ಸಾಹಿತ್ಯಾನುಸಂಧಾನ

heading1

ಪ್ರತೀಕಾರ

          ಪ್ರಸಾದ ನದಿದಡದಲ್ಲಿ ಉದ್ದಕ್ಕೆ ಕಾಲು ಚಾಚಿ ಪಕ್ಕದ ಮರಕ್ಕೊರಗಿ ಕುಳಿತು ನದಿಯ ಕಲ್ಲುಬಂಡೆಗಳ ಎಡೆಗಳಲ್ಲಿ ಸುರುಳಿಸುತ್ತಿ ಒಳಗಿಳಿಯುವ ನೀರು ತನ್ನ ತೆಕ್ಕೆಗೆ ಸಿಲುಕಿದ ಎಲ್ಲವನ್ನೂ ತನ್ನೊಳಗೆ ಎಳೆದುಕೊಳ್ಳುತ್ತಿರುವುದನ್ನು ನೋಡುತ್ತಿದ್ದ. ಹಿಂದೆ ಈ ದೃಶ್ಯ ಆತನ ಕಣ್ಣುಗಳಿಗೆ, ಮನಸ್ಸಿಗೆ ಹಿತವೆನಿಸುತ್ತಿತ್ತಾದರೂ  ಈಗ ಅದು ಕ್ರೌರ್ಯ, ಹಿಂಸೆಗಳ ಪ್ರತೀಕವೆನ್ನಿಸುತ್ತಿದೆ. ಹಿಂದೆ ಸಾಕಷ್ಟು ಜನರನ್ನು ಬಲಿತೆಗೆದುಕೊಂಡ ಆ ಸುಳಿಯನ್ನು ನೋಡುತ್ತಿರುವಾಗ ರಾಮಪ್ಪನ ಸಾವು ಹಾಗೂ ಆತನ ಕುಟುಂಬದ ದುರಂತಕ್ಕೆ ಇಂತಹುದೇ ಒಂದು ಅಗೋಚರ ಸುಳಿ ಕಾರಣವಾಗಿರಬಹುದೇ ಎಂಬ ಸಂಶಯ ಮನಸ್ಸಿನಲ್ಲಿ ಮೂಡಿ  ಆತನನ್ನು ಒಮ್ಮೆ ನಡುಗಿಸಿತು.

          ರಾಮಪ್ಪ ಸತ್ತು ಒಂದೆರಡು ತಿಂಗಳಾಗಿದ್ದರೂ ಇಂದು ಆತನನ್ನು ನೆನಪಿಸಿಕೊಳ್ಳುವವರು ಯಾರೂ ಇಲ್ಲ. ಈ ಜನಗಳೇ ಹೀಗೆ, ಎಲ್ಲವೂ ತಮ್ಮ ಕಾರ್ಯಸಾಧನೆಯಾಗುವವರೆಗೆ ಮಾತ್ರ. ಕಷ್ಟದಲ್ಲಿದ್ದಾಗ ಕೇಳುವವರಿಲ್ಲ. ರಾಮಪ್ಪ ಎಂತಹವನು? ಎಂಬುದು ಹಳ್ಳಿಯ ಎಲ್ಲರಿಗೂ ಗೊತ್ತು. ಆತನಿಂದ ಉಪಕಾರ ಪಡೆದವರೆಷ್ಟು ಮಂದಿ?! ತಮ್ಮ ಬದುಕನ್ನು ರೂಪಿಸಿಕೊಂಡವರೆಷ್ಟು ಮಂದಿ?! ಆದರೆ ಇಂದು?!  ಆತ ಹುಟ್ಟಿಯೇ ಇರಲಿಲ್ಲ ಎನ್ನುವ ರೀತಿಯಲ್ಲಿ ಜನ ನಡೆದುಕೊಳ್ಳುತ್ತಿದ್ದಾರೆ. ಯೋಚಿಸುತ್ತಿದ್ದಂತೆಯೇ ಪ್ರಸಾದನ ಮನಸ್ಸಿನಲ್ಲಿ ಹಲವಾರು ವಿಷಯಗಳು ತುಂಬಿಕೊಂಡವು. ಮನೆಗೆ ಬಂದವನೇ “ರಾಮಪ್ಪ ಹೇಗೆ ಸತ್ತ?” ಎಂದು ಅಮ್ಮನಲ್ಲಿ ಕೇಳಿದಾಗ, “ನನಗೇನು ಗೊತ್ತೋ ಹಾಸಿಗೆಯ ಮೇಲೆ ಬಿದ್ದುಕೊಂಡಿರುವವಳಿಗೆ?! ಹೋಗು, ಅಪ್ಪನನ್ನು ಕೇಳು. ಹೇಳಿಯಾರು!” ಎಂದಳು. ಯಾಕೋ ಅಮ್ಮನ ಮಾತಿನ ಧಾಟಿ ಸಹಜವಾಗಿರಲಿಲ್ಲ. ಅದರೊಳಗೆ ಸಿಟ್ಟು, ನೋವು, ಅಸಹನೆಗಳಿದ್ದವು. ಕುತೂಹಲ ತಡೆಯಲಾಗಲಿಲ್ಲ, ಅಪ್ಪನಲ್ಲಿ ಕೇಳಿದ.

“ರಾಮಪ್ಪ ಹೇಗೆ ಸತ್ತ?!”

“ಹೇಗೆ ಸತ್ತ? ಅಂತ ನಾನು ಹೇಗೆ ಹೇಳಲಿ? ಬದುಕು ಭಾರವಾಗಿತ್ತೇನೋ, ಸತ್ತ!”

          ಮುಖಕ್ಕೆ ಮುಖಕೊಡದೆ ಆಡುವ ಅಪ್ಪನ ಮಾತುಗಳು ಪ್ರಸಾದನಿಗೆ ಹಿತವೆನಿಸಲಿಲ್ಲ. ರಾಮಪ್ಪನ ಬಗ್ಗೆ  ಅಪ್ಪ ಹಾಗೇಕೆ ಹೇಳಿದರು? ತನ್ನಿಂದ ಏನನ್ನೋ ಮುಚ್ಚಿಡುತ್ತಿದ್ದಾರೆ, ಎಂದೆನಿಸಿತು ಪ್ರಸಾದನಿಗೆ. ಒಂದೆರಡು ದಿನಗಳ ಅನಂತರ ಅವರಿವರನ್ನು ಕಾಡಿದಾಗ ತಿಳಿದದ್ದು ಇಷ್ಟು. ರಾಮಪ್ಪ ಕುಡಿತದ ಚಟ ಹೆಚ್ಚಾಗಿ ಆತ್ಮಹತ್ಯೆಮಾಡಿಕೊಂಡ ಎಂದು. ಆದರೆ ರಾಮಪ್ಪ ಅತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಅಂತಹ ಪ್ರಸಂಗವೂ ಆತನಿಗೆ ಇದ್ದಿರಲಿಲ್ಲ ಎನಿಸಿತು. ಊರವರೆಲ್ಲ ರಾಮಪ್ಪನನ್ನು ನೆನೆಸಿಕೊಳ್ಳದಿದ್ದದ್ದು ದೊಡ್ಡಸಂಗತಿಯೆಂದು ಅನ್ನಿಸದಿದ್ದರೂ ಅಪ್ಪ ಅಷ್ಟೊಂದು ನಿಷ್ಠುರದ ಮಾತುಗಳನ್ನು ಆಡಿದ್ದು ಪ್ರಸಾದನಿಗೆ ಸರಿಯೆನಿಸಲಿಲ್ಲ. ಮರುದಿನ  ಸ್ನೇಹಿತ ದಿನೇಶ ಹೇಳಿದ ಸುದ್ಧಿಯನ್ನು ಕೇಳಿ ಪ್ರಸಾದನಿಗೆ ಸಿಡಿಲು ಹೊಡೆದಷ್ಟು ಆಘಾತವಾಗಿತ್ತು. ಸುಮಾರು ಹೊತ್ತಿನವರೆಗೂ ಮಾತಾಡಲು ಸಾಧ್ಯವಾಗಲೇ ಇಲ್ಲ. ತನ್ನ ಅಪ್ಪ ಭೂತಾಕಾರವನ್ನು ಪಡೆದು ತನ್ನನ್ನು ಹೆದರಿಸುತ್ತಿರುವಂತೆ ಅನ್ನಿಸಿತು.

**   **  **  **

          ಪ್ರಸಾದನಿಗೆ ಕೂತಲ್ಲಿ, ನಿಂತಲ್ಲಿ ರಾಮಪ್ಪನ ಮುಗ್ಧಮುಖ ಕಣ್ಣ ಮುಂದೆ ತೇಲಿಬರುತ್ತದೆ. ರಾಮಪ್ಪ ಶ್ರಮಜೀವಿ, ತೋಟದ ಹಾಗೂ ಬೇಸಾಯದ ಕೆಲಸಕ್ಕೆ ಹೇಳಿ ಮಾಡಿಸಿದ ವ್ಯಕ್ತಿ. ವಹಿಸಿದ ಕೆಲಸವನ್ನು ಬಹಳ ಚೊಕ್ಕವಾಗಿ, ಬಹುಬೇಗನೆ ಮುಗಿಸುವ ರಾಮಪ್ಪ ತಿಮ್ಮೇಗೌಡನ ಬಲಗೈ ಬಂಟ. ಹೀಗಾಗಿ ಆತನ ಯಾವುದೇ ಕೆಲಸಕ್ಕೆ ರಾಮಪ್ಪನೇ ಬೇಕು. ’ರಾಮಪ್ಪನ ಹಿರಿಯರು, ತೋಟ ಹಾಗೂ ಬೇಸಾಯದ ಕೆಲಸಮಾಡುತ್ತ ತಮ್ಮ ಮನೆಯಲ್ಲಿಯೇ ತಿಂದುಂಡು ಬೆಳೆದವರು’ ಎಂದು ಸಣ್ಣವನಾಗಿದ್ದಾಗ ಅಜ್ಜಿ ಹೇಳುತ್ತಿದ್ದುದು ಪ್ರಸಾದನಿಗೆ ಇನ್ನೂ ನೆನಪಿದೆ. ಅವರು ಅಲ್ಲೇ ಬೆವರುಸುರಿಸಿ ಸುಖಕಂಡವರು. ಅವರಿವರ ಪರಿಶ್ರಮದಿಂದಲೇ ತಿಮ್ಮೇಗೌಡನ ಅಡಿಕೆತೋಟ, ತೆಂಗಿನತೋಟ, ಪೈರುತುಂಬಿದ ಗದ್ದೆಗಳು ಕಂಗೊಳಿಸುತ್ತಿದ್ದವು. ಆದರೆ ತೋಟ, ಗದ್ದೆಗಳು ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿದ್ದುದರ ಹಿಂದಿನ ರಹಸ್ಯ ಮಾತ್ರ ಪ್ರಸಾದನಿಗೆ ಅದುವರೆಗೂ ತಿಳಿದಿರಲಿಲ್ಲ.

          ರಾಮಪ್ಪನಿಗೆ ವರ್ಷ ಇಪ್ಪತ್ತೈದು ದಾಟಿದಾಗ ತಿಮ್ಮೇಗೌಡನೇ ಅವನಿಗೊಂದು ಹೆಣ್ಣು ಹುಡುಕಿ ಮದುವೆಮಾಡಿಸಿದ್ದ. ಮೈಕೈತುಂಬಿಕೊಂಡು ದುಂಡುದುಂಡಾಗಿ ನೋಡುವುದಕ್ಕೆ ಆಕರ್ಷಕವಾಗಿದ್ದ ಬೊಗಸೆಗಣ್ಣಿನ ಚೆಲುವೆ ನಿಂಗಿ ರಾಮಪ್ಪನ ಹೆಂಡತಿಯಾಗಿ ಮನೆಸೇರಿದಳು. ಮೊದಮೊದಲು, ’ತಾನೀಗ ಮದುವೆ ಆಗೊಲ್ಲ’ ಎನ್ನುತ್ತಿದ್ದ ರಾಮಪ್ಪನಿಗೆ ಮದುವೆಯಾದ ಮೇಲೆ ನಿಂಗಿಯನ್ನು ಬಿಟ್ಟಿರುವುದೇ ಕಷ್ಟವಾಗುತ್ತಿತ್ತು. ಮುದ್ದು ಮುದ್ದಾಗಿ ಕಣ್ಣಿಗೆ ಹಬ್ಬವಾಗಿದ್ದ ನಿಂಗಿಯ ಮೇಲೆ ರಾಮಪ್ಪನಿಗೆ ಬೆಟ್ಟದಷ್ಟು ಪ್ರೀತಿಯಿತ್ತು. ಅವಳಿಗೂ ಅಷ್ಟೇ.  ರಾಮಪ್ಪನೊಂದಿಗೆ ಅವಳೂ ತೋಟದ ಕೆಲಸಕ್ಕೆ ಬರತೊಡಗಿದಳು.

           ಮದುವೆಯಾಗಿ ನಾಲ್ಕು ವರ್ಷಗಳು ಕಳೆಯುವಷ್ಟರಲ್ಲಿ ಇಬ್ಬರು ಹೆಣ್ಣುಮಕ್ಕಳ ಅಪ್ಪನೂ ಆಗಿದ್ದ. ಮಕ್ಕಳ ತೊದಲು, ಆಟ, ತುಂಟಾಟಗಳಿಂದ ಆತನ ಮನೆ ಕಳೆಗಟ್ಟಿತ್ತು. ದಿನಗಳು ಉರುಳಿದಂತೆ ರಾಮಪ್ಪನ ಮನಸ್ಸೂ ಮಾಗಿತು. ತನಗೆ ಗಂಡುಮಕ್ಕಳು ಇಲ್ಲವೆಂಬ ಕೊರಗು ಮನಸ್ಸಿನ ಮೂಲೆಯಲ್ಲಿ ಇತ್ತಾದರೂ ಅದನ್ನು ಅತಿಯಾಗಿ ಹಚ್ಚಿಕೊಳ್ಳದೆ ಬೆಳೆಯುತ್ತಿರುವ ತನ್ನ ಹೆಣ್ಣುಮಕ್ಕಳನ್ನು ನೋಡುತ್ತ ಖುಷಿಪಟ್ಟ. ತಿಮ್ಮೇಗೌಡನ ಹೆಂಡತಿ,  “ನಿನ್ನ ಮಕ್ಕಳೂ ನಾಲ್ಕಕ್ಷರ ಕಲಿಯಲಿ, ಶಾಲೆಗೆ ಸೇರಿಸು” ಎಂದಾಗ ಅದನ್ನು ಮೀರಲಾರದೆ ಶಾಲೆಗೆ ಸೇರಿಸಿದ್ದ. ಮುಂದೆ ಕಾಲೇಜು ಶಿಕ್ಷಣ ಕೊಡಿಸುವುದಕ್ಕೆ ರಾಮಪ್ಪನಿಗೆ ಸಾಧ್ಯವೂ ಇರಲಿಲ್ಲ. ಮಕ್ಕಳು ಹೈಸ್ಕೂಲು ಮುಗಿಸುವಷ್ಟರಲ್ಲಿ ತಿಮ್ಮೇಗೌಡ ರಾಮಪ್ಪನನ್ನು ಗದರಿಸಿದ್ದ.

“ಹೆಣ್ಣು ಮಕ್ಕಳಿಗ್ಯಾಕಯ್ಯ ಓದು? ಮನೆಯಲ್ಲಿ ಕುಳಿತು ಅಡುಗೆ ಕಲಿಯಲಿ, ತೋಟದ ಕೆಲಸ ಕಲಿಯಲಿ, ನಿನಗೂ ಸ್ವಲ್ಪ ಸಹಾಯ ಆಗುತ್ತೆ” ಅಂದಿದ್ದ.

          ತಿಮ್ಮೇಗೌಡನ ಮಾತಿಗೆ ಎದುರಾಡುವಷ್ಟು ಶಕ್ತನಲ್ಲ ರಾಮಪ್ಪ. ಆತನಿಗೆ ತಿಮ್ಮೇಗೌಡ ಹೇಳಿದ್ದೇ ವೇದವಾಕ್ಯ. ತನ್ನ ಹಿರಿಯ ಮಗಳು ಕಮ್ಲಿ ಮೈ ನರೆದಾಗ ಅವಳ ಮದುವೆ ಮಾಡೋ ಯೋಚನೆ ಮಾಡಿದ್ದ ರಾಮಪ್ಪ. ಆದರೆ ತಿಮ್ಮೇಗೌಡನ ಹೆಂಡತಿ, “ಇನ್ನೂ ಸಣ್ಣಪ್ರಾಯ. ಒಂದು ನಾಲ್ಕು ವರ್ಷ ಕಳೆಯಲಿ, ಈಗೇನು ಅವಸರ?” ಎಂದು ತಡೆದಿದ್ದರು. ರಾಮಪ್ಪನಿಗೂ ಹೌದು ಎನಿಸಿತು. ಅವಳೂ ನಿಂಗಿಯಂತೆಯೇ ಸ್ವಲ್ಪ ಎಣ್ಣೆಗಪ್ಪಾದರೂ ಚೆಲುವೆಯೇ. ಕ್ರಮೇಣ ಕಮ್ಲಿಗೆ ನೆಂಟಸ್ತಿಕೆಗಳೇನೋ ಬರತೊಡಗಿದಾಗ ತನ್ನಷ್ಟೇ ಸ್ಥಿತಿವಂತ ಹುಡುಗ ಸಾಕು ಎಂದುಕೊಂಡಿದ್ದ ರಾಮಪ್ಪ. ಒಂದು ಒಳ್ಳೆಯ ನೆಂಟಸ್ತಿಕೆಯೇನೋ ಬಂತು. ಆದರೆ ವರನ ಕಡೆಯವರು ವರದಕ್ಷಿಣೆ, ಚಿನ್ನ ಎಂದೆಲ್ಲ ಕೇಳಿದಾಗ ರಾಮಪ್ಪ ಸ್ವಲ್ಪ ಕಸಿವಿಸಿಗೊಂದರೂ ಲೋಕದಲ್ಲಿ ತನ್ನ ಹಾಗೆ ವರದಕ್ಷಿಣೆ ಇಲ್ಲದೆ ಮದುವೆಮಾಡಿಕೊಳ್ಳುವವರು ಎಷ್ಟು ಮಂದಿ ಇದ್ದಾರೆ? ಎಂದುಕೊಂಡು ತಿಮ್ಮೇಗೌಡನಲ್ಲಿ ಒಂದಿಷ್ಟು ಸಾಲಪಡೆದು ಸರಳವಾಗಿ ಮದುವೆಯನ್ನು ಮುಗಿಸಿದ್ದ.

          “ಬಡವನ ಹುಟ್ಟೂ ಸಾಲದಲ್ಲೇ, ಬದುಕು ಸಾಲದಲ್ಲೇ, ಕೊನೆಗೆ ಸಾವು ಕೂಡಾ ಸಾಲದಲ್ಲೇ” ಎಂಬ ವಾಡಿಕೆಯ ಮಾತು ಸುಳ್ಳಲ್ಲ. ಅದರಲ್ಲೂ ರಾಮಪ್ಪನ ಬದುಕಿಗೆ ಇದು ಬಹುಪಾಲು ಅನ್ವಯ. ರಾಮಪ್ಪನೇನೋ ಸಾಲದಲ್ಲಿ ಹುಟ್ಟದಿದ್ದರೂ ಈಗ ಮಗಳ ಮದುವೆಗೆ ಮಾಡಿದ ಒಂದಿಷ್ಟು ಸಾಲವಿತ್ತು. ಅವನೇನೂ ಅತಿಯಾದ ಕನಸುಕಂಡವನಲ್ಲ. ಇದ್ದುದರಲ್ಲಿಯೇ ಸುಖಕಂಡವನು. ಮಗಳ ಮದುವೆಗೆ ಮಾಡಿದ ಸಾಲವನ್ನು ಆದಷ್ಟು ಬೇಗ ತೀರಿಸಿ ಋಣಮುಕ್ತನಾಗಬೇಕೆಂದು ಭಾವಿಸಿದ್ದ. ಆದರೆ ವಿಧಿಗೆ ಅದು ಇಷ್ಟವಾಗಲಿಲ್ಲ ಎಂದು ಕಾಣಿಸುತ್ತದೆ.

          ರಾಮಪ್ಪನ ಮಗಳ ಮದುವೆಯ ಅನಂತರ ವರ್ಷದೊಳಗೆ ತಿಮ್ಮೇಗೌಡನ ವರ್ತನೆ, ಮಾತಿನ ವರಸೆಗಳು ಬದಲಾದುದನ್ನು ರಾಮಪ್ಪನೂ ಗ್ರಹಿಸಿದ. ರಾಮಪ್ಪನಿಗೂ ಅದರ ಹಿಂದಿನ ವಾಸನೆ  ಕ್ರಮೇಣ ಮೂಗಿಗೆ ಬಡಿಯಿತು. “ಹಣವೆಂದರೆ ಹೆಣವೂ ಬಾಯಿಬಿಡುತ್ತದೆ” ಎಂಬ ಹಿರಿಯರ ಮಾತು ಸುಳ್ಳೆನಿಸಲಿಲ್ಲ. ತಿಮ್ಮೇಗೌಡನ ತೆರೆಮರೆಯ ಒಂದೊಂದೇ ಮುಖಗಳು ತೆರೆದುಕೊಳ್ಳತೊಡಗಿದವು. ಸಾಲವಸೂಲಿಗಿಂತ ಹೆಚ್ಚಾಗಿ ಅದಕ್ಕೂ ಮಿಗಿಲಾದ ಕಾರಣವಿದ್ದೀತೆಂದು ಗ್ರಹಿಸಿಕೊಳ್ಳುವಲ್ಲಿ ರಾಮಪ್ಪ ವಿಫಲನಾದ. ಅದನ್ನು ಆತ ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ತಾನು ಇದುವರೆಗೂ ತಿಮ್ಮೇಗೌಡನಿಗಾಗಿ, ಆತನ ಮನೆಗಾಗಿ ದುಡಿದಿದ್ದು ವ್ಯರ್ಥವಾಯಿತೇನೋ! ಎಂಬ ಹತಾಶ ಭಾವ ರಾಮಪ್ಪನನ್ನು ಕಾಡತೊಡಗಿತು.  ರಾಮಪ್ಪ ಸಾಲತೀರಿಸಲು ಟೊಂಕಕಟ್ಟಿ ನಿಂತ. ದಿನಾ ಬೆಳಗಾದರೆ ತಿಮ್ಮೇಗೌಡನ ಸಹಸ್ರನಾಮಾರ್ಚನೆ ಕೇಳತೊಡಗಿದಾಗ ತಾನು ಬದುಕಿನಲ್ಲಿ ಏನನ್ನೋ ಕಳೆದುಕೊಂಡೆ ಎಂಬ ನೋವು ರಾಮಪ್ಪನ ಮನಸ್ಸನ್ನು ಆವರಿಸತೊಡಗಿತು.

          ಹಗಲೂ ರಾತ್ರಿ ದುಡಿದ. ಸಿಕ್ಕಸಿಕ್ಕ ಕೆಲಸಗಳನ್ನೆಲ್ಲ ಮಾಡಿದ. ದೇಹ ದಣಿಯಿತು, ವಿಶ್ರಾಂತಿ ತಪ್ಪಿತು. ಮನಸ್ಸಿಗೆ ಶಾಂತಿ ಇಲ್ಲವಾಯಿತು. ರಾಮಪ್ಪ ಸುಸ್ತಾದ. ಬೇಸತ್ತ. ಸ್ವಾಭಿಮಾನ ನುಚ್ಚುನೂರಾಯಿತು. ಮನಸ್ಸಿನ ತೊಳಲಾಟದಿಂದ ಬಳಲಿದ. ಸಾಲದಲ್ಲಿಯೇ ಕೊರಗಿದ. ಸಮಾಧಾನ ಸಿಗಲಿಲ್ಲ. ಇತ್ತೀಚೆಗೆ ತಿಮ್ಮೇಗೌಡ ಕಲಿಸಿದ ಕುಡಿತದ ಚಟಕ್ಕೆ ರಾಮಪ್ಪ ಬಲಿಯಾದ. ಇಲ್ಲದ ಕಾಯಿಲೆಗಳು ರಾಮಪ್ಪನನ್ನು ಬಿಗಿದಪ್ಪಿಕೊಂಡವು. ನಿಂಗಿಯೂ ತನ್ನನ್ನು ನಿರ್ಲಕ್ಷಿಸತೊಡಗಿದಾಗ ರಾಮಪ್ಪ ಕುಸಿದುಹೋದ. ಆದರೆ ಇವೆಲ್ಲದರ ಹಿಂದಿದ್ದ ತಿಮ್ಮೇಗೌಡನ ಕುತಂತ್ರವನ್ನು ರಾಮಪ್ಪನಿಂದ ಅರಿಯಲಾಗಲ್ಲಿಲ್ಲ.

          ಕೆಲವು ವರ್ಷಗಳಿಂದ ಸುಪ್ತವಾಗಿದ್ದ ತಿಮ್ಮೇಗೌಡನ ಆಸೆ ಈಗ ಮೆಲ್ಲನೆ ಗರಿಗೆದರತೊಡಗಿತು. ಇದಕ್ಕೆ ಪುಷ್ಟಿಕೊಡುವಂತೆ ಗೌಡನ ಹೆಂಡತಿ ರೋಗಗ್ರಸ್ಥೆಯಾಗಿ ಹಾಸಿಗೆ ಹಿಡಿದಳು. ಗೌಡ ಕಡಿವಾಣವಿಲ್ಲದ ಕುದುರೆಯಾದ. ಹಿಂದೆ ಸಮಯಸಿಕ್ಕಾಗೆಲ್ಲ ನಿಂಗಿಯನ್ನು ಕದ್ದುಮುಚ್ಚಿ  ನೋಡಿ ಕಣ್ಣುಗಳಲ್ಲಿಯೇ ತೃಪ್ತಿಪಟ್ಟುಕೊಂಡಿದ್ದ ಗೌಡನಿಗೆ ಈಗ ಅದು ಸಾಲದೆನಿಸಿತು.  ರಾಮಪ್ಪನಿಗೊಂದು ವ್ಯವಸ್ಥೆಮಾಡಿದ ಮೇಲೆ ನಿಂಗಿಗೆ ಹಣದ ಆಸೆ ತೋರಿಸಿದ. ಏನೇನೋ ಮಾತಾಡಿದ. ಅವಳಿಗೆ ಗರಿಗರಿಯಾದ ನೋಟುಗಳನ್ನು ತೋರಿಸಿ ತಲೆಕೆಡಿಸಿದ. ನಿಂಗಿ ಬದಲಾದಳು. ಗೌಡನ ನಾಟಕ ಫಲಿಸಿತು. ತನ್ನ ಬುದ್ಧಿವಂತಿಕೆ, ಹಣದ ಮಹಾತ್ಮೆಗಳನ್ನು ನೆನೆಸಿಕೊಂಡು ಮೀಸೆಯ ಅಡಿಯಲ್ಲಿಯೇ ನಕ್ಕು ತೃಪ್ತಿಪಟ್ಟುಕೊಂಡ. ಅವನಿಗೆ ರಾಮಪ್ಪನಿಗೆ ಕೊಟ್ಟ ಸಾಲವನ್ನು ಮರಳಿ ಪಡೆಯುವುದು ಮುಖ್ಯವಾಗಿರಲಿಲ್ಲ. ಈಗ ಅವನಿಗೆ ಬೇಕಾದದ್ದೆಲ್ಲವೂ ಸಿಕ್ಕಿತು.

          ಬೇಲಿಹಾರುವುದರಲ್ಲಿ ತಿಮ್ಮೇಗೌಡ ಮಹಾನಿಸ್ಸೀಮ. ತನ್ನ ಬಗ್ಗೆ ಊರವರು ಆಡಿಕೊಳ್ಳುವಾಗಲೆಲ್ಲ ಅವರ ಬಾಯಿಮುಚ್ಚಿಸುವುದಕ್ಕೆ ಬೇಕಾದಷ್ಟು ಉಪಾಯಗಳೂ ಆತನಲ್ಲಿವೆ. ಸೀನು ಮತ್ತು ಹಾದರವನ್ನು ಮುಚ್ಚಿಡಲಾಗುವುದಿಲ್ಲ ಎಂಬ ಮಾತಿದೆ. ನಿಂಗಿಯೊಂದಿಗಿನ ಚೆಲ್ಲಾಟದ ಗುಸುಗುಸು ಸುರುವಾಗುವುದಕ್ಕೆ ಬಹಳ ಸಮಯ ಹಿಡಿಯಲಿಲ್ಲ. ಗೌಡನ ಹೆಂಡತಿ ಕೆರಳಿದಳು. ಮುಂಗೋಪಿ ಹಾಗೂ ದುರಹಂಕಾರಿ ತಿಮ್ಮೇಗೌಡನ ಮುಂದೆ ಅವಳ ಆಟ ನಡೆಯಲಿಲ್ಲ. ’ಹಣ ಕಂಡರೆ ಹೆಣವೂ ಬಾಯಿಬಿಡುತ್ತದೆ” ಎಂಬ ಮಾತೇ ಇದೆಯಲ್ಲ! ಎದ್ದ ಗುಸುಗುಸು ಗಾಳಿ ಅಲ್ಲಿಯೇ ತಣ್ಣಗಾಯಿತು.

          ರಾಮಪ್ಪ ವಿಷಯ ತಿಳಿದು ಕೆರಳಿ ಕೆಂಡವಾದ. ನಿಂಗಿಗೆ ಬುದ್ಧಿ ಹೇಳಿದ. ಕೇಳದಿದ್ದಾಗ ಆಕೆಯನ್ನು ಹಿಡಿದು ಹೊಡೆದ, ಬಡಿದ. ಆದರೆ, ಎಳ್ಳಷ್ಟೂ ಪ್ರಯೋಜನವಾಗಲಿಲ್ಲ. ಇಂದಲ್ಲ ನಾಳೆ ಸರಿಹೋಗಬಹುದೆಂದುಕೊಂಡ. ತನ್ನಿಂದಾದಷ್ಟು ತಡೆದುಕೊಂಡ. ಆದರೆ ಒಂದು ದಿನ ನೋಡಬಾರದ್ದನ್ನು ನೋಡಿದಾಗ ಆತನ ಆತ್ಮವಿಶ್ವಾಸಕ್ಕೆ ಬೆಂಕಿಬಿತ್ತು. ನಿಂಗಿಯನ್ನು ತನಗೆ ಮದುವೆಮಾಡಿಸಿ ’ಚೆನ್ನಾಗಿ ಬಾಳಿ’ ಎಂದು ಹರಸಿದ ಗೌಡ ಇಂದು ತನ್ನ ಕಣ್ಣಮುಂದೆ ರಕ್ಕಸನಾಗಿ ನಿಂತಿದ್ದ. ಅಂದಿನ ಗೌಡನಿಗೂ ಇಂದಿನ ಗೌಡನಿಗೂ ರಾತ್ರಿ ಹಗಲಿನಷ್ಟು ವ್ಯತ್ಯಾಸ ಕಂಡಿತು ರಾಮಪ್ಪನಿಗೆ.

          ರಾಮಪ್ಪ ಬಡವನಾದರೂ ಮರ್ಯಾದಸ್ಥ ಹಾಗೂ ಸ್ವಾಭಿಮಾನಿ. ಯಾರಿಗೂ ಕೇಡು ಬಯಸಿದವನಲ್ಲ. ಮೋಸಮಾಡಿದವನಲ್ಲ. ಗೌಡನನ್ನೂ ಆತನ ಕುಟುಂಬವನ್ನೂ ಗೌರವದಿಂದ ಕಂಡವನು. ಅವನಿಗಾಗಿ ದುಡಿದವನು. ಆದರೆ ಇಂದು ಬದುಕಿನಲ್ಲಿ ಅವನ ಆದರ್ಶಗಳಿಗೆ ಯಾವ ಬೆಲೆಯೂ ಇಲ್ಲವಾಯಿತು. ಊರಲ್ಲಿ ಸಭ್ಯರೆನಿಸಿಕೊಂಡವರಿಂದ ತನಗಾಗುತ್ತಿರುವ ಅಪಮಾನದಿಂದ ರಾಮಪ್ಪ ಇನ್ನಷ್ಟು ಕುಗ್ಗಿಹೋದ. ಊರಲ್ಲಿ ತಲೆಯೆತ್ತಿ ನಡೆಯುವುದೇ ಕಷ್ಟವಾಯಿತು. ಉಳಿದವರ ದುಃಖದುಮ್ಮಾನಗಳಿಗೆ, ಕಷ್ಟಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಿದ್ದ ರಾಮಪ್ಪನ ಬಗ್ಗೆ ಇಂದು ಯಾರೂ ಸ್ಪಂದಿಸಲಿಲ್ಲ. ಸಂಬಂಧವೇ ಇಲ್ಲ ಎಂಬಂತೆ ಇದ್ದುಬಿಟ್ಟರು. ತನ್ನ ಜೊತೆಗಾರರ ಈ ವರ್ತನೆ ರಾಮಪ್ಪನನ್ನು ಇನ್ನಷ್ಟು ಕುಗ್ಗುವಂತೆ ಮಾಡಿತು.

          ತಿಮ್ಮೇಗೌಡನ ಅತಿಕ್ರಮಣವನ್ನು ಕಂಡು ರಾಮಪ್ಪನಲ್ಲಿ ಕೋಪಜ್ವಾಲೆ ಭುಗಿಲೆದ್ದಿತು. ಸ್ವಾಭಿಮಾನ ಅಪಮಾನದ ಉರಿಗೆ ಸಿಲುಕಿ ಕರಗಿಹೋಯಿತು. ಗೌಡನ ರಟ್ಟೆಹಿಡಿದು ಕೆನ್ನೆಗೆ ಕೈಸೋಲುವಷ್ಟು ಹೊತ್ತು ರಪರಪನೆ ಬಾರಿಸಬೇಕೆಂದು ಮುಷ್ಟಿಬಿಗಿದು ಆವೇಶದಿಂದ ಮುನ್ನುಗ್ಗಿದ್ದ. ಗೌಡನ ಮುಂದೆ ನಿಂತಕೂಡಲೇ ಏರಿದ್ದ ಕೋಪ ಒಮ್ಮೆಲೆ ಕರಗಿಹೋಯಿತು. ರಾಮಪ್ಪ ಅಸಹಾಯಕನಾದ. ಬೈಯುವುದಕ್ಕೆ ನಾಲಗೆ ಹೊರಳಲಿಲ್ಲ, ಹೊಡೆಯುವುದಕ್ಕೆ ಕೈ ಏಳಲಿಲ್ಲ. ಆದರೆ ಗೌಡ ಮಾತ್ರ ಇಕ್ಕಟ್ಟಿಗೆ ಸಿಲುಕಿದ.  ತಾನು ನಿಂಗಿಯೊಂದಿಗಿರುವುದನ್ನು ರಾಮಪ್ಪ ನೋಡಿದ್ದ. ಒಂದೆಡೆ ತನ್ನ ಮಾನಹೋಗುವ ಪರಿಸ್ಥಿತಿ, ಇನ್ನೊಂದೆಡೆ ಅನೈತಿಕವ್ಯವಹಾರ. ಗೌಡ ತಬ್ಬಿಬ್ಬಾದ. ಊರವರ ಮುಂದೆ ಎದೆಸೆಟೆಸಿಕೊಂಡು ಓಡಾಡಿಕೊಂಡಿದ್ದ ಧೂರ್ತಗೌಡ ಈಗ ತನ್ನ ಕೆಲಸದಾಳು ರಾಮಪ್ಪನ ಮುಂದೆ ಬಾಲಮುದುರಿಸಿಕೊಂಡ ನಾಯಿಯಂತೆ ತಲೆತಗ್ಗಿಸಿ ನಿಂತಿದ್ದ. ರಾಮಪ್ಪನಿಗೆ ಒಂದು ಕ್ಷಣವೂ ಅಲ್ಲಿ ನಿಲ್ಲಲಾಗದೆ  ಹೊರಡಲು ಯತ್ನಿಸಿದರೂ ಕಾಲನ್ನು ಎತ್ತಿ ಮುಂದೆ ಹೆಜ್ಜೆ ಇಡುವುದಕ್ಕೆಸಾಧ್ಯವಾಗಲಿಲ್ಲ.

          ನಿಂಗಿ ’ನಿನಗೂ ನನಗೂ ಸಂಬಂಧವೇ ಇಲ್ಲ’ ಎನ್ನುವಂತೆ ತೆಪ್ಪಗಿದ್ದುದನ್ನು ನೋಡಿದಾಗ ರಾಮಪ್ಪನ ಅಸಮಾಧಾನದ ಬೆಂಕಿಗೆ ಇನ್ನಷ್ಟು ತುಪ್ಪಸುರಿದಂತಾಗಿತು. ಬದುಕಿನಲ್ಲಿ ಎಂದೂ ಕಾಣದ ಸೋಲನ್ನು ಕಂಡು ಮನೆಗೆ ಬಂದಿದ್ದ. ಕೂತಲ್ಲಿ ಕೂರಲಾಗಲಿಲ್ಲ, ನಿಂತಲ್ಲಿ ನಿಲ್ಲಲಾಗಲಿಲ್ಲ. ಮನೆಯಲ್ಲಿ ಅಲ್ಲಿ ಇಲ್ಲಿ ತಡಕಾಡಿದ. ನಾಲ್ಕು ಕಾಸು ಕೈಗೆ ಸಿಕ್ಕಿತು. ಮನಸ್ಸಿನ ಸಮಾಧಾನಕ್ಕಾಗಿ ಎರಡು ಗುಟುಕು ಹೊಟ್ಟೆಗಿಳಿಸಬಹುದು ಎಂದುಕೊಂಡ. ಕಾಸನ್ನು ಮುಷ್ಟಿಯಲ್ಲಿ ಹಿಡಿದುಕೊಂಡು ಈಚೆಗೆ ಬಂದಾಗ ಗೌರಿಯ ಕಣ್ಣೀರುತುಂಬಿದ ಅಸಹಾಯಕ ನೋಟ ಆತನ ಮನಸ್ಸನ್ನು ಮೃದುವಾಗಿ ಇರಿಯಿತು. ’ಅಪ್ಪ ಎಲ್ಲಿಗೆ ಹೊರಟಿದ್ದಾನೆ?’ ಎಂಬುದು ಅವಳಿಗೆ ತಿಳಿದುಹೋಯಿತು.

“ಅಪ್ಪಾ!” ಗೌರಿಯ ಅಸಹಾಯಕ ಧ್ವನಿ ರಾಮಪ್ಪನನ್ನು ತಡೆದುನಿಲ್ಲಿಸಿತು.

“ಯಾಕಪ್ಪ ಈ ಬುದ್ಧಿ ನಿಂಗೆ? ನೀನು ಹಿಂದೆ ಹೇಗಿದ್ದೆ? ಈಗ ಹೇಗಿದ್ದಿ ನೋಡು. ಮೊದಲೇ ನಿನ್ನ ಜೀವಕ್ಕೆ ನೆಮ್ಮದಿಯಿಲ್ಲ, ಮನಸ್ಸಿಗೆ ಶಾಂತಿಯಿಲ್ಲ. ಇದು ಅದಕ್ಕೆ ಮದ್ದೇನಪ್ಪಾ?” ಎಂದು ಅಳುತ್ತಾ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡ ಗೌರಿಯನ್ನು ಕಂಡು ರಾಮಪ್ಪ ಮೂಕನಾದ.

“ಹೆತ್ತು ಹೊತ್ತು ಸಾಕಿ, ಸಲಹಿದ ತಾಯಿ ಅಮ್ಮನಾಗಿ ಉಳಿಯಲಿಲ್ಲ. ಈಗ ನೀನೂ ನನ್ನಿಂದ ದೂರ ಹೋಗ್ತಿಯೇನಪ್ಪಾ? ನಿನ್ನ ಬಿಟ್ರೆ ನನಗ್ಯಾರಿದ್ದಾರೆ? ನಿನ್ನ ಕಾಲಿಗೆ ಬೀಳ್ತಿನಿ, ಹೆಂಡದ ಸಹವಾಸ ಬಿಡಪ್ಪಾ” ಎಂದು ಗೌರಿ ಬಿಕ್ಕಿದಾಗ ರಾಮಪ್ಪನಿಗೆ ತಡೆದುಕೊಳ್ಳಲಾಗಲಿಲ್ಲ. ಪುಡಿಗಾಸು ಕೈಯಿಂದ ಜಾರಿತು. ಮಗಳನ್ನು ಎತ್ತಿ ಬಿಗಿದಪ್ಪಿಕೊಂಡ. ತಲೆನೇವರಿಸಿದ, ಬೆನ್ನು ತಟ್ಟಿದ. ಕಣ್ಣೀರು ಒರೆಸಿದ.  “ಇಲ್ಲ, ಇನ್ನು ಕುಡಿಯೊಲ್ಲ” ಎಂದ. ದುಃಖದ ಕಟ್ಟೆಯೊಡೆಯಿತು. ಅಳುವಿನ ಪ್ರವಾಹ ಭೋರೆಂದು ಹರಿಯಿತು. ರಾಮಪ್ಪ ಯಾವತ್ತೂ ಅತ್ತವನಲ್ಲ. ಇಂದು ಗೋಳೊ ಎಂದು ಅತ್ತುಬಿಟ್ಟ. ಗೋಡೆಗೊರಗಿ ಕೂತರೂ ಕೂರಲಾಗಲಿಲ್ಲ. ಅಲ್ಲೇ ನೆಲಕ್ಕೊರಗಿದ.

          ಸಾಯಂಕಾಲ ಹೊತ್ತು ಮುಳುಗುವ ಹೊತ್ತಲ್ಲಿ ಮೆಲ್ಲನೆ ಮನೆಗೆ ಕಾಲಿರಿಸಿದ ನಿಂಗಿಯನ್ನು ಕಂಡಾಗ ರಾಮಪ್ಪನ ಮೈಯೆಲ್ಲ ಮತ್ತೆ ಉರಿಯತೊಡಗಿತು. ಗೌರಿಗೂ ಆಕೆಯ ಮುಖನೋಡಲು ಅಸಹ್ಯವೆನಿಸಿತು. ಬಂದವಳೇ ಮನೆಯೊಳಗಿನ ಪಾತ್ರೆಗಳನ್ನು ಕುಕ್ಕತೊಡಗಿದಾಗ, ತನ್ನಷ್ಟಕ್ಕೆ ಸಿಡಿಮಿಡಿಗುಟ್ಟುತ್ತ ತನ್ನನ್ನು ನೆಪವಾಗಿಟ್ಟು ನಿಂದಿಸತೊಡಗಿದಾಗ ರಾಮಪ್ಪನ ಕೋಪದ ಉರಿಗೆ ಇನ್ನಷ್ಟು ತುಪ್ಪಸುರಿದಂತಾಯಿತು. ದಿನವಿಡೀ ಏನನ್ನೂ ತಿನ್ನದೆ ಏಳುವುದಕ್ಕೆ ಅಸಾಧ್ಯವಾಗಿದ್ದರೂ ನಿಂಗಿಯ ಉದ್ದಟತನವನ್ನು ಕಂಡಾಗ ಮೈಯಲ್ಲೆಲ್ಲ ವಿದ್ಯುತ್ ಸಂಚಾರವಾದಂತಾಗಿ ದಡಕ್ಕನೆದ್ದು ಕೈಗೆ ಸಿಕ್ಕಿದ ದೊಣ್ಣೆಯನ್ನು ಎತ್ತಿಕೊಂಡು ಅಡುಗೆ ಮನೆಕಡೆಗೆ ನುಗ್ಗಿದಾಗ ಗೌರಿ ಓಡಿಬಂದು ದೊಣ್ಣೆಯನ್ನು ಗಟ್ಟಿಯಾಗಿ ಹಿಡಿದು, “ಸಾಯಿಸಿ ಜೈಲಿಗೆ ಹೋಗ್ತಿಯೇನಪ್ಪಾ? ನಾನೇನು ಮಾಡ್ಲಿ?” ಎಂದು ಅಂಗಲಾಚಿದಳು. ರಾಮಪ್ಪನ ರೌದ್ರಾವತಾರವನ್ನು ಕಂಡು ನಿಂಗಿ ನಿಜಕ್ಕೂ ಥರಗುಟ್ಟಿದಳು. ಹೆದರಿ ಹಿಂಬಾಲಿನಿಂದ ಹೊರಗೋಡಿ ಕತ್ತಲಲ್ಲಿ ಮಾಯವಾದಳು.

          ರಾಮಪ್ಪ, ಮನಸ್ಸಿಗೆ ಸಮಾಧಾನ ತಂದುಕೊಳ್ಳಲು ಪ್ರಯತ್ನಿಸಿದಷ್ಟೂ ನೋವು ಹೆಚ್ಚಾಗತೊಡಗಿತು. ಮನೆಯೆಲ್ಲ ಕುರುಕ್ಷೇತ್ರವಾದ ಮೇಲೆ ಸಮಾಧಾನವೆಲ್ಲಿಯದು? ರಾಮಪ್ಪ ಮನಸ್ಸಿನ ಸ್ತಿಮಿತವನ್ನು ಕಳೆದುಕೊಂಡ. ಹೊರಗೆ ಹೋದವನೇ ಕಂಠಪೂರ್ತಿ ಸುರಿದುಕೊಂಡ. ರಾತ್ರಿ ಎಷ್ಟೋ ಹೊತ್ತಿಗೆ ಅವನ ಜೊತೆಗಾರರು ಹೊತ್ತುತಂದು ಮಲಗಿಸಿಹೋದರು. ಮರುದಿನವೂ ಅದನ್ನೇ ಹೊಟ್ಟೆಗೆ ತುಂಬಿಸಿದಾಗ ದೇಹದಲ್ಲಿ ತ್ರಾಣ ಉಳಿದಿರಲಿಲ್ಲ. ಹತೋಟಿ ತಪ್ಪಿಹೋಯಿತು. ಬಾಯಿ ಬಿದ್ದುಹೋಯಿತು. ಹಾಯಾಗಿ ಕೈಕಾಲು ಚಾಚಿಕೊಂಡು ಬಿದ್ದುಕೊಂಡ ರಾಮಪ್ಪ ಮರುದಿನ ಏಳಲೇ ಇಲ್ಲ. ಯಾರೋ ಈ ಸುದ್ದಿಯನ್ನು ತಿಮ್ಮೇಗೌಡನಿಗೆ ತಿಳಿದಾಗ ಆತ ತನ್ನಷ್ಟಕ್ಕೇ ಮೀಸೆ ಅಡಿಯಲ್ಲೇ ನಕ್ಕುಬೀಗಿದ.

          ನಿನ್ನೆ ಇದ್ದ ರಾಮಪ್ಪ ಇವತ್ತಿಲ್ಲ. ರಾಮಪ್ಪ ಸತ್ತನಂತೆ. ಹೇಗೆ ಸತ್ತ? ಯಾಕೆ ಸತ್ತ? ಏನೇನೋ ಪ್ರಶ್ನೆಗಳು. ಸುದ್ದಿ ಊರಿಡೀ ಹಬ್ಬುವುದಕ್ಕೆ ಬಹಳ ಸಮಯ ಹಿಡಿಯಲಿಲ್ಲ. ತಪಾಸಣೆಗೆಂದು ಬಂದವರ ಕೈಬಾಯಿಗಳಿಗೆ ಗೌಡನ ಮನೆಯಲ್ಲಿ ಬಗೆಬಗೆಯ ಕೋಳಿ ಖಾದ್ಯಗಳು ಅದ್ಭುತವ್ಯಾಯಾಮ ನೀಡಿದವು. ಬಾಟಲಿಗಳು ಭರ್ಜರಿಯಾಗಿಯೇ ಸದ್ದುಮಾಡಿದವು. ಡರ್ ಎಂದು ತೇಗಿ ಜೇಬನ್ನು ಮತ್ತೆಮತ್ತೆ ಸವರುತ್ತ ಹೊರಟುಹೋದರು. ಗೆದ್ದೆನೆಂಬ ಹೆಮ್ಮೆಯಿಂದ ಗೌಡನೂ ಮೀಸೆ ಸವರಿಕೊಂಡ.

         ನಿಂಗಿ, ಗೋಳೋ ಎಂದು ಅಳುವ, ಎದೆಬಡಿದುಕೊಂಡು ಬೊಬ್ಬಿಡುವ ನಾಟಕವಾಡಿದಳು. ಎಲ್ಲವೂ ಅನ್ಯರನ್ನು ಮೆಚ್ಚಿಸುವುದಕ್ಕೆ. ಅವಳಿಗೆ ಏನನ್ನೂ ಕಳಕೊಂಡಂತೆ ಭಾಸವಾಗಲಿಲ್ಲ. ನಾಲ್ಕು ದಿನಗಳಲ್ಲಿ ಎಲ್ಲವೂ ಮರೆತುಹೋಯಿತು. ರಾಮಪ್ಪ ಸತ್ತಾಗ ತಿಮ್ಮೇಗೌಡನೇ ಎಲ್ಲರಿಗಿಂತ ಹೆಚ್ಚು ಸಹಾನುಭೂತಿ ತೋರಿಸಿದ. ರಾಮಪ್ಪನ ಗುಣಗಾನ ಮಾಡಿದ. ನಿಂಗಿ ಹಾಗೂ ಗೌಡನ ಗುಟ್ಟು ಬಲ್ಲವರಿಗಲ್ಲದೆ ಉಳಿದ ಊರವರಿಗೆ ಇದೆಲ್ಲ ಹೇಗೆ ಅರ್ಥವಾಗಬೇಕು? ಈಗ ಗೌಡನಿಗೆ ತನ್ನ ಸಾಲ ತೀರಲಿಲ್ಲ ಎಂಬ ಬೇಸರವಿಲ್ಲ.

          ಗೌರಿ ಅಸಹಾಯಕಳಾದಳು, ತಾಯಿ ಇದ್ದೂ ತಬ್ಬಲಿಯಾದಳು. ಇದ್ದ ಒಂದು ಆಸರೆಯೂ ತಪ್ಪಿಹೋಯಿತು. ನಿಂಗಿಯ ಮೇಲಿದ್ದ ’ಅಮ್ಮ’ ಎಂಬ ಮಮಕಾರವೂ ನಾಶವಾಗಿತ್ತು. ಗೌರಿ ತನ್ನ ಮನೆಯಲ್ಲಿಯೇ ಪರಕೀಯಳಾದಳು. ದಿನಕಳೆದಂತೆ ಗೌಡ ನಿಂಗಿಯ ಕಣ್ತಪ್ಪಿಸಿ ಆಗಾಗ ಮನೆಯ ಕಡೆ ಬರಲಾರಂಭಿಸಿದ. ಗೌಡನ ಕಣ್ಣು ಗೌರಿಯ ಮೇಲೆ ಬಿದ್ದಿತ್ತು. ನೋಡುವುದಕ್ಕೆ ಮೈಕೈ ತುಂಬಿಕೊಂಡು ಚುರುಕಾಗಿ ಓಡಾಡಿಕೊಂಡಿದ್ದ  ಚೆಲುವೆ ಗೌರಿಯನ್ನು ಕಂಡಾಗ ಗೌಡನ ಎದೆಯಲ್ಲಿ ಏನೋ ಡವಡವ. ನಾಲ್ಕು ಮಡಕೆಯ ಗಂಜಿ ಉಂಡವನಿಗೆ ಉಣ್ಣುವ ಚಟ ಹೇಗೆ ಬಿಟ್ಟೀತು?!  ಗೌರಿಗೆ  ಈಗ ಗೌಡ ರಕ್ಕಸನಂತೆ ಕಾಣತೊಡಗಿದ. ಗೌರಿ ತನ್ನಷ್ಟಕ್ಕೇ ನಡುಗಿದಳು. ಉಭಯಸಂಕಟಕ್ಕೀಡಾದಳು. ತನ್ನ ಮನೆಯೂ ತನಗೆ ಸುರಕ್ಷಿತವಾಗಿಲ್ಲ ಎಂಬುದು ಅನುಭವಕ್ಕೆ ಬಂತು. ಗೌಡನ ಮುಜುಗರ ಹುಟ್ಟಿಸುವ ಮಾತುಗಳು, ವಾಕರಿಕೆ ಬರಿಸುವ ಚೇಷ್ಟೆಗಳು ಎಲ್ಲವೂ ಅಸಹ್ಯವಾಗಿದ್ದವು. ಅವಳನ್ನು ಬುಟ್ಟಿಗೆ ಹಾಕಿಕೊಳ್ಳಲು ಏನೆಲ್ಲ ಕಸರತ್ತುಗಳನ್ನು ಮಾಡಿದ. ಗೌರಿಯ ಪುಣ್ಯವೋ ಏನೋ ಬಲಾತ್ಕಾರಕ್ಕೆ ಮನಸ್ಸುಮಾಡಲಿಲ್ಲ. ಹಾಗೆ ಮಾಡಿದರೆ ರಾಮಪ್ಪನ ಸಾವಿನ ಉರುಳು ತನ್ನ ಕೊರಳಿಗೆ ಬಲಿಯಬಹುದೆಂಬ ಭಯವೂ ಇತ್ತು.

          ಗೌರಿ ನೊಂದಳು, ಬೆಂದಳು. ಅವಳ ದುಃಖವನ್ನು ಅರ್ಥಮಾಡಿಕೊಳ್ಳುವವರು ಯಾರೂ ಇರಲಿಲ್ಲ. ಇನ್ನು ಬದುಕು ಕಷ್ಟ ಎಂದು ಮನವರಿಕೆಯಾದಾಗ ’ಬದುಕೇ ಬೇಡ’ ಎಂಬ ಆಲೋಚನೆ ಮನಸ್ಸಿನಲ್ಲಿ ಸುಳಿಯಿತು. ಆದರೆ ಹಾಗೆ ಮಾಡಿದರೆ ತಾನು ಹೇಡಿಯಾಗುತ್ತೇನೆ ಎಂಬ ಅರಿವೂ ಇತ್ತು. ಏನಾದರಾಗಲಿ, ಎದುರಾದ ಕಷ್ಟಗಳೆಲ್ಲವನ್ನೂ ಮೆಟ್ಟಿನಿಂತು ಬದುಕಬೇಕು ಎಂಬ ಛಲವೂ ಮನಸ್ಸಿನಲ್ಲಿ ಗಟ್ಟಿಯಾಗತೊಡಗಿತು. ಯಾವುದೇ ಕಿರಿಕಿರಿಯಿಲ್ಲದೆ ಬದುಕಬೇಕಾದರೆ ಮೊದಲು ಮನೆಬಿಡಬೇಕು. ಪಟ್ಟಣದಲ್ಲಿ ಯಾವುದಾದರೂ ಒಂದು ಕೆಲಸಹುಡುಕಿ ಅಲ್ಲಿಯೇ ನೆಲೆಸಬೇಕು. ಎಂಬೆಲ್ಲ ಯೋಚನೆಗಳು ಮನಸ್ಸಿನಲ್ಲಿ ಮೂಡಿದರೂ ಅದೆಲ್ಲವೂ ಸಾಧ್ಯವೇ? ಎಂಬ ಪ್ರಶ್ನೆಯೂ ಎದುರಾಯಿತು.

         ಗೌರಿಗೆ, ತಾನೂ ಒಬ್ಬ ಗುಣವಂತ ಹುಡುಗನನ್ನು ಮದುವೆಯಾಗಿ ಬದುಕಿನ ಕಹಿಸಿಹಿಗಳನ್ನು ಉಂಡು ಚೆನ್ನಾಗಿ ಬಾಳಬೇಕೆಂಬ ಆಸೆ ಇತ್ತು. ಆದರೆ ಅದಕ್ಕೆ ಪೂರಕವಾದ ವಾತಾವರಣ ಇರಲಿಲ್ಲ. ಮನೆಯಲ್ಲಿ ಅಮ್ಮನೊಂದಿಗಿನ ಮಾತುಕತೆ ನಿಂತುಹೋಗಿದೆ. ಆಕೆಯನ್ನು ನೋಡಿದೊಡನೆಯೇ ಗೌರಿಯ ಕೋಪ ನೆತ್ತಿಗೇರುತ್ತದೆ. ಬಹಳ ಕಷ್ಟಪಟ್ಟು ಸಹಿಸಿಕೊಂಡು ಸುಮ್ಮನಾಗುತ್ತಾಳೆ. ಬಡವನ ಕೋಪ ದವಡೆಗೆ ಕೇಡು ತಾನೆ! ಅತ್ತ ಬದುಕೂ ಇಲ್ಲ, ಇತ್ತ ಸಾವೂ ಇಲ್ಲ ಎಂಬಂತಹ ತಳಮಳದ ಸ್ಥಿತಿ. ಅಕ್ಕನ ಮನೆಗಾದರೂ ಹೋಗಿ ಇದ್ದುಬಿಡೋಣವೆಂದರೆ ಅಲ್ಲಿ ಅವರದ್ದು ಹತ್ತಾರು ಮಂದಿಯ ಕುಟುಂಬ. ಅವರ ಮಧ್ಯೆ ತಾನು ಹೇಗೆ ಬದುಕಲಿ? ಅವರಿಗೆ ಏಕೆ ಹೊರೆಯಾಗಲಿ? ಅಕ್ಕನೇನೋ ಈಗಲೂ ಕರೆಯುತ್ತಿದ್ದಾಳೆ, “ಇಲ್ಲಿಗೆ ಬಂದುಬಿಡು” ಎಂದು. ಆದರೆ ಹಾಗೆ ಹೋಗುವುದಕ್ಕೆ ಸಾಧ್ಯವೇ? ಅವಳ ಮನೆಯವರು ಏನೆಂದಾರು?! ಕಷ್ಟಗಳು ಬಂದರೆ ಮೇಲಿಂದ ಮೇಲೆ ಬರುತ್ತವೆ ಅನ್ನಿಸಿತು ಗೌರಿಗೆ.

          ಗೌರಿ ಈಗ ಇಪ್ಪತ್ತು ದಾಟಿದ ಚೆಲುವೆ. ನಿಂಗಿಯಂತೆಯೇ ದುಂಡುಮುಖದ ಬೊಗಸೆಗಣ್ಣಿನ ನಿರಾಭರಣ ಸುಂದರಿ. ಅವಳಿಗೆ ಯಾವುದೇ ಶೃಂಗಾರ ಬೇಕಿಲ್ಲ. ಪೇಟೆಯ ಹುಡುಗಿಯರ ಹಾಗೆ ಶೋಕಿ ಮಾಡುವುದಕ್ಕೆ ಗೊತ್ತಿಲ್ಲ. ಬಹಳ ನಾಜೂಕಾಗಿ ಸೀರೆ ಉಡುವುದನ್ನು ಕಲಿತಿದ್ದಾಳೆ. ಆದರೇನು ಮಾಡುವುದು? ಎಲ್ಲೋ ಹೊರಗೆ ಹೊರಟಳೆಂದರೆ ಒಂದಷ್ಟು ಪೋಲಿಕಣ್ಣುಗಳು ಪದೇ ಪದೇ ಹಿಂಬಾಲಿಸಿಕೊಂಡು ನುಂಗಲು ಹವಣಿಸುತ್ತವೆ. ಗೌರಿಗೆ ಇದರಿಂದ ಹಿಂಸೆ, ಮುಜುಗರ. ಹೆಣ್ಣಿನ ಅಸಹಾಯಕತೆ ಆಕೆಯನ್ನು ಎಂತಹ ಪರಿಸ್ಥಿತಿಗೆ ತಂದೊಡ್ಡುತ್ತವೆ ಎಂಬುದು ಈಗ ಗೌರಿಗೆ ಪದೇಪದೇ ಅನುಭವಕ್ಕೆ ಬರುತ್ತದೆ.

          ಮೊನ್ನೆ ಮೊನ್ನೆ ಅವಳ ಮಾವನ ಮಗ ಮಲ್ಲೇಶ ಬಂದಿದ್ದ. ದೇಹ ಬೆಳೆದಿದ್ದರೂ ಬುದ್ಧಿ ಅಷ್ಟಾಗಿ ಬೆಳೆದಿಲ್ಲ. ಕುಡಿತದ ಶೋಕಿಸರದಾರ. ಬಂದವನೇ ಗೌರಿಯನ್ನು ಅಡಿಯಿಂದ ಮುಡಿಯವರೆಗೆ ಬಿಟ್ಟಕಣ್ಣುಗಳಿಂದ ದುರುಗುಟ್ಟಿ ನೋಡತೊಡಗಿದ. ಗೌರಿಗೆ ಮೈಯೆಲ್ಲ ಪರಚಿದಂತಾಯಿತು. ಅವಳ ರೂಪವನ್ನು ಕಂಡವನಿಗೆ ತೆರೆದ ಬಾಯಿಯನ್ನು ಮುಚ್ಚುವುದಕ್ಕೂ ಮರೆತುಹೋಯಿತು. ಗೌರಿಯನ್ನೇ ಮದುವೆಮಾಡಿಕೊಳ್ಳಬೇಕೆಂಬ ಆಲೋಚನೆ ಹುಟ್ಟಿ ನಿಂಗಿಯನ್ನು ಪೀಡಿಸಹತ್ತಿದ. ನಿಂಗಿ ಅದಕ್ಕೆಲ್ಲ ಕಿವಿಗೊಡದಿದ್ದಾಗ, “ನಿನ್ನ ಪುರಾಣವನ್ನೆಲ್ಲ ಊರವರಿಗೆ ಹೇಳಿಬಿಡುತ್ತೇನೆ” ಎಂದು ಹೆದರಿಸಿದ. ನಿಂಗಿಗೆ ಬೇರೆ ಉಪಾಯ ಕಾಣಲಿಲ್ಲ. “ಆಗಲಿ” ಎಂದು ಒಪ್ಪಿಕೊಂಡಳು. ಗೌರಿ ಅಡಕ್ಕೊತ್ತಿನಲ್ಲಿ ಸಿಕ್ಕ ಅಡಿಕೆಯಾದಳು. ಒಂದು ಕುಣಿಕೆಯಿಂದ ತಪ್ಪಿಸಿಕೊಂಡರೆ ಇನ್ನೊಂದು ಬಲಿಯುತ್ತಿದೆಯಲ್ಲ ಎಂದು ನೊಂದುಕೊಂಡಳು. ಇನ್ನು ಜೀವಕಳೆದುಕೊಳ್ಳುವುದೇ ದಾರಿಯೇನೋ?! ಎಂದುಕೊಂಡಳು.

** ** ** **

ಪ್ರಸಾದನಿಗೆ, ತನ್ನ ಮನೆಯಲ್ಲಿ ಇಷ್ಟೊಂದು ರಾದ್ದಾಂತ ನಡೆಯುತ್ತಿದ್ದರೂ ತಾನು ಯಾವುದಕ್ಕೂ ತಲೆಹಾಕದಿದ್ದುದು, ತಮ್ಮ ಜಮೀನಿನ ವಿಷಯದಲ್ಲಿ ತಲೆಕೆಡಿಸಿಕೊಳ್ಳದಿದ್ದದ್ದು ಎಲ್ಲವನ್ನು ನೆನೆದಾಗ ಆತನಿಗೆ ತನ್ನ ಬಗ್ಗೆ ಹೇಸಿಗೆ ಎನಿಸತೊಡಗಿತು. ವರ್ಷಕ್ಕೆ ಮೂರೋ ನಾಲ್ಕೋ ಬಾರಿ ಊರಿಗೆ ಬಂದುಹೋಗುತ್ತಿದ್ದರೂ ಅಮ್ಮನಾಗಲೀ ಕೆಲಸದ ಆಳುಗಳಾಗಲೀ ಯಾರೊಬ್ಬರೂ ಬಾಯಿಬಿಟ್ಟಿರಲಿಲ್ಲ. ಅವರೆಲ್ಲರಿಗೂ ತಿಮ್ಮೇಗೌಡನ ಹೆದರಿಕೆ ಇತ್ತು. ಈಗ ಪ್ರಸಾದನಿಗೆ ಅಪ್ಪನ ಮುಖನೋಡುವುದಕ್ಕೂ ಅಸಹ್ಯವಾಗುತ್ತಿದೆ. ಒಂದೆಡೆ ರಾಮಪ್ಪನಿಗೆ ಮೋಸವಾಯಿತು. ಇನ್ನೊಂದೆಡೆ ಅಮ್ಮನಿಗೆ ಅನ್ಯಾಯವಾಗಿದೆ, ಮತ್ತೊಂದೆಡೆ ಗೌರಿಗೂ ಅನ್ಯಾಯವಾಗಿದೆ. ಅವಳೋ ಕೆಟ್ಟಸ್ಥಿತಿಯಲ್ಲಿದ್ದಾಳೆ.  ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕೆಂದು ಯೋಚಿಸತೊಡಗಿದ.

          ರಾಮಪ್ಪ ಮೋಸಕ್ಕೆ ಬಲಿಯಾದ.  ಆತನ ದುಡಿತಕ್ಕೆ ಪ್ರತಿಫಲ ದೊರೆಯಲಿಲ್ಲ. ನಿಂಗಿ ಒಳ್ಳೆಯ ಗೃಹಿಣಿಯಾಗಿ ಉಳಿಯಲಿಲ್ಲ. ವಿಧಿಲೀಲೆ ಎಂತಹವರನ್ನೂ ದಾರಿತಪ್ಪಿಸುತ್ತದೆ. ಪ್ರಸಾದನ ಕಾಲುಗಳು ಅವನಿಗೆ ಅರಿವಿಲ್ಲದೆ ನದಿಯ ಕಡೆಗೆ ಹೆಜ್ಜೆಹಾಕುತ್ತಿದ್ದಂತೆ ಆತನಿಗೆ ಬಾಲ್ಯದ ನೆನಪುಗಳು ಕಾಡತೊಡಗಿದವು. ’ತಾನು, ಕಮ್ಲಿ, ಗೌರಿ ಎಲ್ಲರೂ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದುದು, ಮನೆಗೆ ಬರುವಾಗ ತಾನು ಅಂಗಡಿಯಲ್ಲಿ ಕೊಂಡುಕೊಂಡ ತಿಂಡಿಗಳನ್ನು ಒತ್ತಾಯಪೂರ್ವಕವಾಗಿ ಅವರಿಗೂ ತಿನ್ನಿಸುತ್ತಿದ್ದುದು, ಅವರು ತನ್ನ ಮೇಲೆ ತೋರುತ್ತಿದ್ದ ಪ್ರೀತಿ ವಿಶ್ವಾಸಗಳು, ತಾವಾಡುತ್ತಿದ್ದ ಬುಗುರಿಯಾಟ, ಲಗೋರಿಯಾಟ’- ಎಲ್ಲವೂ ಒಂದೊಂದಾಗಿ ಮನಸ್ಸನ್ನು ತುಂಬಿಕೊಂಡವು. ತಾನು ಗೌರಿಗಿಂತ ಕೆಲವು ತರಗತಿಗಳಷ್ಟು ಮುಂದಿದ್ದರೂ ತಮ್ಮೊಳಗೆ ತುಂಬಾ ಸಲುಗೆಯಿತ್ತು. ಅದನ್ನು ಕಂಡು ಅಪ್ಪ, “ನಮ್ಮ ಅಂತಸ್ತಿಗೆ ಅವರು ಸಮ ಅಲ್ಲ, ಅವರೊಂದಿಗೆ ಜಾಸ್ತಿ ಸಲುಗೆ ಬೇಡ” ಎಂದು ಆಗಾಗ ಆಕ್ಷೇಪಿಸುವುದಿತ್ತು. ಆಗೆಲ್ಲ ತಾನು ಅಪ್ಪನ ಕಣ್ಣು ತಪ್ಪಿಸಿ ಗೌರಿ, ಕಮ್ಲಿಯರೊಂದಿಗೆ ಓಡಾಡುವುದಿತ್ತು. ತಾನು ಪದವಿ ಕಲಿಯುವುದಕ್ಕೆ ಪರವೂರಿಗೆ ಹೋದಮೇಲೆ ಅವರೊಂದಿಗೆ ಸಲುಗೆ ಕಡಿಮೆಯಾಯಿತು. ಭೇಟಿಯೂ ಅಷ್ಟೇ. ಪ್ರಸಾದನಿಗೆ ಒಂದೊಂದೇ ನೆನಪುಗಳು ಮರುಕೊಳಿಸತೊಡಗಿದವು.

          ಪ್ರಸಾದನನ್ನು ಊರಿಗೆ ತರಾತುರಿಯಿಂದ ಮನೆಗೆ ಕರೆಸಿಕೊಂಡಿದ್ದರೆ ಹಿಂದೆ ಒಂದು ಮುಖ್ಯ ಕಾರಣವಿತ್ತು. ಯೂರೋ ಕೊಪ್ಪದ ಸಿರಿವಂತ ಸಾಹುಕಾರರ ಮಗಳ ನೆಂಟಸ್ತಿಕೆ ಇತ್ತು. ಒಬ್ಬಳೇ ಮಗಳು, ಹತ್ತಾರು ಎಕರೆ ತೋಟ, ಜಮೀನು ಎಲ್ಲವೂ ಇತ್ತು. ತಿಮ್ಮೇಗೌಡ ಬಹಳ ಆಲೋಚನೆಮಾಡಿ ಈ ನೆಂಟಸ್ತಿಕೆ ಕುದುರಿಸಿದ್ದ. ಇದೆಲ್ಲವೂ ಅಮ್ಮನಿಂದ ಪ್ರಸಾದನಿಗೆ ತಿಳಿದಿತ್ತು. ಆದರೆ ಅಪ್ಪನ ಈ ನೆಂಟಸ್ತಿಕೆಯ ಯೋಚನೆ ಪ್ರಸಾದನಿಗೆ ಇಷ್ಟವಾಗಲಿಲ್ಲ. ಮನೆಗೆ ಬಂದು ಎರಡು ದಿನಗಳಾದರೂ ಈ ವಿಚಾರವನ್ನು ಅಪ್ಪ ತನ್ನಲ್ಲಿ ಪ್ರಸ್ತಾಪಿಸಿರಲಿಲ್ಲ. ಅದಕ್ಕಿಂತ ಮೊದಲೇ ತಾನೊಂದು ನಿರ್ಧಾರ ತೆಗೆದುಕೊಳ್ಳಲೇ ಬೇಕು ಎಂದೆಲ್ಲ ಯೋಚಿಸಿದ.

          ನದಿಯ ಮಧ್ಯೆ ಸುಳಿ ಇರುವ ಅಪಾಯಕಾರಿ ಜಾಗದಲ್ಲಿ ಯಾರೋ ಹೆಣ್ಣೊಬ್ಬಳು ಕುಳಿತುಕೊಂಡಿರುವುದು ಪ್ರಸಾದನಿಗೆ ದೂರದಿಂದಲೆ ಕಾಣಿಸಿತು. ಯಾಕೋ ಸ್ವಲ್ಪ ಸಂಶಯವೂ ಬಂದು ವೇಗವಾಗಿ ಹೆಜ್ಜೆಹಾಕಿದ. ಅಲ್ಲಿಗೆ ಸಮೀಪಿಸುತ್ತಿದ್ದಂತೆ ಆಕೃತಿ ಸ್ಪಷ್ಟವಾಗತೊಡಗಿತು. ಗೌರಿ ಒಬ್ಬಳೇ ಕುಳಿತಿದ್ದಾಳೆ. ತನ್ನ ಮೊಣಕಾಲಿಗಳಿಗೆ ತಲೆಯನ್ನೊರಗಿಸಿಕೊಂಡು ಬಿಕ್ಕಿಬಿಕ್ಕಿ ಅಳುತ್ತಿದ್ದಾಳೆ. ಆಕೆಗೆ ಪ್ರಸಾದನ ಬರುವಿಕೆ ತಿಳಿಯಲಿಲ್ಲ. ಹತ್ತಿರ ಹೋದವನೇ ತಲೆಯ ಮೇಲೆ ಕೈಯಾಡಿಸಿದ. ಆಕೆ ಒಮ್ಮೆಲೇ ಬೆಚ್ಚಿಬಿದ್ದಳು. ಕಣ್ಣರಳಿಸಿ ನೋಡಿದರೆ ಪ್ರಸಾದ ನಿಂತಿದ್ದ. ಮಾತು ಹೊರಡಲಿಲ್ಲ.

“ಎಲ್ಲರನ್ನೂ ಬಿಟ್ಟುಹೋಗಬೇಕೆಂದು ಕೊಂಡಿದ್ದಿಯಾ?!’ ಪ್ರಸಾದ ಕೇಳಿದ. ಗೌರಿ ಸ್ವಲ್ಪಹೊತ್ತು ಮೌನವಾಗಿದ್ದಳು.

“ನನಗೆ ಬೇರೆ ದಾರಿ ಇಲ್ಲ, ಪ್ರಸಾದ. ಈ ಜನ ನನ್ನನ್ನು ಬದುಕಲು ಬಿಡುವುದಿಲ್ಲ. ಉದ್ಯೋಗವಿಲ್ಲ, ಕೈಯಲ್ಲಿ ಹಣವಿಲ್ಲ. ಮರ್ಯಾದೆ ಕಳಕೊಂಡು ಬದುಕುವುದಕ್ಕೆ ನನ್ನಿಂದ ಸಾಧ್ಯವಿಲ್ಲ. ಏನು ಮಾಡಲಿ?” ಎಂದು  ಪಕ್ಕದಲ್ಲಿ ನಿಂತಿದ್ದ ಪ್ರಸಾದನ ಕಾಲಿಗೆ ತಲೆಯಾನಿಸಿ ಗೋಳೋ ಎಂದು ಅತ್ತಳು. ಪ್ರಸಾದ ಅವಳ ತಲೆಯ ಮೇಲೆ ಕೈಯಾಡಿಸುತ್ತ ಬೆನ್ನು ತಟ್ಟಿದ. ಪ್ರಸಾದನ ಸ್ಪರ್ಶದಲ್ಲಿ ಹಿತವಿತ್ತು, ಸಾಂತ್ವಾನವಿತ್ತು. ದೈನ್ಯವಾಗಿ ತಲೆಯೆತ್ತಿ ನೋಡಿದಳು. ಆಕೆಯ ಕಣ್ಣುಗಳಲ್ಲಿ ಅಸಹಾಯಕತೆಯಿತ್ತು, ಭಯವಿತ್ತು, ಗೊಂದಲವಿತ್ತು. ಮುಂದೇನು ಎಂಬ ಪ್ರಶ್ನೆಯೂ ಇತ್ತು.  ಪ್ರಸಾದ ಆಕೆಗೆ ಆಪತ್ಭಾಂಧವನಾಗಿ ಕಂಡ. ತನಗಾಗಿ ತುಡಿಯುವ ಒಂದು ಜೀವ ಇದೆಯಲ್ಲ ಅನ್ನಿಸಿತು.

“ಆತ್ಮಹತ್ಯೆಮಾಡಿಕೊಂಡು ಏನನ್ನೂ ಸಾಧಿಸಲಾಗುವುದಿಲ್ಲ ಗೌರಿ. ನೀನು ಬದುಕಿ ಸಾಧಿಸಬೇಕು.” ಎಂದ ಪ್ರಸಾದ.

“ಹೇಗೆ ಬದುಕಲಿ? ಯಾರಿದ್ದಾರೆ? ಇರುವುದಕ್ಕೆ ಆಸರೆಯಿಲ್ಲ. ಇರುವ ಮನೆಯೇ ಭಯಹುಟ್ಟಿಸುತ್ತಿದೆ.  ಅಲ್ಲಿ ಯಾವಾಗ ಏನಾಗುತ್ತದೋ ತಿಳಿಯದು. ಹೊಟ್ಟೆಹೊರೆಯಲು ಉದ್ಯೋಗವೂ ಇಲ್ಲ. ಮೇಲಾಗಿ ಯಾರೂ ನನ್ನನ್ನು ಬದುಕುವುದಕ್ಕೆ ಬಿಡುವುದಿಲ್ಲ. ಏನು ಮಾಡಲಿ ಹೇಳು?” ಎಂದು ಗೌರಿ ಗೋಗರೆದಾಗ ಪ್ರಸಾದನಿಗೆ ಆಕೆಗಾಗಿರುವ ಅವಮಾನ, ಹಿಂಸೆಗಳ ಅರಿವಾಯಿತು. ಆಕೆಯ ತಲೆಯ ಮೇಲೆ ಕೈಯಿಟ್ಟು, “ನೋಡು ಗೌರಿ, ನಿನ್ನ ಈ ಸ್ಥಿತಿಗೆ ನನ್ನ ಅಪ್ಪನೇ ಮುಖ್ಯ ಕಾರಣ. ನನ್ನ ಅಪ್ಪ ಕೇವಲ ನಿನ್ನ ಕುಟುಂಬಕ್ಕೆ ಮಾತ್ರ ಮೋಸಮಾಡಿಲ್ಲ, ಹಲವು ಕುಟುಂಬಗಳಿಗೆ ಮೋಸಮಾಡಿದ್ದಾನೆ. ನಮಗೂ ಮೋಸಮಾಡಿದ್ದಾನೆ. ನಿಮಗೆಲ್ಲ ನನ್ನ ಅಪ್ಪನ ಮೇಲೆ ಎಷ್ಟು ದ್ವೇಷವಿದೆಯೋ ನನಗೂ ಅಷ್ಟೇ ದ್ವೇಷವಿದೆ. ನಿನ್ನ ಅಪ್ಪನನ್ನು ನನ್ನಿಂದ ಉಳಿಸಿಕೊಳ್ಳಲಾಗಲಿಲ್ಲ. ನಿನ್ನನ್ನಾದರೂ ನಾನು ಉಳಿಸಿಕೊಳ್ಳಬೇಕು.  ನೀನು ಒಪ್ಪುವುದಾದರೆ ನಾನು ನಿನ್ನನ್ನು ಮದುವೆಯಾಗಿ ನನ್ನ ಅಪ್ಪನ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ.” ಎಂದ ಪ್ರಸಾದ.

ಗೌರಿ ಪ್ರಸಾದನಿಂದ ಈ ಮಾತನ್ನು ನಿರೀಕ್ಷಿಸಿರಲಿಲ್ಲ. ಆತನನ್ನೇ ದಿಟ್ಟಿಸಿ ನೋಡಿದಳು.

“ನಾನು ನಿನ್ನಷ್ಟು ಕಲಿತಿಲ್ಲ ಪ್ರಸಾದ. ನನ್ನಂತಹ ಸಾಮಾನ್ಯ ಹಳ್ಳಿಹುಡುಗಿಯನ್ನು ಮದುವೆಯಾಗಿ ನಿನ್ನ  ಬಂಧುಗಳ, ಸ್ನೇಹಿತರ ಮುಂದೆ ಸಣ್ಣವನಾಗುತ್ತೀಯಾ?” ಎಂದಳು.

“ಮದುವೆಯಾಗಿ ಚೆನ್ನಾಗಿ ಸಂಸಾರ ಮಾಡುವುದಕ್ಕೆ ತುಂಬಾ ಕಲಿಯಬೇಕಿಲ್ಲ ಗೌರಿ. ಒಳ್ಳೆಯ ಮನಸ್ಸು, ಒಳ್ಳೆಯ ಗುಣ, ಒಳ್ಳೆಯ ಮಾತು ಇದ್ದರೆ ಸಾಕು. ಅದೆಲ್ಲವೂ ನಿನ್ನಲ್ಲಿದೆ. ನೀನು ನನ್ನೊಂದಿಗೆ ಚೆನ್ನಾಗಿ ಸಂಸಾರ ಮಾಡುತ್ತಿ ಎಂಬ ಭರವಸೆಯೂ ನನಗಿದೆ. ನಾವಿಬ್ಬರೂ ಚಿಕ್ಕಂದಿನಿಂದಲೂ ಪರಸ್ಪರ ಚೆನ್ನಾಗಿ ಬಲ್ಲವರು. ನನ್ನ ಗುಣಸ್ವಭಾವಗಳು ನಿನಗೆ ಗೊತ್ತಿವೆ, ನಿನ್ನ ಗುಣಸ್ವಭಾವಗಳು ನನಗೂ ಗೊತ್ತಿವೆ. ಹೆದರಬೇಡ. ಊರ ಜನರು ಹುಬ್ಬೇರಿಸುವ ಹಾಗೆ ಸಂಸಾರ ಮಾಡೋಣ. ಸೋಲಬಾರದು, ಗೆಲ್ಲಬೇಕು. ಜನ ಬಾಯಿಮುಚ್ಚುತ್ತಾರೆ” ಎಂದ.

ಗೌರಿಗೆ ಬಾಯಿಂದ ಮಾತು ಹೊರಡಲಿಲ್ಲ, ಗಂಟಲುಬ್ಬಿ ಬಂತು. ತನಗೆ ಚೆನ್ನಾಗಿ ಬಾಳುವುದಕ್ಕೆ, ಸುರಕ್ಷಿತವಾಗಿರುವುದಕ್ಕೆ ಇದೊಂದೇ ಅವಕಾಶವೆಂಬುದು ಆಕೆಗೆ ಮನವರಿಕೆಯಾಯಿತು. ಆದರೂ ಮನಸ್ಸಿನಲ್ಲಿ ಒಂದು ಬಲವಾದ ಸಂಶಯವಿತ್ತು.

“ನಮ್ಮ ಮದುವೆಗೆ ನಿಮ್ಮಪ್ಪ ಒಪ್ಪುತ್ತಾರಾ?!, ನನ್ನಿಂದಾಗಿ ನೀನೂ ಮನೆಯಲ್ಲಿ ಎಲ್ಲರ ನಿಷ್ಠುರ ಕಟ್ಟಿಕೊಳ್ಳಬೇಕಾ? ನಿನ್ನ ಮನೆಯೇ ರಣರಂಗವಾದರೆ ಏನು ಮಾಡಲಿ?” ಗೌರಿ ಅಸಹಾಯಕವಾಗಿ ನೋಡಿದಳು.

“ಹೆದರಬೇಡ, ಅಪ್ಪ ಕಂಡಿತ ಒಪ್ಪುವುದಿಲ್ಲ ಎಂದು ನನಗೂ ಗೊತ್ತು. ಅಮ್ಮ ಕಂಡಿತ ಒಪ್ಪುತ್ತಾರೆ. ನೀನು ನನ್ನ ಹೆಂಡತಿಯಾದ ಮೇಲೆ ಅಪ್ಪನೂ ಏನೂ ಮಾಡಲಾರ. ಅವನ ಸೋಲನ್ನು ನಾನು ಕಣ್ಣಾರೆ ನೋಡಬೇಕು. ನಾವು ಹೆದರಿದರೆ ಜನ ನಮ್ಮನ್ನು ಇನ್ನಷ್ಟು ಹೆದರಿಸುತ್ತಾರೆ. ನಾವು ಧೈರ್ಯವಾಗಿ ಒಂದೆರಡು ಹೆಜ್ಜೆ ಮುಂದಿಟ್ಟರೆ ಅವರೇ ಹಿಂಜರಿಯುತ್ತಾರೆ. ಇಷ್ಟಕ್ಕೂ ನಾವೇನೂ ಮಾಡಬಾರದ್ದನ್ನು ಮಾಡಿಲ್ಲವಲ್ಲ. ಹೆದರಬೇಡ, ಧೈರ್ಯವಾಗಿರು. ನಾನಿದ್ದೇನೆ. ಅಪರಾಧಗಳನ್ನು ಮಾಡಿದ ಅವನಿಗೆ ಅಷ್ಟೊಂದು ಧೈರ್ಯವಿರುವುದಾದರೆ, ಒಂದೂ ಅಪರಾಧವನ್ನು ಮಾಡದ ನಮಗೆ ಅವನಿಗಿಂತ ನೂರುಪಟ್ಟು ಧೈರ್ಯವಿರಲೇಬೇಕು.”

          ಪ್ರಸಾದನ ದೃಢವಾದ ಮಾತುಗಳನ್ನು ಕೇಳಿ ಗೌರಿಗೂ ಮೈಯಲ್ಲೆಲ್ಲ ವಿದ್ಯುತ್ ಸಂಚಾರವಾದಂತಾಯಿತು. ಪ್ರಸಾದನ ಕಾಲುಗಳಿಗೆ ಬಾಗಿದಳು. ಆತ ಅವಳನ್ನೆತ್ತಿ ಗಟ್ಟಿಯಾಗಿ ಬಿಗಿದಪ್ಪಿಕೊಂಡ. ನೀರಸುಳಿಯಲ್ಲಿ  ಎಳೆದೊಯ್ಯುತ್ತಿದ್ದ ತನ್ನನ್ನು ಎಳೆದು ರಕ್ಷಿಸಿದ ಹಾಗಾಯಿತು ಗೌರಿಗೆ. ಒಂದೆಡೆ ದುಃಖ, ಇನ್ನೊಂದೆಡೆ ಸಂತೋಷ. ಅಳು ಬಂತು. ಗಟ್ಟಿಯಾಗಿ ಮನಸ್ಸು ಹಗುರವಾಗುವರೆಗೂ ಅತ್ತಳು. ಅವಳ ಮನಸ್ಸಿನಲ್ಲಿ ತುಂಬಾ ನೋವು ಮಡುಗಟ್ಟಿದೆ ಎಂಬುದು ಪ್ರಸಾದನಿಗೆ ಅರ್ಥವಾಯಿತು. ಏನೂ ಮಾತಾಡಲಿಲ್ಲ. ಸುಮ್ಮನೆ ಆಕೆಯ ತಲೆಯನ್ನು ನೇವರಿಸುತ್ತ, ಬೆನ್ನು ತಟ್ಟುತ್ತಲೇ ಇದ್ದ. ಆಕೆಗೆ ಎಂದೂ ಸಿಗದ ಸಮಾಧಾನ ಸಿಕ್ಕಿತು.

          ಮರುದಿನ ಊರ ದೇವಸ್ಥಾನದಲ್ಲಿ ತನ್ನ ನಾಲ್ಕಾರು ಸ್ನೇಹಿತರ ಸಮ್ಮುಖದಲ್ಲಿ ಗೌರಿಯನ್ನು ಮದುವೆಮಾಡಿಕೊಂಡ ಪ್ರಸಾದ ಆಕೆಯೊಂದಿಗೆ ಮನೆಗೆ ಬಂದಾಗ ತಿಮ್ಮೇಗೌಡ ಮನೆಯಲ್ಲಿ ಇರಲಿಲ್ಲ. ಮನೆಗೆ ಬಂದವನೇ ತಾಯಿಯ ಬಳಿಗೆ ಹೋಗಿ ನಿಂತುಕೊಂಡ. ಪಕ್ಕದಲ್ಲಿ ನಿಂತ ಗೌರಿಯನ್ನು ಕಂಡು ಆಕೆಗೆ ಕಣ್ತುಂಬಿ ಬಂತು. “ಒಳ್ಳೆಯ ಕೆಲಸ ಮಾಡಿದೆ ಮಗನೇ. ಇಬ್ಬರೂ ಚೆನ್ನಾಗಿ, ಸುಖವಾಗಿ ಬಾಳಿ” ಎಂದು ಹರಸಿದಳು.  ಕಾಲಿಗೆರಗಿದ ಗೌರಿಯನ್ನು ಹಿಡಿದೆತ್ತಿ ಬಿಗಿದಪ್ಪಿಕೊಂಡಳು. ತನಗಾಗಿ ಮಿಡಿಯುವ ಒಂದು ಹೆಣ್ಣುಜೀವವೂ ಇದೆ, ಹೆಣ್ಣುಹೆತ್ತವಳಿಗೆ ಹೆಣ್ಣನೋವು ಅರ್ಥವಾಗಲಿಲ್ಲ, ಹೆಣ್ಣು ಹೆರದವಳಿಗಾದರೂ ಹೆಣ್ಣನೋವು ಅರ್ಥವಾಯಿತಲ್ಲ! ಎಂದು ಸಮಾಧಾನಪಟ್ಟುಕೊಂಡಳು . ಅಷ್ಟರಲ್ಲಿ ಯಾರಿಂದಲೋ ಸುದ್ಧಿತಿಳಿದು ಕೆರಳಿ ಕಂಡವಾದ ತಿಮ್ಮೇಗೌಡ   ದೊಣ್ಣೆಹಿಡಿದು ಮನೆಯೊಳಗೆ ನುಗ್ಗಿದ್ದ. “ಎಲ್ಲೇ ಅವನು, ಮೂರು ಕಾಸಿನ ಯೋಗ್ಯತೆ ಇಲ್ಲದವನು?” ಎಂದು ಗೂಳಿಯಂತೆ ಹೂಂಕರಿಸುತ್ತ ಪಡಸಾಲೆಗೆ ಕಾಲಿಟ್ಟಾಗ ಪ್ರಸಾದ ಗೌರಿಯೊಂದಿಗೆ ನೇರವಾಗಿ ಮುಂದೆ ನಿಂತುಕೊಂಡು ದುರುಗುಟ್ಟಿ, “ನೋಡಿ ಇಲ್ಲಿದ್ದೇನೆ” ಎಂದ. ಪ್ರಸಾದನ ಮಾತಿನಲ್ಲಿನ ಗಡುಸುತನವನ್ನು, ಅವನ ನೆಟ್ಟದೃಷ್ಟಿಯನ್ನು ನೋಡಿ ಗೌಡ ಅಲ್ಲಿಯೇ  ಮರಗಟ್ಟಿದ. ಪ್ರಸಾದನ ತಾಯಿ ಮೆಲ್ಲನೆ ಪಡಸಾಲೆಗೆ ಬಂದು ಮಗ ಸೊಸೆಯರನ್ನು ತನ್ನೆರಡೂ  ಕೈಗಳಿಂದ ಆಲಿಂಗಿಸಿಕೊಂಡುದನ್ನು ನೋಡಿ ತಿಮ್ಮೇಗೌಡನ ಆವೇಶವೆಲ್ಲವೂ ಕುಸಿಯತೊಡಗಿತು. ದೊಣ್ಣೆಸಹಿತ ಎತ್ತಿದ ಕೈ ಮೆಲ್ಲನೆ ಕೆಳಗಿಳಿಯುತ್ತಿದ್ದಂತೆ ದೊಣ್ಣೆ ಕೈಯಿಂದ ಜಾರಿತು. ತಲೆ ತಗ್ಗಿತು. ತಿಮ್ಮೇಗೌಡ ಮೊದಲ ಬಾರಿಗೆ ಸೋತ. ಅದೂ ತನ್ನ ಹೆಂಡತಿ, ಮಗ ಮತ್ತು ಸೊಸೆಯರ ಮುಂದೆ. ತಿಮ್ಮೇಗೌಡನ ಮೈಯೆಲ್ಲ ನಡುಗಿತು. ನಿಲ್ಲಲಾರದೆ ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಕ್ಕರಿಸಿದ.

***

 

Leave a Reply

Your email address will not be published. Required fields are marked *