ಸಾಹಿತ್ಯಾನುಸಂಧಾನ

heading1

ಆರಿಗಾರೂ ಇಲ್ಲ ಕೆಟ್ಟವಂಗೆ ಕೆಳೆಯಿಲ್ಲ

(ಮಂಗಳೂರು ವಿಶ್ವವಿದ್ಯಾನಿಲಯ-ಬಿ.ಬಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾದ ಪಠ್ಯಭಾಗ)-

ಆರಿಗಾರೂ ಇಲ್ಲ ಕೆಟ್ಟವಂಗೆ ಕೆಳೆಯಿಲ್ಲ- ಬಸವಣ್ಣ

 

೧. ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯ

ಚಂದ್ರ ಕುಂದೆ ಕುಂದುವುದಯ್ಯ

ಚಂದ್ರಂಗೆ ರಾಹು ಅಡ್ಡಬಂದಲ್ಲಿ

ಅಂಬುಧಿ ಬೊಬ್ಬಿಟ್ಟಿತ್ತೇ ಅಯ್ಯ?

ಅಂಬುಧಿಯ ಮುನಿ ಆಪೋಶನವ ಕೊಂಡಲ್ಲಿ

ಚಂದ್ರಮನಡ್ಡ ಬಂದನೇ ಅಯ್ಯ?

ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ

ಜಗದ ನಂಟ ನೀನೇ ಅಯ್ಯ ಕೂಡಲಸಂಗಮದೇವ

ಮನುಷ್ಯನಿಗೆ ಒದಗುವ ಕಷ್ಟಕಾರ್ಪಣ್ಯಗಳ ಸಂದರ್ಭಗಳಲ್ಲಿ ಅವರವರ ಇಷ್ಟದೇವರಲ್ಲದೆ ಇತರ ಯಾರೂ ಒದಗಲಾರರು ಎಂಬುದನ್ನು ಬಸವಣ್ಣನವರು ಎರಡು  ಪರಸ್ಪರ ವಿರುದ್ಧ ದೃಷ್ಟಾಂತಗಳ ಮೂಲಕ ಪ್ರಸ್ತುತಪಡಿಸಿದ್ದಾರೆ.

ಮೊದಲನೆಯದು, ಆಗಸದಲ್ಲಿ ಚಂದ್ರನ ಉದಯವಾಗುವಾಗ ಅಂಬುಧಿ(ಸಮುದ್ರ) ಉಕ್ಕೇರುತ್ತದೆ. ಇದರಿಂದಾಗಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುತ್ತದೆ. ಹಾಗೆಯೇ ಚಂದ್ರ ಅಸ್ತಮಿಸುವಾಗ ಅಂಬುಧಿ ಕುಂದುತ್ತದೆ. ಅಲೆಗಳ ಭರಾಟೆಯೂ ಕಡಿಮೆಯಾಗುತ್ತದೆ. ಹೀಗಿರುವಾಗ ಚಂದ್ರ ಹಾಗೂ ಸಮುದ್ರದ ಮಧ್ಯೆ ಅವಿನಾಭಾವ ಗೆಳೆತನವಿದೆ ಎನ್ನಬಹುದೇ?!

ಎರಡನೆಯದು, ಚಂದ್ರನಿಗೆ ರಾಹುಗ್ರಹಣವಾದಾಗ ಸಮುದ್ರ  ಬೊಬ್ಬೆಹಾಕಿ ಅದನ್ನು ತಡೆಯಲಿಲ್ಲ. ಹಾಗೆಯೇ,  ಮುನಿ ಸಮುದ್ರದ ನೀರನ್ನೆಲ್ಲ ಕುಡಿದು ಬರಿದು ಮಾಡಿದಾಗ ಚಂದ್ರನೇನೂ ತಡೆಯಲಿಲ್ಲ.(ಸೂಚನೆ: ಕೆಳಗೆ ನೀಡಲಾಗಿರುವ ವಿಶೇಷ ಟಿಪ್ಪಣಿಯನ್ನು ನೋಡಿ) ಹಾಗಾಗಿ ಚಂದ್ರ ಹಾಗೂ ಸಮುದ್ರದ ನಡುವೆ ಯಾವುದೇ ರೀತಿಯ ಗೆಳೆತನವೇ ಇಲ್ಲ ಎನ್ನಬಹುದೇ?.

ಇದನ್ನೇ ಉದಾಹರಣೆಯಾಗಿ ಪರಿಭಾವಿಸಿ ಬಸವಣ್ಣನವರು “ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ” ಎಂದಿದ್ದಾರೆ. ನಮ್ಮ ಬದುಕಿನಲ್ಲಿ ನಮ್ಮ ಸುತ್ತಮುತ್ತ ಎಷ್ಟೋ ಮಂದಿ ನಮ್ಮ ಹಿತೈಷಿಗಳಂತೆ, ಬಂಧುಗಳಂತೆ, ಸ್ನೇಹಿತರಂತೆ, ನೆಂಟರಂತೆ ವರ್ತಿಸುತ್ತಾರೆ, ನಾವು ನಂಬುವಂತೆ, ನಮ್ಮ ವಿಶ್ವಾಸವನ್ನು ಗಳಿಸುವುದಕ್ಕೆ ಭಿನ್ನಭಿನ್ನ ರೀತಿಗಳಲ್ಲಿ ವರ್ತಿಸುತ್ತಾರೆ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಲಾಭಹೊಡೆಯುತ್ತಾರೆ. ಆದರೆ, ನಮಗೆ ಕಷ್ಟಕಾರ್ಪಣ್ಯಗಳು ಒದಗಿದಾಗ ವಿಚಾರಣೆ, ಸಹಾಯ, ಸಹಕಾರಗಳು  ಹಾಗಿರಲಿ, ಅಪ್ಪಿತಪ್ಪಿಯೂ ಮುಖವನ್ನು ತೋರಿಸದೆ ನಾಪತ್ತೆಯಾಗುತ್ತಾರೆ. ತಮ್ಮ ಕಷ್ಟಗಳಲ್ಲಿ ನಮ್ಮ ಸಹಾಯವನ್ನು ಪಡೆದವರು ನಮ್ಮ ಕಷ್ಟಗಳಲ್ಲಿ ಸಹಾಯಮಾಡಲಾರರು.  ಇದು ಲೋಕವಿಚಾರ. ಹಾಗೆಯೇ ಮನುಷ್ಯ ಬದುಕಿನಲ್ಲಿ ದಾರಿತಪ್ಪಿ ಕೆಟ್ಟವ ಎನಿಸಿಕೊಳ್ಳಬಾರದು. ಏಕೆಂದರೆ, ಈ ಲೋಕದಲ್ಲಿ ಯಾರಿಗೆ ಯಾರೂ ಇಲ್ಲ, ಕಷ್ಟದಲ್ಲಿರುವವನಿಗೆ (ಕೆಟ್ಟುಹೋದವನಿಗೂ ಕೂಡಾ) ಗೆಳೆತನಕ್ಕೆ ಯಾರೂ ಸಿಗುವುದೂ ಇಲ್ಲ. ಯಾರಲ್ಲೂ ಅತಿಯಾದ ಭರವಸೆ ಇಟ್ಟುಕೊಳ್ಳದೆ,  ನಮಗೊದಗಿದ ಕಷ್ಟಗಳನ್ನು ನಾವೇ ಪರಿಹರಿಸಿಕೊಳ್ಳಬೇಕು.  ಅದನ್ನೇ ಮನಗಂಡು ಬಸವಣ್ಣನವರು ಕೂಡಲಸಂಗಮದೇವನಲ್ಲಿ, “ಜಗದ ನೆಂಟ ನೀನೇ ಅಯ್ಯ” ಎನ್ನುತ್ತಾರೆ. ಮನುಷ್ಯನ ಕಷ್ಟಗಳಲ್ಲಿ ಕೊನೆಗೂ ಒದಗುವವನು ಭಗವಂತನೊಬ್ಬನೇ ಎಂಬುದು ಬಸವಣ್ಣನವರ ಅಭಿಪ್ರಾಯ.

ಲೋಕದಲ್ಲಿ ಬಹುತೇಕ ಸ್ನೇಹವು ಲಾಭದ ಮೇಲೆ ನಿರ್ಧರಿತವಾಗಿದೆ. ಲಾಭವಿದ್ದರಷ್ಟೇ ಸ್ನೇಹ, ಇಲ್ಲದಿದ್ದರೆ ಇಲ್ಲ. ನಿಸ್ವಾರ್ಥವಾದ ಸ್ನೇಹವಿಲ್ಲ ಎಂದಲ್ಲ, ಅದರ ಪ್ರಮಾಣ ತುಂಬಾ ಕಡಿಮೆ. ಮನುಷ್ಯ ಸ್ವಾರ್ಥಿಯೂ ಹೌದು, ನಯವಂಚಕನೂ ಹೌದು. ಏನೇನೋ ನಾಟಕಗಳನ್ನಾಡಿ ಇತರರ ವಿಶ್ವಾಸವನ್ನು ಪಡೆದು ಎಷ್ಟು ಸಾಧ್ಯವೋ ಅಷ್ಟು ಲಾಭಹೊಡೆಯುತ್ತಾನೆ. ಆದರೆ ಪರೋಪಕಾರದ ಮನೋಭಾವ ಅವನಲ್ಲಿ ಇರಲಾರದು. ಹಾಗಾಗಿ ಇತರರನ್ನು ಅತಿಯಾಗಿ ನಂಬಿ ಇದ್ದುದೆಲ್ಲವನ್ನೂ ಕಳೆದುಕೊಂಡು ಕೆಟ್ಟುಹೋಗುವುದಕ್ಕಿಂತ ನಮ್ಮನ್ನು ಕಷ್ಟಕಾಲದಲ್ಲಿ ನಿಸ್ವಾರ್ಥವಾಗಿ ಕಾಪಾಡುವ ಭಗವಂತನ ಮೇಲೆ ವಿಶ್ವಾಸವನ್ನು ಇರಿಸಿಕೊಳ್ಳುವುದೇ ಒಳಿತು ಎಂಬುದು ಬಸವಣ್ಣನವರ ಅಭಿಪ್ರಾಯ.

ವಿಶೇಷ ಟಿಪ್ಪಣಿ: ಮುನಿ ಆಪೋಶನ

ಅಗಸ್ತ್ಯಮುನಿ ವಸಿಷ್ಠನ ಸಹೋದರ. ಈತ ಅಪರಿಮಿತ ಶಕ್ತಿಯುಳ್ಳವನು. ಕಾಲಕೇಯರೆಂಬ ರಾಕ್ಷಸರು ಲೋಕಕಂಟಕರಾಗಿ ಹಗಲು ಹೊತ್ತಿನಲ್ಲಿ ಸಮುದ್ರದಲ್ಲಿ ಅಡಗಿಕುಳಿತು, ರಾತ್ರಿಯಾದ ಮೇಲೆ ಹೊರಬಂದು ತಪಸ್ವಿಗಳ ಯಜ್ಞಯಾಗಾದಿಗಳನ್ನು ಕೆಡಿಸಿ, ತಪಸ್ವಿಗಳನ್ನು ಕೊಲ್ಲುತ್ತಿದ್ದರು. ಇವರ ಉಪಟಳದಿಂದಾಗಿ ಭೂಮಿಯಲ್ಲಿ ಯಜ್ಞ ಯಾಗಾದಿಗಳು ನಿಂತುಹೋದಾಗ ದೇವತೆಗಳು ದೇವೇಂದ್ರನ ಮೂಲಕ ಬ್ರಹ್ಮನ ಮೊರೆಹೊಕ್ಕರು. ಆತ ಕಾಲಕೇಯರನ್ನು ಸೋಲಿಸುವುದಕ್ಕೆ ಸರಿಯಾದ ವ್ಯಕ್ತಿ ಅಗಸ್ತ್ಯನೆಂದು ತಿಳಿಸಿ ಅವನ ಬಳಿಗೆ ಕಳುಹಿಸಿದನು. ಅಗಸ್ತ್ಯನ ಬಳಿಗೆ ಬಂದ ಇಂದ್ರಾದಿ ದೇವತೆಗಳು ಆತನಿಗೆ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದರು. ಅಗಸ್ತ್ಯ ಸಮುದ್ರದ ನೀರೆಲ್ಲವನ್ನೂ ಆಪೋಶನ ತೆಗೆದುಕೊಂಡಾಗ ಕಾಲಕೇಯರಿಗೆ ಅಲ್ಲಿರಲು ಸಾಧ್ಯವಾಗದೆ ಸಮುದ್ರದಿಂದ ಹೊರಬಿದ್ದರು. ಕೂಡಲೇ ಇಂದ್ರಾದಿ ದೇವತೆಗಳು ಅವರನ್ನು ಕೊಂದು ತಪಸ್ವಿಗಳನ್ನು ರಕ್ಷಿಸಿದರು. ಕೂಡಲೇ ಅಗಸ್ತ್ಯಮುನಿ ತಾನು ಆಪೋಶನ ತೆಗೆದುಕೊಂಡ ಸಮುದ್ರದ ನೀರನ್ನು ಮರಳಿ ಸಮುದ್ರಕ್ಕೆ ಹರಿಸಿದನು.

 

೨. ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ

ಧರೆ ಹತ್ತಿ ಉರಿದರೆ ನಿಲಬಾರದು

ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ

ನಾರಿ ತನ್ನ ಮನೆಯಲ್ಲಿ ಕಳುವಡೆ

ತಾಯ ಮೊಲೆವಾಲು ನಂಜಾಗಿ ಕೊಲುವಡೆ

ಇನ್ನಾರಿಗೆ ದೂರುವೆ ಕೂಡಲಸಂಗಮದೇವ

ಲೋಕದಲ್ಲಿ ಜೀವಸಂಕುಲದ ಬದುಕಿಗೆ ವ್ಯವಸ್ಥೆಯೊಂದು ರೂಢಿಯಲ್ಲಿದೆ. ಅದರಲ್ಲಿ ಏರುಪೇರಾದರೆ ಬದುಕು ಅಸಾಧ್ಯವೆಂಬುದನ್ನು ಐದು ಉದಾಹರಣೆಗಳ ಮೂಲಕ ಬಸವಣ್ಣನವರು ಪ್ರಸ್ತುತಪಡಿಸಿದ್ದಾರೆ.

ಮೊದಲನೆಯದು, ಮನೆಯ ಅಡುಗೆಮನೆಯಲ್ಲಿರುವ ಒಲೆ ಮಿತಿಮೀರಿ ಉರಿದರೂ ಆ ಬೆಂಕಿಯನ್ನು ನಾವು ಹತೋಟಿಗೆ ತರಬಹುದು. ಅಂತಹ ಅಪಾಯವೇನೂ ಆಗಲಾರದು. ಆದರೆ ನಾವು ವಾಸಮಾಡುವ ಭೂಮಿಯೇ ಹೊತ್ತಿ ಉರಿಯತೊಡಗಿದರೆ ಇಲ್ಲಿ ಜೀವಸಂಕುಲದ ಬದುಕು ಸಾಧ್ಯವೇ? ಎಂಬುದು ಬಸವಣ್ಣನವರ ಪ್ರಶ್ನೆ. ಈ ಭೂಮಿಯಲ್ಲಿರುವ ಎಲ್ಲಾ ವ್ಯವಸ್ಥೆಗಳೂ ಇಲ್ಲಿನ ಸಸ್ಯಸಂಕುಲ, ಪ್ರಾಣಿಸಂಕುಲ ಹಾಗೂ ಮನುಕುಲದ ಬದುಕಿಗೆ ಪೂರಕವಾಗಿಯೇ ಇವೆ. ಅವುಗಳಲ್ಲಿ ಒಂದಿಷ್ಟು ಏರುಪೇರು ಉಂಟಾದರೆ ಮನುಷ್ಯ ಮಾತ್ರವಲ್ಲ, ಎಲ್ಲ ಸಸ್ಯ ಹಾಗೂ ಪ್ರಾಣಿಸಂಕುಲಕ್ಕೂ ಬದುಕು ಕಷ್ಟವಾಗುತ್ತದೆ.

ಎರಡನೆಯದು, ಕೆಲವು ಬೆಳೆಗಳಿಗೆ ನಿರಂತರ ನೀರಿನ ಅವಶ್ಯಕತೆ ಇದೆ. ಅದಕ್ಕಾಗಿ ಗದ್ದೆಗಳ ಸುತ್ತ ನೀರು ಬಸಿದುಹೋಗದಂತೆ ಗಟ್ಟಿಯಾದ ಹಾಗೂ ದೃಢವಾದ ಬದುಗಳನ್ನು ನಿರ್ಮಿಸಿ ನೀರನ್ನು ಶೇಖರಿಸಿಟ್ಟುಕೊಳ್ಳಬೇಕಾಗುತ್ತದೆ. ಆದರೆ,  ಗದ್ದೆಗಳಲ್ಲಿ ಬೆಳೆಗಳಿಗೆ ಶೇಖರಿಸಿಟ್ಟ ನೀರನ್ನು ಬದುಗಳು ತಾವೇ ಕುಡಿಯ ತೊಡಗಿದರೆ ಬೆಳೆಗಳಿಗೆ ನೀರೆಲ್ಲಿಯದು? ನೀರಿಲ್ಲದೆ ಬೆಳೆಯೇ ನಾಶವಾಗಲಾರದೆ? ಬೆಳೆಯಿಲ್ಲದೆ ಜೀವಸಂಕುಲವೇ ನಾಶವಾಗಲಾರದೆ?

ಮೂರನೆಯದು, ಹೊಲಗದ್ದೆಗಳಲ್ಲಿ ಬೆಳೆಸಿದ ಬೆಳೆಗಳ ರಕ್ಷಣೆಗೆ ಹಾಕುವ ಬೇಲಿ. ಅದು ಇತರ ಜಾನುವಾರುಗಳು, ಕಾಡುಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಬೇಕಾದುದು. ಆದರೆ ರಕ್ಷಣೆಗೆ ಹಾಕಿರುವ ಬೇಲಿಯೇ ಎದ್ದುಹೋಗಿ ಗದ್ದೆ, ಹೊಲಗಳಲ್ಲಿರುವ ಪೈರನ್ನು ತಾನೇ ಮೇಯತೊಡಗಿದರೆ ಬೆಳೆಯನ್ನು ರಕ್ಷಿಸುವವರಾರು? ಬದುಗಳು ಹಾಗೂ ಬೇಲಿಗಳು ಬೆಳೆಗಳ ರಕ್ಷಣೆಗೆ ಮನುಷ್ಯ ಕಂಡುಕೊಂಡಿರುವ ವ್ಯವಸ್ಥೆಗಳು. ಅವು ಬೆಳೆಗಳನ್ನು ರಕ್ಷಿಸಬೇಕಾದವುಗಳು. ಆದರೆ, ರಕ್ಷಕರೇ ಭಕ್ಷಕರಾದರೆ ಜೀವಸಂಕುಲದ ಬದುಕು ನಾಶವಾಗುತ್ತದೆ.

ನಾಲ್ಕನೆಯದು, ಒಂದು ಮನೆಯನ್ನು ವ್ಯವಸ್ಥಿತವಾಗಿ ನಡೆಸುವ ಹೆಣ್ಣು. ಮನೆಮಂದಿಯನ್ನು ಸಲಹಿ, ಮನೆಯ ಒಟ್ಟು ಸುರಕ್ಷತೆಗೆ ಶ್ರಮಿಸಬೇಕಾದವಳು, ಹಸಿದಾಗ ಆಹಾರವನ್ನು ಬೇಯಿಸಿ ಉಣಬಡಿಸಬೇಕಾದವಳು, ಮನೆಮಂದಿಯನ್ನು ಅದರಲ್ಲೂ ಮಕ್ಕಳನ್ನು ಕಾಪಾಡಬೇಕಾದವಳು ಹೆಣ್ಣು. ಆದರೆ, ಆಕೆಯೇ ತನ್ನ ಮನೆಯಲ್ಲಿ ಕಳ್ಳತನಕ್ಕೆ ತೊಡಗಿದರೆ ಮನೆಯನ್ನು, ಮನೆಮಂದಿಯನ್ನು ರಕ್ಷಿಸುವವರಾರು? ಮಕ್ಕಳ ತಪ್ಪುಗಳನ್ನು ತಿದ್ದಿ ಸರಿದಾರಿಯಲ್ಲಿ ನಡೆಸುವವರು ಯಾರು? ಹೀಗಾದರೆ ಮನೆಯೇ ನಾಶವಾಗಲಾರದೇ?

ಐದನೆಯದು, ಒಂದು ಮಗುವನ್ನು ಹುಟ್ಟಿದಂದಿನಿಂದ ಒಂದು ನಿರ್ದಿಷ್ಟ ಕಾಲದವರೆಗೆ ತನ್ನ ಎದೆಹಾಲುಣಿಸಿ,  ತುತ್ತುಕೊಟ್ಟು ಸಾಕಿ ಸಲಹಬೇಕಾದವಳು ತಾಯಿ.  ಆಕೆಯ ಎದೆಹಾಲು ಅಮೃತಕ್ಕೆ ಸಮಾನ. ಅದು ಮಗುವನ್ನು ಬೇರೆಬೇರೆ ಕಾಯಿಲೆಗಳಿಂದ ರಕ್ಷಿಸಿ, ಮಗುವನ್ನು ಆರೋಗ್ಯಪೂರ್ಣವಾಗಿ ಬೆಳೆಸುವಂತಹುದು. ಮಗುವಿನ ಆರೋಗ್ಯಕ್ಕೆ ಅಮೃತದಂತಿರುವ ಎದೆಹಾಲೇ ವಿಷವಾಗಿ ಪರಿಣಮಿಸಿದರೆ ಮಗುವನ್ನು ಬದುಕಿಸುವವರಾರು? ರಕ್ಷಕವ್ಯವಸ್ಥೆಯೇ ಭಕ್ಷಕವ್ಯವಸ್ಥೆಯಾಗಿ ಪರಿಣಮಿಸಿದರೆ ಬದುಕು ಹೇಗೆ ಸಾಧ್ಯ?

ಮೇಲಿನ ಐದೂ ವಿಷಯಗಳಲ್ಲಿನ ರೂಢಿಯ ವ್ಯವಸ್ಥೆಯು ಅವ್ಯವಸ್ಥೆಯ, ಅಧ್ವಾನದ ಆಗರವಾದರೆ ಯಾರಿಗೆ ದೂರುಕೊಡಲಿ? ಎಂಬುದು ಬಸವಣ್ಣನವರ ಪ್ರಶ್ನೆ. ಈ ಲೋಕ ಇಲ್ಲಿ ವಾಸಿಸುವ ಸಮಸ್ತ ಜೀವಸಂಕುಲಕ್ಕೆ ಪೂರಕವಾಗಿಯೇ ಇದೆ. ಈ ವ್ಯವಸ್ಥೆಯಲ್ಲಿ ಒಂದಿಷ್ಟು ಏರುಪೇರಾದರೆ ಸಮಸ್ತ ಜೀವಸಂಕುಲದ ಬದುಕು ದುಸ್ತರವಾಗುತ್ತದೆ.  ಬದುಕು ಹೇಗೆ ಸಾಧ್ಯ? ಎಂಬುದು ಬಸವಣ್ಣನ ಅಳಲು. ಅದಕ್ಕಾಗಿಯೇ ಅವರು, “ಇನ್ನಾರಿಗೆ ದೂರುವೆ ಕೂಡಲಸಂಗಮದೇವ?” ಎಂದು ಪ್ರಶ್ನಿಸುತ್ತಾರೆ.

ಈ ಹಿನ್ನೆಲೆಯಲ್ಲಿ ವಚನದ ಅರ್ಥ ಇನ್ನಷ್ಟು ವ್ಯಾಪ್ತಿಯನ್ನು ಪಡೆದುಕೊಳ್ಳುತ್ತದೆ. ಇಂದು ನಾವು ಇಪ್ಪತ್ತೊಂದನೆಯ ಶತಮಾನದಲ್ಲಿದ್ದೇವೆ. ನಮ್ಮಲ್ಲೂ ಬದುಕಿನ ರಕ್ಷಣೆಗೆ ಹಲವಾರು ವ್ಯವಸ್ಥೆಗಳು ರೂಢಿಯಾಗಿವೆ. ನಮ್ಮ ಪೂರ್ವಜರೂ ಬಹಳಷ್ಟನ್ನು ರೂಢಿಸಿಕೊಟ್ಟಿದ್ದಾರೆ. ಹಲವನ್ನು ನಾವು ರೂಢಿಸಿಕೊಂಡಿದ್ದೇವೆ. ಆದರೆ ಇವೆಲ್ಲವೂ ಇಂದು ನಮ್ಮನ್ನು ರಕ್ಷಿಸದೆ ಹತ್ತು ಹಲವು ಸಂದರ್ಭಗಳಲ್ಲಿ ನಮ್ಮನ್ನು ಭಕ್ಷಿಸುವ ಕೆಲಸ ಮಾಡುತ್ತಿವೆ. ದೇಶದ ಸಮಸ್ತ ಕ್ಷೇತ್ರಗಳಲ್ಲಿಯೂ ಇಂತಹ ಅವ್ಯವಸ್ಥೆ ತಾಂಡವವಾಡುತ್ತಿದೆ. ರಕ್ಷಿಸಬೇಕಾದವರು ಭಕ್ಷಕರಾಗುತ್ತಿದ್ದಾರೆ, ರಕ್ಷಿಸಿಕೊಳ್ಳಬೇಕಾದವರು ಬಲಿಯಾಗುತ್ತಿದ್ದಾರೆ.  ಬಸವಣ್ಣನವರು ಹನ್ನೆರಡನೆಯ ಶತಮಾನದ ಸಾಮಾಜಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ಹೇಳಿರುವ ಮಾತುಗಳು ಇಂದಿನ ನಮ್ಮ ಸಕಲ ಕ್ಷೇತ್ರಗಳ ವ್ಯವಸ್ಥೆಗೂ ಅನ್ವಯವಾಗುತ್ತಿರುವುದು ಆಶ್ಚರ್ಯಕರವಾದ ವಿಚಾರ.

೩. ಅಂದಣವನೇರಿದ ಸೊಣಗನಂತೆ

ಕಂಡರೆ ಬಿಡದು ಮುನ್ನಿನ ಸ್ವಭಾವವನು

ಸುಡು, ಸುಡು, ಮನವಿದು ವಿಷಯಕ್ಕೆ ಹರಿವುದು

ಮೃಢ, ನಿಮ್ಮನನುದಿನ ನೆನೆಯಲೀಯದು

ಎನ್ನೊಡೆಯನೆ ಕೂಡಲಸಂಗಮದೇವ

ನಿಮ್ಮ ಚರಣವ ನೆನೆವಂತೆ ಕರುಣಿಸು

ಸೆರಗೊಡ್ದಿ ಬೇ॑ಡುವೆ ನಿಮ್ಮ ಧರ್ಮ

ಈ ವಚನದಲ್ಲಿ  ಬಸವಣ್ಣನವರು ತಮ್ಮ ಮನಸ್ಸಿನ ಚಂಚಲತೆಯನ್ನು ಉದಾಹರಣೆಯೊಂದರ ಸಹಾಯದಿಂದ ಸ್ಪಷ್ಟಪಡಿಸುತ್ತ, ಅದನ್ನು ನಿವಾರಿಸಿ ಶಿವನನ್ನು ಧ್ಯಾನಿಸುತ್ತಿರುವಂತೆ ಮನಸ್ಸನ್ನು ಅಣಿಗೊಳಿಸೆಂದು ಬೇಡಿಕೊಳ್ಳುತ್ತಾರೆ.

ಮನಸ್ಸು ಎನ್ನುವುದು ಅಂದಣ(ಪಲ್ಲಕ್ಕಿ)ವನ್ನು ಏರಿದ  ನಾಯಿಯ ಹಾಗೆ. ಪಲ್ಲಕ್ಕಿಯ ಮಹತ್ವ, ಶ್ರೇಷ್ಠತೆಗಳು ನಾಯಿಗೆ ಗೊತ್ತಿಲ್ಲ, ನಾಯಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿದರೂ ಅದು ಅಲ್ಲಿ ಸುಮ್ಮನೆ ಕೂರಲಾರದು. ಎಲ್ಲಿ ತನಗೆ ಇಷ್ಟವಾದ ವಸ್ತು ಕಾಣಸಿಗುತ್ತದೋ, ತಕ್ಷಣವೇ ಪಲ್ಲಕ್ಕಿಯಿಂದ  ಹಾರಿಕೊಂಡು ಓಡಿಹೋಗುತ್ತದೆ. ಏನಾದರೂ ಹೊಲಸಿನ ವಾಸನೆ ಮೂಗಿಗೆ ಬಡಿಯಿತೋ ಅದನ್ನೇ ಮೂಸಿಕೊಂಡು ಹೊರಟುಹೋಗುತ್ತದೆ. ನಾಯಿಗೆ ಪಲ್ಲಕ್ಕಿಯಲ್ಲಿ ತನ್ನನ್ನು ಕೂರಿಸಿದ್ದಾರೆ ಎನ್ನುವುದಾಗಲೀ, ಅಲ್ಲಿ ತಾನು ಮರ್ಯಾದೆಯಿಂದ ವರ್ತಿಸಬೇಕು ಎನ್ನುವುದಾಗಲೀ ಅದಕ್ಕೆ ತಿಳಿಯದು. ಏಕೆಂದರೆ ಅದರ ಬುದ್ಧಿಮತ್ತೆ, ಯೋಗ್ಯತೆಯೇ ಅಷ್ಟು. ನಾಯಿಗೆ ಅದರ ಹಿಂದಿನ ಸ್ವಭಾವಗಳು, ಆಸೆ ಅಭಿರುಚಿಗಳು ಯಾವ ಪರಿಸ್ಥಿತಿಯಲ್ಲಿಯೂ ಬಿಟ್ಟುಹೋಗಲಾರವು.

ಬಸವಣ್ಣನವರು ತಮ್ಮ ಮನಸ್ಸನ್ನು ನಾಯಿಯ ಸ್ವಭಾವಕ್ಕೆ ಹೋಲಿಸಿದ್ದಾರೆ. ಧ್ಯಾನಕ್ಕೆ ಕುಳಿತರೂ ಅದು ವಿಷಯ(ಕಾಮಾಸಕ್ತಿ, ಭೋಗಾಭಿಲಾಷೆ, ಮನಸ್ಸಿನ ಬಯಕೆಗಳು ಇತ್ಯಾದಿ.)ದ ಕಡೆಗೆ ಹರಿಯುತ್ತದೆ. ಅದು ಮನಸ್ಸನ್ನು ಚಂಚಲಗೊಳಿಸುತ್ತ ಶಿವನನ್ನು ನೆನೆಯಲು ಅವಕಾಶವನ್ನೇ ಕೊಡಲಾರದು. ಧ್ಯಾನಕ್ಕೆ, ಪೂಜೆಗೆ ಅಡ್ಡಿಯಾಗುವ  ಅಂತಹ ಮನಸ್ಸನ್ನು ’ಸುಡು, ಸುಡು’ ಎಂದು ಶಿವನಲ್ಲಿ ದೈನ್ಯದಿಂದ ಬೇಡಿಕೊಳ್ಳುತ್ತಾರೆ. ಅವರು ತಮ್ಮ ಮನಸ್ಸಿನ ಚಂಚಲತೆಯನ್ನು ನಿವಾರಿಸಿ ಶಿವನ ಚರಣವನ್ನು ಸದಾ ನೆನೆಯುವಂತೆ ಕರುಣಿಸು ಎಂದೂ ಶಿವನಿಂದ ದಾನದ ರೂಪದಲ್ಲಿ ಮನಸ್ಸಿನ ಏಕಾಗ್ರತೆಯನ್ನು ಬೇಡಿಕೊಳ್ಳುತ್ತಾರೆ. ಬಸವಣ್ಣರಂತಹ ಶ್ರೇಷ್ಠಭಕ್ತರಿಗೆ ಈ ರೀತಿಯ ಮಾನಸಿಕ ಚಂಚಲತೆಯಿತ್ತು ಎನ್ನುವುದಾದರೆ ಇನ್ನುಳಿದ ಸಾಮಾನ್ಯರ ಸ್ಥಿತಿ ಹೇಗಿರಬಹುದು? ಎಷ್ಟಿರಬಹುದು? ಎಂಬುದನ್ನು ಯಾರೂ ಕಲ್ಪಿಸಿಕೊಳ್ಳಬಹುದು.

ಬಸವಣ್ಣನವರು ಈ ವಚನದಲ್ಲಿ ಶಿವಭಕ್ತಿಯಲ್ಲಿನ ಏಕಾಗ್ರತೆಯ ಬಗ್ಗೆ, ಅದಕ್ಕೆ ಬೇರೆ ಬೇರೆ ರೀತಿಗಳಿಂದ ತಡೆಯಾಗುತ್ತಿರುವುದರ ಬಗ್ಗೆ ಹೇಳಿಕೊಂಡಿದ್ದರೂ ಈ ಮಾತುಗಳು ಕೇವಲ ಭಕ್ತಿವಿಚಾರಗಳಿಗೆ ಮಾತ್ರ ಸೀಮಿತವಾಗದೆ ಇತರ ವಿಷಯಗಳಿಗೂ ಅನ್ವಯವಾಗುತ್ತವೆ. ಹನ್ನೆರಡನೆಯ ಶತಮಾನದ ಸಾಮಾಜಿಕ ಸಂದರ್ಭದಲ್ಲಿ ವ್ಯಕ್ತಿಯ ಮನಸ್ಸನ್ನು ಸೆಳೆಯುವ, ಅದನ್ನು ಉದ್ದೇಶಿತ ಗುರಿಯಿಂದ ತಪ್ಪಿಸುವ ಅವಕಾಶಗಳು, ಉದ್ದೇಶಗಳು ಹಲವಾರಿದ್ದವು. ಧನದಾಸೆ, ಆಸ್ತಿಯಾಸೆ, ಸ್ತ್ರೀಲೊಲುಪತೆ, ಭೋಗಲಾಲಸೆ-ಹೀಗೆ ಇನ್ನೂ ಸಾಕಷ್ಟು. ಅವೆಲ್ಲವೂ ಕೇವಲ ಭಕ್ತಿಸಾಧನೆಗೆ ಮಾತ್ರವಲ್ಲ, ಬದುಕಿನ ಸಾಧನೆಗೂ ಅಡ್ಡಿಯಾಗುತ್ತಿದ್ದವು. ಅದನ್ನೇ ಬಸವಣ್ಣನವರು ಈ ವಚನದಲ್ಲಿ ತನಗೆ ಹಾಗೂ ತನ್ನ ಭಕ್ತಿಗೆ ಅನ್ವಯವಾಗುವಂತೆ ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ. ಬದುಕಿನಲ್ಲಿನ ಯಾವುದೇ ಸಾಧನೆಗೆ ಮನಸ್ಸಿನ ಏಕಾಗ್ರತೆ ಹಾಗೂ ಅದರ ನಿಷ್ಕಲ್ಮಷತೆ ಅತ್ಯಂತ ಮುಖ್ಯವೆಂಬುದು ಬಸವಣ್ಣನವರ ವಚನದ ತಾತ್ಪರ್ಯ.

ಇಂದು ನಾವು ಇಪ್ಪತ್ತೊಂದನೆಯ ಶತಮಾನದ ಸಾಮಾಜಿಕ ಕಾಲಘಟ್ಟದಲ್ಲಿದ್ದೇವೆ. ನಮ್ಮ ಮನಸ್ಸನ್ನು ಆಕರ್ಷಿಸುವ, ಮರುಳುಮಾಡುವ, ದಾರಿತಪ್ಪಿಸುವ, ಸಾಧನೆಗೆ ತಡೆಯೊಡ್ಡುವ ವಿಷಯಗಳು ಸಾಕಷ್ಟಿವೆ. ಭಕ್ತಿಯನ್ನು ಹೊರತುಪಡಿಸಿದರೂ ಮಿಕ್ಕ ಕ್ಷೇತ್ರಗಳಲ್ಲಿಯೂ  ಮನುಷ್ಯನ ಸಾಧನೆಗೆ ಪದೇಪದೇ ಅಡ್ಡಿ ಆತಂಕಗಳು ಎದುರಾಗಿ ಮನಸ್ಸು ವಿಕೃತಗೊಳ್ಳುತ್ತಲೇ ಇದೆ. ಹಾಗಾಗಿಯೇ ಇಂದು ಸಾಮಾಜಿಕ, ಆರ್ಥಿಕ, ರಾಜಕೀಯ –ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಆಭಾಸಗಳು ನಡೆಯುತ್ತಲೇ ಇವೆ. ನಾವು ದಾರಿತಪ್ಪುವುದರೊಂದಿಗೆ ಇತರರನ್ನೂ ದಾರಿತಪ್ಪಿಸುತ್ತಿದ್ದೇವೆ.  ಹೆಚ್ಚಿನ ಸಂದರ್ಭಗಳಲ್ಲೆಲ್ಲ ಮನುಷ್ಯನ ಮನಸ್ಸು ಪಲ್ಲಕ್ಕಿಯನ್ನು ಏರಿದ ನಾಯಿಯಂತೆಯೇ ವರ್ತಿಸುತ್ತಿದೆ. ಅದರಿಂದಾಗಿ ಅಪರಾಧಗಳು ಬೃಹದಾಕಾರವಾಗಿ ಬೆಳೆಯುತ್ತಿವೆ. ಹಾಗಾಗಿಯೇ ಬಸವಣ್ಣನವರ ಮಾತುಗಳು  ಅಂದಿಗಿಂತ ಇಂದಿನ ಸಮಾಜವ್ಯವಸ್ಥೆಗೆ ಹೆಚ್ಚು ಅರ್ಥಪೂರ್ಣವಾಗಿ ಅನ್ವಯವಾಗುತ್ತವೆ.

೪. ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ

ತಿಳಿಯಲೀಯದು; ಎಚ್ಚರಲೀಯದು

ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯ ಲಿಂಗ ತಂದೆ

ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವ

ಬಸವಣ್ಣವವರು ಈ ವಚನದಲ್ಲಿ, ತನ್ನಲ್ಲಿರುವ ಅವಗುಣವನ್ನು ಬೆಳೆಯ ಭೂಮಿಯಲ್ಲಿ ಹುಟ್ಟಿದ ಕಳೆಗಿಡಗಳಿಗೆ ಹೋಲಿಸಿ, ಅವುಗಳನ್ನು ಕಿತ್ತು ನಿವಾರಿಸಬೇಕೆಂದು ಕೂಡಲಸಂಗಮದೇವನಲ್ಲಿ ಬೇಡಿಕೊಳ್ಳುತ್ತಾರೆ.

ಬಸವಣ್ಣನವರು ತಮ್ಮ ಮನಸ್ಸನ್ನು ಬೆಳೆಯ ಭೂಮಿಗೆ ಹೋಲಿಸಿದ್ದಾರೆ. ಬೆಳೆಯ ಭೂಮಿ ಸಾರವತ್ತಾಗಿದ್ದರೆ, ಅನವಶ್ಯಕವಾಗಿ ಬೆಳೆಯುವ ಕಳೆಗಿಡಗಳನ್ನು ಆಗಾಗ ಕಿತ್ತುಹಾಕಿ ನಾಶಮಾಡುತ್ತಿದ್ದರೆ ಬೆಳೆಯ ಭೂಮಿಯಲ್ಲಿ ಹುಲುಸಾದ, ಯಥೇಷ್ಟವಾದ ಪೈರನ್ನು ನಿರೀಕ್ಷಿಸಬಹುದು. ಹಾಗೆಯೇ ಸದ್ಭಕ್ತಿ, ಸದಾಚಾರ, ಸದ್ಭಾವನೆಗಳು ಹುಟ್ಟಬೇಕಾದ ಮನಸ್ಸೆಂಬ ಭೂಮಿಯಲ್ಲಿ ದುರಾಸೆ, ಅತ್ಯಾಸೆ, ದುರಹಂಕಾರ, ತಾರತಮ್ಯ, ಅನೈತಿಕತೆ ಮೊದಲಾದ ಅವಗುಣಗಳೆಂಬ ಕಸ(ಕಳೆಗಿಡಗಳಿಗೆ ಸಮಾನವಾದ ಭಾವಗಳು) ಹುಟ್ಟಿಕೊಂಡು ಏಕಾಗ್ರತೆ, ಭಕ್ತಿ, ಧ್ಯಾನ, ಸದ್ಭಾವನೆ, ನೈತಿಕತೆ ಮೊದಲಾದ ಒಳ್ಳೆಯ ಗುಣಗಳನ್ನು ನಾಶಮಾಡುತ್ತಿವೆ. ಹಾಗಾಗಿ ತನಗೆ ಧ್ಯಾನ, ಭಕ್ತಿ ಸಾಧ್ಯವಾಗುತ್ತಿಲ್ಲ. ಲೋಕವಿಚಾರಗಳನ್ನು, ಶಿವಸಂಬಂಧಿ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಲೀ ತಿಳಿದು ಎಚ್ಚರಗೊಳ್ಳುವುದಕ್ಕಾಗಲೀ ಸಾಧ್ಯವಾಗುತ್ತಿಲ್ಲ. ಬೆಳೆಯ ಭೂಮಿಯಲ್ಲಿ ಹುಟ್ಟುವ ಕಳೆಗಿಡಗಳನ್ನು ಕಿತ್ತು ನಾಶಮಾಡಿ ಬೆಳೆಯನ್ನು ರಕ್ಷಿಸುವ ಹಾಗೆ ತನ್ನ ಮನಸ್ಸಿನಲ್ಲಿ ಹುಟ್ಟುವ ಅವಗುಣಗಳನ್ನು ಕಿತ್ತು ತನ್ನನ್ನು ಸಲಹಬೇಕು ಎಂದು  ಬಸವಣ್ಣನವರು ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ.

ರೈತನೊಬ್ಬ ತನ್ನ ಬೆಳೆಯ ಭೂಮಿಯಲ್ಲಿನ ಕಳೆಗಿಡಗಳನ್ನು ಆಗಾಗ ಕಿತ್ತು ಬೆಳೆಯನ್ನು ಹೇಗೆ ರಕ್ಷಿಸಿ ತಾನು ಅದರ ಫಲವನ್ನು ಉಣ್ಣುತ್ತಾ ಇತರರಿಗೂ ಉಣಿಸುತ್ತಾನೋ ಹಾಗೆಯೇ  ತನ್ನ ಮನಸ್ಸೆಂಬ ಭೂಮಿಯಲ್ಲಿನ ಅವಗುಣವೆಂಬ ಕಸವನ್ನು ಬುಡಸಹಿತ ಕಿತ್ತು ತನ್ನ ಮನಸ್ಸನ್ನು ಶುದ್ಧಿಗೊಳಿಸಿ ಶಿವಧ್ಯಾನ, ಶಿವಭಕ್ತಿ ಎಂಬ ಬೆಳೆಯನ್ನು ಬೆಳೆಸಿ ಅದರ ಪ್ರಯೋಜನವನ್ನು ತಾನೂ ತನ್ನವರೂ ಪಡೆದುಕೊಳ್ಳುವುದಕ್ಕೆ ಅನುವುಮಾಡಿಕೊಡಬೇಕು. ಹಾಗಾದಾಗ ಮಾತ್ರ ತನ್ನ ಮನಸ್ಸೆಂಬ ಭೂಮಿಯಲ್ಲಿ ಶಿವನಾಮವೆಂಬ ಸಸಿಯನ್ನು ಸುಳಿದೆಗೆದು ಬೆಳೆಸಲು ಸಮರ್ಥನಾಗುತ್ತೇನೆ  ಎಂಬುದು ಬಸವಣ್ಣನವರ  ಕಳಕಳಿಯ ನಿವೇದನೆ.

ಹುಲುಸಾದ ಬೆಳೆಗಳಿಗೆ ಸಾರವತ್ತಾದ, ಸುರಕ್ಷಿತವಾದ ಭೂಮಿ ಹೇಗೆ ಪಶಸ್ತವೋ ಹಾಗೆಯೇ ಸದ್ಭಾವನೆ, ಸದ್ಭಕ್ತಿಯೆಂಬ ಬೆಳೆಗಳಿಗೆ ಸ್ವಸ್ಥಮನಸ್ಸು, ಸ್ಥಿರಮನಸ್ಸು, ತಿಳಿವಳಿಕೆಯ ಮನಸ್ಸು ಅತ್ಯಂತ ಅಗತ್ಯ. ಹಾಗಿದ್ದರೆ ಮಾತ್ರ ಮನುಷ್ಯ ಏನನ್ನಾದರೂ ಸಾಧಿಸಬಲ್ಲ. ಸಮಾಜದಲ್ಲಿ ಒಳ್ಳೆಯ ಹಾಗೂ ಉನ್ನತ ಸ್ಥಾನಮಾನಗಳನ್ನು ಪಡೆದುಕೊಳ್ಳಬಲ್ಲ, ಸಾಧಕನೆನಿಸಿಕೊಳ್ಳಬಲ್ಲ. ಇತರರಿಗೆ ಮಾರ್ಗದರ್ಶಕನಾಗಬಲ್ಲ. ಇವೆಲ್ಲವುಗಳ ಮೂಲಕ ಒಂದು ಆರೋಗ್ಯಪೂರ್ಣ ಸಮಾಜವ್ಯವಸ್ಥೆಗೆ ಮಾದರಿಯಾಗಬಲ್ಲ. ಬಸವಣ್ಣನವರು ಶಿವನಲ್ಲಿ ಇದನ್ನೇ ಬೇಡಿಕೊಳ್ಳುತ್ತಾರೆ.

ಆಧುನಿಕ ಕಾಲದಲ್ಲಿ ಮನಸ್ಸಿನ ಸ್ವಾಸ್ಥ್ಯ ಯಾರಿಗೂ ಬೇಕಾಗಿಲ್ಲ. ತನ್ನ ಉದ್ಧಾರವೇ ಅಗತ್ಯವಿಲ್ಲದಿರುವಾಗ ಇತರರ ಉದ್ಧಾರದ ಮಾತೆಲ್ಲಿಯದು? ಇಂದು ಬಹುಮಂದಿಯ ಮನಸ್ಸೆಂಬ ಭೂಮಿಯಲ್ಲಿ ಗುಣಗಳಿಗಿಂತ ಅವಗುಣಗಳೇ ಇಡಿಕ್ಕಿರಿದು ತುಂಬಿಕೊಂಡಿರುವಾಗ ತಿಳಿವಳಿಕೆಗಾಗಲೀ ಎಚ್ಚರಗೊಳ್ಳುವುದಕ್ಕಾಗಲೀ ಅವಕಾಶ ಎಲ್ಲಿದೆ? ಮನಸ್ಸಿನ ತುಂಬ ದುರಾಸೆ, ದುರ್ಬುದ್ಧಿ, ದುರಹಂಕಾರ, ಮತ್ಸರ, ಅನ್ಯಾಯ, ಮೋಸ, ಅನಾಚಾರ, ಅನೈತಿಕತೆಗಳೆಂಬ ಕಳೆಗಿಡಗಳೇ ತುಂಬಿಕೊಂಡಿರುವಾಗ ಪರೋಪಕಾರ ಹಾಗಿರಲಿ ಸ್ವಂತ ಉದ್ಧಾರವಾಗದರೂ ಹೇಗೆ ಸಾಧ್ಯ? ಬಸವಣ್ಣನವರ ಮಾತುಗಳು ಅಂದಿಗೂ ಅನ್ವಯವೇನೋ ಹೌದು. ಆದರೆ ಅಂದಿಗಿಂತಲೂ ಇಂದಿಗೆ ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಅನ್ವಯವಾಗುತ್ತವೆ.

೫. ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ

ಸುತ್ತಿಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ

ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ

ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ

ಇರಿಸು ಕೂಡಲಸಂಗಮದೇವ.

ಶಿವಭಕ್ತಿ, ಶಿವಧ್ಯಾನದ ಸಂದರ್ಭಗಳಲ್ಲಿ ಮನಸ್ಸು ಅನ್ಯವಿಷಯಗಳಿಗೆ ಹರಿಯದಂತೆ  ತನ್ನಲ್ಲಿ ಮೂರು ರೀತಿಯ ದೈಹಿಕ ಅಂಗವಿಕಲತೆಯನ್ನು ಉಂಟುಮಾಡಿ ತಡೆಹಿಡಿಯಬೇಕೆಂದು ಬಸವಣ್ಣನವರು ಈ ವಚನದಲ್ಲಿ ಬೇಡಿಕೊಂಡಿದ್ದಾರೆ.

ಮೊದಲನೆಯದು, ಅತ್ತಲಿತ್ತ ಹೋಗದಂತೆ ತನ್ನನ್ನು ಹೆಳವ(ಕುಂಟ)ನನ್ನಾಗಿ ಮಾಡೆಂದು ಬೇಡಿಕೊಳ್ಳುತ್ತಾರೆ. ಕಾಲುಗಳು ಶಕ್ತಿಶಾಲಿಯಾಗಿದ್ದರೆ, ಸಮರ್ಪಕವಾಗಿದ್ದರೆ ಅವು ತನ್ನನ್ನು ಎಲ್ಲೆಂದರಲ್ಲಿ ಕರೆದೊಯ್ಯುತ್ತವೆ. ಸುತ್ತಾಡಿಸುತ್ತವೆ. ದಿನದ ಬಹುಸಮಯ ಸುತ್ತಾಟದಲ್ಲಿಯೇ ಕಳೆದುಹೋಗುತ್ತದೆ.  ಅವು ಶಕ್ತಿಯನ್ನು ಕಳೆದುಕೊಂಡು ತಾನು ಕುಂಟನಾದರೆ ಎಲ್ಲಿಯೂ ಹೋಗಲಾಗದೆ ಇದ್ದಲ್ಲಿಯೇ ಇದ್ದು, ಶಿವಪೂಜೆ, ಶಿವಧ್ಯಾನ, ಶಿವಭಕ್ತಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬಹುದು ಎಂಬುದು ಬಸವಣ್ಣನವರ ಅಭಿಪ್ರಾಯ.

ಎರಡನೆಯದು, ಸುತ್ತಿಸುಳಿದು ನೋಡದಂತೆ ಅಂಧಕ(ಕುರುಡ)ನನ್ನಾಗಿ ಮಾಡೆಂದು ಬೇಡಿಕೊಳ್ಳುತ್ತಾರೆ. ಕಣ್ಣುಗಳು ಸಮರ್ಪಕವಾದ ದೃಷ್ಟಿಶಕ್ತಿಯನ್ನು ಹೊಂದಿದ್ದರೆ ಅವು ಎನೆಲ್ಲವನ್ನು ನೋಡಲು ಹವಣಿಸುತ್ತವೆ. ಹಾಗೆ ನೋಡುವುದರಿಂದ ಮನಸ್ಸು ಚಂಚಲವಾಗಿ ಭಕ್ತಿ ಅಸಾಧ್ಯವಾಗುತ್ತದೆ. ತನ್ನ ದೃಷ್ಟಿಶಕ್ತಿ ಹೊರಟುಹೋಗಿ ತಾನು ಕುರುಡನಾದರೆ ತಾನೇನನ್ನೂ ನೋಡಲಾಗದೆ ಇದ್ದಲ್ಲಿಯೇ ಇದ್ದು ಸುಲಭವಾಗಿ ಭಕ್ತಿ, ಪೂಜೆ, ಧ್ಯಾನಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬಹುದು ಎಂಬುದು ಬಸವಣ್ಣನವರ ಅಭಿಪ್ರಾಯ.

ಮೂರನೆಯದು, ಮನಸ್ಸಿನ ಏಕಾಗ್ರತೆಯನ್ನು ತಪ್ಪಿಸುವ ಕಿವಿಗಳ ಶ್ರವಣಶಕ್ತಿಯನ್ನು ತೆಗೆದುಹಾಕಿ ತನ್ನನ್ನು ಕಿವುಡನನ್ನಾಗಿ ಮಾಡೆಂದು ಬೇಡಿಕೊಳ್ಳುತ್ತಾರೆ. ಮನುಷ್ಯನ ಮನಸ್ಸನ್ನು ಚಂಚಲಗೊಳಿಸುವ ಇಂದ್ರಿಯಗಳಲ್ಲಿ ಕಿವಿ ಕೂಡಾ ಒಂದು. ಅದು ಏನೆಲ್ಲವನ್ನು ಕೇಳಲು ಹವಣಿಸುವುದರಿಂದ ಭಕ್ತಿಯ ತಾದಾತ್ಮ್ಯಕ್ಕೆ ಭಂಗವುಂಟಾಗುತ್ತದೆ. ಶಿವಭಕ್ತಿಗೆ ಅಡ್ಡಿಯಾಗುವ ವಿಚಾರಗಳು ಮನಸ್ಸನ್ನು ಚಂಚಲಗೊಳಿಸುವುದರಿಂದ ತನ್ನನ್ನು ಕಿವುಡನನ್ನಾಗಿ ಮಾಡಿದರೆ ತಾನು ಸಂಪೂರ್ಣವಾಗಿ ಶಿವಭಕ್ತಿಯಲ್ಲಿ ತೊಡಗಿಸಿಕೊಳ್ಳಬಹುದು ಎಂಬುದು ಬಸವಣ್ಣನವರ ಅಭಿಪ್ರಾಯ.

ತನಗೆ ಮೂರು ರೀತಿಯ ಅಂಗವೈಕಲ್ಯವನ್ನು ಒದಗಿಸಿ ಶಿವಶರಣರ ಪಾದವಲ್ಲದೆ ಅವನತಿಗೆ ಕಾರಣವಾಗುವ, ಮನಸ್ಸನ್ನು ಕೆರಳಿಸುವ, ಅಥವಾ ಶಿವಭಕ್ತಿಗೆ ಹೊರತಾದ ಬೇರೆ ವಿಷಯ(ಭೋಗಜೀವನ, ಕಾಮಾಸಕ್ತಿ, ಮೊದಲಾದವು)ಗಳಿಗೆ ಹಾತೊರೆಯದಂತೆ, ಅವುಗಳನ್ನು ಕೇಳದಂತೆ, ಅವುಗಳಿಗೆ ಪೂರಕವಾದ ವಿಷಯಗಳನ್ನು ನೋಡದಂತೆ ಇರಿಸೆಂದು ಬಸವಣ್ಣನವರು ಕೂಡಲಸಂಗಮದೇವನಲ್ಲಿ ಬೇಡಿಕೊಳ್ಳುತ್ತಾರೆ.

ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿಯಾಗಿದ್ದು ಒಂದು ಕಡೆ ಬಿಜ್ಜಳನನ್ನು ಓಲೈಸಬೇಕು, ಇನ್ನೊಂದು ಕಡೆ ಆಸ್ಥಾನದ ಇತರ ಅಧಿಕಾರಿವರ್ಗದವರನ್ನು ಓಲೈಸಬೇಕು. ಶಿವಭಕ್ತನಾಗಿರುವ ತಾನು ಈ ರೀತಿಯಲ್ಲಿ ಸಮಸ್ತರನ್ನು ಓಲೈಸತೊಡಗಿದರೆ  ಶಿವಭಕ್ತರನ್ನು ಆಧರಿಸುವುದಕ್ಕೆ, ಗೌರವಿಸುವುದಕ್ಕೆ,  ಅವುಗಳ ಜೊತೆಜೊತೆಗೆ ಶಿವಭಕ್ತಿ, ಶಿವಧ್ಯಾನ, ಶಿವಪೂಜೆಗಳಲ್ಲಿ ತೊಡಗಿಕೊಳ್ಳುವುದಕ್ಕೆ ಹೇಗೆ ಸಾಧ್ಯ? ತನಗೆ ಒದಗುತ್ತಿರುವ ಈ ಎಲ್ಲಾ ಸಮಸ್ಯೆಗಳಿಗೆ ತನ್ನ ಇಂದ್ರಿಯಗಳು ಹಾಗೂ ಅವುಗಳ ಅಪೇಕ್ಷೆಗಳೇ ಮುಖ್ಯ ಕಾರಣ. ಅವೆಲ್ಲವೂ ತಮ್ಮ ಶಕ್ತಿ, ಸಾಮರ್ಥ್ಯವನ್ನು ಕಳೆದುಕೊಂಡು ತಾನು ಹೆಳವನಾದರೆ, ಅಂಧಕನಾದರೆ, ಕಿವುಡನಾದರೆ ತಾನು ಬೇರೆಲ್ಲಿಗೂ ಹೋಗಲಾಗದು, ಬೇರೇನನ್ನೂ ಕೇಳಲಾಗದು, ಬೇರೇನನ್ನೂ ನೋಡಲಾಗದು. ಹಾಗಾಗಿ ಶರಣರ ಸೇವೆಗೆ, ಆ ಮೂಲಕ ಶಿವನ ಸೇವೆಗೆ ಇದೇ ಸರಿಯಾದ ಮಾರ್ಗವೆಂಬುದು ಬಸವಣ್ಣನವರ ಅಭಿಪ್ರಾಯ. ಅದಕ್ಕಾಗಿಯೇ ಅವರು ಕೂಡಲಸಂಗಮದೇವನಲ್ಲಿ ತನ್ನನ್ನು ಹೆಳವನನ್ನಾಗಿ, ಕುರುಡನನ್ನಾಗಿ ಕಿವುಡನನ್ನಾಗಿ ಮಾಡಿ ಸದಾ ಶಿವಶರಣರ ಪಾದವನ್ನೇ ನೆನೆಸಿಕೊಳ್ಳುವಂತೆ ಅನುಗ್ರಹಿಸು ಎಂದು ಬೇಡಿಕೊಳ್ಳುತ್ತಾರೆ.

ಆಧುನಿಕಕಾಲದಲ್ಲಿ ನಾವಾದರೋ ಭಗವಂತನಲ್ಲಿ ಇಷ್ಟಬಂದಲ್ಲಿ ಓಡಾಡುವುದಕ್ಕೆ, ಇಷ್ಟವಾದುದನ್ನು ನೋಡುವುದಕ್ಕೆ, ಇಷ್ಟವಾದುದನ್ನು ಕೇಳುವುದಕ್ಕೆ, ಇಷ್ಟಬಂದ ರೀತಿಯಲ್ಲಿ ಅನ್ಯವಿಷಯಗಳನ್ನು, ಸುಖ ಸಂತೋಷಗಳನ್ನು ಅನುಭವಿಸಿ ಬದುಕುವುದಕ್ಕೆ ಅವಕಾಶಕಲ್ಪಿಸೆಂದು ಸದಾ ಭಗವಂತನಲ್ಲಿ ಬೇಡಿಕೊಳ್ಳುವ, ಹಾಗೆ ಬೇಡಿದ್ದೆಲ್ಲವೂ ಒದಗಿದಾಗ ಭಗವಂತನನ್ನೇ ಮರೆತು ಮೆರೆಯುವ ಡಾಂಬಿರಾಗಿ ರಾರಾಜಿಸುತ್ತಿದ್ದೇವೆ. ಇಂದು ನಮಗೆ ನಡೆಯುವ, ನೋಡುವ, ಕೇಳುವ ವಿಚಾರಗಳಲ್ಲಿ ಮುಕ್ತತೆಯನ್ನೇ ಬಯಸುವವರೇ ಎಲ್ಲೆಲ್ಲೂ ತುಂಬಿಕೊಂಡಿರುವುದರಿಂದ ಬಸವಣ್ಣನವರ ಮಾತುಗಳು ಭಿನ್ನಭಿನ್ನ ನೆಲೆಗಳಲ್ಲಿ ಇಂದಿಗೂ ನಮ್ಮ ಬದುಕಿಗೆ ಅರ್ಥವತ್ತಾಗಿ ಹೊಂದಿಕೆಯಾಗುತ್ತಿವೆ.

೬. ಇವನಾರವ ಇವನಾರವ ಇವನಾರವನೆಂದಿನಿಸದಿರಯ್ಯ

ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ

ಕೂಡಲಸಂಗಮದೇವಯ್ಯ ನಿಮ್ಮಯ ಮನೆಮಗನೆಂದೆನಿಸಯ್ಯ

ಸಮಾಜದಲ್ಲಿ ಪ್ರತಿಯೊಂದು ಸಂದರ್ಭದಲ್ಲಿ ಇವನು ಯಾರವನು? ಎಂದು ಗುರುತಿಸದೆ ಇವನು ನಮ್ಮವನು ಎಂದು ಗುರುತಿಸುವಂತೆ ಕರುಣಿಸು ಎಂದು ಬಸವಣ್ಣನವರು ಕೂಡಲಸಂಗಮದೇವನಲ್ಲಿ ಬೇಡಿಕೊಳ್ಳುತ್ತಾರೆ.

ಪ್ರತಿಯೊಬ್ಬರನ್ನೂ ಗುರುತಿಸುವ ಸಂದರ್ಭದಲ್ಲಿ ಇವನು ’ಯಾರವನು?’(ಯಾರ ಮಗ?, ಯಾರ ಮೊಮ್ಮಗ?, ಯಾವ ಜಾತಿಗೆ ಸೇರಿದವನು?, ಯಾವ ಮತಕ್ಕೆ ಸೇರಿದವನು? ಯಾವ ಪಂಥಕ್ಕೆ ಸೇರಿದವನು? ಯಾವ ವರ್ಗಕ್ಕೆ ಸೇರಿದವನು?) ಎಂದೆಲ್ಲ ಗುರುತಿಸುವುದು ಸರಿಯಲ್ಲ. ಅದರ ಬದಲು ’ಇವನು ನಮ್ಮವನು’ ಎಂದೂ ನಮ್ಮ ಮನೆಮಗನೆಂದೂ ಗುರುತಿಸಬೇಕು ಎಂಬುದು ಬಸವಣ್ಣನವರ ಅಭಿಪ್ರಾಯ.

ಹನ್ನೆರಡನೆಯ ಸಾಮಾಜಿಕ ಸಂದರ್ಭದಲ್ಲಿ ಜಾತಿಭೇದ, ಮತಭೇದ, ವರ್ಗಭೇದ, ಲಿಂಗಭೇದ, ಅಧಿಕಾರಭೇದ ಮೊದಲಾದವುಗಳ ಮೇಲೆ ಜನರನ್ನು ಗುರುತಿಸುವ ಪರಿಪಾಠವಿತ್ತು. ಬಸವಣ್ಣನವರು ಆ ಕಾಲದಲ್ಲಿ ಜಾತಿ,ಮತ ಭೇದಗಳನ್ನು ತೊಡೆದುಹಾಕಲು ಪ್ರಯತ್ನಿಸಿ ಸಮಾನತೆಯನ್ನು ಸಾರಿದವರು. ಆದರೂ ಜಾತಿ, ಮತಗಳ ಆಧಾರದ ಮೇಲೆ ಜನ ಅನ್ಯರನ್ನು ಗುರುತಿಸುವ ಪ್ರವೃತ್ತಿಯನ್ನು ಬಿಟ್ಟಿರಲಿಲ್ಲವೆಂದು ತೋರುತ್ತದೆ. ಅವರೂ ಮೂಲತಃ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರು. ಬಹುಶಃ ಆ ಬ್ರಾಹ್ಮಣ್ಯವೆಂಬ ಮಮಕಾರ ಅವರಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿತ್ತೆಂದು ತೋರುತ್ತದೆ. ಅವರು ತನ್ನನ್ನೂ ಸೇರಿಸಿಕೊಂಡು ಈ ಮಾತುಗಳನ್ನು ಆಡಿದ್ದಾರೆ.

ಇನ್ನೊಂದು ಕಡೆ, ಇಷ್ಟಲಿಂಗವನ್ನು ಧಾರಣೆಮಾಡಿಕೊಂಡು ಶಿವಭಕ್ತರಾದರೂ ತಮ್ಮ ಮೂಲಭೂತ ವರ್ತನೆ, ಮನೋಭಾವ, ಜಾತೀಯತೆ, ಸ್ವಜನಪಕ್ಷಪಾತಗಳನ್ನು ತ್ಯಜಿಸದೆ ಅನ್ಯ ಶಿವಭಕ್ತರನ್ನು ಜಾತಿ, ಮತ, ವರ್ಗ, ಧರ್ಮ, ಆಸ್ತಿ, ಅಂತಸ್ತು, ಅಧಿಕಾರ ಮೊದಲಾದವುಗಳ ಆಧಾರದ ಮೇಲೆ ಗುರುತಿಸುವುದು ಬಸವಣ್ಣನವರಿಗೆ ಇಷ್ಟವಾಗುತ್ತಿರಲಿಲ್ಲ. ವ್ಯಕ್ತಿಗಳನ್ನು ಅಥವಾ ಶಿವಶರಣರನ್ನು ಆ ರೀತಿಯಲ್ಲಿ ಗುರುತಿಸದೆ ಇವನು ನಮ್ಮವನು ಎಂದೂ ನಮ್ಮ ಮನೆಮಗನೆಂದೂ ಗುರುತಿಸಿದರೆ ಅದು ವ್ಯಕ್ತಿಸುಧಾರಣೆಯ ಹಾಗೂ ಸಮಾಜಸುಧಾರಣೆಯ ಕಾರ್ಯವೆನಿಸಿಕೊಳ್ಳುತ್ತದೆ. ವ್ಯಕ್ತಿ-ವ್ಯಕ್ತಿಗಳೊಳಗೆ ಸಮಾನತೆ ಉಂಟಾಗಿ ಎಲ್ಲರೂ ಕೂಡಲಸಂಗಮದೇವನಿಗೆ ಪ್ರಿಯರಾಗುತ್ತಾರೆ ಎಂಬುದು ಬಸವಣ್ಣನವರ ಅಭಿಪ್ರಾಯ.

ಗುರುತಿಸುವಿಕೆ ಒಂದು ಸಮಾಜದಲ್ಲಿ ಒಂದು ಸಹಜಪ್ರವೃತ್ತಿಯಾದರೂ ಅದು ಸ್ವಾರ್ಥರಹಿತವಾಗಿರಬೇಕು, ಸಹಬಾಳ್ವೆಯನ್ನು ಸಮರ್ಥಿಸಬೇಕು,  ವ್ಯಕ್ತಿಸುಧಾರಣೆಗೆ ಅವಕಾಶವನ್ನು ಕಲ್ಪಿಸಬೇಕು, ಸಮಾಜಸುಧಾರಣೆಗೆ ಪೂರಕವಾಗಬೇಕು ಎಂಬೆಲ್ಲ ಚಿಂತನೆಗಳು ಹನ್ನೆರಡನೆಯ ಶತಮಾನದಲ್ಲಿ ಪ್ರಚಲಿತವಾಗಿದ್ದವು. ಆದರೂ ಅಲ್ಲಲ್ಲಿ ಅದಕ್ಕೆ ವ್ಯತಿರಿಕ್ತವಾದ  ಪ್ರವೃತ್ತಿಗಳು, ಬೆಳವಣಿಗೆಗಳು ಕಾಣಿಸಿಕೊಂಡಾಗ ಬಸವಣ್ಣನವರು ಅದನ್ನು ತಿದ್ದುವುದಕ್ಕೆ ಪ್ರಯತ್ನಿಸಿದರು. ಭಗವಂತನ ದೃಷ್ಟಿಯಲ್ಲಿ ಭಕ್ತರೆಲ್ಲರೂ ಸಮಾನವಾಗಿರುವಾಗ ಭಕ್ತರೊಳಗೆ ಈ ರೀತಿಯ ಭೇದಭಾವಗಳು ಏಕೆ? ಅವುಗಳಿಂದ ಸಾಧಿತವಾಗುವುದಾದರೂ ಏನು? ಎಂಬುದು ಬಸವಣ್ಣನವರ ಪ್ರಶ್ನೆ.

ಇಂದು ಆಧುನಿಕಕಾಲದಲ್ಲಿ ಗುರುತಿಸುವಿಕೆ ಹತ್ತು ಹಲವು ರೀತಿಗಳಲ್ಲಿ ನಡೆಯುತ್ತಿದೆ. ಇವನಾರವ? ಎಂದರೆ ಇವನು ಯಾರ ಮಗ? ಯಾವ ಜಾತಿಯವನು? ಯಾವ ಮತದವನು? ಯಾವ ಪಂಥದವನು? ಯಾವ ಧರ್ಮದವನು? ಯಾವ ಸಿದ್ಧಾಂತದವನು? ಯಾವ ಸ್ಥಿತಿಯಲ್ಲಿರುವವನು? ಯಾವ ಪಕ್ಷದವನು? ಯಾವ ಅಧಿಕಾರದಲ್ಲಿರುವವನು? ಮೊದಲಾದ ರೀತಿಗಳಲ್ಲಿ ಪ್ರತಿಯೊಬ್ಬರನ್ನೂ ಗುರುತಿಸುವ ಪ್ರವೃತ್ತಿ ಬೆಳೆಯುತ್ತಲೇ ಇದೆ. ಆದರೆ ಯಾರೊಬ್ಬರೂ ಜಾತಿ, ಮತ, ಪಂಥ, ಧರ್ಮ ಮೊದಲಾದವುಗಳನ್ನು ಮೀರಿ, ಇವನು ನಮ್ಮವನು ಎಂದು ಗುರುತಿಸುವ ಪ್ರವೃತ್ತಿಯನ್ನು ಬಹುಶಃ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ ಎಂದೆನಿಸುತ್ತದೆ.

೭.  ಸಗಣಿಯ ಬೆನಕನ ಮಾಡಿ ಸಂಪಗೆಯರಳಲ್ಲಿ

ಪೂಜಿಸಿದರೆ ರಂಜನೆಯಲ್ಲದೆ ಅದರ ಗಂಜಳ ಬಿಡದಣ್ಣ!

ಮಣ್ಣ ಪ್ರತಿಮೆಯ ಮಾಡಿ ಮಜ್ಜನಕ್ಕೆರೆದರೆ

ನಿಚ್ಚ ಕೆಸರಹುದಲ್ಲದೆ ಅದರಚ್ಚಿಗ ಬಿಡದಣ್ಣ!

ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟರೆ

ಆ ಕೆಟ್ಟವನೇಕೆ ಶಿವಭಕ್ತನಹನು ಕೂಡಲಸಂಗಮದೇವ?

ಈಗಾಗಲೇ ಕೆಟ್ಟುಹೋದ ಮನುಷ್ಯನಿಗೆ ಶಿವದೀಕ್ಷೆಯನ್ನು ಕೊಟ್ಟರೂ ಆತನಲ್ಲಿ ಯಾವುದೇ ಸುಧಾರಣೆ ಸಾಧ್ಯವಿಲ್ಲ ಎಂಬುದನ್ನು ಬಸವಣ್ಣನವರು ಎರಡು ದೃಷ್ಟಾಂತಗಳ ಮೂಲಕ ಈ ವಚನದಲ್ಲಿ ವಿವರಿಸಿದ್ದಾರೆ.

ಮೊದಲನೆಯದು, ಸೆಗಣಿಯಿಂದ ಬೆನಕ(ಗಣಪತಿ)ನ ವಿಗ್ರಹವನ್ನು ಮಾಡಿ ಅದರ ದುರ್ವಾಸನೆಯನ್ನು ಹೋಗಲಾಡಿಸಲು ಅತ್ಯಂತ ಪರಿಮಳಯುಕ್ತವಾದ ಸಂಪಗೆ ಹೂಗಳಿಂದ ಅಲಂಕರಿಸಿ ಪೂಜಿಸಿದರೆ ಅದೊಂದು ರೀತಿಯ ರಂಜನೆ ಎನಿಸಿಕೊಳ್ಳುತ್ತದೆಯೇ ವಿನಾ ಸಂಪಗೆ ಹೂಗಳ ಪರಿಮಳ ಸೆಗಣಿಯ ದುರ್ವಾಸನೆಯನ್ನು ನಾಶಮಾಡಲಾರದು.

ಎರಡನೆಯದು, ಮಣ್ಣಿನ ಮೂರ್ತಿಯೊಂದನ್ನು ಮಾಡಿ ಅದಕ್ಕೆ ದಿನಾ ನೀರನ್ನೆರೆದು ಅಭಿಷೇಕ ಮಾಡಿದರೆ ಆ ಮೂರ್ತಿ ದಿನಾ ಕರಗಿ ಕೆಸರಾಗುತ್ತದೆಯೇ ವಿನಾ ನೀರಿನಿಂದ ಇನ್ನಷ್ಟು ಗಟ್ಟಿಯಾಗಲಾರದು. ಅಲ್ಲದೆ ಮೂರ್ತಿಯ ರೂಪದಲ್ಲಿದ್ದೇನೆ ಎಂದುಕೊಂಡು ಅದು ತನ್ನ ಕರಗುವ ಸಹಜಗುಣವನ್ನು ಬಿಟ್ಟುಬಿಡಲಾರದು.

ಲೋಕದ ಮನುಷ್ಯರಿಗೆಲ್ಲ ಶಿವದೀಕ್ಷೆಯನ್ನು ಕೊಡತೊಡಗಿದರೆ  ಈಗಾಗಲೇ ಕೆಟ್ಟುಹೋಗಿರುವ ವ್ಯಕ್ತಿ ಶಿವದೀಕ್ಷೆಯನ್ನು ಪಡೆದರೂ ಹೇಗೆ ಸದ್ಭಕ್ತನಾಗಬಲ್ಲ? ಏಕೆಂದರೆ ಸೆಗಣಿ ಹಾಗೂ ಮಣ್ಣುಗಳೆರಡೂ ತಮ್ಮ ಸಹಜಗುಣಗಳನ್ನು ಹೇಗೆ ಬಿಟ್ಟುಬಿಡಲಾರವೋ  ಹಾಗೆಯೇ ಕೆಡುಕಿಗೆ ಮಾರುಹೋಗಿ ಅದನ್ನೇ ನೆಚ್ಚಿಕೊಂಡಿರುವ ವ್ಯಕ್ತಿ ತನ್ನ ಸಹಜಗುಣಗಳನ್ನು, ಸ್ವಭಾವಗಳನ್ನು, ವ್ಯಸನಗಳನ್ನು ಬಿಟ್ಟುಬಿಡುವುದಕ್ಕೆ ಹೇಗೆ ಸಾಧ್ಯವಾದೀತು? ಎಂಬುದು ಬಸವಣ್ಣನವರ ಪ್ರಶ್ನೆ. ಮನುಷ್ಯನೇ ಸ್ವತಃ ತನ್ನ ಸ್ವಭಾವ ಹಾಗೂ ಪ್ರವೃತ್ತಿಗಳಲ್ಲಿ ಸುಧಾರಣೆಗಳನ್ನು ತರಬೇಕಲ್ಲದೆ, ಇನ್ನಾವುದೋ ಧಾರ್ಮಿಕ ಆಚರಣೆಯಿಂದ, ಪೂಜೆ-ಪುರಸ್ಕಾರಗಳಿಂದ,  ಲಿಂಗಧಾರಣೆಯಿಂದ ಸಾಧ್ಯವಿಲ್ಲ. ಹಾಗೆಯೇ ಆತ್ಮವಿಮರ್ಶೆಮಾಡಿಕೊಳ್ಳದೆ ವ್ಯಕ್ತಿಸುಧಾರಣೆಯೂ ಸಾಧ್ಯವಿಲ್ಲ ಎಂಬುದನ್ನು ಬಸವಣ್ಣನವರು ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ.

ಬಹುಶಃ ಬಸವಣ್ಣನವರ ಕಾಲದಲ್ಲಿ ವ್ಯಕ್ತಿಯೊಬ್ಬ ದಾರಿತಪ್ಪಿಹೋದಾಗ, ಸಾಮಾಜಿಕವಾಗಿ ಕೆಟ್ಟುಹೋದಾಗ, ಸಾಂಸಾರಿಕವಾಗಿ ಅಧರ್ಮದ ಹಾದಿಹಿಡಿದಾಗ ಅಂತಹವನನ್ನು ಸರಿದಾರಿಗೆ ತರಲು ಶಿವದೀಕ್ಷೆಯನ್ನು ಕೊಡುವ ಪರಿಪಾಠವನ್ನು ಇಟ್ಟುಕೊಂಡಿದ್ದರೆಂದು ತೋರುತ್ತದೆ. ವ್ಯಕ್ತಿಯೊಬ್ಬ ಈಗಾಗಲೇ ಕೆಟ್ಟುಹೋಗಿರುವಾಗ ಅವನಿಗೆ ಕೊಡುವ ಶಿವದೀಕ್ಷೆಯಿಂದ ಆತನನ್ನು ಸರಿದಾರಿಗೆ ಕರೆತರುವುದಕ್ಕೆ ಹೇಗೆ ಸಾಧ್ಯವಾದೀತು? ಇದು ಬಸವಣ್ಣನವರು ಕೇಳುವ ಪ್ರಶ್ನೆ.ಇವೆಲ್ಲವೂ ವ್ಯರ್ಥಕಾರ್ಯಗಳು ಎಂಬುದನ್ನು ಸೆಗಣೀಯ ಬೆನಕನ ಹಾಗೂ ಮಣ್ಣಪ್ರತಿಮೆಯ ದೃಷ್ಟಾಂತಗಳ ಮೂಲಕ ಬಸವಣ್ಣನವರು ವಿವರಿಸಿದ್ದಾರೆ.

ಆಧುನಿಕಕಾಲದಲ್ಲಿಯೂ ದಾರಿತಪ್ಪಿದವರನ್ನು, ಮಾತುಕೇಳದವರನ್ನು, ಹಠಮಾರಿಗಳಾದವರನ್ನು, ಘಾತುಕತನವನ್ನು ಮೈಗೂಡಿಸಿಕೊಂಡವರನ್ನು ಸರಿದಾರಿಗೆ ತರಲು  ಇಂತಹ ಹತ್ತು ಹಲವು ಪ್ರಯತ್ನಗಳು ನಡೆಯುತ್ತಲೇ ಇವೆ. ಯುವಕ-ಯುವತಿಯರು ದಾರಿತಪ್ಪಿದ್ದಾರೆ ಎಂದುಕೊಂಡು ಅವರಿಗೆ ನೆಂಟಸ್ತಿಕೆಯನ್ನು ನೋಡಿ ಮದುವೆಮಾಡುವುದು; ಕುಡಿತಕ್ಕೆ ಬಲಿಯಾಗಿರುವವರನ್ನು ಸರಿದಾರಿಗೆ ತರುವುದಕ್ಕೆ  ಬೇರೆಬೇರೆ ರೀತಿಯ ಹರಕೆಗಳನ್ನು, ಧಾರ್ಮಿಕಕಾರ್ಯಗಳನ್ನು ಕೈಗೊಳ್ಳುವುದು-ಇವೆಲ್ಲವೂ ಕೆಟ್ಟವನಿಗೆ ಕೊಡುವ ಶಿವದೀಕ್ಷೆಯಂತಹ ಆಚರಣೆಗಳು. ಆಯಾ ವ್ಯಕ್ತಿಗಳಲ್ಲಿ ಆತ್ಮವಿಮರ್ಶೆಯ ಮೂಲಕ ವೈಯಕ್ತಿಕ ಬದಲಾವಣೆಗಳಾದರೆ ತೊಂದರೆಯಿಲ್ಲ. ಇಲ್ಲದಿದ್ದರೆ ಅಂತಹವರನ್ನು ಮದುವೆಯಾದ ಯುವಕ, ಯುವತಿಯರ ಬಾಳು ನಾಶವಾಗಲಾರದೆ? ಯಾರನ್ನೋ ಸರಿದಾರಿಗೆ ತರಲು ಪ್ರಯತ್ನಿಸಿ ಇನ್ಯಾರನ್ನೋ ದಾರಿತಪ್ಪಿಸಿದ ಹಾಗಾಗಲಿಲ್ಲವೇ? ನೂರಾರು ಬಾರಿ ಯೋಚಿಸಬೇಕಾದ ವಿಚಾರ.

೮. ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?

ಹೊಸ್ತಿಲಲ್ಲಿ ಹುಲ್ಲುಹುಟ್ಟಿ ಮನೆಯೊಳಗೆ ರಜ ತುಂಬಿ

ಮನೆಯೊಳಗೆ ಮನೆಯೊಡೆಯನಿಲ್ಲ!

ತನುವಿನಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ

ಮನೆಯೊಳಗೆ ಮನೆಯೊಡೆಯನಿಲ್ಲ!

ಕೂಡಲಸಂಗಮದೇವ

ಬಸವಣ್ಣನವರು ಈ ವಚನದಲ್ಲಿ ಮನೆ ಹಾಗೂ ಮನಗಳ ನಡುವಿನ ಸಮಾನತೆ, ಹಾಗೂ ಸಂಬಂಧಗಳನ್ನು ವಿಶಿಷ್ಟರೀತಿಯಲ್ಲಿ ವಿವರಿಸಿದ್ದಾರೆ. ವಚನದ ಮೊದಲ ಭಾಗದಲ್ಲಿ ಬರುವ ’ಮನೆ’ ಎಂಬುದು ಎರಡನೆಯ ಭಾಗದಲ್ಲಿ ’ಮನ’ವಾಗಿ ಪರಿವರ್ತಿತವಾಗುತ್ತದೆ. ಮನುಷ್ಯನ ಪರಿಪೂರ್ಣ ಹಾಗೂ ಅರ್ಥಪೂರ್ಣ ಬದುಕಿಗೆ ಮನೆ ಹಾಗೂ ಮನಗಳೆರಡೂ ಸಮರ್ಪಕವಾಗಿರಬೇಕೆಂಬುದನ್ನು ಬಸವಣ್ಣನವರು ಈ ವಚನದಲ್ಲಿ  ಅರ್ಥಪೂರ್ಣವಾಗಿ ವಿವರಿಸಿದ್ದಾರೆ.

ಈ ವಚನ ’ಮನೆಯೊಳಗೆ ಮನೊಯೊಡೆಯ ಇದ್ದಾನೋ ಇಲ್ಲವೋ?’ ಎಂಬ ಪ್ರಶ್ನೆಯೊಂದಿಗೆ ಆರಂಭವಾಗುತ್ತದೆ. ಈ ಪ್ರಶ್ನೆ ಏಕೆ ಮೂಡಿದೆ ಎಂದರೆ ಮನೆಯ ಹೊಸ್ತಿಲಲ್ಲಿ ಹುಲ್ಲು ಹುಟ್ಟಿಕೊಂಡಿದೆ. ಮನೆಯೊಳಗೆ ಧೂಳು ತುಂಬಿಕೊಂಡಿದೆ. ಮನೆಯ ಒಳಹೊರಗು ಸ್ವಚ್ಛವಾಗಿಲ್ಲ. ಹಾಗಾಗಿ ಮನೆಯೊಳಗೆ ಮನೆಯೊಡೆಯ ವಾಸವಾಗಿಲ್ಲ ಎಂಬ ತೀರ್ಮಾನಕ್ಕೆ ಬರಬಹುದು. ಸಾಮಾನ್ಯವಾಗಿ ಮನೆಯೊಳಗೆ ವಾಸವಿರುವವರು ಯಾವ ಕಸಕಡ್ಡಿಗಳು ಬಿದ್ದುಕೊಂಡಿರದಂತೆ, ಮನೆಯ ಸುತ್ತಮುತ್ತ ಹುಲ್ಲು, ಕಳೆಗಿಡಗಳು ಹುಟ್ಟಿಕೊಂಡಿರದಂತೆ ಎಲ್ಲವನ್ನು ಕಿತ್ತು ಸ್ವಚ್ಛಗೊಳಿಸಿರುತ್ತಾರೆ. ಮನೆಯೊಳಗೂ ಧೂಳನ್ನು ಗುಡಿಸಿ, ನೆಲವನ್ನು ಒರೆಸಿ ಸ್ವಚ್ಛಗೊಳಿಸಿರುತ್ತಾರೆ. ಇಲ್ಲಿ ಮನೆಯ ಓರಣದ ಚಿಂತೆಯ ಜೊತೆಗೆ ವಾಸಿಸುವ ಜನರ ಆರೋಗ್ಯದ ಚಿಂತೆಯೂ ಇರುತ್ತದೆ.

ವಚನದ ಮೊದಲ ಭಾಗದ ಮನೆ ಎಂಬುದು ಎರಡನೆಯ ಭಾಗದಲ್ಲಿ ಮನವಾಗಿದೆ. ಇಲ್ಲಿ ಮನೆಯ ಹೊರಗಿನ ಭಾಗ ದೇಹವೆನಿಸಿಕೊಂಡರೆ, ಮನೆಯ ಒಳಗಿನ ಭಾಗ ಮನವೆನಿಸಿಕೊಳ್ಳುತ್ತದೆ. ದೇಹದೊಳಗೆ ಸುಳ್ಳು ತುಂಬಿಕೊಂಡಿದೆ, ಮನದೊಳಗೆ ಕಾಮಾಸಕ್ತಿ ತುಂಬಿಕೊಂಡಿದೆ. ಹಾಗಾಗಿ ದೇಹವೆಂಬ ಮನೆಯೊಳಗೆ ಮನೆಯೊಡೆಯನಿಲ್ಲ ಎಂಬುದು ಖಾತ್ರಿಯಾಗುತ್ತದೆ. ಸ್ವಸ್ಥಮನಸ್ಸು ಭಗವಂತ ನೆಲೆಸುತ್ತಾನೆ. ಆದರೆ ಅಸ್ವಸ್ಥ ಮನಸ್ಸಿನೊಳಗೆ ಭಗವಂತನೂ ನೆಲೆಸಲಾರ ಎಂಬುದು ಈ ವಚನದಿಂದ ಸ್ಪಷ್ಟವಾಗುತ್ತದೆ.

ಬಸವಣ್ಣನವರು ಈ ವಚನದಲ್ಲಿ ಮನೆ ಮತ್ತು ಮನಗಳ ನಡುವೆ ಅಭೇದವನ್ನು ಕಲ್ಪಿಸಿಕೊಂಡಿದ್ದಾರೆ. ನಾವು ವಾಸಮಾಡುವ ಮನೆಯನ್ನು ಹಾಗೂ ಅದರ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಡುತ್ತೇವೆ. ಏಕೆಂದರೆ ಮನೆ ನಮ್ಮನ್ನು ರಕ್ಷಿಸುವಂತಹುದು. ಹಾಗೆಯೇ ದೇಹ ಹಾಗೂ ಮನಗಳನ್ನು ಸ್ವಚ್ಛವಾಗಿಡಬೇಕು. ಏಕೆಂದರೆ ಅದು ಮನುಷ್ಯನ ಬದುಕನ್ನು ರಕ್ಷಿಸುವಂತಹುದು ಎಂಬುದು ಸ್ಪಷ್ಟವಾಗುತ್ತದೆ.

ಹುಲ್ಲು, ಕಸ,ಕಡ್ಡಿ, ಧೂಳು ಮೊದಲಾದವು ಒಂದು ಮನೆಯ ಅಂದವನ್ನು ಮಾತ್ರ ನಾಶಮಾಡದೆ ಕ್ರಮೇಣ ಮನೆಯನ್ನು ನಾಶಮಾಡುತ್ತವೆ. ಹಾಗಾಗಿ ಅದರ ಸುರಕ್ಷತೆ ನಮ್ಮ ಕರ್ತವ್ಯ. ಮನೆಯಲ್ಲಿ ವಾಸವಾಗಿರುವ ವ್ಯಕ್ತಿ ತನ್ನ ಮನೆಯನ್ನು ಪ್ರೀತಿಯಿಂದ, ಗೌರವದಿಂದ ಕಂಡಾಗ, ಅದನ್ನು ಸ್ವಚ್ಛವಾಗಿಡಬೇಕು ಎಂದು ಅರಿತಾಗ ಮಾತ್ರ ಮನೆಗೊಂದು ಮಹತ್ವ ಪ್ರಾಪ್ತವಾಗುತ್ತದೆ. ಹಾಗೆಯೇ ವ್ಯಕ್ತಿಯೊಬ್ಬ ತನ್ನ ದೇಹ ಹಾಗೂ ಮನಸ್ಸುಗಳಲ್ಲಿ ನೆಲೆಸಿರುವ ಸುಳ್ಳು, ಭೋಗಾಭಿಲಾಷೆಗಳನ್ನು ಕಳೆದುಕೊಂಡು ದೇಹ ಹಾಗೂ ಮನಸ್ಸುಗಳೆರಡನ್ನೂ  ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದು ಅರಿತುಕೊಂಡರೆ ಮಾತ್ರ ಆತನ ಬದುಕಿಗೊಂಡು ಅರ್ಥ, ಸಾರ್ಥಕ್ಯಗಳು ಲಭಿಸುತ್ತವೆ ಎಂಬುದನ್ನು ಬಸವಣ್ಣನವರು ಈ ವಚನದ ಮೂಲಕ ಸ್ಪಷ್ಟಪಡಿಸಿದ್ದಾರೆ.

ಲೋಕದಲ್ಲಿ ಎಷ್ಟೋ ಮಂದಿ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು ಬಗೆಬಗೆಯಿಂದ ಅಲಂಕರಿಸಿಕೊಂಡು ಮೆರೆಯುತ್ತಾರೆ. ಆದರೆ ಅವರ ಮನಸ್ಸು, ಆಚಾರ-ವಿಚಾರಗಳು ಅತ್ಯಂತ ಕೊಳಕಾಗಿದ್ದು ಇತರರಿಗೆ ಅಸಹ್ಯಹುಟ್ಟಿಸುವಂತಿದ್ದರೆ ಏನು ಪ್ರಯೋಜನ? ಬದುಕಿಗೇನು ಸಾರ್ಥಕ್ಯ? ಇನ್ನು ಕೆಲವರು ಸ್ವಚ್ಛತೆಯ ಕಡೆಗೆ ಎಳ್ಳಷ್ಟೂ ಗಮನವನ್ನು ಕೊಡದೆ ಮನೆಯನ್ನು ಅಸ್ತವ್ಯಸ್ತಗೊಳಿಸಿ ಅದರಲ್ಲಿಯೇ ವಾಸಮಾಡುತ್ತ ಇತರರಿಗೆ ಅಸಹ್ಯಹುಟ್ಟಿಸುವಂತಿದ್ದರೆ ಬದುಕಿಗೇನು ಸಾರ್ಥಕ್ಯ? ಹಾಗಾಗಿ ಮನೆಯ ಒಳಹೊರಗು ಶುದ್ಧವಾಗಿರುವಂತೆ ದೇಹದ ಒಳಹೊರಗೂ ಶುದ್ಧವಾಗಿರಬೇಕು. ಅಂತಹ ಮನೆ, ಮನಗಳು ಕೂಡಲಸಂಗಮದೇವನಿಗೂ ಪ್ರಿಯವಾಗುತ್ತದೆ ಎಂಬುದು ಬಸವಣ್ಣನವರ ಅಭಿಪ್ರಾಯ.

೯. ಲೋಕದ ಡೊಂಕ ನೀವೇಕೆ ತಿದ್ದುವಿರಿ?

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ

ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ

ನೆರೆಮನೆಯ ದುಃಖಕ್ಕೆ ಅಳುವರ ಮೆಚ್ಚ

ನಮ್ಮ ಕೂಡಲಸಂಗಮದೇವ

ಲೋಕದಲ್ಲಿ ನಾವು ಬೇರೆಯವರನ್ನು ತಿದ್ದುವುದಕ್ಕಿಂತ ಮೊದಲು ನಮ್ಮನ್ನು ನಾವು ತಿದ್ದಿಕೊಳ್ಳಬೇಕು ಎಂಬುದನ್ನು ಬಸವಣ್ಣನವರು ಈ ವಚನದಲ್ಲಿ ವಿವರಿಸಿದ್ದಾರೆ.

ಬಸವಣ್ಣನವರು ಈ ವಚನದಲ್ಲಿ ಲೋಕವನ್ನು ತಿದ್ದುವುದಕ್ಕೆ ಎರಡು ಶರತ್ತುಗಳನ್ನು ವಿಧಿಸಿದ್ದಾರೆ. ಮೊದಲನೆಯದು, ಅನ್ಯರನ್ನು ತಿದ್ದಬಯಸುವ ಪ್ರತಿಯೊಬ್ಬರೂ ಮೊದಲು ತಮ್ಮ ತಮ್ಮ ದೇಹವನ್ನು ತಿದ್ದಿಕೊಳ್ಳಬೇಕು. ಹಾಗೆ ತಿದ್ದಿಕೊಂಡಾದ ಮೇಲೆ ಲೋಕದ ಜನರನ್ನು ತಿದ್ದಬಹುದು. ಎರಡನೆಯದು, ಅನ್ಯರನ್ನು ತಿದ್ದಬಯಸುವ ಪ್ರತಿಯೊಬ್ಬರೂ ಮೊದಲು ತಮ್ಮ ತಮ್ಮ ಮನವನ್ನು ತಿದ್ದಿಕೊಳ್ಳಬೇಕು. ಹಾಗೆ ಮನಸ್ಸನ್ನು ತಿದ್ದಿಕೊಂಡಾದ ಮೇಲೆ ಅನ್ಯರನ್ನು ತಿದ್ದಬಹುದು. ಹೀಗೆ ಮನುಷ್ಯ ತನ್ನ ದೇಹ ಹಾಗೂ ಮನಸ್ಸುಗಳನ್ನು ಮೊದಲು ತಿದ್ದಿಕೊಳ್ಳದೆ ಅನ್ಯರ ದುಃಖಕ್ಕೆ ಅಳತೊಡಗಿದರೆ ಭಗವಂತನೂ ಮೆಚ್ಚಲಾರ ಎಂದು ಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ.

ಮನುಷ್ಯ ತನ್ನ ಬದುಕಿನುದ್ದಕ್ಕೂ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪುಗಳನ್ನು ಮಾಡುತ್ತಾನೆ. ಎಷ್ಟೋ ಮಂದಿ ಮಾಡಿದ ತಪ್ಪುಗಳನ್ನು ಅರಿತು ತಿದ್ದಿಕೊಳ್ಳುತ್ತಾರೆ. ಆದರೆ ಬಹುತೇಕ ಮಂದಿ ತಮ್ಮನ್ನು ತಾವು ತಿದ್ದಿಕೊಳ್ಳದೆ ಅನ್ಯರ ತಪ್ಪನ್ನು ತಿದ್ದುವುದಕ್ಕೆ ಪ್ರಯತ್ನಿಸುತ್ತಾರೆ. ಬಸವಣ್ಣನವರು ಮನುಷ್ಯನ ಈ ಪ್ರವೃತ್ತಿಯನ್ನು ಖಂಡಿಸಿದ್ದಾರೆ. ಮೊದಲು ನಮ್ಮನ್ನು ನಾವು ತಿದ್ದಿಕೊಳ್ಳದೆ ಅನ್ಯರನ್ನು ತಿದ್ದುವ ನೈತಿಕಹಕ್ಕು ನಮಗೆ ದೊರೆಯುವುದಿಲ್ಲ. ಹಾಗಾಗಿ ಮೊದಲು ನಮ್ಮ ದೇಹವನ್ನು ಅನಂತರ ನಮ್ಮ ಮನಸ್ಸನ್ನು ತಿದ್ದಿಕೊಳ್ಳಬೇಕು. ಹಾಗೆ ನಮ್ಮನ್ನು ನಾವು ತಿದ್ದಿಕೊಂಡಾಗ ಮಾತ್ರ ನಮಗೆ ಅನ್ಯರ ತಪ್ಪನ್ನು ಅವರಿಗೆ ತಿಳಿಯಪಡಿಸುವ, ಅವರನ್ನು ಸರಿದಾರಿಗೆ ತರುವ ನೈತಿಕಹಕ್ಕು ಪ್ರಾಪ್ತವಾಗುತ್ತದೆ. ಈ ಹಕ್ಕನ್ನು ಪಡೆಯದೆ ಅನ್ಯರನ್ನು ತಿದ್ದುವ ಪ್ರಯತ್ನ ಅರ್ಥಹೀನ ಎಂಬುದು ಬಸವಣ್ಣನವರ ಅಭಿಪ್ರಾಯ.

ಬಸವಣ್ಣನವರ ಕಾಲದಲ್ಲಿ ಎಷ್ಟೋ ಮಂದಿ ತಮ್ಮನ್ನು ತಾವು ತಿದ್ದಿಕೊಳ್ಳದೆ ಅನ್ಯರನ್ನು ತಿದ್ದುವುದಕ್ಕೆ ಪ್ರಯತ್ನಿಸುವುದಕ್ಕೆ ಹಾತೊರೆಯುತ್ತಿದ್ದರೆಂದು ತೋರುತ್ತದೆ. ಇಂದಂತೂ ಅಂತಹವರು ಲಕ್ಷ, ಕೋಟಿಸಂಖ್ಯೆಯಲ್ಲಿದ್ದು, ಅನ್ಯರನ್ನು ತಿದ್ದುವ ಚಾಳಿ ಮಿತಿಮೀರುತ್ತಿದೆ. ಎಷ್ಟೋ ಮಂದಿ ತಮ್ಮ ಮನೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸದೆ ಅನ್ಯರ ಮನೆಗಳಲ್ಲಿನ ಸಮಸ್ಯೆಗಳನ್ನು ಸರಿಪಡಿಸುವುದಕ್ಕೆ ಪ್ರಯತ್ನಿಸುತ್ತಾರೆ. ತಾವು ಮಹಾಪ್ರಾಜ್ಞರು ಎಂದು ಮೆರೆಯುತ್ತಾರೆ. ತಮ್ಮ ಮನಸ್ಸಿನಲ್ಲಿ ಒಂದಷ್ಟು ಕೊಳಕು ಹಾಗೂ ಕೀಳು ಭಾವನೆಗಳನ್ನು ಇರಿಸಿಕೊಂಡು ಅನ್ಯರ ಗುಣನಡತೆಗಳನ್ನು ತಿದ್ದಲು ಪ್ರಯತ್ನಿಸುತ್ತಾರೆ. ತಮ್ಮ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಅವುಗಳಿಗೆ ಸ್ಪಂದಿಸದೆ ಅನ್ಯರ ಮನೆಯಲ್ಲಿನ ದುಃಖಕ್ಕೆ ಸ್ಪಂದಿಸುತ್ತಾರೆ. ಮನುಷ್ಯರಲ್ಲಿನ ಈ ನೀಚಪ್ರವೃತ್ತಿಯಿಂದಾಗಿಯೇ ಎಷ್ಟೋ ಮಂದಿ ತಮ್ಮ ಅಲ್ಪಸ್ವಲ್ಪ ನೆಮ್ಮದಿಯನ್ನೂ ಕಳೆದುಕೊಳ್ಳುತ್ತಾರೆ. ಅನ್ಯರ ನೆಮ್ಮದಿಯನ್ನೂ ಕೆಡಿಸುತ್ತಾರೆ. ಬಸವಣ್ಣನವರ ಮಾತುಗಳು ಅಂದಿಗೆ ಮಾತ್ರವಲ್ಲ ಅದಕ್ಕಿಂತಲೂ ಹೆಚ್ಚಾಗಿ ಇಂದಿಗೆ ಅನ್ವಯವಾಗುತ್ತವೆ.

೧೦. ಹಬ್ಬಕ್ಕೆ ತಂದ ಹರಕೆಯ ಕುರಿ

ತೋರಣಕ್ಕೆ ತಂದ ತಳಿರ ಮೇಯಿತ್ತು

ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ ಹೋಯಿತ್ತು!

ಅದಂದೆ ಹುಟ್ಟಿತ್ತು, ಅದಂದೆ ಹೊಂದಿತ್ತು

ಕೊಂದವರುಳಿದರೆ ಕೂಡಲಸಂಗಮದೇವ?

ಮನುಷ್ಯನಲ್ಲಿನ ಅತಿಯಾದ ಜೀವದಾಸೆಯನ್ನೂ ಅದನ್ನು ನೆರವೇರಿಸಿ ಕೊಳ್ಳುವುದಕ್ಕೆ ಅವನು ಕೈಗೊಳ್ಳುವ ನೀತಿಗೆಟ್ಟ ಆಚರಣೆಗಳನ್ನು ಈ ವಚನದಲ್ಲಿ ಒಂದು ದೃಷ್ಟಾಂತದ ಮೂಲಕ ಸ್ಪಷ್ಟಪಡಿಸಿದ್ದಾರೆ.

ಹಬ್ಬದಲ್ಲಿ ಬಲಿಕೊಡಲೆಂದು ತಂದು ಚಪ್ಪರದ ಕಂಬಕ್ಕೆ ಕಟ್ಟಿಹಾಕಿದ ಹರಕೆಯ ಕುರಿ ಇನ್ನು ಕೆಲವೇ ಹೊತ್ತಿನಲ್ಲಿ ತನ್ನನ್ನು ಬಲಿಕೊಡುತ್ತಾರೆ ಎಂಬುದನ್ನು ಅರಿತುಕೊಳ್ಳದೆ ತೋರಣಕ್ಕೆ ತಂದು ಹಾಕಿದ ತಳಿರನ್ನು ಮೇಯುತ್ತದೆ. ಅದು ತನ್ನ ಹೊಟ್ಟೆಯ ಹಸಿವನ್ನು ತಣಿಸುವುದಕ್ಕಾಗಿ ತೋರಣದ ತಳಿರನ್ನು ತಿನ್ನುತ್ತದೆ. ತನ್ನ ಸಾವು ಸನ್ನಿಹಿತವಾಗಿದೆ ಎಂಬುದು ಅದಕ್ಕೆ ತಿಳಿದಿಲ್ಲ. ಕೆಲವೇ ದಿನಗಳ ಹಿಂದೆ ಹುಟ್ಟಿದ ಕುರಿ ಕೆಲವೇ ದಿನಗಳೊಳಗೆ ಮನುಷ್ಯನ ಸ್ವಾರ್ಥಕ್ಕೆ ಬಲಿಯಾಯಿತು. ಆದರೆ ಬಲಿಕೊಟ್ಟವರು ಶಾಶ್ವತವಾಗಿ ಬದುಕಿ ಉಳಿದರೇ? ಎಂದು ಬಸವಣ್ಣನವರು ಪ್ರಶ್ನಿಸುತ್ತಾರೆ. ಅವರ ಕಾಲದಲ್ಲಿಯೂ ಪ್ರಾಣಿಬಲಿಯಂತಹ ಅಮಾನುಷ ಪ್ರವೃತ್ತಿಗಳು ಸಮಾಜದ ಅಸಮತೋಲನಕ್ಕೆ ಕಾರಣವಾಗಿದ್ದವು ಎನಿಸುತ್ತದೆ. ಅದಕ್ಕಾಗಿಯೇ ಬಸವಣ್ಣನವರು ಅದನ್ನು ನೇರವಾದ ಮಾತುಗಳಲ್ಲಿ ಖಂಡಿಸಿದ್ದಾರೆ.

ಮನುಷ್ಯ ತಾನು ಚೆನ್ನಾಗಿ ಬದುಕಬೇಕೆಂದು ಆಶಿಸುವುದಾದರೆ, ತನ್ನಂತೆಯೇ ಇರುವ ಈ ಭೂಮಿಯ ಮೇಲಿನ ಜೀವಸಂಕುಲವನ್ನು ಬದುಕುವುದಕ್ಕೆ ಅವಕಾಶ ಮಾಡಿಕೊಡಬೇಕು. ತನ್ನ ಸ್ವಾರ್ಥಕ್ಕೆ ಅವುಗಳ ಜೀವವನ್ನು ನಾಶಮಾಡುವುದು ಮಾನವೀಯತೆಯಲ್ಲ. ಹಾಗೆ ಮಾಡಿದವರು ಯಾರೊಬ್ಬರೂ ಶಾಶ್ವತವಾಗಿ ಬದುಕಿ ಉಳಿದಿಲ್ಲ. ಸಮಯ ಬಂದಾಗ ಸತ್ತು ಮಣ್ಣಾಗಿದ್ದಾರೆ. ಹುಟ್ಟಿದವನಿಗೆ ಸಾವು ನಿಶ್ಚಿತವೆಂದು ತಿಳಿದಿದ್ದರೂ ಮನುಷ್ಯ ಮತ್ತೆ ಮತ್ತೆ ಬಲಿಯಂತಹ ಅರ್ಥಹೀನ ನಂಬಿಕೆಗಳನ್ನು ನೆಚ್ಚಿಕೊಂಡು ಪ್ರಾಣಿವಧೆಯಂತಹ ಕ್ರೂರ ಆಚರಣೆಗಳನ್ನು ಕೈಗೊಳ್ಳುತ್ತಿರುವುದು ಮಾನವೀಯತೆಯಲ್ಲ. ಅಂತಹವರನ್ನು ಭಗವಂತನೂ ಮೆಚ್ಚಲಾರ ಎಂಬುದನ್ನು ಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ.

ಪ್ರಾಚೀನ ಕಾಲದಿಂದಲೂ ಮನುಷ್ಯ ತನ್ನ ಸ್ವಾರ್ಥಕ್ಕಾಗಿ, ತನ್ನ ಏಳಿಗೆಗಾಗಿ, ಅರ್ಥಹೀನ ಆಚರಣೆಗಳನ್ನು, ಮೂಢನಂಬಿಕೆಗಳನ್ನು ಮೈಗೂಡಿಸಿಕೊಂಡಿದ್ದಾನೆ. ಪ್ರಾಮಾಣಿಕವಾಗಿ, ಪರೋಪಕಾರಿಯಾಗಿ, ಪರಿಶ್ರಮಿಯಾಗಿ ಬಾಳುವುದನ್ನು ಬಿಟ್ಟು ತನ್ನ ಬದುಕು ಚೆನ್ನಾಗಿರಬೇಕು, ದೀರ್ಘಕಾಲ ಬಾಳಬೇಕು, ತನ್ನ ಮಡದಿ-ಮಕ್ಕಳು ಚೆನ್ನಾಗಿರಬೇಕು, ಕುಳಿತು ತಿಂದುಣ್ಣುವಷ್ಟು ಸಂಪತ್ತು ಲಭಿಸಬೇಕು ಎಂದೆಲ್ಲ ಆಸೆ ಇಟ್ಟುಕೊಂಡು ಕಂಡ ಕಂಡ ದೇವರಿಗೆ ಕುರಿಬಲಿ, ಕೋಳಿಬಲಿಯಂತಹ ಅಮಾನುಷವಾದ ಹರಕೆಗಳನ್ನು ಹೊತ್ತುಕೊಳ್ಳುತ್ತಿದ್ದಾನೆ. ಅವುಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಸಂದರ್ಭಾನುಸಾರ ಬಲಿಕೊಟ್ಟು ತನ್ನಾಸೆಗಳನ್ನು ತೀರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದ್ದಾನೆ. ಆದರೆ, ತನ್ನ ಸ್ವಾರ್ಥಕ್ಕಾಗಿ ಜೀವಗಳನ್ನು ಬಲಿಕೊಟ್ಟು ತಾನು ಚೆನ್ನಾಗಿ, ಸುಖವಾಗಿ, ಶ್ರೀಮಂತನಾಗಿ ಬದುಕುವುದಕ್ಕೆ ಅಸಾಧ್ಯವೆಂಬುದನ್ನು ಮಾತ್ರ ಮರೆತಿದ್ದಾನೆ.

ತಾನು ಬಲಿಕೊಡುವ ಕುರಿ, ಆಡು, ಕೋಳಿ ಮೊದಲಾದ ಪ್ರಾಣಿ, ಪಕ್ಷಿಗಳಿಗೂ ಜೀವವಿದೆ ಎಂದಾಗಲೀ ಅವುಗಳಿಗೂ ಬದುಕುವ ಹಕ್ಕಿದೆ ಎಂದಾಗಲೀ ಅವುಗಳ ಬದುಕೂ ಈ ಭೂಮಿಯಲ್ಲಿನ ಜೀವವೈವಿಧ್ಯದ ಒಂದು ಭಾಗವೆಂದಾಗಲೀ ಅವನು ಭಾವಿಸುವುದಿಲ್ಲ. ಬಲಿಯ ಹೆಸರಿನಲ್ಲಿ ತಾನು ಹೊಟ್ಟೆತುಂಬಾ ಮಾಂಸವನ್ನು ತಿಂದು ತೇಗಬೇಕು, ಮೆರೆಯಬೇಕು, ತನ್ನವರಿಗೂ ಅದನ್ನು ಉಣಬಡಿಸಬೇಕು ಎಂಬ ಅತ್ಯಾಸೆಯೇ ಆತನಲ್ಲಿ ತುಂಬಿಕೊಂಡಿರುತ್ತದೆ. ಹಾಗಾಗಿ ಆತನಿಗೆ ಪ್ರಾಣಿ, ಪಕ್ಷಿಗಳ ಜೀವದ ಮಹತ್ವ ತಿಳಿದಿಲ್ಲ. ತಿಳಿದುಕೊಳ್ಳುವ ಪ್ರಯತ್ನನ್ನೂ ಮಾಡಿಲ್ಲ.  ಮನುಷ್ಯನ ಅರ್ಥಪೂರ್ಣ ಬದುಕಿಗೆ ಪ್ರಾಣಿ, ಪಕ್ಷಿಗಳ ಬದುಕು ಪೂರಕವಾಗಿರುತ್ತದೆ ಎಂಬುದನ್ನು ಆತ ಬಹುತೇಕ ಮರೆತುಬಿಟ್ಟಿದ್ದಾನೆ. ಹಾಗಾಗಿಯೇ ಭೂಮಿಯಲ್ಲಿ ಜೀವವೈವಿಧ್ಯದೊಳಗೆ ಪದೇಪದೇ ಸಮತೋಲನ ತಪ್ಪುತ್ತಿದೆ. ಇಂದು ಸರಕಾರ ಬಲಿಯನ್ನು ನಿಷೇಧಿಸಿದ್ದರೂ ಮನುಷ್ಯ ಬದಲಾಗಿಲ್ಲ.

೧೧. ಹಾವಿನ ಬಾಯ ಕಪ್ಪೆ ಹಸಿದು

ತಾ ಹಾರುವ ನೊಣಕ್ಕೆ ಆಸೆ ಮಾಡುವಂತೆ

ಶೂಲವನೇರುವ ಕಳ್ಳ ಹಾಲು ತುಪ್ಪವ ಕುಡಿದು

ಮೇಲಿನ್ನೇಸು ಕಾಲ ಬದುಕುವನೋ?

ಕೆಡುವೊಡಲ ನೆಚ್ಚಿ, ಕಡುಹುಸಿಯನೆ ಹುಸಿದು

ಒಡಲ ಹೊರೆವವರ ಮೆಚ್ಚ ನಮ್ಮ ಕೂಡಲಸಂಗಮದೇವ

ಈ ವಚನದಲ್ಲಿ ಬಿದ್ದುಹೋಗುವ ಈ ದೇಹವನ್ನು ನೆಚ್ಚಿಕೊಂಡು ದಿನನಿತ್ಯ ಸುಳ್ಳನ್ನೇ ಆಡುತ್ತ ಹೊಟ್ಟೆಹೊರೆಯುವ ಡಾಂಬಿಕರನ್ನು ಹಾಗೂ ಅವರ ಬದುಕನ್ನು ಎರಡು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.

ಮೊದಲನೆಯದು, ಹಾವಿನ ಬಾಯಲ್ಲಿ ಸಿಕ್ಕಿಹಾಕಿಕೊಂಡು ತನ್ನ ಮುಂದೆ ಹಾರಿಬಂದ ನೊಣವನ್ನು ನುಂಗಲು ಹವಣಿಸುವ ಕಪ್ಪೆ. ಹಾವಿನ ಬಯಲ್ಲಿ ಸಿಕ್ಕಿಹಾಕಿಕೊಂಡಿರುವ ಕಪ್ಪೆಗೆ ತಾನಿನ್ನು ಕೆಲವೇ ಕ್ಷಣಗಳೊಳಗೆ ಹಾವಿನ ಬಾಯಿಗೆ ಆಹಾರವಾಗುತ್ತೇನೆ ಎಂಬುದು ತಿಳಿದಿದ್ದರೂ ಅದು ತನ್ನ ಹೊಟ್ಟೆಯ ಹಸಿವನ್ನು ಇಂಗಿಸಿಕೊಳ್ಳುವುದಕ್ಕೆ ತನ್ನ ಮುಂದೆ ಹಾರುತ್ತ ಬಂದ ನೊಣವನ್ನು ನುಂಗುವುದಕ್ಕೆ ನಾಲಗೆಯನ್ನು ಚಾಚುತ್ತದೆ. ಆದರೆ ಹಾಗೆ ನೊಣವನ್ನು ನುಂಗಿದರೂ ತಾನು ಎಷ್ಟು ಸಮಯ ಬದುಕಬಲ್ಲೆ ಎಂಬುದನ್ನು ಅದು ಪರಿಭಾವಿಸುವುದಿಲ್ಲ.

ಎರಡನೆಯದು, ಕಳ್ಳತನದ ಅಪರಾಧಕ್ಕಾಗಿ ಶೂಲದ ಶಿಕ್ಷೆ(ಮರಣದಂಡನೆ)ಗೆ ಗುರಿಯಾಗಿ ಹಾಲು, ತುಪ್ಪವನ್ನು ಕುಡಿದು ತನ್ನ ಕೊನೆಯ ಆಸೆಯನ್ನು ಈಡೇರಿಸಿಕೊಳ್ಳಲು ಬಯಸುವ ಕಳ್ಳ. ಮರಣದಂಡನೆಗೆ ಗುರಿಯಾಗಿರುವ ತಾನು ಇನ್ನು ಕೆಲವೇ ದಿನಗಳೊಳಗೆ ಶೂಲದ ಶಿಕ್ಷೆಗೆ ಗುರಿಯಾಗಿ ಸಾಯುತ್ತೇನೆ ಎಂಬುದು ತಿಳಿದಿದ್ದರೂ ಹಾಲು, ತುಪ್ಪವನ್ನು ಕುಡಿದು, ತನ್ನ ಆಸೆಯನ್ನು ನೆರವೇರಿಸಿಕೊಂಡು ತಾನಿನ್ನು ಎಷ್ಟು ದಿನಗಳವರೆಗೆ ಬದುಕಿರುವುದಕ್ಕೆ ಸಾಧ್ಯವೆಂಬುದನ್ನು ಆತ ಯೋಚಿಸುವುದಿಲ್ಲ.

ಹಾಗೆಯೇ ಕೆಟ್ಟುಹೋಗುವ(ನಾಶವಾಗುವ, ಬಿದ್ದುಹೋಗುವ) ಈ ದೇಹವನ್ನು ಅತಿಯಾಗಿ ಪ್ರೀತಿಸಿ, ಅದನ್ನು ಇನ್ನಷ್ಟು ಜೋಪಾನಗೊಳಿಸುವುದಕ್ಕೆ ಪ್ರಯತ್ನಿಸಿ, ಜೀವಮಾನಪೂರ್ತಿ ಸಿಕ್ಕಸಿಕ್ಕವರನ್ನು ನಂಬಿಸಲು ಕೇವಲ ಸುಳ್ಳನ್ನೇ ಹೇಳಿಕೊಂಡು ಹತ್ತಾರು ವಿಧಗಳಲ್ಲಿ ಹೊಟ್ಟೆಹೊರೆಯಲು ಹೆಣಗಾಡುವವರನ್ನು ಶಿವನೂ ಮೆಚ್ಚಲಾರನೆಂದು ಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ.

ಹನ್ನೆರಡನೆಯ ಶತಮಾನದಲ್ಲಿಯೇ ಬದುಕಿನ ಬಗೆಗಿನ ಆಸೆಬುರುಕುತನ ಜನರಲ್ಲಿ ಅತಿಯಾಗಿತ್ತೆಂದು ತೋರುತ್ತದೆ. ಹಾಗಾಗಿ ಜನರಲ್ಲಿ ಡಾಂಬಿಕತೆ ಅತಿಯಾಗಿ ಅದರ ಪರಿಣಾಮ ಸಮಾಜವ್ಯವಸ್ಥೆಯ ಮೇಲೆ ಕಾಣಿಸಿಕೊಂಡಾಗ ಬಸವಣ್ಣನವರು ಈ ರೀತಿಯ ವರ್ತನೆಗಳನ್ನು ಖಂಡಿಸಿರುವುದು ಸ್ಪಷ್ಟವಾಗುತ್ತದೆ. ಮನುಷ್ಯನಿಗೆ ತನ್ನ ದೇಹದ ಬಗ್ಗೆ, ತನ್ನ ಬದುಕಿನ ಬಗ್ಗೆ ಆಸೆ, ಆಕಾಂಕ್ಷೆಗಳು, ಮೋಹಗಳು ಸಹಜವಾದರೂ ಅವು ಅತಿಯಾದೊಡನೆ ಸಹಜವಾಗಿ ಅವರ ಮಾತುಗಳಲ್ಲಿ ಸುಳ್ಳು, ಮೋಸಗಳು ತುಂಬಿಕೊಳ್ಳುತ್ತವೆ. ಮನುಷ್ಯದೇಹ ಒಂದಲ್ಲ ಒಂದು ದಿನ ನಾಶವಾಗುವಂತಹುದು, ಅದನ್ನು ಅತಿಯಾಗಿ ಪ್ರೀತಿಸುವುದು, ಒಪ್ಪಗೊಳಿಸಿ ಮೆರೆಯುವುದು, ಅನ್ಯರಿಗೆ ಮೋಸಮಾಡಿ ಲಾಭಗಳಿಸುವುದು ಅರ್ಥಹೀನವಾದ ಹಾಗೂ ಸಮಾಜಘಾತುಕವಾದ  ವರ್ತನೆ ಎನಿಸಿಕೊಳ್ಳುತ್ತದೆ. ಈ ರೀತಿಯಲ್ಲಿ ವರ್ತಿಸುವ ಮನುಷ್ಯರ ಗುಟ್ಟು ರಟ್ಟಾದ ಮೇಲೆ ಭಗವಂತ ಹೋಗಲಿ ಲೋಕದ ಇತರ ಮನುಷ್ಯರೂ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಅದಕ್ಕಾಗಿಯೇ ಬಸವಣ್ಣನವರು ಮನುಷ್ಯನಲ್ಲಿನ ಈ ರೀತಿಯ ವರ್ತನೆಗಳನ್ನು ಸ್ಪಷ್ಟಮಾತುಗಳಲ್ಲಿ ಖಂಡಿಸಿದ್ದಾರೆ.

ಆಧುನಿಕಕಾಲದಲ್ಲಂತೂ ಈ ರೀತಿಯಲ್ಲಿ ದೇಹವನ್ನು ಶೃಂಗರಿಸುವ, ಅದರ ಆರೈಕೆಗಾಗಿ ಪರಿತಪಿಸುವ, ಅದಕ್ಕಾಗಿಯೇ ದಿನದ ಬಹುಸಮಯವನ್ನು ವ್ಯರ್ಥಮಾಡುವವರ ಸಂಖ್ಯೆಯೇ ವಿಪರೀತವಾಗಿ ಬೆಳೆಯುತ್ತಿದೆ. ಹಾಗಾಗಿಯೇ ಮಾತಿನಲ್ಲಿ, ವರ್ತನೆಗಳಲ್ಲಿ ಬೂಟಾಟಿಕೆಗಳು, ಮೋಸ-ವಂಚನೆಗಳು, ಅನೈತಿಕತೆಗಳೆಲ್ಲ ಸೇರಿಕೊಳ್ಳುತ್ತಿವೆ. ಅಪರಾಧಗಳ ಪ್ರಮಾಣವೂ ಬೆಳೆಯುತ್ತಿವೆ. ಇಂದು ದೇಹಶೃಂಗಾರಕ್ಕೆ, ಅಲಂಕರಣಕ್ಕೆ, ಶೋಕಿಗೆ ಕೊಡುವಷ್ಟು ಮನ್ನಣೆಯನ್ನು ಬದುಕಿಗೆ ಕೊಡುತ್ತಿಲ್ಲ. ಹಾಗಾಗಿ ಮನುಷ್ಯನಲ್ಲಿ ಅಸಂಬದ್ಧತೆ ಅತಿಯಾಗುತ್ತಿದೆ. ಹಿಂದೆ ಮನುಷ್ಯನ ಬದುಕಿನ ರೀತಿಗೆ, ಮಾತಿನ ವೈಖರಿಗೆ ಮಾನ್ಯತೆ ಸಲ್ಲುತ್ತಿತ್ತು. ಅದರಲ್ಲಿಯೇ ಮನುಷ್ಯ ತೃಪ್ತಿಯನ್ನು ಕಾಣುತ್ತಿದ್ದ. ಆದರೆ ಇಂದು ದೇಹಸೌಂದರ್ಯಕ್ಕೆ ಮತ್ತು ಅದರಿಂದ ಪ್ರದರ್ಶಿತವಾಗುವ ಬೂಟಾಟಿಕೆಗಳಿಗೆ ಮಾನ್ಯತೆ ಸಲ್ಲುತ್ತಿದೆ.  ಆದರೆ ತೃಪ್ತಿಯಂತೂ ಹೇಳಹೆಸರಿಲ್ಲದೆ ಮಾಯವಾಗಿದೆ.

***

 

 

4 thoughts on “ಆರಿಗಾರೂ ಇಲ್ಲ ಕೆಟ್ಟವಂಗೆ ಕೆಳೆಯಿಲ್ಲ

    1. ವಿದ್ಯಾರ್ಥಿ ಸಮುದಾಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿರುವುದರಿಂದ ಈ ವಿವರಣೆ ತೀರಾ ಅಗತ್ಯ. ಉಳಿದವರಿಗೂ ಈ ವಿವರಣೆಯಿಂದ ಹೊಸ ಆಲೋಚನೆಗಳು ಹೊಳೆಯಬಹುದು. ಮಾತೇ ಇದೆಯಲ್ಲ! “ವಾದೇ ವಾದೇ ಜಾಯತೇ ತತ್ವಬೋಧಃ” ಎಂದು. ಅಷ್ಟೇ.
      ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.🙏

Leave a Reply

Your email address will not be published. Required fields are marked *