ಸಾಹಿತ್ಯಾನುಸಂಧಾನ

heading1

ಹಡಕಿಗೆ ಮೆಚ್ಚಿದ ಸೊಣಗ!

‘ಹಡಕಿಗೆ ಮೆಚ್ಚಿದ ಸೊಣಗ ಅಮೃತದ ಸವಿಯ ಬಲ್ಲುದೆ?’ ಎಂಬುದು ಬಸವಣ್ಣನವರು ತಮ್ಮ ಆತ್ಮವಿಮರ್ಶೆಯ ವಚನವೊಂದರ ಸಂದರ್ಭದಲ್ಲಿ ಉಲ್ಲೇಖಿಸುವ ಒಂದು ದೃಷ್ಟಾಂತ. ಅವರು ತಮ್ಮ ಚಂಚಲಮನಸ್ಸಿನ ಬಗ್ಗೆ ಈ ಮಾತನ್ನಾಡಿದ್ದರೂ ಅದು ಆ ಚೌಕಟ್ಟನ್ನು ಮೀರಿ ವಿಸ್ತೃತವಾದ ವ್ಯಾಪ್ತಿಯನ್ನು ಪಡೆದುಕೊಳ್ಳುತ್ತದೆ. ಹನ್ನೆರಡನೆಯ ಶತಮಾನದಲ್ಲಿ ಈ ಮಾತು ಎಷ್ಟು ವ್ಯಾಪ್ತಿಯನ್ನು ಹೊಂದಿತ್ತೋ ಅದರ  ನೂರಾರು ಪಟ್ಟು ಹೆಚ್ಚುವ್ಯಾಪ್ತಿಯನ್ನು ಇಂದು ಹೊಂದಿದೆ. ಕಾಲಾನುಕ್ರಮದಲ್ಲಿ ಒಂದು ಭಾಷೆಯಲ್ಲಿರುವ ಪದಗಳು ಮನುಷ್ಯನ ಅಭಿರುಚಿಗಳಿಗೆ, ಬದಲಾದ ಪರಿಸ್ಥಿತಿಗಳಿಗೆ ಅನುಗುಣವಾಗಿ ತಮ್ಮ ಅರ್ಥವನ್ನು ಬದಲಾಯಿಸಿಕೊಳ್ಳುವಂತೆ ‘ಹಡಕು’ ಮತ್ತು ‘ಅಮೃತ’ ಎಂಬೆರಡು ಪದಗಳು ಮನುಷ್ಯನ ಆಧುನಿಕ ಹಾಗೂ ವಿಕೃತ ಮನೋಭಾವನೆಗಳಿಗೆ ಅನುಗುಣವಾಗಿ ತಾತ್ಪರ್ಯರೂಪದಲ್ಲಿ ತಮ್ಮ ಅರ್ಥವನ್ನು ಬದಲಾಯಿಸಿಕೊಂಡಂತಿವೆ. ಇಂದು ‘ಹಡಕು’ ಎಂಬುದು ಅಮೃತವಾಗಿದೆ, ‘ಅಮೃತ’ ಎಂಬುದು ಹಡಕಾಗಿದೆ. ವಾಸ್ತವಾಗಿ ‘ಹಡಕು’ ಎಂಬುದಕ್ಕೆ ‘ಅಮೃತ’ ಎಂಬರ್ಥ ಇಲ್ಲವಾದರೂ ಮನುಷ್ಯ ತನ್ನ ಸ್ವಾರ್ಥ ಹಾಗೂ ಇಚ್ಛೆಗನುಗುಣವಾಗಿ ಅದನ್ನು ಅರ್ಥೈಸಿಕೊಳ್ಳುವ ಒಂದು ರೀತಿಯ ವಿಕೃತಗುಣವನ್ನು ರೂಢಿಸಿಕೊಳ್ಳುವುದನ್ನು ಅಭ್ಯಾಸಮಾಡಿಕೊಂಡಿದ್ದಾನೆ. ಆದುದರಿಂದಲೇ ಭಾಷೆಗೆ ಇಂದು ವ್ಯತಿರಿಕ್ತವಾದ ಸ್ವರೂಪವೊಂದು ಬೆಳೆದುಕೊಂಡು ಬರುತ್ತಿದೆ. ಇದು ಹೇಗಿದೆ ಎಂದರೆ ‘ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಆಡಬೇಡ, ಕೆಟ್ಟದ್ದನ್ನು ಕೇಳಬೇಡ’ ಎಂಬುದನ್ನು ‘ಒಳ್ಳೆಯದ್ದನ್ನು ನೋಡಬೇಡ, ಒಳ್ಳೆಯದ್ದನ್ನು ಆಡಬೇಡ, ಒಳ್ಳೆಯದ್ದನ್ನು ಕೇಳಬೇಡ’ ಎಂದು ತಿರುಚಿದಂತಿದೆ.

                ಮನುಷ್ಯನ ಸ್ವಭಾವ, ಅಭಿರುಚಿ ಹಾಗೂ ಚಿಂತನೆಗಳು ಬಹಳ ವಿಚಿತ್ರವಾಗಿವೆ. ಮಾನವ ಮನಃಶಾಸ್ತ್ರ ಅತ್ಯಂತ ಕುತೂಹಲಕಾರಿಯಾದುದು. ಅದನ್ನು ಮನುಷ್ಯನಿಗೂ ಅರ್ಥೈಸಿಕೊಳ್ಳಲು ಅಸಾಧ್ಯ. ಮನುಷ್ಯ ಹೇಗಿರುತ್ತಾನೆ? ಆತನ ಸ್ವಭಾವಗಳೇನು? ಆತನ ವರ್ತನೆಗಳು ಯಾವಾಗ, ಹೇಗೆ ಬದಲಾಗುತ್ತವೆ? ಯಾವ ವಿಚಾರವನ್ನು ಹೇಗೆ ಸ್ವೀಕರಿಸುತ್ತಾನೆ? ಈ ಮೊದಲಾದ ವಿಷಯಗಳನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಾಚೀನಕಾಲದಿಂದಲೂ ನಮ್ಮ ಋಷಿಮುನಿಗಳು, ದಾರ್ಶನಿಕರು, ಸಮಾಜಸುಧಾರಕರು, ಶರಣರು, ದಾಸರು ಮೊದಲಾದವರೆಲ್ಲರೂ ಒಳಿತನ್ನೇ ಆಲೋಚಿಸು, ಒಳಿತನ್ನೇ ನುಡಿ’,  ‘ಒಳಿತನ್ನೇ ಮಾಡು’, ಎನ್ನುವುದರ ಜೊತೆಜೊತೆಗೆ ಇವೆಲ್ಲವುಗಳ ಮೂಲಕ ಸಾಮಾಜಿಕ ಆರೋಗ್ಯವನ್ನು ಸಾಧಿಸಲು ಶ್ರಮಿಸಿದರು. ಉಪನಿಷತ್ತಿನಲ್ಲಿ ಬರುವ ‘ಭದ್ರಂ ಕರ್ಣೇಭಿಶೃಣುಯಾಮ ದೇವಾಃ| ಭದ್ರಂ ಪಶ್ಯೇಮಾಕ್ಷಭಿರ್ಯ ಜತ್ರಾಃ| ಸ್ಥಿರೈರಂಗೈಸ್ತುಷ್ಟುವಾಗ್‌ಂ ಸಸ್ತನೂಭಿಃ| ವ್ಯಶೇಮ ದೇವಹಿತಂ ಯದಾಯುಃ|| (ದೇವತೆಗಳೆ, ಮಂಗಳಕರವಾದುದನ್ನು ನಮ್ಮ ಕಿವಿಗಳು ಕೇಳಲಿ; ಮಂಗಳಕರವಾದುದನ್ನು ನಮ್ಮ ಕಣ್ಣುಗಳು ನೋಡಲಿ; ನಿಮ್ಮನ್ನು ನಾವು ಸ್ತುತಿಸುತ್ತಾ ದೇವರು ನಮಗೆ ಕೊಟ್ಟಿರುವ ಆಯುಸ್ಸನ್ನು ಆರೋಗ್ಯದಿಂದ ದೃಢಕಾಯರಾಗಿ ಕಳೆಯುವಂತಾಗಲಿ) ಎಂಬ ಮಾತುಗಳೂ ಇದನ್ನೇ ಸಾರಿಹೇಳುತ್ತವೆ. ಅವರೆಲ್ಲರಿಗೂ ಮನುಷ್ಯನ ಮನಸಿಕ ಆರೋಗ್ಯದ ಜೊತೆಗೆ ಸಮಾಜದ ಆರೋಗ್ಯವೂ ಅತ್ಯಂತ ಮುಖ್ಯವಾಗಿತ್ತು. ಒಂದು ಸಮಾಜದ ಏಳುಬೀಳುಗಳು ಮನುಷ್ಯನ ಮಾನಸಿಕ ಆರೋಗ್ಯವನ್ನು ಅವಲಂಬಿಸಿವೆ. ಈ ನಿಟ್ಟಿನಲ್ಲಿ ಋಷಿಮುನಿಗಳ, ದಾರ್ಶನಿಕರ, ಶರಣರ, ದಾಸರ ಮಾತುಗಳು ಅಂದಿಗೂ ಪ್ರಸ್ತುತವಾಗಿದ್ದವು. ಇಂದಿಗೂ ಪ್ರಸ್ತುತವಾಗಿವೆ. ಎಂದೆಂದಿಗೂ ಪ್ರಸ್ತುತವಾಗಿಯೇ ಇರುತ್ತವೆ.

                ಅತ್ಯಂತ ಉನ್ನತವಾದ ಸಂಸ್ಕೃತಿ, ಪರಂಪರೆಯುಳ್ಳ ಭಾರತದಲ್ಲಿ ಹಿಂದಿನಿಂದಲೂ ದಾರ್ಶನಿಕರು, ಸಮಾಜಸುಧಾರಕರು ಮತ್ತೆಮತ್ತೆ ಹುಟ್ಟಿಬರುತ್ತಲೇ ಇದ್ದಾರೆ. ಒಳಿತಿನ ಹಾಗೂ ಮಾನವಕಲ್ಯಾಣದ ದಾರಿಯನ್ನು ತೋರುತ್ತಲೇ ಇದ್ದಾರೆ. ಇಷ್ಟಾದರೂ ಮನುಷ್ಯ ಏಕೆ ಇನ್ನೂ ಉನ್ನತಿಯನ್ನು ಕಂಡಿಲ್ಲ? ಏಕೆ ಇಲ್ಲಿನ ಜನ ಆತ್ಮೋನ್ನತಿಯನ್ನು ಸಾಧಿಸುತ್ತಿಲ್ಲ? ಒಂದು ಕಾಲದಲ್ಲಿ ವಿಶ್ವಕ್ಕೇ ಮಾದರಿಯಾಗಿದ್ದ ಭಾರತ ಇಂದು ಏಕೆ ತನ್ನ ಸ್ಥಾನಮಾನಗಳನ್ನು ಕಳೆದುಕೊಳ್ಳುತ್ತಿದೆ? ಇವೆಲ್ಲವೂ ಇಂದು ನಮ್ಮ ಮುಂದಿರುವ ಸವಾಲುಗಳು.  ಮನುಷ್ಯ ಒಳ್ಳೆಯದರ ಬಗ್ಗೆ ಆಸಕ್ತಿತೋರುವುದಕ್ಕಿಂತಲೂ ಕೆಟ್ಟದರ ಬಗ್ಗೆ ಆಸಕ್ತಿತೋರುತ್ತಾನೆ. ಅಂತಹ ವಿಚಾರಗಳಲ್ಲಿಯೇ ಕುತೂಹಲ ತಾಳುತ್ತಾನೆ. ಕೆಲವು ವಿಚಾರಗಳು, ಕೆಲವು ವ್ಯವಹಾರಗಳು ತನ್ನ ಒಳಿತಿಗೆ, ಗೌರವಕ್ಕೆ, ಸಾಧನೆಗೆ, ಸ್ಥಾನಮಾನಗಳಿಗೆ ಒಳಿತಲ್ಲ ಎಂದು ತಿಳಿದಿದ್ದರೂ ಮತ್ತೆಮತ್ತೆ  ಅವುಗಳ ಕಡೆಗೇ ವಾಲುತ್ತಾನೆ. ಕುಡಿತ, ಅವ್ಯಹಾರ, ಅಶ್ಲೀಲತೆ, ಅನೈತಿಕತೆ, ನೀಚಕೃತ್ಯ, ಮಾದಕದ್ರವ್ಯ ವ್ಯಸನ, ಭಯೋತ್ಪಾದನೆ-ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವೆಲ್ಲವುಗಳಿಂದ ಮನುಷ್ಯನ ದೈಹಿಕ, ಮಾನಸಿಕ ಹಾಗೂ ಆ ಮೂಲಕ ಸಾಮಾಜಿಕ ಆರೋಗ್ಯ ಕುಸಿಯುತ್ತಲೇ ಇದೆ.  

                ‘ಕುಡಿತ’ ಅಥವಾ ‘ಮದ್ಯಪಾನ’ ಆರೋಗ್ಯಕ್ಕೆ ಹಾನಿಕರ ಎಂಬುದನ್ನು ವಿದ್ಯಾಭ್ಯಾಸದ ಮೊದಲ ಹಂತದಿಂದ ತಿಳಿದುಕೊಂಡಿದ್ದರೂ ಸರಕಾರ ಅವುಗಳನ್ನು ನಿರ್ಬಂಧಿಸಲು ಕಾನೂನುಗಳನ್ನು ರೂಪಿಸುತ್ತಿದ್ದರೂ  ಆರೋಗ್ಯ ಇಲಾಖೆ ಈ ಸಂಬಂಧ ಆಗಾಗ ಎಚ್ಚರಿಕೆಯ ಸಂದೇಶಗಳನ್ನು ಪ್ರಕಟಿಸುತ್ತಿದ್ದರೂ ಕುಡಿತದಿಂದ ಸಾಮಾಜಿಕವಾಗಿ ಸ್ಥಾನಮಾನಗಳು ಕುಸಿಯುತ್ತಿದ್ದರೂ ಕುಡಿತಕ್ಕೆ ಒಳಗಾದವರು ತಮ್ಮ ಮನಮಠಗಳನ್ನು ಕಳೆದುಕೊಳ್ಳುತ್ತಿದ್ದರೂ ಪದೇಪದೇ ಪತ್ರಿಕೆಗಳಲ್ಲಿ ಅತಿರೇಕಪ್ರಸಂಗಗಳು ವರದಿಯಾಗುತ್ತಿದ್ದರೂ ಏಕೆ ಮತ್ತೆಮತ್ತೆ ಮನುಷ್ಯ ಕುಡಿತಕ್ಕೆ ದಾಸನಾಗುತ್ತಿದ್ದಾನೆ? ಇದು ಬಹಳ ಕುತೂಹಲಕಾರಿಯಾದ ಮಾತ್ರವಲ್ಲ ನಿಗೂಢವಾದ ಪ್ರಶ್ನೆ ಕೂಡಾ.

                ಇಂದು ಕುಡಿತ ಎನ್ನುವುದು ಒಂದು ಪ್ರತಿಷ್ಠೆಯ, ಮರ್ಯಾದೆಯ, ಗೌರವದ ಸಂಕೇತವಾಗುತ್ತಿರುವುದು ಅತ್ಯಂತ ಸೋಜಿಗದ ವಿಚಾರ. ಇಂದು ಎಳೆಯರಿಂದ ತೊಡಗಿ ಅತ್ಯಂತ ಹಿರಿಯರವರೆಗೂ ‘ಕುಡಿತ’ ಒಂದು ಮರ್ಯಾದೆಯ, ಗೌರವದ ಸಂಕೇತವಾಗಿಯೇ ಬೆಳೆಯುತ್ತಿದೆ. ಜೀವನಮೌಲ್ಯಗಳನ್ನು ಉನ್ನತವಾಗಿರಿಸಿದ ಭಾರತದಂತಹ ದೇಶದಲ್ಲಿ ವೃತ್ತಿಶಿಕ್ಷಣ, ವೈದ್ಯಶಿಕ್ಷಣ ಹಾಗೂ ಉನ್ನತಶಿಕ್ಷಣ ಪಡೆಯುವವರಲ್ಲಿ ಈ ದುಶ್ಚಟಗಳು ಹೆಚ್ಚುತ್ತಿರುವುದು ಕಳವಳಕಾರಿಯಾದ ವಿಷಯ. ವೃತ್ತಿಶಿಕ್ಷಣದ ಕಾಲೇಜುಗಳಿರುವಲ್ಲಿ ರಾತ್ರಿಯಾಯಿತೆಂದರೆ ರಸ್ತೆಗಳಲ್ಲಿ ಮದ್ಯವ್ಯಸನಿಗಳಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತೂರಾಡುತ್ತಾ ಹೋಗುವುದನ್ನು ಕಣ್ತುಂಬಾ ನೋಡಬಹುದು. ಭವಿಷ್ಯದಲ್ಲಿ ಜನಸಮುದಾಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ, ಆ ಬಗ್ಗೆ ಕಾಳಜಿವಹಿಸಿಕೊಳ್ಳಬೇಕಾದ ವೈದ್ಯವಿದ್ಯಾರ್ಥಿ, ವಿದ್ಯಾರ್ಥಿನಿಯರೇ ಹೀಗೆ ಕುಡಿತತಕ್ಕೆ ದಾಸರಾಗುವುದಾದರೆ ಮುಂದಿನ ಗತಿಯೇನು? ಎಂಬುದನ್ನು ನಾವಿಂದು ಚಿಂತಿಸಬೇಕಾಗಿದೆ.

                ‘ಮದ್ಯಪಾನ ಆರೋಗ್ಯಕ್ಕೆ ಹಾನಿಕರ’ ಎಂಬುದು ಎಲ್ಲರಿಗೂ ತಿಳಿದದ್ದೆ. ‘ಮದ್ಯ’ ಮನುಷ್ಯನ ದೇಹದ ಹಲವು ಭಾಗಗಳನ್ನು ಹಾನಿಗೊಳಿಸುತ್ತದೆ, ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ, ಇದರಿಂದ ಸಂಸಾರವ್ಯವಸ್ಥೆ ಕುಸಿಯುತ್ತದೆ, ಕುಟುಂಬ ಬೀದಿಪಾಲಾಗುತ್ತದೆ ಎಂಬುದನ್ನು ತಿಳಿದಿದ್ದರೂ ಮದ್ಯಪಾನಕ್ಕೆ ಹಾತೊರೆಯುವುದನ್ನು ಕಂಡಾಗ ಬಸವಣ್ಣನವರ ‘ಹಡಕಿಗೆ ಮೆಚ್ಚಿದ ಸೊಣಗ ಅಮೃತದ ಸವಿಯ ಬಲ್ಲುದೆ?’ ಎಂಬ ಮಾತು ನೆನಪಿಗೆ ಬರುತ್ತದೆ. ಮನುಷ್ಯನಿಗೆ ತನ್ನನ್ನು ತಾನು ಹಾಳುಮಾಡಿಕೊಳ್ಳುವುದರ ಜೊತೆಗೆ ತನ್ನವರನ್ನು ಹಾಳುಗೆಡವುದರಲ್ಲಿಯೇ ಆಸಕ್ತಿ ಏಕೆ? ಧೂಮಪಾನ, ಮಾದಕದ್ರವ್ಯಗಳ ಸೇವನೆಯೂ ಇದೇ ರೀತಿಯದು. ‘ಕಪಿ ತಾನು ಕೆಡುವುದಲ್ಲದೆ ವನವನ್ನೆಲ್ಲಾ ಕೆಡಿಸಿತು’ ಎಂಬಂತೆ ಈ ದುಶ್ಚಟಕ್ಕೆ ಒಳಗಾದವರು ತಾವು ಕೆಡುವುದಲ್ಲದೆ ತಮ್ಮ ಸಹವರ್ತಿಗಳನ್ನೂ ಕೆಡಿಸುತ್ತಾರೆ. ಸಂಸಾರವನ್ನೂ ಕೆಡಿಸುತ್ತಾರೆ. ಸಾರ್ವಜನಿಕರ ಆರೋಗ್ಯವನ್ನೂ ಕೆಡಿಸುತ್ತಾರೆ. ಸಮಾಜದ ಆರೋಗ್ಯವನ್ನೂ ಕೆಡಿಸುತ್ತಾರೆ. ಆ ಮೂಲಕ ಎಲ್ಲವನ್ನೂ ಕುಲಗೆಡಿಸುತ್ತಾರೆ.

                ಅನೈತಿಕತೆ, ಅತ್ಯಾಚಾರ, ಅಶ್ಲೀಲತೆಗಳೂ ಸಾಮಾಜಿಕ ಪಿಡುಗುಗಳೇ. ಇವು ಮನುಷ್ಯನನ್ನು ಮೃಗವಾಗಿಸುವುದರ ಜೊತೆಗೆ ಸಮಾಜದ ಹಾಗೂ ಆ ಮೂಲಕ ಒಂದು ದೇಶದ ನಾಶಕ್ಕೂ ಕಾರಣವಾಗುತ್ತವೆ. ಇಂದು ಪರಸ್ತ್ರೀಸಂಗ  ಅಥವಾ ಪರಪುರುಷಸಂಗ ಒಂದು ಪ್ರತಿಷ್ಠೆಯ, ಗೌರವದ ಸಂಕೇತವಾಗಿ ಪರಿಗಣಿತವಾಗುತ್ತಿದೆ. ಒಂದು ಕಾಲದಲ್ಲಿ ಅಸಭ್ಯ ಹಾಗೂ ಅನೈತಿಕವಾಗಿದ್ದ ಇಂತಹ ಕೃತ್ಯಗಳು ಇಂದು ಜನರ ದೃಷ್ಟಿಯಲ್ಲಿ ಸಭ್ಯ ಹಾಗೂ ನೈತಿಕವಾಗಿ ಪರಿಗಣಿತವಾಗುತ್ತಿವೆ. ಇವೆಲ್ಲವೂ ತಳಪಾಯರಹಿತ ಚಿಂತನೆಗಳಾಗಿದ್ದು ಜನಮಾನಸದಲ್ಲಿ ಗೊಂದಲ, ಜುಗುಪ್ಸೆ ಹಾಗೂ ಭ್ರಮನಿರಸನದಂತಹ ಭಾವನೆಗಳನ್ನು ಬಿತ್ತುತ್ತಿವೆ. ಸಂಸಾರದಲ್ಲಿ ಒಡಕು ಕಾಣಿಸಿಕೊಂಡು ಕೊಲೆ, ಆತ್ಮಹತ್ಯೆ ಹಾಗೂ ವಿಚ್ಛೇದನಗಳಂತಹ ಸಾಮಾಜಿಕ ಅಪರಾಧಗಳನ್ನು ಹುಟ್ಟುಹಾಕುತ್ತಿವೆ. ಒಂದು ದೇಶ ದುರ್ಬಲಗೊಳ್ಳುವುದಕ್ಕೆ ಬೇರೆ ಕಾರಣಗಳು ಬೇಕಿಲ್ಲ. ಒಂದು ದೇಶಕ್ಕೆ ನೈತಿಕತೆಗಿಂತ ಬಲಿಷ್ಠವಾದ ಭದ್ರತೆ ಇನ್ನೊಂದಿಲ್ಲ.

                ಲಂಗುಲಗಾಮಿಲ್ಲದ ಪ್ರೇಮಪ್ರಕರಣಗಳು ಇಂದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ. ಪ್ರಾಚೀನಕಾಲದಿಂದಲೂ ಭಾರತದಲ್ಲಿ ಪ್ರೀತಿ, ಪ್ರೇಮ, ಪ್ರಣಯಗಳಿಗೆ ಹಿರಿದಾದ ಸ್ಥಾನ ಸಂದಿದೆ ಎಂಬುದು ನಿಜವಾದರೂ ಇಂದು ಇವೆಲ್ಲವೂ ಕೇವಲ ದೈಹಿಕತೀಟೆಗಳನ್ನು ತೀರಿಸಿಕೊಳ್ಳುವ ಚಟಗಳಾಗಿ ಪರಿಣಮಿಸುತ್ತಿವೆ. ಇಂದಿನ ಪ್ರೇಮ, ಪ್ರಣಯಗಳೆಂದರೆ ದೇವಲ ದೈಹಿಕ ಆಕರ್ಷಣೆ ಮತ್ತು ಕಾಮವನ್ನು ತೀರಿಸಿಕೊಳ್ಳುವ ಚಟ ಮಾತ್ರ. ಅದು ವ್ಯಕ್ತಿಯ ಮಾನಸಿಕ ಹಾಗೂ ಬೌದ್ಧಿಕಸೌಂದರ್ಯವನ್ನು ಒಳಗೊಳ್ಳುವುದಿಲ್ಲ. ಮನುಷ್ಯ ತನ್ನ ಉಡುಗೆ-ತೊಡುಗೆಗಳನ್ನು ಹಳತಾದಾಗ ಬದಲಾಯಿಸಿಕೊಳ್ಳುವಂತೆ ಪ್ರಿಯತಮ-ಪ್ರಿಯತಮೆಯರು ಪರಸ್ಪರರನ್ನು ಬದಲಾಯಿಸಿಕೊಳ್ಳುತ್ತಾರೆ. ಪ್ರಣಯಿಗಳ ಅಥವಾ ದಂಪತಿಗಳ ನಡುವಿನ ಯಾವ ಸಂಬಂಧಗಳೂ ಇಂದು ಗೌಪ್ಯವಾಗಿ ಉಳಿದಿಲ್ಲ. ಎಲ್ಲವನ್ನೂ ಬಹಿರಂಗಗೊಳಿಸುವುದು ಹಾಗೂ ಅದನ್ನೇ ಒಂದು ದೊಡ್ಡ ಸಾಧನೆ ಎಂದು ಬಿಂಬಿಸುವುದೇ ಇಂದಿನ ವಿಶೇಷತೆ ಎಂದೆನಿಸುತ್ತಿದೆ.

                ಭಾರತದ ಪ್ರತಿಷ್ಠಿತನಗರಗಳಲ್ಲಿ ‘ಕೀಕ್ಲಬ್’, ‘ಬ್ಲೌಸ್‌ಕ್ಲಬ್’, ‘ಶೇರಿಂಗ್ ಕಪಲ್ಸ್’, ‘ಲಿವಿಂಗ್ ಟುಗೆದರ್’ ಮೊದಲಾದ ಹೆಸರುಗಳಿಂದ ಕರೆಸಿಕೊಳ್ಳುವ ಕೆಲವು ಅನಧಿಕೃತ ಸಂಘಟನೆಗಳಿವೆ ಎಂಬುದನ್ನು ಆಗಾಗ ಕೇಳುತ್ತಿರುತ್ತೇವೆ. ಯಾವ ಮೌಲಿಕವಾದ ಧ್ಯೇಯೋದ್ದೇಶಗಳನ್ನೂ ಹೊಂದಿರದ ಇಂತಹ ಸಂಘಟನೆಗಳ ಉದ್ದೇಶ ಮಾತ್ರ ಆಘಾತಕಾರಿಯಾದುದು. ಸಮಾನಮನಸ್ಕ ತರುಣ ದಂಪತಿಗಳು ಈ ರೀತಿಯ ‘ಕ್ಲಬ್’ಗಳ ಸದಸ್ಯರಾಗಿದ್ದು, ವಾರಕ್ಕೊಂದಾವರ್ತಿ ಸಭೆಸೇರಿ ತಮ್ಮತಮ್ಮ ಹೆಂಡತಿಯರನ್ನೋ ಗಂಡಂದಿರನ್ನೋ ವಿನಿಮಯಮಾಡಿಕೊಂಡು ಖುಷಿಪಡುತ್ತಾರೆ. ಒಂದರ್ಥದಲ್ಲಿ ಇದು ಗಂಡಹೆಂಡತಿಯರ ಪರಸ್ಪರ ವಿನಿಮಯ ಪ್ರಕ್ರಿಯೆ. ಅವರದ್ದೇ ಭಾಷೆಯಲ್ಲಿ ಹೇಳುವುದಾದರೆ ವೈವಿಧ್ಯಮಯ ಹೊಸರುಚಿ. ಗಂಡಹೆಂಡಿರ ನಡುವಿನ ಸಂಬಂಧಗಳೂ ಇಂದು ಗೌಪ್ಯವಾಗಿ ಉಳಿದಿಲ್ಲ. ಎಲ್ಲವನ್ನೂ ಬಹಿರಂಗಗೊಳಿಸುವುದೇ ಶ್ರೇಷ್ಠತೆಯ ಲಕ್ಷಣವೆಂದು ಇಂದಿನ ಕೆಲವು ದಂಪತಿಗಳು ತಿಳಿದಿರುವಂತಿದೆ. ಇಂತಹ ಪ್ರವೃತ್ತಿಗಳಿಂದ ಗೌರವಾದರ್ಶಗಳಿಗೆ ಪಾತ್ರವಾಗಿರುವ ನಮ್ಮ ಭಾರತೀಯ ದಾಂಪತ್ಯ ಪರಿಕಲ್ಪನೆಯ ಘನತೆ, ಗೌರವಗಳು ನಶಿಸಿಹೋಗಲಾರವೇ? ಈ ಕುರಿತು ನಮ್ಮ ಯುವಜನಾಂಗ ಗಹನವಾಗಿ ಚಿಂತಿಸಬೇಕಾಗಿದೆ.

                ಇಂದಿನ ಆಧುನಿಕಯುಗದಲ್ಲಿ ಮಾನವನ ಆಹಾರ-ವಿಹಾರ, ಉಡುಗೆ-ತೊಡುಗೆ, ಆಚಾರ-ವಿಚಾರ ಹೀಗೆ ಎಲ್ಲದರಲ್ಲಿಯೂ ಆರೋಗ್ಯಕ್ಕಿಂತ ಅನಾರೋಗ್ಯವೇ ಎದ್ದುಕಾಣುತ್ತಿದೆ. ಸಭ್ಯತೆಯನ್ನು ಮೆರೆಯುವ ಭಾರತೀಯ ಉಡುಗೆ-ತೊಡುಗೆಗಳು ಇಂದು ಆಧುನಿಕತೆಗೆ ಮರುಳಾದವರ ದೃಷ್ಟಿಯಲ್ಲಿ ಅನಾಗರಿಕವೆನಿಸಿವೆ. ಇಂದಿನ ಯುವಜನಾಂಗದಲ್ಲಿ ಸೌಂದರ್ಯಪ್ರಜ್ಞೆ ಅತಿಯಾಗಿ ತುಂಬಿಕೊಂಡಿರುವುದರಿಂದ ಅಂಗಾಂಗ ಪ್ರದರ್ಶನಕ್ಕೆ ಮೊದಲ ಆದ್ಯತೆ ಸಲ್ಲುತ್ತಿದೆ. ಅಲ್ಲದೆ, ಅದನ್ನೇ ನಿಜವಾದ ಸೌಂದರ್ಯವೆಂದು ಭ್ರಮಿಸಲಾಗುತ್ತಿದೆ. ಇಂತಹ ಅನೈತಿಕ ಸೌಂದರ್ಯಪ್ರಜ್ಞೆಯೇ ಅತ್ಯಾಚಾರ, ಅನಾಚಾರಗಳಂತಹ ಪಿಡುಗುಗಳನ್ನು ಪರೋಕ್ಷವಾಗಿ ಪೋಷಿಸುತ್ತಿದೆ. ಅನುಕರಣೆಯ ಪ್ರವೃತ್ತಿ ಭಾರತೀಯರಿಗಿರುವಷ್ಟು ಬೇರೆ ದೇಶದವರಲ್ಲಿ ಕಂಡುಬರುವುದಿಲ್ಲ. ಬೇರೆ ದೇಶದವರು ತಮ್ಮ ಜೀವನದ, ತಮ್ಮ ಸಮಾಜದ ಅಭಿವೃದ್ಧಿಯ ದೃಷ್ಟಿಯಿಂದ ಭಾರತಿಯರ ಒಳ್ಳೆಯ ಸಾಂಸ್ಕೃತಿಕಾಂಶಗಳನ್ನು ಅನುಕರಿಸುತ್ತಿರುವುದು ಪ್ರಾಚೀನಕಾಲದಿಂದಲೂ ಕಂಡುಬರುತ್ತಿದೆ. ಆದರೆ ಭಾರತೀಯರು ಅದರಲ್ಲೂ ಇಂದಿನ ಯುವಜನಾಂಗ ಅನ್ಯದೇಶದವರ ಒಳಿತಿಗಿಂತ ಹೆಚ್ಚಾಗಿ ಕೆಡುಕನ್ನೇ ಅನುಕರಿಸುತ್ತಿದ್ದಾರೆ. ಬೇರೆ ದೇಶದವರಿಗೆ ಯಾವುದು ತ್ಯಾಜ್ಯವೋ ಅದು ನಮ್ಮವರಿಗೆ ಪೂಜ್ಯ. ಕೆಡುಕನ್ನು ಮೆಚ್ಚಿಕೊಳ್ಳುವ ಈ ಪ್ರವೃತ್ತಿಗೆ ಕೊನೆ ಎಂದು?

                ಹೊಲಸಿನ ಅಥವಾ ಕೊಳೆತ ಮಾಂಸದ ರುಚಿಗೆ ಮನಸೋತಿರುವ ನಾಯಿಗೆ ಅಮೃತ ರುಚಿಸಲಾರದು. ಅಮೃತ ಅತ್ಯಂತ ಮೌಲಿಕ ಹಾಗೂ ಶ್ರೇಷ್ಠವಾಗಿದ್ದರೂ ಅದಕ್ಕೆ ಅದರ ಮಹತ್ವ ತಿಳಿದಿಲ್ಲ. ತಿಳಿಸುವುದಕ್ಕೆ ಪ್ರಯತ್ನಿಸಿದರೂ ಅದು ಅಮೃತದತ್ತ  ಆಕರ್ಷಿತವಾಗಲಾರದು. ಹಾಗೆಯೇ ಮದ್ಯಕ್ಕಿಂತ ಹಾಲು  ಶ್ರೇಷ್ಠವಾದರೂ ಮನುಷ್ಯ ಅದರೆಡೆಗೆ ಆಕರ್ಷಿತನಾಗಲಾರ. ಮನುಷ್ಯನ ದೇಹಕ್ಕೆ ಹಿತವಾಗಿರುವ, ಆತನ ಆರೋಗ್ಯವನ್ನು ವರ್ಧಿಸುವ ಪಾರಂಪರಿಕ  ಪೇಯಗಳಿಗೆ ಮನುಷ್ಯ ಮಾರುಹೋಗಲಾರ. ಏಕೆಂದರೆ ಅವೆಲ್ಲವೂ ಅವರ ದೃಷ್ಟಿಯಲ್ಲಿ ಸತ್ವಹೀನ ಮಾತ್ರವಲ್ಲದೆ ಇವಾವೂ ಆತನನ್ನು ಅಲೌಕಿಕ ಪ್ರಪಂಚಕ್ಕೆ ಕೊಂಡೊಯ್ಯಲಾರವು. ಆಧುನಿಕ ಭಾಷೆಯಲ್ಲಿ ಹೇಳಬೇಕೆಂದರೆ ಇವು ಯಾವುದೇ ರೀತಿಯಿಂದಲೂ ‘ಕಿಕ್’ ಅಥವಾ ‘ಥ್ರಿಲ್’ ಕೊಡಲಾರವು. ‘ಜೋಶ್’ ಬರಿಸಲಾರವು. ಆದರೆ ಇವೆಲ್ಲವೂ ಮೊದಮೊದಲಿಗೆ ಮನಸ್ಸಿಗೆ ‘ಕಿಕ್’ ಕೊಡುತ್ತವೆ, ಅನಂತರ ದೇಹಕ್ಕೆ, ಕೊನೆಗೆ ಜೀವಕ್ಕೆ ಎಂಬ ಸತ್ಯವನ್ನು ಯಾರೂ ಅರಿತಂತಿಲ್ಲ. 

                ಮನುಷ್ಯನ ಮನಸ್ಸು ಚಂಚಲ, ಮರವನ್ನೇರಿದ ಮರ್ಕಟನಂತೆ. ಅದು ಒಂದೇ ಕಡೆ ಕೂರಲಾರದು. ಒಮ್ಮೆ ಒಂದು ವಿಷಯಕ್ಕೆ ಹರಿದು ಅದರ ದಾಸನಾಯಿತೆಂದರೆ ಮತ್ತೆ ಅದು ಆ ವರ್ತುಲದಿಂದ ಬಿಡುಗಡೆಯಾಗುವುದು ತೀರಾ ಕಷ್ಟದ ಮಾತು. ಮನೆಯಲ್ಲಿ ಸಾಕಿದ ನಾಯಿಮರಿ ಬೂದಿರಾಶಿಯಲ್ಲಿ ಬಿದ್ದುಕೊಳ್ಳಬಾರದೆಂದು ಅದಕ್ಕೊಂದು ಪ್ರಶಸ್ತವಾದ ಹಾಸಿಗೆ, ಹೊದಿಕೆಗಳನ್ನು ಕೊಂಡುತಂದು ಹಾಸಿ, ಅದರ ಮೇಲೆ ಮಲಗಿಸಿದರೂ ಅದಕ್ಕೆ ಬೆಲೆಬಾಳುವ ಆ ಹಾಸಿಗೆ ಹೊದಿಕೆಗಳು ಇಷ್ಟವಾಗಲಾರವು. ತುಸುಹೊತ್ತಿನ ಮೇಲೆ ಅದು ಹಾಸಿಗೆಯನ್ನು ಬಿಟ್ಟುಬಿಟ್ಟು ತನಗೆ ಅತ್ಯಂತ ಇಷ್ಟವಾಗುವ ಬೂದಿರಾಶಿಯನ್ನೇ ಅವಲಂಬಿಸುತ್ತದೆ. ಸಮಾಜಘಾತುಕವಾದ ದುಶ್ಚಟಗಳಿಗೆ ಬಲಿಯಾಗಿರುವ, ಬಲಿಯಾಗುತ್ತಿರುವ, ಬಲಿಯಾಗಲು ಹಂಬಲಿಸುತ್ತಿರುವ ಮನುಷ್ಯನ ಬಾಳು ಇದಕ್ಕಿಂತ ಭಿನ್ನವಾಗಿಲ್ಲ. ಹಾಗೆಯೇ, ಅನೈತಿಕತೆಯ ರುಚಿಕಂಡವರಿಗೆ; ಕುಡಿತ, ಧೂಮಪಾನಗಳ ರುಚಿ ಕಂಡವರಿಗೆ; ಕೊಲೆ-ಸುಲಿಗೆಗಳ ರುಚಿ ಕಂಡವರಿಗೆ; ಅಶ್ಲೀಲತೆ-ಅನಾಚಾರಗಳ ರುಚಿ ಕಂಡವರಿಗೆ; ಮೋಸ, ವಂಚನೆ, ದುರಭ್ಯಾಸಗಳ ರುಚಿ ಕಂಡವರಿಗೆ ಅದೇ ಹಿತ. ಕೊಳೆತ ಮಾಂಸದ ರುಚಿ ಕಂಡ ನಾಯಿಗೆ ಅಮೃತ ಹೇಗೆ ರುಚಿಸುವುದಿಲ್ಲವೋ ಹಾಗೆ.

                ಮನುಷ್ಯ ಸಾಧನೆಯಿಂದ ಬದುಕುತ್ತಾನೆ. ಆತನ ಜೀವಿತಾವಧಿ ಕಡಿಮೆಯಿದ್ದರೂ ಜೀವಮಾನದ ಸಾಧನೆ ಬಹಳ ದೊಡ್ಡದು. ‘ಲೋಕಾ ಸಮಸ್ತಾ ಸುಖಿನೋ ಭವಂತು’ ಎಂಬ ನಮ್ಮ ಪೂರ್ವಸೂರಿಗಳ ಮಾತಿನಂತೆ ತಾನೂ ಬದುಕಿ ಇತರರನ್ನೂ ಬದುಕಗೊಡಬೇಕು. ಆದರೆ ಇಂದಿನ ಹಲವರ ಧೋರಣೆ ‘ಲೋಕಾ ಸಮಸ್ತಾ ಸುಖಿ ನ ಭವಂತು’ ಎಂಬಂತಿದೆ. ‘ಮನುಷ್ಯಧರ್ಮಕ್ಕಿಂತ ಮಿಗಿಲಾದುದಿಲ್ಲ’ ಎಂಬಂತೆ ತನ್ನ ಹಾಗೂ ತನ್ನವರ ಒಳಿತಿಗಾಗಿ ನೈತಿಕವಾಗಿ ಬಾಳುತ್ತಾ ಉತ್ತಮ ಸಾಧನೆಗೈದರೆ ಅದು ಅಳಿದಮೇಲೂ ಉಳಿಯುತ್ತದೆ. ಮನುಷ್ಯ ಭೌತಿಕವಾಗಿ ಅಳಿಯುತ್ತಾನೆ. ಆದರೆ ಸಾಧನೆಯಿಂದ ಉಳಿಯುತ್ತಾನೆ. ‘ಹಡಕಿಗೆ ಮೆಚ್ಚಿದ ಸೊಣಗ ಅಮೃತದ ಸವಿಯ ಬಲ್ಲುದೆ?’ ಎಂದು ಬಸವಣ್ಣನವರು ಆತ್ಮವಿಮರ್ಶೆಯ ಸಂದರ್ಭದಲ್ಲಿ ತನಗೆ ತಾನೇ ಹೇಳಿಕೊಂಡರೂ ಅದನ್ನು ಲೋಕಹಿತದ ದೃಷ್ಟಿಯಿಂದ  ಸಮಸ್ತ ಮಾನವಜನಾಂಗಕ್ಕೆ ಅನ್ವಯಿಸಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ಬಸವಣ್ಣನವರಂತೆ ನಾವೂ ಇಂದು ನಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

***

 

 

4 thoughts on “ಹಡಕಿಗೆ ಮೆಚ್ಚಿದ ಸೊಣಗ!

  1. ಬಹಳ ಚೆನ್ನಾಗಿದೆ 👌 ಎಷ್ಟೊ ಮಲ್ಟಿ ನ್ಯಾಶನಲ್ ಕಂಪೆನಿಗಳಲ್ಲಿ ಆಫೀಸ್ ಟ್ರಿಪ್ ಗಳಲ್ಲಿ ಡ್ರಿಂಕ್ಸ್ ಕಂಪೆನಿ ಸ್ಪಾನ್ಸರ್ ಮಾಡ್ತಾರೆ.. ನಮ್ಮ ದೇಶದಲ್ಲಿ ಸಂಕ್ರಾಂತಿ ಯುಗಾದಿಗೆಲ್ಲ ಸಿಗದ ರಜೆ ಹೊಸ ಕ್ಯಾಲೆಂಡರ್ ವರ್ಷ, ಕ್ರಿಸ್‌ಮಸ್ ಗೆ ಸಿಗುತ್ತದೆ.. ಲಿವಿಂಗ್ ಟುಗೆದರ್ ಬಹಳ ಸಾಮಾನ್ಯ ಆಗಿದೆ..ಇತ್ತೀಚೆಗೆ ಎಷ್ಟೋ ಜನಕ್ಕೆ ಹುಡುಗಿ ಸಿಗದ ಕಾರಣ ಜನಸಂಖ್ಯೆ ವ್ಯತ್ಯಾಸ ಅಲ್ಲ ಮೈಂಡ್ ಸೆಟ್ ವ್ಯತ್ಯಾಸ ಆಗಿದೆ.. ಈಗ ಕೆಲಸಕ್ಕೆ ಹೋಗಲು ಅನುಮತಿ ನೀಡುವುದು ಮಾತ್ರ ಸ್ವಾತಂತ್ರ್ಯ ಅಲ್ಲ ಸ್ವೇಚ್ಛಾಚಾರ ಸಹ ಸ್ವಾತಂತ್ರ್ಯದ ಅಡಿಯಲ್ಲಿ ಸೇರುತ್ತಿದೆ.

    1. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಬಹುರಾಷ್ಟ್ರೀಯ ಕಂಪೆನಿಗಳ ಆಫೀಸ್ ಟ್ರಿಪ್ ಗಳಲ್ಲಿನ ಡ್ರಿಂಕ್ಸ್ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ. ಈಗ ನಾನು ಪ್ರಸ್ತುತಪಡಿಸಿದ ವಿಷಯಕ್ಕೆ ಪೂರಕ ಮಾಹಿತಿ ಸಿಕ್ಕಂತಾಯಿತು. ಭಾರತೀಯ ನೆಲದಲ್ಲಿನ ಆತಿಥ್ಯಕ್ಕೆ ಭಾರತೀಯತೆಯ ಸ್ಪರ್ಶವೇ ಇರಬೇಕಾದುದು ಅಗತ್ಯ. ಆದರೆ ನಾವು ಅಧುನಿಕತೆ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಅನೈತಿಕತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದೇವೆ. ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ನಿಮ್ಮ ಅನಿಸಿಕೆಗಳು ಇನ್ನಷ್ಟು ಚಿಂತನೆಗಳಿಗೆ ಪೂರಕವಾಗಲಿ. 🙏

  2. ಬದುಕಿನ ಅಧ:ಪತನಕ್ಕೆ ಕಾರಣವಾಗುವ ಸಂಗತಿಗಳ ಕಡೆಗೆ ಬೆಳಕು ಚೆಲ್ಲುವ ಬರಹ. ಇದಕ್ಕೆ ಕಾರಣ ಆಧುನಿಕತೆಯ ಐಶಾರಾಮಿ ಬದುಕು. ಇಂತಹ ಬದುಕು ಸಮಾಜದ ಅಭಿವೃದ್ಧಿ ಗೂ ಮಾರಕ. ವಚನವನ್ನು ವಿಶ್ಲೇಷಣೆ ಮಾಡುವ ರೀತಿ ಅರ್ಥಪೂರ್ಣ ವಾಗಿದೆ.

    1. ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು. ನನ್ನ ವ್ಯಾಖ್ಯಾನ ನಿಮ್ಮಲ್ಲಿ ಹೊಸಚಿಂತನೆಗಳನ್ನು ಸೃಜಿಸುವಂತೆ ಇವೆಯೆಂದಾದರೆ ತುಂಬಾ ಸಂತೋಷ.
      ಈ ಬ್ಲಾಗಿನ ಲಿಂಕನ್ನು ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳಿ.🙏

Leave a Reply

Your email address will not be published. Required fields are marked *