ಸಾಹಿತ್ಯಾನುಸಂಧಾನ

heading1

ತಟ್ಟಿರಾಯ ಮತ್ತೆ ಕುಣಿದ……!

 ಗಂಟೆ ಹನ್ನೊಂದು ದಾಟಿದ್ದರೂ ಚೆನ್ನಯ್ಯ ಮನೆಯ ಜಗುಲಿಯ ಮೇಲೆ ಇತ್ತಿಂದತ್ತ ಅತ್ತಿಂದಿತ್ತ ತಿರುಗಾಡುತ್ತಲೇ ಇದ್ದಾನೆ. ಭಾರವಾದ ಹೆಜ್ಜೆಗಳು, ಮನಸ್ಸಿನಲ್ಲಿ ಏನೋ ಹೇಳಲಾಗದ ತುಮುಲ, ಎದೆಯಲ್ಲೇನೋ ನೋವು, ಹೊಟ್ಟೆಯಲ್ಲೇನೋ ಸಂಕಟ, ತಲೆ ಒಡೆದು ಹೋಳಾಗುವಷ್ಟು ಸಿಡಿತ. “ಏಕೆ ಹೀಗಾಯಿತು?” ತನ್ನ ಇದುವರೆಗಿನ ಐವತ್ತೈದು ವರ್ಷಗಳ ಬದುಕಿನಲ್ಲಿ ಎಂದೂ ಈ ರೀತಿಯ ವಿಪರ್ಯಾಸ ನಡೆದುದಿಲ್ಲ. ಇಂದು ಮನೆತನದ ಮಾನ ಮರ್ಯಾದೆಗಳೆಲ್ಲವನ್ನೂ ಗಾಳಿಗೆ ತೂರಿ ಮಗ ರಾಜ, ಮಾದಪ್ಪನ ಮಗಳು ಗೌರಿಯೊಂದಿಗೆ ಓಡಿಹೋಗಿದ್ದಾನೆ. ಬೆಳಿಗ್ಗೆ ಎದ್ದಂದಿನಿಂದ ಒಂದು ಲೋಟ ನೀರನ್ನೂ ಮುಟ್ಟದ ಅಪ್ಪನನ್ನು ಹೇಗೆ ಸಮಾಧಾನಿಸಬೇಕೆಂದು ಅರಿಯದೆ ಕಮಲು ಹಾಗೂ ಸರಸು ಅಸಹಾಯಕರಾಗಿ ಮಿಕಿಮಿಕಿ ನೋಡುತ್ತಲೇ ಇದ್ದಾರೆ. “ಅಣ್ಣ ಹೀಗೆ ಮಾಡಬಾರದಿತ್ತು! ರಾತ್ರಿ ತೋಡಿದ ಬಾವಿಗೆ ಹಗಲು ಹೋಗಿ ಬೀಳುವುದೇ? ಅವಳಲ್ಲದಿದ್ದರೆ ಊರಲ್ಲಿ ಇನ್ಯಾರೂ ಹೆಣ್ಣು ಸಿಗುತ್ತಿರಲಿಲ್ಲವೇ? ಒಂದು ಕ್ಷಣವಾದರೂ ನಮ್ಮ ಸುಖ-ಕಷ್ಟಗಳ ಬಗ್ಗೆ ಯೋಚಿಸಿದನೇ?” ಎಂದು ಮನದೊಳಗೆ ಹತ್ತಾರು ಬಾರಿ ಬೈದಾಡಿದರೂ ಕೆರಳಿ ಕೆಂಡವಾಗಿ ಕಿಡಿಕಾರುವ ಅಪ್ಪನ ಮುಂದೆ ಅದೆಲ್ಲವನ್ನೂ ಆಡಿಕೊಂಡು ಮನಸ್ಸನ್ನು ಹಗುರಮಾಡಿಕೊಳ್ಳುವಷ್ಟು ಎದೆಗಾರಿಕೆ  ಇಬ್ಬರಿಗೂ ಇಲ್ಲ.

ರಾಜ, ಚೆನ್ನಯ್ಯನ ಒಬ್ಬನೇ ಮಗ. ಅವನ ಅನಂತರ ಕಮಲು ಹಾಗೂ ಸರಸು ಇಬ್ಬರು ಹೆಣ್ಣುಮಕ್ಕಳು. ಹೆಂಡತಿ ಸುಂದರಿಯನ್ನು ಕಾಡಿದ ಮಾರಣಾಂತಿಕ ಜ್ವರದಿಂದ ಉಳಿಸಿಕೊಳ್ಳಲಾಗಲಿಲ್ಲ. ಅವಳು ತನ್ನವರನ್ನು ಅಗಲಿ ಐದಾರು ವರ್ಷಗಳಾಗಿದ್ದವು. ತನ್ನ ಮಕ್ಕಳ ಮುಖವನ್ನು ನೋಡಿ ಚೆನ್ನಯ್ಯ ತನ್ನ ದುಃಖವೆಲ್ಲವನ್ನೂ ಮರೆತಿದ್ದ. ಪ್ರಾಯಕ್ಕೆ ಬರುತ್ತಿದ್ದ ಮಗ ರಾಜನ ಬಗ್ಗೆ ಚೆನ್ನಯ್ಯನಿಗೆ ಹೆಮ್ಮೆ ಇತ್ತು. ಮುಂದೆ ತನ್ನಂತೆಯೇ ಜಾತಿಕಸುಬನ್ನು ಮುಂದುವರೆಸಿಕೊಂಡು ಯಶಸ್ಸುಗಳಿಸಬೇಕೆಂದು ಬಯಸಿದ್ದ. ರಾಜನೇನೂ “ಒಲ್ಲೆ” ಎಂದಿರಲಿಲ್ಲ.  ಭರವಸೆಯನ್ನೂ ಮೂಡಿಸಿದ್ದ. ಆದರೆ ಇಂದು ನಡೆದದ್ದೇ ಬೇರೆ. ರಾಜನ ಬಗ್ಗೆ ಎದ್ದಿರುವ ಗುಲ್ಲು ಎಷ್ಟರ ಮಟ್ಟಿಗೆ ಸತ್ಯ? ಎಷ್ಟರ ಮಟ್ಟಿಗೆ ಸುಳ್ಳು? ಎಂಬುದು ಚೆನ್ನಯ್ಯನಿಗೂ ತಿಳಿದಿಲ್ಲ. ಆದರೆ ರಾಜ ಗೌರಿಯೊಂದಿಗೆ ಕಾಣೆಯಾದುದು ಮಾತ್ರ ಸತ್ಯ.

’ಮಾಡಿದವರ ಪಾಪ ಆಡಿದವರ ಬಾಯಲ್ಲಿ’ ಎನ್ನುವಂತೆ ಚೆನ್ನಯ್ಯನ ಮಾನ ಮರ್ಯಾದೆಗಳೆಲ್ಲ ಊರಲ್ಲಿ ಹರಾಜಾಗಿದೆ.  ಇನ್ನು ಉಳಿದುದೇನು? ಮನೆತನದ ಬಗ್ಗೆ ಊರವರಲ್ಲಿ ಗೌರವವಿತ್ತು. ನಾಲ್ಕಾರು ತಲೆಮಾರುಗಳಿಂದ ಬಂದ ಈ ಗೌರವಕ್ಕೆ ಮಸಿಬಳಿದ ಮಗನ ಮೇಲೆ ಚೆನ್ನಯ್ಯನಿಗೆ ತಡೆದುಕೊಳ್ಳಲಾಗದಷ್ಟು ಕೋಪ; ಅಸಮಾಧಾನ. ಎದುರಿಗೆ ಬಂದರೆ ಸೀಳಿಬಿಡುವಷ್ಟು ರೋಷ.

ಚೆನ್ನಯ್ಯ ತಿಂಗಳೂರಿನಲ್ಲಿ ಪರಂಪರೆಯಿಂದ ಬಂದ ತನ್ನ ಜಾತಿಕಸುಬನ್ನು ಮುಂದುವರಿಸುತ್ತ ಊರ ದೇವಿಯ ಜಾತ್ರೆಯ ಸಮಯದಲ್ಲಿ ರಥದ ಮುಂದೆ ತಟ್ಟಿರಾಯನನ್ನು ಕುಣಿಸುವ ಸೇವೆಯನ್ನು ಮುಂದುವರಿಸಿಕೊಂಡು ಬಂದವನು. ತನ್ನ ಅಜ್ಜನ ಕಾಲದಿಂದ ನಡೆಸಿಕೊಂಡು ಬಂದ ಈ ಸೇವೆಯನ್ನು ಚೆನ್ನಯ್ಯನೂ ತನ್ನ ಇದುವರೆಗಿನ ಜೀವನದಲ್ಲಿ ಮುನ್ನಡೆಸಿಕೊಂಡು ಬಂದಿದ್ದಾನೆ. ಊರ ದೇವಿ ಕಳೆದ ಮೂವತ್ತು ವರ್ಷಗಳಿಂದಲೂ ಆತನ ಹಾಗೂ ಆತನ ಕುಟುಂಬದ ಮೇಲೆ ಅನುಗ್ರಹ ತೋರಿದ್ದಾಳೆ.

ಕಳೆದ ಬಾರಿ ರಾಜ ಉತ್ಸಾಹದಿಂದ, “ಅಪ್ಪ, ಈ ಬಾರಿ ನಾನು ತಟ್ಟಿರಾಯನನ್ನು ಕುಣಿಸುತ್ತೇನೆ” ಎಂದಾಗ ಚೆನ್ನಯ್ಯ ಅಡ್ಡಿಪಡಿಸಲಿಲ್ಲ. ಮಗ ತನ್ನಾಸೆಯನ್ನು ಪೂರೈಸುತ್ತಾನೆ ಎಂದು ಆತನೂ ಸಂಭ್ರಮಪಟ್ಟ. ರಾಜ ತಟ್ಟಿರಾಯನನ್ನು ಕುಣಿಸಿದಾಗ ಊರವರೆಲ್ಲ “ಭೇಷ್” ಅಂದಿದ್ದರು. “ಅಪ್ಪನಿಗಿಂತ ಮಗನೇ ಚತುರ” ಎಂದು ಬೆನ್ನುತಟ್ಟಿದ್ದರು. ಆ ಬಗ್ಗೆ ಚೆನ್ನಯ್ಯನಿಗೂ ಹೆಮ್ಮೆಯಿತ್ತು. ಈ ಬಾರಿಯ ಜಾತ್ರೆಯಲ್ಲಿಯೂ ರಾಜನೇ ತಟ್ಟಿರಾಯನನ್ನು ಕುಣಿಸಿ ಹಿಂದಿನ ವರ್ಷಕ್ಕಿಂತಲೂ ಭಾರೀ ಮೆಚ್ಚುಗೆ ಗಳಿಸಿದ್ದ. “ತನ್ನ ಮನೆತನದ ಗೌರವವನ್ನು ಮಗ ಬೆಳಗುತ್ತಾನೆ” ಎಂದು ಚೆನ್ನಯ್ಯ ಮನಸ್ಸಿನಲ್ಲಿಯೇ ಅಂದುಕೊಂಡಿದ್ದು ಎಷ್ಟು ಬಾರಿಯೋ ಆತನಿಗೇ ತಿಳಿದಿರಲಿಕ್ಕಿಲ್ಲ. ಆತನಿಗೆ ಮಗನ ಬಗ್ಗೆ ತುಂಬಾ ಭರವಸೆಯೂ ಇತ್ತು.  ಆದರೆ ಅಷ್ಟರಲ್ಲಾಗಲೇ ಹೀಗಾಗುತ್ತದೆಂದು ಆತ ಊಹಿಸಿರಲಿಲ್ಲ.

ಒಂದು ವಾರದ ಹಿಂದೆ ಚೆನ್ನಯ್ಯ ಕಮಲು ಹಾಗೂ ಸರಸೂವನ್ನು ಕರೆದುಕೊಂಡು ಬ್ರಹ್ಮಾವರಕ್ಕೆ ಹೋಗಿದ್ದ. ಅಲ್ಲಿ ಆತನ ನೆಂಟರ ಮನೆಯಿತ್ತು. ಈತ ಅಲ್ಲಿಗೆ ಹೋಗದೆ ಒಂದು ವರ್ಷ ಸಂದಿದ್ದಕ್ಕೆ, ಅವರೂ ಏಕೋ ಬಾ ಎಂದಿದ್ದಕ್ಕೆ ಹೋಗಿಬರೋಣವೆನಿಸಿ ಹೋಗಿದ್ದ. ಜೊತೆಗೆ ಕಮಲು ಪ್ರಾಯಕ್ಕೆ ಬರುತ್ತಿದ್ದಾಳೆ, ಅವಳಿಗೊಂದು ಒಳ್ಳೆಯ ನೆಂಟಸ್ತಿಕೆ ಸಿಕ್ಕಿದರೆ ಮದುವೆ ಮಾಡಬೇಕೆಂಬ ಆಲೋಚನೆಯೂ ಮನಸ್ಸಿನಲ್ಲಿತ್ತು. ಅಂದು ರಾತ್ರಿ ಮನೆಯಲ್ಲಿ ರಾಜ ಒಬ್ಬನೇ ಇದ್ದ. ಎಂಟು ಗಂಟೆ ಕಳೆದಿರಬಹುದು. ಏನನ್ನೋ ಆಲೋಚಿಸಿ ಕುಳಿತ ರಾಜ, ಬಾಗಿಲು ಸದ್ದಾದಾಗ ಆ ಕಡೆ ನೋಡಿದ. ಗೌರಿ ಬಾಗಿಲಲ್ಲಿ ನಿಂತಿದ್ದಳು. ಒಂದು ಕ್ಷಣ ಆಶ್ಚರ್ಯವಾದರೂ ಸಾವಧಾನದಿಂದ ಪ್ರಶ್ನಿಸಿದ.

“ಅರೆ! ಗೌರಿ, ಇದೇನು ಈಗ ಬಂದೆ?”

“ಬಂದೆ. ಏಕೆಂದು ನೀನೇ ಹೇಳು ನೋಡೋಣ.”

ಗೌರಿಯ ಮಾತುಗಳಲ್ಲಿ ತುಂಟತನವಿತ್ತು. ಆಕೆ ಸ್ವಲ್ಪ ತುಂಟಿ ಎಂಬುದು ರಾಜನಿಗೂ ಚೆನ್ನಾಗಿ ಗೊತ್ತು. ವರುಷ ಇಪ್ಪತ್ತು ಸಂದರೂ ಗೌರಿಗೆ ತುಂಟಾಟ ಇನ್ನೂ ಬಿಟ್ಟಿಲ್ಲ ಎಂದುಕೊಂಡ.

“ಇನ್ಯಾಕೆ ? ಕಮಲು ಹಾಗೂ ಸರಸುವಿನೊಂದಿಗೆ ಹರಟೆಹೊಡೆಯಲು.”

“ಅದಕ್ಕೆ ಇಷ್ಟು ಹೊತ್ತಲ್ಲೇನು?”

“ಈಗ ಪುರುಸೊತ್ತು ಸಿಕ್ಕಿರಬೇಕು. ಅದಕ್ಕೆ ಬಂದಿರಬೇಕು.”

“ಅಲ್ಲ!”

“ಮತ್ತೆ?”

“ಬೇರೆ ವಿಷಯಕ್ಕಾಗಿ”

“ಬೇರೆ ವಿಷಯಕ್ಕಾಗಿ?! ಅಂದರೆ ಹೊಸ ವಿಷಯ ಅನ್ನು. ಹೇಳಬಹುದಲ್ವ?!”

“ನಾನು ಬಂದಿದ್ದು…….ನಿನಗಾಗಿ”

“ನನಗಾಗಿ?! ಅಂದರೆ?”

“ನಿನಗಾಗಿ, ಅಂದರೆ ನಿನಗಾಗಿ. ಇದರಲ್ಲಿ ಅರ್ಥವಾಗದ್ದು ಏನಿದೆ?” ಗೌರಿ ಛೇಡಿಸಿದಳು. ರಾಜನ ಅಮಾಯಕತೆಗೆ ಆಕೆಗೆ ನಗುಬಂತು.

“ಬಿಡಿಸಿ ಹೇಳಬಹುದಲ್ಲ?”

“ನಿನ್ನ ಸುಖಕ್ಕಾಗಿ.”

“ನನ್ನ ಸುಖಕ್ಕಾಗಿ? ಅಂದರೆ ನಾನೇನು ಇದುವರೆಗೆ ಸುಖವಾಗಿ ಇರಲಿಲ್ವೇ?”

“ಇಲ್ಲ ಎಂದವರಾರು?”

“ಮತ್ತೇಕೆ ಈ ಮಾತು?”

“ನೀನು ಮರೆತುಬಿಟ್ಟೆಯಾ? ನಾನು ದೇವರಿಗೆ ಬಿಟ್ಟವಳು”

“ಗೌರಿ!”

ರಾಜ ಹೆಚ್ಚು ಕಡಿಮೆ ಚೀರಿದ್ದ. ರಾಜನ ಮೈ ಕಂಪಿಸುತ್ತಿತ್ತು. ’ಗೌರಿ ದೇವರಿಗೆ ಬಿಟ್ಟವಳು’ ಎನ್ನುವುದನ್ನಾಗಲೀ ತನ್ನ ಬಳಿಗೆ ಈ ರೀತಿಯಲ್ಲಿ ಬರುವುದನ್ನಾಗಲೀ ರಾಜ ಎಂದೂ ಬಯಸಿರಲಿಲ್ಲ. ಭಾವಿಸಿರಲೂ ಇಲ್ಲ.

“ಯಾಕೆ ಗೌರಿ, ಇಂತಹ ಮಾತು? ಇವತ್ತು ನಿನಗೇನಾಗಿದೆ?” ರಾಜ ಕೇಳಿದ.

“ಸದ್ಯ ನನಗೇನೂ ಆಗಿಲ್ಲ. ಆದರೆ ನಾನೀಗ ಯಾರು? ಎಂಬುದನ್ನು ಮರೆತುಬಿಟ್ಟಿಯಾ? ಇವತ್ತು ನಿನಗಾಗಿ…..”

“ಸಾಕು, ನಿಲ್ಲಿಸು. ನೀನು ಈ ರೀತಿ ಮಾತನಾಡುತ್ತಿ ಅಂತ ನಾನು ಅಂದುಕೊಂಡಿರಲಿಲ್ಲ. ನೀನು ತಪ್ಪು ತಿಳಿದಿದ್ದಿ ಗೌರಿ. ಯಾವ ದೇವರು ತನ್ನ ಮಕ್ಕಳನ್ನು ಈ ರೀತಿ ನರಕಕ್ಕೆ ತಳ್ಳುತ್ತಾನೆ? ನಿನ್ನನ್ನು ಈ ವೃತ್ತಿಗೆ ನೇಮಿಸಿದವರು ದೇವರೂ ಅಲ್ಲ, ದಿಂಡರೂ ಅಲ್ಲ. ನಿನ್ನಪ್ಪ!” ರಾಜ ಕಟುವಾಗಿಯೇ ನುಡಿದ.

“ಹಾಗಾದರೆ ದೇವಿ ಪಾತ್ರಿಯ ಮೈಯಲ್ಲಿ ಬಂದು ಹೇಳಿದುದು ಸುಳ್ಳೇನು?”

“ಪಾತ್ರಿಗೇನು? ಎಲ್ಲ ಬಿಟ್ಟು ಮೈಯಲ್ಲಿ ಬರುವುದೆಂದರೇನು? ಸುಮ್ಮನೆ ನಾಟಕ ಆಡುತ್ತಾನೆ. ನಿನಗೆ ಆತನ ಪುರಾಣ ಗೊತ್ತಿಲ್ವೇ? ಮುದುಕನಾದರೂ ಚಪಲ ಬಿಟ್ಟಿಲ್ಲ.

“ಹಾಗಾದರೆ ನನ್ನನ್ನು ದೇವರಿಗೆ ಬಿಟ್ಟಿದ್ದು ಆತನಿಗಾಗಿಯೇ?”

“ಅವನಿಗಲ್ಲದಿದ್ದರೆ ಅವನಂತಹ ಇನ್ನು ಹಲವರಿಗಾಗಿ. ಪುಕ್ಕಟೆ ಸಿಕ್ಕಿದ್ರೆ ಯಾರು ಬೇಡ ಅಂತಾರೆ? ಆದರೆ ನಾನಿದನ್ನು ಒಪ್ಪುವುದಿಲ್ಲ ಗೌರಿ. ಹೀಗೆ ಪಾಪದ ಹೆಣ್ಣುಮಕ್ಕಳನ್ನು ಇಂತಹ ನೀಚವೃತ್ತಿಗೆ ತಳ್ಳುವುದು ಯಾವ ನ್ಯಾಯ?”

“ಅದೇನೋ ನನಗೆ ಗೊತ್ತಿಲ್ಲ. ಅಪ್ಪನಿಗೆ ಇದೊಂದನ್ನು ಬಿಟ್ಟರೆ ಬೇರೆ ದಾರಿ ಇದ್ದಿರಲಿಲ್ಲ.”

“ನಿಜ, ನಿನ್ನ ಅಪ್ಪನಿಗೆ ಇದೊಂದನ್ನು ಬಿಟ್ಟರೆ ಬೇರೆ ದಾರಿ ಇದ್ದಿರಲಿಲ್ಲ. ನಿನ್ನ ಮಲತಾಯಿಗೆ ನೀನು ಬೇಕಿರಲಿಲ್ಲ. ನಿನಗೆ ಸೌಖ್ಯವಿಲ್ಲದಿದ್ದಾಗ ಸರಿಯಾಗಿ ಮದ್ದುಮಾಡಿಸಿದರೆ ತನ್ನ ಗಂಟು ಕರಗಿಹೋಗುತ್ತೇನೋ ಎಂದು ಹೆದರಿದ್ದಳು. ನಿನ್ನ ಅಪ್ಪ ಆಕೆಯ ದಾಸನಾಗಿದ್ದ. ಅವರಿಬ್ಬರೂ ಸೇರಿಕೊಂಡು ನಾಟಕ ಆಡಿದರು. ಆ ಪಾತ್ರಿ ಹಾಗೂ ನಿನ್ನ ಅಪ್ಪ ಕುಡಿತದಲ್ಲೂ ಪಾಲುದಾರರು ಅಂತ ಗೊತ್ತಿಲ್ವೇ? ಅದಕ್ಕೇ ಹೀಗೆ ಮಾಡಿದ. ಛೆ, ಏನು ಮಾಡೋಣ ಹೇಳು? ಅಂದು ನಾನು ಈಗಿನಂತೆ ಇರಬೇಕಾಗಿತ್ತು, ಆ ಪಾತ್ರಿಗೂ ನಿನ್ನಪ್ಪನಿಗೂ ಹರಕು ಎಕ್ಕಡದಿಂದ ರಪರಪನೆ ಬಾರಿಸುತ್ತಿದ್ದೆ. ಹೆತ್ತ ಮಗಳನ್ನು ನರಕಕ್ಕೆ ತಳ್ಳುವ ಅವ ಎಂತಹ ಅಪ್ಪ?”

“ಹಾಗಾದರೆ ನನ್ನನ್ನು ದೇವರಿಗೆ ಬಿಟ್ಟಮೇಲೆ, ನನ್ನ ಕಾಯಿಲೆ ವಾಸಿಯಾದದ್ದು ಸುಳ್ಳಾ?”

“ಅದೆಲ್ಲವೂ ಕಾಕತಾಳೀಯ ಗೌರಿ. ದೇವರಿಗೆ ಬಿಟ್ಟಮೇಲೆ ಕೈಕಟ್ಟಿ ಸುಮ್ಮನೆ ಕೂರುವುದಕ್ಕಾಗುತ್ತದೆಯೇ? ನಿನ್ನಪ್ಪ ಮದ್ದು ಮಾಡಿಸಿದ. ನಿನ್ನ ಮೇಲೆ ದೇವಿಯ ಅನುಗ್ರಹವೂ ಇತ್ತು. ಕಾಯಿಲೆ ವಾಸಿಯಾಯಿತು. ನಿನ್ನ ಅದೃಷ್ಟ ಚೆನ್ನಾಗಿದ್ದಿದ್ದರೆ ಅವರು ನಿನ್ನನ್ನು ದೇವರಿಗೆ ಬಿಡದಿರುತ್ತಿದ್ದರೂ ನಿನ್ನ ಕಾಯಿಲೆ ವಾಸಿಯಾಗುತ್ತಿತ್ತು. ನೀನು ಬದುಕುತ್ತಿದ್ದೆ, ಚೆನ್ನಾಗಿರುತ್ತಿದ್ದೆ ಗೌರಿ.”

“ಹಾಗಾದರೆ ಅಪ್ಪ ಮಾಡಿದ್ದು ತಪ್ಪು ಅಂತಿಯಾ?”

“ಅಲ್ಲದೆ ಇನ್ನೇನು?  ನಿನ್ನಪ್ಪ ಮಾತ್ರವಲ್ಲ. ಇನ್ನೂ ಹಲವರ ಸ್ವಾರ್ಥಕ್ಕೆ ನೀನು ಬಲಿಯಾದೆ.”

“ಈಗ ಈ ಜಂಜಾಟದೊಳಗೆ ಸಿಕ್ಕಿಹಾಕಿಕೊಂಡಿದ್ದೀನಲ್ಲ! ಏನು ಮಾಡಲಿ?”

“ನೀನು ಇನ್ನು ಮುಂದೆ ಈ ರೀತಿ ನಡೆದುಕೊಳ್ಳಬಾರದು. ದೇವರಿಗೆ ಬಿಟ್ಟವಳೆಂದು ಭಾವಿಸಿಕೊಳ್ಳಬಾರದು. ಅದು ಧರ್ಮವೂ ಅಲ್ಲ, ಸಂಸ್ಕೃತಿಯೂ ಅಲ್ಲ. ಇತರರಂತೆ ನೀನೂ ಒಬ್ಬ ಹೆಣ್ಣು. ನಿನಗೂ ಇತರರ ಹಾಗೆ ಬದುಕುವುದಕ್ಕೆ ಹಕ್ಕಿದೆ.  ಉಳಿದ ಹೆಣ್ಣುಮಕ್ಕಳಂತೆ ನೀನೂ ಒಬ್ಬ ಹುಡುಗನನ್ನು ಮದುವೆಯಾಗಿ ಗಂಡನೊಂದಿಗೆ ಪ್ರೀತಿಯಿಂದ,  ಒಂದೆರಡು ಮಕ್ಕಳೊಂದಿಗೆ ಸುಖವಾಗಿರಬೇಕು. ಆಗಲೇ ನಿನ್ನ ಬಾಳಿಗೊಂದು ನಿಶ್ಚಿತವಾದ ಅರ್ಥ ಬಂದೀತು ಗೌರಿ. ಇದನ್ನೇ ನಾನು ಬಯಸುವುದು.”

“ಹಾಗೆ ….ಮಾಡಿದರೆ ….. ದೇವಿ ನನ್ನ ಮೇಲೆ ಮುನಿಯುವುದಿಲ್ಲವೇನು?”

“ಮತ್ತೆ ಮತ್ತೆ ಅದನ್ನೇ ಏಕೆ ನೆನೆಯುತ್ತಿ ಗೌರಿ? ದೇವಿ ಏಕೆ ಮುನಿಯಬೇಕು? ಮಗಳು ತನ್ನನ್ನು ತಾನು ತಿದ್ದಿಕೊಂಡರೆ, ಮಗಳ ಬಾಳು ಅರ್ಥಪೂರ್ಣವೆನಿಸಿದರೆ  ಯಾವ ತಾಯಿ ಮುನಿಯುತ್ತಾಳೆ ಹೇಳು? ಕಂಡಿತಾ ಇಲ್ಲ. ಬದಲಾಗಿ ಸಂತೋಷಪಡುತ್ತಾಳೆ. ಇನ್ನೂ ಕಾಲ ಮಿಂಚಿಲ್ಲ ಗೌರಿ. ನಿನ್ನ ಬದುಕನ್ನು ಇನ್ನಾದರೂ ತಿದ್ದಿಕೊಳ್ಳಬಹುದು. ತಿಳಿದೂ ತಿಳಿದೂ ನರಕದ ಬದುಕನ್ನು ಬಯಸಬೇಡ, ನಿನ್ನ ಬದುಕು ಮೂರಾಬಟ್ಟೆಯಾದೀತು!, ಯಾರದ್ದೋ ಸ್ವಾರ್ಥಕ್ಕೆ ಬಲಿಯಾಗಬೇಡ. ನಿನ್ನ ಅವನತಿಯನ್ನು ನಾನಂತೂ ಸಹಿಸಲಾರೆ ಗೌರಿ.”

ಗೌರಿಯ ಕಣ್ಣುಗಳಿಂದ ಒಂದೇ ಸಮನೆ ಕಣ್ಣೀರು ಉಕ್ಕಿತು. ಗೌರಿ ಮೊದಲ ಬಾರಿಗೆ ಅತ್ತಳು. ತನ್ನ ಬದುಕಿನ ವಿಷಮತೆಯನ್ನು ಈಗ ಅವಳು ಅರಿಯುವಂತಾಗಿದ್ದಳು. ಆಕೆಯ ಮುಸಿಮುಸಿ ಅಳು ರಾಜನಿಗೂ ಕಣ್ಣನ್ನು ಮಂಜಾಗಿಸಿತು. ಮೊದಲು ಅರಳು ಹುರಿದಂತೆ ಮಾತನಾಡಿದ ಗೌರಿ ಇವಳೇನಾ? ಎಂದುಕೊಳ್ಳುವಂತಾಯಿತು.

“ನಿಜ ಗೌರಿ, ನೀನು ಇದುವರೆಗೂ ನಿನ್ನ ಬದುಕಿನ ಬಗ್ಗೆಯಾಗಲೀ ನಿನ್ನ ಭವಿಷ್ಯದ ಬಗ್ಗೆಯಾಗಲೀ ಯೋಚಿಸಲೇ ಇಲ್ಲ. ನಿನ್ನ ಅಪ್ಪ ಹಾಗೂ ಮಲತಾಯಿಯರಿಬ್ಬರೂ ನಿನ್ನ ಮನಸ್ಸಿನಲ್ಲಿ ಇದೇ ವಿಷಯವನ್ನು ಮತ್ತೆ ಮೆತ್ತೆ ತುಂಬಿಸುತ್ತಿದ್ದಾಗ, ನಿನ್ನ ಮನಸ್ಸಿನಲ್ಲಿ ಇದೇ ವಿಷಯ ತುಂಬಿಕೊಳ್ಳುತ್ತಿದ್ದಾಗ ಬೇರೆ ವಿಷಯ ಹೊಳೆಯದಿದ್ದುದು ಆಶ್ಚರ್ಯವೇನೂ ಅಲ್ಲ, ಬಿಡು. ನಿನ್ನಲ್ಲಿ ಛಲವಿದ್ದರೆ, ಧೈರ್ಯವಿದ್ದರೆ, ಆತ್ಮವಿಶ್ವಾಸವಿದ್ದರೆ ನೀನು ಕೂಡಾ ಎಂತಹ ಕಷ್ಟವನ್ನಾಗಲೀ ಸಮಸ್ಯೆಯನ್ನಾಗಲೀ ಮೆಟ್ಟಿನಿಲ್ಲಬಲ್ಲೆ ಗೌರಿ!”

“ಆದರೆ…ಆದರೆ…!

“ಆದರೆ ಏನು?”

“ನಾನು ದೇವರಿಗೆ ಬಿಟ್ಟವಳು ಎಂದು ಊರಿಗೆಲ್ಲ ತಿಳಿದಿದೆ. ನನಗೆಲ್ಲಿಯ ಮದುವೆ? ನಾನು….”

ರಾಜ ಅರ್ಧದಲ್ಲಿಯೇ ತಡೆದ. ಬಾಯಿಂದ ಬಾರದ ಮಾತು ಅವಳ ಕಣ್ಣುಗಳಿಂದ ವ್ಯಕ್ತವಾಗಿತ್ತು.

“ಇಲ್ಲ ಗೌರಿ, ನಮ್ಮನ್ನು ನಾವು ಕೀಳೆಂದು ಯಾವತ್ತೂ ಭಾವಿಸಿಕೊಳ್ಳಬಾರದು. ನೀನಾಗಿಯೇ ಈ ವೃತ್ತಿಗಿಳಿದೆಯೇನು? ಯಾರದ್ದೋ ಸ್ವಾರ್ಥಕ್ಕೆ ನೀನು ಬಲಿಪಶುವಾದೆ. ನಿನಗೆ ಬಂಧಿತವಾಗಿರುವ ಈ ಕೀಳು ದಾಸ್ಯದ ಸಂಕೋಲೆಯನ್ನು ನೀನೀಗ ಕಿತ್ತೊಗೆಯಬೇಕು.”

“ಹೇಗೆ ಕಿತ್ತೊಗೆಯಲಿ ರಾಜ? ಯಾವ ಭರವಸೆಯಿಂದ? ನನ್ನನ್ನು ಇದರಿಂದ ಸ್ವತಂತ್ರಳಾಗುವುದಕ್ಕೆ ಯಾರು ಬಿಡುತ್ತಾರೆ ಹೇಳು? ಹೋಗಲಿ ಈ ಸ್ಥಿತಿಯಲ್ಲಿ ನನ್ನನ್ನು ಕಟ್ಟಿಕೊಳ್ಳುವುದಕ್ಕೆ ಯಾರು ಸಿದ್ಧರಿದ್ದಾರೆ ಹೇಳು?”

“ಮನಸ್ಸಿದ್ದರೆ ಮಾರ್ಗವಿದೆ, ನಿನ್ನನ್ನು ಯಾರು ಯಾರೋ ಕಟ್ಟಿಕೊಳ್ಳಬೇಕಾಗಿಲ್ಲ ಗೌರಿ. ನೀನು ಒಪ್ಪುವುದಾದರೆ ನಾನಿದ್ದೇನೆ.”

“ನಿನ್ನ ಮನೆಯವರೆಲ್ಲ ಒಪ್ಪುತ್ತಾರೆಯೇ?”

“ಕಂಡಿತ ಒಪ್ಪುವುದಿಲ್ಲ ಎಂಬುದು ನನಗೂ ಗೊತ್ತು. ಒಂದಷ್ಟು ದಿನ ಪ್ರತಿಭಟಿಸಿಯಾರು. ಅನಂತರ ಸುಮ್ಮನಾಗುತ್ತಾರೆ. ನೀನು ಇದಕ್ಕೆಲ್ಲ ಚಿಂತೆಮಾಡಬೇಡ.  ಈ ಅರ್ಥವಿಲ್ಲದ ಸಂಪ್ರದಾಯಗಳಿಗೆಲ್ಲ ನಾನು ಬಗ್ಗುವುದಿಲ್ಲ. ನನ್ನ ಮನೆಯವರ ಸಂತೋಷಕ್ಕಿಂತಲೂ ಯಾರದ್ದೋ ಸ್ವಾರ್ಥಕ್ಕೆ ಬಲಿಯಾಗುತ್ತಿರುವ ಒಬ್ಬ ಹೆಣ್ಣಿನ  ಬದುಕನ್ನು ಸರಿಪಡಿಸುವುದಷ್ಟೇ ನನಗೆ ಮುಖ್ಯ. ಮೇಲಾಗಿ ನೀನು ನನ್ನ ಕಣ್ಣಮುಂದೆಯೇ ಬೆಳೆದವಳು. ನಿನ್ನ ಗುಣ, ಮಾತು, ಮನಸ್ಸುಗಳೆಲ್ಲವೂ ನನಗೆ ಗೊತ್ತು. ಸಮಾಜದಲ್ಲಿ ನಮ್ಮಿಂದ ಒಂದು ದೊಡ್ಡ ಬದಲಾವಣೆ ಆಗುವುದಾದರೆ ಆಗಲಿ. ಮಾಡದ ಅಪರಾಧಕ್ಕಾಗಿ ನಾವು ತಲೆತಗ್ಗಿಸುವುದು ಬೇಡ. ಈಗ ನಮ್ಮನ್ನು ಎಲ್ಲರೂ ವಿರೋಧಿಸಬಹುದು. ನಾಳೆ ಅವರೇ ನಮ್ಮನ್ನು ಒಪ್ಪಿಕೊಳ್ಳುತ್ತಾರೆ. ಹೆದರಬೇಡ, ಧ್ಯೈರ್ಯವಾಗಿರು.”

ರಾಜನ ದಿಟ್ಟತನದ ಉತ್ತರ  ಗೌರಿಯನ್ನು ಒಂದು ಕ್ಷಣ ಗಲಿಬಿಲಿಗೊಳಿಸಿತು. ಗೌರಿ ಏನನ್ನೋ ಮಾತನಾಡಲು ಹಂಬಲಿಸಿದಳು. ಏನೋ ನಡುಕ, ಏನೋ ಪುಳಕ. ಮಾತು ಆಕೆಯ ಬಾಯಿಂದ ಹೊರಬರಲಿಲ್ಲ.

“ನನಗೆ ಎಲ್ಲವೂ ಗೊತ್ತು ಗೌರಿ. ನಿನ್ನಲ್ಲಿ ಹೆದರಿಕೆ ತುಂಬಿಕೊಂಡಿದೆ. ಸಮಾಜದಲ್ಲಿನ ಕೆಟ್ಟ ಸಂಪ್ರದಾಯದ ಬಗ್ಗೆ, ನಿನ್ನ ಅಪ್ಪ ಹಾಗೂ ಮಲತಾಯಿಯರ ದುರಹಂಕಾರದ ಬಗ್ಗೆ, ಊರಿನ ಜನ ನಿನ್ನ ವಿಚಾರದಲ್ಲಿ ಹೊಂದಿರುವ ಭಾವನೆಗಳ ಬಗ್ಗೆ, ದೇವರಿಗೆ ಬಿಟ್ಟ ತಾನು ಅದೆಲ್ಲವನ್ನೂ ಮೀರಿ ಮದುವೆಯಾಗುವುದರ ಬಗ್ಗೆ ನಿನಗೆ ಕಳವಳವಿದೆ. ನಾಲ್ಕಾರು ದಿನಗಳು ಕಳೆದುಹೋದರೆ ಎಲ್ಲವೂ ಸರಿಹೋಗುತ್ತದೆ. ನಿನಗೆ ಅನ್ಯಾಯವಾಗಲು ನಾನು ಯಾವತ್ತೂ ಬಿಡುವುದಿಲ್ಲ ಗೌರಿ. ನೀನು ಮನಸ್ಸನ್ನು ಗಟ್ಟಿಗೊಳಿಸಬೇಕಷ್ಟೇ.”

ರಾಜನ ದಿಟ್ಟತನದ  ಮಾತಿನಿಂದ ಗೌರಿಗೆ ಒಂದೆಡೆಯಿಂದ ಸಂತೋಷ, ಇನ್ನೊಂದೆಡೆಯಿಂದ ದುಃಖದಿಂದ ಗಂಟಲುಬ್ಬಿ ಬಂತು. ಆಕೆಗೆ ಏನೆನಿಸಿತೋ ರಾಜನ ಪಾದಗಳಲ್ಲಿ ಬಾಗಿದಳು. ರಾಜ ತಡೆದು ತನ್ನ ಬಾಹುಗಳಲ್ಲಿ ಆಕೆಯನ್ನು ಆಲಂಗಿಸಿಕೊಂಡ. ಮುಂಗುರುಳು ನೇವರಿಸಿದ, ತಲೆಯ ಮೇಲೆ ಕೈಯಾಡಿಸಿದ. ಬೆನ್ನು ತಟ್ಟಿದ. ಗೌರಿಗೆ ತನಗೆ ಹಂಬಲಿಸುವವರೂ ಇದ್ದಾರಲ್ಲಾ! ಅನಿಸಿತು. ಎಲ್ಲೋ ಉಕ್ಕಿದ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ನನ್ನನ್ನು ಎಳೆದು ದಡಸೇರಿಸಿದ  ಅನುಭವವಾಯಿತು.

ರಾತ್ರಿ ಮೀರಿದ್ದರಿಂದ ಮನೆಗೆ ಹೋಗದೆ ರಾಜನ ಮನೆಯಲ್ಲಿಯೇ ಉಳಿದುಕೊಂಡ ಗೌರಿಗೆ ಏನೇನೋ ಭಾವನೆಗಳು. ರಾಜನ ಆಕರ್ಷಕ ರೂಪಕ್ಕೆ, ಮಾತಿನ ವೈಖರಿಗೆ, ಕಟ್ಟುಮಸ್ತಾದ ಆಳ್ತನಕ್ಕೆ, ಆತನ ತುಂಟ ನಗುವಿಗೆ, ವಿಶ್ವಾಸಭರಿತ ನೋಟಕ್ಕೆ ಗೌರಿ ಮೊದಲೇ ಮರುಳಾಗಿದ್ದಳು. ಎಲ್ಲ ಹುಡುಗಿಯರಂತೆ ತಾನೂ ರಾಜನನ್ನು ಮದುವೆಯಾಗಿ ಕಷ್ಟ ಸುಖ ಹಂಚಿಕೊಂಡು ಬಾಳುವಂತಿದ್ದರೆ, ಒಂದೆರಡು ಮುದ್ದಾದ ಮಕ್ಕಳ ತಾಯಿಯಾಗಿ ಚೊಕ್ಕವಾಗಿ ಸಂಸಾರ ನಡೆಸುವಂತಿದ್ದರೆ –ಹೀಗೆ ಒಂದಲ್ಲ ಎರಡಲ್ಲ, ಹಲವಾರು ಆಸೆ-ಆಕಾಂಕ್ಷೆಗಳನ್ನು ಹೊತ್ತುಕೊಂಡು ತನ್ನ ಮನಸ್ಸಿನಲ್ಲಿಯೇ ಮಂಡಿಗೆ ಮೆಲ್ಲುತ್ತಿದ್ದವಳಿಗೆ ಅವೆಲ್ಲವೂ ಈಡೇರಬಹುದೆಂಬ ನಂಬಿಕೆಯೇ ಇರಲಿಲ್ಲ. ಆದರೆ ಇಂದಾಗುತ್ತಿರುವುದು ಕನಸೋ ನನಸೋ?! ಗೌರಿಯ ಮನದಲ್ಲಿ ನೂರಾರು ಸಾವಿರಾರು ಭಾವನೆಗಳು, ತುಮುಲಗಳು. ರಾತ್ರಿಯಿಡೀ ನಿದ್ದೆ ಬಾರದೆ ಹೊರಳಾಡಿದಳು. ಮನುಷ್ಯ ಏನನ್ನೋ ಬಗೆದರೆ ದೈವ ಇನ್ನೇನನ್ನೋ ಬಗೆಯುತ್ತದೆ ಎಂಬುದು ದೃಢವಾಯಿತು.

 

ರಾಜ, ಗೌರಿಯೊಂದಿಗೆ ಊರಿಂದ ಮರೆಯಾಗಿ ಒಂದು ವಾರದಲ್ಲಿಯೇ ಮತ್ತೆ ದಂಪತಿಗಳಾಗಿ  ಮರಳಿ ಆಗಮಿಸಿದಾಗ ಊರಿಗೆ ಊರೇ ಸಿಡಿದೆದ್ದಿತ್ತು. ರಾಜನನ್ನು ನೋಡಿ ಚೆನ್ನಯ್ಯ ಕೋಪದ ಕೆಂಡವಾಗಿದ್ದ.

“ನೀನು ನನ್ನ ಮಗನೇ ಅಲ್ಲ, ನನ್ನ ಮಗ ಎಂದೋ ಸತ್ತುಹೋಗಿದ್ದಾನೆ. ಮುಖ ತೋರಿಸಬೇಡ. ತೊಲಗಾಚೆ!”

ಎಂದು ಇನ್ನೂ ಏನೇನೋ ಅಂದು ಸಿಟ್ಟಿನಿಂದ ನಡುಗುತ್ತ ತನ್ನ ಕೋಪ ಶಮನಮಾಡಿಕೊಳ್ಳಲು ಪ್ರಯತ್ನಿಸಿದ್ದ. ಚೆನ್ನಯ್ಯನಿಂದ ಮೊದಲ ತಪ್ಪು ಘಟಿಸಿಹೋಯಿತು.

“ಇವಳೋ ಮಿಟುಕಲಾಡಿ, ನನ್ನ ಮನೆತನದ ಮರ್ಯಾದೆಯೆಲ್ಲವನ್ನೂ ಹರಾಜುಹಾಕಿಬಿಟ್ಟಳು. ಇವಳು ಹೀಗೆ ಮಾಡುತ್ತಾಳೆಂಬುದು ಮೊದಲೇ ಗೊತ್ತಿರುತ್ತಿದ್ದರೆ ಆವತ್ತು ಜ್ವರಬಂದಿದ್ದಾಗ ಮದ್ದೇ ಮಾಡುತ್ತಿರಲಿಲ್ಲ. ಆವತ್ತೇ ಸತ್ತುಹೋಗಿದ್ದರೆ ಇದೆಲ್ಲವನ್ನೂ ನೋಡುವ ಅವಕಾಶವೇ ಬರುತ್ತಿರಲಿಲ್ಲ”

ಎಂದು ಮಾದಪ್ಪ ತನ್ನ ಕೋಪವೆಲ್ಲವನ್ನೂ ನಾನಾ ಬಗೆಯಲ್ಲಿ ಹೊರಹಾಕಿದ. ಮಾದಪ್ಪ ಯಾವುದು ಹೀನಾಯವೋ ಅದೆಲ್ಲವನ್ನೂ ಆಡಿದ. ಅವನ ಹೆಂಡತಿಯ ಮೈಕೈಗಳೆಲ್ಲವೂ ಸಿಡಿಮಿಡಿಗುಟ್ಟುತ್ತಿದ್ದವು. ಅಷ್ಟಕ್ಕೇ ಕೋಪ ಶಮನವಾಗದೆ ’ರಾಜನ ಹಾಗೂ ಮಗಳು ಗೌರಿಯ ಬೆನ್ನು ಸುಲಿಯುತ್ತೇನೆ’ ಎಂದು ಕೋಲು ಹಿಡಿದು ಮುನ್ನುಗ್ಗಿದಾಗ ರಾಜ ಕೈಹಿಡಿದು ತಡೆದ. ರಾಜನ ಪ್ರತಿಭಟನೆಯನ್ನು, ಕಣ್ಣು ಕೆಕ್ಕರಿಸಿ ದುರುಗುಟ್ಟಿದ ರೀತಿಯನ್ನು ಕಂಡ ಮಾದಪ್ಪನಿಗೆ ಹೊಡೆಯಲು ಧೈರ್ಯ ಸಾಲಲಿಲ್ಲ. ಮಗಳಿಗೂ ನಿಂತಲ್ಲಿ ನಿಲ್ಲದೆ, ಕೂತಲ್ಲಿ ಕೂರದೆ ವಾಚಾಮಗೋಚರ ಬೈದ. ಎಲ್ಲದಕ್ಕೂ ರಾಜ ಹಾಗೂ ಗೌರಿಯರ ಮೌನವೇ ಉತ್ತರವಾಯಿತು. ಊರಲ್ಲಿ ತಮಗೆ ಜಾಗವಿಲ್ಲ ಎಂಬುದು ಅವರಿಬ್ಬರಿಗೂ ಅರಿವಾಗಿತ್ತು. ಊರನ್ನು ಬಿಟ್ಟು ಹೋಗುವ ಮೊದಲು ದೇವಿಯ ದರ್ಶನಕ್ಕೆಂದು ದೇವಿಯ ಗುಡಿಗೆ ಬಂದಾಗ ಊರ ಪ್ರತಿಷ್ಠಿತರು ತಡೆದರು.  

“ನೀನು ನೀತಿಗೆಟ್ಟವನು. ನಡತೆಗೆಟ್ಟವನು. ಸಮಾಜಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಿ. ದೇವಿಗೆ ಅವಮಾನವಾಗುವ ರೀತಿಯಲ್ಲಿ ವರ್ತಿಸಿದ್ದಿ.  ದೈವದ್ರೋಹಿ.” ಎಂದೆಲ್ಲ ಹಂಗಿಸಿದವರೆಷ್ಟೋ ಮಂದಿ. ತಮ್ಮ ತಮ್ಮ ಮೂಗಿನ ನೇರಕ್ಕೆ ಆಡುವವರ ಮಾತುಗಳನ್ನು ಕೇಳಿ ರಾಜನಿಗೆ ವಿಷಾದದ ನಗು ಬಂತು. ಆತನಿಗೆ ಏನನಿಸಿತೋ! ಗೌರಿಯ ಕೈಹಿಡಿದು ಹೊರಗಿನಿಂದಲೇ ದೇವಿಯ ಗುಡಿಗೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ನಮಸ್ಕರಿಸಿ ಹೊರಟಾಗ ಊರ ಜನ ಮಿಕಿಮಿಕಿ ನೋಡುತ್ತಲೇ ಇದ್ದರು. ತಮ್ಮವರ  ದೃಷ್ಟಿಯಲ್ಲಿ ತಪ್ಪಿತಸ್ಥರಾದ ತಾವು ಊರವರ ದೃಷ್ಟಿಯಲ್ಲಿಯೂ ಹಾಗೆಯೇ ಅದುದು ರಾಜನಿಗಾಗಲೀ ಗೌರಿಗಾಗಲೀ ಆಶ್ಚರ್ಯವೇನೂ ಆಗಲಿಲ್ಲ.

 

ರಾಜ ಊರಿಂದ ಮರೆಯಾದ ಅನಂತರ ಚೆನ್ನಯ್ಯ ಯಾವುದೋ ಕಾಯಿಲೆಗೆ ಗುರಿಯಾದ. ವಾಸಿಯಾಗದ ಕಾಯಿಲೆ. ಚೆನ್ನಯ್ಯನ ಸತ್ವವನ್ನೆಲ್ಲ ಹೀರತೊಡಗಿತ್ತು. ’ಮಗನ ತಪ್ಪಿಗೆ ಅಪ್ಪನಿಗೆ ಶಿಕ್ಷೆ’, ’ದೇವಿಯ ಇಚ್ಚೆಗೆ ವಿರುದ್ಧವಾಗಿ ನಡೆದುಕೊಂಡರೆ ಒಳಿತಾಗುತ್ತದೆಯೇ’, ’ಬಿಸಿರಕ್ತ, ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದೇ ಅಗುತ್ತದೆ’,  ’ಯಾರದ್ದೋ ತಪ್ಪಿಗೆ ಯಾರಿಗೋ ಶಿಕ್ಷೆ’-ಹೀಗೆ ಜನ ತಮಗಿಷ್ಟ ಬಂದಂತೆ ಆಡಿಕೊಂಡರು. ಆಡಿಕೊಳ್ಳುತ್ತಲೇ ಇದ್ದರು. ಚೆನ್ನಯ್ಯನಿಗೆ ಊರವರ ಮಾತೇ ಸರಿ ಎಂದೆನಿಸತೊಡಗಿತು. ದೇವಿಗೆ ತಪ್ಪುಕಾಣಿಕೆ ಹಾಕಿದ. ಪರಿಪರಿಯಾಗಿ ಬೇಡಿಕೊಂಡ. ದೇವಿಯನ್ನೇ ನಂಬಿದ. ಅವರಿವರು ಸೂಚಿಸಿದ ವೈದ್ಯರನ್ನೆಲ್ಲ ನೋಡಿಬಂದ. ಅವರು ಕೊಟ್ಟ ಔಷಧಿ, ಕಷಾಯಗಳೆಲ್ಲವನ್ನೂ ಹೊಟ್ಟೆಗಿಳಿಸಿದ. ಆದರೂ ಕಾಯಿಲೆ ಜಪ್ಪಯ್ಯ ಎಂದರೂ ಕರಗಲಿಲ್ಲ. ಉಳಿಸಿದ್ದ ಚೂರುಪಾರು ಹಣ ಮಾತ್ರ ಮಂಜುಗಡ್ಡೆಯಂತೆ ಕರಗತೊಡಗಿತು. ಕಾಯಿಲೆ ಮಾತ್ರ ನಿಧಾನವಾಗಿ ಗಟ್ಟಿಗೊಳ್ಳುತ್ತ ಚೆನ್ನಯ್ಯನೊಂದಿಗೆ ಕಣ್ಣುಮುಚ್ಚಾಲೆಯಾಡತೊಡಗಿತು.

 

’ರಾಜ ತಪ್ಪಿಹೋದ. ಇನ್ನು ತನ್ನ ಕುಲಕಸುಬನ್ನು ಮುಂದುವರೆಸಿಕೊಂಡು ಹೋಗುವವರಾರು?’, ’ಬಿಟ್ಟೆನೆಂದರೂ ಬಿಡದ ಕಾಯಿಲೆ ತನ್ನನ್ನು ಹಿಂಡಿ ಹಿಪ್ಪೆಮಾಡುತ್ತಿದೆ. ಹೊಟ್ಟೆಹೊರೆಯುವ ಬಗೆ ಹೇಗೆ?,’ ’ಹೆಣ್ಣುಮಕ್ಕಳಿಬ್ಬರಿಗೂ  ಒಂದು ದಾರಿತೋರಿಸಬೇಕಲ್ಲ! ಮಗನ ಈ ಅವಾಂತರದಿಂದಾಗಿ ಅವರನ್ನು ಕಟ್ಟಿಕೊಳ್ಳುವವರು ಯಾರು?’, ’ಊರ ದೇವಿಯ ಉತ್ಸವದಲ್ಲಿ ತಟ್ಟಿರಾಯನನ್ನು ಕುಣಿಸುವವರಾರು? ತನ್ನಿಂದ ಈ ಸೇವೆ ಅಳಿದುಹೋಗಬಾರದಲ್ಲ!’ ಹೀಗೆ ಚೆನ್ನಯ್ಯನ  ಮನಸ್ಸಿನಲ್ಲಿ ನೂರಾರು ಸವಾಲುಗಳ, ಚಿಂತೆಗಳ ಅಳಲು. ಮಗಳಂದಿರ ಮುಖನೋಡುವಾಗ, ತನ್ನ ಸ್ಥಿತಿಗತಿಗಳನ್ನು ಗಮನಕ್ಕೆ ತಂದುಕೊಂಡಾಗ ಚೆನ್ನಯ್ಯ ದಿಗಿಲುಗೊಳ್ಳುತ್ತಾನೆ. ಈಗೀಗ ರಾಜ ಕ್ಷಣ ಕ್ಷಣಕ್ಕೂ ನೆನಪಿಗೆ ಬರುತ್ತಾನೆ. ಆತನ ನಿಲುವು ಸರಿಯೇ? ತಪ್ಪೇ? ಯಾವುದನ್ನೂ ಚೆನ್ನಯ್ಯ ಖಚಿತಪಡಿಸಿಕೊಳ್ಳಲಾರ. ತನ್ನ ಸಂಸಾರದ ಈ ದುಸ್ಥಿತಿಗಂತೂ ಅವನೇ ಕಾರಣ ಎಂಬ ವಿಚಾರ ಆತನ ಮನಸ್ಸನ್ನು ಮತ್ತೆ ಮತ್ತೆ ಘಾಸಿಗೊಳಿಸುತ್ತದೆ.

 

ಹೀಗೇ ಚಿಂತಿತನಾಗಿದ್ದಾಗ ಒಂದು ದಿನ ಚೆನ್ನಯ್ಯನಿಗೆ, ತನ್ನ ದೂರದ ಸಂಬಂಧಿ ವಿಶ್ವನನ್ನು ದತ್ತುತೆಗೆದುಕೊಂಡರೆ ಹೇಗೆ? ಎಂಬ ಹೊಸ ಆಲೋಚನೆಯೊಂದು ಹೊಳೆಯಿತು. ’ರಾಜನ ಸ್ಥಾನದಲ್ಲಿ ಇನ್ನೊಬ್ಬನನ್ನು ದತ್ತುಮಗನನ್ನಾಗಿ ಸ್ವೀಕರಿಸಿ ಮನೆತನದ ಮರ್ಯಾದೆಯನ್ನು ಉಳಿಸುತ್ತೇನೆ’ ಎಂದುಕೊಂಡ ಚೆನ್ನಯ್ಯ. ವಿಶ್ವ ಕಟ್ಟುಮಸ್ತಾದ ಆಳು. ಪ್ರಾಯ ಬಲಿತಿದೆ. ಮೀಸಿ ಚಿಗುರಿದೆ. ಎದೆಸೆಟೆಸಿ ನಡೆಯುತ್ತಾನೆ. ತನ್ನ ಸಂಸಾರವನ್ನು ಚೆನ್ನಾಗಿ ನೋಡಿಕೊಂಡಾನು! ’ತಟ್ಟಿರಾಯನನ್ನು ಕುಣಿಸಲು ಇವನೇ ಸೈ’ ಎಂದು ಯೋಚಿಸಿದ ಚೆನ್ನಯ್ಯ ಮನೆಯಲ್ಲಿ ಏನೂ ಪ್ರಸ್ತಾಪಿಸದೆ ಯೋಚನೆಯನ್ನು ಈಡೇರಿಸಿಕೊಂಡ. ಚೆನ್ನಯ್ಯನಲ್ಲಿ ಏನಿಲ್ಲವೆಂದರೂ ಸ್ವಂತ ಸಂಪಾದನೆಯ  ಒಂದಿಷ್ಟು ಆಸ್ತಿಯಾದರೂ ಇತ್ತು. ಕೂತು ಉಣ್ಣಬಹುದೆಂಬ ದುರಾಸೆಯಿಂದಲೇ ಬಂದಿದ್ದ ವಿಶ್ವ. ವಿಶ್ವನ ಸ್ವಭಾವವನ್ನು ಚೂರುಪಾರು ಬಲ್ಲ ಕಮಲು ಹಾಗೂ ಸರಸೂ ಅಪ್ಪನ ಮುಂದೆ ಏನೂ ಆಡಲಾರದೆ ಒದ್ದಾಡಿದರು. ಚೆನ್ನಯ್ಯನಿಂದ ಎರಡನೆಯ ತಪ್ಪು ಘಟಿಸಿಹೋಯಿತು.

 

ಮುಂದಿನ ವರ್ಷದ ಉತ್ಸವದಲ್ಲಿ ವಿಶ್ವನೇ ತಟ್ಟಿರಾಯನನ್ನು ಕುಣಿಸಿದ. ಹಿಂದಿನ ವರ್ಷಗಳಲ್ಲಿ  ಚೆನ್ನಯ್ಯ ಹಾಗೂ ರಾಜ ತಟ್ಟಿರಾಯನನ್ನು ಕುಣಿಸಿದ್ದನ್ನು ವಿಶ್ವ ನೋಡಿದ್ದ. ವಿಶ್ವನ ಕುಣಿತವನ್ನು ನೋಡಿ ಜನ ರಾಜನಂತೆ ಅಲ್ಲದಿದ್ದರೂ  ’ಪರವಾಗಿಲ್ಲ’ ಎಂದುಕೊಂಡರು. ದಿನಗಳೆದಂತೆ ವಿಶ್ವನ ಒಂದೊಂದೇ ವಿಶ್ವರೂಪ ಹೊರಬರತೊಡಗಿತು. ’ಬರಬರುತ್ತ ರಾಯನ ಕುದುರೆ ಕತ್ತೆಯಾಯಿತು’ ಎಂಬಂತೆ ವಿಶ್ವ ಊರ ಪುಂಡರ ಸಹವಾಸದಲ್ಲಿ ಮುಳುಗಿಹೋದ. ವಿಶ್ವ ವಿಶ್ವನಾಗಿ ಉಳಿಯಲಿಲ್ಲ. ಎಷ್ಟು ಹೊತ್ತಿಗೋ ಮನೆಗೆ ಬರತೊಡಗಿದವನು  ಅನಂತರ ಕುಡಿದು ಬರತೊಡಗಿದಾಗ ಚೆನ್ನಯ್ಯ ಎಚ್ಚರಿಸಿದ. ಆದರೆ ವಿಶ್ವನ ದರ್ಪದ ಮುಂದೆ ಚೆನ್ನಯ್ಯನ ಅಧಿಕಾರ, ಹಿರಿತನ ನಡೆಯಲಿಲ್ಲ. ಚೆನ್ನಯ್ಯನ ಕನಸಿನ ಗೋಪುರ ಮುರಿದುಬಿತ್ತು. ದಿನದಿಂದ ದಿನಕ್ಕೆ ವಿಶ್ವನ ಕಾಟವೂ ಹೆಚ್ಚಾಗತೊಡಗಿತು. ಕುಡಿತವೂ ಕೂಡಾ. ಹೊಟ್ಟೆಯಲ್ಲಿ ತುಂಬುವಷ್ಟು ಕುಡಿದುಬಂದು ಚೆನ್ನಯ್ಯನನ್ನು ಆಸ್ತಿಗಾಗಿ ಕಾಡತೊಡಗಿದ. ತಿಂಗಳುಗಳು ಉರುಳಿದರೂ ವರ್ಷಗಳು ಸಂದರೂ ವಿಶ್ವನ ಸ್ವಭಾವದಲ್ಲಿ, ದಿನಚರಿಗಳಲ್ಲಿ ಬದಲಾವಣೆ ಕಾಣಲಿಲ್ಲ. ಆತನ ಹಿಂಸೆ, ಕಾಟ ಸಹಿಸಿಕೊಳ್ಳಲಾರದೆ, ಹಾಗಾದರೂ ಸರಿಯಾಗಲಿ ಎಂದುಕೊಂಡು ಆಸ್ತಿಯನ್ನು ವಿಶ್ವನ ಹೆಸರಿಗೆ ಬರೆದುಕೊಟ್ಟ. ಚೆನ್ನಯ್ಯನಿಂದ ಮೂರನೆಯ ತಪ್ಪು ಘಟಿಸಿಹೋಯಿತು.

 

ವಿಶ್ವನ ವಿಶ್ವರೂಪದ ಪರಿಚಯ ಊರವರಿಗೆ ತಿಳಿಯುವುದಕ್ಕೆ ಬಹಳ ಕಾಲ ಬೇಕಾಗಲಿಲ್ಲ. ’ಹೂಸೋದು ತಡ  ಅಂದರೆ ನಾರೋದು ತಡವಾ?’ ಎಂಬಂತೆ ವಿಶ್ವನ ಲೇಲೆಗಳ ಪಟ್ಟಿ ಬೆಳೆಯುತ್ತ ಹೋಯಿತು. ಅದೊಂದು ದಿನ ಕುಡಿದು ವೇಶ್ಯೆಯೊಬ್ಬಳ ಮನೆಗೆ ಹೋಗಿ ಎಕ್ಕಡದಿಂದ ಕಪಾಳಮೋಕ್ಷ ಮಾಡಿಸಿಕೊಂಡ ಎಂಬ ವಿಚಾರ, ಕುಡಿದ ಅಮಲಿನಲ್ಲಿ ತನ್ನ ಮನೆಗೆ ಬದಲು ಇನ್ಯಾರದ್ದೋ ಮನೆಯೊಳಗೆ ನುಗ್ಗಿ ಎಗರಾಡಿದ ವಿಶ್ವನ ಲೀಲೆಗಳು ಊರೀಡೀ ಹರಡುವುದಕ್ಕೆ ಬಹಳ ಹೊತ್ತು ಬೇಕಾಗಲಿಲ್ಲ. ಚೆನ್ನಯ್ಯ ಮತ್ತೊಮ್ಮೆ ಊರವರ ನಿಂದೆಗೆ ಬಲಿಯಾದ. ತಗ್ಗಿಸಿದ ತಲೆಯನ್ನು ಎತ್ತುವುದಕ್ಕೆ ಆತನಿಂದ ಸಾಧ್ಯವಾಗಲಿಲ್ಲ.

 

ಒಂದು ದಿನ ವಿಪರೀತ ಕುಡಿದುಬಂದು ಕಮಲು ಹಾಗೂ ಸರಸು ಮೇಲೆ ಕೈಮಾಡಿದಾಗ ಗಲಾಟೆಯಾಗಿ ನೆರೆಹೊರೆಯವರು ಬಂದು ಬಿಡಿಸಿದ್ದರು. ಇದರಿಂದ ಚೆನ್ನಯ್ಯನ ಮನಸ್ಸು ಇನ್ನಷ್ಟು ಘಾಸಿಗೊಂಡಿತು. ’ತಾನು ಎಲ್ಲವನ್ನೂ ಕಳೆದುಕೊಂಡೆ’ ಎಂಬ ಭಾವ ಆತನ ಮನಸ್ಸಿನಲ್ಲಿ ಆಗಾಗ ಮೂಡಿ ಹಿಂಸಿಸುತ್ತಿತ್ತು. ಆದರೆ ಈಗ ನನ್ನ ಸಂಸಾರವನ್ನೇ ಕೈಯಾರೆ ನಾಶಮಾಡಿದೆ ಎಂಬ ಹತಾಶಭಾವ ಪ್ರೇತದ ಹಾಗೆ ಕಾಡತೊಡಗಿತು. ವಿಶ್ವನ ಚೇಷ್ಟೆಗಳು ಊರಿಡೀ ರಾಜಾರೋಷವಾಗಿ ನಡೆಯತೊಡಗಿದಾಗ ಚೆನ್ನಯ್ಯ ಮತ್ತೆ ಮತ್ತೆ ಊರವರ ನಿಂದೆಗೆ ಬಲಿಯಾದ.  ಇದುವರೆಗೂ ’ಮಗ ಎಡವಿದ್ದಾನೆ’ ಎಂದುಕೊಂಡಿದ್ದ ಚೆನ್ನಯ್ಯನಿಗೆ ಈಗ ’ತಾನೇ ಎಡವಿದ್ದೇನೆ’ ಎಂಬುದು ಖಾತ್ರಿಯಾಯಿತು. ಮಕ್ಕಳಿಬ್ಬರೂ ಪೆಚ್ಚುಮೋರೆ ಹಾಕಿಕೊಂಡು ಕಣ್ಣೀರು ಸುರಿಸುತ್ತಿರುವುದನ್ನು ಕಂಡಾಗ, ತಮಗಾಗುತ್ತಿರುವ ನೋವು, ಅವಮಾನಗಳನ್ನುಸಹಿಸಿಕೊಳ್ಳಲು ಸಾಧ್ಯವಾಗದೆ ಗೊಡೆಗೊರಗಿ ಸೂರು ನೋಡುತ್ತ ಕುಳಿತಿರುವುದನ್ನು ಕಂಡಾಗ, ಉಡುವುದಕ್ಕೆ ಒಳ್ಳೆಯ ಬಟ್ಟೆಯಿಲ್ಲದೆ ಹರುಕು ಮುರುಕು ಬಟ್ಟೆಯನ್ನುಟ್ಟುಕೊಂಡು ಮನೆಯಿಂದ ಹೊರಬರಲೂ ಮುಜುಗರಪಡುತ್ತಿರುವುದನ್ನು ನೋಡಿದಾಗ, ಆಗಾಗ ಮನೆಯ ಮೂಲೆಯಲ್ಲಿ ಬಿದ್ದುಕೊಂಡು ಮನಸ್ಸಿನಲ್ಲಿಯೇ ಅಳುತ್ತಿರುವುದನ್ನು ಕಂಡಾಗ ಚೆನ್ನಯ್ಯನ ಹೊಟ್ಟೆಯನ್ನು ಹಿಚುಕಿದಂತಹ ಅಸಾಧ್ಯ ಸಂಕಟ.

“ರಾಜನಿದ್ದಿದ್ದರೆ ಈ ಗತಿ ಬರುತ್ತಿರಲಿಲ್ಲ. ಮಕ್ಕಳಿಬ್ಬರೂ ಮದುವೆಯಾಗಿ ಗಂಡಂದಿರ ಮನೆಯಲ್ಲಿ ಹಾಯಾಗಿ ಸಂಸಾರಮಾಡಿಕೊಂಡು ಸುಖವಾಗಿ ಇರುತ್ತಿದ್ದರು” ಎಂದು ಚೆನ್ನಯ್ಯ ದಿನವಿಡೀ ಪರಿತಪಿಸತೊಡಗಿದ. “ಅಣ್ಣನಿದ್ದಿದ್ದರೆ ನಮಗೆ ಈ ದುರ್ಗತಿ ಬರುತ್ತಿರಲಿಲ್ಲ. ಊರಲ್ಲಿ ತಲೆತಗ್ಗಿಸಿ ಬದುಕಬೇಕಾದ ಸ್ಥಿತಿ ಬರುತ್ತಿರಲಿಲ್ಲ. ಅಣ್ಣನ ವಿಷಯದಲ್ಲಿ ಅಪ್ಪ ಇಷ್ಟು ನಿಷ್ಠುರವಾಗಿ ನಡೆದುಕೊಳ್ಳಬಾರದಿತ್ತು” ಎಂದು ಕಮಲು ಹಾಗೂ ಸರಸು ಬೆಳಗಿನಿಂದ ರಾತ್ರಿಯವರೆಗೂ ಎಷ್ಟು ಬಾರಿ ಅಂದುಕೊಂಡರೋ ಅವರಿಗೇ ತಿಳಿದಿಲ್ಲ.

 

ಚೆನ್ನಯ್ಯನಿಗೆ ಈಗೀಗ ಏನು ಮಾಡಬೇಕೆಂಬುದೇ ತೋಚುವುದಿಲ್ಲ. ವಿಶ್ವನ ಮುಖವನ್ನು ನೋಡಿದೊಡನೆಯೇ ಚೆನ್ನಯ್ಯನ ಪಿತ್ತ ನೆತ್ತಿಗೇರುತ್ತಿತ್ತು. ಬಿಸಿತುಪ್ಪದ ಹಾಗೆ, ನುಂಗುವಂತಿಲ್ಲ, ಉಗುಳುವಂತೆಯೂ ಇಲ್ಲ. ಆತನೊಂದಿಗಿನ ಮಾತುಕತೆ ನಿಂತು ಕೆಲವು ತಿಂಗಳುಗಳಾಗಿದ್ದವು. ಪ್ರಾಯಕ್ಕೆ ಬಂದ ಹೆಣ್ಣುಮಕ್ಕಳನ್ನು ಕಂಡಾಗ, ಹೊಟ್ಟೆಪಾಡಿಗಾಗಿ  ಅವರು ರಾತ್ರಿಯಿಡೀ ನಿದ್ದೆಗೆಟ್ಟು ಬೀಡಿಕಟ್ಟುವುದನ್ನು ಕಂಡಾಗ ಚೆನ್ನಯ್ಯನಿಗೆ ಕರುಳು ಕಿತ್ತುತೆಗೆದ ಅನುಭವ. ಆಡಲಾರ, ಅನುಭವಿಸಲಾರ. ಮಕ್ಕಳಿಬ್ಬರೂ ಚೆನ್ನಯ್ಯನನ್ನು ಸಮಾಧಾನಪಡಿಸಲು ಯತ್ನಿಸಿದಷ್ಟೂ ಆತನ ಮನದ ಬೇಗುದಿ ಹೆಚ್ಚುತ್ತಲೇ ಇತ್ತು.  

 

ಅಂದು ದೇವಿಯ ವಾರ್ಷಿಕ ಉತ್ಸವ. ಚೆನ್ನಯ್ಯ ಚಿಂತೆಯ ಗೂಡಾಗಿದ್ದಾನೆ. ದೇಹದಲ್ಲಿ ಕಸುವಿಲ್ಲ, ಕಾಲುಗಳಲ್ಲಿ ತ್ರಾಣವಿಲ್ಲ.  ಅಲ್ಲಿಗೆ ನಡೆದುಕೊಂಡು ಹೋಗಲಾರ . ಮನೆಯ ಮೆಟ್ಟಿಲ ಮೇಲೆ ಕುಳಿತು ದೂರದಲ್ಲಿ ಕಾಣುವ ದೇವಿಯ ಗುಡಿಯನ್ನು ದಿಟ್ಟಿಸುತ್ತಲೇ ಇದ್ದಾನೆ. ಅಲ್ಲಿಗೆ ಹೋದರೆ ಸಾವಿರಾರು ಕಣ್ಣುಗಳು ಆತನನ್ನು ನುಂಗತೊಡಗುತ್ತವೆ. ನೂರಾರು ಬಾಯಿಗಳು ಸಿಡಿಯತೊಡಗುತ್ತವೆ. ನೂರಾರು ನಾಲಗೆಗಳು ಝಳಪಿಸುತ್ತ ಪ್ರಹಾರನಡೆಸುತ್ತವೆ. ಇದಾವುದನ್ನೂ ಎದುರಿಸುವ ಶಕ್ತಿ ಈಗ ಚೆನ್ನಯ್ಯನಲ್ಲಿಲ್ಲ. ಹಾಗಾಗಿ  ಕಳೆದ ಕೆಲವು ವರ್ಷಗಳಿಂದ ಆತ ಇದೇ ರೀತಿ, ಇಷ್ಟರಲ್ಲಿಯೇ ತೃಪ್ತಿಹೊಂದಿದ್ದಾನೆ.

 

ರಥ ಅಲಂಕೃತವಾಗಿದೆ. ತಟ್ಟಿರಾಯ ರಾಜ ಗಾಂಭೀರ್ಯದಿಂದ ರಥದ ಮುಂದೆ ನಿಂತಿದ್ದಾನೆ. ಜನರೆಲ್ಲ ಸಂಭ್ರಮದಿಂದ ಓಡಾಡುತ್ತಿದ್ದಾರೆ. ದೇವಿಯ ಉತ್ಸವಮೂರ್ತಿಯನ್ನು ರಥದಲ್ಲಿ ಇರಿಸಿ ಆಗಿದೆ. ವಾದ್ಯದವರು, ಚೆಂಡೆಯವರು, ಬ್ಯಾಂಡಿನವರು, ರಥ ಎಳೆಯುವವರು ಎಲ್ಲರೂ ಸನ್ನದ್ಧರಾಗಿದ್ದಾರೆ. ಏನೋ ಗಲಾಟೆ. ಒಬ್ಬರ ಮುಖವನ್ನು ಇನ್ನೊಬ್ಬರು ಪ್ರಶ್ನಾರ್ಥಕವಾಗಿ ನೋಡುತ್ತ ನಿಂತಿದ್ದಾರೆ. ಎಲ್ಲವೂ ಸಿದ್ಧವಾದರೂ ತಟ್ಟಿರಾಯ ಮುಂದೆ ಚಲಿಸಲಾರ. ಆತನನ್ನು ಕುಣಿಸಬೇಕಾದ ವಿಶ್ವ ಗುಡಿಯ ಪಕ್ಕದ ಓಣಿಯಲ್ಲಿ ಬಿದ್ದುಕೊಂಡಿದ್ದಾನೆ. ಕಂಠಪೂರ್ತಿ ಕುಡಿದ ಆತ ಇಂದು ಏಳುವ ಸ್ಥಿತಿಯಲ್ಲಿಲ್ಲ. ಊರವರಿಗೆ, ದೇವಸ್ಥಾನದ ಉಸ್ತುವಾರಿಯವರಿಗೆ, ಪುರೋಹಿತರಿಗೆ ಉಭಯಸಂಕಟ. ಚೆನ್ನಯ್ಯನಿಂದ ಕುಣಿಸಲು ಸಾಧ್ಯವಿಲ್ಲ. ಹಾಗಾದರೆ ತಟ್ಟಿರಾಯನನ್ನು ಕುಣಿಸುವವರಾರು? ಚೆನ್ನಯ್ಯ ಈಗ ಮತ್ತೊಮ್ಮೆ ಊರವರ ನಿಂದೆಗೆ ಬಲಿಯಾದ.

 

ತಟ್ಟಿರಾಯನಿಲ್ಲದೆ ರಥ ಮುಂದುವರಿಯುವ ಹಾಗಿಲ್ಲ. ಹಿಂದಿನಿಂದಲೂ ಬಂದ ಈ ಸಂಪ್ರದಾಯವನ್ನು ಮುರಿಯಲು ಭಕ್ತಾದಿಗಳಿಗೆ ಇಷ್ಟವೂ ಇಲ್ಲ. “ಯಾರಿದ್ದಾರೆ ನನ್ನನ್ನು ಕುಣಿಸುವ ಎಂಟೆದೆಯ ಬಂಟರು?” ಎಂದು ಸವಾಲೆಸೆಯುವಂತೆ ತಟ್ಟಿರಾಯ ರಥದ ಮುಂದೆ ಅಚಲನಾಗಿ ನಿಂತುಬಿಟ್ಟಿದ್ದ. ಪುರೋಹಿತರು, ಊರ ಮಹನೀಯರು, ಭಕ್ತಾದಿಗಳು ಏನೊಂದೂ ಅರಿಯದೆ ತಲೆಗೆ ಕೈಹಚ್ಚಿದಾಗ, ದೇವರ ಉತ್ಸವಕ್ಕೆ ವಿಘ್ನವೊದಗಿತಲ್ಲ! ಎಂದು ನೊಂದುಕೊಳ್ಳೂತ್ತಿದ್ದಾಗ ಇದ್ದಕ್ಕಿದ್ದಂತೆ ತಟ್ಟಿರಾಯ ಕುಣಿಯಲಾರಂಭಿಸಿದ. ಭಕ್ತರೆಲ್ಲ ಬಂದರು. ರಥದ ಹಗ್ಗ ಹಿಡಿದರು. ಪುರೋಹಿತರ ಮಂತ್ರಘೋಷ, ವಾದ್ಯದವರ ನುಡಿತ, ಚೆಂಡೆಯವರ ಬಡಿತ, ಬ್ಯಾಂಡಿನವರ ಹೊಡೆತ, ಭಕ್ತರ  ಮೊರೆತ, ದೇವಿಯ ನಾಮಸ್ಮರಣೆಯ ಭೋರ್ಗರೆತ ಮುಗಿಲುಮುಟ್ಟಿತು. ತಟ್ಟಿರಾಯನ ಕುಣಿತಕ್ಕೆ ಎಣೆಯಿರಲಿಲ್ಲ. ಇದುವರೆಗೆ ತಟ್ಟಿರಾಯ ಈ ರೀತಿಯಾಗಿ ಕುಣಿದಿರಲಿಲ್ಲ. ಇಷ್ಟೊಂದು ಗಾಂಭೀರ್ಯದಿಂದ, ಇಷ್ಟೊಂದು ಗತ್ತಿನಿಂದ, ಇಷ್ಟೊಂದು ನಾಜೂಕಾಗಿ, ಇಷ್ಟೊಂದು ಲಯಬದ್ಧವಾಗಿ, ಇಷ್ಟೊಂದು ಮನಮೋಹಕವಾಗಿ ಎಂದೂ ಕುಣಿದಿರಲಿಲ್ಲ. ಎಲ್ಲರೂ ನೋಡುವುದರಲ್ಲಿಯೇ ತಲ್ಲೀನರಾಗಿದ್ದರು. ಯುವಕರಂತೂ ಮೈಯಲ್ಲೆಲ್ಲ ವಿದ್ಯುತ್ ಸಂಚಾರವಾದಂತಾಗಿ ತಟ್ಟಿರಾಯನೊಂದಿಗೆ ತಾವೂ ಹೆಜ್ಜೆಹಾಕುತ್ತಿದ್ದರು. ಊರಿಗೆ ಊರೇ ಸೇರಿತ್ತು. ಎಂದೂ ಕುಣಿಯದ ಕುಣಿತ, ಎಂದೂ ನಡೆಯದ ಉತ್ಸವ, ಎಂದೂ ಕಂಡುಕೇಳರಿಯದ ಸಂಭ್ರಮ.

 

“ಉತ್ಸವ ನಡೆದರೆ ಹೀಗೇ ನಡೆಯಬೇಕು” ಎಂದುಕೊಂಡರು ಕೆಲವರು. “ತಟ್ಟಿರಾಯ ಕುಣಿದರೆ ಹೀಗೇ ಕುಣಿಯಬೇಕು” ಎಂದುಕೊಂಡರು ಹಲವರು. ಒಟ್ಟಿನಲ್ಲಿ ತಿಂಗಳೂರು ಎಂದೂ ಕಾಣದ ಉತ್ಸವ. ಎಂದೂ ಕಾಣದಿದ್ದ ತಟ್ಟಿರಾಯನ ಕುಣಿತ. ಎಂದೂ ಅನುಭವಿಸದಿದ್ದ ಸಂಭ್ರಮ. ಭಕ್ತರೆಲ್ಲರೂ ತನ್ಮಯರಾಗಿ ನೋಡುತ್ತಿದ್ದರು.

 

ಉತ್ಸವ ಸಾಂಗವಾಯಿತು. ಸಂಜೆಯ ಹೊತ್ತಿಗೆ ತಟ್ಟಿರಾಯನೂ ತನ್ನ ಕುಣಿತವನ್ನು ನಿಲ್ಲಿಸಿದ್ದ. “ತಟ್ಟಿರಾಯನ ಸೂತ್ರಧಾರ ಯಾರಿರಬಹುದು?!” ಎಂಬುದನ್ನು ತಿಳಿಯಲು ಎಲ್ಲರಿಗೂ  ಕಾತರ. ಎಲ್ಲಗೂ ನಾಮುಂದು ತಾಮುಂದು ಎಂದು ತಟ್ಟಿರಾಯನ ಸುತ್ತ ನೆರೆದಿದ್ದಾರೆ. ಅಷ್ಟರಲ್ಲಿ ತಟ್ಟಿರಾಯನ ಹಿಂದಿನ ಬಟ್ಟೆ ಸರಿಸಿ ಮೆಲ್ಲನೆ ಹೊರಬಂದ ರಾಜನನ್ನು ನೋಡಿ ಜನ ಬೆಕ್ಕಸಬೆರಗಾದರು. ಯಾರಿಗೂ ಮಾತು ಹೊರಡಲಿಲ್ಲ. ಎಷ್ಟೋ ಮಂದಿ ತೆರೆದ ಬಾಯಿಯನ್ನು ಮುಚ್ಚಲೂ ಮರೆತರು. ಅಂದು ಎದೆಸೆಟೆಸಿ, ತಲೆ ಎತ್ತರಿಸಿ, ದುರಹಂಕಾರದಿಂದ ರಾಜ ಹಾಗೂ ಗೌರಿಯನ್ನು ತಡೆದ ಜನ ಇಂದು ರಾಜನೆದುರು ತಲೆತಗ್ಗಿಸಿ ನಿಂತರು. ರಾಜ ಹೊರಬಂದವನೇ ಗುಡಿಗೆ ನಡೆದ. ಪ್ರದಕ್ಷಿಣೆ ಹಾಕಿದ. ಜನ ತಡೆಯಲಿಲ್ಲ. ಪುರೋಹಿತರು ಪ್ರಸಾದ ನೀಡಿ ಆಶೀರ್ವದಿಸಿದರು. ತಲೆಬಾಗಿ ಸ್ವೀಕರಿಸಿದ.

 

ಗೌರಿಯೊಂದಿಗೆ ಮನೆಗೆ ಬಂದಾಗ ಚೆನ್ನಯ್ಯ ಮನೆಯ ಮೆಟ್ಟಿಲ ಮೇಲೆ ಕೂತಿದ್ದವನು ಮೆಲ್ಲನೆದ್ದು ಇಬ್ಬರನ್ನೂ ಬಾಚಿ ಗಟ್ಟಿಯಾಗಿ ತಬ್ಬಿಕೊಂಡ. ಕಣ್ಣುಗಳಿಂದ ಕಣ್ಣೀರು ತೊಟ್ಟಿಕ್ಕುತ್ತಿತ್ತು. ಗೋಳೋ ಎಂದು ಅತ್ತುಬಿಟ್ಟ. ಮುಳುಗುತ್ತಿರುವ ತನ್ನನ್ನು ಎರಡೂ ಕೈಗಳನ್ನು ಹಿಡಿದು ಎತ್ತಿ ದಡಸೇರಿಸಿದ ಹಾಗಾಯಿತು. ಕಮಲು ಹಾಗೂ ಸರಸೂ ತುಂಬಿದ ಕಣ್ಣುಗಳಿಂದ ನೋಡುತ್ತ ನಿಂತಿದ್ದರು. ’ಕಾಲ ಎಲ್ಲವನ್ನೂ ಮರೆಸುತ್ತದೆ’ ಎಂಬ ಮಾತು ನಿಜವಾಯಿತು.

 

ಅಂದು ರಾತ್ರಿಯ ನೀರವತೆಯಲ್ಲಿ ಚೆನ್ನಯ್ಯನ ಮನದಾಳದಲ್ಲಿ , “ದೇವಿ, ನೀನು ನನಗೆ ತುಂಬಾ ತಡವಾಗಿ ಬುದ್ಧಿಕೊಟ್ಟೆ” ಎಂಬ ದನಿಯೊಂದು ಮಾರ್ದನಿಗೊಳ್ಳುತ್ತಲೇ ಇತ್ತು.

***

5 thoughts on “ತಟ್ಟಿರಾಯ ಮತ್ತೆ ಕುಣಿದ……!

  1. ತುಂಬಾ ಸುಂದರವಾದ ಹಳ್ಳಿ ಸೊಗಡಿನ ಕಥೆ ಸರ್. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಅಂಧ ಶ್ರದ್ಧೆ ಸ್ವಲ್ಪ ಮಟ್ಟಿಗೆ ಕಮ್ಮಿ ಆಗಿದೆ ಅನ್ನಿಸುತ್ತದೆ. ಆದರೆ ಹಿಂದಿನ ಕಾಲದಲ್ಲಿ ಈ ರೀತಿ ಹೆಣ್ಣು ಮಕ್ಕಳನ್ನು ದೇವರಿಗೆ ಬಿಡುವುದು ‘ ಗೆಜ್ಜೆ ಪೂಜೆ’ ‘ ದೇವದಾಸಿ’ ಇತ್ಯಾದಿ ಅನಿಷ್ಟ ಪದ್ಧತಿಗಳಿಗೆ ಒಳಪಡಿಸುತ್ತಿದ್ದರು. ಇದು ಯಾವುದೇ ದೇವರು ಅಥವಾ ಧರ್ಮ ಮಾಡಿದ ಕಾನೂನಲ್ಲ . ಇದು ಸ್ವಾರ್ಥಿ ಮನುಷ್ಯ ತನ್ನ ಮನದ ಆಸೆಯನ್ನು ಪೂರೈಸಿಕೊಳ್ಳುವ ಸಲುವಾಗಿ ತಾನೇ ನಿರ್ಮಿಸಿಕೊಂಡಿರುವ ಪೊಳ್ಳು ಆಚರಣೆ. ನಾವೆಲ್ಲರೂ ದೇವರ ಮಕ್ಕಳೇ, ಯಾವ ದೇವರು ಕೂಡ ತನ್ನ ಹೆಸರಿನಲ್ಲಿ ಒಂದು ಹೆಣ್ಣು ಮಗುವನ್ನು ಈ ರೀತಿಯಾಗಿ ಬಳಸಿಕೊಳ್ಳುವುದನ್ನು ಇಷ್ಟ ಪಡುವುದಿಲ್ಲ. ಇದನ್ನು ರಾಜನ ಮಾತಿನ ಮೂಲಕ ಬಹಳ ಸುಂದರವಾಗಿ ವಿವರಿಸಿದ್ದೀರಿ. ಜೊತೆಗೆ ಈ ಅನಿಷ್ಟ ಪದ್ದತಿಯಿಂದ ಗೌರಿ ಅನುಭವಿಸಿದ ನರಕವನ್ನು, ಅವಳು ರಾಜನಲ್ಲಿ ಕಂಡ ನಿಸ್ವಾರ್ಥ ಪ್ರೀತಿಯನ್ನು ಬಹಳ ಸುಂದರವಾಗಿ ಹೇಳಿದ್ದೀರಿ. ಇನ್ನು ಚೆನ್ನಯ್ಯನ ವಿಷಯಕ್ಕೆ ಬರುವುದಾದರೆ, ಸಮಾಜದ ಕಟ್ಟುಪಾಡುಗಳಿಗೆ ಹೆದರಿ ತಾನು ಬಹಳ ನಂಬಿದ್ದ ಮತ್ತು ಬಹಳ ಪ್ರೀತಿಸುತ್ತಿದ್ದ ಮಗನನ್ನು ದೂರ ಮಾಡಿಕೊಳ್ಳುತ್ತಾನೆ. ಅಷ್ಟೇ ಅಲ್ಲದೆ ಮತ್ತದೇ ಸಮಾಜದ ಎದುರು ನಗೆಪಾಟಲಿಗೆ ಗುರಿ ಆಗಬಾರದೆಂದು ವಿಶ್ವನನ್ನು ದತ್ತು ಪಡೆದು ತನ್ನ ಸರ್ವಸ್ವವನ್ನೂ ಅವನಿಗೆ ಧಾರೆ ಎರೆಯುತ್ತಾನೆ.ಆದರೇನು? ತನ್ನ ರಕ್ತ ತನ್ನ ರಕ್ತವೇ… ನಾಯಿಯನ್ನು ತಂದು ಸಿಂಹಾಸನದ ಮೇಲೆ ಕೂರಿಸಿದಂತೆ ಆಯಿತು ಆ ವಿಶ್ವನ ಕತೆ. ವಿಶ್ವ ಎಂದಿಗೂ ತನ್ನ ಸ್ವಂತ ಮಗ ರಾಜನಂತೆ ಆಗಲಾರ. ಅದು ಚೆನ್ನಯ್ಯ ನಿಗೆ ಗೊತ್ತು. ಆದರೆ ಏನು ಮಾಡುವುದು ಇಷ್ಟೆಲ್ಲಾ ಆದರೂ ಕೂಡ ಅವನ ಮೊದಲ ಆದ್ಯತೆ ಈ ಸಮಾಜದ ಕಟ್ಟುಪಾಡುಗಳೇ..! ಆ ಕಟ್ಟುಪಾಡುಗಳಿಗೆ ಕಟ್ಟು ಬಿದ್ದ ಚೆನ್ನಯ್ಯ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ತನ್ನ ಕುಲ ಕಸುಬನ್ನು ಕೂಡ ಬಿಟ್ಟಾನು ! ಅದರಂತೆ ಜಾತ್ರೆಯಲ್ಲಿ ತೇರನ್ನು ಎಳೆಯಲು ತಟ್ಟಿರಾಯ ಕುಣಿಯಬೇಕು.ಆದರೆ ಅದನ್ನು ಕುಣಿಸುವವರು ಯಾರು? ಕೈಯಲ್ಲಿ ಶಕ್ತಿ ಇಲ್ಲದೆ ಕುಳಿತಿರುವ ಚೆನ್ನಯ್ಯನೇ? ಅಥವಾ ಕೆಟ್ಟ ಚಟ ಗಳನ್ನೆಲ್ಲಾ ಮೈಗೂಡಿಸಿಕೊಂಡು ಪಾನಮತ್ತನಾಗಿ ಬಿದ್ದಿರುವ ವಿಶ್ವನೇ ?! ಅಂತಹ ಗೊಂದಲದಲ್ಲಿ ಇದ್ದ ಜನರ ಮಧ್ಯದಿಂದಲೂ ತಟ್ಟಿರಾಯ ಮತ್ತೆ ಕುಣಿದ… ರಥ ಮುಂದೆ ಸಾಗಿತು. ಆದರೆ ಆ ತಟ್ಟಿರಾಯನ ಹಿಂದೆ ಇದ್ದವನು ರಾಜನೆಂದು ತಿಳಿಯದೆ ಅವನನ್ನು ಹಾಡಿ ಹೊಗಳಿದರು. ಎಲ್ಲಾ ಮುಗಿದ ಮೇಲೆ, ತಟ್ಟಿರಾಯನ ಹಿಂದೆ ಇದ್ದವನು ರಾಜನೇ ಎಂದು ಗೊತ್ತಾದ ಮೇಲೆ ಜನರಿಗೆ ತಾವು ಮಾಡಿದ ಕೆಲಸಕ್ಕೆ ನಾಚಿಕೆಪಡುವಂತಾಯಿತು. ಯಾವ ರಾಜನನ್ನು ಸಮಾಜ ದ್ರೋಹಿ ಎಂದು ನಿಂದಿಸಿದ್ದರೋ ಅದೇ ರಾಜನನ್ನು ಸಮಾಜವೂ ಒಪ್ಪಿಕೊಂಡಿತು, ಚೆನ್ನಯ್ಯನೂ ಒಪ್ಪಿಕೊಂಡನು. ತುಂಬಾ ಸುಂದರವಾದ ಕಥೆ… ಸುಖಾಂತ್ಯ ಕೊಟ್ಟಿದ್ದು ತುಂಬಾ ಖುಷಿ ಆಯ್ತು ಸರ್.. ಧನ್ಯವಾದಗಳು😃🙏

    1. “ತಟ್ಟಿರಾಯ ಮತ್ತೆ ಕುಣಿದ” ಕಥೆಯ ಬಗ್ಗೆ ದೀರ್ಘವಾಗಿ ಪ್ರತಿಕ್ರಿಯಿಸಿದ್ದಿರಿ. ತುಂಬಾ ಧನ್ಯವಾದಗಳು. ನಿಜ ಹೇಳಬೇಕೆಂದರೆ ಇದು ೧೯೮೫ರ ಹೊತ್ತಿಗೆ ಬರೆದ ಕಥೆ. ೩೭ವರ್ಷಗಳ ಆನಂತರ ಈ ಕಥಾವಸ್ತು ಪ್ರಸ್ತುತವೇ?! ಎಂಬ ಪ್ರಶ್ನೆ ನನ್ನ ಮುಂದಿತ್ತು. ಆದರೆ ಶ್ರೀಮತಿ ಸುಧಾಮೂರ್ತಿಯವರು ರಾಯಚೂರು ಹಾಗೂ ಆಸುಪಾಸಿನ ಜಿಲ್ಲೆಗಳಲ್ಲಿನ ದೇವದಾಸಿ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಹದಿನೆಂಟು ವರ್ಷಗಳ ಕಾಲ ಶ್ರಮಿಸಿದ್ದರು ಎಂಬುದು ಮೊನ್ನೆ ಮೊನ್ನೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಹಾಗಾಗಿ ಈ ಅನಿಷ್ಟ ಪದ್ಧತಿ ಕೆಲವೆಡೆ ಇನ್ನೂ ಜೀವಂತವಾಗಿದೆ ಎಂದಾಯಿತು. ಇದನ್ನೇ ಮನಗಂಡು ಈ ಕಥಾವಸ್ತು ಅಪ್ರಸ್ತುತವಲ್ಲ ಅನಿಸಿ, ಬ್ಲಾಗಿನಲ್ಲಿ ಬಳಸಿಕೊಂಡೆ. ಮನುಷ್ಯ ಎಲ್ಲಿಯವರೆಗೆ ಸ್ವಾರ್ಥಿಯಾಗಿ ಬದುಕಬಯಸುತ್ತಾನೋ ಅಲ್ಲಿಯವರೆಗೆ ಇಂತಹ ಅನಿಷ್ಟ ಪದ್ಧತಿಗಳು ನಾಶವಾಗಲಾರವು. ಬಾಲವಿವಾಹ (ಬಾಲ್ಯವಿವಾಹ ಪದ ತಪ್ಪು ಎಂಬುದು ನನ್ನ ಅಭಿಪ್ರಾಯ)ದಂತಹ ಅನಿಷ್ಟ ಪದ್ಧತಿಗಳು ಈಗಲೂ ಅಗಾಗ ಸುದ್ದಿಮಾಡುತ್ತಿವೆಯಲ್ಲ! ಕೆಲವರ ಸ್ವಾರ್ಥಕ್ಕೆ ಹಲವರು ಬಲಿಯಾಗುತ್ತಿದ್ದಾರೆ. ಎಲ್ಲವನ್ನೂ ಕಾನೂನಿನಿಂದ ಬಗೆಹರಿಸಲು ಸಾಧ್ಯವಿಲ್ಲ. ಮನುಷ್ಯ ಸಮಷ್ಟಿ ಪ್ರಜ್ಞೆಯನ್ನು ಬೆಳೆಸಿಕೊಳ್ಳದಿದ್ದರೆ ಯಾವುದೇ ಸುಧಾರಣೆಯನ್ನು ತರಲು ಸಾಧ್ಯವಿಲ್ಲ. ಆಧುನಿಕತೆ ಬೆಳೆದಷ್ಟೂ ಅನಾಗರಿಕತೆ ಬೆಳೆಯುತ್ತಿದೆಯಲ್ಲ! ನಾವೆಲ್ಲಾ ಪದೇ ಪದೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
      ಸದಾ ಪ್ರತಿಕ್ರಿಯಿಸುತ್ತಾ ಇರಿ. ನಿಮ್ಮ ಅನಿಸಿಕೆ
      ಸಹೃದಯರಲ್ಲಿ ಹಲವು ಜಿಜ್ಞಾಸೆಗಳನ್ನು ಹುಟ್ಟುಹಾಕಲಿ. 🙏

Leave a Reply

Your email address will not be published. Required fields are marked *