ಸಾಹಿತ್ಯಾನುಸಂಧಾನ

heading1

ಬೆಂದೊಡಲ ಹೊರೆ

ಹಬ್ಬಕ್ಕೆ ತಂದ ಹರಕೆಯ ಕುರಿ

ತೋರಣಕ್ಕೆ ತಂದ ತಳಿರ ಮೇಯಿತ್ತು!

ಕೊಂದಹರೆಂಬುದನರಿಯದೆ

ಬೆಂದೊಡಲ ಹೊರೆಯ ಹೋಯಿತ್ತು

ಅದಂದೆ ಹುಟ್ಟಿತ್ತು, ಅದಂದೆ ಹೊಂದಿತ್ತು

ಕೊಂದವರುಳಿದರೆ ಕೂಡಲಸಂಗಮದೇವಾ?

                                                             -ಬಸವಣ್ಣ

          ಮನುಷ್ಯನ ಆಸೆಬುರುಕುತನವನ್ನು ಹಾಗೂ ಅದರ ಪರಾಕಾಷ್ಠೆಯನ್ನು ಬಸವಣ್ಣನವರು ಈ ವಚನದಲ್ಲಿ ಉದಾಹರಣೆಯೊಂದರ ಮೂಲಕ ವಿಡಂಬಿಸಿದ್ದಾರೆ. ಮನುಷ್ಯನಿಗೆ ಜೀವದಾಸೆ, ಹಣದಾಸೆ, ಆರೋಗ್ಯದಾಸೆ, ಆಸ್ತಿಯಾಸೆ, ಒಡವೆಯಾಸೆ, ಅನ್ನದಾಸೆ-ಹೀಗೆ ಆಸೆಗಳ ಪಟ್ಟಿಯೇ ಮಿತಿಯಿಲ್ಲದೆ ಬೆಳೆಯುತ್ತದೆ. ಅವುಗಳನ್ನು ಈಡೇರಿಸಿಕೊಳ್ಳುವುದಕ್ಕೆ ಹತ್ತು ಹಲವು ಮಾರ್ಗಗಳ ಹುಡುಕಾಟವೂ ನಡೆಯುತ್ತಿರುತ್ತದೆ. ಈ ಮಾರ್ಗಗಳ ಹುಡುಕಾಟದಲ್ಲಿ ಹಾಗೂ ಅವುಗಳ ಈಡೇರಿಕೆಯಲ್ಲಿ ಪರಹಿಂಸೆ, ಅನ್ಯಾಯ, ಮೋಸಗಳನ್ನು ಎಸಗುವುದಕ್ಕೂ ಹೇಸುವುದಿಲ್ಲ.

          ಹಬ್ಬದಲ್ಲಿ ಬಲಿಕೊಡುವುದಕ್ಕೆಂದು ಹರಕೆಯ ರೂಪದಲ್ಲಿ ತಂದ ಕುರಿಯೊಂದನ್ನು ಚಪ್ಪರದ ಕಂಬಕ್ಕೆ ಕಟ್ಟಿಹಾಕಲಾಗಿದೆ. ಅದು ತನ್ನ ಹೊಟ್ಟೆಯ ಹಸಿವನ್ನು ತಾಳಲಾರದೆ ತೋರಣಕ್ಕೆಂದು ತಂದುಹಾಕಿದ ತಳಿರನ್ನು ತಿನ್ನತೊಡಗುತ್ತದೆ. ಅದಕ್ಕೆ ತನ್ನನ್ನು ಇನ್ನು ಕೆಲವೇ ಹೊತ್ತಿನಲ್ಲಿ ಬಲಿಕೊಡುತ್ತಾರೆ ಎಂಬುದು ತಿಳಿದಿಲ್ಲ. ಅದು ಹಸಿದಹೊಟ್ಟೆಯ ಹಸಿವನ್ನು ಇಂಗಿಸಿಕೊಳ್ಳಲು ಹಾತೊರೆಯುತ್ತದೆ. ತಳಿರಿನಿಂದ ಹೊಟ್ಟೆಯ ಹಸಿವನ್ನು ಇಂಗಿಸಿಕೊಂಡರೂ ಜೀವವನ್ನು ಉಳಿಸಿಕೊಳ್ಳಲಾಗಲಿಲ್ಲ. ಹುಟ್ಟಿ ಕೆಲವೇ ದಿನಗಳಲ್ಲಿ ಮನುಷ್ಯರ ಸ್ವಾರ್ಥಕ್ಕೆ ಹರಕೆಯ ರೂಪದಲ್ಲಿ ಬಲಿಯಾಯಿತು. ಕೊಂದವರು(ಬಲಿಕೊಟ್ಟವರು) ಶಾಶ್ವತವಾಗಿ ಉಳಿದರೆ? ಅವರೂ ಆಯುಷ್ಯ ಮುಗಿದಾಗ ಸತ್ತುಹೋದರು.

          ಮನುಷ್ಯ ತನ್ನ ಸ್ವಾರ್ಥಕ್ಕಾಗಿ, ತನ್ನ ಒಳಿತಿಗಾಗಿ ದೇವರ ಹೆಸರಿನಲ್ಲಿ ಒಂದಷ್ಟು ಮೂಢನಂಬಿಕೆಗಳನ್ನು ಮೈಗೂಡಿಸಿಕೊಂಡಿದ್ದಾನೆ. ತಾನು ಚೆನ್ನಾಗಿರಬೇಕು, ಸುಖವಾಗಿರಬೇಕು, ಸಿರಿವಂತನಾಗಬೇಕು, ತನ್ನ ಹೆಂಡತಿ- ಮಕ್ಕಳು ಚೆನ್ನಾಗಿರಬೇಕು, ಆಸೆಗಳೆಲ್ಲವೂ ಈಡೇರಬೇಕು-ಹೀಗೆ ಆತನ ಮಿತಿಯಿಲ್ಲದ ಅಸೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಪ್ರಾಣಿಬಲಿ, ಕೋಳಿಬಲಿ ಮೊದಲಾದ ಪ್ರಾಣಿಹಿಂಸೆಯಂತಹ ಅಮಾನವೀಯ ಆಚರಣೆಗಳು. ಇವುಗಳಿಗೆ ಧಾರ್ಮಿಕತೆಯ ಮೆರುಗು. ತಿನ್ನುವ ಆಸೆಗಾಗಿ ಮನುಷ್ಯ ಹಲವು ದಾರಿಗಳನ್ನು ಕಂಡುಕೊಳ್ಳುತ್ತಾನೆ. ಏನೆಲ್ಲ ನಾಟಕಗಳನ್ನೂ ಆಡುತ್ತಾನೆ. ಪಶು-ಪಕ್ಷಿಗಳನ್ನು ಹಿಂಸಾತ್ಮಕವಾಗಿ ಬಲಿಕೊಟ್ಟು ಬೀಗುತ್ತಾನೆ. ಬಲಿಕೊಟ್ಟಿದ್ದನ್ನು ತಿಂದು ತನ್ನ ಹಸಿವನ್ನು, ಆಸೆಯನ್ನು ಈಡೇರಿಸಿಕೊಳ್ಳುತ್ತಾನೆ. ಆದರೆ ಬಲಿಕೊಟ್ಟೂ ಸಾವನ್ನು, ವಿಧಿಲಿಖಿತವನ್ನು ಮೀರಲಾಗಲಿಲ್ಲ, ನಡೆಯುವುದನ್ನು ತಡೆಯಲಾಗಲಿಲ್ಲ. ಹಾಗಾದರೆ ಬಲಿಕೊಟ್ಟು ಏನನ್ನು ಸಾಧಿಸಿದ ಹಾಗಾಯಿತು? ಇದು ಬಸವಣ್ಣನವರ ಪ್ರಶ್ನೆ. ಮನುಷ್ಯನ ಮೂಢನಂಬಿಕೆಗಳು ಹೇಗೆ ವ್ಯಾಪಕವಾಗಿ ಜೀವನಾಶಕ್ಕೆ ಕಾರಣವಾಗುತ್ತಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

          ಹನ್ನೆರಡನೆಯ ಶತಮಾನದಲ್ಲಿಯೇ ಈ ರೀತಿ ಪ್ರಾಣಿಬಲಿಯಂತಹ ಅಮಾನವೀಯ ಕೃತ್ಯಗಳು ವಿರಾಜಿಸುತ್ತಿದ್ದವೆಂದು ತೋರುತ್ತದೆ. ಪ್ರಾಣಿಗಳಿಗೂ ಬದುಕುವ ಹಕ್ಕಿರುವುದರಿಂದ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅವುಗಳನ್ನು ಬಲಿಕೊಟ್ಟು ಕ್ರೌರ್ಯವನ್ನು ಮೆರೆಯುವುದು ಯುಕ್ತವಲ್ಲ ಎಂಬುದನ್ನು ಬಸವಣ್ಣನವರು ಈ ವಚನದಲ್ಲಿ ಸಾರಿದ್ದಾರೆ. ಈ ಮೂಢನಂಬಿಕೆ ಕೇವಲ ಅಂದಿನ ಕಾಲಕ್ಕೆ ಮಾತ್ರ ಸೀಮಿತಾಗಿರದೆ, ನಿರಂತರ ಬೆಳೆದುಕೊಂಡು ಬಂದಿರುವುದು, ಹಿಂದಿಗಿಂತಲೂ ಹೆಚ್ಚು ವ್ಯಾಪಕವಾಗಿರುವುದು ಕಂಡುಬರುತ್ತದೆ. ವೈಜ್ಞಾನಿಕವಾಗಿ ಮುಂದುವರಿದಿರುವ ಆಧುನಿಕಕಾಲದಲ್ಲಿಯೂ  ವಿಜ್ಞಾನಯುಗದಲ್ಲಿಯೂ ಬಲಿಯಂತಹ ಮೂಢನಂಬಿಕೆಗಳು, ಪ್ರಾಣಿದಯೆಯ ಕೊರತೆ, ಅಮಾನವೀಯತೆ, ಸ್ವಾರ್ಥಸಾಧನೆ ಮೊದಲಾದವುಗಳೆಲ್ಲವೂ ಕಡಿಮೆಯಾಗುವುದಕ್ಕೆ ಬದಲಾಗಿ ಜಾಸ್ತಿಯಾಗುತ್ತಲೇ ಇವೆ. ಆದರೂ ಮನುಷ್ಯ ಇನ್ನೂ ಈ ಬಗ್ಗೆ ತಿಳಿವಳಿಕೆಯನ್ನು ಹೊಂದಿಲ್ಲದಿರುವುದು ಮನುಷ್ಯತ್ವದ ಅವನತಿಯನ್ನು ಸೂಚಿಸುತ್ತದೆ. ಬಸವಣ್ಣನವರ ಮಾತುಗಳು ಕೇವಲ ಹನ್ನೆರಡನೆಯ ಶತಮಾನದ ಕಾಲಕ್ಕೆ  ಮಾತ್ರವಲ್ಲ, ಎಲ್ಲಾ ಕಾಲಕ್ಕೂ  ಅರ್ಥಪೂರ್ಣವಾಗಿ ಅನ್ವಯವಾಗುತ್ತವೆ.

***

Leave a Reply

Your email address will not be published. Required fields are marked *