ಸಾಹಿತ್ಯಾನುಸಂಧಾನ

heading1

ಕೋಲತುದಿಯ ಕೋಡಗ

ಕೋಲತುದಿಯ ಕೋಡಗದಂತೆ,

ನೇಣತುದಿಯ ಬೊಂಬೆಯಂತೆ,

ಆಡಿದೆನಯ್ಯ ನೀನಾಡಿಸಿದಂತೆ!

ನಾ ನುಡಿದೆನಯ್ಯ ನೀ ನುಡಿಸಿದಂತೆ!

ನಾನಿದ್ದೆನಯ್ಯ ನೀನಿರಿಸಿದಂತೆ

ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ್ಕ!

                                                                              -ಅಕ್ಕಮಹಾದೇವಿ

            ಅಕ್ಕ, ಈ ವಚನದಲ್ಲಿ ತಾನು ಚೆನ್ನಮಲ್ಲಿಕಾರ್ಜುನನ ಕೈಬೊಂಬೆ ಎನ್ನುವುದನ್ನು ಎರಡು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸಿದ್ದಾಳೆ. ಡೊಂಬರಾಟದವನು ಕೈಯಲ್ಲಿ ಕೋಲೊಂದನ್ನು ಹಿಡಿದುಕೊಂಡು ಕೋಡಗವನ್ನು ಆಡಿಸುತ್ತಾನೆ. ಅದು ತನ್ನೊಡೆಯನ ಸಂಜ್ಞೆಯಂತೆ ಆಡುತ್ತದೆ. ಎಲ್ಲಿಯವರೆಗೆ ಆಡಿಸುತ್ತಾನೋ ಅಲ್ಲಿಯವರೆಗೆ ಆಡುತ್ತದೆ. ಏನಾಡಿಸುತ್ತಾನೋ ಅದನ್ನೇ ಆಡುತ್ತದೆ. ಏನನ್ನು ನುಡಿಸುತ್ತಾನೋ ಅದನ್ನೇ ನುಡಿಯುತ್ತದೆ. ಸ್ವತಃ ಅದೇನನ್ನೂ ಆಡದು, ಏನನ್ನೂ ನುಡಿಯದು. ಹಗ್ಗದ ತುದಿಯಲ್ಲಿ ನಿಲಿಸಿರುವ ಬೊಂಬೆಯನ್ನು ಡೊಂಬರಾಟದವನು ಹಗ್ಗದ ಸಹಾಯದಿಂದ ಹತ್ತು ಹಲವು ರೀತಿಗಳಲ್ಲಿ ಆಡಿಸುತ್ತಾನೆ. ಆತ ಹೇಗೆ ಆಡಿಸುತ್ತಾನೋ ಹಾಗೆಯೇ ಬೊಂಬೆಯೂ ಆಡುತ್ತದೆ. ಕೋಡಗವಾಗಲೀ ಬೊಂಬೆಯಾಗಲೀ ಒಡೆಯನಾದ ಡೊಂಬರಾಟದವನ ಆಣತಿಯನ್ನು ಮೀರುವುದು ಅಸಾಧ್ಯ.

            ಈ ಲೋಕಕ್ಕೆ ಚೆನ್ನಮಲ್ಲಿಕಾರ್ಜುನನೇ ಡೊಂಬರಾಟದವನು. ಅವನು ಆಡಿಸಿದಂತೆ ಆಡಬೇಕು, ನುಡಿಸಿದಂತೆ ನುಡಿಯಬೇಕು, ನಡೆಸಿದಂತೆ ನಡೆಯಬೇಕು, ಇರಿಸಿದಂತೆ ಇರಬೇಕು. ಅವನು ಸಾಕೆನ್ನುವಲ್ಲಿಯವರೆಗೆ ನಮ್ಮ ದಿನಚರಿ. ‘ತೃಣಮಪಿ ನಚಲತಿ ತೇನವಿನ’ ಎಂಬಂತೆ. ಭಗವಂತನ ಇಚ್ಛೆಯಿಲ್ಲದೆ ಯಾವುದೂ ನಡೆಯದು. ಚೆನ್ನಮಲ್ಲಿಕಾರ್ಜುನ ಈ ಜಗದ ಯಂತ್ರವಾಹಕ. ಜಗತ್ತೆಂಬ ಯಂತ್ರ ಆತನ ಆಜ್ಞೆಯ ಪ್ರಕಾರವೇ ನಡೆಯುತ್ತದೆ. ಮಾನವ ಒಂದು ಬಗೆದರೆ ವಿಧಿ ಇನ್ನೊಂದನ್ನು ಬಗೆಯುತ್ತದೆ. ಯಾವುದು ಘಟಿಸಬೇಕೋ ಅದು ಘಟಿಸಿಯೇ ತೀರುತ್ತದೆ.

            ಇದು ಲೋಕರೂಢಿಯ ಮಾತೂ ಹೌದು, ಅಕ್ಕನ ಜೀವನವಿಮರ್ಶೆಯೂ ಹೌದು. ಆಕೆ ಬುದ್ಧಿತಿಳಿದಂದಿನಿಂದ ಚೆನ್ನಮಲ್ಲಿಕಾರ್ಜುನನನ್ನೇ ’ಗಂಡ’ ಎಂದು ಭಾವಿಸಿ, ಆತನಲ್ಲಿ ಮಧುರಭಕ್ತಿಯನ್ನು ಇರಿಸಿಕೊಂಡವಳು. ಆದರೆ ವಿಧಿಲೀಲೆಯಂತೆ ತನ್ನೂರಿನ ರಾಜ ಕೌಶಿಕನನ್ನು ಮದುವೆಯಾಗಬೇಕಾಯಿತು. ಅರಮನೆಯಲ್ಲಿ ರಾಣಿಯ ಪಾತ್ರವನ್ನು ವಹಿಸಿ ನಡೆದುಕೊಳ್ಳಬೇಕಾಯಿತು . ಸಂಸಾರ ಕಹಿಯಾಯಿತು. ಆತನನ್ನು, ಅಂದಿನ ಸಾಮಾಜಿಕ ಕಟ್ಟುಕಟ್ಟಳೆಗಳನ್ನು ಮೀರಿ ಹೊರನಡೆಯಬೇಕಾಯಿತು. ಚೆನ್ನಮಲ್ಲಿಕಾರ್ಜುನನ ಹುಡುಕಾಟದುದ್ದಕ್ಕೂ ಹಿಂಸೆ, ಅವಮಾನಗಳನ್ನು, ಬದುಕಿನುದ್ದಕ್ಕೂ ನಾನಾ ಪರೀಕ್ಷೆಗಳನ್ನು ಎದುರಿಸಬೇಕಾಯಿತು. ಎಲ್ಲವೂ ಆಕೆಯ ಇಚ್ಛೆಗೆ ವಿರುದ್ಧವಾಗಿ ನಡೆದವುಗಳು. ಚೆನ್ನಮಲ್ಲಿಕಾರ್ಜುನನ ಇಚ್ಛೆ ಈ ರೀತಿಯಲ್ಲಿಯೇ ಇರುವುದಾದರೆ  ಅದನ್ನು ಮೀರುವುದಾದರೂ ಹೇಗೆ? ಅದಕ್ಕಾಗಿಯೇ ಆಕೆ ಹೇಳುವುದು, “ನಾನಿದ್ದೆನಯ್ಯ ನೀನಿರಿಸಿದಂತೆ” ಎಂದು. ಆಕೆಯ ಬದುಕಿನಲ್ಲಿ ಘಟಿಸಿದ ಈ ರೀತಿಯ ಪ್ರಸಂಗಗಳು ಮಿಕ್ಕ ಶಿವಶರಣ ಹಾಗೂ ಶಿವಶರಣೆಯರ ಬದುಕಿನಲ್ಲಿ ಘಟಿಸಲಿಲ್ಲ. ಹಾಗಾಗಿ ಈ ವಚನದ ವಿಚಾರಗಳು ಅಕ್ಕನಿಗೆ ಮಾತ್ರ ಅನ್ವಯಿಸುತ್ತವೆ. ಅಕ್ಕನದು ಒಂದು ರೀತಿಯಲ್ಲಿ ಏಕಾಂಗಿ ಹೋರಾಟದ ಬದುಕು.

            ಇಂದಿನ ಆಧುಕಿಕಬದುಕಿನಲ್ಲಿಯೂ ಭಗವಂತನ ಈ ಸೂತ್ರಧಾರತ್ವವನ್ನು ಒಪ್ಪಿಕೊಂಡರೂ ಅದಕ್ಕಿಂತಲೂ ಭಿನ್ನ ನೆಲೆಯಲ್ಲಿ ಅಕ್ಕನ ಮಾತುಗಳು ಮಹತ್ವಪಡೆಯುತ್ತವೆ. ಇಂದು ಭಗವಂತನ ಬದಲು ಅಭಿನವ ಭಗವಂತರು, ಅಧಿಕಾರಸ್ಥರು, ಸಿರಿವಂತರು, ವ್ಯಭಿಚಾರಿಗಳು ಡೊಂಬರಾಟದವರಂತೆ  ತೆರೆಯ ಮರೆಯಲ್ಲಿದ್ದು ಇತರರನ್ನು, ತಮಗಾಗದವರನ್ನು ಅಧಿಕಾರವೆಂಬ ಕೋಲತುದಿಯಲ್ಲಿ, ಹಣವೆಂಬ ನೇಣತುದಿಯಲ್ಲಿ, ವ್ಯಭಿಚಾರವೆಂಬ ಬಲೆಯಲ್ಲಿ ಕೆಡವಿ ಆಡಿಸುತ್ತಿದ್ದಾರೆ, ನುಡಿಸುತ್ತಿದ್ದಾರೆ, ತಮ್ಮಿಚ್ಛೆಯಂತೆ ಇರಿಸಿ ತಾವು ಮೆರೆಯುತ್ತಿದ್ದಾರೆ. ಇಂತಹ ಲೋಕಕಂಟಕ ಡೊಂಬರಾಟದವರ ಕಾಣದಕೈಗಳೊಳಗೆ ಸಿಕ್ಕಿಹಾಕಿಕೊಂಡು ಪರಿತಪಿಸುವವರ ಸಂಖ್ಯೆಯೇ ಇಂದು ಅಧಿಕವಾಗಿದೆ. ಅಕ್ಕನ ಈ ವಚನ ಭಿನ್ನಭಿನ್ನನೆಲೆಗಳಲ್ಲಿ ಆಧುನಿಕಬದುಕಿಗೂ  ಒಂದು ಪರಿಣಾಮಕಾರಿ ವಿಡಂಬನೆ ಎನಿಸುವುದಿಲ್ಲವೇ?!

***

Leave a Reply

Your email address will not be published. Required fields are marked *