ಕನಿಗೆ ಪಿತ್ತ ನೆತ್ತಿಗೇರಿತ್ತು.

“ನೀನು ಬೀಲಮೋಂಟನೇ ಸರಿ. ಗಂಗರ ದೊಂಡೆಗೆ ಇಳಿದ ಕೂಡ್ಲೆ ನೀನು ಅಂಡೆಪಿರ್ಕಿಯೇ.  ಇಲ್ಲದ್ದೆಲ್ಲ ಸುರು ಆಗ್ತದೆ ಆಲ್ವಾ. ನಿನ್ನ ಬುದ್ಧಿ ಸರ್ತ ಆಗುವುದೇ ಇಲ್ಲ. ವಾಸ್ಮಾಮ ಬೆಳೆಸಿದ್ದನ್ನು ನೀನು ಮುರ್ದುಹಾಕುತ್ತಿಯಾ? ಏನು ಸೊರ್ಕು ನಿಂಗೆ? ಅದೆಂತ ಸೀಂತ್ರಿಬುದ್ಧಿ ನಿಂದು. ಅಬ್ಬಾ ನಿಂಗೆ ಪೋಕಾಲವೇ? ಇನ್ನೊಮ್ಮೆ ಹೀಗೆ ರಂಬರುಟಿ ಮಾಡಿದ್ರೆ ನಿನ್ನ ಕುಂಡೆಯ ಚರ್ಮಜಾರಿಸಿ ಉಪ್ಪುಹಾಕಿ ನಿನ್ನನ್ನು ಸರ್ತ ಮಾಡ್ಲಿಲ್ಲ ನಾನು ಸೀತಕ್ಕನೇ ಅಲ್ಲ” ಎಂದು ಅಬ್ಬರಿಸಿದಾಗ ಬೀಲಮೋಂಟ ಪರ್ಬುಗಳ ವಾಟೀಸ್ ಅಮಲು ಜರ್ರನೆ ಇಳಿದಿತ್ತು. ಆಮೇಲೆ ಅವರ ಸೀಂತ್ರಿಬುದ್ಧಿಯೂ ಕಡಿಮೆಯಾಯಿತು.

ಒಂದು ದಿನ ಪರ್ಬುಗಳ ಹೆಂಡತಿ ಬಾಯಮ್ಮ ಸೀತಕ್ಕನಲ್ಲಿಗೆ ಬಂದುಒಂದಷ್ಟು ಹೊತ್ತು ಮಾತಾಡಿದ್ದರು. “ನೀನೇ ಸರಿ ಸೀತಕ್ಕ. ನಾನೆಷ್ಟು ಪ್ರಯತ್ನ ಮಾಡಿದರೂ ನನ್ನ ಗಂಡನ ಪಿರ್ಕಿಸ್ ಬಿಡಿಸಲಾಗಲಿಲ್ಲ. ನೀನು ಸುಲಭದಲ್ಲಿ ಬಿಡಿಸಿದೆಯಲ್ಲ! ಆ ಗುಟ್ಟು ನನಗೆ ಮೊದಲೇ ಗೊತ್ತಿದ್ದಿದ್ದರೆ ಮನೆಯ ಬಸಳೆ, ತೊಂಡೆ, ಮಾತ್ರ ಅಲ್ಲ, ನನ್ನ ಅನ್ನದ ಸೌಟುಗಳೂ ಉಳಿಯುತ್ತಿದ್ದವು. ಹೆಣ್ಣು ಎಂದ್ರೆ ನೀನೇ ಸರಿ ಸೀತಕ್ಕ, ನಿನ್ನಂತವರು ಊರಿಗೆ ಬೇಕು” ಎಂದು ಹೇಳಿಹೋಗಿದ್ದರು. ಸೀತಕ್ಕನಿಗೂ ಒಂದು ತೃಪ್ತಿ ಇತ್ತು, ಪರ್ಬುಗಳಿಗೆ ಬೀಸಿಬೀಸಿ ಹೊಡೆದದ್ದಕ್ಕಲ್ಲ, ಅವರ ಪಿರ್ಕಿಸ್ ಬಿಟ್ಟುಹೋದದ್ದಕ್ಕೆ. ಈಗ ವಾಟೀಸ್ ಹಾಕಿದ ಮೇಲೆ ಅಪ್ಪಿತಪ್ಪಿಯೂ ಅವರು ಸೀತಕ್ಕನ ಗೂಡಂಗಡಿಯ ಹತ್ತಿರ ಸುಳಿಯುವುದಿಲ್ಲ. ಹಾಗೇನಾದರೂ ಅಪ್ಪಿತಪ್ಪಿ ಬಂದರೆ ತಕ್ಷಣವೇ ಮಂಗಮಾಯ ಆಗುತ್ತಿದ್ದರು. ಅವರು ಈಗ ಮಾರ್ಗ ಅಳೆಯುವುದಿಲ್ಲ, ಮನೆಗೆ ಹೋಗಿ ತೆಪ್ಪಗೆ ಮಲಗಿಬಿಡುತ್ತಿದ್ದರು.

ಸೀತಕ್ಕನಿಗೆ ಸ್ವಂತ ಕೃಷಿಮಾಡುವುದಕ್ಕೆ ಜಾಗ ಇಲ್ಲದಿದ್ದರೂ ಬೇರೆಯವರು ಕೃಷಿ ಮಾಡುವುದನ್ನು ನೋಡಿ ಮೆಚ್ಚಿಕೊಳ್ಳುತ್ತಾಳೆ. ಅದನ್ನು ಯಾರಾದರೂ ಹಾಳುಮಾಡಲು ಪ್ರಯತ್ನಿಸಿದರೆ ರೊಚ್ಚಿಗೇಳುತ್ತಾಳೆ. ನಮ್ಮ ಹೊಟ್ಟೆ ತುಂಬಿಸುವ ಕೃಷಿಯನ್ನು ಹಾಳುಮಾಡಬಾರದು, ಯಾರೋ ಬೆಳೆಸಿದ್ದನ್ನು ಇನ್ಯಾರೋ ತಿನ್ನಬಾರದು, ಒಂದು ಊರು ಅಂದಮೇಲೆ ಎಲ್ಲರೂ ಚೆನ್ನಾಗಿರಬೇಕು, ಇನ್ನೊಬ್ಬರಿಗೆ ತೊಂದರೆ ಕೊಡಬಾರದು ಎಂಬುದು ಅವಳ ವಾದ. ಅವಳು ಯಾರಿಗೂ ಅನ್ಯಾಯ ಮಾಡಿದವಳೂ ಅಲ್ಲ,  ಅವಳ ಎದುರಲ್ಲಿ ಯಾರಾದರೂ ಅನ್ಯಾಯ ಮಾಡಿದರೆ ಅವರನ್ನು ಬಿಟ್ಟವಳೂ ಅಲ್ಲ. ಚಿತ್ರದುರ್ಗಕ್ಕೆ ಒನಕೆ ಓಬವ್ವ ಇದ್ದ ಹಾಗೆ ನಮ್ಮೂರಿಗೆ ದೊಣ್ಣೆ ಸೀತಕ್ಕ. ಅವಳೆಂದರೆ ಊರಿಗೊಂದು ಹೆಮ್ಮೆ.

ಊರಲ್ಲಿ ದೇವಸ್ಥಾನಗಳ ಆಯನ, ಭೂತಕೋಲ, ಯಕ್ಷಗಾನ, ನಾಟಕ ಹೀಗೆ ಗಮ್ಮತ್ ಇರುವಲ್ಲೆಲ್ಲ ಸೀತಕ್ಕ ಬೆತ್ತದ ಪೆಟ್ಟಿಗೆಯೊಂದರಲ್ಲಿ ಎಲ್ಲವನ್ನು ಸೇರಿಸಿಕೊಂಡು ತಲೆಮೇಲೆ ಹೊತ್ತು ಸಾಯಂಕಾಲವೇ ಹೊರಡುವುದಿತ್ತು. ಒಬ್ಬಳ ದುಡಿಮೆ, ಹೊಟ್ಟೆತುಂಬಿಸಬೇಡವೇ? ಆಯನ, ಕೋಲಗಳಿರುವಲ್ಲಿ ತುಂಬಾ ಜನ ಸೇರುತ್ತಾರೆ. ಹಾಗೆ ಸೇರಿದ ಜನರು ಸೀತಕ್ಕನಲ್ಲಿ ವ್ಯಾಪಾರ ಮಾಡದೇ ಹೋಗುವುದಿಲ್ಲ. ಅವಳ ಬೀಡ, ಚಕ್ಕುಲಿ, ಕಾರಕಡ್ದಿ, ಪೆಪ್ಪರ್ಮೆಂಟ್, ಅಪ್ಪ, ಮುಂಚಿಕಡ್ದಿ, ಹುರಿಗಡ್ಲೆ, ಮಂಡಕ್ಕಿ ಎಂದರೆ ತುಂಬಾ ಇಷ್ಟ. ಬೇರೆ ನಾಲ್ಕಾರು ಅಂಗಡಿಗಳಿದ್ದರೂ ಜನರಿಗೆ ಸೀತಕ್ಕನ ಬೀಡವೇ ಬೇಕು. “ಸೀತಕ್ಕನ ಬೀಡದ ಟೆಂಪರ್, ಅಪ್ಪದ ರುಚಿ, ಚಕ್ಕುಲಿಯ ಪರಿಮಳ ಎಲ್ಲಿಯೂ ಸಿಗದು” ಎಂಬುದು ಅವಳ ಅಭಿಮಾನಿಗಳ ಅಭಿಪ್ರಾಯ. ಕೋಲ ಇದ್ದಲ್ಲಿ ಕೋಲ ಕಟ್ಟುವವನಿಗೆ ಸೀತಕ್ಕ ಬೀಡ ಹಾಕದಿದ್ದರೆ ಮೈಮೇಲೆ ಬರಲಾರದು, ಆಟದ ಭಾಗವತರಿಗೆ ಸ್ವರವೇ ಹೊರಡದು.

ನಮ್ಮೂರಿನ ದೇಜಣ್ಣ ತುಂಬಾ ಕುಶಾಲಿನ ಜನ. ಓದು ಬರಹ ಏನೂ ಇಲ್ಲದಿದ್ದರೂ ಶ್ರಮಜೀವಿ. ಆಗಾಗ ಒಂದು ಅರುವತ್ತು ಗಂಟಲಿಗೆ ಸುರಿಯದಿದ್ದರೆ ಕೈಕಾಲೆಲ್ಲ ನಡುಗಿದ ಹಾಗಾಗುತ್ತದೆ. ಕುಡಿದ ಮೇಲೆ ಸ್ವಲ್ಪ ಬಿಂಗ್ರಿಯೇ. ಓದು ಬರಹ ಇಲ್ಲದಿದ್ದರೂ  ಕೈಗೆ ಸಿಕ್ಕಿದ್ದನ್ನು ಓದುವ ಹಾಗೂ ಬೀಡಿ ಸೇದುವ ಚಟ. ಆಗಾಗ ಬೀಡಿ ಸೇದದಿದ್ದರೆ ದೇಜುನ ಕೈಕಾಲೆಲ್ಲ ಮರಗಟ್ಟಿದ ಹಾಗಾಗುತ್ತಿತ್ತು. ಹಾಗೆಯೇ ಸೀತಕ್ಕನ ಬೀಡವೂ ಬೇಕು. ಸೀತಕ್ಕನ ಗೂಡಂಗಡಿಯ ಒಂದಷ್ಟು ದೂರದಲ್ಲಿ ಗುಮ್ಮಣ್ಣ ಶೆಟ್ರ ಜಿನಸಿ ಅಂಗಡಿ. ಅವರು ದೊಡ್ಡ ದೊಡ್ಡಹೊಟ್ಟೆಯ ಅಸಾಮಿ. ಶೆಟ್ರ ಗತ್ತು ಬೇರೆ. ಕುರ್ಚಿಯಲ್ಲಿ ಕುಳಿತ್ತಿದ್ದರೆ ಬೇಗನೇ ಏಳುವುದಕ್ಕೆ ಆಗುವುದಿಲ್ಲ. ಅದೊಂದು ದಿನ ಮಧ್ಯಾಹ್ನ ಊಟಮಾಡಿ ಕುರ್ಚಿಯಲ್ಲಿ ಕೂತವರಿಗೆ ಅಲ್ಲೇ ನಿದ್ದೆಬಂತು. ಅವರ ಗೊರಕೆಗೆ ಹುಲಿಯೇ ಹೆದರಿ ಓಡಿಹೋದೀತು. ಆ ಗೊರಕೆಯ ಗರ್ಜನೆಯನ್ನು ಕೇಳಿದವರೊಬ್ಬರು ಅವರನ್ನು ಹಿಂದಿನಿಂದ ’ಗೋಂಕುರ್ ಕಪ್ಪೆ’ ಎಂದೇ ಕರೆಯತೊಡಗಿದ ಮೇಲೆ ಆ ಹೆಸರು ಅವರಿಗೆ ಗಟ್ಟಿಯಾಗಿ ಅಂಟಿಕೊಂಡಿದೆ. ಆದರೆ, ಅವರ ಎದುರಲ್ಲಿ ಯಾರಾದರೂ ಹಾಗಂದ್ರೆ ಮುಂದಿನಿಂದಲೂ ಹಿಂದಿನಿಂದಲೂ ಒಟ್ಟಿಗೇ ಹರಿದೀತು! ಊರಲ್ಲಿ  ಅಷ್ಟು ಧೈರ್ಯ ಯಾರಿಗೂ ಇಲ್ಲ.

ಒಂದು ದಿನ ನಮ್ಮ ದೇಜಣ್ಣ ಬೀಡಿಕೊಳ್ಳಲು ಗುಮ್ಮಣ್ಣ ಶೆಟ್ರ ಅಂಗಡಿಗೆ ಹೋದಾಗ ಶೆಟ್ರು ಕುಶಾಲಿಗೆ ದೇಜಣ್ಣನಿಗೆ ಪೇಪರ್ ಓದುವುದಕ್ಕೆ ಕೊಟ್ಟರು. ದೇಜಣ್ಣನಿಗೆ ಓದುವುದಕ್ಕೆ ಬರುವುದಿಲ್ಲ, ಬಂಡಲ್ ಬಿಡ್ತಾನೆ ಎಂಬುದು ಗುಮ್ಮಣ್ಣ ಶೆಟ್ರಿಗೂ ಗೊತ್ತು. ಗುಟ್ಟು ಬಿಟ್ಟುಕೊಡುವುದಕ್ಕೆ ಸಿದ್ಧನಿಲ್ಲದ ದೇಜಣ್ಣ ನೋಡಿಯೇ ಬಿಡ್ತೇನೆ ಎಂದು ಓದಲಿಕ್ಕೆ ಸುರು. “ಒಟ್ಟೆ ಮುಂಡು ದೆರ್ತ್ ಕಟ್ಟಿ ಕುಟ್ಟಿಕುರ್ಡೇಲ್ ಸೊಪ್ಪು ಕೊಯ್ವಾಗ, ನಾಗಪ್ಪಣ್ಣನ ಮಗ ನರ್ಸಪ್ಪಣ್ಣ ಬಂದ್ರು. ಇರ್ನೂರ್ ರೂಪಾಯಿ ಕೊಟ್ಟುಕೊಟ್ಟಿದ್ರು, ಓಣಿ ಒರ್ಂಕು ಒಂದು, ಕಣಿ ಗರ್ಂಪು ಎರಡು, ಇದ್ಕೆ ಸಾಕ್ಷಿ ಯಾರಂದ್ರೆ ತೇಕ್ಡ್ ಕುಟ್ಟು ತೇಟ್ ಮರ್ಲೆ, ಬೈಕ್ಡ್ ಕುಟ್ಟು ಬೈಟ್ ಮರ್ಲೆ, ಉಪ್ಪಿನ್ಕಾಯಿ ಮಗ ಲೌಂತಾರಿ ಜಾಗಪ್ಪ ಬರೆಕೊರಿ ನೋಟೀಸ್ ಎದುರ್ ಸಾಕ್ಷಿ, ಕಿತೆ ಮಾಡೆರೆ ಏನಂದ್ರೆ …..” ಇಷ್ಟು ಓದುವಾಗಲೇ ನಮ್ಮ ಸೀತಕ್ಕ ಬರಬೇಕೆ? “ಏನು ದೇಜಣ್ಣ, ಮಂಡೆ ಸಮ ಇಲ್ವಾ? ಈ ಬಿಂಗ್ರಿ ಯಾವಾಗ ಸುರು ಆದದ್ದು ನಿಂಗೆ? ನಿನ್ನೆವರೆಗೆ ಸಮ ಇದ್ದಿಯಲ್ಲ! ಇವತ್ತು ಏನಾಯ್ತು? ಏನು ಓಂಟೆಜಾರಿನಲ್ಲಿ ಬರುವಾಗ ಕುಲೆಹಿಡಿಯಿತಾ? ಓದುತ್ತಿಯಾದರೆ ಸಮ ಓದು. ಇದ್ಯಾವ ಬಿಂಗ್ರಿ ಬಾಸೆ? ನಿಂಗೆ ಇಲ್ಲಿ ಎಂತ ಜಂಬರ? ಹೋಗ್ತಿಯಾ ಇಲ್ವಾ?” ಎಂದ ಸೀತಕ್ಕನ ದೊಂಡೆಗೆ ದೇಜಣ್ಣ ಮರಗಟ್ಟಿಹೋದದ್ದೇ. ಆಮೇಲೆ ದೇಜಣ್ಣನಿಗೆ ಬಿಂಗ್ರಿ ದೇಜಣ್ಣ ಎಂದೇ ಹೆಸರಾಯಿತು.

ಸೀತಕ್ಕ ಎಂದರೆ ಹಾಗೆಯೇ. ಬೇಕಾಬಿಟ್ಟಿ ಕೆಲಸ, ಬೇಕಾಬಿಟ್ಟಿ ಮಾತು ಅವಳಿಗೆ ಇಷ್ಟವಾಗುವುದೇ ಇಲ್ಲ. ಅವಳ ಎದುರಿಗೆ ಯಾರಾದ್ರೂ ಪ್ರೋಕ್ರಿ ಮಾಡಿದ್ರೆ, ಇನ್ಯಾರಿಗಾದ್ರೂ ಅವಮಾನ ಮಾಡಿದ್ರೆ, ಬೇಡದ ಕೆಲಸ ಮಾಡಿದ್ರೆ, ಸೀಂತ್ರಿಬುದ್ಧಿ ತೋರಿಸಿದ್ರೆ ಸೀತಕ್ಕ ಸುಮ್ಮನಿರುವ ಹೆಂಗಸಲ್ಲ. ಬಾಯಿತೆರೆದರೆ ಯಾರ ದೊಂಡೆಯನ್ನೂ ಮುಚ್ಚಿಸಿಬಿಡುತ್ತಾಳೆ.  ಆ ಜಾತಿ, ಈ ಜಾತಿ ಅಂತ ನೋಡುವುದಿಲ್ಲ. ಅವಳು ನ್ಯಾಯದ ಪಕ್ಷ. ಒಮ್ಮೆ ಒಬ್ಬ ಹುಡುಗ ವಾಸುಮಾಮನ ಕಂಪೌಂಡಿನಲ್ಲಿದ್ದ ಗೇರುಮರಕ್ಕೆ ಕಲ್ಲುಹೊಡೆಯುತ್ತಿದ್ದ. ಸೀತಕ್ಕ ಮೆಲ್ಲನೆ ಬಂದು ಅವನ ಕುಂಡೆಗೊಂದು ಮೆಲ್ಲನೆ ತಟ್ಟಿ “ಕಲ್ಲು ಹೊಡೀತಿಯಾ?” ಎಂದಳು. ಸೀತಕ್ಕನ ಕೈಯಲ್ಲಿನ ಕೋಲು ನೋಡಿ, ಹುಡುಗ ಹೆದರಿ ಜೋರಾಗಿ ಅತ್ತ. ಸೀತಕ್ಕನಿಗೆ ಅಯ್ಯೋ ಪಾಪ ಅನ್ನಿಸಿತು. ಅವನ ಕಣ್ಣೀರು ಒರೆಸಿ ತನ್ನ ಗೂಡಂಗಡಿಗೆ ಕರೆತಂದು, “ನೋಡು ಮಗಾ, ಆ ಮರ ಬೇರೆಯವರ್ದು. ಅಲ್ಲಿ ಬೆಳೆದ್ದೆಲ್ಲ ಅವರಿಗೆ ಸಿಗ್ಬೇಕು. ಹೊಡೆದ ಕಲ್ಲು ಯಾರ್ದೋ ಮನೆ ಮೇಲೆ ಅಥವಾ ಮಂಡೆಮೇಲೆ ಬಿದ್ರೆ ಏನು ಮಾಡ್ತಿಯಾ? ಇದು ಒಳ್ಳೆ ಬುದ್ಧಿ ಅಲ್ಲ. ನೀನು ಒಳ್ಳೆ ಹುಡುಗ ಆಗ್ಬೇಕು. ಈ ಕೆಲಸ ಇನ್ನು ಮಾಡ್ಬೇಡ” ಎಂದು ಬೆನ್ನು ತಟ್ಟಿ ಸಮಾಧಾನಿಸಿ, ಡಬ್ಬಿಯಿಂದ ಎರಡು ಪೆಪ್ಪರ್ಮೆಂಟ್ ತೆಗೆದುಕೊಟ್ಟು ಕಳುಹಿಸಿದಳು.

ನಮ್ಮೂರಿನ ಗುಂಡ ಭಟ್ರನ್ನು ಅಷ್ಟು ಸುಲಭವಾಗಿ ಯಾರೂ ಮರೆಯಲಿಕ್ಕಿಲ್ಲ. ಗಿಡ್ಡ ವ್ಯಕ್ತಿ. ಒಂದು ಕಾಲು ಉದ್ದ, ಇನ್ನೊಂದು ಗಿಡ್ಡ. ಅವರು ಹಾರಿಕೊಂಡು ಹೋಗುವುದನ್ನು  ನೋಡುವುದೇ ಚಂದ. ಊರಿನ ಪೋಕ್ರಿಮಕ್ಕಳು ಅವರನ್ನು ’ಲೈಪಟ್ ಬಟ್ರು’ ಎಂದೇ ಕರೆಯುವುದು. ಆಡುಗೆ ಕೆಲಸದಲ್ಲಿ ಮಹಾ ಗಟ್ಟಿಗ. ಹೋಳಿಗೆ ಲಟ್ಟಿಸುವುದರಲ್ಲಿ ಅವರನ್ನು ಮೀರಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಹೋಳಿಗೆ ಲಟ್ಟಿಸುವುದಕ್ಕೆ ಕುಳಿತರೆ ಕಾಯಿಸುವವರು ಪಡ್ಚ. ಇವರು ಐದು ಹೋಳಿಗೆ ಕಾಯಿಸುವಾಗ ಬಟ್ರು ಇಪ್ಪತ್ತು ಲಟ್ಟಿಸಿಹಾಕುತ್ತಾರೆ. ಅವರ ಅಡುಗೆಯೂ ಹಾಗೆಯೇ. ಯಾವುದೇ ಕೆಲಸ ಇರಲಿ, ಅವರಿಗೆ ಆಗಾಗ ಬೀಡ  ಹಾಕುವ ಚಟ. ಇಲ್ಲದಿದ್ದರೆ ಕೈಕಾಲು ತಿರುಗುವುದೇ ಇಲ್ಲ. ಅಡುಗೆ ಮಾಡುವಾಗಲೂ ಬೀಡ ಹಾಕುತ್ತಲೇ ಕೆಲಸ. ಆಗಾಗ ಅವರ ಬಾಯಿಂದ ಒಂದಷ್ಟು ತಾಂಬೂಲದ ರಸ ಸಾರಿನ, ಕೊದ್ದೆಲಿನ, ಪಲ್ಯದ ಪಾತ್ರೆಗಳಿಗೆ ಹಾರುತ್ತಲೇ ಇರುತ್ತದೆ. ಹಾಗಾಗಿ ಅವರ ಅಡುಗೆಗೆ ರುಚಿಯೋ ರುಚಿ. ನಮ್ಮೂರಲ್ಲಿ ಎಲ್ಲ ಮದುವೆ, ಮುಂಜಿಗಳಿಗೆ ಅವರದ್ದೇ ಅಡುಗೆ ಆಗ್ಬೇಕು. ಆದರೆ ಕೊನೆಗೊಂದು ದಿನ ಅವರ ಅಡುಗೆ ಕೆಲಸವನ್ನು ನೋಡಿವರೊಬ್ಬರು ಇವರ ತಾಂಬೂಲ ಪ್ರೋಕ್ಷಣೆಯ ಗುಟ್ಟನ್ನು ಬಹಿರಂಗಪಡಿಸಿದರು. ಅಲ್ಲಿಂದ ಊರವರು ಅವರನ್ನು ಅಡುಗೆಗೆ ಕರೆಯುವುದನ್ನೂ ಬಿಟ್ಟುಬಿಟ್ಟರು. ಈಗ ಏನಿದ್ದರೂ ಪರವೂರಿನಲ್ಲಿ ಮಾತ್ರ ಆಡುಗೆಕೆಲಸ.

ನಮ್ಮೂರಿನ ಈ ಲೈಪಟ್ ಬಟ್ರಿಗೆ ಸೀತಕ್ಕನ ಬೀಡ ಎಂದರೆ ಪಂಪಪ್ರಾಣ. ಬೇರೆ ಊರಲ್ಲಿ ಅಡುಗೆಗೇನಾದರೂ ಹೋಗುವುದಿದ್ದರೆ ಸೀತಕ್ಕನ ಗೂಡಂಗಡಿಗೆ ಬಂದು ಒಂದಷ್ಟು ಬೀಡ ಕೊಂಡು ಸಂಚಿಗೆ ಸೇರಿಸಿ ಹೊರಡುವುದು ಅಭ್ಯಾಸ. ಒಂದು ದಿನ ಎಲ್ಲೋ ಹೋದವರು ವಾಪಸ್ಸು ಬರುವಾಗ ಸೀತಕ್ಕನ ಗೂಡಂಗಡಿಗೆ ಬಂದು ಬೆಂಚಲ್ಲಿ ಕುಳಿತರು. ಕೈಯಲ್ಲಿ ಯಾವುದೇ ಅಡುಗೆ  ಹತಾರಿಗಳು ಇರಲಿಲ್ಲ. ಹಾಗಾಗಿ ಅಡುಗೆಗೆ ಹೋದವರು ಅಲ್ಲ ಎಂಬುದು ಸೀತಕ್ಕನಿಗೆ ಗೊತ್ತಾಯಿತು. “ಏನು ಬಟ್ರೆ, ಜಂಬರ ಇತ್ತಾ? ದೂರ ಹೋದ್ರಿ? ಇವತ್ತು ಅಡುಗೆ ಕೆಲಸ ಏನೂ ಇರ್ಲಿಲ್ವ? ಬರಿಗೈಯಲ್ಲಿದ್ದೀರಿ? ನಿಮ್ಮ ಹತಾರಿ ಕಾಣ್ತಿಲ್ಲ. ಏನಾದ್ರೂ ಅಶನ ಇತ್ತಾ?” ಎಂದಳು. ಅದಕ್ಕೆ ಭಟ್ರು, “ಅಡುಗೆ ಇರ್ಲಿಲ್ಲ. ಒಂದು ಕಾರ್ಯ ಇತ್ತು. ಅಶನ ಏನೋ ಚೆನ್ನಾಗಿ ಮಾಡಿದ್ರು, ಆದ್ರೆ ದಕ್ಷಿಣೆ ಸ್ವಲ್ಪ ಕಮ್ಮಿಯಾಯ್ತು. ಮುಂಡೆಮಗನಿಗೆ ಹಟ್ಟಿಯಲ್ಲಿ ಎರಡು ಕೋಣಗಳಿದ್ದವು. ಕೊಡುವ ಮನಸ್ಸಿದ್ರೆ ಮಾರಿ ಕೊಡಬಹುದಿತ್ತು” ಎಂದರು. ಭಟ್ರ ಮಾತನ್ನು ಕೇಳಿದ್ದೇ ತಡ ಸೀತಕ್ಕನಿಗೆ ಪಿತ್ತ ನೆತ್ತಿಗೇರಿತು. “ಏನು ಬಟ್ರೆ, ದಕ್ಷಿಣೆ ಕಮ್ಮಿ ಆಯ್ತಾ? ನಿಮ್ಮ ಬೆನ್ನಿಗೆ ನಾಲ್ಕು ಬಿಡ್ಬೇಕು. ಕೋಣ ಮಾರಿ ನಿಮ್ಗೆ ದಕ್ಷಿಣೆ ಕೊಟ್ರೆ ಅವರು ಎಂತ ಮಣ್ಣು ತಿನ್ನುದಾ? ನಿಮ್ಮ ಒಬ್ಬರ ಹೊಟ್ಟೆ ತುಂಬಿದ್ರೆ ಸಾಕಾ? ದಕ್ಷಿಣೆ ಅಂತೆ ದಕ್ಷಿಣೆ. ಅಬ್ಬಾ ನಿಮ್ಗೆ ಪೋಕಾಲವೇ?” ಎಂದು ಅಬ್ಬರಿಸುವಷ್ಟರಲ್ಲಿಯೇ ನಮ್ಮ ಲೈಪಟ್ ಬಟ್ರು, “ಈ ಸೀತಕ್ಕನೊಂದಿಗೆ ಮಾತಾಡಿ ಬರ್ಕತ್ ಇಲ್ಲ” ಎಂದುಕೊಂಡು ಕುಂಡೆಗೆ ಕಾಲ್ಕೊಟ್ಟು ಪರಾರಿ.

ಒಮ್ಮೆ ನಮ್ಮೂರಿನ ಕೋಲಕಟ್ಟುವ ತೋಮರ ಕಂಠಪೂರ್ತಿ ಕುಡಿದು ತೂರಾಡುತ್ತಾ ಸೀತಕ್ಕನ ಗೂಡಂಗಡಿಯ ಹತ್ತಿರವೇ ಆಯತಪ್ಪಿ ಚರಂಡಿಯಲ್ಲಿ ಬಿದ್ದುಬಿಟ್ಟ. ಏನೋ ಸದ್ದಾದಾಗ ಸೀತಕ್ಕ ಹೊರಬಂದು ನೋಡಿದಳು. ತೋಮರ ಬಿದ್ದಿದ್ದಾನೆ. ತೋಮರನ  ಈ ಅವತಾರ ನೋಡಿ ಎಲ್ಲಿಲ್ಲದ ಸಿಟ್ಟುಬಂತು, ಆದರೂ ತಡೆದುಕೊಂಡಳು. ನಾಲ್ಕಾರು ಗಂಟೆ ಕಳೆದರೂ ಅವನು ಏಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಸೀತಕ್ಕನಿಗೆ ಇದೆಲ್ಲ ಇಷ್ಟವಾಗುವುದಿಲ್ಲ. ಅವಳ ಸಿಟ್ಟು ಏರುತ್ತಲೇ ಇತ್ತು. ಪಕ್ಕದ ಮನೆಗೆ ಹೋಗಿ ಒಂದು ದೊಡ್ಡ ಕೊಡದಲ್ಲಿ ನೀರು ತುಂಬಿಸಿಕೊಂಡು ತಂದು ತೋಮರನ ತಲೆಮೇಲೆ ಬಸಬಸ ಎಂದು ಸುರಿದೇಬಿಟ್ಟಳು. ತೋಮರನಿಗೆ ಒಮ್ಮೆಲೆ ಜ್ಞಾನ ಬಂದಹಾಗಾಯಿತು. ಮೆಲ್ಲನೆ ಕಣ್ತೆರೆದು ನೋಡಿದ. ದುರ್ಗೆಯ ಹಾಗೆ ನಿಂತ ಸೀತಕ್ಕನನ್ನು ನೋಡಿ ಒಮ್ಮೆ ಬೆವರಿದ. ಗ್ರಾಚಾರ ಕಾದಿದೆ ಎಂದುಕೊಂಡ. ಮೆಲ್ಲನೆ ಎದ್ದುಕೂತು ತಲೆಬಗ್ಗಿಸಿ, “ಅಕ್ಕೆರೆ ಬೂರೊಂಡೆ” ಎಂದ. “ನೀನು ಹೀಗೇ ಬೂರ್ದು ಬೂರ್ದೇ ಸಾಯ್ತಿಯಲ್ಲ ಮಾರಾಯ. ನಿಂಗೆ ಎಂತ ಮಂಡೆ ಸಮ ಉಂಟಾ? ನಿನ್ನ ಗಿರ್ಮಿಟ್ ಬಿಡೋದು ಯಾವಾಗ? ಕೋಲದ ಸಂಪಾದನೆ ಗಡಂಗಿಗೇ ಆಯ್ತು. ಇನ್ನು ಹೊಟ್ಟೆಗೆ ಎಂತ ತಿನ್ತಿ? ನಿನ್ನ ಕೈಹಿಡಿದ ಕರ್ಮಕ್ಕೆ ಹೆಂಡ್ತಿ ಉಪಾಸ ಬಿದ್ದು ಸಾಯ್ಬೇಕಾ?” ಎಂದು ದುರುಗುಟ್ಟಿದಾಗ ತೋಮರನ ನಾಲಿಗೆ ಬಿದ್ದುಹೋಗಿತ್ತು. ಆಮೇಲೆ ತೋಮರ ಕುಡಿದರೂ ಸೀತಕ್ಕನ ಗೂಡಂಗಡಿಯ ಹತ್ತಿರ ಬಂದು ಬೀಳುತ್ತಿರಲಿಲ್ಲ. ಬೇರೆ ಕಡೆ ಹೋಗಿ ಬೀಳುತ್ತಿದ್ದ.

ಸೀತಕ್ಕನ ಭಾಷೆಯೂ ಅಷ್ಟೇ ಅವಳ ಕತೆಯಷ್ಟೇ ಸೊಗಸು. ಅವಳು ಶಾಲೆಗೆ ಹೋಗಿ ಎರಡಕ್ಷರ ಕಲಿಯದಿದ್ದರೂ ಅವರಿವರು ಮಾತಾಡುವುದನ್ನು ಕೇಳಿ ಒಂದಷ್ಟು ಕನ್ನಡ ಕಲಿತಿದ್ದಾಳೆ. ಅದು ಅವಳದ್ದೇ ಕನ್ನಡ. ನಮಗೆಲ್ಲ ಅವಳ ಕನ್ನಡ ಬಹಳ ಇಷ್ಟ. ಎಲ್ಲೂ ಸಿಗದ ಪದಗಳು ಅಲ್ಲಿ ಸಿಗುತ್ತವೆ. ನಾನೂ ಅವಳಿಂದ ಕೆಲವು ಪದಗಳನ್ನು ಕಲಿತ್ತಿದ್ದೇನೆ. ಸೀತಕ್ಕನ ಕತೆ ಹೇಳುವುದಕ್ಕೆ ಹೊರಟರೆ ಅದು ಮುಗಿಯುವಂತಹುದಲ್ಲ. ಊರಲ್ಲಿ ಯಾರಲ್ಲಿ ಬೇಕಾದರೂ ಕೇಳಿ, ಒಬ್ಬೊಬ್ಬರು ಹತ್ತಾರು ಕತೆ ಹೇಳಿಯಾರು. ಆದರೆ, ಸೀತಕ್ಕ ಅನ್ಯಾಯ ಮಾಡಿದ್ದನ್ನಾಗಲೀ ಇನ್ನೊಬ್ಬರಿಗೆ ತೊಂದರೆ ಕೊಟ್ಟಿದ್ದನ್ನಾಗಲೀ ವಿನಾ ಕಾರಣ ಜಗಳ ಆಡಿದ್ದನ್ನಾಗಲೀ ಯಾರೂ ನೋಡಿಲ್ಲ. ಕೇಳಿಯೂ ಇಲ್ಲ. ಅವಳ ಪ್ರಕಾರ ಊರ ಜನ ಚೆನ್ನಾಗಿರಬೇಕು, ಊರು ಚೆನ್ನಾಗಿರಬೇಕು. ಬೀಲಮೋಂಟ ಪರ್ಬುಗಳ ಮೇಲಾಗಲೀ ದೇಜಣ್ಣನ ಮೇಲಾಗಲೀ ಲೈಪಟ್ ಬಟ್ರ ಮೇಲಾಗಲೀ ಅಕೆಗೆ ದ್ವೇಷ ಏನೂ ಇಲ್ಲ. ಮರುದಿನ ಅವಳೇ ಕರೆದು ಮಾತನಾಡಿಸ್ತಾಳೆ. ಸುಖ ಕಷ್ಟ ವಿಚಾರಿಸ್ತಾಳೆ. ಅದು ಅವಳ ದೊಡ್ಡಗುಣ.  ಅವಳೇ ಹೇಳುವ ಹಾಗೆ, “ಗಮ್ಮತ್ ಮಾಡ್ಬೇಕು, ಎಷ್ಟು ದಿನ ಬದುಕ್ತೇವೆ. ಬದ್ಕಿನಲ್ಲಿ ಗಮ್ಮತ್ ಇರ್ಲಿ” ಎಂದು ಒಂದು ರೀತಿಯಿಂದ ಗಮ್ಮತ್ತಿನಲ್ಲಿಯೇ ಆಕೆ ಬದುಕಿದವಳು. ಸಣ್ಣಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ನೇಹ, ವಿಶ್ವಾಸ ಸಂಪಾದಿಸಿದವಳು. ನಮ್ಮೂರಲ್ಲಿ ಸೀತಕ್ಕನಂತೆ ಇನ್ನೊಬ್ಬರಿಲ್ಲ. ಅವಳಿಗೆ ಅವಳೇ ಸಾಟಿ.

** ** ** **

            ಸೀತಕ್ಕ ಅಂತ್ಯಸಂಸ್ಕಾರಕ್ಕೆ ಊರವರೆಲ್ಲ ನೆರೆದಿದ್ದರು. ಸೀತಕ್ಕನಿಂದ ಪೆಟ್ಟುತಿಂದ ಬೀಲಮೋಂಟ ಪರ್ಬುಗಳು ಇದ್ದರು. ಸೀತಕ್ಕ ತೀರಿಕೊಂಡಿದ್ದು ಅವರಿಗೂ ಬೇಸರ ಆಗಿತ್ತೆಂದು ತೋರುತ್ತದೆ. ಸಪ್ಪೆಯಾಗಿದ್ದರು. ಸೀತಕ್ಕನಿಂದ ಬೈಸಿಕೊಂಡ ದೇಜಣ್ಣ ಕೂಡಾ ಒಂದು ಕಡೆ ಕಲ್ಲಿನ ಮೇಲೆ ಕುಳಿತು ಮಾತಾಡದಷ್ಟು ಮೌನವಾಗಿದ್ದರು. ಲೈಪಟ್ ಬಟ್ರು ಕೂಡಾ ಪಕ್ಕದಲ್ಲಿದ್ದ ಮಾವಿನಕಟ್ಟೆ ಮೇಲೆ ಮರಕ್ಕೊರಗಿ ಕುಳಿತ್ತಿದ್ದನ್ನು ನೋಡಿದಾಗ ನೊಂದುಕೊಂಡಂತಿತ್ತು.  ಸೀತಕ್ಕ ಊರಲ್ಲಿ ಹಲವು ಮಂದಿಯನ್ನು ರಿಪೇರಿ ಮಾಡಿದ್ದಾಳೆ. ಇನ್ನೂ ಕೆಲವು ವರ್ಷ ಬದುಕಿರುತ್ತಿದ್ದರೆ ಇನ್ನೊಂದಷ್ಟು ಜನರನ್ನು ರಿಪೇರಿ ಮಾಡುತ್ತಿದ್ದಳೇನೋ! ಸೀತಕ್ಕ ತಮ್ಮ ಮನೆಯ ಹಿರಿಯ ಜೀವ ಎಂದುಕೊಂಡು ಊರವರೆಲ್ಲರೂ ನೆರೆದಿದ್ದರು. ಊರಲ್ಲಿ ಯಾರು ಸತ್ರೂ ಇಷ್ಟು ಜನ ನೆರೆದಿರಲಿಲ್ಲ. ಸೀತಕ್ಕನನ್ನು ನೆನೆಸಿಕೊಂಡು, ಅವಳ ಗುಣಗಾನ ಮಾಡುತ್ತ ಮುಸಿಮುಸಿ ಅಳುತ್ತಿದ್ದವರಲ್ಲಿ ವಾಟೀಸ್ ಪರ್ಬುಗಳ ಹೆಂಡತಿ ಹಾಗೂ ಪಸ್ಕಲ ಪರ್ಬುಗಳ ಹೆಂಡತಿಯರೂ ಇದ್ದರು. ತಮ್ಮ ಗಂಡಂದಿರನ್ನು ತಮ್ಮಿಂದ ರಿಪೇರಿಮಾಡಲು ಸಾಧ್ಯವಾಗದಿದ್ದರೂ ಸೀತಕ್ಕ ರಿಪೇರಿ ಮಾಡಿದಳಲ್ಲ! ಎಂಬ ಗೌರವ ಅವಳಿಗೆ ಸೀತಕ್ಕನ ಮೇಲಿತ್ತು. ಎಲ್ಲರಲ್ಲೂ ಸೀತಕ್ಕ ತಮ್ಮವಳು ಎಂಬ ಭಾವವೂ ಅವಳನ್ನು ಕಳೆದುಕೊಂಡ ದುಃಖವೂ ವ್ಯಕ್ತವಾಗುತ್ತಲೇ ಇತ್ತು.  ಸೀತಕ್ಕ ಪಂಚಭೂತಗಳಲ್ಲಿ ಲೀನವಾದಳು. ಸೀತಕ್ಕನಿಲ್ಲದ ಪೇಟೆಯನ್ನು ನನ್ನಿಂದ ಕಲ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಓದು ಬರಹವಿಲ್ಲದೆ ಒಬ್ಬ ಮನುಷ್ಯಳಾಗಿ ಬದುಕಿದವಳು. ಜನಮೆಚ್ಚುವ ಹಾಗೆ ಬದುಕಿದವಳು. ಬದುಕಿದರೆ ಸೀತಕ್ಕನಂತೆ ಗಮ್ಮತ್ತಿನಲ್ಲಿ ಬದುಕಬೇಕು, ಸದಾ ನೆನಪಿನಲ್ಲಿ ಉಳಿಯುವ ಹಾಗೆ.

***

ಸೀತಕ್ಕನ ಪದಕೋಶ:

ಬಂಜರ-ಹೊಟ್ಟೆತುಂಬ;  ಬಚ್ಚು-ಸೋಲು;  ಔಂಕು-ಅಮುಕು;  ದೊಂಡೆ-ಗಂಟಲು;  ಸರ್ತ-ನೆಟ್ಟಗೆ;  ಪಿರ್ಕಿ-ಮರುಳು;  ಪಿರ್ಕಿಸ್-ಹುಚ್ಚಾಟ;  ಪೆಪ್ಪರ್ಮೆಂಟ್-ಒಂದು ವಿಧದ ಮಿಠಾಯಿ;  ಮುಂಚಿಕಡ್ಡಿ-ಮೆಣಸಿನಾಕಾರದ ಒಂದು ಕುರುಕಲು ತಿಂಡಿ;  ಹಿಕ್ಮತ್-ಉಪಾಯ;  ಸೇಲೆ-ಒಯ್ಯಾರ;  ದೊಂಡೆ-ಗಂಟಲು;  ಬರ್ಕತ್-ಉದ್ಧಾರ, ಉಳಿಗಾಲ;  ಗಂಡಂಗ್-ಶರಾಬು ಅಂಗಡಿ;  ಬ್ಯಾಟ್ರಿ-ತಾಕತ್ತು;  ಲಗಾಡಿತೆಗೆ-ನಾಶಮಾಡು;  ವಾಟೀಸ್-ಶರಾಬು;  ಪರ್ಬು-ಕ್ರಿಶ್ಚಿಯನ್ ಗಂಡಸು;  ಬಾಯಮ್ಮ-ಕ್ರಿಶ್ಚಿಯನ್ ಹೆಂಗಸು; ಬೀಲಮೋಂಟ-ಡೊಂಕುಬಾಲದಂತೆ ವಕ್ರಬುದ್ಧಿಯವನು;  ಅಂಡೆಪಿರ್ಕಿ-ಎಡೆಬಿಡಂಗಿ;  ಪಿಡ್ಚ-ಪರಾರಿ;  ಪಡ್ಚ-ಅಪ್ಪಚ್ಚಿ; ಸೀಂತ್ರಿ-ಕುತ್ಸಿತಬುದ್ಧಿ;  ಚರ್ಬಿ-ಅಹಂಕಾರ;  ಸೊರ್ಕು-ಸೊಕ್ಕು;   ಬಿಂಗ್ರಿ-ಅರೆಮರುಳು;  ಬುರೋಂಡೆ-ಬಿದ್ದುಕೊಂಡೆ;  ಬೂರ್ದು ಬೂರ್ದು-ಬಿದ್ದುಬಿದ್ದು;  ಸರ್ಕಿಟ್-ಸವಾರಿ;  ಜಂಬರ-ಕೆಲಸ;  ಗೋಂಕುರ್ ಕಪ್ಪೆ-ದೊಡ್ಡ ಹೊಟ್ಟೆಯ ಕಪ್ಪೆ;  ಕುಲೆ-ಪ್ರೇತ; ಪೆದಂಬು-ಉಲ್ಟಾ;  ಚಲ್ಲಣ-ಸಡಿಲವಾಗಿರುವ ಚಡ್ದಿ;  ಗಂಜಿಪರಕ್-ಬನಿಯನ್;  ಲೈಪಟ್-ಹಾರುವ; ನೆಗೆಯುವಂತಹ; ಹತಾರಿ-ಸಾಧನ; ಕಾರ್ಯ-ಶ್ರಾದ್ಧ; ಅಶನ-ಊಟ;  ಪೊಟ್ಟು-ಕಿವುಡು;  ಮಂಡೆಮಾರಿ-ಧಾಡಿ;  ಪೋಕಾಲ-ವಿನಾಶಕಾಲ;  ಗಿರ್ಮಿಟ್-ಹುಚ್ಚು;  ಉಲಾಯ್ ಪಿದಾಯ್-ಅಂದರ್ ಬಾಹರ್; ಬಂಡಲ್-ಸುಳ್ಳು;   ರಂಬರುಟಿ-ಕುತಂತ್ರ;  ಪೋಕಾಲ-ವಿನಾಶಕಾಲ.

***

Leave a Reply

Your email address will not be published. Required fields are marked *