ಸಾಹಿತ್ಯಾನುಸಂಧಾನ

ದೇವರೆಂಬುದದೇನು – ಡಿ.ವಿ.ಜಿ.

ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ?

ನಾವರಿಯಲಾರದೆಲ್ಲದರೊಟ್ಟು ಹೆಸರೆ?

ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು?

ಸಾವು ಹುಟ್ಟುಗಳೇನು? – ಮಂಕುತಿಮ್ಮ

 

ಅನ್ವಯಕ್ರಮ:

ದೇವರು ಎಂಬುದು ಅದೇನು ಕಗ್ಗತ್ತಲೆಯ ಗವಿಯೆ? ನಾವು ಅರಿಯಲಾರದ ಎಲ್ಲದರ ಒಟ್ಟು ಹೆಸರೆ? ಕಾವನ್ ಒರ್ವನ್ ಇರಲ್ಕೆ ಜಗದ ಕಥೆ ಇಂತು ಏಕೆ? ಸಾವು ಹುಟ್ಟುಗಳೇನು? – ಮಂಕುತಿಮ್ಮ

ಪದ-ಅರ್ಥ:

ಕಗ್ಗತ್ತಲೆ-ದಟ್ಟವಾದ ಕತ್ತಲೆ;  ಗವಿ-ಗುಹೆ, ನೆಲೆ;  ಅರಿಯಲಾರದ-ತಿಳಿಯಲಾರದ;  ಎಲ್ಲದರ-ಸಮಸ್ತ ವಿಚಾರಗಳ;  ಒಟ್ಟುಹೆಸರು-ಸಮಗ್ರ ಹೆಸರು;  ಕಾವನೊರ್ವನ್-ಕಾಯುವ ಒಬ್ಬನು (ದೇವರು);  ಇರಲ್ಕೆ-ಇರುತ್ತಿರಲು; ಇಂತು-ಹೀಗೆ.

            ಈ ಜಗತ್ತು ಹಲವು ಧರ್ಮಗಳ, ಹಲವು ಪಂಥಗಳ, ಹಲವು ಮತಗಳ ಜನರಿಂದ ಕೂಡಿದೆ. ಅವರವರ ಧರ್ಮ, ಪಂಥ, ಮತಗಳಲ್ಲಿನ ನಂಬಿಕೆಗಳ ಆಧಾರದ ಮೇಲೆ ಹಲವು ಮಾನುಷ, ಅತಿಮಾನುಷ ಶಕ್ತಿಗಳನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಈ ಪರಂಪರೆಗೆ ಸಹಸ್ರಮಾನಗಳೇ ಸಂದುಹೋದರೂ ಇದುವರೆಗೂ “ದೇವರು ಅಂದರೇನು? ಆತ ಹೇಗಿದ್ದಾನೆ? ಆತನ ಶಕ್ತಿ, ಸಾಮರ್ಥ್ಯಗಳೇನು? ಆತನಲ್ಲಿರುವ ಜೀವದಯೆಯೇನು?” ಎಂಬಿತ್ಯಾದಿ ಸವಾಲುಗಳಿಗೆ ಸಮರ್ಪಕ ಪರಿಹಾರ ಇನ್ನೂ ಸಿಕ್ಕುರುವಂತೆ ಕಾಣುವುದಿಲ್ಲ. ಪ್ರಾಚೀನಕಾಲದ ಕೆಲವು ಸಾಧಕರನ್ನು ಹೊರತುಪಡಿಸಿದರೆ ಮಿಕ್ಕವರಿಗೆ ದೇವರು ಎಂಬವನು ಕಗ್ಗತ್ತಲೆಯ ಗವಿಯಾಗಿಯೇ  ಉಳಿದಿದ್ದಾನೆಯೇ?! ಅಥವಾ ಮನುಷ್ಯ ತಾನು ಅರಿಯಲಾರದ ವಿಚಾರಗಳೆಲ್ಲವಕ್ಕೂ “ದೇವರು” ಎಂದು ಹೆಸರನ್ನು ನೀಡಿದ್ದಾನೆಯೇ? ಸಮಸ್ತ ಜಗತ್ತನ್ನೇ ಕಾಯುವವನ್ನೊಬ್ಬನು ಇದ್ದಾನೆ ಎಂದಾದರೆ ಜಗತ್ತಿನ ಸ್ಥಿತಿಗತಿಗಳು ಹೀಗೇಕಿವೆ? ಈ ಹುಟ್ಟುಸಾವುಗಳು ಎಂದರೇನು? ಈ ಮೊದಲಾದ ಪ್ರಶ್ನೆಗಳು ಮನುಷ್ಯನ ಮುಂದೆ   ಸವಾಲುಗಳಾಗಿ ನಿಂತುಕೊಳ್ಳುವುದರಿಂದ  ದೇವರ ಬಗೆಗಿನ ಎಲ್ಲಾ ಪ್ರಶ್ನೆಗಳು ಇಂದಿಗೂ ನಿಗೂಢವಾಗಿಯೇ ಉಳಿದಿವೆ ಎನ್ನುತ್ತಾನೆ ಮಂಕುತಿಮ್ಮ.

            ಜಗತ್ತಿನ ಎಲ್ಲಾ ಧರ್ಮ, ಪಂಥ, ಮತಗಳಲ್ಲಿಯೂ ದೇವನ ಹಾಗೂ ಆತನ ಅಸ್ತಿತ್ವದ ಬಗೆಗಿನ ಪರಿಕಲ್ಪನೆ ಪ್ರಾಚೀನಕಾಲದಿಂದಲೂ ಬೆಳೆದುಕೊಂಡು ಬಂದಿದೆ. ಮಾತ್ರವಲ್ಲ, ಆ ನಿಟ್ಟಿನಲ್ಲಿ ಇಂದಿನವರೆಗೂ ಬಗೆಬಗೆಯ ಚಿಂತನ-ಮಂಥನಗಳು, ವಿಚಾರ-ವಿಮರ್ಶೆಗಳು, ವಾದ-ಪ್ರತಿವಾದಗಳು ಬೆಳೆದುಕೊಂಡು ಬಂದಿವೆ. ಇಂದಿಗೂ ಒಂದು ನಿಷ್ಕೃಷ್ಟವಾದ ತೀರ್ಮಾನಕ್ಕೆ ತಲುಪುವುದಕ್ಕೆ ಸಾಧ್ಯವಾಗಿಲ್ಲ. ಭಾರತದಲ್ಲಿ ಪ್ರಾಚೀನಕಾಲದಿಂದಲೂ ಹಲವಾರು ಮಂದಿ ಋಷಿಮುನಿಗಳು, ದಾರ್ಶನಿಕರು ದೇವರ ಬಗ್ಗೆ, ಆತನ ಅಸ್ತಿತ್ವ, ಶಕ್ತಿಸಾಮರ್ಥ್ಯ, ಸರ್ವಾಂತರ್ಯಾಮಿತ್ವ, ದಯಾಪರತೆ, ಶಿಷ್ಟರಕ್ಷಣೆ-ದುಷ್ಟಶಿಕ್ಷಣೆ, ಸೃಷ್ಟಿ-ಸ್ಥಿತಿ-ಲಯಗಳ ಬಗ್ಗೆ ಹತ್ತಾರು, ನೂರಾರು ಬಗೆಗಳಿಂದ ವರ್ಣಿಸಿದ್ದಾರೆ. ನಮ್ಮ ಪುರಾಣಗಳಲ್ಲೂ ಈ ಬಗೆಗಿನ ಸಾಕಷ್ಟು ಕಥೆಗಳು ಹುಟ್ಟಿಕೊಂಡು ಇಂದಿಗೂ ಪ್ರಚಲಿತವಾಗಿವೆ. ಆದರೂ ನಮ್ಮಲ್ಲಿ ದೇವನ ಅಸ್ತಿತ್ವದ ಬಗ್ಗೆ ನಿಖರವಾದ ಅರಿವು ಪ್ರಾಪ್ತವಾಗಿಲ್ಲ. ಹಾಗಾಗಿ ದೇವನೆಂಬವನು ಇದ್ದಾನೆಯೇ? ಎಂಬ ಪ್ರಶ್ನೆ ಅಂದಿನಿಂದ ಇಂದಿನವರೆಗೂ ಜೀವಂತವಾಗಿ ಉಳಿದುಕೊಂಡೇ ಬಂದಿದೆ.

            ದೇವರ ಬಗ್ಗೆ ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲಿಯೇ ನೂರಾರು, ಸಾವಿರಾರು ರೀತಿಯ ಪರಿಕಲ್ಪನೆಗಳು, ಸಿದ್ಧಾಂತಗಳು, ವಾದಗಳು-ಪ್ರತಿವಾದಗಳು ಹುಟ್ಟಿಕೊಂಡಿವೆ. ಒಂದನ್ನು ಅಲ್ಲಗಳೆದು ಇನ್ನೊಂದು ಹುಟ್ಟಿಕೊಂಡಿದೆ. ಆದರೆ ಇಂದಿಗೂ ಯಾವುದೇ ಧರ್ಮದಲ್ಲಿಯೂ ಒಂದು ನಿಖರವಾದ ತೀರ್ಮಾನಕ್ಕೆ ಬರುವುದಕ್ಕೆ ಸಾಧ್ಯವಾಗಿಲ್ಲ. ದೇವನೆಂಬವನು ತನ್ನ ಅಸ್ತಿತ್ವವನ್ನು ಬೇರೆಬೇರೆ ರೂಪದಲ್ಲಿ ತೋರಿಸುತ್ತಿದ್ದರೂ ಎಲ್ಲಿಯೂ ತನ್ನ ನಿಜರೂಪವನ್ನು ತೋರ್ಪಡಿಸಿಲ್ಲ. ದೇವರನ್ನು ಕಂಡಿದ್ದೇನೆ ಎಂದವರೂ ಲೋಕದಲ್ಲಿ ಇಲ್ಲ. ಆದರೂ ದೇವನ ಬಗ್ಗೆ, ಆತನ ಅಸ್ತಿತ್ವದ ಬಗ್ಗೆ ನಂಬಿಕೆಗಳು ಕಡಿಮೆಯಾಗಿಲ್ಲ. ದೇವರನ್ನು ನಂಬದೆ ನಾಸ್ತಿಕರೆನಿಸಿಕೊಂಡವರೂ ಕಾಲಕಾಲಕ್ಕೆ ತಮ್ಮ ನಿಲುವುಗಳನ್ನು ಬದಲಾಯಿಸಿಕೊಂಡಿರುವುದೂ ಇದೆ. ಇಂತಹವರ ಮಧ್ಯೆ ದೇವರಿಗೆ ಸಂಬಂಧಿಸಿದ ಸೊತ್ತುಗಳನ್ನೇ ಎಗರಿಸಿ ಸಿರಿವಂತರಾದವರೂ ಇದ್ದಾರೆ. ಅತ್ಯಾಚಾರ, ಅನಾಚಾರ, ಅನ್ಯಾಯ, ಮೋಸ, ದರೋಡೆ, ಕೊಲೆ, ಸುಲಿಗೆಗಳನ್ನು ನಿರಂತರ ಮುಂದುವರೆಸಿಕೊಂಡು ಸಮಾಜದಲ್ಲಿ ಗೌರವಸ್ಥರೆನಿಸಿಕೊಂಡು ಬದುಕುತ್ತಿರುವವರೂ ಇದ್ದಾರೆ. ಹೀಗಿರುವಾಗ ದೇವರಿದ್ದಾನೆಯೇ? ಎಂಬ ಸಂಶಯವೂ ಆಗಾಗ ಹಲವರ ಮನಸ್ಸಿನಲ್ಲಿ ಮೂಡಿದ್ದೂ ಇದೆ. ಇಷ್ಟಾದರೂ ದೇವನನ್ನು ಕುರಿತಾದ ಚಿಂತನೆಗಳು, ವಾದಗಳು ಕಡಿಮೆಯಾಗಿಲ್ಲ ಎಂಬುದನ್ನು ಗಮನಿಸಿದಾಗ ದೇವರ ಕುರಿತಾದ ಚಿಂತನೆಗಳು ಮನುಷ್ಯನನ್ನು ಪದೇ ಪದೇ ಚಿಂತನೆಗೆ ಹಚ್ಚುತ್ತ, ಇನ್ನಷ್ಟು ಸಕ್ರಿಯಗೊಳಿಸುತ್ತಲೇ ಇವೆ ಎಂಬುದರ ಅರಿವಾಗುತ್ತದೆ.

            ದೇವನೆಂಬವನು ದೃಷ್ಟಿಗೋಚರವಾಗದವನು, ರೂಪರಹಿತನು, ಯಾವುದೇ ರೂಪವನ್ನು ಧರಿಸಬಲ್ಲವನು, ಆತ ಸರ್ವಾಂತರ್ಯಾಮಿ ಎಂಬುದು ನಮ್ಮಲ್ಲಿ ಪ್ರಚಲಿತವಾಗಿರುವ ಒಂದು ನಂಬಿಕೆ. ಪ್ರಾಚೀನಕಾಲದ ಋಷಿಮುನಿಗಳು ತಮ್ಮ ತಪಸ್ಸಿನ ಸಾಧನೆಯಿಂದ ದೇವನ ಅಸ್ತಿತ್ವವನ್ನು, ಆತನ ರೂಪವನ್ನು ಕಂಡುಕೊಂಡಿರುವುದನ್ನು ಪುರಾಣಗಳ ಮೂಲಕ ತಿಳಿದಿದ್ದರೂ ಜನಸಾಮಾನ್ಯರಿಗೆ ಮಾತ್ರ ಆತ ಚಿದಂಬರರಹಸ್ಯದಂತೆ ಕಗ್ಗತ್ತಲೆಯ ಗವಿಯಾಗಿಯೇ ಉಳಿದುಬಿಟ್ಟಿದ್ದಾನೆ. ಯಾವಾಗ ದೇವನೆಂಬವನು ತಮಗೆ ದೃಷ್ಟಿಗೋಚರನಾಗಲಿಲ್ಲವೋ ಅಂದಿನಿಂದಲೇ ತಾನು ಅರಿಯಲಾರದ, ದೃಷ್ಟಿಸಲಾರದ, ಅರ್ಥೈಸಲಾರದ ಎಲ್ಲವನ್ನೂ “ದೇವರು” ಎಂದು ಒಟ್ಟು ಹೆಸರೊಂದನ್ನು ನೀಡಿದ್ದಾನೆ. ಮನುಷ್ಯನ ಶಕ್ತಿಯನ್ನು ಮೀರಿದ ಶಕ್ತಿಯೊಂದಿದೆ, ಅದನ್ನು ನಿಭಾಯಿಸುವುದಕ್ಕಾಗಲೀ ಮೀರುವುದಕ್ಕಾಗಲೀ ತಡೆಯುವುದಕ್ಕಾಗಲೀ ಸಾಧ್ಯವಿಲ್ಲ ಎಂಬುದರ ಅರಿವು ಸಾಮಾನ್ಯಮನುಷ್ಯನಿಗೆ ಇದ್ದುದರಿಂದಲೇ ತಾನು ಅರಿಯಲಾರದುದೆಲ್ಲವನ್ನೂ “ದೇವರು” ಎಂಬ ಹೆಸರಿನಿಂದ ಗುರುತಿಸಿದಂತೆ ತೋರುತ್ತದೆ. ತೆರೆಯ ಮರೆಯಲ್ಲಿದ್ದು ಎಲ್ಲರನ್ನೂ ಎಲ್ಲವನ್ನೂ ಅವಲೋಕಿಸುವ, ಹತ್ತುಹಲವು ರೀತಿಗಳಲ್ಲಿ ಸವಾಲುಗಳನ್ನೊಡ್ಡಿ ಪರೀಕ್ಷಿಸಿ ಮನುಷ್ಯನನ್ನು ಪಕ್ವವಾಗಿರುವ, ದುಷ್ಟರನ್ನು ಶಿಕ್ಷಿಸುತ್ತ, ಶಿಷ್ಟರನ್ನು ರಕ್ಷಿಸುವ, ಕಾಲಕಾಲಕ್ಕೆ ಈ ಭೂಮಿಯ ಮೇಲಿರುವ ಸಕಲ ಜೀವಸಂಕುಲಗಳ ಜೀವಿತಕ್ಕೆ ದಾತಾರನಾಗಿರುವ ದೇವರನ್ನು ವಿರೋಧಿಸಿದರೆ, ದೂಷಿಸಿದರೆ, ದುರಹಂಕಾರಿಯಾಗಿ ವರ್ತಿಸಿದರೆ ಸರ್ವನಾಶಕ್ಕೆ ಕಾರಣರಾಗಬೇಕಾಗುತ್ತದೆ ಎಂಬ ಭಾವನೆ ಅನಾದಿಕಾಲದಿಂದಲೂ ಬೆಳೆದುಕೊಂಡು ಬಂದಿದೆ.

            ಹುಟ್ಟು ಸಾವುಗಳೆಂದರೇನು? ಹುಟ್ಟುವ ಮೊದಲು ಎಲ್ಲಿದ್ದರು? ಸತ್ತ ಅನಂತರ ಎಲ್ಲಿಗೆ ಹೋಗುತ್ತಾರೆ? ಈ ಮೊದಲಾದ ಸವಾಲುಗಳು ಅನಾದಿಕಾಲದಿಂದ ಇಂದಿಗೂ ಮುಂದುವರಿದುಕೊಂಡು ಬಂದಿವೆ. ಸಮರ್ಪಕವಾದ ಉತ್ತರ ಇನ್ನೂ ದೊರಕಿಲ್ಲ. ಆದರೆ, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ, ಸಾವನ್ನು ತಡೆಯುವುದು ಅಸಾಧ್ಯ ಎಂಬುದನ್ನೂ ಮನುಷ್ಯ ಕಂಡುಕೊಂಡಿದ್ದಾನೆ. ಲೋಕದ ದೃಷ್ಟಿಗೆ ಅಗೋಚರನಾಗಿ ದೇವನು ಲೋಕವನ್ನೇ ಕಾಯುತ್ತಿದ್ದರೂ ಈ ಭೂಮಿಯಲ್ಲಿ ಕಷ್ಟ-ಕಾರ್ಪಣ್ಯಗಳು, ದುಃಖ-ದುಮ್ಮಾನಗಳು, ಸಾವು-ನೋವುಗಳು, ಭಯ-ಆತಂಕಗಳು, ಒಡಕು-ಕೆಡುಕುಗಳು, ನಷ್ಟ–ಹಿಂಸೆಗಳೇ ಏಕೆ ತುಂಬಿಕೊಂಡಿವೆ? ಒಬ್ಬ ಮಾಡಿದ ತಪ್ಪಿಗೆ ಸಮಗ್ರ ಕುಟುಂಬವೇ ಪರಿತಪಿಸಬೇಕಾದ, ಶಿಕ್ಷೆ ಅನುಭವಿಸಬೇಕಾದ, ಅವಮಾನಿಸಿಕೊಳ್ಳಬೇಕಾದ ಪ್ರಸಂಗಗಳು ಏಕೆ ಎದುರಾಗುತ್ತಿವೆ? ಯಾರದ್ದೋ ತಪ್ಪು, ಅಪರಾಧಗಳು, ಇನ್ಯಾರಿಗೋ ಶಿಕ್ಷೆ, ಅವಮಾನಗಳಾಗುತ್ತಿರುವುದು ಏಕೆ? ಈ ಮೊದಲಾದ ಪ್ರಶ್ನೆಗಳು ನಮ್ಮವರ ಮುಂದಿದ್ದವು, ಇಂದೂ ನಮ್ಮ ಮುಂದಿವೆ. ಸಾಂಘಿಕಬದುಕಿನಲ್ಲಿ ಕುಟುಂಬಕಾಳಜಿಯನ್ನು, ಅದರ ಸ್ಥಾನಮಾನಗಳನ್ನು, ಒಳಿತುಕೆಡುಕುಗಳನ್ನು, ಸಹಕುಟುಂಬಿಕರ ಯೋಗಕ್ಷೇಮವನ್ನು ಬದಿಗೊತ್ತಿ ತಮ್ಮಿಷ್ಟದಂತೆ ನಡೆದುಕೊಳ್ಳತೊಡಗಿದರೆ ಅಲ್ಲಿ ಕುಟುಂಬಸ್ಥರೆಲ್ಲರೂ ಶಿಕ್ಷೆ ಅನುಭವಿಸಲೇ ಬೇಕಾಗುತ್ತದೆ ಎಂಬ ಕನಿಷ್ಠ ತಿಳಿವಳಿಕೆ ಪ್ರತಿಯೊಬ್ಬರಲ್ಲೂ ಇರಲೇಬೇಕಾಗುತ್ತದೆ. ಆತ್ಮೋನ್ನತಿ, ಸಮಾಜೋನ್ನತಿಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ದೇವರ ಪರಿಕಲ್ಪನೆ ಅಸ್ತಿತ್ವಕ್ಕೆ ಬಂದಿರಬೇಕು. “ದೇವರ ಭಯವೇ ಜ್ಞಾನದ ಆರಂಭ”  ಎಂಬ ಪೂರ್ವಸೂರಿಗಳ ಮಾತು ಮನುಷ್ಯನನ್ನು ಅನೈತಿಕತೆ, ಅಪರಾಧ, ಕ್ರೌರ್ಯ, ಹಿಂಸೆ ಮೊದಲಾದವುಗಳಿಂದ ತಡೆಯಲು ಮಾಡಿದ ಪ್ರಯತ್ನವನ್ನೂ ಮಾತ್ರವಲ್ಲ, ಕುಟುಂಬದ ಹಾಗೂ ಆ ಮೂಲಕ ಸಮಾಜದ ಒಳಿತನ್ನೂ ಪ್ರತಿನಿಧಿಸುತ್ತದೆ.

ಡಾ. ವಸಂತ್ ಕುಮಾರ್, ಉಡುಪಿ.

*****

Leave a Reply

Your email address will not be published. Required fields are marked *