ಸಾಹಿತ್ಯಾನುಸಂಧಾನ

ಸಮರವ್ಯಾಪಾರಂ ಮಾಣ್ದು ಮಗನೆ – ರನ್ನ-ಭಾಗ-೨

(ಮಂಗಳೂರು ವಿಶ್ವವಿದ್ಯಾನಿಲಯದ ಬಿಬಿಎ ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ)

(ಮುಂದುವರಿದ ಭಾಗ)

ಎಂದು ತನ್ನ ಮತ್ತಿನ ಮಕ್ಕಳಂ ನೆನೆದು ಗಾಂಧಾರಿ ದುಃಖಂಗೆಯ್ಯೆ ಸಂಜಯಂ ಜಡಿದು

ಗದ್ಯದ ಅನ್ವಯಕ್ರಮ:

ಎಂದು ಗಾಂಧಾರಿ ತನ್ನ ಮತ್ತಿನ ಮಕ್ಕಳಂ ನೆನೆದು ದುಃಖಂ ಗೆಯ್ಯೆ ಸಂಜಯಂ ಜಡಿದು

ಪದ-ಅರ್ಥ:

ಮತ್ತಿನ-ಇನ್ನುಳಿದ;  ಮಕ್ಕಳಂ-ಅಳಿದ ತೊಂಬತ್ತೊಂಬತ್ತು ಮಂದಿ ಮಕ್ಕಳನ್ನು;  ನೆನೆದು-ನೆನಪಿಸಿಕೊಂಡು;  ದುಃಖಂಗೆಯ್ಯೆ-ದುಃಖಿಸಿದಾಗ, ಶೋಕಿಸಿದಾಗ;  ಜಡಿದು-ಗದರಿಸಿ.

             ಎಂದು ಗಾಂಧಾರಿ ತನ್ನ ಇನ್ನುಳಿದ ಸತ್ತುಹೋದ ಮಕ್ಕಳನ್ನು ನೆನಪಿಸಿಕೊಂಡು ದುಃಖಿಸಿದಾಗ ಸಂಜಯನು ಬಂದು ಆಕೆಯನ್ನು ಗದರಿಸಿ-

 

ಪ್ರಿಯಸುತನಂ  ಬಂದುಂ ಸಂ

ತಯಿಸುವುದದುಗೆಟ್ಟು ನೀನೆಗಳ ಶೋಕಾಕ್ರಾಂ

ತೆಯುಮಾಗಿ ಶೋಕಿಸಲ್ ಸಂ

ತಯಿಸುವರಾರಂಧನೃಪತಿಯಂ ನೃಪತಿಯುಮಂ  ೧೦

ಪದ್ಯದ ಅನ್ವಯಕ್ರಮ:

ಬಂದುಂ ಪ್ರಿಯಸುತನಂ ಸಂತಯಿಸುವುದು ಅದುಗೆಟ್ಟು ನೀನ್ ಈಗಳ ಶೋಕಾಕ್ರಾಂತೆಯುಂ ಆಗಿ ಶೋಕಿಸಲ್  ಅಂಧನೃಪತಿಯುಮಂ ನೃಪತಿಯುಮಂ  ಆರ್ ಸಂತಯಿಸುವರ್

ಪದ-ಅರ್ಥ:

ಬಂದುಂ-ಯುದ್ಧರಂಗಕ್ಕೆ ಬಂದೂ;  ಪ್ರಿಯಸುತನಂ-ಪ್ರೀತಿಯ ಮಗನನ್ನು;  ಸಂತಯಿಸುವುದು-ಸಮಾಧಾನಿಸಬೇಕು;  ಅದುಗೆಟ್ಟು-ಅದನ್ನು ಬಿಟ್ಟುಬಿಟ್ಟು;  ನೀನೆಗಳ-ನೀನೇ;  ಶೋಕಾಕ್ರಾಂತೆಯುಮಾಗಿ-ದುಃಖದಿಂದ ಆವೇಗ ಉಳ್ಳವಳಾಗಿ, ದುಃಖದಿಂದ ತೀವ್ರತೆಯುಳ್ಳವಳಾಗಿ;  ಶೋಕಿಸಲ್-ಅತ್ತರೆ, ಕಣ್ಣೀರುಗರೆದರೆ;  ಸಂತಯಿಸುವವರಾರ್-ಸಮಾಧಾನ ಪಡಿಸುವವರು ಯಾರು; ಅಂಧನೃಪತಿಯಂ-ಕುರುಡರಾಜ (ಧೃತರಾಷ್ಟ್ರ) ನನ್ನು;  ನೃಪತಿಯುಮಂ-ರಾಜ (ದುರ್ಯೋಧನ)ನನ್ನು.

            ಮಗನನ್ನು ನೋಡಬೇಕೆಂಬ ಹಂಬಲದಿಂದ ಯುದ್ಧರಂಗಕ್ಕೆ ಬಂದೂ ಪ್ರೀತಿಯ ಮಗನನ್ನು ಸಮಾಧಾನಿಸಬೇಕು.  ಅದನ್ನು ಬಿಟ್ಟಿಬಿಟ್ಟು ನೀನೇ ಅಧೀರಳಾಗಿ ದುಃಖದ ಆವೇಗದಿಂದ ಕಣ್ಣೀರು ಸುರಿಸಿದರೆ ಧೃತರಾಷ್ಟ್ರನನ್ನು, ದುರ್ಯೋಧನನನ್ನು ಯಾರು ಸಮಾಧಾನಿಸಬೇಕು? ಆದುದರಿಂದ ನಿನ್ನ ದುಃಖವನ್ನು ತಡೆಹಿಡಿದು ಅಳುವನ್ನು ನಿಲ್ಲಿಸಿ ಧೃತರಾಷ್ಟ್ರನನ್ನೂ ಮಗನಾದ ದುರ್ಯೋಧನನನ್ನು ಸಮಾಧಾನಪಡಿಸು ಎಂದು ಸಂಜಯ ಗಾಂಧಾರಿಯನ್ನು ನಯವಾಗಿ ಗದರಿಸುತ್ತಾನೆ.

            ಪ್ರಾರಬ್ಧಕರ್ಮಗಳಿಂದಾಗಿ ಧೃತರಾಷ್ಟ್ರ ಗಾಂಧಾರಿಯರು ತಮ್ಮ ಮಕ್ಕಳನ್ನು ಈಗಾಗಲೇ ಕಳೆದುಕೊಂಡು ದುಃಖಿತರಾಗಿದ್ದಾರೆ. ಈಗ ದುರ್ಯೋಧನ ಒಬ್ಬ ಉಳಿದಿರುವುದರಿಂದ ಅವನನ್ನು ಹೇಗಾದರೂ ಮಾಡಿ ಯುದ್ಧದಿಂದ ವಿಮುಖಗೊಳಿಸಿ ಉಳಿಸಿಕೊಳ್ಳಬೇಕು. ಧೃತರಾಷ್ಟ್ರ ಕುರುಡನಾಗಿರುವುದರಿಂದ, ವಯೋವೃದ್ಧನಾಗಿರುವುದರಿಂದ ಮತ್ತು ಮಕ್ಕಳ ಅಳಿವಿನ ತೀವ್ರತೆಯಿಂದ ಕಂಗಾಲಾಗಿದ್ದಾನೆ. ಈ ಸಂದರ್ಭದಲ್ಲಿ ಸಮಾಧಾನಿಸುವುದಕ್ಕೆ ಯಾರೂ ಉಳಿದಿಲ್ಲ. ಗಾಂಧಾರಿಯೊಬ್ಬಳೇ ಸಮಾಧಾನಿಸಬೇಕು. ಆದರೆ ಅವಳು ಮಕ್ಕಳನ್ನು ಕಳೆದುಕೊಂಡ ದುಃಖದ ತೀವ್ರತೆಯಲ್ಲಿ ಮಂಕಾಗಿ ಕಣ್ಣೀರು ಸುರಿಸುತ್ತಲೇ ಇದ್ದಾಳೆ. ಆಕೆಯ ಕಾರ್ಯವೈಖರಿಯನ್ನು ನೋಡಿ ಸಂಜಯ “ನೀನು ನಿನ್ನ ಪ್ರೀತಿಪಾತ್ರನಾದ ಮನಗನ್ನು ನೋಡಿ ಆತನನ್ನು ಸಮಾಧಾನಿಸುವುದಕ್ಕೆ ಯುದ್ಧರಂಗಕ್ಕೆ ಬಂದವಳು. ನೀನು ಬಂದ ಕರ್ತವ್ಯವನ್ನು ಮರೆತುಬಿಟ್ಟು ನೀನೂ ಸಾಮಾನ್ಯಳಂತೆ ಶೋಕಿಸಿ ಕಣ್ಣೀರು ಸುರಿಸತೊಡಗಿದರೆ ಧೃತರಾಷ್ಟ್ರನ ಹಾಗೂ ದುರ್ಯೋಧನನ ದುಃಖ ಇನ್ನೂ ಹೆಚ್ಚಾದೀತೇ ವಿನಾ ಕಡಿಮೆಯಾಗಲಾರದು. ಹಾಗಾಗಿ ನಿನ್ನ ದುಃಖವನ್ನು ತಡೆಹಿಡಿದು, ನಿನ್ನ ಕರ್ತವ್ಯವನ್ನು ನಿಭಾಯಿಸು ಎಂದು ಸಂಜಯ ತಿಳಿಹೇಳುತ್ತಾನೆ.

 

ಎಂಬುದುಂ ವೃದ್ಧರಾಜಂ ಕುರುರಾಜಂಗಭಿಮುಖನಾಗಿ

ಗದ್ಯದ ಅನ್ವಯಕ್ರಮ:

ಎಂಬುದುಂ ವೃದ್ಧರಾಜಂ ಕುರುರಾಜಂಗೆ ಅಭಿಮುಖನ್ ಆಗಿ

ಪದ-ಅರ್ಥ:

ಎಂಬುದುಂ-ಎಂದು(ಸಂಜಯ) ಹೇಳಿದಾಗ;  ವೃದ್ಧರಾಜಂ-ಮುದುಕನಾದ ರಾಜನು(ಧೃತರಾಷ್ಟ್ರ);  ಕುರುರಾಜಂಗೆ-ದುರ್ಯೋಧನನಿಗೆ;  ಅಭಿಮುಖನಾಗಿ-ದೃಷ್ಟಿಸಿಕೊಂಡು, ಮುಂದೆ ನಿಂತುಕೊಂಡು; 

ಎಂದು ಸಂಜಯ ಗಾಂಧಾರಿಗೆ ಹೇಳಿದಾಗ, ಧೃತರಾಷ್ಟ್ರನು ಮಗನಾದ ದುರ್ಯೋಧನನ ಮುಂದೆ ನಿಂತುಕೊಂಡು –

 

ವೀರಶತಜನನೀಗೀ ಗಾಂ

ಧಾರಿಗೆ ದುಃಖಶತ ಜನನಿವೆಸರಾಯ್ತೀಗಳ್

ಕೌರವಪತಿ ದುಃಖಮಹಾ

ಭಾರಮನಾಂತಾಯಸಕ್ಕೆ  ಗುಱಿಯಾದುದಱಿಂ  ೧೧

ಪದ್ಯದ ಅನ್ವಯಕ್ರಮ:

ವೀರ ಶತ ಜನನಿಗೆ ಈ ಗಾಂಧಾರಿಗೆ  ಈಗಳ್ ಕೌರವಪತಿ ದುಃಖ ಮಹಾಭಾರಕ್ಕೆ ಆಂತು ಆಯಾಸಕ್ಕೆ ಗುಱಿಯಾದುದಱಿಂ  ದುಃಖ ಶತ ಜನನಿ ವೆಸರ್ ಆಯ್ತು.

ಪದ-ಅರ್ಥ:

ವೀರ-ಪರಾಕ್ರಮಿಯಾದ, ಧೀರಳಾದ; ಶತಜನನಿ-ನೂರು ಮಕ್ಕಳ ತಾಯಿ(ಗಾಂಧಾರಿ);  ದುಃಖಶತಜನನಿ-ನೂರು ದುಃಖಗಳ ತಾಯಿ;  ವೆಸರಾಯ್ತು– ಹೆಸರಾಯಿತು; ಕೌರವಪತಿ-ಕುರುರಾಜ (ದುರ್ಯೋಧನ);  ದುಃಖಮಹಾಭಾರಮನ್-ದುಃಖವೆಂಬ ದೊಡ್ಡ ಹೊರೆಯನ್ನು;  ಆಂತು-ಹೊತ್ತುಕೊಂಡು;  ಆಯಾಸಕ್ಕೆ-ದಣಿವಿಗೆ;  ಗುಱಿಯಾದುದಱಿ-ಈಡಾದುದರಿಂದ.   

            ಗಾಂಧಾರಿ ಈಗಾಗಲೇ ನೂರು ಮಂದಿ ಮಕ್ಕಳನ್ನು ಹಡೆದು ವೀರ ಶತಜನನಿ ಎನಿಸಿಕೊಂಡಿದ್ದಳು. ಆದರೆ ಈಗ ದುರ್ಯೋಧನನೂ ದುಃಖವೆಂಬ ದೊಡ್ಡ ಹೊರೆಯನ್ನು ಹೊತ್ತುಕೊಂಡಿದ್ದರಿಂದ  ಗಾಂಧಾರಿ ದುಃಖ ಶತಜನನಿ ಎಂಬ ಹೆಸರಿಗೆ ಪಾತ್ರಳಾದಳು.

            ಗಾಂಧಾರಿ ನೂರು ಮಕ್ಕಳ ತಾಯಿ. ನಾಲ್ಕಾರು ಮಕ್ಕಳನ್ನು ಹಡೆದು ಸಾಕುವುದೇ ಕಷ್ಟ ಎಂದಿರುವಾಗ ಆಕೆ ನೂರ ಒಂದು(ನೂರು ಗಂಡು ಒಂದು ಹೆಣ್ಣು) ಮಕ್ಕಳನ್ನು ಹಡೆದು ವೀರ ಶತಜನನಿ ಎಂಬ ಹೆಗ್ಗಳಿಕೆಗೆ, ಗೌರವಕ್ಕೆ ಪಾತ್ರಳಾದವಳು. ಆಕೆ  ಈಗಾಗಲೇ ನೂರು ಗಂಡು ಮಕ್ಕಳಲ್ಲಿ  ತೊಂಬತ್ತೊಂಬತ್ತು ಮಂದಿ ಗಂಡುಮಕ್ಕಳನ್ನು ಕಳೆದುಕೊಂಡಿದ್ದಾಳೆ. ಮಗಳು ತನ್ನ ಗಂಡನನ್ನು ಕಳೆದುಕೊಂಡಿದ್ದಾಳೆ. ಉಳಿದಿರುವ ಒಬ್ಬ ಮಗ ದುರ್ಯೋಧನನು ತನ್ನ ನೂರು ಮಕ್ಕಳನ್ನು  ಮಾತ್ರವಲ್ಲದೆ ತನ್ನ ತೊಂಬತ್ತೊಂಬತ್ತು ಮಂದಿ ತಮ್ಮಂದಿರನ್ನೂ ಕಳೆದುಕೊಂಡು ದುಃಖದ ಅತ್ಯಂತ ದೊಡ್ಡ ಹೊರೆಯನ್ನೇ ಹೊತ್ತುಕೊಂಡು ಅಸಹನೀಯವಾದ ಆಯಾಸಕ್ಕೆ ಗುರಿಯಾಗಿದ್ದಾನೆ. ದುರ್ಯೋಧನ ಬದುಕಿದ್ದರೂ ಆತನ ದುಃಖದ ಹೊರೆ, ತನ್ನ ಇತರ ಅಳಿದ ಮಕ್ಕಳ ದುಃಖದ ಹೊರೆಗಳ ಕಾರಣದಿಂದ ಗಾಂಧಾರಿ ದುಃಖಶತಜನನಿ ಎಂಬ ಹೆಸರಿಗೆ ಪಾತ್ರಳಾಗಿದ್ದಾಳೆ. ಒಂದು ಮಗುವಿನ ಅಗಲಿಕೆಯ ದುಃಖವನ್ನೇ ಸಹಿಸುವುದಕ್ಕೆ ಕಷ್ಟವಾಗಿರುವಾಗ ಗಾಂಧಾರಿ ನೂರುದುಃಖಗಳನ್ನು ಸಹಿಸಿಕೊಳ್ಳಬೇಕಾಗಿರುವುದರಿಂದ ಆಕೆಗೆ ದುಃಖಶತಜನನಿ (ನೂರು ದುಃಖಗಳ ತಾಯಿ) ಎಂಬ ಹೆಸರು ಅನ್ವರ್ಥವಾಗಿದೆ.

 

ಭವದನುಜಕ್ಷಯಮಂ ಧಾ

ತ್ರಿವಲ್ಲಭಂ ಕಂಡು ಸಂಧಿಮಾಡಲ್ ಶೋಕಾ

ನಿವಹಂ ಬಗೆವಂ ಧರ್ಮಜ

ನವನಾ ಕೃತಕ ಪ್ರತಿಜ್ಞೆಯಂ ಕೇಳ್ದಱಿಯಾ ೧೨

ಪದ್ಯದ ಅನ್ವಯಕ್ರಮ:

ಧಾತ್ರಿವಲ್ಲಭಂ ಭವತ್ ಅನುಜಕ್ಷಯಮಂ ಕಂಡು ಶೋಕ ಅನಿವಹಂ ಧರ್ಮಜಂ ಸಂಧಿಮಾಡಲ್ ಬಗೆವಂ ಅವನಾ ಕೃತಕ ಪ್ರತಿಜ್ಞೆಯಂ ಕೇಳ್ದು ಅಱಿಯಾ

ಪದ-ಅರ್ಥ:

ಭವತ್-ನಿನ್ನ;  ಅನುಜಕ್ಷಯಮಂ-ತಮ್ಮಂದಿರ ನಾಶ;  ಧಾತ್ರಿವಲ್ಲಭಂ-ರಾಜನೇ(ದುರ್ಯೋಧನ);  ಕಂಡು-ಕಣ್ಣಾರೆ ನೋಡಿ; ಶೋಕಾನಿವಹಂ-ಅತಿಯಾದ ಶೋಕದಿಂದ ಕೂಡಿದವನಾಗಿ; ಬಗೆವಂ-ಭಾವಿಸುತ್ತಾನೆ, ಇಚ್ಛಿಸುತ್ತಾನೆ;   ಧರ್ಮಜಂ-ಧರ್ಮರಾಯನು; ಅವನ-ಧರ್ಮರಾಯನು(ವಿಭಕ್ತಿ ಪಲ್ಲಟ-ಪ್ರಥಮಾ ವಿಭಕ್ತಿಗೆ ಬದಲಾಗಿ ಷಷ್ಠಿ ವಿಭಕ್ತಿ ಪ್ರಯೋಗ)   ಕೃತಕ- ಹಾಗೆ ಮಾಡಿದ ;   ಪ್ರತಿಜ್ಞೆಯಂ-ಶಪಥವನ್ನು;  ಕೇಳ್ದಱಿಯಾ –ಕೇಳಿ ತಿಳಿದಿಲ್ಲವೆ?   

            ರಾಜನಾದ ದುರ್ಯೋಧನನೇ, ನಿನ್ನ ತಮ್ಮಂದಿರ ನಾಶವನ್ನು ಕಣ್ಣಾರೆ  ಕಂಡ ಧರ್ಮರಾಯನು ಅತಿಯಾದ ಶೋಕದಿಂದ ಕೂಡಿದವನಾಗಿ ಈಗಲೂ ನಿನ್ನೊಂದಿಗೆ ಸಂಧಿಮಾಡಲು ಇಚ್ಛಿಸುತ್ತಾನೆ. ಮಾತ್ರವಲ್ಲದೆ, ಆತನು ಮಾಡಿದ ಪ್ರತಿಜ್ಞೆಯನ್ನಾದರೂ ನೀನು ಕೇಳಿಲ್ಲವೇ?

            ದುರ್ಯೋಧನನೇ, ನೀನು ಈಗಾಗಲೇ ನಿನ್ನ ತೊಂಬತ್ತೊಂಬತ್ತು ಮಂದಿ ತಮ್ಮಂದಿರನ್ನು, ಮಕ್ಕಳನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿರುವೆ. ನಿನ್ನ ಹೆತ್ತವರೂ ತಮ್ಮ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಕಳೆದುಕೊಂಡು ದುಃಖದಲ್ಲಿದ್ದಾರೆ. ನೀನೊಬ್ಬನಾದರೂ ಉಳಿದರೆ ಅವರಿಗೂ ಸಮಾಧಾನವಾಗುತ್ತದೆ. ನೀನೂ ನಿನ್ನ ತಮ್ಮಂದಿರು ಧರ್ಮರಾಯನಿಗೂ ತಮ್ಮಂದಿರೆ. ನಿನ್ನ ತಮ್ಮಂದಿರನ್ನು ಕಳೆದುಕೊಂಡು ಅವನೇನೂ ಸಂತಸಪಡುತ್ತಿಲ್ಲ. ಅವನಿಗೂ ನಿನ್ನಷ್ಟೇ ದುಃಖವಿದೆ. ದಾಯಾದರ ಹತ್ಯೆ ಅವನಿಗೂ ಸಮ್ಮತವಿಲ್ಲ. ಹಿಂದೆಯೂ ಆತ ಸಂಧಾನಕ್ಕಾಗಿ ಕೃಷ್ಣನನ್ನು ನಿನ್ನಬಳಿಗೆ ಕಳುಹಿಸಿದವನು. ಯುದ್ಧ ಆತನಿಗೂ ಇಷ್ಟವಿಲ್ಲ. ನೀನು ಸಂಧಿಗೆ ಒಪ್ಪದಿದ್ದುದರಿಂದಲೇ ಯುದ್ಧ ಅನಿವಾರ್ಯವಾಯಿತು. ಇನ್ನೂ ಕಾಲ ಮೀರಿಲ್ಲ, ಈ ಸಂದರ್ಭದಲ್ಲಿ ನೀನೇನಾದರೂ ಸಂಧಿಮಾಡಿಕೊಳ್ಳಲು ಬಯಸುವುದಾದರೆ ಧರ್ಮರಾಯ ನಿಸ್ಸಂದೇಹವಾಗಿಯೂ ಸಿದ್ಧನಿದ್ದಾನೆ. ಇಷ್ಟಕ್ಕೂ ಯುದ್ಧಕ್ಕೆ ಮೊದಲು ಅವನು ಮಾಡಿರುವ ಶಪಥವನ್ನಾದರೂ ನೀನು ಕೇಳಿತಿಳಿದಿಲ್ಲವೇ? ಎಂದು ಸಂಜಯ ದುರ್ಯೋಧನನ ಮನಸ್ಸನ್ನು ಸಂಧಿಯ ಕಡೆಗೆ ಸೆಳೆಯುವುದಕ್ಕೆ ಪ್ರಯತ್ನಿಸುತ್ತಾನೆ.

 

ಸಮರದೊಳದೃಷ್ಟವಶದಿಂ

ಸಮವಾಯಂ ಸಾಯೆ ನಾಲ್ವರನುಜರೊಳೊರ್ವಂ

ಯಮಭವನಾತಿಥಿಯಪ್ಪಂ

ಯಮನಂದನನದಱಿನಾ ನೃಪಂಗಂ ಭಯಮೇ  ೧೩

ಪದ್ಯದ ಅನ್ವಯಕ್ರಮ:

ಸಮರದೊಳ್ ಅದೃಷ್ಟವಶದಿಂ ಸಮವಾಯಂ ನಾಲ್ವರ್ ಅನುಜರೊಳ್ ಒರ್ವಂ ಸಾಯೆ ಯಮನಂದನನ್ ಯಮಭವನ ಅತಿಥಿಯಪ್ಪಂ ಅದಱಿನ್ ಆ ನೃಪಂಗಂ ಭಯಮೇ

ಪದ-ಅರ್ಥ:

ಸಮರದೊಳ್-ಯುದ್ಧದಲ್ಲಿ;  ಅದೃಷ್ಟವಶದಿಂ-ಭಾಗ್ಯವಶದಿಂದ, ವಿಧಿಲೀಲೆಯಿಂದ;  ಸಮವಾಯಂ-ಒಂದಾಗಿರುವ, ಕೂಡಿಕೊಂಡಿರುವ;  ಸಾಯೆ-ಸತ್ತುಹೋದರೆ;  ನಾಲ್ವರ್-ನಾಲ್ಕು ಮಂದಿ;  ಅನುಜರೊಳ್-ತಮ್ಮಂದಿರಲ್ಲಿ;  ಒರ್ವಂ-ಒಬ್ಬನು;  ಯಮಭವನ-ಯಮಪುರ;  ಅತಿಥಿಯಪ್ಪಂ-ಅತಿಥಿಯಾಗುತ್ತಾನೆ;  ಯಮನಂದನ-ಧರ್ಮರಾಯ;  ಅದಱಿನ್-ಆದುದರಿಂದ;  ಆ ನೃಪಂಗಂ-ಆ ರಾಜನಿಗೆ (ಧರ್ಮರಾಯನಿಗೆ); ಭಯಮೇ-ಹೆದರಿಕೆಯೇ?

            ಒಂದಾಗಿರುವ ನಾಲ್ಕುಮಂದಿ ತಮ್ಮಂದಿರಲ್ಲಿ ವಿಧಿಲೀಲೆಯಿಂದ ಯುದ್ಧದಲ್ಲಿ ಒಬ್ಬನು ಸತ್ತರೂ ತಾನು ಯಮರಾಜನ ಅತಿಥಿಯಾಗುತ್ತೇನೆ ಎಂದು ಧರ್ಮರಾಯನು ಮಾಡಿರುವ ಪ್ರತಿಜ್ಞೆಯನ್ನು ನೀನು ಕೇಳಿ ತಿಳಿದಿಲ್ಲವೇ? ಜಯದ ವಿಚಾರದಲ್ಲಿ ಧರ್ಮರಾಯನಿಗೂ ಭಯವಿದೆ. ಹಾಗಾಗಿ ಅವನು ಸಂಧಿಗೆ ಒಪ್ಪದಿರಲಾರ.

            ತನ್ನ ನಾಲ್ಕುಮಂದಿ ತಮ್ಮಂದಿರ ಯೋಗಕ್ಷೇಮದ ಬಗ್ಗೆ ಅಪರಿಮಿತ ಕಾಳಜಿಯಿರುವ ಧರ್ಮರಾಯನಿಗೂ ಕುರುಕ್ಷೇತ್ರ ಯುದ್ಧದ ಬಗ್ಗೆ ಜಯದ ವಿಚಾರದಲ್ಲಿ ಭಯ ಇದ್ದಿತೆಂದು ತೋರುತ್ತದೆ. ಹಾಗಾಗಿಯೇ  ಆತ ಯುದ್ಧಪ್ರಾರಂಭಕ್ಕೆ ಮೊದಲೇ  “ನನ್ನ ನಾಲ್ವರು ತಮ್ಮಂದಿರಲ್ಲಿ ದುರಾದೃಷ್ಟದಿಂದ ಯುದ್ಧದಲ್ಲಿ ಒಬ್ಬ ತಮ್ಮ ಸತ್ತರೂ ತಾನು ಬದುಕಿ ಉಳಿಯಲಾರೆ” ಎಂದು ಘೋರವಾದ ಪ್ರತಿಜ್ಞೆಯನ್ನು ಮಾಡಿದ್ದಾನೆ. ನೀನು ಯುಕ್ತಿಯಲ್ಲಿ ಭೀಮನಿಗಿಂತಲೂ ಮಿಗಿಲಾಗಿರುವೆ. ಆತನಿಗೂ ಯುದ್ಧದಲ್ಲಿನ ಜಯದ ವಿಚಾರದಲ್ಲಿ, ತನ್ನ ತಮ್ಮಂದಿರನ್ನು ಸಾವಿನಿಂದ ರಕ್ಷಿಸಿಕೊಳ್ಳುವ ವಿಚಾರದಲ್ಲಿ  ಭಯ ಇದ್ದೇ ಇದೆ ಎಂದಾಯಿತು. ಆದುದರಿಂದ ಈಗಲೂ ಧರ್ಮರಾಯ ಸಂಧಿಗೆ ಒಪ್ಪಿಕೊಳ್ಳದೆ ಇರಲಾರ. ನೀನು ಮಾತ್ರ ಸಂಧಿಗೆ ಒಪ್ಪಿಕೊಳ್ಳಬೇಕು ಎಂದು ಧೃತರಾಷ್ಟ್ರ ದುರ್ಯೋಧನನಲ್ಲಿ ಬೇಡಿಕೊಳ್ಳುತ್ತಾನೆ.

 

ಎಂದು ನುಡಿದ ನರೇಂದ್ರನ ನುಡಿಗೆ ಸಂಜಯನೊಡಂಬಟ್ಟು

ಗದ್ಯದ ಅನ್ವಯಕ್ರಮ:

ಎಂದು ನುಡಿದ ನರೇಂದ್ರನ ನುಡಿಗೆ ಸಂಜಯನ್ ಒಡಂಬಟ್ಟು

ಪದ-ಅರ್ಥ:

ನರೇಂದ್ರ-ಧೃತರಾಷ್ಟ್ರ;  ನುಡಿ-ಮಾತು;  ಒಡಂಬಟ್ಟು-ಒಪ್ಪಿಗೆಯನ್ನು ಸೂಚಿಸಿ

ಎಂದು ಹೇಳಿದ ಧೃತರಾಷ್ಟ್ರನ ಮಾತನ್ನು ಸಂಜಯನು ಒಪ್ಪಿಗೆಯನ್ನು ಸೂಚಿಸಿ

 

ನೃಪಪತಿಯುಕ್ತಮಿದಂ ನೀಂ

ನೃಪ ಕಯ್ಕೊಳ್ ನಿನ್ನ ತಂದೆಯೆಂದುದನೆನೆ ಭೂ

ಮಿಪನೆಂದಂ  ನಿಮ್ಮಯ ಪೂ

ರ್ವಪಕ್ಷಮೆಮಗಾದುದೇ ವಲಂ ಸಿದ್ಧಾಂತಂ  ೧೪

ಪದ್ಯದ ಅನ್ವಯಕ್ರಮ:

ನೃಪಪತಿ ಯುಕ್ತಂ ನಿನ್ನ ತಂದೆ ಎಂದುದನ್ ನೀ ಇದಂ ಕಯ್ಕೊಳ್ ಎನೆ  ಭೂಮಿಪನ್, ಎಮಗೆ ನಿಮ್ಮಯ ಪೂರ್ವ ಪಕ್ಷಂ ಆದುದು,  ಅದೇ ಸಿದ್ಧಾಂತಂ ವಲಂ ಎಂದಂ

ಪದ-ಅರ್ಥ:

ನೃಪಪತಿ-ರಾಜನೇ (ದುರ್ಯೋಧನ);  ಯುಕ್ತಮಿದಂ-ಇದು ಸಮರ್ಪಕವಾದುದು;  ನೀ ಇದಂ ಕಯ್ಕೊಳ್-ನೀನು ಇದನ್ನು ಕೈಗೊಳ್ಳು;  ಎನೆ-ಎಂದು (ಸಂಜಯ) ಹೇಳಿದಾಗ; ಭೂಮಿಪಂ-ರಾಜ (ದುರ್ಯೋಧನ); ಎಂದಂ-ಹೀಗೆ ಹೇಳಿದನು;  ಪೂರ್ವಪಕ್ಷ-ಹಿಂದಿನ ನಿರ್ಣಯ;  ಎಮಗೆ-ನನಗೆ;  ಆದುದು-ಒಪ್ಪಿತವಾಯಿತು;  ವಲಂ-ನಿಸ್ಸಂದೇಹವಾಗಿ;  ಸಿದ್ಧಾಂತಂ-ಹಿಂದಿನ ನಿರ್ಣಯಕ್ಕೆ ಪೂರಕವಾಗಿ ಕೈಗೊಳ್ಳುವ ತೀರ್ಮಾನ. 

            ರಾಜನಾದ ದುರ್ಯೋಧನನೇ, ನಿನ್ನ ತಂದೆ ಹೇಳಿದುದೇ ಸಮರ್ಪಕವಾಗಿದೆ. ಅವರ ಉಪದೇಶವನ್ನು ನೀನು ಸ್ವೀಕರಿಸು ಎಂದು ಸಂಜಯ ಹೇಳಿದಾಗ, ದುರ್ಯೋಧನನು ನಿಸ್ಸಂದೇಹವಾಗಿ ನಿಮ್ಮ ಪೂರ್ವಪಕ್ಷವೇ ನನಗೆ ಒಪ್ಪಿತವಾಯಿತು ಎಂದನು.

            ಪ್ರತಿಪಕ್ಷದವನ ಆಕ್ಷೇಪಣೆಯನ್ನು ಪೂರ್ವಪಕ್ಷವೆನ್ನುತ್ತಾರೆ. ಆ ಆಕ್ಷೇಪಣೆಗೆ ಪರಿಹಾರವನ್ನು ಕಂಡುಕೊಂಡು ಕೊನೆಗೆ ಕೈಗೊಳ್ಳುವ ನಿರ್ಣಯಕ್ಕೆ ಸಿದ್ಧಾಂತವೆನ್ನುತ್ತಾರೆ. ಧೃತರಾಷ್ಟ್ರ, ಗಾಂಧಾರಿ ಹಾಗೂ ಸಂಜಯ ಮೊದಲಾದವರು ಈಗ ಪಾಂಡವರೊಂದಿಗೆ ಸಂಧಿಮಾಡಿಕೊಳ್ಳುವುದಕ್ಕೆ ಯಾವುದೆಲ್ಲ ಅನುಕೂಲವಾಗಿದೆ ಎಂದು ಕಾರಣಗಳನ್ನು ಕೊಡುತ್ತಿದ್ದಾರೋ ಅವೇ ಕಾರಣಗಳು ಪಾಂಡವರೊಂದಿಗೆ  ಸಂಧಿಮಾಡಕೂಡದು ಎಂಬ ತನ್ನ ನಿರ್ಣಯಕ್ಕೆ ಪೂರಕವಾಗಿವೆ ಎಂಬುದು ದುರ್ಯೋಧನನ ವಾದ. ಧರ್ಮರಾಯ ತನ್ನ ನಾಲ್ವರು ತಮ್ಮಂದಿರಲ್ಲಿ ಒಬ್ಬ ಯುದ್ಧದಲ್ಲಿ ಸತ್ತರೂ ತಾನು ಯುದ್ಧವನ್ನು ನಿಲ್ಲಿಸುತ್ತೇನೆ ಎಂದಿರುವಾಗ ಆತನಿಗೆ ಯುದ್ಧದಲ್ಲಿ ತನ್ನ ತಮ್ಮಂದಿರು ಅಥವಾ ಅವರಲ್ಲಿ ಒಬ್ಬ ಸಾಯಬಹುದೆಂಬ ಹೆದರಿಕೆ ಇದ್ದೇ ಇದೆ ಎಂದಾಯಿತು. ಹಾಗಾಗಿ ಆತ ಸಂಧಿಗೆ ಒಪ್ಪಿಕೊಳ್ಳಬಹುದು. ಇನ್ನೊಂದೆಡೆ ತಾನು ತನ್ನ ತಮ್ಮಂದಿರಲ್ಲಿ ಈಗಾಗಲೇ ತೊಂಬತ್ತೊಂಬತ್ತು ಮಂದಿಯನ್ನು ಕಳೆದುಕೊಂಡಾಗಿದೆ. ಧರ್ಮರಾಯನೇ ತನ್ನ ಒಬ್ಬ ತಮ್ಮನ ಸಾವನ್ನು ಸಹಿಸಿಕೊಳ್ಳಲಾರ ಎಂದಾದರೆ ತಾನು ತನ್ನ ತೊಂಬತ್ತೊಂಬತ್ತು ಮಂದಿ ತಮ್ಮಂದಿರ ಸಾವನ್ನು, ಅದೂ ಅವರೆಲ್ಲರ ಸಾವಿಗೆ ಭೀಮನೊಬ್ಬನೇ ಕಾರಣನಾಗಿರುವಾಗ  ಹೇಗೆ ಸಹಿಸಿಕೊಳ್ಳಲಿ? ಹಿಂದೆ ತಾನು ಸಂಧಿಯನ್ನು ತಿರಸ್ಕರಿಸಿ ಯುದ್ಧವನ್ನೇ ತೀರ್ಮಾನಿಸಿದಾಗ ಧೃತರಾಷ್ಟ್ರಾದಿಗಳು ಅದನ್ನೇ ಪುರಸ್ಕರಿಸಿದವರು. ಆದರೆ ಅವರೇ ಈಗ ಆ ನಿರ್ಣಯಕ್ಕೆ  ವಿರುದ್ಧವಾಗಿ ನಡೆದುಕೊಳ್ಳಲು ಸೂಚಿಸುವುದಾದರೆ ತನಗೆ ಅದು ಸಮ್ಮತವಲ್ಲ, ತನ್ನ ಹಿಂದಿನ ನಿರ್ಣಯವೇ ತನಗೆ ಸಮ್ಮತ ಎಂದು ದುರ್ಯೋಧನ ಸ್ಪಷ್ಟಪಡಿಸುತ್ತಾನೆ.

 

ತನ್ನೊಡವುಟ್ಟಿದರ್ ಪೆಸರ ನಾಲ್ವರೊಳೊರ್ವರುಮಿಲ್ಲದಿರ್ದೊಡಂ

ತನ್ನಸುವಂ ನಿವೇದಿಸುವನಗ್ನಿಗೆ ಧರ್ಮತನೂಜನೆಂದೊಡಾ

ನೆನ್ನೊಡವುಟ್ಟಿದರ್ ಪೆಸರ ನೂರ್ವರೊಳೊರ್ವರುಮಿಲ್ಲ ಬಾೞ್ವೆನೆಂ

ಬೆನ್ನೞಿಯಾಸೆಯಂ ಬಿಸುಟೆನಿನ್ನವರಾದುದನಾಗದಿರ್ಪೆನೇ  ೧೫

ಪದ್ಯದ ಅನ್ವಯಕ್ರಮ:

ಧರ್ಮ ತನೂಜನ್, ತನ್ನ ಒಡಹುಟ್ಟಿದ ಪೆಸರ ನಾಲ್ವರೊಳ್ ಒರ್ವರುಂ ಇಲ್ಲದೆ ಇರ್ದೊಡಂ ತನ್ನ ಅಸುವನ್ ಅಗ್ನಿಗೆ ನಿವೇದಿಸುವನ್ ಎಂದೊಡೆ,  ಆನ್ ಎನ್ನ ಒಡಹುಟ್ಟಿದ ಪೆಸರ ನೂರ್ವರೊಳ್ ಒರ್ವರುಂ ಇಲ್ಲ, ಬಾೞ್ವೆನೆಂಬ ಎನ್ನ ಅೞಿಯಾಸೆಯಂ ಬಿಸುಟೆಂ ಇನ್ನು ಅವರ್ ಆದುದನ್ ಆಗದೆ ಇರ್ಪೆನೇ.

ಪದ-ಅರ್ಥ:

ತನ್ನೊಡವುಟ್ಟಿದರ್-ತನ್ನ ಜೊತೆಯಲ್ಲಿ ಹುಟ್ಟಿದವರು;  ಪೆಸರ-ಹೆಸರುವಾಸಿಯಾದ, ಪ್ರಸಿದ್ಧರಾದ;  ಇಲ್ಲದಿರ್ದೊಡಂ-ಸತ್ತುಹೋದರೆ;  ತನ್ನಸುವಂ-ತನ್ನ ಪ್ರಾಣವನ್ನು;  ನಿವೇದಿಸುವನ್-ಸಮರ್ಪಿಸುತ್ತಾನೆ;   ಅಗ್ನಿ-ಬೆಂಕಿ;  ಧರ್ಮತನೂಜ-ಧರ್ಮರಾಯ; ಎಂದೊಡೆ-ಎಂದಿರುವಾಗ, ಎಂದು ಹೇಳಿರುವಾಗ;  ಆನೆನ್ನ-ನಾನು ನನ್ನ;  ನೂರ್ವರೊಳ್-ನೂರು ಮಂದಿಯಲ್ಲಿ;  ಒರ್ವರುಮಿಲ್ಲ-ಒಬ್ಬನೂ ಉಳಿದಿಲ್ಲ;  ಬಾೞ್ವೆನೆಂಬ್-ಬಾಳುತ್ತೇನೆ ಎಂಬ;    ಅೞಿಯಾಸೆ-ಕೆಟ್ಟ ಆಸೆ;  ಬಿಸುಟೆನ್-ಬಿಟ್ಟುಬಿಟ್ಟೆನು;  ಅವರಾದುದನ್– ಅವರು (ತಮ್ಮಂದಿರು) ಸಾವನ್ನು ತಂದುಕೊಂಡಂತೆ;  ಆಗದಿರ್ಪೆನೇ-ಆಗದೇ ಇರುವೆನೇ, (ಸಾವನ್ನು) ತಂದುಕೊಳ್ಳದಿರುವೆನೇ.

            ಧರ್ಮರಾಯನು ತನ್ನ ಜೊತೆಯಲ್ಲಿ ಹುಟ್ಟಿದ, ಜೊತೆಗೆ ಪ್ರಸಿದ್ಧರೂ ಆದ ನಾಲ್ಕು ಮಂದಿ  ತಮ್ಮಂದಿರಲ್ಲಿ ಒಬ್ಬ ಅಳಿದರೂ ತಾನು ತನ್ನ ಪ್ರಾಣವನ್ನು ಅಗ್ನಿಗೆ ಸಮರ್ಪಿಸುತ್ತಾನೆ ಎನ್ನುವುದಾದರೆ, ನಾನು ಈಗಾಗಲೇ ನನ್ನ ಜೊತೆಯಲ್ಲಿ ಹುಟ್ಟಿದ, ಪ್ರಸಿದ್ಧರೂ ಆದ ತೊಂಬತ್ತೊಂಬತ್ತು ಮಂದಿ ತಮ್ಮಂದಿರನ್ನು ಯುದ್ಧದಲ್ಲಿ ಕಳೆದುಕೊಂಡಿದ್ದೇನೆ. ಅವರೆಲ್ಲರನ್ನೂ ಕಳೆದುಕೊಂಡು ನಾನು ಬಾಳಬೇಕೆಂಬ ಕೆಟ್ಟ ಆಸೆ ನನಗಿಲ್ಲ. ನನ್ನ ತಮ್ಮಂದಿರು ಯುದ್ಧರಂಗದಲ್ಲಿ ಹೊಂದಿದ ಗತಿಯನ್ನು  ನಾನೂ ಹೊಂದದೆ ಇರುವುದಕ್ಕೆ ಸಾಧ್ಯವೇ? ಎಂದು ದುರ್ಯೋಧನನು ಸ್ಪಷ್ಟಪಡಿಸುತ್ತಾನೆ.

            ಧರ್ಮರಾಯನಿಗೆ ಒಡಹುಟ್ಟಿದವರು ನಾಲ್ವರು ಮಾತ್ರ. ಆ ನಾಲ್ವರನ್ನೂ ಆತ ಬಹಳ ಜತನದಿಂದ ಕಾಪಾಡಿಕೊಂಡು ಬಂದಿದ್ದಾನೆ. ಆ ನಾಲ್ಕೂ ಮಂದಿ ಲೋಕಪ್ರಸಿದ್ಧರೂ ಹೌದು. ಅವರಲ್ಲಿ ಒಬ್ಬ ಸತ್ತರೂ ತಾನು ಬದುಕಿ ಉಳಿಯಲಾರೆ ಎಂದು ಧರ್ಮರಾಯನೇ ನಿರ್ಧರಿಸಿದ್ದಾನೆ. ಆದರೆ ತನಗೆ ತೊಂಬತ್ತೊಂಬತ್ತು ಮಂದಿ ಒಡಹುಟ್ಟಿದವರು. ಒಬ್ಬನೂ ಈಗ ಉಳಿದಿಲ್ಲ. ಧರ್ಮರಾಯನಾದರೋ ತನ್ನ ಅವರೆಲ್ಲರನ್ನೂ ಉಳಿಸಿಕೊಂಡಿದ್ದಾನೆ. ಆದರೆ ತಾನು ಎಲ್ಲರನ್ನೂ ಕಳೆದುಕೊಂಡಿದ್ದೇನೆ. ಈಗ ಎಲ್ಲರನ್ನೂ ಕಳೆದುಕೊಂಡಿರುವ ತಾನು ಎಲ್ಲರನ್ನೂ ಉಳಿಸಿಕೊಂಡಿರುವ ಧರ್ಮರಾಯನೊಂದಿಗೆ ಸಂಧಿಮಾಡಿಕೊಳ್ಳಲು ಸಾಧ್ಯವೇ? ದುರ್ಯೋಧನ ತಮ್ಮಂದಿರೆಲ್ಲರನ್ನೂ ಬಲಿಕೊಟ್ಟು ಕೊನೆಯಲ್ಲಿ ಬದುಕುವ ಆಸೆಯಿಂದ ಸಂಧಿಮಾಡಿಕೊಂಡ ಎಂದು ಲೋಕದ ಜನ ಆಡಿಕೊಳ್ಳುವುದಿಲ್ಲವೇ? ಅಲ್ಲದೆ, ಹಾಗೆ ತಮ್ಮಂದಿರನ್ನು ಬಲಿಕೊಟ್ಟು ಬದುಕಬೇಕೆಂಬ ಸ್ವಾರ್ಥವಾಗಲೀ, ಕೆಟ್ಟ ಆಸೆಯಾಗಲೀ ತನ್ನಲ್ಲಿಲ್ಲ. ತನ್ನ ತಮ್ಮಂದಿರು ನನಗಾಗಿ ಯುದ್ಧಮಾಡಿ ಪ್ರಾಣಬಿಟ್ಟರು. ನಾನಾದರೂ ನನಗಾಗಿಯೇ ಹೋರಾಡಿ ಪ್ರಾಣಬಿಡುತ್ತೇನೆಯೇ ವಿನಾ ಬದುಕಿಗೆ ಆಸೆಪಟ್ಟು ಧರ್ಮರಾಯನೊಂದಿಗೆ ಎಂದಿಗೂ ಸಂಧಿಮಾಡಿಕೊಳ್ಲಲಾರೆ ಎಂದು ದುರ್ಯೋಧನ ಸ್ಪಷ್ಟಪಡಿಸುತ್ತಾನೆ.

 

ಸಾಧಿಸುವೆಂ ಫಲ್ಗುಣನಂ

ಸಾಧಿಸುವೆಂ ಪವನಸುತನ ಬಸಿಱಿಂ ಹಾ ಕ

ರ್ಣಾ ದುಶ್ಶಾಸನ ತೆಗೆವೆಂ

ನಿರ್ದೋಷಿ ಬೞಿಕ್ಕೆ ಯಮಜನೊಳ್ ಪುದುವಾೞ್ವೆಂ  ೧೬

ಪದ್ಯದ ಅನ್ವಯಕ್ರಮ:

ಹಾ ಕರ್ಣಾ ಫಲ್ಗುಣನಂ ಸಾಧಿಸುವೆಂ, ದುಶ್ಶಾಸನ ಪವನಸುತನ ಸಾಧಿಸುವೆಂ, ಬಸಿಱಿಂ ತೆಗೆವೆಂ, ಬೞಿಕ್ಕೆ ನಿರ್ದೋಷಿ ಯಮಜನೊಳ್ ಪುದುವಾೞ್ವೆಂ

ಪದ-ಅರ್ಥ:

ಸಾಧಿಸುವೆಂ-ಹೋರಾಡುತ್ತೇನೆ;  ಫಲ್ಗುಣನಂ-ಅರ್ಜುನನನ್ನು; ಪವನಸುತನ-ಭೀಮನನ್ನು; ಬಸಿಱಿಂ ತೆಗೆವೆಂ– (ಅವರ) ಹೊಟ್ಟೆಯಿಂದ  ಹೊರತೆಗೆಯುತ್ತೇನೆ;  ನಿರ್ದೋಷಿ-ದೋಷವಿಲ್ಲದವನು (ಧರ್ಮರಾಯ);  ಯಮಜನೊಳ್-ಧರ್ಮರಾಯನೊಂದಿಗೆ;  ಪುದುವಾೞ್ವೆಂ-ಕೂಡುಬಾಳುತ್ತೇನೆ. 

            ಅರ್ಜುನ ಹಾಗೂ ಭೀಮರೊಂದಿಗೆ ಯುದ್ಧಮಾಡುತ್ತೇನೆ, ಅವರಿಬ್ಬರನ್ನೂ ಕೊಂದು ಅವರ ಹೊಟ್ಟೆಯಿಂದ ಕರ್ಣ ಹಾಗೂ ದುಶ್ಶಾಸನರನ್ನು ಹೊರತೆಗೆಯುತ್ತೇನೆ. ಇದಿಷ್ಟನ್ನು ಸಾಧಿಸಿ ಅನಂತರ ನಿಮ್ಮ ಅಭಿಲಾಷೆಯಂತೆ ನಿರ್ದೋಷಿ ಎನಿಸಿರುವ ಧರ್ಮರಾಯನೊಂದಿಗೆ ಕೂಡಿಬಾಳುತ್ತೇನೆ ಎಂದು ದುರ್ಯೋಧನ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಾನೆ.

            ತನ್ನ ಆತ್ಮೀಯ ಸ್ನೇಹಿತನಾದ ಕರ್ಣ ಹಾಗೂ ಪ್ರೀತಿಪಾತ್ರನಾದ ತಮ್ಮ ದುಶ್ಶಾಸನನನ ಸಾವಿನ ಸೇಡು ತನ್ನಲ್ಲಿ ಜೀವಂತವಾಗಿರುವರೆಗೆ ಪಾಂಡವರೊಂದಿಗೆ ಸಂಧಿ ಹೇಗೆ ಸಾಧ್ಯ? ಕರ್ಣ ಹಾಗೂ ದುಶ್ಶಾಸನರು ತನಗೆ ಎರಡು ತೋಳುಗಳಿದ್ದಂತೆ. ಅವರಿಬ್ಬರನ್ನೂ ಅರ್ಜುನ ಹಾಗೂ ಭೀಮಸೇನರು ಅಸಹಜವಾಗಿಯೇ  ಕೊಂದುಹಾಕಿದಾರೆ. ಅವರ ಸಾವು ತನ್ನನ್ನು ಪದೇ ಪದೇ ಕಾಡುತ್ತಿದೆ, ಮಾತ್ರವಲ್ಲದೆ, ಮತ್ತೆ ಮತ್ತೆ ತನ್ನಲ್ಲಿ ಸೇಡಿನ ಭಾವನೆಯನ್ನು ಪ್ರಜ್ವಲಿಸುತ್ತಿದೆ. ಅವರಿಬ್ಬರ ಸಾವನ್ನು ಕಣ್ಣಾರೆ ಕಂಡೂ ಪಾಂಡವರೊಂದಿಗೆ ಸಂಧಿ ಸಾಧ್ಯವೇ? ಮೊದಲು ಕರ್ಣನ ಸಾವಿಗೆ ಕಾರಣನಾದ ಅರ್ಜುನನೊಂದಿಗೆ ಹೋರಾಡಿ ಆತನನ್ನು ಕೊಂದು ಆತನ ಹೊಟ್ಟೆಯಿಂದ ಕರ್ಣನನ್ನು ಹೊರತೆಗೆಯಬೇಕು. ಅನಂತರ ಭೀಮನೊಂದಿಗೆ ಯುದ್ಧಮಾಡಿ ದುಶ್ಶಾಸನನ್ನು ಆತ ಕೊಂದಂತೆಯೇ ಭೀಮನನ್ನೂ ತಾನು ಕೊಂಡು ಆತನ ಹೊಟ್ಟೆಯಿಂದ ದುಶ್ಶಾಸನನ್ನು ಹೊರತೆಗೆಯಬೇಕು. ಆಗ ತನಗೆ ತುಸು ಸಮಾಧಾನವೂ ಆಗುತ್ತದೆ. ತನ್ನ ಮನಸ್ಸಿನ ಬೇಗುದಿಯೂ ಕಡಿಮೆಯಾಗುತ್ತದೆ. ಅನಂತರ ಬೇಕಾದರೆ ಧರ್ಮರಾಯನೊಂದಿಗೆ ಸಂಧಿ ಮಾಡಿಕೊಂಡು ಆತನ ಜೊತೆಯಾಗಿ ಬಾಳುತ್ತೇನೆ ಎಂದು ದುರ್ಯೋಧನ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸುತ್ತಾನೆ.

 

ಧರೆಯಂ ಪಚ್ಚಾಳ್ದಿರ್ ಪಾಂ

ಡುರಾಜನುಂ ನೀನುಮದನೆ ಕೈತವದಿಂದ

ಯ್ವರ ಕಯ್ಯೊಳೆೞೆದುಕೊಂಡುಂ

ಕುರುರಾಜಂ ಮತ್ತಮವರ್ಗೆ ಪುದುವಿತ್ತಪನೇ  ೧೭

ಪದ್ಯದ ಅನ್ವಯಕ್ರಮ:

ಪಾಂಡುರಾಜನುಂ ನೀನುಂ ಧರೆಯಂ ಪಚ್ಚಿ ಆಳ್ದಿರ್, ಅದನೆ ಕುರುರಾಜಂ ಕೈತವದಿಂದ ಐವರ ಕೈಯೊಳ್ ಎೞೆದುಕೊಂಡುಂ ಮತ್ತಂ ಅವರ್ಗೆ ಪುದುವಿತ್ತಪನೇ

ಪದ-ಅರ್ಥ:

ಧರೆಯಂ-ರಾಜ್ಯವನ್ನು;  ಪಚ್ಚಾಳ್ದಿರ್-ಹಂಚಿಕೊಂಡು ಆಳಿದಿರಿ;   ಪಾಂಡುರಾಜ-ಪಾಂಡವರ ತಂದೆ; ನೀನುಂ-ಧೃತರಾಷ್ಟ್ರ;  ಅದನೆ-ಆ ರಾಜ್ಯವನ್ನೇ;  ಕೈತವದಿಂದ-ಮೋಸದಿಂದ;  ಐವರ –ಐದು ಮಂದಿಯ (ಐದು ಮಂದಿ ಪಾಂಡವರು);  ಎಳೆದುಕೊಂಡು-ಕಿತ್ತುಕೊಂಡು;  ಕುರುರಾಜಂ-ಈ ದುರ್ಯೋಧನನು;  ಮತ್ತಂ-ಪುನ: , ಮತ್ತೆ;  ಅವರ್ಗೆ-ಪಾಂಡವರಿಗೆ;  ಪುದುವಿತ್ತಪನೇ-ಹಿಂದಿರುಗಿಸುವನೇ;

            ಹಿಂದೆ ನೀನೂ ಪಾಂಡುರಾಜನೂ ಭೂಮಿಯನ್ನು ಪಾಲುಮಾಡಿಕೊಂಡು ಆಳಿದಿರಿ. ಪಂಚಪಾಂಡವರ ವಶದಲ್ಲಿದ್ದ  ಅದನ್ನು ನಾನು ಮೋಸದಿಂದ ಕಿತ್ತುಕೊಂಡೆ. ಈಗ ಅದನ್ನು ಅವರಿಗೆ ಹಿಂದಿರುಗಿಸಿ ಪಾಂಡವರೊಂದಿಗೆ ಕೂಡಿಬಾಳುವುದಕ್ಕೆ ಸಾಧ್ಯವೇ? ಎಂದಿಗೂ ಸಾಧ್ಯವಿಲ್ಲ ಎಂದು ದುರ್ಯೋಧನ ತನ್ನ ನಿಲುವನ್ನು ಪ್ರಕಟಿಸುತ್ತಾನೆ.

            ಧೃತರಾಷ್ಟ್ರ ಕುರುಡನಾದುದರಿಂದ ರಾಜ್ಯದ ಅಧಿಕಾರ ಪಾಂಡುರಾಜನ ಪಾಲಾಯಿತು. ಆತ ಶಾಪಗ್ರಸ್ತನಾದ ಮೇಲೆ ಅನಾಯಾಸವಾಗಿ ಅದೆಲ್ಲವೂ ನಿನ್ನ ವಶಕ್ಕೆ ಬಂತು. ಮತ್ತೆ ಪಾಲಾಗಿ ಅರ್ಧರಾಜ್ಯ ಪಾಂಡವರ ಪಾಲಾಯಿತು. ಪಾಂಡವರ ಕೈಯಿಂದ ಅದೆಲ್ಲವನ್ನೂ ಸೆಳೆದುಕೊಳ್ಳುವುದಕ್ಕೆ ತಾನು ಸಾಕಷ್ಟು ಮೋಸ, ವಂಚನೆಗಳ ಕಾರ್ಯಗಳನ್ನು ಎಸಗುತ್ತ ಹಲವು ವರ್ಷಗಳ ಕಾಲ ಕಾಯಬೇಕಾಯಿತು.  ಅಂತೂ ಮೋಸದಿಂದ ಪಾಂಡವರ ಪಾಲಿನ ಸಮಸ್ತ ರಾಜ್ಯ, ಬೊಕ್ಕಸ, ಸಂಪತ್ತೆಲ್ಲವನ್ನೂ ನಾನು ನನ್ನ ಕೈವಶಮಾಡಿಕೊಂಡೆ. ಅವರ ಪಾಲಿನ ರಾಜ್ಯವನ್ನು ಸೆಳೆದುಕೊಳ್ಳುವುದಕ್ಕೆ  ಇಷ್ಟೆಲ್ಲ ಪಾಡುಪಟ್ಟಮೇಲೆ ಈಗ ಅದೆಲ್ಲವನ್ನೂ ಪಾಂಡವರಿಗೆ ಮರಳಿ ಕೊಡುವುದಕ್ಕೆ ಸಾಧ್ಯವೇ? ಪಾಂಡವರೊಂದಿಗೆ ಮತ್ತೆ ಕೂಡಿಬಾಳುವುದಕ್ಕೆ ಸಾಧ್ಯವೇ? ಧೃತರಾಷ್ಟ್ರಾದಿಗಳ ಮಾತು ದುರ್ಯೋಧನನಿಗೆ ಅಸಹಜವೆನಿಸುತ್ತದೆ. ಅಲ್ಲದೆ ಅದು ತನ್ನ ಘನತೆಗೆ, ಸ್ವಾಭಿಮಾನಕ್ಕೆ ಕುಂದೆನಿಸುತ್ತದೆ. ಹಾಗಾಗಿಯೇ ದುರ್ಯೋಧನ ಸಂಧಿಯ ಮಾತನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತಾನೆ.

 

ಆಂ ಮಗನೆನಾಗೆ  ಧರ್ಮಜ

ನೇಂ ಮಗನಲ್ಲನೆ ಬೞಿಕ್ಕೆ ನೀಮುಂ ತಾಮುಂ

ನಿಮ್ಮೊಳ್ ನೇರ್ಪಡುಗಿಡದೆ ಸು

ಖಮ್ಮುನ್ನಿನ ತೆಱದೆ ಬಾೞ್ವುದಾಂ ಬೆಸಕಯ್ಯೆಂ  ೧೮

ಪದ್ಯದ ಅನ್ವಯಕ್ರಮ:

ಆಂ ಮಗನೆನಾಗೆ ಧರ್ಮಜನ್  ಏಂ ಮಗನಲ್ಲನೆ, ಬೞಿಕ್ಕೆ ನಿಮ್ಮೊಳ್ ನೇರ್ಪಡು ಕಿಡದೆ ನೀಮುಂ ತಾಮುಂ ಮುನ್ನಿನ ತೆಱದೆ ಸುಖಂ ಬಾೞ್ವುದು, ಆಂ ಬೆಸಕೆಯ್ಯೆಂ

ಪದ-ಅರ್ಥ:

ಆಂ-ನಾನು;  ಮಗನೆನಾಗೆ-ಮಗನೇ ಆಗಿರುವಾಗ;  ಧರ್ಮಜನ್-ಧರ್ಮರಾಯನು;  ಏಂ-ಏನು;  ಮಗನಲ್ಲನೆ-ಮಗನಲ್ಲವೇ;  ಬೞಿಕ್ಕೆ-ಇನ್ನು ಮುಂದಕ್ಕೆ;  ನೀಮುಂ-ನೀವೂ(ಧೃತರಾಷ್ಟ್ರ, ಗಾಂಧಾರಿ);  ತಾಮುಂ-ಅವರು(ಪಾಂಡವರು);  ನಿಮ್ಮೊಳ್-ನಿಮ್ಮೊಳಗೆ;  ನೇರ್ಪಡುಗಿಡದೆ-ಹೊಂದಾಣಿಕೆ ಕೆಡದ ರೀತಿಯಲ್ಲಿ;  ಸುಖಂ ಬಾೞ್ವುದು-ಸುಖವಾಗಿ ಬಾಳಿರಿ;  ಮುನ್ನಿನ ತೆಱದೆ-ಈ ಹಿಂದಿನಂತೆ;   ಬೆಸಕಯ್ಯೆಂ-(ನಿಮ್ಮ) ಆಜ್ಞೆಯನ್ನು ಅಂಗೀಕರಿಸಲಾರೆ.

            ನಾನು ನಿಮಗೆ ಮಗನಾಗಿರುವಂತೆಯೇ ಧರ್ಮರಾಯನೂ ನಿಮಗೆ ಮಗನಲ್ಲವೇ? ಇಂದಿನ ಯುದ್ಧದ ಬಳಿಕ ನೀವೂ  ಪಾಂಡವರೂ ಕೂಡಿಕೊಂಡು ಈ ಹಿಂದಿನ ರೀತಿಯಲ್ಲಿಯೇ  ಹೊಂದಾಣಿಕೆಯಿಂದ ಸುಖವಾಗಿ ಬಾಳಿರಿ. ಆದರೆ, ಈಗ ಧರ್ಮರಾಯನೊಂದಿಗೆ ಸಂಧಿಮಾಡಿಕೊಳ್ಳಬೇಕೆಂಬ ನಿಮ್ಮ ಆಜ್ಞೆಯನ್ನು ನಾನು ಅಂಗೀಕರಿಸಲಾರೆ.

            ನೀವೂ ಪಾಂಡುರಾಜನೂ ಅಣ್ಣತಮ್ಮಂದಿರು. ನಾವು ನಿಮಗೆ ಮಕ್ಕಳಾಗಿರುವಂತೆಯೇ ಸಹೋದರನಾದ ಪಾಂಡುರಾಜನ ಮಕ್ಕಳಾದ ಪಾಂಡವರೂ ನಿಮಗೆ ಮಕ್ಕಳಲ್ಲೆವೇ? ಇಂದಿನ ಯುದ್ಧದಲ್ಲಿ ನಾನು ಅಳಿದರೂ ಅವರು ನಿಮಗೆ ಮಕ್ಕಳಾಗಿಯೇ ಇರುತ್ತಾರೆ. ಹಿಂದೆ ಭೂಮಿಯನ್ನು ಪಾಲುಮಾಡಿಕೊಂಡು ಆಳಿದೆವು. ನಮ್ಮ ಹಾಗೂ ಪಾಂಡವರೊಳಗೆ ವೈಷಮ್ಯ ಬೆಳೆಯಿತು. ಆದರೆ ನಿಮ್ಮೊಳಗೆ ಅಂತಹ ಯಾವ ವೈಷಮ್ಯವೂ ಬೆಳೆದಿಲ್ಲ. ಹೀಗಿರುವಾಗ ಯುದ್ಧನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಸಂಧಿಯ ಕುರಿತಾದ ನಿಮ್ಮ ಆಜ್ಞೆಯನ್ನು ನಾನು ಅಂಗೀಕರಿಸಲಾರೆ. ಇಂದಿನ ಯುದ್ಧದ ಬಳಿಕ ನೀವೂ ನಿಮಗೆ ಮಗಂದಿರ ಸಮಾನರಾದ ಪಾಂಡವರೂ  ಹೊಂದಾಣಿಕೆ ಮಾಡಿಕೊಂಡು ಸುಖವಾಗಿ ಬಾಳಿರಿ. ತಾನು ಅಳಿದರೂ ಮಕ್ಕಳಿಲ್ಲವೆಂಬ ಕೊರಗು ಇರದಂತೆ ಪಾಂಡವರು ನಿಮ್ಮನ್ನು ನೋಡಿಕೊಳ್ಳುತ್ತಾರೆ. ಸಂಧಿಮಾಡಿಕೊಳ್ಳಬೇಕೆಂಬ ಆಗ್ರಹ ಬೇಡ ಎಂದು ದುರ್ಯೋಧನ ಸ್ಪಷ್ಟಪಡಿಸುತ್ತಾನೆ.

 

ಬಿಡಿಮೆನ್ನನೆಂದು ಮುಂದಿ

ರ್ದಡಿಗೆಱಗಿದ ಮಗನನ್ನಪ್ಪಿಕೊಂಡಶ್ರುಜಲಂ

ಗುಡುಗುಡನೆ ಸುರಿಯೆ ನಾಲಗೆ

ತಡತಡವರೆ ನುಡಿದನಂಧನೃಪನಾ ನೃಪನಂ  ೧೯

ಪದ್ಯದ ಅನ್ವಯಕ್ರಮ:

ಎನ್ನನ್ ಬಿಡಿಂ ಎಂದು ಮುಂದೆ ಇರ್ದು ಅಡಿಗೆ ಎಱಗಿದ ಮಗನನ್ ಅಪ್ಪಿಕೊಂಡು ಅಶ್ರುಜಲಂ ಗುಡುಗುಡನೆ ಸುರಿಯೆ ನಾಲಗೆ ತಡತಡವರೆ  ಅಂಧನೃಪನ್ ಆ ನೃಪನಂ  ನುಡಿದನ್. 

ಪದ-ಅರ್ಥ:

ಬಿಡಿಮೆನ್ನನ್-ನನ್ನನ್ನು ಬಿಟ್ಟುಬಿಡಿ;  ಮುಂದಿರ್ದು-ಮುಂದೆ ನಿಂತುಕೊಂಡು;  ಅಡಿಗೆಱಗಿದ-ಕಾಲಿಗೆ ನಮಸ್ಕರಿಸಿದ;  ಮಗನನ್ನು-ದುರ್ಯೋಧನನ್ನು;  ಅಪ್ಪಿಕೊಂಡು-ಆಲಿಂಗಿಸಿಕೊಂಡು; ಅಶ್ರುಜಲಂ-ಕಣ್ಣೀರು;  ಗುಡುಗುಡನೆ-ಒಂದೇ ಸಮನೆ;  ಸುರಿಯೆ-ಸುರಿಯಲು;  ನಾಲಗೆ ತಡತಡವರೆ-ನಾಲಗೆ ತಡವರಿಸಲು;  ಅಂಧನೃಪನ್-ಧೃತರಾಷ್ಟ್ರನು;  ನೃಪನಂ-ದುರ್ಯೋಧನನಿಗೆ.

            ನನ್ನನ್ನು ಬಿಟ್ಟುಬಿಡಿ ಎಂದು ಧೃತರಾಷ್ಟ್ರನ ಮುಂದೆ ನಿಂತು ಆತನ ಪಾದಗಳಿಗೆ ನಮಸ್ಕರಿಸಿದ ದುರ್ಯೋಧನನನ್ನು ಧೃತರಾಷ್ಟ್ರನು ಎತ್ತಿ ಆಲಿಂಗಿಸಿಕೊಂಡು ಗುಡುಗುಡನೆ ಕಣ್ಣೀರು ಸುರಿಯುತ್ತಿರಲು, ನಾಲಗೆ ತಡವರಿಸುತ್ತಿರಲು, ಧೃತರಾಷ್ಟ್ರನು ಮಗನಾದ ದುರ್ಯೋಧನನಿಗೆ ಹೀಗೆಂದನು.

            ಧೃತರಾಷ್ಟ್ರಾದಿಗಳ ಸಂಧಿಯ ಮಾತು ದುರ್ಯೋಧನನಿಗೆ ಅಸಹನೀಯವೆನಿಸಿತು. ಇನ್ನು ತನ್ನನ್ನು ಬಿಟ್ಟುಬಿಡಿ ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಾನೆ. ತನ್ನನ್ನು ತನ್ನಷ್ಟಕ್ಕೆ ಬಿಟ್ಟುಬಿಡಿ, ಜೊತೆಗೆ ತನ್ನ ಮೇಲಿನ ಆಸೆಯನ್ನೂ ಬಿಟ್ಟುಬಿಡಿ ಎಂಬುದನ್ನು ಪರೋಕ್ಷವಾಗಿ ಹೇಳುತ್ತಾನೆ. ಧರ್ಮರಾಯ ತನ್ನ ತಮ್ಮಂದಿರೆಲ್ಲರನ್ನೂ ಇನ್ನೂ ಉಳಿಸಿಕೊಂಡಿದ್ದಾನೆ. ಆದರೆ, ತಾನು ತೊಂಬತ್ತೊಂಬತ್ತು ಮಂದಿ ತಮ್ಮಂದಿರನ್ನೂ ಹೊಂದಿದ್ದರೂ ಒಬ್ಬರನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೊತೆಗೆ ಅವರೆಲ್ಲರನ್ನೂ ಕೊಂದವರು ಪಾಂಡವರು. ಅಂತಹ ಪಾಂಡವರೊಂದಿಗೆ ಹೇಗೆ ಸಂಧಿಮಾಡಿಕೊಳ್ಳಲಿ? ನಾಳೆ ಲೋಕದ ಜನ “ಭೂಮಿಯ ಆಸೆಗಾಗಿ ದುರ್ಯೋಧನ ತನ್ನ ತಮ್ಮಂದಿರನ್ನು ಬಲಿಕೊಟ್ಟು ಕೊನೆಗೆ ಸಂಧಿಮಾಡಿಕೊಂಡ” ಎಂದು ಆಡಿಕೊಳ್ಳಲಿಕ್ಕಿಲ್ಲವೇ? ಅದರಿಂದ ತನ್ನ ಸ್ವಾಭಿಮಾನ, ಛಲ, ಪರಾಕ್ರಮಗಳಿಗೆ ಏನು ಬೆಲೆ ಸಿಕ್ಕಂತಾಯಿತು? ಎಂದು ಮೊದಲಾಗಿ ಚಿಂತಿಸಿದ ದುರ್ಯೋಧನ ತನ್ನ ಹೆತ್ತವರ ಸಂಧಿಯ ಮಾತುಗಳನ್ನು ನೇರವಾಗಿ ತಿರಸ್ಕರಿಸುತ್ತಾನೆ. ದುರ್ಯೋಧನ ಪಾಂಡವರೊಂದಿಗೆ ಸಂಧಿಯನ್ನು ಒಪ್ಪಿಕೊಳ್ಳಲಾರನೆಂಬುದು  ಧೃತರಾಷ್ಟ್ರನಿಗೆ ಸ್ಪಷ್ಟವಾಗಿಯೇ ತಿಳಿದಿದೆ. ತನ್ನ ಕಾಲಿಗೆರಗಿದ ದುರ್ಯೋಧನನನ್ನು ಮೇಲೆತ್ತಿ ಆಲಿಂಗಿಸಿಕೊಂಡಾಗ ಆತನ ಮಾತುಗಳು ಕಣ್ಣೀರಿನ ಮೂಲಕ ಹರಿಯುತ್ತವೆ. ನಾಲಗೆ ತಡವರಿಸುತ್ತದೆ. ಕೊನೆಯ ಮಾತನ್ನು ಹೇಳಲು ಧೃತರಾಷ್ಟ್ರ ಮುಂದಾಗುತ್ತಾನೆ.

 

ನೀನೆಂತುಮೆಮ್ಮ ಪೇೞ್ದುದಂ ಕಯ್ಕೊಳ್ಳದೆ ಛಲಮನೆ ಕಯ್ಕೊಂಡು ಪಾಂಡುನಂದನರೊಳ್ ಕಾದಿದಲ್ಲದೆ ಸಂಧಿಯನೊಡಂಬಡೆಯಪ್ಪಿನಂ ನೀನೆಮಗಿನಿತನೊಳ್ಳಿಕೆಯ್ಯಲ್ವೇೞ್ವುದು ನೆಗೞ್ವ ಕಜ್ಜಮಾವುದುಮಂ ನಿಮ್ಮಜ್ಜನೋಳಾಲೋಚಿಸಿ  ನೆಗೞ್ವುದುಮಲ್ಲಿಗೆ ಬಿಜಯಂಗೆಯ್ವುದೆನೆ ಮಹಾಪ್ರಸಾದಮೆಂದು ಅದನೊಡಂಬಟ್ಟುಂತೆಗೆಯ್ವೆನೆಂದು ಗುರುಜನಂ ಬೀೞ್ಕೊಂಡವರಂ ಬೀಡಿಂಗೆ ಪೋಗಲ್ವೇೞ್ದು ಕಿಱಿದು ಪೊೞ್ತು ಶೋಕಾನುಬಂಧದೊಳ್ ಕೋಪಾನುಬಂಧಮಂ ಸಮರಾನುಬಂಧಮುಮಂತರಿಸಿರ್ದು ಸಂಜಯ ದ್ವಿತೀಯನುಂ ನಿಜಭುಜಗದಾಸಹಾಯನುಮಾಗಿ ಸಂಗ್ರಾಮಭೂಮಿಯೊಳಗನೆ ಬರುತ್ತುಮಿರ್ದಂ.

ಗದ್ಯದ ಅನ್ವಯಕ್ರಮ:

ನೀನ್ ಎಂತುಂ ಎಮ್ಮ ಪೇೞ್ದುದಂ ಕಯ್ಕೊಳ್ಳದೆ ಛಲಮನೆ ಕಯ್ಕೊಂಡು ಪಾಂಡುನಂದನರೊಳ್ ಕಾದಿದ ಅಲ್ಲದೆ ಸಂಧಿಯನ್ ಒಡಂಬಡೆ ಅಪ್ಪಿನಂ ನೀನ್ ಎಮಗೆ ಇನಿತನ್ ಒಳ್ಳಿಕೆಯ್ಯಲ್ ಪೇೞ್ವುದು, ನೆಗೞ್ವ ಕಜ್ಜಂ ಆವುದುಮಂ ನಿಮ್ಮ ಅಜ್ಜನೊಳ್ ಆಲೋಚಿಸಿ ನೆಗೞ್ವುದು, ಅಲ್ಲಿಗೆ ಬಿಜಯಂ ಕೆಯ್ವುದು ಎನೆ, ಮಹಾಪ್ರಸಾದಂ  ಎಂದು ಅದನ್ ಒಡಂಬಟ್ಟು ಅಂತೆ ಕೆಯ್ವೆನ್ ಎಂದು ಗುರುಜನಂ ಬೀೞ್ಕೊಂಡು ಅವರಂ ಬೀಡಿಂಗೆ ಪೋಗಲ್ ಪೇೞ್ದು, ಕಿಱಿದು ಪೊೞ್ತು ಶೋಕ ಅನುಬಂಧದೊಳ್ ಕೋಪ ಅನುಬಂಧಮಂ ಸಮರ ಅನುಬಂಧಮುಮನ್ ಅಂತರಿಸಿರ್ದು ಸಂಜಯ ದ್ವಿತೀಯನುಂ ನಿಜ ಭುಜ ಗದಾ ಸಹಾಯನುಂ ಆಗಿ ಸಂಗ್ರಾಮಭೂಮಿಯೊಳಗನೆ ಬರುತ್ತುಂ ಇರ್ದಂ

ಪದ-ಅರ್ಥ:

ಎಂತುಂ-ಹೇಗೂ;  ಎಮ್ಮ-ನಾವು(ವಿಭಕ್ತಿ ಪಲ್ಲಟ-ಪ್ರಥಮಾ ವಿಭಕ್ತಿಗೆ ಬದಲಾಗಿ ಷಷ್ಠಿ ವಿಭಕ್ತಿ ಪ್ರಯೋಗ);  ಪೇೞ್ದುದಂ-ಹೇಳಿದುದನ್ನು;  ಕಯ್ಕೊಳ್ಳದೆ-ಈಡೇರಿಸದೆ;  ಕಾದಿದಲ್ಲದೆ-ಹೋರಾಡದೆ;  ಒಡಂಬಡೆಯಪ್ಪಿನಂ-ಒಪ್ಪಿಕೊಳ್ಳಲಾರೆ ಎಂದಿದ್ದರೂ;  ಇನಿತನ್-ಇಷ್ಟನ್ನೇ;  ಒಳ್ಳಿಕೆಯ್ಯಲ್ವೇೞ್ವುದು-ಉಪಕಾರವನ್ನು ಮಾಡಬೇಕು;  ನೆಗೞ್ವ ಕಜ್ಜಂ-ಕೈಗೊಳ್ಳುವ ಕಾರ್ಯ;  ಆವುದುಮಂ-ಯಾವುದಿದ್ದರೂ;  ಅಜ್ಜನೊಳ್-ಭೀಷ್ಮನಲ್ಲಿ;  ಆಲೋಚಿಸಿ-ಚರ್ಚಿಸಿ;  ನೆಗೞ್ವುದು-ಕೈಗೊಳ್ಳಬೇಕು;  ಬಿಜಯಂಗಯ್ವುದು-ದಯಮಾಡಿಸಬೇಕು;  ಮಹಾಪ್ರಸಾದಂ-ಹಾಗೆಯೇ ಆಗಲಿ;  ಅದನೊಡಂಬಟ್ಟು-ಅದನ್ನು ಒಪ್ಪಿಕೊಂಡು;  ಅಂತೆಗೆಯ್ವೆನೆಂದು-ಹಾಗೆಯೇ ಮಾಡುತ್ತೇನೆ ಎಂದು;  ಗುರುಜನಂ-ಹಿರಿಯರನ್ನು(ಧೃತರಾಷ್ಟ್ರ, ಗಾಂಧಾರಿ ಮೊದಲಾದವರು);  ಬೀೞ್ಕೊಂಡು-ಹೊರಡಲು ಅನುಮತಿಯನ್ನು ಪಡೆದುಕೊಂಡು;  ಬೀಡಿಂಗೆ-ಬಿಡಾರಕ್ಕೆ, ಅರಮನೆಗೆ;  ಪೋಗಲ್ವೇೞ್ದು-ಹೋಗಲು ತಿಳಿಸಿ;   ಕಿಱಿದು ಪೊೞ್ತುಂ –ಸ್ವಲ್ಪ ಹೊತ್ತು;  ಶೋಕಾನುಬಂಧ-ಶೋಕದ ಸಂಬಂಧ;  ಶೋಕದ ನಂಟು; ಸಮರಾನುಬಂಧ-ಯುದ್ಧದ ನಂಟು;  ಅಂತರಿಸಿರ್ದು-ಒಳಗೊಂಡಿದ್ದು;  ಸಂಜಯ ದ್ವಿತೀಯನುಂ-ಸಂಜಯನನ್ನು ಕೂಡಿಕೊಂಡು;  ನಿಜಭುಜಗದಾಸಹಾಯನುಮಾಗಿ-ತನ್ನ ಭುಜದ ಮೇಲಿರಿಸಿದ ಗದೆಯ ಸಹಾಯವನ್ನೇ ನೆಚ್ಚಿಕೊಂಡು;  ಸಂಗ್ರಾಮಭೂಮಿಯೊಳಗನೆ-ಯುದ್ಧರಂಗದಲ್ಲಿ. 

            ದುರ್ಯೋಧನನೇ, ನೀನು ಹೇಗೂ ನಾವು ಹೇಳಿದುದನ್ನು ಈಡೇರಿಸದೆ ನಿನ್ನ ಛಲವನ್ನೇ ನೆಚ್ಚಿಕೊಂಡು ಪಾಂಡವರೊಂದಿಗೆ ಹೋರಾಡದೆ ಇರಲಾರೆ ಎನ್ನುವುದಾದರೆ, ನೀನು ನಮಗೆ ಒಂದಿಷ್ಟು ಉಪಕಾರವನ್ನಾದರೂ ಮಾಡು. ಮುಂದೆ ನೀನು ಕೈಗೊಳ್ಳುವ ಯಾವುದೇ ಕಾರ್ಯವಿರಲಿ ಅದೆಲ್ಲವನ್ನೂ ನಿನ್ನ ಅಜ್ಜನಾದ ಭೀಷ್ಮನಲ್ಲಿ ಸಮಾಲೋಚಿಸಿ ಕೈಗೊಳ್ಳು, ನೀನೀಗ ಅಲ್ಲಿಗೆ ಹೊರಡು ಎಂದು ಹೇಳಿದಾಗ, ದುರ್ಯೋಧನನು, ನಿಮ್ಮ ಅಪ್ಪಣೆ. ನೀವು ಹೇಳಿದಂತೆಯೇ ಆಗಲಿ ಎಂದು  ತಂದೆ ತಾಯಿಯರನ್ನು ಬೀಳ್ಕೊಂಡು ಅವರೆಲ್ಲರನ್ನೂ ಅರಮನೆಗೆ ಹಿಂದಿರುಗಲು ತಿಳಿಸಿ, ಸ್ವಲ್ಪಹೊತ್ತಿನವರೆಗೆ ತನ್ನೊಳಗೆ ಶೋಕದ ನಂಟನ್ನೂ ಯುದ್ಧದ ನಂಟನ್ನೂ ಸಮಾಲೋಚಿಸಿಕೊಂಡು ಸಂಜಯನೊಬ್ಬನನ್ನು ಕೂಡಿಕೊಂಡು ತನ್ನ ಗದೆಯನ್ನು ಭುಜದ ಮೇಲಿರಿಸಿಕೊಂಡು ಅದನ್ನೇ ನೆಚ್ಚಿಕೊಂಡು ಯುದ್ಧಭೂಮಿಯಲ್ಲಿ ಭೀಷ್ಮನಿದ್ದಲ್ಲಿಗೆ ನಡೆಯತೊಡಗಿದನು.

-ಡಾ. ವಸಂತ್ ಕುಮಾರ್ ಉಡುಪಿ

*******

Leave a Reply

Your email address will not be published. Required fields are marked *