ಸಾಹಿತ್ಯಾನುಸಂಧಾನ

heading1

ಕನ್ನಡ ರಾಜ್ಯೋತ್ಸವ

          ಇತ್ತೀಚಿನ ಕಾಲದಲ್ಲಿ ನಮ್ಮಲ್ಲಿ ಎದ್ದುಕಾಣುತ್ತಿರುವ ಮುಖ್ಯ ದೌರ್ಬಲ್ಯಗಳೆಂದರೆ  ಮೊದಲನೆಯದು ದೇಶಾಭಿಮಾನ, ಎರಡನೆಯದು ಭಾಷಾಭಿಮಾನ. ಸ್ವಾತ್ರಂತ್ಯ್ರ್ಯದಿನಾಚರಣೆಯಂದು ದೇಶಾಭಿಮಾನ ಹಾಗೂ ಕರ್ನಾಟಕ ರಾಜ್ಯೋತ್ಸವದಂದು ಭಾಷಾಭಿಮಾನಗಳು ಉಕ್ಕಿಹರಿಯುತ್ತವೆ. ಇನ್ನುಳಿದ ದಿನಗಳಲ್ಲಿ ಒಣಗಿಹೋಗಿರುತ್ತವೆ. ಮತ್ತೆ ಉಕ್ಕಬೇಕಾದರೆ ಇನ್ನೊಂದು ವರ್ಷ ಕಳೆಯಬೇಕು.  ಹಾಗಾಗಿಯೇ ನಮಗೆ ದೇಶ ಹಾಗೂ ಭಾಷೆಗಳ ವಿಚಾರದಲ್ಲಿ ಇನ್ನೂ ಸಮರ್ಪಕ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ದೇಶ ಅಭಿವೃದ್ಧಿಯ ದಾರಿಯಲ್ಲಿ ಇನ್ನೂ ಕುಂಟುತ್ತಿದೆ, ಭಾಷೆ ಸೊರಗುತ್ತಿದೆ. ನಾವು ಭಾರತದಲ್ಲಿ ವಾಸಿಸುತ್ತಿದ್ದರೂ ಏಕೆ ನಮ್ಮಲ್ಲಿ ದೇಶದ ಬಗೆಗಿನ ಅಭಿಮಾನ, ಪ್ರೀತಿ, ಗೌರವಗಳು ಕಡಿಮೆಯಾಗುತ್ತಿವೆ? ಕನ್ನಡ ನಮ್ಮ ಭಾಷೆಯಾದರೂ ಏಕೆ ಅದನ್ನು ಆಡುವುದಕ್ಕೆ ಹಿಂಜರಿಕೆಯಾಗುತ್ತಿದೆ? ನಮ್ಮ ಶರಣರ ಹಾಗೂ ದಾಸರ ರೀತಿಯಲ್ಲಿ ನಾವೂ ಇಂದು ನಮ್ಮನ್ನು ಆತ್ಮವಿಮರ್ಶೆಗೆ ಒಳಪಡಿಸಿಕೊಳ್ಳಬೇಕಾಗಿದೆ. ನಮ್ಮ ವ್ಯವಹಾರಗಳನ್ನು, ಆಲೋಚನೆಗಳನ್ನು, ಚಿಂತನೆಗಳನ್ನು, ದೃಷ್ಟಿಕೋನಗಳನ್ನು, ಧೋರಣೆಗಳನ್ನು,  ಆಶೋತ್ತರಗಳನ್ನು ಮತ್ತೆ ಮತ್ತೆ ಪರಿಷ್ಕರಿಸಿಕೊಳ್ಳಬೇಕಾಗಿದೆ.

          ಕನ್ನಡ ಭಾಷೆಯ ಬಗ್ಗೆ ನನ್ನ ಆಲೋಚನೆಗಳನ್ನು, ಚಿಂತನೆಗಳನ್ನು ಹರಿಯಬಿಡುವುದಕ್ಕೆ ಮೊದಲು ನಾಲ್ಕು ಘಟನೆಗಳನ್ನು ನಾನಿಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.

          ಮೊದಲನೆಯದು, ೧೯೮೯ರ ನವೆಂಬರ್ ೧ರಂದು ನಡೆದ ಘಟನೆ. ನಾನಾಗ ಮದರಾಸು ವಿಶ್ವವಿದ್ಯಾನಿಲಯದ ಎರಡನೆಯ ಕನ್ನಡ ಎಂ.ಎ. ವಿದ್ಯಾರ್ಥಿ.  ರಾಜ್ಯೋತ್ಸವಕ್ಕಾಗಿ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದೆವು. ಅವುಗಳಲ್ಲಿ ನಾಡಭಕ್ತಿಗೀತೆಗಳ ಸಮೂಹಗಾಯನವೂ ಒಂದು. ಅಂದು ನಾವು ಸ್ನೇಹಿತರು ಒಟ್ಟುಸೇರಿ ಹಾಡಿದ್ದು, ಮಂಜೇಶ್ವರ ಎಂ. ಗೋವಿಂದ ಪೈಯವರ ’ಕನ್ನಡಿಗರ ತಾಯಿ’ ಹಾಗೂ ಕುವೆಂಪುರವರ ’ಬಾರಿಸು ಕನ್ನಡ ಡಿಂಡಿಮವ’ ಎಂಬೆರಡು ನಾಡಭಕ್ತಿಗೀತೆಗಳನ್ನು. ಸಭಾಂಗಣದಲ್ಲಿದ್ದವರು ಕನ್ನಡ ವಿದ್ಯಾರ್ಥಿಗಳು ಮತ್ತು ಕೆಲವು ಅತಿಥಿಗಳು ಮಾತ್ರ. ನಾಡಭಕ್ತಿಗೀತೆಗಳನ್ನು ಹಾಡತೊಡಗಿದ ಕೂಡಲೇ ತಮಿಳು, ಮಲಯಾಳ, ತೆಲುಗು, ಹಿಂದಿ ಹಾಗೂ ಸಂಸ್ಕೃತ ವಿಭಾಗಗಳ ವಿದ್ಯಾರ್ಥಿಗಳು ಓಡೋಡಿಬಂದರು. ಕೆಲವರು ಸಭಾಂಗಣದೊಳಗೆ ಬಂದು ಆಸೀನರಾದರೆ ಇನ್ನು ಕೆಲವರು ಜಾಗದ ಕೊರತೆಯಿಂದ ಅಲ್ಲಲ್ಲಿ ನಿಂತು ಕೇಳಿ ಖುಷಿಪಟ್ಟರು. ಕಾರ್ಯಕ್ರಮ ಮುಗಿದ ಮೇಲೆ  ಬೇರೆ ವಿಭಾಗಗಳ ಕೆಲವು ವಿದ್ಯಾರ್ಥಿಗಳಂತೂ ನನ್ನಲ್ಲಿ ಕೇಳಿಯೇ ಬಿಟ್ಟರು. “ಕನ್ನಡ ಇಷ್ಟೊಂದು ಇಂಪಾಗಿದೆ ಎಂಬುದು ನಮಗೆ ಗೊತ್ತೇ ಇರಲಿಲ್ಲ.” “ಕನ್ನಡ ತುಂಬಾ ಚಂದದ ಭಾಷೆ ಎಂದು ಇಂದು ತಿಳಿಯಿತು.” ಎಂದು. ತಮಿಳನ್ನು ಹೊರತುಪಡಿಸಿ ಮಿಕ್ಕೆಲ್ಲ ಭಾಷೆಗಳನ್ನು ತುಚ್ಛವಾಗಿ ಕಾಣುವ ತಮಿಳರಿಗೆ ಕನ್ನಡ ಇಂಪಾದದ್ದು, ಇಷ್ಟವಾದದ್ದನ್ನು ಪರಿಭಾವಿಸಿದರೆ ಕನ್ನಡಭಾಷೆಯಲ್ಲಿ ಅದೋನೋ ಶಕ್ತಿ, ಹಿರಿಮೆ ಇದೆ ಎಂದಾಯಿತಲ್ಲ!

          ಎರಡನೆಯದು, ೧೯೯೦ರಲ್ಲಿ ನಡೆದ ಘಟನೆ. ನಮ್ಮ ಕನ್ನಡ ವಿಭಾಗಕ್ಕೆ ರಷ್ಯಾದ ಮಾಸ್ಕೋದಿಂದ ಒಬ್ಬ ಮಹಿಳೆ ಕನ್ನಡ ಕಲಿಕೆಗಾಗಿ ಬಂದರು.  ನಾವು ಅವರನ್ನು ಇಂಗ್ಲಿಷ್ ಭಾಷೆಯಲ್ಲಿಯೇ ಮಾತನಾಡಿಸಿದೆವು. ಆಗ ಅವರು, “ನಾನು ಇನ್ನೂ ಹೆಚ್ಚು ಕನ್ನಡಭಾಷೆಯನ್ನು  ಕಲಿಯಬೇಕೆಂಬ ಮತ್ತು ಕೇಳಬೇಕೆಂಬ ಅಸೆಯಿಂದ ಇಲ್ಲಿವರೆಗೆ ಬಂದಿದ್ದೇನೆ. ನೀವು ನನ್ನನ್ನು ಇಂಗ್ಲಿಷ್ನಲ್ಲಿ ಮಾತಾಡಿಸುತ್ತ ಇದ್ದೀರಲ್ಲ” ಎಂದು ಅಪ್ಪಟ ಕನ್ನಡದಲ್ಲಿಯೇ ಮಾತನಾಡಿದಾಗ ನಾವು ಪೆಚ್ಚಾಗಬೇಕಾಯಿತು. ಅವರು ರೇಡಿಯೋ ಮಾಸ್ಕೋದ ಕನ್ನಡ ಕಾರ್ಯಕ್ರಮಗಳ ಉದ್ಘೋಷಕಿಯಾಗಿದ್ದರು ಎಂಬುದು ಆಮೇಲೆ ತಿಳಿಯಿತು.  ನಮ್ಮಿಂದ ಬಹಳ ದೂರದ ಮಾಸ್ಕೋದಲ್ಲಿ ವಾಸವಾಗಿದ್ದರೂ ಕನ್ನಡವನ್ನು ಇನ್ನೂ ಕಲಿಯಬೇಕೆಂಬ ಆಸೆಯಿಂದ ಬಂದ ಆಕೆ ಕನ್ನಡದಲ್ಲಿ ಕಂಡುಕೊಂಡುದಾದರೂ ಏನನ್ನು? ಆಕೆಗೆ ಇನ್ನೂ ಹೆಚ್ಚು ಕನ್ನಡ ಕಲಿಯಬೇಕು ಅನ್ನಿಸುವುದಾದರೆ, ರೇಡಿಯೋ ಮಾಸ್ಕೋ ಆಕಾಶವಾಣಿ ನಿಲಯವು ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರಮಾಡುತ್ತದೆ ಅನ್ನುವುದಾದರೆ ಕನ್ನಡದಲ್ಲಿ ಏನೋ ವಿಶೇಷತೆಯಿದೆ ಎಂದಾಯಿತಲ್ಲ!

          ಮೂರನೆಯದು ೧೯೯೬ರಲ್ಲಿ ನಡೆಗ ಘಟನೆ. ನಾನಾಗ ಕೇರಳ ಕಾಲಡಿಯ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಉಪನ್ಯಾಸಕನಾಗಿದ್ದೆ. ಕನ್ನಡೇತರರಿಗೆ ನಾನು ಕನ್ನಡ ಕಲಿಸಬೇಕಿತ್ತು. ನನ್ನ ವಿದ್ಯಾರ್ಥಿಗಳು ಬೇರೆ ಬೇರೆ ಹೈಸ್ಕೂಲು, ಕಾಲೇಜುಗಳಲ್ಲಿ ಕೆಲಸ ಮಾಡುವ ಅಧ್ಯಾಪಕರು, ಹಾಗೂ ಉಪನ್ಯಾಸಕರು. ಒಂದು ದಿನ ನನ್ನ ವಿದ್ಯಾರ್ಥಿಗಳಿಗೆ ಕೆ.ಎಸ್. ನರಸಿಂಹಸ್ವಾಮಿಯವರ “ಬಾರೆ ನನ್ನ ಶಾರದೆ” ಕವನದ ಧ್ವನಿಮುದ್ರಿಕೆಯನ್ನು ಕೇಳಿಸಿದೆ. “ಕನ್ನಡ ಹಾಡುಗಳನ್ನು ಕೇಳುವುದಕ್ಕೆ ತುಂಬಾ ಖುಷಿಯಾಗುತ್ತದೆ. ಕನ್ನಡ ತುಂಬಾ ಮಧುರವಾದ ಭಾಷೆ” ಎಂದು ಪ್ರತಿಕ್ರಿಯಿಸಿದರು. ಅವರೊಂದಿಗೆ ನನ್ನ ಸಹೋದ್ಯೋಗಿ ಮಲಯಾಳಿ ಉಪನ್ಯಾಸಕಿಯೊಬ್ಬರೂ ಕನ್ನಡ ಕಲಿಯುತ್ತಿದ್ದರು. ಅವರು ನನ್ನಿಂದ ಮೈಸೂರ ಮಲ್ಲಿಗೆ ಕವನಸಂಕಲನ ಮಾತ್ರವಲ್ಲದೆ ಒಂದು ಧ್ವನಿಮುದ್ರಿಕೆಯನ್ನೂ ತರಿಸಿಕೊಂಡು ದಿನಾ ಆ ಹಾಡುಗಳನ್ನು ಗುನುಗುನಿಸತೊಡಗಿದರು. ತಮ್ಮ ಭಾಷೆಗಲ್ಲದೆ ಅನ್ಯಭಾಷೆಗಳಿಗೆ ಹೆಚ್ಚಿನ ಮಹತ್ವಕೊಡದ ಮಲಯಾಳಿಗಳಿಗೆ ಕನ್ನಡ ಇಷ್ಟವಾಗಬೇಕಾದರೆ ಕನ್ನಡದಲ್ಲಿ ಏನೋ ಹೆಚ್ಚುಗಾರಿಕೆ ಇರಬೇಕಲ್ಲ!

          ನಾಲ್ಕನೆಯದು ಸುಮಾರು ನೂರು ವರ್ಷಗಳ ಹಿಂದೆ ನಡೆದಿರುವ ಘಟನೆ. ನಾನು ಪದವಿ ತರಗತಿಯಲ್ಲಿ ಕಲಿಯುತ್ತಿರುವಾಗ ನಮ್ಮ ಉಪನ್ಯಾಸಕರೊಬ್ಬರು ಉಲ್ಲೇಖಿಸಿದ ಘಟನೆ. ಕನ್ನಡಕ್ಕಾಗಿ ದುಡಿದ ಜರ್ಮನ್ ಪಾದ್ರಿ ರೆವರೆಂಡ್ ಜಾರ್ಜ್ ಫರ್ಡಿನಾಂಡ್ ಕಿಟ್ಟೆಲ್ ಮತಪ್ರಚಾರಕ್ಕಾಗಿ ನಮ್ಮ ನಾಡಿಗೆ ಬಂದರೂ ಅದರ ಜೊತೆಗೆ ಕನ್ನಡಕ್ಕೆ ಆಕರ್ಷಿತರಾಗಿ ಕನ್ನಡವನ್ನು ಕಲಿತು, ಪಾಂಡಿತ್ಯವನ್ನು ಪಡೆದುಕೊಂಡು ಕೆಲವಾರು ಗ್ರಂಥಗಳನ್ನು ಸಂಪಾದಿಸಿ, ಕನ್ನಡಕ್ಕೊಂಡು ಶಾಸ್ತ್ರೀಯ  ಹಾಗೂ ಅಧಿಕೃತ ನಿಘಂಟನ್ನು ರಚಿಸಿಕೊಟ್ಟವರು. ಅವರು ತಮ್ಮ ನಾಡಿಗೆ ವಾಪಸ್ಸು ಹೋದವರು ತಮ್ಮ ವೃದ್ಧಾಪ್ಯದಲ್ಲಿ ಕನ್ನಡನಾಡನ್ನು ನೋಡಬೇಕೆಂಬ ಕನ್ನಡ ಭಾಷೆಯನ್ನು ಕೇಳಬೇಕೆಂಬ ಆಸೆಯಿಂದ ಮತ್ತೆ ನಮ್ಮ ನಾಡಿಗೆ ಬಂದರು. ನಮ್ಮವರು ಅವರನ್ನು ಇಂಗ್ಲಿಷ್ ಭಾಷೆಯ ಮೂಲಕ ಸ್ವಾಗತಿಸಿದಾಗ ಅವರು ನೊಂದುಕೊಂಡು, “ನಾನು ಕನ್ನಡ ಭಾಷೆಯನ್ನು ಕೇಳಬೇಕೆಂಬ ಆಸೆಯಿಂದ ಈ ಪ್ರಾಯದಲ್ಲಿ ಜರ್ಮನಿಯಿಂದ ಇಲ್ಲಿವರೆಗೆ ಬಂದಿದ್ದೇನೆ. ನೀವು ನನ್ನನ್ನು ಇಂಗ್ಲಿಷ್ನಲ್ಲಿ ಮಾತಾಡಿಸುತ್ತಾ ಇದ್ದೀರಲ್ಲ? ಎಂದು ನೊಂದುನುಡಿದರಂತೆ. ಮತಪ್ರಚಾರಕ್ಕೆ ಬಂದ ಕಿಟ್ಟೆಲ್ ಅವರನ್ನು ಕನ್ನಡ ಭಾಷೆ ಆಕರ್ಷಿಸಿದ್ದು ಹೇಗೆ? ವೃದ್ಧಾಪ್ಯದಲ್ಲೂ ಕನ್ನಡ ಕೇಳಬೇಕೆಂದು, ಕನ್ನಡ ನಾಡನ್ನು ನೋಡಬೇಕೆಂದು ಅವರಿಗೆ ಅನ್ನಿಸಿದ್ದು ಏಕೆ? ಕನ್ನಡದಲ್ಲಿ ಅಂತಹದ್ದೊಂದು ವಿಶೇಷತೆ ಇಲ್ಲದೆ ಅವರು ಕನ್ನಡವನ್ನು ಇಷ್ಟಪಟ್ಟೆರೇ? ಬಯಸಿ ಬಂದರೇ?!

          ಈ ನಾಲ್ಕು ಘಟನೆಗಳನ್ನು ಉಲ್ಲೇಖಿಸಿದ ಮೇಲೆ ನನ್ನ ಮುಂದಿರುವ ಪ್ರಶ್ನೆ ಒಂದೇ. ಕನ್ನಡೇತರರಿಗೆ ಪ್ರಿಯವಾಗುವ , ಇಷ್ಟವಾಗುವ, ಮೆಚ್ಚುಗೆಯಾಗುವ, ಇಂಪೆನಿಸುವ, ಮಧುರವೆನಿಸುವ ಕನ್ನಡ ನಮಗೆ ಮಾತ್ರ ಏಕೆ ಬೇಡವಾಗುತ್ತಿದೆ? ಅನ್ಯಭಾಷೆಗಳನ್ನು ಅಷ್ಟು ಸುಲಭವಾಗಿ ಮೆಚ್ಚಲಾರದ  ತಮಿಳರು,  ಮಲಯಾಳಿಗಳು  ಕನ್ನಡ ಭಾಷೆಯನ್ನು, ಅದರ ಇಂಪನ್ನು, ಮಾಧುರ್ಯವನ್ನು ಮೆಚ್ಚಿಕೊಳ್ಳುತ್ತಾರೆ ಎಂದಾದರೆ; ವಿದೇಶಿಗರೂ ಕನ್ನಡಕ್ಕೆ ಮನಸೋತು ನಮ್ಮ ನಾಡಿಗೆ ಬಂದು ಕನ್ನಡವನ್ನು ಕಲಿಯಲು ಹಂಬಲಿಸುತ್ತಾರೆ ಎಂದಾದರೆ ನಾವೇಕೆ ಅದನ್ನು ನಿರ್ಲಕ್ಷಿಸುತ್ತಿದ್ದೇವೆ ಎಂಬ ಪ್ರಶ್ನೆ ನಮ್ಮ ಮುಂದಿದೆ.  ತಮಿಳರಿಗೆ, ಮಲಯಾಳಿಗಳಿಗೆ, ತೆಲುಗರಿಗೆ ಹೋಲಿಸಿದರೆ ನಮ್ಮಲ್ಲಿ ಭಾಷಾಭಿಮಾನದ ಕೊರತೆ ಅಥವಾ ಭಾಷೆಯ ಬಗೆಗಿನ ತಾತ್ಸಾರಗಳು ಎದ್ದುಕಾಣುತ್ತಿವೆ. ಬಹುಶಃ ಇದಕ್ಕೆ ನಮ್ಮಲ್ಲಿರುವ          ಇಂಗ್ಲಿಷ್ ಭಾಷೆಯ ಮೇಲಿನ ಅತಿಯಾದ ಮೋಹ ಹಾಗೂ ಕನ್ನಡ ಭಾಷೆಯ ಬಗೆಗಿನ ಅಜ್ಞಾನ ಹಾಗೂ ಕೀಳರಿಮೆಗಳೇ ಕಾರಣವೆನಿಸುತ್ತವೆ.

          ೧೯೪೭ರಲ್ಲಿ ಭಾರತದೇಶ ಸ್ವಾತಂತ್ರ್ಯವನ್ನು ಪಡೆದುಕೊಂಡ ಸಂದರ್ಭದಲ್ಲಿ ನಾವು ಕನ್ನಡಿಗರು  ಬೇರೆ ಬೇರೆ ಪ್ರದೇಶಗಳಲ್ಲಿ ಹರಿದು ಹಂಚಿ ಹೋಗಿದ್ದೆವು. ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡನೆ ಮಾಡಬೇಕೆಂದು ನಮ್ಮ ಹಿರಿಯರು, ಭಾಷಾಭಿಮಾನಿಗಳು ಸಾಕಷ್ಟು ಶ್ರಮಿಸಿದ್ದಾರೆ. ಅವರ ಶ್ರಮದ ಫಲವಾಗಿ ಇಂದು ನಾವು ಕರ್ನಾಟಕ ರಾಜ್ಯದೊಳಗೆ ಒಂದು ಮಟ್ಟಕ್ಕೆ ಸುರಕ್ಷಿತವಾಗಿದ್ದೇವೆ. ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಯಾರದ್ದೋ ಮೋಸದಿಂದಾಗಿ  ಕರ್ನಾಟಕಕ್ಕೆ ಸೇರದೆ ಕಾಸರಗೋಡಿನ ಕನ್ನಡಿಗರು, ಬೆಳಗಾವಿಯ ಕನ್ನಡಿಗರು, ಹೊಸೂರಿನ ಕನ್ನಡಿಗರು ನಮ್ಮಿಂದ ದೂರ ಉಳಿದು ಮಲಯಾಳ, ಮರಾಠಿ, ತಮಿಳು ಭಾಷಿಗರ ಮಲತಾಯಿ ಧೋರಣೆಗಳಿಂದಾಗಿ ದಬ್ಬಾಳಿಕೆಗೆ ಒಳಗಾಗಿ ಅತಂತ್ರಸ್ಥಿತಿಯಲ್ಲಿದ್ದಾರೆ. ಅವರ ನೋವನ್ನೂ  ಅಸಹಾಯಕತೆಯನ್ನೂ ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಯಾವ ಉದ್ದೇಶಕ್ಕಾಗಿ ನಮ್ಮ ಹಿರಿಯರು ಕರ್ನಾಟಕದ ಏಕೀಕರಣಕ್ಕಾಗಿ ಹಂಬಲಿಸಿ ದುಡಿದರೋ ಅವರ ಪರಿಶ್ರಮ ಹಾಗೂ ತ್ಯಾಗಗಳಿಗೆ ನಾವಿಂದು ಬೆಲೆ ತೆರುತ್ತಿದ್ದೇವೆಯೇ? ಈ ಬಗ್ಗೆ ನಾವು ನಮ್ಮನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

          ಕರ್ನಾಟಕ ರಾಜ್ಯದ ಪರಿಧಿಯೊಳಗೆ ನಾವು ಕೇವಲ ಕನ್ನಡವನ್ನೇ ಮಾತಾಡುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳೋಣ. ನಮ್ಮಲ್ಲಿ ಕನ್ನಡದೊಂದಿಗೆ ತುಳು, ಕೊಂಕಣಿ, ಮರಾಠಿ, ತಮಿಳು, ಮಲಯಾಳ, ತೆಲುಗು, ಉರ್ದು, ಮಾಪಿಳ್ಳೆ, ಕೊಡವ –ಹೀಗೆ ಹತ್ತಾರು ಭಾಷೆಗಳನ್ನು ಆಡುವವರಿದ್ದಾರೆ. ನಮ್ಮ ಮನೆಗಳಲ್ಲಿ ನಮ್ಮ ನಮ್ಮ ಭಾಷೆಗಳನ್ನು ಮಾತಾಡಿದರೂ ನಾವು ಈ ನಾಡಿನ ಅಧಿಕೃತಭಾಷೆಯಾದ ಕನ್ನಡಕ್ಕೆ ಮೊದಲಮನ್ನಣೆಯನ್ನು ನೀಡಲೇಬೇಕು. ಏಕೆಂದರೆ   ಕನ್ನಡ ಈ ನೆಲದ  ಅಧಿಕೃತ ಭಾಷೆ. ನಾವು ಈ ನೆಲದಲ್ಲಿ ವಾಸಿಸುತ್ತಿರುವುದರಿಂದ, ಈ ನೆಲ ನಮ್ಮ ಬದುಕಿಗೆ ಸಕಲ ಸವಲತ್ತುಗಳನ್ನು ಕಲ್ಪಿಸಿರುವುದರಿಂದ ಇಲ್ಲಿನ ಭಾಷೆ, ಸಂಸ್ಕೃತಿ, ಇತಿಹಾಸ, ಪರಂಪರೆಗಳಿಗೆ ಮೊದಲ ಮನ್ನಣೆಯನ್ನು ನೀಡಬೇಕು. ಆದರೆ ನಾವಿಲ್ಲಿ ಎಡವುತ್ತಿದ್ದೇವೆ. ಇತ್ತೀಚೆಗೆ ನಮ್ಮ ದೃಷ್ಟಿ ತುಂಬಾ ವ್ಯಾವಹಾರಿಕತೆಯನ್ನು ಪಡೆಯುತ್ತಿರುವುದರಿಂದ ನಾವು ಭಾಷೆ, ಸಂಸ್ಕೃತಿಗಳನ್ನೂ ಹಣಗಳಿಕೆಯ ದೃಷ್ಟಿಯಿಂದಲೇ ಪರಿಭಾವಿಸ ತೊಡಗಿದ್ದೇವೆ.

          ಇತ್ತೀಚಿನ ಕಾಲದಲ್ಲಿ ನಮ್ಮೊಳಗೆ ಭಾಷೆಯ ಮೇಲಿನ ಪ್ರೀತಿ ಕಡಿಮೆಯಾಗುತ್ತಿದೆ. ನಮ್ಮ ನೆರೆಯ ರಾಜ್ಯಗಳಲ್ಲಿ ತಮಿಳರಿಗೆ, ಮಲಯಾಳಿಗಳಿಗೆ ತಮ್ಮ ತಮ್ಮ ಭಾಷೆಗಳ ಮೇಲಿರುವಷ್ಟು ಪ್ರೀತಿ, ಅಭಿಮಾನಗಳು ನಮ್ಮಲ್ಲಿ ಕಂಡುಬರುತ್ತಿಲ್ಲ. ಭಾಷೆಯನ್ನು ಹೇಗೂ ಆಡಬಹುದು, ಅದು ವ್ಯಾಕರಣಬದ್ಧವಾಗಿರಬೇಕಿಲ್ಲ. ನಮ್ಮ ವಿಚಾರ ಇನ್ನೊಬ್ಬರಿಗೆ ಅರ್ಥವಾದರೆ ಸಾಕು. ಅದರ ಶುದ್ಧತೆಗೆ ಅಥವಾ ಅದರ ವ್ಯವಸ್ಥೆಗೆ ಅಷ್ಟೊಂದು ಮನ್ನಣೆ ಕೊಡಬೇಕಿಲ್ಲ ಎಂಬಂತಹ ಧೋರಣೆ ಇಂದು ಎದ್ದುಕಾಣುತ್ತಿದೆ. ನಮ್ಮ ಉಡುಗೆ ತೊಡುಗೆಗಳಲ್ಲಿ, ದೈನಂದಿನ ಚಟುವಟಿಕೆಗಳಲ್ಲಿ ಸೌಂದರ್ಯುಕ್ಕೆ, ಅಚ್ಚುಕಟ್ಟುತನಕ್ಕೆ, ವ್ಯವಸ್ಥೆಗೆ ಮನ್ನಣೆ ನೀಡುವ ನಮಗೆ ಭಾಷೆಯ ವಿಚಾರದಲ್ಲಿ ಮಾತ್ರ ಏಕೆ ಅಸಡ್ಡೆ? ಏಕೆ ತಾತ್ಸಾರ?

          ಆಧುನಿಕತೆಯನ್ನು ಹಾಗೂ ಅದು ನಮಗೆ ಕೊಡಮಾಡುವ ಸವಲತ್ತುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾಷೆಯನ್ನು ಅಳೆಯತೊಡಗಿದ್ದೇವೆ ಅನ್ನಿಸುತ್ತದೆ.  ಭಾಷೆ ಎಂಬುದು ಕಾಲದಿಂದ ಕಾಲಕ್ಕೆ ರೂಪುಗೊಂಡ ಅಚ್ಚುಕಟ್ಟಾದ ವ್ಯವಸ್ಥೆ ಎಂಬುದನ್ನು ಮರೆತಿರುವಂತೆ ಕಾಣುತ್ತದೆ. ತೀರಾ ಇತ್ತೀಚೆಗೆ ಕನ್ನಡವನ್ನು ಆಡುವ ರೀತಿ, ಬಳಸುವ ರೀತಿ ಹಾಗೂ ಅದಕ್ಕೆ ನೀಡುತ್ತಿರುವ ಸ್ಥಾನಮಾನಗಳನ್ನು ಗಮನಿಸಿದರೆ ಹೆಚ್ಚಿನವರು ಭಾಷೆಗೆ ಅಂತಹ ಮಹತ್ವವನ್ನೇನೂ ಕೊಡುತ್ತಿಲ್ಲ. ಕೆಲವು ವರ್ಷಗಳ ಹಿಂದೆ ಒಂದೆರಡು ಕನ್ನಡ  ಸಾಹಿತ್ಯ ಕೃತಿಗಳನ್ನು ನೋಡಿದಾಗ ನನಗೆ ಆಶ್ಚರ್ಯವಾಗಿತ್ತು. ಮಹಾಪ್ರಾಣಾಕ್ಷರಗಳಿಗೆಲ್ಲ ಅಲ್ಪಪ್ರಾಣಾಕ್ಷರಗಳ ಬಳಕೆ. ಈಗಾಗಲೇ ಬಳಕೆಯಲ್ಲಿರುವ ಇಂಗ್ಲಿಷ್ ಪದಗಳಿಗೆ ಯಾವುದೋ ಹೊಸ ಅಪರಿಚಿತ ಪದಗಳ ಬಳಕೆ. ಒಟ್ಟಾರೆ ಹೇಳುವುದಾದರೆ ಅವ್ಯವಸ್ಥಿತವಾದ ಬರಹ. ಪರಂಪರೆಯಿಂದ ಕನ್ನಡಕ್ಕೊಂದು ರೂಪ, ಒಂದು ಸೌಷ್ಠವ, ಒಂದು ವ್ಯವಸ್ಥೆ ಪ್ರಾಪ್ತವಾಗಿದೆಯಲ್ಲ. ಅದನ್ನೇ ನಾವು ಇದುವರೆಗೂ ಮುಂದುವರೆಸಿಕೊಂಡು ಬಂದಿದ್ದೇವಲ್ಲ. ಏಕಾಏಕೀ ಅದನ್ನು ಬದಲಾಯಿಸುವುದರಿಂದ ಸಿಗುವ ಲಾಭವಾದರೂ ಏನು ಎಂಬುದನ್ನು ನಾವಿಂದು ಪ್ರಶ್ನಿಸಿಕೊಳ್ಳಬೇಕಾಗಿದೆ.

          ತಮಿಳುನಾಡಿನಲ್ಲಾಗಲೀ ಕೇರಳದಲ್ಲಾಗಲೀ ಅವರು ತಮ್ಮ ಭಾಷೆಗಳನ್ನು ಈ ರೀತಿಯಲ್ಲಿ ಬೇಕಾಬಿಟ್ಟಿ ಬದಲಾಯಿಸುವುದಕ್ಕಾಗಲೀ ತಿರುಚುವುದಕ್ಕಾಗಲೀ ಅವಕಾಶವನ್ನೇ ಕೊಡುವುದಿಲ್ಲ. ಭಾಷೆಯ ಪರಂಪರೆಗೆ ಅಷ್ಟೇ ಮಹತ್ವವನ್ನು ಅವರು ಕೊಡುತ್ತಾರೆ. ಕಾಲಕಾಲಕ್ಕೆ ಆಗುವ ಬದಲಾವಣೆಗೂ ಅವರು ತೆರೆದುಕೊಳ್ಳುತ್ತಾರೆ. ಒಟ್ಟಾರೆ ವ್ಯವಸ್ಥೆಯನ್ನು ಕೆಡಿಸುವುದಕ್ಕೆ ಅವರು ಸಿದ್ಧರಿಲ್ಲ. ಇವತ್ತಿಗೂ ತಮಿಳು ಮಾಧ್ಯಮಗಳಲ್ಲಿ ಅವರಾಡುವ ಭಾಷೆಯನ್ನು ಗಮನಿಸಿದರೆ ಅವರು ಭಾಷೆಗೆ ಅದರ ಉಚ್ಚಾರಕ್ಕೆ, ಅದರ ವ್ಯವಸ್ಥೆಗೆ, ಅದರ ಲಾಲಿತ್ಯಕ್ಕೆ ಕೊಡುವ ಮನ್ನಣೆಯನ್ನು ಗಮನಿಸಿದರೆ ಆಶ್ಚರ್ಯವೂ ಕುತೂಹಲವೂ ಉಂಟಾಗುತ್ತದೆ. ಆದರೆ ಇಂದಿನ ಕನ್ನಡ ಮಾಧ್ಯಮಗಳಲ್ಲಿ ಕನ್ನಡ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಪ್ರತ್ಯೇಕವಾಗಿ ತಿಳಿಸಬೇಕಿಲ್ಲ. ಇಲ್ಲೆಲ್ಲ ಕ್ಷಣಕ್ಷಣಕ್ಕೂ ಕನ್ನಡದ ಕೊಲೆಯಾಗುತ್ತಲೇ ಇದೆ. ಇಷ್ಟಾದರೂ ನಮಗೆ ಬೇಸರವಿಲ್ಲ.   

          ಇಂದು ನಮ್ಮಲ್ಲಿ ಬಹುಮಂದಿಗೆ ಭಾಷೆ ಎಂಬುದು ಕೇವಲ ಸಂವಹನಕ್ಕೆ ಮಾತ್ರ ಸೀಮಿತವಾಗಿದೆ. ಅದನ್ನು ಹೇಗೂ ಆಡಬಹುದು. ಕೇಳುವವರಿಗೆ ನಮ್ಮ ಮಾತುಗಳು ಅರ್ಥವಾದರೆ ಸಾಕು. ಅದಕ್ಕಿಂತ ಹೆಚ್ಚಿನದೇನೂ ಭಾಷೆಯಿಂದ ಸಾಧಿತವಾಗಬೇಕಿಲ್ಲ. ಭಾಷೆಯ ಸೌಂದರ್ಯಕ್ಕೆ ಎಳ್ಳಷ್ಟೂ ಗಮನಕೊಡದವರು ದಿನನಿತ್ಯದ ತಮ್ಮ ಉಡುಗೆ ತೊಡುಗೆಗಳಿಗೆ, ಅಲಂಕರಣಗಳಿಗೆ, ಊಟೋಪಚಾರಗಳಿಗೆ ಅತಿಯಾದ ಮಹತ್ವವನ್ನು ನೀಡುತ್ತಿರುವುದು ಕಂಡುಬರುತ್ತಿದೆ. ಭಾರತ ಜಗತೀಕರಣಕ್ಕೆ ತೆರೆದುಕೊಂಡ ಮೇಲಂತೂ ಭಾಷೆಯ ಬಗೆಗಿನ ಅವಜ್ಞೆ ಅತಿಯಾಗುತ್ತಿದೆಯೇನೋ ಅನ್ನಿಸುತ್ತಿದೆ.

          ಭಾಷೆ ಎಂಬುದು ಕೇವಲ ಸಂವಹನಸಾಧನ ಮಾತ್ರವಲ್ಲ, ಅದೊಂದು ಸಂಸ್ಕ್ರತಿ, ಪರಂಪರೆ ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕಿದೆ.  ನಮ್ಮಲ್ಲಿ ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಮೈಗೂಡಬೇಕಾದರೆ ನಾವು ಭಾಷೆಯನ್ನು ಪ್ರೀತಿಸಬೇಕು, ಗೌರವಿಸಬೇಕು. ಅದನ್ನು ಅರ್ಥಪೂರ್ಣವಾಗಿ, ಸುಲಲಿತವಾಗಿ ಹಾಗೂ ಅಚ್ಚುಕಟ್ಟಾಗಿ ಆಡುವುದನ್ನು ಕರಗತಮಾಡಿಕೊಳ್ಳಬೇಕು. ಒಂದು ಭಾಷೆಯ ಪದಗಳಲ್ಲಿನ ಅರ್ಥ ಹಾಗೂ ಅದರಲ್ಲಿನ ಸೌಂದರ್ಯ ಇನ್ನೊಬ್ಬನಲ್ಲಿ ಸಂವಹನಗೊಳ್ಳುವುದು ಹಾಗೂ ಅದು ಆತನಿಗೆ ಆಪ್ಯಾಯಮಾನವಾಗುವುದು ಭಾಷೆಯನ್ನು ಸಮರ್ಪಕ  ರೀತಿಯಲ್ಲಿ ಆಡಿದಾಗ ಮಾತ್ರ. ಆಗಲೇ ಕನ್ನಡತನ ನಮ್ಮಲ್ಲಿ ಮೈಗೂಡುವುದಕ್ಕೆ ಸಾಧ್ಯ.

          ತಮಿಳರಲ್ಲಿ ಹಾಗೂ ಮಲಯಾಳಿಗಳಲ್ಲಿರುವ ಭಾಷಾಭಿಮಾನ ನಮ್ಮಲ್ಲಿ ಕಂಡುಬರುತ್ತಿಲ್ಲ. ಅವರ ಅಭಿಮಾನ ಕೆಲವೊಮ್ಮೆ ಅತಿ ಎನಿಸಿದರೂ ಭಾಷೆಯ ಬಗೆಗಿನ ಅವರ ಕಾಳಜಿ, ಪ್ರೀತಿ, ಗೌರವಗಳನ್ನು ಮೆಚ್ಚಿಕೊಳ್ಳಲೇಬೇಕು. ನಾನು ಮೂರುವರೆ ವರ್ಷಗಳ ಕಾಲ ತಮಿಳರ ಮಧ್ಯೆ ಹಾಗೂ ಎರಡು ವರ್ಷಗಳ ಕಾಲ ಮಲಯಾಳಿಗಳ ಮಧ್ಯೆ ಇದ್ದವನಾದುದರಿಂದ ಅವರ ಭಾಷಾಭಿಮಾನ, ಭಾಷಾಪ್ರೀತಿ, ಭಾಷೆಯ ಮೇಲಿನ ಗೌರವಗಳು ಏನು? ಎಷ್ಟು? ಎಂಬುದನ್ನು ಕಂಡುಕೊಂಡಿದ್ದೇನೆ.  ಎಂತಹ ಸಭೆ, ಸಮಾರಂಭಗಳಲ್ಲಿಯೂ ಯಾವುದೇ ಮಟ್ಟದ ಸಭೆಗಳಲ್ಲಿಯೂ ಅವರು ತಮ್ಮ ಭಾಷೆಯನ್ನು ಬಿಟ್ಟುಕೊಡುವುದಿಲ್ಲ. ಎಷ್ಟೇ ವಿದ್ಯಾಭ್ಯಾಸವನ್ನು ಪಡೆದು ಎಂತಹ ಹುದ್ದೆಯಲ್ಲಿದರೂ ಅವರು ಅವರ ಭಾಷೆಯನ್ನೇ ಆಡುತ್ತಾರೆ. ಅಲ್ಲಿಯವರೆಗೆ ಅವರು ತಮ್ಮ ಭಾಷೆಯನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಆದರೆ ನಮ್ಮಲ್ಲಿ ಮಾತ್ರ ಒಂದು ಮಟ್ಟದ ವಿದ್ಯಾಭ್ಯಾಸ ಪಡೆಯುತ್ತಿದ್ದಂತೆಯೇ ಕನ್ನಡವನ್ನು ಬದಿಗಿರಿಸಿ ಇಂಗ್ಲಿಷನ್ನು ನೆಚ್ಚಿಕೊಳ್ಳುವುದನ್ನು ಕಾಣಬಹುದು. ನಮ್ಮಲ್ಲಿ ಬಹುತೇಕ ಸಭೆ ಸಮಾರಂಭಗಳಲ್ಲಿ ಕನ್ನಡ ಮರೆಯಾಗಿರುತ್ತದೆ.

          ನಮ್ಮಲ್ಲಿ ಏಕೆ ಭಾಷೆಯ ವಿಚಾರದಲ್ಲಿ ಕೀಳರಿಮೆ ಹುಟ್ಟಿಕೊಳ್ಳುತ್ತಿದೆ? ಏಕೆ ನಾವು ಕನ್ನಡವನ್ನು ಧೈರ್ಯವಾಗಿ ಮಾತಾಡುವುದಕ್ಕೆ ಹಿಂಜರಿಯುತ್ತಿದ್ದೇವೆ? ಕನ್ನಡವನ್ನು ದಿನನಿತ್ಯ ಆಡುವುದರಲ್ಲಿ ಉಂಟಾಗಬಹುದಾದ ಸಮಸ್ಯೆಗಳೇನು? ಈ ಮೊದಲಾದ ಸವಾಲುಗಳು ಇಂದು ನಮ್ಮ ಮುಂದಿವೆ. ಉತ್ತರವನ್ನು ನಾವೇ ಕಂಡುಕೊಳ್ಳಬೇಕಿದೆ. ಅದಕ್ಕೂ ಮೊದಲು ನಾವು ನಮ್ಮ ಮಾನಸಿಕ ಸ್ಥಿತಿಗತಿಗಳನ್ನು ಬದಲಾಯಿಸಿಕೊಳ್ಳಬೇಕಿದೆ. ಇಂಗ್ಲಿಷ್ ಭಾಷೆಯಿಂದ ಮಾತ್ರ ಜೀವನ ಸಾರ್ಥಕವಾಗುತ್ತದೆ. ಅದು ಮಾತ್ರ ಬದುಕನ್ನು ನೀಡುತ್ತದೆ ಎಂಬ ಭ್ರಮೆಯನ್ನು ಮೊದಲು ನಮ್ಮ ಮನಸ್ಸಿನಿಂದ ತೊಡೆದುಹಾಕಬೇಕು. ನಾವೀಗ ಇಂಗ್ಲಿಷ್ ಭಾಷೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕನ್ನಡ ಭಾಷೆಯ ಯೋಗ್ಯತೆಯನ್ನು ಅಳೆಯಹೊರಟಿರುವುದು ಮೂರ್ಖತನವೇ ಸರಿ. ತೀರಾ ಇತ್ತೀಚೆಗೆ ನನ್ನ ನೆರೆಮನೆಯವರೊಬ್ಬರು ತಮ್ಮ ಪುಟಾಣಿ ಮೊಮ್ಮಗಳೊಂದಿಗೆ ಇಂಗ್ಲಿಷ್ ಭಾಷೆಯಲ್ಲಿಯೇ ವ್ಯವಹರಿಸುತ್ತಿದ್ದುದನ್ನು ನಾನೇ ಗಮನಿಸಿದ್ದೆ. ಅವರ ಪ್ರಕಾರ ಇಂಗ್ಲಿಷ್ ಭಾಷೆ ಹೆಚ್ಚು ಜ್ಞಾನವನ್ನು ನೀಡುವ ಭಾಷೆ. ಕಿಟ್ಟೆಲ್, ಹರ್ಮನ್ ಮೊಗ್ಲಿಂಗ್,  ಕಾಲ್ಡ್ವೆಲ್ ಮೊದಲಾದ ಪಾಶ್ಚಾತ್ಯ ವಿದ್ವಾಂಸರು ತಮ್ಮ ಭಾಷೆಗೆ ದುಡಿಯುವುದನ್ನು ಬಿಟ್ಟುಬಿಟ್ಟು ಕನ್ನಡವನ್ನು ಏಕೆ ಕಲಿತರು? ಕನ್ನಡಕ್ಕೆ ಏಕೆ ದುಡಿದರು? ಎಂಬ ಪ್ರಶ್ನೆ ಇಂದು ನಮ್ಮ ಮುಂದಿದೆ. ನಾವಿನ್ನೂ ಅದನ್ನು ಅರ್ಥಮಾಡಿಕೊಂಡಿಲ್ಲ.

          ಕನ್ನಡ ಬೆಳೆಯಬೇಕಾದರೆ ಕೇವಲ ಕನ್ನಡವನ್ನು ಮಾತಾಡಿದರೆ ಸಾಲದು. ಕನ್ನಡದಲ್ಲಿಯೇ ಚಿಂತಿಸಬೇಕು. ಹಾಗಿ ಚಿಂತಿಸಿದ್ದನ್ನು ಕನ್ನಡದಲ್ಲಿಯೇ ಅಭಿವ್ಯಕ್ತಗೊಳಿಸಬೇಕು. ಆಗ ಮಾತ್ರ ನಾವು ಕನ್ನಡದ ಮೇಲೆ ಹಿಡಿತವನ್ನು ಸಾಧಿಸುವುದು ಸಾಧ್ಯವಾಗುತ್ತದೆ. ಮಾತ್ರವಲ್ಲ, ಭಾಷೆಯೂ ಬೆಳೆಯುತ್ತದೆ. ಇಂದು ಉನ್ನತ ಶಿಕ್ಷಣವನ್ನು ಪಡೆದವರಲ್ಲಿ, ಅತ್ಯುನ್ನತ ಹುದ್ದೆಯಲ್ಲಿರುವವರಲ್ಲಿ ಕನ್ನಡದ  ಸ್ಥಾನದಲ್ಲಿ ಇಂಗ್ಲಿಷ್ ಬಂದು ಕೂತಿದೆ. ಅದಾಗಿಯೇ ಬಂದು ಕೂತಿಲ್ಲ. ನಾವೇ ತಂದು ಕೂರಿಸಿದ್ದೇವೆ. ಇಂಗ್ಲಿಷ್ ಬೇಡ ಎಂದಲ್ಲ. ನಮಗೆ ನಮ್ಮ ಪರಂಪರೆಯಿಂದ ಬಂದ ಭಾಷೆಯೊಂದಿರುವಾಗ ಅದಕ್ಕೆ ಮೊದಲ ಮನ್ನಣೆಯನ್ನು ಕೊಡದೆ ಪರದೇಶದ ಭಾಷೆಗೆ ಮೊದಲ ಮನ್ನಣೆಯನ್ನು ಕೊಡುತ್ತಿರುವುದು ಒಂದು ದುರಂತ.

          ಕನ್ನಡ ವಿಶ್ವಮಾನ್ಯ ಸ್ಥಾನಮಾನಗಳನ್ನು ಪಡೆದುಕೊಳ್ಳುವಷ್ಟು ಯೋಗ್ಯತೆ, ಅರ್ಹತೆಗಳನ್ನು ಪಡೆದಿದೆ. ಆದರೆ ನಾವು ಅದನ್ನು ವಿಶ್ವಮಟ್ಟಕ್ಕೆ ತಲುಪಿಸುವುದಕ್ಕೆ ಅಸಮರ್ಥರಾಗಿದ್ದೇವೆ. ಕಾರಣ ನಮ್ಮಲ್ಲಿನ ಇಚ್ಛಾಶಕ್ತಿಯ ಕೊರತೆ, ಭಾಷೆಯ ಬಗೆಗಿನ ಅಜ್ಞಾನ ಹಾಗೂ ಕೀಳರಿಮೆ, ಅನ್ಯ ಭಾಷೆಗಳ ಮೇಲಿನ ಮೋಹ, ಭಾಷೆಯ ಬಗೆಗಿನ ವ್ಯಾವಹಾರಿಕ ದೃಷ್ಟಿ ಇತ್ಯಾದಿ. ನಮ್ಮಲ್ಲಿ ಒಂದೂವರೆ ಸಾವಿರ ವರ್ಷಗಳ ಅದ್ಭುತವಾದ ಸಾಹಿತ್ಯವಿದೆ. ಆದರೆ ನಾವು ಅದನ್ನು ಎಷ್ಟರಮಟ್ಟಿಗೆ ಅನ್ಯಭಾಷೆಗಳಿಗೆ ಭಾಷಾಂತರಿಸಿದ್ದೇವೆ? ನಮ್ಮ ಸಾಹಿತ್ಯದ ಆಳ ಅಗಲಗಳನ್ನು ಯಾರಿಗೆ ಪರಿಚಯಿಸಿದ್ದೇವೆ? ಬಹುಶಃ ನಾವೇನೂ ಮಾಡಿಲ್ಲ. ಪಂಪ, ರನ್ನ ಮೊದಲಾದ ಕವಿಗಳ ಕಾವ್ಯಗಳನ್ನು ಬೇರೆ ಭಾಷೆಗಳಿಗೆ ಅನುವಾದ ಮಾಡಿಕೊಳ್ಳುವುದಕ್ಕೆ ಅನ್ಯಭಾಷೆಗಳು ತೆರೆದುಕೊಳ್ಳುತ್ತವೆಯೇ? ಆ ಸಾಮರ್ಥ್ಯ ಅವುಗಳಿಗಿದೆಯೇ? ಎಂಬ ಪಶ್ನೆಗಳೂ ನಮ್ಮ ಮುಂದಿವೆ. ಇನ್ನು ಮುಂದಿನ ದಿನಗಳಲ್ಲಾದರೂ ಕನ್ನಡ ಸಾಹಿತ್ಯವನ್ನು ಅನ್ಯಭಾಷೆಗಳಿಗೆ ಭಾಷಾಂತರಿಸಲು ಪ್ರಯತ್ನಿಸಿದರೆ ಕನ್ನಡದ ಹಾಗೂ ಕನ್ನಡ ಸಾಹಿತ್ಯದ ಹಿರಿಮೆ, ಗರಿಮೆಗಳು ಲೋಕಕ್ಕೆ ಜಾಹೀರಾಗುವುದರಲ್ಲಿ, ಕನ್ನಡ ಅಗ್ಯಮಾನ್ಯ ಸ್ಥಾನಮಾನಗಳನ್ನು ಪಡೆದುಕೊಳ್ಳುವಲ್ಲಿ ಸಂಶಯವಿಲ್ಲ.

          ವರ್ಷಕ್ಕೊಂದು ಬಾರಿ ರಾಜ್ಯೋತ್ಸವದಂದು ಕನ್ನಡ ಕನ್ನಡ ಎಂದು ಬೊಬ್ಬೆ ಹೊಡೆದ ತಕ್ಷಣ, ನಮ್ಮ ಸ್ನೇಹಿತರೆಲ್ಲರಿಗೂ ಬೇರೆ ಬೇರೆ ಮಾಧ್ಯಮಗಳ ಮೂಲಕ ಶುಭಾಶಯಗಳನ್ನು ವಿನಿಮಯ ಮಾಡಿದ ತಕ್ಷಣ, ಸಭೆ ಸಮಾರಂಭಗಳನ್ನು ಏರ್ಪಡಿಸಿ ಭಾಷಣಗಳನ್ನು ಬಿಗಿದ ತಕ್ಷಣ, ಬೀದಿ ಬೀದಿಗಳಲ್ಲಿ ನಿಂತು ಕನ್ನಡದ ಬಗ್ಗೆ ಘೋಷಣೆಗಳನ್ನು ಕೂಗಿದ ತಕ್ಷಣ, ಮಕ್ಕಳನ್ನು ಕನ್ನಡ ಶಾಲೆಗಳಲ್ಲಿ ಓದಿಸಿದ ತಕ್ಷಣ ಕನ್ನಡ ಬೆಳೆಯಲಾರದು. ಉಳಿಯಲಾರದು. ಅದು ಉಳಿದು ಬೆಳೆಯಬೇಕು ಎಂದಾದರೆ ಮೊದಲು ಅದನ್ನು ಪ್ರೀತಿಸುವುದನ್ನು, ಗೌರವಿಸುವುದನ್ನು ಕಲಿಯಬೇಕು. ಮನಃಪೂರ್ವಕವಾಗಿ ಮಾತಾಡುವುದನ್ನು ಕಲಿಯಬೇಕು. ಕನ್ನಡ ನಮ್ಮ ಭಾಷೆ ಎಂಬ ಅಭಿಮಾನವನ್ನು ಹೊಂದಬೇಕು. ಕನ್ನಡ ಸಾಹಿತ್ಯವನ್ನು, ಭಾಷೆ-ಸಾಹಿತ್ಯಗಳ ಇತಿಹಾಸವನ್ನು ಅರಿಯಬೇಕು. ಪರಂಪರೆಯನ್ನು ಅರ್ಥಮಾಡಿಕೊಂಡು ಗೌರವಿಸುವುದನ್ನು ಕಲಿಯಬೇಕು. ಆಗಮಾತ್ರ ಕನ್ನಡ ಉಳಿಯಬಹುದು, ಬೆಳೆಯಬಹುದು.

          ಕನ್ನಡಿಗರು ಇದುವರೆಗೂ ಯಾವುದೇ ಭಾಷೆಗಳನ್ನು ದ್ವೇಷಿಸಿಲ್ಲ. ನಮ್ಮ ನೆರೆಹೊರೆಯ ಭಾಷಿಗರು ನಮ್ಮನ್ನು ದ್ವೇಷಿಸಿದರೂ ನಾವು ಆ ಭಾಷೆಗಳನ್ನು   ಪ್ರೀತಿಸಿದ್ದೇವೆ, ಗೌರವಿಸಿದ್ದೇವೆ. ಆಯಾ ಭಾಷೆಗಳನ್ನು ಕಲಿತು, ಆಡಿ ಆಯಾ ಭಾಷೆಗಳಿಗೆ ಮನ್ನಣೆ, ಗೌರವಗಳನ್ನು ನೀಡಿದ್ದೇವೆ. ಇದು ಕನ್ನಡಿಗರ ಮೇಲ್ಮೆ, ಹೆಚ್ಚುಗಾರಿಕೆ ಹಾಗೂ ಉದಾರತೆ. ಅದೇ ಮೇಲ್ಮೆ, ಹೆಚ್ಚುಗಾರಿಗೆ ಹಾಗೂ ಉದಾರತೆಗಳು ನಮ್ಮ ಭಾಷೆಯಾದ ಕನ್ನಡದ ಮೇಲೂ ಇರಲೇಬೇಕಲ್ಲ. ಲೋಕದ ಯಾವುದೇ ಭಾಷೆ ಕನಿಷ್ಠವಲ್ಲ. ಪ್ರತಿಯೊಂದು ಭಾಷೆಗಳೂ ಆಯಾ ಭಾಷೆಗಳನ್ನಾಡುವ ಜನರ ಆಶೋತ್ತರಗಳನ್ನು ಈಡೇರಿಸುತ್ತ ಬಂದಿವೆ. ಸಂವಹನವನ್ನು ಸಾಧಿಸಿವೆ. ಸಾಧಕರನ್ನಾಗಿ ಮಾಡಿವೆ. ಹಾಗಾಗಿ ಎಲ್ಲಾ ಭಾಷೆಗಳೂ ಶ್ರೇಷ್ಠವೇ. ಆದರೆ ನಮಗೆ ಮಾತ್ರ ಕನ್ನಡದ ಮೇಲೆ ಸ್ವಲ್ಪಮಟ್ಟಿನ ಹೆಚ್ಚು ಅಭಿಮಾನ, ಪ್ರೀತಿ, ಗೌರವಗಳಿರಲೇಬೇಕು. ಏಕೆಂದರೆ ಇದು ನಮ್ಮ ಭಾಷೆ, ನಮ್ಮ ನಾಡಿನ ಭಾಷೆ. ಅದಕ್ಕೊಂದು ಪರಂಪರೆಯಿದೆ, ಇತಿಹಾಸವಿದೆ.

          ಭಾಷೆ ನಮ್ಮ ಸಂಸ್ಕೃತಿಯ ವಾಹಕ. ಕನ್ನಡಕ್ಕೆ ಒಂದು ದೊಡ್ಡ ಪರಂಪರೆ ಇದೆ. ಇತಿಹಾಸವೂ ಇದೆ. ಭಾಷೆ ಅಳಿಯಿತು ಎಂದಾದರೆ ಒಂದು ಪುರಾತನ ಸಂಸ್ಕೃತಿ ಅಳಿಯಿತು ಎಂದರ್ಥ.  ನಮ್ಮ ಪೂರ್ವಜರಿಂದ ಈ ಭಾಷೆ ನಮಗೆ ಬಳುವಳಿಯಾಗಿ ಬಂದಿದೆ. ಅವರ ಹಿರಿಯರ ಮೂಲಕ ಒದಗಿದ ಭಾಷೆಯನ್ನು ಒಂದಷ್ಟು ಅಭಿವೃದ್ಧಿಪಡಿಸಿ ಪೂರ್ವಜರು ನಮಗೆ ನೀಡಿದ್ದಾರೆ. ನಾವು ಅದನ್ನು ಇನ್ನೂ ಅಭಿವೃದ್ಧಿಪಡಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸ ಬೇಕಾದುದು ನಮ್ಮೆಲ್ಲರ ಕರ್ತವ್ಯ. ಹಾಗೆ ಮುಂದಿನ ಪೀಳಿಗೆಗೆ ಹಸ್ತಾಂತರಿಸುವಾಗ ಅದನ್ನು ಕೆಡಿಸಿ, ದುರ್ಬಲಗೊಳಿಸಿ, ಪೇಲವಗೊಳಿಸಿ ಅಥವಾ ವಿಕೃತಗೊಳಿಸಿ ಹಸ್ತಾಂತರಿಸುವುದು ಬೇಡ. ಅದನ್ನು ಹಾಗೆಯೇ ಅಥವಾ ಸಾಧ್ಯವಾದರೆ ಇನ್ನಷ್ಟು ಅಭಿವೃದ್ಧಿಪಡಿಸಿ ಹಸ್ತಾಂತರಿಸೋಣ. ಹಾಗಾದಾಗಲೇ ನಾವು ನಮ್ಮ ಭಾಷೆಗೆ ಗೌರವವನ್ನು ನೀಡಿದಂತಾಗುತ್ತದೆ. ಕನ್ನಡ ರಾಜ್ಯೋತ್ಸವವು  ನವೆಂಬರ್ ಒಂದನೇ ತಾರೀಕಿಗೆ ಮಾತ್ರ ಸೀಮಿತವಾಗದಿರಲಿ. ಅದನ್ನು ವರ್ಷಪೂರ್ತಿ ವಿಸ್ತರಿಸಿಕೊಳ್ಳುವುದಕ್ಕೆ, ನಮ್ಮ ತನುಮನಗಳು ಕನ್ನಡಕ್ಕೆ ಸದಾ ಮಿಡಿಯುವುದಕ್ಕೆ ಪ್ರಯತ್ನಿಸೋಣ. ಮುಂದಿನವರಿಗೆ ಮಾದರಿಯಾಗೋಣ. ಸಿರಿಗನ್ನಡಂ ಗೆಲ್ಗೆ, ಬಾಳ್ಗೆ.

***

 

 

 

4 thoughts on “ಕನ್ನಡ ರಾಜ್ಯೋತ್ಸವ

  1. ನೀವು ಹೇಳಿರುವುದು ಸತ್ಯವಾದ ಮಾತು, ಕನ್ನಡದ ಮೇಲಿನ ಅಭಿಮಾನ ಒಂದು ದಿನಕ್ಕೆ ಸೀಮಿತವಾದದ್ದಲ್ಲ, ಕನ್ನಡಿಗನಾಗಿ ಅನುದಿನವೂ ಅದು ನಮ್ಮಲ್ಲಿ ಜಾಗೃತವಾಗಿರಬೇಕು. ಸಿರಿಗನ್ನಡಂ ಗೆಲ್ಗೆ, ಬಾಳ್ಗೆ.

  2. ಸರ್ ನಿಮ್ಮ ಮಾತುಗಳು ನಮಲ್ಲಿ ಕನ್ನಡ ಭಾಷಯ ಬಗ್ಗೆ ಇನ್ನಷ್ಟು ಅಭಿಮಾನ ಬೆಳೆಸಿಕೊಳ್ಳಲು ಸಹಾಕಾರಿಯಾಗಿವೆ ಸರ್

    1. ಬಹಳ ಸಂತೋಷ. ನಮ್ಮ ಭಾಷೆ, ನಮ್ಮ ನಾಡು. ಅಭಿಮಾನ, ಗೌರವ ಇರಿಸಿಕೊಳ್ಳಲೇಬೇಕು. ನಿಮ್ಮಂತಹ ಯುವಸಮುದಾಯ ಸ್ಫೂರ್ತಿ ಪಡೆಯಲಿ. ಭರವಸೆ ಇರಿಸೋಣ. 🙏

Leave a Reply

Your email address will not be published. Required fields are marked *