(ಮಂಗಳೂರು ವಿಶ್ವವಿದ್ಯಾನಿಲಯದ ಬಿಬಿಎ ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ)
ಕವಿ-ಕಾವ್ಯ ಪರಿಚಯ:
ಹಳೆಗನ್ನಡ ಕಾವ್ಯಸಂಪ್ರದಾಯದಲ್ಲಿ ಪಂಪನ ಅನಂತರ ಬಂದ ಪ್ರಸಿದ್ಧ ಕವಿಗಳಲ್ಲಿ ರನ್ನನೂ ಒಬ್ಬನಾಗಿದ್ದಾನೆ. ’ಕವಿರತ್ನ’, ’ಶಕ್ತಿಕವಿ’ ಮೊದಲಾದ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ರನ್ನ ಪಂಪನ ಎತ್ತರಕ್ಕೆ ಏರಬಲ್ಲ, ಆತನ ಆಳಕ್ಕೆ ಇಳಿಯಬಲ್ಲ ಕವಿ. ಈತನ ಕಾಲ ಕ್ರಿ. ಶ. ಸು. ೯೪೯. ಈತ ತನ್ನ ಕಾವ್ಯಗಳಲ್ಲಿ ಉಲ್ಲೇಖಿಸಿದಂತೆ ಬೆಳುಗಲಿ ೫೦೦ರ ಜಂಬುಖಂಡಿ ಸೀಮೆಯ ೭೦ರ ಮುದುವೊಳಲಿನಲ್ಲಿ ಜನಿಸಿದವನು. ಪ್ರಸಕ್ತ ಈ ಪ್ರದೇಶ ಮುಧೋಳ್ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದ್ದು ಇಂದಿನ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯೊಳಗಿದೆ. ಜಿನವಲ್ಲಭ ಹಾಗೂ ಅಬ್ಬಲಬ್ಬೆಯರಿಗೆ ನಾಲ್ಕನೆಯ ಮಗನಾಗಿ ಜನಿಸಿದ ರನ್ನ ತನ್ನ ಪ್ರಾರಂಪರಿಕ ಉದ್ಯೋಗವಾದ ಬಳೆಗಾರಿಕೆಯನ್ನು ಬಿಟ್ಟುಬಿಟ್ಟು ವಿದ್ಯಾಭ್ಯಾಸ ಹಾಗೂ ಸಾಹಿತ್ಯಾಭ್ಯಾಸಗಳ ಹಂಬಲದಿಂದ ತನ್ನ ಊರನ್ನು ತ್ಯಜಿಸಿ ಶ್ರವಣಬೆಳಗೊಳಕ್ಕೆ ಬಂದು ಅಜಿತಸೇನಾಚಾರ್ಯರಲ್ಲಿ ಶಿಷ್ಯವೃತ್ತಿಯನ್ನು ಕೈಗೊಂಡು, ಅನಂತರ ಗಂಗರಸರ ಮಂತ್ರಿಯಾದ ಚಾವುಂಡರಾಯ ಹಾಗೂ ದಾನಚಿಂತಾಮಣಿ ಅತ್ತಿಮಬ್ಬೆಯರ ಆಶ್ರಯವನ್ನು ಪಡೆದುಕೊಂಡು ಉಪಕೃತನಾಗಿರುವಂತೆ ತಿಳಿದುಬರುತ್ತದೆ. ದಾನಚಿಂತಾಮಣಿ ಅತ್ತಿಮಬ್ಬೆಯ ಆಶಯದಂತೆಯೇ “ಅಜಿತತೀರ್ಥಂಕರರ ಪುರಾಣತಿಲಕ” ಎಂಬ ಕಾವ್ಯವನ್ನು ಬರೆದು ಅವರಿಂದ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದಾನೆ. ಶಾಂತಿ ಮತ್ತು ಜಕ್ಕಿ ಎಂಬ ಹೆಂಡತಿಯರನ್ನು ಹೊಂದಿದ್ದ ರನ್ನ ಮೊದಲಿಗೆ ಸಾಮಂತ ರಾಜರ, ಮಾಂಡಳಿಕರ ಆಸ್ಥಾನಗಳಲ್ಲಿ ಕವಿಯಾಗಿದ್ದು, ಅನಂತರ ತನ್ನ ನಾಡಿಗೆ ಬಂದು ಕಲ್ಯಾಣಿ ಚಾಲುಕ್ಯರ ಇಮ್ಮಡಿ ತೈಲಪನ ಆಸ್ಥಾನದಲ್ಲಿ ಕವಿಯಾಗಿ ಮುಂದೆ ಆತನ ಮಗನಾದ ಸತ್ಯಾಶ್ರಯ ಇಱಿವಬೆಡಂಗನ ಆಸ್ಥಾನದಲ್ಲಿ ಪಟ್ಟದ ಕವಿಯಾಗಿ “ಕವಿಚಕ್ರವರ್ತಿ” ಎಂಬ ಬಿರುದನ್ನು ಪಡೆದು “ಸಾಹಸಭೀಮ ವಿಜಯ” ಎಂಬ ಕಾವ್ಯವನ್ನು ಬರೆದು ಪ್ರಸಿದ್ಧನಾದನು.
ರನ್ನ “ಅಜಿತತೀರ್ಥಂಕರರ ಪುರಾಣತಿಲಕ”, “ಸಾಹಸಭೀಮ ವಿಜಯಂ”, “ಪರಶುರಾಮಚರಿತ” ಹಾಗೂ “ಚಕ್ರೇಶ್ವರ ಚರಿತ”ಗಳೆಂಬ ನಾಲ್ಕು ಕಾವ್ಯಗಳನ್ನು ಬರೆದಿರುವಂತೆ ಆತನ ಅಜಿತಪುರಾಣದಿಂದ ತಿಳಿದುಬರುತ್ತದೆ. ಆದರೆ ಉಳಿದೆರಡು ಕಾವ್ಯಗಳು ಉಪಲಬ್ಧವಾಗಿಲ್ಲ. ಈತ “ರನ್ನಕಂದ” ಎಂಬ ನಿಘಂಟೊಂದನ್ನು ರಚಿಸಿದಂತೆ ಕಂಡುಬರುತ್ತಿದ್ದು, ಅದರ ಒಂದು ಭಾಗ ಮಾತ್ರ ಉಪಲಬ್ಧವಾಗಿದೆ. ಇದು ಕನ್ನಡದ ಮೊದಲ ನಿಘಂಟು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಪಂಪ ಅನುಸರಿಸಿದ ಲೌಕಿಕ ಹಾಗೂ ಆಗಮಿಕಗಳೆಂಬ ಎರಡು ಕಾವ್ಯಮಾರ್ಗಗಳನ್ನು ರನ್ನನೂ ಅನುಸರಿಸಿದ್ದಾನೆ. ಕನ್ನಡ ಹಾಗೂ ಸಂಸ್ಕೃತಗಳೆರಡರಲ್ಲಿಯೂ ಪಾಂಡಿತ್ಯವನ್ನು ಸಂಪಾದಿಸಿರುವ ರನ್ನ ತನ್ನ “ಸಾಹಸಭೀಮ ವಿಜಯ”ಕ್ಕೆ ಪಂಪನ “ವಿಕ್ರಮಾರ್ಜುನ ವಿಜಯ”, ಸಂಸ್ಕೃತದ ಭಟ್ಟನಾರಾಯಣನ “ವೇಣೀಸಂಹಾರ”, ಭಾಸನ “ಊರುಭಂಗ” ಎಂಬ ನಾಟಕಗಳಿಗೆ ಋಣಿಯಾಗಿದ್ದಾನೆ. ರನ್ನನಿಗೆ “ಕವಿರತ್ನ”, “ಕವಿಮುಖಚಂದ್ರ”, “ಕವಿಚಕ್ರವರ್ತಿ”, “ಕವಿರಾಜಶೇಖರ”, “ಕವಿಚೂಡಾರತ್ನ”, “ಕವಿಚತುರ್ಮುಖ” ಹಾಗೂ “ಉಭಯಕವಿ” ಮೊದಲಾದ ಬಿರುದುಗಳಿದ್ದಂತೆ ತಿಳಿದುಬರುತ್ತದೆ.
ಕಾವ್ಯಭಾಗದ ಹಿನ್ನೆಲೆ:
ಪ್ರಸ್ತುತ ಕಾವ್ಯಭಾಗವನ್ನು ರನ್ನನ “ಸಾಹಸಭೀಮವಿಜಯ”ದ ಮೂರನೆಯ ಹಾಗೂ ನಾಲ್ಕನೆಯ ಆಶ್ವಾಸಗಳಿಂದ ಆಯ್ದುಕೊಳ್ಳಲಾಗಿದೆ. ಹದಿನೇಳು ದಿನಗಳ ಕುರುಕ್ಷೇತ್ರ ಯುದ್ಧ ಮುಗಿದಾಗ ದುರ್ಯೋಧನ ತನ್ನ ಕಡೆಯ ಬಹುತೇಕ ಎಲ್ಲರನ್ನೂ ಕಳೆದುಕೊಂಡಿದ್ದಾನೆ. ಬಲರಾಮ ಯುದ್ಧಕ್ಕೆ ಮೊದಲೇ ತೀರ್ಥಯಾತ್ರೆಗೆ ಹೋದವನು ಇನ್ನೂ ಬಂದಿಲ್ಲ. ಅಶ್ವತ್ಥಾಮ ದುರ್ಯೋಧನನಲ್ಲಿ ಕೋಪಿಸಿಕೊಂಡು ಯುದ್ಧರಂಗದಿಂದ ಈ ಹಿಂದೆಯೇ ನಿರ್ಗಮಿಸಿದ್ದಾನೆ. ಕೃಪಾಚಾರ್ಯ ಹಾಗೂ ಕೃತವರ್ಮರು ಎಲ್ಲೋ ತಲೆಮರೆಸಿಕೊಂಡಿದ್ದಾರೆ. ತಾನು ಒಬ್ಬಂಟಿಗನಾದರೂ ತನ್ನವರೆಲ್ಲರನ್ನೂ ಕಳೆದುಕೊಂಡಿದ್ದರೂ ದುರ್ಯೋಧನ ಹದಿನೆಂಟನೆಯ ದಿನ ಮುಂಜಾನೆ ಯುದ್ಧರಂಗಕ್ಕೆ ಹೊರಟು ನಿಂತಿದ್ದಾನೆ. ಇನ್ನೊಂದು ಕಡೆ ಧೃತರಾಷ್ಟ್ರ ಹಾಗೂ ಗಾಂಧಾರಿಯರು ತಮ್ಮ ಮಗನನ್ನು ಅರಸುತ್ತ, ಪ್ರಲಾಪಿಸುತ್ತ ಯುದ್ಧರಂಗಕ್ಕೆ ಬರುತ್ತಿರುವ ವಿಚಾರವನ್ನು ಸಂಜಯನಿಂದ ತಿಳಿದುಕೊಂಡ ದುರ್ಯೋಧನ ತನ್ನ ಹೆತ್ತವರನ್ನು ಎದುರಿಸುವುದಕ್ಕೆ ಅಳುಕುತ್ತಾನೆ. ಮುಂದಿನ ಕಥೆ ಈ ಪದ್ಯಭಾಗದಲ್ಲಿ ವ್ಯಕ್ತವಾಗಿದೆ.
ಕಾವ್ಯಭಾಗದ ಆಶಯ:
ಅತಿಯಾದ ಛಲ, ದುರಹಂಕಾರ, ಸೇಡಿನ ಮನೋಭಾವ, ದುರಾಸೆ, ಮತ್ಸರ, ಅನ್ಯರ ಬಗೆಗಿನ ತಾತ್ಸಾರ ಮೊದಲಾದ ಅವಗುಣಗಳು ವ್ಯಕ್ತಿಯ ನಾಶಕ್ಕೆ ಕಾರಣವಾಗುತ್ತವೆ. ವಿನಾಕಾರಣ ದ್ವೇಷಸಾಧನೆ, ಹಿರಿಯರ ಮಾತುಗಳ ಅವಗಣನೆ, ಮಿತಿಮೀರಿದ ಛಲ, ಗೊತ್ತುಗುರಿಯಿಲ್ಲದ ದುರಹಂಕಾರ ಮೊದಲಾದವುಗಳು ಒಬ್ಬ ವ್ಯಕ್ತಿಯ ಮಾತ್ರವಲ್ಲ, ಒಂದು ವಂಶದ ನಾಶಕ್ಕೆ ಮಾತ್ರವಲ್ಲ, ಹಲವು ವಂಶಗಳ ನಾಶಕ್ಕೂ ಕಾರಣವಾಗುತ್ತವೆ ಎಂಬುದು ಈ ಕಾವ್ಯಭಾಗದಿಂದ ವ್ಯಕ್ತವಾಗುತ್ತದೆ. ಧರ್ಮಿಷ್ಠರಾದ ಪಾಂಡವರ ಮೇಲಿನ ವಿನಾಕಾರಣ ದ್ವೇಷ, ಗುರುಹಿರಿಯರ ಮಾತುಗಳ ತಿರಸ್ಕಾರ, ಹಿರಿಯರನ್ನು ಬದಿಗೊತ್ತಿ ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರಗಳು, ಕಾನೂನುಬಾಹಿರ ಹಾಗೂ ಅನೈತಿಕವಾದ ದುಷ್ಟಪರಂಪರೆಗಳು ಒಂದು ವಂಶದ ಆದ್ಯಂತ ಸರ್ವನಾಶಕ್ಕೆ ದುರ್ಯೋಧನ ಕಾರಣನಾಗುತ್ತಾನೆ. ಆತನ ಪಕ್ಷದಲ್ಲಿದ್ದು ಹೋರಾಡಿದ ಭರತಖಂಡದ ಇತರ ದೇಶಗಳ ರಾಜರ ಹಾಗೂ ಅವರ ವಂಶಗಳ ನಾಶಕ್ಕೂ ಕಾರಣನಾಗುತ್ತಾನೆ.
ದುರ್ಯೋಧನ ಅಧಿಕಾರದಾಹ ಹಾಗೂ ದುರಹಂಕಾರಗಳಿಂದ ಕುರುಡನಾದರೆ, ಧೃತರಾಷ್ಟ್ರ-ಗಾಂಧಾರಿಯರು ಪುತ್ರವ್ಯಾಮೋಹದಿಂದ, ಸಮಸ್ತ ಭರತಖಂಡವನ್ನು ತನ್ನ ಮಗನೊಬ್ಬನೇ ಆಳಬೇಕೆಂಬ ಸ್ವಾರ್ಥದಿಂದ, ಮಕ್ಕಳು ತಪ್ಪುಮಾಡಿದಾಗ, ನಿರಂತರ ಅಪರಾಧಗಳನ್ನು ಎಸಗಿದಾಗ, ಅನೈತಿಕವಾಗಿ ನಡೆದುಕೊಂಡಾಗ ತಿದ್ದದೇ ಕುರುಡನಾಗುತ್ತಾರೆ ಎಂಬುದನ್ನು ಈ ಕಾವ್ಯಭಾಗ ಧ್ವನಿಸುತ್ತದೆ.
ಕಾವ್ಯಭಾಗ:
ಗದ್ಯ: ಅಂತು ಮೂರ್ಛಾಪ್ರಸಂಗನಾದ ಪನ್ನಗಪತಾಕಂಗೆ ಶಿಶಿರೋಪಚಾರ ಕ್ರಿಯೆಗಳಂ ಮಾೞ್ಪ ಸಂಜಯನನಿರವಂ ತತ್ಪರಿಜನಂ ಕಂಡು ಪೇೞೆ ಗಾಂಧಾರಿ ಮನದೊಳಳ್ಕಿ ಬಳ್ಕಿ ನನೆಕೊನೆವೋಗಿ
ಗದ್ಯದ ಅನ್ವಯಕ್ರಮ:
ಅಂತು ಮೂರ್ಛಾ ಪ್ರಸಂಗನ್ ಆದ ಪನ್ನಗಪತಾಕಂಗೆ ಶಿಶಿರ ಉಪಚಾರ ಕ್ರಿಯೆಗಳಂ ಮಾೞ್ಪ ಸಂಜಯನ ಇರವಂ ತತ್ ಪರಿಜನಂ ಕಂಡು ಪೇೞೆ ಗಾಂಧಾರಿ ಮನದೊಳ್ ಅಳ್ಕಿ ಬಳ್ಕಿ ನನೆಕೊನೆ ಹೋಗಿ
ಪದ-ಅರ್ಥ:
ಅಂತು-ಹಾಗೆ; ಮೂರ್ಛಾಪ್ರಸಂಗನಾದ-ಮೂರ್ಛಿತನಾದ, ಮೂರ್ಛೆಹೋದ; ಪನ್ನಗಪತಾಕಂಗೆ-ಸರ್ಪಧ್ವಜನಿಗೆ (ದುರ್ಯೋಧನನಿಗೆ); ಶಿಶಿರೋಪಚಾರ-ಶೈತ್ಯೋಪಚಾರ; ಮಾೞ್ಪ-ಮಾಡುವ, ನೆರವೇರಿಸುವ; ಸಂಜಯನನಿರವಂ-ಸಂಜಯನ ಸ್ಥಿತಿಯನ್ನು; ತತ್ಪರಿಜನಂ-ಅಲ್ಲಿನ ಪರಿಚಾರಕರು; ಮನದೊಳ್- ಮನಸ್ಸಿನೊಳಗೆ; ಅಳ್ಕಿ-ಬೆಚ್ಚಿ; ಬಳ್ಕಿ-ಬಾಗಿ; ನನೆಕೊನೆವೋಗಿ– ನಡುಗಿಹೋಗಿ.
ಹಾಗೆ ಮೂರ್ಛೆಹೋದ ಸರ್ಪಧ್ವಜನಾದ ದುರ್ಯೋಧನನಿಗೆ ಶೈತ್ಯೋಪಚಾರ ಮಾಡುತ್ತಿದ್ದ ಸಂಜನಯನ ಸ್ಥಿತಿಯನ್ನು ಪರಿಚಾರಕರು ನೋಡಿ ಧೃತರಾಷ್ಟ್ರ ಗಾಂಧಾರಿಯರಿಗೆ ತಿಳಿಸಿದಾಗ ಒಡನೆಯೇ ಗಾಂಧಾರಿ ತನ್ನ ಮನಸ್ಸಿನೊಳಗೆ ಬೆಚ್ಚಿ, ಅಶಕ್ತಳಾಗಿ ಬಾಗಿ ಅಧೀರತೆಯಿಂದ ನಡುಗಿಹೋಗಿ-
ಧೃತರಾಷ್ಟ್ರ ಗಾಂಧಾರಿಯರು ದುರ್ಯೋಧನನ್ನು ಕಾಣುವುದಕ್ಕೆ ಆತನನ್ನು ಹುಡುಕಿಕೊಂಡು ಯುದ್ಧರಂಗಕ್ಕೆ ಬಂದಾಗ ಸಂಜಯ ದುರ್ಯೋಧನನಿಗೆ ಶೈತ್ಯೋಪಚಾರ ಮಾಡುತ್ತಿದ್ದ ವಿಚಾರ ಅವರಿಗೆ ಪರಿಚಾರಕರಿಂದ ತಿಳಿಯಿತು. ಎಂತಹ ಪ್ರಸಂಗದಲ್ಲಿಯೂ ಜಗ್ಗದ, ಬಗ್ಗದ ದುರ್ಯೋಧನನಿಗೆ ಸಂಜಯ ಶೈತ್ಯೋಪಚಾರ ಮಾಡುತ್ತಿದ್ದಾನೆ ಎಂದಾದರೆ ದುರ್ಯೋಧನನಿಗೆ ಏನಾದರೂ ಆಪತ್ತು ಒದಗಿರಬಹುದೇ ಎಂದು ಭ್ರಮಿಸಿ ಗಾಂಧಾರಿ ಮನಸ್ಸಿನಲ್ಲಿಯೇ ಕಳವಳಗೊಂಡು ಬೆಚ್ಚಿ, ಅಧೀರಳಾಗಿ ಶಕ್ತಿಗುಂದಿ ಅಲ್ಲಿಯೇ ಬಾಗಿಹೋಗುತ್ತಾಳೆ. ಮಾತ್ರವಲ್ಲದೆ ಏಕಾಏಕಿ ನಿಸ್ತೇಜಳಾಗಿ ನಡುಗಿ ಶೋಕಕ್ಕೊಳಗಾಗುತ್ತಾಳೆ.
ಮೃಗಧರ ಕುಲಲಕ್ಷ್ಮೀವ
ಲ್ಲಿಗೆ ಪೆಱರಾರ್ ನೀನೆ ಮುನ್ನಡರ್ಪೆನಲಿರ್ದಯ್
ಮಗನೆ ಲಯಕಾಲಭೀಮೋ
ರಗನುರಗಪತಾಕ ನಿನ್ನುಮಂ ನುಂಗಿದನೇ ೧
ಪದ್ಯದ ಅನ್ವಯಕ್ರಮ:
ಮೃಗಧರ ಕುಲಲಕ್ಷ್ಮೀವಲ್ಲಿಗೆ ನೀನೇ ಮುನ್ನ ಅಡರ್ಪೆನ್ ಎನಲ್ ಇರ್ದಯ್ ಪೆಱರ್ ಆರ್, ಮಗನೆ, ಉರಗಪತಾಕ ನಿನ್ನುಮಂ ಲಯಕಾಲ ಭೀಮ ಉರಗನ್ ನುಂಗಿದನೇ.
ಪದ-ಅರ್ಥ:
ಮೃಗಧರಕುಲ– ಚಂದ್ರವಂಶ; ಲಕ್ಷ್ಮೀವಲ್ಲಿ-ಲಕ್ಶ್ಗ್ಮೀ ಎಂಬ ಬಳ್ಳಿ; ಮುನ್ನಡರ್ಪು-ಮೂಲಾಧಾರ; ಎನಲ್-ಎನ್ನುವಂತೆ; ಇರ್ದಯ್-ಬದುಕಿದ್ದೆ; ಲಯಕಾಲಭೀಮೋರಗ-ಪ್ರಳಯಕಾಲವೆಂಬ ಭಯಂಕರ ಸರ್ಪ, ಪ್ರಳಯಕಾಲಭೀಮನೆಂಬ ಸರ್ಪ; ಉರಗಪತಾಕ-ಸರ್ಪಧ್ವಜ (ದುರ್ಯೋಧನ); ನುಂಗಿದನೇ-ನಾಶಮಾಡಿದನೇ, ಕೊಂದನೇ.
ದುರ್ಯೋಧನನೇ, ಚಂದ್ರವಂಶಲಕ್ಷ್ಮೀ ಎಂಬ ಬಳ್ಳಿಗೆ ನೀನೇ ಮೊದಲಿಗನಾಗಿ ಇದುವರೆಗೂ ಮೂಲಾಧಾರ ಎನ್ನುವಂತೆ ಬದುಕಿದ್ದೆ. ಆದರೆ, ಈಗ ಪ್ರಳಯಕಾಲವೆಂಬ ಭಯಂಕರ ಸರ್ಪವು ಅಥವಾ ಪ್ರಳಯಕಾಲವೆಂಬ ಭೀಮಸರ್ಪವು ಸರ್ಪಧ್ವಜನಾದ ನಿನ್ನನ್ನೂ ನುಂಗಿಬಿಟ್ಟಿತೇ?
ಗಾಂಧಾರಿಯ ಪ್ರಕಾರ ದುರ್ಯೋಧನ ಚಂದ್ರವಂಶವೆಂಬುದು ಸಂಪದ್ಭರಿತವಾದ, ಬಲಿಷ್ಠವಾದ ಬಳ್ಳಿ. ಅಂತಹ ಬಳ್ಳಿಗೆ ದುರ್ಯೋಧನನೇ ಮೊದಲಿಗನೂ ತನ್ನ ವಂಶವೆಂಬ ಬಳ್ಳಿಗೆ ಮೂಲಾಧಾರನೂ ಆಗಿದ್ದನು. ಅವನು ಹಾಗೆಯೇ ಬದುಕಿದ್ದನು. ಅವನಿಂದಲೇ ಚಂದ್ರವಂಶವು ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದುತ್ತದೆ, ಇತರ ವಂಶಸ್ಥರಿಗೆ ಆತನೇ ಪ್ರೇರಣಾಶಕ್ತಿಯಾಗುತ್ತಾನೆ ಎಂಬುದಾಗಿ ಗಾಂಧಾರಿ ಹಂಬಲಿಸಿದ್ದಳು. ಮೇಲಾಗಿ ದುರ್ಯೋಧನ ವಿಷವನ್ನೇ ಮೈದುಂಬಿಕೊಂಡಿರುವ ಸರ್ಪವನ್ನು ತನ್ನ ಧ್ವಜದಲ್ಲಿ ಚಿಹ್ನೆಯಾಗಿ ಬಳಸಿಕೊಂಡು ಸರ್ಪಧ್ವಜನೆನಿಸಿಕೊಂಡಿದ್ದಾನೆ. ಅದು ಆತನ ಸ್ವಭಾವಕ್ಕೂ ಅನ್ವರ್ಥವಾಗಿದೆ. ಅಂತಹ ಸರ್ಪಧ್ವಜನೆನಿಸಿದ, ಬಲಶಾಲಿಯಾದ, ವೈರಿಗಳನ್ನೇ ನಾಶಮಾಡುವ ಸಾಮರ್ಥ್ಯವುಳ್ಳ ದುರ್ಯೋಧನನನ್ನು ಪ್ರಳಯಕಾಲದ ಭಯಂಕರ ಸರ್ಪವೊಂದು ನುಂಗಿಬಿಟ್ಟಿತೇ? ಅಥವಾ ಪ್ರಳಯದ ರೀತಿಯಲ್ಲಿ ಭೀಮನೇ ಅತಿಭೀಕರವಾದ ಸರ್ಪರೂಪದಲ್ಲಿ ಬಂದು ನಿನ್ನನ್ನು ನುಂಗಿಬಿಟ್ಟನೇ ? ಎಂದು ಗಾಂಧಾರಿ ಕಳವಳಪಡುತ್ತಾಳೆ.
ಎಮಗಂಧಯಷ್ಟಿಯಾಗಿ
ರ್ದೆ ಮಗನೆ ನೀನುಳ್ಳೊಡೆಲ್ಲರೊಳರೆಂದಿರೆ ನಿ
ನ್ನುಮನಿರಿಸದೆ ಕುರುವಂಶಾ
ನಿಮಿತ್ತರಿಪು ಪಾಶಪಾಣಿ ಸವಿನೋಡಿದನೇ ೨
ಪದ್ಯದ ಅನ್ವಯಕ್ರಮ:
ಮಗನೆ, ಎಮಗೆ ಅಂಧಯಷ್ಟಿಯಾಗಿ ಇರ್ದೆ, ನೀನು ಉಳ್ಳೊಡೆ ಎಲ್ಲರ್ ಒಳರ್ ಎಂದಿರೆ, ಕುರುವಂಶ ಅನಿಮಿತ್ತ ರಿಪು ಪಾಶಪಾಣಿ ನಿನ್ನುಮನ್ ಇರಿಸದೆ ಸವಿನೋಡಿದನೇ
ಪದ-ಅರ್ಥ:
ಎಮಗೆ-ನಮಗೆ; ಅಂಧಯಷ್ಠಿಯಾಗಿರ್ದೆ-ಕುರುಡರ ಊರುಗೋಲಾಗಿದ್ದೆ; ನೀನುಳ್ಳೊಡೆ-ನೀನು ಇದ್ದರೆ (ನೀನು ಬದುಕಿದ್ದರೆ); ಎಲ್ಲರೊಳರ್-ಎಲ್ಲರೂ ಇರುತ್ತಾರೆ (ಎಲ್ಲರೂ ಬದುಕಿರುತ್ತಾರೆ); ಎಂದಿರೆ-ಎಂದುಕೊಂಡಿದ್ದೆ, ಭಾವಿಸಿಕೊಂಡಿದ್ದೆ; ನಿನ್ನುಮಂ-ನಿನ್ನನ್ನೂ; ಕುರುವಂಶಾನಿಮಿತ್ತರಿಪು-ಕುರುವಂಶಕ್ಕೆ ಇರುವ ನಿಷ್ಕಾರಣ ವೈರಿ; ಪಾಶಪಾಣಿ-ಯಮರಾಜ; ಸವಿನೋಡಿದನೇ-ಆಸ್ವಾದಿಸಿದನೇ, ಕೊಂದನೇ.
ಮಗನೇ ದುರ್ಯೋಧನ, ನೀನು ಇದುವರೆಗೂ ಕುರುಡರಾದ ನಮಗೆ ಊರುಗೋಲಾಗಿದ್ದೆ. ನೀನೊಬ್ಬ ಬದುಕಿದ್ದರೆ ನಮ್ಮ ಉಳಿದ ಮಕ್ಕಳೆಲ್ಲರೂ ಸುರಕ್ಷಿತವಾಗಿ ಬದುಕುತ್ತಾರೆ ಎಂಬ ಭರವಸೆಯನ್ನು ಇಟ್ಟುಕೊಂಡಿದ್ದೆ. ಆದರೆ, ಈಗ ನಿನ್ನನ್ನೂ ಬದುಕಗೊಡದೆ ಕುರುವಂಶಕ್ಕಿರುವ ನಿಷ್ಕಾರಣವೈರಿ ಎನಿಸಿರುವ ಯಮರಾಜನೂ ಕೊಂದುಬಿಟ್ಟನೇ? ಎಂದು ಗಾಂಧಾರಿ ಪರಿತಪಿಸಿದಳು.
ಗಾಂಧಾರಿಯ ಪ್ರಕಾರ, ಛಲದಂಕಮಲ್ಲನೆನಿಸಿರುವ ದುರ್ಯೋಧನ ವಂಶಕ್ಕೆ ಹಿರಿಯನಾಗಿ ಕುರುವಂಶಕ್ಕೆ ಆಧಾರಸ್ತಂಭವಾಗಿದ್ದವನು. ಮಾತ್ರವಲ್ಲ ಕುರುಡರಾದ ತಮಗಿಬ್ಬರಿಗೂ ಊರುಗೋಲಿನಂತಿದ್ದವನು. ಆತ ವಂಶಕ್ಕೆ ಹಿರಿಯ ಮಗನಾಗಿರುವುದರಿಂದ ಮಾತ್ರವಲ್ಲದೆ, ಬಲಾಢ್ಯನೂ ಆಗಿರುವುದರಿಂದ ತನ್ನ ಹೆತ್ತವರನ್ನು ಮಾತ್ರವಲ್ಲ, ತನ್ನ ತಮ್ಮಂದಿರನ್ನೂ ಕಾಪಾಡಿಕೊಂಡು ಬರುತ್ತಾನೆ, ವಂಶವನ್ನೂ ಉದ್ಧರಿಸುತ್ತಾನೆ ಎಂಬ ಭರವಸೆಯನ್ನು ಧೃತರಾಷ್ಟ್ರ ಹಾಗೂ ಗಾಂಧಾರಿಯರು ಇರಿಸಿಕೊಂಡಿದ್ದರು. ಆದರೆ ಈಗ ಯುದ್ಧರಂಗದಲ್ಲಿ ದುರ್ಯೋಧನನಿರುವ ಸ್ಥಿತಿಗತಿಗಳನ್ನೂ ಸಂಜಯನ ಶೈತ್ಯೋಪಚಾರಗಳೆಲ್ಲವನ್ನೂ ನೋಡಿದಾಗ ದುರ್ಯೋಧನ ಸತ್ತನೆಂದೇ ಭಾವಿಸಿ ಗಾಂಧಾರಿ ಅಧೀರಳಾಗುತ್ತಾಳೆ. ಯಮರಾಜ ಕಾರಣವಿಲ್ಲದೆ ಕೋಪಿಸಿಕೊಳ್ಳುವವನು, ಆತ ನಿಷ್ಕರುಣಿ. ಈಗ ಅವನೂ ಭೀಮನಂತೆಯೇ ನಿನ್ನ ಮೇಲೆ ಅನಿಮಿತ್ತವಾಗಿ ಕೋಪಿಸಿಕೊಂಡು ನಿನ್ನನ್ನೂ ಕೊಂದುಹಾಕಿದನೇ! ಎಂದು ಗಾಂಧಾರಿ ಪರಿತಪಿಸಿದಳು.
ಗುರುಚರಣಂಗಳ್ಗೆಱಗದೆ
ಪರಕೆಯನಾದರದಿನಾಂತುಕೊಳ್ಳದೆ ಮೋನಂ
ಬೆರಸಿರ್ಪುದುನಿನಗುಚಿತಮೆ
ಗುರುವಿನಯಮನೇಕೆ ಮಱೆದೆ ಕುರುಕುಲತಿಲಕಾ ೩
ಪದ್ಯದ ಅನ್ವಯಕ್ರಮ:
ಗುರುಚರಣಂಗಳ್ಗೆ ಎಱಗದೆ ಆದರದಿನ್ ಪರಕೆಯನ್ ಆಂತುಕೊಳ್ಳದೆ, ಮೋನಂ ಬೆರಸಿರ್ಪುದು ನಿನಗೆ ಉಚಿತಮೆ, ಕುರುಕುಲತಿಲಕಾ ಗುರುವಿನಯಮನ್ ಅದೇಕೆ ಮಱೆದೆ.
ಪದ-ಅರ್ಥ:
ಗುರುಚರಣಂಗಳ್ಗೆ-ಗುರುಗಳ ಪಾದಗಳಿಗೆ; ಎಱಗದೆ-ನಮಸ್ಕರಿಸದೆ; ಪರಕೆಯನ್-ಆಶೀರ್ವಾದವನ್ನು; ಆದರದಿಂ-ಗೌರವದಿಂದ; ಆಂತುಕೊಳ್ಳದೆ-ಸ್ವೀಕರಿಸದೆ; ಮೋನಂ ಬೆರಸಿರ್ಪುದು-ಮೌನದಿಂದಿರುವುದು; ನಿನಗುಚಿತಮೆ-ನಿನಗೆ ಯೋಗ್ಯವೆ; ಗುರುವಿನಯ-ಗುರುಗಳ ಬಗೆಗಿರುವ ವಿನೀತತೆ; ಮಱೆದೆ-ಮರೆತುಬಿಟ್ಟೆ; ಕುರುಕುಲತಿಲಕಾ-ಕುರುವಂಶಕ್ಕೆ ತಿಲಕಪ್ರಾಯನಾದವನು (ದುರ್ಯೋಧನ)
ಕುರುಕುಲಕ್ಕೆ ತಿಲಕಪ್ರಾಯನಾದ ದುರ್ಯೋಧನನೇ, ಗುರುಹಿರಿಯರು ಎದುರಾದಾಗಲೆಲ್ಲ ಅವರ ಪಾದಗಳಿಗೆ ನಮಸ್ಕರಿಸದೆ, ಅವರ ಆಶೀರ್ವಾದಗಳನ್ನು ಸ್ವೀಕರಿಸದೆ ಏಕೆ ಮೌನವಾಗಿರುವೆ? ಇದು ನಿನಗೆ ಸರಿಯೆನಿಸುವುದೇ? ಗುರುಹಿರಿಯರನ್ನು ಗೌರವಿಸುವ, ಮನ್ನಿಸುವ ನಿನ್ನ ವಿನಯವಂತಿಕೆಯನ್ನು ಏಕೆ ಮರೆತುಬಿಟ್ಟೆ?
ದುರ್ಯೋಧನ ಗುರುಹಿರಿಯರು, ಹೆತ್ತವರು ಎದುರಾದಾಗಲೆಲ್ಲ ಅವರ ಪಾದಗಳಿಗೆ ನಮಸ್ಕರಿಸುವ, ಅವರ ಆಶೀರ್ವಾದವನ್ನು ಬೇಡುವ ಹಾಗೂ ಸ್ವೀಕರಿಸುವ ವಿನಯವಂತಿಕೆಯನ್ನು ಮೈಗೂಡಿಸಿಕೊಂಡು ಕುರುಕುಲಕ್ಕೆ ತಿಲಕಪ್ರಾಯನೆನಿಸಿಕೊಂಡವನು. ಈಗ ಹೆತ್ತವರಾದ ತಾವು ಬಂದಿದ್ದರೂ ತಮ್ಮ ಪಾದಗಳಿಗೆ ನಮಸ್ಕರಿಸದೆ, ನಮ್ಮ ಆಶೀರ್ವಾದವನ್ನು ಪಡೆಯಲು ಹವಣಿಸದೆ ಮೌನವಾಗಿರುವುದು ಗಾಂಧಾರಿಗೆ ಗಲಿಬಿಲಿಯನ್ನು ಉಂಟುಮಾಡುತ್ತದೆ. ಸದಾ ಲವಲವಿಕೆಯಿಂದಿರುವವನು, ಗುರುಹಿರಿಯರಲ್ಲಿ ಉನ್ನತವಾದ ಗೌರವವಿರಿಸಿದವನು, ಸದಾ ಅವರ ಕಾಲಿಗೆರಗಿ ಆಶೀರ್ವಾದವನ್ನು ಬೇಡುವವನು, ಹೆತ್ತವರಾದ ತಾವಿಬ್ಬರೂ ಎದುರಾದಾಗ ನಗುಮೊಗದಿಂದ ಸ್ವಾಗತಿಸಿ ತಮ್ಮ ಕಾಲಿಗೆರಗಿ ಆಶೀರ್ವಾದವನ್ನು ಪಡೆಯುವವನು ಇಂದೇಕೆ ಕಾಲಿಗೆರಗದೆ, ಮಾತಾಡದೆ ಮೌನದಿಂದಿದ್ದಾನೆ ಎಂಬುದು ಗಾಂಧಾರಿಯ ಅಳಲು. ಮೌನವಾಗಿರುವುದನ್ನು ನೋಡಿದರೆ ಅವನೇನಾದರೂ ತಮ್ಮನ್ನು ಬಿಟ್ಟು ಹೊರಟುಹೋದನೆ ಎಂಬುದು ಆಕೆಯ ಕಳವಳ.
ಮಡಿದೀ ದುಶ್ಶಾಸನನೇಂ
ನುಡಿಯಿಸುವನೊ ಕುರುನರೇಂದ್ರ ದುರ್ಮರ್ಷಣನೇಂ
ನುಡಿಯಿಸುವನೊ ದುಷ್ಕರ್ಣಂ
ನುಡಿಯಿಸುವನೊ ನೀನುಮುಸಿರದಿರ್ಪುದೆ ಮಗನೇ ೪
ಪದ್ಯದ ಅನ್ವಯಕ್ರಮ:
ಕುರು ನರೇಂದ್ರ, ಮಡಿದ ಈ ದುಶ್ಶಾಸನನ್ ಏಂ ನುಡಿಯಿಸುವನೊ, ದುರ್ಮಷಣನ್ ಏಂ ನುಡಿಯಿಸುವನೊ ದುಷ್ಕರ್ಣಂ ನುಡಿಯಿಸುವನೊ, ಮಗನೇ ನೀನುಂ ಉಸಿರದೆ ಇರ್ಪುದೆ?
ಪದ-ಅರ್ಥ:
ಮಡಿದ-ಸತ್ತುಹೋದ; ದುಶ್ಶಾಸನ-ದುರ್ಯೋಧನನ ಪ್ರೀತಿಪಾತ್ರನಾದ ತಮ್ಮ; ನುಡಿಯಿಸುವನೊ-ಮಾತಾಡಿಸುವನೊ; ಕುರುನರೇಂದ್ರ-ಕುರುರಾಜ(ದುರ್ಯೋಧನ); ದುರ್ಮರ್ಷಣ, ದುಷ್ಕರ್ಣ-ದುರ್ಯೋಧನನ ತಮ್ಮಂದಿರು; ನೀನುಂ-ನೀನು ಕೂಡಾ; ಉಸಿರದಿರ್ಪುದೆ-ಮಾತನಾಡಿಸಬೇಡವೇ.
ಕುರುರಾಜನಾದ ದುರ್ಯೋಧನನೇ, ಈಗಾಗಲೇ ಸತ್ತುಹೋಗಿರುವ ದುಶ್ಶಾಸನನು ನಮ್ಮನ್ನು ಹೇಗೆ ಮಾತನಾಡಿಸಲು ಸಾಧ್ಯ? ಅಳಿದಿರುವ ದುರ್ಮರ್ಷಣನಾಗಲೀ ದುಷ್ಕರ್ಣನಾಗಲೀ ಹೇಗೆ ಮಾತನಾಡಿಸಲು ಸಾಧ್ಯ? ಅವರು ಈಗಾಗಲೇ ಸತ್ತುಹೋಗಿದ್ದಾರೆ. ಉಳಿದಿರುವ ನೀನೂ ನಮ್ಮನ್ನು ಮಾತನಾಡಿಸಬೇಡವೆ? ಏಕೆ ಸುಮ್ಮನಿರುವೆ? ಎಂದು ಗಾಂಧಾರಿ ಪರಿತಪಿಸಿದಳು.
ದುರ್ಯೋಧನನ ಮೌನ ಗಾಂಧಾರಿಯನ್ನು ಮತ್ತೆ ಮತ್ತೆ ಕಳವಳಕ್ಕೀಡುಮಾಡುತ್ತದೆ. ದುರ್ಯೋಧನ ಸದಾ ಲವಲವಿಕೆಯಿಂದ ಇರುವವನು. ತಾವು ಎದುರಾದಾಗಲೆಲ್ಲ ಕಾಲಿಗೆರಗಿ ಗೌರವಿಸುವವನು. ಆದರೆ ಈಗ ತಾವಿಬ್ಬರೂ ಎದುರಾದರೂ ತಾವಿಬ್ಬರೂ ಆತನ ಸನಿಹಕ್ಕೆ ಬಂದರೂ ಆತ ಕಾಲಿಗೆರಗದೆ ಸುಮ್ಮನಿದ್ದಾನೆ. ಈಗಾಗಲೇ ಸತ್ತುಹೋಗಿರುವ ತಮ್ಮ ಮಕ್ಕಳಾದ ದುಶ್ಶಾಸನ, ದುರ್ಮರ್ಷಣ ಹಾಗೂ ದುಷ್ಕರ್ಣರು ಮಾತನಾಡದೆ ಮೌನವಾಗಿರುವುದು ಸಹಜ. ಸತ್ತುಹೋದವರು ಹೇಗೆ ಮಾತನಾಡಿಸಲು ಸಾಧ್ಯ? ಆದರೆ ಬದುಕಿರುವ ನೀನೂ ಅವರಂತೆಯೇ ಮಾತನಾಡಿಸದೆ ಮೌನವಾಗಿರುವುದು ಸರಿಯೇ? ಈ ರೀತಿ ಹೆತ್ತವರನ್ನು ಅವಗಣಿಸುವುದು ಸರಿಯೇ? ಎಂಬುದು ಗಾಂಧಾರಿಯ ಅಳಲು. ದುರ್ಯೋಧನ ಮೌನವಾಗಿರುವುದನ್ನು ಕಂಡಾಗ ಇವನೂ ದುಶ್ಶಾಸನ, ದುರ್ಮರ್ಷಣ ಹಾಗೂ ದುಷ್ಕರ್ಣರ ಹಾದಿಯನ್ನೇ ಹಿಡಿದನೇ? ಎಂಬುದು ಗಾಂಧಾರಿಯ ವಿಹ್ವಲತೆ.
ಎಂದು ಗಾಂಧಾರಿ ವಿಪ್ರಲಾಪಂಗೆಯ್ಯೆ ಧೃತರಾಷ್ಟ್ರಂ ತನ್ನ ನಂದನನ ಕಾಲ ಮೇಲೆ ಕವಿದು ಬಿೞ್ದು
ಗದ್ಯದ ಅನ್ವಯಕ್ರಮ:
ಎಂದು ಗಾಂಧಾರಿ ವಿಪ್ರಲಾಪಂ ಗೆಯ್ಯೆ, ಧೃತರಾಷ್ಟ್ರಂ ತನ್ನ ನಂದನನ ಕಾಲ ಮೇಲೆ ಕವಿದು ಬಿೞ್ದು
ಪದ-ಅರ್ಥ:
ವಿಪ್ರಲಾಪಂಗೆಯ್ಯೆ-ಗೋಳಾಡಿದಾಗ; ನಂದನನ-ಮಗನ(ದುರ್ಯೋಧನನ); ಕವಿದು ಬಿೞ್ದು-ಕುಸಿದುಬಿದ್ದು
ಎಂದು ಗಾಂಧಾರಿ ಗೋಳಾಡಿದಾಗ, ಧೃತರಾಷ್ಟ್ರನು ತನ್ನ ಮಗನಾದ ದುರ್ಯೋಧನನ ಕಾಲ ಮೇಲೆ ಕುಸಿದುಬಿದ್ದು-
ಹಾ ಕುರುಕುಲಚೂಡಾಮಣಿ
ಹಾ ಕುರುಕುಲಚಕ್ರವರ್ತಿ ಹಾ ಸಕಲಧರಿ
ತ್ರೀಕಾಂತ ನಿನ್ನುಮಂ ಪರ
ಲೋಕಕ್ಕಟ್ಟಿದನೆ ಕಾಯ್ದು ಮಾಯ್ದ ವಿಧಾತ್ರಂ ೫
ಪದ್ಯದ ಅನ್ವಯಕ್ರಮ:
ಹಾ ಕುರುಕುಲ ಚೂಡಾಮಣಿ, ಹಾ ಕುರುಕುಲ ಚಕ್ರವರ್ತಿ, ಹಾ ಸಕಲ ಧರಿತ್ರೀಕಾಂತ ಕಾಯ್ದು ಮಾಯ್ದ ವಿಧಾತ್ರಂ ನಿನ್ನುಮಂ ಪರಲೋಕಕ್ಕೆ ಅಟ್ಟಿದನೆ
ಪದ-ಅರ್ಥ:
ಕುರುಕುಲಚೂಡಾಮಣಿ-ಕುರುವಂಶಕ್ಕೆ ಶಿರೋಭೂಷಣದಂತಿರುವವನು (ದುರ್ಯೋಧನ) (ಚೂಡಾಮಣಿ-ತಲೆಯಲ್ಲಿ ಧರಿಸುವ ರತ್ನದ ಆಭರಣ, ಶ್ರೇಷ್ಠವ್ಯಕ್ತಿ ಅಥವಾ ವಸ್ತು); ಕುರುಕುಲಚಕ್ರವರ್ತಿ-ಕುರುವಂಶಕ್ಕೆ ಚಕ್ರವರ್ತಿಯಂತಿರುವವನು (ದುರ್ಯೋಧನ); ಸಕಲ ಧರಿತ್ರೀಕಾಂತ – ಸಮಸ್ತ ಭೂಮಂಡಲಕ್ಕೆ ಸಾಮ್ರಾಟನಾಗಿರುವವನು (ದುರ್ಯೋಧನ); ನಿನ್ನುಮಂ-ನಿನ್ನನ್ನೂ; ಕಾಯ್ದು-ಕೋಪಗೊಂಡು; ಮಾಯ್ದ-ಕೆಟ್ಟ; ವಿಧಾತ್ರ-ವಿಧಿ.
ಹಾ ಕುರುವಂಶಕ್ಕೆ ಶಿರೋಭೂಷಣದಂತಿರುವ, ಕುರುವಂಶಕ್ಕೆ ಚಕ್ರವರ್ತಿಯಂತಿರುವ, ಸಕಲ ಭೂಮಂಡಲಕ್ಕೆ ಸಾಮ್ರಾಟನಾಗಿರುವ ದುರ್ಯೋಧನನೇ ಆ ಕೆಟ್ಟ ವಿಧಿಯು ಕೋಪಗೊಂಡು ನಿನ್ನನ್ನೂ ಪರಲೋಕಕ್ಕೆ ಅಟ್ಟಿದನೆ?
ದುರ್ಯೋಧನನೇ, ನೀನು ಸಾಮಾನ್ಯನಲ್ಲ. ತಲೆಗೆ ಚೂಡಾಮಣಿಯೆಂಬ ರತ್ನದಾಭರಣ ಹೇಗೆ ಶೋಭಾಯಮಾನವೋ ಹಾಗೆಯೇ ಕುರುವಂಶಕ್ಕೆ ಚೂಡಾಮಣಿಯಂತೆಯೇ ಶೋಭಾಯಮಾನವಾಗಿ ಶೋಭಿಸುವವನು. ಮಾತ್ರವಲ್ಲ, ನಿನ್ನ ಉನ್ನತ ಗುಣಗಳಿಂದ, ಪರಾಕ್ರಮಗಳಿಂದ ಕುರುಕುಲಕ್ಕೆ ಚಕ್ರವರ್ತಿಯಾಗಿರುವವನು. ಅಲ್ಲದೆ, ಸಕಲ ಭೂಮಂಡಲಕ್ಕೆ ಸಾಮ್ರಾಟನಾಗಿರುವವನು. ನಿನ್ನಂತಹ ಪರಾಕ್ರಮಶಾಲಿಯಾಗಿರುವ, ಬಲಶಾಲಿಯಾಗಿರುವ, ಛಲದಂಕಮಲ್ಲನಾಗಿರುವ, ವೈರಿಗಳಿಗೆ ಸಿಂಹಸ್ವಪ್ನನಾಗಿರುವ ನಿನ್ನ ಮೇಲ್ಮೆಯನ್ನು, ಕೀರ್ತಿಯನ್ನು ಸಹಿಸದೆ ಆ ಕೆಟ್ಟ ವಿಧಿಯು ಕೋಪಗೊಂಡು ನಿನ್ನನ್ನೂ ಪರಲೋಕಕ್ಕೆ ಅಟ್ಟಿದನೇ? ಎಂದು ಗಾಂಧಾರಿ ಪ್ರಲಾಪಿಸುತ್ತಾಳೆ. ಈಗಾಗಲೇ ತೊಂಬತ್ತೊಂಬತ್ತು ಮಂದಿ ಮಕ್ಕಳನ್ನು ಕಳೆದುಕೊಂಡು ಎಲ್ಲೆಂದರಲ್ಲಿ ಸಾವೇ ಕಾಣುತ್ತಿರುವ ಗಾಂಧಾರಿಗೆ ದುರ್ಯೋಧನನ ಈ ಗಾಢಮೌನ ಸಾವಿನ ಭ್ರಮೆಯನ್ನು ಉಂಟುಮಾಡುತ್ತದೆ.
ಎಂದು ಕರುಣಾಕ್ರಂದನಂಗೆಯ್ದ ಗುರುಜನಂಗಳ ಸರಮಂ ಸಂಜಯಂ ಮಾಣಿಸಿ ಕರ್ಣ ದುಶ್ಶಾಸನಾದಿಗಳ ಸಾವಿನೊಳ್ ಶೋಕೋದ್ರೇಕದಿಂ ಮೂರ್ಛಾಗತನಾಗಿರ್ದಪನೀಗಳೆ ಚೇತರಿಸುಗು ಮನ್ನೆಗಂ ವಿಪ್ರಲಾಪಮನುಪಸಂಹರಿಪುದೆನೆ ಸಮಾಹಿತಾಂತಃಕರಣರುಮಾಗಿ-
ಗದ್ಯದ ಅನ್ವಯಕ್ರಮ:
ಎಂದು ಕರುಣ ಆಕ್ರಂದನಂ ಗೆಯ್ದ ಗುರುಜನಂಗಳ ಸರಮಂ ಸಂಜಯಂ ಮಾಣಿಸಿ ಕರ್ಣ, ದುಶ್ಶಾಸನಾದಿಗಳ ಸಾವಿನೊಳ್ ಶೋಕ ಉದ್ರೇಕದಿಂ ಮೂರ್ಛಾಗತನ್ ಆಗಿ ಇರ್ದಪನ್ ಈಗಳೇ ಚೇತರಿಸುಗುಂ ಅನ್ನೆಗಂ ವಿಪ್ರಲಾಪಮನ್ ಉಪಸಂಹರಿಪುದು ಎನೆ ಸಮ ಅಹಿತ ಅಂತಃಕರಣರುಂ ಆಗಿ –
ಪದ-ಅರ್ಥ:
ಕರುಣಾಂಕ್ರಂದನಗೆಯ್ದ-ಮರುಕದಿಂದ ಗಟ್ಟಿಯಾಗಿ ಅತ್ತ, ದುಃಖದಿಂದ ಜೋರಾಗಿ ಅತ್ತ; ಗುರುಜನಂಗಳ-ಗುರುಜನರ(ಧೃತರಾಷ್ಟ್ರ, ಗಾಂಧಾರಿಯರ); ಸರಮಂ-ಧ್ವನಿಯನ್ನು, ಅಳುವನ್ನು; ಮಾಣಿಸಿ-ಸಮಾಧಾನಿಸಿ; ಶೋಕೋದ್ರೇಕದಿಂ-ಮಿತಿಮೀರಿದ ಶೋಕದಿಂದ; ಮೂರ್ಛಾಗತನಾಗಿರ್ದಪನ್-ಮೂರ್ಛೆಹೋಗಿದ್ದಾನೆ, ಪ್ರಜ್ಞಾಹೀನನಾಗಿದ್ದಾನೆ; ಈಗಳೇ-ಕೆಲ ಕ್ಷಣದಲ್ಲಿಯೇ, ಸ್ವಲ್ಪಹೊತ್ತಿನಲ್ಲಿಯೇ; ಚೇತರಿಸುಗುಂ-ಚೇತರಿಸಿಕೊಳ್ಳುವನು; ಅನ್ನೆಗಂ-ಅಷ್ಟರವರೆಗೆ; ವಿಪ್ರಲಾಪಮಂ-ಗೋಳಾಟವನ್ನು; ಉಪಸಂಹರಿಪುದು-ತಡೆದುಕೊಳ್ಳಿ, ನಿವಾರಿಸಿಕೊಳ್ಳಿ; ಎನೆ-ಎನ್ನಲು; ಸಮಾಹಿತ-ಸಮಾಧಾನಗೊಂಡ; ಅಂತಃಕರಣರುಮಾಗಿ-ಮನಸ್ಸುಳ್ಳವರಾಗಿ.
ಎಂದು ದುಃಖದಿಂದ ಜೋರಾಗಿ ಅಳತೊಡಗಿದ ಧೃತರಾಷ್ಟ್ರ, ಗಾಂಧಾರಿಯರ ಅಳುವನ್ನು ಸಂಜಯನು ತಡೆದು ಅವರೆಲ್ಲರನ್ನೂ ಸಮಾಧಾನಿಸಿ, ದುರ್ಯೋಧನನು ತನ್ನ ಆತ್ಮೀಯ ಸ್ನೇಹಿತನಾದ ಕರ್ಣ, ಪ್ರೀತಿಯ ತಮ್ಮನಾದ ದುಶ್ಶಾಸನರ ಸಾವಿನಿಂದ ಉಂಟಾದ ಮಿತಿಮೀರಿದ ಶೋಕದಿಂದ ಮೂರ್ಛಿತನಾಗಿ ಪ್ರಜ್ಞಾಹೀನನಾಗಿದ್ದಾನೆ. ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ತಿಳಿದು ಚೇತರಿಸಿಕೊಳ್ಳುತ್ತಾನೆ. ಅಲ್ಲಿಯವರೆಗೆ ನೀವೆಲ್ಲರೂ ನಿಮ್ಮ ಗೋಳಾಟವನ್ನು ತಡೆದುಕೊಳ್ಳಬೇಕು ಎಂದಾಗ, ಅವರೆಲ್ಲರೂ ಸಂಜಯನ ಮಾತುಗಳಿಂದ ಸಮಾಧಾನಗೊಂಡ ಮನಸ್ಸುಳ್ಳವರಾಗಿ –
ಮೂರ್ಛಿತನಾದ ದುರ್ಯೋಧನನಿಗೆ ಸಂಜಯ ಮಾಡುತ್ತಿದ್ದ ಶೈತ್ಯೋಪಚಾರವನ್ನು ನೋಡಿ ಧೃತರಾಷ್ಟ್ರ ಹಾಗೂ ಗಾಂಧಾರಿಯರು ದುರ್ಯೋಧನ ಸತ್ತನೆಂದೇ ಭಾವಿಸಿಕೊಂಡು ಮಿತಿಮೀರಿದ ಶೋಕದಿಂದ ಅತ್ತು ಗೋಳಾಡತೊಡಗಿದಾಗ ಇನ್ನು ಈ ಪ್ರಸಂಗ ವಿಕೋಪಕ್ಕೆ ಹೋಗಬಹುದೆಂಬ ಕಾಳಜಿಯಿಂದ ಸಂಜಯನು, ದುರ್ಯೋಧನ ತನ್ನ ಆತ್ಮೀಯ ಸ್ನೇಹಿತನಾಗಿರುವ ಕರ್ಣನನ್ನೂ ಪ್ರೀತಿಯ ತಮ್ಮನಾಗಿರುವ ದುಶ್ಶಾಸನನನ್ನೂ ಕಳೆದುಕೊಂಡು ಅತ್ಯಂತ ಶೋಕಿತನಾಗಿದ್ದಾನೆ. ಆತನಿಗೆ ತನ್ನ ಶೋಕವನ್ನು ತಡೆದುಕೊಳ್ಳುವುದಕ್ಕೆ ಸಾಧ್ಯವಾಗದೆ ಮೂರ್ಛಿತನಾಗಿ ಪ್ರಜ್ಞಾಹೀನನಾಗಿದ್ದಾನೆ. ನೀವು ಆ ಸ್ಥಿತಿಯನ್ನು ನೋಡಿ ಏನೇನೋ ಕಲ್ಪಿಸಿಕೊಂಡು ಗೋಳಾಡುತ್ತಿದ್ದೀರಿ. ದುರ್ಯೋಧನ ನಿಮ್ಮ ಗೋಳಾಟವನ್ನು ಕೇಳಿಸಿಕೊಂಡರೆ ಇನ್ನಷ್ಟು ದುರಂತ ಸಂಭವಿಸಬಹುದು. ಹಾಗಾಗಿ ಸಾಧ್ಯವಾದಷ್ಟು ನಿಮ್ಮ ನೋವನ್ನು, ದುಃಖವನ್ನು, ಕಳವಳವನ್ನು ತಡೆದುಕೊಂಡು ಸಮಾಧಾನಚಿತ್ತರಾಗಿರಿ. ಆತನಿಗೆ ತಾನು ಶೈತ್ಯೋಪಚಾರಗಳನ್ನು ಮಾಡುತ್ತಿದ್ದು ಇನ್ನು ಕೆಲವೇ ಕ್ಷಣಗಳಲ್ಲಿ ಆತ ಚೇತರಿಸಿಕೊಳ್ಳಲಿದ್ದಾನೆ. ಅದುವರೆಗೆ ನಿಮ್ಮ ಮನಸ್ಸನ್ನು ಗಟ್ಟಿಮಾಡಿಕೊಳ್ಳಿ ಎಂದು ಧೃತರಾಷ್ಟ್ರ-ಗಾಂಧಾರಿಯರನ್ನು ಸಮಾಧಾನಿಸುತ್ತಾನೆ.
ಕುರುಕುಲಚೂಡಾಮಣಿ ನಿಜ
ಗುರುಗಳ ನಯನಾಂಬು ತಳಿವ ಜಲಮಾಗಿರೆ ತ
ದ್ಗುರುಜನ ದೀರ್ಘೋಚ್ಛ್ವಾಸಮೆ
ಪರಿವೀಜನಮಾಗೆ ಮೂರ್ಛೆಯಿಂದೆೞ್ಚತ್ತಂ ೬
ಪದ್ಯದ ಅನ್ವಯಕ್ರಮ:
ನಿಜ ಗುರುಗಳ ನಯನಾಂಬು ತಳಿವ ಜಲಂ ಆಗಿರೆ, ತತ್ ಗುರು ಜನ ದೀರ್ಘ ಶ್ವಾಸಮೆ ಪರಿವೀಜನಂ ಆಗೆ, ಕುರುಕುಲ ಚೂಡಾಮಣಿ ಮೂರ್ಛೆಯಿಂದ ಎೞ್ಚೆತ್ತಂ.
ಪದ-ಅರ್ಥ:
ಕುರುಕುಲಚೂಡಾಮಣಿ-ಕುರುವಂಶಕ್ಕೆ ಶಿರೋಭೂಷಣವಾಗಿರುವವನು (ದುರ್ಯೋಧನ); ನಿಜ-ತನ್ನ; ಗುರುಗಳ-ಹಿರಿಯರ (ಧೃತರಾಷ್ಟ್ರ, ಗಾಂಧಾರಿಯರ); ನಯನಾಂಬು-ಕಣ್ಣೀರು; ತಳಿವ-ಸಿಂಪಡಿಸುವ; ಜಲಮಾಗಿರೆ-ನೀರಾಗಲು; ತದ್ಗುರುಜನ (ತತ್+ಗುರುಜನ)-ಆ ಗುರುಜನ; ದೀರ್ಘೋಚ್ಛ್ವಾಸಮೆ-ದೀರ್ಘವಾದ ನಿಟ್ಟುಸಿರು; ಪರಿವೀಜನಮಾಗೆ-ಬೀಸಣಿಕೆಯಾಗಲು; ಮೂರ್ಛೆಯಿಂದೆೞ್ಚೆತ್ತಂ-ಮೂರ್ಛೆಯಿಂದ ಎಚ್ಚೆತ್ತನು.
ತನ್ನ ಗುರುಹಿರಿಯರ (ಧೃತರಾಷ್ಟ್ರ ಹಾಗೂ ಗಾಂಧಾರಿಯರ) ಕಣ್ಣುಗಳಿಂದ ಉದುರುತ್ತಿರುವ ಕಣ್ಣೀರು ತನ್ನ ಮೇಲೆ ಸಿಂಪಡಿಸುವ ನೀರಾಗಲು, ಅವರ ದೀರ್ಘವಾದ ನಿಟ್ಟುಸಿರು ಬೀಸಣಿಯ ಗಾಳಿಯಾಗಲು ಕುರುವಂಶ ಚೂಡಾಮಣಿಯಾಗಿರುವ ದುರ್ಯೋಧನನು ಮೂರ್ಛಾವಸ್ಥೆಯಿಂದ ಎಚ್ಚೆತ್ತನು.
ಧರೆಗೆ ಒರಗಿರುವ ದುರ್ಯೋಧನನ ಸ್ಥಿತಿಗತಿಗಳನ್ನು ಕಂಡು ಸುತ್ತಮುತ್ತ ನೆರೆದಿರುವ ಧೃತರಾಷ್ಟ, ಗಾಂಧಾರಿ ಹಾಗೂ ಇತರ ಪರಿವಾರದವರ ಶೋಕ ಅತಿಯಾಗಿತ್ತು. ಅವರು ಈಗಾಗಲೇ ಸಾಕಷ್ಟು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಅವರು ತಮ್ಮ ಶೋಕವನ್ನು ತಡೆದುಕೊಳ್ಳುವ ಸ್ಥಿತಿಯಲ್ಲೂ ಇಲ್ಲ. ಪರಿಣಾಮವಾಗಿ ಅವರೆಲ್ಲರ ಕಣ್ಣುಗಳಿಂದ ಧಾರಾಕಾರವಾಗಿ ಹರಿಯುತ್ತಿರುವ ಕಣ್ಣೀರು ದುರ್ಯೋಧನನ ಮೇಲೆ ಮೇಲೆ ಹನಿಹನಿಗಳಾಗಿ ಬಿದ್ದು, ಅದು ಆತನ ಮೇಲೆ ಸಿಂಪಡಿಸುವ ನೀರಿನಂತಾಯಿತು. ಜೊತೆಗೆ ಆತನ ಮೂರ್ಛಾವಸ್ಥೆಯನ್ನು ಕಂಡು ಹೆತ್ತವರು, ಪರಿಜನರು ನೊಂದು ನಿರಂತರ ನಿಟ್ಟುಸಿರು ಬಿಟ್ಟಾಗ ಅದು ದುರ್ಯೋಧನನಿಗೆ ಬೀಸಣಿಕೆಯಿಂದ ಗಾಳಿ ಬೀಸಿದಂತಾಯಿತು. ಅದರ ಪರಿಣಾಮವಾಗಿ ಕುರುವಂಶಕ್ಕೆ ಚೂಡಾಮಣಿ ಎನಿಸುರುವ ದುರ್ಯೋಧನನು ನಿಧಾನವಾಗಿ ಮೂರ್ಛಾವಸ್ಥೆಯಿಂದ ಎಚ್ಚೆತ್ತನು.
ಅಂತು ಮೂರ್ಛೆಯಿಂದೆೞ್ಚತ್ತು ನಿಜಜನನೀಜನಕರಂ ಕಂಡು ಲಜ್ಜಾಭರದಿಂ ಶಿರಮನಾನತಂ ಮಾಡೆ ಸಂಜಯಂ ಧೃತರಾಷ್ಟ್ರಂಗಂ ಗಾಂಧಾರಿಗಂ ನಿಜತನೂಜನಪ್ಪ ರಾಜರಾಜಂ ಕುರುಕುಲಮಧ್ಯಮಹೀತಳ ಸಹಕಾರಭೂರುಹಂ ನಿಮಗೆ ವಿನಯ ವಿನಮಿತೋತ್ತಮಾಂಗನಾದನ ವಧರಿಸುವುದೆನೆ ತದೀಯ ವಚನಾಮೃತಸ್ಪರ್ಶನದಿಂದಾನಂದಿತಚಿತ್ತರಾಗಿ ತಡವರಿಸಿಯುಂ ತೆಬ್ಬರಿಸಿಯುಂ ತೆಗೆದಪ್ಪಿಯುಂ ಮನಃಕ್ಷತಶರೀರನಂ ಪರಮಾಶೀರ್ವಚನ ಶತಸಹಸ್ರಗಳಿಂ ಪರಸಿ ಪುನಃ ಪುನರಾಲಿಂಗನಂಗೆಯ್ದು ಕಿಱಿದಾನುಂ ಬೇಗದಿಂ ವಿಗತ ಪರಿಜನಂ ಮಾಡಿ –
ಗದ್ಯದ ಅನ್ವಯಕ್ರಮ:
ಅಂತು ಮೂರ್ಛೆಯಿಂದ ಎೞ್ಚೆತ್ತು ನಿಜ ಜನನೀ ಜನಕರಂ ಕಂಡು ಲಜ್ಜಾಭರದಿಂ ಶಿರಮನ್ ಆನತಂ ಮಾಡೆ ಸಂಜಯಂ, ಧೃತರಾಷ್ಟ್ರಂಗಂ ಗಾಂಧಾರಿಗಂ ನಿಜ ತನೂಜನಪ್ಪ ರಾಜರಾಜಂ ನಿಮಗೆ ವಿನಯ ವಿನಮಿತ ಉತ್ತಮಾಂಗನಾದನ್ ಅವಧರಿಪುದು ಎನೆ, ತದೀಯ ವಚನಾಮೃತ ಸ್ಪರ್ಶನದಿಂದ ಆನಂದಚಿತ್ತರಾಗಿ ತಡವರಿಸಿಯುಂ ತೆಬ್ಬರಿಸಿಯುಂ ತೆಗೆದು ಅಪ್ಪಿಯುಂ ಮನಃಕ್ಷತ ಶರೀರನಂ ಪರಮ ಆಶೀರ್ವಚನ ಶತ ಸಹಸ್ರಗಳಿಂ ಪರಸಿ ಪುನಃ ಪುನಃ ಆಲಿಂಗನಂ ಗೆಯ್ದು ಕಿಱಿದಾನುಂ ಬೇಗದಿಂ ವಿಗತ ಪರಿಜನಂ ಮಾಡಿ –
ಪದ-ಅರ್ಥ:
ಅಂತು-ಹಾಗೆ; ಎೞ್ಚೆತ್ತು-ಎಚ್ಚೆತ್ತು; ನಿಜ-ತನ್ನ; ಜನನೀಜನಕರಂ – ತಾಯಿ ತಂದೆಯರನ್ನು; ಲಜ್ಜಾಭರದಿಂ-ನಾಚಿಕೆಯ ತೀವ್ರತೆಯಿಂದ; ಶಿರಮನಾನತಂ –ತಲೆಯನ್ನು ತಗ್ಗಿಸಿಕೊಂಡು; ನಿಜತನೂಜನಪ್ಪ-ನಿಮ್ಮ ಮಗನಾಗಿರುವ; ರಾಜರಾಜಂ –ದುರ್ಯೋಧನನು; ಕುರುಕುಲಮಧ್ಯಮಹೀತಳ-ಕುರುಕುಲಮಧ್ಯಭಾಗದಲ್ಲಿ; ಸಹಕಾರಭೂರುಹಂ-ಸಿಹಿಮಾವಿನ ಮರದಂತಿರುವ; ವಿನಯ ವಿನಮಿತೋತ್ತಮಾಂಗನಾದನ್ -ವಿನಯದಿಂದ ಕೂಡಿ ಶಿರಬಾಗಿ ನಮಸ್ಕರಿಸಿದ್ದಾನೆ; ತದೀಯ-ಆತನ(ಸಂಜಯನ); ವಚನಾಮೃತಸ್ಪರ್ಶನ-ಆಶೀರ್ವಾದವೆಂಬ ಅಮೃತದ ಸ್ಪರ್ಶ; ಆನಂದಚಿತ್ತರಾಗಿ-ಸಂತಸವುಳ್ಳವರಾಗಿ; ತಡವರಿಸಿಯುಂ-ಮೈಮೇಲೆ ಕೈಯಾಡಿಸಿ; ತೆಬ್ಬರಿಸಿಯುಂ-ಚೇತನಗೊಳ್ಳುವಂತೆ ಮಾಡಿ; ತೆಗೆದಪ್ಪಿಯುಂ-ಎತ್ತಿ ಆಲಿಂಗಿಸಿಕೊಂಡು; ಮನಃಕ್ಷತಶರೀರನಂ-ಮನಸ್ಸಿನಲ್ಲಿ ಘಾಸಿಗೊಂಡವನನ್ನು; ಪರಮಾಶೀರ್ವಾದ ಶತಸಹಸ್ರಗಳಿಂ-ನೂರಾರು ಸಾವಿರಾರು ಬಗೆಯ ಆಶೀರ್ವಾದಗಳಿಂದ; ಪರಸಿ-ಹರಸಿ; ಕಿಱಿದಾನುಂ ಬೇಗದಿಂ-ಕೆಲವೇ ಹೊತ್ತಿನಲ್ಲಿ; ವಿಗತಪರಿಜನಂ ಮಾಡಿ-ಸೇವಕರನ್ನು ದೂರಕ್ಕೆ ಕಳುಹಿಸಿ.
ಹಾಗೆ ಮೂರ್ಛಾಸ್ಥಿತಿಯಿಂದ ಎಚ್ಚೆತ್ತುಕೊಂಡು ತನ್ನ ತಂದೆ ತಾಯಿಯರನ್ನು ಕಂಡು ನಾಚಿಕೆಯ ತೀವ್ರತೆಯಿಂದ ತಲೆಯನ್ನು ತಗ್ಗಿಸಿದನು. ಆಗ ಸಂಜಯನ್ಜು ಧೃತರಾಷ್ಟ್ರನಿಗೂ ಗಾಂಧಾರಿಗೂ ನಿಮ್ಮ ಮಗನಾಗಿರುವ ರಾಜರಾಜನೆನಿಸಿರುವ, ಕುರುಕುಲಮಧ್ಯಭಾಗದಲ್ಲಿರುವ ಸಿಹಿಮಾವಿನ ಮರದಂತಿರುವ ದುರ್ಯೋಧನನು ವಿನೀತನಾಗಿ ಶಿರಬಾಗಿ ನಮಸ್ಕರಿಸಿದ್ದನೆ ಎಂದಾಗ, ಅವರು ಸಂಜಯನ ಮಾತೆಂಬ ಅಮೃತದ ಸ್ಪರ್ಶದಿಂದ ಸಂತಸವುಳ್ಳವರಾಗಿ ದುರ್ಯೋಧನನ ಮೈಮೇಲೆ ಕೈಯಾಡಿಸಿ, ಚೇತರಿಸಿಕೊಳ್ಳುವಂತೆ ಮಾಡಿ, ಮನಸ್ಸಿನಲ್ಲಿ ಜರ್ಜರಿತನಾದ ದುರ್ಯೋಧನನನ್ನು ಎತ್ತಿ ಆಲಿಂಗಿಸಿಕೊಂಡು ನೂರಾರು ಸಾವಿರಾರು ಬಗೆಯ ಆಶೀರ್ವಾದಗಳಿಂದ ಹರಸಿ, ಮತ್ತೆ ಮತ್ತೆ ಆಲಿಂಗಿಸಿಕೊಂಡು ಪರಿಜನರನ್ನು ದೂರಕ್ಕೆ ಕಳುಹಿಸಿ –
ಸಂಜಯನ ಶೈತ್ಯೋಪಚಾರದಿಂದ, ಧೃತರಾಷ್ಟ್ರ, ಗಾಂಧಾರಿಯರ ಕಣ್ಣೀರಿನ ಸಿಂಚನದಿಂದ ಹಾಗೂ ಅವರ ನಿಟ್ಟುಸುರಿನ ಗಾಳಿಯಿಂದ ಎಚ್ಚೆತ್ತುಕೊಂಡ ದುರ್ಯೋಧನ ತನ್ನ ತಂದೆ ತಾಯಿಯರನ್ನು ನೋಡಿ ನಾಚಿಕೆಯ ತೀವ್ರತೆಯಿಂದ ತಲೆತಗ್ಗಿಸಿದನು. ತನ್ನ ಪ್ರಸಕ್ತ ಸ್ಥಿತಿಯನ್ನು ನೋಡುವುದಕ್ಕೆ ಅವರಿಂದ ಸಾಧ್ಯವಾಗದಿದ್ದರೂ ಇತರಿಂದ ತಿಳಿದುಕೊಂಡಿರಬಹುದೆಂದು ಭಾವಿಸಿ ಅತ್ಯಂತ ಲಜ್ಜಿತನಾದನು. ಇಬ್ಬರ ಮನಃಸ್ಥಿತಿಯನ್ನು ಅರಿತುಕೊಂಡ ಸಂಜಯ ಮಧ್ಯೆ ಪ್ರವೇಶಿಸಿ, ಕುರುಕುಲವೆಂಬ ಭೂಮಿಯ ಮಧ್ಯಭಾಗದಲ್ಲಿ ಬೃಹದಾಕಾರವಾಗಿ ನೆಲೆನಿಂತ ಸಿಹಿಮಾವಿನ ಮರದಂತಿರುವ ದುರ್ಯೋಧನನು ನಿಮ್ಮ ಪಾದಗಳಿಗೆ ನಮಸ್ಕರಿಸಿದ್ದಾನೆ ಎಂದು ತಿಳಿಸಿದಾಗ ಅವರಿಗೆ ಸಂಜಯನ ಮಾತುಗಳು ಅಮೃತದ ಸ್ಪರ್ಶನವನ್ನುಂಟುಮಾಡಿದವು. ಅವರು ದುರ್ಯೋಧನ ಸತ್ತನೆಂದೇ ಭಾವಿಸಿದ್ದರು. ಆದರೆ, ಈಗ ಸಂಜಯನ ಮಾತುಗಳು ಅವರಿಗೆ ಅಮೃತವನ್ನು ಕುಡಿಸಿದಂತಾಯಿತು. ಅವರು ಅಪರಿಮಿತ ಸಂತಸಗೊಂಡು ದುರ್ಯೋಧನನನ್ನು ಕಣ್ಣುಗಳಿಂದ ನೋಡಲು ಅಸಾಧ್ಯವಾದುದರಿಂದ ಅವನ ಮೈಯೆಲ್ಲವನ್ನು ತಡವಿ ತಡವಿ ಆತ ಇನ್ನಷ್ಟು ಚೇತರಿಸಿಕೊಳ್ಳುವಂತೆ ಮಾಡಿ, ತಾವೂ ಸಂತಸಪಟ್ಟು ಆತನನ್ನು ನೂರಾರು ಸಾವಿರಾರು ಬಗೆಯಿಂದ ಆಶೀರ್ವದಿಸಿ ಮತ್ತೆಮತ್ತೆ ಆಲಿಂಗಿಸಿಕೊಂಡರು. ಅವರಿಗೆ ಮಗ ಬದುಕಿದ್ದಾನೆ ಎಂಬ ಸಂತಸವಾದರೆ, ದುರ್ಯೋಧನನಿಗೆ ತನ್ನ ತಮ್ಮಂದಿರ, ಸ್ನೇಹಿತನ ಸಾವಿನಿಂದ ಮನಸ್ಸಿನಲ್ಲಿ ಸಾಕಷ್ಟು ಜರ್ಜರಿತಗೊಂಡ ತನ್ನನ್ನು ಹೆತ್ತವರು ಆಕ್ಶೇಪಿಸದೆ ಮೈದಡವುದರಿಂದ, ಹರಸುವುದರಿಂದ, ಆಲಿಂಗಿಸಿಕೊಳ್ಳುವ ರೀತಿಯಿಂದ ಸಂತಸ. ಎಚ್ಚೆತ್ತು ಸಹಜಸ್ಥಿತಿಗೆ ಮರಳಿದ ದುರ್ಯೋಧನನೊಂದಿಗೆ ಏಕಾಂತವಾಗಿ ಮಾತುಕತೆಯಾಡುವುದಕ್ಕಾಗಿಯೇ ಧೃತರಾಷ್ಟ್ರನು ಪರಿಜನರನ್ನು ದೂರಕ್ಕೆ ಕಳುಹಿಸಿದನು.
ಯಮಸುತನಿಂಬುಕೆಯ್ವನೆಮಗಿನ್ನುಮೊಡಂಬಡು ಕಂದ ಸಂಧಿಯಂ
ಸಮಕೊಳಿಸಲ್ಕೆ ಸಂಜನನಟ್ಟುವೆ ಭೀಮನೊಳಾದ ಬದ್ಧ ವೈ
ರಮನುೞಿ ನೋಡದಿರ್ ಸುತಸಹೋದರದುಃಖಮನೀವುದರ್ಧರಾ
ಜ್ಯಮನವರ್ಗೆಂದು ಕಾಲ್ವಿಡಿದು ಬೇಡಿದನಂಧನೃಪಾಲ ಪುತ್ರನಂ ೭
ಪದ್ಯದ ಅನ್ವಯಕ್ರಮ:
ಯಮಸುತನ್ ಎಮಗೆ ಇನ್ನುಂ ಇಂಬುಕೆಯ್ವನ್, ಕಂದ ಒಡಂಬಡು, ಸಂಧಿಯಂ ಸಮಕೊಳಿಸಲ್ಕೆ ಸಂಜಯನನ್ ಅಟ್ಟುವೆ, ಭೀಮನೊಳ್ ಆದ ಬದ್ಧ ವೈರಮನ್ ಉಳಿ, ಸುತ ಸಹೋದರರ ದುಃಖಮನ್ ನೋಡದಿರ್, ಅವರ್ಗೆ ಅರ್ಧ ರಾಜ್ಯಮನ್ ಈವುದು ಎಂದು ಅಂಧನೃಪಾಲ ಪುತ್ರನಂ ಕಾಲ್ವಿಡಿದು ಬೇಡಿದಂ.
ಪದ-ಅರ್ಥ:
ಯಮಸುತ-ಧರ್ಮರಾಯ; ಇಂಬುಕೆಯ್ವನ್-ಒಪ್ಪಿಕೊಳ್ಳುತ್ತಾನೆ; ಎಮಗೆ-ನಮಗೆ; ಇನ್ನುಂ-ಇಂದಿಗೂ; ಒಡಂಬಡು-ಒಪ್ಪಿಕೊಳ್ಳು; ಸಂಧಿಯಂ ಸಮಕೊಳಿಸಲ್ಕೆ-ಸಂಧಿಯನ್ನು ಏರ್ಪಡಿಸಲು; ಸಂಜಯನಟ್ಟುವೆ-ಸಂಜಯನನ್ನು ಕಳುಹಿಸುವೆನು; ಭೀಮನೋಳಾದ-ಭೀಮನಲ್ಲಿ ಉಂಟಾಗಿರುವ; ಬದ್ಧವೈರಮನುೞಿ-ಬದ್ಧದ್ವೇಷವನ್ನು ಬಿಟ್ಟುಬಿಡು; ನೋಡದಿರ್-ನೋಡಬೇಡ, ಮನಸ್ಸಿಗೆ ತಂದುಕೊಳ್ಳಬೇಡ; ಸುತಸಹೋದರರ-ಮಕ್ಕಳು ಮತ್ತು ಸಹೋದರರ; ದುಃಖಮನ್-ಶೋಕವನ್ನು; ಈವುದು-ನೀಡುವುದು; ಅರ್ಧರಾಜ್ಯಮನ್-ಅರ್ಧರಾಜ್ಯವನ್ನು(ಪಾಂಡವರು ಹಿಂದೆ ಆಳಿಕೊಂಡಿದ್ದ ರಾಜ್ಯ-ಇಂದ್ರಪ್ರಸ್ಥ); ಅವರ್ಗೆ-ಪಾಂಡವರಿಗೆ; ಕಾಲ್ವಿಡಿದು-ಕಾಲುಗಳನ್ನು ಹಿಡಿದು; ಅಂಧನೃಪಾಲ-ಕುರುಡರಾಜ(ಧೃತರಾಷ್ಟ್ರ); ಪುತ್ರನಂ-ದುರ್ಯೋಧನನನ್ನು
ಯಮಸುತನೆನಿಸಿರುವ ಧರ್ಮರಾಯ ಇನ್ನು ಕೂಡ ನಮ್ಮ ಮಾತುಗಳನ್ನು ತಿರಸ್ಕರಿಸದೆ ಒಪ್ಪಿಕೊಳ್ಳುತ್ತಾನೆ. ನೀನೂ ಸಂಧಿಗೆ ಒಪ್ಪಿಕೊಳ್ಳಬೇಕು. ಪಾಂಡವರೊಂದಿಗೆ ಸಂಧಿಯನ್ನು ಏರ್ಪಡಿಸುವುದಕ್ಕಾಗಿ ಸಂಜಯನನ್ನು ಕಳುಹಿಸುತ್ತೇನೆ. ನಿನಗೆ ಭೀಮನಲ್ಲಿ ಉಂಟಾಗಿರುವ ಬದ್ಧವೈರವನ್ನು ಬಿಟ್ಟುಬಿಡು. ನಿನ್ನ ಮಕ್ಕಳು, ನಿನ್ನ ಸಹೋದರರನ್ನು ಕಳೆದುಕೊಂಡ ದುಃಖವನ್ನೂ ಮನಸ್ಸಿಗೆ ತಂಡುಕೊಳ್ಳಬೇಡ. ಪಾಂಡವರಿಗೆ ಅರ್ಧರಾಜ್ಯವನ್ನು ಕೊಟ್ಟುಬಿಡು ಎಂದು ಧೃತರಾಷ್ಟ್ರನು ದುರ್ಯೋಧನನ ಕಾಲನ್ನು ಹಿಡಿದು ಬೇಡಿಕೊಂಡನು.
ಧರ್ಮರಾಯಾದಿಗಳೊಂದಿಗೆ ಇನ್ನೂ ಸೆಣಸಿ ಪ್ರಯೋಜನವಿಲ್ಲ. ಅವನೋ ಯಮಧರ್ಮನ ಮಗ. ಯಮನೊಂದಿಗಾಗಲೀ ಯಮಧರ್ಮನ ಮಗನೊಂದಿಗಾಗಲೀ ಸೆಣಸಿ ಉಳಿಗಾಲವಿಲ್ಲ ಎಂಬುದಕ್ಕೆ ಇದುವರೆಗೆ ನಡೆದಿರುವ ವಿದ್ಯಮಾನಗಳೇ ಸಾಕ್ಷಿ. ಕಳೆದ ಹದಿನೇಳು ದಿನಗಳಲ್ಲಿ ಏನನ್ನೂ ಉಳಿಸಿಕೊಳ್ಳಲಾಗಲಿಲ್ಲ. ಧರ್ಮರಾಯ ತನ್ನ ತಮ್ಮಂದಿರೆಲ್ಲರನ್ನೂ ಉಳಿಸಿಕೊಂಡಿದ್ದಾನೆ. ಪರಿಸ್ಥಿತಿ ಹೀಗಿರುವಾಗ ನೀನು ಇನ್ನೂ ಯುದ್ಧಮಾಡುತ್ತೇನೆ ಎನ್ನುವುದರಲ್ಲಿ ಅರ್ಥವಿಲ್ಲ. ಧರ್ಮರಾಯ ಇಂದಿಗೂ ನನ್ನ ಮಾತನ್ನು ತಿರಸ್ಕರಿಸಲಾರ. ಈಗ ನೀನು ದೊಡ್ಡಮನಸ್ಸು ಮಾಡಿ ಸಂಧಿಗೆ ಒಪ್ಪಿಕೊಳ್ಳಬೇಕು. ನೀನೂ ನಿನ್ನ ಎಲ್ಲಾ ಮಕ್ಕಳನ್ನೂ ಕಳೆದುಕೊಂಡೆ. ನಾನೂ ನನ್ನ ಮಕ್ಕಳನ್ನು ಕಳೆದುಕೊಂಡಿದ್ದೇನೆ. ಬದುಕಿ ಉಳಿದಿರುವ ನೀನೊಬ್ಬನಾದರೂ ಉಳಿ. ಇನ್ನು ಯಾರಿಗಾಗಿ ಯುದ್ಧ? ಯಾರಿಗಾಗಿ ಸಾಮ್ರಾಜ್ಯ? ನಿನ್ನ ರಾಜ್ಯಭಾರವನ್ನು ನೋಡಿ ಖುಷಿಪಡುವವರು ಯಾರಿದ್ದಾರೆ? ಪಾಂಡವರೂ ಸಂಧಿಗೆ ಒಪ್ಪಿಕೊಳ್ಳುತ್ತಾರೆಂಬ ಭರವಸೆ ನನಗಿದೆ. ಸಂಧಿಗಾಗಿ ನಾನು ಸಂಜಯನನ್ನು ಪಾಂಡವರಲ್ಲಿಗೆ ಕಳುಹಿಸುತ್ತೇನೆ. ನೀನು ಒಪ್ಪಿಕೊಳ್ಳು. ಭೀಮನಲ್ಲಿ ನಿನಗೆ ಅಪರಿಮಿತವಾದ ವೈರವಿದೆ ಎಂಬುದನ್ನು ನಾನೂ ಬಲ್ಲೆ. ಮಕ್ಕಳನ್ನು, ತಮ್ಮಂದಿರನ್ನು ಕಳೆದುಕೊಂಡ ದುಃಖವಿದೆ ಎಂಬುದನ್ನೂ ಬಲ್ಲೆ. ನಮ್ಮ ಸ್ಥಿತಿಗತಿಗಳನ್ನು ನೋಡಿಯಾದರೂ ನೀನು ಅವೆಲ್ಲವನ್ನೂ ಮರೆತುಬಿಡು. ನಿನ್ನವರೆಲ್ಲರೂ ಇದ್ದಾಗ ದ್ವೇಷ ಸಾಧಿಸಿ ಏನೂ ಮಾಡುವುದಕ್ಕಾಗದೇ ಇರುವಾಗ ಇನ್ನು ನೀನೊಬ್ಬನೇ ಇದ್ದು ಏನು ತಾನೆ ಮಾಡಲು ಸಾಧ್ಯ? ಆದುದರಿಂದ ವೈರವನ್ನು ಮರೆತು ಪಾಂಡವರಿಗೆ ಅರ್ಧರಾಜ್ಯವನ್ನು ಕೊಟ್ಟುಬಿಡು. ನಮ್ಮ ಕಣ್ಣಮುಂದೆಯೇ ನಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನು ಕಳೆದುಕೊಂಡು ಮರ್ಮಾಘಾತಕ್ಕೆ ಒಳಗಾಗಿದ್ದೇವೆ. ನೀನೊಬ್ಬನಾದರೂ ಉಳಿದುಕೊಂಡರೆ ನಮಗೆ ಒಂದಷ್ಟು ನೆಮ್ಮದಿಯಾದರೂ ದೊರಕೀತು ಎಂದು ಕುರುಡರಾಜನಾದ ಧೃತರಾಷ್ಟ್ರನು ದುರ್ಯೋಧನನ ಕಾಲಿಗೆ ಎರಗಿ ಬೇಡಿಕೊಂಡನು.
(ಧೃತರಾಷ್ಟ್ರ ಕೇವಲ ದೃಷ್ಟಿಯಿಂದ ಮಾತ್ರ ಕುರುಡನಲ್ಲ. ಬುದ್ಧಿಯಿಂದಲೂ ಕುರುಡನೆ. ಪಾಂಡವರಿಗೆ ಹೋಲಿಸಿದರೆ ತನ್ನ ಮಕ್ಕಳ ಧರ್ಮಿಷ್ಠರಲ್ಲ ಎಂಬುದೂ ತನ್ನ ಮಕ್ಕಳು ಪಾಂಡವರನ್ನು ಕೊಲ್ಲುವುದಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡಿದಾಗ ತಾನು ತಡೆದು ಬುದ್ಧಿಹೇಳಿಲ್ಲ ಎಂಬುದೂ ಅವರು ಮತ್ತೆಮತ್ತೆ ಅಪರಾಧಗಳನ್ನು ಎಸಗಿದಾಗ ಅವರನ್ನು ಶಿಕ್ಷಿಸಿಲ್ಲ ಎಂಬುದೂ ಪಗಡೆಯಾಟದ ಸಂದರ್ಭದಲ್ಲಿ ತನ್ನ ಮಕ್ಕಳನ್ನು ತಡೆಯುವ ಅಧಿಕಾರವಿದ್ದರೂ ತಡೆದಿಲ್ಲವೆಂಬುದೂ ರಾಜಸಭೆಯಲ್ಲಿ ದ್ರೌಪದಿಗೆ ಅವಮಾನವಾದಾಗ ತಾನು ತಡೆಯಬಹುದಿದ್ದರೂ ತಡೆದಿಲ್ಲ ಎಂಬುದೂ ಈ ಹಿಂದೆಯೇ ಪಾಂಡವರಿಗೆ ಅರ್ಧರಾಜ್ಯವನ್ನು ಕೊಟ್ಟಿದ್ದರೆ ಯುದ್ಧವನ್ನು ತಡೆದು ತನ್ನ ಮಕ್ಕಳನ್ನು ಮೊಮ್ಮಕ್ಕಳನ್ನು ಉಳಿಸಿಕೊಳ್ಳಬಹುದಿತ್ತು ಎಂಬುದೂ ಧೃತರಾಷ್ಟ್ರನಿಗೆ ಈಗ ಅರ್ಥವಾಗಿದೆ. ಆದರೆ ಅಂದು ಪುತ್ರವ್ಯಾಮೋಹದಿಂದ ಆತನ ಬುದ್ಧಿಗೆ ಮಂಕುಕವಿದಿತ್ತು. ಅದರ ಪರಿಣಾಮದಿಂದ ಧೃತರಾಷ್ಟ್ರ ಗಾಂಧಾರಿಯರು ಎಲ್ಲವನ್ನೂ ಎಲ್ಲರನ್ನೂ ಕಳೆದುಕೊಳ್ಳಬೇಕಾಯಿತು. ಈಗ ಕೊನೆಗಾಲದಲ್ಲಿ ತನ್ನ ವಯಸ್ಸು, ಸ್ಥಾನಮಾನ, ಅಂತಸ್ತುಗಳೆಲ್ಲವನ್ನೂ ಮರೆತು ಮಗನ ಕಾಲಿಗೆರಗುತ್ತಿದ್ದಾನೆ. ಒಬ್ಬ ತಂದೆಯಾದವನಿಗೆ ಇದಕ್ಕಿಂತ ಹೀನಾಯ ಸ್ಥಿತಿ ಇನೊಂದಿಲ್ಲ ಎಂಬುದನ್ನು ಈ ಘಟನೆ ಸ್ಪಷ್ಟಪಡಿಸುತ್ತದೆ.)
ಅದಱಿನಾತನೊಳಪ್ಪ ಸಮರಾನುಬಂಧಮಂ ಮಾಣ್ಪುದೆನ್ನೆಂಬುದನಿಂಬುಕಯ್ವುದೆಂದ ಧೃತರಾಷ್ಟ್ರನ ನುಡಿಯಂ ಗಾಂಧಾರಿ ಸಮಭ್ಯರ್ಥಿಸಿ ತಾನುಂ ಪ್ರಾರ್ಥಿಸಿ
ಗದ್ಯದ ಅನ್ವಯಕ್ರಮ:
ಅದಱಿನ್ ಆತನೊಳ್ ಅಪ್ಪ ಸಮರ ಅನುಬಂಧಮಂ ಮಾಣ್ಬುದು. ಎನ್ನ ಎಂಬುದನ್ ಇಂಬುಕಯ್ವುದು ಎಂದ ಧೃತರಾಷ್ಟ್ರನ ನುಡಿಯಂ ಗಾಂಧಾರಿ ಸಮಭ್ಯರ್ಥಿಸಿ ತಾನುಂ ಪ್ರಾರ್ಥಿಸಿ
ಪದ – ಅರ್ಥ:
ಅದಱಿನ್-ಆದುದರಿಂದ; ಆತನೊಳ್ ಅಪ್ಪ-ಧರ್ಮರಾಯನಲ್ಲಿ ಉಂಟಾಗಿರುವ; ಸಮರಾನುಬಂಧ-ಯುದ್ಧ ನಿರ್ಧಾರ; ಮಾಣ್ಬುದು-ಬಿಟ್ಟುಬಿಡುವುದು; ಎನ್ನೆಂಬುದನ್(ಎನ್ನ+ಎಂಬುದನ್)-ನಾನು ಹೇಳಿದುದನ್ನು (ವಿಭಕ್ತಿ ಪಲ್ಲಟ-ಪ್ರಥಮಾ ವಿಭಕ್ತಿಗೆ ಬದಲಾಗಿ ಷಷ್ಠಿ ವಿಭಕ್ತಿ ಪ್ರಯೋಗ); ಎಂಬುದನ್-ಹೇಳುವುದನ್ನು; ಇಂಬುಕಯ್ವುದು-ಒಪ್ಪಿಕೊಳ್ಳಬೇಕು; ಸಮಭ್ಯರ್ಥಿಸಿ-ಸಮರ್ಥಿಸಿ; ಪ್ರಾರ್ಥಿಸಿ-ಬೇಡಿಕೊಂಡು.
ಆದುದರಿಂದ ನಿನಗೆ ಧರ್ಮರಾಯನಲ್ಲಿ ಈಗಾಗಲೇ ಉಂಟಾಗಿರುವ ಯುದ್ಧನಿರ್ಧಾರವನ್ನು ಬಿಟ್ಟುಬಿಡು. ಇನ್ನು ಯುದ್ಧಮಾಡಿ ಪ್ರಯೋಜನವಿಲ್ಲ. ಇನ್ನದರೂ ನಾನು ಹೇಳುವ ಮಾತುಗಳನ್ನು ನೀನು ಒಪ್ಪಿಕೊಳ್ಳಬೇಕು ಎಂದು ಹೇಳಿದ ಧೃತರಾಷ್ಟ್ರನ ಮಾತುಗಳನ್ನು ಗಾಂಧಾರಿಯೂ ಸಮರ್ಥಿಸಿ ತಾನೂ ದುರ್ಯೋಧನನಲ್ಲಿ ಬೇಡಿಕೊಳ್ಳುತ್ತಾಳೆ.
ಪರಿಣತವಯಸರೆಮಿರ್ಕ
ಣ್ಗುರುಡರೆಮೆಮಗಿಂಬುಕಯ್ವುದುಚಿತಂ ನಿನ್ನೀ
ಗುರು ನುಡಿದ ನುಡಿಗೊಡಂಬಡು
ಗುರುವಚನಮಲಂಘನೀಯಮೆಂಬುದು ಮಗನೇ ೮
ಪದ್ಯದ ಅನ್ವಯಕ್ರಮ:
ಪರಿಣತ ವಯಸರೆಂ ಇರ್ ಕಣ್ ಕುರುಡರ್ ಎಮಗೆ ಇಂಬುಕಯ್ವುದು ಉಚಿತಂ ನಿನ್ನ ಈ ಗುರು ನುಡಿದ ನುಡಿಗೆ ಒಡಂಬಡು. ಮಗನೇ, ಗುರುವಚನಂ ಅಲಂಘನೀಯಂ ಎಂಬುದು.
ಪದ-ಅರ್ಥ:
ಪರಿಣತ-ಪರಿಪಕ್ವವಾದ, ಮಾಗಿದ; ವಯಸರೆಂ-ವಯಸ್ಕರಾಗಿದ್ದೇವೆ; ಇರ್ಕಣ್ಗುರುಡರ್-ಎರಡೂ ಕಣ್ಣು ಕಾಣದವರು; ಎಮಗೆ-ನಮಗೆ; ಇಂಬುಕಯ್ವುದು-ಮನ್ನಿಸುವುದು, ಒಪ್ಪಿಕೊಳ್ಳುವುದು; ಉಚಿತಂ-ಉತ್ತಮ, ಯೋಗ್ಯ; ನಿನ್ನೀ ಗುರು-ನಿನ್ನ ಈ ಗುರು(ತಂದೆ); ನುಡಿದ-ಆಡಿದ, ಹೇಳಿದ; ಒಡಂಬಡು-ಒಪ್ಪಿಕೊಳ್ಳು; ಗುರುವಚನ-ಗುರುಗಳ ಮಾತು; ಅಲಂಘನೀಯಂ-ಮೀರಲಾಗದ್ದು; ಎಂಬುದು-ಎಂಬ ಮಾತು.
ಮಗನೇ, ನಾವು ಈಗ ವಯಸ್ಸು ಮೀರಿದ ಮುದುಕರಾಗಿದ್ದೇವೆ. ನಮ್ಮ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡು ಕುರುಡರಾಗಿದ್ದೇವೆ. ಆದುದರಿಂದ ನೀನೀಗ ನಾವು ಹೇಳುವುದನ್ನು ಒಪ್ಪಿಕೊಳ್ಳುವುದು ಉತ್ತಮ. ನಿನ್ನ ಗುರುಸ್ಥಾನದಲ್ಲಿರುವ ತಂದೆ ಆಡಿದ ಮಾತುಗಳನ್ನು ಒಪ್ಪಿಕೊಳ್ಳುವುದೇ ಒಳಿತು.’ಗುರುಗಳ ಮಾತನ್ನು ಮೀರಲಾಗದು’ ಎಂಬ ಹಿರಿಯರ ಮಾತೇ ಇದೆಯಲ್ಲ.
ನಿನ್ನ ತಂದೆ ಹುಟ್ಟುಕುರುಡರು. ನಾನೋ ಅಪ್ಪನಿಲ್ಲದ ದೃಷ್ಟಿ ನನಗೂ ಬೇಡವೆಂದು ನಾನೂ ಕಣ್ಣುಗಳಿಗೆ ಬಟ್ಟೆಕಟ್ಟಿಕೊಂಡು ಕುರುಡಿಯಾದವಳು. ನಮಗಿಬ್ಬರಿಗೂ ಸಾಕಷ್ಟು ಪ್ರಾಯವೂ ಆಗಿದೆ. ಮಕ್ಕಳ, ಮೊಮ್ಮಕ್ಕಳ ಸಾವಿನ ದುಃಖವನ್ನು ತಡೆದುಕೊಳ್ಳುವ ಶಕ್ತಿಯೂ ಇಲ್ಲ, ತಾಳ್ಮೆಯೂ ಉಳಿದಿಲ್ಲ. ಹಾಗಾಗಿ ನಮ್ಮ ಮಾತುಗಳನ್ನು ನೀನು ಒಪ್ಪಿಕೊಳ್ಳಬೇಕು. ಹಿರಿಯರ ಅದರಲ್ಲೂ ನಮ್ಮಂತಹ ಪ್ರಾಯಸ್ಥರ ಮಾತುಗಳನ್ನು ಒಪ್ಪಿಕೊಳ್ಳುವುದು ನಿನಗೆ ಒಳ್ಳೆಯದು. ನಿನ್ನ ತಂದೆ ಈಗ ಗುರುಗಳ ಸ್ಥಾನದಲ್ಲಿದ್ದಾರೆ. ಅವರಾಡಿದ ಮಾತುಗಳನ್ನು ತಿರಸ್ಕರಿಸದೆ ಒಪ್ಪಿಕೊಳ್ಳು. “ಗುರುಗಳ ಮಾತುಗಳನ್ನು ಮೀರಲಾಗದು” ಎಂಬ ಹಿರಿಯರ ಮಾತೇ ಇದೆಯಲ್ಲ. ನೀನೂ ನಮ್ಮ ಮಾತುಗಳನ್ನು ಮೀರದೆ ವಿಧೇಯನಾಗಿರು ಎಂದು ಗಾಂಧಾರಿ ಮಗನನ್ನು ಬೇಡಿಕೊಳ್ಳುತ್ತಾಳೆ.
ಸಮರವ್ಯಾಪಾರಂ ಮಾ
ಣ್ದು ಮಗನೆ ನಿಜಶಿಬಿರದತ್ತ ಬಿಜಯಂಗೆಯ್ ಸ
ತ್ತ ಮಗಂದಿರ್ ಸತ್ತರ್ ನೀ
ನೆಮಗುಳ್ಳೊಡೆ ಸಾಲ್ವುದವರನಿಂ ತಂದಪೆವೇ ೯
ಪದ್ಯದ ಅನ್ವಯಕ್ರಮ:
ಮಗನೆ, ಸಮರ ವ್ಯಾಪಾರಂ ಮಾಣ್ದು ನಿಜ ಶಿಬಿರದತ್ತ ಬಿಜಯಂಗೆಯ್ ಸತ್ತ ಮಗಂದಿರ್ ಸತ್ತರ್ ನೀನ್ ಎಮಗೆ ಉಳ್ಳೊಡೆ ಸಾಲ್ವುದು ಅವರನ್ ಇಂ ತಂದಪೆವೇ
ಪದ-ಅರ್ಥ:
ಸಮರವ್ಯಾಪಾರ-ಯುದ್ಧನಿರ್ಧಾರ; ಮಾಣ್ದು-ಬಿಟ್ಟುಬಿಟ್ಟು; ನಿಜ-ನಿನ್ನ; ಶಿಬಿರ-ಬಿಡಾರ, ಬೀಡು; ಬಿಜಯಂಗೆಯ್-ದಯಮಾಡಿಸು, ಹಿಂದಿರುಗಿ ಬಾ; ಸತ್ತ ಮಗಂದಿರ್-ಸತ್ತುಹೋಗಿರುವ ಮಕ್ಕಳು(ಧೃತರಾಷ್ಟ್ರ-ಗಾಂಧಾರಿಯರ ಹಾಗೂ ದುರ್ಯೋಧನನ ಮಕ್ಕಳು); ಸತ್ತರ್-ಸತ್ತುಹೋದರು; ನೀನೆಮಗುಳ್ಳೊಡೆ-ನೀನೊಬ್ಬ ನಮಗೆ ಮಗನಾಗಿ ಉಳಿದರೆ; ಸಾಲ್ವುದು-ಸಾಕು; ಅವರನಿಂ-ಇನ್ನು ಅವರನ್ನು(ಸತ್ತುಹೋದವರನ್ನು); ತಂದಪೆವೇ-ಮರಳಿ ತರುವುದಕ್ಕೆ ಸಾಧ್ಯವೆ?
ಮಗನೇ, ಇನ್ನಾದರೂ ಯುದ್ಧನಿರ್ಧಾರವನ್ನು ಬಿಟ್ಟುಬಿಟ್ಟು ನಿನ್ನ ಬಿಡಾರಕ್ಕೆ ಹಿಂದಿರುಗು. ನಾವೂ ತೊಂಬತ್ತೊಂಬತ್ತು ಮಂದಿ ಮಕ್ಕಳನ್ನು ಕಳೆದುಕೊಂಡಿದ್ದೇವೆ. ನೀನೂ ನಿನ್ನ ಮಕ್ಕಳೆಲ್ಲರನ್ನೂ ಕಳೆದುಕೊಂಡಿರುವೆ. ನೀನೊಬ್ಬ ಉಳಿದರೆ ಸಾಕು. ಸತ್ತು ಹೋಗಿರುವ ಮಕ್ಕಳನ್ನು ಮರಳಿ ತರುವುದಕ್ಕೆ ಸಾಧ್ಯವೇ? ಎಂದು ಗಾಂಧಾರಿ ಮಗನಲ್ಲಿ ಬೇಡಿಕೊಳ್ಳುತ್ತಾಳೆ.
ಧೃತರಾಷ್ಟ್ರ ಗಾಂಧಾರಿಯರಿಗೆ ನೂರೊಂದು ಮಂದಿ ಮಕ್ಕಳು. ಈಗಾಗಲೇ ತೊಂಬತ್ತೊಂಬತ್ತು ಮಂದಿ ಮಕ್ಕಳನ್ನೂ ಇದ್ದ ಒಬ್ಬ ಅಳಿಯನನ್ನು ಕಳೆದುಕೊಂಡಾಗಿದೆ. ನೀನೂ ನಿನ್ನ ಮಕ್ಕಳೆಲ್ಲರನ್ನೂ ಕಳೆದುಕೊಂಡಾಗಿದೆ. ನಾವು ಮಕ್ಕಳನ್ನು ಮೊಮ್ಮಕ್ಕಳನ್ನು ಕಳೆದುಕೊಂಡು ದುಃಖಿತರಾದರೆ, ನೀನು ಮಕ್ಕಳನ್ನು, ಸಹೋದರರನ್ನು ಕಳೆದುಕೊಂಡು ದುಃಖಿತನಾಗಿರುವೆ. ನಾವೂ ನೀನೂ ಸಮಾನ ದುಃಖಿಗಳು. ಈಗಾಗಲೇ ಸತ್ತು ಹೋದ ಮಕ್ಕಳನ್ನು, ಮೊಮ್ಮಕ್ಕಳನ್ನು ನಾವೂ ಮರಳಿ ತರುವುದಕ್ಕೆ ಸಾಧ್ಯವಿಲ್ಲ. ನೀನೂ ಕೂಡಾ. ಕನಿಷ್ಠಪಕ್ಷ ನೀನೊಬ್ಬನಾದರೂ ಉಳಿದುಕೊಂಡರೆ ನಾವು ನಿನ್ನನ್ನು ನೋಡಿಯಾದರೂ ನಮ್ಮ ನೋವನ್ನು ಮರೆಯಲು ಪ್ರಯತ್ನಿಸಬಹುದು. ನೀನಾದರೂ ನಮ್ಮ ಮಾತುಗಳನ್ನು ಮೀರಿ ಮತ್ತೆ ಪಾಂಡವರೊಂದಿಗೆ ಯುದ್ಧಕ್ಕೆ ಹೊರಟರೆ ನಾವಾದರೂ ಮುಂದೆ ಒದಗಬಹುದಾದ ದುಃಖವನ್ನು ಮರೆಯಲು ಸಾಧ್ಯ? ಎಂದು ಗಾಂಧಾರಿ ದುರ್ಯೋಧನನನ್ನು ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ.
(’ಸತ್ತ ಮಗಂದಿರ್ ಸತ್ತರ್’ ಎಂಬ ಗಾಂಧಾರಿಯ ಮಾತಿನ ಹಿಂದಿರುವ ವ್ಯಂಗ್ಯವನ್ನು ಗಮನಿಸಬೇಕು. ಸತ್ತವರು ಸತ್ತರು ಎಂಬ ಮಾತುಗಳನ್ನು ಗಮನಿಸಬೇಕು. ಮನುಷ್ಯ ಹೇಗೆ ಬದುಕಬೇಕೆಂದರೆ ಸತ್ತ ಮೇಲೂ ತನ್ನ ಬದುಕಿನ ವಿಧಾನದಿಂದ, ಸಾಧನೆಯಿಂದ, ಸಚ್ಚಾರಿತ್ರ್ಯದಿಂದ, ಧರ್ಮನಿಷ್ಠೆಯಿಂದ ಉಳಿಯಬೇಕು. ಆದರೆ ಕೌರವರು ಬದುಕಿದ್ದರೂ ಸತ್ತಂತಿದ್ದರು. ಬಹುಶಃ ದುರ್ಯೋಧನ ಹಾಗೂ ದುಶ್ಶಾಸನರು ಧರ್ಮಿಷ್ಠರಾಗಿರುತ್ತಿದ್ದರೆ ಅವರೆ ತಮ್ಮಂದಿರೂ ಧರ್ಮಿಷ್ಠರಾಗಿಯೇ ಇರುತ್ತಿದ್ದರೇನೋ! ಆದರೆ ಹಾಗಾಗಲಿಲ್ಲ. ದುರ್ಯೋಧನನೇ ಇನ್ನೊಂದು ಸಂದರ್ಭದಲ್ಲಿ ಹೇಳುವ ಹಾಗೆ, “ಧರ್ಮ ಏನೆಂದು ಗೊತ್ತಿದೆ, ಅನುಸರಿಸುವುದಕ್ಕೆ ಮನಸ್ಸಿಲ್ಲ, ಅಧರ್ಮ ಏನೆಂದು ಗೊತ್ತಿದೆ, ಬಿಡುವುದಕ್ಕೆ ಮನಸ್ಸಿಲ್ಲ”. ಕೌರವರದ್ದು ಇದೇ ಸ್ಥಿತಿ. ಅವರು ಬದುಕಿದ್ದಾಗಳೂ ಸತ್ತಂತೆಯೇ ಇದ್ದರು. ಇನ್ನು ಸತ್ತ ಮೇಲೆ ಉಳಿಯುವುದಕ್ಕೆ (ಸಾಧನೆಯಿಂದ) ಸಾಧ್ಯವೇ?. ಬಹುಶಃ ಈ ಸಂದರ್ಭದಲ್ಲಿ ಗಾಂಧಾರಿಗೆ ತನ್ನ ಮಕ್ಕಳ ಬದುಕಿನ ಯಥಾರ್ಥತೆ, ಹಾಗೂ ತಮ್ಮ ಬೇಜವಾಬ್ದಾರಿತನದ ಅರಿವಾಗಿರಬೇಕು. ತಿಳಿವಳಿಕೆ ಮೂಡಿರಬೇಕು. ಅದಕ್ಕಾಗಿಯೇ “ಸತ್ತ ಮಗಂದಿರ್ ಸತ್ತರ್” ಎನ್ನುತ್ತಾಳೆ.)
(ಭಾಗ-೨ರಲ್ಲಿ ಮುಂದುವರಿದಿದೆ)
ಡಾ. ವಸಂತ್ ಕುಮಾರ್ ಉಡುಪಿ
******