ಸಾಹಿತ್ಯಾನುಸಂಧಾನ

heading1

ಬೆಳಗು – ದ. ರಾ. ಬೇಂದ್ರೆ

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎಸ್ಸಿ. (ಫ್ಯಾಶನ್ ಡಿಸೈನ್) ಪ್ರಥಮ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ)

           ಬೇಂದ್ರಯವರ ’ಬೆಳಗು’ ಕವನ ಲೌಕಿಕತೆಯಿಂದ ಅಲೌಕಿಕತೆಯ ಕಡೆಗೆ ವ್ಯಾಪಿಸಿಕೊಳ್ಳುವ, ಶಾಂತತೆಯನ್ನು ಪ್ರತಿಬಿಂಬಿಸುವ ಕವಿತೆ. ಮೇಲುನೋಟಕ್ಕೆ ಲೌಕಿಕ ದರ್ಶನವನ್ನು ನೀಡಿದರೆ, ಒಳನೋಟಕ್ಕೆ ಅಲೌಕಿಕ ದರ್ಶನವನ್ನು ನೀಡುತ್ತದೆ. ’ಬೆಳಗು’ ಎಂಬುದಕ್ಕೆ ಕೇವಲ ’ಮುಂಜಾನೆ’ ಎಂದರ್ಥವಲ್ಲ, ’ಕಾಂತಿ’, ’ಅರಿವು’, ’ಜ್ಞಾನ’, ’ಪ್ರಕಾಶ’   ಎಂಬರ್ಥಗಳೂ ಇವೆ. ಮೇಲುನೋಟಕ್ಕೆ ಮುಂಜಾನೆಯನ್ನು, ಅದರ ಸೊಬಗನ್ನು, ಅದರ ವಿಶೇಷತೆಯನ್ನು ವರ್ಣಿಸುವ ಕವಿ ಒಳನೋಟಕ್ಕೆ ಬೆಳಗಿನ ಹಿಂದಿನ ಗೂಢತೆಯನ್ನು, ಮನುಷ್ಯನ ಬದುಕಿಗೆ ನಾವೀನ್ಯವನ್ನು ನೀಡಲೆಂದೇ ಭಗವಂತನು ಸೃಜಿಸಿರುವ ಅತ್ಯದ್ಭುತ ಸನ್ನಿವೇಶವೆಂದು ನಿರೂಪಿಸಿದ್ದಾರೆ.

ಮೂಡಲ ಮನೆಯಾ ಮುತ್ತಿನ ನೀರಿನ

ಎರಕಽವಾ ಹೊಯ್ದಾ

ನುಣ್ಣ-ನ್ನೆರಕವ ಹೊಯ್ದಾ

ಬಾಗಿಲ ತೆರೆದೂ ಬೆಳಕು ಹರಿದೂ

ಜಗವೆಲ್ಲಾ ತೊಯ್ದಾ

ಹೋಯ್ತೋ –  ಜಗವೆಲ್ಲಾ ತೊಯ್ದಾ.

            ಬೆಳಗು ಮೊದಲನೆಯ ಹಂತದಲ್ಲಿ ಮೂಡಲಮನೆಯಿಂದ ಹೊರಹೊಮ್ಮುವುದಕ್ಕೆ ಕಾದಿರುವ ಚಿತ್ರವನ್ನು ನೀಡುತ್ತದೆ. ಮೂಡಣ ದಿಕ್ಕು ಎಂಬುದು ಒಂದು ಮನೆ. ಅದೇ ಮೂಡಲಮನೆ. ಮುಂಜಾನೆಯಾದೊಡನೆಯೇ ಅಲ್ಲಿ ಹೊಂಬಣ್ಣ ಹರಡಿಕೊಂಡಿದೆ. ಆ ದೃಶ್ಯ ಮುತ್ತಿನ ನೀರನ್ನು ಎರಕ ಹೋಯ್ದಂತೆ ಕಾಣಿಸುತ್ತಿದೆ. ಕೇವಲ ಎರಕವಲ್ಲ. ಅದು ನಯವಾಗಿ, ಹಿತವಾಗಿ ಹೊಯ್ದಿರುವ ನುಣ್ಣನೆಯ ಎರಕ. ಮೂಡಲಮನೆಯೊಡೆಯ ಸೂರ್ಯ ಮನೆಯ ಬಾಗಿಲನ್ನು ತೆರೆದು ಬೆಳಕನ್ನು ಹರಿಸುತ್ತಾನೆ, ಆ ಬೆಳಕಿನಿಂದ ಜಗವನ್ನೆಲ್ಲ ತೋಯಿಸುತ್ತಾನೆ. ಈ ಬೆಳಕು ಮನೆಯೊಳಗಿಂದ ಹೊರ ಹೊರಟು ಸಮಸ್ತ ಲೋಕವನ್ನೇ ಬೆಳಗುತ್ತದೆ. ಬೆಳಗಿನಲ್ಲಿ ವೇಗವಿದ್ದರೂ ರಭಸವಿಲ್ಲ, ತೀಕ್ಷ್ಣತೆಯಿಲ್ಲ, ಒರಟುತನವಿಲ್ಲ. ಆದರೆ ನಯವಿದೆ, ಹಿತವಿದೆ, ನುಣುಪಿದೆ, ಕೋಮಲತೆಯಿದೆ, ಮನಸ್ಸನ್ನು ಆಕರ್ಷಿಸುವ ಆಪ್ಯಾಯಮಾನತೆಯಿದೆ. ಹಾಗಾಗಿಯೇ ಅದು ನುಣ್ಣಗಿದೆ. ಈ ನುಣ್ಣನೆಯ ಸ್ಪರ್ಶ ಜಗವನ್ನೆಲ್ಲಾ ತೋಯಿಸುವುದರಿಂದ ಸಮಸ್ತ ಜಗತ್ತನ್ನು ಜಡತೆಯಿಂದ ಎಚ್ಚರಿಸುತ್ತದೆ, ಲವಲವಿಕೆ ಮೂಡಿಸುತ್ತದೆ, ಕ್ರಿಯಾಶೀಲವನ್ನಾಗಿಸುತ್ತದೆ.

            ಈ ಬೆಳಕು ಆಕಾಶದಿಂದ ಹೊರಹೊಮ್ಮಿಲ್ಲ, ಕವಿಯ ಪ್ರಕಾರ ಅದು ಮೂಡಲ ಮನೆಯಿಂದ ಹೊರಹೊಮ್ಮಿದೆ. ವಾಸ್ತವದಲ್ಲಿ ಮನೆಯ ಬಾಗಿಲನ್ನು ತೆರೆದ ಕೂಡಲೇ ಹೊರಗಿನ ಬೆಳಕು ಮನೆಯೊಳಗೆ ವ್ಯಾಪಿಸಿಕೊಂಡರೆ, ಇಲ್ಲಿ ಮೂಡಲ ಮನೆಯ ಬಾಗಿಲನ್ನು ತೆರೆದೊಡನೆಯೇ ಬೆಳಕು ಮನೆಯೊಳಗಿಂದ ಹೊರನುಸುಳಿ ಅದು ಜಗತ್ತನ್ನೇ ವ್ಯಾಪಿಸಿಕೊಳ್ಳುತ್ತದೆ. ಈ ಮೂಡಲಮನೆ ಸೂರ್ಯನದು. ಅವನು ದಿನಂಪ್ರತಿ ಮುಂಜಾನೆ ಮನೆಬಾಗಿಲನ್ನು ತೆರೆಯುತ್ತ ಲೋಕವನ್ನು ಅವಲೋಕಿಸುತ್ತಾನೆ. ಆತನ ಈ ಅವಲೋಕನ ಮುತ್ತಿನ ನೀರನ್ನು ಎರಕಹೊಯ್ದಂತೆ. ನೀರು ಎಲ್ಲವನ್ನೂ ತೋಯಿಸಿದಂತೆ ಸೂರ್ಯ ಎರಕ ಹೊಯ್ದ ಬೆಳಕೆಂಬ ಮುತ್ತಿನ ನೀರು ಇಡೀ ಜಗತ್ತನ್ನೇ ತೋಯಿಸುತ್ತದೆ. ಜಡಗಟ್ಟಿದ ಜೀವಸಂಕುಲಕ್ಕೆ, ನಿಸ್ತೇಜಗೊಂಡ ಸಕಲ ಸಸ್ಯಸಂಕುಲಕ್ಕೆ, ಜೀವಜಾಲಕ್ಕೆ ಲವಲವಿಕೆಯನ್ನು ತುಂಬುತ್ತದೆ. ಕ್ರಿಯಾಶೀಲತೆಯನ್ನು ಉಂಟುಮಾಡುತ್ತದೆ.

ರತ್ನದ ರಸದಾ ಕಾರಂಜೀಯೂ

ಪುಟಪುಟನೇ ಪುಟಿದು

ತಾನೇ – ಪುಟಪುಟನೇ ಪುಟಿದು

ಮಘಮಘಿಸುವಾ ಮುಗಿದ ಮೊಗ್ಗೀ

ಪಟಪಟನೇ ಒಡೆದು

ತಾನೇ- ಪಟಪಟನೇ ಒಡೆದು.

            ಬೆಳಗು ಎರಡನೆಯ ಹಂತದಲ್ಲಿ ಎಳೆಬಿಸಿಲಿನ ಕ್ರಮಬದ್ಧ ಚಲನೆಯನ್ನು ಸಾಕ್ಷಾತ್ಕರಿಸುತ್ತದೆ. ಮೂಡಲಮನೆಯಿಂದ ಸೂರ್ಯನು ಎರಕಹೊಯ್ದ ಮುತ್ತಿನ ನೀರು ರತ್ನದ ರಸದ ಕಾರಂಜಿಯಂತೆ ಪುಟಪುಟನೆ ಪುಟಿಯುತ್ತ ಜಗತ್ತೆಲ್ಲವನ್ನೂ ವ್ಯಾಪಿಸಿಕೊಳ್ಳುತ್ತದೆ. ಈ ಮುತ್ತಿನ ನೀರಿಗೆ ಅಪಾರವಾದ ಶಕ್ತಿಯಿದೆ, ಲೋಕದಲ್ಲಿನ ಮಾನವನಾದಿಯಾಗಿ ಪ್ರಾಣಿಸಂಕುಲ, ಸಸ್ಯಸಂಕುಲಗಳಲ್ಲಿ ಹೊಸಚೈತನ್ಯವನ್ನು ತುಂಬುವ ಅಪಾರ ಕರ್ತೃತ್ವಶಕ್ತಿಯಿದೆ. ಹೊಸತನವನ್ನು ತುಂಬಿ ಲವಲವಿಕೆಯನ್ನು ಮೂಡಿಸುವ ಸಾಮರ್ಥ್ಯವಿದೆ. ಹಾಗಾಗಿಯೇ ಮುತ್ತಿನ ನೀರು ಪುಟಪುಟನೆ ಹರಿದು ಕ್ಷಣಮಾತ್ರದಲ್ಲಿ ಇಡೀ ಜಗತ್ತನ್ನೇ ತುಂಬಿ ಕಾರ್ಯಪ್ರವೃತ್ತಗೊಳಿಸುತ್ತದೆ. ಗಿಡಗಳಲ್ಲಿ, ಬಳ್ಳಿಗಳಲ್ಲಿ, ಮರಗಳಲ್ಲಿ ಈಗಾಗಲೇ ಬಿರಿದುಕೊಳ್ಳಲು ಸಿದ್ಧವಾಗಿರುವ ಮೊಗ್ಗುಗಳನ್ನು ಪಟಪಟನೆ ಒಡೆಸಿ ಹೂವಾಗಿ ಅರಳಿಸುತ್ತದೆ. ಘಮಘಮಿಸುವ ಹೂವಿನ ಪರಿಮಳವು ಸುತ್ತಮುತ್ತಲ ಪರಿಸರವನ್ನು ತುಂಬಿಕೊಳ್ಳುತ್ತದೆ.  ಇದು ಲೋಕದಲ್ಲಿ ಹೊಸಚೈತನ್ಯ ತುಂಬಿಕೊಳ್ಳುವ ಪರಿ.

            ಸೂರ್ಯನು ಎರಕಹೊಯ್ದ ಮುತ್ತಿನ ನೀರಿಗೆ ವಸ್ತುಸ್ಥಿತಿಯನ್ನೇ ಬದಲಿಸುವ ಶಕ್ತಿಯಿದೆ. ಅದು ಜಡಗಟ್ಟಿದ ವಾತಾವರಣವನ್ನು ಚುರುಕುಗೊಳಿಸುತ್ತದೆ. ಸೂರ್ಯನು ಎರಕಹೊಯ್ದ ಮುತ್ತಿನ ನೀರೆಂಬ  ಹೂಬಿಸಿಲು ಮೂಡಲಮನೆಯಿಂದ ಮೆಲ್ಲಮೆಲ್ಲನೆ ಜಗತ್ತನ್ನು ವ್ಯಾಪಿಸಿಕೊಳ್ಳುತ್ತ ಸಾಗುತ್ತದೆ. ಅದರ ಚಲನೆಯೇ ಅಂತಹುದು, ಪುಟಪುಟನೆ ಪುಟಿಯುವಂತಹುದು. ಅದು ಹುರುಪನ್ನು, ಹುಮ್ಮಸ್ಸನ್ನು ಸೂಚಿಸುತ್ತದೆ. ಮೊಗ್ಗುಗಳು ತಮ್ಮಷ್ಟಕ್ಕೇ ಮೆಲ್ಲನೆ ಬಿರಿದು ಹೂವಾಗಿ ಅರಳುವ ಪ್ರಕ್ರಿಯೆಯಲ್ಲಿ, ಆ ಹೂವುಗಳಿಂದ ಮಘಮಘಿಸುವ ಪರಿಮಳ ಮೆಲ್ಲನೆ ಗಾಳಿಯಲ್ಲಿ ಹರಿದಾಡುವ ವಿಧಾನದಲ್ಲಿ, ಅದು ವಾತಾವರಣದಲ್ಲಿ ಹೊಸತನವನ್ನು ತುಂಬುವ ಪರಿಯಲ್ಲಿ ಬೆಳಗು ಹೊಸನೋಟವನ್ನು, ಹೊಸಮಾಟವನ್ನು ಬೀರುತ್ತಲೇ ಸಾಗುವುದನ್ನು, ಇಡೀ ಲೋಕವೇ ಹೊಸಚೈತನ್ಯಕ್ಕೆ ಒಳಗಾಗುವುದನ್ನು  ಗಮನಿಸಬಹುದು.  

ಎಲೆಗಳ ಮೇಲೇ ಹೂಗಳ ಒಳಗೇ

ಅಮೃತದ ಬಿಂದು

ಕಂಡವು – ಅಮೃತದ ಬಿಂದು

ಯಾರಿರಿಸಿರುವರು ಮುಗಿಲಮೇಲಿಂ –

ದಿಲ್ಲಿಗೇ ತಂದು

ಈಗ – ಇಲ್ಲಿಗೇ ತಂದು.

            ಬೆಳಗು ಮೂರನೆಯ ಹಂತದಲ್ಲಿ ಪ್ರಕೃತಿಯಲ್ಲಿ ಇನ್ನೊಂದು ವೈಚಿತ್ರ್ಯವನ್ನು ಮೂಡಿಸುತ್ತದೆ. ರಾತ್ರಿಯೆಲ್ಲಾ ಮಂಜು ಉದುರಿ ಮರಗಿಡಗಳ ಎಲೆಗಳ ಮೇಲೆ, ಹೂಗಳೊಳಗೆ, ಹುಲ್ಲುಗರಿಕೆಗಳ ಮೇಲೆ ತನ್ನ ಛಾಪನ್ನು ಮೂಡಿಸಿದೆ. ಮುಂಜಾನೆಯ ಬೆಳಕು ಈ ಮಂಜುಹನಿಗಳ ಮೂಲಕ ಹಾಯುವಾಗ ಮಂಜುಹನಿಗಳು ಅಮೃತದ ಬಿಂದುಗಳಾಗಿ ಕಂಗೊಳಿಸುತ್ತವೆ. ಹಿಂದಿನ ಸಂಜೆಯಲ್ಲೋ ರಾತ್ರಿಯಲ್ಲಿಯೋ ಇಲ್ಲದ್ದು ಬೆಳಗಾಗ ಕಂಗೊಳಿಸುತ್ತಿರುವ ಈ ಅಮೃತದ ಬಿಂದುಗಳನ್ನು ಎಲೆಗಳ, ಹೂಗಳ ಮೇಲೆ ಯಾರು ತಂದಿರಿಸಿದರೋ! ಮುಗಿಲ ಮೇಲಿಂದ ತಂದು ಎಲೆ, ಹೂಗಳ ಮೇಲಿರಿಸಿ ಯಾರು ಈ ಸೊಗಸನ್ನು ಸೃಜಿಸಿದರೋ! ಅಮೃತವು ಜೀವಕ್ಕೆ ಹೊಸ ಚೈತನ್ಯವನ್ನು, ನಿರಂತರತೆಯನ್ನು ನೀಡುವಂತೆ ಈ ಹಿಮಬಿಂದು ಅಮೃತದ ಬಿಂದುವಾಗಿ ಸಹೃದಯಿಗಳಿಗೆ ಹೊಸಚೈತನ್ಯವನ್ನು, ಸೌಂದರ್ಯದ ನಿರಂತರತೆಯನ್ನು ನೀಡುತ್ತಿದೆಯಲ್ಲ!

            ಸೂರ್ಯನ ಬೆಳಕು ಭೂಮಿಯನ್ನು ಆವರಿಸಿಕೊಳ್ಳುತ್ತಿದ್ದಂತೆಯೇ ರಾತ್ರಿಯೆಲ್ಲ ಸುರಿದ ಮಂಜು ಪ್ರಕೃತಿಯ ಎಲ್ಲಾ ಮರಗಿಡಗಳ ಎಲೆಗಳ ಮೇಲೆ, ಹೂಗಳ ಮೇಲೆ, ಮೊಗ್ಗುಗಳ ಮೇಲೆ, ಹುಲ್ಲುಗರಿಕೆಗಳ ಮೇಲೆ ತನ್ನ ಲಾಲಿತ್ಯವನ್ನು ತೋರಿಸುವುದು ಸಹಜವಾದರೂ ಅವುಗಳಲ್ಲಿ ಒಂದು ಅಪೂರ್ವವಾದ ಸೌಂದರ್ಯವಿದೆ. ಸೃಜಿಸಿ ಕೆಲವೇ ಗಂಟೆಗಳೊಳಗೆ ಸೂರ್ಯನ ಶಾಖಕ್ಕೆ ಆವಿಯಾಗಿ ಹೋದರೂ ಇರುವ ಅಲ್ಪಕಾಲದಲ್ಲಿಯೇ ನೋಡುಗರ ಮನಸ್ಸಿಗೆ ಅವು ಮುದನೀಡುತ್ತವೆ. ಮಾತ್ರವಲ್ಲ, ಮುಂಜಾನೆಯ ಸೂರ್ಯನ ಕಿರಣಗಳು ಇವೆಲ್ಲವುಗಳ ಮೇಲೆ ಬಿದ್ದು ಮಂಜಿನ ಬಿಂದುಗಳೆಲ್ಲವೂ ಅಮೃತದ ಬಿಂದುಗಳ ಹಾಗೆ ಶೋಭಿಸುವುದು ಒಂದು ಸೋಜಿಗದ ಸನ್ನಿವೇಶ. ಈ ಪ್ರಕೃತಿ ಹಾಗೂ ಅದರ ನಿತ್ಯನೂತನತೆ  ಮಾನವವರ್ಗದ ಆಸ್ವಾದಕ್ಕಾಗಿಯೇ ಇರುವ ಒಂದು ವ್ಯವಸ್ಥೆ. ಬದುಕಿನಲ್ಲಿಯೂ ಹುರುಪು, ಚೈತನ್ಯಗಳು ನಿರಂತರವಾಗಿಯೇ ಇರಲಿ ಎಂಬುದನ್ನು ಇದು ಸೂಚಿಸುತ್ತದೆ.

ತಂಗಾಳಿಯಾ ಕೈಯೊಳಗಿರಿಸೀ

ಎಸಳೀನಾ ಚವರಿ

ಹೂವಿನ – ಎಸಳೀನಾ ಚವರಿ

ಹಾರಿಸಿಬಿಟ್ಟರು ತುಂಬಿಯ ದಂಡು

ಮೈಯೆಲ್ಲಾ ಸವರಿ

ಗಂಧಾ – ಮೈಯೆಲ್ಲಾ ಸವರಿ.

            ಬೆಳಗು ನಾಲ್ಕನೆಯ ಹಂತದಲ್ಲಿ ಮತ್ತೊಂದು ಮಾಟವನ್ನು ತೋರುತ್ತದೆ. ಮೂಡಲ ಮನೆಯಲ್ಲಿ ಸೂರ್ಯನ ಆಗಮನವಾಗುತ್ತಿದ್ದಂತೆಯೇ ಪ್ರಕೃತಿ ಹೊಸ ಹುರುಪನ್ನು ಪಡೆದುಕೊಳ್ಳುತ್ತದೆ. ರಾತ್ರಿಯೆಲ್ಲ ಜಡಗೊಂಡಿದ್ದ ಪ್ರಕೃತಿಯಲ್ಲಿ ಮೆಲ್ಲನೆ ತಂಗಾಳಿ ಬೀಸತೊಡಗುತ್ತದೆ. ಸೂರ್ಯನ ಕಿರಣಗಳು ತಂಗಾಳಿಯನ್ನು ತಮ್ಮ ಕೈಯೊಳಗಿರಿಸಿಕೊಂಡು ಹೂಗಿಡಗಳ ಮೇಲೆ, ಮರಗಿಡಗಳ ಮೇಲೆ ಮೆಲ್ಲನೆ ತೀಡುತ್ತವೆ. ಹೂಗಳ ಪಕಳೆಗಳು ಚವರಿಗಳಂತೆ ಅತ್ತಿತ್ತ ಚಲಿಸುತ್ತವೆ, ಓಲಾಡುತ್ತವೆ. ಲಾಸ್ಯವಾಡುತ್ತವೆ. ಈ ತಂಗಾಳಿಯಿಂದ ಹೂವುಗಳಿಗೆ ಇನ್ನಷ್ಟು ಚೆಲುವು ಸೇರಿಕೊಳ್ಳುತ್ತದೆ. ಅವುಗಳೊಂದಿಗೆ ಹೂಗಳೂ ನಾಟ್ಯವಾಡುತ್ತವೆ. ನೋಟಕರಿಗೆ ಖುಷಿನೀಡುತ್ತವೆ. ಹೂವಿನ ಮಕರಂದವನ್ನು ಅರಸುತ್ತಾ ಹಾರಿಬರುವ ತುಂಬಿಗಳ ದಂಡು ಹೂವುಗಳ ಮೈಯನ್ನೆಲ್ಲ ಸವರುತ್ತಾ, ಪರಾಗವನ್ನು ಮೈಮೇಲೆಲ್ಲಾ ಮೆತ್ತಿಕೊಳ್ಳುತ್ತಾ,  ಹೂವಿಂದ ಹೂವಿಗೆ ಹಾರುತ್ತಾ, ಪ್ರಕೃತಿಗೆ ಹೊಸಕಳೆಯನ್ನು ನೀಡುತ್ತವೆ.

            ಸೌಂದರ್ಯಾರಾಧಕನಿಗೆ, ಪ್ರಕೃತಿಯನ್ನು ಪ್ರೇಮಿಸುವವನಿಗೆ ಬೆಳಗಿನ ವಾತಾವರಣ ಒಂದಲ್ಲೊಂದು ರೀತಿಯಿಂದ ಮುದನೀಡುತ್ತದೆ. ರಾತ್ರಿಯಲ್ಲಿ ಹೂಗಳ ಮೇಲೆ, ಮೊಗ್ಗುಗಳ ಮೇಲೆ ಬಿದ್ದಿರುವ ಮಂಜುಹನಿ ಸೂರ್ಯನ ಎಳೆಬಿಸಿಲಿಗೆ, ಹಿತಮಿತವಾಗಿ ಬೀಸುವ ತಂಗಾಳಿಗೆ ಮೆಲ್ಲಮೆಲ್ಲನೆ ಕರಗುವ ಪರಿ ಆಶ್ಚರ್ಯಕರವಾದುದು. ಮಂಜುಕರುಗುತ್ತಿದ್ದಂತೆಯೇ ಹೂವುಗಳು ಹೊಸತನವನ್ನು, ಲವಲವಿಕೆಯನ್ನು ಹೊಂದಿ ಕಂಗೊಳಿಸುತ್ತವೆ. ತಂಗಾಳಿಗೆ ಮೈಯನ್ನೊಡಿ ಓಲಾಡುವ, ತಮ್ಮ ಪಕಳೆಗಳನ್ನು ಚವರಿಯಂತೆ ಬೀಸುವ,  ಎಲ್ಲೆಲ್ಲೋ ಹಾರಾಡುವ ತುಂಬಿಗಳನ್ನು ಆಕರ್ಷಿಸಿ  ಮಕರಂದವನ್ನು ಉಣಿಸಿ ತಣಿಸುವ, ತುಂಬಿಗಳೋ ಮನಸೋ ಇಚ್ಛೆ ಮಕರಂದವೆಲ್ಲವನ್ನೂ ಉಂಡು ಪರಾಗವೆಲ್ಲವನ್ನೂ ಮೈಮೇಲೆಲ್ಲ ಲೇಪಿಸಿಕೊಂಡು ಹೂವಿಂದ ಹೂವಿಗೆ ಹಾರಿ ಝೇಂಕರಿಸುವ ಸೊಬಗನ್ನು, ಸೊಗಸನ್ನು ಆಸ್ವಾದಿಸದೇ ಇರಲು ಸಾಧ್ಯವೇ? ಇವೆಲ್ಲವೂ ಮನುಷ್ಯನಿಗೆ ಕಾಯಕದ, ಪರೋಪಕಾರದ, ಸಹನೆಯ ಮಹತ್ವವನ್ನು ಸಾರುತ್ತವೆಯಲ್ಲ!

ಗಿಡಗಂಟೆಯಾ ಕೊರಳೊಳಗಿಂದ

ಹಕ್ಕಿಗಳ ಹಾಡು

ಹೊರಟಿತು – ಹಕ್ಕಿಗಳ ಹಾಡು

ಗಂಧರ್ವರಾ ಸೀಮೆಯಾಯಿತು

ಕಾಡಿನಾ ನಾಡು

ಕ್ಷಣದೊಳು – ಕಾಡಿನಾ ನಾಡು.

            ಬೆಳಗು ಐದನೆಯ ಹಂತದಲ್ಲಿ  ಪ್ರಕೃತಿಯಲ್ಲಿ ಸಂತಸ ತುಂಬಿಕೊಳ್ಳುವುದನ್ನು ಚಿತ್ರಿಸುತ್ತದೆ. ಬೆಳಗಾಗುತ್ತಿದ್ದಂತೆಯೇ, ಮೂಡಣದಲ್ಲಿ ಚುಮುಚುಮು ಬೆಳಕು ಕಾಣಿಸಿಕೊಂಡು ಸೂರ್ಯನ ಎಳೆಬಿಸಿಲು ತನ್ನ ಲಾಸ್ಯವನ್ನು ತೋರುತ್ತಿದ್ದಂತೆಯೇ ಸಕಲ ಜೀವಜಾಲದಲ್ಲಿ ಚಟುವಟಿಕೆಗಳಿಗೆ ಚಾಲನೆ ದೊರೆಯುತ್ತದೆ. ಗಿಡಗಂಟೆಗಳ ಎಡೆಗಳಲ್ಲಿ, ಮರದ ಪೊಟರೆಗಳಲ್ಲಿ, ಎತ್ತರದ ಮರಗಳ ಕೊಂಬೆರೆಂಬೆಗಳಲ್ಲಿ ಗೂಡುಕಟ್ಟಿಕೊಂಡಿರುವ ಹಕ್ಕಿಗಳು ಜಾಗರಗೊಳ್ಳುತ್ತವೆ, ತಮ್ಮ ಕಲರವದೊಂದಿಗೆ ಲೋಕವನ್ನೇ ಜಾಗರಗೊಳಿಸುತ್ತವೆ. ಹಕ್ಕಿಗಳ ಭಿನ್ನ ವಿಭಿನ್ನ ಇಂಚರ, ಕಲರವ, ಬಗೆಬಗೆಯ ಹಾಡುಗಳಿಂದ ಪಕೃತಿ ಇನ್ನಷ್ಟು ಚೈತನ್ಯವನ್ನು ಪಡೆದುಕೊಳ್ಳುತ್ತದೆ. ಸೂರ್ಯನ ಉದಯವಾಗುತ್ತಿದ್ದಂತೆಯೇ ವಿವಿಧ ಹಕ್ಕಿಗಳ ವೈವಿಧ್ಯಮಯ ಸಂಗೀತ ಮನಸೂರೆಗೊಳ್ಳುತ್ತದೆ. ಸಹೃದಯರನ್ನು ಜಡತೆಯಿಂದ ಬಿಡುಗಡೆಗೊಳಿಸಿ ಲವಲವಿಕೆಯನ್ನು ಮೂಡಿಸುತ್ತದೆ. ಕೆಲವೇ ಕ್ಷಣಗಳ ಹಿಂದೆ ಜಡವಾಗಿದ್ದ ಕಾಡು ಹಕ್ಕಿಗಳ ಇಂಚರದಿಂದಾಗಿ ಗಂಧರ್ವರ ಸೀಮೆಯಾಗಿ ಪರಿವರ್ತಿತವಾಗುತ್ತದೆ.

            ಸೂರ್ಯೋದಯವೆನ್ನುವುದು ಕೇವಲ ಮನುಷ್ಯವರ್ಗಕ್ಕೆ ಮಾತ್ರವಲ್ಲ, ಸಕಲ ಪಶು, ಪಕ್ಷಿವರ್ಗಕ್ಕೂ ಅತ್ಯಂತ ಆಪ್ಯಾಯಮಾನ. ಕೆಲವೇ ಸಮಯದ ಹಿಂದೆ ಜಡತೆಯಿಂದ ಕೂಡಿದ್ದ ಪ್ರಕೃತಿ, ಕಾಡು, ನಾಡೆಲ್ಲ ಸೂರ್ಯರಶ್ಮಿ ಹೊರಹೊಮ್ಮುತ್ತಿದ್ದಂತೆಯೇ ಹೊಸಚೇತನವನ್ನು ಪಡೆದುಕೊಳ್ಳುತ್ತವೆ. ಗಾಳಿಯ ಬೀಸುವಿಕೆ, ಮಂಜುಹನಿಗಳ ಬೆಳಕಿನ ಪ್ರತಿಫಲನ, ತುಂಬಿಗಳ ಝೇಂಕಾರಗಳೊಂದಿಗೆ ಹಕ್ಕಿಗಳ ಕಲವರವೂ ಸೇರಿಕೊಂಡು ಪ್ರಕೃತಿಯಲ್ಲಿ ಮತ್ತೆ ನವನವೋಲ್ಲಾಸ ತುಂಬಿಕೊಳ್ಳತೊಡಗುತ್ತದೆ. ಸೂರ್ಯೋದಯದಕ್ಕೆ ಪ್ರಕೃತಿಯ ಪ್ರತಿಯೊಂದು ಜೀವಸಂಕುಲ ಸ್ಪಂದಿಸುವುದು, ವಾತಾವರಣದಲ್ಲಿ ಹೊಸಚೈತನ್ಯವನ್ನು ತುಂಬುವುದು ಎಲ್ಲವೂ ಕುತೂಹಲದ, ಆಶ್ಚರ್ಯದ, ಸೋಜಿಗದ ವಿಚಾರ. ಇವೆಲ್ಲವೂ ಸಹೃದಯರಲ್ಲಿ ಉಲ್ಲಾಸವನ್ನು, ಹುರುಪನ್ನು ತುಂಬುತ್ತದೆ. ಹಕ್ಕಿಗಳ ಕಲರವ, ಇಂಚರಗಳಿಂದ ಕಾಡಿನ ವಾತಾವರಣವೇ ಗಂಧರ್ವರ ಸೀಮೆಯಾಗಿ ಬದಲಾಗುವುದು, ಅವುಗಳ ಇಂಚರದ ವೈವಿಧ್ಯವನ್ನು ಆಲಿಸುವುದು,  ಕಲರವದ ಸೊಗಸನ್ನು ಸವಿಯುವುದು ಎಲ್ಲವೂ ಸಹೃದಯನಿಗೆ, ಪ್ರಕೃತಿಯ ಆರಾಧಕನಿಗೆ ಮಾತ್ರ ಸಾಧ್ಯ.  

ಕಂಡಿತು ಕಣ್ಣು ಸವಿದಿತು ನಾಲಗೆ

ಪಡೆದೀತೀ ದೇಹ

ಸ್ಪರ್ಶಾ- ಪಡೆದೀತೀ ದೇಹ.

ಕೇಳಿತು ಕಿವಿಯು ಮೂಸಿತು ಮೂಗು

ತನ್ಮಯವೀ ಗೇಹಾ

ದೇವರ – ದೀ ಮನಸಿನ ಗೇಹಾ.

            ಬೆಳಗು ಆರನೆಯ ಹಂತದಲ್ಲಿ ಮನುಷ್ಯನ ಪಂಚೇಂದ್ರಿಯಗಳನ್ನು ಪರವಶಗೊಳಿಸುವುದನ್ನು ಚಿತ್ರಿಸುತ್ತದೆ. ಸೂರ್ಯೋದಯವಾದಂದಿನಿಂದ ಪ್ರಕೃತಿಯಲ್ಲಿ ಆದ ಬದಲಾವಣೆಗಳನ್ನು, ಮೂಡಣದ ಸೊಬಗನ್ನು, ಮಂಜುಹನಿಗಳ ಲಾಸ್ಯವನ್ನು, ಸೂರ್ಯನ ಎಳೆಬಿಸಿಲನ್ನು, ತಣ್ಣನೆಯ ಗಾಳಿಯನ್ನು, ಮೊಗ್ಗುಗಳ ಅರಳುವಿಕೆಯನ್ನು, ಅವುಗಳ ಪರಿಮಳವನ್ನು, ಹೂವುಗಳ ಓಲಾಟವನ್ನು, ತುಂಬಿಗಳ ಝೇಂಕಾರವನ್ನು, ಹಕ್ಕಿಗಳ ಕಲರವವನ್ನು ಕಂಡು, ಕೇಳಿ, ಆಘ್ರಾಣಿಸಿ, ಸ್ಪರ್ಶಿಸಿ, ಪ್ರಶಂಸಿಸಿ ಮನುಷ್ಯ ಸಾರ್ಥಕ್ಯವನ್ನು ಪಡೆಯುತ್ತಾನೆ. ಕಣ್ಣು ಕಾಣುತ್ತದೆ, ಕಿವಿ ಕೇಳುತ್ತದೆ, ಮೂಗು ವಾಸಿಸುತ್ತದೆ, ನಾಲಗೆ ಮೆಚ್ಚುತ್ತದೆ, ದೇಹ ಸ್ಪರ್ಶಿಸುತ್ತದೆ.  ಇವೆಲ್ಲವುಗಳಿಂದ ಮನುಷ್ಯದೇಹ ತನ್ಮಯತೆಯನ್ನು ಪಡೆದುಕೊಂಡು ಮನಸ್ಸು ಪರಿಶುದ್ಧವಾಗಿ ಅಲೌಕಿಕ ಶಕ್ತಿಯ ಆವಾಸವೆನಿಸಿಕೊಳ್ಳುತ್ತದೆ. ಇವೆಲ್ಲವೂ ದೇವರ ದಯೆಯಲ್ಲದೆ ಇನ್ನೇನು? ಬೆಳಗು ಮನುಷ್ಯನ ಪಂಚೇಂದ್ರಿಯಗಳನ್ನು ಪ್ರಚೋದಿಸಿದರೆ, ಆತನ ಪಂಚೇಂದ್ರಿಯಗಳು ಪ್ರಕೃತಿಗೆ, ಅದರ ಹೊಸತನಕ್ಕೆ, ಅದರಲ್ಲಿನ ವೈವಿಧ್ಯಕ್ಕೆ ಸ್ಪಂದಿಸುತ್ತವೆ. ಇದೊಂದು ಪ್ರಕೃತಿ ಹಾಗೂ ಮನುಷ್ಯನ ನಡುವಿನ ವಿಲಕ್ಷಣವಾದ  ಕೊಡುವ-ಕೊಳ್ಳುವ ಪ್ರಕ್ರಿಯೆ.

            ಬೆಳಗಿನ ಸೌಂದರ್ಯವನ್ನು ಸವಿಯಬೇಕಾದರೆ, ಅದರಿಂದ ಹೊಸತನವನ್ನು ಗ್ರಹಿಸಬೇಕಾದರೆ, ಗ್ರಹಿಸಿ ಸವಿಯಬೇಕಾದರೆ ಪಂಚೇಂದ್ರಿಯಗಳಿಂದ ಮಾತ್ರ ಸಾಧ್ಯ. ಅದರ ಜೊತೆಗೆ ಪ್ರಕೃತಿಯಲ್ಲಿನ ವಿಶೇಷತೆಗಳನ್ನು, ವೈವಿಧ್ಯವನ್ನು, ಹೊಸತನವನ್ನು ಗ್ರಹಿಸುವ ಆಸ್ಥೆಯೂ ಬೇಕಾಗುತ್ತದೆ. ಮನುಷ್ಯ ಸ್ಪಂದಿಸುವುದು ಪ್ರತಿಯೊಂದು ಆತನ ಪಂಚೇಂದ್ರಿಯಗಳ ಅನುಭವಕ್ಕೆ ಬಂದಾಗ ಮಾತ್ರ. ಸೂರ್ಯನ ಉದಯ, ಆತನ ಎಳೆಬಿಸಿಲು, ಅದರ ಕಾಂತಿ, ಹಿಮಬಿಂದುಗಳ ಲಾಲಿತ್ಯ, ಮೊಗ್ಗುಗಳ ಅರಳುವಿಕೆ, ಹೂಗಳ ತೊನೆದಾಟ ಮೊದಲಾದವುಗಳೆಲ್ಲವೂ ದೃಷ್ಟಿಗೋಚರವಾಗಿವೆ. ಅವೆಲ್ಲವೂ ಕಣ್ಣುಗಳಿಗೆ ಹಿತ. ಗಾಳಿಯ ಬೀಸುವಿಕೆ ಮೆಲುದನಿ, ತುಂಬಿಗಳ ಝೇಂಕಾರ, ಹಕ್ಕಿಗಳ ಕಲರವ ಮೊದಲಾದವು ಕಿವಿಗಳಿಗೆ ಹಿತ. ಮೊಗ್ಗುಗಳ ಹಾಗೂ ಹೂಗಳ ಸುವಾಸನೆ ಮೂಗಿಗೆ ಹಿತ. ಹೂಗಳ, ಮೊಗ್ಗುಗಳ, ಮೆಲುಗಾಳಿಯ ಸ್ಪರ್ಶ ಚರ್ಮ(ದೇಹ)ಕ್ಕೆ ಹಿತ. ಇವೆಲ್ಲವುಗಳ ಪ್ರಶಂಸೆ ನಾಲಗೆಗೆ ಹಿತ. ಒಟ್ಟಿನಲ್ಲಿ ಬೆಳಗು ಮನುಷ್ಯನ ಪಂಚೇಂದ್ರಿಯಗಳನ್ನು ಮುದಗೊಳಿಸುತ್ತದೆ, ದಿನನಿತ್ಯ ಉತ್ಸಾಹ ತುಂಬುತ್ತದೆ, ಲವಲವಿಕೆ ಮೂಡಿಸುತ್ತದೆ, ಕಾಯಕಕ್ಕೆ ಪ್ರೇರೇಪಿಸುತ್ತದೆ. ಒಟ್ಟಿನಲ್ಲಿ ಬದುಕಿನ ಸಾರ್ಥಕ್ಯಕ್ಕೆ ಸಹಕಾರಿಯಾಗುತ್ತದೆ. ಎಲ್ಲೆಲ್ಲೂ ಸೌಂದರ್ಯವೇ ತುಂಬಿಕೊಂಡಿರುವುದರಿಂದ ಇದೆಲ್ಲವೂ ದೇವರ  ಮನಸ್ಸಿನ ಆವಾಸವಲ್ಲದೆ ಇನ್ನೇನು?

ಅರಿಯದು ಅಳವು ತಿಳಿಯದು ಮನವು

ಕಾಣಽದೋ ಬಣ್ಣಾ

ಕಣ್ಣಿಗೆ –  ಕಾಣದೋ ಬಣ್ಣಾ

ಶಾಂತಿರಸವೇ ಪ್ರೀತಿಯಿಂದಾ

ಮೈದೋರಿತಣ್ಣಾ

ಇದು ಬರಿ – ಬೆಳಗಲ್ಲೋ ಅಣ್ಣಾ.

            ಬೆಳಗು ಕೊನೆಯ ಹಂತದಲ್ಲಿ ಮನುಷ್ಯನಿಗೆ ಅಲೌಕಿಕತೆ ಹೊಳಹನ್ನು ನೀಡುತ್ತದೆ. ಮೂಡಲಮನೆಯಲ್ಲಿ ಸೂರ್ಯ ಕಾಣಿಸಿಕೊಂಡ ಕ್ಷಣದಿಂದ ಹೆಜ್ಜೆ ಹೆಜ್ಜೆಗೂ ಆಗಿರುವ, ಆಗುತ್ತಿರುವ ಬದಲಾವಣೆಗಳು, ಹೊಮ್ಮುತ್ತಿರುವ ಸೊಬಗು, ನೀಡುತ್ತಿರುವ ಸಂದೇಶಗಳೆಲ್ಲವನ್ನು ಅರ್ಥೈಸಿಕೊಳ್ಳುವುದಕ್ಕೆ ಅಸಾಧ್ಯ. ಮನಸ್ಸೂ ಅರಿಯಲಾರದು. ಅದೆಲ್ಲವೂ ಮಾನವಶಕ್ತಿಯನ್ನು ಮೀರಿದುದು. ಹಾಗಾಗಿ ಅದನ್ನು, ಅದರ ನಿಗೂಢತೆಯನ್ನು ಅರಿಯುವುದಕ್ಕೆ ಶಕ್ತಿ ಸಾಲದು. ಮನಸ್ಸೂ ತಿಳಿಯದು. ಮುಂಜಾನೆಯಿಂದ ಕಣ್ಣಿಗೆ ಕಾಣುವ ಬಣ್ಣಗಳು, ಅವುಗಳಲ್ಲಿ ಕ್ಷಣಕ್ಷಣಕ್ಕೂ ಆಗುವ ಬದಲಾವಣೆಗಳು, ಅವು ನೀಡುವ ಸ್ಫೂರ್ತಿ, ಪ್ರೇರಣೆಗಳು ಎಲ್ಲವೂ ಮಾನವ ಗ್ರಹಿಕೆಗೆ ನಿಲುಕದ್ದು. ಆದರೆ ಎಲ್ಲೂ ಕ್ರೌರ್ಯವಿಲ್ಲ, ನೋವಿಲ್ಲ, ಹಿಂಸೆಯಿಲ್ಲ, ಅಸಹನೆಯಿಲ್ಲ, ಕಳವಳವಿಲ್ಲ, ದ್ವೇಷವೂ ಇಲ್ಲ, ಮತ್ಸರವೂ ಕೂಡಾ. ಎಲ್ಲೆಲ್ಲೂ ಪ್ರೀತಿಭರಿತ ನೋಟ, ಸುಲಲಿತ, ಸ್ವಚ್ಛ ಸುಂದರ. ಎಲ್ಲವೂ ಪ್ರಶಾಂತ. ಶಾಂತಿರಸವೇ ಮೂಡಲಮನೆಯಿಂದ ಸೂರ್ಯನ ಅನುಗ್ರಹವನ್ನು ಹೊಂದಿ ಭೂಮಿಗೆ ಇಳಿದಿದೆಯೋ ಎಂಬಂತೆ ಎಲ್ಲೆಲ್ಲೂ ಶಾಂತತೆಯೇ ಮೈದೋರಿದೆ. ಹಾಗಾಗಿ ಇದು ಬರೀ ಭೂಮಿಯನ್ನು ಬೆಳಗುವ ಬಳಗಲ್ಲ, ಅದು ಮನುಷ್ಯನ ಅಂತರಂಗವನ್ನು ಬೆಳಗುವ ಬೆಳಗು.  

            ಬೆಳಗು ಎನ್ನುವುದು ದಿನನಿತ್ಯ ನಡೆಯುವ ಒಂದು ಪ್ರಕ್ರಿಯೆ ಎನಿಸಿದರೂ ಅದು ಎಲ್ಲವನ್ನೂ ಮೀರಿ ಘಟಿಸುತ್ತದೆ. ದಿನನಿತ್ಯ ಘಟಿಸಿದರೂ ನಿತ್ಯನೂತನವೇ ಆಗಿರುತ್ತದೆ. ಏಕೆಂದರೆ ಪ್ರತಿಯೊಂದರಲ್ಲಿಯೂ ಸೂಕ್ಷ್ಮ ವ್ಯತ್ಯಾಸಗಳು ಇದ್ದೇ ಇರುತ್ತವೆ. ಗ್ರಹಿಕೆಯ ಸಾಮರ್ಥ್ಯವಿರುವವರಿಗೆ ಮಾತ್ರ ಅದು ದೃಷ್ಟಿಗೋಚರ. ಉಳಿದವರಿಗಲ್ಲ. ಬೆಳಗಾಗುವಲ್ಲಿಂದ ನಡೆಯುವ ಪ್ರತಿಯೊಂದು ಘಟನೆಯ ಹಿಂದೆ ಅಚ್ಚುಕಟ್ಟುತನವಿದೆ, ಸೊಗಸಿದೆ, ಸಂದೇಶವಿದೆ, ಪ್ರೇರಣೆಯಿದೆ, ಹೊಸದೊಂದು ದರ್ಶನವೂ ಇದೆ. ಅದು ಮನುಷ್ಯನಿಗೆ ಹೊಸತನವನ್ನು ನೀಡುತ್ತದೆ. ಸಹಿಷ್ಣುತೆಯನ್ನು ಕಲಿಸುತ್ತದೆ.  ಕಾಯಕಕ್ಕೆ ಪ್ರೇರಣೆಯನ್ನೂ ಒದಗಿಸುತ್ತದೆ. ಬೆಳಗಿನಲ್ಲಿ ಕಣ್ಣಿಗೆ ಕಾಣಿಸುವ ಬದಲಾವಣೆಗಳು, ವೈವಿಧ್ಯಗಳು, ಲೋಕಜೀವನದ ಕ್ರಮಗಳು, ಮನುಷ್ಯನಿಗೆ ಹಲವು ಸಂದೇಶಗಳನ್ನು ನೀಡುತ್ತವೆ. ಪ್ರತಿನಿತ್ಯ ಅವನಲ್ಲಿ ಹೊಸಚೈತನ್ಯವನ್ನು ತುಂಬುತ್ತವೆ. ಚಿಂತನಶೀಲನನ್ನಾಗಿ ಮಾಡುತ್ತವೆ. ಬೆಳಗಿನ ಸಂತಸ ಮನುಷ್ಯನೊಬ್ಬನಿಗೆ ಮಾತ್ರವಲ್ಲದೆ, ಸಕಲ ಜೀವಸಂಕುಲಕ್ಕೆ ಸಸ್ಯಸಂಕುಲಕ್ಕೂ ಇದೆ. ಎಲ್ಲವೂ ಪಂಚೇಂದ್ರಿಯಗಳಿಗೆ ಮತ್ತೆ ಮತ್ತೆ ಹೊಸ ಹೊಸ ಅನುಭವಗಳನ್ನು ನೀಡುತ್ತಲೇ ಸಾಗುತ್ತವೆ. ಹಾಗಾಗಿ ಇದರ ಗೂಢತೆಯನ್ನು ಅರಿತುಕೊಳ್ಳುವುದು ಸಾಧ್ಯವೂ ಇಲ್ಲ, ಅದು ಸಾಧುವೂ ಅಲ್ಲ. ಬೆಳಗಿನ ಈ ಸನ್ನಿವೇಶವು ಮನಸ್ಸಿನ ಭಾವನೆಗಳನ್ನು ಕೆರಳಿಸದೆ ಪ್ರಶಾಂತವಾಗಿದೆ. ಶಾಂತಿರಸವೇ ಮೂಡಲಮನೆಯಿಂದ ಸೂರ್ಯನ ಮೂಲಕ ಲೋಕದಲ್ಲೆಲ್ಲ ಮೈದೋರಿದಂತಿದೆ. ಹಾಗಾಗಿ ಇದು ಬರೀ ಬಳಗಲ್ಲ, ಅಲೌಕಿಕವಾದ ಬೆಳಗು. ಶಾಂತತೆಯನ್ನು ಬೋಧಿಸುವ ಬೆಳಗು. ಬದುಕಿಗೆ ಸಾರ್ಥಕ್ಯವನ್ನು ನೀಡುವ ಬೆಳಗು.

***

 

 

 

 

4 thoughts on “ಬೆಳಗು – ದ. ರಾ. ಬೇಂದ್ರೆ

  1. ತುಂಬಾ ಚೆನ್ನಾಗಿದೆ ಸರ್,ಬಹಳ ಉಪಯುಕ್ತ, ಧನ್ಯವಾದಗಳು.

    1. ಧನ್ಯವಾದಗಳು ಮೇಡಂ. ಸಾಧ್ಯವಾದರೆ ಸಮಾನಾಸಕ್ತರಿಗೆ ಇದರ ಲಿಂಕನ್ನು ಹಂಚಿಕೊಳ್ಳಿ. ವಿದ್ಯಾರ್ಥಿಗಳಿಗೂ ಕೂಡಾ. 🙏

Leave a Reply

Your email address will not be published. Required fields are marked *