ಸಾಹಿತ್ಯಾನುಸಂಧಾನ

heading1

ಪರಸ್ತ್ರೀ ಎಂಬ ಜೂಬು

                ಭಾರತೀಯ ಪೂರ್ವಸೂರಿಗಳು ನಿಷೇಧಿಸಿರುವ ಸಾಮಾಜಿಕ ಅಪರಾಧಗಳಲ್ಲಿ ಪರಸ್ತ್ರೀಸಂಗವೂ ಒಂದು. ಕುಟುಂಬದ ನಾಶಕ್ಕೆ ಕಾರಣವಾಗುವ ಈ ಪ್ರವೃತ್ತಿಯನ್ನು ಪ್ರಾಚೀನಕಾಲದಿಂದಲೂ ನಮ್ಮ ಸಮಾಜಸುಧಾರಕರು ಖಂಡಿಸುತ್ತಲೇ ಬಂದಿದ್ದಾರೆ. ಆದರೂ ಈ ಅಪರಾಧ ಕಡಿಮೆಯಾಗದೆ ಹೆಚ್ಚುತ್ತಲೇ ಇದೆ. ನಮ್ಮ ಪುರಾಣಗಳಲ್ಲಿ, ರಾಮಾಯಣ, ಮಹಾಭಾರತಗಳಲ್ಲಿಯೂ ಪರಸ್ತ್ರೀಸಂಗ ಹಾಗೂ ಅದರಿಂದ ಉಂಟಾಗುವ ಕೆಟ್ಟಪರಿಣಾಮಗಳಿಗೆ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ. ‘ಹಡಕಿಗೆ ಮೆಚ್ಚಿದ ಸೊಣಗನಂತೆ’ ಮನುಷ್ಯ ಒಳಿತನ್ನು ಬಿಟ್ಟು ಕೆಡುಕಿಗೆ ಹೆಚ್ಚು ಮನಸೋಲುತ್ತಾನೆ. ಇಂತಹ ಪ್ರವೃತ್ತಿಗಳಿಂದ ತಾನು ನಾಶವಾಗುವುದರ ಜೊತೆಗೆ ತನ್ನ ಕುಟುಂಬವೂ ನಾಶವಾಗುತ್ತದೆ ಎಂಬುದು ತಿಳಿದಿದ್ದರೂ ದೀಪಕ್ಕೆರಗುವ ಕೀಟದಂತೆ ಮತ್ತೆ ಮತ್ತೆ ಅದಕ್ಕೇ ದಾಸನಾಗುತ್ತಾನೆ. ಕೆಡುಕನ್ನು ಸ್ವೀಕರಿಸುವುದು, ಅದಕ್ಕಾಗಿ ಹಾತೊರೆಯುವುದು, ಅದನ್ನೇ ಮುಂದುವರಿಸುವುದು ಶ್ರೇಷ್ಠತೆಯ ಲಕ್ಷಣವೇ? ಎಂಬ ಪ್ರಶ್ನೆ ನಮ್ಮ ಮುಂದಿದೆ.

                ಪ್ರಾಚೀನಕಾಲದ ಎಷ್ಟೋ ವಿಧಿನಿಷೇಧಗಳು ಇಂದು ಒಳಿತಿನ, ಹೆಮ್ಮೆಯ, ಘನತೆಯ ಪ್ರವೃತ್ತಿಗಳಾಗಿ ಪರಿವರ್ತನೆಯಾಗುತ್ತಿರುವುದು  ಬದಲಾಗುತ್ತಿರುವ ಕಾಲದ ಗುಣವೇ? ಪರಸ್ತ್ರೀಸಂಗದಂತೆಯೇ ಪರಪುರುಷಸಂಗವೂ ಇಂದು ಒಂದು ಪ್ರತಿಷ್ಠೆಯ, ಘನತೆಯ ವಿಷಯವಾಗಿ ಬೆಳೆಯುತ್ತಿರುವುದನ್ನು ಪರಿಭಾವಿಸಿದರೆ ಇದು ನಮ್ಮ ಪಾರಂಪರಿಕ ಕುಟುಂಬವ್ಯವಸ್ಥೆಗೆ ಕೊಡಲಿಯೇಟನ್ನು ಹಾಕುತ್ತಿರುವುದು ಸ್ಪಷ್ಟವಾಗುತ್ತಿದೆ.  ಹನ್ನೆರಡನೆಯ ಶತಮಾನದ ಸಮಾಜಸುಧಾರಕ ಬಸವಣ್ಣವನರು ಪರಸ್ತ್ರೀಸಂಗವನ್ನು ಜೂಬಿಗೆ ಹೋಲಿಸಿದ್ದಾರೆ. ‘ಜೂಬು’ ಎಂದರೆ ದೆವ್ವ ಎಂದರ್ಥ. ದೆವ್ವ ಹೇಗೆ ಮನುಷ್ಯನನ್ನು ಪದೇಪದೇ ಕಾಡುತ್ತದೆಯೋ ಪರಸ್ತ್ರೀಸಂಗವೆಂಬ ಜೂಬು ಜೀವನದುದ್ದಕ್ಕೂ ಕಾಡಿ, ಪೀಡಿಸುತ್ತಲೇ ಇರುತ್ತದೆ. ಪರಸ್ತ್ರೀಸಂಗ ಮಾಡಿದಾತನ ಹೆಂಡತಿ ಮಕ್ಕಳು ಸಮಾಜದಲ್ಲಿ ಹಲವಾರು ಸಮಸ್ಯೆ, ಅವಮಾನ, ಹಿಂಸೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಬದುಕು ದುಸ್ತರವಾಗಬಹುದು. ನಾಶವೂ ಆಗಬಹುದು. ಪರಪುರುಷಸಂಗದಿಂದಲೂ ಅಷ್ಟೇ.

                ಹಿಂದೆ ಋಣಾತ್ಮಕವಾಗಿದ್ದುದು ಇಂದೇಕೆ ಧನಾತ್ಮಕವಾಗುತ್ತಿದೆ? ಭಾರತೀಯ ಸಮಾಜವ್ಯವಸ್ಥೆಯಲ್ಲಿ ಹಿಂದೆ ನಿಷೇಧಿತವಾದ ಎಲ್ಲಾ ಪ್ರವೃತ್ತಿಗಳೂ ಇಂದೇಕೆ ಘನತೆಯ ಪ್ರವೃತ್ತಿಗಳಾಗಿ ಪರಿವರ್ತಿತವಾಗುತ್ತಿವೆ? ಅನ್ಯಸಂಸ್ಕೃತಿಗಳ ಪ್ರಭಾವವೆ? ಎಲ್ಲವನ್ನೂ ಹಣದಿಂದ, ಶೋಕಿಯಿಂದ ಅಳೆಯಬಹುದೆನ್ನುವ ಪ್ರವೃತ್ತಿಯೇ? ಮನಸ್ಸು ಬಯಸುವ ಸುಖ-ಸಂತೋಷಗಳನ್ನು ಯಾವುದೇ ಮೂಲದಿಂದ, ಯಾವುದೇ ವಿಧದಿಂದ, ಯಾವುದೇ ರೀತಿಯಿಂದಲಾದರೂ ಪಡೆಯಬಹುದೆಂಬ ಭಾವನೆಯೇ? ಅಥವಾ ಹಳೆಯದೆಲ್ಲವೂ ಹಳಸಲಾಯಿತು, ಹೊಸ ಕಾಲಕ್ಕೆ ಹೊಸ ಯೋಚನೆ, ಹೊಸ ಯೋಜನೆಗಳು ಬೇಕೆಂಬ ತುಡಿತವೇ? ಯಾವುದು ಸರಿ? ಹಲವಾರು ಮಂದಿಗೆ  ಬಹುಶಃ ಎಲ್ಲವೂ ಸರಿ ಇರಬಹುದೇನೋ! ಇದೇ ಪ್ರವೃತ್ತಿ ಸಾರ್ವತ್ರಿಕಗೊಂಡು ಮುಂದುವರಿದರೆ ‘ಭಾರತೀಯ ಸಮಾಜವ್ಯವಸ್ಥೆ’ ಹಾಗೂ ಅದರ ಘನತೆ, ಗೌರವಗಳೆಲ್ಲವೂ ಇತಿಹಾಸ ಸೇರಿಹೋಗದೆ? ಮುಂದಿನ ಪೀಳಿಗೆಗೆ ಭಾರತೀಯ ಸಮಾಜವ್ಯವಸ್ಥೆಯನ್ನು ಪರಿಚಯಿಸುವ ಸಂದರ್ಭದಲ್ಲಿ, “ಒಂದಾನೊಂದು ಕಾಲದಲ್ಲಿ ………” ಎಂದೇ ಪ್ರಾರಂಭಿಸುವ ಪ್ರಸಂಗಗಳು ಬಹಳ ದೂರವಿಲ್ಲ ಎಂದೆನಿಸುತ್ತಿದೆ.  ಬಸವಣ್ಣನವರ ದೂರದೃಷ್ಟಿಗೆ ನಮೋ ಎನ್ನದೆ ಬೇರೆ ನಿರ್ವಾಹವಿಲ್ಲ.

***

2 thoughts on “ಪರಸ್ತ್ರೀ ಎಂಬ ಜೂಬು

 1. ಭಾರತೀಯ ಸಂಸ್ಕೃತಿಯ ಮೂಲ ನೆಲೆಗಟ್ಟು ಯಾವುದೆಂದರೆ ಅದು ಕುಟುಂಬ ವ್ಯವಸ್ಥೆ… ಭಾರತೀಯರು ಎಷ್ಟೋ ಶತಮಾನಗಳ ಹಿಂದೆ, ಅಷ್ಟೇ ಏಕೆ ಯುಗಯುಗಕ್ಕೂ ಕೂಡ ತನ್ನದೇ ಆದ ಪ್ರಬಲವಾದ ಸಂಸ್ಕೃತಿಯನ್ನು, ಅಚ್ಚುಕಟ್ಟಾದ ಕುಟುಂಬ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗಲಾರದು.
  ಈಗಿನ ಕಾಲದಲ್ಲಿ ಗಂಡ ಹೆಂಡತಿ ಇಬ್ಬರು ಒಟ್ಟಿಗಿದ್ದರೆ ಅದೇ ದೊಡ್ಡ ಕುಟುಂಬ. ಆದರೆ ಹಿಂದಿನ ಕಾಲದಲ್ಲಿ ಹಾಗೆ ಇರಲಿಲ್ಲ. ಒಂದು ಕುಟುಂಬ ಅಂದರೆ ಅದರಲ್ಲಿ ಹತ್ತಾರು ಮಂದಿ , ಅನೇಕ ರೀತಿಯ ಬಾಂಧವ್ಯ ಗಳು ಒಟ್ಟಿಗೆ ಒಂದೇ ಸೂರಿನಡಿಯಲ್ಲಿ ನೆಲೆಸುತ್ತಿದ್ದವು. ಅಷ್ಟೇ ಅಲ್ಲದೆ ಒಂದು ಕುಟುಂಬದಲ್ಲಿ ಯಜಮಾನರ ಸ್ಥಾನದಲ್ಲಿ ಮನೆಯ ಹಿರಿಯರು, ಅಗಾಧವಾದ ಜೀವನಾನುಭವ ಹೊಂದಿದ್ದ ತಂದೆ ತಾಯಿಯರನ್ನು ಕೂರಿಸುತ್ತಿದ್ದರು. ಮನೆಯ ಪ್ರತಿ ಆಗು ಹೋಗುಗಳು , ಪ್ರತಿ ಸದಸ್ಯರ ವಿಚಾರಗಳೆಲ್ಲವೂ ಅವರ ಹಿಡಿತದಲ್ಲಿ ಇರಿತಿದ್ದವು. ಜೊತೆಗೆ ಮನೆಯ ಕಿರಿಯರ ಸುಪರ್ದಿ ಕೂಡ ಅವರೇ ವಹಿಸಿಕೊಳ್ಳುತ್ತಿದ್ದರು. ಆಗ ಒಂದು ಕುಟುಂಬ ಎಂದರೆ ಅದು ಸಮಾಜಕ್ಕೆ ಒಂದು ಮಾದರಿಯಾಗಿ ಕಾಣಿಸಿಕೊಳ್ಳುತ್ತಿತ್ತು. ಹಾಗೆ ನೂರಾರು ಕುಟುಂಬ ಗಳನ್ನೊಳಗೊಂಡ ಒಂದು ಊರು, ಒಂದು ಮಾದರಿ ಗ್ರಾಮ ಎನ್ನಿಸಿಕೊಳ್ಳುತ್ತಿತ್ತು. ಆಗ ಪ್ರತಿಯೊಬ್ಬ ವ್ಯಕ್ತಿಗೂ ಅವನ ಪರಿಮಿತಿ ಏನು? ಯಾವುದನ್ನು ಸಮಾಜ ಪ್ರಶಂಸಿಸುತ್ತದೆ ಅಥವಾ ತಾನು ಮಾಡುವ ಯಾವ ತಪ್ಪಿಂದ ತಾನು ಈ ಸಮಾಜದ ಅವಮಾನಕ್ಕೆ ಗುರಿಯಾಗು ತ್ತೇನೆ ಎಂಬ ಅರಿವು ಇತ್ತು. ಹಾಗಾಗಿ ಅವನು ಯಾವುದೇ ತಪ್ಪು ಮಾಡಬೇಕಾದರೂ ನೂರು ಬಾರಿ ಆಲೋಚನೆ ಮಾಡುತ್ತಿದ್ದ. ಹಾಗಂತ ಹಿಂದಿನ ಕಾಲದಲ್ಲಿ ಈ ರೀತಿ ಪರಸ್ತ್ರೀಯ ಸಂಗ ಯಾರೂ ಮಾಡೇ ಇಲ್ಲವೇ ಎಂದು ಪ್ರಶ್ನೆ ಉದ್ಭವವಾಗಬಹುದು. ಆಗಲೂ ಈ ರೀತಿಯ ಆಸೆ ಇರಲಿಲ್ಲ ಎಂದು ಹೇಳಲಾಗುವುದಿಲ್ಲ. ಆಗಲೂ ಈ ರೀತಿಯ ಅನ್ಯಾಯಗಳು ನಡೆಯುತ್ತಿತ್ತು ಆದರೆ ಕಡಿಮೆ ಪ್ರಮಾಣದಲ್ಲಿ. ಅಲ್ಲದೇ ಅವರ ಆ ತಪ್ಪಿಗೆ ಸಮಾಜದ ನಿಂದನೆಗೆ ಗುರಿಯಾದ ಉದಾಹರಣೆಗಳು ಕೂಡ ಇದೆ…
  ಆದರೆ ಈಗಿನ ಕಾಲ ಹಾಗಿಲ್ಲ. ಮೊದಲನೆಯದಾಗಿ ಈಗಿನ ಜನರಿಗೆ ಮದುವೆ ಎಂಬ ಸಂಬಂಧದ ಮೇಲೆಯೇ ವಿಶ್ವಾಸವಿಲ್ಲ .ಹಾಗಿದ್ದ ಮೇಲೆ ಅವರು ಹಿಂದಿನ ಕಾಲದ ವರಂತೆ ಒಂದು ಕುಟುಂಬ ವ್ಯವಸ್ಥೆಯ ಚೌಕಟ್ಟಿನೊಳಗೆ ಬದುಕಲು ಇಷ್ಟಪಡುತ್ತಾರೆಯೇ ? ಖಂಡಿತ ಇಲ್ಲ. ಈಗಿರುವ ಸ್ವಾರ್ಥ ಪ್ರಪಂಚದಲ್ಲಿ ತಮ್ಮ ಕುಟುಂಬದ ಬಗ್ದೆಯೇ ತಲೆಕೆಡಿಸಿಕೊಳ್ಳದ ಜನ ಇನ್ನು ಸಮಾಜದ ನಿಂದನೆಗೆ ತಲೆಕೆಡಿಸಿಕೊಳ್ಳುತ್ತಾರೆಯೇ? ಖಂಡಿತವಾಗಿಯೂ ಇಲ್ಲ… ಈಗಿನ ಕಾಲದ ಜನತೆ ಅತಿಯಾಗಿ ಇಷ್ಟಪಡುವ ಸ್ವಾತಂತ್ರ್ಯ (ಸ್ವೇಚ್ಛೆ) ವೇ ಮುಂದೊಂದು ದಿನ ಇಡೀ ವಿಶ್ವವೇ ಹಾಡಿ ಹೊಗಳುತ್ತಿದ್ದ ನಮ್ಮ ಭಾರತೀಯ ಸಂಸ್ಕೃತಿಯನ್ನು ಅವನತಿಯೆಡೆಗೆ ಕರೆದುಕೊಂಡು ಹೋಗುವುದರಲ್ಲಿ ಸಂಶಯವಿಲ್ಲ…

  1. ಕೆಲವು ವಚನಗಳು ಮತ್ತೆ ಮತ್ತೆ ನಮ್ಮನ್ನು ಪರಾಮರ್ಶೆಗೆ ಒಳಪಡಿಸುತ್ತವೆ ಎಂಬುದನ್ನು ನಿಮ್ಮ ಪ್ರತಿಕ್ರಿಯೆ ಸ್ಪಷ್ಟಪಡಿಸುತ್ತದೆ. ಪರಸ್ತ್ರೀ ಹಾಗೂ ಪರಪುರುಷ ಸಂಗಗಳು ಭಾರತೀಯ ಸಮಾಜ ವ್ಯವಸ್ಥೆಗೆ ಅಂಟಿರುವ ಶಾಪ. ಶೈಕ್ಷಣಿಕವಾಗಿ ಬಹಳ ಮುಂದುವರಿಯುತ್ತಿರುವ ನಮ್ಮ ದೇಶ ಅನೈತಿಕತೆಯ ವಿಷಯದಲ್ಲಿ ಬಹಳ ಮುಂದುವರಿಯುತ್ತಿದೆ. ಕೀ ಕ್ಲಬ್ಗಳು, ಬ್ಲೌಸ್ ಕ್ಲಬ್ಗಳು, ಲಿವಿಂಗ್ ಟುಗೆದರ್ ಇನ್ನೂ ಹಲವಾರು ರೂಪಗಳಲ್ಲಿ ಅನೈತಿಕತೆ ತಾಂಡವವಾಡುತ್ತಿದೆ. ಸುಮಾರು ಎಂಟು ನೂರು ವರ್ಷಗಳ ಹಿಂದೆ ಬಸವಣ್ಣನವರು ಈ ಬಗ್ಗೆ ವಚನಗಳ ಮೂಲಕ ಎಚ್ಚರಿಸಿದ್ದರು ಎಂಬುದನ್ನು ಪರಿಭಾವಿಸಿದರೆ ಮುಂದೆ ಭವಿಷ್ಯದಲ್ಲಿ ಅದರ ಅನಾಹುತಗಳನ್ನು ಅವರು ಕಲ್ಪಿಸಿದ್ದರು ಎಂದರ್ಥ. ಆದರೆ ನಾವು ಮಾತ್ರ ಅರ್ಥಮಾಡಿಕೊಂಡಿಲ್ಲ. ಈ ಪಿಡುಗನ್ನು ಮೆಟ್ಟಿ ನಿಲ್ಲಬಹುದು, ದೃಢವಾದ ಸಂಕಲ್ಪಶಕ್ತಿ ನಮ್ಮಲ್ಲಿರಬೇಕು ಅಷ್ಟೇ.
   ನಿಮ್ಮ ದೀರ್ಘ ಪ್ರತಿಕ್ರಿಯೆಗೆ ಕೃತಜ್ಞತೆಗಳು.
   ನಿಮ್ಮ ಪ್ರತಿಕ್ರಿಯೆ ಎಲ್ಲಾ ಸಹೃದಯರಿಗೆ ಸ್ಫೂರ್ತಿಯಾಗಲಿ. 🙏

Leave a Reply

Your email address will not be published. Required fields are marked *