ಸಾಹಿತ್ಯಾನುಸಂಧಾನ

heading1

ನಿನ್ನಂತೆ ಸತ್ಯವಂತರೀಕ್ಷಿತಿಯೊಳಿನ್ನಾರುಂಟು – ಭಾಗ – ೧

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ- ಭಾಗ-೧)

ಇಂದೆನ್ನ ಕುಲಜನೆನಿಸುವ ಹರಿಶ್ಚಂದ್ರನಂ

ಹೆಂದದ ಚತುರ್ದಶಜಗಂಗಳಱಿವಂತು ತರು

ಣೇಂದುಧರನಹ ವಿಶ್ವಪತಿ ಮೆಱೆವ ಸಂಭ್ರಮದ ಸಡಗರವ ನೋಳ್ಪೆನೆಂದು

ಕುಂದದುದ್ದವನೇಱಿ ನಿಂದಿಪ್ಪನೋ ಎನಿ

ಪ್ಪಂದದಿಂದುದಯಗಿರಿಶಿಖರಕ್ಕೆ ರಾಗದಿಂ

ಬಂದನಂಬುಜಮಿತ್ರನೆಂದೆನಿಪನಪವಿತ್ರತಿಮಿರಪಟಲಾಮಿತ್ರನು  ||೧||

ಪದ್ಯದ ಅನ್ವಯಕ್ರಮ:

ಇಂದು ಎನ್ನ ಕುಲಜನ್ ಎನಿಸುವ ಹರಿಶ್ಚಂದ್ರನಂ ಹೆಂದದ ಚತುರ್ದಶ ಜಗಂಗಳ್ ಅಱಿವಂತು ತರುಣ ಇಂದುಧರನಹ ವಿಶ್ವಪತಿ ಮೆಱೆವ ಸಂಭ್ರಮದ ಸಡಗರವ ನೋಳ್ಪೆನ್ ಎಂದು, ಕುಂದದೆ ಉದ್ದವನೇಱಿ ನಿಂದಿಪ್ಪನೋ ಎನಿಪ್ಪ ಅಂದದಿಂ ಉದಯಗಿರಿ ಶಿಖರಕ್ಕೆ ರಾಗದಿಂ ಬಂದನ್ ಅಂಬುಜಮಿತ್ರನ್ ಎಂದು ಎನಿಸಿಪನ್ ಅಪವಿತ್ರ ಅತಿ ತಿಮಿರಪಟಲ ಅಮಿತ್ರನು.

ಪದ-ಅರ್ಥ:

ಕುಲಜ-ಒಳ್ಳೆಯ ಕುಲದಲ್ಲಿ ಹುಟ್ಟಿದವನು;  ಹೆಂದದ- ಕುಗ್ಗದ, ವಿಶೇಷ ಸ್ಥಾನಮಾನಗಳಿಂದ ಮೆರೆಯುವ;   ಚತುರ್ದಶ ಜಗಂಗಳ್-ಹದಿನಾಲ್ಕು ಲೋಕಗಳು;  ಅಱಿವಂತು-ತಿಳಿಯುವ ಹಾಗೆ;   ತರುಣೇಂದುಧರನಹ-ಬಾಲಚಂದ್ರನನ್ನು ಧರಿಸಿರುವಂತಹ;  ವಿಶ್ವಪತಿ-ಶಿವ;  ಕುಂದದೆ-ಕುಗ್ಗದೆ; ಉದ್ದವನೇಱಿ-ಎತ್ತರವನ್ನು ಏರಿ;  ನಿಂದಿಪ್ಪನೋ-ನಿಂತಿರುವನೋ ; ಎನಿಪ್ಪ-ಎನಿಸಿರುವ;  ಅಂದದಿಂ-ರೀತಿಯಿಂದ;  ಉದಯಗಿರಿ ಶಿಖರ-ಪೂರ್ವದಿಕ್ಕಿನ ಪರ್ವತದ ತುದಿ;  ರಾಗದಿಂ-ಅಭಿಮಾನದಿಂದ;  ಅಂಬುಜಮಿತ್ರನ್-ಸೂರ್ಯನು; ಅಪವಿತ್ರ-ಅಶುದ್ಧ; ಅತಿತಿಮಿರಪಟಲ-ದಟ್ಟಕತ್ತಲೆಯ ಹೊದಿಕೆ;  ಅಮಿತ್ರ-ವೈರಿ.

            ಇಂದು ನನ್ನ ಭಕ್ತನೂ ಕುಲದಲ್ಲಿಯೇ ಶ್ರೇಷ್ಠನೂ ಎನಿಸಿರುವ ಹರಿಶ್ಚಂದ್ರ ರಾಜನನ್ನು ವಿಶೇಷ ಸ್ಥಾನಮಾನಗಳಿಂದ ಮೆರೆಯುತ್ತಿರುವ ಹದಿನಾಲ್ಕು ಲೋಕಗಳು ತಿಳಿಯುವ ಹಾಗೆ, ಬಾಲಚಂದ್ರನನ್ನು ತನ್ನ ಜಟೆಯಲ್ಲಿ ಧರಿಸಿರುವ ವಿಶ್ವಪತಿ ಎನಿಸಿರುವ ಶಿವನು ಮೆರೆಯುವ ಸಂಭ್ರಮದ ಸಡಗರವನ್ನು ನೋಡುತ್ತೇನೆ ಎಂದುಕೊಂಡು ಕುಗ್ಗದೆ ಎತ್ತರವನ್ನೇರಿ ನಿಂತುಕೊಂಡಿರುವನೋ ಎನ್ನುವ ರೀತಿಯಲ್ಲಿ ದಟ್ಟವಾದ ಆಶುದ್ಧಕತ್ತಲೆಗೆ ವೈರಿಯಾಗಿರುವ ಸೂರ್ಯನು ಅಭಿಮಾನದಿಂದ, ಪೂರ್ವಪರ್ವತದ  ತುತ್ತತುದಿಯನ್ನು ಏರಿ ನಿಂತಿರುವನೋ ಎನ್ನುವಂತೆ ತೋರುತ್ತಿದ್ದಾನೆ.

            ಹರಿಶ್ಚಂದ್ರ ಶಿವಭಕ್ತ. ಆತನ ಸತ್ಯಸಂಧತೆಯ ಆಳ ಹರಹುಗಳು ಶಿವನಿಗೂ ಗೊತ್ತು, ಮಾತ್ರವಲ್ಲ ಹದಿನಾಲ್ಕು ಲೋಕಗಳಿಗೂ ಗೊತ್ತು. ಆದರೆ ಇಂದು ಆತನ ಸತ್ಯಪರೀಕ್ಷೆ, ಸತ್ವಪರೀಕ್ಷೆಗಳು ನಡೆಯಲಿವೆ. ಇವು ಆತನ ಬದುಕಿನಲ್ಲಿನ ಕೊನೆಯ ಪರೀಕ್ಷೆಗಳು. ಆ ಪರೀಕ್ಷೆಗಳಲ್ಲಿ ಹರಿಶ್ಚಂದ್ರ ಯಶಸ್ವಿಯಾಗಿ ಹೊರಹೊಮ್ಮುವುದನ್ನು, ಹದಿನಾಲ್ಕು ಲೋಕಗಳಲ್ಲಿ ತನ್ನ ಸತ್ಯಸಂಧತೆಯನ್ನು ಮತ್ತೆ ಪ್ರತಿಷ್ಠಾಪಿಸುವುದನ್ನು ನೋಡುವ ಸಂಭ್ರಮದ ಸಡಗರದಲ್ಲಿ ಒಂದೆಡೆ ಶಿವನಿದ್ದಾನೆ. ಇನ್ನೊಂದೆಡೆ ಹರಿಶ್ಚಂದ್ರನ ಸತ್ಯಸಂಧತೆ ಲೋಕಕ್ಕೆಲ್ಲ ಪ್ರಕಟಗೊಳ್ಳುವುದನ್ನು ನೋಡುವ ಕುತೂಹಲ, ಸಂಭ್ರಮಗಳಲ್ಲಿ ಸೂರ್ಯನಿದ್ದಾನೆ. ಸೂರ್ಯ ಕತ್ತಲೆ ಎಂಬ ಅಪವಿತ್ರವಾದ ದಟ್ಟಕತ್ತಲೆಗೆ ವೈರಿಯಾಗಿರುವವನು. ಅಂದರೆ, ಎಂತಹ ಕತ್ತಲೆಯನ್ನೂ ನಾಶಮಾಡುವವನು. ಹರಿಶ್ಚಂದ್ರನ ಮೇಲೂ ಈಗ ಅಸತ್ಯದ, ಮಾತುಮೀರಿದ ಅಪವಾದವೆಂಬ ದಟ್ಟಕತ್ತಲೆ ಮುಸುಕಿಕೊಂಡಿದೆ. ಆ ಅಪವಾದವೆಂಬ ದಟ್ಟಕತ್ತಲೆ ಶಿವಾನುಗ್ರಹದಿಂದಾಗಿ ಇಂದು ಬಗೆಹರಿಯಲಿದೆ. ಶಿವನೂ ಸೂರ್ಯನೂ ಹರಿಶ್ಚಂದ್ರನ ಮೇಲಿನ ಅಪವಾದ ಬಗೆಹರಿದು ಆತ ಲೋಕಮಾನ್ಯನಾಗಿ ಮೆರೆಯುವುದನ್ನು ನೋಡುವ ಹಂಬಲದಲ್ಲಿದ್ದಾರೆ ಎಂಬುದನ್ನು ಕವಿ ರಾಘವಾಂಕ ಈ ರೀತಿಯಲ್ಲಿ ವರ್ಣಿಸುತ್ತಾನೆ.

 

ಹೆಡಗಯ್ಯ ಬಿಗಿದ ನೇಣಂ ಕೊಯ್ದು ಬಿಸುಟು ನಿಡು

ದಡದಲ್ಲಿ ಮೂಡ ಮುಂತಾಗಿ ಕುಳ್ಳಿರಿಸಿ ಹಿಂ

ದಡದಲ್ಲಿ ಕುಸಿದು ನೀಡಡಿಯಿಟ್ಟು ನಿಂದು ಖಡ್ಗವ ಸೆಳೆದು ಜಡಿದು ನೋಡಿ

ಹೆಡತಲೆಗೆ ಮೋಹಿ ಕಯ್ಯೆತ್ತಿ ಕಂಧರ ಹಱಿಯೆ

ಹೊಡೆಯಲನುವಾದೆನನುವಾದೆನನುವಾಗಾಗು

ಮಡದಿ ನೆನೆ ನಿನ್ನ ದೈವವನು ಬಿಡದೆನ್ನೊಡೆಯನಂ ಹರಸು ಹರಸೆಂದನು  ||೨||

ಪದ್ಯದ ಅನ್ವಯಕ್ರಮ:

ಹೆಡಗಯ್ಯ ಬಿಗಿದ ನೇಣಂ ಕೊಯ್ದು ಬಿಸುಟು, ನಿಡುದಡದಲ್ಲಿ ಮೂಡ ಮುಂತಾಗಿ ಕುಳ್ಳಿರಿಸಿ, ಹಿಂದಡದಲ್ಲಿ ಕುಸಿದು ನೀಡ ಅಡಿಯಿಟ್ಟು ನಿಂದು, ಖಡ್ಗವ ಸೆಳೆದು ಜಡಿದು ನೋಡಿ, ಹೆಡತಲೆಗೆ ಮೋಹಿ ಕಯ್ಯೆತ್ತಿ ಕಂಧರ ಹಱಿಯೆ ಹೊಡೆಯಲ್ ಅನುವಾದೆನ್ ಅನುವಾದೆನ್ ಮಡದಿ ಅನುವಾಗು ಆಗು ನಿನ್ನ ದೈವವನು ನೆನೆ ಎನ್ನೊಡೆಯನಂ ಬಿಡದೆ ಹರಸು ಹರಸು ಎಂದನು.

ಪದ-ಅರ್ಥ:

ಹೆಡಗಯ್ಯ-ಹಿಂದಕ್ಕೆ ಕಟ್ಟಿದ ಕೈಗಳನ್ನು;  ಬಿಗಿದ-ಕಟ್ಟಿದ;  ನೇಣಂ-ಹಗ್ಗವನ್ನು; ನಿಡುದಡ-ಎತ್ತರವಾದ ದಂಡೆ;  ಮೂಡಮುಂತಾಗಿ-ಮೂಡು ದಿಕ್ಕಿಗೆ ಮುಖಮಾಡಿ;  ಹಿಂದಡ-ಹಿಂಬದಿ;  ಕುಸಿದು ನಿಂದು-ಸರಿದು  ನಿಂತುಕೊಂಡು; ನೀಡಡಿಯಿಟ್ಟು-ಅಗಲವಾಗಿ ಹೆಜ್ಜೆಗಳನ್ನು ಇರಿಸಿಕೊಂಡು;  ಖಡ್ಗವ ಸೆಳೆದು-ಖಡ್ಗವನ್ನು ಒರೆಯಿಂದ ಕಿತ್ತು;  ಜಡಿದು -ಝಳಪಿಸಿ;  ಹೆಡತಲೆಗೆ-ಹಿಂದಲೆಗೆ, ತಲೆಯ ಹಿಂಭಾಗಕ್ಕೆ;  ಮೋಹಿ-ಮೋಹಿಸುವವನು,(ಸತ್ಯವನ್ನು ಮೋಹಿಸುವವನು ಹರಿಶ್ಚಂದ್ರ); ಕಂಧರ-ಕುತ್ತಿಗೆ;  ಹಱಿಯೆ-ತುಂಡಾಗುವಂತೆ;  ಅನುವಾದೆನ್-ಸಿದ್ಧನಾದೆನು;  ಮಡದಿ-ಮಹಿಳೆ (ಚಂದ್ರಮತಿ);  ಬಿಡದೆ-ತಪ್ಪದೆ;  ಎನ್ನೊಡೆಯ-ಹರಿಶ್ಚಂದ್ರನ ಒಡೆಯ (ಶ್ಮಶಾನದ ಒಡೆಯನಾದ ವೀರಬಾಹುಕ);   ಹರಸು-ಆಶೀರ್ವದಿಸು.

            ಚಂದ್ರಮತಿಯ ಹಿಂಭಾಗಕ್ಕೆ ಕೂಡಿಸಿ  ಕಟ್ಟಿಹಾಕಿದ್ದ ಹಗ್ಗವನ್ನು ತುಂಡರಿಸಿ ಎಸೆದು, ಆಕೆಯನ್ನು ಎತ್ತರವಾದ ದಂಡೆಯ ಮೇಲೆ ಪೂರ್ವದಿಕ್ಕಿಗೆ ಮುಖಮಾಡಿ ಕುಳ್ಳಿರಿಸಿ, ತಾನು ಆಕೆಯ ಹಿಂಬದಿಯಲ್ಲಿ ಅಗಲವಾದ ಹೆಜ್ಜೆಗಳನ್ನಿರಿಸಿ ದೃಢವಾಗಿ ನಿಂತುಕೊಂಡು, ಒರೆಯಿಂದ ಖಡ್ಗವನ್ನು ಕಿತ್ತು ಝಳಪಿಸಿ ನೋಡಿ, ಚಂದ್ರಮತಿಯ ಹಿಂದಲೆಯ ಮೇಲೆ ಖಡ್ಗವನ್ನೆತ್ತಿಕೊಂಡು ಅವಳ ಕುತ್ತಿಗೆಯು ತುಂಡಾಗುವಂತೆ ಕಡಿಯಲು ಸಿದ್ಧನಾಗಿ, ಚಂದ್ರಮತಿಯನ್ನು ಉದ್ದೇಶಿಸಿ, ಎಲೆ ಸ್ತ್ರೀಯೆ, ನಿನ್ನನ್ನು ವಧಿಸುವುದಕ್ಕೆ ನಾನು ಸಿದ್ಧನಾಗಿದ್ದೇನೆ, ನೀನೂ ಸಾಯುವುದಕ್ಕೆ ಸಿದ್ಧನಾಗು, ಕೊನೆಯದಾಗಿ ನಿನ್ನ ದೈವವನ್ನು ಮನಸ್ಸಿನಲ್ಲಿಯೇ ನೆನೆದುಕೊಳ್ಳು, ತಪ್ಪದೆ ನನ್ನ ಒಡೆಯನನ್ನು ಹರಸು ಎಂದನು.

            ಇದು ಹರಿಶ್ಚಂದ್ರನ ಸತ್ಯಪರೀಕ್ಷೆ ಮಾತ್ರವಲ್ಲ, ಸತ್ವಪರೀಕ್ಷೆಯೂ ಹೌದು. ಒಂದೆಡೆ ತನ್ನ ಒಡೆಯನ ಮತ್ತು ರಾಜಾಜ್ಞೆಯನ್ನು ಪಾಲಿಸಬೇಕು, ಇನ್ನೊಂದೆಡೆ ತನ್ನ ಹೆಂಡತಿ ಚಂದ್ರಮತಿಯ ತಲೆಕಡಿಯಬೇಕು. ಎರಡನ್ನೂ ನಿರಾಕರಿಸುವಂತಿಲ್ಲ. ಮನಸ್ಸನ್ನು ಗಟ್ಟಿಮಾಡಿಕೊಂಡು ಆಕೆಯನ್ನು ವಧಾಸ್ಥಾನದಲ್ಲಿ ಪೂರ್ವದಿಕ್ಕಿಗೆ ಮುಖಮಾಡಿ ಕುಳ್ಳಿರಿಸಿಕೊಂಡು ತಾನು ಆಕೆಯ ಹಿಂಬದಿಯಲ್ಲಿ ದೃಢವಾಗಿ ನಿಂತುಕೊಂಡು ಮನಸ್ಸು ಕಳವಳಗೊಳ್ಳುತ್ತಿದ್ದರೂ, ದಾರುಣವಾದ ಪರಿಸ್ಥಿತಿಯಲ್ಲಿ ತಾನಿದ್ದರೂ ತನ್ನ ಕರ್ತವ್ಯವನ್ನು ಪಾಲಿಸಲು ಮುಂದಾಗುತ್ತಾನೆ. ಮನಸ್ಸಿನ ಸ್ಥೈರ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಖಡ್ಗವನ್ನು ಝಳಪಿಸಿ ಚಂದ್ರಮತಿಯೇ ನಿದ್ಧನಾಗು, ನಿನ್ನ ದೈವವನ್ನು ನೆನೆ, ನನ್ನ ಒಡೆಯನನ್ನು ಹರಸು ಎಂದು ಹೇಳುತ್ತಾನೆ.  ಒಂದೆಡೆ ಮಡದಿಯನ್ನು ಕೊಲ್ಲಲೇಬೇಕು, ತಪ್ಪಿದರೆ ರಾಜಾಜ್ಞೆಯನ್ನು ಮಾತ್ರವಲ್ಲ, ತನ್ನ ಮಾತನ್ನೂ ಮೀರಿದಂತಾಗುತ್ತದೆ, ಕರ್ತವ್ಯಲೋಪವಾಗುತ್ತದೆ. ಇನ್ನೊಂದೆಡೆ ತನ್ನ ಒಡೆಯನ ಆಜ್ಞೆ, ಅದನ್ನೂ ಮೀರುವಂತಿಲ್ಲ. ’ಅತ್ತ ದರಿ, ಇತ್ತ ಪುಲಿ’ ಎಂಬಂತಹ ಸ್ಥಿತಿ ಹರಿಶ್ಚಂದ್ರನದು.

 

ಆ ಹೊಯ್ದನಾಹೊಯ್ದನೆಲೆಲೆ ಶಿವಶಿವ ಅಷ್ಟ

ದೇಹಿ ನೀನೇ ಶರಣು ರಕ್ಷಿಸಬಲೆಯನು ದು

ರ್ಮೋಹಿ ವಿಶ್ವಾಮಿತ್ರ ಪಾಪಿ ಇನ್ನಾದೊಡಂ ಸತಿಯ ಕೊಲೆಯಂ ನಿಲಿಸಲು

ಹೋಹುದೇನೆಂದೋವಿ ಬೇಡಿಕೊಳುತಂ ಸುರ

ವ್ಯೂಹಮಂಬರದಲ್ಲಿ ಹೂಮಳೆಗಳಂ ಪಿಡಿದು

ಮೋರರಂಬೆತ್ತು ನೋಡುತ್ತಿರಲು ನಾರಿ ಹರಕೆಗಳನವಧರಿಸೆಂದಳು  ||೩||

ಪದ್ಯದ ಅನ್ವಯಕ್ರಮ:

ಆ ಹೊಯ್ದನ್  ಆ ಹೊಯ್ದನ್ ಎಲೆಲೆ ಶಿವಶಿವ ಅಷ್ಟದೇಹಿ ನೀನೇ ಶರಣು, ರಕ್ಷಿಸು ಅಬಲೆಯನು, ದುರ್ಮೋಹಿ ಪಾಪಿ ವಿಶ್ವಾಮಿತ್ರ ಇನ್ನಾದೊಡಂ ಸತಿಯ ಕೊಲೆಯಂ ನಿಲಿಸಲು ಹೋಹುದೇನ್ ಎಂದು ಓವಿ ಬೇಡಿಕೊಳುತಂ ಸುರವ್ಯೂಹಂ ಅಂಬರದಲ್ಲಿ ಹೂಮಳೆಗಳಂ ಪಿಡಿದು ಮೋರಂ ಪೆತ್ತು ನೋಡುತ್ತಿರಲು ನಾರಿ ಹರಕೆಗಳನ್ ಅವಧರಿಸು ಎಂದಳು.

ಪದ-ಅರ್ಥ:

ಆ ಹೊಯ್ದನ್-ಅಯ್ಯೋ ಹೊಡೆದನು;  ಅಷ್ಟದೇಹಿ-ಶಿವ(ವಿಶೇಷ ಟಿಪ್ಪಣಿ ನೋಡಿ); ಅಬಲೆ-ಚಂದ್ರಮತಿ;  ದುರ್ಮೋಹಿ-ಕೆಟ್ಟಮೋಹವುಳ್ಳವನು, ಕೆಡುಕನ್ನು ಅಪೇಕ್ಷಿಸುವವನು;  ಇನ್ನಾದೊಡಂ-ಇನ್ನಾದರೂ;  ಹೋಹುದೇನ್-ಹೋಗುವುದು, ಪ್ರಯತ್ನಿಸುವುದು;  ಓವಿ-ಪ್ರೀತಿಯಿಂದ, ಅಭಿಮಾನದಿಂದ;  ಸುರವ್ಯೂಹ-ದೇವತಗಳ ಸಮೂಹ;  ಅಂಬರ-ಆಕಾಶ;  ಮೋಹರಂಬೆತ್ತು-ಗುಂಪುಕೂಡಿಕೊಂಡು;  ಹರಕೆ-ಬಯಕೆ, ಇಷ್ಟಾರ್ಥ;  ಅವಧರಿಸು-ಮನಸ್ಸಿಟ್ಟು ಕೇಳು.

            ಹರಿಶ್ಚಂದ್ರನು ತನ್ನ ಹೆಂಡತಿಯಾದ ಚಂದ್ರಮತಿಗೆ ಖಡ್ಗದಿಂದ ಹೊಡೆದನು, ಅಯ್ಯೋ ಹೊಡೆದನು ಎಲೆಲೆ ಶಿವಶಿವ, ಅಷ್ಟದೇಹಿಯೇ ನಿನಗೆ ಶರಣಾಗಿದ್ದೇವೆ, ನೀನಾದರೂ ಅಬಲೆ ಚಂದ್ರಮತಿಯನ್ನು ರಕ್ಷಿಸು, ಕೆಡುಕನ್ನೇ ಬಯಸುವ ಪಾಪಿ ವಿಶ್ವಾಮಿತ್ರನು ಇನ್ನಾದರೂ ಅಬಲೆ ಚಂದ್ರಮತಿಯ ಕೊಲೆಯನ್ನು ನಿಲ್ಲಿಸಲು ಪ್ರಯತ್ನಿಸಲಿ ಎಂದು ಕಳಕಳಿಯಿಂದ ದೇವತೆಗಳ ಸಮೂಹವು ಆಕಾಶದಲ್ಲಿದ್ದು ಕೈಯಲ್ಲಿ ಹೂಗಳನ್ನು ಹಿಡಿದುಕೊಂಡು ಗುಂಪುಕೂಡಿಕೊಂಡು ಶಿವನಲ್ಲಿ ಬೇಡಿಕೊಳ್ಳುತ್ತ ಶ್ಮಶಾನದ್ಲಲಿನ ದೃಶ್ಯವನ್ನು ನೋಡು ನೋಡುತ್ತಿದ್ದಂತೆಯೇ ಚಂದ್ರಮತಿಯು ತನ್ನ ಇಷ್ಟಾರ್ಥಗಳನ್ನು ಮನಸ್ಸಿಟ್ಟು ಕೇಳು ಎಂದಳು.

            ಚಂದ್ರಮತಿಯು ವಿನಾ ಕಾರಣ ಬಲಿಯಾಗುವುದು ದೇವತೆಗಳಿಗೂ ಇಷ್ಟವಿಲ್ಲ, ಅವರೆಲ್ಲರೂ ಕೊನೆಯ ಪ್ರಯತ್ನವಾಗಿ ಶಿವನನ್ನು ಮೊರೆಯಿಡುತ್ತಾರೆ. ಈ ಎಲ್ಲಾ ಅನರ್ಥಗಳಿಗೆ ಕಾರಣನಾದ  ಪಾಪಿ ಎನಿಸಿರುವ ವಿಶ್ವಾಮಿತ್ರನಾದರೂ ಚಂದ್ರಮತಿಯ ಕೊಲೆಯನ್ನು ತಡೆಯುವುದಕ್ಕೆ ನಿನ್ನಿಂದಲೇ ಆತನಿಗೆ ಪ್ರೇರಣೆಯಾಗಲಿ ಎಂದು ಶಿವನನ್ನು ಬೇಡಿಕೊಳ್ಳುತ್ತಾರೆ. ಅಷ್ಟು ಮಾತ್ರವಲ್ಲ, ಮುಂದೆ ಯಾವ ಅನರ್ಥವೂ ನಡೆಯದೆ ಚಂದ್ರಮತಿ ಅಪವಾದದಿಂದ ಮುಕ್ತಳಾಗಿ ಹರಿಶ್ಚಂದ್ರನೊಂದಿಗೆ ಸುಖವಾಗಿರಲಿ ಎಂದು ಹರಸುವುದಕ್ಕೆ ಆಕಾಶದಲ್ಲಿ ಹೂಗಳನ್ನು ಹಿಡಿದುಕೊಂಡು ಎಲ್ಲವೂ ಸುಖಾಂತವಾಗುವಂತೆ ಕರುಣಿಸೆಂದು ಶಿವನಲ್ಲಿ ಬೇಡಿಕೊಳ್ಳುತ್ತಾರೆ.

ವಿಶೇಷ ಟಿಪ್ಪಣಿ:

ಅಷ್ಟದೇಹಿ: ಶಿವನ ಹಲವಾರು ಹೆಸರುಗಳಲ್ಲಿ ಅಷ್ಟದೇಹಿ ಎಂಬುದೂ ಒಂದು. ಅಷ್ಟದೇಹಿ ಎಂಬುದಕ್ಕೆ ಪರ್ಯಾಯವಾಗಿ ಅಷ್ಟಮೂರ್ತಿ ಎಂಬ ಹೆಸರೂ ಬಳಕೆಯಲ್ಲಿದೆ. ಬೇರೆಬೇರೆ ಲೋಕಕಂಟಕಗಳ ಸಂದರ್ಭಗಳಲ್ಲಿ ಕಾಲಾನುಕ್ರಮದಲ್ಲಿ ಶಿವನು ಬೇರೆಬೇರೆ ದೇಹಗಳನ್ನು ಧಾರಣಮಾಡಿದ್ದರಿಂದ ಶಿವನಿಗೆ ಅಷ್ಟದೇಹಿ ಅಥವಾ ಅಷ್ಟಮೂರ್ತಿ ಎಂದು ಹೆಸರಾಯಿತು.  ಶಿವ, ಶರ್ವ, ಈಶಾನ, ಪಶುಪತಿ, ಭೀಮ, ಉಗ್ರ, ಮಹಾದೇವ ಹಾಗೂ ರುದ್ರ-ಇವು ಶಿವನ ಅಷ್ಟದೇಹಗಳು.

 

ಬಲಿದ ಪದ್ಮಾಸನಂ ಮುಗಿದಕ್ಷಿ ಮುಚ್ಚಿದಂ

ಜಲಿವೆರಸಿ ಗುರುವಸಿಷ್ಠಂಗೆಱಗಿ ಶಿವನ ನಿ

ರ್ಮಲರೂಪ ನೆನೆದು ಮೇಲಂ ತಿರುಗಿ ನೋಡಿ ಭೂಚಂದ್ರಾರ್ಕತಾರಂಬರಂ

ಕಲಿ ಹರಿಶ್ಚಂದ್ರರಾಯ ಸತ್ಯವೆರಸಿ ಬಾ

ಳಲಿ ಮಗಂ ಮುಕ್ತನಾಗಲಿ ಮಂತ್ರಿ ನೆನೆದುದಾ

ಗಲಿ ರಾಜ್ಯದೊಡೆಯ ವಿಶ್ವಾಮಿತ್ರ ನಿತ್ಯನಾಗಲಿ ಹರಕೆ ಹೊಡೆಯೆಂದಳು  ||೪||

ಪದ್ಯದ ಅನ್ವಯಕ್ರಮ:

ಬಲಿದ ಪದ್ಮಾಸನಂ, ಮುಗಿದ ಅಕ್ಷಿ, ಮುಚ್ಚಿದ ಅಂಜಲಿವೆರಸಿ ಗುರುವಶಿಷ್ಠಂಗೆ ಎರಗಿ, ಶಿವನ ನಿರ್ಮಲರೂಪ ನೆನೆದು, ಮೇಲಂ ತಿರುಗಿ ನೋಡಿ, ಭೂ, ಚಂದ್ರ, ಅರ್ಕ, ತಾರ, ಅಂಬರಂ ಕಲಿ ಹರಿಶ್ಚಂದ್ರರಾಯ ಸತ್ಯವೆರಸಿ ಬಾಳಲಿ, ಮಗಂ ಮುಕ್ತನಾಗಲಿ, ಮಂತ್ರಿ ನೆನೆದುದಾಗಲಿ, ರಾಜ್ಯದ ಒಡೆಯ ವಿಶ್ವಾಮಿತ್ರ ನಿತ್ಯನಾಗಲಿ ಹರಕೆ ಹೊಡೆ ಎಂದಳು.

ಪದ-ಅರ್ಥ:

ಬಲಿದ-ಹಾಕಿದ,  ಭದ್ರಪಡಿಸಿದ;  ಮುಗಿದ ಅಕ್ಷಿ-ಮುಚ್ಚಿದ ಕಣ್ಣು;  ಮುಚ್ಚಿದ ಅಂಜಲಿ-ಜೋಡಿಸಿದ ಬೊಗಸೆ, ಕೈಗಳ  ನಮಸ್ಕಾರ ಭಂಗಿ;  ವೆರಸಿ-ಕೂಡಿಕೊಂಡು,  ಹೊಂದಿ;  ಎಱಗಿ-ನಮಸ್ಕರಿಸಿ;  ನಿರ್ಮಲರೂಪ-ಪರಿಶುದ್ಧ ರೂಪ;  ಮೇಲಂ ತಿರುಗಿ ನೋಡಿ-ಆಕಾಶದ ಕಡೆಗೆ ನೋಡಿ;   ಭೂ-ಭೂಮಿ;  ಅರ್ಕ-ಸೂರ್ಯ;  ತಾರ-ನಕ್ಷತ್ರ;  ಅಂಬರ-ಆಕಾಶ;  ಕಲಿ –ಪರಾಕ್ರಮಶಾಲಿ;  ಸತ್ಯವೆರೆಸಿ-ಸತ್ಯವನ್ನು ಹೊಂದಿ, ಸತ್ಯವನ್ನು ಕೂಡಿಕೊಂಡು;  ಮುಕ್ತನಾಗಲಿ-ಮುಕ್ತಿಹೊಂದಲಿ;   ನೆನೆದುದಾಗಲಿ-ಬಯಸಿದ್ದು ಕೈಗೂಡಲಿ;  ನಿತ್ಯನಾಗಲಿ-ಶಾಶ್ವತನಾಗಿ ಇರಲಿ;  ಹರಕೆ-ಇಷ್ಠಾರ್ಥ.

            ಚಂದ್ರಮತಿಯು ವಧಾಸ್ಥಾನದಲ್ಲಿ ಪದ್ಮಾಸನವನ್ನು ಹಾಕಿ ಕುಳಿತುಕೊಂಡು, ತನ್ನ ಕಣ್ಣುಗಳನ್ನು ಮುಚ್ಚಿ, ಕೈಗಳನ್ನು ಪರಸ್ಪರ ಜೋಡಿಸಿ ನಮಸ್ಕಾರಭಂಗಿಯಲ್ಲಿ ಹಿಡಿದುಕೊಂಡು ಮನಸ್ಸಿನಲ್ಲಿಯೇ ಗುರುಗಳಾದ ವಸಿಷ್ಠನಿಗೆ ನಮಸ್ಕರಿಸಿ, ಅನಂತರ ಆಕಾಶದ ಕಡೆಗೆ ನೋಡಿ, ಭೂಮಿ, ಚಂದ್ರ, ಸೂರ್ಯ, ನಕ್ಷತ್ರ, ಆಕಾಶಗಳು ಇರುವಲ್ಲಿಯವರೆಗೆ ಪರಾಕ್ರಮಶಾಲಿ ಎನಿಸಿರುವಂತಹ ಹರಿಶ್ಚಂದ್ರರಾಜನು ಸತ್ಯಸಂಧನಾಗಿಯೇ ಬಾಳಲಿ, ಈಗಾಗಲೇ ತೀರಿಕೊಂಡಿರುವ ಮಗ ಲೋಹಿತಾಶ್ವನಿಗೆ ಮುಕ್ತಿದೊರೆಯಲಿ, ರಾಜ್ಯವನ್ನು ತ್ಯಜಿಸಿ ಹರಿಶ್ಚಂದ್ರನ ಸೇವೆಮಾಡಿಕೊಂಡಿರುವ ಮಂತ್ರಿಯ ಇಷ್ಟಾರ್ಥಗಳು ನೆರವೇರಲಿ, ನಮ್ಮ ರಾಜ್ಯವನ್ನು ಆಳಿಕೊಂಡಿರುವ ವಿಶ್ವಾಮಿತ್ರನು ನಿರಂತರ ರಾಜ್ಯವನ್ನು ಆಳಿಕೊಂಡಿರಲಿ, ಇಷ್ಟೇ ನನ್ನ ಇಷ್ಟಾರ್ಥ. ಇನ್ನು ನನ್ನನ್ನು ಹೊಡೆ ಎಂದಳು.

            ಚಂದ್ರಮತಿ ತಾನು ವಧಾಸ್ಥಾನದಲ್ಲಿ ಇದ್ದರೂ, ಕೆಲವೇ ಕ್ಷಣಗಳಲ್ಲಿ ತನ್ನ ಪ್ರಾಣ ಹೋಗುತ್ತದೆ ಎಂಬುದು ತಿಳಿದಿದ್ದರೂ ಗಂಡ ಹರಿಶ್ಚಂದ್ರನ ಸತ್ಯಪಾಲನೆಯ ಕಾರಣದಿಂದ ಪಡಬಾರದ ಕಷ್ಟಗಳನ್ನು ಅನುಭವಿಸಬೇಕಾಗಿ ಬಂದರೂ ಚಂದ್ರಮತಿ ಗಂಡನ ಒಳಿತನ್ನೇ ಬಯಸುತ್ತಾಳೆ. ಮೊದಲು ಗುರುಗಳಾದ ವಸಿಷ್ಠನಿಗೆ ನಮಸ್ಕರಿಸಿ, ಆಕಾಶವನ್ನು ನೋಡಿಕೊಂಡು ಆಕೆ ಬಯಸುವುದೂ ಗಂಡನ ಸತ್ಯಸಂಧತೆಯನ್ನು ಮಾತ್ರ. ಭೂಮಿ, ಚಂದ್ರ, ಸೂರ್ಯ, ನಕ್ಷತ್ರ ಹಾಗೂ ಆಕಾಶಗಳಿರುವಲ್ಲಿಯವರೆಗೆ ಹರಿಶ್ಚಂದ್ರನು ಸತ್ಯಸಂಧನಾಗಿಯೇ ಬಾಳಬೇಕೆಂದೂ ಸತ್ತ ಮಗನಿಗೆ ಶವಸಂಸ್ಕಾರ ಮಾಡಲು ಸಾಧ್ಯವಾಗದೇ ಇರುವುದರಿಂದ ಆತನಿಗೆ ಮುಕ್ತಿ ದೊರೆಯಲಿ ಎಂದೂ ನಿಷ್ಟಾವಂತ ಮಂತ್ರಿಯ ಇಷ್ಟಾರ್ಥಗಳು ನೆರವೇರಲಿ ಎಂದೂ ಬೇಡಿಕೊಳ್ಳುತ್ತಾಳೆ. ಎಂತಹ ಕಷ್ಟಗಳು, ತೊಂದರೆಗಳು ಬಂದರೂ ಹಿಂಸೆಗಳು ಒದಗಿದರೂ ಗಂಡನ ಸತ್ಯಸಂಧತೆಗೆ ಚ್ಯುತಿಬಾರದಿರಲಿ ಎಂದೇ ಆಕೆ ಬೇಡಿಕೊಳ್ಳುತ್ತಾಳೆ.

 

ಹರಕೆಯಂ ಕೇಳಿ ಹವ್ವನೆ ಹಾಱಿ ಬೆಱಗಾಗಿ

ಮರವಟ್ಟು ನಿಂದು ಭಾಪುರೆ ವಿಧಿಯ ಮುಳಿಸೆ ಹೋ

ದಿರುಳೆನ್ನ ಸುತನ ದುರ್ಮರಣಮಂ ತೋಱಿ ಕಯ್ಯೊಡನೆ ಮತ್ತೀಗಳೆನ್ನ

ವರಸತಿಯ ತಲೆಯನಾನೆನ್ನ ಕಯ್ಯಾರ ಪಿಡಿ

ದರಿವಂತೆ ಮಾಡಿದೆಯಿದಕ್ಕೆ ನಾನಿನಿತು ಹೇ

ವರಿಸುವವನಲ್ಲ ಪತಿಯಾಜ್ಞೆಯುಳಿದಡೆ ಸಾಕೆನುತ್ತ ಕೊಲಲನುವಾದನು  ||೫||

ಪದ್ಯದ ಅನ್ವಯಕ್ರಮ:

ಹರಕೆಯಂ ಕೇಳಿ ಹವ್ವನೆ ಹಾಱಿ ಬೆಱಗಾಗಿ ಮರವಟ್ಟು ನಿಂದು, ಬಾಪುರೆ ವಿಧಿಯ ಮುಳಿಸೆ, ಹೋದ ಇರುಳ್ ಎನ್ನ ಸುತನ ದುರ್ಮರನಮಂ ತೋಱಿ ಕಯ್ಯೊಡನೆ ಮತ್ತು ಈಗಳ್ ಎನ್ನ ವರಸತಿಯ ತಲೆಯನ್ ಆನ್ ಕಯ್ಯಾರ ಪಿಡಿದು ಅರಿವಂತೆ ಮಾಡಿದೆ, ಇದಕ್ಕೆ ನಾನ್ ಇನಿತು ಹೇವರಿಸುವವನಲ್ಲ ಪತಿಯ ಆಜ್ಞೆ ಉಳಿದಡೆ ಸಾಕು ಎನುತ್ತ ಕೊಲಲ್ ಅನುವಾದನು.

ಪದ-ಅರ್ಥ:

ಹರಕೆ-ಇಷ್ಟಾರ್ಥ;  ಹವ್ವನೆ-ಒಮ್ಮಿಂದೊಮ್ಮೆಗೆ; ಹಾಱಿ-ಆಶ್ಚರ್ಯಚಕಿತನಾಗಿ; ಬೆಱಗಾಗಿ-ಆಶ್ಚರ್ಯಚಕಿತನಾಗಿ;  ಮರವಟ್ಟು-ಮರಗಟ್ಟಿ, ನಿಸ್ತೇಜನಾಗಿ;  ನಿಂದು-ನಿಂತುಕೊಂಡು;  ಮುಳಿಸು-ಸಿಟ್ಟು;  ಇರುಳ್-ರಾತ್ರಿ;  ದುರ್ಮರಣ-ಕೆಟ್ಟಸಾವು,  ಅಸಹಜ ಸಾವು;  ಕಯ್ಯೊಡನೆ-ಕೂಡಲೇ; ವರಸತಿ-ಹೆಂಡತಿ; ಕಯ್ಯಾರ-ಸ್ವತಃ;  ಅರಿವಂತೆ-ಕಡಿಯುವಂತೆ, ಕತ್ತರಿಸುವಂತೆ;  ಇನಿತು-ಇಷ್ಟೂ; ಹೇವರಿಸುವವನಲ್ಲ-ಅಸಹ್ಯಪಡುವವನಲ್ಲ; ಪತಿಯಾಜ್ಞೆ-ಒಡೆಯನ ಆಜ್ಞೆ;  ಅನುವಾದನು-ಸಿದ್ಧನಾದನು.

            ಚಂದ್ರಮತಿಯು ಹೇಳಿಕೊಂಡ ಇಷ್ಟಾರ್ಥಗಳನ್ನು ಕೇಳಿ ಹರಿಶ್ಚಂದ್ರನು ಒಮ್ಮಿಂದೊಮ್ಮೆಗೆ ಆಶ್ಚರ್ಯಚಕಿತನಾಗಿ, ಮರಗಟ್ಟಿ ನಿಂತುಕೊಂಡು ಬಾಪುರೆ, ಇದು ವಿಧಿಯ ಸಿಟ್ಟಲ್ಲದೆ ಇನ್ನೇನು? ಕಳೆದ ರಾತ್ರಿಯಲ್ಲಿ ನನ್ನ ಮಗನ ಅಸಹಜ ಸಾವನ್ನು ನೋಡುವಂತೆ ಮಾಡಿ, ಅದರ ಬೆನ್ನಿಗೇ ಈಗ ನಾನು ಸ್ವತಃ ನನ್ನ ಹೆಂಡತಿಯ ತಲೆಯನ್ನು ಹಿಡಿದು ಕಡಿಯುವಂತೆ ಮಾಡಿದೆ. ಆದರೂ ಇದಕ್ಕೆಲ್ಲ ನಾನು ಒಂದಿಷ್ಟೂ ಅಸಹ್ಯಪಡುವವನಲ್ಲ. ನನ್ನ ಒಡೆಯನ ಆಜ್ಞೆ ಉಳಿದರೆ ಸಾಕು ಎನ್ನುತ್ತ ಚಂದ್ರಮತಿಯನ್ನು ಕೊಲ್ಲಲು ಸಿದ್ಧನಾದನು.

            ಚಂದ್ರಮತಿಯ ಕೊನೆಯ ಇಷ್ಟಾರ್ಥಗಳು ಹರಿಶ್ಚಂದ್ರನನ್ನು ಇನ್ನಷ್ಟು ಅಧೀರನನ್ನಾಗಿಸುತ್ತವೆ. ಒಂದೆಡೆ ತಾನು ರಾಜ್ಯಭ್ರಷ್ಟನಾಗಿ, ಎಲ್ಲವನ್ನೂ ಕಳೆದುಕೊಂಡು, ಹೆಂಡತಿ ಮಗನನ್ನು ಆಡವಿಟ್ಟು, ಶ್ಮಶಾನದ ಕಾವಲುಗಾರನಾಗಿ ಬಾಳಬೇಕಾಯಿತು. ತನ್ನಿಂದ ಇಷ್ಟೆಲ್ಲ ಕಷ್ಟಗಳನ್ನು ಅನುಭವಿಸಿದರೂ ಇನ್ನೂ ಚಂದ್ರಮತಿ ತನ್ನ ಸತ್ಯಸಂಧತೆಯ ಹಿರಿಮೆಯನ್ನೇ ಬಯಸುತ್ತಿದ್ದಾಳೆ. ಮಗನ ಮುಕ್ತಿಗಾಗಿ, ಮಂತ್ರಿಯ ಒಳಿತಿಗಾಗಿ ಬೇಡಿಕೊಳ್ಳುತ್ತಿದ್ದಾಳೆಯೇ ವಿನಾ ತನಗಾಗಿ ಏನನ್ನೂ ಬೇಡಿಕೊಳ್ಳಲಿಲ್ಲ. ಒಂದೆಡೆ ಎಲ್ಲವನ್ನೂ ಕಳಕೊಂಡ ದುಃಖ, ಇನ್ನೊಂದೆಡೆ ಮಗನ ಸಾವಿನ ದುಃಖ, ಮತ್ತೊಂದೆಡೆ ಹೆಂಡತಿಯನು ವಧಿಸಬೇಕಾದ ಅಸಹ್ಯಸ್ಥಿತಿ ಎಲ್ಲವೂ ಒಮ್ಮೆಗೆ ಎದುರಾದರೂ ಹರಿಶ್ಚಂದ್ರ ತನ್ನ ಸತ್ಯಸಂಧತೆಗೆ ಚ್ಯುತಿಬಾರದಂತೆಯೇ ನಡೆದುಕೊಳ್ಳುತ್ತೇನೆ ಎಂದು ನಿರ್ಧರಿಸುತ್ತಾನೆ.

 

ಮನದ ಶಂಕೆಯನುಳಿದು ಹೊಡೆಯಲನುವಾದ ಭೂ

ಪನ ಭಾವಮಂ ಕಂಡು ಹೊಡೆಯಬೇಡೆನ್ನ ನಂ

ದನೆಯರಂ ಮದುವೆಯಾದಡೆ ಸತ್ತಮಗನನೆತ್ತುವೆನಿವಳ ತಲೆಗಾವೆನು

ವಿನಯದಿಂ ಕೊಡ ಧನಮಂ ಕೊಟ್ಟು ನಿನ್ನ ಬಂ

ಧನಮೋಕ್ಷಮಂ ಮಾಡಿ ರಾಜ್ಯಮಂ ಪೊಗಿಸಿ ಮು

ನ್ನಿನ ಪರಿಯಲಿರಿಸುವೆಂ ಕೇಳೆಂದನಂಬರದೊಳಿರ್ದು ವಿಶ್ವಾಮಿತ್ರನು  ||೬||

ಪದ್ಯದ ಅನ್ವಯಕ್ರಮ:

ಮನದ ಶಂಕೆಯನ್ ಉಳಿದು, ಹೊಡೆಯಲ್ ಅನುವಾದ ಭೂಪನ ಭಾವಮಂ ಕಂಡು, ಹೊಡೆಯ ಬೇಡ, ಎನ್ನ ನಂದನೆಯರಂ ಮದುವೆಯಾದಡೆ ಸತ್ತ ಮಗನನ್ ಎತ್ತುವೆನ್, ಇವಳ ತಲೆ ಕಾವೆನು. ವಿನಯದಿಂ ಕೊಂಡ ಧನಮಂ ಕೊಟ್ಟು, ನಿನ್ನ ಬಂಧನ ಮೋಕ್ಷಮಂ ಮಾಡಿ, ರಾಜ್ಯಮಂ ಪೊಗಿಸಿ ಮುನ್ನಿನ ಪರಿಯಲಿ ಇರಿಸುವೆಂ ಕೇಳ್ ಎಂದನ್ ಅಂಬರದೊಳ್ ಇರ್ದು ವಿಶ್ವಾಮಿತ್ರನು.

ಪದ-ಅರ್ಥ:

ಮನದ ಶಂಕೆ-ಮನಸ್ಸಿನ ಸಂಶಯ;  ಉಳಿದು-ಬಿಟ್ಟುಬಿಟ್ಟು;  ಹೊಡೆಯಲನುವಾದ-ಕೊಲ್ಲುವುದಕ್ಕೆ ಸಿದ್ಧನಾದ;  ಭೂಪನ-ರಾಜನ (ಹರಿಶ್ಚಂದ್ರನ);  ಭಾವಮಂ-ಮನಃಸ್ಥಿತಿಯನ್ನು; ಕಂಡು-ಅವಲೋಕಿಸಿ; ಹೊಡೆಯಬೇಡ-ಕೊಲ್ಲಬೇಡ;  ಎನ್ನ ನಂದನೆಯರಂ- ನನ್ನ ಮಗಳಂದಿರನ್ನು;  ಎತ್ತುವೆನ್-ಬದುಕಿಸುತ್ತೇನೆ;  ತಲೆಗಾವೆನು- ತಲೆಯನ್ನು ಕಾಯುತ್ತೇನೆ, ಪ್ರಾಣ ಉಳಿಸುತ್ತೇನೆ;  ಕೊಂಡ-ಸ್ವೀಕರಿಸಿದ; ಮೋಕ್ಷ-ಬಿಡುಗಡೆ;  ಪೊಗಿಸಿ-ಪ್ರವೇಶಿಸುವಂತೆ ಮಾಡಿ;  ಮುನ್ನಿನ ಪರಿಯಲಿ-ಹಿಂದಿನ ರೀತಿಯಲ್ಲಿ;  ಇರಿಸುವೆಂ-ಇರುವಂತೆ ಮಾಡುತ್ತೇನೆ;  ಅಂಬರ-ಆಕಾಶ.

            ತನ್ನ ಮನಸ್ಸಿನಲ್ಲಿ ಗೊಂದಲವನ್ನು ಬಿಟ್ಟುಬಿಟ್ಟು ಹೆಂಡತಿಯಾದ ಚಂದ್ರಮತಿಯ ತಲೆಯನ್ನು ಕಡಿಯಲು ಸಿದ್ಧನಾದ ಹರಿಶ್ಚಂದ್ರನ ಮನಃಸ್ಥಿತಿಯನ್ನು ಅವಲೋಕಿಸಿ, ವಿಶ್ವಾಮಿತ್ರನು ಆಕಾಶದಲ್ಲಿದ್ದುಕೊಂಡು, “ಚಂದ್ರಮತಿಯನ್ನು ಕೊಲ್ಲಬೇಡ, ನನ್ನ ಮಗಳಂದಿರನ್ನು ನೀನು ಮದುವೆಯಾಗುವುದಾದರೆ ಸತ್ತ ನಿನ್ನ ಮಗನನ್ನು ಬದುಕಿಸುತ್ತೇನೆ, ಅಪವಾದಕ್ಕೆ ಈಡಾಗಿರುವ ನಿನ್ನ ಹೆಂಡತಿಯನ್ನು ರಕ್ಷಿಸುತ್ತೇನೆ, ನಾನು ಈಗಾಗಲೇ ನಿನ್ನಿಂದ ಸ್ವೀಕರಿಸಿದ ಸಂಪತ್ತನ್ನು ನಿನಗೆ ಕೊಟ್ಟುಬಿಟ್ಟು, ನಿನ್ನನ್ನು ಶ್ಮಶಾನದ ಕಾವಲಿನ ಬಂಧನದಿಂದ ಬಿಡುಗಡೆಗೊಳಿಸಿ ಮರಳಿ ರಾಜ್ಯವನ್ನು ಪ್ರವೇಶಿಸುವಂತೆ ಮಾಡಿ ಹಿಂದಿನ ರೀತಿಯಲ್ಲಿಯೇ ರಾಜನನ್ನಾಗಿ ಮಾಡುತ್ತೇನೆ ಎಂದು ಹೇಳಿದನು.

            ಇದುವರೆಗೂ ತನ್ನೆಲ್ಲ ಪರೀಕ್ಷೆಗಳಲ್ಲಿ ಸೋಲದೆ ಜಯವನ್ನೇ ಸಾಧಿಸಿಕೊಂಡು ಬಂದ ಹರಿಶ್ಚಂದ್ರನನ್ನು ಈಗ ಕೊನೆಯ ಗಳಿಗೆಯಲ್ಲಿ ಹೇಗಾದರೂ ಸೋಲಿಸಬೇಕೆಂಬುದು ವಿಶ್ವಾಮಿತ್ರನ ಹಠ. ಇನ್ನೊಂದೆಡೆ ತಾನು ಅದುವರೆಗಿನ ಪರೀಕ್ಷೆಗಳಲ್ಲಿ ಹೆಜ್ಜೆಹೆಜ್ಜೆಗೂ ಸೋಲನ್ನು ಅನುಭವಿಸಿ ಆಗಿದೆ. ಅದಕ್ಕಾಗಿ ತನ್ನ ಮಗಳಂದಿರನ್ನು ಮದುವೆಯಾಗಬೇಕೆಂಬ ಮಾತನ್ನು ಮುಂದಿಟ್ಟು, ಸತ್ತ ಮಗನನ್ನು ಬದುಕಿಸುವ, ಹೆಂಡತಿಯನ್ನು ಅಪವಾದದಿಂದ ಮುಕ್ತಗೊಳಿಸಿ ಕಾಪಾಡುವ, ರಾಜ್ಯವನ್ನು ಹಾಗೂ ಅದರ ಸಂಪತ್ತನ್ನು ಮರಳಿ ನೀಡುವ, ರಾಜ್ಯಾಧಿಕಾರವನ್ನು ಮರಳಿ ಒಪ್ಪಿಸುವ ಆಸೆಯನ್ನು ಹುಟ್ಟಿಸುತ್ತಾನೆ. ರಾಜ್ಯವೇ ಬೇಡ ಎಂದು ಬಂದವನು, ಮಗನ ಸಾವನ್ನೂ ಸಹಿಸಿಕೊಂಡವನು, ಹೆಂಡತಿಯ ತಲೆಯನ್ನು ಕಡಿಯಲೂ ಹಿಂಜರಿಯದವನು ಈಗ ವಿಶ್ವಾಮಿತ್ರನ ಆಸೆ ಆಮಿಷಗಳಿಗೆ ಬಲಿಯಾಗುವುದಕ್ಕೆ ಸಾಧ್ಯವೇ ಎಂಬುದು ಪ್ರಶ್ನೆ.

 

ತಿರುಗಿ ಮೇಲಂ ನೋಡಿ ಕಂಡಿದೇಂ ಮುನಿ ನಿಮ್ಮ

ಹಿರಿಯತನಕೀ ಮಾತು ಯೋಗ್ಯವೇ ಕೇಳೆನ್ನ

ಸಿರಿ ಪೊದಡೇನು ರಾಜ್ಯಂ ಪೋದಡೇನು ನಾನಾರ ಸಾರಿರ್ದಡೇನು

ವರಪುತ್ರನಸುವಳಿದು ಪೋದಡೇಂ ನಾನೆನ್ನ

ತರುಣಿಯಂ ಕೊಂದಡೇಂ ಕುಂದೆ ಸತ್ಯವನು ಬಿ

ಟ್ಟಿರನೆನಿಸಿದಡೆ ಸಾಕು ಎಂದೆತ್ತಿ ಹಿಡಿದ ಖಡ್ಗವ ಜಡಿಯುತಿಂತೆಂದನು  ||೭||

ಪದ್ಯದ ಅನ್ವಯಕ್ರಮ:

ತಿರುಗಿ ಮೇಲಂ ನೋಡಿ ಕಂಡು, ಇದೇಂ ಮುನಿ ನಿಮ್ಮ ಹಿರಿಯತನಕೆ ಈ ಮಾತು ಯೋಗ್ಯವೇ? ಕೇಳ್ ಎನ್ನ ಸಿರಿ ಪೋದೊಡೆ ಏನು? ರಾಜ್ಯಂ ಮೋದಡೇನು? ನಾನ್ ಆರ ಸಾರ ಇರ್ದಡೇನು? ವರಪುತ್ರನ್ ಅಸು ಅಳಿದು ಪೋದೊಡೇಂ? ನಾನ್ ಎನ್ನ ತರುಣಿಯಂ ಕೊಂದಡೇಂ? ಸತ್ಯವನು ಕುಂದೆ ಬಿಟ್ಟಿರನ್ ಎನಿಸಿದಡೆ ಸಾಕು ಎಂದು ಎತ್ತಿ ಹಿಡಿದ ಖಡ್ಗವ ಜಡಿಯುತ ಇಂತು ಎಂದನು.

ಪದ-ಅರ್ಥ:

ಮೇಲಂ ನೋಡಿ-ಆಕಾಶವನ್ನು ನೋಡಿ;  ಕಂಡು-ಅವಲೋಕಿಸಿ;  ಇದೇಂ ಮುನಿ-ಮುನಿಗಳೇ ಇದೇನು?;  ಹಿರಿಯತನಕೆ-ದೊಡ್ಡಸ್ತಿಕೆಗೆ; ಸಿರಿ-ಸಂಪತ್ತು;  ನಾರಿರ್ದಡೇನು-ಜೊತೆಗಿದ್ದರೇನು?;  ವರಪುತ್ರ-ಯೋಗ್ಯಮಗ; ಅಸುವಳಿದು-ಸತ್ತು;  ಕುಂದೆ-ಕುಂದುವಂತೆ, ಹೀನವಾಗುವಂತೆ;  ಜಡಿ-ಝಳಪಿಸು.

            ಆಕಾಶದಲ್ಲಿದ್ದುಕೊಂಡು ವಿಶ್ವಾಮಿತ್ರನು ಆಡಿದ ಮಾತುಗಳನ್ನು ಕೇಳಿ ಹರಿಶ್ಚಂದ್ರನು ತಿರುಗಿ ಆಕಾಶವನ್ನು ನೋಡಿ, ಇದೇನು ಮುನಿಗಳೇ, ನಿಮ್ಮ ಹಿರಿತನಕ್ಕೆ ಇಂತಹ ಮಾತುಗಳು ಯೋಗ್ಯವೇ? ನನ್ನ ವಿಚಾರಗಳನ್ನು ಕೇಳಿಕೊಳ್ಳಿ. ನನ್ನ ಸಂಪತ್ತು ಕೈತಪ್ಪಿಹೋದರೇನು? ರಾಜ್ಯ ಅನ್ಯರ ವಶವಾದರೇನು? ನಾನು ಯಾರ ಜೊತೆಯಲ್ಲಿದ್ದರೇನು? ನನ್ನ ಯೋಗ್ಯನಾದ ಮಗ ಲೋಹಿತಾಶ್ವನು ಸತ್ತುಹೋದರೇನು? ನಾನು ನನ್ನ ಕೈಯಾರೆ ನನ್ನ ಹೆಂಡತಿಯನ್ನು ಕೊಂದರೇನು? ಹರಿಶ್ಚಂದ್ರ ತನ್ನ ಸತ್ಯಕ್ಕೆ ಧಕ್ಕೆಯಾಗಲು ಬಿಡಲಾರ ಎಂದು ಲೋಕಕ್ಕೆ ತಿಳಿದರೆ ಸಾಕು’ ಎಂದು ಹೇಳುತ್ತ, ತನ್ನ ಕೈಯಲ್ಲಿನ ಖಡ್ಗವನ್ನು ಝಳಪಿಸುತ್ತ ಮತ್ತೆ ವಿಶ್ವಾಮಿತ್ರನಲ್ಲಿ ಹೀಗೆ ಹೇಳಿದನು.

            ಈಗಾಗಲೇ ವಿಶ್ವಾಮಿತ್ರನ ಒಡ್ಡಿದ ಪರೀಕ್ಷೆಗಳಲ್ಲಿ ತನ್ನ ಸತ್ಯಸಂಧತೆಗಾಗಿ ಎಲ್ಲವನ್ನೂ ಕಳೆದುಕೊಂಡಾಗಿದೆ. ನೀರಲ್ಲಿ ಮುಳುಗಿದವನಿಗೆ ಮಳೆಯೇನು? ಚಳಿಯೇನು? ಎಲ್ಲವನ್ನೂ ಕಳೆದುಕೊಂಡ ಹರಿಶ್ಚಂದ್ರನಿಗೆ ಬಚಾವಾಗಬೇಕೆಂಬ ಹಂಬಲ ಹೇಗೆ ಉಂಟಾಗಲು ಸಾಧ್ಯ? ರಾಜ್ಯವನ್ನು ಕಳೆದುಕೊಂಡರೂ ಮಗನನ್ನು ಕಳೆದುಕೊಂಡರೂ ಹೆಂಡತಿಯನ್ನು ಕೊಲ್ಲಬೇಕಾದ ಪ್ರಸಂಗ ಎದುರಾದರೂ ಸತ್ಯವನ್ನು ಬಿಟ್ಟಿರಲಾರ ಎಂದು ಲೋಕದ ಜನ ತಿಳಿದುಕೊಂಡರೆ ಸಾಕು ಎಂಬುದು ಹರಿಶ್ಚಂದ್ರನ ನಿಲುವು. ಇದುವರೆಗೂ ನಡೆದಿರುವ ದುರ್ಘಟನೆಗಳು ಸತ್ಯಕ್ಕಾಗಿಯೇ ಸತ್ಯದ ಪಾಲನೆಗಾಗಿಯೇ ವಿನಾ ಲಾಭಕ್ಕಾಗಿ ಅಲ್ಲ ಎಂಬುದು ಹರಿಶ್ಚಂದ್ರನ ವಾದ. ಹಾಗಾಗಿಯೇ ಅವನು ವಿಶ್ವಾಮಿತ್ರನಲ್ಲಿ ನಿಮ್ಮ ಹಿರಿತನಕ್ಕೆ ಇಂತಹ ಮಾತುಗಳು ಯೋಗ್ಯವೇ? ಎಂದು ಪ್ರಶ್ನಿಸುತ್ತಾನೆ.

 

ಎನ್ನ ದುಷ್ಕರ್ಮವಶದಿಂದಾದ ಕರ್ಮವೆಂ

ದಿನ್ನೆಗಂ ಬಗೆದೆನಾನಿಂದುತನಕಂ ಕಡೆಗೆ

ನಿನ್ನ ಗೊಡ್ಡಾಟವೇ ಹೊಲೆಯನಾದವನಿನ್ನು ಸತಿಗಿತಿಯ ಕೊಲೆಗೆ ಹೇಸಿ

ಬೆನ್ನೀವೆನೇ ಇದಂ ತೋಱಿ ಸಿಕ್ಕಿಸಬಂದ

ಗನ್ನಗತಕಕ್ಕೆ ಸೆಡೆವೆನೆ ಸಡಿಫಡೆನುತಾರ್ದು

ನನ್ನಿಕಾಱಂ ವಧುವನೆಲೆಲೆ ಶಿವಶಿವ ಮಹಾದೇವ ಹೊಡೆದಂ ಹೊಡೆದನು  ||೮||

ಪದ್ಯದ ಅನ್ವಯಕ್ರಮ:

ಇನ್ನೆಗಂ, ಎನ್ನ ದುಷ್ಕರ್ಮ ವಶದಿಂದ ಆದ ಕರ್ಮವೆಂದು ಇಂದುತನಕಂ ನಾನ್ ಬಗೆದೆನ್, ಕಡೆಗೆ ನಿನ್ನ ಗೊಡ್ಡಾಟವೇ? ಹೊಲೆಯನ್ ಆದವನ್ ಇನ್ನು ಸತಿಗಿತಿಯ ಕೊಲೆಗೆ ಹೇಸಿ ಬೆನ್ನ ಈವೆನೇ? ಇದಂ ತೋಱಿ ಸಿಕ್ಕಿಸಬಂದ ಗನ್ನಗತಕಕ್ಕೆ ಸೆಡೆವೆನೆ? ಸಡಿಫಡ ಎನುತ ಆರ್ದು ನನ್ನಿಕಾಱಂ ವಧುವನ್ ಎಲೆಲೆ ಶಿವಶಿವ ಮಹಾದೇವ ಹೊಡೆದಂ ಹೊಡೆದನು.

ಪದ-ಅರ್ಥ:

ಎನ್ನ ದುಷ್ಕರ್ಮವಶದಿಂದ-ನನ್ನ ಕೆಟ್ಟ ಕರ್ಮಫಲದಿಂದ;  ಇನ್ನೆಗಂ-ಇಷ್ಟರಲ್ಲಿ, ಇದುವರೆಗೆ ನಡೆದ ಘಟನೆಗಳಿಂದ;   ಬಗೆದೆನ್-ತಿಳಿದುಕೊಂಡಿದ್ದೆ;  ಇಂದುತನಕ-ಇದುವರೆಗೆ;  ಕಡೆಗೆ-ಕೊನೆಯಲ್ಲಿ; ಗೊಡ್ಡಾಟ-ಮೋಸದ ಆಟ;  ಬೆನ್ನೀವೆನೇ-ಹಿಂಜರಿಯುವೆನೇ?;  ಸಿಕ್ಕಿಸಬಂದ-ವಶಗೊಳಿಸಲು ಬಂದ;  ಗನ್ನಗತಕ-ಮೋಸ;  ಸೆಡೆವೆನೆ-ಹೆದರುವೆನೆ?;  ಸಡಿಫಡ-ಆವೇಶದ ಸಂದರ್ಭದಲ್ಲಿ ಹೊರಡಿಸುವ ಒಂದು ಉದ್ಗಾರವಾಚಕ;  ಆರ್ದು-ಗಟ್ಟಿಯಾಗಿ ಕೂಗಿ;  ನನ್ನಿಕಾಱಂ-ಸತ್ಯಸಂಧ (ಹರಿಶ್ಚಂದ್ರ); ವಧು-ಹೆಂಡತಿ (ಚಂದ್ರಮತಿ). 

            ಇದುವರೆಗೆ ನಡೆದ ಘಟನೆಗಳಿಂದ ಇವೆಲ್ಲವೂ ನನ್ನ ಕೆಟ್ಟ ಕರ್ಮಫಲದಿಂದಾಗಿ ಉಂಟಾದ ಕರ್ಮವೆಂದು ನಾನು ಇದುವರೆಗೂ ತಿಳಿದುಕೊಂಡಿದ್ದೆ. ಆದರೆ ಇದೆಲ್ಲವೂ ನಿನ್ನ ಮೋಸದ ಆಟವೇ? ನಾನು ಈಗಾಗಲೇ ಹೊಲೆಯನಾಗಿದ್ದೇನೆ. ಇನ್ನು ನನ್ನ ಹೆಂಡತಿಯ ಕೊಲೆಗೆ ಹೇಸಿಕೊಂಡು ಹಿಂಜರಿಯುತ್ತೇನೆಯೇ? ಆಸೆಯನ್ನು ಹುಟ್ಟಿಸುವ ಇಂತಹ ಮೋಸಕ್ಕೆ ನಾನು ಹೆದರುವೆನೇ? ಎಂದು ವಿಶ್ವಾಮಿತ್ರನಿಗೆ ಸವಾಲೆಸೆದನು. ಅನಂತರ ಸಡಿಫಡ ಎಂದು ಗಟ್ಟಿಯಾಗಿ ಕೂಗುತ್ತ ಸತ್ಯವಂತನಾದ ಹರಿಶ್ಚಂದ್ರನು ತನ್ನ ಖಡ್ಗವನ್ನು ಚಂದ್ರಮತಿಯ ಕುತ್ತಿಗೆಗೆ ಬೀಸಿ ಹೊಡೆದನು. ಆಕಾಶದಲ್ಲಿ ನೆರೆದ ದೇವತೆಗಳು ಈ ದೃಶ್ಯವನ್ನು ಕಂಡು ಹೆದರಿ ಶಿವಶಿವ ಮಹಾದೇವ ಹೊಡೆದನು ಹೊಡೆದನು ಎಂದು ಬೊಬ್ಬಿಟ್ಟರು.

            ಹರಿಶ್ಚಂದ್ರ, ತಾನು ರಾಜ್ಯ, ಬೊಕ್ಕಸ, ಸಿರಿತನ, ಸಿಂಹಾಸನ ಮೊದಲಾದವುಗಳನ್ನು ಮಾತ್ರವಲ್ಲದೆ, ಮಗನಾದ ಲೋಹಿತಾಶ್ವ, ಹೆಂಡತಿಯಾದ ಚಂದ್ರಮತಿಯನ್ನು ಕಳೆದುಕೊಂಡಿದ್ದು ಕೇವಲ ತನ್ನ ಕರ್ಮಫಲದಿಂದ ಎಂಬ ಅದುವರೆಗೂ ನಂಬಿದ್ದ.  ಆದರೆ ಈಗ ವಿಶ್ವಾಮಿತ್ರನ ಒಂದೊಂದು ಮಾತುಗಳನ್ನು ಕೇಳಿದಾಗ ಇವೆಲ್ಲವೂ ತನ್ನ ಕರ್ಮಫಲವಲ್ಲ, ವಿಶ್ವಾಮಿತ್ರನ ಮೋಸದ ಆಟವೆಂಬುದು ದೃಢವಾಯಿತು. ಹಿಂದೆ ಕ್ಷತ್ರಿಯನಾಗಿ ಮೆರೆದರೂ ಇಂದು ಅನಿವಾರ್ಯವಾಗಿ ಶ್ಮಶಾನದ ಆಳಾಗಿ ಹೊಲೆಯನಾಗಿ ಬದುಕಲೂ ಹೇಸದಿರುವಾಗ, ಹೆಂಡತಿಯ ಕೊಲೆಗೆ ಹೇಸುವುದಕ್ಕೆ ಸಾಧ್ಯವೇ? ಇದು ತನ್ನ ಕೊನೆಯ ಸತ್ವಪರೀಕ್ಷೆ. ಆದದ್ದಾಗಲಿ, ಎಂದುಕೊಂಡು ಖಡ್ಗವನ್ನು ಎತ್ತಿ ಬೀಸಿ ಹೊಡೆದ ರೀತಿಯನ್ನು ಕಂಡು ದೇವತೆಗಳೂ ಭಯಭೀತರಾಗಿ ಶಿವನಲ್ಲಿ ಮೊರೆಯಿಟ್ಟರು.

 

ಹೊಡೆದ ಖಡುಗದ ಬಾಯ ಕಡೆಯ ಹೊಡೆಗುಳನಾಂತು

ಮಡದಿಯೆಡೆಗೊರಳ ನಡುವಡಸಿ ಮೂಡಿದನು ಕೆಂ

ಜೆಡೆಯ ಶಶಿಯ ಸುರನದಿಯ ಬಿಸಿಗಣ್ಣ ಫಣಿಕುಂಡಲದ ಪಂಚಮುಖದ

ಎಡದ ಗಿರಿಜೆಯ ತಳಿದ ದಶಭುಜದ ಪುಲಿದೊವಲಿ

ನುಡುಗೆಯ ಮಹಾವಿಷ್ಣುನಯನವೇಱಿಸಿದ ಮೆ

ಲ್ಲಡಿಯ ಕಾಶೀರಮಣ ವಿಶ್ವನಾಥಂ ಸುರರ ನೆರವಿ ಜಯಜಯ ಎನುತಿರೆ  ||೯||

ಪದ್ಯದ ಅನ್ವಯಕ್ರಮ:

ಹೊಡೆದ ಖಡುಗದ ಬಾಯ ಕಡೆಯ ಹೊಡೆಗುಳನ್ ಆಂತು ಮಡದಿಯ ಎಡೆಗೊರಳ ನಡುವಡಸಿ ಮೂಡಿದನು ಕೆಂಜೆಡೆಯ, ಶಶಿಯ, ಸುರನದಿಯ, ಬಿಸಿಗಣ್ಣ, ಫಣಿಕುಂಡಲದ, ಪಂಚಮುಖದ, ಎಡದ ಗಿರಿಜೆಯ, ತಳಿದ ದಶಭುಜದ, ಪುಲಿ ತೊವಲಿನ ಉಡುಗೆಯ ಮಹಾವಿಷ್ಣು ನಯನವೇಱಿಸಿದ ಮೆಲ್ಲಡಿಯ ಕಾಶೀರಮಣ ವಿಶ್ವನಾಥಂ ಸುರರ ನೆರವಿ ಜಯಜಯ ಎನುತಿರೆ.

ಪದ-ಅರ್ಥ:

ಹೊಡೆದ-ಅಪ್ಪಳಿಸಿದ;  ಖಡುಗ-ಖಡ್ಗ, ಕತ್ತಿ;  ಬಾಯಕಡೆಯ-ಕತ್ತಿಯ ಅಲಗಿನ ಕಡೆಯ;  ಹೊಡೆಗುಳನಾಂತು-ಖಡ್ಗದ ತುದಿಯನ್ನು ಹಿಡಿದು;  ನಡುವಡಸಿ-ಮಧ್ಯೆಸೇರಿಕೊಂಡು; ಕೆಂಜೆಡೆಯ-ಕೆಂಪಾದ ಜಟೆಯನ್ನು ಹೊಂದಿದ;  ಶಶಿಯ-ಚಂದ್ರನನ್ನು ಹೊಂದಿದ;  ಸುರನದಿಯ-ಗಂಗೆಯನ್ನು ಇರಿಸಿಕೊಂಡ;  ಬಿಸಿಗಣ್ಣ-ಹಣೆಯ ಉರಿಗಣ್ಣಿನ;  ಫಣಿಕುಂಡಲದ-ಹಾವನ್ನು ಆಭರಣವಾಗಿ ಧರಿಸಿಕೊಂಡ;  ಪಂಚಮುಖದ-ಐದು ಮುಖಗಳನ್ನು ಹೊಂದಿದ;  ಎಡದ ಗಿರಿಜೆಯ-ತನ್ನ ಎಡಭಾಗದಲ್ಲಿ ಪಾರ್ವತಿಯನ್ನು ಹೊಂದಿದ;  ತಳಿದ ದಶಭುಜದ-ಹತ್ತು ಭುಜಗಳನ್ನು ಹೊಂದಿದ;  ಪುಲಿತೊವಲಿನುಡುಗೆಯ-ಹುಲಿಚರ್ಮದ ಉಡುಗೆಯ;  ಮಹಾವಿಷ್ಣು ನಯವವೇಱಿಸಿದ-ಮಹಾ ವಿಷ್ಣುವನ್ನು ಕಣ್ಣುಗಳಾಗಿ ಹೊಂದಿದ;  ಕಾಶೀರಮಣ-ಕಾಶೀ ಪಟ್ಟಣಕ್ಕೆ ಒಡೆಯನಾದ;  ವಿಶ್ವನಾಥ-ಶಿವ;  ಸುರರ ನೆರವಿ-ದೇವತೆಗಳ ಸಮೂಹ.

            ಹರಿಶ್ಚಂದ್ರನು ಖಡ್ಗವನ್ನೆತ್ತಿ ಹೊಡೆದ ಸಂದರ್ಭದಲ್ಲಿ ಆ ಖಡ್ಗದ ಅಲಗಿನ ಕಡೆಯ ತುದಿಯನ್ನು ಹಿಡಿದುಕೊಂಡು ಚಂದ್ರಮತಿಯ ಕೊರಳನ್ನು ಖಡ್ಗ ತಾಗಿದ ಜಾಗದ  ಮಧ್ಯೆ ಸೇರಿಕೊಂಡು ಎಡೆಯಿಂದ   ಕೆಂಜೆಡೆಯನ್ನು ಹೊಂದಿದ, ಚಂದ್ರನನ್ನು ಜಟೆಯಲ್ಲಿ ಧರಿಸಿದ,  ಗಂಗೆಯನ್ನು ಜಟೆಯಲ್ಲಿರಿಸಿಕೊಂಡ, ಹಣೆಯ ಉರಿಗಣ್ಣಿನ, ಹಾವನ್ನು ಆಭರಣವಾಗಿ ಧರಿಸಿಕೊಂಡ, ಐದು ಮುಖಗಳನ್ನು ಹೊಂದಿದ, ಎಡಭಾಗದಲ್ಲಿ ಪಾರ್ವತಿಯನ್ನು ಸೇರಿಸಿಕೊಂಡ, ಹತ್ತು ಭುಜಗಳನ್ನು ಹೊಂದಿದ, ಹುಲಿಚರ್ಮವನ್ನು ಉಡುಗೆಯಾಗಿ ಧರಿಸಿದ, ಮಹಾವಿಷ್ಣುವನ್ನು ಕಣ್ಣುಗಳನ್ನಾಗಿ ಹೊಂದಿದ, ಕಾಶೀಪಟ್ಟಣಕ್ಕೆ ಒಡೆಯನಾದ ಮೆಲ್ಲಡಿಯ ವಿಶ್ವನಾಥನು ಆಕಾಶದಲ್ಲಿ ದೇವತೆಗಳ ಜಯಜಯಾಕಾರ ಮೊಳಗುತ್ತಿರುವಂತೆ ಮೆಲ್ಲನೆ ಮೂಡಿದನು.

            ಹರಿಶ್ಚಂದ್ರನಿಗೆ ಶಿವ ಪ್ರತ್ಯಕ್ಷವಾಗಿ ಅದುವರೆಗಿನ ಆತನ ಸತ್ಯಪರೀಕ್ಷೆ ಹಾಗೂ ಸತ್ವಪರೀಕ್ಷೆಗಳನ್ನು ಕೊನೆಗೊಳಿಸುವಂತಹ ಸಂದರ್ಭವನ್ನು ಕವಿ ರಾಘವಾಂಕ ಬಹಳ ಅದ್ಭುತವಾಗಿ ವರ್ಣಿಸಿದ್ದಾನೆ. ಹರಿಶ್ಚಂದ್ರ ಬೀಸಿದ ಖಡ್ಗ ಚಂದ್ರಮತಿಯ ಕೊರಳನ್ನು ಇನ್ನೇನು ಸ್ಪರ್ಶಿಸುತ್ತದೆ ಎನ್ನುವಾಗಲೇ ಶಿವ ಅಲ್ಲಿಂದಲೇ ತನ್ನ ಅದ್ಭುತ ರೂಪವನ್ನು ಹೊಂದಿ ಮೆಲ್ಲನೆ ಮೂಡುತ್ತಾನೆ. ಆತನ ಜಟೆ, ಚಂದ್ರಬಿಂಬ, ಗಂಗೆ, ಹಣೆಯ ಉರಿಗಣ್ಣು, ಹಾವಿನ ಆಭರಣ, ಪಂಚಮುಖಗಳು, ಎಡಭಾಗದಲ್ಲಿ ಪಾರ್ವತಿ, ಹತ್ತು ಭುಜಗಳು, ಅನಂತರ ಉಟ್ಟ ಹುಲಿಚರ್ಮ –ಹೀಗೆ ಶಿವ ಮೂಡಿ ಮೇಲೆ ಮೇಲೆ ಬರುತ್ತಿದ್ದಂತೆಯೇ ಆತನ ಪೂರ್ಣರೂಪ ಕಾಣಿಸಿಕೊಳ್ಳುತ್ತದೆ. ಇದು ಕೇವಲ ಶಿವದರ್ಶನ ಮಾತ್ರವಲ್ಲ, ಅದು ಸತ್ಯದ ಸಾಕ್ಷಾತ್ಕಾರವಾಗುವ ರೀತಿ, ಮೈಮನಸ್ಸುಗಳಲ್ಲಿನ ಹೊಲೆಯೆಲ್ಲವೂ ಕ್ರಮೇಣ ಬರಿದಾಗುವ ರೀತಿ, ಮಾತ್ರವಲ್ಲ ವಿಶ್ವಾಮಿತ್ರನ ಹಠಮಾರಿತನ ಹಾಗೂ ಆತನಲ್ಲಿರುವ ಕೋಪಾದಿ ನ್ಯೂನತೆಗಳನ್ನು ತೊಡೆದುಹಾಕುವ ರೀತಿಯನ್ನು ಪ್ರತ್ಯಕ್ಷೀಕರಿಸುತ್ತದೆ. ಚಂದ್ರಮತಿಗೆ ಹಿಂಸೆಯಾಗದ ರೀತಿಯಲ್ಲಿಯೇ ಖಡ್ಗದ ತುದಿಯನ್ನು ಹಿಡಿದು ಶಿವ ಪ್ರತ್ಯಕ್ಷವಾಗುವ ಸುಂದರ ಮಾತ್ರವಲ್ಲ ಅದ್ಭುತ ಚಿತ್ರವೊಂದನ್ನು ರಾಘವಾಂಕ ಇಲ್ಲಿ ಚಿತ್ರಿಸಿದ್ದಾನೆ.  

(ಭಾಗ – ೨ರಲ್ಲಿ ಮುಂದುವರಿದಿದೆ.)

Leave a Reply

Your email address will not be published. Required fields are marked *