ಸಾಹಿತ್ಯಾನುಸಂಧಾನ

heading1

ಅರಿವಿಂದೀಕ್ಷಿಸಲಕ್ಕುಮಾತ್ಮನಿರವಂ

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ)

 

ತತ್ತ್ವಪ್ರೀತಿ ಮನಕೆ ಮುಟ್ಟಲದು ಸಮ್ಯಗ್ದರ್ಶನಂ ಮತ್ತಮಾ

ತತ್ತ್ವಾರ್ಥಂಗಳನೊಲ್ದು ಭೇದಿಪುದು ಸಮ್ಯಕ್ ಜ್ಞಾನಮಾ ಬೋಧದಿಂ

ಸತ್ತ್ವಂಗಳ್ಕಿಡದಂತುಟೋವಿ ನಡೆಯಲ್ಸಮ್ಯಕ್ಚರಿತ್ರಂ ಸುರ

ತ್ನತ್ವಂ ಮೂರಿವು ಮುಕ್ತಿಗೆಂದರುಪಿದೈ! ರತ್ನಾಕರಾಧೀಶ್ವರಾ!  ||೧||

ಪದ್ಯದ ಅನ್ವಯಕ್ರಮ:

ತತ್ತ್ವಪ್ರೀತಿ ಮನಕೆ ಮುಟ್ಟಲ್ ಅದು ಸಮ್ಯಕ್ ದರ್ಶನಂ, ಮತ್ತಂ ಆ ತತ್ತ್ವ ಅರ್ಥಂಗಳನ್ ಒಲ್ದು ಭೇದಿಪುದು ಸಮ್ಯಕ್ ಜ್ಞಾನಂ, ಆ ಬೋಧದಿ ಸತ್ವಂಗಳ್ ಕಿಡದಂತುಟು ಓವಿ ನಡೆಯಲ್ ಸಮ್ಯಕ್ ಚರಿತ್ರಂ, ಇವು ಮೂರ್ ಸುರನ್ನತ್ವಂ ಮುಕ್ತಿಗೆ ಎಂದು ಅರುಪಿದೈ! ರತ್ನಾಕರಾಧೀಶ್ವರಾ.

ಪದ-ಅರ್ಥ:

ತತ್ತ್ವಪ್ರೀತಿ-ಸಿದ್ಧಾಂತಗಳ ಒಲವು;   ಮನಕೆ ಮುಟ್ಟಲ್-ಮನಸ್ಸಿಗೆ ನಾಟಿದರೆ;   ಸಮ್ಯಕ್ ದರ್ಶನಂ-ಜೈನಮತದ ಬಗೆಗಿರುವ ಸಂಪೂರ್ಣ ವಿಶ್ವಾಸ;  ತತ್ತ್ವಾರ್ಥಂಗಳನ್-ತತ್ತ್ವದ ಅರ್ಥಗಳನ್ನು, ತತ್ತ್ವದ ಸಾರವನ್ನು;  ಒಲ್ದು(ಒಲಿದು)-ಒಪ್ಪಿಕೊಂಡು;  ಭೇದಿಪುದು-ಅರಿಯುವುದು;  ಸಮ್ಯಕ್ ಜ್ಞಾನ-ಜೀವಾದಿ ಪದಾರ್ಥಗಳ ಸ್ವರೂಪವನ್ನು ಯಥಾವತ್ತಾಗಿ ಅರಿತುಕೊಳ್ಳುವುದು; ಬೋಧದಿ-ಅರಿವಿನಿಂದ;  ಸತ್ವಂಗಳ್-ಜೀವಿಗಳು; ಕಿಡದಂತುಟು-ನಾಶವಾಗದಂತೆ;  ಓವಿ-ಕಾಪಾಡಿ;  ನಡೆಯಲ್-ವರ್ತಿಸಲು; ಸಮ್ಯಕ್ ಚರಿತ್ರಂ-ಒಳ್ಳೆಯ ನಡತೆ; ಸುರತ್ನತ್ವಂ-ದೇವನಾಗಿರುವಿಕೆ, ದೇವತ್ವ;  ಮುಕ್ತಿ –ಮೋಕ್ಷ; ಅರುಪಿದೈ-ತಿಳಿಸಿದೆ.

            ಸಿದ್ಧಾಂತಗಳ ಬಗೆಗಿನ ಒಲವು ಮನಸ್ಸಿಗೆ ನಾಟುವಂತಿದ್ದರೆ ಅದು ಜೈನಮತದ ಬಗೆಗಿರುವ ಸಂಪೂರ್ಣ ವಿಶ್ವಾಸ ಎನಿಸಿಕೊಳ್ಳುತ್ತದೆ. ಅದನ್ನು ಸಮ್ಯಕ್ ದರ್ಶನವೆಂದು ಕರೆಯುತ್ತಾರೆ. ಆ ಸಿದ್ಧಾಂತಗಳ ಅರ್ಥಗಳನ್ನು ಅಥವಾ ತತ್ತ್ವಗಳ ಸಾರವನ್ನು ಒಪ್ಪಿಕೊಂಡು ಅರಿತರೆ ಜೀವಾದಿ ಪದಾರ್ಥಗಳ ಸ್ವರೂಪವನ್ನು ಯಥಾವತ್ತಾಗಿ ಅರಿತುಕೊಳ್ಳುವುದು ಎನಿಸಿಕೊಳ್ಳುತ್ತದೆ.  ಅದನ್ನು ಸಮ್ಯಕ್ ಜ್ಞಾನವೆಂದು ಕರೆಯುತ್ತಾರೆ. ಸಮ್ಯಕ್ ಜ್ಞಾನದ ಅರಿವಿನಿಂದ ಜೀವಿಗಳು ನಾಶವಾಗದಂತೆ ಕಾಪಾಡಿಕೊಂಡು ವರ್ತಿಸಿದರೆ ಒಳ್ಳೆಯ ನಡತೆ ಎನಿಸಿಕೊಳ್ಳುತ್ತದೆ. ಅದುವೇ ಸಮ್ಯಕ್ ಚರಿತ್ರ. ಇವುಗಳೇ ರತ್ನತ್ರಯಗಳು. ಇವು ಮೋಕ್ಷವನ್ನು ಪಡೆದು ದೇವತ್ವವನ್ನು ಹೊಂದುವುದಕ್ಕೆ ಸಹಕಾರಿಯಾಗಿವೆ.

            ದೇವ, ಗುರು ಹಾಗೂ ಶಾಸ್ತ್ರಗಳ ಮೇಲೆ ಅಪಾರ ಶ್ರದ್ಧೆ ಹಾಗೂ ಭಕ್ತಿಗಳನ್ನು ಇರಿಸಿಕೊಂಡು ಜೈನಮತದ ಬಗೆಗಿನ ತತ್ತ್ವ ಸಿದ್ಧಾಂತಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರೆ ಅದು ಜೈನಮತದ ರತ್ನತ್ರಯದ ಮೊದಲ ಹಂತವಾಗಿರುವ ಸಮ್ಯಕ್ ಚರಿತ್ರವನ್ನು ಸಾಧಿಸಿದಂತಾಗುತ್ತದೆ. ಮುಂದೆ ಶಾಸ್ತ್ರಾದಿಗಳನ್ನು ಅಧ್ಯಯನ ಮಾಡಿ, ಸಿದ್ಧಾಂತಗಳನ್ನು ಅರ್ಥಮಾಡಿಕೊಂಡು ಜ್ಞಾನವನ್ನು ಸಂಪಾದಿಸಿಕೊಂಡರೆ ಅದು ರತ್ನತ್ರಯದ ಎರಡನೆಯ ಹಂತವಾಗಿರುವ ಸಮ್ಯಕ್ ಜ್ಞಾನವನ್ನು ಸಾಧಿಸಿದಂತಾಗುತ್ತದೆ. ಸಮ್ಯಕ್ ಚರಿತ್ರ ಹಾಗೂ ಸಮ್ಯಕ್ ಜ್ಞಾನಗಳ ಅರಿವಿನಿಂದ ಸಕಲ ಜೀವಸಂಕುಲಗಳ ಬಗ್ಗೆ ಜೀವದಯೆಯನ್ನು ತೋರಿ, ಸಮಾನಭಾವವನ್ನು ಇರಿಸಿಕೊಂಡು ಬದುಕಿದರೆ ಅದು ಜೈನಮತದ ಮೂರನೆಯ ಹಂತವಾಗಿರುವ ಸಮ್ಯಕ್ ದರ್ಶನವನ್ನು ಸಾಧಿಸಿದಂತಾಗುತ್ತದೆ. ಈ ಮೂರೂ ರತ್ನಗಳು (ರತ್ನತ್ರಯಗಳು) ಮನುಷ್ಯನ ಮುಕ್ತಿಗೆ  ಸೋಪಾನಗಳಾಗಿದ್ದು ದೇವತ್ವವನ್ನು ಹೊಂದುವುದಕ್ಕೆ ಸಹಕಾರಿಯಾಗಿವೆ.

 

ಅರಿವಿಂದೀಕ್ಷಿಸಲಕ್ಕುಮಾತ್ಮನಿರವಂ ದೇಹಂಬೊಲೀಕಣ್ಗೆ ತಾಂ

ಗುರಿಯಾಗಂ ಶಿಲೆಯೊಳ್ಸುವರ್ಣಮರಲೊಳ್ಸೌರಭ್ಯಮಾ ಕ್ಷೀರದೊಳ್

ನರು ನೆಯ್ಕಾಷ್ಠದೊಳಗ್ನಿಯಿರ್ಪತೆರದಿಂದೀ ಮೆಯ್ಯೊಳೊಂದಿರ್ಪನೆಂ

ದರಿದಭ್ಯಾಸಿಸೆ ಕಾಣ್ಗುಮೆಂದರುಪಿದೈ! ರತ್ನಾಕರಾಧೀಶ್ವರಾ!  ||೨||

 ಪದ್ಯದ ಅನ್ವಯಕ್ರಮ:

ಅರಿವಿಂದ ಆತ್ಮನ ಇರವಂ ಈಕ್ಷಿಸಲ್ ಅಕ್ಕುಂ, ದೇಹಂಬೊಲ್ ಈ ಕಣ್ಗೆ ತಾಂ ಗುರಿಯಾಗಂ, ಶಿಲೆಯೊಳ್ ಸುವರ್ಣಂ, ಅರಲೊಳ್ ಸೌರಭ್ಯಂ, ಆ ಕ್ಷೀರದೊಳ್ ನರು ನೆಯ್, ಆ ಕಾಷ್ಠದೊಳ್ ಅಗ್ನಿ ಇರ್ಪ ತೆರದಿಂದ ಈ ಮೆಯ್ಯೊಳ್ ಒಂದಿ ಇರ್ಪನ್ ಎಂದು ಅರಿದು ಅರಿದು ಅಭ್ಯಾಸಿಸೆ ಕಾಣ್ಗುಂ ಎಂದು ಅರಿಪಿದೈ! ರತ್ನಾಕರಾಧೀಶ್ವರಾ.

ಪದ-ಅರ್ಥ:

ಅರಿವಿಂದ-ತಿಳಿವಳಿಕೆಯಿಂದ, ಜ್ಞಾನದಿಂದ;  ಇರವಂ-ಆತ್ಮನ ಅಸ್ತಿತ್ವವನ್ನು, ಆತ್ಮನ ಸ್ಥಿತಿಯನ್ನು;  ಈಕ್ಷಿಸಲ್ ಅಕ್ಕುಂ –ಕಾಣಲು ಸಾಧ್ಯ;   ದೇಹಂಬೊಲ್-ದೇಹದ ಹಾಗೆ;   ಈ ಕಣ್ಗೆ-ಈ ದೃಷ್ಟಿಗಳಿಗೆ;  ತಾಂ ಗುರಿಯಾಗಂ-ತಾನು ಗೋಚರಿಸಲಾರ;   ಶಿಲೆಯೊಳ್ ಸುವರ್ಣಂ-ಕಲ್ಲಿನಲ್ಲಿ ಚಿನ್ನವೂ;  ಆರಲೊಳ್ ಸೌರಭ್ಯಮಂ-ಹೂವಿನಲ್ಲಿ ಸುವಾಸನೆಯೂ;  ಕ್ಷೀರದೊಳ್-ಹಾಲಿನಲ್ಲಿ;  ನರು ನೆಯ್-ಪರಿಮಳಯುಕ್ತ ತುಪ್ಪ;   ಕಾಷ್ಠದೊಳಗ್ನಿ-ಕಟ್ಟಿಗೆಯಲ್ಲಿ ಬೆಂಕಿ;   ಇರ್ಪ ತೆರದಿಂದ-ಇರುವ ರೀತಿಯಲ್ಲಿ;  ಈ ಮೆಯ್ಯೊಳ್-ಈ ಶರೀರದಲ್ಲಿ;  ಒಂದಿ ಇರ್ಪನ್- ಸೇರಿಕೊಂಡಿದ್ದಾನೆ;  ಅರಿದು ಅಭ್ಯಾಸಿಸೆ-ತಿಳಿದು ಅಭ್ಯಾಸಮಾಡಿದರೆ;  ಕಾಣ್ಗುಂ-ಕಾಣುತ್ತಾನೆ; ಅರುಪಿದೈ-ತಿಳಿಸಿದೆ.

            ಮನುಷ್ಯದೇಹದಲ್ಲಿ ಆತ್ಮನ ಅಸ್ತಿತ್ವವನ್ನು ಜ್ಞಾನದಿಂದ ಅರಿತುಕೊಳ್ಳಲು ಸಾಧ್ಯ. ಭೌತಿಕಕಣ್ಣುಗಳಿಗೆ ದೇಹವು ಕಾಣಿಸುವ ಹಾಗೆ ಆತ್ಮನು ಗೋಚರಿಸಲಾರ. ಕಲ್ಲಿನಲ್ಲಿ ಚಿನ್ನವೂ ಹೂವಿನಲ್ಲಿ ಸುವಾಸನೆಯೂ ಹಾಲಿನಲ್ಲಿ ಪರಿಮಳಯುಕ್ತವಾದ ತುಪ್ಪವೂ ಕಟ್ಟಿಗೆಯಲ್ಲಿ ಬೆಂಕಿಯೂ ದೃಷ್ಟಿಗೋಚರವಾಗದ ರೀತಿಯಲ್ಲಿ ಹುದುಗಿರುವಂತೆ ಈ ಭೌತಿಕ ಶರೀರದಲ್ಲಿ ಆತ್ಮನು ಸೇರಿಕೊಂಡಿದ್ದಾನೆ ಎಂಬುದನ್ನು ಅರಿತು ಅರಿತು ಅಭ್ಯಾಸ ಮಾಡಿದಾಗ ಮಾತ್ರ  ಅತನನ್ನು ಕಾಣಲು ಸಾಧ್ಯ.

            ಮನುಷ್ಯ ದೇಹವೆಂಬುದು ಭೌತಿಕವಾದುದು, ಒಂದಲ್ಲ ಒಂದು ದಿನ ಅಳಿಯುವಂತಹುದು. ಈ ಅಳಿಯುವ ದೇಹದೊಳಗೆ ಅಳಿವಿಲ್ಲದ ಆತ್ಮನು ದೃಷ್ಟಿಗೋಚರವಾಗದ ರೀತಿಯಲ್ಲಿ ನೆಲೆಸಿದ್ದಾನೆ. ಕಲ್ಲಿನಲ್ಲಿ ಚಿನ್ನ ಹುದುಗಿರುವಂತೆ, ಹೂವಿನಲ್ಲಿ ಸುವಾಸನೆ ಹುದುಗಿರುವಂತೆ, ಹಾಲಿನಲ್ಲಿ ತುಪ್ಪ ಹುದುಗಿರುವಂತೆ, ಕಟ್ಟಿಗೆಯಲ್ಲಿ ಬೆಂಕಿ ಹುದುಗಿರುವಂತೆ ದೇಹದೊಳಗೆ ಆತ್ಮನು ಸೇರಿಕೊಂಡಿದ್ದಾನೆ. ಕಲ್ಲಿನಲ್ಲಿ ಚಿನ್ನ, ಹಾಲಿನಲ್ಲಿ ತುಪ್ಪ, ಕಟ್ಟಿಗೆಯಲ್ಲಿ ಬೆಂಕಿ ಮೊದಲಾದವುಗಳನ್ನು ಮೇಲು ನೋಟಕ್ಕೆ ಕಾಣವುದು ಅಸಾಧ್ಯವಾದರೂ ಬೇರೆಬೇರೆ ನಿರ್ದಿಷ್ಟ ಪರಿಷ್ಕಾರಗಳ ಮೂಲಕ ಕಾಣುವುದಕ್ಕೆ ಸಾಧ್ಯ. ಹಾಗೆಯೇ ಸತತವಾದ ಧ್ಯಾನ, ಜಪ, ತಪಾದಿಗಳ ಮೂಲಕ, ಸಮರ್ಪಕವಾದ ಅಭ್ಯಾಸಗಳ ಮೂಲಕ, ತತ್ತ್ವಸಿದ್ಧಾಂತಗಳನ್ನು ಅರಿತುಕೊಳ್ಳುವುದರ ಮೂಲಕ ಅಂತಃಚಕ್ಷುಗಳಿಂದ ಆತ್ಮನನ್ನೂ ಕಾಣಲುಸಾಧ್ಯವಾಗುತ್ತದೆ.

 

ಬೀಳ್ದಿರ್ಪಂ ತನುವೆಂಬ ಪಂದೊವಲ ಕೂರ್ಪಾಸಂಗಳಂ ತೊಟ್ಟು ತಾ

ನೇಳ್ದಿರ್ಪಂ ತನುಗೂಡಿ ಸಂಚರಿಪನಾ ಮೆಯ್ಗೂಡಿ ತನ್ನೊಳ್ಪುಮಂ

ಕೇಳ್ದಿರ್ಪಂ ತನುಗೂಡಿ ತತ್ತನುಗೆ ಜೀವಂ ಪೇಸಿ ಸುಜ್ಞಾನದಿಂ

ಪೊಳ್ದಿರ್ಪ ಶಿವನಾಗಿಯೇಂ ಚದುರನೋ! ರತ್ನಾಕರಾಧೀಶ್ವರಾ!  ||೩||

ಪದ್ಯದ ಅನ್ವಯಕ್ರಮ:

ತನು ಎಂಬ ಪಂದೊವಲ ಕೂರ್ಪಾಸಂಗಳಂ ತೊಟ್ಟು ಬೀಳ್ದು ಇರ್ಪಂ, ತನು ಕೂಡಿ ತಾನ್ ಏಳ್ದು ಇರ್ಪಂ, ಆ ಮೆಯ್ ಕೂಡಿ ಸಂಚರಿಪನ್, ತನು ಕೂಡಿ ತನ್ನ ಒಳ್ಪುಮಂ ಕೇಳ್ದು ಇರ್ಪಂ,  ಸುಜ್ಞಾನದಿಂ ತತ್ ತನುಗೆ ಜೀವಂ ಪೇಸಿ ಶಿವನ್ ಆಗಿ ಪೊಳ್ದು ಇರ್ಪಂ, ಏಂ ಚದುರನೋ! ರತ್ನಾಕರಾಧೀಶ್ವರಾ.  

ಪದ-ಅರ್ಥ:

ಬೀಳ್ದಿರ್ಪಂ-ಬಂಧಿತನಾಗಿದ್ದಾನೆ;  ತನು-ದೇಹ;  ಪಂದೊವಲ-ಹಸಿ ಚರ್ಮದ;  ಕೂರ್ಪಾಸಂಗಳಂ-ಹೊದಿಕೆಗಳನ್ನು; ಏಳ್ದಿರ್ಪಂ-ಆರೋಹಿತನಾಗಿದ್ದಾನೆ;  ತನುಗೂಡಿ-ದೇಹದೊಂದಿಗೆ ಸೇರಿ;  ಸಂಚರಿಪನ್-ಸುತ್ತುತ್ತಿದ್ದಾನೆ;  ಮೆಯ್ಗೂಡಿ-ದೇಹದೊಂದಿಗೆ;  ಒಳ್ಪುಮಂ-ಒಳಿತನ್ನು, ಮೇಲ್ಮೆಯನ್ನು; ಕೇಳ್ದಿರ್ಪಂ-ತಿಳಿದುಕೊಳ್ಳುತ್ತಾನೆ;  ತತ್ತನುಗೆ(ತತ್+ತನುಗೆ)-ಆ ದೇಹಕ್ಕೆ;  ಪೇಸಿ-ಹೇಸಿ;  ಸುಜ್ಞಾನದಿಂ-ಒಳ್ಳೆಯ ಜ್ಞಾನದಿಂದ;  ಪೊಳ್ದಿರ್ಪ-ಪ್ರಕಾಶಿತನಾಗಿದ್ದಾನೆ; ಶಿವನಾಗಿ-ದೇವನಾಗಿ, ಮಂಗಲಕರನಾಗಿ;  ಏಂ ಚದುರನೋ-ಎಂತಹ ಜಾಣನೋ.

            ಈ ಆತ್ಮ ಎಂಬವನು ಜೀವವೆಂಬ ಹಸಿಚರ್ಮದ ಹೊದಿಕೆಗಳನ್ನು ಹೊದ್ದುಕೊಂಡು ದೇಹದೊಳಗೆ ಬಂಧಿತನಾಗಿದ್ದಾನೆ, ದೇಹವನ್ನು  ಸೇರಿಕೊಂಡೇ ಸುತ್ತುತ್ತಾನೆ,  ದೇಹದೊಂದಿಗೆ ತನ್ನ ಮೇಲ್ಮೆಯನ್ನು ತಿಳಿದುಕೊಳ್ಳುತ್ತಾನೆ.  ಕೊನೆಗೆ ದೇಹಕ್ಕೆ ಹೇಸಿಕೊಂಡು ಸುಜ್ಞಾನದಿಂದ ಪ್ರಕಾಶಿತನಾಗುತ್ತಾನೆ. ಜೀವಿಗಳ ಶರೀರದಲ್ಲಿದ್ದುಕೊಂಡೇ ಮೆರೆಯುವ ಈ ಆತ್ಮನು ಎಂತಹ ಜಾಣನಾಗಿದ್ದಾನೆ!

            ದೇಹ ಮೂಳೆ, ಮಾಂಸ, ಹಸಿಚರ್ಮಗಳಿಂದ ಕೂಡಿರುವಂತಹುದು. ಆತ್ಮನು ಇದರೊಳಗೆ ಬಂಧಿತನಾಗಿ ಇರುತ್ತಾನೆ. ದೇಹವು ಎಲ್ಲೆಲ್ಲಿ ಸುತ್ತುತ್ತದೆಯೋ ಅಲ್ಲೆಲ್ಲ ಆತ್ಮನೂ ದೇಹದೊಂದಿಗೆ ಸುತ್ತುತ್ತಿರುತ್ತಾನೆ. ದೇಹವನ್ನು ಬಿಟ್ಟು ಆತ್ಮನು ಇರುವುದೇ ಇಲ್ಲ. ಬಿಟ್ಟ ಮೇಲೆ ದೇಹಕ್ಕೆ ಅಸ್ತಿತ್ವವೇ ಇರುವುದಿಲ್ಲ. ಆತ್ಮನು ದೇಹದೊಳಗಿದ್ದುಕೊಂಡೇ ತನ್ನ ಸ್ವರೂಪವನ್ನು, ಮೇಲ್ಮೆಯನ್ನು ತಿಳಿದುಕೊಳ್ಳುತ್ತಾನೆ. ಆದರೆ ಈ ಪ್ರಕ್ರಿಯೆ ನಿರಂತರವಲ್ಲ. ತನ್ನ ಸ್ವರೂಪವನ್ನು ಅರಿತುಕೊಳ್ಳುವವರೆಗೆ ಮಾತ್ರ. ಯಾವಾಗ ಆತ್ಮನಿಗೆ ಈ ಅರಿವು ಉಂಟಾಯಿತೋ ಆ ಕೂಡಲೇ ದೇಹಕ್ಕೆ ಹೇಸಿಕೊಂಡು ಸುಜ್ಞಾನದಿಂದ ಪ್ರಕಾಶಿತನಾಗುತ್ತಾನೆ. ಇದು ಆತ್ಮ ದೇವನಾಗಿ ರೂಪುಗೊಳ್ಳುವ ಒಂದು ಪ್ರಕ್ರಿಯೆ. ಹಾಗಾಗಿ ಜಡದೇಹ ಅಥವಾ ಭೌತಿಕದೇಹದೊಳಗೆ ಇದ್ದುಕೊಂಡು, ದೇಹದೊಂದಿಗೆ ಸ್ಪಂದಿಸುತ್ತ, ಅದರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತ ಕಾಲಕ್ರಮೇಣ ಆರಿವನ್ನು ಪಡೆದುಕೊಂಡು ದೇಹದಿಂದ ಮುಕ್ತವಾಗಿ ದೇವನಾಗುವ ಈ ಆತ್ಮನ ಜಾಣತನವೇ ಅತ್ಯಂತ ಅದ್ಭುತವಾದುದು.

 

ತನುವೇ ಸ್ಫಾಟಿಪಾತ್ರೆಯಿಂದ್ರಿಯದ ಮೊತ್ತಂ ತಾನೆ ಸದ್ವರ್ತಿ ಜೀ

ವನವೇ ಜ್ಯೋತಿಯದರ್ಕೆ ಪಜ್ಜಳಿಸುವಾ ಸುಜ್ಞಾನಮೇ ರಶ್ಮಿಯಿಂ

ತಿನಿತುಂ ಕೂಡಿದೊಡೇನೊ ರಶ್ಮಿಯೊದವಿಂಗೇಂ ದೇವ! ನಿನ್ನೆನ್ನ ಚಿಂ

ತನೆಗಳ್ನೋಡೆ ಘೃತಂಬೊಲೆಣ್ಣೆವೊಲಲಾ! ರತ್ನಾಕರಾಧೀಶ್ವರಾ  ||೪||

 ಪದ್ಯದ ಅನ್ವಯಕ್ರಮ:

ತನುವೇ ಸ್ಫಾಟಿಕಪಾತ್ರೆ, ಇಂದ್ರಿಯದ ಮೊತ್ತಂ ತಾನೆ ಸದ್ವರ್ತಿ, ಜೀವನವೇ ಅದರ್ಕೆ ಜ್ಯೋತಿ, ಪಜ್ಜಳಿಸುವ ಆ ಸುಜ್ಞಾನಮೇ ರಶ್ಮಿ, ಇಂತು ಇನಿತುಂ ಕೂಡಿದೊಡೆ ಏನೋ ರಶ್ಮಿಯ ಒದವಿಂಗೇ ಏಂ ದೇವ! ನಿನ್ನ ಎನ್ನ ಚಿಂತನೆಗಳ್ ನೋಡೆ ಘೃತಂಬೊಲ್ ಎಣ್ಣೆವೊಲಲಾ! ರತ್ನಾಕರಾಧೀಶ್ವರಾ.

ಪದ-ಅರ್ಥ:

ತನು-ದೇಹ;  ಸ್ಫಾಟಿಕಪಾತ್ರೆ-ಸ್ಫಟಿಕಪಾತ್ರೆ(ಸ್ಫಟಿಕವೆಂಬುದು ಬೆಣಚುಕಲ್ಲಿನ ಜಾತಿಗೆ ಸೇರಿದ ನಿರ್ಮಲವೂ  ಪಾರದರ್ಶಕವೂ ಆಗಿರುವ ಒಂದು ವಿಧದ ಬಿಳಿಯ ಹೊಳಪಿನ ಹರಳು);  ಇಂದ್ರಿಯದ ಮೊತ್ತಂ-ಇಂದ್ರಿಯಗಳ ಸಮೂಹವು;  ಸದ್ವರ್ತಿ-ಒಳ್ಳೆಯ ಬತ್ತಿ;  ಜೀವನ-ಜೀವದ, ಪ್ರಾಣನ;  ಅದರ್ಕೆ-ಅದಕ್ಕೆ(ಆತ್ಮಕ್ಕೆ);  ಜ್ಯೋತಿ-ಜ್ವಾಲೆ;  ಪಜ್ಜಳಿಸುವ-ಪ್ರಜ್ವಲಿಸುವ, ಪ್ರಕಾಶಿಸುವ;  ಸುಜ್ಞಾನಮೇ-ಒಳ್ಳೆಯ ಜ್ಞಾನವೇ;  ರಶ್ಮಿ-ಕಾಂತಿ;  ಇಂತು-ಹೀಗೆ;  ಇನಿತುಂ-ಇಷ್ಟನ್ನೂ;  ರಶ್ಮಿಯ ಒದವಿಂಗೆ-ಕಾಂತಿಯ ಬೆಳಗುವಿಕೆಗೆ;  ನಿನ್ನೆನ್ನ-ನಿನ್ನ ಮತ್ತು ನನ್ನ;  ಚಿಂತನೆಗಳ್-ಆಲೋಚನೆಗಳು, ಜಿಜ್ಞಾಸೆಗಳು; ನೋಡೆ-ಪರಿಶೀಲಿಸಿದರೆ;  ಘೃತಂಬೊಲ್-ತುಪ್ಪದ ಹಾಗೆ;  ಎಣ್ಣೆವೊಲಲಾ-ಎಣ್ಣೆಯಂತಲ್ಲವೇ?    

            ದೇಹವೆಂಬುದು ಪಾರದರ್ಶಕವಾದ ಒಂದು ಸ್ಫಟಿಕದಿಂದ ರಚಿತವಾದ ದೀಪದ ಪಾತ್ರೆ(ಹಣತೆ). ದೇಹದ ವಿವಿಧ ಇಂದ್ರಿಯಗಳ ಸಮೂಹವೇ ಆ ದೀಪದ  ಬತ್ತಿ. ದೇಹದೊಳಗಿರುವ ಜೀವನೇ ಆ ದೀಪದ ಪ್ರಕಾಶಮಾನವಾದ ಜ್ವಾಲೆ, ಸುಜ್ಞಾನವೇ ಕಾಂತಿಯುಕ್ತವಾದ ಬೆಳಕು. ಇವೆಲ್ಲವೂ ಸಮರ್ಪಕವಾಗಿ ಬೆಳಗುವುದಕ್ಕೆ ದೇಹವೆಂಬ ದೀಪಕ್ಕೆ ಪರಮಾತ್ಮನ ಕುರಿತಾದ ಚಿಂತನೆಗಳೇ ತುಪ್ಪದ ಹಾಗೆ,  ಎಣ್ಣೆಯ ಹಾಗೆ ಸಹಕಾರಿಯಾಗಿವೆ.

            ಕವಿ ಈ ವೃತ್ತದಲ್ಲಿ ದೇಹವನ್ನು ಹಣತೆ(ದೀಪ)ಗೆ ಹೋಲಿಸಿ ಒಂದು ಅದ್ಭುತವಾದ ರೂಪಕವನ್ನು ಸೃಜಿಸಿದ್ದಾನೆ. ಮನುಷ್ಯದೇಹವೆಂಬುದು ಒಂದು ಹಣತೆ ಇದ್ದಂತೆ. ಅದು ಸ್ಫಟಿಕದಿಂದ ತಯಾರಾದ ಪಾರದರ್ಶಕವಾದ ಹಣತೆ. ಅದು ಉರಿಯಬೇಕಾದರೆ ಅದಕ್ಕೊಂದು ಯೋಗ್ಯ ಬತ್ತಿಯೂ ಬೇಕು. ಮನುಷ್ಯದೇಹದ ಸಕಲ ಇಂದ್ರಿಯಗಳೇ ಅದರ ಬತ್ತಿಗಳು. ದೇಹದಲ್ಲಿರುವ ಜೀವ(ಪ್ರಾಣ)ವೇ ಆ ದೀಪದ ಪ್ರಕಾಶಮಾನವಾದ ಜ್ವಾಲೆಯಾಗಿದೆ. ಜೀವನಪೂರ್ತಿ ಗಳಿಸಿಕೊಳ್ಳುವ ಸುಜ್ಞಾನವೇ ದೀಪ ಬೀರುವ ಕಾಂತಿಯುಕ್ತವಾದ ಬೆಳಕು. ಈಗ ದೀಪ, ಬತ್ತಿ, ಜ್ವಾಲೆ, ಬೆಳಕು ಎಲ್ಲವೂ ಇದ್ದರೂ ಅದು ಚೆನ್ನಾಗಿ ಉರಿಯುವುದಕ್ಕೆ ಅತ್ಯಗತ್ಯವಾದುದು ತುಪ್ಪ ಅಥವಾ ಎಣ್ಣೆ. ಮನುಷ್ಯನ ಪರಮಾತ್ಮನ ಕುರಿತಾದ ಚಿಂತನೆಗಳೇ, ಜಪ, ತಪ, ಧ್ಯಾನಗಳೇ ದೀಪಕ್ಕೆ ಎರೆಯುವ ತುಪ್ಪ, ಎಣ್ಣೆಗಳಾಗಿವೆ. ಹೀಗಿರುವುದರಿಂದ ಮಾತ್ರ ಈ ದೇಹದ ಮೂಲಕ ದೇವನ ಕುರಿತ ಸುಜ್ಞಾನದ, ಅರಿವಿನ, ತಿಳಿವಳಿಕೆಯ ಸಂಪಾದನೆಗೆ ಒಂದು ದಾರಿ ಸಿಕ್ಕಂತಾಗುತ್ತದೆ.

 

ತನುವೇಂ ತಾಮ್ರನಿವಾಸಮೋ ಮಳಲ ಬೆಟ್ಟೊಳ್ತೋಡಿ ಬೀಡಂ ಮರು

ಳ್ಮನವೊಲ್ದಿರ್ಪವೊಲಿಂದೊ ನಾಳೆಯೊ ತೊಡಂಕೇಂ ನಾಳಿದೋ ಈಗಳೋ

ಘನದೊಡ್ಡೆಂಬವೊಲೊಡ್ಡಿಯೊಡ್ಡಿಳಿವ ಮೆಯ್ಯೊಳ್ಮೋಸವೇಕಿರ್ದಪೈ

ನೆನೆದಿರ್ಜೀವನೆ ಮೇಲನೆಂದರುಪಿದೈ! ರತ್ನಾಕರಾಧೀಶ್ವರಾ  ||೫||

ಪದ್ಯದ ಅನ್ವಯಕ್ರಮ:

ತನುವೇಂ ತಾಮ್ರ ನಿವಾಸಮೋ, ಮಳಲ ಬೆಟ್ಟೊಳ್ ಬೀಡಂ ತೋಡಿ ಮರುಳ್ ಮನಂ ಒಲ್ದು ಇರ್ಪವೊಲ್, ಇಂದೊ ನಾಳೆಯೊ ತೊಡಕು ಏಂ? ನಾಳಿದೋ ಈಗಳೋ ಘನದ ಒಡ್ದು ಎಂಬವೊಲ್ ಒಡ್ಡಿ ಒಡ್ಡಿಳಿವ ಮೆಯ್ಯೊಳ್ ಮೋಸವು ಏಕೆ ಇರ್ದಪೈ ನೆನೆದಿರ್ ಜೀವನೆ ಮೇಲನ್ ಎಂದು ಅರುಪಿದೈ! ರತ್ನಾಕರಾಧೀಶ್ವರಾ.

ಪದ-ಅರ್ಥ:

ತನುವೇಂ-ದೇಹವೇನು?;  ತಾಮ್ರ ನಿವಾಸಮೋ-ತಾಮ್ರದ ಮನೆಯೇ?, ಲೋಹದಿಂದ ರಚಿಸಿರುವಂತಹುದೇ?;  ಮಳಲಬೆಟ್ಟೊಳ್-ಮರಳಿನ ಬೆಟ್ಟದಲ್ಲಿ;  ತೋಡಿ-ರಚಿಸಿ;  ಬೀಡಂ-ಮನೆ, ನಿವಾಸ;  ಮನಮೊಲ್ದು ಇರ್ಪವೊಲ್-ಮನಮೆಚ್ಚಿ ಇರುವಂತೆ, ಸಂತೋಷದಿಂದ ವಾಸಿಸುವಂತೆ;  ಇಂದೊ ನಾಳೆಯೊ-ಇವತ್ತೊ ನಾಳೆಯೋ?;  ತೊಡಂಕೇಂ- ಸಿಕ್ಕಿಹಾಕಿಕೊಳ್ಳುವುದೇನು;  ಘನದೊಡ್ಡು-ದೊಡ್ಡ ಮೋಡ;  ಒಡ್ಡಿ-ಸೆಳೆಸಿಕೊಂಡು;  ಒಡ್ಡಿಳಿವ-ಗುಂಪು ಚದುರುವ;  ಮೆಯ್ಯೊಳ್-ಬಾಳಿನಲ್ಲಿ;  ಮೋಸವೇಕಿರ್ದಪೈ-ಏಕೆ ಮೋಸಹೋಗುವೆ?; ನೆನೆದಿರ್-ನೆನೆಯುತ್ತಿರು;  ಜೀವನೆ-ಆತ್ಮನೇ;  ಮೇಲನ್-ಉನ್ನತವಾದುದನ್ನು, ಆತ್ಮೋನ್ನತಿಯನ್ನು.

            ಮನುಷ್ಯದೇಹ ಎಂದರೇನು? ಅದೇನು ತಾಮ್ರದಿಂದ ರಚನೆಗೊಂಡ ಪಾತ್ರೆಯೇ? ಅಥವಾ ಯಾವುದಾದರೂ ಲೋಹದಿಂದ ರಚಿತವಾದುದೇ? ಅದು ಮರಳಿನ ಬೆಟ್ಟದಲ್ಲಿ ಕೊರೆದು ನಿರ್ಮಿಸಿದ ಮನೆಯೆಂದು ಭಾವಿಸಿ, ಅದರಲ್ಲಿ ಮನಮೆಚ್ಚಿ ಸಂತೋಷದಿಂದ ವಾಸಿಸಲು ಸಂಭ್ರಮಿಸಿದರೂ ಅದು ಎಷ್ಟು ದಿನ ಸಾಧ್ಯ? ಅದು ಇಂದೋ ನಾಳೆಯೋ ಕುಸಿದುಹೋಗಬಹುದು. ದೊಡ್ಡ ಮೋಡಗಳ ಗುಂಪು ಸೊಗಸಾಗಿ ಕಂಡು ಮರುಕ್ಷಣದೊಳಗೆ ಮಾಯವಾಗಿ ಹೋಗುವ ಹಾಗೆ ಈ ದೇಹವೂ ಮರಳಿನ ಮನೆಯಂತೆ, ಮೋಡಗಳ ಗುಂಪಿನಂತೆ ಅಳಿದುಹೋಗುವಂತಹುದು. ಇಂತಹ ಬಾಳಿನಲ್ಲಿ ನಂಬಿಕೆಯನ್ನಿರಿಸಿಕೊಂಡು ಮೋಸಹೋಗುವುದಕ್ಕಿಂತ ಉನ್ನತವಾದುದನ್ನು (ಆತ್ಮೋನ್ನತಿಯನ್ನು) ಸಾಧಿಸುವುದು ಒಳಿತು.

            ಮನುಷ್ಯದೇಹ ಶಾಶ್ವತವಾದುದಲ್ಲ, ಅದು ಯಾವುದೇ ರೀತಿಯ ಲೋಹದಿಂದ ರಚನೆಯಾದುದೂ ಅಲ್ಲ. ಅದು ಮರಳಿನ ಬೆಟ್ಟವನ್ನು ಕೊರೆದು ಮನೆಯೊಂದನ್ನು ನಿರ್ಮಿಸಿದ ಮನೆಯಂತೆ. ಮರಳಿನ ಮನೆ ನೋಡುವುದಕ್ಕೆ ಖುಷಿಯನ್ನು ಕೊಡಬಹುದಾದರೂ, ಮನಸ್ಸಿಗೆ ಸಂತೋಷವನ್ನು ನೀಡಬಹುದಾದರೂ ಯಾವಾಗ ಕುಸಿಯುತ್ತದೋ ತಿಳಿಯದು. ದೇಹವೆಂಬುದು ಆಕಾಶದಲ್ಲಿರುವ ದೊಡ್ಡ ಮೋಡಗಳ ಒಡ್ಡಿನಂತೆ. ನೋಡುವುದಕ್ಕೇನೋ ಬಹಳ ಸುಂದರ, ಮನಸ್ಸಿಗೋ ಹಿತ. ಆದರೆ ಮೋಡಗಳ ಗುಂಪು ಯಾವಾಗ ಕರಗಿ ಕಣ್ಮರೆಯಾಗುತ್ತದೋ ತಿಳಿಯದು.  ಮನುಷ್ಯದೇಹವೂ ಹಾಗೆಯೇ. ಇಂತಹ ಅಶಾಶ್ವತವಾದ, ನೋಟಕ್ಕೆ ಹಿತವೆನಿಸುವ, ಮನಸ್ಸಿಗೆ ಆಹ್ಲಾದವೆನಿಸುವ ದೇಹದ ಮೇಲೆ ಅತಿಯಾದ ಮೋಹವನ್ನು ಇರಿಸಿಕೊಂಡು ಮೋಸಹೋಗುವುದು ಸರಿಯೇ? ಅದಕ್ಕಿಂತ, ಉಂಟಾಗಬಹುದಾದ ಅನರ್ಥಗಳನ್ನು ಅರಿತುಕೊಂಡು ಆತ್ಮೋನ್ನತಿಯನ್ನು ಸಾಧಿಸಿಕೊಳ್ಳುವುದೇ ಒಳಿತು.

 

ಉಂಬೂಟಂ ಮಿಗಿಲಾಗೆ ಯೇರುವ ಹಯಂಬೆಚ್ಚಲ್ಕೆ ನೀರ್ಮೂಗಿನೊ

ಳ್ತುಂಬಲ್ಪೋಗುವಂತೆ ಮುಗ್ಗಿಯುಂ ಮರಣಮಕ್ಕುಂ ಜೀವಕೀ ದೇಹವೆ

ಷ್ಟಂಬಾಳ್ದಷ್ಟದು ಲಾಭವೀ ಕಿಡುವ ಮೆಯ್ಯಂಕೊಟ್ಟು ನಿತ್ಯತ್ವವಾ

ದಿಂಬಂ ಧರ್ಮದೆ ಕೊಂಬವಂ ಚದುರನೈ! ರತ್ನಾಕರಾಧೀಶ್ವರಾ  ||೬||

ಪದ್ಯದ ಅನ್ವಯಕ್ರಮ:

ಉಂಬ ಊಟಂ ಮಿಗಿಲ್ ಆಗೆ, ಏರುವ ಹಯಂ ಬೆಚ್ಚಲ್ಕೆ, ನೀರ್ ಮೂಗಿನೊಳ್ ತುಂಬಲ್, ಪೋಗುವಂತೆ ಮುಗ್ಗಿಯುಂ ಜೀವಕೆ ಮರಣಂ ಅಕ್ಕುಂ, ಈ ದೇಹವೆಷ್ಟಂ ಬಾಳ್ದಷ್ಟದು ಲಾಭವು, ಈ ಕಿಡುವ ಮೆಯ್ಯಂ ಕೊಟ್ಟು, ನಿತ್ಯತ್ವವಾದಿ ಇಂಬಂ ಧರ್ಮದೆ ಕೊಂಬವಂ ಚದುರನೈ! ರತ್ನಾಕರಾಧೀಶ್ವರಾ.

ಪದ-ಅರ್ಥ:

ಉಂಬ-ಉಣ್ಣುವ, ತಿನ್ನುವ;  ಮಿಗಿಲ್ ಆಗೆ-ಅತಿಯಾಗಲು, ಮಿತಿಮೀರಲು;  ಹಯಂ-ಕುದುರೆಯು;  ಬೆಚ್ಚಲ್ಕೆ-ಬೆದರಲು, ಹೆದರಲು;  ನೀರ್ ಮೂಗಿನೊಳ್ ತುಂಬಲ್-ಮೂಗಿನೊಳಗೆ ನೀರು ಸೇರಿಕೊಳ್ಳಲು;  ಪೋಗುವಂತೆ ಮುಗ್ಗಿಯುಂ-ನಡೆಯುತ್ತಿರುವಂತೆ ಮುಗ್ಗರಿಸಿಯೂ; ಅಕ್ಕುಂ-ಸಂಭವಿಸುತ್ತದೆ;  ದೇಹವೆಷ್ಟಂ ಬಾಳ್ದಷ್ಟದು ಲಾಭವು-ದೇಹವು ಎಷ್ಟು ದಿನ ಬಾಳುತ್ತದೆಯೋ ಅಷ್ಟೇ ಲಾಭ;  ಕಿಡುವ ಮೆಯ್ಯಂ-ನಾಶವಾಗುವ ದೇಹ;  ನಿತ್ಯತ್ವವಾದಿ-ಶಾಶ್ವತತೆ ಮೊದಲಾದುದನ್ನು, ಮೋಕ್ಷವನ್ನು; ಇಂಬಂ-ಒಳಿತನ್ನು;  ಧರ್ಮದೆ-ಧರ್ಮದಿಂದ; ಕೊಂಬವಂ-ಸ್ವೀಕಸಿದವನು, ಪಡೆದವನು, ಕೊಳ್ಳುವವನು.

            ಮನುಷ್ಯ ತಾನು ಮಾಡುವ ಊಟ ಅತಿಯಾಯಿತೆಂದರೆ ಸಾಯಬಹುದು, ಅಥವಾ ಕುದುರೆಯನ್ನು ಏರುವುದಕ್ಕೆ ಪ್ರಯತ್ನಿಸಿದಾಗ ಕುದುರೆ ಹೆದರಿ ಸವಾರನನ್ನು ಕೆಡವಿದಾಗ ಬಿದ್ದು ಸಾಯಬಹುದು, ಅವಸರದಿಂದ ನೀರನ್ನು ಕುಡಿಯುವಾಗ ಗಂಟಲಿಗೆ ಹೋಗಬೇಕಾದ ನೀರು ಮೂಗಿಗೆ ಹೋಗಿ ಉಸಿರುಗಟ್ಟಿ ಸಾಯಬಹುದು. ನಡೆಯುವಾಗ ಎಡವಿಬಿದ್ದು ಸಾಯಬಹುದು. ಹೀಗೆ ಜೀವಕ್ಕೆ ಹಲವು ರೀತಿಗಳಿಂದ ಮರಣಸಂಭವಿಸಬಹುದು. ಈ ದೇಹ ಎಷ್ಟರವರೆಗೆ ಬಾಳುತ್ತದೆಯೋ ಅಷ್ಟೇ ಲಾಭ. ಹಾಗಾಗಿ ಕೆಟ್ಟುಹೋಗುವ, ನಾಶವಾಗುವ ಈ ದೇಹವನ್ನು ನೆಚ್ಚಿಕೊಳ್ಳುವುದಕ್ಕಿಂತ ಧರ್ಮದಿಂದ ಶಾಶ್ವತವಾದ ಒಳಿತನ್ನು ಅಥವಾ ಮುಕ್ತಿಯನ್ನು ಪಡೆಯುವವನೇ ಜಾಣ ಎನಿಸಿಕೊಳ್ಳುತ್ತಾನೆ.

            ಮಾನವದೇಹ ಅಶಾಶ್ವತವಾದುದು. ಅದಕ್ಕೆ ಮರಣ ಯಾವುದೇ ರೀತಿಯಿಂದ ಒದಗಬಹುದು. ಕೆಲವು ಕ್ಷುಲ್ಲಕ, ಇನ್ನು ಕೆಲವು ಘನವಾದುದು. ಊಟ ಮನುಷ್ಯನಿಗೆ ಅತ್ಯಂತ ಪ್ರಿಯವಾದುದಾದರೂ ಉಂಡದ್ದು ಅತಿಯಾದರೆ ಸಾಯಬೇಕಾದ ಪ್ರಸಂಗ ಒದಗಬಹುದು. ಕುದುರೆಸವಾರಿ ಮೋಜಿನ, ಇಷ್ಟದ ಕ್ರೀಡೆಯಾದರೂ ಕುದುರೆಯನ್ನು ಏರಿದ ಮೇಲೆ ಅದು ಹೆದರಿಕೊಂಡು ಸವಾರನನ್ನು ಕೆಡವಿದರೆ, ಸವಾರನು ಬಿದ್ದು ಸಾಯಬೇಕಾಗಬಹುದು. ಬಾಯಾರಿಕೆಯಾದಾಗಲೂ ಅವಸರದಿಂದ ನೀರನ್ನು ಕುಡಿಯುವಾಗ ನೀರು ಮೂಗಿಗೆ ಸೇರಿ ಉಸಿರುಗಟ್ಟಿ ಸಾಯಬೇಕಾಗಬಹುದು. ನಡೆಯುವಾಗಲೂ ಅಜಾಗರೂಕತೆಯಿಂದ ಮುಗ್ಗರಿಸಿದರೆ ಬಿದ್ದು ಸಾಯಬೇಕಾಗಬಹುದು. ಹೀಗೆ ಮನುಷ್ಯನಿಗೆ ಸಾವು ಅನಿರೀಕ್ಷಿತ ಕಾರಣಗಳಿಂದ, ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಂದ ಒದಗಬಹುದು. ಹಾಗಾಗಿ ಬಿದ್ದು ಹೋಗುವ ದೇಹವನ್ನು ನೆಚ್ಚಿಕೊಂಡು ಬಾಳುವುದಕ್ಕಿಂತ ಶಾಶ್ವತವಾದ ಮುಕ್ತಿಯನ್ನು ಬಯಸುವುದೇ ಜಾಣತನ.

 

ಪುಲುವೀಡೊಳ್ಪೊಲವುಂ ಪಗಲ್ಪರದನಿರ್ದಾದಾಯಮಂ ಪೆತ್ತು ಬಾ

ಳ್ನೆಲೆಯುಳ್ಳೊಂದೆಡೆಗೆಯ್ದಲಾ ನೆಲೆಯವನೋರ್ವಂತೆ ಪಾಳ್ಮೆಯ್ಯೊಳಿ

ರ್ದೊಲವಿಂ ಪುಣ್ಯಮನೀ ಮನಂಗೊಳಿಸಿಕೊಂಡಾ ದೇವಲೋಕಕ್ಕೆ ಪೋ

ಗಲೊಡಂ ನೋವರವಂಗೊ ನೋವು ತವಗೋ ರತ್ನಾಕರಾಧೀಶ್ವರಾ  ||೭||

ಪದ್ಯದ ಅನ್ವಯಕ್ರಮ:

ಪುಲುವೀಡೋಳ್ ಪೊಲವುಂ ಪಗಲ್ ಇರ್ದ ಪರದನ್ ಆದಾಯಮಂ ಪೆತ್ತು ಬಾಳ್ ನೆಲೆ ಉಳ್ಳ ಒಂದೆಡೆಗೆ ಎಯ್ದಲ್, ಆ ನೆಲೆಯವನ್ ಓರ್ವಂತೆ ಪಾಳ್ ಮೆಯ್ಯೊಳ್ ಇರ್ದ ಒಲವಿಂ ಪುಣ್ಯಮನ್ ಈ ಮನಂಗೊಳಿಸಿಕೊಂಡ ಆ ದೇವಲೋಕಕ್ಕೆ ಪೋಗಲೋಡಂ ನೋವರೆ ಅವಂಗೊ ನೋವು ತವಗೋ ರತ್ನಾಕರಾಧೀಶ್ವರಾ.

ಪದ-ಅರ್ಥ:

ಪುಲುವೀಡೊಳ್-ಹುಲ್ಲಿನ ಜೋಪಡಿಯಲ್ಲಿ, ಸಾಮಾನ್ಯವಾದ ಗುಡಿಸಲಿನಲ್ಲಿ;  ಪೊಲವುಂ ಪಗಲ್-ಹಲವು ದಿನಗಳ ಕಾಲ;  ಪರದನ್-ವ್ಯಾಪಾರಿ;  ಆದಾಯಮಂ ಪೆತ್ತು-ಲಾಭವನ್ನು ಗಳಿಸಿ; ಬಾಳ್ನೆಲೆಯುಳ್ಳ-ಬಾಳಲು ಯೋಗ್ಯವಾದ; ಒಂದೆಡೆಗೆ-ಒಂದು ಕಡೆಗೆ, ಒಂದು ಸ್ಥಳಕ್ಕೆ; ಎಯ್ದಲ್-ಹೋಗಲು;  ಆ ನೆಲೆಯವನ್-ಆ ಮನೆಯವನು; ಓರ್ವಂತೆ –ದುಃಖಪಡುವಂತೆ;  ಪಾಳ್ಮೆಯ್ಯೊಳಿರ್ದ-ಕೊಳಕು ದೇಹದಲ್ಲಿದ್ದ;   ಮನಂಗೊಳಿಸಿಕೊಂಡು-(ಪುಣ್ಯವನ್ನು)ಸಾಧಿಸಿಕೊಂಡು, ಗಳಿಸಿಕೊಂಡು; ಪೋಗಲೊಡಂ-ಹೋದೊಡನೆ;  ನೋವರೆ-ನೋಯುವರೆ?;  ಅವಂಗೊ-ಅವನಿಗೊ(ಸತ್ತವನಿಗೊ);  ತವಗೊ-ತಮಗೊ (ಬದುಕಿರುವವರಿಗೊ).

            ಸಾಮಾನ್ಯ ಹುಲ್ಲಿನ ಗುಡಿಸಲಲ್ಲಿ ಬಾಡಿಗೆಗಿದ್ದ ಒಬ್ಬ ವ್ಯಾಪಾರಿ ತನ್ನ ವ್ಯಾಪಾರದಲ್ಲಿ ಒಳ್ಳೆಯ ಲಾಭಗಳಿಸಿ ಇನ್ನೊಂದು ಒಳ್ಳೆಯ ಮನೆಗೆ ಬಾಡಿಗೆಗೆ ಹೋದಾಗ ಈ ಮನೆಯ ಯಜಮಾನ ತನಗೆ ಬರುತ್ತಿದ್ದ ಆದಾಯವನ್ನು ನೆನೆದು ದುಃಖಿಸುವಂತೆ, ಕೊಳಕು ದೇಹದಲ್ಲಿದ್ದ ಜೀವನು ಪುಣ್ಯಸಂಪಾದನೆ ಮಾಡಿಕೊಂಡು ಸ್ವರ್ಗಕ್ಕೆ ಹೋದರೆ ಅವನ ಬಂಧುಗಳು ಅವನಿಂದ ತಮಗೆ ಬರುತ್ತಿದ್ದ ಹಣಸಹಾಯದ ಬಗ್ಗೆ ಮಾತ್ರ ದುಃಖಿಸುತ್ತಾರೆಯೇ ವಿನಾ ಆತನೇನೂ ದುಃಖಿಸುವುದಿಲ್ಲ.

            ಜೀವದ ಅಗಲಿಕೆಯ ಸಂದರ್ಭದಲ್ಲಿ ಮನುಷ್ಯರ ಆಲೋಚನೆಯನ್ನು ಒಂದು ದೃಷ್ಟಾಂತದ ಮೂಲಕ ರತ್ನಾಕರವರ್ಣಿ ಇಲ್ಲಿ ವಿವರಿಸಿದ್ದಾನೆ. ಒಬ್ಬ ವ್ಯಾಪಾರಿ ತನ್ನ ಆದಾಯ ಕಡಿಮೆ ಇದ್ದಾಗ ಒಂದು ಸಾಮಾನ್ಯ ಹುಲ್ಲಿನ ಗುಡಿಸಲಿನಲ್ಲಿ ಬಾಡಿಗೆ ವಾಸವಾಗುತ್ತಾನೆ. ಕಾಲಕ್ರಮೇಣ ಆತನ ಆದಾಯವು ಹೆಚ್ಚಾದಾಗ ಆತ ಈ ಸಾಮಾನ್ಯ ಗುಡಿಸಲಿನಲ್ಲಿ ಇರಬಯಸದೆ ಒಂದು ಒಳ್ಳೆಯ ಮನೆಯನ್ನು ಹುಡುಕಿ ವಾಸ್ತವ್ಯವನ್ನು ಬದಲಾಯಿಸುತ್ತಾನೆ. ಮನೆಯನ್ನು ಬದಲಾಯಿಸಿದ ವ್ಯಾಪಾರಿ ಸಂತಸಪಡುತ್ತಾನೆ. ಆದರೆ ಹಿಂದಿನ ಗುಡಿಸಲಿನ ಯಜಮಾನ ತನಗೆ ಬರುತ್ತಿದ್ದ ಬಾಡಿಗೆ ಇನ್ನು ಇಲ್ಲವಲ್ಲ ಎಂದು ದುಃಖಿಸುತ್ತಾನೆ. ಹಾಗೆಯೇ ಪುಣ್ಯಸಂಪಾದನೆಯಾಗುವವರೆಗೆ ಕೊಳಕು ಜೀವನು ದೇಹದಲ್ಲಿದ್ದು, ಅನಂತರ ಪುಣ್ಯವನ್ನು ಸಂಪಾದಿಸಿಕೊಂಡು ಸ್ವರ್ಗಕ್ಕೆ ಹೋಗಿ ಸಂತಸಪಡುತ್ತಾನೆ. ಆದರೆ ಸ್ವರ್ಗಕ್ಕೆ ಹೋಗುವುದಕ್ಕಿಂತ ಮೊದಲು ಆತನಿಂದ ಆತನ ಬಂಧುಗಳಿಗೆ ಹಣದ ಸಹಾಯವಿತ್ತು. ಈಗ ಸತ್ತು ಸ್ವರ್ಗವನ್ನು ಸೇರಿರುವುದರಿಂದ ಅವರಿಗೆ ಅದಾಯವಿಲ್ಲ. ಹಾಗಾಗಿ ಅವರು ದುಃಖಿಸುತ್ತಾರೆ. ಆದರೆ ತಮ್ಮ ಬಂಧುವೊಬ್ಬ ಪುಣ್ಯಸಂಪಾದನೆ ಮಾಡಿ ಸ್ವರ್ಗವನ್ನು ಪಡೆದಿದ್ದಾನೆ ಎಂದು ಯಾರೂ ಸಂತಸಪಡದೆ ತಮ್ಮ ಆದಾಯಕ್ಕೆ ಕೊರತೆ ಬಂತಲ್ಲ ಎಂದು ದುಃಖಿಸುತ್ತಾರೆ.  

 

ಪಡೆದತ್ತಿಲ್ಲವೆ ಪೂರ್ವದೊಳ್ಧನವಧೂರಾಜ್ಯಾದಿ ಸೌಭಾಗ್ಯಮಂ

ಪಡೆದೆಂ ತನ್ಮಮಕಾರದಿಂ ಪಡೆದೆನೀ ಸಂಸಾರಸಂವೃದ್ಧಿಯಂ

ಪಡೆದತ್ತಿಲ್ಲ ನಿಜಾತ್ಮತತ್ತ್ವ ರುಚಿಯಂ ತದ್ಭೋಧಚಾರಿತ್ರಮಂ

ಪಡೆದಂದಾಗಳೆ ಮುಕ್ತಿಯಂ ಪಡೆಯೆನೇ ರತ್ನಾಕರಾಧೀಶ್ವರಾ  ||೮||

ಪದ್ಯದ ಅನ್ವಯಕ್ರಮ:

ಪಡೆದು ಅತ್ತಿಲ್ಲವೆ ಪೂರ್ವದೊಳ್ ಧನ ವಧು ರಾಜ್ಯಾದಿ ಸೌಭಾಗ್ಯಮಂ, ಪಡೆದೆಂ ತತ್ ಮಮಕಾರದಿಂ, ಪಡೆದೆನ್ ಈ ಸಂಸಾರ ಸಂವೃದ್ಧಿಯಂ, ಪಡೆದು ಅತ್ತಿಲ್ಲ ನಿಜ ಆತ್ಮತತ್ತ್ವ ರುಚಿಯಂ ತತ್ ಬೋಧ ಚಾರಿತ್ರಮಂ, ಪಡೆದಂದು ಆಗಳೆ ಮುಕ್ತಿಯಂ ಪಡೆಯನೇ ರತ್ನಾಕರಾಧೀಶ್ವರಾ.

ಪದ-ಅರ್ಥ:

ಪಡೆದು-ಹೊಂದಿ, ಗಳಿಸಿಕೊಂಡು;  ಅತ್ತಿಲ್ಲವೆ-ನೊಂದಿಲ್ಲವೆ, ದುಃಖಿಸಿಲ್ಲವೆ;  ಧನ-ಸಂಪತ್ತು;  ವಧು-ಹೆಂಡತಿ; ರಾಜ್ಯಾದಿ ಸೌಭಾಗ್ಯಂ-ರಾಜ್ಯ, ಅಧಿಕಾರ ಮೊದಲಾದ ಸವಲತ್ತು;  ಪಡೆದೆಂ-ಹೊಂದಿದೆ;  ತನ್ಮಮಕಾರಂ(ತತ್+ಮಮಕಾರಂ)- ಆ ಮಮಕಾರವು, ಮೋಹವು;  ಪಡೆದೆನ್-ಪಡೆದೆನು, ಹೊಂದಿದೆನು;  ಸಂಸಾರ ಸಂವೃದ್ಧಿಯಂ-ಲೌಕಿಕ ಜೀವನ ವೈಭವವನ್ನು;  ಪಡೆದತ್ತಿಲ್ಲ(ಪಡೆದು+ಅತ್ತಿಲ್ಲ)-ಹೊಂದಿ ಅಳಲಿಲ್ಲ,  ಪಡೆದು ದುಃಖಿಸಿಲ್ಲ;  ನಿಜ ಆತ್ಮತತ್ತ್ವರುಚಿಯಂ-ತನ್ನ ಆತ್ಮದ ಸೌಂದರ್ಯವನ್ನು;  ಪಡೆದಂದು –ಹೊಂದಿದ ದಿನದಂದು, ಹೊಂದಿದ ಕ್ಷಣದಲ್ಲಿ;  ಆಗಳೆ-ಆಗಲೆ;  ಮುಕ್ತಿಯಂ ಪಡೆಯನೇ-ಮುಕ್ತಿಯನ್ನು(ಮೋಕ್ಷವನ್ನು) ಪಡೆಯಲಾರನೇ?

            ಮನುಷ್ಯ ತನ್ನ ಹಿಂದಿನ ಜನ್ಮಗಳಲ್ಲಿ ಸಂಪತ್ತು, ಹೆಂಡತಿ, ರಾಜ್ಯಾದಿ ಸವಲತ್ತುಗಳನ್ನು ವೈಭವಗಳನ್ನು ಪಡೆದರೂ ದುಃಖಿಸಿಲ್ಲವೆ? ಈ ಜನ್ಮದಲ್ಲಿ ಮತ್ತೆ ಅವುಗಳನ್ನೇ ಪಡೆದು ದುಃಖಿಸುತ್ತಿಲ್ಲವೇ? ಈ ಜನ್ಮದಲ್ಲೂ ಲೌಕಿಕ ಬದುಕಿನ ವೈಭವವನ್ನು ಪಡೆದರೂ ನೊಂದುಕೊಳ್ಳದೆ, ದುಃಖಿಸದೆ ಇರಲು  ಸಾಧ್ಯವಾಗಿಲ್ಲ.  ಆದರೆ ಹಿಂದಿನ ಜನ್ಮಗಳಲ್ಲಾಗಲೀ, ಈ ಜನ್ಮದಲ್ಲಾಗಲೀ ಯಾವತ್ತೂ ತನ್ನ ಆತ್ಮದ ಸೌಂದರ್ಯವನ್ನಾಗಲೀ ಬೋಧ ಚಾರಿತ್ರವನ್ನಾಗಲೀ ಅರಿಯಲು ಮನಸ್ಸು ಮಾಡಲಿಲ್ಲ. ಈಗ ಅವುಗಳನ್ನು ಅರಿಯುವುದಕ್ಕೆ ಪ್ರಯತ್ನಿಸಿದಾಗಲೇ ಮನುಷ್ಯನಿಗೆ ಮುಕ್ತಿಯಲ್ಲವೇ?

            ಮನುಷ್ಯ ಜನ್ಮಾಂತರಗಳಲ್ಲಿ ಹುಟ್ಟಿಬರುತ್ತಾನೆ. ಪ್ರತಿಯೊಂದು ಜನ್ಮಗಳಲ್ಲಿಯೂ ತನ್ನ ವೈಭವಕ್ಕೆ ಅನುಗುಣವಾಗಿ ಅಗತ್ಯವಾದುದನ್ನು ಪಡೆದು ಬದುಕುತ್ತಾನೆ. ಸಂಪತ್ತು, ಹೆಂಡತಿ-ಮಕ್ಕಳು, ರಾಜ್ಯ, ಬೊಕ್ಕಸ, ಅಧಿಕಾರ ಹೀಗೆ ನೂರಾರು. ಪ್ರತಿಯೊಂದು ಜನ್ಮಗಳಲ್ಲೂ ಇದೇ ಪುನರಾವೃತ್ತಿ. ಅವುಗಳನ್ನು ಬೇಕಾದಷ್ಟು ಪಡೆದೂ ಸಾಕಷ್ಟು ನೊಂದೂ ದುಃಖಿಸಿಯೂ ಆಗಿದೆ. ಮತ್ತೆ ಈ ಜನ್ಮದಲ್ಲಿಯೂ ಅವುಗಳನ್ನೇ ಪಡೆದರೂ ನೊಂದೂ, ದುಃಖಿಸುತ್ತಲೇ ಇದ್ದಾನೆ. ನೋವಿಗೆ, ದುಃಖಕ್ಕೆ ಮುಕ್ತಿ ಸಿಗಲಿಲ್ಲ. ಆದರೆ ಯಾವ ಜನ್ಮಗಳಲ್ಲಿಯೂ ಸಮ್ಯಕ್ ಚಾರಿತ್ರ, ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನಗಳ ಬಗ್ಗೆಯಾಗಲೀ ಅವುಗಳನ್ನು ಅರಿತುಕೊಳ್ಳುವ, ಅರಿತು ಮುಕ್ತಿಯನ್ನು ಹೊಂದುವ ಬಗ್ಗೆಯಾಗಲೀ ಚಿಂತಿಸಿಲ್ಲ. ಹಾಗಾಗಿಯೇ ಪ್ರತಿಯೊಂದು ಜನ್ಮಗಳಲ್ಲಿಯೂ ಲೌಕಿಕ ಜೀವನದ ವೈಭವಗಳಲ್ಲಿ ಮುಳುಗಿ ಬಳಲಬೇಕಾಯಿತು. ಆದರೆ ಆತ್ಮದ ಸೌಂದರ್ಯವನ್ನು ಅರಿಯಲು ಪ್ರಯತ್ನಿಸುತ್ತಿದ್ದರೆ  ಅದನ್ನು ಹೊಂದಿದಾಗಲೇ ಮನುಷ್ಯನಿಗೆ ಮುಕ್ತಿ ದೊರೆಯುತ್ತಿತ್ತು.

 

ಒರಗಿರ್ದಂ ಕನಸಿಂದೆ ದುಃಖಸುಖದೊಳ್ಬಾಳ್ವಂತೆ ತಾನೆಳ್ದು ಕ

ಣ್ದೆರೆದಾಗಳ್ಬಯಲಪ್ಪವೋಲ್ನರತಿರ್ಯಕ್ ಮರ್ತ್ಯ ದೇವತ್ವದೊಳ್

ತರಿಸಂದೊಪ್ಪುವ ಬಾಳ್ಕೆಯೇ ಬಯಲಬಾಳಂ ನಚ್ಚಿ ನಿತ್ಯತ್ವಮಂ

ಮರೆವಂತೇಕೆಯೋ ನಿಮ್ಮ ನಾಂ ಮರೆದೆನೋ! ರತ್ನಾಕರಾಧೀಶ್ವರಾ  ||೯||

ಪದ್ಯದ ಅನ್ವಯಕ್ರಮ:

ಒರಗಿ ಇರ್ದಂ ಕನಸಿಂದೆ ದುಃಖ ಸುಖದೊಳ್ ಬಾಳ್ವಂತೆ, ತಾನ್ ಎಳ್ದು ಕಣ್ ತೆರೆದಾಗಳ್ ಬಯಲಪ್ಪವೊಲ್, ನರ ತಿರ್ಯಕ್ ಮರ್ತ್ಯ ದೇವತ್ವದೊಳ್ ತರಿಸಂದು ಒಪ್ಪುವ ಬಾಳ್ಕೆಯೇ, ಬಯಲ ಬಾಳಂ ನಚ್ಚಿ ನಿತ್ಯತ್ವಮಂ ಮರೆವಂತೆ ಏಕೆಯೋ ನಿಮ್ಮ ನಾಂ ಮರೆದೆನೋ! ರತ್ನಾಕರಾಧೀಶ್ವರಾ.

ಪದ-ಅರ್ಥ:

ಒರಗಿರ್ದಂ-ಮಲಗಿದ್ದಾಗ;  ಕನಸಿಂದೆ-ಕನಸಿನಿಂದ;  ಬಾಳ್ವಂತೆ- ಬಾಳುವ ಹಾಗೆ;  ತಾನೆಳ್ದು-ತಾನು ಎದ್ದು, ತಾನು ಎಚ್ಚರಗೊಂಡು;  ಕಣ್ದೆರೆದಾಗಳ್-ಕಣ್ಣುಗಳನ್ನು ತೆರೆದಾಗ;  ಬಯಲಪ್ಪವೊಲ್-ಬಯಲಾಗುವ ಹಾಗೆ, ಮಾಯವಾಗುವ ಹಾಗೆ;  ನರ-ನಾರಕ ವರ್ಗ(ನರಕಕ್ಕೆ ಸಂಬಂಧಿಸಿದ), ತಿರ್ಯಕ್-ಪಶು, ಪಕ್ಷಿ ಮೊದಲಾದ ವರ್ಗ;  ಮರ್ತ್ಯ- ಮನುಷ್ಯ;  ದೇವತ್ವದೊಳ್-ದೇವನಾಗಿರುವುದು; ತರಿಸಂದು-ಧಾರಣಮಾಡಿ;  ಒಪ್ಪುವ-ಶೋಭಿಸುವ;  ಬಾಳ್ಕೆಯೇ-ಬಾಳುವೆಯೇ;  ಬಯಲಬಾಳಂ-ನಶ್ವರವಾದ ಬಾಳನ್ನು;  ನಚ್ಚಿ-ನೆಚ್ಚಿಕೊಂಡು, ಪ್ರೀತಿಸಿ;  ನಿತ್ಯತ್ವಮಂ- ಶಾಶ್ವತತೆಯನ್ನು;  ಮರೆವಂತೆ-ಮರೆತುಬಿಡುವಂತೆ, ನಿರ್ಲಕ್ಷಿಸುವಂತೆ;  ಏಕೆಯೋ-ಯಾಕಾಗಿ;  ಮರೆದೆನೋ-ಮರೆತುಬಿಟ್ಟೆನೋ.

            ಮನುಷ್ಯ ಮಲಗಿದ ಸಂದರ್ಭದಲ್ಲಿ ಬೀಳುವ ಕನಸಿನಿಂದಾಗಿ ದುಃಖವೂ ಆಗಬಹುದು, ಸುಖವೂ ಕೂಡಾ. ನಿದ್ರೆ ತಿಳಿದು ಎಚ್ಚರಗೊಂಡು ಕಣ್ತೆರೆದಾಗ ಎಲ್ಲವೂ ಮಾಯವಾಗುತ್ತದೆ. ಅದರಂತೆಯೇ ಜನ್ಮಾಂತರಗಳ ಕರ್ಮವಿಪಾಕಗಳಿಂದ ದೇವ, ಮರ್ತ್ಯ, ತಿರ್ಯಕ್ ಹಾಗೂ ನಾರಕಗಳೆಂಬ ಚತುರ್ಗತಿಗಳಲ್ಲಿ ಬೇರೆಬೇರೆ ದೇಹಗಳನ್ನು ಧಾರಣಮಾಡಿ ಪ್ರಾಪ್ತವಾದ ಸುಖ, ದುಃಖಗಳನ್ನು ಅನುಭವಿಸುತ್ತ, ನಶ್ವರವಾದ ಬಾಳನ್ನು ನಂಬಿಕೊಂಡು ಶಾಶ್ವತವಾದ ಮುಕ್ತಿಯನ್ನು ಯಾಕಾಗಿ ಮರೆತುಬಿಟ್ಟೆನೋ!  

            ಕನಸುಕಾಣುವುದು ಮನುಷ್ಯನ ಸ್ವಭಾವ. ಎಚ್ಚರವಿರುವಾಗಲೂ ನಿದ್ರೆಯಲ್ಲಿದ್ದಾಗಲೂ ಕನಸು ಕಾಣುತ್ತಾನೆ. ನಿದ್ದೆಯಲ್ಲಿ ಕನಸುಕಂಡು ಕೆಲವೊಮ್ಮೆ ಸುಖಪಡುತ್ತಾನೆ, ಇನ್ನು ಕೆಲವೊಮ್ಮೆ ದುಃಖಪಡುತ್ತಾನೆ. ಆದರೆ ಈ ಕನಸಿನ ಸುಖ, ದುಃಖಗಳು ಶಾಶ್ವತವಲ್ಲ, ವಾಸ್ತವವೂ ಅಲ್ಲ. ನಿದ್ದೆ ಮುಗಿದು ಎಚ್ಚರಗೊಂಡು ಕಣ್ತೆರೆದು ನೋಡಿದಾಗ ಕಂಡ ಕನಸುಗಳು ಮಾತ್ರವಲ್ಲ ಅದರಲ್ಲಿ ಅನುಭವಿಸಿದ ಸುಖ, ದುಃಖಗಳೂ ಮಾಯವಾಗುತ್ತವೆ. ಹಾಗೆಯೇ ಮನುಷ್ಯನು ದೇವ, ಮರ್ತ್ಯ, ತಿರ್ಯಕ್ ಹಾಗೂ ನಾರಕ(ನರ) ಎಂಬ  ನಾಲ್ಕು ಗತಿಗಳಲ್ಲಿ ಹುಟ್ಟಿ ಬರುತ್ತಾನೆ. ಈ ನಾಲ್ಕೂ ಗತಿಗಳಲ್ಲಿ ಹಲವಾರು ದೇಹಗಳನ್ನು ಧಾರಣಮಾಡುತ್ತಾನೆ.  ಈ ಬಾಳು, ಈ ದೇಹ ನಶ್ವರವೆಂದು ತಿಳಿದಿದ್ದರೂ ಮತ್ತೆ ಮತ್ತೆ ಅದಕ್ಕೆ ಮನಸೋಲುತ್ತಾನೆ. ಅವುಗಳ ಸುಖ ಭೋಗಗಳಲ್ಲಿಯೇ ಮೈಮರೆಯುತ್ತಾನೆ, ಬಳಲುತ್ತಾನೆ. ಕೊನೆಗೆ ಅರಿವು ಮೂಡಿದಾಗ ತಾನು ಆತ್ಮನ ಶಾಶ್ವತವಾದ ಸ್ವರೂಪವನ್ನು ಏಕೆ ಕಡೆಗಣಿಸಿದೆ? ದೇವನನ್ನು ಏಕೆ ಮರೆತುಬಿಟ್ಟೆ? ಎಂದು ಪಶ್ಚಾತ್ತಾಪ ಪಡುತ್ತಾನೆ.

 

ಮೆಯ್ಯೊಳ್ತೋರಿದ ರೋಗದಿಂ ಮನಕೆ ಬಂದಾಯಾಸದಿಂ ಭೀತಿವ

ಟ್ಟಯ್ಯೋ! ಎಂದೊಡೆ ಸಿದ್ಧಿಯೇಂ ಜನಕನಂ ತಾಯಂ ಪಲುಂಬಲ್ಕದೇ

ಗೆಯ್ಯಲ್ಕಾರ್ಪರೊ ತಾವುಮುಮ್ಮಳಿಸುವರ್ಕೂಡೆಂದೊಡಾ ಜಿಹ್ವೆಯೆ

ಮ್ಮಯ್ಯಾ! ಸಿದ್ಧ ಜಿನೇಶ ಎಂದೊಡೆ ಸುಖಂ ರತ್ನಾಕರಾಧೀಶ್ವರಾ  ||೧೦||

ಪದ್ಯದ ಅನ್ವಯಕ್ರಮ:

ಮೆಯ್ಯೊಳ್ ತೋರಿದ ರೋಗದಿಂ, ಮನಕೆ ಬಂದ ಆಯಾಸದಿಂ, ಭೀತಿಪಟ್ಟು ಅಯ್ಯೋ! ಎಂದೊಡೆ ಸಿದ್ಧಿಯೇಂ ಜನಕನಂ ತಾಯಂ ಪಲುಂಬಲ್ಕೆ ಅದ ಏಗೆಯ್ಯಲ್ಕೆ ಆರ್ಪರೊ ತಾವುಂ ಕೂಡೆ ಉಮ್ಮಳಿಸುವರ್ ಎಂದೊಡೆ ಆ ಜಿಹ್ವೆ  ಎಮ್ಮಯ್ಯಾ! ಸಿದ್ಧ ಜಿನೇಶ ಎಂದೊಡೆ ಸುಖಂ ರತ್ನಾಕರಾಧೀಶ್ವರಾ.

ಪದ-ಅರ್ಥ:

ಮೆಯ್ಯೊಳ್-ದೇಹದಲ್ಲಿ;  ತೋರಿದ-ಉಂಟಾದ, ಕಾಣಿಸಿಕೊಂಡ;  ರೋಗದಿಂ-ಕಾಯಿಲೆಯಿಂದ;  ಮನಕೆ ಬಂದ-ಮನಸ್ಸಿಗೆ ಉಂಟಾದ;  ಆಯಾಸದಿಂ-ದಣಿವಿನಿಂದ;  ಭೀತಿವಟ್ಟಯ್ಯೋ (ಭೀತಿ+ಪಟ್ಟು+ಅಯ್ಯೋ)-ಭೀತಿಗೊಳಗಾಗಿ ಅಯ್ಯೋ; ಎಂದೊಡೆ-ಎಂದಾಗ;  ಸಿದ್ಧಿಯೇಂ-ಏನು ಸಿದ್ಧಿಸುತ್ತದೆ?;  ಜನಕನಂ-ತಂದೆಯನ್ನು;  ಪಲುಂಬಲ್ಕೆ-ಹಲುಬಿದರೆ; ಏಗೆಯ್ಯಲಾರ್ಪರೋ-ಏನು ಮಾಡುವುದಕ್ಕೆ ಸಾಧ್ಯ? ತಾವುಂ-ತಾವೂ; ಉಮ್ಮಳಿಸುವರ್- ಗೋಳಾಡುತ್ತಾರೆ; ಕೂಡೆ-ಜೊತೆಗೆ;  ಜಿಹ್ವೆ-ನಾಲಗೆ;  ಎಮ್ಮಯ್ಯ-ಜಿನ ತಂದೆಯೇ; ಸಿದ್ಧ ಜಿನೇಶ-ಸಿದ್ಧಪರಮೇಷ್ಠಿ.

            ಮೈಯಲ್ಲಿ ರೋಗ  ಕಾಣಿಸಿಕೊಂಡಾಗ, ಮನಸ್ಸಿನಲ್ಲಿ ಆಯಾಸ ತಲೆದೋರಿದಾಗ, ಭಯಭೀತನಾಗಿ ಅಯ್ಯೋ! ಎಂದು ಗೋಳಾಡಿ ಕಳವಳಪಟ್ಟರೆ ದೊರೆಯುವ ಪರಿಹಾರವಾದರೂ ಏನು? ಇಂತಹ ಸಂದರ್ಭಗಳಲ್ಲಿ ತಂದೆ, ತಾಯಿಯರನ್ನು ಹಂಬಲಿಸಿ ಗೋಳಾಡಿದರೆ ಅವರಾದರೂ ಏನು ಮಾಡಲು ಸಾಧ್ಯ? ಅವರೂ ತಮ್ಮವರ ಜೊತೆಯಲ್ಲಿ ಗೋಳಾಡುತ್ತಾರೆ. ಅದರ ಬದಲು ನಮ್ಮ ನಾಲಗೆಯು ಎಮ್ಮ ಅಯ್ಯಾ ಸಿದ್ಧಜಿನೇಶ ಎಂದು ದೇವನಲ್ಲಿ ಮೊರೆಯಿಟ್ಟರೆ ರೋಗದ ನೋವು, ಮನಸ್ಸಿನ ಆಯಾಸಗಳೆಲ್ಲವೂ ಮರೆಯಾಗಿ ಸುಖವೆನಿಸುತ್ತದೆ.

            ಮನುಷ್ಯನ ದೇಹಕ್ಕೆ ರೋಗಬಾಧೆ, ಮನಸ್ಸಿಗೆ ಆಯಾಸಗಳು ಸರ್ವೇಸಾಮಾನ್ಯ. ಇವು ಆಗಾಗ ತಲೆದೋರುತ್ತವೆ. ಇಂತಹ ಸಂದರ್ಭಗಳಲ್ಲೆಲ್ಲ ಅಯ್ಯೋ! ಎಂದು ಗೋಳಾಡಿದರೆ, ಕಳವಳಪಟ್ಟರೆ, ಭಯಭೀತವಾದರೆ ಏನು ಸಾಧಿಸಿದ ಹಾಗಾಯಿತು? ಇದರಿಂದ ರೋಗ ವಾಸಿಯಾಗದು, ಆಯಾಸವೂ ಪರಿಹಾರವಾಗದು. ಅಲ್ಲದೆ ಇಂತಹ ರೋಗ, ಆಯಾಸಗಳ ಸಂದರ್ಭಗಳಲ್ಲಿ ತಂದೆ, ತಾಯಿಯರನ್ನು ಕಾಡಿದರೆ ಅವರಾದರೂ ರೋಗವನ್ನು, ಆಯಾಸವನ್ನು ಹೇಗೆ ಪರಿಹರಿಸಿಯಾರು? ನಮ್ಮ ಗೋಳಾಟದೊಂದಿಗೆ ತಾವೂ ಸೇರಿಕೊಂಡು ಇನ್ನಷ್ಟು ಗೋಳಾಡಿಯಾರು ಅಷ್ಟೇ. ಸಮಸ್ಯೆ ಇನ್ನಷ್ಟು ಜಟಿಲಗೊಳ್ಳುವುದಲ್ಲದೆ ಪರಿಹಾರವಾಗಲಾರದು. ಹೀಗೆ ಅನವಶ್ಯಕವಾಗಿ ತಾವೂ ಗೋಳಾಡಿ, ಹೆತ್ತವರನ್ನೂ ಗೋಳಾಡಿಸುವುದರಿಂದ ಯಾವ ಪ್ರಯೋಜನವೂ ಆಗಲಾರದು. ಅದರ ಬದಲು ಇಂತಹ ಸಮಸ್ಯೆಗಳು ಉಂಟಾದಾಗ ಅಯ್ಯೋ ಎಂದು ಗೋಳಾಡುವ ಬದಲು ಎಮ್ಮಯ್ಯಾ ಸಿದ್ಧಜಿನೇಶ ಎಂದು ಮೊರೆಯಿಟ್ಟರೆ ಎಲ್ಲಾ ಸಮಸ್ಯೆಗಳೂ ಪರಿಹಾರವಾಗಿ ದೇಹಕ್ಕೆ, ಮನಸ್ಸಿಗೆ ಸುಖ ಲಭಿಸುತ್ತದೆ.

 

ಪಡಿಯೇಂ ಜೀವದಯಾಮತಂ ಪರಮಧರ್ಮಂ ತನ್ಮತಂಬೊರ್ದಿ ಮುಂ

ಗಡೆ ನಿರ್ಗ್ರಂಥರಥಕ್ಕೆ ಸಂದ ಯತಿ ಸೂರ್ಯಂಬೊಲ್ಭವಾಂಭೋಧಿಯಂ

ಕಡುವೇಗಂ ಪರಿಲಂಘಿಪಂ ಸುಕೃತಕೃದ್ಗಾರ್ಹಸ್ಥ್ಯನುಂ ಧರ್ಮದಾ

ಪಡಗಿಂ ಮೆಲ್ಲನೆ ದಾಂಟದೇ ಇರನಲಾ ರತ್ನಾಕರಾಧೀಶ್ವರಾ  ||೧೧||

ಪದ್ಯದ ಅನ್ವಯಕ್ರಮ:

ಪಡಿಯೇಂ ಜೀವ ದಯಾಮತಂ ಪರಮ ಧರ್ಮಂ, ತತ್ ಮತಂ ಪೊರ್ದಿ ಮುಂಗಡೆ ನಿರ್ಗ್ರಂಥ ರಥಕ್ಕೆ ಸಂದ ಯತಿ, ಸೂರ್ಯಂಬೊಲ್ ಭವ ಅಭೋಧಿಯಂ ಕಡುವೇಗಂ ಪರಿಲಂಘಿಪಂ ಸುಕೃತ ಕೃತ್ ಗಾರ್ಹಸ್ಥ್ಯನುಂ ಧರ್ಮದ ಆ ಪಡಗಿಂ ಮೆಲ್ಲನೆ ದಾಂಟದೇ ಇರನಲಾ ರತ್ನಾಕರಾಧೀಶ್ವರಾ.

ಪದ-ಅರ್ಥ:

ಪಡಿಯೇಂ-ಸಾಟಿಯೇನು?;  ಜೀವದಯಾಮತಂ-ಅಹಿಂಸಾಧರ್ಮ;  ಪರಮಧರ್ಮಂ-ಶ್ರೇಷ್ಠವಾದ ಧರ್ಮ;  ತನ್ಮತಂ(ತತ್+ಮತಂ)-ಆ ಮತವು;  ಪೊರ್ದಿ-ಸೇರಿ, ಹೊಂದಿ;  ಮುಂಗಡೆ-ಮುಂಭಾಗದಲ್ಲಿ;  ನಿರ್ಗ್ರಂಥ ರಥ- ದಿಗಂಬರತೆ, ದಿಗಂಬರ ಪದವಿ;  ಸಂದ-ಸೇರಿದ;  ಯತಿ-ಯೋಗಿ;  ಸೂರ್ಯಂಬೊಲ್-ಸೂರ್ಯನ ಹಾಗೆ;  ಭವಾಂಭೋಧಿ-ಸಂಸಾರ ಸಾಗರ;  ಕಡುವೇಗದಿಂ-ಬಹಳ ಶೀಘ್ರವಾಗಿ;  ಪರಿಲಂಘಿಪಂ-ದಾಟುತ್ತಾನೆ;  ಸುಕೃತಕೃದ್ಗಾರ್ಹಸ್ಥ್ಯನುಂ(ಸುಕೃತ+ಕೃತ್+ಗಾರ್ಹಸ್ಥ್ಯನುಂ)-  ಒಳ್ಳೆಯ ಕಾರ್ಯವನ್ನು ಮಾಡಿದ ಸಭ್ಯನು ಅಥವಾ ಶ್ರಾವಕನು;  ಪಡಗಿಂ-ಹಡಗಿನಿಂದ;  ದಾಂಟದೇ-ದಾಟದೆ;  ಇರನಲಾ-ಇರಲಾರನು.

            ಜೀವದಯಾಮತ(ಅಹಿಂಸಾಧರ್ಮ)ಕ್ಕೆ ಸರಿಸಾಟಿಯಾಗಿ ಯಾವ ಧರ್ಮವಿದೆ? ಅಹಿಂಸಾಧರ್ಮವೇ ಪರಮಧರ್ಮ(ಶ್ರೇಷ್ಠವಾದ ಧರ್ಮ). ಆ ಮತವನ್ನೇ ಹೊಂದಿಕೊಂಡು ಮುಂದೆ ದಿಗಂಬರತ್ವ ಪದವಿ(ಸ್ಥಾನ)ವನ್ನು ಪಡೆಯುತ್ತಾನೆ. ಅಂತಹ ಯೋಗಿಯು ಸೂರ್ಯನಂತೆ ಅತ್ಯಂತ ಶೀಘ್ರವಾಗಿ ಸಂಸಾರಸಾಗರವನ್ನು ದಾಟುತ್ತಾನೆ. ಅದೇ ರೀತಿಯಲ್ಲಿ ಒಳ್ಳೆಯ ಕಾರ್ಯವನ್ನು ಮಾಡಿದ ಶ್ರಾವಕನು ಕೂಡಾ ಅಹಿಂಸಾಧರ್ಮವನ್ನು ಆಚರಿಸುತ್ತ ಸಭ್ಯನಾಗಿ ಬಾಳಿದಾಗ ಧರ್ಮದ ಹಡಗಿನ ಮೂಲಕ ಸಂಸಾರಸಾಗರವನ್ನು ದಾಟದೇ ಇರಲಾರನು.

            ಲೋಕದಲ್ಲಿ ಜೀವದಯಾಮತ ಅಥವಾ ಅಹಿಂಸಾಧರ್ಮವೇ ಅತ್ಯಂತ ಶ್ರೇಷ್ಠವಾದ ಧರ್ಮವೆನಿಸಿದೆ. ಈ ಅಹಿಂಸಾಧರ್ಮವನ್ನು ಒಪ್ಪಿಕೊಂಡು ಅದನ್ನೇ ನಂಬಿಕೊಂಡು ಸಾಧಕನೆನಿಸಿಕೊಂಡು ಒಂದೊಂದೇ ಹಂತವನ್ನು ದಾಟಿ ಕೊನೆಗೆ ದಿಗಂಬರತ್ವವೆಂಬ ಪದವಿಯನ್ನು ಪಡೆಯಲು ಸಾಧ್ಯ. ಇದು ಅತ್ಯುನ್ನತವಾದ ಸ್ಥಾನ. ಈ ಸ್ಥಾನವನ್ನು ಏರಿರುವ ಮುನಿಯು ಸೂರ್ಯನಂತೆ ಪ್ರಕಾಶಿಸುವುದು ಮಾತ್ರವಲ್ಲದೆ  ಸಂಸಾರಸಾಗರವನ್ನು ಸೂರ್ಯನಂತೆ ಅತಿಶೀಘ್ರವಾಗಿ ದಾಟಿದವನು ಎನಿಸಿಕೊಳ್ಳುತ್ತಾನೆ. ಕೇವಲ ಮುನಿಗಳು ಮಾತ್ರವಲ್ಲ, ಇತರ ಶ್ರಾವಕರೂ ಒಳ್ಳೆಯ ಕಾರ್ಯಗಳನ್ನು ಕೈಗೊಂಡು, ಅಹಿಂಸಾಧರ್ಮವನ್ನು ಆಚರಿಸುತ್ತ, ಪುಣ್ಯಕಾರ್ಯಗಳನ್ನು ಕೈಗೊಳ್ಳುತ್ತ, ಅತ್ಯಂತ ಸಭ್ಯರಾಗಿ ಧರ್ಮದ ಹಡಗನ್ನೇರಿಕೊಂಡು ಸಂಸಾರಸಾಗರವನ್ನು ಸುಲಭವಾಗಿ ದಾಟುವುದಕ್ಕೆ ಸಾಧ್ಯವಾಗುತ್ತದೆ. ಸಂಸಾರಸಾಗರದಲ್ಲಿ ಬಿದ್ದು ಒದ್ದಾಡುವುದಕ್ಕಿಂತ ದಿಗಂಬರತ್ವವನ್ನು ಸಾಧಿಸಿದ ಮುನಿಗಳ ಸಾಧನೆಯ ಕ್ರಮವನ್ನು ಅರಿತುಕೊಂಡು ಇತರ ಶ್ರಾವಕರೂ ಹಿರಿಯ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಿದೆ.

 

ಸಾವಿಗಂಜಲೇಕೆ ಸಾವು ಪೆರತೇ ಮೆಯ್ದಾಳ್ದಿರ್ಗಂಜಲಾ

ಸಾವೇಂ ಮಾಣ್ಗುಮೆ ಕಾವರುಂಟೆಯಕಟಾ! ಈ ಜೀವನೇನೆಂದುವುಂ

ಸಾವಂ ಕಂಡವನಲ್ಲವೇ ಮರಣವಾಗಲ್ಮುಂದದೇಂ ಪುಟ್ಟನೇ

ನೀವೆನ್ನೊಳ್ನಿಲೆ ಸಾವುದುಂ ಸುಖವಲೈ! ರತ್ನಾಕರಾಧೀಶ್ವರಾ  ||೧೨||

ಪದ್ಯದ ಅನ್ವಯಕ್ರಮ:

ಸಾವಿಂಗೆ ಅಂಜಲೇಕೆ? ಸಾವು ಪೆರತೇ ಮೆಯ್ ತಾಳ್ದಿರ್ಗೆ? ಅಂಜಲ್ ಆ ಸಾವೇಂ ಮಾಣ್ಗುಮೆ? ಕಾವರ್ ಉಂಟೆ ಅಕಟಾ! ಈ ಜೀವನ್ ಏನೆಂದುವುಂ ಸಾವಂ ಕಂಡವನ್ ಅಲ್ಲವೇ? ಮರಣವಾಗಲ್ ಮುಂದೆ ಅದೇಂ ಪುಟ್ಟನೇ? ನೀವು ಎನ್ನೊಳ್ ನಿಲೆ, ಸಾವುದುಂ ಸುಖವಲ್ತೆ! ರತ್ನಾಕರಾಧೀಶ್ವರಾ.

ಪದ-ಅರ್ಥ:

ಸಾವಿಂಗೆ-ಸಾವಿಗೆ;  ಅಂಜಲೇಕೆ-ಹೆದರುವುದು ಏಕೆ?;  ಸಾವು ಪೆರತೇ-ಸಾವು ಹೊಸತೇ?;  ಮೆಯ್ದಾಳ್ದಿರ್ಗೆ –ದೇಹವನ್ನು ಹೊಂದಿದವರಿಗೆ;  ಅಂಜಲ್-ಹೆದರಿದರೆ;  ಮಾಣ್ಗುಮೆ-ಸುಮ್ಮನಿರುವುದೇ?; ಕಾವರ್-ಕಾಪಾಡುವವರು; ಜೀವನ್-ಜೀವನು;  ಏನೆಂದುವುಂ-ಏನಾದರೂ;  ಮರಣವಾಗಲ್-ಸತ್ತ ಮೇಲೆ;  ಮುಂದದೇಂ-ಮುಂದೆ ಅದೇನು?, ಪುಟ್ಟನೇ-ಹುಟ್ಟಲಾರನೆ?;  ನೀವು-ಭಗವಂತ;  ಎನ್ನೊಳ್ನಿಲೆ- ನನ್ನಲ್ಲಿ ನೆಲೆಸಲು;  ಸಾವುದುಂ-ಸಾಯುವುದೂ;  ಸುಖವಲ್ತೆ-ಸುಖವಲ್ಲವೇ?

            ಸಾವಿಗೆ ಭಯಪಡುವುದಾದರೂ ಏಕೆ? ದೇಹವನ್ನು ಹೊಂದಿದವರಿಗೆ ಸಾವು ಹೊಸತೇನು? ಹುಟ್ಟಿದವರೆಲ್ಲರೂ ಒಂದು ದಿನ ಸಾಯಲೇಬೇಕು. ಆ ಸಾವನ್ನು ತಡೆಯುವವರು ಯಾರಾದರೂ ಇದ್ದಾರೆಯೇ? ದೇಹದೊಳಗಿರುವ ಜೀವನು ಸಾವನ್ನು ಕಂಡವನೇ ಅಲ್ಲವೇ? ಸತ್ತವರು ಮುಂದೆ  ಮರಳಿ ಹುಟ್ಟುವುದಿಲ್ಲವೇ? ಭಗವಂತನೇ ನನ್ನಲ್ಲಿ ನೀನು ನೆಲೆನಿಲ್ಲುವುದಾದರೆ, ನನ್ನ ಅಂತರಂಗದಲ್ಲಿ ಸ್ಥಿರಗೊಳ್ಳುವುದಾದರೆ ಸಾವೆಂಬುದೂ ಸುಖವಲ್ಲವೇ?

            ಹುಟ್ಟಿದವನಿಗೆ ಸಾವು ನಿಶ್ಚಿತ ಎಂಬುದು ಪ್ರಾಜ್ಞರ ಮಾತು. ಸಾವಿನಿಂದ ಯಾರೊಬ್ಬರೂ ತಪ್ಪಿಸಿಕೊಳ್ಳುವಂತಿಲ್ಲ. ಹೀಗಿರುವಾಗ ಸಾವಿಗೆ ಅಂಜುವುದು ಸರಿಯೇ? ಹುಟ್ಟಿದ ಮೇಲೆ ಯಾರೊಬ್ಬರೂ ಸಾವನ್ನು ನೋಡದವರಿಲ್ಲ, ಅಲ್ಲದೆ ಅದನ್ನು ತಡೆಯುವುದು ಸಾಧ್ಯವೂ ಇಲ್ಲ. ಅದಕ್ಕಾಗಿ ಚಿಂತಿಸುವ ಅಗತ್ಯವೂ ಇಲ್ಲ. ಅದು ಸಮಂಜಸವೂ ಅಲ್ಲ. ಪ್ರತಿಯೊಬ್ಬರ ದೇಹದೊಳಗೂ ಜೀವನಿದ್ದಾನೆ. ಆ ಜೀವನು ಹಿಂದೆ ಯಾವುದೋ ದೇಹದೊಳಗಿದ್ದವನು. ಆದುದರಿಂದ ಪ್ರತಿಯೊಬ್ಬ ಜೀವನೂ ಸಾವನ್ನು ಕಂಡವನೆ. ಅಲ್ಲದೆ ಹುಟ್ಟಿದವನು ಒಂದು ದಿನ ಸಾಯುವಂತೆ, ಸತ್ತ ಮೇಲೆ ಮುಂದೊಂದು ದಿನ ಮತ್ತೆ ಹುಟ್ಟುವುದರಿಂದ ಸಾವಿಗೆ ಅಂಜಬೇಕಾದ ಅವಶ್ಯಕತೆಯಿಲ್ಲ. ಭಗವಂತನೇ ಪ್ರತಿಯೊಬ್ಬರ ಅಂತರಂಗದಲ್ಲಿ ನೆಲೆಸಿದರೆ ಸಾವು ಕೂಡ ಒಂದು ಸಂಭ್ರಮವೇ. ಹೀಗಿರುವಾಗ ಭಗವಂತನನ್ನು ಸದಾ ಧ್ಯಾನಿಸುತ್ತ ಸಾವನ್ನು ಧೈರ್ಯವಾಗಿ ಒಪ್ಪಿಕೊಳ್ಳುವುದೂ ಒಂದು ಸುಖದ, ಸಂತಸದ, ಸಾರ್ಥಕ್ಯದ ಕ್ಷಣವೆನಿಸಿಕೊಳ್ಳುತ್ತದೆ.  

***

 

Leave a Reply

Your email address will not be published. Required fields are marked *