(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ – ಭಾಗ-೨)
ಮುರಹರಂ ಬಂದನಬ್ಜಾಸನಂ ಬಂದನಮ
ರರ ವರಂ ಬಂದನಗಜಾಪಿತಂ ಬಂದನೀ
ಶ್ವರಸುತಂ ಬಂದನೀ ರಾಱು ರವಿಗಳು ಬಂದರಿಕ್ಷುಕೋದಂಡ ಬಂದ
ಸುರುಚಿರ ನವಗ್ರಹಂಗಳು ಬಂದರೆತ್ತಿದಾ
ತುರದೊಳವರಿವರೆನ್ನಲೇಕಿನ್ನು ಸರ್ವದೇ
ವರು ಬಂದರಪ್ರತಿಮದೇವಾಧಿದೇವ ಪಂಪಾವಿರೂಪಾಕ್ಷನೆಡೆಗೆ ||೧೦||
ಪದ್ಯದ ಅನ್ವಯಕ್ರಮ:
ಮುರಹರಂ ಬಂದನ್, ಅಬ್ಜಾಸನಂ ಬಂದನ್, ಅಮರರ ವರಂ ಬಂದನ್, ಅಗಜಾಪಿತಂ ಬಂದನ್, ಈಶ್ವರಸುತಂ ಬಂದನ್, ಈರಾರು ರವಿಗಳು ಬಂದರ್, ಇಕ್ಷುಕೋದಂಡ ಬಂದ, ಸುರುಚಿರ ನವಗ್ರಹಂಗಳು ಬಂದರ್, ಎತ್ತಿದ ಆತುರದೊಳ್ ಅವರಿವರ್ ಎನ್ನಲ್ ಏಕಿನ್ನು ಸರ್ವದೇವರು ಬಂದರ್ ಅಪ್ರತಿಮ ದೇವಾಧಿದೇವ ಪಂಪಾ ವಿರೂಪಾಕ್ಷನ ಎಡೆಗೆ.
ಪದ-ಅರ್ಥ:
ಮುರಹರಂ-ವಿಷ್ಣು; ಅಬ್ಜಾಸನಂ-ಬ್ರಹ್ಮ; ಅಮರರ ವರಂ-ದೇವೇಂದ್ರ; ಅಗಜಾಪಿತಂ-ಪಾರ್ವತಿಯ ಅಪ್ಪ(ಪರ್ವತರಾಜ); ಈಶ್ವರಸುತಂ-ಷಣ್ಮುಖ; ಈರಾರು ರವಿಗಳು(ಈರ್+ಆರು=ಈರಾರು) ಹನ್ನೆರಡು ರವಿಗಳು(ಧಾತಾ, ಮಿತ್ರ, ಅರ್ಯಮಾ, ರುದ್ರ, ವರುಣ, ಸೂರ್ಯ, ಭಗ, ವಿವಸ್ವಾನ್, ಪೂಷಾ, ಸವಿತಾ, ತ್ವಷ್ಟಾ ಹಾಗೂ ವಿಷ್ಣು. ಇವರನ್ನು ದ್ವಾದಶಾದಿತ್ಯರು ಎಂದು ಕರೆಯುತ್ತಾರೆ); ಇಕ್ಷುಕೋದಂಡ-ಮನ್ಮಥ; ಸುರುಚಿರ-ಪ್ರಕಾಶಮಾನವಾದ; ನವಗ್ರಹಂಗಳು-ಒಂಬತ್ತು ಗ್ರಹಗಳು; ಎತ್ತಿದ-ದರ್ಶನವನ್ನು ನೀಡಿದ; ಆತುರದೊಳ್-ಸಂದರ್ಭದಲ್ಲಿ.
ಶಿವ, ಹರಿಶ್ಚಂದ್ರನಿಗೆ ತನ್ನ ಅದ್ಭುತರೂಪವನ್ನು ತೋರಿದ ಸಂದರ್ಭದಲ್ಲಿ ಆ ಅಪೂರ್ವ ಸನ್ನಿವೇಶವನ್ನು ಕಣ್ತುಂಬಿಕೊಳ್ಳುವುದಕ್ಕೆ ವಿಷ್ಣು, ಬ್ರಹ್ಮ, ದೇವತೆಗಳ ಒಡೆಯನಾದ ದೇವೇಂದ್ರ, ಪಾರ್ವತಿಯ ಅಪ್ಪ ಪರ್ವತರಾಜ, ಶಿವನ ಮಗನಾದ ಷಣ್ಮುಖ, ದ್ವಾದಶ ಆದಿತ್ಯರು, ಮನ್ಮಥ, ಪ್ರಕಾಶಮಾನವಾದ ಒಂಬತ್ತು ಗ್ರಹಗಳು, ಇನ್ನು ಅವರಿವರು ಎಂದು ಹೇಳಲೇನಿದೆ? ಸರ್ವದೇವರೆಲ್ಲರೂ ಅಪ್ರತಿಮ ದೇವಾಧಿದೇವನಾದ ಪಂಪಾವಿರೂಪಾಕ್ಷನ ದರ್ಶನಕ್ಕೆ ಆಗಮಿಸಿದರು.
ಶಿವ, ಹರಿಶ್ಚಂದ್ರನಿಗೆ ತನ್ನ ಅದ್ಭುತರೂಪವನ್ನು ತೋರಿಸುವ ಸಂದರ್ಭದಲ್ಲಿ ಅದನ್ನು ಕಣ್ತುಂಬ ನೋಡುವುದಕ್ಕೆ ಎಲ್ಲ ದೇವರೂ ದೇವತೆಗಳೂ ಆಗಮಿಸಿದರು. ಶಿವ ಯಾರೋ ಮಹಾ ವ್ಯಕ್ತಿಗೆ ನೀಡಿದ ದರ್ಶನವಲ್ಲ, ಸತ್ಯ ಹಾಗೂ ಸತ್ವಗಳ ಹತ್ತಾರು ಪರೀಕ್ಷೆಗಳಲ್ಲಿ, ಎದೆಗುಂದದೆ, ತಾನು ನಂಬಿದ ಮೌಲ್ಯವನ್ನು ಬಿಟ್ಟುಕೊಡದೆ, ಯಾವುದೇ ಸಂದರ್ಭದಲ್ಲಿಯೂ ಸ್ವಾರ್ಥವನ್ನು ಸಾಧಿಸದೆ, ಸತ್ಯವೇ ಉಸಿರು ಎಂದು ಭಾವಿಸಿ, ಅದನ್ನೇ ಆಚರಿಸಿಕೊಂಡು ಶಿವಾನುಗ್ರಹಕ್ಕೆ ಪಾತ್ರನಾದ ಹರಿಶ್ಚಂದ್ರನನ್ನು ಆತನ ಮೇಲ್ಮೆಯನ್ನು ನೋಡುವುದಕ್ಕೆ, ಕೊಂಡಾಡುವುದಕ್ಕೆ ಸಕಲ ದೇವರೂ ದೇವತೆಗಳೂ ಆಗಮಿಸಿರುವುದು ಒಂದು ಅಪೂರ್ವ ಸನ್ನಿವೇಶ.
ಕುಡಿದೌಷಧಂ ಬಾಯ್ಗೆ ನಿಗ್ರಹಂ ಮಾಡಿ ತಾ
ಳ್ದೊಡಲಿಂಗೆ ಸುಖವನೀವಂತೆ ಲೋಕದ ಕಣ್ಗೆ
ಕಡುಮುಳಿದರಂತೆ ತೋಱಿಸಿ ಸತ್ಯಶುದ್ಧವಪ್ಪನ್ನೆಗಂ ಕಾಡಿ ನೋಡಿ
ಕಡೆಯೊಳು ಹರಿಶ್ಚಂದ್ರರಾಯಂಗೆ ಗಣವೆರಸಿ
ಮೃಡನನೆಳತಂದಿತ್ತು ಕೀರ್ತಿಯಂ ಮೂಜಗದ
ಕಡೆಗೆ ಹರಹಿದ ಮುನಿವರೇಣ್ಯ ವಿಶ್ವಾಮಿತ್ರ ಬಂದನು ವಸಿಷ್ಠಸಹಿತ ||೧೧||
ಪದ್ಯದ ಅನ್ವಯಕ್ರಮ:
ಕುಡಿದ ಔಷಧಂ ಬಾಯ್ಗೆ ನಿಗ್ರಹಂ ಮಾಡಿ, ತಾಳ್ದ ಒಡಲಿಂಗೆ ಸುಖವನ್ ಈವಂತೆ, ಲೋಕದ ಕಣ್ಗೆ ಕಡುಮುಳಿದರಂತೆ ತೋಱಿಸಿ, ಸತ್ಯಶುದ್ಧವಪ್ಪ ಅನ್ನೆಗಂ ಕಾಡಿ ನೋಡಿ, ಕಡೆಯೊಳು ಹರಿಶ್ಚಂದ್ರ ರಾಯಂಗೆ ಗಣವೆರಸಿ ಮೃಡನನ್ ಎಳತಂದಿತ್ತು, ಮೂಜಗದ ಕಡೆಗೆ ಕೀರ್ತಿಯಂ ಹರಹಿದ ಮುನಿವರೇಣ್ಯ ವಿಶ್ವಾಮಿತ್ರ ವಸಿಷ್ಠ ಸಹಿತ ಬಂದನು.
ಪದ-ಅರ್ಥ:
ನಿಗ್ರಹಂ ಮಾಡಿ-ಶಿಕ್ಷೆಯನ್ನು ಕೊಟ್ಟು; ತಾಳ್ದ ಒಡಲಿಂಗೆ-ಸಹಿಸಿದ ಹೊಟ್ಟೆಗೆ; ಈವಂತೆ-ನೀಡುವಂತೆ; ಕಡುಮುಳಿದರಂತೆ-ಅತ್ಯಂತ ಸಿಟ್ಟುಗೊಂಡವರಂತೆ; ಅನ್ನೆಗಂ-ಅಲ್ಲಿಯವರೆಗೆ; ಕಾಡಿ ನೋಡಿ-ಕಾಟಕೊಟ್ಟು ಪರೀಕ್ಷಿಸಿ; ಕಡೆಯೊಳು-ಕೊನೆಯಲ್ಲಿ; ಗಣವೆರಸಿ-ಗಣಗಳೊಂದಿಗೆ ಕೂಡಿ; ಮೃಡನನ್-ಶಿವನನ್ನು; ಮೂಜಗದ-ಮೂರು ಲೋಕದ; ಹರಹಿದ-ಪಸರಿಸಿದ; ಮುನಿವರೇಣ್ಯ-ಮುನಿಶ್ರೇಷ್ಠ.
ಕುಡಿದ ಔಷಧವು ಬಾಯಿಗೆ ಶಿಕ್ಷೆಯನ್ನು ಕೊಟ್ಟು, ಸಹಿಸಿದ ಹೊಟ್ಟೆಗೆ ಸುಖವನ್ನು ನೀಡುವಂತೆ(ಔಷಧ ಅಧರಕ್ಕೆ ಕಹಿಯಾದರೂ ಉದರಕ್ಕೆ ಸಿಹಿ ಎಂಬುದು ಗಾದೆಮಾತು) ಲೋಕದ ಜನರ ದೃಷ್ಟಿಗೆ ಅತ್ಯಂತ ಕೋಪಗೊಂಡವರಂತೆ ತೋರಿಸಿಕೊಂಡು ಹರಿಶ್ಚಂದ್ರನನ್ನು ಸತ್ಯಶುದ್ಧವಾಗುವವರೆಗೂ ಕಾಟಕೊಟ್ಟು ಪರೀಕ್ಷಿಸಿ, ಕೊನೆಯಲ್ಲಿ ಹರಿಶ್ಚಂದ್ರನ ಸತ್ಯಸಂಧತೆಯು ಗಣಗಳ ಸಹಿತನಾಗಿ ಶಿವನನ್ನು ಆತನ ಬಳಿಗೆ ಎಳೆದು ತಂದಿತು. ಹರಿಶ್ಚಂದ್ರನ ಸತ್ಯಸಂಧತೆಯ ಕೀರ್ತಿಯನ್ನು ಮೂರೂ ಲೋಕಗಳಿಗೂ ಹರಡುವಂತೆ ಮಾಡಿದ ವಿಶ್ವಾಮಿತ್ರನೂ ವಸಿಷ್ಠನನ್ನು ಕೂಡಿಕೊಂಡು ಹರಿಶ್ಚಂದ್ರನಿದ್ದಲ್ಲಿಗೆ ಆಗಮಿಸಿದನು.
ಔಷಧವು ಕುಡಿಯುವಾಗ ಬಾಯಿಗೆ ಕಹಿ ಅಥವಾ ಇನ್ನಾವುದೇ ಸಹಿಸಲಸಾಧ್ಯವಾದ ರುಚಿಯನ್ನು ಹೊಂದಿದ್ದರು ಬಾಯಿ ಹಾಗೂ ಹೊಟ್ಟೆ ಅದರ ಶಿಕ್ಷೆಯನ್ನು ಸಹಿಸಿಕೊಂಡ ಮೇಲೆ ದೇಹಕ್ಕೆ ಸುಖವನ್ನು ನೀಡುವಂತೆ(ಕಾಯಿಲೆಯನ್ನು ವಾಸಿಗೊಳಿಸಿ ಆರೋಗ್ಯವನ್ನು ನೀಡುವಂತೆ) ವಿಶ್ವಾಮಿತ್ರ ಹರಿಶ್ಚಂದ್ರನಿಗೆ ಕಾಟಕೊಟ್ಟಾಗ ಹರಿಶ್ಚಂದ್ರನಿಗಾಗಲೀ ಆತನ ಹೆಂಡತಿ ಚಂದ್ರಮತಿಗಾಗಲೀ ಅಥವಾ ಮಗ ಲೋಹಿತಾಶ್ವನಿಗಾಗಲೀ ಕಷ್ಟ, ಹಿಂಸೆ, ನೋವು, ದುಃಖಗಳಾದರೂ ಲೋಕದ ಜನರ ದೃಷ್ಟಿಯಲ್ಲಿ ದ್ವೇಷಸಾಧನೆ ಎನಿಸಿದರೂ ಕೊನೆಯಲ್ಲಿ ಹರಿಶ್ಚಂದ್ರನಿಗೆ ಅಪೂರ್ವವಾದ ಒಳಿತನ್ನು, ನೆಮ್ಮದಿಯನ್ನು, ಸಾರ್ಥಕ್ಯವನ್ನು ನೀಡಿದಂತಾಯಿತು. ಕೊನೆಯಲ್ಲಿ ಶಿವ ಪ್ರತ್ಯಕ್ಷನಾದ ಸಂದರ್ಭದಲ್ಲಿ ಶಿವನೊಂದಿಗೆ ಇತರ ದೇವಾಧಿದೇವತೆಗಳೆಲ್ಲ ಹರಿಶ್ಚಂದ್ರನ ಮುಂದೆ ದರ್ಶನವನ್ನು ನೀಡಿದ ಮೇಲೆ ಹರಿಶ್ಚಂದ್ರನ ಕೀರ್ತಿಯನ್ನು ಮೂರೂ ಲೋಕಗಳಿಗೆ ಪಸರಿಸಿದ ವಿಶ್ವಾಮಿತ್ರ ಬರದಿರುವುದಕ್ಕೆ ಸಾಧ್ಯವೇ?
ಅಂಬರದ ಸುರರು ಪೂಮಳೆಗಱೆಯೆ ತುಱುಗಿದ ಕ
ದಂಬವೆಡೆವಿಡದೆ ಪೂರೈಪ ಶಂಖದ ಹೊಯ್ವ
ತಂಬಟದ ಸೂಳೈಪ ನಿಸ್ಸಾಳ ಪೊಡೆವ ಭೇರಿಗಳ ಬಿರುದೆತ್ತಿ ಕರೆವ
ಕೊಂಬುಗಳ ಬಾರಿಸುವ ಹಲಕೆಲವು ವಾದ್ಯನಿಕು
ರುಂಬದ ಮಹಾರವದ ಸಡಗರದ ಸಂಭ್ರಮಾ
ಡಂಬರದ ನಡುವೆ ತೆಗೆದಪ್ಪಿಕೊಂಡಂ ಹರಿಶ್ಚಂದ್ರನಂ ಗಿರಿಜೇಶನು ||೧೨||
ಪದ್ಯದ ಅನ್ವಯಕ್ರಮ:
ಅಂಬರದ ಸುರರು ಪೂಮಳೆ ಕಱೆಯೆ ತುಱುಗಿದ ಕದಂಬವು, ಎಡೆ ಬಿಡದೆ ಪೂರೈಪ ಶಂಖದ, ಹೊಯ್ವ ತಂಬಟದ, ಸೂಳೈಪ ನಿಸ್ಸಾಳ, ಪೊಡೆವ ಭೇರಿಗಳ, ಬಿರುದೆತ್ತಿ ಕರೆವ ಕೊಂಬುಗಳ, ಬಾರಿಸುವ ಹಲಕೆಲವು ವಾದ್ಯನಿಕುರುಂಬದ ಮಹಾ ರವದ ಸಡಗರದ ಸಂಭ್ರಮ ಆಡಂಬರದ ನಡುವೆ ಗಿರಿಜೇಶನು ಹರಿಶ್ಚಂದ್ರನಂ ತೆಗೆದು ಅಪ್ಪಿಕೊಂಡಂ.
ಪದ-ಅರ್ಥ:
ಅಂಬರದ-ಆಕಾಶದ; ಸುರರು-ದೇವತೆಗಳು; ಪೂಮಳೆಗಱೆಯೆ-ಹೂವಿನ ಮಳೆಯನ್ನು ಸುರಿಸಲು; ತುಱುಗಿದ-ಸೇರಿಕೊಂಡ, ದಟ್ಟಣೆಗೊಂಡ; ಕದಂಬವು-ಸಮೂಹವು; ಎಡೆವಿಡದೆ-ನಿರಂತರ; ಪೂರೈಪ-ಶಬ್ದಮಾಡುವ; ಹೊಯ್ವ-ಹೊಡೆಯುವ; ತಂಬಟ-ತಮಟೆ; ಸೂಳೈಪ-ಭೋರಿಡುವ, ಗಟ್ಟಿಯಾಗಿ ಧ್ವನಿಮಾಡುವ; ನಿಸ್ಸಾಳ-ಒಂದು ಚರ್ಮವಾದ್ಯ; ಪೊಡೆವ-ಹೊಡೆಯುವ; ಭೇರಿ-ಕರ್ಕಶ ಶಬ್ದಮಾಡುವ ಒಂದು ಚರ್ಮವಾದ್ಯ; ಬಿರುದೆತ್ತಿ-ಗೌರವಸೂಚಕವಾಗಿ; ಕರೆವ-ಊದುವ; ಕೊಂಬು-ಕೊಂಬಿನಾಕಾರದ ವಾದ್ಯ; ನಿಕುರುಂಬದ-ವಾದ್ಯಸಮೂಹದ; ಮಹಾರವದ-ಅತಿಯಾದ ಶಬ್ದದ; ತೆಗೆದಪ್ಪಿಕೊಂಡಂ-ಬರಸೆಳೆದು ಅಪ್ಪಿಕೊಂಡನು; ಗಿರಿಜೇಶ-ಶಿವ.
ಶಿವ ಹರಿಶ್ಚಂದ್ರನಿಗೆ ದರ್ಶನವನ್ನು ಕೊಟ್ಟ ಸಂದರ್ಭದಲ್ಲಿ ಆಕಾಶದಲ್ಲಿ ನೆರೆದ ದೇವತೆಗಳು ಹೂಮಳೆಯನ್ನು ಸುರಿಸಿದರು. ಅಲ್ಲಿ ನೆರೆದ ದೇವತೆಗಳ ಸಮೂಹವು ನಿರಂತರ ಧ್ವನಿಗೊಡುತ್ತಿರುವ ಶಂಖದ, ಹೊಡೆಯುತ್ತಿರುವ ತಮಟೆಗಳ, ಭೋರಿಡುವ ನಿಸ್ಸಾಳದ, ಹೊಡೆಯುತ್ತಿರುವ ಭೇರಿಗಳ, ಗೌರವಸೂಚಕವಾಗಿ ಊದುವ ಕೊಂಬುಗಳ, ಬಾರಿಸುವ ಹಲವು ವಿಧದ ವಾದ್ಯಗಳ ಮಹಾಶಬ್ದದ ಸಡಗರದ ಸಂಭ್ರಮದ ನಡುವೆ ಸಂತುಷ್ಟನಾಗಿ ಗಿರಿಜೇಶನೆನಿಸಿರುವ ಶಿವನು ಹರಿಶ್ಚಂದ್ರನನ್ನು ಬರಸೆಳೆದು ಆಲಿಂಗಿಸಿಕೊಂಡನು.
ಒಂದೆಡೆ ಹರಿಶ್ಚಂದ್ರನ ಸತ್ಯಸಂಧತೆಯು ಮೂರೂ ಲೋಕಗಳಿಗೆ ಪಸರಿಸಿದ ಸಂದರ್ಭ, ಇನ್ನೊಂದೆಡೆ ಹರಿಶ್ಚಂದ್ರ ವಿಶ್ವಾಮಿತ್ರ ಒಡ್ಡಿದ ಹಲವು ಕಠಿಣ ಪರೀಕ್ಷೆಗಳನ್ನು ಎದುರಿಸಿ ಗೆದ್ದ ಸಂದರ್ಭ, ಮತ್ತೊಂದೆಡೆ ಅಪೂರ್ವವಾದುದನ್ನು ಸಾಧಿಸಿದ ಹರಿಶ್ಚಂದ್ರನನ್ನು ಮೆಚ್ಚಿ ದರ್ಶನವನ್ನು ನೀಡಿದ ಸಂದರ್ಭ- ಹೀಗೆ ಸೃಷ್ಟಿಯಾದ ಅಪೂರ್ವವಾದ ಸನ್ನಿವೇಶದಲ್ಲಿ ದೇವತೆಗಳು ಹರಿಶ್ಚಂದ್ರ, ಚಂದ್ರಮತಿ ಹಾಗೂ ಶಿವಪಾರ್ವತಿಯರ ಮೇಲೆ ಹೂಮಳೆಯನ್ನು ಸುರಿಸಿ ತಮ್ಮ ಗೌರವ, ಪ್ರೀತಿ, ವಿಶ್ವಾಸಗಳನ್ನು ತೋರಿಸಿದ್ದು ಮಾತ್ರವಲ್ಲ, ಹಲವು ವಿಧದ ವಾದ್ಯಗಳನ್ನು ನುಡಿಸಿ ಒಂದು ಅಪೂರ್ವವಾದ ಆಡಂಬರದ ಸನ್ನಿವೇಶವನ್ನು ನಿರ್ಮಿಸಿದರು. ಈ ಸಂತೋಷದ ನಡುವೆ ವಾತ್ಸಲ್ಯದಿಂದ ಶಿವನು ಹರಿಶ್ಚಂದ್ರನನ್ನು ಆಲಿಂಗಿಸಿಕೊಂಡನು. ಹರಿಶ್ಚಂದ್ರನಿಗೆ ಸತ್ಯದ ಸಾಕ್ಷಾತ್ಕಾರದ ಕೊನೆಯಲ್ಲಿ ಶಿವಸಾಕ್ಷಾತ್ಕಾರವೂ ಆಯಿತು.
ನೆನೆದು ಚಂಡಾಲಕಿಂಕರನಾಗಿ ಹೊಲೆವೇಷ
ವನು ಹೊತ್ತು ಸುಡುಗಾಡ ಕಾದು ಶವಶಿರದಕ್ಕಿ
ಯನು ಹೇಸದುಂಡು ಜೀವಿಸುತ ವರಪುತ್ರನಸುವಳಿದುದನು ಕಣ್ಣಾರೆ ಕಂಡು
ಘನಪತಿಪ್ರತೆಯಪ್ಪ ನಿಜಸತಿಯ ಕೊಂದ ನೀ
ಚನು ಮೂರ್ಖನಾನೆನ್ನ ಠಾವಿಗಿದೇಕೆ ಪಾ
ವನಮೂರ್ತಿ ನೀವು ಬಿಜಯಂಗೆಯ್ದಿರೆಂದಭವನಂಘ್ರಿಯಲಿ ಸೈಗೆಡೆದನು ||೧೩||
ಪದ್ಯದ ಅನ್ವಯಕ್ರಮ:
ನೆನೆದು ಚಂಡಾಲ ಕಿಂಕರನಾಗಿ ಹೊಲೆವೇಷವನು ಹೊತ್ತು, ಸುಡುಗಾಡ ಕಾದು, ಶವಶಿರದ ಅಕ್ಕಿಯನು ಹೇಸದೆ ಉಂಡು, ಜೀವಿಸುತ ವರಪುತ್ರನ್ ಅಸು ಅಳಿದುದನು ಕಣ್ಣಾರೆ ಕಂಡು ಘನ ಪತಿವ್ರತೆಯಪ್ಪ ನಿಜಸತಿಯ ಕೊಂದ ನೀಚನು ಮೂರ್ಖನು ನಾನ್, ಇದೇಕೆ ಎನ್ನ ಠಾವಿಗೆ ಪಾವನಮೂರ್ತಿ ನೀವು ಬಿಜಯಂ ಗೈದಿರಿ ಎಂದು ಅಭವನ ಅಂಘ್ರಿಯಲಿ ಸೈಗೆಡೆದನು.
ಪದ-ಅರ್ಥ:
ನೆನೆದು-ಚಿಂತಿಸಿ; ಚಂಡಾಲ-ಹೀನ ಕುಲದಲ್ಲಿ ಹುಟ್ಟಿದವನು; ಕಿಂಕರನಾಗಿ-ಸೇವಕನಾಗಿ; ಹೊಲೆವೇಷ-ಮೈಲಿಗೆ ವೇಷ; ಹೊತ್ತು-ಹೊಂದಿ; ಸುಡುಗಾಡ ಕಾದು-ಶ್ಮಶಾನವನ್ನು ಕಾಯುತ್ತ; ಶವಶಿರದಕ್ಕಿ-ಶವದ ತಲೆಯ ಪಕ್ಕ ಇರಿಸಿಕೊಂಡ ಅಕ್ಕಿ; ಹೇಸದೆ-ಅಸಹ್ಯಪಡದೆ; ಉಂಡು-ಊಟಮಾಡುತ್ತ; ವರಪುತ್ರ-ಲೋಹಿತಾಶ್ವ; ಅಸುವಳಿದುದನು-ಸತ್ತುಹೋದುದನ್ನು; ಘನಪತಿವ್ರಯೆಯಪ್ಪ-ಮಹಾ ಪತಿವ್ರತೆಯಾಗಿರುವ; ನಿಜಸತಿಯ-ತನ್ನ ಹೆಂಡತಿಯ; ಎನ್ನ ಠಾವಿಗೆ-ನಾನಿರುವ ಸ್ಥಳಕ್ಕೆ(ಶ್ಮಶಾನಕ್ಕೆ); ಬಿಜಯಂಗೈದಿರಿ-ಆಗಮಿಸಿದಿರಿ; ಅಭವನ-ಶಿವನ; ಅಂಘ್ರಿಯಲಿ-ಪಾದಗಳಲ್ಲಿ; ಸೈಗೆಡೆದನು-ಬಿದ್ದುಬಿಟ್ಟನು.
ಕ್ಷತ್ರಿಯ ಕುಲದಲ್ಲಿ ಹುಟ್ಟಿರುವ ತಾನು ತನ್ನ ಬಗ್ಗೆ ಚಿಂತಿಸಿ ಚಂಡಾಲನೊಬ್ಬನಿಗೆ ಸೇವಕನಾಗಿ ಮೈಲಿಗೆ ಬಟ್ಟೆಬರೆಗಳನ್ನು ಧರಿಸಿಕೊಂಡು, ದಿನವಿಡೀ ಶ್ಮಶಾನವನ್ನು ಕಾಯುತ್ತ, ಹಸಿವಾದಾಗ ಶವಗಳ ತಲೆಭಾಗದಲ್ಲಿ ತೆಗೆದಿರಿಸುವ ಅಕ್ಕಿಯನ್ನು ಬೇಯಿಸಿ ಅಸಹ್ಯಪಡದೆ ಊಟಮಾಡಿ ಬದುಕುತ್ತ, ನನ್ನ ಮಗ ಲೋಹಿತಾಶ್ವನು ಸತ್ತುಹೋದುದನ್ನು ಕಣ್ಣಾರೆ ಕಂಡು, ಅತ್ಯಂತ ಶ್ರೇಷ್ಠಪತಿವ್ರತೆ ಎನಿಸಿರುವ ಹೆಂಡತಿ ಚಂದ್ರಮತಿಯನ್ನು ಕಯ್ಯಾರೆ ಕೊಂದ ನಾನು ನೀಚನೂ ಮೂರ್ಖನೂ ಆಗಿರುವಾಗ ನಾನು ವಾಸಿಸುವ ಈ ಶ್ಮಶಾನಕ್ಕೆ ಪಾವನಮೂರ್ತಿ ಎನಿಸಿರುವ ತಾವು ಏಕೆ ಆಗಮಿಸಿದಿರಿ? ಎಂದು ಬೇಸರಿಸಿ ಹರಿಶ್ಚಂದ್ರನು ಶಿವನ ಪಾದಗಳ ಮೇಲೆ ಬಿದ್ದುಬಿಟ್ಟನು.
ಶ್ಮಶಾನವಾಸಿಯಾಗಿರುವ, ಚಂಡಾಲ ಸೇವಕನಾಗಿರುವ, ಶವಶಿರದಕ್ಕಿಯನ್ನು ಅಸಹ್ಯಪಡದೆ ಉಣ್ಣುವ, ಕೊಳೆಬಟ್ಟೆಬರೆಗಳನ್ನು ಧರಿಸಿರುವ, ಮಗನ ಸಾವನ್ನು ಕಂಡೂ ನೊಂದುಕೊಳ್ಳದ, ಪರಿವ್ರತಾ ಶಿರೋಮಣಿ ಎನಿಸಿರುವ ತನ್ನ ಹೆಂಡತಿಯನ್ನೇ ಕೊಲ್ಲಲು ಹೇಸದ ತನಗೆ ಶಿವ ಒಲಿಯುವುದು ಸರಿಯೇ? ಅದೂ ಶ್ಮಶಾನದೊಳಗೆ ತನಗೆ ಮೈದೋರುವುದು ಸರಿಯೇ? ಶಿವನೋ ಪಾವನಮೂರ್ತಿ ಎನಿಸಿರುವವನು, ಭಕ್ತರನ್ನು ಉದ್ಧರಿಸುವವನು. ತನ್ನಂತಹ ಪಾಪಿಗಳಿಗೆ ದರ್ಶನವನ್ನು ನೀಡುವುದು ಸಮಂಜಸವೇ? ಎಂಬ ಗೊಂದಲದಲ್ಲಿ ಹರಿಶ್ಚಂದ್ರನು ತನ್ನನ್ನು ಮನ್ನಿಸಬೇಕೆಂದು ಶಿವನ ಪಾದಗಳಲ್ಲಿ ಬಿದ್ದುಬಿಟ್ಟನು. ಒಂದೆಡೆ, ಪಾವನ ಮೂರ್ತಿಯಾದ ಶಿವ ಶ್ಮಶಾನದಂತಹ ನಿಷಿದ್ದ ಸ್ಥಳದಲ್ಲಿ ಮೈದೋರುವುದು ಸರಿಯೇ ಎಂಬ ಗೊಂದಲ. ಇನ್ನೊಂದೆಡೆ, ತಪಸ್ಸು ಮಾಡಿದವರಿಗೂ ಸುಲಭದಲ್ಲಿ ಒಲಿಯದ ಶಿವ ತನಗೆ ಒಲಿದನಲ್ಲ! ಎಂಬ ಸಂತಸ, ಎಲ್ಲಾ ಭಾವಗಳು ಒಟ್ಟಾದಾಗ ಹರಿಶ್ಚಂದ್ರನಿಗೆ ಏನು ಮಾಡಬೇಕೆಂದು ತಿಳಿಯದೆ ಶಿವನ ಪಾದಗಳಲ್ಲಿ ಬಿದ್ದುಬಿಟ್ಟನು.
ಘನಸತ್ಯವೇ ಜೀವವೆಂದಿರ್ದ ನಿನ್ನ ಹೊಲೆ
ಯನ ಸೇವೆ ಗುರುಸೇವೆ ಹೊತ್ತ ಹೊಲೆವೇಷ ಪಾ
ವನ ಪುಣ್ಯವೇಷ ಸುಡುಗಾಡ ರಕ್ಷಿಸಿದಿರವು ತಾ ಯಜ್ಞ ರಕ್ಷೆಯಿರವು
ಅನುದಿನಂ ಭುಂಜಿಸಿದ ಶವದ ಶಿರದಕ್ಕಿಯ
ಲ್ಲನಪೇಯ ಚಾಂದ್ರಾಯಣಂ ಪುತ್ರನಳಿವು ಜ
ನ್ಮನಿಕಾಯದಳಿವಂಗನಾಹನನ ಮಾಯಾಹನವಂಜಬೇಡೆಂದನು ||೧೪||
ಪದ್ಯದ ಅನ್ವಯಕ್ರಮ:
ಘನಸತ್ಯವೇ ಜೀವವು ಎಂದು ಇರ್ದ ನಿನ್ನ ಹೊಲೆಯನ ಸೇವೆ ಗುರುಸೇವೆ, ಹೊತ್ತ ಹೊಲೆವೇಷ ಪಾವನ ಪುಣ್ಯವೇಷ, ಸುಡುಗಾಡ ರಕ್ಷಿಸಿದ ಇರವು ತಾ ಯಜ್ಞ ರಕ್ಷೆಯ ಇರವು, ಅನುದಿನಂ ಭುಂಜಿಸಿದ ಶವದ ಶಿರದಕ್ಕಿ ಅಲ್ಲ ಅನಪೇಯ ಚಾಂದ್ರಾಯಣಂ, ಪುತ್ರನ ಅಳಿವು ಜನ್ಮ ನಿಕಾಯದ ಅಳಿವು, ಅಂಗನಾ ಹನನ ಮಾಯಾಹನನ ಅಂಜಬೇಡ ಎಂದನು.
ಪದ-ಅರ್ಥ:
ಘನಸತ್ಯವೇ ಜೀವ-ಹಿರಿದಾದ ಸತ್ಯವೇ ಉಸಿರು; ಎಂದಿರ್ದ-ಎಂದುಕೊಂಡಿದ್ದ; ಹೊಲೆಯನ ಸೇವೆ-ಶ್ಮಶಾನದೊಡೆಯನ ಸೇವೆ; ಸುಡುಗಾಡ-ಶ್ಮಶಾನವನ್ನು; ಇರವು-ಸ್ಥಿತಿ; ಯಜ್ಞರಕ್ಷೆಯಿರವು-ಯಾಗದಿಂದ ಒದಗಿರುವ ಸ್ಥಿತಿ; ಅನುದಿನಂ-ದಿನನಿತ್ಯ; ಭುಂಜಿಸಿದ-ಊಟಮಾಡಿದ; ಅನಪೇಯ-ನಿಷಿದ್ಧ; ಚಾಂದ್ರಾಯಣ-ಒಂದು ವ್ರತ(ವಿಶೇಷ ಟಿಪ್ಪಣಿ ನೋಡಿ); ಪುತ್ರನ ಅಳಿವು-ಮಗನ ಸಾವು; ಜನ್ಮನಿಕಾಯ-ಶರೀರ, ಇಂದ್ರಿಯ ಹಾಗೂ ಬುದ್ಧಿಗಳ ಗುಂಪು; ಅಳಿವು-ಸಾವು, ನಾಶ; ಅಂಗನಾಹನನ-ಮಡದಿಯ ಕೊಲೆ; ಮಾಯಾಹನನ-ಸೆಳೆತದ ನಾಶ, ಮಾಯೆಯ ನಾಶ.
ಹರಿಶ್ಚಂದ್ರನೇ, ನೀನು ವಿಶೇಷವಾದ ಸತ್ಯವನ್ನೇ ಜೀವವೆಂದು ಭಾವಿಸಿದ್ದವನು. ನೀನು ಇದುವರೆಗೆ ಮಾಡಿದ ಹೊಲೆಯನ ಸೇವೆಯು ಗುರುಸೇವೆಗೆ ಸಮಾನವಾಗಿದೆ. ನೀನು ಧರಿಸಿದ ಹೊಲೆವೇಷವು ಪಾವನ ಪುಣ್ಯವೇಷವಾಗಿದೆ. ಶ್ಮಶಾನವನ್ನು ರಕ್ಷಿಸಿದ ನಿನ್ನ ಸ್ಥಿತಿಯು ಯಾಗದಿಂದ ಒದಗಿರುವ ಸ್ಥಿತಿಗೆ ಸಮಾನವಾಗಿದೆ. ದಿನನಿತ್ಯ ನೀನು ಊಟಮಾಡಿದ ಶವದ ಶಿರದಕ್ಕಿ ನಿಷಿದ್ಧವಲ್ಲ, ಅದು ಚಾಂದ್ರಾಯಣ ವ್ರತಕ್ಕೆ ಸಮಾನವಾದುದು. ನಿನ್ನ ಮಗನ ಸಾವು ಜನ್ಮನಿಕಾಯದ ನಾಶವಷ್ಟೇ. ನಿನ್ನಿಂದ ನಡೆದ ಹೆಂಡತಿಯ ಕೊಲೆಯು ನಿನ್ನಲ್ಲಿರುವ ಮಾಯೆಯ ನಾಶವಲ್ಲದೆ ಬೇರೇನಲ್ಲ ಎಂದು ಶಿವನು ಹರಿಶ್ಚಂದ್ರನನ್ನು ಸಮಾಧಾನಿಸಿದನು.
ರಾಜನಾದ ತಾನು ರಾಜಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳಬೇಕಾಯಿತಲ್ಲ ಎಂದು ಚಿಂತಿತನಾದಾಗ ಶಿವ ಆತನನ್ನು ಸಮಾಧಾನಿಸುತ್ತಾನೆ. ಅವನು ಮಾಡಿರುವ ಪ್ರತಿಯೊಂದು ಕೆಲಸಗಳೂ ಹೇಗೆ ಮಾನ್ಯವಾಗಿವೆ ಅಥವಾ ಶ್ರೇಷ್ಠವಾಗುತ್ತವೆ ಎಂಬುದನ್ನು ವಿವರಿಸುತ್ತಾನೆ. ನೀನು ಮಾಡಿರುವ ಎಲ್ಲಾ ಕೆಲಸಗಳೂ ಪುಣ್ಯದ ಕೆಲಸಗಳೇ ಅಗಿವೆ. ಹೀಗಿರುವಾಗ ನೀನು, ನಿನ್ನ ಸ್ಥಿತಿಗಾಗಲೀ ನೀನು ಮಾಡಿದ ಕೆಲಸಕ್ಕಾಗಲೀ ಹಸಿವಾದಾಗ ಉಂಡ ಆಹಾರಕ್ಕಾಗಲೀ ನೊಂದುಕೊಳ್ಳಬೇಕಾದುದಿಲ್ಲ, ಅವೆಲ್ಲವೂ ಸೇವಾರೂಪದಲ್ಲಿ ಎಲ್ಲೆಲ್ಲಿ ಸಲ್ಲಬೇಕೋ ಅಲ್ಲಲ್ಲಿ ಸಂದಿವೆ. ಶ್ಮಶಾನದಲ್ಲಿ ನೀನು ಮಾಡಿದ್ದೆಲ್ಲವೂ ಒಂದು ವ್ರತವೆಂದು ತಿಳಿ ಎಂದು ಶಿವ ಸಮಾಧಾನಿಸುತ್ತಾನೆ.
ವಿಶೇಷ ಟಿಪ್ಪಣಿ:
ಚಾಂದ್ರಾಯಣ: ಚಂದ್ರನ ಕ್ಷಯಿಸುವ ಮತ್ತು ವೃದ್ಧಿಸುವ ಗುಣಕ್ಕನುಗುಣವಾಗಿ ಕೈಗೊಳ್ಳುವ ಒಂದು ವ್ರತ. ಚಂದ್ರ ವೃದ್ಧಿಸುತ್ತ ಹೋದಂತೆ ದಿನದಿಂದ ದಿನಕ್ಕೆ ಒಂದೊಂದೇ ತುತ್ತು ಅನ್ನವನ್ನು ವೃದ್ಧಿಸುತ್ತ ಹೋಗಿ ಹುಣ್ಣಿಮೆಯಂದು ಪೂರ್ಣ ಪ್ರಮಾಣದಲ್ಲಿ ಊಟಮಾಡಿ, ಅನಂತರ ಚಂದ್ರ ಕ್ಷೀಣಿಸುತ್ತ ಬಂದಂತೆ ದಿನದಿಂದ ದಿನಕ್ಕೆ ಒಂದೊಂದೇ ತುತ್ತು ಅನ್ನವನ್ನು ಕಡಿಮೆ ಮಾಡಿ ಅಮವಾಸ್ಯೆಯಂದು ಏನನ್ನೂ ತಿನ್ನದೆ ಕೈಗೊಳ್ಳುವ ವ್ರತವನ್ನೇ ಚಾಂದ್ರಾಯಣ ವ್ರತವೆಂದು ಕರೆಯುತ್ತಾರೆ.
ಏಳು ಭೂರಮಣ ಎಂದಭವ ಪರಸುತ್ತ ಕ
ಣ್ಣಾಲಿಜಲಮಂ ತೊಡೆದು ಸಂತೈಸಿ ಭಸಿತಮಂ
ಭಾಳದೊಳಗಿಟ್ಟು ತೆಗೆದಪ್ಪಿ ಕೌಶಿಕನ ಕರೆದೆಲೆ ಮುನಿಪ ಸುಕುಮಾರನ
ತೋಳ ಹಿಡಿದೆತ್ತಿ ತಾ ಬೇಗೆಂದೆನಲ್ಕೆ ಮುನಿ
ಪಾಳಕಂ ವಿಷವೇಱಿ ಸತ್ತರಸುಪುತ್ರನಂ
ಏಳೇಳು ಲೋಹಿತಾಶ್ವಾಂಕ ಎನೆ ಬೆಬ್ಬಳಿಸುತೆದ್ದನೇವಣ್ಣಿಸುವೆನು ||೧೫||
ಪದ್ಯದ ಅನ್ವಯಕ್ರಮ:
ಏಳು ಭೂರಮಣ ಎಂದು ಅಭವ ಪರಸುತ್ತ ಕಣ್ಣಾಲಿ ಜಲಮಂ ತೊಡೆದು ಸಂತೈಸಿ, ಭಸಿತಮಂ ಭಾಳದೊಳಗೆ ಇಟ್ಟು, ತೆಗೆದು ಅಪ್ಪಿ, ಕೌಶಿಕನ ಕರೆದು ಎಲೆ ಮುನಿಪ, ಸುಮಾರನ ತೋಳ ಹಿಡಿದು ಎತ್ತಿ ಬೇಗ ತಾ ಎಂದು ಎನಲ್ಕೆ ಮುನಿಪಾಳಕಂ ವಿಷವೇಱಿ ಸತ್ತ ಅರಸು ಪುತ್ರನಂ, ಏಳೇಳು ಲೋಹಿತಾಶ್ವಾಂಕ ಎನೆ ಬೆಬ್ಬಳಿಸುತ ಎದ್ದನ್ ಏ ಬಣ್ಣಿಸುವೆನು?
ಪದ-ಅರ್ಥ:
ಏಳು-ಎದ್ದೇಳು; ಭೂರಮಣ-ರಾಜ; ಅಭವ-ಶಿವ; ಪರಸುತ್ತ-ಹರಸುತ್ತ, ಆಶೀರ್ವದಿಸುತ್ತ; ಕಣ್ಣಾಲಿ ಜಲ-ಕಣ್ಣೀರು; ತೊಡೆದು-ಒರೆಸಿ; ಭಸಿತಮಂ-ಭಸ್ಮವನ್ನು; ಭಾಳದೊಳಗೆ –ಹಣೆಯಲ್ಲಿ; ಇಟ್ಟು-ಲೇಪಿಸಿ; ತೆಗೆದಪ್ಪಿ-ಬರಸೆಳೆದು ಅಪ್ಪಿಕೊಂಡು; ಕೌಶಿಕ-ವಿಶ್ವಾಮಿತ್ರ; ತಾ-ಕರೆದುಕೊಂಡು ಬಾ; ಮುನಿಪಾಳಕಂ-ಮುನಿಪಾಲಕನು; ಅರಸುಪುತ್ರ-ರಾಜನ ಮಗ(ಲೋಹಿತಾಶ್ವ); ಬೆಬ್ಬಳಿಸುತ-ಗಾಬರಿಗೊಳ್ಳುತ್ತ.
ತನ್ನ ಕಾಲಿಗೆರಗಿದ ಹರಿಶ್ಚಂದ್ರನನ್ನು ಶಿವನು ಏಳು ರಾಜನೇ ಎಂದು ಮೆಲ್ಲನೆ ಹಿಡಿದೆತ್ತಿ, ಆತನ ಕಣ್ಣುಗಳಲ್ಲಿ ತುಂಬಿರುವ ಕಣ್ಣೀರನ್ನು ಒರೆಸಿತೆಗೆದು, ಸಮಾಧಾನಿಸಿ, ಹರಿಶ್ಚಂದ್ರನ ಹಣೆಯಲ್ಲಿ ಭಸ್ಮವನ್ನು ಬಳಿದು, ಬರಸೆಳೆದು ಅಪ್ಪಿಕೊಂಡು, ವಿಶ್ವಾಮಿತ್ರನನ್ನು ಕರೆದು ವಿಶ್ವಾಮಿತ್ರನೇ, ಹೋಗು, ಲೋಹಿತಾಶ್ವನ ತೋಳುಗಳನ್ನು ಹಿಡಿದು ಎತ್ತಿಕೊಂಡು ಆತನನ್ನು ಬೇಗನೆ ಕರೆದು ತಾ ಎಂದಾಗ ವಿಶ್ವಾಮಿತ್ರನು ಬೇಗನೆ ಹೋಗಿ ವಿಷವೇರಿ ಸತ್ತ ಹರಿಶ್ಚಂದ್ರನ ಮಗನಾದ ಲೋಹಿತಾಶ್ವನನ್ನು ’ಏಳು ಏಳು ಲೋಹಿತಾಶ್ವಾ” ಎಂದು ಕರೆದಾಗ ಲೋಹಿತಾಶ್ವನು ಗಾಬರಿಗೊಳ್ಳುತ್ತ ಎದ್ದನು.
ಅನಿರೀಕ್ಷಿತವಾಗಿ ತನ್ನ ಮುಂದೆ ಪ್ರತ್ಯಕ್ಷನಾದ ಶಿವನ ವಿಶ್ವರೂಪವನ್ನು ಕಂಡು ಹರಿಶ್ಚಂದ್ರ ಒಂದು ಕ್ಷಣ ಗಾಬರಿಗೊಳ್ಳುತ್ತಾನೆ. ಅಲ್ಲದೆ, ಯುಕ್ತವಲ್ಲದ ಸ್ಥಳದಲ್ಲಿ ತನಗೆ ಶಿವ ಮೈದೋರಿರುವ ರೀತಿಯನ್ನೂ ಶಿವ ತನ್ನ ಮೇಲೆ ತೋರುತ್ತಿರುವ ವಾತ್ಸಲ್ಯವನ್ನೂ ಕಂಡು ಆಶ್ಚರ್ಯಚಕಿತನಾಗುತ್ತಾನೆ. ಶಿವ ಹರಿಶ್ಚಂದ್ರನನ್ನು ಎತ್ತಿ ಆಲಂಗಿಸಿಕೊಂಡು ಬಗೆಬಗೆಯಿಂದ ಉಪಚರಿಸುತ್ತಾನೆ. ಚಂದ್ರಮತಿಯ ಕೊಲೆಯನ್ನು ತಡೆದದ್ದಾಯಿತು, ಇನ್ನು ಸತ್ತ ಲೋಹಿತಾಶ್ವನನ್ನು ಬದುಕಿಸಬೇಕು, ಅದನ್ನು ವಿಶ್ವಾಮಿತ್ರನಿಗೆ ವಹಿಸಿಕೊಡುತ್ತಾನೆ. ಇಷ್ಟಕ್ಕೂ ಲೋಹಿತಾಶ್ವ ಸತ್ತದ್ದೂ, ಚಂದ್ರಮತಿಯ ಮೇಲೆ ಕಳ್ಳತನದ ಅಪವಾದ ಬಂದಿದ್ದೂ ರಾಜ್ಯವೆಲ್ಲವನ್ನೂ ಕಳೆದುಕೊಂಡಿದ್ದೂ ವಿಶ್ವಾಮಿತ್ರನಿಂದ ತಾನೇ. ಅದಕ್ಕಾಗಿ ಶಿವ ಅವನಿಂದಲೇ ಎಲ್ಲವನ್ನೂ ಸರಿದೂಗಿಸುವುದಕ್ಕೆ ಪ್ರಯತ್ನಿಸುತ್ತಾನೆ.
ಅತಿಹುಸಿವ ಯತಿ ಹೊಲೆಯ ಹುಸಿಯದ ಹೊಲೆಯನು
ನ್ನತಯತಿವರನು ಹುಸಿದು ಮಾಡುವ ಮಹಾಯಜ್ಞ
ಶತವೆಯ್ದೆ ಪಂಚಪಾತಕ ಸತ್ಯವೆರಸಿದ ನ್ಯಾಯವದು ಲಿಂಗಾರ್ಚನೆ
ಶ್ರುತಿಮತವಿದೆನ್ನಾಜ್ಞೆ ನಿನ್ನಂತೆ ಸತ್ಯರೀ
ಕ್ಷಿತಿಯೊಳಿನ್ನಾರುಂಟು ಹೇಳೆಂದು ಪಾರ್ವತೀ
ಪತಿ ಹರಿಶ್ಚಂದ್ರನಂ ತಲೆದಡವಿ ಬೋಳೈಸಿ ಕೌಶಿಕಂಗಿಂತೆಂದನು ||೧೬||
ಪದ್ಯದ ಅನ್ವಯಕ್ರಮ:
ಅತಿಹುಸಿವ ಯತಿ ಹೊಲೆಯ, ಹುಸಿಯದ ಹೊಲೆಯನು ಉನ್ನತ ಯತಿವರನು, ಹುಸಿದು ಮಾಡುವ ಮಹಾಯಜ್ಞಶತವು ಎಯ್ದೆ ಪಂಚಪಾತಕ, ಸತ್ಯವೆರಸಿದ ನ್ಯಾಯವದು ಲಿಂಗಾರ್ಚನೆ, ಶ್ರುತಿ ಮತವಿದು ಎನ್ನಾಜ್ಞೆ, ನಿನ್ನಂತೆ ಸತ್ಯರ್ ಈ ಕ್ಷಿತಿಯೊಳ್ ಇನ್ನಾರುಂಟು ಹೇಳ್ ಎಂದು ಪಾರ್ವತೀಪತಿ ಹರಿಶ್ಚಂದ್ರನಂ ತಲೆದಡವಿ ಬೋಳೈಸಿ ಕೌಶಿಕಂಗೆ ಇಂತು ಎಂದನು.
ಪದ-ಅರ್ಥ:
ಅತಿಹುಸಿವ-ಹೆಚ್ಚು ಸುಳ್ಳಾಡುವವನು; ಯತಿ-ಸನ್ಯಾಸಿ, ಮುನಿ; ಹುಸಿಯದ-ಸುಳ್ಳಾಡದ ಯತಿವರನು-ಮುನಿಶ್ರೇಷ್ಠನು; ಹುಸಿದು-ಸುಳ್ಳಾಡಿಕೊಂಡು; ಮಹಾಯಜ್ಞಶತವು-ನೂರು ಮಹಾಯಜ್ಞಗಳು; ಎಯ್ದೆ-ಚೆನ್ನಾಗಿ, ನಿಖರವಾಗಿ; ಪಂಚಪಾತಕ-ಐದು ಬಗೆಯ ಪಾಪಗಳು(ಬ್ರಹ್ಮಹತ್ಯೆ, ಸುರಾಪಾನ, ಸ್ತೇಯ(ಕಳ್ಳತನ), ಗುರುಭಾರ್ಯಾಗಮನ(ಗುರುಪತ್ನಿಯನ್ನು ಕಾಮಿಸುವುದು) ಮತ್ತು ಇವುಗಳನ್ನು ಮಾಡುವವರ ಸಂಸರ್ಗ); ಸತ್ಯವೆರಸಿದ-ಸತ್ಯದಿಂದ ಕೂಡಿದ; ಶ್ರುತಿ ಮತ-ವೇದ ತತ್ತ್ವ; ನಿನ್ನಂತೆ-ನಿನ್ನ ಹಾಗೆ; ಸತ್ಯರ್-ಸತ್ಯವಂತರು; ಈ ಕ್ಷಿತಿಯೊಳ್-ಈ ಭೂಮಿಯಲ್ಲಿ; ಇನ್ನಾರುಂಟು-ಇನ್ನು ಯಾರಿದ್ದಾರೆ? ಬೋಳೈಸಿ-ಸಮಾಧಾನಪಡಿಸಿ; ಕೌಶಿಕ-ವಿಶ್ವಾಮಿತ್ರ.
ಲೋಕದಲ್ಲಿ ಯಾವ ಮುನಿ(ಸನ್ಯಾಸಿ) ಅತ್ಯಂತ ಹೆಚ್ಚು ಸುಳ್ಳಾಡುತ್ತಾನೋ ಅವನೇ ನಿಜವಾದ ಹೊಲೆಯನು. ಜೀವಮಾನದಲ್ಲಿ ಒಂದೂ ಸುಳ್ಳಾಡ ಹೊಲೆಯ ನಿಜವಾದ ಮುನಿಶ್ರೇಷ್ಠ ಎನಿಸಿಕೊಳ್ಳುತ್ತಾನೆ. ಸುಳ್ಳನ್ನೇ ಆಡುತ್ತ ನೂರುಯಜ್ಞಗಳನ್ನು ಮಾಡಿದರೂ ಅವು ನಿಜವಾಗಿಯೂ ಪಂಚಪಾತಕಗಳು ಎನಿಸಿಕೊಳ್ಳುತ್ತವೆ. ಸತ್ಯದಿಂದ ಕೂಡಿದ ನ್ಯಾಯವು ಲಿಂಗಾರ್ಚನೆ ಎನಿಸಿಕೊಳ್ಳುತ್ತದೆ. ಇವೆಲ್ಲವೂ ವೇದೋಕ್ತವಾದ ತತ್ತ್ವಗಳು ಮಾತ್ರವಲ್ಲ, ನನ್ನ ಆಜ್ಞೆ ಕೂಡಾ. ಹಾಗಾಗಿ ಇವೆಲ್ಲವೂ ನಿನ್ನಲ್ಲಿವೆ. ನಿನ್ನಂತೆ ಈ ಭೂಮಿಯಲ್ಲಿ ಇನ್ನು ಯಾರಿದ್ದಾರೆ? ಹೇಳು ಎಂದು ಪಾರ್ವತೀಪತಿ ಎನಿಸಿರುವ ಶಿವನು ಹರಿಶ್ಚಂದ್ರನ ತಲೆಯ ಮೇಲೆ ಕೈಯಾಡಿಸಿ, ಅವನನ್ನು ಸಮಾಧಾನಪಡಿಸಿ ವಿಶ್ವಾಮಿತ್ರನಿಗೆ ಹೀಗೆ ಹೇಳಿದನು.
ಹರಿಶ್ಚಂದ್ರನಿಗೆ ತಾನು ಕ್ಷತ್ರಿಯಕುಲದಲ್ಲಿ ಹುಟ್ಟಿದರೂ ಹೊಲೆಯನಾಗಿ ಶ್ಮಶಾನದ ಆಳಾಗಿ ದುಡಿಯಬೇಕಾದ, ಶವಶಿರದಕ್ಕಿಯನ್ನು ಉಣ್ಣಬೇಕಾದ, ಹೆಂಡತಿಯ ತಲೆಯನ್ನು ಕಡಿಯಬೇಕಾದ ಅನಿವಾರ್ಯ ಪ್ರಸಂಗಗಳು ಎದುರಾದವು. ಇವೆಲ್ಲವೂ ತಾನು ನಂಬಿಕೊಂಡು ಬಂದ ಮೌಲ್ಯಗಳಿಗೆ ವಿರುದ್ಧವಾದವುಗಳು ಎಂಬುದು ಆತನ ನಿಲುವು. ಆತನ ಮನಸ್ಸಿನಲ್ಲಿನ ಈ ಗೊಂದಲವನ್ನು ಶಿವ ಪರಿಹರಿಸುತ್ತಾನೆ. ಯಾರು ಹೊಲೆಯ? ಯಾರು ಕುಲಜ? ಮುನಿಗಳಲ್ಲಿಯೂ ಸುಳ್ಳಾಡದ ಅಥವಾ ಸುಳ್ಳಾಡುವವರ ಸ್ಥಾನಮಾನಗಳೇನು? ಸುಳ್ಳಾಡುವ ಮುನಿಗಳು ಮಾಡುವ ಯಜ್ಞಗಳ ಫಲವೇನು? ಮೊದಲಾದ ಎಲ್ಲ ಜಿಜ್ಞಾಸೆಗಳಿಗೆ ಶಿವ ಸಮಾಧಾನವನ್ನು ನೀಡಿ ಆಶೀರ್ವದಿಸುತ್ತಾನೆ. ಈ ಹಂತದಲ್ಲಿ ಹರಿಶ್ಚಂದ್ರನ ಎಲ್ಲಾ ಸಂದೇಹಗಳೂ ಪರಿಹಾರವಾಗುತ್ತವೆ.
ನುಡಿಯೊಳನೃತಂ ತೋಱದಂತೆ ನಿನ್ನಲೆಗೆ ನಿಂ
ದಡೆ ಮೆಚ್ಚಿ ಮೇಲೇನ ಕೊಡುವೆನೆಂದೆಂದೆಯದ
ಕೊಡು ಬೇಗದಿಂ ವಿಶ್ವಾಮಿತ್ರ ಎಂದಾಡಾನೈವತ್ತುಕೋಟಿ ವರುಷ
ಬಿಡದೆ ಮಾಡಿದ ತಪಃಫಲದೊಳರ್ಧವನಾಂತೆ
ಕಡುಮುಳಿದು ಕಾಡಿ ನೋಡಿದೆನು ಮೆಚ್ಚಿದೆನಿನ್ನು
ಹಿಡಿಯೆಂದುಸಿರ್ದು ಫಲವೆಲ್ಲಂ ಕೊಟ್ಟನರಸಂಗೆ ಮುನಿಗಳ ದೇವನು ||೧೭||
ಪದ್ಯದ ಅನ್ವಯಕ್ರಮ:
ವಿಶ್ವಾಮಿತ್ರ, ನುಡಿಯೊಳ್ ಅನೃತಂ ತೋಱದಂತೆ ನಿನ್ನಲೆಗೆ ನಿಂದಡೆ ಮೆಚ್ಚಿ ಮೇಲೆ ಏನ ಕೊಡುವೆನ್ ಎಂದೆ ಅದ ಬೇಗದಿಂ ಕೊಡು ಎಂದು ಆಡೆ, ಆನ್ ಐವತ್ತು ಕೋಟಿ ವರುಷ ಬಿಡದೆ ಮಾಡಿದ ತಪಃಫಲದೊಳ್ ಅರ್ಧವನ್ ಆಂತೆ ಕಡುಮುಳಿದು ಕಾಡಿ ನೋಡೆದೆನು, ಮೆಚ್ಚಿದೆನ್, ಇನ್ನು ಹಿಡಿ ಎಂದು ಉಸಿರ್ದು ಮುನಿಗಳ ದೇವನು ಅರಸಂಗೆ ಫಲವೆಲ್ಲಂ ಕೊಟ್ಟನ್.
ಪದ-ಅರ್ಥ:
ಅನೃತಂ-ಸುಳ್ಳು; ತೋಱದಂತೆ-ಆಡದಂತೆ; ನಿನ್ನಲೆಗೆ-ನಿನ್ನ ಕಾಟಕ್ಕೆ, ನಿನ್ನ ಪರೀಕ್ಷೆಗೆ; ನಿಂದಡೆ-ಎದುರಿಸಿ ಗೆದ್ದರೆ; ಮೇಲೇನ-ಇನ್ನು ಏನನ್ನು, ಇನ್ನು ಎಷ್ಟನ್ನು; ಕೊಡುವೆನೆಂದೆ-ಕೊಡುತ್ತೇನೆ ಎಂದು ಹೇಳಿದೆ; ಅದ-ಅದನ್ನು; ಎಂದಾಡೆ-ಎಂದು ಹೇಳಲು; ಆನ್ –ನಾನು; ಆಂತೆ-ನೆಚ್ಚಿಕೊಂಡೇ; ಕಡುಮುಳಿದು-ಅತ್ಯಂತ ಸಿಟ್ಟುಗೊಂಡು; ಉಸಿರ್ದು-ಹೇಳಿಕೊಂಡು; ಅರಸಂಗೆ-ಹರಿಶ್ಚಂದ್ರನಿಗೆ; ಮುನಿಗಳ ದೇವ-ವಿಶ್ವಾಮಿತ್ರ.
ಮಾತಿನಲ್ಲಿ ಒಂದಿನಿತೂ ಸುಳ್ಳನ್ನು ಆಡದೆ ನಿನ್ನ ಕಾಟವೆಲ್ಲವನ್ನೂ ಸಹಿಸಿಕೊಂಡು ಎದುರಿಸಿ ಗೆದ್ದರೆ ಮೆಚ್ಚಿ ಇನ್ನೂ ಏನನ್ನು ಕೊಡುವೆ ಎಂದು ಪ್ರತಿಜ್ಞೆಮಾಡಿರುವಿಯೋ ಅದನ್ನು ಆದಷ್ಟು ಬೇಗನೆ ಹರಿಶ್ಚಂದ್ರನಿಗೆ ಕೊಟ್ಟುಬಿಡು ಎಂದು ಶಿವನು ವಿಶ್ವಾಮಿತ್ರನಲ್ಲಿ ಹೇಳಿದಾಗ, ವಿಶ್ವಾಮಿತ್ರನು, ನಾನು ಐವತ್ತು ಕೋಟಿ ವರುಷಗಳ ಕಾಲ ಬಿಡದೆ ಮಾಡಿದ ತಪಸ್ಸಿನಲ್ಲಿ ಅರ್ಧವನ್ನು ನೆಚ್ಚಿಕೊಂಡೇ ಹರಿಶ್ಚಂದ್ರನನ್ನು ಕಾಟಕೊಟ್ಟು ಪರೀಕ್ಷಿಸಿದೆನು. ಅವನ ಸತ್ಯಸಂಧತೆಗೆ ಮೆಚ್ಚಿದ್ದೇನೆ. ಈಗ ಸ್ವೀಕರಿಸು ಎಂದು ವಿಶ್ವಾಮಿತ್ರನು ಶಿವನ ಸಮ್ಮುಖದಲ್ಲಿಯೇ ತಾನು ತಪಸ್ಸಿನಿಂದ ಪಡೆದ ಫಲದಲ್ಲಿ ಅರ್ಧಭಾಗವನ್ನು ಹರಿಶ್ಚಂದ್ರನಿಗೆ ನೀಡಿದನು.
ಹರಿಶ್ಚಂದ್ರ ಇಷ್ಟೆಲ್ಲ ತೊಂದರೆಗಳನ್ನು, ಹಿಂಸೆಯನ್ನು ಅನುಭವಿಸುವಂತೆ ಆದುದು ವಿಶ್ವಾಮಿತ್ರನ ಹಠದಿಂದಾಗಿ. ಹರಿಶ್ಚಂದ್ರನಿಂದ ಸುಳ್ಳಾಡಿಸುವುದಕ್ಕೆ ವಿಶ್ವಾಮಿತ್ರ ನೂರಾರು ಪ್ರಯತ್ನಗಳನ್ನು ಮಾಡಿದರೂ ಸಹಿಸಲಸಾಧ್ಯವಾದ ಕಾಟಗಳನ್ನು ಕೊಟ್ಟರೂ ಹರಿಶ್ಚಂದ್ರನು ತನ್ನ ಸತ್ಯಸಂಧತೆಯನ್ನು ಬಿಡದೆ ವಿಶ್ವಾಮಿತ್ರನ ಎಲ್ಲಾ ಪರೀಕ್ಷಗಳಲ್ಲೂ ಗೆದ್ದಿದ್ದಾನೆ. ಇನ್ನೊಂದರ್ಥದಲ್ಲಿ ಪ್ರತಿಯೊಂದು ಪರೀಕ್ಷೆಯಲ್ಲಿಯೂ ವಿಶ್ವಾಮಿತ್ರನನ್ನು ಸೋಲಿಸಿದ್ದಾನೆ. ವಿಶ್ವಾಮಿತ್ರ ದೇವೇಂದ್ರನ ಆಸ್ಥಾನದಲ್ಲಿ ಮಾಡಿದ ಪ್ರತಿಜ್ಞೆಯ ಪ್ರಕಾರ ನಡೆದುಕೊಳ್ಳಬೇಕು. ಹರಿಶ್ಚಂದ್ರನಿಗೆ ಕೊಡಬೇಕಾದುದನ್ನು ಕೂಡಲೇ ಕೊಟ್ಟುಬಿಟ್ಟು ಮಾತನ್ನು ಉಳಿಸಿಕೊಳ್ಳು ಎಂದು ಶಿವ ಎಚ್ಚರಿಸುತ್ತಾನೆ. ತಾನು ಒಡ್ಡಿದ ಎಲ್ಲಾ ಪರೀಕ್ಷೆಗಳಲ್ಲಿಯೂ ತಾನೇ ಸೋತಿರುವುದರಿಂದ, ಮತ್ತು ಹರಿಶ್ಚಂದ್ರನಿಗೆ ಶಿವಾನುಗ್ರಹವಾಗಿರುವುದರಿಂದ ಮತ್ತೆ ಪರೀಕ್ಷಿಸುವ ಪ್ರಸಂಗವೇ ಇಲ್ಲ. ಹಾಗಾಗಿ ವಿಶ್ವಾಮಿತ್ರ ತನ್ನ ಮಾತಿನಂತೆ ತಾನು ಸಾಧಿಸಿದ ತಪಸ್ಸಿನ ಫಲದ ಅರ್ಧಭಾಗವನ್ನು ಹರಿಶ್ಚಂದ್ರನಿಗೆ ನೀಡಬೇಕಾಯಿತು.
***