ಸಾಹಿತ್ಯಾನುಸಂಧಾನ

heading1

ಮರವನೇರಿದ ಮರ್ಕಟ

           ಬಸವಣ್ಣನವರು ಭಕ್ತಿಯ ಏಕಾಗ್ರತೆಗೆ,   ಶಿವಧ್ಯಾನಕ್ಕೆ ಸಂಬಂಧಿಸಿದಂತೆ  ತಮ್ಮ ಮನಸ್ಸಿನ ಚಂಚಲತೆಯನ್ನು ನಿರೂಪಿಸುವ ಸಂದರ್ಭದಲ್ಲಿ ‘ಮರವನೇರಿದ ಮರ್ಕಟ’, ಮತ್ತು ’ಮನವೆಂಬ ಮರ್ಕಟ”  ಎಂಬೆರಡು ರೂಪಕಗಳನ್ನು ಬಳಸಿದ್ದಾರೆ. ಮರ್ಕಟ ಚಂಚಲಬುದ್ಧಿಗೆ ಹೆಸರಾದುದು. ಅದು ಕೂತಲ್ಲಿ ಕೂರಲಾರದು, ನಿಂತಲ್ಲಿ ನಿಲ್ಲಲಾರದು. ಎಲ್ಲೆಂದರಲ್ಲಿ ಹರಿದಾಡುವುದು ಅದರ ಸ್ವಭಾವ. ಮರವನ್ನು ಹತ್ತಿದರೂ ಕೊಂಬೆಯಿಂದ  ಕೊಂಬೆಗೆ ಜಿಗಿಯುತ್ತಲೇ ಇರುತ್ತದೆ. ಹಲವು ಕೊಂಬೆ-ರೆಂಬೆಗಳನ್ನು ಹಿಡಿದು ಅಲ್ಲಾಡಿಸುತ್ತಲೇ ಇರುತ್ತದೆ. ಅದಕ್ಕೆ ಕೊಂಬೆ-ರೆಂಬೆಗಳಲ್ಲೇನು ಕೆಲಸ? ಅವು ಹಣ್ಣುಗಳಿಂದ ತುಂಬಿಕೊಂಡಿದ್ದರೆ ಹಾಗಿರಲಿ, ಹಣ್ಣುಗಳೇ ಇಲ್ಲದ ಕೊಂಬೆಗಳನ್ನೇರಿದರೂ ಅದು ಕೂತಲ್ಲಿ ಕೂರದು. ನಿಂತಲ್ಲಿ ನಿಲ್ಲದು. ಯಾವುದೇ ಉದ್ದೇಶವಿಲ್ಲದಿದ್ದರೂ ಸದಾ ಮರದಲ್ಲಿ ಓಡಾಡಿಕೊಂಡೇ ಇರುತ್ತದೆ.

            ಮನುಷ್ಯನ ಮನಸ್ಸೆಂಬುದು ಮರವನ್ನು ಏರಿದ ಮರ್ಕಟನ ಹಾಗೆ. ಮರವನ್ನೇರಿದ ಮರ್ಕಟ ಒಂದು ಕೊಂಬೆಯಿಂದ ಇನ್ನೊಂದಕ್ಕೆ, ಅಲ್ಲಿಂದ ಮತ್ತೊಂದಕ್ಕೆ ಜಿಗಿದಾಕೊಂಡಿರುವಂತೆ ಮನುಷ್ಯನ ಮನಸ್ಸೂ ಒಂದರಿಂದ ಇನ್ನೊಂದಕ್ಕೆ, ಅಲ್ಲಿಂದ ಮತ್ತೊಂದಕ್ಕೆ ಜಿಗಿಯುತ್ತಿರುತ್ತದೆ. ಮರದ ಮೇಲೇರಿ ಎಲ್ಲೆಂದರಲ್ಲಿ ಓಡಾಡುವುದು, ಕೊಂಬೆಯಿಂದ ಕೊಂಬೆಗೆ ಜಿಗಿದಾಡುವುದು, ಮರಗಳಲ್ಲಿದ್ದ ಹಣ್ಣು ಕಾಯಿಗಳನ್ನು ಮನಬಂದಂತೆ ಕಿತ್ತೆಸೆಯುವುದು -ಇವೆಲ್ಲವೂ ಮರ್ಕಟನ ಸ್ವಭಾವ. ತಾನೇಕೆ ಹಾಗೆ ವರ್ತಿಸುತ್ತಿದ್ದೇನೆ ಎಂಬುದು ಅದಕ್ಕೂ ಗೊತ್ತಿಲ್ಲ. ಹಾಗೆ ಓಡಾಡುವುದರಿಂದ, ಜಿಗಿದಾಡುವುದರಿಂದ ಯಾವ ಕಾರ್ಯವೂ ಸಾಧಿತವಾಗಲಿಲ್ಲ ಎಂಬ ಬೇಸರವೂ ಅದಕ್ಕಿಲ್ಲ. ಮನುಷ್ಯನ ಮನಸ್ಸೂ ಹೀಗೆಯೇ ಚಂಚಲ. ನಿಂತಲ್ಲಿ ನಿಲ್ಲದೆ, ಕೂತಲ್ಲಿ ಕೂರದೆ ಎಲ್ಲೆಂದರಲ್ಲಿ ಓಡಾಡುತ್ತದೆ. ಹೀಗೆ ಓಡಾಡುವುದರಿಂದ ಯಾವ ಕಾರ್ಯವೂ ಸಾಧಿತವಾಗಲಿಲ್ಲ ಎಂಬ ಬೇಸರವೂ ಇರುವುದಿಲ್ಲ. ಮರದ ಮೇಲಿನ ಒಂದೊಂದು ಕೊಂಬೆ-ರೆಂಬೆಗಳು, ಹಣ್ಣು-ಕಾಯಿಗಳು ಮರ್ಕಟವನ್ನು ಮತ್ತೆ ಮತ್ತೆ ಸೆಳೆದಂತೆ ಬೇರೆ ಬೇರೆ ವಸ್ತುಗಳು, ಬೇರೆ ಬೇರೆ ವಿಚಾರಗಳು ಮನುಷ್ಯನ ಮನಸ್ಸನ್ನು ಸೆಳೆಯುತ್ತವೆ.  ಹಾಗಾಗಿಯೇ ಅದು ಚಂಚಲ. ಹಿಡಿತಕ್ಕೆ ಸಿಗದು, ಹತೋಟಿಗೆ ಬರದು.

            ಮನುಷ್ಯನ ಮನಸ್ಸು ಕೂಡಾ ಮರ್ಕಟನ ಪ್ರತಿರೂಪ. ಮಾತ್ರವಲ್ಲ, ಅದು  ಮನುಷ್ಯನ ಮನಸ್ಸಿಗೊಂದು ಅರ್ಥಪೂರ್ಣ ದೃಷ್ಟಾಂತ.  ವೇಗವನ್ನು ಅಳೆಯುವ ಸಂದರ್ಭಗಳಲ್ಲಿ ವಾಯುವೇಗ, ಬೆಳಕಿನ ವೇಗಗಳಿಗೆ ಮೊದಲ ಪ್ರಾಶಸ್ತ್ಯ.  ಆದರೆ ಅವುಗಳಿಗಿಂತ ಎಷ್ಟೋ ಪಟ್ಟು ವೇಗವಾಗಿ ಓಡುವ ಸಾಮರ್ಥ್ಯವಿರುವುದು ಮನಸ್ಸಿಗೆ. ಹಾಗಾಗಿ ಅದು ಮನೋವೇಗ. ಅದರ ವೇಗವನ್ನು ಗ್ರಹಿಸುವುದಾಗಲೀ ಅಥವಾ ಚಲನೆಯನ್ನು ನಿಗ್ರಹಿಸುವುದಾಗಲೀ ಅತ್ಯಂತ ಪ್ರಯಾಸದ ಕೆಲಸ. ಪ್ರಯಾಸದ್ದೂ ಕೂಡಾ.

                ಮನುಷ್ಯನ ಮನಸ್ಸಿಗೂ ಆತನ ಸ್ವಭಾವ ಹಾಗೂ ವ್ಯವಹಾರಗಳಿಗೂ ನೇರಸಂಬಂಧವಿದೆ. ಮನುಷ್ಯನ ಮನಸ್ಸು ಚಂಚಲವಾದರೆ ಆತನ ಸ್ವಭಾವಗಳೂ ವರ್ತನೆಗಳೂ ಸದಾ ಚಂಚಲವಾಗಿಯೇ ಇರುತ್ತವೆ. ಯಾವುದೇ ಕೆಲಸವನ್ನು ಸಮರ್ಪಕವಾಗಿಯೋ ಪರಿಪೂರ್ಣವಾಗಿಯೋ ಮಾಡಲಾರ. ಸದಾ ಗಲಿಬಿಲಿ, ಚಡಪಡಿಕೆ, ಕಸಿವಿಸಿಗಳೇ ತುಂಬಿಕೊಂಡಿರುತ್ತವೆ. ಇದರಿಂದಾಗಿ ಜೀವನದಲ್ಲಿ ಸೋಲು ಸದಾ ಕಟ್ಟಿಟ್ಟಬುತ್ತಿ. ಗೆಲುವು ಸಾಧಿಸಬೇಕೆಂದರೆ ಮಾನಸಿಕ ತಾದಾತ್ಮ್ಯವಿರಲೇಬೇಕು. ಅದಿಲ್ಲದೆ ಏನನ್ನೂ ಸಾಧಿಸಲಾಗದು. ಮನುಷ್ಯನ ಎಲ್ಲಾ ಸಾಧನೆಗಳಿಗೆ ಆತನ ಮನಸ್ಸಿನ ಸ್ಥೈರ್ಯವೇ ಮುಖ್ಯಕಾರಣ. ಹಾಗಾಗಿ ಅದನ್ನು ಮೊದಲು ಸಾಧಿಸಿಕೊಳ್ಳಬೇಕೆಂಬುದು ಬಸವಣ್ಣನವರ ಅಭಿಪ್ರಾಯ.  

               ಮನುಷ್ಯನ ಎಲ್ಲಾ ಸಾಧನೆಗಳಿಗೆ ಪದೇ ಪದೇ ತಡೆಯನ್ನೊಡ್ದುತ್ತಿರುವುದೇ ಅತನ ಮನಸ್ಸಿನ ಅಸ್ಥಿರತೆ. ಅದಕ್ಕಾಗಿಯೇ ಬಸವಣ್ಣನವರು ಮನಸ್ಸನ್ನು ಮರ್ಕಟಕ್ಕೆ ಹೋಲಿಸಿದ್ದಾರೆ. ಮನುಷ್ಯನ ಮನಸ್ಸಿನ ಚಂಚಲತೆಗೆ ಆತನ ಪಂಚೇಂದ್ರಿಯಗಳೆಲ್ಲವೂ ಪ್ರೇರಕ ಹಾಗೂ ಪೂರಕ. ಪ್ರಾಚೀನಕಾಲಕ್ಕೆ ಹೋಲಿಸಿದರೆ ಆಧುನಿಕಕಾಲದಲ್ಲಿ ಮನುಷ್ಯನ ಪಂಚೇಂದ್ರಿಯಗಳನ್ನು ಸೆಳೆಯುವ, ಮನಸ್ಸನ್ನು ಚಂಚಲಗೊಳಿಸಿ ಕುಣಿಸುವ ವಸ್ತುವೈವಿಧ್ಯಗಳು, ಜೀವನವಿಧಾನಗಳು, ಸಂವಹನ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ನೂರಾರು. ಇವು ಮನುಷ್ಯನ ಮನಸ್ಸಿನಲ್ಲಿ ಚಂಚಲತೆಯನ್ನು ಹುಟ್ಟುಹಾಕಿ ಸಾಧನೆಯ ಹಾದಿಯಲ್ಲಿ ಪದೇಪದೇ ತಡೆಯನ್ನೊಡ್ಡುತ್ತಿವೆ.  ಇವುಗಳ ಸೆಳೆತ ಎಷ್ಟಿದೆಯೆಂದರೆ, ಸರಿ-ತಪ್ಪುಗಳನ್ನು, ಒಳಿತು-ಕೆಡುಕುಗಳನ್ನು, ನ್ಯಾಯ-ಅನ್ಯಾಯಗಳನ್ನು, ಧರ್ಮ-ಅಧರ್ಮಗಳನ್ನು, ನೈತಿಕತೆ-ಅನೈತಿಕತೆಗಳನ್ನು ಪರಾಮರ್ಶಿಸುವುದೇ ಕಷ್ಟವೆನಿಸಿದೆ.

            ಮನುಷ್ಯನಿಗೆ ತನಗೆ ಲಾಭತರುವ ಕೆಲಸಗಳಲ್ಲಿ ನಿಷ್ಠೆ, ತಾದಾತ್ಮ್ಯಗಳು ಸಹಜವಾಗಿ ಇದ್ದೇಇರುತ್ತವೆ. ಲಾಭ ತರದ ಕೆಲಸಗಳ ಮೇಲೆ ನಿಷ್ಠೆಯೂ ಇರಲಾರದು, ತಾದಾತ್ಮ್ಯ ಕೂಡಾ. ಎಷ್ಟೋ ಮಂದಿಗೆ ತಮಗೆ ಲಾಭತರುವ ವ್ಯವಹಾರಗಳಲ್ಲಿ ಅತಿಯಾದ ನಿಷ್ಠೆ, ತಾದಾತ್ಮ್ಯಗಳಿರುತ್ತವೆಯೇ ವಿನಾ ಜೀವನ ನಿರ್ವಹಣೆಯಲ್ಲಲ್ಲ. ಪ್ರೀತಿ-ಪ್ರೇಮಗಳ ಸುಳಿಯಲ್ಲಿ ಸಿಲುಕಿರುವ ಯುವಜೋಡಿಗೆ ಪ್ರೀತಿ-ಪ್ರೇಮದಂತಹ ವ್ಯವಹಾರಗಳಲ್ಲಿ ತಾದಾತ್ಮ್ಯ, ನಿಷ್ಠೆಗಳಿದ್ದೇಇರುತ್ತವೆ. ಆದರೆ ಇತರ ವಿಷಯಗಳಲ್ಲಿಲ್ಲ. ವ್ಯವಹಾರದಲ್ಲಿ ನಷ್ಟವಾದರೆ, ಪ್ರೀತಿ-ಪ್ರೇಮಗಳು ಭಗ್ನಗೊಂಡರೆ ಮತ್ತೆ ನಿಷ್ಠೆ, ತಾದಾತ್ಮ್ಯಗಳು ಹೊರಟುಹೋಗಿ ಚಂಚಲತೆ ಮೂಡುತ್ತದೆ. ಇವೆಲ್ಲವನ್ನೂ ಗಮನಿಸಿದರೆ ಮಾನಸಿಕ ತಾದಾತ್ಮ್ಯಗಳೆಂಬುದು ಅವರವರ ದೇಹಪ್ರಕೃತಿ ಹಾಗೂ ಅಭಿರುಚಿಗಳನ್ನು ಅವಲಂಬಿಸಿರುತ್ತವೆ ಎಂದಾಯಿತು. ಆದುದರಿಂದ ಲಾಭ, ನಷ್ಟಗಳನ್ನು ಪರಿಭಾವಿಸದೆ ಮಾನಸಿಕ ತಾದಾತ್ಮ್ಯವನ್ನು ಹೊಂದಲು ಪ್ರಯತ್ನಮಾಡುವುದರಿಂದ ಜೀವನದಲ್ಲಿ ಒಂದು ಹೊಂದಾಣಿಕೆಯನ್ನು ಸಾಧಿಸಬಹುದಲ್ಲ?!

            ಮನಸ್ಸು ಮರ್ಕಟವಾಗುತ್ತಿರುವುದರಿಂದ ಸಮಾಜದ ಎಲ್ಲಾ ಸ್ತರಗಳಲ್ಲಿಯೂ ವ್ಯತಿರಿಕ್ತ ಪ್ರರಿಣಾಮಗಳು ಕಾಣಿಸಿಕೊಳ್ಳುತ್ತಿವೆ. ಮನವೆಂಬ ಮರ್ಕಟವು ಮಕ್ಕಳು-ಹೆತ್ತವರು, ಗಂಡ-ಹೆಂಡತಿ, ಅಧ್ಯಾಪಕರು-ವಿದ್ಯಾರ್ಥಿಗಳು, ಸಿರಿವಂತರು-ಬಡವರು, ಮಾಲೀಕ-ಕಾರ್ಮಿಕರು, ಹಿರಿಯರು-ಕಿರಿಯರೊಳಗೆ ಅಂತರವನ್ನು ಸೃಷ್ಟಿಸಿ ಕಂದರವನ್ನು ನಿರ್ಮಿಸುತ್ತಿವೆ. ಆಧುನಿಕಕಾಲದ ಮನೋರಂಜನಾ ಮಾಧ್ಯಮಗಳಾದ ಸಿನೆಮಾ, ಜಾಹೀರಾತುಗಳು, ಅಂತರ್ಜಾಲ, ಸಂಚಾರವಾಣಿ, ವಿವಿಧ ಸಾಮಾಜಿಕ ಮಾಧ್ಯಮಗಳು  ಮನುಷ್ಯನ  ಮನಸ್ಸಿನ ಚಾಂಚಲ್ಯಕ್ಕೆ ಪ್ರಧಾನ ಆಕರಗಳಾಗಿ ಪದೇಪದೇ ಮನಸ್ಸನ್ನು ಸೆಳೆಯುತ್ತಿವೆ. ಹಾಗಾಗಿಯೇ ಬೇರೆಬೇರೆ ಕ್ಷೇತ್ರಗಲ್ಲಿ ಮನುಷ್ಯನ ಸಾಧನೆ ಗೌಣವಾಗುತ್ತಿದೆ.  ಮನಸ್ಸಿನಲ್ಲಿ ಭ್ರಾಂತಿ ಆವರಿಸುತ್ತಿದೆ. ಪರಿಣಾಮವಾಗಿ ಜಗಳಗಳು, ವಂಚನೆಗಳು, ಮನಸ್ತಾಪಗಳು, ವಿಚ್ಛೇದನಗಳು, ಕೊಲೆ-ಸುಲಿಗೆಗಳು,   ವ್ಯಸನಗಳು, ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ.

            ಮನಸ್ಸು ಮರ್ಕಟವಾದರೆ ತನುವಿಕಾರ ಕಾಣಿಸಿಕೊಳ್ಳುತ್ತದೆ. ಬದುಕು ದುಸ್ತರವಾಗುವುದಕ್ಕೆ ಇದೇ ಕಾರಣ. ಅದನ್ನು ಮನಗಂಡ ಪ್ರಾಚೀನರು ಮಾನಸಿಕಸ್ಥಿಮಿತವನ್ನು ಕಾಪಾಡಿಕೊಳ್ಳುವುದರ ಬಗ್ಗೆ, ಅದನ್ನು ಹತೋಟಿಯಲ್ಲಿಟ್ಟುಕೊಳ್ಳುವ ಬಗ್ಗೆ ಹಲವಾರು ಮಾರ್ಗೋಪಾಯಗಳನ್ನು ತಿಳಿಸಿದ್ದಾರೆ. ಅವರ ಚಿಂತನೆಗಳು ಮನುಷ್ಯನ ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಆರೋಗ್ಯಗಳಿಗೆ ಪೂರಕವಾಗಿಯೇ ಇವೆ. ಆದರೆ ಇಂದಿನವರಿಗೆ ಅವೆಲ್ಲವೂ ಮನಸ್ಸನ್ನು ನಿರ್ಬಂಧಿಸುವ ವಿಚಾರಗಳಾಗಿವೆ. ಇಂದಿನವರಲ್ಲಿ ಮನಸ್ಸು ಮುಕ್ತವಾಗಿರಬೇಕು, ಅದು ಸ್ವಚ್ಛಂದವಾಗಿದ್ದು ಎಲ್ಲೆಂದರಲ್ಲಿ ಹಾರುತ್ತಿರಬೇಕು. ನೋಡಿದ್ದೆಲ್ಲವನ್ನೂ ಅನುಭವಿಸಬೇಕು,  ಕಂಡುದೆಲ್ಲವನ್ನೂ ಸವಿಯಬೇಕು, ಸಿಕ್ಕಿದೆಲ್ಲವನ್ನೂ ಕೊಂಡುಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳೇ ತುಂಬಿಕೊಂಡಿರುವಾಗ ಅವಲ್ಲವನ್ನೂ ಕಾರ್ಯಗತಗೊಳಿಸುವುದಕ್ಕೆ ಮನವೆಂಬುದು ಮರ್ಕಟವಾಗಲೇ ಬೇಕಲ್ಲ?!

                  ***

 

2 thoughts on “ಮರವನೇರಿದ ಮರ್ಕಟ

  1. ಮರಕ್ಕೆ ಕಾಟ ಕೊಡುವ ಪ್ರಾಣಿ ಮರ್ಕಟ, ಮನುಷ್ಯನ ಮನಸ್ಸು ಮರವಲ್ಲ .

    ಚೆನ್ನಾಗಿದೆ ನಿಮ್ಮ ವಿಶ್ಲೇಷಣೆ..

Leave a Reply

Your email address will not be published. Required fields are marked *