ಸಾಹಿತ್ಯಾನುಸಂಧಾನ

heading1

ದುರ್ಜನರ ಇರವೆಲ್ಲ ನಂಜು

                ‘ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ’ ಎಂಬ ಗಾದೆಮಾತು ಭಾರತೀಯ ಪರಂಪರೆಯಲ್ಲಿ ಸಜ್ಜನಿಕೆಗೆ ಸಂದ ಗೌರವವನ್ನು ಸೂಚಿಸುತ್ತದೆ. ಕನ್ನಡದ ಅನುಭಾವಿ ಕವಿ ಸರ್ವಜ್ಞ ಸಜ್ಜನಿಕೆಯ ಮಹತ್ವವನ್ನು ಹೇಳುವ ಸಂದರ್ಭದಲ್ಲಿ, “ಉರಗನ ಹಲು ನಂಜು, ಸುರಗಿಯ ಮೊನೆ ನಂಜು, ಕರುಣವಿಲ್ಲದವನ ನುಡಿ ನಂಜು, ದುರ್ಜನರ ಇರವೆಲ್ಲ ನಂಜು” ಎನ್ನುತ್ತಾನೆ. ಹಾವಿನ ಹಲ್ಲು, ಸುರಗಿಯ ಅಲಗುಗಳು ದೇಹಕ್ಕೆ ವಿಷವಾದರೆ, ಕರುಣೆಯಿಲ್ಲದವನ ಮಾತುಗಳು ಮನಸ್ಸಿಗೆ ವಿಷವಾಗುತ್ತವೆ. ಆದರೆ ದುರ್ಜನರ ಅಸ್ತಿತ್ವವು ಅವೆಲ್ಲವುಗಳಿಗಿಂತಲೂ ವಿಷಕಾರಿ ಎನ್ನುತ್ತಾನೆ ಸರ್ವಜ್ಞ. ಹಾವಿನ ಹಲ್ಲು, ಸುರಗಿಯ ಮೊನೆಗಳ ವಿಷವನ್ನು ಸೂಕ್ತ ಮದ್ದಿನ ಮೂಲಕ ಗುಣಪಡಿಸಬಹುದು, ಕರುಣೆಯಲ್ಲದವನ ಮಾತನ್ನೂ ಪ್ರಯತ್ನಪೂರ್ವಕ ಮರೆತುಬಿಡಬಹುದು. ಆದರೆ ದುರ್ಜನರ ಅಸ್ತಿತ್ವ ಮಾತ್ರ ಅತ್ಯಂತ ಘೋರವಿಷಯುಕ್ತ. ಅದು ವ್ಯಕ್ತಿಯನ್ನು ಮಾತ್ರ ನಾಶಮಾಡದೆ ಸಮಾಜವನ್ನೂ ದೇಶವನ್ನೂ ನಾಶಮಾಡುತ್ತದೆ.

‘ಸೆಗಣಿಯವನ ಜೊತೆ ಸರಸವಾಡುವುದಕ್ಕಿಂತ ಗಂಧದವನ ಜೊತೆ ಗುದ್ದಾಡುವುದು ಲೇಸು’ ಎಂಬ ಗಾದೆಮಾತೂ ‘ಸತ್ಯವನ್ನು ನುಡಿ, ಧರ್ಮದಲ್ಲಿ ನಡೆ’, ‘ಸಜ್ಜನರ ಸಂಗವ ಮಾಡು’ ಮೊದಲಾದ ಮಾತುಗಳೂ ಸಜ್ಜನಿಕೆಯ ಮಹತ್ವವನ್ನು ಹೇಳುತ್ತವೆ. ಸಜ್ಜನರ ಸಂಗದಿಂದ ಬಾಳು ಹಸನಾಗುವಂತೆ, ದುರ್ಜನರ ಸಂಗದಿಂದ ಬಾಳು ಹಳಸುತ್ತದೆ. ದುರ್ಜನರ ಮನಸ್ಸು, ನಡೆ-ನುಡಿ, ಆಚಾರ-ವಿಚಾರಗಳಲ್ಲೆಲ್ಲ ವಿಷವೇ ತುಂಬಿಕೊಂಡಿರುತ್ತದೆ. ಅವುಗಳಲ್ಲಿ ತಮ್ಮ ಅಥವಾ ಇತರರ ಉನ್ನತಿಗೆ, ಸಾಧನೆಗೆ, ಒಳಿತಿಗೆ ಬೇಕಾದ ಯಾವುದೇ ಮೌಲ್ಯಗಳಿರುವುದಿಲ್ಲ. ಅಂತಹವರೊಡನೆ ವ್ಯವಹರಿಸುವುದರಿಂದ ಸಭ್ಯರ ಅಸ್ತಿತ್ವವೇ ನಾಶವಾಗುತ್ತದೆ. ಹಾವಿನ ದೇಹದಲ್ಲಿ ಹಲ್ಲುಗಳು ಮಾತ್ರ ವಿಷಭರಿತವಾಗಿದ್ದರೆ, ಸುರಗಿಯ ಅಲಗು ಹಾಗೂ ಮೋಸಗಾರರ ಮಾತುಗಳು ಮಾತ್ರ ನಂಜಾಗಿದ್ದರೆ ದುರ್ಜನರ ಇಡೀ ದೇಹವೂ ಅವರ ಅಸ್ತಿತ್ವವೆಲ್ಲವೂ ನಂಜಿನಿಂದಲೇ ಕೂಡಿರುತ್ತದೆ. ಇಂತಹವರ ಸಹವಾಸ ಮಾಡಿ ನಾಶವಾಗುವುದಕ್ಕಿಂತ ಅವರಿಂದ ದೂರವಿದ್ದು ಜೀವನದಲ್ಲಿ ಒಳಿತನ್ನು ಸಾಧಿಸುವುದೇ ಲೇಸು ಎಂಬ ಸರ್ವಜ್ಞನ ಮಾತು ಯಾವತ್ತೂ ಅನುಸರಿಣೀಯ.

***

Leave a Reply

Your email address will not be published. Required fields are marked *